ಕಾರ್ಮಿಕರ ದಿನಾಚರಣೆ
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.[೧][೨]
ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.
ಹಿನ್ನೆಲೆ ಮತ್ತು ಇತಿಹಾಸ
ಬದಲಾಯಿಸಿ1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.
ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.
ದೇಶವಿದೇಶಗಳಲ್ಲಿ ಆಚರಣೆ
ಬದಲಾಯಿಸಿಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ. 1890ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ 1ರಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜಾದಿನ, ಸೋವಿಯತ್ ದೇಶವೇ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ-ಕವಾಯಿತು ವಿಶ್ವವಿಖ್ಯಾತವಾದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು 1892ರಲ್ಲಿ.
ಪ್ರಪಂಚದ ಹಲವೆಡೆ ಮೇ ೧ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ
- ಅಲ್ಬೇನಿಯ,
- ಅರ್ಜೆಂಟೀನಾ,
- ಅರೂಬ,
- ಆಸ್ಟ್ರಿಯ,
- ಬಾಂಗ್ಲಾದೇಶ,
- ಬೆಲಾರುಸ್,
- ಬೆಲ್ಜಿಯಂ,
- ಬೊಲಿವಿಯ,
- ಬೋಸ್ನಿಯ ಮತ್ತು ಹೆರ್ಝೆಗೋವಿನ,
- ಬ್ರೆಜಿಲ್,
- ಬಲ್ಗೇರಿಯ,
- ಕ್ಯಾಮರೂನ್,
- ಚಿಲಿ,
- ಕೊಲಂಬಿಯ,
- ಕೋಸ್ಟ ರಿಕ,
- ಚೀನ,
- ಕ್ರೊಯೇಷಿಯ,
- ಕ್ಯೂಬ,
- ಸಿಪ್ರಸ್,
- ಚೆಕ್ ಗಣರಾಜ್ಯ,
- ಡೆನ್ಮಾರ್ಕ್,
- ಡೊಮಿನಿಕ ಗಣರಾಜ್ಯ,
- ಈಕ್ವೆಡಾರ್,
- ಈಜಿಪ್ಟ್,
- ಫಿನ್ಲ್ಯಾಂಡ್,
- ಫ್ರಾನ್ಸ್,
- ಜರ್ಮನಿ,
- ಗ್ರೀಸ್,
- ಗ್ವಾಟೆಮಾಲ,
- ಹೈತಿ,
- ಹೊಂಡುರಾಸ್,
- ಹಾಂಗ್ ಕಾಂಗ್,
- ಹಂಗರಿ,
- ಐಸ್ಲೆಂಡ್,
- ಭಾರತ,
- ಇಂಡೋನೇಷ್ಯ,
- ಇಟಲಿ,
- ಜೋರ್ಡನ್,
- ಕೀನ್ಯ,
- ಲ್ಯಾಟ್ವಿಯ,
- ಲಿಥುವೇನಿಯ,
- ಲೆಬನಾನ್,
- ಮೆಸಿಡೋನಿಯ,
- ಮಲೇಶಿಯ,
- ಮಾಲ್ಟ,
- ಮಾರಿಷಸ್,
- ಮೆಕ್ಸಿಕೋ,
- ಮೊರಾಕೊ,
- ಮಯನ್ಮಾರ್,
- ನೈಜೀರಿಯ,
- ಉತ್ತರ ಕೊರಿಯ,
- ನಾರ್ವೆ,
- ಪಾಕಿಸ್ತಾನ,
- ಪೆರಗ್ವೆ,
- ಪೆರು,
- ಪೋಲೆಂಡ್,
- ಫಿಲಿಫೀನ್ಸ್
- ಪೋರ್ಚುಗಲ್,
- ರೊಮೇನಿಯ,
- ರಷ್ಯ,
- ಸಿಂಗಾಪುರ,
- ಸ್ಲೊವಾಕಿಯ,
- ಸ್ಲೊವೇನಿಯ,
- ದಕ್ಷಿಣ ಕೊರಿಯ,
- ದಕ್ಷಿಣ ಆಫ್ರಿಕ,
- ಸ್ಪೇನ್,
- ಶ್ರೀ ಲಂಕ,
- ಸರ್ಬಿಯ,
- ಸ್ವೀಡನ್,
- ಸಿರಿಯ,
- ಥೈಲ್ಯಾಂಡ್,
- ಟರ್ಕಿ,
- ಉಕ್ರೇನ್,
- ಉರುಗ್ವೆ,
- ವೆನಿಜುವೆಲಾ,
- ವಿಯೆಟ್ನಾಂ,
- ಜಾಂಬಿಯ,
- ಜಿಂಬಾಬ್ವೆ.
ಭಾರತದಲ್ಲಿ
ಬದಲಾಯಿಸಿಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.
- ಭಾರತದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಆಚರಿಸಲಾಗುತ್ತದೆ.
ಅಮೇರಿಕದಲ್ಲಿ
ಬದಲಾಯಿಸಿಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಕಾರ್ಮಿಕ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ, 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. [೩] ಅಮೆರಿಕಾದಲ್ಲಿ, ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳು ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ.
ಉಲ್ಲೇಖಗಳು
ಬದಲಾಯಿಸಿ- ↑ "kanaja.in. ಕಾರ್ಮಿಕರ ದಿನಾಚರಣೆ". Archived from the original on 2020-09-18. Retrieved 2017-05-01.
- ↑ ಕಾರ್ಮಿಕ ದಿನಾಚರಣೆಯ ಔಚಿತ್ಯ ಹಾಗೂ ಸಂದೇಶ
- ↑ ಮೇ ಡೇ; ಕಾರ್ಮಿಕರಿಗೆ ಡೂಡಲ್ ಗೌರವ ನೀಡಿದ ಗೂಗಲ್ 1 May, 2018[ಶಾಶ್ವತವಾಗಿ ಮಡಿದ ಕೊಂಡಿ]