ರಾಷ್ಟ್ರ ಆರ್ಥಿಕತೆಯಲ್ಲಿ ಗಣಿಗಾರಿಕೆಯ ಪಾತ್ರ
ಭೂಮಿಯ ಮೇಲ್ಮೈಯಲ್ಲಿ ಅಥವಾ ಒಳಗೆ ಅಡಗಿರುವ ಖನಿಜವನ್ನು ಹೊರತೆಗೆದು ಮಾನವನ ಬಳಕೆಗೆ ಉಪಯುಕ್ತವಾದ ವಿವಿಧ ಸರಕುಗಳ ತಯಾರಿಕೆಗೆ ಅವಶ್ಯವಾದ ಕೆಲವು ಕಚ್ಚಾ ಸಾಮಗ್ರಿಗಳನ್ನು ಒದಗಿಸುವ ಕಾರ್ಯಾಚರಣೆಯಾದ ಗಣಿಗಾರಿಕೆಯಲ್ಲಿ ಸ್ಥೂಲವಾಗಿ ಮೂರು ಬಗೆಯ ಪ್ರತ್ಯೇಕ ಕಾರ್ಯಾಚರಣೆಗಳುಂಟು.
- ಅನೇಕ ವಿಧದ ಮಣ್ಣುಗಳು, ಸುಣ್ಣಕಲ್ಲು ಮತ್ತು ಇತರ ಕಲ್ಲುಗಳು, ಉಪ್ಪು ಇತ್ಯಾದಿಗಳನ್ನು ಸಾಮಾನ್ಯವಾಗಿ ಭೂಮಿಯ ಮೇಲ್ಭಾಗದಿಂದಲೇ ಅಗೆದು ಅಥವಾ ಕಡಿದು ಇತರ ಉತ್ಪಾದನಾ ಕಾರ್ಯಗಳಿಗೆ ಒದಗಿಸಬಹುದು. ಈ ಬಗೆಯ ಕಾರ್ಯಾಚರಣೆಯನ್ನು ತೆರೆದ ಗಣಿಗಾರಿಕೆ (open mining) ಎಂದು ಹೇಳಬಹುದು.
- ಬಾವಿ ಮಾರ್ಗಗಳನ್ನೂ, ಕೆಳಗಡೆ ಸುರಂಗ ಮಾರ್ಗಗಳನ್ನೂ ಕಲ್ಪಿಸಿ, ಭೂಮಿಯಲ್ಲಿ ಆಳವಾಗಿ ಹುದುಗಿರುವ ಖನಿಜಗಳನ್ನು ಬೇರ್ಪಡಿಸಿ, ಮೇಲಕ್ಕೆತ್ತಿ ಪಡೆಯುವ ಕಾರ್ಯ ಭೂಗತ ಗಣಿಗಾರಿಕೆ (underground mining). ಚಿನ್ನ, ಕಲ್ಲಿದ್ದಲು ಮುಂತಾದವನ್ನು ಪಡೆಯುವುದು ಹೀಗೆ.
- ವಿವಿಧ ತೈಲಗಳನ್ನು ಭೂಮಿಯ ಆಳದಿಂದ ಪಂಪುಗಳ ಮೂಲಕ ಹೊರಗೆ ಎಳೆದುಕೊಳ್ಳುವುದು ಇನ್ನೊಂದು ವಿಧದ ಗಣಿಗಾರಿಕೆ.
ಈ ವಿವಿಧ ರೀತಿಯ ಗಣಿ ಉದ್ಯಮಗಳು ಆಧುನಿಕ ಕೈಗಾರಿಕೆಗೆ ಅವಶ್ಯಕವಾದ ಕಚ್ಚಾ ಸಾಮಗ್ರಿಗಳನ್ನೂ, ಶಕ್ತಿಮೂಲಗಳನ್ನೂ (energy sources) ಒದಗಿಸುವುದರಿಂದ ಗಣಿಗಾರಿಕೆಯನ್ನು ಆರ್ಥಿಕ ಚಟುವಟಿಕೆಗಳ ವಿಂಗಡಣೆಯಲ್ಲಿ ಸಾಮಾನ್ಯವಾಗಿ ಮೂಲ ಆರ್ಥಿಕೋದ್ಯಮವೆಂದು ಪರಿಗಣಿಸಲಾಗಿದೆ. ಇತರ ಮೂಲ ಆರ್ಥಿಕ ಉದ್ಯಮಗಳಾದ ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆಗಳಂತೆಯೇ ಗಣಿಗಾರಿಕೆಯೂ ಆಧುನಿಕ ಆರ್ಥಿಕ ಜೀವನದ ಅವಶ್ಯ ಸರಕುಸೇವೆಗಳ ತಯಾರಿಕೆಗೆ ಮುಖ್ಯ ತಳಹದಿಯಾಗಿದೆ.
ಖನಿಜಗಳ ಪ್ರಾಮುಖ್ಯ
ಬದಲಾಯಿಸಿಆಧುನಿಕ ಕೈಗಾರಿಕಾಯುಗಕ್ಕೆ ಮುನ್ನವೂ ವಜ್ರ, ಚಿನ್ನ, ಬೆಳ್ಳಿ, ತಾಮ್ರ ಮತ್ತು ಇತರ ಅನೇಕ ಉತ್ಪನ್ನಗಳಿಗೆ ಪ್ರಪಂಚದ ಎಲ್ಲ ಭಾಗಗಳಲ್ಲೂ ಪ್ರಾಮುಖ್ಯವಿತ್ತು. ಉಪಕರಣ, ಆಯುಧ, ಪಾತ್ರೆ, ಕಟ್ಟಡ ಇವಕ್ಕೆ ಖನಿಜಗಳನ್ನು ಹಿಂದಿನ ಕಾಲದಲ್ಲೂ ಉಪಯೋಗಿಸಲಾಗುತ್ತಿತ್ತು. ಖನಿಜಗಳ ಈ ಉಪಯೋಗ ಈಗಲೂ ಇರುವುದಾದರೂ ಯಂತ್ರ, ಶಕ್ತಿ, ರಾಸಾಯನಿಕ ಕೈಗಾರಿಕೆಗಳಿಗೆ ಖನಿಜಗಳ ಉಪಯೋಗ ಇಂದು ಹೆಚ್ಚು ಮುಖ್ಯ. ಇಂಗ್ಲೆಂಡಿನಲ್ಲಿ 18ನೆಯ ಶತಮಾನದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿಯ ಕಾಲದಿಂದ[೧] ಈಚೆಗೆ ಗಣಿಗಾರಿಕೆಯ ಪ್ರಾಮುಖ್ಯ ಏಕಪ್ರಕಾರವಾಗಿ ಅಧಿಕವಾಗುತ್ತ ಬಂದಿದೆ. ಅಂದಿನ ಕೈಗಾರಿಕಾ ಕ್ರಾಂತಿ ಬಹುಮಟ್ಟಿಗೆ ಕಲ್ಲಿದ್ದಲು ಹಾಗೂ ಕಬ್ಬಿಣವನ್ನು ಅವಲಂಬಿಸಿತ್ತು.[೨] ಇವುಗಳ ಉಪಯೋಗದಿಂದ ಆಧುನಿಕ ಶಕ್ತಿ ಮತ್ತು ಯಂತ್ರಯುಗದ ಉಗಮವಾಯಿತು. ಅಂದಿನಿಂದ ಕೈಗಾರಿಕೆ, ಸಾರಿಗೆ, ಸಂಪರ್ಕ ಇತ್ಯಾದಿ ಉದ್ಯಮ ಶಾಖೆಗಳು ಬಹುಮುಖವಾಗಿ ಬೆಳೆದಿವೆ. ಈ ಬೆಳವಣಿಗೆಗಳ ಜೊತೆಗೆ ಅನೇಕ ಖನಿಜಗಳಿಗೆ ಹೊಸ ಮೌಲ್ಯ ಉಂಟಾಗಿದೆ. ರೈಲು, ಮೋಟಾರು, ನೌಕೆ, ವಿಮಾನ ಮುಂತಾದ ಸಾರಿಗೆ ಸೌಲಭ್ಯಗಳು ವಿಸ್ತರಿಸಿದುದೂ, ಆಧುನಿಕ ನಾಗರಿಕ ಜೀವನಕ್ಕೆ ಅವಶ್ಯವೆನಿಸುವ ವಿವಿಧ ಸರಕು ಸೇವೆಗಳ ಉತ್ಪಾದನೆ ಬೃಹತ್ ಗಾತ್ರದಲ್ಲಿ ಹೆಚ್ಚಿದುದೂ, ಎರಡು ಮಹಾಯುದ್ಧಗಳಿಗಾಗಿ ಮತ್ತು ಆತ್ಮರಕ್ಷಣೆಗಾಗಿ ಅನೇಕ ರಾಷ್ಟ್ರಗಳು ಆಯುಧೋಪಕರಣಗಳ ಮತ್ತು ಇತರ ರಕ್ಷಣಾ ಕೈಗಾರಿಕೆಗಳನ್ನು ಬೃಹತ್ತಾಗಿ ಬೆಳೆಸಿಕೊಂಡಿದ್ದೂ, ಬಾಹ್ಯಾಕಾಶ ಶೋಧನೆಯ ಕಾರ್ಯಕ್ಕಾಗಿ ಕೆಲವು ರಾಷ್ಟ್ರಗಳು ವಿಸ್ತಾರವಾದ ತಾಂತ್ರಿಕ ವ್ಯವಸ್ಥೆ ನಿರ್ಮಿಸಿಕೊಂಡಿದ್ದೂ ಅನೇಕ ವಿಧದ ಗಣಿ ಉತ್ಪನ್ನಗಳ ಬೇಡಿಕೆ ತೀವ್ರವಾಗಿ ಹೆಚ್ಚಿರುವುದಕ್ಕೆ ಕಾರಣಗಳಾಗಿವೆ. ಆಧುನಿಕ ನಾಗರಿಕತೆಗೆ ಖನಿಜಗಳು ಅತ್ಯಗತ್ಯ ಎಂಬುದನ್ನು ತೋರಿಸಲು ನಿದರ್ಶನಗಳು ಸಾಕು. ಅನೇಕ ಯಂತ್ರೋಪಕರಣಗಳು ಕಬ್ಬಿಣ-ಉಕ್ಕುಗಳನ್ನು ಅವಲಂಬಿಸಿವೆ. ಮುದ್ರಣಾಲಯಗಳಿಗೆ ಆಂಟಿಮನಿ,[೩] ಸ್ವಯಂಚಾಲಿತ ಯಂತ್ರೋಪಕರಣಗಳಿಗೆ ಟಂಗ್‌ಸ್ಟನ್, ವೆನೇಡಿಯಂ ಮತ್ತು ಕ್ರೋಮಿಯಂ, ವಿದ್ಯುಚ್ಛಕ್ತಿ,[೪][೫] ಕೈಗಾರಿಕೆಗೆ ತಾಮ್ರ, ಬ್ಯಾಟರಿಗಳಿಗೆ ಸೀಸ,[೬] ಫೌಂಟನ್ ಪೆನ್ನುಗಳಿಗೆ ಇರಿಡಿಯಂ,[೭] ವಿಮಾನಗಳಿಗೆ ಅಲ್ಯೂಮಿನಿಯಂ,[೮] ಹೀಗೆ ಆಧುನಿಕ ನಾಗರಿಕ ಜೀವನಕ್ಕೆ ಬೇಕಾದ ಅನೇಕ ಸರಕುಗಳಿಗೆ ವಿವಿಧ ಖನಿಜಗಳು ಅತ್ಯಾವಶ್ಯಕವಾಗಿರುವುದನ್ನು ಗಮನಿಸಿದರೆ ಪ್ರಪಂಚದ ಆರ್ಥಿಕತೆಯಲ್ಲಿ ಖನಿಜಗಳ ಮೂಲಭೂತ ಪ್ರಾಮುಖ್ಯ ಸ್ಪಷ್ಟವಾಗುತ್ತದೆ.
ಚಿನ್ನ, ಬೆಳ್ಳಿ ಖನಿಜಗಳು
ಬದಲಾಯಿಸಿಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ಲೋಹಗಳಿಗೆ ಪ್ರಾಚೀನ ಕಾಲದಿಂದಲೂ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವಿದೆ. ಅನೇಕ ಜನಾಂಗಗಳು ಇವನ್ನು ಆಭರಣಗಳಿಗಾಗಿ ಬಹು ಹಿಂದಿನಿಂದಲೂ ಬಯಸುತ್ತ ಬಂದಿವೆ.[೯] ಇದರ ಜೊತೆಗೆ ಬೆಳ್ಳಿ ಮತ್ತು ಚಿನ್ನ ಹಣವಸ್ತುವಾಗಿಯೂ, ಹಣಪದ್ಧತಿಗೆ ಆಧಾರವಾಗಿಯೂ ಬಳಕೆಯಲ್ಲಿವೆ.[೧೦][೧೧] ಆಧುನಿಕ ಯುಗದಲ್ಲಿ ಈ ಅಮೂಲ್ಯ ಲೋಹಗಳ ಪ್ರಾಮುಖ್ಯ ವಿಶೇಷವಾಗಿ ಬೆಳೆದಿದೆ. 19ನೆಯ ಶತಮಾನದಲ್ಲಿ ಪ್ರಪಂಚದ ಅನೇಕ ರಾಷ್ಟ್ರಗಳು ಸ್ವರ್ಣಪ್ರಮಿತಿ ಹಣ ಪದ್ಧತಿಯನ್ನು ಜಾರಿಗೆ ತಂದದ್ದರಿಂದ ಚಿನ್ನದ ಗಣಿಗಾರಿಕೆಗೆ ವಿಶೇಷ ಪ್ರಚೋದನೆ ದೊರಕಿತು.[೧೨][೧೩] ಚಿನ್ನ ಹಾಗೂ ನೋಟುಗಳ ಪರಸ್ಪರ ಪರಿವರ್ತನೆಯ ಅವಕಾಶವನ್ನು ರದ್ದುಗೊಳಿಸಿದ ಅನಂತರವೂ, ಚಲಾವಣೆಯ ಹಣಕ್ಕೆ ಚಿನ್ನದ ಬೆಂಬಲವಿದೆಯೆಂಬ ಸಾರ್ವತ್ರಿಕ ನಂಬಿಕೆ ಹಣಪದ್ಧತಿಗೆ ಭದ್ರತೆಯನ್ನು ತಂದಿತು. ಅಂತರರಾಷ್ಟ್ರೀಯ ಹಣ ನಿಧಿಯ ಸ್ಥಾಪನೆಯಿಂದಾಗಿ ಈಚೆಗೆ ಜಾರಿಯಲ್ಲಿರುವ ಪ್ರಪಂಚದ ಹಣಪದ್ಧತಿಯಲ್ಲೂ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ತನಗೆ ಸಲ್ಲಬೇಕಾದ ಹಣವನ್ನು ಚಿನ್ನದ ರೂಪದಲ್ಲಿ ಪಡೆಯಲು ಯಾವ ರಾಷ್ಟ್ರವೂ ಸಾಮಾನ್ಯವಾಗಿ ನಿರಾಕರಿಸುವುದಿಲ್ಲ. ಇಂಥ ಗೌರವಸ್ಥಾನ ಉಳಿಸಿಕೊಂಡಿರುವುದರಿಂದಲೂ, ಆಭರಣ ಹಾಗೂ ಕೆಲವು ಕೈಗಾರಿಕೆಗಳ ದೃಷ್ಟಿಯಿಂದಲೂ ಚಿನ್ನದ ಗಣಿಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯವಿದ್ದೇ ಇದೆ. ಚಲಾವಣೆ ನಾಣ್ಯಗಳಿಗೆ ಬೇಕಾದ ಇತರ ಲೋಹಗಳಿಗೂ ಬೇಡಿಕೆ ಹೆಚ್ಚಿದೆ.
ಆದ್ದರಿಂದ ಮಾನವನ ಆಧುನಿಕ ಜೀವನದಲ್ಲಿ ಗಣಿ ಉತ್ಪನ್ನಗಳ ಪಾತ್ರ ಮಹತ್ತ್ವಪೂರಿತವಾದ್ದಾಗಿದೆ. ಆಧುನಿಕ ಯುಗದಲ್ಲಿ ಪ್ರಪಂಚದಲ್ಲಿ ಗಣಿ ಉತ್ಪನ್ನ ಗಣನೀಯವಾಗಿ ಬೆಳೆದಿದೆಯೆಂಬುದನ್ನು ಕೆಲವು ಮುಖ್ಯ ಖನಿಜಗಳ ಉತ್ಪನ್ನದ ಬಗ್ಗೆ ಕೆಳಗೆ ಕೊಟ್ಟಿರುವ ಅಂಕಿ ಅಂಶಗಳು ಸ್ಥೂಲವಾಗಿ ಸೂಚಿಸುತ್ತವೆ:
ಖನಿಜಗಳ ಉತ್ಪಾದನೆ ಮತ್ತು ರಾಷ್ಟ್ರೀಯ ವರಮಾನದಲ್ಲಿ ಗಣಿ ಉತ್ಪನ್ನಗಳ ಪಾತ್ರ
ಬದಲಾಯಿಸಿಪ್ರಪಂಚದಲ್ಲಿ ಕೆಲವು ಮುಖ್ಯ ಖನಿಜಗಳ ಒಟ್ಟು ಉತ್ಪಾದನೆ (ಲಕ್ಷ ಟನ್ನುಗಳಲ್ಲಿ)
ಖನಿಜ 1800 1929 1944 ಬೀಡು ಕಬ್ಬಿಣ 5.0 1,100 1,250 ಉಕ್ಕು _ 1,300 1,700 ತಾಮ್ರ 0.2 21 29 ಸೀಸ 0.3 20 15 ಸತು _ 16 19
(ಮೂಲ: ಇ. ಡಬ್ಲ್ಯೂ. ಜಿ಼ಮರ್‌ಮನ್, ವರ್ಲ್ಡ್ ರಿಸೋರ್ಸಸ್ ಅಂಡ್ ಇಂಡಸ್ಟ್ರೀಸ್)
ಸುಮಾರು 19ನೆಯ ಶತಮಾನದ ಆರಂಭದಿಂದೀಚೆಗೆ ಕೆಲವು ಮುಖ್ಯ ಖನಿಜಗಳ ಪ್ರಾಮುಖ್ಯ ಎಷ್ಟು ತೀವ್ರವಾಗಿ ಹೆಚ್ಚಿದೆ ಎಂಬುದನ್ನು ಮೇಲಿನ ಅಂಕಿಗಳು ತೋರಿಸುತ್ತವೆ. ಎಲ್ಲ ಖನಿಜಗಳನ್ನೂ ಒಳಗೊಂಡ ಗಣಿಗಾರಿಕೆಯ ಶೇ. 90ರಷ್ಟು ಕಳೆದ ಸುಮಾರು 150 ವರ್ಷಗಳಲ್ಲಿ ಬೆಳೆದು ಬಂದದ್ದೆಂದು ಅಂದಾಜು ಮಾಡಲಾಗಿದೆ. ಗಣಿ ಉತ್ಪನ್ನಗಳ ಗಾತ್ರ ಹೆಚ್ಚಿರುವುದೇ ಅಲ್ಲದೆ ಈ ಅವಧಿಯಲ್ಲಿ ಇವುಗಳ ಉಪಯೋಗದಲ್ಲಿ ತುಂಬ ಮಿತವ್ಯಯವೂ ಉಂಟಾಗಿದೆ. ಉದಾಹರಣೆಗೆ, ಒಂದು ಪೌಂಡ್ ಕಲ್ಲಿದ್ದಲಿನಿಂದ 1919ರಲ್ಲಿ ಪಡೆದುದಕ್ಕಿಂತಲೂ ತುಂಬ ಹೆಚ್ಚಿನ ಪ್ರಯೋಜನವನ್ನು ಈಗ ಪಡೆಯಲಾಗುತ್ತಿದೆ. ಆಧುನಿಕ ಯುಗದಲ್ಲಿ ಖನಿಜಗಳ ಉಪಯೋಗದಿಂದ ಮಾನವ ಶ್ರಮದ ಉತ್ಪಾದಕತೆ ಗಣನೀಯವಾಗಿ ಹೆಚ್ಚಲು ಸಾಧ್ಯವಾಗಿದೆ.
ಗಣಿಗಾರಿಕೆಯ ಪ್ರಾಮುಖ್ಯ ಗಣನೀಯವಾಗಿ ಹೆಚ್ಚಿರುವುದಾದರೂ ರಾಷ್ಟ್ರೀಯ ವರಮಾನ ಮತ್ತು ಉದ್ಯೋಗಗಳಿಗೆ ಗಣಿಗಾರಿಕೆಯ ಕೊಡುಗೆಯ ದೃಷ್ಟಿಯಿಂದ ಅದರ ವಿಶೇಷ ಪ್ರಾಮುಖ್ಯ ವ್ಯಕ್ತಪಡುವುದಿಲ್ಲವೆಂಬುದು ಮುಂದಣ ಅಂಕಿಗಳಿಂದ ಸ್ಪಷ್ಟವಾಗುತ್ತದೆ:
ರಾಷ್ಟ್ರ | ರಾಷ್ಟ್ರೀಯ ವರಮಾನದಲ್ಲಿ ಗಣಿ ಉತ್ಪನ್ನದ ಶೇಕಡ ಭಾಗ | ಒಟ್ಟು ಕೈಗಾರಿಕೋದ್ಯೋಗಿಗಳಲ್ಲಿ ಗಣಿ ಉದ್ಯೋಗಿಗಳ ಶೇಕಡ ಭಾಗ | ||
---|---|---|---|---|
1953 | 1963 | 1953 | 1963 | |
ಅಮೆರಿಕ ಸಂಯುಕ್ತ ಸಂಸ್ಥಾನಗಳು ... | 1.7 | 1.2 | 1.6 | 0.8 |
ಆಸ್ಟ್ರೇಲಿಯ ... | 2.7 | 1.6 | 2.1 | 1.1 |
ಗ್ರೇಟ್ ಬ್ರಿಟನ್ ... | 3.6 | 2.6 | 4.0 | 2.6 |
ಜರ್ಮನಿ ... | 6.0 | 4.3 | - | - |
ಫ್ರಾನ್ಸ್ ... | 2.0 | 1.5 | - | - |
ಜಪಾನ್ ... | 3.1 | 1.3 | 1.3 | 0.7 |
ಭಾರತ ... | 1.0 | 1.3 | - | - |
(ಮೂಲ: ದ ಗ್ರೋತ್ ಆಫ್ ವರ್ಲ್ಡ್ ಇಂಡಸ್ಟ್ರಿ, 1953-1965)
ರಾಷ್ಟ್ರೀಯ ವರಮಾನದಲ್ಲಿ (national income) ಗಣಿ ಉತ್ಪನ್ನದ ಶೇಕಡ ಭಾಗವೂ, ಕೈಗಾರಿಕೋದ್ಯೋಗಿಗಳ ಒಟ್ಟು ಸಂಖ್ಯೆಯಲ್ಲಿ ಗಣಿ ಉದ್ಯೋಗಿಗಳ ಶೇಕಡ ಭಾಗವೂ ಅಲ್ಪವಾಗಿರುವುದನ್ನು ಮೇಲೆ ಕೊಟ್ಟಿರುವ ಕೆಲವು ರಾಷ್ಟಗಳ ಉದ್ಯಮಗಳನ್ನು ಕುರಿತ ಅಂಕಿಗಳು ತೋರಿಸುತ್ತವೆ. 1953 ಮತ್ತು 1963ರ ಅವಧಿಯಲ್ಲಿ ಭಾರತವನ್ನು ಬಿಟ್ಟರೆ ಮೇಲೆ ಕೊಟ್ಟಿರುವ ಉಳಿದ ರಾಷ್ಟ್ರಗಳಲ್ಲಿ ಈ ಶೇಕಡ ಭಾಗಗಳು ಇಳಿದಿವೆ. ಈ ರಾಷ್ಟ್ರಗಳ ಆರ್ಥಿಕತೆಯಲ್ಲಿ ಇತರ ಉದ್ಯಮ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಸಾಪೇಕ್ಷವಾಗಿ ಗಣಿಗಾರಿಕೆಯ ಪ್ರಾಮುಖ್ಯ ಕಡಿಮೆಯಾದಂತೆ ಆಗಿದೆ. ಆರ್ಥಿಕಾಭಿವೃದ್ಧಿಯೊಡನೆ ಯಾವುದೇ ರಾಷ್ಟ್ರದ ತಯಾರಿಕೋದ್ಯಮ (manufacturing industry) ಹಾಗೂ ಸೇವಾ ಉದ್ಯಮ (service industry) ಕ್ಷೇತ್ರಗಳ ಸಾಪೇಕ್ಷ ಪ್ರಾಮುಖ್ಯ ಹೆಚ್ಚುವುದೂ, ಪ್ರಾಥಮಿಕ ಉದ್ಯಮಗಳಾದ ಕೃಷಿ ಮತ್ತು ಗಣಿಗಾರಿಕೆಗಳ ಸಾಪೇಕ್ಷ ಪ್ರಾಮುಖ್ಯ ಹೆಚ್ಚುವುದೂ, ಪ್ರಾಥಮಿಕ ಉದ್ಯಮಗಳಾದ ಕೃಷಿ ಮತ್ತು ಗಣಿಗಾರಿಕೆಗಳ ಸಾಪೇಕ್ಷ ಪ್ರಾಮುಖ್ಯ ಕಡಿಮೆಯಾಗುವುದೂ ಅನುಭವಸಿದ್ಧವಾದ ಒಂದು ಐತಿಹಾಸಿಕ ಪ್ರವೃತ್ತಿ. ಆದರೆ, ವಾಸ್ತವ ಉತ್ಪನ್ನದ ಪರಿಮಾಣವನ್ನು ಪರಿಗಣಿಸಿದರೆ ಈ ಅವಧಿಯಲ್ಲಿ ಗಣಿ ಉತ್ಪನ್ನದ ಗಾತ್ರ ಬಹಳ ಮಟ್ಟಿಗೆ ಹೆಚ್ಚಿರುವುದನ್ನು ಕಾಣಬಹುದು. ಉದಾಹರಣೆಗೆ, ಅಮೆರಿಕದ ಗಣಿ ಉತ್ಪನ್ನಗಳ ಒಟ್ಟು ಮೌಲ್ಯ 1953ರಲ್ಲಿ 5.4 ಸಾವಿರ ದಶಲಕ್ಷ ಡಾಲರುಗಳಷ್ಟು ಇದ್ದದ್ದು, 1963ರಲ್ಲಿ 6.0 ಸಾವಿರ ದಶಲಕ್ಷ ಡಾಲರುಗಳಿಗೂ, ಗ್ರೇಟ್ ಬ್ರಿಟನ್ನಿನಲ್ಲಿ ಇದೇ ವರ್ಷಗಳಲ್ಲಿ ಕ್ರಮವಾಗಿ 546 ದಶಲಕ್ಷ ಪೌಂಡ್‍ಗಳಿಂದ 740 ದಶಲಕ್ಷ ಪೌಂಡುಗಳಿಗೂ ಹೆಚ್ಚಿವೆ. ಜರ್ಮನಿ, ಫ್ರಾನ್ಸ್‌ಗಳಲ್ಲಿ ಗಣಿ ಉತ್ಪನ್ನ ಈ ಅವಧಿಯಲ್ಲಿ ದ್ವಿಗುಣವಾಯಿತು. ಜಪಾನ್, ಆಸ್ಟ್ರೇಲಿಯ, ಭಾರತಗಳಲ್ಲೂ ಇದೇ ರೀತಿ ಉತ್ಪನ್ನ ಹೆಚ್ಚಾಗಿದೆ. ಈ ರಾಷ್ಟ್ರಗಳ ಗಣಿಗಾರಿಕೆ ವಿಸ್ತರಣೆಯಾಗಿದೆಯೆಂಬ ಅಂಶ ವ್ಯಕ್ತಪಡುತ್ತದೆ.
ಆರ್ಥಿಕವಾಗಿ ಮುಂದುವರಿದಿರುವ ರಾಷ್ಟ್ರಗಳಲ್ಲಿ ಹೇಗೋ ಹಾಗೆಯೆ ಆರ್ಥಿಕವಾಗಿ ಒಟ್ಟಿನಲ್ಲಿ ಹಿಂದುಳಿದಿರುವ ಅನೇಕ ರಾಷ್ಟ್ರಗಳಲ್ಲಿಯೂ ಗಣಿ ಉದ್ಯಮ ಆಧುನಿಕ ರೀತಿಯಲ್ಲಿ ವ್ಯವಸ್ಥಿತವಾಗಿರುವುದೇ ಅಲ್ಲದೆ, ಮುಂದುವರಿದಿರುವ ರಾಷ್ಟ್ರಗಳಿಗಿಂತ ಅವುಗಳ ಆರ್ಥಿಕತೆಗಳಲ್ಲಿ ಗಣಿಗಾರಿಕೆ ಸಾಪೇಕ್ಷವಾಗಿ ಹೆಚ್ಚು ಪ್ರಾಮುಖ್ಯಗಳಿಸಿದೆ. ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಅಮೆರಿಕದ ಅನೇಕ ಅಭಿವೃದ್ಧಿ ಹೊಂದದ ರಾಷ್ಟ್ರಗಳು ಇತ್ತೀಚಿನ ವರ್ಷಗಳವರೆಗೆ ಸಾಮಾನ್ಯವಾಗಿ ಮುಂದುವರಿದ ರಾಷ್ಟ್ರಗಳ ವಸಾಹತುಗಳಾಗಿ ಅಥವಾ ಅಧೀನರಾಷ್ಟ್ರಗಳಾಗಿ ಇದ್ದು, ಅವುಗಳ ಗಣಿ ಉದ್ಯಮಗಳು ಮುಖ್ಯವಾಗಿ ಹಿರಿಯ ರಾಷ್ಟ್ರಗಳ ಆವಶ್ಯಕತೆಗಳ ಪೂರೈಕೆಗಾಗಿ ವಿದೇಶೀ ಉದ್ಯಮ ಸಾಹಸ ಹಾಗೂ ಬಂಡವಾಳಗಳ ಸಹಾಯದಿಂದ ಬೆಳೆದುವು. ಮುಂದುವರಿದ ರಾಷ್ಟ್ರಗಳ ಅನೇಕ ಕೈಗಾರಿಕೆಗಳು ಈ ರಾಷ್ಟ್ರಗಳ ಖನಿಜೋತ್ಪನ್ನಗಳನ್ನು ಅವಲಂಬಿಸಿವೆ. ಬಹುಸಂಖ್ಯೆಯಲ್ಲಿರುವ ಈ ಹಿಂದುಳಿದ ದೇಶಗಳ ರಾಷ್ಟ್ರೀಯ ಉತ್ಪನ್ನದಲ್ಲಿ ಒಂದು ಅಥವಾ ಎರಡು ಖನಿಜಗಳ ಉತ್ಪನ್ನ ಗಣನೀಯ ಭಾಗವಾಗಿದೆ. ಇವುಗಳಲ್ಲಿ ಕೈಗಾರಿಕೆ ಅಭಿವೃದ್ಧಿಯಾಗಿಲ್ಲ, ಕೃಷಿ ಉತ್ಪಾದಕತೆ ಕೆಳಮಟ್ಟದಲ್ಲಿದೆ. ಸಾರಿಗೆ, ಸಂಪರ್ಕ ಹಾಗೂ ಇತರ ಸೇವಾ ಉದ್ಯಮಗಳು ಬೆಳೆದಿಲ್ಲ. ಆದ್ದರಿಂದ ಇಲ್ಲಿ ಅಭಿವೃದ್ಧಿಯಾಗಿರುವ ಗಣಿಗಾರಿಕೆ ವಲಯ ಇವುಗಳ ಆರ್ಥಿಕತೆಯಲ್ಲಿ ಸಾಪೇಕ್ಷವಾಗಿ ಹೆಚ್ಚು ಮುಖ್ಯ ಸ್ಥಾನ ಹೊಂದಿದೆ. ಪೆಟ್ರೋಲಿಯಮ್, ತವರ, ನೈಟ್ರೇಟು, ತಾಮ್ರ, ಸತು ಮುಂತಾದ ಖನಿಜಗಳಲ್ಲಿ ಒಂದು ಅಥವಾ ಎರಡರಿಂದಲೇ ಈ ರಾಷ್ಟ್ರಗಳು ತಮ್ಮ ವಿದೇಶ ವಿನಿಮಯ ಸಂಪಾದನೆಯ ಬಹುಭಾಗವನ್ನು ಪಡೆಯುತ್ತಿವೆ.
ಎರಡನೆಯ ಮಹಾಯುದ್ಧದ ತರವಾಯ ಹಿಂದಿನ ವಸಾಹತುಗಳು ಮತ್ತು ಅಧೀನ ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದಿವೆ. ಅವುಗಳಲ್ಲೂ ಕೈಗಾರಿಕಾಭಿವೃದ್ಧಿಯ ಹಂಬಲ ಬೆಳೆಯುತ್ತಿದೆ. ಅವುಗಳ ಆರ್ಥಿಕಾಭಿವೃದ್ಧಿಯಿಂದ ಸಾಧ್ಯವಾಗುವ ಆರ್ಥಿಕ ವರಮಾನ ವೃದ್ಧಿಯಿಂದ ಅಲ್ಲಿಯ ಜನತೆಯ ಆರ್ಥಿಕ ಜೀವನಮಟ್ಟವೂ ಏರುತ್ತಿದೆ. ಈ ಕಾರಣಗಳಿಂದ ಮುಂದೆ ಖನಿಜಗಳ ಬೇಡಿಕೆಯೂ ಹೆಚ್ಚುವುದೆಂದು ಹೇಳಬಹುದು.
ಖನಿಜಗಳ ಬೇಡಿಕೆ ಹಿಂದೆ ವಿವರಿಸಿರುವ ಅನೇಕ ಕಾರಣಗಳಿಂದ ಹೆಚ್ಚಿರುವುದರಿಂದ ಹಾಗೂ ಇನ್ನೂ ಹೆಚ್ಚುವ ಸಂಭವವಿರುವುದರಿಂದ ಇದಕ್ಕೆ ಸರಿಸಮವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಈಚಿನ ದಶಕಗಳಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನಗಳಲ್ಲಿ ತಾಂತ್ರಿಕ ಪ್ರಗತಿ ಮುಖ್ಯವಾದ್ದು. ಗಣಿಗಳಲ್ಲಿ ಬಾವಿಮಾರ್ಗ ತೋಡುವುದು, ಸುರಂಗ ಕೊರೆಯುವುದು, ಅದಿರು ಕಡಿಯುವುದು, ಅದುರನ್ನು ಹೊರಕ್ಕೆ ಸಾಗಿಸುವುದು ಇತ್ಯಾದಿ ಕಾರ್ಯಾಚರಣೆಗಳಲ್ಲಿ ಬಹುಮಟ್ಟಿಗೆ ಸ್ವಯಂಚಾಲಿತ ಯಂತ್ರಗಳನ್ನು ಬಳಸುವ ತಂತ್ರ ಬೆಳೆದು, ಗಣಿತಂತ್ರದಲ್ಲಿ ಹೊಸ ಕ್ರಾಂತಿಯೇ ಉಂಟಾಗಿದೆ. ಕಡಿಮೆ ದರ್ಜೆ ಅದುರನ್ನು ಉಪಯೋಗಿಸುವುದರಲ್ಲೂ, ಅದುರನ್ನು ಶುದ್ಧಗೊಳಿಸುವುರಲ್ಲೂ, ಖನಿಜಗಳನ್ನು ಬಳಸುವುದರಲ್ಲೂ ಹೆಚ್ಚು ಮಿತವ್ಯಯ ಸಾಧಿಸುವ ಮಾರ್ಗಗಳನ್ನು ಕಂಡುಹಿಡಿಯಲಾಗಿದೆ. ಈ ಕ್ರಮದಿಂದ ಗಣಿಗಾರಿಕೆಯ ಉತ್ಪಾದನೆಯ ದಕ್ಷತೆ ಹೆಚ್ಚಿರುವುದರಿಂದ ಉತ್ಪಾದನಾ ವೆಚ್ಚದಲ್ಲಿ ಇಳಿತಾಯವಾಗುವುದು ಸಾಧ್ಯವಾಗಿದೆ. ಆದರೆ ಇದಕ್ಕೆ ಪ್ರತಿಯಾದ, ಅಂದರೆ ಗಣಿಗಾರಿಕೆ ಉತ್ಪಾದನಾ ವೆಚ್ಚ ಹೆಚ್ಚಿಸುವ ಕೆಲವು ಅಂಶಗಳೂ ಪ್ರಬಲವಾಗಿವೆ. ಕಾಲಕ್ರಮದಲ್ಲಿ ಅನೇಕ ಗಣಿಗಳಲ್ಲಿ ಹೆಚ್ಚು ಆಳದಿಂದ ಅದುರುಗಳನ್ನು ಅಗೆದು ಹೊರತರಬೇಕಾಗುತ್ತದೆ. ಅಲ್ಲದೆ ಉತ್ತಮ ದರ್ಜೆಯ ಅದುರು ಮುಗಿದು ಕಡಿಮೆ ದರ್ಜೆಯ ಅದುರುಗಳನ್ನು ಉಪಯೋಗಿಸಿಕೊಳ್ಳಬೇಕಾದ ಸಂದರ್ಭ ಒದಗಬಹುದು. ಆಕಸ್ಮಿಕವಾಗಿ ಹೆಚ್ಚು ಉತ್ತಮವಾದ ಅದುರು ಲಭಿಸಲೂಬಹುದು. ಇದು ಅನಿಶ್ಚಿತ ಅಂಶ. ಸಾಮಾನ್ಯವಾಗಿ ನಿರ್ದಿಷ್ಟ ಕಾಲಾವಧಿಯ ಅನಂತರ ಒಂದು ಪ್ರದೇಶದ ಖನಿಜ ಸಂಪತ್ತು ಬರಿದಾಗುವುದರಿಂದ ಅಲ್ಲಿಯ ಗಣಿಗಳನ್ನು ಮುಚ್ಚಬೇಕಾಗಬಹುದು. ಅಲ್ಲದೆ ಭೂಮಿಯಲ್ಲಿ ಖನಿಜ ಸಂಪತ್ತು ಹುದುಗಿರುವ ಹೊಸ ಪ್ರದೇಶಗಳನ್ನು ಶೋಧಿಸಿ ಸೂಕ್ತ ಸ್ಥಳಗಳಲ್ಲಿ ಹೊಸ ಗಣಿಗಳನ್ನು ನಿರ್ಮಿಸಬೇಕಾಗಬಹುದು. ಗಣಿಗಾರಿಕೆ ಉದ್ಯಮದ ಪ್ರಥಮ ಹಂತದ ಕಾರ್ಯವಾದ ಈ ಶೋಧನೆಯ ಫಲ ಬಹುಮಟ್ಟಿಗೆ ಆಕಸ್ಮಿಕ ಹಾಗೂ ಅನಿಶ್ಚಿತ. ಖನಿಜಗಳ ಭವಿಷ್ಯ ಸರಬರಾಯಿ ಪರಿಸ್ಥಿತಿಯ ಬಗ್ಗೆ ನಿರ್ದಿಷ್ಟ ಅಂದಾಜುಗಳನ್ನು ಹಾಕುವುದು ಕಷ್ಟ. ಆದರೆ ಪ್ರಪಂಚದಲ್ಲಿ ಅನೇಕ ಖನಿಜಗಳಿಗೆ-ಮುಖ್ಯವಾಗಿ ಶಕ್ತಿಮೂಲಗಳಾದ ಪೆಟ್ರೋಲಿಯಂ ಮತ್ತು ಅನಿಲಗಳಿಗೂ, ಹೊಸ ಲೋಹ ಕೈಗಾರಿಕೆ ಮತ್ತು ಯಂತ್ರ ಕೈಗಾರಕೆಗಳಿಗೆ ಬೇಕಾದ ಅಲ್ಯೂಮಿನಿಯಂ, ತಾಮ್ರ, ತವರ ಇತ್ಯಾದಿಗಳಿಗೂ-ಈಗ ಸರಬರಾಯಿಗೂ ಮೀರಿದ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಿದೆ. ಬರಲಿರುವ ದಶಕಗಳಲ್ಲಿ ಇಂದಿನ ಅನೇಕ ಹಿಂದುಳಿದ ರಾಷ್ಟ್ರಗಳು ಅಭಿವೃದ್ಧಿಯಾಗುವುದರಿಂದ ಈ ಖನಿಜಗಳಿಗೆ ಬೇಡಿಕೆ ಇನ್ನೂ ತೀವ್ರವಾಗಿ ಹೆಚ್ಚುವ ಸಂಭವವಿದೆ. ಹೀಗೆ ಹೆಚ್ಚುತ್ತಿರುವ ಬೇಡಿಕೆಗೆ ಸಮವಾದ ವೇಗದಲ್ಲಿ ಸರಬರಾಯಿ ಬೆಳೆಯುವಂತೆ ಮಾಡುವುದು ಗಣಿಗಾರಿಕೆಯ ಮುಖ್ಯ ಸಮಸ್ಯೆ. ಆಧುನಿಕ ವೈಜ್ಞಾನಿಕ ಗಣಿ ಶೋಧನ ತಂತ್ರಗಳ ಪ್ರಯೋಗದಿಂದ ವಿವಿಧ ಖನಿಜಗಳ ಸರಬರಾಯಿ ಮೂಲಗಳ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚುತ್ತಿರುವುದರಿಂದಲೂ, ಹಳೆಯ ಗಣಿಗಳನ್ನು ಮುಚ್ಚಬೇಕಾಗಬಹುದಾದ್ದರಿಂದಲೂ, ಗಣಿ ಫಲವತ್ತತೆ ಬಗ್ಗೆ ಅನಿಶ್ಚಯತೆ ಇರುವುದರಿಂದಲೂ ಗಣಿಗಾರಿಕೆ ವಿಶೇಷತಃ ಗತಿಶೀಲ ಆರ್ಥಿಕ ಚಟುವಟಿಕೆಯಾಗಿದೆ. ಈ ಕಾರಣದಿಂದ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಗಣಿಗಾರಿಕೆಯ ಪಾತ್ರ ಆಗಿಂದಾಗ್ಗೆ ಸ್ವಲ್ಪ ವ್ಯತ್ಯಾಸಗೊಳ್ಳಬಹುದಾದ ಸಂಭವವಿದೆ.
ಜಗತ್ತಿನಲ್ಲಿ ಗಣಿಗಾರಿಕೆ
ಬದಲಾಯಿಸಿಗಣಿಗಾರಿಕೆ ಹೆಚ್ಚು ಸ್ಥಾನೀಕರಣವಾದ ಉದ್ಯಮ. ಕೃಷಿ ಉದ್ಯಮದಂತೆ ಒಂದೊಂದು ದೇಶದಲ್ಲೂ ವಿಸ್ತಾರವಾಗಿ ಹರಡದೆ, ಗಣಿಗಾರಿಕೆ ಕೇವಲ ಕೆಲವು ಸ್ಥಳಗಳಲ್ಲಿ ಮಾತ್ರ ಸ್ಥಾನೀಕರಣವಾಗಿರುವ ಉದ್ಯಮವಾಗಿದೆ. ಅನೇಕ ತಯಾರಿಕೋದ್ಯಮಗಳೊಡನೆ ಹೋಲಿಸಿದರೂ ಗಣಿ ಉದ್ಯಮ ಪ್ರಪಂಚದಲ್ಲಿ ಹೆಚ್ಚು ಸ್ಥಾನೀಕರಣವಾಗಿರುವ ಉದ್ಯಮವಾಗಿದೆ. ಖನಿಜಗಳ ಪ್ರಾಕೃತಿಕ ಹಾಗೂ ಭೌಗೋಳಿಕ ವಿತರಣೆಯ ವಿನ್ಯಾಸ ಇದಕ್ಕೆ ಏಕೈಕ ಕಾರಣ. ಕೈಗಾರಿಕೆಗೆ ಉಪಯುಕ್ತವಾದ ಕೆಲವು ವಿಧದ ಮಣ್ಣುಗಳು ಮತ್ತು ಕಲ್ಲುಗಳನ್ನು ಬಿಟ್ಟರೆ ಅನೇಕ ಖನಿಜಗಳು ದೊರಕುವ ಪ್ರದೇಶಗಳು ಸಾಮಾನ್ಯವಾಗಿ ವಿರಳವಾಗಿವೆ. ಕಲ್ಲಿದ್ದಲು ಮತ್ತು ಕಬ್ಬಿಣದ ಅದುರುಗಳು ಪ್ರಪಂಚದಲ್ಲಿ ಸಾಪೇಕ್ಷವಾಗಿ ಹೆಚ್ಚು ವಿಸ್ತಾರವಾಗಿ ವಿರತರಣೆಯಾಗಿರುವ ಗಣಿವಸ್ತುಗಳು. ಆದರೂ ವಿಶ್ವದ ಕಲ್ಲಿದ್ದಲಿನ ಒಟ್ಟು ಉತ್ಪತ್ತಿಯಲ್ಲಿ ಸುಮಾರು 2/3 ರಷ್ಟು ಜರ್ಮನಿ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡಿನಲ್ಲೆ ಆಗುತ್ತದೆ. ಕಬ್ಬಿಣದ ಅದುರಿನ ಒಟ್ಟು ಉತ್ಪತ್ತಿಯಲ್ಲಿ ಶೇಕಡ 50 ರಷ್ಟು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ, ಶೇಕಡ 42ರಷ್ಟು ಫ್ರಾನ್ಸ್, ರಷ್ಯಾ, ಸ್ವೀಡನ್, ಇಂಗ್ಲೆಂಡ್ ಮತ್ತು ಜರ್ಮನಿಗಳಲ್ಲೂ, ಉಳಿದ ಶೇ. 8ರಷ್ಟು ಮಾತ್ರ ಪ್ರಪಂಚದ ಇತರ ಕಡೆಗಳಲ್ಲೂ ಆಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳು, ವೆನಿಜ಼ುವೇಲ ಮತ್ತು ಪಶ್ಚಿಮ ಏಷ್ಯ ರಾಷ್ಟ್ರಗಳು ಪ್ರಪಂಚದ ಒಟ್ಟು ಪೆಟ್ರೋಲಿಯಂ ಉತ್ಪಾದನೆಯ ಶೇಕಡ 85ಕ್ಕೂ ಹೆಚ್ಚು ಭಾಗಕ್ಕೆ ಕಾರಣವಾಗಿವೆ. ವಜ್ರದ ಸುಮಾರು ಮುಕ್ಕಾಲು ಭಾಗದ ಉತ್ಪಾದನೆ ಕಾಂಗೋ ಮತ್ತು ದಕ್ಷಿಣ ಆಫ್ರಿಕಗಳಲ್ಲಿ ಆಗುತ್ತದೆ. ಚಿನ್ನದ ಗಣಿಗಳು ಬಹುಮಟ್ಟಿಗೆ ದಕ್ಷಿಣ ಆಫ್ರಿಕ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಾ, ರಷ್ಯ, ಆಸ್ಟ್ರೇಲಿಯಗಳಲ್ಲಿ ಸಾಂದ್ರೀಕೃತವಾಗಿವೆ.[೧೪] ಇವೆಲ್ಲವೂ ಸೇರಿ ಪ್ರಪಂಚದ ಒಟ್ಟು ಚಿನ್ನದ ಸುಮಾರು 4/5 ರಷ್ಟು ಉತ್ಪತ್ತಿಗೆ ಕಾರಣವಾಗಿವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಬರುವುದು ದಕ್ಷಿಣ ಆಫ್ರಿಕದ ಗಣಿಗಳಿಂದ. ಪ್ಲಾಟಿನಂ ಉತ್ಪಾದನೆಗೆ ಕೆನಡ, ದಕ್ಷಿಣ ಆಫ್ರಿಕ, ರಷ್ಯ ಹಾಗೂ ಕೊಲಂಬಿಯಗಳು ಸೀಮಿತವಾಗಿದೆ.[೧೫] ಪ್ರಪಂಚದ ಬೆಳ್ಳಿ ಸರಬರಾಯಿಯ ಸುಮಾರು ಅರ್ಧದಷ್ಟು ಭಾಗ ಮೆಕ್ಸಿಕೋ, ಪೆರು ಮತ್ತು ಬೊಲಿವಿಯಗಳಿಂದಲೂ, ಉಳಿದುದರ ಬಹುಭಾಗ ಅಮೆರಿಕದ ಸಂಯುಕ್ತ ಸಂಸ್ಥಾನಗಳು, ಕೆನಡ, ಆಸ್ಟ್ರೇಲಿಯಗಳಿಂದಲೂ ಬರುತ್ತವೆ.[೧೬] ಬಾಕ್ಸೈಟ್ ಗಣಿಗಳು ಬಹುಮಟ್ಟಿಗೆ ಉತ್ತರ ಹಾಗೂ ದಕ್ಷಿಣ ಅಮೆರಿಕ, ಆಫ್ರಿಕ ಮತ್ತು ದಕ್ಷಿಣ ಐರೋಪ್ಯ ಪ್ರದೇಶಗಳಲ್ಲೂ, ತವರ ಉತ್ಪಾದನೆ ಮುಖ್ಯವಾಗಿ ಮಲಯ ಹಾಗೂ ಕೆಲವು ದೂರಪ್ರಾಚ್ಯ ದ್ವೀಪಗಳಲ್ಲೂ ಸಾಂದ್ರೀಕೃತವಾಗಿವೆ. ಸತುವಿನಲ್ಲಿ ಸುಮಾರು ಅರ್ಧದಷ್ಟು ಅಮರಿಕ ಸಂಯುಕ್ತ ಸಂಸ್ಥಾನಗಳಲ್ಲೂ, ಉಳಿದದ್ದು ಬಹುಮಟ್ಟಿಗೆ ಕೆನಡ, ರಷ್ಯ, ಬೆಲ್ಜಿಯಂ, ಆಸ್ಟ್ರೇಲಿಯ, ಇಂಗ್ಲೆಂಡ್‌ಗಳಲ್ಲಿಯೂ ಉತ್ಪಾದನೆಯಾಗುತ್ತವೆ.[೧೭] ಸೀಸದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡ ಸೇರಿ ಸುಮಾರು 2/5ರಷ್ಟನ್ನೂ, ಆಸ್ಟ್ರೇಲಿಯ, ಮೆಕ್ಸಿಕೋ ಮತ್ತು ರಷ್ಯಗಳು ಉಳಿದದ್ದರಲ್ಲಿ ಬಹುಭಾಗವನ್ನೂ ಉತ್ಪಾದಿಸುತ್ತಿವೆ.[೧೮] ನಿಕಲ್, ಮ್ಯಾಂಗನೀಸ್, ಕ್ರೋಮಿಯಂ, ಟಂಗ್‌ಸ್ಟನ್, ಕೋಬಾಲ್ಟ್, ಯುರೇನಿಯಮ್ ಮುಂತಾದ ಖನಿಜಗಳ ಉತ್ಪಾದನೆಗಳು ಕೂಡ ವಿಶ್ವದ ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ.
ವಿವಿಧ ಖನಿಜಗಳ ಉತ್ಪಾದನೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ವಿವಿಧ ಪರಿಮಾಣಗಳಲ್ಲಿ ವಿತರಣೆಯಾಗಿರುವುದರಿಂದ ರಾಷ್ಟ್ರಗಳ ಆರ್ಥಿಕತೆಯಲ್ಲಿ ಗಣಿಗಾರಿಕೆಯ ಸ್ಥಾನಮಾನ ಏಕರೀತಿ ಇಲ್ಲ. ಆಯಾ ರಾಷ್ಟ್ರಗಳ ಖನಿಜಗಳ ಮೂಲಗಳು ಯಾವುವೆಂಬುದೂ, ಎಷ್ಟರಮಟ್ಟಿಗೆ ಆ ರಾಷ್ಟ್ರಗಳು ಈ ಮೂಲಗಳನ್ನು ಶೋಧಿಸಿ ಗಣಿಗಾರಿಕೆಯನ್ನು ಅಭಿವೃದ್ಧಿಪಡಿಸಿಕೊಂಡಿವೆಯೆಂಬುದೂ ಆ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಗಣಿಗಾರಿಕೆಯ ಪಾತ್ರವೇನೆಂಬುದನ್ನು ನಿರ್ಣಯಿಸುತ್ತವೆ. ಗಣಿಗಾರಿಕೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ಥಾನ ಗಮನಾರ್ಹವಾದ್ದು. ವಿಶ್ವದ ಒಟ್ಟು ಖನಿಜೋತ್ಪತ್ತಿಯಲ್ಲಿ ಅಮೆರಿಕದ ಪಾಲು ಈ ರೀತಿ ಇದೆ; ಪೆಟ್ರೋಲಿಯಂ 60% ಕ್ಕಿಂತ ಅಧಿಕ, ಕಬ್ಬಿಣದ ಅದುರು 50%, ಕಲ್ಲಿದ್ದಲು 24%, ಸತು 47%, ಸೀಸ, 27%, ತಾಮ್ರ 20%, ಬೆಳ್ಳಿ 16%, ಚಿನ್ನ 15%. ಇನ್ನೂ ಅನೇಕ ಖನಿಜಗಳನ್ನು ಗಮನಾರ್ಹ ಗಾತ್ರಗಳಲ್ಲಿ ಅಲ್ಲಿ ನೆಲದಿಂದ ತೆಗೆಯಲಾಗುತ್ತಿದೆ. ವಿಶ್ವದ ಗಣಿಗಾರಿಕೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹೀಗೆ ಅತ್ಯಂತ ಮುಖ್ಯವಾದ ಸ್ಥಾನವುಂಟು. ವಿಶ್ವದ ಆರ್ಥಿಕತೆಯಲ್ಲಿ ಅಮೆರಿಕಕ್ಕೆ ಪ್ರಾಧಾನ್ಯ ಲಭ್ಯವಾಗಲು ಇದು ಒಂದು ಮುಖ್ಯ ಕಾರಣ. ಆದರೆ ಒಟ್ಟಿನಲ್ಲಿ ಖನಿಜ ವೈವಿಧ್ಯ ಹೊಂದಿರುವ ರಾಷ್ಟ್ರಗಳು ಪ್ರಪಂಚದಲ್ಲಿ ವಿರಳ; ಕೇವಲ ಕೆಲವೇ ಖನಿಜಗಳನ್ನು ವಿಶೇಷವಾಗಿ ಹೊಂದಿರುವ ರಾಷ್ಟ್ರಗಳು ಹೆಚ್ಚಾಗಿವೆ.
ಭಾರತದಲ್ಲಿ ಗಣಿಗಾರಿಕೆ
ಬದಲಾಯಿಸಿಒಂದು ದೇಶದಲ್ಲಿರುವ ಖನಿಜ ನಿಕ್ಷೇಪಗಳ ವೈವಿಧ್ಯ ದೃಷ್ಟಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಸೋವಿಯೆತ್ ದೇಶ ಇವುಗಳ ಜೊತೆಗೆ ಭಾರತವನ್ನೂ ಸೇರಿಸಬಹುದು. ಹುದುಗಿರುವ ಖನಿಜ ಸಂಪತ್ತನ್ನು ಭಾರತ ಸಾಕಷ್ಟು ಹೊರ ತೆಗೆಯುತ್ತಿಲ್ಲವಾದರೂ ಇಲ್ಲಿ ಅನೇಕ ಬಗೆಯ ಖನಿಜಗಳು ಗಣನೀಯ ಪರಿಮಾಣಗಳಲ್ಲಿವೆ ಎಂಬುದು ಈಚೆಗೆ ನಡೆಸಿರುವ ಶೋಧನೆಗಳಿಂದ ವ್ಯಕ್ತವಾಗುತ್ತದೆ. ಈಚಿನ ಅಂದಾಜಿನ ಪ್ರಕಾರ ಇಲ್ಲಿ ಹುದುಗಿರುವ ಕಬ್ಬಿಣದ ಅದುರಿನ ಪರಿಮಾಣ ಪ್ರಪಂಚದಲ್ಲಿರುವ ಒಟ್ಟು ನಿಕ್ಷೇಪದ ಕಾಲುಭಾಗದಷ್ಟಿದೆಯೆಂದು ಹೇಳಲಾಗಿದೆ. ಒರಿಸ್ಸಾ, ಬಿಹಾರ, ಮಧ್ಯ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗೋವಗಳಲ್ಲಿ ಕಬ್ಬಿಣದ ಅದುರಿನ ಗಣಿಗಾರಿಕೆ ಯೋಜನಾನುಗುಣವಾಗಿ ತೀವ್ರವಾಗಿ ಬೆಳೆಯುತ್ತಿದೆ. ದೇಶದ ಉಕ್ಕಿನ ಕೈಗಾರಿಕೆಗೆ ಅದುರನ್ನು ಒದಗಿಸುವುದೇ ಅಲ್ಲದೆ ಕೆಲವು ರಾಷ್ಟ್ರಗಳಿಗೆ-ಮುಖ್ಯವಾಗಿ ಜಪಾನಿಗೆ-ಕಬ್ಬಿಣದ ಅದುರನ್ನು ರಫ್ತು ಮಾಡಲಾಗುತ್ತಿದೆ.[೧೯] ಝರಿಯ, ರಾಣಿಗಂಜ್[೨೦] ಮತ್ತು ಬೊಕಾರೊಗಳಲ್ಲಿ ದೇಶದ ಕಲ್ಲಿದ್ದಲು ಗಣಿಗಾರಿಕೆ ಸ್ಥಾನೀಕರಣವಾಗಿದೆ. ಅಸ್ಸಾಂ, ತ್ರಿಪುರ, ಮಣಿಪುರ, ಪಶ್ಚಿಮ ಬಂಗಾಳ, ಪಂಜಾಬ್, ಹಿಮಾಚಲ ಪ್ರದೇಶ, ಕ್ಯಾಂಬೇ-ಕಚ್ ಪ್ರದೇಶಗಳಲ್ಲಿ ತೈಲಗಣಿಗಳನ್ನು ಅಭಿವೃದ್ಧಿಪಡಿಸಬಹುದೆಂಬುದು ವ್ಯಕ್ತಪಟ್ಟಿದೆ. ಪ್ರಪಂಚದ ಮ್ಯಾಂಗನೀಸ್ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತದ್ದು ಮುಖ್ಯ ಸ್ಥಾನ.[೨೧] ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗೋವದಲ್ಲಿ ದೇಶದ ಮ್ಯಾಂಗನೀಸ್ ಅದುರಿನ ಬಹುಭಾಗ ದೊರಕುತ್ತಿದೆ. ದೇಶದಲ್ಲಿ ಬೆಳೆಯುತ್ತಿರುವ ಕೈಗಾರಿಕೆಗೆ ಇದು ಸಹಾಯವಾಗಿರುವುದೇ ಅಲ್ಲದೆ ರಫ್ತು ಮೂಲಕ ವಿದೇಶಿ ವಿನಿಮಯದ ಗಳಿಕೆಗೂ ಸಹಾಯಕವಾಗಿದೆ. ಉತ್ತಮ ದರ್ಜೆಯ ಅಭ್ರಕ ಉತ್ಪಾದನೆಯಲ್ಲೂ ಪ್ರಪಂಚದಲ್ಲಿ ಭಾರತಕ್ಕೆ ಗಣ್ಯಸ್ಥಾನವುಂಟು.[೨೨] ಪರಮಾಣು ಶಕ್ತಿಗೆ ಅವಶ್ಯಕವಾದ ಯೂರೇನಿಯಂ ನಿಕ್ಷೇಪ ಭಾರತದಲ್ಲಿ ಉಂಟು. ಇವುಗಳೇ ಅಲ್ಲದೆ ಚಿನ್ನ, ವಜ್ರ, ತಾಮ್ರ, ಸೀಸ, ಸತು, ಬಾಕ್ಸೈಟ್, ಇಲ್ಮೆನೈಟ್, ಜಿಪ್ಸಂ, ಕ್ರೋಮೈಟ್, ಫ್ಲೂರೈಟ್ ಮುಂತಾದ ವಿವಿಧ ಖನಿಜ ನಿಕ್ಷೇಪಗಳು ದೇಶದಲ್ಲಿವೆ. ಈಚೆಗೆ ಬೆಳೆಯುತ್ತಿರುವ ಆಧುನಿಕ ಕೈಗಾರಿಕೆಗಳಿಗೆ ಖನಿಜಮೂಲಗಳಿಂದ ಅವಶ್ಯಕವಾದ ಮೂಲ ಸಾಮಗ್ರಿಗಳು ಒದಗುತ್ತಿವೆ. ಭಾರತದ ನಾಲ್ಕು ಪಂಚವಾರ್ಷಿಕ ಯೋಜನೆಗಳಲ್ಲಿ ಗಣಿಗಾರಿಕೆಯ ಅಭಿವೃದ್ಧಿಗಾಗಿ ಒಟ್ಟು 1,550 ಕೋಟಿ ರೂ. ಬಂಡವಾಳ ಹೂಡಲಾಯಿತು. ಈ ಯೋಜನೆಗಳಲ್ಲಿ ಅನೇಕ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಇವುಗಳಲ್ಲಿ ಕೆಲವು ತೈಲಶುದ್ಧೀಕರಣ ಕೇಂದ್ರಗಳು, ಭಾರತದ ಯೂರೇನಿಯಂ ಕಾರ್ಪೊರೇಷನ್, ನೈವೇಲಿ ಲಿಗ್ನೈಟ್ ಕಾರ್ಪೊರೇಷನ್, ಬೈಲದಿಲ ಹಿಂದುಸ್ತಾನ್ ಸತು ಕಂಪನಿ, ಖೇತ್ರಿ ತಾಮ್ರ ಯೋಜನೆ, ಕೋರ್ಬಾ ಹಾಗೂ ಕೊಯ್ನಾ ಅಲ್ಯೂಮಿನಿಯಂ ಯೋಜನೆ ಇವು ಮುಖ್ಯವಾದ ಕೆಲವು. ದೇಶದ ಗಣಿಗಾರಿಕೆಯ ಅಭಿವೃದ್ಧಿಗಾಗಿ ಆರ್ಥಿಕ ಯೋಜನಾಯುಗ ಆರಂಭವಾದ ಅನಂತರ ಹೊಸ ವ್ಯವಸ್ಥೆಯೊಂದು ನಿರ್ಮಿತವಾಗಿದೆ. ಭಾರತದ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆ ಮತ್ತು ಭಾರತದ ಗಣಿಗಳ ಬ್ಯೂರೊ ಇವು ನಡೆಸುತ್ತಿರುವ ಸರ್ವೇಕ್ಷಣ, ಸಂಶೋಧನ, ವ್ಯವಸ್ಥಾಪನ ಕಾರ್ಯಾಚರಣೆಗಳು ಹೆಚ್ಚಾಗಿ ಬೆಳೆದಿವೆ. ರಾಷ್ಟ್ರೀಯ ಖನಿಜ ಅಭಿವೃದ್ಧಿ ಕಾರ್ಪೊರೇಷನ್ ಒಂದನ್ನು 1958ರಲ್ಲಿ ಸ್ಥಾಪಿಸಲಾಯಿತು. ಅನೇಕ ಗಣಿಗಳ ಅಭಿವೃದ್ಧಿ, ಕಾರ್ಯನಿರ್ವಹಣೆ ಈ ಸಂಸ್ಥೆಯ ವ್ಯಾಪ್ತಿಗೆ ಸೇರಿದ್ದು. ತೈಲ ಹಾಗೂ ನೈಸರ್ಗಿಕ ಅನಿಲ ಆಯೋಗ ದೇಶದ ನಾನಾ ಭಾಗಗಳಲ್ಲಿ ಶೋಧನೆಯ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ ಪ್ರತ್ಯೇಕ ಗಣಿಶಾಖೆಯ ಮೂಲಕ ಗಣಿಗಾರಿಕೆ ಅಭಿವೃದ್ಧಿಯನ್ನು ವೀಕ್ಷಿಸಿ ಸೂಕ್ತ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಹೀಗೆ ಯೋಜನೆ ಪ್ರಾರಂಭವಾದಾಗಿನಿಂದ ದೇಶದಲ್ಲಿ ಗಣಿಗಾರಿಕೆಯ ಬಗ್ಗೆ ಕೈಗೊಂಡಿರುವ ಕ್ರಮಗಳ ಫಲವಾಗಿ ಖನಿಜೋತ್ಪನ್ನಗಳ ಒಟ್ಟು ಮೌಲ್ಯ (ಪೆಟ್ರೋಲಿಯಂ ಬಿಟ್ಟು) 1951ರಲ್ಲಿ 89 ಕೋಟಿ ರೂ. ಇದ್ದದ್ದು 1961ರಲ್ಲಿ 182 ಕೋಟಿ ರೂ. ಗೂ 1968ರಲ್ಲಿ 415 ಕೋಟಿ ರೂ. ಗೂ ಹೆಚ್ಚಿತು. ಹೀಗೆ ರಾಷ್ಟ್ರದ ಆರ್ಥಿಕತೆಯಲ್ಲಿ ಗಣಿಗಾರಿಕೆಯ ಪಾತ್ರ ವಿಸ್ತರಿಸುತ್ತಿದೆ. ಆರ್ಥಿಕಾಭಿವೃದ್ಧಿ ಪಥದಲ್ಲಿರುವ ರಾಷ್ಟ್ರವೊಂದರ ಸಹಜ ಪ್ರವೃತ್ತಿಯ ನಿದರ್ಶನವಿದು.
ಆರ್ಥಿಕಾಭಿವೃದ್ಧಿಯೊಡನೆ ದೇಶದ ಆರ್ಥಿಕತೆಯಲ್ಲಿ ಗಣಿಗಾರಿಕೆಯ ಪಾತ್ರ ನಿಸರ್ಗದತ್ತ ಖನಿಜಮೂಲಗಳಿಗೆ ಅನುಗುಣವಾಗಿ ಬೆಳೆಯುವುದಾದರೂ ಗಣಿ ಉದ್ಯಮಗಳು ಕೆಲವೇ ಸ್ಥಳಗಳಲ್ಲಿ ಸ್ಥಾಪನೆಯಾಗಿ ಇವು ತಮ್ಮವೇ ಆದ ವಿಶೇಷ ಲಕ್ಷಣಗಳುಳ್ಳ ನಗರಗಳಾಗುತ್ತವೆ. ಈ ಗಣಿನಗರಗಳು ಸಾಮಾನ್ಯವಾಗಿ ಇತರ ಕಡೆಗಳಿಂದ ಬರುವ ಗಣಿ ಸಿಬ್ಬಂದಿ ಮತ್ತು ಜನರಿಂದ ಕೂಡಿರುತ್ತವೆ. ಗಣಿಗಾರಿಕೆಗೇ ವಿಶಿಷ್ಟವಾದ ಆರ್ಥಿಕ, ತಾಂತ್ರಿಕ, ಮಾನವೀಯ ಹಾಗೂ ಸಾಮಾಜಿಕ ಸಮಸ್ಯೆಗಳುಂಟು. ಇವನ್ನು ಪರಿಹರಿಸಲು ಆಧುನಿಕ ಸರ್ಕಾರಗಳು ಸದಾ ಶ್ರಮಿಸುತ್ತಿವೆ; ನಾನಾ ಕ್ರಮಗಳನ್ನು ಕೈಗೊಂಡಿವೆ.
ಉಲ್ಲೇಖಗಳು
ಬದಲಾಯಿಸಿ- ↑ "Industrial History of European Countries". European Route of Industrial Heritage. Council of Europe. Archived from the original on 23 June 2021. Retrieved 2 June 2021.
- ↑ Landes, David S. (1969). The Unbound Prometheus. Press Syndicate of the University of Cambridge. ISBN 978-0-521-09418-4.
- ↑ Holmyard, E. J. (2008). Inorganic Chemistry – A Textbook for Colleges and Schools. Read Books. pp. 399–400. ISBN 978-1-4437-2253-7.
- ↑ Pops, Horace, 2008, "Processing of wire from antiquity to the future", Wire Journal International, June, pp. 58–66
- ↑ The Metallurgy of Copper Wire, http://www.litz-wire.com/pdf%20files/Metallurgy_Copper_Wire.pdf Archived 1 September 2013 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Rich 1994, p. 117.
- ↑ "Where's the Iridium?". The Nibster. Archived from the original on 1 August 2016. Retrieved 26 July 2016.
- ↑ Davis 1999, pp. 1–3.
- ↑ Reader's Digest Association. 1986. The last 2 million years. Reader's Digest. ISBN 0864380070
- ↑ Rothbard, Murray N. (2009). Man, Economy, and State, Scholar's Edition. Ludwig von Mises Institute. ISBN 978-1-933550-99-2.
- ↑ Readon, Arthur C. (2011). Metallurgy for the Non-Metallurgist. ASM International. pp. 73–84. ISBN 978-1-61503-821-3.
- ↑ Eichengreen, Barry (2019). Globalizing Capital: A History of the International Monetary System (3rd ed.). Princeton University Press. pp. 7, 79. doi:10.2307/j.ctvd58rxg. ISBN 978-0-691-19390-8. JSTOR j.ctvd58rxg. S2CID 240840930.
- ↑ Eichengreen, Barry; Esteves, Rui Pedro (2021), Fukao, Kyoji; Broadberry, Stephen (eds.), "International Finance", The Cambridge Economic History of the Modern World: Volume 2: 1870 to the Present, vol. 2, Cambridge University Press, pp. 501–525, ISBN 978-1-107-15948-8
- ↑ "Gold Production & Mining Data by Country". 7 June 2023.
- ↑ "Platinum-Group Metals Statistics and Information" (PDF). www.usgs./myb1-2017-plati.pdf. USGS. 2018. Retrieved 2020-07-30.
- ↑ Hammond, C. R. (2004). The Elements, in Handbook of Chemistry and Physics (81st ed.). CRC press. ISBN 978-0-8493-0485-9.
- ↑ Sai Srujan, A.V (2021). "Mineral Commodity Summaries 2021: Zinc" (PDF). United States Geological Survey. Retrieved June 21, 2021.
- ↑ United States Geological Survey 2017, p. 97.
- ↑ Khullar, 638
- ↑ Chattopadhyay, Akkori, Bardhaman Jelar Itihas O Lok Sanskriti (History and Folk lore of Bardhaman District.), (in Bengali), Vol I, pp 14-15, Radical Impression. ISBN 81-85459-36-3
- ↑ Mineral Commodity Summaries 2009 (Report). Water Resources Division, U.S. Geological Survey. doi:10.3133/mineral2009. https://pubs.usgs.gov/publication/mineral2009.
- ↑ "Mica" (PDF). USGS Mineral Commodity Summaries 2011. Archived from the original (PDF) on 2011-10-30.
ಗ್ರಂಥಸೂಚಿ
ಬದಲಾಯಿಸಿ- Rich, V. (1994). The International Lead Trade. Woodhead Publishing. ISBN 978-0-85709-994-5.
- Davis, J. R. (1999). Corrosion of Aluminum and Aluminum Alloys (in ಇಂಗ್ಲಿಷ್). ASM International. ISBN 978-1-61503-238-9.
- Dean, J. A. (1999). Lange's handbook of chemistry (15 ed.). McGraw-Hill. ISBN 978-0-07-016384-3. OCLC 40213725.
- United States Geological Survey (2017). "Lead" (PDF). Mineral Commodities Summaries. Retrieved 8 May 2017.
- Khullar, D.R. (2006), "Mineral Resources", India: A Comprehensive Geography, pp. 630–659, ASMITH Publishers, ISBN 81-272-2636-X.