ಪೆಟ್ರೋಲಿಯಮ್

ನೈಸರ್ಗಿಕವಾಗಿ ಕಂಡುಬರುವ ಹೈಡ್ರೋಕಾರ್ಬನ್ ದ್ರವವು ಭೂಗರ್ಭದಲ್ಲಿ ಕಂಡುಬರುತ್ತದೆ
ಕುವೇತ್‍ನಲ್ಲಿನ ಒಂದು ತೈಲ ಸಂಸ್ಕರಣಾಗಾರ

ಪೆಟ್ರೋಲಿಯಮ್

ಬದಲಾಯಿಸಿ
  • ಪೆಟ್ರೋಲಿಯಮ್ ಎಂದರೆ ಸರ್ವೇಸಾಧಾರಣವಾಗಿ ಬಾವಿ ಕೊರೆದು ನೆಲದಡಿಯಿಂದ ಪಡೆಯಬೇಕಾಗಿರುವ, ಆದರೆ ವಿರಳವಾಗಿ ಊಟೆಗಳಲ್ಲಿ ಇಲ್ಲವೇ ಹೊಂಡಗಳಲ್ಲಿ ಕಾಣಸಿಗುವ, ಪ್ರಧಾನವಾಗಿ ಹೈಡ್ರೋಕಾರ್ಬನ್ನುಗಳಿಂದಾದ, ಎಣ್ಣೆಯಂತಿರುವ, ನಿಸರ್ಗಲಭ್ಯ ದಹನಶೀಲ ದ್ರವ. ಭೂಗರ್ಭದಿಂದ ಅನಿಲ, ದ್ರವ ಮತ್ತು ಘನ ರೂಪಗಳಲ್ಲಿ ದೊರೆಯುವ ಹೈಡ್ರೋಕಾರ್ಬನ್ನುಗಳ ಎಣ್ಣೆಯಂಥ ಮಿಶ್ರಣವನ್ನು, ನಿರ್ದೇಶಿಸಲು ಈ ಪದವನ್ನು ವ್ಯಾಪಕಾರ್ಥದಲ್ಲಿ ಬಳಸುವುದುಂಟು. ನೈಸರ್ಗಿಕ ಸ್ಥಿತಿಯಲ್ಲಿರುವ ಪೆಟ್ರೋಲಿಯಮ್ಮಿಗೆ ಕ್ರೂಡ್ ಆಯಿಲ್ ಅಥವಾ ಕಚ್ಚಾ ಪೆಟ್ರೋಲಿಯಮ್ ಎಂದು ಹೆಸರು. ಕಲ್ಲೆಣ್ಣೆ ಎಂದರೂ ಇದೇ. ಕಚ್ಚಾ ಪೆಟ್ರೋಲಿಯಮ್ಮಿನಿಂದ ಹೇಳಿಕೊಳ್ಳುವಂಥ ಉಪಯೋಗವೇನೂ ಇಲ್ಲ. ಆದರೆ, ಸಂಸ್ಕರಣಾನಂತರ ಅದರಿಂದ ಗಚ್ಚೆಣ್ಣೆ (ಕೀಲೆಣ್ಣೆ), ಪ್ಯಾರಾಫಿನ್, ಸೀಮೆಎಣ್ಣೆ, ಪೆಟ್ರೋಲ್ ಮೊದಲಾದವು ಲಭಿಸುತ್ತವೆ. ನಾಗರಿಕತೆಯ ತೇರು ಚಾಲೂ ಆಗಲು, ತೇರಿನ ಗಾಲಿಗಳು ನಯವಾಗಿ ತಿರುಗಲು, ತೇರು ಸಾಗಬೇಕಾದ ಹಾದಿ ಸುಗಮ್ಯವಾಗಿರಲು, ನಾಗರಿಕತೆ ಬೆಳಕು ಬೀರಲು, ಮಾತು ಆಡಲು, ಇತ್ಯಾದಿ, ಪೆಟ್ರೋಲಿಯಮ್ಮಿನ ವಿವಿಧ ಉತ್ಪನ್ನಗಳು ಅವಶ್ಯಕ. ಸಮಗ್ರವಾಗಿ ಹೇಳುವುದಾದರೆ ಆಧುನಿಕ ಪ್ರಪಂಚ ತೀವ್ರ ಶಕ್ತ್ಯಾಧಾರಿತ ಜೀವನವನ್ನು ನಡೆಸುತ್ತಿದೆ. ಈ ಶಕ್ತಿಯನ್ನು ಬಹು ಹಂತಗಳಲ್ಲಿ ಬಹು ರೂಪಗಳಲ್ಲಿ ಒದಗಿಸುವ ಆಕರ ಪೆಟ್ರೋಲಿಯಮ್. ಪ್ರಪಂಚದ ಒಟ್ಟು ಉತ್ಪಾದಿತ ಶಕ್ತಿಯಲ್ಲಿ ಅರ್ಧದಷ್ಟು ಶಕ್ತಿ ಪೆಟ್ರೋಲಿಯಮ್ಮಿನಿಂದಲೇ ಪೂರೈಕೆ ಆಗುತ್ತದೆ. ಎಂದ ಬಳಿಕ ಇದರ ಪ್ರಾಮುಖ್ಯ ಉಪಯುಕ್ತತೆ ಅನಿವಾರ್ಯತೆ ಎಷ್ಟು ಎಂಬವು ಮನಗತವಾಗದಿರವು.
  • 1. ಇತಿಹಾಸ
  • 2. ಪೆಟ್ರೋಲಿಯಮ್ಮಿನ ಮೂಲ
  • 3. ಪೆಟ್ರೋಲಿಯಮ್ ಸಂಗ್ರಹಣೆ
  • 4. ಪೆಟ್ರೋಲಿಯಮ್ಮಿನ ಘಟನೆ ಹಾಗೂ ಗುಣಧರ್ಮ
  • 5. ಪೆಟ್ರೋಲಿಯಮ್ಮಿನ ಅಸ್ತಿತ್ವ
  • 6. ಪೆಟ್ರೋಲಿಯಮ್ ಉದ್ಧರಣೆ
  • 7. ಪೆಟ್ರೋಲಿಯಮ್ ಸಂಸ್ಕರಣೆ
  • 8. ಪೆಟ್ರೋಲಿಯಮ್ ಉತ್ಪನ್ನಗಳು

ಇತಿಹಾಸ

ಬದಲಾಯಿಸಿ

ಪೆಟ್ರೋಲಿಯಮ್ ಹಾಗೂ ಪೆಟ್ರೋಲಿಯಮ್ ಉತ್ಪನ್ನಗಳನ್ನು ಮಾನವ ಪ್ರಾಚೀನ ಕಾಲದಿಂದಲೂ ಉಪಯೋಗಿಸುತ್ತ ಬಂದಿದ್ದಾನೆ ಎಂಬುದು ಗತಸಂಸ್ಕøತಿಗಳ ಅಧ್ಯಯನದಿಂದ ತಿಳಿಯುತ್ತದೆ. ಕ್ರಿಸ್ತ. ಪೂರ್ವ. 380 ವರ್ಷಗಳಷ್ಟು ಹಿಂದೆಯೇ ಯೂಫ್ರೆಟಿಸ್ ಕೊಳ್ಳದಲ್ಲಿ ಬಾಳಿದ್ದ ಸುಮೇರಿಯನ್ನರು, ಅಲ್ಲಿ ನೈಸರ್ಗಿಕ ಕಲ್ಲು ಮತ್ತು ಕಟ್ಟಿಗೆಗಳ ಅಭಾವವಿದ್ದುದರಿಂದ, ಹಡಗುಗಳಲ್ಲಿ ಹಲಗೆ ಸಂದುಗಳನ್ನು ಜಲಬಂಧಗೊಳಿಸಲು ಡಾಂಬರಿನಿಂದ ಗಿಟ್ಟ ಹಾಕುತ್ತಿದ್ದರೆಂದು ತಿಳಿದುಬಂದಿದೆ. ಅಷ್ಟೇ ಅಲ್ಲ ರಸ್ತೆಗೆ ಹಾಸಲು ಕೂಡ ಅವರು ಡಾಂಬರನ್ನು ಬಳಸುತ್ತಿದ್ದರು. ಪ್ರಾಚೀನ ಗ್ರೀಕರು ಮಮ್ಮಿಗಳಿಗೆ ಡಾಂಬರಿನ ಲೇಪ ಕೊಡುತ್ತಿದ್ದರಂತೆ. ಹಳೆ ಒಡಂಬಡಿಕೆಯ ಪ್ರಕಾರ ಮೋಸೆಸನ ತಾಯಿ ಆತನನ್ನು ತೊಟ್ಟಿಲಲ್ಲಿ ಮಲಗಿಸಿ ನೈಲ್ ನದಿಯ ಮಡಿಲಲ್ಲಿ ತೇಲಿಬಿಟ್ಟಳಂತೆ; ಆ ತೊಟ್ಟಿಲಿನ ಒಳಕ್ಕೆ ನೀರು ಜಿನುಗದಂತೆ, ತಡೆಗಟ್ಟಲು ಡಾಂಬರನ್ನು ಹಚ್ಚಲಾಗಿತ್ತಂತೆ. ನೆಬುಚಾಂದ್ನ ಅರಸ ಬ್ಯಾಬಿಲೋನ್ ನಗರದ ಬೀದಿಗಳನ್ನೂ ಕಟ್ಟಡಗಳನ್ನೂ ರಚಿಸಲು ಡಾಂಬರನ್ನು ಉಪಯೋಗಿಸುತ್ತಿದ್ದ. ಆತ ನಿರ್ಮಿಸಿದ ಗುಡಿ ಈಗಲೂ ಸಂಬದ್ಧವಾಗಿ ಉಳಿದಿದೆ. ಅದರ ನೆಲಕ್ಕೆ ಹಾಸಿರುವ ಕಲ್ಲಿನ ಚಪ್ಪಡಿಗಳು ಡಾಂಬರಿನ ಸಂಧಿಲೇಪದಿಂದ ಬಂಧಿತವಾಗಿರುವುದನ್ನು ನೋಡಬಹುದು. ಇರಾಕಿನ ಉರ್ ಮತ್ತು ಇರಾನಿನ ಸುಸಾದಲ್ಲಿ ಭೂಶೋಧನೆ ಮಾಡಿದಾಗ ಆ ಪ್ರದೇಶಗಳಲ್ಲಿ ಬಿಟುಮೆನನ್ನು ಮರಳು ಮತ್ತು ಎಳೆಯಂಥ ಪದಾರ್ಥದೊಂದಿಗೆ ಬೆರೆಸಿ ವ್ಯಾಪಕ ನೀರಾವರಿ ಯೋಜನೆಗಳಲ್ಲಿ - ಅಂದರೆ ಅಣೆಕಟ್ಟೆ ಕಟ್ಟುವುದು, ಕಾಲುವೆ ತೋಡುವುದು, ಕೆರೆ ಕೊಳಗಳ ಬದಿಗಳನ್ನು ಗಟ್ಟಿ ಮಾಡುವುದು ಇತ್ಯಾದಿ-ಗಾರೆಯಂತೆ ಬಳಸುತ್ತಿದ್ದುದು ಕಂಡುಬಂದಿದೆ. ಪೆಟ್ರೋಲಿಯಮ್ಮಿನ ಉತ್ಪನ್ನಗಳನ್ನು ಆ ದಿನಗಳಂದು ಯೂಪ್ರೆಟಿಸ್ ನದಿ ದಂಡೆ ಪ್ರದೇಶಗಳಾದ ಹಿಟ್, ಮೆಸಪೋಟೇಮಿಯ ಮತ್ತು ಆಸುಪಾಸುಗಳಲ್ಲಿ ನೆಲದಿಂದ ಒಸರುತ್ತಿದ್ದ ಎಣ್ಣೆಯಂಥ ವಸ್ತುವಿನಿಂದ ಪಡೆಯುತ್ತಿದ್ದರು. ಇಂದು ಡೆಡ್ ಸೀ (ಮೃತ ಸಮುದ್ರ) ಎಂಬ ಹೆಸರಿರುವ ಕಡಲಿನ ಅಂದಿನ ಹೆಸರು ಅಸ್ಫಾಲ್ಟಿಕ್ ಸೀ (ಡಾಂಬರ ಕಡಲು). ಅದರ ತಳದಲ್ಲಿ ಸ್ರವಿಸುತ್ತಿದ್ದ ಪೆಟ್ರೋಲಿಯಮ್ ಉತ್ಪನ್ನ ಮುದ್ದೆಯಾಕಾರದಲ್ಲಿ ತೇಲಿಬಂದು ದಂಡೆಯಲ್ಲಿ ಒತ್ತಿ ಸೇರಿಕೊಳ್ಳುತ್ತಿತ್ತು ಎಂದೇ ಆ ಕಡಲಿಗೆ ಅಂದು ಆ ಹೆಸರು.

ಚೀನ ಮತ್ತು ಬರ್ಮ ದೇಶಗಳಲ್ಲಿ ಕ್ರಿ.ಪೂ. 200 ವರ್ಷಗಳಷ್ಟು ಹಿಂದೆಯೇ ಉಪ್ಪು ನೀರಿನ ಬಾವಿಗಳನ್ನು ಅಗೆದು ಪೆಟ್ರೋಲಿಯಮ್ ಎಣ್ಣೆ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುತ್ತಿದ್ದರು. ಇಷ್ಟಾದರೂ ಪೆಟ್ರೋಲಿಯಮ್ ಮತ್ತು ಅದರ ಉತ್ಪನ್ನಗಳ ವ್ಯಾಪಕ ಉಪಯೋಗವನ್ನು ದೊರಕಿಸಿಕೊಳ್ಳಲು ಮಾನವ ಪ್ರಾರಂಭಿಸಿದ್ದು ಕೇವಲ ನೂರೈವತ್ತು ವರ್ಷಗಳಿಂದ ಈಚಿಗೆ ಮಾತ್ರ. ಮೊದಮೊದಲು ಅಶುದ್ಧ ಪೆಟ್ರೋಲಿಯಮ್ ಎಣ್ಣೆಯನ್ನು ಅಂಶಿಕ ಬಾಷ್ಟೀಭವನ ಮಾಡಿ ದೀಪ ಉರಿಸಲು ಬೇಕಾಗುವ ಸೀಮೆಎಣ್ಣೆ ಮತ್ತು ಗಚ್ಚೆಣ್ಣೆಯನ್ನು ಉತ್ಪಾದಿಸಲು ಪ್ರಾರಂಭವಾದ ಈ ಉದ್ಯಮ ಇಂದು ಆಗಾಧವಾಗಿ ಬೆಳೆದು ದೈತ್ಯ ಮೊತ್ತದಲ್ಲಿ ಹಣವನ್ನು ಪ್ರವರ್ತಿಸಬಲ್ಲ ಕಂಪನಿಗಳಾಗಲಿ ರಾಷ್ಟ್ರಗಳಾಗಲಿ ಮಾತ್ರ ಕೈಗೊಳ್ಳಬಲ್ಲ ಭಾರೀ ಉದ್ಯಮ ಆಗಿದೆ.

ಪೆಟ್ರೋಲಿಯಮ್ಮಿನ ಮೂಲ

ಬದಲಾಯಿಸಿ
  • ಪೆಟ್ರೋಲಿಯಮ್ಮಿನ ಮೂಲವನ್ನು ಕುರಿತಂತೆ ವಿಜ್ಞಾನಿಗಳು ಆಳವಾದ ಸಂಶೋಧನೆ ನಡೆಸಿರುತ್ತಾರೆ. ಆದಾಗ್ಯೂ ಅದು ಮೂಲತಃ ಎಲ್ಲಿಂದ ಉತ್ಪತ್ತಿಯಾಯಿತು ಎಂಬ ಪ್ರಶ್ನೆಗೆ ಖಚಿತ ಉತ್ತರ ದೊರೆತಿಲ್ಲ. ಸ್ವತಃ ವಿಜ್ಞಾನಿಗಳಲ್ಲೇ ಭಿನ್ನಾಭಿಪ್ರಾಯ ಇದೆ. ಮುಖ್ಯವಾಗಿ ಎರಡು ವಾದಗಳು ಪ್ರಚಲಿತವಾಗಿವೆ: ಮೊದಲನೆಯದು ಅಕಾರ್ಬನಿಕ ವಾದ, ಎರಡನೆಯದು ಕಾರ್ಬನಿಕ ವಾದ. ಅಕಾರ್ಬನಿಕ ವಾದದ ಪ್ರಕಾರ ಪೆಟ್ರೋಲಿಯಮ್ ಕೇವಲ ಅಕಾರ್ಬನಿಕ ವಸ್ತುಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾದ ವಸ್ತು. ಯಾವ ರೂಪದಲ್ಲಿಯೂ ಜೀವಿಗಳ ನೆರವು ಈ ಕ್ರಿಯೆಗೆ ಬೇಕಾಗಿಲ್ಲ. ಉದಾಹರಣೆಗೆ ಭೂಮಿಯಲ್ಲಿ ಸ್ವತಂತ್ರವಾಗಿ ದೊರೆಯುವ ಕಬ್ಬಿಣ ಮತ್ತು ಕ್ಯಾಲ್ಸಿಯಮ್ಮಿನಂಥ ಕ್ಷಾರೀಯ ಭಸ್ಮ ಲೋಹಗಳು ಕಾರ್ಬನ್ ಡೈಆಕ್ಸೈಡಿನೊಂದಿಗೆ ಸಂಯೋಗವಾಗಿ ಲೋಹಗಳ ಕಾರ್ಬೈಡುಗಳನ್ನು ಕೊಡುತ್ತವೆ. ಇವು ನೀರಿನೊಂದಿಗೆ ವರ್ತಿಸಿ ಅಸಿಟಿಲೀನ್ ಅನಿಲವನ್ನು ಹೊಮ್ಮಿಸುತ್ತವೆ. ಇದು ಮುಂದೆ ಪಾಲಿಮರೀಕರಣಗೊಂಡು (ಪಾಲಿಮರೈಸೇಶನ್) ಪೆಟ್ರೋಲಿಯಮ್ಮಿನ ಘಟಕಗಳಾದ ಹೈಡ್ರೋಕಾರ್ಬನ್ನುಗಳು ಉಂಟಾಗುತ್ತವೆ. 1868ರಲ್ಲಿ ಬೆರ್ತೋಲೆಟ್ ಎಂಬಾತ ಮಂಡಿಸಿದ ವಾದವಿದು. ಬೇರೆ ವಾದಗಳೂ ಇವೆ : ಮೋಯಿಸನ್ನನ ವಾದ, ಜ್ವಾಲಾಮುಖಿ ವಾದ, ಕಾಸ್ಮಿಕ್ ವಾದ ಎಂಬುವು ಮುಖ್ಯ. ಅಕಾರ್ಬನಿಕ ವಾದಗಳು. ಆದರೆ ಈ ಪ್ರತಿಯೊಂದು ಅಕಾರ್ಬನಿಕ ವಾದದ ವಿರುದ್ಧವೂ ಆಕ್ಷೇಪಣೆಗಳ ಪಟ್ಟಿಯನ್ನೇ ಮಾಡಬಹುದು. ಅವುಗಳ ಪೈಕಿ ಅತಿ ಪ್ರಬಲ ಆಕ್ಷೇಪಣೆ ಎಂದರೆ ಪೆಟ್ರೋಲಿಯಮ್ ಘಟಕಗಳಲ್ಲಿ ಕೆಲವು ಸಂಯುಕ್ತಗಳಿಗೆ ದ್ಯುತಿಪಟುತ್ವವಿರುವುದು. ಇದರಿಂದಾಗಿ ಪೆಟ್ರೋಲಿಯಮ್ ಮೂಲದಲ್ಲಿ ಜೈವಿಕ ವಸ್ತುಗಳ ಪಾತ್ರ ಅನಿವಾರ್ಯವಾಗುತ್ತದೆ. ಆದ್ದರಿಂದ ಪೆಟ್ರೋಲಿಯಮ್ ಉತ್ಪತ್ತಿಯ ಬಗ್ಗೆ ಅಕಾರ್ಬನಿಕ ವಾದವನ್ನು ತಿರಸ್ಕರಿಸಿ ಕಾರ್ಬನಿಕ ವಾದವನ್ನು ಈಚೀಚೆಗೆ ಹೆಚ್ಚು ಹೆಚ್ಚು ವಿಜ್ಞಾನಿಗಳು ಪುರಸ್ಕರಿಸುತ್ತಿದ್ದಾರೆ.
  • ಕಾರ್ಬನಿಕ ವಾದದ ಪ್ರಕಾರ ಪೆಟ್ರೋಲಿಯಮ್ಮಿನ ಉತ್ಪತ್ತಿ ಪ್ರಾಣಿ ಅಥವಾ ಸಸ್ಯ ಅಥವಾ ಎರಡನ್ನೂ ಒಳಗೊಂಡ ಮೂಲಗಳಿಂದ ಆಗಿದೆ. ಸುಮಾರು 60 ಕೋಟಿ ವರ್ಷಗಳಷ್ಟು ಹಿಂದೆ ತೆಟ್ಟೆ ಸಮುದ್ರದಲ್ಲಿ ಮತ್ತು ಸಮುದ್ರದಿಂದ ಬೇರ್ಪಟ್ಟ ಉಪ್ಪುನೀರಿನ ಹರವುಗಳಲ್ಲಿ ಅವುಗಳ ದಂಡೆಯಿಂದ ಅನತಿದೂರದಲ್ಲಿ ಇದ್ದ ಅಸಂಖ್ಯಾತ ಫೊರಾಮಿನಿಫೆರದಂಥ ಸೂಕ್ಷ್ಮಜೀವಿಗಳು ಮತ್ತು ಡೈಆ್ಯಟಮ್ ಹಾಗೂ ನೀಲಿಹಸಿರು ಆಲ್ಗೇಯಂಥ ಸೂಕ್ಷ್ಮದರ್ಶಕೀಯ ಏಕಾಣು ಸಸ್ಯಗಳು, ಅಲ್ಲದೇ ಸಮುದ್ರ ಮತ್ತು ಸರೋವರಗಳಿಗೆ ನದಿಗಳು ತಂದು ಹಾಕಿದ ಭೂಮಿಯ ಮೇಲಿನ ಸಸ್ಯ ಪದಾರ್ಥಗಳು ಒಟ್ಟುಗೂಡಿ ಪೆಟ್ರೋಲಿಯಮ್ಮಿನ ಮೂಲವಸ್ತು ರೂಪಗೊಂಡಿರಬಹುದು. ಈ ಸೂಕ್ಷ್ಮ ಜೀವಿಗಳು ಸತ್ತ ಬಳಿಕ ಅವುಗಳ ಒಡಲುಗಳು ಕಡಲ ತಳದಲ್ಲಿ ಕೆಸರು ಮಣ್ಣಿನಲ್ಲಿ ಹರಡಿಕೊಂಡು ಬಿದ್ದುವು. ಅಲ್ಲಿ ಅವು ಸಂಪೂರ್ಣವಾಗಿ ಕೊಳೆತು ನಾಶವಾಗಬಹುದಿತ್ತು. ಆದರೆ, ಹಾಗಾಗುವ ಮೊದಲೇ ನದಿಯ ನೀರಿನ ಜೊತೆಗೆ ಹರಿದು ಬಂದ ನುಣ್ಣನೆಯ ಮಣ್ಣು ಮತ್ತು ರೇವೆ ಮಣ್ಣಿನಲ್ಲಿ ಅವು ಮುಚ್ಚಿ ಹೋದುವು. ಹೀಗೆ ಆಕ್ಸಿಜನ್ ರಹಿತ ವಾತಾವರಣದಲ್ಲಿ ಕಾರ್ಬನಿಕ ವಸ್ತು ಹೂಳಿ ಹೋದ ತರುವಾಯ ಹದ ಒತ್ತಡ ಮತ್ತು ಕಾವಿನಲ್ಲಿ ಸಾವಕಾಶವಾಗಿ ಜೀವರಾಸಾಯನಿಕ ಹಾಗೂ ರಾಸಾಯನಿಕ ಕ್ರಿಯೆ ಪ್ರಾರಂಭವಾಗಿ ಕಾರ್ಬನಿಕ ವಸ್ತು ಸಂಕೀರ್ಣ ರಚನೆಯ ಪೆಟ್ರೋಲಿಯಮ್ ಘಟಕಗಳಾಗಿ ರೂಪಾಂತರಗೊಂಡಿತು. ವಾಯುವಿನ ಅಭಾವದಲ್ಲಿ ಬದುಕುವ ಅಣುಜೀವಿಗಳು (ಅವಾಯುವಿಕಗಳು) ಜೀವರಸಾಯನಿಕ ಕ್ರಿಯೆಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸುತ್ತವೆ ಎಂದು ನಂಬಲಾಗಿದೆ. ಗಸಿಯಲ್ಲಿರುವ ಸಜಲ ಅಲ್ಯೂಮೀನಿಯಮ್ ಆಕ್ಸೈಡ್, ಅಲ್ಯೂಮೀನಿಯಮ್ ಸಿಲಿಕೇಟ್ ಮತ್ತು ಕಬ್ಬಿಣದ ಸಂಯುಕ್ತಗಳು ರಾಸಾಯನಿಕ ಕ್ರಿಯೆಯಲ್ಲಿ ಉತ್ಕರ್ಷಕಗಳಾಗಿ ಭಾಗವಹಿಸುತ್ತವೆ ಎಂದೂ ನಂಬಲಾಗಿದೆ.
  • ಕಾರ್ಬನಿಕ ವಾದವನ್ನು ಪುಷ್ಟೀಕರಿಸಲು ಸಾಕಷ್ಟು ಪುರಾವೆಗಳಿವೆ. ಅವುಗಳ ಪೈಕಿ ಮುಖ್ಯವಾದವು ಇವು:
  • (i) ಪೆಟ್ರೋಲಿಯಮ್ಮಿನ ಘಟನೆ ಹಾಗೂ ಅದರ ಘಟಕಗಳ ಸ್ವರೂಪ ಲಕ್ಷಣ ಮತ್ತು ಜೀವಿಗಳಲ್ಲಿರುವ

ಸಂಯುಕ್ತಗಳ ಧಾತುಗಳ ಮೂಲ ರಚನೆ-ಇವುಗಳಲ್ಲಿರುವ ಸಾಮ್ಯವನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ;

ಕಾರ್ಬನಿಕ ವಸ್ತು (ಸಂಖ್ಯೆಗಳು ಶೇಕಡವಾರು) ಪೆಟ್ರೋಲಿಯಮ್
ಇಂಗಾಲ 52-71 83-87
ಹೈಡ್ರೋಜನ್ 7-10 11-15
ಆಕ್ಸಿಜನ್ 15-35 < 4
ನೈಟ್ರೋಜನ್ 4-6 < 4
ಗಂಧಕ ಅತಿ ಕಡಿಮೆ < 4
  • ಕಾರ್ಬನಿಕ ವಸ್ತು ರೂಪಾಂತರ ಹೊಂದಿದಾಗ ಆಕ್ಸಿಜನ್ ಮತ್ತು ನೈಟ್ರೋಜನ್ ಪ್ರಮಾಣದಲ್ಲಿ ಆಗುವ ಇಳಿತ ಇಂಗಾಲ ಮತ್ತು ಹೈಡ್ರೋಜನ್ ಪ್ರಮಾಣದಲ್ಲಿ ಆಗುವ ಏರಿಕೆಯಲ್ಲಿ ಪ್ರತಿಬಿಂಬಿಸಲ್ಪಡುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು.
  • (ii) ಪೆಟ್ರೋಲಿಯಮ್ಮಿನ ಅನೇಕ ಅಮುಖ್ಯ ಘಟಕಗಳಲ್ಲಿ ಗಂಧಕ, ರಂಜಕ, ನಿಕೆಲ್, ವೆನೇಡಿಯಮ್ ಮತ್ತು ಇತರ ಧಾತುಗಳಿರುವ ಸಂಯುಕ್ತಗಳುಂಟು. ಇವೇ ಧಾತುಗಳು ಜೀವಿಗಳಲ್ಲಿ ಮತ್ತು ಗಸಿ ಹಾಗೂ ಗಸಿಗಲ್ಲುಗಳಲ್ಲಿ ಹುಗಿದ ಕಾರ್ಬನಿಕ ವಸ್ತುಗಳಲ್ಲಿ ಅಲ್ಪ ಮೊತ್ತದಲ್ಲಿಯಾದರೂ ಇರುವುದು ಈ ವಾದಕ್ಕಿರುವ ಒಂದು ಮಹತ್ತ್ವದ ಪುರಾವೆ. ಸಸ್ಯ ಮತ್ತು ಪ್ರಾಣಿಗಳಲ್ಲಿ ಇರುವ ಪತ್ರಹರಿತ್ತು (ಕ್ಲೋರೋಫಿಲ್) ಮತ್ತು ಹೀಮ್‍ನಂಥ ಪೋರ್‍ಫಿರೀನುಗಳೂ ಈ ಧಾತುಗಳಿಗೆ ಮೂಲವಾಗಿರಬಹುದು.
  • (iii) ಪೆಟ್ರೋಲಿಯಮ್ಮಿನಲ್ಲಿರುವ 13ಅ/12ಅ ಸಮಸ್ಥಾನೀ ಪ್ರಮಾಣ ಮತ್ತು ಪೆಟ್ರೋಲಿಯಮ್ಮಿನಲ್ಲಿರುವ ಕಾರ್ಬನಿಕ ಸಂಯುಕ್ತಗಳಿಗೂ ಪೆಟ್ರೋಲಿಯಮ್ ಹಿಡಿದುಕೊಂಡಿರುವ ಮೃದುಗಲ್ಲಿನಲ್ಲಿರುವ ಕಾರ್ಬನಿಕ ಸಂಯುಕ್ತಗಳಿಗೂ ಇರುವ ಪ್ರಮಾಣ ಒಂದೇ ಆಗಿದೆ.
  • ಕಾರ್ಬನಿಕ ವಸ್ತುವನ್ನು ಪ್ರೋಟೀನುಗಳು, ಶರ್ಕರಗಳು, ನಾರುಗಳು, ವರ್ಣದ್ರವ್ಯಗಳು ಮತ್ತು ಎಣ್ಣೆಗಳು ಎಂದು ವರ್ಗೀಕರಿಸಬಹುದು. ಸಸ್ಯಗಳಲ್ಲಿರುವ ನಾರುಗಳನ್ನು ಬಿಟ್ಟು ಉಳಿದವು ಸಸ್ಯ ಹಾಗೂ ಪ್ರಾಣಿಗಳೆರಡರಲ್ಲೂ ಇವೆ. ಆದ್ದರಿಂದ ಪೆಟ್ರೋಲಿಯಮ್ಮಿನ ಉತ್ಪತ್ತಿ ಈ ಐದೂ ವರ್ಗಗಳಿಗೆ ಸಂಬಂಧಿಸಿದ ಸಂಯುಕ್ತಗಳಿಂದಲೇ ಆಗುತ್ತದೆ. ಇವುಗಳ ಪೈಕಿ ಅತಿ ಮುಖ್ಯವಾದದ್ದು ಎಣ್ಣೆಗಳು, ನಾರುಗಳೂ ಸ್ವಲ್ಪ ಮಟ್ಟಿಗೆ ಮೂಲವಾಗಿರಬಹುದು ಎಂಬ ನಂಬಿಕೆ ಉಂಟು. ಪೆಟ್ರೋಲಿಯಮ್ಮಿನ ಉತ್ಪತ್ತಿಗೆ ಶರ್ಕರಗಳ ಕೊಡುಗೆ ಹೆಚ್ಚಲ್ಲ. ಪ್ರೋಟೀನುಗಳ ಕೊಡುಗೆ ಇನ್ನೂ ಕಡಿಮೆ. ವರ್ಣದ್ರವ್ಯಗಳು ಅಮುಖ್ಯವಾದ ಆದರೆ ಗುರುತಿಸಬಹುದಾದಂಥ ಪೆಟ್ರೋಲಿಯಮ್ ಘಟಕಗಳಿಗೆ ಮೂಲಗಳು ಎಂದು ಕಂಡುಬಂದಿವೆ.

ಪೆಟ್ರೋಲಿಯಮ್ ಸಂಗ್ರಹಣೆ

ಬದಲಾಯಿಸಿ
  • ಕಾರ್ಬನಿಕ ಮೂಲದಿಂದ ಪೆಟ್ರೋಲಿಯಮ್ ಉತ್ಪತ್ತಿ ಆಗುವುದು ಎಂಬುದನ್ನು ನಂಬಲಾಗುತ್ತಿದ್ದರೂ ಸಸ್ಯಗಳಾಗಲಿ ಪ್ರಾಣಿಗಳಾಗಲಿ ತಮ್ಮ ಜೀವಿತ ಕಾಲದಲ್ಲಿ ಅದನ್ನು ಉತ್ಟಾದಿಸುವುದಿಲ್ಲ ಯಾ ಸಂಶ್ಲೇಷಿಸುವುದಿಲ್ಲ. ಪೆಟ್ರೋಲಿಯಮ್ಮಿನ ಉತ್ಪತ್ತಿ ಆಗಬೇಕಾದರೆ ಮೊದಲು ಕಾರ್ಬನಿಕ ವಸ್ತುವಿನ ಶೇಖರಣೆ ಆಗಿ ಅನಂತರ ಎಷ್ಟೋ ಶತಮಾನಗಳ ಕಾಲ ನಡೆಯುವ ಭೌತ ಹಾಗೂ ರಾಸಾಯನಿಕ ಬದಲಾವಣೆಗಳ ಮೂಲಕ ಅದರ ವಿಕಾಸ ಆಗಬೇಕಾಗುತ್ತದೆ. ಪೆಟ್ರೋಲಿಯಮ್ ಈಗ ನಾವು ನೋಡುವ ರೂಪದಲ್ಲಿ ಮೊದಲು ಇರಲಿಲ್ಲ. ಸಮುದ್ರದ ಪುಟ್ಟ ಜೀವಿಗಳ ಮೃತ ದೇಹದಿಂದ ಉತ್ಪನ್ನವಾದ ಪೆಟ್ರೋಲಿಯಮ್ ಆ ದೇಹಗಳ ಜೊತೆಗೆ ಸೂಕ್ಷ್ಮ ಹನಿಗಳ ರೂಪದಲ್ಲಿ ಮೊದಲು ಸಮುದ್ರ ತಳದ ಕೆಸರಿನಲ್ಲಿ ಸಂಗ್ರಹವಾಯಿತು. ಅನಂತರ ಅದರ ಮೇಲಿನ ನೀರಿನ ಭಾಗದಿಂದಲೂ ಒಂದೇ ಸಮನೆ ನದಿಗಳಿಂದ ಬಂದು ಬೀಳುತ್ತಿದ್ದ ಹೊಸ ಪದಾರ್ಥಗಳ ಭಾರದಿಂದಲೂ ಈ ಕೆಸರು ಒತ್ತಲ್ಪಟ್ಟು ಹಿಚುಕಿದಂತಾಗಿ ಮೃದುಗಲ್ಲಿನಂತಾಯಿತು. ಪೆಟ್ರೋಲಿಯಮ್ ಉಳ್ಳ ಈ ಮೃದುಗಲ್ಲಿನ ಮೇಲೆ ಅನಂತರ ಮರಳು ಹಾಗೂ ರೇವೆ ಮಣ್ಣು ಬಂದು ಬಿದ್ದು ಅನೇಕ ಮೀಟರುಗಳ ಸ್ತರಗಳಾಗಿ ಕೊನೆಗೆ ಇವು ಬಿರುಸುಗೊಂಡು ಮರಳುಗಲ್ಲಾಗಿ ರೂಪಾಂತರ ಹೊಂದಿದುವು. ಮೃದುಗಲ್ಲಿನ ಮೇಲೆ ಭಾರ ಹೆಚ್ಚಾದಂತೆ ಅದು ಅದುಮಿದಂತಾಗಿ ಅದರಲ್ಲಿ ಹುದುಗಿಕೊಂಡಿದ್ದ ಪೆಟ್ರೋಲಿಯಮ್ ಹೊರಬಿದ್ದು ಪಕ್ಕದಲ್ಲಿ ಮತ್ತು ಮೇಲ್ಗಡೆ ಇರುವ ಮರಳುಗಲ್ಲಿನ ರಂಧ್ರ ಹಾಗೂ ಬಿರುಕುಗಳನ್ನು ಹೊಕ್ಕು ಕಡಿಮೆ ಒತ್ತಡ ಇರುವಲ್ಲಿ ಸೇರಿಕೊಂಡಿತು. ಈ ಚಲನೆ ಬಲು ನಿಧಾನವಾಗಿದ್ದು ಇದೇ ಅವಧಿಯಲ್ಲಿ ಪೆಟ್ರೋಲಿಯಮ್ಮಿನ ಸೂಕ್ಷ್ಮ ಹನಿಗಳು ಒಂದಕ್ಕೊಂದು ಕೂಡಿಕೊಂಡು ದೊಡ್ಡ ದೊಡ್ಡ ಹನಿಗಳಾಗಿ ಸುತ್ತಲಿದ್ದ ಉಪ್ಪುನೀರಿನಿಂದ ಬೇರ್ಪಟ್ಟು ಅದರ ಮೇಲೆ ಪೆಟ್ರೋಲಿಯಮ್ಮಿನ ಸ್ತರ ಶೇಖರವಾಯಿತು. ಪೆಟ್ರೋಲಿಯಮ್ಮಿನ ಈ ಚಲನೆಗೆ ತಡೆ ಬರದೇ ಇದ್ದಿದ್ದರೆ ಅದು ಮೇಲಕ್ಕೆ ಚಲಿಸುತ್ತ ಕೊನೆಗೆ ವಿಶಾಲವಾದ ಕ್ಷೇತ್ರದಲ್ಲಿ ಹರಡಿ ರಾಷ್ಟ್ರೀಭವನ ಹೊಂದಿ ವಾತಾವರಣದಲ್ಲಿ ಬೆರೆತು ಹೋಗಬಹುದಾಗಿತ್ತು. ಕೆಲವು ವೇಳೆ ಅದು ಹೀಗೆ ದೊಡ್ಡ ಗಾತ್ರದಲ್ಲಿ ಪೆಟ್ರೋಲಿಯಮ್ಮಿನ ನಾಶವಾದದ್ದೂ ಉಂಟು. ಆದರೆ ಭೂಮಿಯ ವಿಶಿಷ್ಟ ರಚನೆಯಿಂದಾಗಿ ಈ ರೀತಿ ಆಗದೇ ಪೆಟ್ರೋಲಿಯಮ್ ಬಹಳ ದೊಡ್ಡ ಗಾತ್ರದಲ್ಲಿ ಸಣ್ಣ ಸಣ್ಣ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿ ಭೂಮಿಯ ಒಳಗೆ ಪೆಟ್ರೋಲಿಯಮ್ಮಿನ ಕೊಳಗಳ ಹಾಗೂ ಕೆರೆಗಳ ನಿರ್ಮಾಣವಾಗಿದೆ. ಇದು ಹೇಗೆ ಆಯಿತು ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.
  • ಪೆಟ್ರೋಲಿಯಮ್ ಕೊಳ ಅಥವಾ ಕೆರೆ ಅಂದರೆ ಅದು ನಿಜವಾದ ಅರ್ಥದಲ್ಲಿ ಕೆರೆ ಕೊಳವೆಂದಲ್ಲ-ಸ್ಪಂಜಿನಲ್ಲಿ ನೀರಿದ್ದಂತೆ. ಯುಕ್ತವಾದ ಶಿಲಾ ರಂಧ್ರಗಳಲ್ಲಿ ಮತ್ತು ಬಿರುಕುಗಳಲ್ಲಿ ಪೆಟ್ರೋಲಿಯಮ್ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ. ಈ ರೀತಿ ದ್ರವಗಳನ್ನು ಹಿಡಿದಿಟ್ಟುಕೊಳ್ಳಬಲ್ಲಂಥವು ಪಾರಶೀಲ ಶಿಲೆಗಳು. ಇನ್ನೊಂದು ತರಹದ ಶಿಲೆಗಳೂ ಉಂಟು. ಅವುಗಳ ಮೂಲಕ ದ್ರವವಾಗಲಿ ಅನಿಲವಾಗಲಿ ಹರಿಯಲಾರವು.
  • ಇಂಥವು ಪಾರಶೂನ್ಯ ಅಥವಾ ನಿಷ್ಟಾರಶೀಲ ಶಿಲೆಗಳು. ಪಾರಶೂನ್ಯ ಶಿಲೆಗಳು ಒಂದು ತರಹ ಕಠಿಣ ಸುಣ್ಣದ ಶಿಲೆಗಳು. ಹೆಚ್ಚಿನ ಒತ್ತಡಕ್ಕೊಳಗಾದ ಉಪ್ಪು ಸಹ ಪಾರಶೂನ್ಯ ಶಿಲೆಯಂತೆ ವರ್ತಿಸುತ್ತದೆ. ಬಹುತೇಕ ಎಲ್ಲ ಪೆಟ್ರೋಲಿಯಮ್ ಕೊಳಗಳಲ್ಲಿ ಪಾರಶೀಲ ಶಿಲೆಯ ನೇರ ಮೇಲೆ ಪಾರಶೂನ್ಯ ಶಿಲೆಯ ಸ್ತರ ಇರುವುದನ್ನು ಭೂಗರ್ಭಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಇದು ಪೆಟ್ರೋಲಿಯಮ್ ಕೊಳಕ್ಕೆ ಮೊಹರಿನಂತೆ ವರ್ತಿಸುತ್ತದೆ. ಎಂದ ಮೇಲೆ ಬಹುಶಃ ಪೆಟ್ರೋಲಿಯಮ್ ತೆಳುವಾದ ಅಗಲವಾದ ಪದರದಂತೆ ಪಾರಶೀಲ ಹಾಗೂ ಪಾರಶೂನ್ಯ ಶಿಲೆಗಳ ಪದರದ ನಡುವೆ ಸಿಕ್ಕಿ ಹಾಕಿಕೊಂಡಿತು. ಇತ್ತ ಅದು ಪಾರಶೂನ್ಯ ಶಿಲೆಯನ್ನು ಭೇದಿಸಿ ಮೇಲೆಯೂ ಹೋಗದಾಯಿತು ಮತ್ತು ಕೆಳಗಿನಿಂದ ಉಪ್ಪು ನೀರು ಒತ್ತುತ್ತಿದ್ದರಿಂದ ಕೆಳಗೂ ಹೋಗದಾಯಿತು. ಇದು ಪೆಟ್ರೋಲಿಯಮ್ ಕೊಳದ ರಚನೆಯ ಮೊದಲ ಘಟ್ಟ.
  • ಪೆಟ್ರೋಲಿಯಮ್ಮಿನ ಸ್ತರಗಳಾಗಲಿ ಪಾರಶೂನ್ಯ ಶಿಲೆಗಳ ಸ್ತರಗಳಾಗಲಿ ಚಿತ್ರದಲ್ಲಿ ತೋರಿಸಿರುವಂತೆ ಚಪ್ಪಟೆಯಾಗಿಯೇ ಉಳಿಯಲಿಲ್ಲ. ಭೂಮಿಯ ದೀರ್ಘ ಇತಿಹಾಸದಲ್ಲಿ ಆಗಾಗ್ಗೆ ಪರ್ವತಗಳ ನಿರ್ಮಾಣ ಕಾಲದಲ್ಲಿ ತೀವ್ರ ಚಲನವಲನಗಳು ಸಂಭವಿಸಿ ಭೂಮಿಯ ಮೇಲ್ಮೈಯನ್ನು ಸಮುದ್ರದ ತಳದಲ್ಲಿದ್ದ ಮರಳುಗಲ್ಲಿನ ಹಾಗೂ ಸುಣ್ಣದ ಶಿಲೆಯ ಸ್ತರಗಳನ್ನೂ ಅಸ್ತವ್ಯಸ್ತಗೊಳಿಸಿದುವು. ಪಕ್ಕದಿಂದ ಹಾಗೂ ಕೆಳಗಿನಿಂದ ಬಂದ ಅಧಿಕ ಒತ್ತಡದ ಕಾರಣದಿಂದಾಗಿ ಈ ಸ್ತರಗಳು ಭಾರೀ ತೆಕ್ಕೆಯಲ್ಲಿ ಮಡಿಕೆಗಳಂತೆ ಎದ್ದುವು. ಕೆಲವು ಸಾರಿ ಸಮುದ್ರ ಮಟ್ಟಕ್ಕಿಂತ ಮೇಲೆನವರೆಗೆ ಎತ್ತಲ್ಪಟ್ಟು ಹೊಸ ಭೂ ಪ್ರದೇಶಗಳ ನಿರ್ಮಾಣವಾಯಿತು. ಈ ಅದ್ಭುತ ಶೋಭೆಯಲ್ಲಿ ಅಗ್ರಶಿಲೆ ಅದರ ಕೆಳಗಿನ ಉಪ್ಪು ನೀರು ಮತ್ತು ಅವುಗಳ ಮಧ್ಯೆ ಸಿಕ್ಕಿಕೊಂಡಿದ್ದ ಪೆಟ್ರೋಲಿಯಮ್ ಈ ಮೂರೂ ಸ್ತರಗಳು ಒಟ್ಟೊಟ್ಟಿಗೆ ಕಮಾನಿನಂತೆ ಡುಬರಿಯಾಗಿಯೊ ಇಲ್ಲವೇ ಹೊಂಡದಂತೆ ತಗ್ಗಾಗಿಯೊ ಮಾರ್ಪಾಡಾದುವು. ಆಗ ಹೊಂಡದ ಪಾಶ್ರ್ವದಿಂದ ಪೆಟ್ರೋಲಿಯಮ್ ಹರಿದು ಶೇಖರಗೊಂಡಿತು. ಪಕ್ಕದಲ್ಲಿ ಡುಬರಿಗಳಿದ್ದಾಗಂತೂ ಇನ್ನೂ ಹೆಚ್ಚಿನ ಪೆಟ್ರೋಲಿಯಮ್ ಸಂಗ್ರಹವಾಯಿತು.
  • ಒಮ್ಮೊಮ್ಮೆ ಅಗ್ರಶಿಲೆ ಒತ್ತಡದ ಭಾರದಿಂದ ಸೀಳಿ ಅಥವಾ ಡುಬರಿಗಳಾಗಿದ್ದ ಪರ್ವತಗಳು ಮಳೆ ಗಾಳಿ ಬಿಸಿಲಿನಿಂದ ಸವೆದು ಹೋದಾಗ ಪೆಟ್ರೋಲಿಯಮ್ ಜಿನಗುಟ್ಟಿ ಬಾಷ್ಪಶೀಲ ಘಟಕಗಳು ಆವಿಯಾಗಿ ಹೋಗಿ ಬಿಟ್ಯುಮೆನ್ ಅಥವಾ ಪಿಚ್ ಉಳಿಯುತ್ತಿದುದಿತ್ತು. ದೊಡ್ಡ ಮೊತ್ತದಲ್ಲಿ ಇದು ಸಂಗ್ರಹವಾದಾಗ ಇದಕ್ಕೆ ಪಿಚ್ ಸರೋವರ ಎಂದೂ ಕರೆಯುವುದುಂಟು. ಭೂಮಿಯ ಅನೇಕ ಭಾಗಗಳಲ್ಲಿ ಈ ತರಹದ ಪಿಚ್ ಸರೋವರಗಳನ್ನು ಇಂದಿಗೂ ಕಾಣಬಹುದು. ಉದಾಹರಣೆಗೆ ವೆನಿಜ್ವೇಲ, ಲೈನಿದಾದಗಳಲ್ಲಿ.
  • ಪೆಟ್ರೋಲಿಯಮ್ಮಿನ ಶೇಖರಣೆ ಇನ್ನೂ ಎರಡು ತೆರನಾಗಿ ಆಗಿದ್ದಿರಬಹುದು ಎಂದು ಕಂಡುಬಂದಿದೆ. ಮೊದಲನೆಯದು ಭೂಮಿಯಲ್ಲಿ ಸ್ತರಭಂಗದಿಂದ, ಎರಡನೆಯದು ಕಲ್ಲುಪ್ಪಿನ ಗುಮ್ಮಟಗಳು ನಿರ್ಮಾಣವಾಗುವುದರಿಂದ, ಪರ್ವತ ನಿರ್ಮಾಣವಾಗುವುದರಿಂದ, ಪರ್ವತ ಚಲನೆ ಅತಿ ತೀವ್ರವಾದಾಗ, ಭೂಮಿಯ ಒಳಗಿನ ಸ್ತರಗಳು ಬರೀ ಮಡಿಕೆಗಳೊಳ್ಳದೇ ಬದಲು ಮುರಿದು ಸ್ತರಗಳ ಪಾತಳಿಗಳಲ್ಲಿ ವ್ಯತ್ಯಾಸವನ್ನು ಉಂಟುಮಾಡಿದುವು. ಕೆಲವು ಸಾರಿ ಈ ವೃತ್ತಾಂತ ಯಾವ ರೀತಿ ಆಯಿತೆಂದರೆ ಮರಳುಗಲ್ಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಪೆಟ್ರೋಲಿಯಮ್ ಸ್ತರದ ಪಕ್ಕಕ್ಕೆ ಪಾರಶೂನ್ಯ ಅಗ್ರಶಿಲೆಯ ಸ್ತರ ಗಟ್ಟಿ ಮೊಹರು ಹಾಕಿದಂತಾಗಿ ಪೆಟ್ರೋಲಿಯಮ್ಮಿನ ಸಂಗ್ರಹಣೆ ಆಯಿತು.
  • ಭೂಮಿಯ ಅನೇಕ ಭಾಗಗಳಲ್ಲಿ ಕಲ್ಲುಪ್ಪಿನ ನಿಧಿಗಳಿವೆ. ಇವುಗಳ ಮೇಲೆ ಬಾಕಿ ಶಿಲೆಗಳ ಒತ್ತಡ ಬೀಳುವುದರಿಂದ ಈ ಕಲ್ಲುಪ್ಪು ಒಂದು ತರಹ ಅರೆ ದ್ರವ ಪದಾರ್ಥವಾಗುತ್ತದೆ. ಇದು ಕೆಳಗಿನಿಂದ ಪೊಳ್ಳು ಇರುವ ಭಾಗದ ಮೂಲಕ ಭೂಮಿಯ ಮೇಲ್ಮಟ್ಟದ ಕಡೆಗೆ ಚಲಿಸುತ್ತ ಚಲಿಸುತ್ತ ಬೃಹದಾಕಾರದ ಗುಮ್ಮಟವನ್ನು ನಿರ್ಮಿಸುತ್ತದೆ. ಈ ರೂಪದಲ್ಲಿರುವ ಉಪ್ಪು ಪಾರಶೂನ್ಯವಾಗಿದ್ದು, ತನ್ನ ಮೇಲಿರುವ ಶಿಲೆಗಳ ಸ್ತರಗಳನ್ನು ಮಾಲಿಸುವುದರಿಂದ ಪೆಟ್ರೋಲಿಯಮ್ಮಿನ ಸಂಗ್ರಹಣೆ ಆಗುತ್ತದೆ.

ಪೆಟ್ರೋಲಿಯಮ್ಮಿನ ಘಟನೆ ಹಾಗೂ ಗುಣಧರ್ಮ

ಬದಲಾಯಿಸಿ
  • ಎಷ್ಟೋ ಶತಮಾನಗಳ ಕಾಲದಷ್ಟು ಹಿಂದೆ ಇದ್ದ ಸಸ್ಯ ಹಾಗೂ ಪ್ರಾಣಿಗಳಿಂದ ಪೆಟ್ರೋಲಿಯಮ್ಮಿನ ಉತ್ಪಾದನೆ ಆಗಿದೆ ಎಂದು ಈಗ ನಂಬಲಾಗಿದೆ. ಈಗಿನ ದಿನಗಳಲ್ಲೂ ಸಸ್ಯಗಳು ಹಾಗೂ ಪ್ರಾಣಿಗಳು ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ವಿವಿಧವಾಗಿ ವಿತರಣೆ ಆಗಿರುವುದನ್ನು ಗಮನಿಸುವಾಗ ಪೆಟ್ರೋಲಿಯಮ್ ಉತ್ಪಾದನೆಗೆ ಮೂಲವಾದ ಸಸ್ಯಗಳ ಹಾಗೂ ಪ್ರಾಣಿಗಳ ಕಾಲದಲ್ಲಿ ಸಹ ಅವುಗಳ ವಿತರಣೆಯಲ್ಲಿ ವ್ಯತ್ಯಾಸವಿದ್ದಿರಲು ಸಾಕು. ಅಂದ ಮೇಲೆ ಈ ಮೂಲಗಳಿಂದ ಹುಟ್ಟಿದ ಉತ್ಪನ್ನಗಳ ಘಟನೆ ಸಹ ಅವುಗಳ ಅಣುರಚನಾ ಸಾಮ್ಯ ಮತ್ತು ಪ್ರಮಾಣಕ್ಕೆ ಸಂಬಂಧಿಸಿದಂತೆ ಸ್ಥಿರವಾಗಿರಲಾರದೆಂದು ನಿರೀಕ್ಷಿಸಬಹುದು. ಅದರಂತೆ ಪೆಟ್ರೋಲಿಯಮ್ಮಿನ ಘಟನೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಿರವಾಗಿಲ್ಲದಿರುವುದು ವಾಸ್ತವವಾಗಿ ಕಂಡುಬಂದಿದೆ. ಇಷ್ಟೇ ಅಲ್ಲ, ಕೆಲವೊಮ್ಮೆ ಒಂದೇ ಪ್ರದೇಶದಲ್ಲಿರುವ ಎರಡು ಕೊಳಗಳಲ್ಲಿಯ ಪೆಟ್ರೋಲಿಯಮ್ಮುಗಳ ಘಟನೆ ಸ್ಥಿರವಾಗಿ ಇಲ್ಲದೆಯೂ ಇರಬಹುದು. ಆದ್ದರಿಂದ ಅದರ ಭೌತ ಗುಣಗಳಲ್ಲಿಯೂ ವ್ಯತ್ಯಾಸ ಇರುತ್ತದೆ.
  • ಭೂಮಿಯಿಂದ ಹೊರತೆಗೆದ ಪೆಟ್ರೋಲಿಯಮ್ ನೋಡಲು ಎಣ್ಣೆಯಂತಿದ್ದು ಅದರ ಮಾಂದ್ಯ ನೀರಿನಂತೆ ತೆಳುವಾಗಿರಬಹುದು. ಡಾಂಬರಿನಷ್ಟು ದಪ್ಪವಾಗಿಯೂ ಇರಬಹುದು. ಅದಕ್ಕೆ ಬಣ್ಣ ಇಲ್ಲದಿರಬಹುದು. ಅಥವಾ ಕಂದು, ಕೆಂಪು ಮತ್ತು ಕಪ್ಪು ಬಣ್ಣ ಇರಬಹುದು. ಮತ್ತು ಹಸಿರು ಪ್ರದೀಪ್ತಿ (ಫ್ಲೂರೆಸೆನ್ಸ್) ತೋರಿಸಬಹುದು. ತೆಳುವಾದ ಪೆಟ್ರೋಲಿಯಮ್ ಪಾರದರ್ಶಕವಾಗಿದೆ. ಆದರೆ, ವಿವಿಧ ಅಂಶಗಳ ಪಾರದೀಪಕದಿಂದ (ಟ್ರಾನ್ಸ್‍ಲ್ಯೂಸೆಂಟ್) ಹಿಡಿದು ನಿಷ್ಟಾರದರ್ಶಕ ಪೆಟ್ರೋಲಿಯಮ್ ಸಹ ಉಂಟು. ಪೆಟ್ರೋಲಿಯಮ್ಮಿನ ವಿಶಿಷ್ಟ ಸಾಂದ್ರತೆಯಾದರೂ ಸ್ಥಿರವಾಗಿರುವುದಿಲ್ಲ. ಅದು 0.8 ರಿಂದ 0.95 ರ ವರೆಗೆ ವ್ಯತ್ಯಾಸವಾಗುತ್ತದೆ. ಈ ವಿಶಿಷ್ಟ ಸಾಂದ್ರತೆಗೆ ಪೆಟ್ರೋಲಿಯಮ್ ವ್ಯಾಪಾರದಲ್ಲಿ ಮಹತ್ತ್ವದ ಪಾತ್ರ ಉಂಟು. ವಿಶಿಷ್ಟ ಸಾಂದ್ರತೆ ಕಡಿಮೆಯಾದಂತೆ ಪೆಟ್ರೋಲಿಯಮ್ಮಿನಲ್ಲಿ ತೆಳುವಾದ ಹಾಗೂ ವರ್ಣರಹಿತವಾದ ಪೆಟ್ರೋಲಿಯಮ್ಮಿನ ಅಂಶ ಹೆಚ್ಚಾಗಿರುವುದರಿಂದ ಅದರ ಬೆಲೆ ಹೆಚ್ಚಾಗುತ್ತದೆ. ಪೆಟ್ರೋಲಿಯಮ್ಮಿನಲ್ಲಿ ಬೇರೆ ಬೇರೆ ಕುದಿಬಿಂದುಗಳಿರುವ ಮತ್ತು ನಿಕಟವಾದ ರಾಸಾಯನಿಕ ಸಂಬಂಧವುಳ್ಳ ಕ್ಲಿಷ್ಟ ಹೈಡ್ರೋಕಾರ್ಬನ್ನು ಶ್ರೇಣಿಯೇ ಇರುವುದರಿಂದ ಅದರ ಕುದಿಬಿಂದು ಸ್ಥಿರವಿಲ್ಲ. ಆದರೆ, ಪೆಟ್ರೋಲಿಯಮ್ಮನ್ನು ಆಂಶಿಕವಾಗಿ ಬಟ್ಟಿ ಇಳಿಸಬಹುದು. ಹಾಗೆ ಮಾಡಿದಾಗ ದೊರೆವ ಘಟಕಗಳನ್ನು ಮುಖ್ಯವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗುವುದು.

____________________________________________________________________
ಹೆಸರು ದೊರಕಿಸಬಹುದಾದ
ಮುಖ್ಯ ಉತ್ಪನ್ನಗಳು
____________________________________________________________________
2000ಅ ವರೆಗೆ ಕುದಿಯುವ ಗ್ಯಾಸೊಲೀನ್ ಪೆಟ್ರೋಲಿಯಮ್ ಈಥರ್,
ಅಂಶ ಅಥವಾ ನ್ಯಾಪ್ಥಾ ವಿಲೀನಕಾರಿ ಮತ್ತು
ಪೆಟ್ರೋಲ್ ಪೆಟ್ರೋಲ್
____________________________________________________________________
1850-3450ಅ ವರೆಗೆ ನಡು ಬಟ್ಟಿ ಸೀಮೆ ಎಣ್ಣೆ, ಡೀಸಲ್ ಎಣ್ಣೆ,
ಕುದಿಯುವ ಜೆಟ್ ರಾಕೆಟ್ ಮತ್ತು ತಿರುಬಾನಿ
ಅಂಶ ಗಳಿಗೆ ಬೇಕಾಗುವ ಇಂಧನಗಳು
____________________________________________________________________
3450-5400 ಅ ವರೆಗೆ ವಿಶಾಲ ಮೇಣ, ಗಚ್ಚೆಣ್ಣೆ ಮತ್ತು
ಕುದಿಯುವ ಅಂಶ ಕುದಿಬಿಂದು ಪೆಟ್ರೋಲಿಯಮ್ ಛೇದನಕ್ಕೆ
ಬಟ್ಟಿ ಬೇಕಾಗುವ ಕಚ್ಚಾ ಮಾಲು
____________________________________________________________________
ಉಳಿಕೆ ಎಣ್ಣೆ ಡಾಂಬರು
____________________________________________________________________

  • ಪೆಟ್ರೋಲಿಯಮ್ ಘಟಕಗಳನ್ನು ಬೇರ್ಪಡಿಸುವುದು ಮತ್ತು ಗುರುತಿಸುವುದು ಕಠಿಣ ಕೆಲಸ. ಇನ್ನೂ ಯಾವುದೇ ನಮೂನೆಯ ಪೆಟ್ರೋಲಿಯಮ್ಮನ್ನೂ ಪೂರ್ಣವಾಗಿ ವಿಶ್ಲೇಷಿಸಲಾಗಿಲ್ಲವಾದರೂ ಇತ್ತೀಚೆಗೆ ರಾಶಿರೋಹಿತ ಮಾಪನ (ಮಾಸ್ ಸ್ಪೆಕ್ಟ್ರೊಮೆಟ್ರಿ) ಮತ್ತು ಅನಿಲ ದ್ರವ ಕ್ರೋಮ್ಯಾಟೊಗ್ರಫಿಯಂಥ ತಂತ್ರಗಳನ್ನು ಉಪಯೋಗಿಸಿ ಬಲುಮಟ್ಟಿಗೆ ಅದರ ಘಟಕಗಳನ್ನು ಪತ್ತೆ ಮಾಡಲಾಗಿದೆ. ಈ ವಿಶ್ಲೇಷಣೆಯ ಪ್ರಕಾರ ಅದರಲ್ಲಿ 50%-95% ರಷ್ಟು ಹೈಡ್ರೊಕಾರ್ಬನ್ನುಗಳಿದ್ದು ಉಳಿದವು ಹೈಡ್ರೋಕಾರ್ಬನ್ನುಗಳಲ್ಲದ ವಸ್ತುಗಳು ಹಾಗೂ ಸೂಕ್ಷ್ಮ ಪ್ರಮಾಣದಲ್ಲಿರುವ ಲೋಹಯುತ ಕಾರ್ಬನಿಕ ಸಂಯುಕ್ತಗಳು.

ಹೈಡ್ರೋಕಾರ್ಬನ್ನುಗಳು

ಬದಲಾಯಿಸಿ
  • ಪೆಟ್ರೋಲಿಯಮ್ಮಿನಲ್ಲಿ ಇರುವ ಹೈಡ್ರೋಕಾರ್ಬನ್ನುಗಳು ಮೂರು ಬಗೆಯವು. ಆಲ್ಕೇನುಗಳು-(ಪ್ಯಾರಾಫಿನ್ನುಗಳು), ಚಕ್ರೀಯ ಆಲ್ಕೇನುಗಳು (ನ್ಯಾಫ್ತೀನುಗಳು), ಆರೊಮ್ಯಾಟಿಕ್ಸ್. ಅದರಲ್ಲಿ ಅಪರ್ಯಾಪ್ತ ಹೈಡ್ರೋಕಾರ್ಬನ್ನುಗಳಿರುವ ವರದಿ ತೀರ ಅಪರೂಪ. ಆಲ್ಕೇನ್ ಕುಟುಂಬದ ಮೊದಲನೆಯ ಸದಸ್ಯ ಒಂದೇ ಇಂಗಾಲದ ಪರಮಾಣುವುಳ್ಳ ಮೀಥೇನಿನಿಂದ ಹಿಡಿದು 70 ಇಂಗಾಲದ ಪರಮಾಣುಗಳುಳ್ಳ ಬೃಹತ್ ಆಲ್ಕೇನುಗಳೂ ಕೂಡ ಅದರಲ್ಲಿವೆ. ಮೀಥೇನ್ ಅನಿಲ ಈಥೇನ್, ಪ್ರೋಪೇನ್, ಬ್ಯೂಟೇನುಗಳೊಂದಿಗೆ ನೈಸರ್ಗಿಕ ಅನಿಲದಲ್ಲಿ ದೊರೆಯುತ್ತದೆ. ಇಂಗಾಲದ ಸಂಖ್ಯೆ ಹೆಚ್ಚಾದಂತೆ ಆಲ್ಕೇನುಗಳು ದ್ರವ ಹಾಗೂ ಘನರೂಪಗಳನ್ನು ತಳೆಯುತ್ತವೆ. ಉದಾಹರಣೆಗೆ ಟಿ-ಹೆಕ್ಸೇನ್ ಅ6ಊ14 ದ್ರವ. ಟಿ-ಹೆಕ್ಸ್‍ಕಂಟೇನ್ ಅ60ಊ122 ಸೂಕ್ಷ್ಮ ಸ್ಪಟಿಕಾಕೃತಿಯ ಮೇಣ. ಮಾರುಕಟ್ಟೆಯ ಪ್ಯಾರಾಫಿನ್ ಮೇಣದಲ್ಲಿ 20 ರಿಂದ 30 ಇಂಗಾಲದ ಪರಮಾಣುಗಳುಳ್ಳ ಆಲ್ಕೇನುಗಳಿರುತ್ತವೆ. ಪೆಟ್ರೋಲಿಯಮ್ಮಿನಲ್ಲಿರುವ ಈ ಹೈಡ್ರೋಕಾರ್ಬನ್ನುಗಳು ನೇರಶ್ರೇಣೀಯವಾದರೂ ಇರಬಹುದು. ಕವಲೊಡೆದ ಆಲ್ಕೇನುಗಳಾದರೂ ಇರಬಹುದು.
  • ಪೆಟ್ರೋಲಿಯಮ್ಮಿನಲ್ಲಿ ಈ ವರೆಗೆ ಗುರುತಿಸಲಾದ ಚಕ್ರೀಯ ಆಲ್ಕೇನುಗಳು 5, 6, ಅಥವಾ 7 ಇಂಗಾಲದ ಪರಮಾಣುಗಳುಳ್ಳ ವರ್ತುಲಗಳು. ಇವು ಏಕಚಕ್ರೀಯವಾಗಿ ಇಲ್ಲವೇ ಬಹುಚಕ್ರೀಯ ಸಂಯುಕ್ತಗಳ ರೂಪದವಾಗಿ ಇರುತ್ತವೆ. ಉದಾಹರಣೆಗೆ ಡೆಕಾಹೈಡ್ರೊನ್ಯಾಫ್ತಲೀನ್, ಆರೋಮ್ಯಾಟಿಕ್ ಸಂಯುಕ್ತಗಳು ಆಲ್ಕೇನುಗಳು ಹಾಗೂ ಚಕ್ರೀಯ ಆಲ್ಕೇನುಗಳಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತವೆ. ಕಡಿಮೆ ಕುದಿಬಿಂದು ಇರುವ ಪೆಟ್ರೋಲಿಯಮ್ ಅಂಶದಲ್ಲಿ ಹೆಚ್ಚಾಗಿ ಟೋಲ್ವೀನ್, ಕ್ಸೈಲೀನ್, ಸೈಮೀನುಗಳಂಥ ಆಲ್ಕೈಲ್ ಬೆನ್‍ಜೀನುಗಳಿರುತ್ತವೆ. ಹೆಚ್ಚಿನ ಕುದಿಬಿಂದು ಇರುವ ಅಂಶದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆನ್‍ಜೀನಿನ ವರ್ತುಲಗಳು ನ್ಯಾಫ್ತಲೀನಿನಲ್ಲಿಯಂತೆ ಬೆಸೆದುಕೊಂಡಾಗಲಿ ಡೈಫಿನ್ವೆಲಿನಲ್ಲಿಯಂತೆ ಕೊಂಡಿಯ ಮೂಲಕ ಹೊಂದಿಕೊಂಡಾಗಲಿ ಇರುತ್ತವೆ. ಕೊಂಡಿಯಂಥ ಸಂಯುಕ್ತಗಳಿಗಿಂತ ಬೆಸೆದ ಸಂಯುಕ್ತಗಳೇ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಈವರೆಗೆ ಏಳು ವರ್ತುಲಗಳುಳ್ಳ ಪರಸ್ಪರ ಬೆಸೆದುಕೊಂಡಿರುವ ಸಂಯುಕ್ತಗಳನ್ನು ಗುರುತಿಸಲಾಗಿದೆ. ಆರೊಮ್ಯಾಟಿಕ್ ವರ್ತುಲಗಳು ಚಕ್ರೀಯ ಆಲ್ಕೇನುಗಳೊಂದಿಗೆ ಸಹ ಬೆಸೆದುಕೊಂಡಿರುವುದೂ ಉಂಟು. ಉದಾಹರಣೆಗೆ ಇಂಡನ್, 1, 2, 3, 4, ಟೆಟ್ರಹೈಡ್ರೊನ್ಯಾಫ್ತಲೀನ್.

ಹೈಡ್ರೊಕಾರ್ಬನ್ ಅಲ್ಲದ ವಸ್ತುಗಳು:

ಬದಲಾಯಿಸಿ
  • ಬಹುತೇಕ ಎಲ್ಲ ಪೆಟ್ರೋಲಿಯಮ್ಮುಗಳಲ್ಲಿಯೂ ಹೈಡ್ರೊಕಾರ್ಬನ್ ಅಲ್ಲದ ವಸ್ತುಗಳಿರುತ್ತವೆ. ಅವುಗಳಲ್ಲಿ ಇಂಗಾಲ ಮತ್ತು ಹೈಡ್ರೊಕಾರ್ಬನ್ ಬಿಟ್ಟರೆ ಅತಿ ಮುಖ್ಯವಾದ ಮೂಲವಸ್ತುಗಳೆಂದರೆ ಗಂಧಕ, ಆಕ್ಸಿಜನ್ ಮತ್ತು ನೈಟ್ರೊಜನ್. ಗಂಧಕ ಪೆಟ್ರೊಲಿಯಮ್ಮಿನಲ್ಲಿ ತೂಕರೀತ್ಯ 0.1% ರಿಂದ 5% ಪ್ರಮಾಣದಲ್ಲಿದ್ದು ಅದು ಸ್ವತಂತ್ರ ರೂಪದಲ್ಲಿ ಅಥವಾ ಹೈಡ್ರೊಜನ್ ಸಲ್ಫೈಡಿನಂತೆ ಅಥವಾ ಕಾರ್ಬನಿಕ ಗಂಧಕದ ಸಂಯುಕ್ತಗಳ ರೂಪದಲ್ಲಿರುತ್ತದೆ. ಗಂಧಕದ ಪ್ರಮಾಣ ಕಡಿಮೆ ಆದಂತೆ, ಪೆಟ್ರೊಲಿಯಮ್ ಸಂಸ್ಕರಣ ಸುಲಭವಾಗುವುದರಿಂದ ಪೆಟ್ರೊಲಿಯಮ್ಮಿನ ಬೆಲೆ ಹೆಚ್ಚಾಗುತ್ತದೆ. ಆಕ್ಸಿಜನ್ ಸಾಮಾನ್ಯವಾಗಿ 2% ಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದು ಅದು ಸಹ ಸ್ವತಂತ್ರವಾಗಿ ಆಗಲಿ ಕಾರ್ಬಾಕ್ಸಿಲಿಕ್ ಆಮ್ಲ, ಆಲ್ಕೊಹಲ್, ಫೀನಾಲ್ ಅಥವಾ ಕೀಟೋನ್ ರೂಪಗಳಲ್ಲಾಗಲಿ ಇರುತ್ತದೆ. ನೈಟ್ರೊಜನ್ 0.1% ಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದು ಪಿರಿಡೀನ್, ಕ್ವಿನೋಲಿನ್, ಕಾರ್ಬಜೋಲ್ ಅಥವಾ ಫೋರ್‍ಫಿರೀನುಗಳ ರೂಪದಲ್ಲಿರುವುದು ಕಂಡುಬಂದಿದೆ. ಕಚ್ಚಾ ಪೆಟ್ರೋಲಿಯಮ್ಮಿನಲ್ಲಿ ಉಪ್ಪು ಸಹ ಇರುತ್ತದೆ. ಇದರ ಪ್ರಮಾಣ 0.7% ಕ್ಕಿಂತ ಹೆಚ್ಚಾದಾಗ ಇದನ್ನು ತೆಗೆದುಬಿಡಲಾಗುತ್ತದೆ.

ಸೂಕ್ಷ್ಮಪ್ರಮಾಣದಲ್ಲಿ ಲೋಹಗಳಿರುವ ಸಂಯುಕ್ತಗಳು:

ಬದಲಾಯಿಸಿ
  • ಪೆಟ್ರೋಲಿಯಮ್ಮಿನಲ್ಲಿರುವ ಲೋಹಗಳ ಪಟ್ಟಿ ದೊಡ್ಡದೇ ಇದೆ. ರುಬಿಡಿಯಮ್ ಮತ್ತು ನಿಯೋಬಿಯಮ್ ಎರಡನ್ನು ಬಿಟ್ಟು ಅಣುಸಂಖ್ಯೆ 42ರ ವರೆಗಿನ ಎಲ್ಲ ಲೋಹಗಳನ್ನೂ ಪೆಟ್ರೋಲಿಯಮ್ಮಿನಲ್ಲ ಗುರುತಿಸಲಾಗಿದೆ. ಅವುಗಳಲ್ಲಿ ನಿಕೆಲ್ ಹಾಗೂ ವೆನೇಡಿಯಮ್ ಬಹಳ ಮಹತ್ತ್ವದವು. ಹೆಚ್ಚಿನ ಅಣುಸಂಖ್ಯೆ ಇರುವ ಲೋಹಗಳ ಪೈಕಿ ಬೆಳ್ಳಿ, ತಾಮ್ರ, ಬೇರಿಯಮ್ ಮುಂತಾದವನ್ನು ಪತ್ತೆ ಹಚ್ಚಲಾಗಿದೆ. ಪೆಟ್ರೋಲಿಯಮ್ಮಿನಲ್ಲಿ ಲೋಹಗಳ ಪ್ರಮಾಣ ದಶಲಕ್ಷದಲ್ಲಿ 1000 ದಿಂದ 0.1 ಭಾಗದಷ್ಟು ಸೂಕ್ಷ್ಮವಾಗಿದೆ. ಕೆಲವು ಲೋಹಗಳ ವಿನಾ ಹೆಚ್ಚಿನ ಲೋಹಗಳು ಯವ ರೂಪದಲ್ಲಿ ಇರುತ್ತವೆ ಎಂಬುದು ಗೊತ್ತಾಗಿಲ್ಲ.

ಪೆಟ್ರೋಲಿಯಮ್ಮಿನ ಅಸ್ತಿತ್ವ

ಬದಲಾಯಿಸಿ

ಪೆಟ್ರೋಲಿಯಮ್ ಹಾಗೂ ಅದರ ಉತ್ಪನ್ನಗಳನ್ನು ಪ್ರಪಂಚದ ಎಲ್ಲ ಕಡೆ ಉಪಯೋಗಿಸುತ್ತಿದ್ದರೂ ಅದು ದೊರಕುವುದು ಮಾತ್ರ ಕೆಲವೇ ದೇಶಗಳಲ್ಲಿ. ಪ್ರಪಂಚದಲ್ಲಿ ಪೆಟ್ರೋಲಿಯಮ್ ಉತ್ಪಾದಕ ದೇಶಗಳು ನೂರಇಪ್ಪತ್ತೊಂದು ಇದ್ದರೂ 1970 ರ ವಾರ್ಷಿಕ ಉತ್ಪಾದನೆಯ 80% ಭಾಗವನ್ನು ಕೇವಲ ಎಂಟು ದೇಶಗಳೇ ಉತ್ಪಾದಿಸಿದ್ದುವು. ಸದ್ಯ ಪ್ರಪಂಚದಲ್ಲಿ ಪ್ರತಿವರ್ಷ ಸುಮಾರು 250 ಕೋಟಿ ಮೆಟ್ರಿಕ್ ಟನ್ ಪೆಟ್ರೊಲಿಯಮ್ ಉತ್ಪಾದಿಸಲಾಗುತ್ತದೆ. ಭೂಗರ್ಭದಲ್ಲಿ ಇನ್ನೂ ಬಳಸದೇ ಇರುವ ಪೆಟ್ರೊಲಿಯಮ್ 8,800 ಕೋಟಿ ಮೆಟ್ರಿಕ್ ಟನ್ನುಗಳಷ್ಟು ಇದೆ ಎಂದು ಖಚಿತಪಡಿಸಲಾಗಿದೆ. ಈ ಪೈಕಿ 25% ರಷ್ಟು ಮೀಸಲು ಪೆಟ್ರೋಲಿಯಮ್ ಸೌದಿ ಅರೇಬಿಯಾ ಒಂದರಲ್ಲಿ ಇದೆ. ಕುವೈತ್, ಇರಾನ್ ಒಟ್ಟುಗೂಡಿ 26% ಮೀಸಲು ಪೆಟ್ರೋಲಿಯಮ್ಮನ್ನು ಪಡೆದಿವೆ. ರಷ್ಯ ಹಾಗೂ ಅಮೆರಿಕ ದೇಶಗಳಲ್ಲಿರುವ ಮೀಸಲು ಪೆಟ್ರೋಲಿಯಮ್ ಪ್ರಮಾಣ ಅನುಕ್ರಮವಾಗಿ 12% ಮತ್ತು 7% ಇವೆ. ಲಿಬ್ಯಾ, ಸಂಯುಕ್ತ ಅರಬ್ ಎಮಿರೇಟುಗಳು, ಚೀನ, ವೆನಿಜ್ವೇಲ ದೇಶಗಳಲ್ಲಿ ಒಟ್ಟುಗೂಡಿ 12% ರಷ್ಟು ಮೀಸಲು ಪೆಟ್ರೋಲಿಯಮ್ ಇದ್ದು ಪ್ರತಿ ದೇಶದಲ್ಲಿರುವ ಪ್ರಮಾಣ 2%-4% ಇರುತ್ತದೆ. ಆಲ್ಜೀರಿಯ, ನೈಜೀರಿಯ, ಇಂಡೋನೇಷ್ಯ, ಕೆನಡ, ನಾರ್ವೇ ದೇಶಗಳು ತಲಾ 1% ರಷ್ಟು ಮೀಸಲು ಪೆಟ್ರೋಲಿಯಮ್ ಪಡೆದಿವೆ. ಕ್ವೇಟಾರ್, ಎಕ್ವಡಾರ್, ಓನಾನ್, ಯುನೈಟೆಡ್ ಕಿಂಗ್‍ಡಮ್ ಹಾಗೂ ಮೆಕ್ಸಿಕೊ ದೇಶಗಳಲ್ಲಿರುವ ಮೀಸಲ, ಪೆಟ್ರೋಲಿಯಮ್ಮಿನ ಪ್ರಮಾಣ 1% ಕ್ಕಿಂತ ಕಡಿಮೆ ಇದ್ದರೂ ಅದನ್ನು ಗಣನೀಯ ಎಂದೇ ಹೇಳಬಹುದು. ಏಕೆಂದರೆ ಉಳಿದ 100 ದೇಶಗಳಲ್ಲಿರುವ ಒಟ್ಟು ಮೀಸಲು ಪೆಟ್ರೋಲಿಯಮ್ಮಿನ ಪ್ರಮಾಣ 4.5%. ಭಾರತದಲ್ಲಿ ಕಚ್ಚಾ ಪೆಟ್ರೋಲಿಯಮ್ ಶೋಧನೆಯನ್ನು ಅಸ್ಸಾಂ ಆಯುಲ್ ಕಂಪನಿ, ಬರ್ಮಾ ಆಯಿಲ್ ಕಂಪನಿ ಮತ್ತು ಇವುಗಳ ಸಹ ವ್ಯವಹಾರಿಗಳು 19 ನೆಯ ಶತಮಾನದ ಕೊನೆಯ ದಶಕದಲ್ಲಿ ಪ್ರಾರಂಭಿಸಿದುವು. ಆದರೆ, ಇದು ಅಸ್ಸಾಂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. 1949-60 ರ ತನಕ ಸ್ಟ್ಯಾಂಡರ್ಡ್ ವ್ಯಾಕೂಮ್ ಆಯಿಲ್ ಕಂಪನಿಯವರು ಪಶ್ಚಿಮ ಬಂಗಾಳದ ಕೊಲ್ಲಿಯನ್ನು ಪರಿಶೋಧಿಸಿದರು. ಮೊದಲು ಈ ಕೆಲಸವನ್ನು ಕಂಪನಿ ಏಕಾಂಗಿಯಾಗಿ ಕೈಗೊಂಡಿತ್ತಾದರೂ ಅನಂತರ ಇಂಡೋಸ್ಟ್ಯಾನ್‍ವ್ಯಾಕ್ ಯೋಜನೆಯನ್ನು ಹಾಕಿಕೊಂಡು ಭಾರತ ಸರ್ಕಾರದ ನೆರವನ್ನು ಪಡೆಯಿತು. ಈ ಯೋಜನೆಯಿಂದ ಪೆಟ್ರೋಲಿಯಮ್ ದೊರಕಿಸುವಲ್ಲಿ ಸಫಲವಾಗದಿದ್ದರೂ ಅದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಲಾಯಿತು. ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ (1956-61) ಭಾರತ ಸರ್ಕಾರ ಎಣ್ಣೆಯ ಶೋಧನೆ, ಉತ್ಪಾದನೆ, ಸಂಸ್ಕರಣ ಹಾಗೂ ಸರಬರಾಜುಗಳಿಗೆ ವ್ಯವಸ್ಥಿತ ಯೋಜನೆಯನ್ನು ಪ್ರಾರಂಭಿಸಿದಂದಿನಿಂದಲೇ ಸಾರ್ವಜನಿಕ ಕ್ಷೇತ್ರದಲ್ಲಿ ಎಣ್ಣೆಯ ಉದ್ದಿಮೆಗೆ ನಿಜವಾದ ಬುನಾದಿ ಹಾಕಿದ್ದು ಇಂಥ ಎಣ್ಣೆಯ ಶೋಧನೆಯಲ್ಲಿ ಯಶಸ್ಸು ಪಡೆದು ಈ ವ್ಯವಹಾರವನ್ನು ನೋಡಿಕೊಳ್ಳಲು 1963ರಲ್ಲಿ ಭಾರತ ಸರ್ಕಾರ ಪೆಟ್ರೋಲಿಯಮ್ ಮತ್ತು ರಾಸಾಯನಿಕ ವಸ್ತುಗಳು ಎಂಬ ಒಂದು ಸಚಿವ ಶಾಖೆಯನ್ನೇ ತೆರೆಯಿತು. ಕಚ್ಚಾ ಪೆಟ್ರೋಲಿಯಮ್ ಅಸ್ಸಾಂ ಮತ್ತು ಗುಜರಾತುಗಳಲ್ಲಿ ದೊರೆಯುತ್ತದೆ. ಇತ್ತೀಚಿಗೆ ಮುಂಬಯಿಯಿಂದ 160 ಕಿ. ಮೀ. ದೂರ ಅರಬ್ಬೀ ಸಮುದ್ರದಲ್ಲಿ ಬಾಂಬೆ ಹೈ ಎಂಬ ನೈಸರ್ಗಿಕ ರಚನೆಯಲ್ಲಿಯೂ ಬಸೀನ್ ಎಂಬಲ್ಲಿಯೂ ಪೆಟ್ರೋಲಿಯಮ್ಮನ್ನು ಶೋಧಿಸಲಾಗಿದೆ. 1964ರ ತರುವಾಯ ಹೊಸ ತೈಲ ನಿಧಿಗಳನ್ನು ಶೋಧಿಸುವಲ್ಲಿ ಹತಾಶವಾಗಿದ್ದ ಭಾರತಕ್ಕೆ ಬಾಂಬೆ ಹೈ ಒಂದು ಆಶಾಕಿರಣವಾಗಿದೆ. ದಿವಸವೊಂದರ 4,000 ಬ್ಯಾರೆಲ್ ಪೆಟ್ರೋಲಿಯಮ್ ಕೊಡುವ (1978) ಈ ರಚನೆಯಿಂದ 1982ರ ಸುಮಾರಿಗೆ ವರ್ಷಕ್ಕೆ 1.3 ಕೋಟಿ ಟನ್ ಎಣ್ಣೆಯನ್ನು ಉತ್ಪಾದಿಸಬಹುದು ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಈಗ ಪ್ರತಿ ವರ್ಷ 2.2 ಕೋಟಿ ಟನ್ ಪೆಟ್ರೋಲಿಯಮ್ಮನ್ನು ಉಪಯೋಗಿಸಲಾಗುತ್ತಿದ್ದು, ಸ್ಥಳೀಯವಾಗಿ 18 ಲಕ್ಷ ಟನ್ ಮಾತ್ರ ಉತ್ಪಾದಿಸಲಾಗಿದೆ. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್ ವರದಿಯ ಪ್ರಕಾರ 1980ರ ವೇಳೆಗೆ ಭಾರತದ ಬೇಡಿಕೆ 3.2-3.6 ಕೋಟಿ ಟನ್ನಿಗೆ ಏರಬಹುದು ಮತ್ತು ಈ ಬೇಡಿಕೆಯ ಬಹುಪಾಲನ್ನು ಸ್ಥಳೀಯ ಉತ್ಪಾದನೆಯಿಂದ ಪೂರೈಸಬಹುದು ಎಂದು ಆಶಿಸಲಾಗಿದೆ.

ಪೆಟ್ರೋಲಿಯಮ್ ಉದ್ಧರಣೆ

ಬದಲಾಯಿಸಿ

ಪೆಟ್ರೋಲಿಯಮ್ ರೂಪುಗೊಂಡು ಬಳಿಕ ಭೂಮಿಯಲ್ಲಿ ಕೊಳ ಅಥವಾ ಬಾವಿಗಳಲ್ಲಿ ಅದು ಹೇಗೆ ಸಂಗ್ರಹವಾಗುತ್ತದೆ ಎಂಬುದನ್ನು ಮೇಲೆ ಹೇಳಿದೆ. ಭೂಮ್ಯಂತರ್ಗತ ಪೆಟ್ರೋಲಿಯಮ್ಮನ್ನು ಹೊರತೆಗೆದು ದೊರಕಿಸಿಕೊಳ್ಳುವುದಕ್ಕೆ ಪೆಟ್ರೋಲಿಯಮ್ ಉದ್ಧರಣೆ (ಎಕ್ಸ್‍ಟ್ರ್ಯಾಕ್ಷನ್ ಆಫ್ ಪೆಟ್ರೋಲ್) ಎನ್ನುವರು. ಈ ಕ್ರಿಯೆಯನ್ನು ಮುಂದಿನ ಹಂತಗಳಾಗಿ ವಿಂಗಡಿಸಬಹುದು : ಪೆಟ್ರೋಲಿಯಮ್ ಅನ್ವೇಷಣೆ, ಕೊಳವೆ ಬಾವಿಯನ್ನು ಕೊರೆಯುವುದು, ಸಂಗ್ರಹಣೆ ಮತ್ತು ಸಾರಿಗೆ ವ್ಯವಸ್ಥೆ.

ಪೆಟ್ರೋಲಿಯಮ್ ಅನ್ವೇಷಣೆ:

ಬದಲಾಯಿಸಿ
  • ಪೆಟ್ರೋಲಿಯಮ್ ಭೂಮಿಯ ಕೆಳಗೆ ಎಲ್ಲೆಡೆಗಳಲ್ಲಿಯೂ ಇರುವುದಿಲ್ಲ. ಕೆಲವು ವಿಶಿಷ್ಟ ಸ್ಥಾನಗಳಲ್ಲಿ ಮಾತ್ರ ಸಂಗ್ರಹವಾಗಿರುತ್ತದೆ. ಯಾವ ಪ್ರದೇಶದ ಕೆಳಗೆ ಪೆಟ್ರೋಲಿಯಮ್ ಸಂಗ್ರಹವಾಗಿರಬಹುದು ಎಂಬುದನ್ನು ಪೂರ್ವಭಾವಿಯಾಗಿ ಕಂಡುಹಿಡಿಯಬೇಕು. ಇದೇ ಪೆಟ್ರೋಲಿಯಮ್ಮಿನ ಅನ್ವೇಷಣೆ ಮೊದಲಿಗೆ ಪೆಟ್ರೋಲಿಯಮ್ಮನ್ನು ಶೋಧಿಸಲು ಬಿಟ್ಟು ಮೆನ್ ಇರುವ ಸ್ಥಳವನ್ನು ಹುಡುಕುತ್ತಿದ್ದರು. ಭೂಗರ್ಭದಿಂದ ಹೊರಗೆ ಸೂಸಿದ ಪೆಟ್ರೋಲಿಯಮ್ ವಾತಾವರಣದಲ್ಲಿ ಆವಿಯಾಗಿ ಹೋದ ಬಳಿಕ ಉಳಿದ ಕಪ್ಪು ಜಿಡ್ಡು ಪದಾರ್ಥವೇ ಬಿಟ್ಯುಮೆನ್. ಇದು ಯಾವ ಪ್ರದೇಶದಲ್ಲಿ ಕಣ್ಣಿಗೆ ಕಾಣುವಂತೆ ಹರಡಿರುವುದೋ ಅಥವಾ ಯಾವ ಪ್ರದೇಶದಲ್ಲಿ ಅನತಿ ಆಳದಲ್ಲಿ ಇರುವುದೋ ಆ ಪ್ರದೇಶದಲ್ಲಿ ಭೂಮಿಯ ಕೆಳಗೆ ಪೆಟ್ರೋಲಿಯಮ್ ಸಂಗ್ರಹಣೆ ಇದೆ ಎಂದು ತಿಳಿಯುತ್ತಿದ್ದರು. ಕೆಲಕಡೆ ಭೂಗರ್ಭದಿಂದ ಪಾರಾಗಿ ಹೋಗುವ ಪೆಟ್ರೋಲಿಯಮ್ ಅನಿಲವನ್ನು ಅದರ ವಾಸನೆಯಿಂದಾಗಲಿ ಅದಕ್ಕೆ ಬೆಂಕಿ ತಗಲಿಸುವುದರಿಂದಾಗಲಿ ಸುಲಭವಾಗಿ ಗುರುತಿಸಿ ಅಂಥ ಸ್ಥಳದಲ್ಲಿ ಪೆಟ್ರೋಲಿಯಮ್ ನಿಕ್ಷೇಪ ಇರಬಹುದು ಎಂದು ಊಹಿಸುತ್ತಿದ್ದರು. ಈ ವಿಧಾನದಿಂದ ಪತ್ತೆ ಮಾಡಿ ಪೆಟ್ರೋಲಿಯಮ್ ನಿಕ್ಷೇಪಗಳ ಪೈಕಿ ಇರಾಕ್ ಹಾಗೂ ಬಾಕು ಪ್ರದೇಶದ ನಿಕ್ಷೇಪಗಳು ಪ್ರಮುಖವಾದವು. ಆದರೆ, ಈ ವಿಧಾನವನ್ನು ಅನುಸರಿಸಿ ಬಿಟ್ಯುಮೆನ್ ಇದ್ದ ಭೂಮಿಯ ಕೆಳಗೆ ಕೊಳವೆ ಬಾವಿಯನ್ನು ಕೊರೆದಾಗ ಎಷ್ಟೋ ಸಲ ನಿರಾಶೆ ಆದದ್ದುಂಟು. ಏಕೆಂದರೆ ಅಲ್ಲಿಯ ಬಾವಿಗಳಲ್ಲಿದ್ದ ಪೆಟ್ರೋಲಿಯಮ್ ಆ ವೇಳೆಗಾಗಲೇ ಆವಿಯಾಗಿ ಹೋಗಿ ಕೇವಲ ಬಿಟ್ಯುಮೆನ್ ಮಾತ್ರ ಉಳಿದುಕೊಂಡಿರುತ್ತಿತ್ತು. ಕೆಲವು ಸಲ ಬಿಟ್ಯುಮೆನ್ ಹರಡಿದ್ದ ಸ್ಥಳದ ಕೆಳಗೆ ಬಾವಿಯನ್ನು ಕೊರೆದಾಗ ಅಲ್ಲಿ ಪೆಟ್ರೋಲಿಯಮ್ ಸಿಗದೇ ಅದರಿಂದ ಸ್ವಲ್ಪ ಅಂತರದಲ್ಲಿ ಬಾವಿ ಕೊರೆದಾಗ ಪೆಟ್ರೋಲಿಯಮ್ ದೊರೆತದ್ದೂ ಉಂಟು. ಹೀಗಾಗಿ ಪೆಟ್ರೋಲಿಯಮ್ಮಿನ ಅನ್ವೇಷಣೆಯ ಕೆಲಸ ಅಷ್ಟು ಖಚಿತವಾಗಿರಲಿಲ್ಲ. ಅದು ಸಟ್ಟಾ ವ್ಯಾಪಾರದಂತೆ ಅನಿಶ್ಚಿತವಾಗಿತ್ತು. ಸರಾಸರಿ ಮೂವತ್ತು ಪ್ರಯತ್ನಗಳಲ್ಲಿ ಒಂದು ಸಾರಿ ಮಾತ್ರ ಯಶಸ್ಸು ದೊರೆಯುತ್ತಿತ್ತು. ಆದರೆ, ಪೆಟ್ರೋಲಿಯಮ್ಮಿನ ಬೇಡಿಕೆ ಹೆಚ್ಚಾದಂತೆ ಮತ್ತು ಅದರ ಉಪಯೋಗ ಅನಿವಾರ್ಯವಾದಂತೆ ಅದರ ಸತತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅದರ ಅನ್ವೇಷಣೆಗಾಗಿ ಹೊಸ ಹೊಸ ವಿಭಾಗಗಳನ್ನು ಶೋಧಿಸಲಾಯಿತು. ಇವು ವೈಜ್ಞಾನಿಕ ವಿಧಾನಗಳು. ಇವುಗಳಲ್ಲಿ ಮುಖ್ಯವಾಗಿ ಎರಡು ಪ್ರಕಾರದವು ಇವೆ; ಭೂ ವೈಜ್ಞಾನಿಕ ವಿಧಾನಗಳು, ಭೂಭೌತ ವೈಜ್ಞಾನಿಕ ವಿಧಾನಗಳು.

ಭೂವೈಜ್ಞಾನಿಕ ವಿಧಾನಗಳು:

ಬದಲಾಯಿಸಿ
  • ಈ ವಿಧಾನಗಳಲ್ಲಿ ಭೂವಿಜ್ಞಾನಿಯ ಪಾತ್ರ ಬಲು ಹಿರಿಮೆ. ಭೂಮಿಯ ಸ್ತರಗಳ ರಚನೆಗಳ ಬಗ್ಗೆ ಆತನಿಗಿರುವ ಜ್ಞಾನದಿಂದ ಭೂಮಿಯ ಕೆಳಗಿನ ಶಿಲಾರಚನೆ ಡುಬರಿಯಾಕಾರವಾಗಿದೆಯೋ ಅಥವಾ ಅದು ಕಲ್ಲುಪ್ಪಿನ ಗಮ್ಮಟಗಳಿಂದಾಗಿದೆಯೊ ಎಂಬುದನ್ನು ತಿಳಿಯಬಹುದು. ಇಂಥ ರಚನೆಗಳಲ್ಲಿ ಪೆಟ್ರೋಲಿಯಮ್ ಸಿಕ್ಕಿಹಾಕಿಕೊಂಡಿರುತ್ತದೆ. ಶಿಲಾಸ್ತರಗಳು ಭೂಮಿಯಲ್ಲಿ ಮೇಲ್ಪದರದಿಂದ ಎಷ್ಟು ಅಂಶದ ಕೋನ ಮಾಡಿಕೊಂಡು ಇಳಿವೋರೆ ಹೊಂದಿವೆ ಎಂಬುದನ್ನು ಅರಿಯಬಹುದು. ಬೇರೆ ಬೇರೆ ಸ್ಥಳಗಳಲ್ಲಿ ಈ ಕೋನವನ್ನು ಕಂಡುಹಿಡಿಯುವುದರಿಂದ ಆ ಭಾಗದ ಭೂಮಿಯ ಕೆಳಗೆ ಇರುವ ಶಿಲಾಸ್ತರಗಳ ಬಗ್ಗೆ ಮಾಹಿತಿ ದೊರೆಯುತ್ತದೆ.
  • ಪ್ರಾಣಿಗಳ ಹಾಗೂ ಸಸ್ಯಗಳ ಫಾಸಿಲುಗಳಿಂದ ಆಯಾ ಶಿಲೆಗಳ ಕಾಲವನ್ನು ನಿರ್ಧರಿಸಿ ಇದರಿಂದ ಶಿಲೆ ಪೆಟ್ರೋಲಿಯಮ್ಮನ್ನು ಸಂಗ್ರಹಿಸಿಕೊಳ್ಳಬಹುದಾದ ಕಾಲಕ್ಕೆ ಸೇರಿದ್ದೊ ಅಥವಾ ಅಲ್ಲವೊ ಎಂಬುದನ್ನು ನಿರ್ಧರಿಸಬಹುದು ; ಅಥವಾ ಪೆಟ್ರೋಲಿಯಮ್ಮನ್ನು ಹೊಂದಿವೆ ಎಂದು ಈಗಾಗಲೇ ಗೊತ್ತಿರುವ ಶಿಲೆಗಳಲ್ಲಿ ಇದ್ದ ಫಾಸಿಲುಗಳು ಇಲ್ಲಿಯೂ ಇವೆಯೊ ಎಂದು ಗುರುತಿಸಬಹುದು. ಈ ವಿಷಯವನ್ನು ತಿಳಿದ ಬಳಿಕ ಭೂವಿಜ್ಞಾನಿ ಕೊಳವೆ ಬಾವಿಯನ್ನು ಕೊರೆಯಬೇಕೋ ಅಥವಾ ಬೇಡವೊ ಎಂಬುದನ್ನು ತಿಳಿಸುತ್ತಾನೆ.
  • ಈ ವಿಧಾನಗಳಲ್ಲಿ ಭೂವಿಜ್ಞಾನಿಗೆ ಮೊದಲು ಆಯಾ ಪ್ರದೇಶದ ವಿಹಂಗಮ ದೃಶ್ಯ ಅತ್ಯವಶ್ಯ. ಅದಕ್ಕಾಗಿ ವಿಮಾನದಲ್ಲಿ ಜೋಡಿಸಿದ ವಿಶೇಷ ಕೆಮರಾದಿಂದ ನೂರಾರು ಛಾಯಾಚಿತ್ರಗಳನ್ನು ತೆಗೆದು, ಜೋಡಿಸಿ, ಅಭ್ಯಸಿಸಿ ಆ ಪ್ರದೇಶದ ಮೋಜಣೆ ಮಾಡುತ್ತಾನೆ. ಒಟ್ಟಿನಲ್ಲಿ ಇದಕ್ಕೆ ಬಹಳ ಕಾಲಾವಕಾಶ ಬೇಕು, ಹಾಗೂ ಹೆಚ್ಚು ಶ್ರಮವಹಿಸಬೇಕು. ಆದರೂ ಈ ವಿಧಾನಗಳಿಂದ ಊಹಿಸಿ ಶೋಧಿಸಿದ ಸ್ಥಳಗಳಲ್ಲಿ ಬಾವಿಯನ್ನು ಕೊರೆದಾಗ ಹತ್ತರಲ್ಲಿ ಒಂದರಲ್ಲಾದರೂ ಪೆಟ್ರೋಲಿಯಮ್ ದೊರೆತದ್ದು ಅನುಭವದಿಂದ ತಿಳಿದುಬಂದಿದೆ.

ಭೂಭೌತ ವೈಜ್ಞಾನಿಕ ವಿಧಾನಗಳು:

ಬದಲಾಯಿಸಿ
  • ಭೂ ಮೇಲ್ಮೈಯ ಅಧಿಕಾಂಶ ನೀರು, ಮರಳು, ದಟ್ಟ ಕಾಡು ಮುಂತಾದವುಗಳಿಂದ ಮುಚ್ಚಿಹೋಗಿದೆ. ಈ ಭಾಗಗಳನ್ನು ಸರಿಯಾಗಿ ಮೋಜಣೆ ಮಾಡುವುದು ಭೂವಿಜ್ಞಾನಿಗೆ ಸಾಧ್ಯವಾಗದು. ಅವನ ಪರೀಕ್ಷೆಗೆ ಶಿಲೆಗಳ ನಮೂನೆಗಳು ಸಿಕ್ಕವು. ಹೀಗಾಗಿ ಇಂಥ ಪ್ರದೇಶಗಳಲ್ಲಿ ಪೆಟ್ರೋಲಿಯಮ್ ಅನ್ವೇಷಣೆಗೆ ಭೂವೈಜ್ಞಾನಿಕ ವಿಧಾನಗಳು ಅಷ್ಟು ಉಪಯೋಗ ಆಗುವುದಿಲ್ಲ. ಆದರೆ, ಈ ಕೊರತೆಯನ್ನು ಭೂಭೌತ ವಿಜ್ಞಾನ ತುಂಬಿಕೊಟ್ಟಿದೆ. ಭೂಭೌತ ವೈಜ್ಞಾನಿಕ ವಿಧಾನ ಭೂಮಿಯ ಮೇಲ್ಪದರದ ಭೌತ ಗುಣಧರ್ಮಗಳಾದ ಸಾಂದ್ರತೆ, ಕಾಂತತ್ವ ಹಾಗೂ ಗುರುತ್ವಗಳನ್ನು ಅವಲಂಬಿಸಿರುವುದರಿಂದ ಭೂಮಿಯ ಮೇಲ್ಮೈಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪೆಟ್ರೋಲಿಯಮ್ ಅನ್ವೇಷಣೆ ಸಾಧ್ಯವಾಗಿದೆ. ಇದು ಸಹ ಭೂವೈಜ್ಞಾನಿಕ ವಿಧಾನದಂತೆ ನೇರವಾಗಿ ಪೆಟ್ರೋಲಿಯಮ್ ಇರುವ ಸ್ಥಳಗಳನ್ನು ತೋರಿಸುವುದಿಲ್ಲ. ಬದಲು, ಸಂಗ್ರಹಣೆಗೆ ಯೋಗ್ಯವಾದ ಶಿಲಾಸ್ತರಗಳ ರಚನೆ ಉಂಟು ಎಂದು ಮಾತ್ರ ತೋರಿಸುತ್ತದೆ. ಈ ವಿಧಾನದಿಂದ ಆಯ್ದ ಐದು ನೆಲೆಗಳ ಪೈಕಿ ಒಂದರಲ್ಲಾದರೂ ಪೆಟ್ರೋಲಿಯಮ್ ದೊರೆಯುವುದು ಖಚಿತ ಎಂದು ಕಂಡುಬಂದಿದೆ. ಇದರಲ್ಲಿ ಬಳಸುವ ಮೂರು ಮುಖ್ಯ ಉಪಕರಣಗಳನ್ನು ಇಲ್ಲಿ ಕೊಟ್ಟಿದೆ.

ಗುರುತ್ವಮಾಪಕ:

ಬದಲಾಯಿಸಿ
  • ಇದು ಅಲ್ಪ ಗುರುತ್ವ ವ್ಯತ್ಯಾಸವನ್ನೂ ಪತ್ತೆ ಮಾಡುವಂಥ ಸೂಕ್ಷ್ಮಗ್ರಾಹಿ. ಎಷ್ಟೆಂದರೆ ಹತ್ತು ಕೋಟಿ ಭಾಗಗಳಲ್ಲಿ ಒಂದು ಭಾಗ ವ್ಯತ್ಯಾಸವಿದ್ದರೂ ಅದನ್ನು ದಾಖಲಿಸಬಲ್ಲದು. ಭೂಮಿಯ ಮೇಲೆ ಎಲ್ಲ ಕಡೆಗಳಲ್ಲಿಯೂ ಗುರುತ್ವ ಏಕರೀತಿಯಾಗಿರುವುದಿಲ್ಲ. ಏಕೆಂದರೆ ಭೂಗರ್ಭದಲ್ಲಿರುವ ಶಿಲೆಗಳಿಂದಾಗಿ ಅದರಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದು ಅತಿ ಸೂಕ್ಷ್ಮವಾಗಿದ್ದರೂ ಪೆಟ್ರೋಲಿಯಮ್ ಅನ್ವೇಷಣೆಯಲ್ಲಿ ಸಹಾಯಕವಾಗುತ್ತದೆ. ಹೆಚ್ಚು ಸಾಂದ್ರತೆಯುಳ್ಳ ಶಿಲೆಗಳು ಭೂಮಿಯ ಮೇಲ್ಪದರಕ್ಕೆ ಹತ್ತಿರವಾದಂತೆ ಅಂಥ ಪ್ರದೇಶದಲ್ಲಿ ಗುರುತ್ವ ಹೆಚ್ಚು ಇರುತ್ತದೆ.
  • ಉದಾಹರಣೆಗೆ ಪೆಟ್ರೋಲಿಯಮ್ ಇರುವ ಶಿಲಾಸ್ತರಗಳು ಡುಬರಿಗಳಾಗಿ ಮಾರ್ಪಟ್ಟಾಗ ಅವು ಭೂಮಿಯ ಮೇಲ್ಪದರಕ್ಕೆ ಹತ್ತಿರವಾಗಿರುವುದರಿಂದ ಅವು ಇರುವ ಸ್ಥಳಗಳಲ್ಲಿ ಗುರುತ್ವ ಜಾಸ್ತಿ ಇರುತ್ತದೆ. ಅದರಂತೆಯೇ ಪೆಟ್ರೋಲಿಯಮ್ ಸಂಗ್ರಹಗಳನ್ನು ಹಿಡಿದುಹಾಕಿರುವ ಕಲ್ಲುಪ್ಪಿನ ಗುಮ್ಮಟಗಳಿದ್ದಲ್ಲಿ ಭೂಮಿಯ ಮೇಲ್ಪದರಕ್ಕೆ ಕಡಿಮೆ ಸಾಂದ್ರತೆ ಇರುವ ಉಪ್ಪಿನ ಸ್ತರ ಹತ್ತಿರವಾಗಿ ಅಲ್ಲಿ ಗುರುತ್ವ ಕಡಿಮೆ ಇರುತ್ತದೆ. ಆದರೆ, ಅದರ ಪಕ್ಕದಲ್ಲಿ ದಟ್ಟವಾದ ಶಿಲಾಸ್ತರಗಳಿರುವುದರಿಂದ ಅಲ್ಲಿ ಜಾಸ್ತಿ ಆಗಿರುತ್ತದೆ. ಹೀಗೆ ಸಾಪೇಕ್ಷವಾಗಿ ಜಾಸ್ತಿ ಅಥವಾ ಕಡಿಮೆ ಆಗುವ ಗುರುತ್ವವನ್ನು ಅಳೆಯುವುದರಿಂದ ಪೆಟ್ರೋಲಿಯಮ್ ಇರಬಹುದಾದಂಥ ಶಿಲಾ ರಚನೆಯುಳ್ಳ ಪ್ರದೇಶವನ್ನು ಊಹಿಸಬಹುದು. ಗುರುತ್ವ ಬಲದ ಮೋಜಣೆಯನ್ನು ಸಾಮಾನ್ಯವಾಗಿ ವಿಮಾನದಿಂದ ಮಾಡುತ್ತಾರೆ. ಗುರುತ್ವ ಮಾಪಕವನ್ನು ವಿಮಾನದಿಂದ ತಂತಿಯ ಮೂಲಕ ಇಳಿಬಿಡುತ್ತಾರೆ; ದಾಖಲೆ ಮಾಡಿಕೊಳ್ಳುವ ಉಪಕರಣವನ್ನು ವಿಮಾನದಲ್ಲಿ ಇಡುತ್ತಾರೆ. ಈ ವಿಮಾನ ಯಾವುದೇ ಪ್ರದೇಶದ ಮೇಲೆ ಸಮೋನ್ನತಿಯಲ್ಲಿ ಹಾರಾಡುತ್ತಿದ್ದಂತೆ ಗುರುತ್ವ ಮಾಪಕದಲ್ಲಿ ಆಗುವ ಬದಲಾವಣೆಗಳನ್ನು ತೋರಿಸುವ ನಕ್ಷೆ ಸ್ವಯಮೇವ ತಯರಾಗುತ್ತಿರುತ್ತದೆ. ಇಂಥ ನಕ್ಷೆಗಳ ಸಹಾಯದಿಂದ ಡುಬರಿ, ಗುಮ್ಮಟ ಅಥವಾ ಸ್ತರಭಂಗಗಳಂಥ ಪೆಟ್ರೋಲಿಯಮ್ ಸಂಗ್ರಹ ಯೋಗ್ಯ ಸ್ಥಳಗಳನ್ನು ಅನುಭವಿ ಭೂವಿಜ್ಞಾನಿ ಪತ್ತೆ ಹಚ್ಚುತ್ತಾನೆ.

ಕಾಂತತ್ವ ಮಾಪಕ:

ಬದಲಾಯಿಸಿ
  • ಇದು ಗುರುತ್ವ ಮಾಪಕದಂಥ ಇನ್ನೊಂದು ಉಪಕರಣ. ಕಾಂತತ್ವದಲ್ಲಿರುವ ಸೂಕ್ಷ್ಮ ವ್ಯತ್ಯಾಸವನ್ನು ಇದು ಅಳೆಯುತ್ತದೆ. ಭೂಮಿಯ ಕಾಂತತ್ವ ಎಲ್ಲ ಕಡೆಗಳಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಅದು ಆಯಾ ಪ್ರದೇಶದ ಕೆಳಗೆ ಇರುವ ಶಿಲಾರಚನೆಯನ್ನು ಅವಲಂಬಿಸಿರುತ್ತದೆ. ಶಿಲಾಸ್ತರಗಳು ಕಬ್ಬಿಣದಂಥ ಖನಿಜವಸ್ತುವನ್ನು ಒಳಗೊಂದು ಭೂಮಿಯ ಮೇಲ್ಪದರಕ್ಕೆ ಹತ್ತಿರವಾಗಿದ್ದರೆ ಆ ಪ್ರದೇಶದಲ್ಲಿ ಕಾಂತಾಕರ್ಷಣೆ ಹೆಚ್ಚಿರುತ್ತದೆ. ಕಬ್ಬಿಣವುಳ್ಳ ಶಿಲೆಗಳು ಅತಿಪುರಾತನ ಶಿಲೆಗಳೆಂದು ನಂಬಲಾಗಿದೆ. ಇಂಥ ಬಲು ಹಳೆ ಖನಿಜ ಶಿಲೆಗಳ ಸ್ತರಗಳ ಮೇಲೆ ಪೆಟ್ರೋಲಿಯಮ್ ಸಹಿತವಾದ ಶಿಲೆಗಳೂ ಇವು ಮೈದಳೆದ ತರುವಾಯ ರೂಪುಗೊಂಡ ಶಿಲೆಗಳೂ ಇರುತ್ತವೆ. ಕಾಂತತ್ವ ಮಾಪಕದಿಂದ ಇಂಥ ಶಿಲೆಗಳು ಭೂಮಿಯಿಂದ ಎಷ್ಟು ಆಳದಲ್ಲಿವೆ ಮತ್ತು ಇವುಗಳ ದಪ್ಪವೆಷ್ಟು ಎಂಬುದನ್ನು ಅಳೆಯಬಹುದು. ಮತ್ತು ಸಿಗರೇಟ್ ಗಾತ್ರದ ಬಾಂಬಿನಾಕಾರದ ಕಾಂತತ್ವ ಮಾಪಕವನ್ನು ವಿಮಾನದಿಂದ ಇಳಿಬಿಟ್ಟು ಕಾಂತತ್ವದಲ್ಲಿಯ ವ್ಯತ್ಯಾಸವನ್ನು ಅಳೆಯುತ್ತಾರೆ.
  • ಕಂಪನಲೇಖ, ಭೂಕಂಪನಗಳ ತೀವ್ರತೆಯನ್ನೂ ಕಂಪನ ತರಂಗಗಳು ಭೂಮಿಯ ಮೂಲಕ ಚಲಿಸಲು ಬೇಕಾಗುವ ಕಾಲವನ್ನೂ ಅಳೆಯುವ ಉಪಕರಣವಿದು. ಅಲೆಗಳ ಒಂದು ಅಂತರವನ್ನು (ಪಾರ) ಚಲಿಸುವ ಅವಧಿಯಲ್ಲಿ ಸೆಕೆಂಡಿನ ಸಾವಿರ ಭಾಗಗಳಲ್ಲಿ ಒಂದು ಭಾಗದಷ್ಟು ಅಂತರವಿದ್ದರೂ ಅದನ್ನು ದಾಖಲಿಸುವಷ್ಟು ಇದು ಸೂಕ್ಷ್ಮವಾಗಿದೆ. ಭೂಕಂಪನದ ಅಲೆಗಳು ಬಿರುಸಾದ ಅಂತರವಿದ್ದರೂ ಬಿರುಸಾದ ಮತ್ತು ಒತ್ತಾದ ಶಿಲೆಗಳಲ್ಲಿ ಸರಂಧ್ರ ಮತ್ತು ಕಡಿಮೆ ಒತ್ತಾದ ಶಿಲೆಗಳಿಗಿಂತ ವೇಗವಾಗಿ ಚಲಿಸುತ್ತವೆ. ಈ ಗುಣಧರ್ಮವನ್ನು ಉಪಯೋಗಿಸಿ ಕೃತಿಮ ಭೂಕಂಪನವನ್ನು ಸೃಷ್ಟಿಸಿ ಕಂಪನಲೇಖದ ಸಹಾಯದಿಂದ ಪೆಟ್ರೋಲಿಯಮ್ ಅನ್ವೇಷಣೆ ಮಾಡುತ್ತಾರೆ. ಮೊದಲು ಭೂಮಿಯಲ್ಲಿ 15 ರಿಂದ 30 ಮೀಟರ್ ಆಳದಲ್ಲಿ ಒಂದು ತೂತನ್ನು ಕೊರೆಯುತ್ತಾರೆ. ಇದರಲ್ಲಿ ಸ್ಫೋಟಕ ವಸ್ತುವನ್ನು ಇಳಿಬಿಟ್ಟು ಸ್ಫೋಟಗೊಳಿಸುತ್ತಾರೆ. ಆಗ ಸಂಜನಿಸುವ ಧಕ್ಕೆಯ ಅಲೆಗಳು ಭೂಗರ್ಭಕ್ಕೆ ಅಭಿಮುಖವಾಗಿ ಹಾಯ್ದು ಅಲ್ಲಿರುವ ಶಿಲೆಗಳ ಮೇಲೆ ಅಪ್ಪಳಿಸಿ ಪ್ರತಿಫಲನಗೊಂಡು ಭೂಮಿಯ ಮೇಲ್ಮೈಯ ಕಡೆಗೆ ಪಯಣಿಸುತ್ತವೆ. ಇಂಥ ಪ್ರತಿಫಲನಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟಿರುವ ಸಲಕರಣೆಗಳಿಂದ ಸೆರೆ ಹಿಡಿಯುತ್ತಾರೆ. ಇವನ್ನು ಕೇಂದ್ರ ದಾಖಲೆ ಠಾಣೆಗೆ ಹೊರಜಿ ಮೂಲಕ ಜೋಡಿಸಿರುತ್ತಾರೆ. ಅಲೆಗಳ ವೇಗಗಳು ಅಲ್ಲಿ ದಾಖಲಾಗುತ್ತವೆ. ಇದರಲ್ಲಾದ ಮಾಹಿತಿಯಿಂದ ಧಕ್ಕೆಯ ಅಲೆಗಳು ಭೂಗರ್ಭದಲ್ಲಿಯ ಶಿಲೆಯ ಮೇಲೆ ಅಪ್ಪಳಿಸಿ ಮತ್ತೆ ಭೂಮಿಯ ಮೇಲಕ್ಕೆ ಬರಲು ಬೇಕಾದ ಕಾಲವನ್ನು ಗಣಿಸಬಹುದು. ಇದರಿಂದ ಆ ಸ್ಥಳದಲ್ಲಿರುವ ಶಿಲಾಸ್ತರಗಳ ಪ್ರಕೃತಿ ಮತ್ತು ಅವಿರುವ ಆಳವನ್ನು ಶೋಧಿಸುತ್ತಾರೆ. ಹೀಗೆ ಪೆಟ್ರೋಲಿಯಮ್ ಸಂಗ್ರಹಕ್ಕೆ ಬೇಕಾಗುವ ರಚನೆ ಭೂಗರ್ಭದಲ್ಲಿರುವುದೋ ಇಲ್ಲವೋ ಎಂದು ತಿಳಿದು ಭೂವಿಜ್ಞಾನಿ ಬಾವಿಯನ್ನು ಕೊರೆಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಾನೆ. ಈ ವಿಧಾನಗಳನ್ನು ಪ್ರತ್ಯೇಕವಾಗಿಯೂ ಹೆಚ್ಚಾಗಿ ಪೂರಕವಾಗಿಯೂ ಉಪಯೋಗಿಸಿಕೊಂಡು ಈಗ ಪೆಟ್ರೋಲಿಯಮ್ ಅನ್ವೇಷಣೆಯ ಕೆಲಸವನ್ನು ಹೆಚ್ಚು ಯಶಸ್ವಿಯಾಗಿ ಮಾಡಲು ಸಾಧ್ಯವಾಗಿದೆ.

ಕೊಳವೆ ಬಾವಿಯನ್ನು ಕೊರೆಯುವುದು:

ಬದಲಾಯಿಸಿ
  • ಪೆಟ್ರೋಲಿಯಮ್ ಅನ್ವೇಷಕರು ಬಾವಿ ಕೊರೆಯಲು ಯೋಗ್ಯ ಸ್ಥಳವನ್ನು ಗುರುತಿಸಿದ ಬಳಿಕ ಮುಂದಿನ ನಿರ್ವಹಣೆಯನ್ನು ಕೊಳವೆ ಬಾವಿ ಕೊರೆಯುವ ತಂಡದವರು ವಹಿಸಿಕೊಳ್ಳುತ್ತಾರೆ. ಆ ಸ್ಥಳದಲ್ಲಿ ವಿಶಿಷ್ಟ ರೀತಿಯ ಡೆರಿಕ್ ಎಂಬ ಹೆಸರಿನ ಅಟ್ಟಣೆಯನ್ನು ನಿರ್ಮಿಸುವುದು ಅವರ ಮೊದಲ ಕೆಲಸ. ಅಡ್ಡಪಟ್ಟಿಗಳಿರುವ ಉಕ್ಕಿನ ಗೋಪುರವಿದು. ತಳದಲ್ಲಿ 10 ಮೀ. ಚಚ್ಚೌಕ ಆಧಾರ. ಎತ್ತರ 30 ರಿಂದ 60 ಮೀ. (ಚಿತ್ರ 4). ಇದರ ಮೇಲಿನ ತುದಿಯಿಂದ ಗಟ್ಟಿಯಾದ ತಂತಿ ಹಗ್ಗದ ಮೂಲಕ ಬಾವಿ ಕೊರೆಯುವ ಉಪಕರಣವನ್ನು ಜೋತುಬಿಡುತ್ತಾರೆ. ಇದರಲ್ಲಿ 10 ಮೀ. ಉದ್ದದ ಪೊಳ್ಳಾದ ಉಕ್ಕಿನ ಕೊಳವೆಗಳು ಇವೆ. ಎಲ್ಲಕ್ಕೂ ಮೇಲಿನ ಕೊಳವೆಗೆ ಕೆಲ್ಲಿ ಎಂದು ಹೆಸರು. ಇದು ಅಷ್ಟ ಕೋನಾಕೃತಿ ಅಥವಾ ಷಟ್‍ಕೋನಾಕೃತಿಯದ್ದಾಗಿರುತ್ತದೆ. ಮೊದಲು ಈ ಕೆಲ್ಲಿಗೆ ಅಥವಾ 10 ಮೀ. ಉದ್ದದ ಕೊಳವೆಗಳನ್ನು ಜೋಡಿಸಿ ಕೊನೆಯ ಕೊಳವೆಯ ತುದಿಗೆ ಬೈರಿಗೆ ಮೂತಿಯನ್ನು ಜೋಡಿಸುತ್ತಾರೆ. ಕೊರೆಯುವ ಉಪಕರಣವನ್ನು ಮೇಲೆ ಏರಿಸಲು, ಕೆಳಗೆ ಇಳಿಸಲು ಅಥವಾ ತಿರುಗಿಸಲು ಬೇಕಾಗುವ ಶಕ್ತಿಯುತ ಯಂತ್ರ ಸಾಮಗ್ರಿಗಳೂ ಡೆರಿಕ್ಕಿನಲ್ಲಿ ಇರುತ್ತವೆ.
  • ಈ ಮೊದಲು ಕೊಳವೆಯ ತುದಿಗೆ ಬೈರಿಗೆ ಮೂತಿಯನ್ನು ಜೋಡಿಸುತ್ತಿರಲಿಲ್ಲ. ಅದರ ಬದಲಿಗೆ ಮೊನಚಾದ ಚಾಣವನ್ನು ಜೋಡಿಸಿ ಕೊರೆಯುವ ಉಪಕರಣವನ್ನು ಮೇಲೆ ಏರಿಸಿ ಮತ್ತೆ ಕೆಳಗೆ ಇಳಿಸಿ ಕುಟ್ಟುವುದರ ಮೂಲಕ ಬಾವಿಯನ್ನು ಕೊರೆಯಲಾಗುತ್ತಿತ್ತು. ಆದರೆ, ಇಂದು ಬಾವಿಯನ್ನು ಕೊರೆಯುವ ವಿಧಾನ ಬಡಿಗ ಉಳಿಯನ್ನು ದಾರದಿಂದ ತಿರುಗಿಸಿ ಮರದಲ್ಲಿ ತೂತು ಕೊರೆಯುವ ಮಾದರಿಯಲ್ಲಿದೆ. ಕೆಲ್ಲಿಯನ್ನು ವಿದ್ಯುತ್ ಮೋಟಾರ್ ಬಳಸಿ ತಿರುಗಿಸುತ್ತಾರೆ. ಇದು ತಿರುಗಿದಂತೆ ಮತ್ತೊಂದು ತುದಿಗಿರುವ ಬೈರಿಗೆ ಮೂತಿ ತಿರುಗುತ್ತದೆ. ಜೊತೆಗೆ ಭೂಮಿಯನ್ನು ಕೊರೆಯುತ್ತ ಒಳಗೆ ಇಳಿಯುತ್ತ ಹೋಗುತ್ತದೆ. ಇನ್ನೇನು ಕೆಲ್ಲಿಯ ಸ್ವಲ್ಪ ಭಾಗ ಮಾತ್ರ ಮೇಲೆ ಉಳಿದಿದೆ ಎನ್ನುವಾಗ ಇಡೀ ಉಪಕರಣವನ್ನು ಮೇಲೆ ಎತ್ತಿ ಕೆಲ್ಲಿಯಿಂದ ಉಳಿದ ಭಾಗವನ್ನು ಕೆಳಗೆ ಇಳಿಸಿ ಮಧ್ಯದಲ್ಲಿ 10 ಮೀ ಉದ್ದ ಹೊಸ ಕೊಳವೆಗಳನ್ನು ಜೋಡಿಸಿ ಮತ್ತೆ ಮೊದಲಿನಂತೆ ಬಾವಿಯನ್ನು ಕೊರೆಯಲು ಪ್ರಾರಂಭಿಸುತ್ತಾರೆ.
  • ಹೀಗೆ ಹಂತ ಹಂತವಾಗಿ ಬಾವಿ ಆಳವಾಗುತ್ತ ಹೋಗುತ್ತದೆ. ಬಾವಿಯ ಆಳ ಹೆಚ್ಚಾದಂತೆ ಕೊರೆಯುವ ಉಪಕರಣದ ಮೇಲೆ ಭಾರ ಹೆಚ್ಚುತ್ತ ಹೋಗುತ್ತದೆ. ಆದರೆ, ಈ ಎಲ್ಲ ಭಾರವನ್ನೂ ಅದೊಂದರ ಮೇಲೆಯೇ ಹಾಕದೆ, ಕೊರೆಯಬೇಕಾಗಿರುವ ಶಿಲೆಯ ಕಠಿಣತೆ ಮತ್ತು ಆಗ ಉಪಯೋಗದಲ್ಲಿರುವ ಬೈರಿಗೆ ಮೂತಿಯ ನಮೂನೆಯನ್ನು ಅವಲಂಬಿಸಿ ಎಷ್ಟು ಬೇಕೋ ಅಷ್ಟು ಭಾರವನ್ನು ಮಾತ್ರ ಅದರ ಮೇಲೆ ಹಾಕಿ ಉಳಿದ ಭಾರವನ್ನು ಡೆರಿಕ್ ಮೇಲಿರುವ ಅಡ್ಡಪಟ್ಟಿಯ ಜಾಲದ ಮೇಲೆ ಹಾಕಲಾಗುತ್ತದೆ. ಬಾವಿಯ ಆಳ ಹೆಚ್ಚಾದಂತೆ, ಒಂದರ ಹಿಂದೆ ಇನ್ನೊಂದು ಕೊಳವೆಯನ್ನು ಜೋಡಿಸುವುದರಿಂದ, ಮೊದಲು ಜೋಡಿಸಿದ ಕೊಳವೆಗಳು ಬಳಿಕ ಜೋಡಿಸುವ ಕೊಳವೆಗಳ ಭಾರವನ್ನು ಹೊರಬೇಕಾದ್ದರಿಂದ ಮಣಿಯದಂತೆ ಗಟ್ಟಿಯಾಗಿರುತ್ತವೆ.
  • ಬೈರಿಗೆ ಮೂತಿಗಳಲ್ಲಿ ಹಲವು ಪ್ರಕಾರಗಳಿವೆ. ಬಾವಿಯನ್ನು ಕೊರೆಯಲು ಪ್ರಾರಂಭಿಸಿದಾಗ 60 ಸೆಂ.ಮೀ. ವ್ಯಾಸದ ಬೈರಿಗೆ ಮೂತಿಯನ್ನು ಉಪಯೋಗಿಸಿದ್ದರೆ ಆಳ ಹೆಚ್ಚಾದಂತೆ ಅದನ್ನು ಆಗಾಗ ಬದಲಿಸುತ್ತ ಸುಮಾರು 4,570 ಮೀ. ಆಳವಿದ್ದಾಗ 1 ಸೆಂ.ಮೀ. ವ್ಯಾಸದ ಬೈರಿಗೆಯನ್ನು ಉಪಯೋಗಿಸುತ್ತಾರೆ. ಅದರಂತೆ ಮೃದು ಸ್ತರಗಳನ್ನು ಕೊರೆಯಬೇಕಾದರೆ ಮೀನು ಬಾಲದ ಆಕಾರದ ಬೈರಿಗೆ ಮೂತಿಯನ್ನು ಉಪಯೋಗಿಸಿದರೆ ಕಠಿಣ ಸ್ತರಗಳನ್ನು ಕೊರೆಯುವಾಗ ಬಿರುಸಾದ ಉಕ್ಕಿನ ಹಲ್ಲುಗಳುಳ್ಳ ಬೈರಿಗೆ ಮೂತಿಯನ್ನು ಉಪಯೋಗಿಸುತ್ತಾರೆ. ಅತ್ಯಂತ ಕಠಿಣವಾಗಿದ್ದ ಶಿಲಾ ಸ್ತರಗಳನ್ನು ಕೊರೆಯುವಾಗ ವಜ್ರಾಕೃತಿನ ಬೈರಿಗೆ ಮೂತಿಯನ್ನು ಉಪಯೋಗಿಸುತ್ತಾರೆ. ಬಾವಿಯನ್ನು ಕೊರೆಯುವಾಗ ಇನ್ನೊಂದು ಮಹತ್ತ್ವದ ಕೆಲಸವಿದೆ. ಕೊರೆತದಿಂದ ಉಂಟಾದ ಮಣ್ಣು ಹಾಗೂ ಕಲ್ಲಿನ ಚೂರುಗಳನ್ನು ಬೈರಿಗೆ ಮೂತಿಯ ಕೆಲಸಕ್ಕೆ ಅಡ್ಡಿಯಾಗದಂತೆ ಹೊರಗೆ ತೆಗೆಯುವುದು. ಈ ಕೆಲಸವನ್ನು ಮಡ್ ಮಾಡುತ್ತದೆ. ಮಡ್ ಎಂದರೆ ಭಾರವಾದ ತೈಲ ಮಿಶ್ರಣ. ಇದನ್ನು ಬೆರಿಕ್ ಮೇಲೆ ಇರುವ ಹೌದಿನಿಂದ (ಟ್ಯಾಂಕ್) ಕೊಳವೆಗಳ ಮಧ್ಯದ ಪೊಳ್ಳಿನ ಮಾರ್ಗವಾಗಿ ಬೈರಿಗೆ ಮೂತಿಯ ಕಡೆಗೆ ಜೀಕಳಿಸಲಾಗುತ್ತದೆ. ಅಲ್ಲಿಂದ ಇದು ಹೊರಬಿದ್ದು ಕೊಳವೆ ಬಾವಿ ಕೊರೆಯುವ ಉಪಕರಣದ ಹೊರಮೈ ಹಾಗೂ ಬಾವಿಯ ಗೋಡೆಯ ಮಧ್ಯದಲ್ಲಿರುವ ಜಾಗದ ಮೂಲಕ ತೂರಿ ಮತ್ತೆ ಡೆರಿಕಿಗೆ ಮೇಲೇರುತ್ತದೆ (ಚಿತ್ರ 5). ಹಾಗೆ ಬರುವಾಗ ಕಲ್ಲು ಚೂರು, ಮಣ್ಣು ಇವನ್ನು ಹೊತ್ತುಕೊಂಡು ಬರುತ್ತದೆ. ಈ ರೀತಿಯಾಗಿ ಬಂದ ಮಡ್ಡನ್ನು ಸೋಸಿ ಪುನಃ ಹೌದಿಗೆ ಒಯ್ಯುತ್ತಾರೆ. ಈ ಪರಿಚಲನೆಯಲ್ಲಿ ಮಡ್ ಬೈರಿಗೆ ಮೂತಿಯನ್ನು ತಂಪಾಗಿ ಇಡುವುದಲ್ಲದೆ ಕೀಲೆಣ್ಣೆಯಂತೆ ವರ್ತಿಸಿ ಬೈರಿಗೆ ಮೂತಿಗೆ ಚಲನ ಸೌಲಭ್ಯವನ್ನು ಕೂಡ ಉಂಟುಮಾಡುತ್ತದೆ. ಎಷ್ಟೊ ಸಾರಿ ಬೈರಿಗೆ ಮೂತಿ ಪೆಟ್ರೋಲಿಯಮ್ ನಿಕ್ಷೇಪವನ್ನು ತಲುಪಿದ ಒಡನೆ ಪೆಟ್ರೋಲಿಯಮ್ ಉಕ್ಕಿ ಮೇಲೆ ಬರುವ ರಭಸಕ್ಕೆ ಬಾವಿಯಲ್ಲಿದ್ದ ಹಲವಾರು ಮೀಟರ್ ಉದ್ದದ ಕೊಳವೆಗಳು ಆಕಾಶಕ್ಕೆ ನೆಗೆದು ಸ್ಫೋಟಗೊಂಡು ಬೆಂಕಿ ತಗಲಿ ಅನಾಹುತ ಸಂಭವಿಸಿದ್ದೂ ಉಂಟು. ಆದರೆ, ಮಡ್ ಉಪಯೋಗಿಸುವುದರಿಂದ ಅಂಥ ಆಕಸ್ಮಿಕಗಳನ್ನು ತಡೆಯಲು ಸಾಧ್ಯವಿದೆ.
  • ಒಂದು ವೇಳೆ ಆಕಸ್ಮಿಕವನ್ನು ತಪ್ಪಿಸುವುದು ಆಗದೇ ಇದ್ದಾಗ ಸ್ಫೋಟ ಆಗುವ ಮುನ್ಸೂಚನೆಯನ್ನು ಕೊಟ್ಟು ಈ ಮಡ್ ಸ್ಫೋಟವನ್ನು ನಿಯಂತ್ರಿಸಲು ಅನುಕೂಲ ಮಾಡಿಕೊಡುತ್ತದೆ. ಉದಾಹರಣೆಗೆ ಬಾಂಬೆ ಹೈನಲ್ಲಿ ಸಂಭವಿಸಿದ (1982) ಭೂಗರ್ಭ ನಿಲೋಚ್ಚಾಟನೆ (ಬ್ಲೋಔಟ್). ಬಾವಿಯನ್ನು ಕೊರೆಯುತ್ತ ಹೋದಂತೆ ಮೃದು ಸ್ತರಗಳೆದುರಾದಲ್ಲಿ, ಮಣ್ಣು ಅದರೊಳಗೆ ಬೀಳದಿರಲಿ ಎಂದೂ ನೀರು ಅದರೊಳಗೆ ಜಿನುಗದಿರಲಿ ಎಂದೂ ಬಾವಿಯಲ್ಲಿ ಲೋಹದ ಕೊಳವೆಗಳನ್ನು ಇಳಿಬಿಟ್ಟು ಅದರ ಗೋಡೆ ಹಾಗೂ ಕೊಳವೆಯ ಹೊರಮೈಗಳ ಮಧ್ಯೆ ದ್ರವಸಿಮೆಂಟನ್ನು ಹಾಕಿ ಬಾವಿಗೆ ಕವಚವನ್ನು ನಿರ್ಮಿಸಲಾಗುತ್ತದೆ. ಮಡ್ಡಿನ ಸಂಚಾರಕ್ಕೆ ಅಡ್ಡಿ ಆಗದಂತೆ ಈ ಕಾರ್ಯವನ್ನು ನಿರ್ವಹಿಸಬೇಕು. ಬಾವಿಯನ್ನು ಕೊರೆಯುವ ಕೆಲಸ ಹಗಲು ರಾತ್ರಿ ಅವ್ಯಾಹತವಾಗಿ ನಡೆಯುತ್ತದೆ. ಇದರಲ್ಲಿ ಸಾಕಷ್ಟು ವೇಳೆ ಬೈರಿಗೆ ಮೂತಿಯನ್ನು ಬದಲು ಮಾಡಲು, ಕೊಳವೆಗಳ ಉದ್ದವನ್ನು ಹೆಚ್ಚಿಸಲು ಅಥವಾ ಬಾವಿಗೆ ಕವಚವನ್ನು ಹಾಕಲು ವ್ಯಯವಾಗುತ್ತದೆ. ಇದೂ ಅಲ್ಲದೆ ಎಷ್ಟೋ ಸಾರಿ ಅನಿರೀಕ್ಷಿತವಾಗಿ ಕೆಲಸ ನಿಧಾನವಾಗುವುದೂ ಉಂಟು. ಏಕೆಂದರೆ, ಒಮ್ಮೊಮ್ಮೆ ಬಾವಿ ಕೊರೆಯುವ ಉಪಕರಣ ಬಾವಿಯಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತದೆ; ಅಥವಾ ಮುರಿದು ಹೋಗುತ್ತದೆ. ಅಂಥ ವೇಳೆ ಅಧಿಕ ತ್ರಾಣದ ವಿದ್ಯುತ್ ಕಾಂತವನ್ನು ಉಪಯೋಗಿಸಿ ಅಥವಾ ವಿಶೇಷ ಯಂತ್ರ ಸಾಮಗ್ರಿ ಬಳಸಿ ತಪ್ಪನ್ನು ಸರಿಪಡಿಸಲಾಗುತ್ತದೆ. ಈ ಯಾವ ರೀತಿಯಿಂದಲೂ ಸರಿಪಡಿಸಲಾಗದಿದ್ದರೆ ಬಾವಿಯನ್ನು ಕೊರೆಯುವ ಕೋನವನ್ನು ಸ್ವಲ್ಪ ಬದಲಾಯಿಸಿ ಅಡ್ಡಿಯಾಗಿರುವ ವಸ್ತುವನ್ನು ದಾಟಿದ ಬಳಿಕ ಮತ್ತೆ ಮೊದಲು ಗುರುತಿಸಿಕೊಂಡ ಸ್ಥಾನಕ್ಕೆ ಬರುತ್ತಾರೆ.
  • ಭೂಮಿಯಲ್ಲಿ ಪೆಟ್ರೋಲಿಯಮ್ ಸಂಗ್ರಹದ ಒತ್ತಿಗೆ ಮೇಲೆ ಬಿರುಸಾದ ಶಿಲಾಸ್ತರವಿರುತ್ತದೆ. ಇದು ಅಗ್ರ ಶಿಲೆ. ಭೂಮಿಯ ಮೇಲ್ಮೈಯಿಂದ 600 ಮೀಟರ್‍ಗಳಷ್ಟು ಹತ್ತಿರವೂ 6,100 ಮೀಟರುಗಳಷ್ಟು ದೂರವೂ ಇದು ಇರಬಹುದು. ಕೊಳವೆ ಬಾವಿಯನ್ನು ಕೊರೆಯುವ ಬೈರಿಗೆ ಮೂತಿ ಅಗ್ರಶಿಲೆಯನ್ನು ತಲುಪಿದ್ದು ಗೊತ್ತಾಗುತ್ತದೆ. ಏಕೆಂದರೆ ಆಗ ಬೈರಿಗೆಯನ್ನು ತಿರುಗಿಸುವುದು ಕಷ್ಟವಾಗುತ್ತದೆ. ಆಗಲೇ ಇನ್ನೇನು ಪೆಟ್ರೋಲಿಯಮ್ ನಿಕ್ಷೇಪ ದೊರಕಲಿದೆ ಎನ್ನುವ ಸಂಭ್ರಮ ಮತ್ತು ಕಾತರ ಡೆರಿಕ್ ಮೇಲೆ ಪ್ರಾರಂಭವಾಗುತ್ತವೆ. ಯಾವಾಗ ಈ ಬಿರುಸಾದ ಅಗ್ರಶಿಲೆಯನ್ನು ದಾಟಿ ಬೈರಿಗೆ ಮೂತಿ ಪೆಟ್ರೋಲಿಯಮ್‍ಯುಕ್ತ ಸರಂಧ್ರ (ಮರಳು) ಭೂಮಿಯಲ್ಲಿ ಹೋಗುವುದೋ ಆಗ ಮಡ್ ಮೇಲಿನ ಭಾರವನ್ನು ಸಾವಕಾಶವಾಗಿ ಕಡಿಮೆ ಮಾಡಲಾಗುವುದು. ಹಾಗೆಯೇ ಪೆಟ್ರೋಲಿಯಮ್ ಭೂಮಿಯ ಮೇಲಕ್ಕೆ ಏರಿ ಬರಬೇಕಾದರೆ ನಿಕ್ಷೇಪದಲ್ಲಿರುವ ಪೆಟ್ರೋಲಿಯಮ್ ಕೊಳವೆ ಬಾವಿಯ ಅಡಿಗೆ ಬರಬೇಕು. ಪೆಟ್ರೋಲಿಯಮ್ ತಾನಾಗಿಯೇ ಈ ಜಾಗಕ್ಕೆ ಬರಲು ಮರಳುಗಲ್ಲು ಹಾಗೂ ಅಗ್ರಶಿಲೆಯ ನಡುವೆ ಸೆರೆ ಹಿಡಿಯಲ್ಪಟ್ಟು ಅತ್ಯಧಿಕ ಒತ್ತಡದಲ್ಲಿ ಶೇಖರವಾಗಿರುವ ಅನಿಲ ಪೆಟ್ರೋಲಿಯಮ್ಮನ್ನು ತಳ್ಳುತ್ತದೆ. ಪೆಟ್ರೋಲಿಯಮ್ ನಿಕ್ಷೇಪದ ಅಡಿ ಇರುವ ಉಪ್ಪು ನೀರು ಸಹ ಇದೇ ರೀತಿ ಪೆಟ್ರೋಲಿಯಮ್ಮನ್ನು ಮೇಲಕ್ಕೆ ದಬ್ಬುತ್ತದೆ. ಇಂಥ ದಬ್ಬು ಬಲದ ಅಭಾವದಲ್ಲಿ ಪೆಟ್ರೋಲಿಯಮ್ ಕೊಳವೆ ಬಾವಿಯ ಅಡಿಗೆ ಬರದೇ ಹೋದರೆ ನಿಕ್ಷೇಪದಿಂದ ಅದನ್ನು ತೆಗೆಯಲು ಆಗುವುದಿಲ್ಲ. ಕೇವಲ ನೀರು ಅಥವಾ ಅನಿಲ ಮಾತ್ರ ಆ ಬಾವಿಯಿಂದ ಬರುತ್ತದೆ. ಹೀಗಾಗಿ ಈ ಒತ್ತಡವಿಲ್ಲದೆ ಎಷ್ಟೋ ನಿಕ್ಷೇಪಗಳಲ್ಲಿ ಮುಕ್ಕಾಲು ಭಾಗ ಪೆಟ್ರೋಲಿಯಮ್ ತೆಗೆಯಲಿಕ್ಕಾಗದೆ ಅಲ್ಲಿಯೇ ಉಳಿದುದ್ದುಂಟು. ಈಚೆಗೆ ನೀರನ್ನು ಬಾವಿಯಲ್ಲಿ ಜೀಕಳಿಸಿ ಪೆಟ್ರೋಲಿಯಮ್ಮನ್ನು ಮೇಲಕ್ಕೆ ಏರಿಸಲು ಸಾಧ್ಯವಾಗಿದೆ. ಅದು ಮೇಲಕ್ಕೆ ಬರಲು ಪ್ರಾರಂಭವಾದಾಗ ಉತ್ಪಾದನಾ ಸೆಲೆ ಎಂಬ ಮತ್ತೊಂದು ಉಪಕರಣವನ್ನು ಬಾವಿಯ ಬಾಯಿಗೆ ಜೋಡಿಸುತ್ತಾರೆ. ಇದೊಂದು ಅತಿ ಸಂಕೀರ್ಣವಾದ. ಅಲ್ಲಲ್ಲಿ ನಿಯಂತ್ರಕಗಳೂ ಹಿಡಿಕೆಗಳೂ ಜೋತುಬಿದ್ದಿರುವ ರಚನೆ. ರೂಢಿಯಲ್ಲಿ ಇದನ್ನು ಕ್ರಿಸ್‍ಮಸ್ ಟ್ರೀ ಎಂದು ಕರೆಯುತ್ತಾರೆ. ಇದು ಬಾವಿಯಿಂದ ಹೊರಬರುವ ಪೆಟ್ರೋಲಿಯಮ್ಮಿನ ಪ್ರವಾಹವನ್ನು ನಿಯಂತ್ರಿಸುತ್ತದೆ ಮತ್ತು ಅದರ ಮೊತ್ತವನ್ನು ಅಳೆಯುತ್ತದೆ.

ಕಡಲ ನಡುವೆ ಬಾವಿ ಕೊರೆಯುವುದು:

ಬದಲಾಯಿಸಿ
  • ಪೆಟ್ರೋಲಿಯಮ್ ನಿಕ್ಷೇಪ ಕಡಲಿನ ಅಡಿಯಲ್ಲಿದೆ ಎಂದು ತಿಳಿದು ಬಂದಾಗ ಅಲ್ಲಿಯೂ ಬಾವಿ ಕೊರೆಯುವುದು ಈಗ ಸಾಧ್ಯವಾಗಿದೆ. ನೀರು 60 ಮೀಟರುಗಳಿಗಿಂತ ಆಳವಾಗಿ ಇಲ್ಲವಾದಲ್ಲಿ ಅಲ್ಲಿಯೇ ಜಗಲಿ ಕಟ್ಟಿ ಅದರ ಮೇಲೆ ಡೆರಿಕ್ ರಚಿಸಿ ಕೊಳವೆ ಬಾವಿ ಕೊರೆಯುತ್ತಾರೆ. ಆಳ ಕಡಲಿನಲ್ಲಿ ಕೊಳವೆ ಬಾವಿ ಕೊರೆಯಬೇಕಾದರೆ ತೇಲು ನೌಕೆಯನ್ನು ಬಳಸುತ್ತಾರೆ. ವಿದ್ಯುತ್ ಮೋಟಾರ್ ಹಾಗೂ ಬೀಳ್ಗುಂಡುಗಳನ್ನು ಬಳಸಿ ಈ ನೌಕೆ ಸಮುದ್ರದಲ್ಲಿ ಒಂದೇ ಎಡೆ ನಿಲ್ಲುವಂತೆ ಮಾಡುತ್ತಾರೆ. ಬಾವಿಯನ್ನು ಕೊರೆಯುವ ತಂಡ ಈ ಜಗಲಿ ಅಥವಾ ನೌಕೆಯ ಮೇಲೆ ಉಳಿಯುತ್ತದೆ. ತಂಡಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೆಲಿಕಾಪ್ಟರಿನಿಂದ ಒದಗಿಸಲಾಗುತ್ತದೆ.
  • ಕೊಳವೆ ಬಾವಿಯನ್ನು ಕೊರೆಯುವಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅಂಥವುಗಳ ಪೈಕಿ ಹೊಸ ಪ್ರಯೋಗ ಅಂದರೆ ಕೆಲ್ಲಿಯನ್ನು ತಿರುಗಿಸಿ ಬೈರಿಗೆ ಮೂತಿಯನ್ನು ತಿರುಗಿಸದೇ ಬೈರಿಗೆ ಮೂತಿಯನ್ನು ವಿದ್ಯುತ್ ಮೋಟರಿಗೆ ಜೋಡಿಸಿ ಮೋಟರನ್ನು ಹೊರಜಿ ಮೂಲಕ ಬಾವಿಯೊಳಗೆ ಇಳಿಬಿಟ್ಟು ಬಾವಿಯನ್ನು ಕೊರೆಯುವುದು. ಇದು ಈಗ ಕೆಲವು ಕಡೆ ಯಶಸ್ವಿಯಾಗಿದೆ.

ಸಂಗ್ರಹಣೆ ಹಾಗೂ ಸಾರಿಗೆ ವ್ಯವಸ್ಥೆ:

ಬದಲಾಯಿಸಿ
  • ಪೆಟ್ರೋಲಿಯಮ್ಮಿನಲ್ಲಿ ನೈಸರ್ಗಿಕ ಅನಿಲ ವಿವಿಧ ಗಾತ್ರಗಳಲ್ಲಿ ವಿಲೀನವಾಗಿರುವುದರಿಂದ ಅದು ಉತ್ಪಾದನ ಸೆಲೆಯಿಂದ ಹೊರಗೆ ಬರುವಾಗ ನೊರೆಯಂತೆ ಬರುತ್ತದೆ. ಅದನ್ನು ಒಮ್ಮೆಲೆ ಭೂಮಿಯ ಮೇಲೆ ವಾತಾವರಣಕ್ಕೆ ಒಡ್ಡಿದರೆ ಅದು ಬಲು ಬಿರುಸಿನಿಂದ ಹೊರಹೊಮ್ಮಿ ಅದರಲ್ಲಿರುವ ಪೆಟ್ರೋಲಿಯಮ್ ತುಂತುರು ಹನಿಗಳಾಗಿ ಹರಡಿ ಗಣನೀಯ ಮೊತ್ತದಲ್ಲಿ ನಷ್ಟವಾಗುತ್ತದೆ. ಹಾಗೆ ಆಗಬಾರದೆಂದು ಮೊದಲು ಈ ನೊರೆಯಂತಿರುವ ಪೆಟ್ರೋಲಿಯಮ್ಮನ್ನು 5 ಸೆಂ.ಮೀ. ಕೊಳವೆ ಮಾರ್ಗವಾಗಿ ಅನಿಲ ವಿಯೋಜಕಕ್ಕೆ (ಗ್ಯಾಸ್ ಸೆಪರೇಟರ್) ಒಯ್ಯುತ್ತಾರೆ. ಅಲ್ಲಿ ನೊರೆಯ ಮೇಲಿರುವ ಒತ್ತಡವನ್ನು ನಿಯಂತ್ರಿಸಿ ಪೆಟ್ರೋಲಿಯಮ್ಮನ್ನು ಅನಿಲದಿಂದ ಬೇರ್ಪಡಿಸುತ್ತಾರೆ. ಅಲ್ಲಿಂದ ಬೇರ್ಪಡಿಸಲಾದ ಅನಿಲವನ್ನು ಹಿಂದಿನ ದಿನಗಳಲ್ಲಿ ಸುಟ್ಟು ಹಾಕುತ್ತಿದ್ದರು. ಈಗ ಹಾಗೆ ಮಾಡುವುದಿಲ್ಲ. ಅದನ್ನು ಔದ್ಯೋಗಿಕ ಕೇಂದ್ರಗಳಿಗೆ ಕೊಳವೆಗಳ ಮೂಲಕ ಉರುವಲಾಗಿ ರವಾನಿಸುತ್ತಾರೆ. ಮತ್ತೆ ಕೆಲವು ಸಾರಿ ಅದನ್ನು ದ್ರವೀಕರಿಸಿ ಉರುಳೆಗಳಲ್ಲಿ ಸಂಗ್ರಹಿಸುತ್ತಾರೆ. ಇದೇ ಗೃಹೋಪಯೋಗಿ ಅನಿಲೇಂಧನ. ತೈಲ ಕ್ಷೇತ್ರದಲ್ಲಿರುವ ಎಲ್ಲ ಅನಿಲ ವಿಯೋಜಕಗಳಿಂದ ಬಂದ ಪೆಟ್ರೋಲಿಯಮ್ಮನ್ನು ದೊಡ್ಡ ದೊಡ್ಡ ಹೌದುಗಳಲ್ಲಿ ಸಂಗ್ರಹಿಸುತ್ತಾರೆ. ಇವುಗಳಿಂದ ಸಂಸ್ಕರಣ ಸ್ಥಾವರಕ್ಕಾಗಲಿ ಬೇರೆ ಪ್ರದೇಶಕ್ಕಾಗಲಿ ಪೆಟ್ರೋಲಿಯಮ್ಮನ್ನು ಸಾಗಿಸಲಾಗುವುದು.
  • ಪೆಟ್ರೋಲಿಯಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಮಾನ್ಯವಾಗಿ ಕೊಳವೆಗಳ ಮೂಲಕ ಸಾಗಿಸುವುದು ಕ್ರಮ. ಅದೇ ಎಲ್ಲಕ್ಕೂ ಹೆಚ್ಚು ಮಿತವ್ಯಯಕಾರಿಯಾದದ್ದು. ಇಲ್ಲಿ ಉಪಯೋಗಿಸುವ ಕೊಳವೆಗಳ ಗಾತ್ರ ಒಂದೇ ತೆರನಾಗಿರುವುದಿಲ್ಲ. 5 ಸೆಂ.ಮೀ. ನಿಂದ 120 ಸೆಂ.ಮೀ. ವ್ಯಾಸವುಳ್ಳ ಕೊಳವೆಗಳನ್ನು ಉಪಯೋಗಿಸುತ್ತಾರೆ. ಈ ಕೊಳವೆಗಳು 10 ಮೀ. ಉದ್ದದವು. ಇವನ್ನು ಒಂದರಲ್ಲಿ ಒಂದರಂತೆ ಜೋಡಿಸಿ ಬೆಸೆದು ಸಾಲಾಗಿ ಜೋಡಿಸಿ ಸಾಮಾನ್ಯವಾಗಿ ನೆಲದೊಳಗೆ ಹುಗಿಯುತ್ತಾರೆ. ಜಂಗು ತಿನ್ನಬಾರದೆಂದು ಇವುಗಳಿಗೆ ಅಸ್ಪಾಲ್ಟಿನ ರಕ್ಷಾಕವಚವನ್ನು ಲೇಪಿಸುತ್ತಾರೆ. ಕೊಳವೆಗಳ ಸಾಲು ಸಾವಿರಾರು ಕಿಲೋಮೀಟರುಗಳಷ್ಟು ಉದ್ದವಾಗಿರುವುದೂ ಉಂಟು. ಭಾರತದಲ್ಲಿಯೇ 1224 ಕಿಲೋಮೀಟರ್ ಉದ್ದದ ಕೊಳವೆ ಸಾಲು ಇದೆ. ಕಚ್ ಆಖಾತದಲ್ಲಿ ಆಮದು ಮಾಡಿಕೊಂಡ ಪೆಟ್ರೊಲಿಯಮ್ಮನ್ನು ಇದು ಮಥುರೆಯಲ್ಲಿರುವ ಸಂಸ್ಕರಣ ಸ್ಥಾವರಕ್ಕೆ ಸಾಗಿಸುತ್ತದೆ. ಕೊಳವೆ ಸಾಲುಗಳನ್ನು ಹಾಕಲು ಸಾಧ್ಯವಿಲ್ಲದಲ್ಲಿ ಮತ್ತು ಸಾಗರೋತ್ತರ ಸಾರಿಗೆ ಮಾಡಬೇಕಾದಲ್ಲಿ ವಿಶೇಷವಾಗಿ ರಚಿಸಿದ ಬೃಹತ್ ಹೌದುಗಳನ್ನು ಬಳಸುತ್ತಾರೆ.

ಪೆಟ್ರೋಲಿಯಮ್ ಸಂಸ್ಕರಣೆ

ಬದಲಾಯಿಸಿ

ಬಾವಿಯಿಂದ ದೊರೆತ ನೈಸರ್ಗಿಕ ಪೆಟ್ರೋಲಿಯಮ್ಮಿಗೆ ಕಚ್ಚಾ ಎಣ್ಣೆ ಎಂದು ಹೆಸರು. ಇದು ನಾನಾ ಹೈಡ್ರೋಕಾರ್ಬನ್ನುಗಳ ಮಿಶ್ರಣ. ಇದನ್ನು ನೇರವಾಗಿ ಯಾವ ಕೆಲಸಕ್ಕೂ ಉಪಯೋಗಿಸಲು ಆಗುವುದಿಲ್ಲ. ಉಪಯುಕ್ತ ವಸ್ತುಗಳಾದ ಪೆಟ್ರೋಲ್, ಸೀಮೆಎಣ್ಣೆ, ಡೀಸೆಲ್ ಎಣ್ಣೆ, ಕೀಲೆಣ್ಣೆ ಮುಂತಾದ ಉತ್ಪನ್ನಗಳನ್ನು (ಅಂಶಗಳನ್ನು) ಪೆಟ್ರೋಲಿಯಮ್ಮಿನಿಂದ ತಯಾರಿಸುವ ವಿಧಾನಕ್ಕೆ ಪೆಟ್ರೋಲಿಯಮ್ ಸಂಸ್ಕರಣೆ ಎಂದು ಹೆಸರು. ಇದರಲ್ಲಿ ಮುಖ್ಯವಾಗಿ ಎರಡು ಹಂತಗಳುಂಟು. ಮೊದಲು ಉತ್ಪನ್ನಗಳ ಬೇರ್ಪಡೆ, ಅನಂತರ ಅವುಗಳ ಶುದ್ಧೀಕರಣ. ಪೆಟ್ರೋಲಿಯಮ್ಮಿನ ಉತ್ಪನ್ನಗಳನ್ನು ಎರಡು ರೀತಿಯಲ್ಲಿ ದೊರಕಿಸಿಕೊಳ್ಳಬಹುದು. ಒಂದು ನೇರವಾಗಿ ಪೆಟ್ರೋಲಿಯಮ್ಮಿನಿಂದ ಪಡೆಯುವುದು. ಇದು ಆಂಶಿಕ ಆಸವನ ಅಥವ ಆಂಶಿಕ ಬಟ್ಟೀಕರಣ. ಕಡಿಮೆ ಬೆಲೆಯ ಮತ್ತು ಸಮೃದ್ಧಿಯಾಗಿರುವ ಪೆಟ್ರೋಲಿಯಮ್ ಉತ್ಪನ್ನಗಳಿಂದ ಬೆಲೆಯುಳ್ಳ ಹಾಗೂ ಬೇಡಿಕೆಯಲ್ಲಿರುವ ಉತ್ಪನ್ನಗಳನ್ನು ತಯಾರಿಸುವುದು. ಇದು ಆಣವಿಕ ರಚನೆ ಬದಲಾವಣೆ.

ಆಂಶಿಕಾಸವನ:

ಬದಲಾಯಿಸಿ
  • ಪೆಟ್ರೋಲಿಯಮ್ ಎಂಬುದು ವಿವಿಧ ಅಣುತೂಕಗಳೂ ರಾಸಾಯನಿಕ ರಚನೆಗಳೂ ಇರುವ ಹೈಡ್ರೋಕಾರ್ಬನ್ನುಗಳ ಮಿಶ್ರಣ. ಹೈಡ್ರೋಕಾರ್ಬನ್ನುಗಳೆಂದರೆ ಕೇವಲ ಹೈಡ್ರೋಜನ್ ಮತ್ತು ಇಂಗಾಲ ಪರಮಾಣುಗಳಿರುವ ಕಾರ್ಬನಿಕ ಸಂಯುಕ್ತಗಳು. ಇವುಗಳ ಕುದಿಬಿಂದುಗಳು ಬೇರೆ ಬೇರೆ. ಇವನ್ನು ಅಣುತೂಕಗಳಿಗೆ ಅನುಗುಣವಾಗಿ ಏರಿಕೆಯ ಕ್ರಮದಲ್ಲಿ ಜೋಡಿಸಿದಾಗ ಎರಡು ಅನುಕ್ರಮ ಹೈಡ್ರೋಕಾರ್ಬನ್ನುಗಳ ಕುದಿಬಿಂದುಗಳಲ್ಲಿ ಅಂತರ ಬಲು ಕಡಿಮೆ ಇರುವುದು ಕಂಡು ಬರುತ್ತದೆ. ಕೆಲವು ಸಾರಿ ಈ ಅಂತರ 10ಅ ಉಷ್ಣತೆಗಿಂತ ಕಡಿಮೆ ಇರುವುದೂ ಉಂಟು. ಹೀಗಾಗಿ ಇವನ್ನು ಸಾಮಾನ್ಯ ಬಟ್ಟೀಕರಣದಿಂದ ಬೇರ್ಪಡಿಸುವುದು ಅಸಾಧ್ಯ. ಸದ್ಯ ಬಳಕೆಯಲ್ಲಿರುವ ಪೆಟ್ರೋಲಿಯಮ್ಮಿನ ಉಪಯುಕ್ತ ವಸ್ತುಗಳು ಒಂದೊಂದೇ ಘಟಕಗಳಾಗಿರದೇ ಅವು ಸಹ ಮಿಶ್ರಣಗಳಾಗಿವೆ. ಎಂದೇ ಅವು ಶುದ್ಧ ವಸ್ತುಗಳಾಗಿರಬೇಕಾದ ಅಗತ್ಯ ಇಲ್ಲ. ಹೀಗಾಗಿ ಕೇವಲ ಸಮೀಪ ಕುದಿಬಿಂದುಗಳಿರುವ ವಸ್ತುಗಳ ಮಿಶ್ರಣವನ್ನು ಪಡೆಯುವುದು ವಾಡಿಕೆ. ಉದಾಹರಣೆಗೆ

ಪೆಟ್ರೋಲ್ .... 250-1500 ಅ
ಕಲ್ಲೆಣ್ಣೆ .... 1500-2300 ಅ
ಡೀಸೆಲ್ ಎಣ್ಣೆ .... 2300-3400ಅ
ಇಂಧನ ಎಣ್ಣೆ .... 3400ಅ ಗಿಂತ ಹೆಚ್ಚು

  • ಆದ್ದರಿಂದ ಪೆಟ್ರೋಲಿಯಮ್ಮಿನ ಆಂಶಿಕಾಸವನ (ಬಟ್ಟೀಕರಣ) ಮಾಡಿ ನಿರ್ದಿಷ್ಟ ಉಷ್ಣತೆಗಳ ಮಿತಿಗಳಲ್ಲಿ ಇಚ್ಛಿತ ಉತ್ಪನ್ನಗಳನ್ನು ಬೇರ್ಪಡಿಸಬಹುದು.
  • ಆಂಶಿಕಾಸವನವನ್ನು ಉರುಳೆ ಆಕೃತಿಯ ಬೃಹತ್ ಲೋಹ ಗೋಪುರಗಳಲ್ಲಿ ಮಾಡುತ್ತಾರೆ. ಇವುಗಳ ಎತ್ತರ 30-45 ಮೀ. ವ್ಯಾಸ 9-12 ಮೀ. ಇವುಗಳಲ್ಲಿ 30-40 ಆಂಶಿಕ ತಟ್ಟೆಗಳು ಸಮದೂರಗಳಲ್ಲಿರುತ್ತವೆ. ತಟ್ಟೆಗಳಿಗೆ ತೂತುಗಳಿದ್ದು ಅವುಗಳ ಮೇಲೆ ತಲೆ ಕೆಳಗಾದ ಬಟ್ಟಲಿನಂತಿರುವ ಮುಚ್ಚಳಗಳಿರುತ್ತವೆ. ಇವು ತೂತುಗಳನ್ನು ಭಾಗಶಃ ಮುಚ್ಚುತ್ತವೆ. ಆಂಶಿಕಾಸವನದ ಕ್ರಮದಲ್ಲಿ ಅನಿಲ ಕೆಳಗಿನಿಂದ ಮೇಲಕ್ಕೆ ಹೋಗುತ್ತದೆ; ಮತ್ತು ಹಾಗೆ ಹೋದಂತೆ ತಣಿದು ದ್ರವವಾಗಿ ಮರಳುತ್ತದೆ. ಮುಚ್ಚಳಗಳು ಅನಿಲವನ್ನು ಮೇಲೆ ಹೋಗಲೂ ದ್ರವವನ್ನು ಕೆಳಗೆ ಇಳಿಯಲೂ ಬಿಡುತ್ತವೆ. ಮೊದಲು ಕಚ್ಚಾ ಎಣ್ಣೆಯನ್ನು 3200ಅ ಉಷ್ಣತೆಯಲ್ಲಿ ಕಾಸುತ್ತಾರೆ. ಆಗ ಅದರ ಸ್ವಲ್ಪ ಭಾಗ ಆವಿಯಾಗುತ್ತದೆ. ಉಳಿದದ್ದು ದ್ರವರೂಪದಲ್ಲಿರುತ್ತದೆ. ಇವೆರಡನ್ನೂ ಒಟ್ಟಾಗಿ ಅಡಿಯಲ್ಲಿರುವ ಕೊಳವೆಯ ಮೂಲಕ ಆಂಶಿಕ ಬಟ್ಟೀಕರಣದ ಗೋಪುರದಲ್ಲಿ ಸಾಗಿಸುತ್ತಾರೆ. ಆಗ ಆವಿಯಾದ ಪೆಟ್ರೋಲಿಯಮ್ ಮೇಲೆ ಏರುತ್ತ ಹೋಗಿ ಗೋಪುರದ ತುದಿಯಲ್ಲಿರುವ ಸಂಘನಿತ್ರದಲ್ಲಿ (ಕಂಡೆನ್ಸರ್) ದ್ರವಿಸುತ್ತದೆ. ಅನಿಲದ ಕೆಲವು ಭಾಗ ದ್ರವವಾಗದೆ ಸಂಘನಿತ್ರದಿಂದ ಪಾರಾಗಿ ಹೋಗುತ್ತದೆ. ಇದರಲ್ಲಿ ಬಹುತೇಕ ಪ್ರೊಪೇನ್ ಮತ್ತು ಬ್ಯುಟೇನ್ ಅನಿಲಗಳಿರುತ್ತವೆ. ಪಾರಾಗಿ ಬಂದ ಅನಿಲವನ್ನು ಸ್ಥಾವರದಲ್ಲಿ ಇಂಧನಕ್ಕಾಗಿ ಉಪಯೋಗಿಸಲಾಗುತ್ತದೆ. ಅಂಶಿಕ ಬಟ್ಟೀಕರಣವನ್ನು ಸಾಮಾನ್ಯವಾಗಿ ವಾತಾವರಣದ ಒತ್ತಡದಲ್ಲಿ ಮಾಡುತ್ತಾರೆ. ಆದರೆ ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ವ್ಯವಸ್ಥೆ ಇರುತ್ತದೆ.
  • ಸಂಘನಿತ್ರದಲ್ಲಾದ ದ್ರವದ ಕೆಲಭಾಗವನ್ನು ಈಗ ಗೋಪುರದ ಮೇಲಿಂದ ಮರಳಿ ಕೆಳಗೆ ಜೀಕಳಿಸುತ್ತಾರೆ. ಆಗ ಅದು ಆಂಶಿಕ ತಟ್ಟೆಗಳ ಮೇಲೆ ಬಿದ್ದು ಅಲ್ಲಿರುವ ತೂತುಗಳ ಮೂಲಕ ಕೆಳಗೆ ಇಳಿಯುತ್ತ ಹೋಗುತ್ತದೆ. ಈ ರೀತಿ ಮಾಡುವಾಗ ಅದು ಮೇಲೆ ಏರಿ ಬರುತ್ತಿರುವ ಬಿಸಿ ಆವಿಯನ್ನು ಸಂಧಿಸುತ್ತದೆ. ಆವಿಯಲ್ಲಿರುವ ಭಾರ ಹೈಡ್ರೋಕಾರ್ಬನ್ನುಗಳನ್ನು ಆಗ ದ್ರವ ಹೀರಿಕೊಳ್ಳುತ್ತದೆ ಮತ್ತು ಬದಲಾಗಿ ತನ್ನಲ್ಲಿರುವ ಹಗುರ ಹೈಡ್ರೋಕಾರ್ಬನ್ನುಗಳನ್ನು ಆವಿಯಾಗಿ ಹೊರಕ್ಕೆ ಬಿಡುತ್ತದೆ. ಈ ರೀತಿ ಪ್ರತಿ ಆಂಶಿಕ ತಟ್ಟೆಯಲ್ಲಿ ಭಾರ ಹೈಡ್ರೋಕಾರ್ಬನ್ನುಗಳ ದ್ರವೀಭವನ ಮತ್ತು ಹಗುರ ಹೈಡ್ರೋಕಾರ್ಬನ್ನುಗಳ ಬಾಷ್ಟೀಭವನ ಆಗುತ್ತಲೇ ಇರುತ್ತದೆ. ಈ ಕ್ರಿಯೆ ಕೊನೆಗೆ ಸಮತೋಲನಕ್ಕೆ ಬಂದು ನಿಲ್ಲುತ್ತದೆ. ಹಾಗೆ ಆದಾಗ ಇಡೀ ಗೋಪುರದ ಉದ್ದಕ್ಕೂ ಉಷ್ಣತೆ ಹಾಗೂ ಗುಣಧರ್ಮಗಳ ಶ್ರೇಣಿಯೇ ಉಂಟಾಗುತ್ತದೆ. ಆಗ ತುತ್ತತುದಿಯಲ್ಲಿ ಪೆಟ್ರೋಲಿನಂಥ ಹಗುರ ಹೈಡ್ರೋಕಾರ್ಬನ್ನುಗಳ ಕೆಳಗೆ ಇಂಧನ ತೈಲದಂಥ ಭಾರ ಹೈಡ್ರೋಕಾರ್ಬನ್ನುಗಳು ಶೀತಲಗೊಳ್ಳುತ್ತವೆ. ಇವನ್ನು ಗೋಪುರದಲ್ಲಿ ಅಲ್ಲಲ್ಲಿ ಜೋಡಿಸಿರುವ ಕೊಳವೆಗಳ ಮೂಲಕ ಹೊರಗೆ ತೆಗೆಯುತ್ತಾರೆ.
  • ಗೋಪುರಕ್ಕೆ ಬಂದು ಆವಿಯಾಗದೇ ಇರುವ ದ್ರವ ಗೋಪುರದ ಕೆಳಗಿನ ಭಾಗದಲ್ಲಿರುವ ತಟ್ಟೆಗಳ ಗುಂಟ ಕೆಳಗೆ ಹರಿಯುತ್ತದೆ. ಇವುಗಳಿಗೆ ಕಳಚುತಟ್ಟೆಗಳು ಎಂದು ಹೆಸರು. ಏಕೆಂದರೆ ದ್ರವದಲ್ಲಿ ಇನ್ನೂ ಉಳಿದಿರಬಹುದಾದಂಥ ಹಾಗೂ ಆವಿಯಾಗಬಲ್ಲಂಥ ಹೈಡ್ರೋಕಾರ್ಬನ್ನುಗಳೂ ಇಲ್ಲಿ ಆವಿಯಾಗಿ ಹೋಗುತ್ತವೆ. ಎಲ್ಲ ಕಳಚುತಟ್ಟೆಗಳಿಂದ ಇಳಿದುಬಂದ ತೈಲಕ್ಕೆ ಉಳಿಕೆತೈಲ ಎಂದು ಹೆಸರು. ಗೋಪುರದ ಅಡಿಯಲ್ಲಿರುವ ಕೊಳವೆಯ ಮೂಲಕ ಇದನ್ನು ಹೊರತೆಗೆದೆ ಕೀಲೆಣ್ಣೆ, ಮತ್ತು ಬಿಟ್ಯುಮೆನ್ ತಯಾರಿಕೆಗೆ ಹಾಗೂ ಪೆಟ್ರೋಲಿಯಮ್ ವಿಭಜನೆಗೆ ಉಪಯೋಗಿಸುತ್ತಾರೆ.
  • ಆಂಶಿಕಾಸವನವನ್ನು ಹೆಚ್ಚು ನಿಖರಗೊಳಿಸಲು ಬೃಹತ್ ಗೋಪುರದಲ್ಲಿ ಪ್ರತಿಯೊಂದು ಉಷ್ಣತೆಯ ಮಿತಿಯಲ್ಲಿಯೂ ದೊರೆತ ಅಂಶವನ್ನು ಮತ್ತೆ ಚಿಕ್ಕ ಚಿಕ್ಕ ಆಂಶಿಕ ಬಟ್ಟೀಕರಣ ಗೋಪುರಗಳಿಗೆ ಸಾಗಿಸುತ್ತಾರೆ. ಇಲ್ಲಿಯೂ ಮೇಲೆ ವಿವರಿಸಿದಂತೆ ಆಂಶಿಕ ಬಟ್ಟೀಕರಣ ಮಾಡಿ ಆ ಅಂಶಕ್ಕೆ ಸಂಬಂಧಪಟ್ಟಿರದ ಹೈಡ್ರೋಕಾರ್ಬನ್ನುಗಳನ್ನು ಸಂಪೂರ್ಣವಾಗಿ ಬೇರ್ಪಡಿಸುತ್ತಾರೆ. ಈ ಚಿಕ್ಕ ಆಂಶಿಕ ಬಟ್ಟೀಕರಣದ ಗೋಪುರಗಳಲ್ಲಿ ಇಚ್ಛಿತ ಅಂಶಗಳಿಗೆ ಸಂಬಂಧಪಟ್ಟ ಹೈಡ್ರೋಕಾರ್ಬನ್ನುಗಳಿಗಿಂತ ಸ್ವಲ್ಪ ಮಾತ್ರ ಭಾರವಾದ ಅಥವಾ ಹಗುರವಾದ ಹೈಡ್ರೋಕಾರ್ಬನ್ನುಗಳನ್ನು ಬೇರ್ಪಡಿಸುವುದರಿಂದ ಈ ವಿಧಾನಕ್ಕೆ ತುದಿಬಾಲ ಛೇದನ (ಟಾಪಿಂಗ್ ಆಂಡ್ ಟೇಲಿಂಗ್) ಎಂಬ ಹೆಸರಿದೆ. ಆಂಶಿಕ ಬಟ್ಟೀಕರಣವನ್ನು ಕೆಲವು ಸಾರಿ ಬಹಳ ದೊಡ್ಡ ಗೋಪುರದಲ್ಲಿ ಮಾಡುತ್ತಾರೆ. ಆ ಗೋಪುರದಲ್ಲಿ ನೂರು ಅಥವಾ ನೂರಕ್ಕಿಂತ ಹೆಚ್ಚು ಆಂಶಿಕ ತಟ್ಟೆಗಳನ್ನು ಉಪಯೋಗಿಸುತ್ತಾರೆ. ಮತ್ತು ಗೋಪುರದ ತುದಿಯ ಸಂಘನಿತ್ರದಲ್ಲಾದ ದ್ರವದಲ್ಲಿ ಹೆಚ್ಚಿನ ಭಾಗವನ್ನು ತಟ್ಟೆಗಳ ಗುಂಟ ಕೆಳಗೆ ಹರಿಯಲು ಬಿಡುತ್ತಾರೆ. ಇದರಿಂದ ಆಂಶೀಕರಣ ಬಹಳ ಪರಿಣಾಮಕಾರಿ ಆಗುತ್ತದೆ. ಈ ವಿಧಾನದಿಂದ ಹೆಚ್ಚು ಕಡಿಮೆ ಎರಡು ಅಥವಾ ಮೂರು ಮಾತ್ರ ಹೈಡ್ರೋಕಾರ್ಬನ್ ಸದಸ್ಯಗಳಿರುವ ಅಂಶವನ್ನು ಬೇರ್ಪಡಿಸಬಹುದು. ಕೆಲವು ಸಾರಿ ಒಂದೇ ಸದಸ್ಯ ಹೈಡ್ರೋಕಾರ್ಬನ್ನನ್ನು ಸಹ ಬೇರ್ಪಡಿಸಬಹುದು. ಇದಕ್ಕೆ ಉಪರಿಷ್ಠ ಆಂಶೀಕರಣ (ಸೂಪರ್ ಫ್ರ್ಯಾಕ್ಷನಲೈಸೇಷನ್) ಎಂದು ಹೆಸರು. ವಿಮಾನ ಉಡಾವಣೆಗೆ ಬೇಕಾಗುವ ಐಸೊಪೆಂಟೇನನ್ನು ಈ ವಿಧಾನದಿಂದ ತಯಾರಿಸುತ್ತಾರೆ. ಐಸೊಪೆಕ್ಸೇನ್ ಹಾಗೂ ಐಸೊಹೆಪ್ಟೇನಗಳನ್ನೂ ಈ ರೀತಿ ತಯಾರಿಸಬಹುದು. ಈ ಸಂಯುಕ್ತಗಳಿಗೆ ಹೆಚ್ಚಿನ ಆಕ್ಟೇನ್ ಸಂಖ್ಯೆ ಇದೆ.
  • ಆಂಶಿಕ ಬಟ್ಟೀಕರಣ ಮೇಲೆ ಹೇಳಿದ ಒಂದೇ ರೀತಿಯದಲ್ಲ. ಇದರ ಒಂದು ಮಾರ್ಪಾಡಿನಲ್ಲಿ ಉಳಿಕೆ ಎಣ್ಣೆಯಿಂದ ವಿವಿಧ ಶ್ರೇಣಿಯ ಕೀಲೆಣ್ಣೆಗಳನ್ನು ಬೇರ್ಪಡಿಸಲು ಆಂಶಿಕ ಬಟ್ಟೀಕರಣವನ್ನು ವಾತಾವರಣದ ಒತ್ತಡಕ್ಕಿಂತ ಕಡಿಮೆ ಒತ್ತಡದಲ್ಲಿ ಮಾಡುತ್ತಾರೆ. ಸಾಮಾನ್ಯ ವಾತಾವರಣದ ಒತ್ತಡದಲ್ಲಿ 6000ಅ ಯಷ್ಟು ಹೆಚ್ಚಿನ ಉಷ್ಣತೆಯಲ್ಲಿ ಕುದಿಯುವ ಉಳಿಕೆ ಎಣ್ಣೆಯನ್ನು ಕಡಿಮೆ ಒತ್ತಡವನ್ನು ಉಪಯೋಗಿಸಿ 4000ಅ ಉಷ್ಣತೆಯಲ್ಲಿಯೇ ಕುದಿಸಿ ಆಂಶಿಕ ಬಟ್ಟೀಕರಣ ಮಾಡುತ್ತಾರೆ. 6000ಅ ಉಷ್ಣತೆಗೆ ಕಾಸಿದರೆ ಉಳಿಕೆ ಎಣ್ಣೆಯಲ್ಲಿಯ ದೊಡ್ಡ ದೊಡ್ಡ ಅಣುಗಳು ಮುರಿದು ಕೀಲೆಣ್ಣೆಯಾಗಿ ಅದಕ್ಕಿರುತ್ತಿದ್ದ ಗುಣಗಳು ಹಾಳಾಗಿರುತ್ತಿದ್ದವು. ಈ ಕ್ರಮದಲ್ಲಿ ಮತ್ತೆ ಉಳಿಯುವ ಪದಾರ್ಥವನ್ನು ಬಿಟ್ಯುಮೆನ್ ಎಂದು ಕರೆಯುತ್ತಾರೆ. ಕೆಲವು ಸಾರಿ ಇದಕ್ಕೆ ವಿರುದ್ಧವಾಗಿ ಬಲು ಕಡಿಮೆ ಉಷ್ಣತೆಯಲ್ಲಿ ದ್ರವವಾಗುವ ಬ್ಯೂಟೇನಿನಂಥ ಅನಿಲಗಳನ್ನು ಅಧಿಕ ಒತ್ತಡ ಹಾಗೂ ಹೆಚ್ಚಿನ ಉಷ್ಣತೆಯಲ್ಲಿ ದ್ರವೀಕರಿಸಿ ಆಂಶೀಕರಣದಿಂದ ಹಲವಾರು ಅಂಶಗಳನ್ನು ಬೇರ್ಪಡಿಸುತ್ತಾರೆ.

ಆಣವಿಕ ರಚನೆ ಬದಲಾವಣೆ:

ಬದಲಾಯಿಸಿ
  • ಆಂಶಿಕ ಬಟ್ಟೀಕರಣ ವಿಧಾನದಿಂದ ಪೆಟ್ರೋಲಿಯಮ್ಮನ್ನು ಸಂಸ್ಕರಿಸಿದಾಗ ದೊರೆಯುವ ಪೆಟ್ರೋಲಿನ ಮೊತ್ತ ಕೇವಲ ಐದರಲ್ಲಿ ಒಂದು ಭಾಗ. ಬೆಲೆಯುಳ್ಳ ವಸ್ತುವಾದ ಪೆಟ್ರೋಲಿನ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವ ಈ ಕಾಲದಲ್ಲಿ ಹೆಚ್ಚು ಪೆಟ್ರೋಲ್ ಬೇಕಾದರೆ ಹೆಚ್ಚು ಹೆಚ್ಚಾಗಿ ಬಾವಿಗಳನ್ನು ಕೊರೆದು ಅವುಗಳಿಂದ ಬರುವ ಪೆಟ್ರೋಲಿಯಮ್ಮನ್ನು ಸಂಸ್ಕರಿಸಿ ಪೆಟ್ರೋಲನ್ನು ದೊರಕಿಸಬೇಕು. ಆದರೆ, ಹೀಗೆ ಮಾಡುವಾಗ ಪೆಟ್ರೋಲಿನ ಜೊತೆಗೆ ಅದಕ್ಕಿಂತಲೂ ದೊಡ್ಡ ಮೊತ್ತದಲ್ಲಿ ಅನಪೇಕ್ಷಿತ ಹಾಗೂ ಕಡಿಮೆ ಬೆಲೆಯ ಉತ್ಪನ್ನಗಳಾದ ಭಾರ ತೈಲ ಹಾಗೂ ಉಳಿಕೆ ಎಣ್ಣೆ ಸಂಗ್ರಹವಾಗುತ್ತವೆ. ಹೀಗಾಗಿ ಈ ವಿಧಾನದಲ್ಲಿ ರಸಕ್ಕಿಂತ ಕಸವೇ ಹೆಚ್ಚಾಗುತ್ತದೆ. ಆದರೆ, ಈಗ ಪೆಟ್ರೋಲಿಯಮ್ ರಸಾಯನಶಾಸ್ತ್ರಜ್ಞ ಇನ್ನೊಂದು ದಾರಿಯನ್ನು ಹುಡುಕಿದ್ದಾನೆ. ಭಾರ ತೈಲ ಮತ್ತು ಉಳಿಕೆ ಎಣ್ಣೆ ಇವುಗಳಿಂದ ಪೆಟ್ರೋಲನ್ನು ತಯಾರಿಸುವುದೇ ಈ ದಾರಿ. ಭಾರ ತೈಲ ಮತ್ತು ಉಳಿಕೆ ಎಣ್ಣೆ ಅಂದರೆ 11-20 ಇಂಗಾಲದ ಪರಮಾಣುಗಳುಳ್ಳ ಹೈಡ್ರೋಕಾರ್ಬನ್ನುಗಳ ಮಿಶ್ರಣ. ಪೆಟ್ರೋಲ್ ಅಂದರೆ 6-10 ಇಂಗಾಲದ ಪರಮಾಣುಗಳುಳ್ಳ ವಿವಿಧ ಹೈಡ್ರೋಕಾರ್ಬನ್ನುಗಳನ್ನು ಮುರಿದು ಪೆಟ್ರೋಲಿನಲ್ಲಿರುವ ಚಿಕ್ಕ ಚಿಕ್ಕ ಹೈಡ್ರೋಕಾರ್ಬನ್ನುಗಳನ್ನು ತಯಾರಿಸಬಹುದು. ಇದನ್ನು ಪೆಟ್ರೋಲಿಯಮ್ ವಿಭಜನೆ ಎನ್ನುತ್ತಾರೆ. ಇದು ಮೂಲತಃ ಆಂಶೀಕರಣಕ್ಕಿಂತ ಭಿನ್ನವಾದುದು. ಆಂಶೀಕರಣದಲ್ಲಿ ಭೌತ ಗುಣಧರ್ಮವನ್ನು ಅವಲಂಬಿಸಿ ಪೆಟ್ರೋಲಿಯಮ್ಮಿನಲ್ಲಿ ಈಗಾಗಲೇ ಇರುವ ಪೆಟ್ರೋಲನ್ನು ಬೇರ್ಪಡಿಸಿದರೆ ಪೆಟ್ರೋಲಿಯಮ್ ವಿಭಜನೆಯಲ್ಲಿ ಪೆಟ್ರೋಲ್ ರಹಿತ ಪೆಟ್ರೋಲಿಯಮ್ ಉತ್ಪನ್ನಗಳಿಂದ ರಾಸಾಯನಿಕ ಕ್ರಿಯೆಯ ಮೂಲಕ ಪೆಟ್ರೋಲನ್ನು ತಯಾರಿಸುತ್ತಾರೆ.
  • ಪೆಟ್ರೋಲಿಯಮ್ ವಿಭಜನೆ ಅಷ್ಟು ಸುಲಭ ಕೆಲಸವಲ್ಲ. ಏಕೆಂದರೆ ಅದರಲ್ಲಿರುವ ಸಂಯುಕ್ತಗಳು ಪರ್ಯಾಪ್ತ ಹೈಡ್ರೋಕಾರ್ಬನ್ನುಗಳಾದ್ದರಿಂದ ರಾಸಾಯನಿಕ ಕ್ರಿಯದೃಷ್ಟಿಯಿಂದ ಅವು ಜಡ ಪದಾರ್ಥಗಳು. ಅ-ಅ ಬಂಧವನ್ನು ಮುರಿಯಬೇಕಾದರೆ ಉಷ್ಣತೆ ಹಾಗೂ ಒತ್ತಡದ ರೂಪದಲ್ಲಿ ಪ್ರಬಲ ಶಕ್ತಿ ಬೇಕು. ಉಳಿಕೆ ಎಣ್ಣೆಯನ್ನು ಮುಚ್ಚಿದ ಪಾತ್ರೆಯಲ್ಲಿ ಹಾಕಿ ಚದರ ಸೆಂಟೀಮೀಟರಿಗೆ 70 ಕೆ.ಜಿ. ಒತ್ತಡದಲ್ಲಿ 5400ಅ ಉಷ್ಣತೆಯಲ್ಲಿ ಕಾಸಿದಾಗ ಪೆಟ್ರೋಲಿಯಮ್ಮಿನ ವಿಭಜನೆ ಆಗುತ್ತದೆ. ಇಂಥ ತೀವ್ರ ಪರಿಸ್ಥಿತಿಯಲ್ಲಿ ವಿವೃತ ಶ್ರೇಣಿಯ ದೊಡ್ಡ ಹೈಡ್ರೋಕಾರ್ಬನ್ನುಗಳು ವಿಭಜನೆ ಹೊಂದಿ ಸಣ್ಣ ಸಣ್ಣ ಹೈಡ್ರೋಕಾರ್ಬನ್ನುಗಳಾಗುತ್ತವೆ. ಉದಾಹರಣೆಗೆ ಡೊಡೆಕೇನ್ ಎಂಬ ಒಂದು ವಿವೃತ ಪರಮಾಣು ಮುರಿದು ಕೆಳಗೆ ತೋರಿಸಿದಂತೆ ಎರಡು ಭಾಗಗಳಾಗುತ್ತದೆ.
  • ಇವುಗಳ ಪೈಕಿ ಒಂದು ಪರ್ಯಾಪ್ತ ಹೈಡ್ರೋಕಾರ್ಬನ್ ಆದರೆ ಇನ್ನೊಂದು ಅಪರ್ಯಾಪ್ತ ಹೈಡ್ರೋಕಾರ್ಬನ್. ಪರ್ಯಾಪ್ತ ಹೈಡ್ರೋಕಾರ್ಬನ್ ಪೆಟ್ರೋಲಿನಲ್ಲಿರುವ ದ್ರವ ಘಟಕ. ಇಂಥ ಘಟಕಗಳಿರುವ ಅಂಶಗಳನ್ನು ಆಂಶಿಕ ಬಟ್ಟೀಕರಣದಿಂದ ಬೇರ್ಪಡಿಸುವರು. ಅಪರ್ಯಾಪ್ತ ಹೈಡ್ರೋಕಾರ್ಬನ್ನಾದರೋ ಅನಿಲ ರೂಪದಲ್ಲಿದೆ. ಅಂಥ ಅನಿಲಗಳನ್ನು ಹಾಳಾಗಲು ಅವಕಾಶ ಕೊಡದೆ ಪಾಲಿಮೆರೀಕರಣ ವಿಧಾನದಿಂದ ಪೆಟ್ರೋಲ್ ತಯಾರಿಕೆಗೆ ಬಳಸುತ್ತಾರೆ. ಇಲ್ಲಿ ಉಷ್ಣವನ್ನು ಬಳಸಿ ಪೆಟ್ರೋಲಿಯಮ್ಮನ್ನು ವಿಭಜಿಸುವುದರಿಂದ ಇದಕ್ಕೆ ಉಷ್ಣ ವಿಭಜನೆ ಎಂಬ ಹೆಸರಿದೆ. ಈ ಕ್ರಮವನ್ನು ಒಂದನೆಯ ಮಹಾಯುದ್ಧದ ಪೂರ್ವದಲ್ಲಿ ಬಹಳವಾಗಿ ಉಪಯೋಗಿಸುತ್ತಿದ್ದರು. ಆದರೆ, ಈಗ ಇದಕ್ಕಿಂತ ಶ್ರೇಷ್ಟವಾದ ಕ್ರಿಯಾವರ್ಧಾತ್ಮಕ ವಿಭಜನೆ ಎಂಬ ವಿಧಾನವನ್ನು ಹೆಚ್ಚಾಗಿ ಬಳಸುತ್ತಾರೆ. ಈ ವಿಧಾನವನ್ನು ಕ್ರಿಯಾವರ್ಧಕವನ್ನು ಬಳಸುವುದರಿಂದ ವಿಭಜನೆಯನ್ನು ಸೌಮ್ಯ ಪರಿಸ್ಥಿತಿಯಲ್ಲಿ ಮಾಡಬಹುದು. ಸಾಮಾನ್ಯವಾಗಿ ಈ ವಿಧಾನದಲ್ಲಿ ಉಪಯೋಗಿಸುವ ಉಷ್ಣತೆ 4500-5100ಅ, ಒತ್ತಡ ಪ್ರತಿ ಚದರ ಸೆಂಟಿಮೀಟರ್‍ಗೆ 0.7-1.4 ಕೆ.ಜಿ. ಇದರಿಂದ ಉತ್ಪನ್ನದ ಪರಿಮಾಣ ಜಾಸ್ತಿ ಆಗುವುದರ ಜೊತೆಗೆ ಅದರ ಗುಣಮಟ್ಟವು ಹೆಚ್ಚುತ್ತದೆ. ಇಲ್ಲಿ ಉಪಯೋಗಿಸುವ ಕ್ರಿಯಾವರ್ಧಕವನ್ನು 87.5% ಅಲ್ಯೂಮಿನಾ ಮತ್ತು 12.5% ಸಿಲಿಕಾದಿಂದ ಮಾಡಿದ್ದು ಇದನ್ನು ಸಣ್ಣ ಹುಡಿಯ ರೂಪದಲ್ಲಿ ಉಪಯೋಗಿಸುತ್ತಾರೆ. ಹುಡಿಯ ಗಾತ್ರ ಎಷ್ಟು ಸಣ್ಣ ಇರುತ್ತದೆ ಎಂದರೆ ಅನಿಲ ಅಥವಾ ಆವಿಯೊಂದಿಗೆ ಕಲಕಿದಾಗ ಅದು ದ್ರವದಂತೆ ವರ್ತಿಸುತ್ತದೆ. ಕ್ರಿಯಾವರ್ಧಕ ರಾಸಾಯನಿಕ ಕ್ರಿಯೆಯಲ್ಲಿ ಭಾಗಿ ಆಗದೆ ಇರುವುದರಿಂದ ಅದನ್ನು ಪುನಃ ಪುನಃ ಉಪಯೋಗಿಸಬಹುದು.
  • ಕ್ರಿಯಾವರ್ಧಾತ್ಮಕ ವಿಭಜನಸ್ಥಾವರದಲ್ಲಿ ಕ್ರಿಯಾಪಾತ್ರೆ, ಪುನರುತ್ಪಾದಕ, ಆಂಶಿಕ ಬಟ್ಟೀಕರಣದ ಗೋಪುರ ಎಂಬ ಮೂರು ಭಾಗಗಳುಂಟು. ಒಂದಕ್ಕೊಂದಕ್ಕೆ ಕೊಳವೆಯ ಮೂಲಕ ಸಂಬಂಧವಿದೆ. ಮೊದಲು ಶುದ್ಧೀಕರಿಸಿದ 3400-5650ಅ ಉಷ್ಣತಾ ಮಿತಿಯಲ್ಲಿ ಕುದಿಯುವ ಭಾರ ತೈಲವನ್ನು ಕ್ರಿಯಾಪಾತ್ರೆಯಲ್ಲಿ ಜೀಕಳಿಸುತ್ತಾರೆ.

ಆದರೆ, ಇದು ಕ್ರಿಯಾಪಾತ್ರೆಯ ಒಳಗೆ ಹೋಗುವ ಸ್ವಲ್ಪ ಪೂರ್ವದಲ್ಲಿ ಇನ್ನೊಂದು ಕೊಳವೆಯ ಮೂಲಕ ಕ್ರಿಯಾಪಾತ್ರೆಗೆ ತೂರಿಬರುವ ಬಿಸಿ ಕ್ರಿಯಾವರ್ಧಕವನ್ನು ಸಂದಿಸಿ ಆವಿ ಆಗುತ್ತದೆ. ಕ್ರಿಯಾಪಾತ್ರೆಯಲ್ಲಿ ತೈಲಿ ಆವಿ ಕ್ರಿಯಾವರ್ಧಕದೊಂದಿಗೆ ಚೆನ್ನಾಗಿ ಬೆರೆತು ವಿಭಜನೆಗೆ ಒಳಗಾಗುತ್ತದೆ. ಈ ಕ್ರಿಯೆಯಲ್ಲಿ ಉತ್ಪತ್ತಿ ಆದ ಇಂಗಾಲ ಕ್ರಿಯಾವರ್ಧಕದ ಮೇಲೆ ಮೆತ್ತುತ್ತದೆ. ಇದರಿಂದ ಕ್ರಿಯೆ ಮಂದವಾಗುತ್ತದೆ. ಆದ್ದರಿಂದ ಇಂಥ ನಿಷ್ಕ್ರಿಯಾ ಕ್ರಿಯಾವರ್ಧಕವನ್ನು ಕ್ರಿಯಾಪಾತ್ರೆಯ ಅಡಿಯಿಂದ ತೆಗೆದು ಪುನರುತ್ಪಾದಕಕ್ಕೆ ಸಾಗಿಸುವ ವ್ಯವಸ್ಥೆ ಇರುತ್ತದೆ. ಪುನರುತ್ಪಾದಕದಲ್ಲಿ ಸಕ್ರಿಯಗೊಳಿಸಿದ ಕ್ರಿಯಾವರ್ಧಕವನ್ನು ಮತ್ತೆ ಕ್ರಿಯಾಪಾತ್ರೆಗೆ ಕಳಿಸುತ್ತಾರೆ. ಈ ಚಕ್ರೀಯ ಕಾರ್ಯ ಸತತವಾಗಿ ನಡೆಯುತ್ತದೆ. ಇದರಿಂದ ಉತ್ಪನ್ನವಾದ ಆವಿ ಕ್ರಿಯಾಪಾತ್ರೆಯ ಮೇಲಿನಿಂದ ಕೇಂದ್ರ ಪಗಾಮಿ ವಿಯೋಜಕಗಳ ಮೂಲಕ ಹೊರಬರುತ್ತದೆ. ಕೇಂದ್ರ ಪಗಾಮಿ ವಿಯೋಜಕಗಳಲ್ಲಿ ಕ್ರಿಯಾವರ್ಧಕದಿಂದ ಆವಿಯನ್ನು ಮುಕ್ತಗೊಳಿಸಿ ಅದನ್ನು ಆಂಶಿಕ ಬಟ್ಟೀಕರಣದ ಗೋಪುರಕ್ಕೆ ಸಾಗಿಸಿ ಉತ್ಪನ್ನಗಳನ್ನು ಬೇರ್ಪಡಿಸಲಾಗುವುದು. ಈ ವಿಧಾನದಿಂದ ಕ್ರಿಯಾವರ್ಧಾತ್ಮಕ ವಿಭಜನೆಯೊಂದೇ ಅಲ್ಲದೆ ಚಿತ್ರೀಕರಣ ಐಸೊಮೆರೀಕರಣ ಮತ್ತು ಪಾಲಿಮರೀಕರಣ ಕ್ರಿಯೆಗಳೂ ಆಗುವುದರಿಂದ ಇಲ್ಲಿ ದೊರೆಯುವ ಪೆಟ್ರೋಲಿನ ಆಕ್ಟೇನ್ ಸಂಖ್ಯೆ ಅಧಿಕವಾಗುತ್ತದೆ.

  • ಕ್ರಿಯಾವರ್ಧಾತ್ಮಕ ವಿಭಜನೆಯನ್ನು ಹೈಡ್ರೋಜನ್ ವಾತಾವರಣದಲ್ಲಿ ಮಾಡಿದರೆ ಅದಕ್ಕೆ ಹೈಡ್ರೋಜನ್ ವಿಭಜನೆ ಎಂದು ಹೆಸರು. ಇಲ್ಲಿ ಇಂಗಾಲ ಹಾಗೂ ಅಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ವಿರೂಪಕವಾಗುವುದಿಲ್ಲ. ಅದರಂತೆಯೇ ಉಷ್ಣ ವಿಭಜನೆಯನ್ನು ಸ್ವಲ್ಪ ಸೌಮ್ಯ ಪರಿಸ್ಥಿತಿಯಲ್ಲಿ ಮಾಡಿ ಹೆಚ್ಚಿನ ಶ್ಯಾನತೆ ಇರುವ ಉತ್ಪನ್ನಗಳಿಂದ ಕಡಿಮೆ ಶ್ಯಾನತೆಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಕಡಿಮೆ ಶ್ಯಾನತೆಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚು. ಇದಕ್ಕೆ ಶ್ಯಾನ ಛೇದನ ಎಂದು ಹೆಸರು.

ಪರಿಷ್ಕರಣೆ:

ಬದಲಾಯಿಸಿ
  • ಆಂಶಿಕ ಬಟ್ಟೀಕರಣದಿಂದ ದೊರೆತ ಪೆಟ್ರೋಲಿಗೆ ನೇರವಾಗಿ ಬಂದ ಪೆಟ್ರೋಲ್ ಎಂದು ಹೆಸರು. ಇದರಲ್ಲಿ ಪ್ರಸಾಮಾನ್ಯ ವಿವೃತ (ನಾರ್ಮಲ್ ಓಪನ್ ಚೇನ್) ಹೈಡ್ರೋಕಾರ್ಬನ್ನುಗಳು ಹೆಚ್ಚಾಗಿ ಇರುವುದರಿಂದ ಮೋಟಾರ್ ವಾಹನಗಳ ಯಂತ್ರದ ಸಿಲೆಂಡರುಗಳಲ್ಲಿ ಪೆಟ್ರೋಲನ್ನು ಊಡಿದಾಗ ಒಮ್ಮೆಲೇ ಸ್ಫೋಟ ಸಂಭವಿಸುತ್ತದೆ. ಏಕೆಂದರೆ ಅಂಥ ಪೆಟ್ರೋಲ್ ಕಿಡಿಯಿಂದ ಪೂರ್ತಿಯಾಗಿ ಸುಡುವತನಕ ಕಾಯುವುದಿಲ್ಲ. ಹೀಗಾಗಿ ಯಂತ್ರ ಸುಲಲಿತವಾಗಿ ಚಲಿಸದೇ ದಬದಬ ಎಂಬ ಒದೆತವನ್ನು ಅನುಭವಿಸುತ್ತದೆ. ಎಲ್ಲ ಬಗೆಯ ಪೆಟ್ರೋಲುಗಳಿಂದ ಯಂತ್ರ ಒಂದೇ ತೆರನಾದ ಒದೆತವನ್ನು ಅನುಭವಿಸುವುದಿಲ್ಲ; ಕೆಲವು ಬಗೆಯವುಗಳ ಒದೆತ ನಿರೋಧಕ ಸಾಮಥ್ರ್ಯ ಹೆಚ್ಚು. ಇನ್ನೂ ಕೆಲವು ಬಗೆಯವುಗಳದು ಕಡಿಮೆ. ಪೆಟ್ರೋಲಿನಲ್ಲಿರುವ ಒದೆತ ನಿರೋಧಕ ಸಾಮಥ್ರ್ಯಕ್ಕೆ ಅದರಲ್ಲಿರುವ ಐಸೋಮೆರಿಕ್ ಮತ್ತು ಆರೊಮ್ಯಾಟಿಕ್ ಹೈಡ್ರೋಕಾರ್ಬನ್ನುಗಳು ಕಾರಣ ಎಂದು ಕಂಡುಬಂದಿದೆ. ಇವುಗಳ ಪ್ರಮಾಣ ಹೆಚ್ಚಾದಂತೆ ಒದೆತ ನಿರೋಧಕ ಸಾಮಥ್ರ್ಯ ಹೆಚ್ಚಾಗುತ್ತದೆ. ಇದನ್ನು ಅಳೆಯುವ ಮಾನಕಕ್ಕೆ ಆಕ್ಟೇನ್ ಸಂಖ್ಯೆ ಎಂದು ಹೆಸರು. ಪೆಟ್ರೋಲಿನಲ್ಲಿರುವ ಎಲ್ಲ ಜ್ಞಾತ ಘಟಕಗಳನ್ನು ಒಂದೊಂದಾಗಿ ಒದೆತ ನಿರೋಧಕ ಸಾಮಥ್ರ್ಯದ ದೃಷ್ಟಿಯಿಂದ ಪರೀಕ್ಷಿಸಿದಾಗ (1927) ಐಸೋಆಕ್ಟೇನ್ ಎಂಬ ಹೈಡ್ರೋಕಾರ್ಬನ್ ಒತ್ತಡವನ್ನು ಸಹಿಸುವಲ್ಲಿ ಸರ್ವಶ್ರೇಷ್ಠ ಸದಸ್ಯ ಎಂದು ಕಂಡುಬಂದದ್ದರಿಂದ ಅದರ ಒದೆತ ನಿರೋಧಕ ಸಾಮಥ್ರ್ಯಕ್ಕೆ ಆಕ್ಟೇನ್ ಸಂಖ್ಯೆ 100 ಎಂದು ಅದರಂತೆಯೇ ಹೆಪ್ಟೇನಿಗೆ ಕನಿಷ್ಠ ಒದೆತ ನಿರೋಧಕ ಸಾಮಥ್ರ್ಯ ಇರುವುದರಿಂದ ಅದರ ಆಕ್ಟೇನ್ ಸಂಖ್ಯೆ ಶೂನ್ಯ ಎಂದೂ ಮಾನಕ ಶ್ರೇಣಿಯನ್ನು ಕೊಡಲಾಯಿತು. ಇಂದು ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ಬಗೆಯ ಪೆಟ್ರೋಲನ್ನೂ ಐಸೋಆಕ್ಟೇನ್ ಜೊತೆಗೆ ಪ್ರಯೋಗಶಾಲೆಯಲ್ಲಿ ವಿಶೇಷ ಯಂತ್ರದಲ್ಲಿ ಹೋಲಿಸಿ ಅದಕ್ಕೆ ಯುಕ್ತ ಆಕ್ಟೇನ್ ಸಂಖ್ಯೆಯನ್ನು ನಿಗದಿಸುತ್ತಾರೆ. ಇಂಥ ಪರೀಕ್ಷೆಯಲ್ಲಿ ಒಂದು ನಮೂನೆಯ ಪೆಟ್ರೋಲಿನ ಸಂಖ್ಯೆ 90 ಎಂದು ಗೊತ್ತಾಗಿದೆ. ಎಂದರೆ ಆ ಪೆಟ್ರೋಲಿನ ಒದೆತ ನಿರೋಧಕ ಸಾಮಥ್ರ್ಯ 90% ಐಸೋಆಕ್ಟೇನ್ ಹಾಗೂ 10% ಪ್ರಸಾಮಾನ್ಯ ಹೆಪ್ಟೇನುಗಳ ಮಿಶ್ರಣದ ಒದೆತ ನಿರೋಧಕ ಸಾಮಥ್ರ್ಯಕ್ಕೆ ಸಮ ಎಂದು ಅರ್ಥ. ಪೆಟ್ರೋಲಿನ ಆಕ್ಟೇನ್ ಸಂಖ್ಯೆ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಅದರ ಬೆಲೆ ಹೆಚ್ಚಾಗುತ್ತದೆ. ಇದಾಗಲೂ ಪ್ರಸಾಮಾನ್ಯ ವಿವೃತ ಐಸೋಮೆರಿಕ್ ಹೈಡ್ರೋಕಾರ್ಬನ್ನುಗಳೂ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ನುಗಳೂ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು. ಆದ್ದರಿಂದ ಕಡಿಮೆ ಆಕ್ಟೇನ್ ಸಂಖ್ಯೆಯುಳ್ಳ ಪೆಟ್ರೋಲನ್ನು ಅಥವಾ ಕಡಿಮೆ ಉಪಯೋಗವುಳ್ಳ ಅನಿಲಗಳನ್ನು ಬಳಸಿ ಹೆಚ್ಚಿನ ಆಕ್ಟೇನ್ ಸಂಖ್ಯೆಯ ಪೆಟ್ರೋಲನ್ನು ತಯಾರಿಸುವ ವಿಧಾನವನ್ನು ಶೋಧಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಈ ವಿಧಾನಕ್ಕೆ ಪೆಟ್ರೋಲಿಯಮ್ ಪರಿಷ್ಕರಣೆ ಎನ್ನುತ್ತಾರೆ. ಈ ದಿಶೆಯಲ್ಲಿ ಮಾಡಿದ ಹಲವು ಪ್ರಯತ್ನಗಳಲ್ಲಿ ಮುಖ್ಯವಾದುವು ಎಂದರೆ ಉಷ್ಣ ಪರಿಷ್ಕರಣೆ, ಪಾಲಿಮೆರೀಕರಣ, ಆಲ್ಕೈಲೇಷನ್ ಮತ್ತು ಐಸೊಮೆರೀಕರಣ.

ಉಷ್ಣ ಪರಿಷ್ಕರಣೆ:

ಬದಲಾಯಿಸಿ
  • ಉಷ್ಣ ಪರಿಷ್ಕರಣೆಯನ್ನು ಉಷ್ಣ ವಿಭಜನೆಯ ವಿಧಾನದಂತೆಯೇ, ಆದರೆ, ಹೆಚ್ಚಿನ ಉಷ್ಣತೆ ಹಾಗೂ ಒತ್ತಡದಲ್ಲಿ ಮಾಡುತ್ತಾರೆ. ಇಲ್ಲಿ ಆಕ್ಟೇನ್ ಸಂಖ್ಯೆ 40 ಇರುವ ನ್ಯಾಪ್ಥಾದಂಥ ಉತ್ಪನ್ನಗಳಿಂದ ಆಕ್ಟೇನ್ ಸಂಖ್ಯೆ 70-80 ಇರುವ ಪೆಟ್ರೋಲನ್ನು ತಯಾರಿಸುತ್ತಾರೆ. ಈ ವಿಧಾನದಲ್ಲಿ ಪೆಟ್ರೋಲ್ ಆಗದೇ ಇರುವ ವಸ್ತುವನ್ನು ಇಂಧನ ತೈಲ ಎಂದು ಬಳಸುತ್ತಾರೆ.

ಕ್ರಿಯಾವರ್ಧಾತ್ಮಕ ಪರಿಷ್ಕರಣೆ:

ಬದಲಾಯಿಸಿ
  • ನ್ಯಾಪ್ಥಾದಂಥ ಅಧಿಕ ಕುದಿಬಿಂದು ಇರುವ ಪೆಟ್ರೋಲಿನ ಭಾಗವನ್ನು ಹೈಡ್ರೋಜನ್ ವಾತಾವರಣದಲ್ಲಿ ಪರಿಷ್ಕರಿಸುತ್ತಾರೆ. ಇಲ್ಲಿ ಸಂಭವಿಸುವ ಒಂದು ಮುಖ್ಯ ರಾಸಾಯನಿಕ ಕ್ರಿಯೆ ಎಂದರೆ ವಿವೃತ ಹೈಡ್ರೊಕಾರ್ಬನ್ನುಗಳ ಚಕ್ರೀಕರಣವಾಗಿ ನ್ಯಾಪ್ಥೀನುಗಳಾಗುತ್ತವೆ. ಅನಂತರ ಇವು ಹೈಡ್ರೋಜನ್ನನ್ನು ಕಳೆದುಕೊಂಡು ಆರೊಮ್ಯಾಟಿಕ್ ಹೈಡ್ರೊಕಾರ್ಬನ್ನುಗಳನ್ನು ಕೊಡುತ್ತವೆ. ಇದರಂತೆ ಪ್ರಸಾಮಾನ್ಯ ಹೈಡ್ರೊಕಾರ್ಬನ್ನುಗಳ ಐಸೊಮೆರೀಕರಣವಾಗುವುದೂ ಉಂಟು. ಇಲ್ಲಿ ಬಳಸುವ ಕ್ರಿಯಾವರ್ಧಕ ಪ್ಲಾಟಿನಮ್, ಇದನ್ನು ಅಲ್ಯುಮಿನಾದ ಮೇಲೆ ಅಧಿಶೋಷಿತಗೊಳಿಸಿರುತ್ತಾರೆ. ಕ್ಲೋರಿನ್ ಹಾಗೂ ಅಯೋಡಿನ್ನನ್ನು ಕ್ರಿಯಾವರ್ಧಕಕ್ಕೆ ಚೇತಕದಂತೆ ಉಪಯೋಗಿಸುತ್ತಾರೆ. ಈ ವಿಧಾನದಿಂದ ಪರಿಷ್ಕøತ ಪೆಟ್ರೋಲಿನಲ್ಲಿ ಐಸೋಮೆರಿಕ್ ಹೈಡ್ರೋಕಾರ್ಬನ್ನುಗಳೂ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ನುಗಳು ಹೆಚ್ಚಾಗಿ ಇರುವುದರಿಂದ ಆಕ್ಟೇನ್ ಸಂಖ್ಯೆ 90-100 ಇರುವ ಪೆಟ್ರೋಲನ್ನು ತಯಾರಿಸಬಹುದು. ಪೆಟ್ರೋಲಿನ ಆಕ್ಟೇನ್ ಸಂಖ್ಯೆಯನ್ನು ಹೆಚ್ಚಿಸಲು ಅದರಲ್ಲಿ ಟೆಟ್ರ ಈಥೈಲ್ ಲೆಡ್ಡನ್ನು ಸೇರಿಸಿಯೂ ಮಾಡಬಹುದು. ಆದರೆ, ಅಂಥ ಪೆಟ್ರೋಲನ್ನು ಬಳಸುವುದರಿಂದ ವಾತಾವರಣ ಕಲುಷಿತಗೊಳ್ಳುವುದು. ಆದ್ದರಿಂದ ಟೆಟ್ರ ಈಥೈಲ್ ಲೆಡ್ಡಿನಿಂದ ಉಪಯೋಗ ಸೀಮಿತಗೊಂಡು ಕ್ರಿಯಾವರ್ಧಾತ್ಮಕ ಪರಿಷ್ಕರಣ ವಿಧಾನಕ್ಕೆ ಬಹಳ ಮಹತ್ತ್ವ ಬಂದಿದೆ.

ಪಾಲಿಮೆರೀಕರಣ:

ಬದಲಾಯಿಸಿ
  • ಉಷ್ಣವಿಭಜನೆ ಹಾಗೂ ಕ್ರಿಯಾತ್ಮಕ ವಿಭಜನೆಯಲ್ಲಿ ಹೊರಡುವ ಅನಿಲಗಳನ್ನು ಉರುವಲಿನಂತೆ ಸಂಸ್ಕರಣ ಸ್ಥಾವರದಲ್ಲಿ ಬಳಸುತ್ತಾರೆ. ಆದರೆ, ಈ ಅನಿಲಗಳನ್ನು ಪಾಲಿಮೆರೀಕರಣಗೊಳಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯುಳ್ಳ ಪೆಟ್ರೋಲನ್ನೂ ತಯಾರಿಸುತ್ತಾರೆ. ಈ ಅನಿಲಗಳಲ್ಲಿರುವ ಸಣ್ಣ ಸಣ್ಣ ಹೈಡ್ರೋಕಾರ್ಬನ್ನುಗಳ ಅಣುಗಳ ಒಂದು ಜೋಡಿ ಕ್ರಿಯಾವರ್ಧಕದ ಸಮ್ಮುಖದಲ್ಲಿ ಕೂಡಿಕೊಂಡು ಪೆಟ್ರೋಲಿನಲ್ಲಿರುವ ದೊಡ್ಡ ಹೈಡ್ರೊಕಾರ್ಬನ್ನನ್ನು ಕೊಡುತ್ತದೆ. ಉದಾಹರಣೆಗೆ ಎರಡು ಐಸೊಬ್ಯುಟಲೀನ್ ಅಣುಗಳು ಹೈಡ್ರೋಜನ್ ಸಮ್ಮುಖದಲ್ಲಿ ಐಸೊಆಕ್ಟೇನಿನ ಅಣುವನ್ನು ಕೊಡುತ್ತದೆ.
  • ಈ ಮೊದಲು 65% ಸಲ್ಫ್ಯೂರಿಕ್ ಆಮ್ಲವನ್ನು ಕ್ರಿಯಾವರ್ಧಕವಾಗಿ ಉಪಯೋಗಿಸುತ್ತಿದ್ದರು. ಆದರೆ, ಈಗ ಪಾಸ್ಫರಿಕ್ ಆಮ್ಲ ಅಥವಾ ಕ್ಯಾಡ್ಮಿಯಮ್ ಅಥವಾ ತಾಮ್ರದ ಪಾಸ್ಫೇಟನ್ನು ಬಳಸುತ್ತಾರೆ. ಈ ಕ್ರಿಯೆಯನ್ನು ಪ್ರತಿಚದರ ಸೆಂ.ಮೀ.ಗೆ 28-84 ಕೆ.ಜಿ. ಒತ್ತಡದಲ್ಲಿ ಹಾಗೂ 1750-2350ಅ ಉಷ್ಣತೆಯಲ್ಲಿ ಮಾಡುತ್ತಾರೆ. ಇದರಿಂದ ದೊರೆಯುವ ಪರಿಷ್ಕøತ ಆಕ್ಟೇನ್ ಸಂಖ್ಯೆ 90 ಕ್ಕಿಂತ ಸ್ವಲ್ಪ ಹೆಚ್ಚು. ನಿಗದಿಪಡಿಸಿದ ಮಿತಿಯಲ್ಲಿ ಟೆಟ್ರಈಥೈಲ್ ಲೆಡ್ಡನ್ನು ಉಪಯೋಗಿಸಿ ಆಕ್ಟೇನ್ ಸಂಖ್ಯೆಯನ್ನು 100 ರವರೆಗೆ ಹೆಚ್ಚಿಸಬಹುದು.

ಆಲ್ಕೈಲೇಶನ್:

ಬದಲಾಯಿಸಿ
  • ವಿಮಾನ ಉಡಾವಣೆಗೆ ಬೇಕಾಗುವ ಅಧಿಕ ಆಕ್ಟೇನ್ ಸಂಖ್ಯೆಯ ಪೆಟ್ರೋಲನ್ನು ಈ ವಿಧಾನದಿಂದ ತಯಾರಿಸುತ್ತಾರೆ. ಕವಲೊಡೆದ ಹೈಡ್ರೋಕಾರ್ಬನ್ನುಗಳು ಈ ಪೆಟ್ರೋಲಿನಲ್ಲಿ ಹೆಚ್ಚಿನ ಮೊತ್ತದಲ್ಲಿ ಇರುತ್ತವೆ. ವಿಭಜನಪಾತ್ರೆಯಲ್ಲಿ ದ್ರವವಾಗದೆ ಪಾರಾಗಿ ಬರುವ ಐಸೊಬ್ಯುಟಲೀನ್ ಮತ್ತು ಬ್ಯುಟಲೀನ್ ಅಂಶ ಇದರ ಕಚ್ಚಾ ವಸ್ತು. ಈ ಅನಿಲಗಳನ್ನು ನಿಯಂತ್ರಿತ ಉಷ್ಣತೆ ಹಾಗೂ ಒತ್ತಡಗಳಲ್ಲಿ ಸಾರ ಸಲ್ಫ್ಯೂರಿಕ್ ಆಮ್ಲ ಅಥವಾ ಹೈಡ್ರೋಫ್ಲೂರಿಕ್ ಆಮ್ಲದ ಸಮ್ಮುಖದಲ್ಲಿ ಪ್ರತಿಕ್ರಿಯೆಗೊಳಿಸುತ್ತಾರೆ. ಈ ಅನಿಲಗಳಲ್ಲಿರುವ ಪ್ರೋಫಿಲೀನ್ ಹಾಗೂ ಅಮೈಲೀಸ್ ಸಹ ಬ್ಯುಟಲೀನಿನ ಜೊತೆಗೆ ಪ್ರತಿಕ್ರಿಯೆಗೊಳ್ಳುತ್ತವೆ. ಈ ವಿಧಾನದಿಂದ ಪರಿಷ್ಕøತವಾದ ಪೆಟ್ರೋಲಿನ ಆಕ್ಟೇನ್ ಸಂಖ್ಯೆ 85-100 ರವರೆಗೆ ಇರುತ್ತದೆ. ಟೆಟ್ರಈಥೈಲ್ ಲೆಡ್ಡನ್ನು ಬಳಸಿ ಆಕ್ಟೇನ್ ಸಂಖ್ಯೆ 100 ಇರುವ ಪೆಟ್ರೋಲನ್ನು ತಯಾರಿಸಬಹುದು.

ಐಸೊಮೆರೀಕರಣ:

ಬದಲಾಯಿಸಿ
  • ಈ ವಿಧಾನದಲ್ಲಿ ಬ್ಯುಟಲೀನ್ ಅನಿಲವನ್ನು ಐಸೊಮೆರೀಕರಣಗೊಳಿಸಿ ಐಸೊಬ್ಯುಟಲೀನನ್ನು ತಯಾರಿಸುತ್ತಾರೆ. ಈ ರೀತಿ ದೊರೆತ ಐಸೊಬ್ಯುಟಲೀನನ್ನು ಆಲ್ಕೈಲೇಶನ್ ಅಥವಾ ಪಾಲಿಮೆರೀಕರಣ ವಿಧಾನದಿಂದ ಪೆಟ್ರೋಲ್ ತಯಾರಿಸಲು ಬಳಸುತ್ತಾರೆ. ಪೆಟ್ರೋಲಿಯಮ್ ವಿಭಜನೆ ಹಾಗೂ ಪೆಟ್ರೋಲಿಯಮ್ ಪರಿಷ್ಕರಣೆ ವಿಧಾನಗಳನ್ನು ಬಳಸಿ ಕಚ್ಚಾ ಎಣ್ಣೆಯಿಂದ ಈ ಮೊದಲಿಗಿಂತ ಎರಡು ಪಟ್ಟು ಹೆಚ್ಚಿನ ಪರಿಮಾಣದಲ್ಲಿ ಪೆಟ್ರೋಲನ್ನು ಉತ್ಪಾದಿಸುವುದು ಸಾಧ್ಯವಾಗಿದೆ.

ಶುದ್ಧೀಕರಣ:

ಬದಲಾಯಿಸಿ
  • ಪೆಟ್ರೋಲಿಯಮ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ಮೊದಲು ಅವುಗಳಲ್ಲಿರುವ ಅಶುದ್ಧತೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಇಂಥ ಶುದ್ಧೀಕೃತ ಉತ್ಪನ್ನಗಳನ್ನು ಹೆಚ್ಚು ಸಮರ್ಪಕವಾಗಿ ಉಪಯೋಗಿಸಲು ಸಾಧ್ಯವಿರುವುದರಿಂದ ಅವುಗಳ ಬೇಡಿಕೆ ಹಾಗೂ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚುತ್ತವೆ. ಉದಾಹರಣೆಗೆ ಆಂಶಿಕ ಆಸವನದಿಂದ ದೊರೆತ ಕಲ್ಲೆಣ್ಣೆಯನ್ನು ನೇರವಾಗಿ ದೀಪದಲ್ಲಿ ಇಲ್ಲವೇ ಸ್ಟೋವ್‍ನಲ್ಲಿ ಉರುವಲಾಗಿ ಉಪಯೋಗಿಸಿದರೆ ಅದು ಉರಿಯುವಾಗ ಕಾಡಿಗೆಯುಳ್ಳ ಹೊಗೆ ಹಾಗೂ ಕೆಟ್ಟ ವಾಸನೆ ಬರುತ್ತವೆ. ನೇರವಾಗಿ ದೊರೆತ ಕಲ್ಲೆಣ್ಣೆಯಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ನುಗಳ (ಪ್ಯಾರಾಫಿನ್) ಜೊತೆಗೆ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ನುಗಳ ಅಂಶವೂ ಇರುವುದೇ ಇದರ ಕಾರಣ. ಪ್ಯಾರಾಫಿನ್ನುಗಳು ಶುದ್ಧವಾದ ಜ್ವಾಲೆಯೊಂದಿಗೆ ಉರಿದರೆ, ಆರೊಮ್ಯಾಟಿಕ್ ಹೈಡ್ರೊಕಾರ್ಬನ್ನುಗಳು ಕಾಡಿಗೆ ಹಾಗೂ ಕೆಟ್ಟ ವಾಸನೆಗೆ ಕಾರಣ ಎಂದು ಕಂಡುಬಂದಿದೆ. ಆದ್ದರಿಂದ ಇಂಥ ಕಲ್ಲೆಣ್ಣೆಯಿಂದ ಆರೊಮ್ಯಾಟಿಕ್ ಸಂಯುಕ್ತಗಳನ್ನು ಬೇರ್ಪಡಿಸಿದರೆ ಉರುವಲಿಗೆ ಹಾಗೂ ದೀಪಕ್ಕೆ ಯೋಗ್ಯವಾದ ಕಲ್ಲೆಣ್ಣೆಯನ್ನು ತಯಾರಿಸಬಹುದು. ನೇರವಾಗಿ ದೊರೆತ ಕಲ್ಲೆಣ್ಣೆಯನ್ನು ಟ್ರ್ಯಾಕ್ಟರುಗಳಲ್ಲಿ ಇಂಧನದಂತೆ ಉಪಯೋಗಿಸುತ್ತಿದ್ದರೆ ಈ ಆರೊಮ್ಯಾಟಿಕ್ ಸಂಯುಕ್ತಗಳನ್ನು ಬೇರ್ಪಡಿಸಬೇಕಾಗಿಲ್ಲ. ಏಕೆಂದರೆ ಇವು ಅಲ್ಲಿ ಅಶುದ್ಧತೆಗಳಾಗದೆ ಇಂಧನದ ಒತ್ತಡ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಈ ರೀತಿ ಆಯಾ ಉತ್ಪನ್ನಗಳ ಉಪಯೋಗಗಳನ್ನು ಅರಿತು ಅಶುದ್ಧತೆಗಳ ಅಂಶಗಳ ಸಂಪೂರ್ಣ ನಿವಾರಣೆ ಆಥವಾ ಮೊತ್ತವನ್ನು ಕಡಿಮೆ ಮಾಡಿ ಅವುಗಳ ಉಪಯುಕ್ತತೆಯನ್ನು ಹೆಚ್ಚಿಸುವ ವಿಧಾನಕ್ಕೆ ಪೆಟ್ರೋಲಿಯಮ್ ಉತ್ಪನ್ನಗಳ ಶುದ್ಧೀಕರಣ ಅನ್ನುತ್ತಾರೆ. ಇಂಥ ವಿಧಾನಗಳ ಪೈಕಿ ಕೆಲವನ್ನು ಕೆಳಗೆ ವಿವರಿಸಲಾಗಿದೆ.
  • ನೇರವಾಗಿ ದೊರೆತ ಕಲ್ಲೆಣ್ಣೆಯ ಶುದ್ಧೀಕರಣದ ಒಂದು ವಿಧಾನದಲ್ಲಿ ದ್ರವ ಸಲ್ಫರ್ ಡೈ ಆಕ್ಸೈಡನ್ನು ಬಳಸುತ್ತಾರೆ. ಆರೊಮ್ಯಾಟಿಕ್ ಸಂಯುಕ್ತಗಳು ದ್ರವ ಸಲ್ಫರ್ ಡೈ ಆಕ್ಸೈಡಿನಲ್ಲಿ ಸುಲಭವಾಗಿ ವಿಲೀನವಾಗುತ್ತವೆ. ಆದರೆ, ಪ್ಯಾರಾಫಿನ್ನುಗಳು ಆಗುವುದಿಲ್ಲ. ಮೊದಲು ನೇರವಾಗಿ ದೊರೆತ ಸೀಮೆಎಣ್ಣೆಯನ್ನು ದ್ರವ ಸಲ್ಫರ್ ಡೈ ಆಕ್ಸೈಡಿನೊಂದಿಗೆ ಚೆನ್ನಾಗಿ ಕಲಕಿ ಇಡುತ್ತಾರೆ. ಆಗ ಎರಡು ಸ್ತರಗಳಾಗುತ್ತವೆ. ಮೇಲಿನ ಸ್ತರ ಪ್ಯಾರಾಫಿನ್ನಿನದು. ಕೆಳಗಿನದು ಆರೊಮ್ಯಾಟಿಕ್ ಸಂಯುಕ್ತಗಳನ್ನು ಒಳಗೊಂಡ ದ್ರವ ಸಲ್ಫರ್ ಡೈ ಆಕ್ಸೈಡಿನದು. ಪ್ಯಾರಾಫಿನ್ ಸ್ತರವನ್ನು ಬೇರ್ಪಡಿಸಿ ಅದರಲ್ಲಿ ಇರಬಹುದಾದಂಥ ಸಲ್ಫರ್ ಡೈ ಆಕ್ಸೈಡಿನ ಅಲ್ಪಾಂಶವನ್ನು ಬಾಷ್ಪೀಭವನದಿಂದ ಹೋಗಲಾಡಿಸುತ್ತಾರೆ. ಹೀಗೆ ಆರೊಮ್ಯಾಟಿಕ್ ಸಂಯುಕ್ತಮುಕ್ತ ಸೀಮೆಎಣ್ಣೆಯನ್ನು ತಯಾರಿಸುತ್ತಾರೆ.
  • ಪೆಟ್ರೋಲಿಯಮ್ ಉತ್ಪನ್ನಗಳಲ್ಲಿರುವ ಕುಪ್ರಸಿದ್ಧ ಅಶುದ್ಧತೆ ಎಂದರೆ ಗಂಧಕದ ಸಂಯುಕ್ತಗಳು. ಇವುಗಳಿಗೆ ಅಸಹ್ಯ ವಾಸನೆ ಇದೆ. ಇಷ್ಟೇ ಅಲ್ಲ, ಈ ಸಂಯುಕ್ತಗಳು ಟೆಟ್ರ ಈಥೈಲ್ ಲೆಡ್ಡಿನ ಒದೆತ ನಿರೋಧಕ ಸಾಮಥ್ರ್ಯವನ್ನು ಹಾಳು ಮಾಡುತ್ತವೆ ಮತ್ತು ಯಂತ್ರಗಳಿಗೆ ತುಕ್ಕು ಹಿಡಿಸುತ್ತವೆ. ಉಳಿದ ಅಶುದ್ಧತೆಗಳೆಂದರೆ ನೈಟ್ರೋಜನ್‍ಯುಕ್ತ ಪ್ರತ್ಯಾಮ್ಲಗಳು, ಆಕ್ಸಿಜನ್‍ಯುಕ್ತ ಸಂಯುಕ್ತಗಳು ಮತ್ತು ಗೋಂದಿನಂಥ ಸಂಯುಕ್ತಗಳು. ಸಲ್ಫ್ಯೂರಿಕ್ ಆಮ್ಲವನ್ನು ಬಳಸಿ ಈ ಅಶುದ್ಧತೆಗಳನ್ನು ನಿವಾರಿಸಬಹುದು. ಸಲ್ಫ್ಯೂರಿಕ್ ಆಮ್ಲದಲ್ಲಿ ಗಂಧಕದ, ಆಕ್ಸಿಜನ್ನಿನ, ಮತ್ತು ಗೋಂದಿನಂಥ ಸಂಯುಕ್ತಗಳು ವಿಲೀನವಾಗುತ್ತವೆ. ನೈಟ್ರೋಜನ್ ಸಂಯುಕ್ತಗಳೂ ವಿಗುಣೀಕರಣ ಹೊಂದುತ್ತವೆ. ಈ ವಿಧಾನವನ್ನು ಮೊದಲಿನಿಂದಲೂ ಉಪಯೋಗಿಸುತ್ತ ಬಂದಿದ್ದಾರೆ. ಇದಕ್ಕೆ ಆಮ್ಲೀಯ ಚಿಕಿತ್ಸೆ ಅಥವಾ ವರ್ತನೆ ಎಂದು ಹೆಸರು. ಹೊಸ ವಿಧಾನಗಳ ಶೋಧನೆಯಿಂದಾಗಿ ಈ ವಿಧಾನದ ಬಳಕೆ ಕಡಿಮೆ ಆಗಿದೆ. ಆದರೂ ವಿಶಿಷ್ಟ ಉತ್ಪನ್ನಗಳ ಶುದ್ಧೀಕರಣದಲ್ಲಿ ಮಾತ್ರ ಇದನ್ನು ಇನ್ನೂ ಉಪಯೋಗಿಸುತ್ತಾರೆ.
  • ಪೆಟ್ರೋಲಿಯಮ್ ಉತ್ಪನ್ನಗಳಿಗಿರುವ ದುರ್ವಾಸನೆಗೆ ಅವುಗಳಲ್ಲಿರುವ ಮರ್ಕಾಪ್ಟನ್ ಎಂಬ ಗಂಧಕದ ಸಂಯುಕ್ತಗಳು ಕಾರಣ. ಕೆಲವು ಸಾರಿ ಪೆಟ್ರೋಲಿಯಮ್ ಉತ್ಪನ್ನಗಳಿಂದ ಗಂಧಕವನ್ನು ತೆಗೆದು ಹಾಕದೇ ಕೇವಲ ದುರ್ವಾಸನೆ ಇಲ್ಲದಂತೆ ಮಾಡುತ್ತಾರೆ. ಅಂದರೆ ಮಕ್ರ್ಯಾಪ್ಟನ್ನುಗಳನ್ನು ವಾಸನೆ ಇಲ್ಲದೆ ಡೈಸಲ್ಫೈಡುಗಳಿಗೆ ಪರಿವರ್ತಿಸುತ್ತಾರೆ. ಇದಕ್ಕೆ ಸುವಾಸನೀಕರಣ ಎಂದು ಹೆಸರು. ಇಂಥ ಒಂದು ವಿಧಾನದಲ್ಲಿ ಪೆಟ್ರೋಲಿಯಮ್ ಉತ್ಪನ್ನವನ್ನು ಮೊದಲು ಸೋಡಿಯಮ್ ಪ್ಲಂಬೈಟಿನೊಂದಿಗೂ ಅನಂತರ ಹೂಗಂಧದೊಂದಿಗೂ ವರ್ತಿಸುತ್ತಾರೆ. ಕೆಲವು ಸಾರಿ ಸೋಡಿಯಮ್ ಪ್ಲಂಬೈಟಿನ ಬದಲಾಗಿ ಕಾಪರ್ ಕ್ಲೋರೈಡನ್ನೂ ಬಳಸುವುದುಂಟು.
  • ಇವೆಲ್ಲವುಗಳಿಗಿಂತ ಹೆಚ್ಚು ಬಳಕೆಯಲ್ಲಿರುವ ಮತ್ತು ಯುಕ್ತವಾದ ವಿಧಾನ ಅಂದರೆ ಹೈಡ್ರೊಜನ್ ವರ್ತನೆ ಅಥವಾ ಹೈಡ್ರೊಸಂಸ್ಕರಣ. ಇಲ್ಲಿ ಗಂಧಕದ ಸಂಯುಕ್ತಗಳುಳ್ಳ ಪೆಟ್ರೋಲಿಯಮ್ ಉತ್ಪನ್ನವನ್ನು ಮೊದಲು 4250ಅ ಉಷ್ಣತೆಯಲ್ಲಿ ಕಾಸಿ ಹೈಡ್ರೊಜನ್ ಅನಿಲದೊಂದಿಗೆ ಕ್ರಿಯಾಪಾತ್ರೆಯಲ್ಲಿ ಸಾಗಿಸುತ್ತಾರೆ. ಅಲ್ಲಿ ಕ್ರಿಯಾವರ್ಧಕದ ಸಮ್ಮುಖದಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ಗಂಧಕ ಉತ್ಪನ್ನಗಳಿಂದ ಬೇರ್ಪಟ್ಟು ಹೈಡ್ರೊಜನ್ನಿನೊಂದಿಗೆ ಸಂಯೋಜನೆ ಹೊಂದಿ ಹೈಡ್ರೋಜನ್ ಸಲ್ಫೈಡ್ (ಊ2S) ಆಗುತ್ತದೆ. ಅನಂತರ ವಿಯೋಜಕವೊಂದರಲ್ಲಿ ಹೈಡ್ರೊಜನ್ ಸಲ್ಫೈಡ್ ಅನಿಲ ಹಾಗೂ ಗಂಧಕ ವಿಮುಕ್ತ ಪೆಟ್ರೋಲಿಯಮ್ ಉತ್ಪನ್ನವನ್ನು ಬೇರ್ಪಡಿಸುತ್ತಾರೆ. ಈ ವಿಧಾನದಲ್ಲಿ ಸಾಮಾನ್ಯವಾಗಿ ಪ್ಲಾಟಿನಮ್ ಆಕ್ಸೈಡ್ ಅಥವಾ ನಿಕ್ಕಲ್ ಸಂಯುಕ್ತಗಳನ್ನು ಕ್ರಿಯಾವರ್ಧಕದಂತೆ ಉಪಯೋಗಿಸುತ್ತಾರೆ. ಇಲ್ಲಿ ವಿಭಜನೆ ಆಗುವುದಿಲ್ಲ. ಆದರೆ, ಶುದ್ಧೀಕರಣ ಮಾತ್ರ ಆಗುತ್ತದೆ. ಅಲ್ಲದೆ, ಇಲ್ಲಿ ದೊರೆತ ಹೈಡ್ರೊಜನ್ ಸಲ್ಫೈಡನ್ನು ವಿಭಜಿಸಿ ಗಂಧಕ ಹಾಗೂ ಹೈಡ್ರೊಜನ್ ಅನಿಲವನ್ನು ತಯಾರಿಸುತ್ತಾರೆ. ಗಂಧಕವನ್ನು ಮಾರುಕಟ್ಟೆಯಲ್ಲಿ ಮಾರುತ್ತಾರೆ ಹಾಗೂ ಹೈಡ್ರೊಜನ್ ಅನಿಲವನ್ನು ಪುನಃ ಇದೇ ಕ್ರಿಯೆಯಲ್ಲಿ ಉಪಯೋಗಿಸುತ್ತಾರೆ.
  • ಸಂಸ್ಕರಣ ಸ್ಥಾವರದಲ್ಲಿ ನಡೆಯುವ ಇನ್ನೂ ಕೆಲವು ಕಾರ್ಯಾಚರಣೆಗಳೆಂದರೆ ಸಾರೀಕರಣ, ಸ್ಪಟಿಕೀಕರಣ ಹಾಗೂ ಯೂರಿಯಾದೊಂದಿಗೆ ವರ್ತನೆ. ಈ ಎಲ್ಲ ಕಾರ್ಯಾಚರಣೆಗಳನ್ನು ಹೆಚ್ಚಾಗಿ ಕೀಲೆಣ್ಣೆಗಳ ಶುದ್ಧೀಕರಣಕ್ಕೆ ಉಪಯೋಗಿಸುತ್ತಾರೆ. ಫುರ್‍ಫುರಾಲ್ ಹಾಗೂ ಫಿನಾಲುಗಳನ್ನು ಉಪಯೋಗಿಸಿ ಸಾರೀಕರಣ ಮಾಡುವುದರಿಂದ, ಕೀಲೆಣ್ಣೆ ಹಾಗೂ ಮೇಣಗಳನ್ನು ಬೇರ್ಪಡಿಸುತ್ತಾರೆ. ಅಂತೆಯೇ ಬೆನ್‍ಜಿûೀನನ್ನು ಬಳಸಿ ಸ್ಪಟಿಕೀಕರಣಗೊಳಿಸುವುದರಿಂದಲೂ ಮೇಣವನ್ನು ಬೇರ್ಪಡಿಸುತ್ತಾರೆ. ಈ ಎಲ್ಲವುಗಳ ಜೊತೆಗೆ ಇನ್ನೂ ಅನೇಕ ಕಾರ್ಯಾಚರಣೆಗಳು ಸತತವಾಗಿ ಸಂಸ್ಕರಣ ಸ್ಥಾವರದಲ್ಲಿ ನಡೆಯುತ್ತಿರುತ್ತವೆ.

ಪೆಟ್ರೋಲಿಯಮ್ ಉತ್ಪನ್ನಗಳು

ಬದಲಾಯಿಸಿ

ಇವು ಮುಖ್ಯವಾಗಿ ಪೆಟ್ರೋಲ್, ಸೀಮೆಎಣ್ಣೆ (ಕಲ್ಲೆಣ್ಣೆ), ಡೀಸಲ್ ಎಣ್ಣೆ, ಫ್ಯೂಯೆಲ್ ಎಣ್ಣೆ, ಕೀಲೆಣ್ಣೆ, ಪೆಟ್ರೋಲಿಯಮ್ ಮೇಣಗಳು, ಬಿಟ್ಯುಮೆನ್, ಪೆಟ್ರೋಲಿಯಮ್ ಕೋಕ್, ನ್ಯಾಫ್ಥಾಗಳು, ಅನಿಲಗಳು, ಪೆಟ್ರೋರಾಸಾಯನಿಕಗಳು.

ಪೆಟ್ರೋಲ್: ವಿದ್ಯುತ್ ಕಿಡಿಯಿಂದ ಜ್ವಲನಪ್ರೇರಿತ ಅಂತರ್ದಹನ ಎಂಜಿನ್ನುಗಳಲ್ಲಿ ಉಪಯೋಗಿಸುವ ಇಂಧನವನ್ನು ಸೂಚಿಸಲು ಈ ಪದವನ್ನು ಬಳಸುತ್ತಾರೆ. ಕಚ್ಚಾ ಎಣ್ಣೆಯನ್ನು ಆಂಶಿಕಾಸವನ ಮಾಡಿದಾಗಿ ಸುಮಾರು 40-2000ಅ ಉಷ್ಣತಾ ಶ್ರೇಣಿಯಲ್ಲಿ ಸಂಗ್ರಹಿಸಲಾಗುವ ಬುಟ್ಟಿಯೇ ಪೆಟ್ರೋಲ್. ಇದಕ್ಕೆ ನೇರವಾಗಿ ದೊರೆತ ಪೆಟ್ರೋಲ್ ಎನ್ನುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ದೊರೆಯುವ ಮೋಟರ್ ಪೆಟ್ರೋಲಿನಲ್ಲಿ ಇದರ ಜೊತೆಗೆ, ಭಾರ ತೈಲಗಳ ವಿಭಜನೆಯಿಂದ ದೊರೆತ ಪೆಟ್ರೋಲ್ ಹಾಗೂ ಪರಿಷ್ಕರಣದಿಂದ ದೊರೆತ ಆರೊಮ್ಯಾಟಿಕ್ ನ್ಯಾಪ್ಥಾಗಳು ಇರುತ್ತವೆ. ಒಳ್ಳೆಯ ಪೆಟ್ರೋಲಿನಲ್ಲಿ ಇರಬೇಕಾದ ಮೂರು ಮುಖ್ಯ ಗುಣಗಳಿವು. ಯುಕ್ತ, ಬಾಷ್ಪ ಗುಣ, ಅಧಿಕ ಆಕ್ಟೇನ್ ಸಂಖ್ಯೆ ಅಥವಾ ಅಧಿಕ ಒದೆತ ನಿರೋಧಕ ಸಾಮಥ್ರ್ಯ, ತಂಪು ಹವೆಯಲ್ಲಿ ಸುಲಭವಾಗಿ ಎಂಜಿನನ್ನು ಚಾಲೂ ಮಾಡುವ ಶಕ್ತಿ. ಇದಷ್ಟೇ ಅಲ್ಲ ಇಂಥ ಪೆಟ್ರೋಲಿನಲ್ಲಿ ಗಂಧಕದ ಅಂಶ ಹಾಗೂ ಗೋಂದಿನಂಥ ವಸ್ತುವಿನ ಅಂಶ ಕಡಿಮೆ ಇರಬೇಕು.

ಪೆಟ್ರೋಲಿಗೆ ಯುಕ್ತ ಬಾಷ್ಪಗುಣ ಇರಬೇಕು. ಅಂದರೆ ಎಂಜಿನಿನಲ್ಲಿ ಅದು ಒಮ್ಮೆಗೆ ಅಷ್ಟೂ ಬಾಷ್ಟವಾಗದೇ ಕನಿಷ್ಟ ಪ್ರಮಾಣದಲ್ಲಿ ಮಾತ್ರ ಬಾಷ್ಟವಾಗಿ ತ್ವರಿತ ಜ್ವಲನವನ್ನೂ ಕೊಡಬೇಕು. ಅಲ್ಲದೆ, ಎಂಜಿನಿನಲ್ಲಿ ಇಂಧನಜ್ಜಲನವೂ ಯುಕ್ತ ದರದಲ್ಲಿ ಆಗಬೇಕು. ಇಲ್ಲದಿದ್ದರೆ ಒದೆತ ಉಂಟಾಗುತ್ತದೆ. ಒದೆತದಿಂದ ಎಂಜಿನ್ ಕಾದು ಅದರ ದಕ್ಷತೆ ಕಡಿಮೆ ಆಗುತ್ತದೆ. ಹೆಚ್ಚು ಕಾದ ಎಂಜಿನ್ ಕೆಟ್ಟು ಹೋಗುವ ಸಂಭವವೂ ಉಂಟು. ಆದ್ದರಿಂದ ಪೆಟ್ರೋಲಿನ ಒದೆತ ನಿರೋಧಕತ್ತ್ವವನ್ನು ಹೆಚ್ಚಿಸಬೇಕು. ಅದಕ್ಕಾಗಿ ಪೆಟ್ರೊಲಿನಲ್ಲಿ ಒದೆತ ನಿರೋಧಕಗಳನ್ನು ಬೆರೆಸುತ್ತಾರೆ. ಟೆಟ್ರ ಈಥೈಲು ಲೆಡ್ ಎಂಬ ಸಂಯುಕ್ತ ಹೆಚ್ಚಾಗಿ ಉಪಯೋಗಿಸಲಾಗುವ ಒದೆತ ನಿರೋಧಕ. ಇದನ್ನು ಒಂದು ಲೀಟರ್ ಪೆಟ್ರೋಲಿನಲ್ಲಿ 0.2-07 ಮಿಲಿ ಮೊತ್ತದಲ್ಲಿ ಬೆರೆಸುತ್ತಾರೆ. ಇದರಲ್ಲಿರುವ ಸೀಸ ಎಂಜಿನ್ನಿನಲ್ಲಿ ಶೇಖರಣೆ ಆಗುವುದನ್ನು ನಿವಾರಿಸಲು ಇದರ ಜೊತೆಗೆ ಸ್ವಲ್ಪ ಎಥಿಲೀನ್ ಡೈಬ್ರೋಮೈಡನ್ನು ಸೇವಿಸುತ್ತಾರೆ. ಪೆಟ್ರೋಲಿನಲ್ಲಿ ಕೂಡಿಸುವ ಇತರ ಮುಖ್ಯ ಒದೆತ ನಿರೋಧಕಗಳೆಂದರೆ ಟೆಟ್ರ ಮೀಥೈಲೆ ಲೆಡ್, ಟರ್ಶಿಯರಿ ಬ್ಯೂಟೈಲ್ ಅಸೆಟೇಟ್, ಮೀಥೈಲ್ ಸೈಕ್ಲೋಪಿಂಟಡೈಯೀನಿಲ್ ಮ್ಯಾಂಗನಿಸ್, ತಂಪು ಹವೆಯಲ್ಲಿ ಎಂಜಿನನ್ನು ಬೇಗನೆ ಚಾಲೂ ಮಾಡಲು ಸಹಾಯವಾಗಲೆಂದು ಪೆಟ್ರೋಲಿನಲ್ಲಿ ಬ್ಯೂಟೇನನ್ನು ಸೇರಿಸುತ್ತಾರೆ.

ಪೆಟ್ರೋಲನ್ನು ಸಂಗ್ರಹಿಸಿದಾಗ ಅದರಲ್ಲಿರುವ ಅಸ್ಥಿರ ಘಟಕಗಳು ಸಾವಕಾಶವಾಗಿ ಉತ್ಕರ್ಷಣೆ ಹೊಂದಿ ಅಥವಾ ಪಾಲಿಮೆರೀಕರಿಸಿ ಗೋಂದಿನಂಥ ವಸ್ತುವಾಗಿ ಮಾರ್ಪಾಡಾಗಿ ಅದರಲ್ಲಿ ವಿಲೀನವಾಗಿರುತ್ತವೆ; ಇಂಥ ವಸ್ತುವಿನ ಪ್ರಮಾಣ ಹೆಚ್ಚಾದರೆ ಪೆಟ್ರೋಲ್ ಬಾಷ್ಪವಾಗಿ ಹೋದ ಬಳಿಕ ಎಂಜಿನ್ನಿನ ಕಾರ್ಬೊರೇಟರ್ ಕವಾಟಗಳು ಮುಂತಾದ ಭಾಗಗಳ ಮೇಲೆ ಗೋಂದು ಶೇಖರಣೆಯಾಗಿ ಯಾಂತ್ರಿಕ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಪೆಟ್ರೋಲಿನಲ್ಲಿ ಈ ರೀತಿ ಗೋಂದು ಆಗದಂತಿರಲು ಬಳಸುವ ಉತ್ಕರ್ಷಣ ನಿರೋಧಕಗಳೆಂದರೆ 2.6-ಡೈಟರ್ಶಿಯರಿಬ್ಯುಟೈಲ್-4-ಮೀಥೈಲ್ ಫೀನಾಲ್ ಮತ್ತು 2.6-ಡೈಮೀಥೈಲ್-6-ಟರ್ಶಿಮರಿ ಬ್ಯುಟೈಲ್ ಫೀನಾಲ್. ಗೋಂದಿನಂಥ ವಸ್ತು ಪೆಟ್ರೋಲಿನಲ್ಲಿ ಉಂಟಾಗಲು ಇನ್ನೊಂದು ಕಾರಣವೆಂದರೆ ಅದರಲ್ಲಿ ಅತ್ಯಲ್ಪ ಪ್ರಮಾಣದಲ್ಲಿರುವ ತಾಮ್ರ ಹಾಗೂ ಕಬ್ಬಿಣದ ಅಂಶಗಳು. ಪೆಟ್ರೋಲಿಗೆ ಯಾವಾಗಲೂ ಲೋಹದ ಹೌದುಗಳ ಹಾಗೂ ಕೊಳವೆಗಳ ಸಂಪರ್ಕ ಇರುವುದರಿಂದ ಲೋಹದಲ್ಲಿರುವ ಈ ಅಂಶಗಳು ಪೆಟ್ರೋಲಿನಲ್ಲಿ ಸೇರಿಕೊಳ್ಳುತ್ತವೆ. ಎಂದೇ ಹೀಗಾಗದಿರಲೆಂದು ಓ-ಓ1-ಡೈಸಾಲ್ಸಿಲಿಡೀನ್-1-2 ಡೈ ಅಮೈನೊ ಪ್ರೊಪೇನಿನಂಥ ಲೋಹ ನಿಷ್ಕ್ರಿಯ ಕಾರಕಗಳನ್ನು ಬೆರೆಸುತ್ತಾರೆ. ಕೆಲವು ಸಲ ಎಂಜಿನ್ನಿನಲ್ಲಿ ಲೇಪವಾಗುವ ಗೋಂದನ್ನು ತೆಗೆಯಲು ಪೆಟ್ರೋಲಿನಲ್ಲಿ ಮಾರ್ಜಕಗಳನ್ನು ಬೆರೆಸುವುದೂ ಉಂಟು. ಇವೂ ಅಲ್ಲದೆ ಪೆಟ್ರೋಲಿನಲ್ಲಿ ಜಂಗು ನಿರೋಧಕಗಳೆಂದು ಅಮೊನಿಯಮ್ ಸಲ್ಫೊನೇಟ್ ಮತ್ತು ತೈಲಾಮ್ಲಗಳ ಅಮೈನುಗಳನ್ನೂ ಎಂಜಿನ್ನಿನಲ್ಲಿ ಒಳಗೆ ಸೇರುವ ವಾಯುವಿನಲ್ಲಿಯ ತೇವ ತಂಪಾಗಿ ಅಲ್ಲಿಯೇ ಬರ್ಫ್ ಆಗದಿರಲೆಂದು ನೋಡಿಕೊಳ್ಳಲು ಬಫೀಭವನನಿರೋಧಕಗಳೆಂದು ಪಾಲಿಮೆರೀಯ ಪ್ರೋಪೈಲ್, ಆಲ್ಕೊಹಾಲ್, ಗ್ಲೈಕೋಲ್ ಮತ್ತು ಫಾರ್ಮಮೈಡುಗಳನ್ನೂ ಬೆರೆಸುತ್ತಾರೆ.

ಮೋಟರ್ ಪೆಟ್ರೋಲಿನ ಶ್ರೇಣಿ ಮತ್ತು ನಮೂನೆಯನ್ನು ಗುರುತಿಸಲು ಅದನ್ನು ನೀಲಿ, ಕಿತ್ತಳೆ, ಹಳದಿ ಮುಂತಾದ ಬಣ್ಣಗಳಲ್ಲಿ ಮಾರುತ್ತಾರೆ. ಪೆಟ್ರೋಲಿನಲ್ಲಿ ವಿಷಕಾರಿಯಾದ ಸೀಸಸಂಯುಕ್ತಗಳು ಇವೆಯೊ ಇಲ್ಲವೊ ಎಂಬ ಮುನ್ನೆಚ್ಚರಿಕೆಯನ್ನು ಕೊಡಲು ಇವು ಸಹಾಯಕವಾಗುತ್ತವೆ. ಸಾಮಾನ್ಯವಾಗಿ ಉಪಯೋಗಿಸುವ ಬಣ್ಣಗಳೆಂದರೆ -ಠಿ-ಡೈ ಮೀಥೈಲ್ ಅಮೀನೋ ಆeóÉೂಬೆನ್‍ಜೀóನ್ (ಹಳದಿ), 1.4-ಡೈಆಲ್ಕೈಲ್ ಮೀನೊಆ್ಯಂಥ್ರಾಕ್ವಿನೋನ್ (ನೀಲಿ) ಮತ್ತು ಬೆನ್‍ಜೀನ್ ಆeóÉೂ-2-ನ್ಯಾಫ್ಥಾಲ್ (ಕಿತ್ತಳೆ), ಈ ಬಣ್ಣಗಳನ್ನು 1000bbಟ ಗೆ 0.18 - 2.16 ಪೌಂಡು ಪ್ರಮಾಣದಲ್ಲಿ ಬೆರೆಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಮೋಟರ್ ಪೆಟ್ರೋಲಿನಲ್ಲಿ ಎರಡು ವಿಧಗಳಿವೆ; ರೆಗ್ಯುಲರ್ ಶ್ರೇಣಿ, ಪ್ರೀಮಿಯಮ್ ಶ್ರೇಣಿ, ರೆಗ್ಯುಲರ್ ಶ್ರೇಣಿಯ ಪೆಟ್ರೋಲಿನ ಆಕ್ಟೇನ್ ಸಂಖ್ಯೆ 86-94ರ ವರೆಗೆ ಇದ್ದರೆ ಪ್ರೀಮಿಯಮ್ ಶ್ರೇಣಿಯದು 92-100ರ ವರೆಗೆ ಇರುತ್ತದೆ.

ವಾಯುಮಾನ (ಏವಿಯೇಷನ್) ಪೆಟ್ರೋಲಿನಲ್ಲಿ ಹೆಚ್ಚಾಗಿ ಪಾಲಿಮೆರೀಯ ಹೈಡ್ರೋಕಾರ್ಬನ್ನುಗಳು ಮತ್ತು ಸ್ವಲ್ಪ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ನುಗಳಿರುತ್ತವೆ. ನೇರವಾಗಿ ದೊರೆತ ನ್ಯಾಫ್ಥಾಕ್ಕೆ ಸ್ವಲ್ಪ ಐಸೊಪೆಂಟೇನ್ ಮತ್ತು ಆಲ್ಕೈಲೇಟುಗಳನ್ನು ಬೆರೆಸಿ ಈ ಪೆಟ್ರೋಲನ್ನು ಉತ್ಪಾದಿಸುತ್ತಾರೆ. ಶ್ರೇಷ್ಠ ದರ್ಜೆಯ ವಾಯುಮಾನ ಪೆಟ್ರೋಲನ್ನು ಕೇವಲ ಐಸೊಪೆಂಟೇನ್ ಮತ್ತು ಆಲ್ಕೈಲೇಟುಗಳಿಂದ ತಯಾರಿಸುತ್ತಾರೆ. ವಾಯುಮಾನ ಪೆಟ್ರೋಲಿನ ಆಕ್ಟೇನ್ ಸಂಖ್ಯೆಯನ್ನು ಹೆಚ್ಚಿಸಲು ಅದರಲ್ಲಿ 1 ಲೀಟರ್ ಪೆಟ್ರೋಲಿಗೆ 1 ಮಿಲೀನಷ್ಟು ಟೆಟಿಈಥೈಲ್ ಲೆಡ್ಡನ್ನು ಬೆರೆಸಲಾಗುತ್ತದೆ. ಇದರಲ್ಲಿ ಕೆಲವು ಸಾರಿ ನಿರ್ದಿಷ್ಟ ಮಿತಿಯಲ್ಲಿ ಉತ್ಕರ್ಷಣ ನಿರೋಧಕ ಮತ್ತು ಜಂಗುನಿರೋಧಕಗಳನ್ನು ಬೆರೆಸಿದರೂ ಬರ್ಫಿಭವನ ನಿರೋಧಕಗಳನ್ನು ಮಾತ್ರ ಬೆರೆಸುವುದಿಲ್ಲ. ವಾಯುಮಾನ ಪೆಟ್ರೋಲಿನಲ್ಲಿ ಸ್ಥೂಲವಾಗಿ ಮೂರು ಪ್ರಕಾರಗಳಿವೆ. ಚಿಕ್ಕ ಮತ್ತು ಮಧ್ಯಮ ತರಗತಿಯ ನಾಗರಿಕ ವಿಮಾನಗಳಲ್ಲಿ ಬಳಸುವ ಪೆಟ್ರೋಲ್ ಆಕ್ಟೇನ್ ಸಂಖ್ಯೆ 80-98; ದೊಡ್ಡ ನಾಗರಿಕ ವಿಮಾನಗಳು ಮತ್ತು ಸರಕುಗಳನ್ನು ಸಾಗಿಸುವ ವಿಮಾನಗಳಲ್ಲಿ ಉಪಯೋಗಿಸುವ ಪೆಟ್ರೋಲ್ ಆಕ್ಟೇನ್ ಸಂಖ್ಯೆ 100-135; ಮಿಲಿಟೆರಿ ವಿಮಾನಗಳಲ್ಲೂ ಬಲು ದೂರ ಪ್ರಯಾಣ ಮಾಡುವ ನಾಗರಿಕ ವಿಮಾನಗಳಲ್ಲೂ ಬಳಸುವ ಪೆಟ್ರೋಲ್ ಆಕ್ಟೇನ್ ಸಂಖ್ಯೆ 115-145.

ಸೀಮೆಎಣ್ಣೆ ಅಥವಾ ಕಲ್ಲೆಣ್ಣೆ: ಕಚ್ಚಾ ಎಣ್ಣೆಯನ್ನು ಆಂಶಿಕಾಸವನ ಮಾಡಿದಾಗ ಪೆಟ್ರೋಲಿನ ತರುವಾಯ ಸಂಗ್ರಹವಾಗುವ ಬಟ್ಟೆಯೇ ಸೀಮೆಎಣ್ಣೆ (1750-3250ಅ). ಇದಕ್ಕೆ ಬಣ್ಣವಿಲ್ಲ. ಆದರೆ ವಿಶಿಷ್ಟ ವಾಸನೆ ಉಂಟು. ಇದರ ಮುಖ್ಯ ಘಟಕಗಳೆಂದರೆ ಪರ್ಯಾಪ್ತ ಹೈಡ್ರೋಕಾರ್ಬನ್ನುಗಳು. ಸೀಮೆಎಣ್ಣೆಯನ್ನು ಮೊದಲು ಉಪಯೋಗಿಸುತ್ತಿದ್ದುದು ಬೆಳಕಿಗಾಗಿ. ಈಗ ಅದನ್ನು ಇಂಧನವಾಗಿ ಟ್ರ್ಯಾಕ್ಟರ್, ಜೆಟ್ ವಿಮಾನ ಮತ್ತು ಟರ್ಬೊ ಎಂಜಿನ್ನುಗಳಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಸೀಮೆಎಣ್ಣೆಯನ್ನು ಕ್ರಿಯಾವರ್ಧಾತ್ಮಕ ವಿಭಜನ ವಿಧಾನದ ಮೂಲಕ ಪೆಟ್ರೋಲನ್ನು ತಯಾರಿಸಲು ಉಪಯೋಗಿಸಬಹುದು. ಒಳ್ಳೆಯ ಸೀಮೆಎಣ್ಣೆಯಲ್ಲಿ ಗಂಧಕ ಹಾಗೂ ಆರೊಮ್ಯಾಟಿಕ್ ಸಂಯುಕ್ತಗಳು ಇರಕೂಡದು. ಏಕೆಂದರೆ ಅವು ಕೆಟ್ಟ ವಾಸನೆ ಮತ್ತು ಕಾಡಿಗೆಯುಳ್ಳ ಜ್ವಾಲೆಗೆ ಕಾರಣವಾಗುತ್ತದೆ. ಆದ್ದರಿಂದ ಸೀಮೆಎಣ್ಣೆಯನ್ನು ದ್ರವ ಸಲ್ಫರ್ ಡೈಆಕ್ಸೈಡ್ ಅಥವಾ ಸಲ್ಫ್ಯೂರಿಕ್ ಆಮ್ಲದಿಂದ ಸಾರೀಕರಿಸಿ ಶುದ್ಧಗೊಳಿಸುತ್ತಾರೆ. ಸೀಮೆಎಣ್ಣೆಯನ್ನು ದ್ರಾವಕವಾಗಿಯೂ ಕ್ರಿಮಿನಾಶಕವಾಗಿಯೂ ಉಪಯೋಗಿಸುವುದುಂಟು. ವಿದ್ಯುತ್ತನ್ನು ಪ್ರಪಂಚದ ಎಲ್ಲ ಭಾಗಗಳಿಗೆ ತಲುಪಿಸಲು ಇನ್ನೂ ಸಾಧ್ಯವಾಗಿಲ್ಲ. ಹಾಗೆ ತಲಪದ ಚಿಕ್ಕ ಹಳ್ಳಿಗಳಲ್ಲಿ ಇಂದಿಗೂ ಸೀಮೆಎಣ್ಣೆಯೇ ಬೆಳಕಿನ ಸೆಲೆ.

ಡೀಸಲ್ ಎಣ್ಣೆ: ಡೀಸಲ್ ಎಂಜಿನ್ನುಗಳಲ್ಲಿ ಉಪಯೋಗಿಸುವ ಇಂಧನ. ಕ್ರಿಯಾವರ್ಧಾತ್ಮಕ ವಿಭಜನೆಯಿಂದ ದೊರೆಯುವ ಭಾರ ತೈಲವನ್ನು ಬಟ್ಟಿ ಇಳಿಸಿದಾಗ 2500-5000ಅ ಶ್ರೇಣಿಯಲ್ಲಿ ಕುದಿಯುವ ಭಾಗವಿದು. ಇದನ್ನು ಕಚ್ಚಾ ಎಣ್ಣೆಯಿಂದ ನೇರವಾಗಿಯೂ ಪಡೆಯಬಹುದು. ಆದರೆ, ಹಾಗೆ ದೊರೆತ ಅಂಶಗಳನ್ನು ಸಾಮಾನ್ಯವಾಗಿ ವಿಭಜನ ವಿಧಾನದಿಂದ ಪೆಟ್ರೋಲನ್ನು ತಯಾರಿಸಲು ಬಳಸುತ್ತಾರೆ. ಡೀಸಲ್ ಎಂಜಿನ್ ಕೂಡ ಪೆಟ್ರೋಲ್ ಎಂಜಿನ್ನಿನಂತೆ ಅಂತರ್ದಹನ ಎಂಜಿನ್. ಆದರೆ, ಡೀಸಲ್ ಎಂಜಿನ್ನಿಗೆ ಜ್ವಲನಕ್ಕಾಗಿ ವಿದ್ಯುತ್ ಕಿಡಿಯ ಸಲಕರಣೆ ಬೇಡ. ವಿದ್ಯುತ್ ಕಿಡಿ ಒದಗಿಸಬಹುದಾದ ಉಷ್ಣ ಇಲ್ಲಿ ವಾಯು ಸಂಕೋಚನದಿಂದ ಒದಗುತ್ತದೆ. ಪೆಟ್ರೋಲ್ ಎಂಜಿನ್ನಿನಲ್ಲಿ ಅಪೇಕ್ಷಣೀಯವಾದ ಹೆಚ್ಚಿನ ಆಕ್ಟೇನ್ ಸಂಖ್ಯೆಯ ಇಂಧನ ಡೀಸಲ್ ಎಂಜಿನ್ನುಗಳಲ್ಲಿ ಅನಪೇಕ್ಷಣೀಯವಾದ ಮಂದಜ್ವಲನವನ್ನು ಕೊಡುತ್ತದೆ. ಆದ್ದರಿಂದ ಡೀಸಲ್ ಎಣ್ಣೆಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ಆಕ್ಟೇನ್ ಸಂಖ್ಯೆಗಿಂತ ಅದರ ಸೀಟೇನ್ ಸಂಖ್ಯೆ ಮಹತ್ತ್ವದ್ದು. ಇದು ಇಂಧನದ ಜ್ವಲನ ಸಾಮಥ್ರ್ಯದ ಅಳತೆ. ಅಂದರೆ ಇಂಧನವನ್ನು ಉರುಳೆಯಲ್ಲಿ ತುಂತುರಿಸಿದ ಬಳಿಕ ಎಷ್ಟು ಕಡಿಮೆ ಕಾಲದಲ್ಲಿ ಅದು ಸ್ವತಃ ಜ್ವಲನ ಹೊಂದಿ ಸುಲಲಿತವಾಗಿ ಉರಿಯುತ್ತದೆ ಎಂಬುದರ ಬಗ್ಗೆ ಮಾಹಿತಿ ಕೊಡುವ ಸಂಖ್ಯೆ. ಸೀಟೇನ್ ಸಂಖ್ಯೆಯ ಶ್ರೇಣಿಯಲ್ಲಿ ಸೀಟೇನಿಗೆ (ಅ16ಊ34-ಟಿ-ಹೆಕ್ಸಡೀಕೇನ್, ಆಕ್ಟೇನ್ ಸಂಖ್ಯೆ ಅತಿ ಕಡಿಮೆ ಇರುವ ಒಂದು ಹೈಡ್ರೊಕಾರ್ಬನ್) ಒಳ್ಳೆಯ ಜ್ವಲನ ಸಾಮಥ್ರ್ಯ ಇರುವುದರಿಂದ ಅದಕ್ಕೆ ಮೊಗಮ್ಮಾಗಿ ಸೀಟೇನ್ ಸಂಖ್ಯೆ 100 ಕೊಡಲಾಗಿದೆ; ಮತ್ತು ಅತಿ ಮಂದವಾಗಿ ಉರಿಯುವ -ಮೀಥೈಲ್ ನ್ಯಾಪ್ತಲೀನಿಗೆ 0 ಸೀಟೀನ್ ಸಂಖ್ಯೆಯನ್ನು ಕೊಡಲಾಗಿದೆ. ಸೀಟೇನ್ ಸಂಖ್ಯೆ 25 ಇರುವ ಡೀಸಲ್ ಎಣ್ಣೆ ಅಂದರೆ ಅದರ ಜ್ವಲನ ಸಾಮಥ್ರ್ಯ 25% ಸೀಟೀನ್ ಹಾಗೂ 75% -ಮೀಥೈಲ್ ನ್ಯಾಫ್ತಲೀನ್ ಇರುವ ಮಿಶ್ರಣದ ಜ್ವಲನ ಸಾಮಥ್ರ್ಯಕ್ಕೆ ಸಮ ಎಂದು ಅರ್ಥ. ಡೀಸಲ್ ಎಣ್ಣೆಯ ಮುಖ್ಯ ಉಪಯೋಗ ಬಸ್ಸು, ಲಾರಿ, ರೇಲ್ವೆ ಎಂಜಿನ್ನುಗಳಲ್ಲಿರುವ ಡೀಸಲ್ ಎಂಜಿನ್ನುಗಳಲ್ಲಿ. ಇಲ್ಲಿ ಉಪಯೋಗಿಸುವ ಡೀಸಲ್ ಎಣ್ಣೆಯ ಸೀಟೇನ್ ಸಂಖ್ಯೆ 45-50 ಸಾವಕಾಶಗತಿ ಇರುವ ಡೀಸಲ್ ಎಂಜಿನ್ನುಗಳಲ್ಲಿ ಸೀಟೇನ್ ಸಂಖ್ಯೆ 25-40 ಇರುವ ಡೀಸಲ್ ಎಣ್ಣೆಯನ್ನು ಬಳಸುತ್ತಾರೆ.

ಡೀಸಲ್ ಎಣ್ಣೆಯಲ್ಲಿ ಪ್ರಸಾಮಾನ್ಯ ಹೈಡ್ರೊಕಾರ್ಬನ್ನುಗಳು ಇದ್ದಲ್ಲಿ ಅದು ಒಳ್ಳೆಯ ಇಂಧನವಾಗುತ್ತದೆ. ಆದರೆ, ಸಂಸ್ಕರಣ ಸ್ಥಾವರದಲ್ಲಿ ಉತ್ಪಾದಿಸಿದ ಡೀಸಲ್ ಎಣ್ಣೆಯಲ್ಲಿ ಪಾಲಿಮೆರೀಯ ಹೈಡ್ರೋಕಾರ್ಬನ್ನುಗಳೂ ಆರೊಮ್ಯಾಟಿಕ್ ಸಂಯುಕ್ತಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಅದರ ಸೀಟೇನ್ ಸಂಖ್ಯೆ ಕಡಿಮೆ. ಸೀಟೇನ್ ಸಂಖ್ಯೆಯನ್ನು ಹೆಚ್ಚಿಸಲು ಅದರಲ್ಲಿ ಆಲ್ಕೈಲ್ ನೈಟ್ರೇಟ್, ಕಾರ್ಬಮೇಟ್ ಮತ್ತು ಪೆರಾಕ್ಸೈಡುಗಳನ್ನು ಬೆರೆಸುತ್ತಾರೆ. ಹೆಚ್ಚಿನ ಕುದಿಬಿಂದು ಇರುವ ಹೈಡ್ರೋಕಾರ್ಬನ್ನುಗಳು ಡೀಸಲ್ ಎಣ್ಣೆಯಲ್ಲಿದ್ದರೆ ಹೆಚ್ಚಿನ ಉಷ್ಣವನ್ನು ಪಡೆಯಬಹುದು. ಆದರೆ ಆಗ ಎಂಜಿನ್ನಿನಲ್ಲಿ ಕಾಡಿಗೆ ಲೇಪವಾಗುತ್ತದೆ. ಇನ್ನೂ ಕಡಿಮೆ ಕುದಿಬಿಂದು ಇರುವ ಹೈಡ್ರೋಕಾರ್ಬನ್ನುಗಳಿದ್ದರೆ ಬೇಗನೆ ಜ್ವಲನ ಹೊಂದಿ ಸ್ವಚ್ಚವಾಗಿ ಉರಿಯುತ್ತದೆ. ಆದರೆ ಉಷ್ಣ ಕಡಿಮೆ. ಹೀಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಡೀಸಲ್ ಎಣ್ಣೆಯಲ್ಲಿ ಎರಡನ್ನೂ ಯುಕ್ತ ಪ್ರಮಾಣದಲ್ಲಿ ಬೆರೆಸಲಾಗಿರುತ್ತದೆ. ಡೀಸಲ್ ಎಣ್ಣೆಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ಮುಖ್ಯವಾದ ಅಂಶವೆಂದರೆ ಅದರ ಶ್ಯಾನತೆ. ಡೀಸಲ್ ಎಂಜಿನ್ನುಗಳಲ್ಲಿ ತೈಲರೇಚಕ ಅವಶ್ಯ. ಇದರಿಂದ ಇಂಧನವನ್ನು ಜೀಕಳಿಸುವ ಬಲ. ಇಂಧನವನ್ನು ತುಂತುರಿಸಿದಾಗ ಅದರ ಹನಿಗಳ ಗಾತ್ರ. ರೇಚಕದಲ್ಲಿ ಸೋರುವುದು__ಇವೆಲ್ಲ ಡೀಸಲ್ ಎಣ್ಣೆಯ ಶ್ಯಾನತೆಯನ್ನು ಅವಲಂಬಿಸಿರುತ್ತವೆ.

ಫ್ಯೂಯಲ್ ಎಣ್ಣೆ: ಇದನ್ನು ಮುಖ್ಯವಾಗಿ ಔದ್ಯೋಗಿಕ ಬಾಯಿಲರಿನಲ್ಲಿ ಹಡಗಿನಲ್ಲಿರುವ ಬಾಯಿಲರಿನಲ್ಲಿ ಹಾಗೂ ವಿದ್ಯುತ್ ಸ್ಥಾವರದಲ್ಲಿ ಉಗಿಯನ್ನು ಉತ್ಪಾದಿಸುವಲ್ಲಿ ಇಂಧನದಂತೆ ಉಪಯೋಗಿಸುತ್ತಾರೆ. ಫ್ಯೂಯಲ್ ಎಣ್ಣೆಯಲ್ಲಿ ಕ್ರಿಯಾವರ್ಧಾತ್ಮಕ ವಿಭಜನೆ, ಉಷ್ಣೀಯ ವಿಭಜನೆ ವಿವಿಧ ಶ್ರೇಣಿಗಳ ಬಟ್ಟಿಗಳ ಆಂಶಿಕ ಆಸವನ ಮುಂತಾದ ಕಾರ್ಯಾಚರಣೆಗಳಲ್ಲಿ ಉಳಿಯುವ ಉಳಿಕೆ ಎಣ್ಣೆಗಳೆಲ್ಲವೂ ಸೇರುತ್ತವೆ. ಬಟ್ಟಿ ಇಳಿಸುವುದರಿಂದ ನೇರವಾಗಿ ದೊರೆತ ಫ್ಯೂಯಲ್ ಎಣ್ಣೆಯಲ್ಲಿ ಏನನ್ನೂ ಬೆರೆಸುವುದಿಲ್ಲ. ಅದನ್ನು ಹಾಗೆಯೇ ಮನೆಗಳನ್ನು ಬಿಸಿಯಾಗಿಡಲು, ಜ್ವಾಲಕಗಳನ್ನು ಉರಿಸಲು ಮುಂತಾದ ಗೃಹೋಪಯೋಗಗಳಿಗೆ ಬಳಸುತ್ತಾರೆ. ಆದರೆ, ಉಳಿಕೆ ಎಣ್ಣೆಗಳಿಗೆ ಮಾತ್ರ ಇಚ್ಛಿತ ಶ್ಯಾನತೆಯ ಫ್ಯೂಯಲ್ ಎಣ್ಣೆಯನ್ನು ತಯಾರಿಸಲು ಯುಕ್ತ ಪ್ರಮಾಣದಲ್ಲಿ ಇತರ ಬಟ್ಟಿಗಳನ್ನು ಸೇರಿಸುತ್ತಾರೆ. ಫ್ಯೂಯಲ್ ಎಣ್ಣೆಯಲ್ಲಿ ಗಂಧಕದ ಪ್ರಮಾಣ ಹೆಚ್ಚಾಗಿದ್ದರೆ (4%) ಅದು ಸಲ್ಫರ್ ಟ್ರೈಆಕ್ಸೈಡ್ ಆಗಿ ಕೊರೆತ ಹಾಗೂ ಪರಿಸರಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಒಳ್ಳೆಯ ಫ್ಯೂಯಲ್ ಎಣ್ಣೆಯಲ್ಲಿ ಗಂಧಕ 1% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ.

ಕೀಲೆಣ್ಣೆಗಳು: ಒಳ್ಳೆಯ ಕೀಲೆಣ್ಣೆಗೆ ಇರಬೇಕಾದ ಮುಖ್ಯ ಗುಣಗಳಿವು : ಯುಕ್ತ ಶ್ಯಾನತೆ ಇರಬೇಕು. ಹೆಚ್ಚಿನ ಉಷ್ಣತೆಯಲ್ಲಿ ಅದು ಸ್ಥಿರವಾಗಿ ಉಳಿಯಬೇಕು, ಉತ್ಕರ್ಷಣೆ ಹೊಂದಬಾರದು. ಕಚ್ಚಾ ಎಣ್ಣೆ ಇಂಥ ಕೀಲೆಣ್ಣೆಗಳಿಗೆ ಯುಕ್ತ ಮೂಲ. ಏಕೆಂದರೆ ಕಚ್ಚಾ ಎಣ್ಣೆಯಲ್ಲಿ 100-1500ರ ವರೆಗೆ ಅಣುತೂಕವಿರುವ ವಿವಿಧ ಶ್ಯಾನತೆಯ ದ್ರವ ವಸ್ತುಗಳುಂಟು. ಇವುಗಳ ಪೈಕಿ ಕೀಲೆಣ್ಣೆಗಳಾಗಿ ಉಪಯೋಗಿಸಲು ಯೋಗ್ಯ ಘಟಕಗಳೆಂದರೆ ಮೇಣರಹಿತ ಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ಮತ್ತು ಏಕಚಕ್ರೀಯ ಆರೊಮ್ಯಾಟಿಕ್ ಸಂಯುಕ್ತಗಳು ಎಂದು ಕಂಡುಬಂದಿವೆ. ಆದ್ದರಿಂದ ಕಚ್ಚಾ ಎಣ್ಣೆಯಿಂದ ಈ ಘಟಕಗಳನ್ನು ಬೇರ್ಪಡಿಸಿ ಕೀಲೆಣ್ಣೆಗಳನ್ನು ತಯಾರಿಸುತ್ತಾರೆ. ಕಚ್ಚಾ ಎಣ್ಣೆಯನ್ನು ಆಂಶಿಕಾಸವನ ಮಾಡಿ ಪೆಟ್ರೋಲ್, ಸೀಮೆಎಣ್ಣೆ, ಡೀಸಲ್ ಎಣ್ಣೆಗಳನ್ನು ಸಂಗ್ರಹಿಸಿದ ಬಳಿಕ ಆಂಶಿಕಾಸವನದ ಗೋಪುರದ ಕೆಳಗೆ ಉಳಿಕೆ ಎಣ್ಣೆ ಸಂಗ್ರಹವಾಗುತ್ತದೆ. ಇದನ್ನು ಪುನಃ ಕಡಿಮೆ ವಾತಾವರಣದ ಒತ್ತಡದಲ್ಲಿ ಬಟ್ಟಿ ಇಳಿಸಿದರೆ ಇಚ್ಛಿತ ಶ್ರೇಣಿಯ ಶ್ಯಾನತೆ ಹಾಗು ಕುದಿಬಿಂದು ಇರುವ ಕೀಲೆಣ್ಣೆಗಳು ದೊರೆಯುತ್ತವೆ. ಈ ರೀತಿ ದೊರೆತ ಕೀಲೆಣ್ಣೆಗಳಲ್ಲಿ ವಿಷಮಚಕ್ರೀಯ (ಹೆಟಿರೊಸೈಕ್ಲಿಕ್) ಸಂಯುಕ್ತಗಳು ಹಾಗೂ ಬಹುಚಕ್ರೀಯ (ಪಾಲಿಸೈಕ್ಲಿಕ್) ಆರೊಮ್ಯಾಟಿಕ್ ಸಂಯುಕ್ತಗಳು ಮತ್ತು ಮೇಣಗಳು ಇರುತ್ತವೆ. ಕೀಲೆಣ್ಣೆಗಳನ್ನು ಇವುಗಳಿಂದ ಮುಕ್ತ ಮಾಡಲು ದ್ರವ ಸಲ್ಫರ್ ಡೈ ಆಕ್ಸೈಡ್, ಫೀನಾಲ್ ಅಥವಾ ಫುರಫುರಾಲುಗಳನ್ನು ಉಪಯೋಗಿಸಿ ಸಾರೀಕರಣ ಮಾಡುತ್ತಾರೆ. ಹೆಚ್ಚಿನ ಕುದಿಬಿಂದು ಇರುವ ಮೇಣಗಳನ್ನು ಸ್ಪಟಿಕೀಕರಣದಿಂದಲೂ ಬೇರ್ಪಡಿಸುತ್ತಾರೆ.

ಕೀಲೆಣ್ಣೆಗಳ ಮಟ್ಟವನ್ನು ಸುಧಾರಿಸಲು ಸಾಮಾನ್ಯವಾಗಿ ರಾಸಾಯನಿಕ ವಸ್ತುಗಳನ್ನು ಕೀಲೆಣ್ಣೆಗಳಲ್ಲಿ ಬೆರೆಸುತ್ತಾರೆ. ಯಾವ ಸಂದರ್ಭದಲ್ಲಿ ಎಂಥ ಕೀಲೆಣ್ಣೆಯನ್ನು ಉಪಯೋಗಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಅದರ ಶ್ಯಾನತೆ ಮುಖ್ಯವಾದದ್ದು. ಕಡಿಮೆ ಶ್ಯಾನತೆಯುಳ್ಳ ಕೀಲೆಣ್ಣೆಗಳನ್ನು ಬಳಸುವ ಯಂತ್ರಗಳೇ ಹೆಚ್ಚು. ಏಕೆಂದರೆ ಇವು ಹಗುರವಾಗಿದ್ದು, ಉಚ್ಚತರ ಉಷ್ಣವರ್ಗಾವಣೆಯನ್ನು ಮಾಡುತ್ತವೆ. ಮತ್ತು ಅವುಗಳಲ್ಲಿ ಘರ್ಷಣೆಯೂ ಕಡಿಮೆ. ಆದರೆ, ಯಂತ್ರಗಳ ಕೀಲುಗಳ ಮೇಲೆ ಉಷ್ಣ ಮತ್ತು ತೂಕ ಹೆಚ್ಚಾದಾಗ ಶ್ಯಾನತೆ ಹೆಚ್ಚಾಗಿರುವ ಹಾಗೂ ಬೇಗನೆ ಬಾಷ್ಪವಾಗದಿರುವ ಕೀಲೆಣ್ಣೆ ಬೇಕಾಗುತ್ತದೆ. ಉಷ್ಣತೆ ಹೆಚ್ಚಾದಂತೆ ಕೀಲೆಣ್ಣೆಯ ಶ್ಯಾನತೆ ಸಾಮಾನ್ಯವಾಗಿ ಕಡಿಮೆ ಆಗುತ್ತದೆ. ಹಾಗೆ ಆಗದಿರಲೆಂದು ಹಗುರವಾದ ಕೀಲೆಣ್ಣೆಗಳಲ್ಲಿ ದಟ್ಟ ಕಾರಕಗಳೆಂದು ಪಾಲಿಬ್ಯುಟೇನ್ ಮತ್ತು ಪಾಲಿಮೀಥೆಕ್ರಿಲೇಟುಗಳನ್ನು ಬೆರಸುತ್ತಾರೆ. ಕೀಲೆಣ್ಣೆಗಳಲ್ಲಿರುವ ದ್ರವನಬಿಂದು ಉನ್ನತ ಮೇಣಗಳನ್ನು ತೆಗೆದುಹಾಕಿದರೂ ನಿಮ್ನ ದ್ರವನಬಿಂದು ಮೇಣಗಳು ಅದರಲ್ಲಿ ಉಳಿದು ಕೀಲೆಣ್ಣೆಯ ದ್ರವರೂಪಕ್ಕೆ ಅಡ್ಡಿಯಾಗುತ್ತವೆ. ಆದ್ದರಿಂದ ಎಂಥ ಕಡಿಮೆ ಉಷ್ಣತೆಯಲ್ಲೂ ಕೀಲೆಣ್ಣೆ ಅದರ ದ್ರವರೂಪವನ್ನು ಉಳಿಸಿಕೊಳ್ಳುವಂತೆ ಮಾಡಲು ಮೆಟಾಲಿಕ್ ಸಾಬೂನುಗಳು, ಆಲ್ಕೈಲ್ ನ್ಯಾಫ್ತಲೀನುಗಳು, ಪಾಲಿಮೀಥೈಕ್ರಲೇಟ್ ಮುಂತಾದುವನ್ನು ಅದರಲ್ಲಿ ವಿಲೀನಿಸುತ್ತಾರೆ. ಕೀಲೆಣ್ಣೆಗಳಲ್ಲಿ ಅಲ್ಯೂಮಿನಿಯಮ್, ಕ್ಯಾಲ್ಸಿಯಮ್, ಸೋಡಿಯಮ್, ಲೀಥಿಯಮ್ ಮುಂತಾದುವುಗಳ ಸಾಬೂನಗಳನ್ನು ಬೆರೆಸಿ ದಟ್ಟವಾಗಿ ಮಾಡಿದರೆ ಅವುಗಳಿಗೆ ಗ್ರೀಸ್ ಅನ್ನುತ್ತಾರೆ. ಈಗ ಕೀಲೆಣ್ಣೆಗಳಲ್ಲಿ ಪಾಲಿ ಎಥಿಲೀನ್ ಹಾಗೂ ಸಿಲಿಕಾಗಳಂಥ ವಸ್ತುಗಳನ್ನು ಬೆರೆಸಿಯೂ ಗ್ರೀಸನ್ನು ತಯಾರಿಸುತ್ತಾರೆ.

ಪೆಟ್ರೋಲಿಯಮ್ ಮೇಣಗಳು: ಇವು ಪೆಟ್ರೋಲಿಯಮ್ಮಿನ ಪರಿಚಿತ ಉತ್ಪನ್ನಗಳು. ಮಾರುಕಟ್ಟೆಯಲ್ಲಿ ದೊರೆಯುವ ಪೆಟ್ರೋಲಿಯಮ್ಮಿನ ಮೇಣಗಳಲ್ಲಿ ಮೂರು ಪ್ರಕಾರಗಳುಂಟು; ಪ್ಯಾರಾಫಿನ್ ಮೇಣ, ಸೂಕ್ಷ್ಮ ಸ್ಫಟಿಕಾಕೃತಿಯ ಮೇಣ, ಪೆಟ್ರೊಲ್ಯಾಟಮ್. ಪ್ಯಾರಾಫಿನ್ ಮೇಣ ದೊಡ್ಡ ಸೂಜಿ ಆಕಾರದಲ್ಲಾಗಲಿ ತಟ್ಟೆ ಆಕಾರದಲ್ಲಾಗಲಿ ಸ್ಫಟಿಕೀಕರಣಗೊಳ್ಳುತ್ತದೆ. ಇದರಲ್ಲಿ 20 ರಿಂದ 30 ಇಂಗಾಲದ ಪರಮಾಣುಗಳುಳ್ಳ 360 ರಿಂದ 420ರ ವರಗೆ ಅಣುತೂಕ ಇರುವ ಪ್ರಸಾಮಾನ್ಯ ಹೈಡ್ರೊಕಾರ್ಬನ್ನುಗಳಿರುತ್ತವೆ. ಸೂಕ್ಷ್ಮ ಸ್ಫಟಿಕಾಕೃತಿಯಲ್ಲಿ ಸ್ಫಟಿಕೀಕರಣಗೊಳ್ಳುವ ಎರಡನೆಯ ತರಹದ ಮೇಣದಲ್ಲಿ 40 ರಿಂದ 50 ಇಂಗಾಲದ ಪರಮಾಣುಗಳುಳ್ಳ 580 ರಿಂದ 700ರ ವರೆಗೆ ಅನುತೂಕವುಳ್ಳ ಆಲ್ಕೈಲ್ ನ್ಯಾಫ್ತೀನಗಳು ಮತ್ತು ಪಾಲಿಮೇರಿಯ ಹೈಡ್ರೋಕಾರ್ಬನ್ನುಗಳು ಇರುತ್ತವೆ. ಪೆಟ್ರೋಲ್ಯಾಟಮ್ಮಿಗೆ ಪೆಟ್ರೋಲಿಯಮ್ ಜೆಲ್ಲಿ ಎಂದೂ ಹೆಸರುಂಟು. ಇದರಲ್ಲಿ ದ್ರವ ಹಾಗೂ ಘನ ಎರಡೂ ರೂಪದ ಹೈಡ್ರೋಕಾರ್ಬನ್ನುಗಳಿರುತ್ತವೆ. ಇದೊಂದು ಕಲಿಲ ವಸ್ತು. ಇದರಲ್ಲಿ ದ್ರವ ಹೈಡ್ರೊಕಾರ್ಬನ್ನುಗಳು ಘನ ಹೈಡ್ರೊಕಾರ್ಬನ್ನುಗಳಲ್ಲಿ ಪ್ರತ್ಯೇಕವಾದ ಸಣ್ಣ ಹನಿಗಳ ರೂಪದಲ್ಲಿರುತ್ತವೆ.

ಈ ಮೂರೂ ಪ್ರಕಾರದ ಮೇಣಗಳು ಕೀಲೆಣ್ಣೆಗಳ ಸಂಸ್ಕರಣೆಯಲ್ಲಿ ಉಪೋತ್ಪನ್ನಗಳಾಗಿ ದೊರೆಯುವುವು. ಪ್ಯಾರಾಫಿನ್ ಮೇಣ ಪ್ಯಾರಾಫಿನ್ ಬಟ್ಟಿಯಲ್ಲಿ ಹೆಚ್ಚಿನ ಮೊತ್ತದಲ್ಲಿರುತ್ತದೆ. ಕಚ್ಚಾ ಎಣ್ಣೆಯ ಆಂಶಿಕಾಸವನದಲ್ಲಿ ಹೆಚ್ಚು ಕಡಿಮೆ 4500ಅ ಗಿಂತ ಕಡಿಮೆ ಉಷ್ಣತೆಯ ಶ್ರೇಣಿಯಲ್ಲಿ ಸಂಗ್ರಹಿಸಲಾಗುವ ಸೀಮೆಎಣ್ಣೆಯ ಅನಂತರದ ಬಟ್ಟಿಗೆ ಪ್ಯಾರಾಫಿನ್ ಬಟ್ಟಿ ಎಂದು ಹೆಸರು. ಇದನ್ನು ತಂಪುಗೊಳಿಸಿದಾಗ ಇದರಲ್ಲಿದ್ದ ಮೇಣ ಸ್ಪಟಿಕಗಳಾಗಿ ರೂಪುಗೊಳ್ಳುತ್ತದೆ. ಇವನ್ನು ಶೋಧಿಸಿ ಬೇರ್ಪಡಿಸಲಾಗುತ್ತದೆ. ಆಗ ಈ ಮೇಣದಲ್ಲಿ ಇನ್ನೂ 10%-30% ವರೆಗೆ ಅಂಶ ಇರುತ್ತದೆ. ಇದಕ್ಕೆ ಅಳ್ಳಕ ಮೇಣ ಎಂದು ಹೆಸರು. ಇದನ್ನು ರಂಧ್ರವಿರುವ ತಟ್ಟೆಯಲ್ಲಿ ಘನೀಕರಿಸಿ ಅನಂತರ ಸಾವಕಾಶವಾಗಿ ಇದಕ್ಕೆ ಕಾವು ಕೊಟ್ಟು ಇದರಲ್ಲಿರುವ ಎಣ್ಣೆಯ ಪ್ರಮಾಣವನ್ನು 1.5%ರ ವರೆಗೆ ತರುತ್ತಾರೆ. ಇಂಥ ಮೇಣಕ್ಕೆ ಹೆಪ್ಪು ಮೇಣವೆಂದು (ಸ್ಕೇಲ್ ವ್ಯಾಕ್ಸ್) ಹೆಸರು. ಒಳ್ಳೆಯ ಮೇಣದಲ್ಲಿ ಎಣ್ಣೆಯ ಪ್ರಮಾಣ 0.5% ರಷ್ಟು ಕಡಿಮೆ ಇರುತ್ತದೆ. ಉಳಿಕೆ ಎಣ್ಣೆಯಲ್ಲಿರುವ ಆಸ್ಪಾಲ್ಟನ್ನು ತೆಗೆದ ಮೇಲೆ ಉಳಿಯುವ ಸಂಗ್ರಹದಿಂದ ಪೆಟ್ರೋಲ್ಯಾಟಮ್ ಮತ್ತು ಸೂಕ್ಷ್ಮ ಸ್ಫಟಿಕಾಕೃತಿಯ ಮೇಣಗಳನ್ನು ತಯಾರಿಸುತ್ತಾರೆ. ಮೊದಲು ಈ ಸಂಗ್ರಹವನ್ನು ಅಲ್ಯೂಮಿನಾ ಅಥವಾ ಪುಲ್ಲರ್ಸ್ ಆರ್ತನ್ನು ಬಳಸಿ ನಿರ್ವರ್ಗೀಕರಿಸುತ್ತಾರೆ. ಅನಂತರ ಬಂದ ಉತ್ಪನ್ನವನ್ನು ನ್ಯಾಗ್ರಾದಲ್ಲಿ ವಿಲೀನಿ ತಂಪುಗೊಳಿಸಿ ಕೇಂದ್ರಾಪಗಮನ ಮಾಡಿ ಮೇಣದಂಥ ವಸ್ತುವನ್ನು ಬೇರ್ಪಡಿಸುತ್ತಾರೆ. ಅದನ್ನು ಬಟ್ಟಿ ಇಳಿಸುವಾಗ ಉಳಿಯುವ ವಸ್ತುವೇ ಪೆಟ್ರೋಲ್ಯಾಟಮ್ ಅಥವಾ ಪೆಟ್ರೋಲಿಯಮ್ ಜೆಲ್ಲಿ. ಇದನ್ನು ಪುನಃ ತಂಪುಗೊಳಿಸಿ ಸ್ಫಟಿಕೀಕರಿಸುವುದರಿಂದ ಸೂಕ್ಷ್ಮ ಸ್ಫಟಿಕಾಕೃತಿಯ ಮೇಣವನ್ನು ತಯಾರಿಸಲಾಗುತ್ತದೆ.

ಪೆಟ್ರೋಲಿಯಮ್ ಮೇಣಗಳನ್ನು ಪರಂಪರಾಗತವಾಗಿ ಉಪಯೋಗಿಸುತ್ತ ಬಂದಿರುವುದು ಮೇಣಬತ್ತಿಯ ಉದ್ದಿಮೆಯಲ್ಲಿ. ಕಾಗದದ ಉದ್ದಿಮೆ ಈ ಮೇಣಗಳನ್ನು ಬಲು ದೊಡ್ಡ ಮೊತ್ತದಲ್ಲಿ ಉಪಯೋಗಿಸುತ್ತದೆ. ಪ್ಯಾರಾಫಿನ್ ಮೇಣಕ್ಕೆ ಬಣ್ಣ, ವಾಸನೆ, ರುಚಿ ಇಲ್ಲ. ಮತ್ತು ಅದು ನೀರಿನ ಆವಿಯಿಂದ ಅಬಾಧಿತ. ಆದ್ದರಿಂದ ಆಹಾರ ಸಾಮಗ್ರಿಗಳ ಪುಡಿಕೆಗಳಿಗೆ ಬೇಕಾಗುವ ಕಾಗದ, ಇಂಗಾಲ ಕಾಗದ, ಜಲನಿರೋಧಕ ಕ್ಯಾನ್‍ವಾಸ್ ಬಟ್ಟೆ ಇವನ್ನು ತಯಾರಿಸಲು ಪ್ಯಾರಾಫಿನ್ ಮೇಣವನ್ನು ಬಳಸುತ್ತಾರೆ. ಬೆಂಕಿಕಡ್ಡಿ, ಬಣ್ಣದ ಪೆನ್ಸಿಲ್, ಪಾಲಿಶ್ ತಯಾರಿಸುವಲ್ಲಿ ಮತ್ತು ಕಾರ್ಡ್‍ಬೋರ್ಡ್ ಹಾಗೂ ಕಾಗದಗಳಲ್ಲಿಯ ರಂಧ್ರಗಳನ್ನು ತುಂಬುವಲ್ಲಿಯೂ ಇದರ ಉಪಯೋಗ ಬಹಳ. ಪೆಟ್ರೋಲಿಯಮ್ ಜೆಲ್ಲಿ ನೀರಿನಲ್ಲಿ ವಿಲೀನವಾಗುವುದಿಲ್ಲ ಮತ್ತು ಚರ್ಮಕ್ಕೆ ಸವರಿದಾಗ ನೋವು ಉಂಟುಮಾಡುವುದಿಲ್ಲ. ಆದ್ದರಿಂದ ಇದನ್ನು ಔಷಧ ಸಾಮಗ್ರಿ ಉದ್ದಿಮೆ ಮತ್ತು ಶೃಂಗಾರ ಸಾಧನ ಉದ್ದಿಮೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಸಾಬೂನಿನ ತಯಾರಿಕೆಗೆ ಬೇಕಾಗುವ ತೈಲಾಮ್ಲಗಳನ್ನು ಮೇಣಗಳ ಉತ್ಕರ್ಷಣೆಯಿಂದ ತಯಾರಿಸಬಹುದು.

ಬಿಟ್ಯುಮೆನ್: ಇದಕ್ಕೆ ಆಸ್ಫಾಲ್ಟಿಕ್ ಬಿಟ್ಯುಮೆನ್ ಎಂದೂ ಹೆಸರಿದೆ. ಕಚ್ಚಾ ಎಣ್ಣೆಯ ಆಂಶಿಕಾಸವನಾ ನಂತರ ಉಳಿಯುವ ಉಳಿಕೆ ಎಣ್ಣೆಯನ್ನು ಕಡಿಮೆ ವಾತಾವರಣದ ಒತ್ತಡದಲ್ಲಿ ಬಟ್ಟಿ ಇಳಿಸಿದಾಗ ಉಳಿಯುವ ವಸ್ತುವೇ ಬಿಟ್ಯುಮೆನ್. ಇದರಲ್ಲಿ ನೀರಿನ ಉಗಿ ಹಾಯಿಸಿ ಬಾಷ್ಪೀಭವಿಸಬಲ್ಲ ಹೈಡ್ರೊಕಾರ್ಬನ್ನುಗಳನ್ನು ನಿವಾರಿಸಿ ಇದನ್ನು ಸಂಸ್ಕರಿಸುತ್ತಾರೆ. ಇದಕ್ಕೆ ನೇರವಾಗಿ ದೊರೆತ ಬಿಟ್ಯುಮೆನ್ ಆನ್ನುತ್ತಾರೆ. ಬಿಟ್ಯುಮೆನ್ ಒಂದು ಅಸ್ಪಟಿಕ ವಸ್ತು. ಇದರಲ್ಲಿ ಅಸ್ಪಾಲ್ಟಿನ್, ಕಾರ್ಬನ್ ಮತ್ತು ಕಾರ್ಬಾಯಿಡುಗಳು ಎಣ್ಣೆ ಹಾಗೂ ರೆಸಿನುಗಳೊಂದಿಗೆ ಕೂಡಿ ಇರುತ್ತವೆ. ಬಿಟ್ಯುಮೆನ್ ಸುಲಭವಾಗಿ ಹರಿಯುವಷ್ಟು ತೆಳ್ಳಗಾದ ದ್ರವರೂಪದಲ್ಲಿಯೂ ಬಿರುಸಾದ ರೂಪದಲ್ಲಿಯೂ ಇರುತ್ತದೆ. ಬಿಟ್ಯುಮೆನ್ನಗಳನ್ನು ಅವುಗಳ ಛೇದನಬಿಂದು (ಪೆನೆಟ್ರೇಷನ್ ಪಾಯಿಂಟ್). ಮೃದುಬಿಂದು (ಸಾಫ್ಟನಿಂಗ್ ಪಾಯಿಂಟ್) ಮತ್ತು ಶ್ಯಾನತೆ ಇವುಗಳ ಮೇಲಿಂದ ವರ್ಗೀಕರಿಸುತ್ತಾರೆ. ದತ್ತ ಛೇದನ ಬಿಂದುವಿಗೆ ಹೆಚ್ಚಿನ ಮೃದು ಬಿಂದು ಇರುವ ಅಥವಾ ದತ್ತ ಮೃದುಬಿಂದುವಿಗೆ ಹೆಚ್ಚಿನ ಛೇದನ ಬಿಂದು ಇರುವ ಬಿಟ್ಯಮೆನ್ನನ್ನು ಒಳ್ಳೆಯ ಬಿಟ್ಯುಮೆನ್ ಎಂದು ಪರಿಗಣಿಸಲಾಗುತ್ತದೆ. ಛೇದನಬಿಂದುವನ್ನು ಅಳೆಯಬೇಕಾದರೆ ಮೊನಚಾದ ತುದಿಯಿಂದ ವಿಶೇಷ ಪ್ರಕಾರದ ಸೂಜಿಯನ್ನು ಬಿಟ್ಯುಮೆನ್ನಿನ ಮೇಲೆ ಇಟ್ಟು ಅದರ ಮೇಲೆ 770ಅ ಉಷ್ಣತೆಯಲ್ಲಿ 100 ಗ್ರಾಮ್ ಭಾರವನ್ನು 5 ಸೆಕೆಂಡ್ ತನಕ ಇಟ್ಟು ಎಷ್ಟು ಮಿ.ಮೀ. ಆಳವನ್ನು ಛೇದಿಸಿಕೊಂಡು ಆ ಸೂಜಿ ಬಿಟ್ಯುಮೆನ್ನನ್ನು ಸೇರುವುದು ಎಂಬುದನ್ನು ಅಳೆಯುತ್ತಾರೆ. ಮಾನವ ಉಪಯೋಗಿಸಿದ ಮೊತ್ತಮೊದಲನೆಯ ಪೆಟ್ರೋಲಿಯಮ್ ಉತ್ಪನ್ನವೇ ಬಿಟ್ಯುಮೆನ್. ರಸ್ತೆ ಮಾಡುವಲ್ಲಿ ಹೆಚ್ಚಾಗಿ ಇದರ ಬಳಕೆ. ಛಾವಣೆ ಹಾಕಲು, ಜಲ ನಿರೋಧಕ ಕಾಗದ ತಯಾರಿಸಲು ಮತ್ತು ಕೊಳವೆಗಳು ಸೋರದಂತೆ ಮಾಡಲು ಇದನ್ನು ಉಪಯೋಗಿಸುವುದರ ಜೊತೆಗೆ ವಿದ್ಯುದುಪಕರಣಗಳ ಅವಾಹಕದಂತೆ ಕೂಡ ಉಪಯೋಗಿಸುತ್ತಾರೆ.

ಪೆಟ್ರೋಲಿಯಮ್-ಕೋಕ್: ಇದು ಉಷ್ಣೀಯ ವಿಭಜನ ಕಾರ್ಯಾಚರಣೆಯಲ್ಲಿ ದೊರೆಯುವ ಉಪೋತ್ಪನ್ನ. ಇದನ್ನು ಅತಿ ಶುದ್ಧ ಇಂಗಾಲದ ತಯಾರಿಕೆಗೆ ಉಪಯೋಗಿಸುತ್ತಾರೆ. ಮಂದ ಕಪ್ಪು ಬಣ್ಣದ ನೂಲಿನಂತಿರುವ ಘನ ವಸ್ತುವಿದು. ಸುಟ್ಟಾಗ ಉಳಿಯುವ ಬೂದಿ ಬಲು ಕಡಿಮೆ. ಗಂಧಕಾಂಶ ಕಡಿಮೆ ಇರುವ ಕೋಕನ್ನು ವಿದ್ಯುಚ್ಛಾಪ ಕುಲುಮೆಗಳಿಗೆ ಬೇಕಾಗುವ ಇಂಗಾಲದ ವಿದ್ಯುದ್ರವಗಳನ್ನು ತಯಾರಿಸಲು ಬಳಸುತ್ತಾರೆ. ಇದನ್ನು ಕ್ಯಾಲ್ಸಿಯಮ್ ಕಾರ್ಬೈಡ್, ಘರ್ಷಕ ಮತ್ತು ಕೃತಕ ಗ್ರಾಫೈಟನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರ ಉಪಯೋಗ ನ್ಯೂಕ್ಲಿಯರ್ ರಿಯಾಕ್ಟರ್‍ಗಳಲ್ಲಿ ಸಹ ಉಂಟು.

ನ್ಯಾಪ್ಥಾಗಳು: ಇವುಗಳಿಗೆ ಔದ್ಯೋಗಿಕ ನ್ಯಾಪ್ಥಾಗಳು ಅಥವಾ ಪೆಟ್ರೋಲಿಯಮ್ ಲೀನಕಾರಿಗಳು ಎಂದೂ ಹೆಸರುಂಟು. ಇವು ಹೈಡ್ರೊಕಾರ್ಬನ್ನುಗಳ ಕ್ಲಿಷ್ಟ ಮಿಶ್ರಣಗಳು. ಇವುಗಳಿಗೆ ಸ್ಥಿರ ಭೌತ ಅಥವಾ ರಾಸಾಯನಿಕ ಗುಣಗಳಿಲ್ಲ. ಲೀನಕಾರಿ ಗುಣಗಳನ್ನು ಅನುಸರಿಸಿ ನ್ಯಾಪ್ಥಾಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಕೌರಿಬ್ಯುಟೆನಾಲ್ ಎಂಬ ಸಂಖ್ಯೆಯಿಂದ ಲೀನಕಾರಿ ಗುಣವನ್ನು ನಿರ್ಧರಿಸುತ್ತಾರೆ. ಸುಮಾರು 45 ಕೌರಿಬ್ಯುಟೆನಾಲ್ ಸಂಖ್ಯೆ ಇರುವ ನ್ಯಾಪ್ಥಾಗಳನ್ನು ಆಲಿಫ್ಯಾಟಿಕ್ ನ್ಯಾಪ್ಥಾಗಳೆಂದು 98 ಇರುವವನ್ನು ಆರೊಮ್ಯಾಟಿಕ್ ನ್ಯಾಪ್ಥಾಗಳೆಂದೂ ಇವೆರಡರ ಮಧ್ಯದ ಲೀನಕಾರಿ ಗುಣ ಇರುವ ನ್ಯಾಪ್ಥಾಗಳಿಗೆ ಮಧ್ಯವರ್ತಿ ನ್ಯಾಪ್ಥಾಗಳೆಂದೂ ಹೆಸರು. ಕಚ್ಚಾ ಎಣ್ಣೆಯನ್ನು ಬಟ್ಟಿ ಇಳಿಸಿದಾಗ 1200ಅ ವರೆಗೆ ಸಂಗ್ರಹಿಸಿದ ಬಟ್ಟಿಗೆ ಹಗುರ ನ್ಯಾಪ್ಥಾ ಎಂತೂ 1200ಅ ಯಿಂದ 2120ಅ ವರೆಗೆ ಸಂಗ್ರಹಿಸಿದ ಬಟ್ಟಿಗೆ ಭಾರವಾದ ನ್ಯಾಪ್ಥಾ ಎಂದೂ ಹೆಸರು. ಭಾರ ನ್ಯಾಪ್ಥಾದಲ್ಲಿ ಬೆನ್‍ಜೀನ್, ಟೋಲ್ವೀನ್, ಕ್ಸೈಲೀನ್ ಮತ್ತು ಆಲ್ಕೈಲ್ ಬೆನ್‍ಜೀನುಗಳಿರುತ್ತವೆ. ಇವನ್ನು ಕ್ರಿಯಾವರ್ಧಾತ್ಮಕ ವಿಭಜನೆ ಹಾಗೂ ಪರಿಷ್ಕರಣದ ವಿಧಾನದಲ್ಲಿ ದೊರೆಯುವ ಬಟ್ಟಿಗಳಿಂದ ಯುಕ್ತ ಕ್ರಮಗಳನ್ನು ಅನುಸರಿಸಿಯೂ ತಯಾರಿಸಲಾಗುತ್ತದೆ.

ಅನಿಲಗಳು : ಸಂಸ್ಕರಣ ಸ್ಥಾವರಗಳಲ್ಲಿ ಉಪೋತ್ಪನ್ನವಾಗಿ ದೊರೆಯುವ ಅನಿಲಗಳಲ್ಲಿ ಒಂದರಿಂದ ನಾಲ್ಕು ಇಂಗಾಲದ ಪರಿಮಾಣುಗಳುಳ್ಳ ಹೈಡ್ರೊಕಾರ್ಬನ್ನುಗಳಿರುತ್ತವೆ. ಇವುಗಳ ಕೆಳಭಾಗವನ್ನು ಸ್ಥಾವರದಲ್ಲಿ ನೈಸರ್ಗಿಕ ಅನಿಲದೊಂದಿಗೆ ವಿವಿಧ ವಿಧಾನಗಳಲ್ಲಿ ಕಾಸಲು ಬೇಕಾದ ಇಂಧನದಂತೆ ಉಪಯೋಗಿಸಲಾಗುತ್ತದೆ. ಪೆಟ್ರೋರಾಸಾಯನಿಕ ದ್ರವ್ಯಗಳನ್ನು ತಯಾರಿಸಲು ಸಹ ಇವನ್ನು ಮೂಲವಸ್ತುವಾಗಿ ಬಳಸುವುದುಂಟು. ಇವುಗಳ ಇನ್ನೊಂದು ಮಹತ್ತರ ಉಪಯೋಗವೆಂದರೆ ಇವನ್ನು ದ್ರವೀಕರಿಸಿ ಉರುಳೆಗಳಲ್ಲಿ ಸುರಕ್ಷಿತವಾಗಿ ಶೇಖರಿಸಿ ಮನೆಗಳಲ್ಲಿ ಉರುವಲಾಗಿ ಉಪಯೋಗಿಸುವುದು. ಇಂಥ ಅನಿಲಕ್ಕೆ ದ್ರವೀಕರಿಸಿದ ಪೆಟ್ರೋಲಿಯಮ್ ಅನಿಲ ಎಂದು ಹೆಸರು. ಮಾರುಕಟ್ಟೆಯಲ್ಲಿ ದೊರೆಯುವ ದ್ರವೀಕರಿಸಿದ ತೆಳು ಅನಿಲಗಳಲ್ಲಿ ಬ್ಯುಟೇನ್, ಪ್ರೋಪೇನ್ ಮತ್ತು ಇವುಗಳ ಮಿಶ್ರಣ ಇದೆ. ಇದಕ್ಕೆ ಹೆಚ್ಚಿನ ಉಷ್ಣ, ದಕ್ಷತೆ, ಸ್ವಚ್ಚತೆ ಮತ್ತು ಸಾರಿಗೆ ಸೌಲಭ್ಯ ಇರುವುದರಿಂದ ಈ ಉರುವಲಿಗೆ ಇಂದು ವ್ಯಾಪಕ ಬೇಡಿಕೆ ಉಂಟು.

ಪೆಟ್ರೋರಾಸಾಯನಿಕಗಳು : ಕಚ್ಚಾ ಎಣ್ಣೆಯಲ್ಲಿ ಅಥವಾ ನೈಸರ್ಗಿಕ ಅನಿಲದಲ್ಲಿ ಈಗಾಗಲೇ ಇರುವ ಹೈಡ್ರೊಕಾರ್ಬನ್ನುಗಳನ್ನು ವಿಂಗಡಿಸಿ ಪೆಟ್ರೋಲಿಯಮ್ಮಿನ ಉತ್ಪನ್ನಗಳನ್ನು ಪಡೆಯುವುದು ಒಂದು ವಿಧಾನವಾದರೆ ಈ ರೀತಿ ಬೇರ್ಪಡಿಸಿದ ಹೈಡ್ರೊಕಾರ್ಬನ್ನುಗಳನ್ನು ಬಳಸಿ ಅವುಗಳಿಂದ ಸಂಶ್ಲೇಷಿತ ರಾಸಾಯನಿಕ ದ್ರವ್ಯಗಳನ್ನು ತಯಾರಿಸುವುದು ಮತ್ತೊಂದು ವಿಧಾನ. ಈ ತೆರನಾದ ಸಂಶ್ಲೇಷಿತ ಉತ್ಪನ್ನಗಳಿಗೆ ಪೆಟ್ರೋರಾಸಾಯನಿಕಗಳು ಎಂದು ಹೆಸರು. ಮೊತ್ತಮೊದಲಿಗೆ ತಯಾರಿಸಲಾದ ಪೆಟ್ರೋರಾಸಾಯನಿಕ ದ್ರವ್ಯವೆಂದರೆ ಐಸೊಫ್ರೋಪೈಲ್ ಆಲ್ಕೊಹಾಲ್. ಇದನ್ನು 1918ರಲ್ಲಿ, ಉಷ್ಣೀಯ ವಿಭಜನೆಯಲ್ಲಿ ಉಪೋತ್ಪನ್ನವಾಗಿ ದೊರೆತ ಪ್ರೊಪಿಲೀನಿನಿಂದ ತಯಾರಿಸಲಾಯಿತು. ಅನಂತರ ಈಥೈಲ್ ಆಲ್ಕೊಹಾಲ್. ಬ್ಯುಟೈಲ್ ಆಲ್ಕೊಹಾಲ್ ಹಾಗೂ ಎಥಿಲೀನ್ ಆಕ್ಸೈಡುಗಳನ್ನು ತಯಾರಿಸಲಾಯಿತು. ಮೊದಮೊದಲು ಪೆಟ್ರೋರಾಸಾಯನಿಕಗಳ ತಯಾರಿಕೆ ಉದ್ದೇಶಪೂರ್ವಕವಾಗಿರಲಿಲ್ಲ. ಅವುಗಳ ಉತ್ಪನ್ನ ಪ್ರಾಸಂಗಿಕವಾಗಿರುತ್ತಿತ್ತು. ಆದರೆ, ದಿನಗಳೆದಂತೆ ಕೆಲವು ರಾಸಾಯನಿಕ ದ್ರವ್ಯಗಳ ಉಪಯೋಗ ಹೆಚ್ಚಿದಂತೆ ಅವನ್ನು ಸಂಸ್ಕರಣ ಸ್ಥಾವರದಲ್ಲಿ ಉದ್ದೇಶಪೂರ್ವಕವಾಗಿಯೇ ಸಂಶ್ಲೇಷಿಸಲು ಪ್ರಾರಂಭಿಸಲಾಯಿತು.

ಇಂದು ಮಾರುಕಟ್ಟೆಯಲ್ಲಿ ದೊರೆಯುವ ಸಾವಿರಾರು ಪೆಟ್ರೋರಾಸಾಯನಿಕಗಳ ಪೈಕಿ ಹೆಚ್ಚಿನವು ಕಾರ್ಬನಿಕ ಸಂಯುಕ್ತಗಳು. ಅಕಾರ್ಬನಿಕ ರಾಸಾಯನಿಕಗಳು ಕಡಿಮೆ. ಇಂಗಾಲ, ಗಂಧಕ, ಅಮೊನಿಯ ಇವು ಮುಖ್ಯವಾದ ಅಕಾರ್ಬನಿಕ ರಾಸಾಯನಿಕ ದ್ರವ್ಯಗಳು. ಸಂಸ್ಕರಣ ಸ್ಥಾವರದಲ್ಲಿ ದೊರೆಯುವ ಉತ್ಪನ್ನಗಳ ಪೈಕಿ ಪೆಟ್ರೊರಾಸಾಯನಿಕ ದ್ರವ್ಯಗಳ ಸಂಶ್ಲೇಷಣೆಗೆ ಹೆಚ್ಚಾಗಿ ಉಪಯೋಗಿಸಲ್ಪಡುವ ಉತ್ಪನ್ನಗಳೆಂದರೆ ಒಂದರಿಂದ ನಾಲ್ಕು ಇಂಗಾಲದ ಪರಮಾಣುಗಳ ಹೈಡ್ರೊಕಾರ್ಬನ್ನುಗಳುಳ್ಳ ಅನಿಲ ಬೆನ್‍ಜೀನ್, ಟೋಲ್ವಿನ್, ಕ್ಸೈಲೀನ್, ಭಾರ ಆರೊಮ್ಯಾಟಿಕ್ ಎಣ್ಣೆ ಮತ್ತು ಮೇಣ. ಇವುಗಳಲ್ಲಿ ಬಹುಮುಖ್ಯವಾದುವೆಂದರೆ ಅಪರ್ಯಾಪ್ತ ಅನಿಲಗಳು. ಇವುಗಳ ಪೈಕಿ ಪ್ರೋಪಿಲೀನ್ ಮತ್ತು ಬ್ಯುಟಿಲೀನುಗಳನ್ನು ದೊಡ್ಡ ಗಾತ್ರದಲ್ಲಿ ಬಳಸಲಾಗುತ್ತಿದ್ದು ಅವನ್ನು ಕ್ರಿಯಾವರ್ಧಾತ್ಮಕ ಮತ್ತು ಉಷ್ಣೀಯ ವಿಭಜನೆಯಿಂದ ಅಥವಾ ಉಷ್ಣೀಯ ಪರಿಷ್ಕರಣದಿಂದ ಪಡೆಯಲಾಗುತ್ತದೆ. ಪ್ರೋಪಿಲೀನಿನಿಂದ ತಯಾರಿಸುವ ಮುಖ್ಯ ಉತ್ಪನ್ನಗಳೆಂದರೆ ಐಸೊಪ್ರೋಪೈಲ್ ಈಥರ್, ಐಸೊಪ್ರೋಪೈಲ್ ಆಲ್ಕೊಹಾಲ್, ಕ್ಯುಮೀನ್ ಪ್ರೋಪಿಲೀನ್ ಆಕ್ಸೈಡ್, ಐಸೊಪ್ರೀನ್, ಡೈಕ್ಲೋರೊಪ್ರೋಪೀನ್, ಪ್ರೊಪಿಲೀನಿನ ಟೆಟ್ರಾಮರ್, ಎಕ್ರೊಲಿನ್ ಮತ್ತು ಪಾಲಿಪ್ರೊಪಿಲೀನ್. ಪ್ರಸಾಮಾನ್ಯ ಬ್ಯುಟಿಲೀನಿನಿಂದ ಬ್ಯುಟಾಡೈಯೀನ್, ದ್ವಿತೀಯಕ ಬ್ಯುಟೈಲ್ ಆಲ್ಕೊಹಾಲನ್ನು ತಯಾರಿಸುತ್ತಾರೆ. ಪಾಲಿಮೆರಿಯ ಬ್ಯುಟಿಲೀನಿನಿಂದ ತಯಾರಿಸುವ ರಾಸಾಯನಿಕ ದ್ರವಗಳೆಂದರೆ ಠಿ-ತೃತೀಯ ಬ್ಯುಟೈಲ್ ಫೀನಾಲ್, ಠಿ- ತೃತೀಯಕ ಬ್ಯುಟೈಲ್, ಟೋಲ್ವೀನ್, ಡೈಐಸೊಬ್ಯುಟಿಲೀನ್, ಪಾಲಿಐಸೊಬ್ಯುಟಿಲೀನ್, ಬ್ಯುಟೈಲ್ ರಬ್ಬರ್, ಡೈಟರ್ಶಿಯರಿ ಬ್ಯುಟೈಲ್ ಪೆರಾಕ್ಸೈಡ್, ಪಾಲಿಎಥಿಲೀನ್, ಈಥೈಲ್ ಆಲ್ಕೊಹಾಲ್, ಎಥಿಲೀನ್ ಆಕ್ಸೈಡ್ ಮುಂತಾದುವುಗಳ ಸಂಶ್ಲೇಷಣೆಗೆ ಮೂಲ ವಸ್ತುವಾದ ಎಥಿಲೀನ್ ಅನಿಲ ಅತಿ ಮುಖ್ಯ ಪೆಟ್ರೋರಾಸಾಯನಿಕ. ಇದನ್ನು ಈಥೇನ್, ಪ್ರೋಪೇನ್ ಅಥವಾ ಪೆಟ್ರೋಲಿಯಮ್ಮಿನ ದ್ರವ ಘಟಕಗಳ ವಿಭಜನೆಯಿಂದ ತಯಾರಿಸುತ್ತಾರೆ. ಬೆನ್‍ಜಿûೀನ್, ಟೋಲ್ವಿನ್ ಮುಂತಾದ ಅರೊಮ್ಯಾಟಿಕ್ ಸಂಯುಕ್ತಗಳನ್ನು ಮುಖ್ಯವಾಗಿ ಕ್ರಿಯಾವರ್ಧಾತ್ಮಕ ಪರಿಷ್ಕರಣೆಯಲ್ಲಿ ದೊರೆತ ದ್ರವಘಟಕದಿಂದ ತಯಾರಿಸಲಾಗುತ್ತದೆ. ಇವನ್ನು ನ್ಯಾಪ್ಥಾ ಹಾಗೂ ಡೀಸಲ್ ಎಣ್ಣೆಗಳ ಕ್ರಿಯಾವರ್ಧಾತ್ಮಕ ವಿಭಜನೆಯನ್ನು ಹೆಚ್ಚಿನ ಉಷ್ಣತೆಯಲ್ಲಿ ಮಾಡಿದಾಗಲೂ ಪಡೆಯಬಹುದು. ಪ್ರಮುಖವಾದ ರಾಸಾಯನಿಕ ದ್ರವ್ಯಗಳಿವು:

1 ಹೈಡ್ರೊಕಾರ್ಬನ್ ಲೀನಕಾರಿಗಳು: ಆಲ್ಕೊಹಾಲ್, ಕೀಟೋನುಗಳು, ಎಸ್ಟರುಗಳು, ಈಥರುಗಳು, ವಿಶಿಷ್ಟ ಕುದಿಬಿಂದು ಇರುವ ಹಾಗೂ ಬಿಳಿ ಬಣ್ಣದ ಸ್ಪಿರಿಟುಗಳು. 2 ಸಂಶ್ಲೇಷಿತ ಮಾರ್ಜಕಗಳು: ಆಲ್ಕೈಲ್ ಎರೈಲ್ ಸಲ್ಫೊನೇಟುಗಳು, ಆಲ್ಕೈಲ್ ಸಲ್ಫೇಟುಗಳು, ನಾನಾಯಾನಿಕ್ ಮಾರ್ಜಕಗಳು. 3 ಪ್ಲಾಸ್ಟಿಕ್ ಮತ್ತು ರೆಸಿನ್ನುಗಳು: ಪಾಲಿಎಥಿಲೀನ್, ಪಾಲಿ ಪ್ರೊಪಿಲೀನ್, ಪಾಲಿ ಸ್ಟೈರೀನ್, ವೈನೈಲ್ ರೆಸಿನ್ನುಗಳು, ಈಪಾಕ್ಸಿ ರೆಸಿನ್ನುಗಳು ಮತ್ತು ಫೀನಾಲಿಕ್ ಹಾಗೂ ಯೂರಿಯಾ ರೆಸಿನ್ನುಗಳು. 4 ವ್ಯವಸಾಯದಲ್ಲಿ ಉಪಯೋಗಿಸುವ ರಾಸಾಯನಿಕ ದ್ರವ್ಯಗಳು: ಆಲ್ಡ್ರೀನ್, ಡಿಎಡ್ರಿನ್, ಎಂಡ್ರಿನ್, ನೆಮಾಗಾನ್ ಮುಂತಾದುವು. 5 ಗೊಬ್ಬರಗಳು: ಅಮೋನಿಯ ಮತ್ತು ನೈಟ್ರೊಜನ್‍ಯುಕ್ತ ಗೊಬ್ಬರಗಳು 6 ಸಂಶ್ಲೇಷಿತ ರಬ್ಬರುಗಳು: ಎಸ್.ಬಿ. ರಬ್ಬರ್, ಬ್ಯುಟೈಲ್ ರಬ್ಬರ್ ಪಾಲಿಐಸೊಪ್ರಿನ್, ಪಾಲಿಬ್ಯುಟಾಡೈಯೀನ್ 7 ಸಂಶ್ಲೇಷಿತ ನೂಲುಗಳು ಅಥವಾ ಕೃತಕ ಎಳೆಗಳು: ನೈಲಾನ್, ಟೆರಿಲೀನ್, ಆಕ್ರಿಲಿಕ್ ನೂಲುಗಳು, ಪಾಲಿಯಸ್ಟರ್ ನೂಲುಗಳು. 8 ಮಿಶ್ರ ಸಂಯುಕ್ತಗಳು: ಗ್ಲಿಸರಾಲ್, ಗ್ಲೈಕಾಲ್, ಗ್ಲೈಕಾಲ್ ಅಮೈನುಗಳು, ಈಥರುಗಳು.

ಈ ಎಲ್ಲ ರಾಸಾಯನಿಕ ದ್ರವ್ಯಗಳನ್ನು ಪೆಟ್ರೋಲಿಯಮ್ಮಿನಿಂದ ದೊರೆತ ಸಂಯುಕ್ತಗಳಿಂದ ಸಂಶ್ಲೇಷಿಸಲಾಗುತ್ತಿದ್ದರೂ ಇವನ್ನು ಕಲ್ಲಿದ್ದಲಿನಿಂದ ಅಥವಾ ಕಲ್ಲಿದ್ದಲಿನ ಕಿಟ್ಟದಿಂದ ಅಲ್ಲದೇ ಪುದುಗು ಕ್ರಿಯೆಯಿಂದ ಕೂಡ ಪಡೆಯಬಹುದು.

ಪೆಟ್ರೋಲಿಯಮ್ ಉತ್ಪನ್ನಗಳ ರಾಸಾಯನಿಕ ವೃತ್ತಾಂತ: ಪೆಟ್ರೋಲಿಯಮ್ ಉತ್ಪನ್ನಗಳು ಕೂಡ ಪೆಟ್ರೋಲಿಯಮ್ಮಿನಂತೆ ವಿವಿಧ ವಸ್ತುಗಳ ಸಮುಚ್ಚಯ. ಅವು ಅನೇಕ ಹೈಡ್ರೊಕಾರ್ಬನ್ನುಗಳ ಮಿಶ್ರಣಗಳಾಗಿವೆ. ಆದ್ದರಿಂದ ಪೆಟ್ರೋಲಿಯಮ್ ಉತ್ಪನ್ನಗಳ ರಾಸಾಯನಿಕ ವೃತ್ತಾಂತ ಆಯಾ ಘಟಕದ ರಾಸಾಯನಿಕ ವೃತ್ತಾಂತವೇ ಆಗಿರುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • American Petroleum Institute – the trade association of the US oil industry.
  • U.S. Energy Information Administration
  • Joint Organisations Data Initiative | Oil and Gas Data Transparency
  • U.S. National Library of Medicine: Hazardous Substances Databank – Crude Oil
  • Crude: 2007 Australian Broadcasting Corporation documentary about the formation
  • "Petroleum" . The American Cyclopædia. 1879.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: