ಪೋರ್ಚುಗಲ್

ನೈರುತ್ಯ ಯುರೋಪ್‍ನ ಒಂದು ದೇಶ

ಪೋರ್ಚುಗಲ್, ಅಧಿಕೃತವಾಗಿ ಪೋರ್ಚುಗಲ್ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ : República Portuguesa[] ದಕ್ಷಿಣ ಯುರೋಪ್ಐಬೀರಿಯ ದ್ವೀಪಕಲ್ಪದಲ್ಲಿರುವ ಒಂದು ದೇಶ.[] ಈ ದೇಶದ ದಕ್ಷಿಣ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಹಾಗು ಉತ್ತರ ಮತ್ತು ಪೂರ್ವಕ್ಕೆ ಸ್ಪೇನ್ ಇವೆ. ಅಟ್ಲಾಂಟಿಕ್ ಮಹಾಸಾಗರದಲ್ಲಿನ ಅಜೊರೇಸ್ ಮತ್ತು ಮದೀರ ದ್ವೀಪಸಮೂಹಗಳೂ ಪೋರ್ಚುಗಲ್ ದೇಶಕ್ಕೆ ಸೇರಿವೆ.

ಪೋರ್ಚುಗೀಯ ಗಣರಾಜ್ಯ
República Portuguesa
Flag of ಪೋರ್ಚುಗಲ್
Flag
Coat of arms of ಪೋರ್ಚುಗಲ್
Coat of arms
Anthem: "A Portuguesa"
Location of ಪೋರ್ಚುಗಲ್
Capitalಲಿಸ್ಬನ್5
Largest cityರಾಜಧಾನಿ
Official languagesಪೋರ್ಚುಗೀಯ1
Governmentಸಂಸದೀಯ ಗಣರಾಜ್ಯ
• ರಾಷ್ಟ್ರಪತಿ
ಅನಿಬಾಲ್ ಕವಾಕೊ ಸಿಲ್ವ
• ಪ್ರಧಾನ ಮಂತ್ರಿ
ಹೋಸೆ ಸಾಕ್ರೆಟೀಸ್
ಸ್ಥಾಪನೆ 
೮೬೮
ಜೂನ್ ೨೪, ೧೧೨೮
• ರಾಜ್ಯವಾಗಿ
ಜುಲೈ ೨೫, ೧೧೩೯
• ಮನ್ನಣೆ ಪ್ರಾಪ್ತಿ
ಅಕ್ಟೋಬರ್ ೫, ೧೧೪೩
ಅಕ್ಟೋಬರ್ ೫, ೧೯೧೦
ಏಪ್ರಿಲ್ ೨೫, ೧೯೭೪
• Water (%)
0.5
Population
• ಜುಲೈ ೨೦೦೭ estimate
10,848,692 (೭೫ನೇ)
• ೨೦೦೧ census
10,148,259
GDP (PPP)೨೦೦೬ estimate
• Total
$229.881 billion (40th)
• Per capita
$23,464 (2007) (34th)
HDI (೨೦೦೫)Decrease 0.897
Error: Invalid HDI value · 29th
Currencyಯುರೋ (€)² (EUR)
Time zoneUTC+0 (WET³)
• Summer (DST)
UTC+1 (WEST)
Calling code351
Internet TLD.pt4
  1. Mirandese, spoken in some villages of the municipality of Miranda do Douro, was officially recognized in 1999 (Lei n.° 7/99 de 29 de Janeiro), since then awarding an official right-of-use Mirandese to the linguistic minority it is concerned.[] The Portuguese Sign Language is also recognized.
  2. Prior to 1999: Portuguese escudo.
  3. Azores: UTC-1; UTC in summer.
  4. The .eu domain is also used, as it is shared with other European Union member states.
  5. Coimbra was the capital of the country from 1139 to about 1260.

ಭೌಗೋಳಿಕ ಸ್ಥಾನ

ಬದಲಾಯಿಸಿ

ಪೋರ್ಚುಗಲ್ - ಯೂರೋಪಿನ ಐಬೀರಿಯನ್ ಪರ್ಯಾಯ ದ್ವೀಪದ ಪಶ್ಚಿಮ ಭಾಗದಲ್ಲಿರುವ ಗಣರಾಜ್ಯ. ಯೂರೋಪಿನ ಅತ್ಯಂತ ಪಶ್ಚಿಮದ ದೇಶವಿದು. ಉ. ಅ. 360 58 ಮತ್ತು ಪ. ರೇ. 60 11 - 90 30 ನಡುವೆ ಹಬ್ಬಿದೆ. ಇದರ ಉತ್ತರ ಮತ್ತು ಪೂರ್ವದಲ್ಲಿ ಸ್ಪೇನ್ ದೇಶ. ಪಶ್ಚಿಮ ಮತ್ತು ದಕ್ಷಿಣದಲ್ಲಿ ಅಟ್ಲಾಂಟಿಕ್ ಸಾಗರ ಇದೆ. ಆಕಾರದಲ್ಲಿ ಪೋರ್ಚುಗಲ್ ಕಿರಿಯಗಲದ ಸಮಾಂತರ ಚತುರ್ಭುಜವನ್ನು ಹೋಲುತ್ತದೆ. ಪೋರ್ಚುಗಲ್ ಉತ್ತರ ದಕ್ಷಿಣವಾಗಿ 563 ಕಿಮೀ. ಪೂರ್ವಪಶ್ಚಿಮವಾಗಿ 201 ಕಿಮೀ ಇದ್ದು 737 ಕಿಮೀ ಉದ್ದ ಸಮುದ್ರ ತೀರವನ್ನೊಳಗೊಂಡಿದೆ. ಈ ದೇಶದ ಒಟರ್ಟು ವಿಸ್ತೀರ್ಣ 88,941 ಚ.ಕಿ.ಮೀ. ಪೋರ್ಚುಗಲ್ಲಿನ ಪಶ್ಚಿಮಕ್ಕೆ 1,280 ಕಿ.ಮೀ. ದೂರದಲ್ಲಿರುವ ಏಜೋರ್ಸ್ ದ್ವೀಪಸ್ತೋಮವನ್ನೂ ನೈಋತ್ಯಕ್ಕೆ 960 ಕಿ.ಮೀ. ದೂರದಲ್ಲಿರುವ ಮಡಿರ ಮತ್ತು ಪೋಟೋಸ್ಯಾನ್ಪೋಗಳನ್ನೂ ಒಳಗೊಂಡಿದೆ. ಜನಸಂಖ್ಯೆ 1,05,62,178 (೨೦೧೧).[] ರಾಜಧಾನಿ ಲಿಸ್ಬನ್.

ಭೌತ ಲಕ್ಷಣ

ಬದಲಾಯಿಸಿ
Topography and administration.

ಪೋರ್ಚುಗಲ್ಲಿನ ಸಮುದ್ರ ತೀರ ತಗ್ಗಾಗಿಯೂ ಚಪ್ಪಟೆಯಾಗಿಯೂ ಇದೆ. ಇದರಲ್ಲಿ ಅಂಕುಡೊಂಕುಗಳಿಲ್ಲ. ಮೋಂಡೇಗೊ, ಕರ್ವೆಯಿರೂ, ರೋಕ, ಎಸ್ಪಿಷೆಲ್, ಸೇಂಟ್ ವಿನ್ಸೆಂಟ್ ಮತ್ತು ಸಾಂತ ಮರೀಯ ಇವು ಮುಖ್ಯ ಭೂಶಿರಗಳು. ಟೇಗಸ್ ನದಿ ಈ ದೇಶದ ನಡುವೆ ಹರಿಯುತ್ತದೆ. ದಕ್ಷಿಣ ಪೋರ್ಚುಗಲ್ ಅಗಲವಾದ ನದಿಗಳ ಜಲಾನಯನ ಭೂಮಿಯ, ಬಯಲಿನ ಮತ್ತು ತಗ್ಗಾದ ಪ್ರಸ್ಥ ಭೂಮಿಯ ಪ್ರದೇಶ. ಇಲ್ಲಿ ಏರಿಳಿತಗಳು ಕಡಿಮೆ. ಸೇ. ಸು. 61.5 ರಷ್ಟು ಪ್ರದೇಶ 198 ಮೀ. ಗಿಂತ ಕಡಿಮೆ ಎತ್ತರವಾಗಿದೆ. ಇಲ್ಲಿರುವ ಒಂದೇ ಒಂದು ಪರ್ವತ ಶ್ರೇಣಿಯ ಎತ್ತರ 1,000 ಮೀ. ಉತ್ತರ ಪೋರ್ಚುಗಲ್ಲಿನ ಸೇಕಡ 95.4 ರಷ್ಟು ಭಾಗ 397 ಮೀ. ಗಿಂತ ಹೆಚ್ಚು ಎತ್ತರವಾಗಿದೆ. ಸಮುದ್ರ ತೀರದಿಂದ 48 ಕಿ.ಮೀ. ದೂರದಲ್ಲೇ 1,000 ಮೀ. ಎತ್ತರದ ಪರ್ವತ ಶ್ರೇಣಿ ಆರಂಭವಾಗುತ್ತದೆ. ಕಡಿದಾದ ಕಣಿವೆಗಳಿರುವ ಎತ್ತರದ ಪ್ರಸ್ಥ ಭೂಮಿ ಎಲ್ಲ ಕಡೆಗೂ ಹಬ್ಬಿದೆ. ಉತ್ತರದಿಂದ ದಕ್ಷಿಣದ ವರೆಗೆ ಹಬ್ಬಿರುವ ಪರ್ವತ ಶ್ರೇಣಿಗಳು ಪೆನೆಡ (1,440 ಮೀ.) ಗೆರೆಜ್ (1,468 ಮೀ.) ಮರಾವ್ (1,414 ಮೀ.), ಎಸ್ಟ್ರೆಲ (2,021 ಮೀ.), ಮಾಂಟಿಮುರೋ (1,382 ಮೀ.), ಅಕರ್ (1,409 ಮೀ.) ಮತ್ತು ಲೌಸ (1,202 ಮೀ.) ಪೋರ್ಚುಗಲ್ಲಿನ ಅತ್ಯುನ್ನತ ಶಿಖರ ಎಸ್ಟ್ರೆಲ. ಮೀನ್ಯೂ, ಡೋರೊ, ಟೇಗಸ್, ಗ್ವಾಡಿಯಾನ ಇವು ಸ್ಪೇನಿನಲ್ಲಿ ಉಗಮಿಸಿ ಇಲ್ಲಿ ಹರಿಯುವ ದೊಡ್ಡ ನದಿಗಳು. ಎಸ್ಟ್ರೆಲ ಶ್ರೇಣಿಯಲ್ಲಿ ಹುಟ್ಟುವ ಮಾಂಡೇಗೂ ಎಂಬುದು ಪೋರ್ಚುಗಲ್ಲಿನೊಳಗೇ ಹುಟ್ಟಿ ಹರಿಯುವ ನದಿಗಳ ಪೈಕಿ ದೊಡ್ಡದು. ಪೋಗ, ಸಾಡೋ, ಜಜಿರ್ ಇವು ಇತರ ಮುಖ್ಯ ನದಿಗಳು. ಇವೂ ಪೋರ್ಚುಗಲ್ಲಿನಲ್ಲೇ ಹುಟ್ಟಿ ಹರಿಯುತ್ತವೆ. ಟೇಗಸ್ ಉಪನದಿ ಜೆಜಿರ್.

ವಾಯುಗುಣ

ಬದಲಾಯಿಸಿ

ಪೋರ್ಚುಗಲ್ಲಿನ ವಾಯುಗುಣ ಸೌಮ್ಯ ಹಾಗೂ ಸಮಶೀತೋಷ್ಣದ್ದು. ವಾಯುವ್ಯದಲ್ಲಿ ಚಳಿಗಾಲ ಮತ್ತು ಬೇಸಿಗೆಗಳು ಅನುಕ್ರಮವಾಗಿ ಸ್ತಿಮಿತ ಹಾಗೂ ಅಲ್ಪಾವಧಿಯವು. ಇಲ್ಲಿ ಮಳೆ ಹೆಚ್ಚು. ಈಶಾನ್ಯದಲ್ಲಿ ದೀರ್ಘಾವಧಿಯ ಹಿಮ ಬೀಳುವ ಚಳಿಗಾಲದಲ್ಲಿ ಮತ್ತು ಸುಡುವ ಬೇಸಗೆಗಳಿರುತ್ತವೆ. ದಕ್ಷಿಣದಲ್ಲಿ ಸ್ತಿಮಿತ ಚಳಿಗಾಲಗಳೂ ಹಾಗೂ ದೀರ್ಘ ಬೇಸಗೆಗಳಿರುತ್ತವೆ. ಇಲ್ಲಿ ಮಳೆ ಕಡಿಮೆ. ಜನವರಿಯ ಸರಾಸರಿ ಉಷ್ಣತೆ ನೈಋತ್ಯದಲ್ಲಿ 110 ಅ ನಿಂದ ಈಶಾನ್ಯದಲ್ಲಿ 70ಅ ವರೆಗೆ ವ್ಯತ್ಯಾಸವಾಗುತ್ತದೆ. ಎಸ್ಟ್ರೆಲ ಪರ್ವತದ ಎತ್ತರ ಪ್ರದೇಶಗಳಲ್ಲಿ ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ 00ಅ ಗಿಂತ ಕಡಿಮೆ ಇರುತ್ತದೆ. ಅಲ್ಲಿಯ ಉನ್ನತ ಶಿಖರಗಳು ಹಿಮಾವೃತ. ಸರಾಸರಿ ಉಷ್ಣತೆ 200ಅ. ಆಗಸ್ಟ್ ಅತ್ಯಂತ ಉಷ್ಣತೆಯ ತಿಂಗಳು. ಪೋರ್ಚುಗಲ್ಲಿನ ಉತ್ತರದಲ್ಲಿರುವ ಪರ್ವತಗಳು ಅಟ್ಲಾಂಟಿಕ್ ಸಾಗರದ ಮೇಲಿಂದ ಬೀಸುವ ಗಾಳಿಯನ್ನು ತಡೆಯುವುದರಿಂದ ಅಲ್ಲಿ ಮಳೆ ಹೆಚ್ಚು. ದಕ್ಷಿಣ ಪೋರ್ಚುಗಲ್ಲಿನಲ್ಲಿ ಸರಾಸರಿ 51 ಸೆಂ.ಮೀ. ಮಳೆ ಬೀಳುತ್ತದೆ. ಮಳೆಗಾಲದ ಅವಧಿ ಅಕ್ಟೋಬರಿನಿಂದ ಏಪ್ರಿಲ್‍ನವರೆಗೆ. ಎಸ್ಟ್ರೆಲ ಪರ್ವತ ವಿಭಾಗದಲ್ಲಿ ಎಲ್ಲಕ್ಕೂ ಹೆಚ್ಚು. 110 ಸೆಂ.ಮೀ. ಮಳೆಯಾಗುತ್ತದೆ. ಸರಾಸರಿ ಮಳೆ ಪೋರ್ಟೋದಲ್ಲಿ 45 ಸೆಂ.ಮೀ. ಲಿಸ್ಟನ್ನಿನಲ್ಲಿ 24 ಸೆಂ.ಮೀ. ಮಳೆಯಾಗುತ್ತದೆ. ಸರಾಸರಿ ಮಳೆ ಪೋರ್ಟೊದಲ್ಲಿ 4 ಸೆಂ.ಮೀ. ಲಿಸ್ಟನ್ನಿನಲ್ಲಿ 24 ಸೆಂ.ಮೀ.

ಸಸ್ಯ ಪ್ರಾಣಿ ಜೀವನ

ಬದಲಾಯಿಸಿ

ಉತ್ತರದಲ್ಲಿ ಪೈನ್ ಓಕ್ ಮರಗಳಿವೆ. ಚೆಸ್‍ನಟ್, ಲಿಂಡನ್, ಎಲ್ಮ್ ಮತ್ತು ಆಲಿವ್ ಎಲ್ಲ ಕಡೆಗೂ ಹಬ್ಬಿವೆ. ಕಾರ್ಕ್ ಮತ್ತು ನಿತ್ಯ ಹಸುರಿನ ಓಕ್ ಪ್ರಮುಖ ಮರಗಳು. ತೀರಾ ದಕ್ಷಿಣದ ಆಲ್ಗಾರ್ವೆ ಪ್ರದೇಶ ಬಾದಾಮಿ ಮತ್ತು ಅಂಜೂರಗಳಿಗೆ ಹೆಸರಾಗಿದೆ. ಡೋರೂ ನದಿಯ ದಂಡೆಯ ಮೇಲೂ ಬಾದಾಮಿ ಬೆಳೆಯುತ್ತದೆ. ಟೇಗಸ್ ಮತ್ತು ರಾಡೋ ನದಿ ಕಣಿವೆಗಳಲ್ಲಿ ಆಸ್ಟ್ರೇಲಿಯನ್ ನೀಲಗಿರಿ ಸಮೃದ್ಧವಾಗಿದೆ.

ಸ್ಪೇನಿನಲ್ಲಿರುವ ಪ್ರಾಣಿಗಳೇ ಪೋರ್ಚುಗಲ್ಲಿನಲ್ಲೂ ಕಂಡುಬರುತ್ತವೆ. ಲಿಂಕ್ಸ್, ಕಾಡು ಬೆಕ್ಕು, ತೋಳ, ಜಿಂಕೆ, ಕೋರೆಹಲ್ಲಿನ ಹೆಗ್ಗಣದಂಥ ಪ್ರಾಣಿಗಳು ಮೊದಲಾದ ಮಧ್ಯ ಯೋರೋಪಿನ ಪ್ರಾಣಿಗಳೂ ಆಫ್ರಿಕನ್ ಸಂಬಂಧವನ್ನು ತೋರಿಸುವ ಜೆನೆಟ್ (ಒಂದು ಜಾತಿಯ ಪುನುಗು ಬೆಕ್ಕು), ಗರುಡ, ಇಕ್‍ನ್ಯೂಮನ್ (ಒಂದು ಬಗೆಯ ಮುಂಗುಸಿ). ಗೋಸುಂಬೆ ಮೊದಲಾದ ಪ್ರಾಣಿಗಳೂ ಇವೆ.

 
Peneda-Gerês National Park is the only national park in Portugal.

ಜನಜೀವನ

ಬದಲಾಯಿಸಿ
Women in traditional attire from Minho (top) and fadistas playing at Jerónimos Monastery (bottom)

ಪೋರ್ಚುಗಲ್ಲಿನ ಮೂಲ ನಿವಾಸಿಗಳು ಲೂಸಿಟೇನಿಯನ್ನರು. ಅನಂತರ ಬಂದು ನೆಲೆಸಿದವರು ರೋಮನ್ನರು. ಆಮೇಲೆ ಬಂದ ಜಮ್ರ್ಯಾನಿಕ್ ಜನರು ರೋಮನ್ನರನ್ನು ಸೋಲಿಸಿ ಅಲ್ಲೇ ನೆಲೆಸಿದರು. ಮುಂದೆ ಉತ್ರರ ಆಫ್ರಿಕದ ಮೂರರು ಬಂದರು. ಹೀಗಿದ್ದರೂ ಪೋರ್ಚುಗೀಸರು ಹೆಚ್ಚು ಕಡಿಮೆ ಸಮರೂಪದವರೆನ್ನಬಹುದು.

20 ನೆಯ ಶತಮಾನದ ಆದಿಯಲ್ಲಿ ಪೋರ್ಚುಗಲ್ಲಿನ ಜನಸಂಖ್ಯೆ 50,00,000 ಇತ್ತು. 1930 ರ ಸುಮಾರಿಗೆ ಅದು 64,00,000 ಕ್ಕೆ ಏರಿತು. 1960 ರಲ್ಲಿ 88,51,000 ಆಯಿತು. 1970 ರ ದಶಕದ ಆದಿಯಲ್ಲಿ ಅದು ಸುಮಾರು 90,00,000 ಇತ್ತು. ಶೇಕಡ 37 ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಜನನ - ಮರಣ ದರ ಪ್ರತಿ ಸಾವಿರಕ್ಕೆ ಅನುಕ್ರಮವಾಗಿ 20 ಮತ್ತು 11.1. ಜನರು ಹೆಚ್ಚಾಗಿ ರೋಮನ್ ಕ್ಯಾತೊಲಿಕ್ ಚರ್ಚಿನ ಅನುಯಾಯಿಗಳು. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿರುವುದಾದರೂ ಉಳಿದ ಮತಗಳಿಗೆ ಸೇರಿದವರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಪೋರ್ಚುಗಲ್ಲಿನ ಭಾಷೆ ಪೋರ್ಚುಗೀಸ್. ಅದು ಸ್ಪ್ಯಾನಿಷ್ ಭಾಷೆಯಂತೆ ಲ್ಯಾಟಿನ್ ಮೂಲದ್ದಾದರೂ ಅನೇಕ ಜರ್ಮನ್ ಮತ್ತು ಸೆಮೆಟಿಕ್ ಶಬ್ಧಗಳನ್ನೊಳಗೊಂಡಿದೆ.

ರಾಜಧಾನಿ ಲಿಸ್ಬನ್ (ಜನಸಂಖ್ಯೆ : 6,63315). ಇನ್ನೊಂದು ದೊಡ್ಡ ನಗರ ಓಪೋರ್ಟೋ (ಜನಸಂಖ್ಯೆ : 302,467). 1147 ರಿಂದಲೂ ಲಿಸ್ಬನ್ ರಾಜಕೀಯ ಕೇಂದ್ರವಾಗಿದೆ. 1755 ರ ಭಾರೀ ಭೂಕಂಪದ ಅನಂತರ ಹೊಸ ಯೋಜನೆಯ ಮೇರೆಗೆ ನಗರವನ್ನು ನಿರ್ಮಿಸಲಾಯಿತು. ಗುಡ್ಡಗಳ ಸಾಲಿನ ಮೇಲೆ ಕಟ್ಟಿರುವ ಈ ನಗರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಲಿಫ್ಟಿನಲ್ಲಾಗಲಿ ಕೇಬಲ್ ಕಾರುಗಳಲ್ಲಾಗಲಿ ಹೋಗಬೇಕು. ಓಪೋರ್ಟೋ ನಗರದ ಬೇರೆ ಬೇರೆ ಭಾಗಗಳೂ ವಿವಿಧ ಎತ್ತರಗಳಲ್ಲಿವೆ. ಪುರಾತನ ಪೋರ್ಟಸ್ ಕ್ಯಾಲ್ ಎಂಬ ಬಂದರಿದ್ದ ಜಾಗದಲ್ಲಿ ಈ ಪಟ್ಟಣವಿದೆ. ಪೋರ್ಟಸ್ ಕ್ಯಾಲ್ ಎಂಬ ಹೆಸರಿನಿಂದಲೇ ದೇಶಕ್ಕೆ ಪೋರ್ಚುಗಲ್ ಎಂಬ ಹೆಸರು ಪ್ರಾಪ್ತವಾಗಿದೆ. ಕುಯಿಂಬ್ರ (ಜನಸಂಖ್ಯೆ : 89,639), ಸೆಟೂಬಲ್ (ಜನಸಂಖ್ಯೆ : 83,220). ಬ್ರಾಗ (ಜನಸಂಖ್ಯೆ : 86,316) ಎವರ. (ಜನಸಂಖ್ಯೆ : 38,005), ಫ್ಯಾರೂ (ಜನಸಂಖ್ಯೆ : 31,619) ಇವು ಇತರ ಪ್ರಮುಖ ಪಟ್ಟಣಗಳು.

ಒಂದು ಕಾಲದಲ್ಲಿ ಪೋರ್ಚುಗಲ್ಲಿನಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯವಿತ್ತು. ಈತ ಅದು ಇಳಿಮುಖವಾಗುತ್ತಿದೆ. ಅನುಕೂಲವಲ್ಲದ ವಾಯುಗುಣ ಕೃಷಿ ಸಾಧನ ಮತ್ತು ವಿಧಾನಗಳಲ್ಲಿ ಸುಧಾರಣೆ ಇಲ್ಲದಿರುವುದು. ತುಂಡು ಜಮೀನುಗಳೇ ಹೆಚ್ಚಾಗಿರುವುದು - ಇವು ಇದಕ್ಕೆ ಕಾರಣ. ಭಾರೀ ನೀರಾವರಿ ಯೋಜನೆಗಳು, ಸುಧಾರಿತ ವ್ಯವಸಾಯ ವಿಧಾನಗಳು, ಜಮೀನು ವ್ಯವಸ್ಥೆ ಇವುಗಳ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ಈಗ ನಡೆದಿದೆ. ಗೋಧಿಯನ್ನು ಸಾಕಷ್ಟು ಬೆಳೆಯಲಾಗುತ್ತಿದೆ. ಧಾನ್ಯಗಳು, ಆಲಿವ್, ಅಂಜೂರ್, ಕಾಳುಗಳು, ಆಲೂಗಡ್ಡೆ ಇವು ಇತರ ಕೃಷಿ ಉತ್ಪನ್ನಗಳು.

ಮೀನುಗಾರಿಕೆ

ಬದಲಾಯಿಸಿ

ಉದ್ದವಾದ ಕರಾವಳಿ, ನೀರಿನಲ್ಲಿ ಮೀನಿನ ವಿಪುಲತೆ ಇವು ಮೀನುಗಾರಿಕೆಗೆ ಸಹಾಯಕವಾಗಿವೆ. ಮತ್ಸೋದ್ಯಮ ಬೆಳೆದಿದೆ. ಮೀನು ಇಲ್ಲಿಂದ ರಫ್ತಾಗುತ್ತದೆ. ದೇಶದಲ್ಲಿ ಸುಮಾರು 35,309 ನೋಂದಾಯಿತ ಮೀನುಗಾರರಿದ್ದಾರೆ. ಇನ್ನೂ 20,000 ಜನರು ಮೀನುಗಾರಿಕೆಯ ಉದ್ಯೋಗಗಳಲ್ಲಿ ನಿರತರಾಗಿದ್ದಾರೆ. ಮ್ಯಾಟೊಸೀನ್ಯೂಷ್, ಸೆಟೂಬಲ್, ಪೋರ್ಟಿಮಾವು ಮತ್ತು ಊಲ್ಯಾವು ಮುಖ್ಯ ಮೀನುಗಾರಿಕೆಯ ಕೇಂದ್ರಗಳು.

ಖನಿಜಗಳು

ಬದಲಾಯಿಸಿ

ಖನಿಜಗಳ ಉತ್ಪಾದನೆಯಲ್ಲಿ ಸಾಕಷ್ಟು ಪ್ರಯತ್ನ ನಡೆಯದೇ ಇರುವುದು ಕಡಿಮೆ ಉತ್ಪಾದನೆಗೆ ಕಾರಣವಾಗಿದೆ. ಕಬ್ಬಿಣ ಅದಿರು, ಕಲ್ಲಿದ್ದಲು, ಕಬ್ಬಿಣ ಮತ್ತು ತಾಮ್ರಗಳ ಸಲ್ಫೈಡುಗಳು, ವುಲ್ಫ್ರಮ್ ತವರ, ಆಂಟಿಮನಿ, ಮ್ಯಾಂಗನೀಸ್ ಮತ್ತು ಅಂತ್ರಸೈಟ್ ಅಲ್ಪ ಪ್ರಮಾಣಗಳಲ್ಲಿ ಉತ್ಪಾದನೆಯಾಗುತ್ತವೆ.

ಕೈಗಾರಿಕೆ

ಬದಲಾಯಿಸಿ

ಎರಡನೆಯ ಮಹಾಯುದ್ಧದ ಕಾಲದಿಂದ ಪೋರ್ಚುಗಲ್ಲಿನ ಆರ್ಥಿಕ ಜೀವನದಲ್ಲಿ ನಿಶ್ಚಿತ ಬದಲಾವಣೆಯಾಗಿದೆ. ಜನಸಂಖ್ಯೆ ಬೆಳೆದಂತೆ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 1930 ರಿಂದ ದೇಶದ ಔದ್ಯೋಗಿಕ ನೆಲಗಟ್ಟನ್ನು ವಿಸ್ತರಿಸುವ ಪ್ರಯತ್ನ ನಡದೇ ಇದೆ. ಮಹಾಯುದ್ಧದ ಕಾಲದಿಂದ ಪೋರ್ಚುಗಲ್ಲಿನ ಆರ್ಥಿಕ ಜೀವನದಲ್ಲಿ ನಿಶ್ಚಿತ ಬದಲಾವಣೆಯಾಗಿದೆ. ಜನಸಂಖ್ಯೆ ಬೆಳೆದಂತೆ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 1930 ರಿಂದ ದೇಶದ ಔದ್ಯೋಗಿಕ ನೆಲಗಟ್ಟನ್ನು ವಿಸ್ತರಿಸುವ ಪ್ರಯತ್ನ ನಡದೇ ಇದೆ. ಆಹಾರ ಪದಾರ್ಥ ಮತ್ತು ಪಾನೀಯ, ಬಟ್ಟೆ ಹಾಗೂ ಲೋಹೊದ್ಯಮಗಳು ದೇಶದ ಅರ್ಧಕ್ಕಿಂತಲೂ ಹೆಚ್ಚು ಕೈಗಾರಿಕಾ ಉತ್ಪಾದನೆಗೆ ಕಾರಣವಾಗಿವೆ. ಕೆಲಸಗಾರರಲ್ಲಿ ಸೇಕಡ 55 ರಷ್ಟು ಜನರು ಅವುಗಳಲ್ಲಿ ತೊಡಗಿದ್ದಾರೆ. ಕೈಗಾರಿಕಾ ಕೇಂದ್ರಗಳು ದೇಶದಲ್ಲಿ ಅಸಮವಾಗಿ ಹರಡಿವೆ. ಹೆಚ್ಚು ಸಮೃದ್ಧ ಹಾಗೂ ತೀವ್ರ ಬೆಳೆಯುತ್ತಿರುವ ಕೈಗಾರಿಕೆಗಳು ದೊಡ್ಡ ನಗರಗಳ ವಿಶೇಷವಾಗಿ ಲಿಸ್ಬನ್ ಮತ್ತು ಓಪೋರ್ಟೋಗಳ ಸುತ್ತ ಇವೆ. ಬಿರಡೆಯ ತಯಾರಿಕೆಯಲ್ಲಿ ಈ ದೇಶ ಪ್ರಪಂಚದಲ್ಲಿ ಮುಂದಿದೆ. ಮದ್ಯ ತಯಾರಿಕೆ, ಮೀನುಗಳ ಡಬ್ಬೀಕರಣ, ಹಡಗು ನಿರ್ಮಾಣ ದೊಡ್ಡ ಉದ್ಯಮಗಳು. ಬಟ್ಟೆ, ಆಲಿವ್ ಎಣ್ಣೆ, ರಾಳ, ಕಾಗದ, ಗಾಜಿನ ಸಾಮಾನು, ಪೆಟ್ರೋಲಿಯಮ್ ಸರಕುಗಳು, ಪಿಂಗಾಣಿ ಹೆಂಚು ಇವು ಇಲ್ಲಿ ತಯಾರಾಗುವ ಇತರ ವಸ್ತುಗಳು. ಬಿರಡೆ, ಮದ್ಯ, ಉಪ್ಪು, ಮೀನು ಇವು ಮುಖ್ಯ ರಫ್ತು ಸರಕುಗಳು. ಪ್ರವಾಸೋದ್ಯಮವೂ ಗಮನಾರ್ಹವಾಗಿ ಬೆಳೆದಿದೆ.

ಹಣಕಾಸು

ಬದಲಾಯಿಸಿ

ಪೋರ್ಚುಗೀಸ್ ಎಸ್ಕೂಡೋ ಪೋರ್ಚುಗಲ್ಲಿನ ನಾಣ್ಯ. ಇದನ್ನು 100 ಸೆಂಟಾವೋಗಳಾಗಿ ವಿಂಗಡಿಸಲಾಗಿದೆ. 1846 ರಲ್ಲಿ ಸ್ಥಾಪಿತವಾದ ಬ್ಯಾಂಕ್ ಆಫ್ ಪೋರ್ಚುಗಲ್ ನೋಟು ನೀಡಿಕೆಯ ಪ್ರಾಧಿಕರಣ. ದೇಶದಲ್ಲಿ 20 ಕ್ಕೂ ಹೆಚ್ಚು ವಾಣಿಜ್ಯ ಬ್ಯಾಂಕುಗಳಿವೆ.

ಶಿಕ್ಷಣ

ಬದಲಾಯಿಸಿ

6 ರಿಂದ 14 ವರ್ಷಗಳೊಳಗಿನವರೆಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತದೆ. ಅನಕ್ಷರಸ್ಥರು 1950 ರಲ್ಲಿ ಸೇ. 40, 1960 ರಲ್ಲಿ ಸೇ. 32, 1970 ರಲ್ಲಿ ಸೇ. 21 ಇದ್ದರು. ದೇಶದಲ್ಲಿ ಲಿಸ್ಬನ್ ಕ್ಲಾಸಿಕಲ್ ವಿಶ್ವವಿದ್ಯಾಲಯ, ಲಿಸ್ಬನ್ ತಾಂತ್ರಿಕ ವಿಶ್ವವಿದ್ಯಾಲಯ, ಕುಯಿಂಬ್ರ ವಿಶ್ವವಿದ್ಯಾಲಯ (ಇದು ಯೂರೋಪಿನಲ್ಲಿ ಅತ್ಯಂತ ಹಳೆಯದು). ಓಪೋರ್ಟೋ ವಿಶ್ವವಿದ್ಯಾಲಯ ಮತ್ತು ಕ್ಯಾತೋಲಿಕ್ ವಿಶ್ವವಿದ್ಯಾಲಯ, ಇವೆ. ಇವಲ್ಲದೆ ಸೈನಿಕ ಶಾಲೆ, ನೌಕಾಸೈನ್ಯ ಶಾಲೆ ಹಾಗೂ ಲಲಿತ ಕಲಾಶಾಲೆ ಇವೂ ಉಚ್ಚ ಶಿಕ್ಷಣ ನೀಡುತ್ತವೆ.

ಸರ್ಕಾರ ರಾಜಕಾರಣ

ಬದಲಾಯಿಸಿ

1933 ರ ಮಾರ್ಚ್ 19 ರಂದು ಸರ್ವ ಪ್ರಜಾ ನಿರ್ಣಯದಿಂದ ಅಂಗೀಕೃತವಾದ ಸಂವಿಧಾನದಿಂದಾಗಿ ಪೋರ್ಚುಗಲ್ ಏಕಾತ್ಮಕ, ಸಾಮೂಹಿಕಾತ್ಮಕ ಗಣರಾಜ್ಯವಾಯಿತು. ಆಗ ನಿರ್ಮಿಸಲಾದ ಎರಡು ಸಭೆಗಳಲ್ಲಿ ಮೊದಲನೆಯದು ಲಿಂಗಭೇದವಿಲ್ಲದೆ 150 ಸದಸ್ಯರಿರುವ ರಾಷ್ಟ್ರೀಯ ಸಭೆ. ಇದಕ್ಕೆ ವಿಧಾನಾಧಿಕಾರವಿದೆ. ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಕುಟುಂಬಗಳ ಯಜಮಾನರದು. ಸದಸ್ಯರ ಅವಧಿ ನಾಲ್ಕು ವರ್ಷಗಳು. ಎರಡನೆಯದಾದ ಸಾಮೂಹಿಕಾತ್ಮಕ ಸದನದ ಸದಸ್ಯರ ಸಂಖ್ಯೆ 205. ಅವರು ಶ್ರೇಣಿ ಅಥವಾ ಸಂಘಾಧಿಪತ್ಯಗಳನ್ನು ಪ್ರತಿನಿಧಿಸುತ್ತಾರೆ. ಆರ್ಥಿಕ ಸಾಮಾಜಿಕ ವಿಷಯಗಳನ್ನು ನೋಡಿಕೊಳ್ಳುವುದು ಮತ್ತು ರಾಷ್ಟ್ರೀಯ ಸಭೆಗೆ ಸಲಹೆ ನೀಡುವುದು ಈ ಸಭೆಯ ಕೆಲಸಗಳು. ಗಣರಾಜ್ಯದ ಅಧಿಪತಿ ಅಧ್ಯಕ್ಷ. ಅವನ ಅವಧಿ ಏಳು ವರ್ಷಗಳು. ಅವನು ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದು. ಎರಡೂ ಸಭೆಗಳ ಸದಸ್ಯರನ್ನು ಮತ್ತು ವಿವಿಧ ಜಿಲ್ಲೆಗಳ ಪ್ರತಿನಿಧಿಗಳನ್ನೂ ಒಳಗೊಂಡ ಚುನಾವಣಾ ಸಮುದಾಯದಿಂದ ಅವನ ಆಯ್ಕೆ ನಡೆಯುತ್ತದೆ. ಅವನೇ ಪ್ರಧಾನಿಯನ್ನು ನೇಮಿಸುತ್ತಾನೆ. ಅಧ್ಯಕ್ಷನಿಗೆ ಗಮನಾರ್ಹ ಅಧಿಕಾರವನ್ನು ಸಂವಿಧಾನ ನೀಡುತ್ತದೆ ಎಂದು ಕಂಡುಬಂದರೂ ಅವನ ನಿರ್ಣಯಗಳು ಊರ್ಜಿತವಾಗಬೇಕಾದರೆ ಅವಕ್ಕೆ ಪ್ರಧಾನಿಯ ಇಲ್ಲವೇ ಸಂಬಂಧಿಸಿದ ಮಂತ್ರಿಯ ಮೇಲುರುಜು ಬೇಕಾಗುತ್ತದೆ. ಹೀಗಾಗಿ ನಿಜವಾದ ಅಧಿಕಾರವಿರುವುದು ಪ್ರಧಾನಿ ಮತ್ತು ಮಂತ್ರಿಗಳ ಕೈಯ್ಯಲ್ಲಿ.

ಇತಿಹಾಸ

ಬದಲಾಯಿಸಿ
Reconstructed house in Citânia de Briteiros (up) and paved yard in Cividade de Terroso (down), two citadels of the Castro culture in Northern Portugal.

ಪೋರ್ಚುಗಲ್ಲಿನ ಪ್ರಾರಂಭದ ಇತಿಹಾಸ ಐಬೀರಿಯನ್ ಪರ್ಯಾಯ ದ್ವೀಪದ ಇತಿಹಾಸದಲ್ಲಿ ಸಮಾವೇಶಗೊಂಡಿದೆ. ಮೊತ್ತಮೊದಲಿಗೆ ಈ ಪ್ರದೇಶ ಗ್ರೀಕರ ದಾಳಿಗೆ ಬಲಿಯಾಯಿತು. ಅನಂತರ ದಾಳಿ ಮಾಡಿದವರು ರೋಮನ್ನರು. ಟೇಗಸ್ ನದಿಯ ದಕ್ಷಿಣಕ್ಕಿರುವ ಪೋರ್ಚುಗಲ್ಲಿನ ಪ್ರದೇಶವಾದ ಲೂಸಿಟಾನಿಯ ಎಂಬುದು ರೋಮನ್ನರ ಒಂದು ಪ್ರಾಂತ್ಯವಾಗಿತ್ತು. 4ನೆಯ ಮತ್ತು 8ನೆಯ ಶತಮಾನಗಳ ನಡುವೆ ಈ ಪ್ರದೇಶ ಅನೇಕ ದಾಳಿಗಳಿಗೆ ತುತ್ತಾಯಿತು. ಪೋರ್ಚುಗಲ್ಲಿನ ನಿಜವಾದ ಇತಿಹಾಸ ಗೆಲೀಶಿಯದ ದೊರೆಯಾದ 2ನೆಯ ಬೆರ್ಮುದಾನ ಆಳ್ವಿಕೆಯಲ್ಲಿ ಪ್ರಾರಂಭವಾಯಿತೆನ್ನಬಹುದು. 997ರಲ್ಲಿ ದುರ್ಬಲ ಕಲೀಫನಿಂದ ಓಟೋರ್ಫೋವನ್ನೂ ಡೋರೋ ಮತ್ತು ಮೀನ್ಯೂ ನದಿಗಳ ನಡುವಿನ ಪ್ರದೇಶವನ್ನೂ ಗೆದ್ದುಕೊಂಡ. ಮುಂದೆ 1064 ರಲ್ಲಿ ಲಿಯಾನ್, ಕಾಸ್ಟೀಲ್ ಮತ್ತು ಗೆಲೀಕ್ಷಿಯಗಳ ರಾಜ 1 ನೆಯ ಫರ್ಡಿನಾಂಡ್ ಎಂಬುವನು ಕುಯಿಂಬ್ರ ಮುಖ್ಯಸ್ಥಳವಾಗಿದ್ದ ಒಂದು ಕೌಂಟಿಯನ್ನು ಸ್ಥಾಪಿಸಿದ. ಕೊನೆಯಲ್ಲಿ ಅದಕ್ಕೆ ಪೋರ್ಚುಗಲ್ಲಿನ ಕೌಂಟಿ ಎಂಬ ಹೆಸರು ಬಂತು. ಫರ್ಡಿನಾಂಡನ ಮಗ 6 ನೆಯ ಆಲ್ಫಾನ್ಸೋ ಎಂಬುವನು ಸಾಂತ ರೆಮ್, ಲಿಸ್ಬನ್‍ಗಳನ್ನು ಗೆದ್ದುಕೊಂಡನಾದರೂ ಅವು ಮತ್ತು ಕೈಬಿಟ್ಟು ಹೋದವು. ಆಲ್ಫಾನ್ಸೋನ ಸಹಾಯಕ್ಕೆ ಬಂದವರಲ್ಲಿ ಬರ್ಗಂಡಿಯ ಕೌಂಟ್ ಹೆವ್ರಿ ಒಬ್ಬ. ಆಲ್ಫಾನ್ಸೋ ಅವನಿಗೆ ತನ್ನ ಮಗಳಾದ ಟೆರೆಸಾಳನ್ನು ಕೊಟ್ಟನಲ್ಲಿದೆ ಓಪೋರ್ಟೊ ಮತ್ತು ಕುಯಿಂಬ್ರ ಕೌಂಟಿಗಳನ್ನೂ ಕೌಂಟ್ ಆಫ್ ಪೋರ್ಚುಕೇಲ್ ಎಂಬ ಬಿರುದನ್ನೂ ನೀಡಿದ. ಆ ಕೌಂಟನ ಮಗ ಆಫಾನ್ಸೋ ಹೆನ್ರಿಕ್ಸ್ 1128 ರಲ್ಲಿ ಒಂದು ಒಪ್ಪಂದ ಮಾಡಿಕೊಂಡು ಪೋರ್ಚುಕೇಲ್‍ನ ಕೌಂಟಿಯನ್ನು ಪಡೆದುಕೊಂಡ. 1130 ರಿಂದ 1139 ರವರೆಗೆ ಅವನು ಲಿಯಾನ್ - ಕಾಸ್ಟೀಲ್ ದೊರೆ 7 ನೆಯ ಆಲ್ಫಾನ್ಸೋನೊಡನೆ ನಾಲ್ಕು ಯುದ್ಧಗಳನ್ನು ಮಾಡಿ ಪೋರ್ಚುಕೇಲನ್ನು ಸ್ವತಂತ್ರಗೊಳಿಸಿ 1 ನೆಯ ಆಲ್ಫಾನ್ಸೋ ಎಂಬ ಬಿರುದನ್ನು ತರಿಸಿ ಆಳತೊಡಗಿದ. 1139 ರಿಂದ 1182 ವರೆಗಿನ ಆಳ್ವಿಕೆಯಲ್ಲಿ ಅವನು ಕುಯಿಂಬ್ರ ಮತ್ತು ಟೇಗಸ್ ನದಿಗಳ ನಡುವಿನ ಪ್ರದೇಶಕ್ಕಾಗಿ ಮುಸ್ಲಿಮರೊಡನೆ ಹೋರಾಡುತ್ತಲೆ ಇರಬೇಕಾಯಿತು. 1147 ರಲ್ಲಿ ಅವನು ಉತ್ತರ ಯೂರೋಪಿನ ಧಾರ್ಮಿಕ ಯೋಧರ ಸಹಾಯದಿಂದ ಲಿಸ್ಬನ್ನನ್ನು ಗೆಲ್ಲಲು ಸಮರ್ಥನಾದ.

 
Suebic King Miro and St. Martin of Braga from an 1145 manuscript of Martin's De virtutibus quattuor.

ಮುಂದಿನ ಶತಮಾನದಲ್ಲಿ ಪೋರ್ಚುಗಲ್ಲಿನ ರಾಜರು ಟೇಗಸ್ ನದಿಯ ದಕ್ಷಿಣಕ್ಕಿರುವ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆಗಿಂದಾಗ್ಗೆ ಪ್ರಯತ್ನಿಸುತ್ತಲೇ ಇದ್ದರು. 3 ನೆಯ ಆಲ್ಫಾನ್ಸೋನ ಆಳ್ವಿಕೆಯಲ್ಲಿ (1248-1279) ಆಲ್ಗಾರ್ವೇ ಪ್ರಾಂತ್ಯ ಅವನ ಸ್ವಾಧೀನಕ್ಕೆ ಬಂದು ಪೋರ್ಚುಗಲ್ ತನ್ನ ಈಗಿನ ಮೇರೆಗಳನ್ನು ಪಡೆಯಿತು. ಡಿನೀಷನ ದೀರ್ಘ ಆಳ್ವಿಕೆಯ ಅವಧಿಯಲ್ಲಿ (1279-1325) ಪೋರ್ಚುಗಲ್ ಬಹಳ ಮುಂದುವರಿಯಿತು. 14 ನೆಯ ಶತಮಾನದ ಉಳಿದ ಅವಧಿಯಲ್ಲಿ ಸಿಂಹಾಸನಕ್ಕಾಗಿ ಅಂತರ್ಯುದ್ಧಗಳು ನಡೆದುವು. ಕಾಸ್ಟೀಲಿನೊಂದಿಗೂ ಯುದ್ಧಗಳು ನಡೆದು ಪೋರ್ಚುಗಲ್ ಇಂಗ್ಲೆಂಡಿನ ಸಹಾಯದಿಂದ ತನ್ನ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಲು ಸಮರ್ಥವಾಯಿತು. 1385 ರ ಆಗಸ್ಟ್ 14 ರಂದು ಕಾಸ್ಟೀಲಿಯನ್ನರ ವಿರುದ್ಧ ಗಳಿಸಿದ ಜಯದಿಂದ ಅದರ ಸ್ವಾತಂತ್ರ್ಯ ಶಾಶ್ವತವಾಯಿತು. ಈ ಗೆಲವು ಪೋರ್ಚುಗೀಸರ ಯುದ್ಧೋತ್ಸಾಹವನ್ನು ಕೆರಳಿಸಿ ಅವರಲ್ಲಿ ರಾಷ್ಟ್ರೀಯತೆಯ ಹುಮ್ಮಸ್ಸನ್ನು ಹೆಚ್ಚಿಸಿತು. ಬಂದರುಗಳಾದ ಲಿಸ್ಬನ್ ಮತ್ತು ಓಪೋರ್ಟೋಗಳ ಹಾಗೂ ಇತರ ಪಟ್ಟಣಗಳ ಬೆಳವಣಿಗೆಯಾಯಿತು. ಇದರಿಂದ ಹೊಸ ಮಾರುಕಟ್ಟೆಗಳನ್ನು ಹುಡುಕುವುದಕ್ಕೆ ಪೋರ್ಚುಗೀಸರಲ್ಲಿ ಉತ್ಸುಕತೆ ಮೂಡಿತು. ಕ್ರೈಸ್ತ ವಿರೋಧಿಗಳಾಗಿದ್ದ ಮೂರರ ವಿರುದ್ಧ ಗಳಿಸಿದ ಜಯಗಳು ಕ್ರೈಸ್ತ ಮತ ಪ್ರಚಾರದ ಬಗ್ಗೆ ಪಾದ್ರಿಗಳಲ್ಲಿ ವಿಶೇಷ ಉತ್ಸಾಹವನ್ನುಂಟು ಮಾಡಿದವು. ಇವೆಲ್ಲ ಅಂಶಗಳು ಯೂರೋಪಿನ ಪ್ರಥಮ ಸಾಗರಾಂತರ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದುವು.

1ನೆಯ ಜಾನ್ (1385-1433) ಮತ್ತು 5ನೆಯ ಆಲ್ಫಾನ್ಸೋ (1438-1481) ಇವರು ಆಫ್ರಿಕಾದ ಸೇಯೂಟ (1415), ಟಾಂಜಿಯರ್ (1417) ಇವನ್ನು ಮೂರರಿಂದ ಗೆದ್ದುಕೊಂಡರು. ಶೀಘ್ರದಲ್ಲೇ ಪೋರ್ಟೋಸ್ಯಾನ್ಟೋ ಮತ್ತು ಮಡಿರ. (1420), ಕೆನರಿ ಮತ್ತು ಏಜೋರ್ಸ ದ್ವೀಪಗಳ ಶೋಧವಾಯಿತು. 1445 ರಲ್ಲಿ ಪೋರ್ಚುಗೀಸರು ಗಿನಿ ತೀರವನ್ನು ಮುಟ್ಟಿದರು. ಮುಂದೆ ನೀಗ್ರೋ ಗುಲಾಮರ ವ್ಯಾಪಾರ ಆರಂಭವಾಯಿತು. ಮುಂದಿನ ಸ್ವಲ್ಪ ಕಾಲ ಸ್ವದೇಶದ ಹತ್ತಿರದ ಪ್ರದೇಶಗಳಿಗಾಗಿ ಇವರು ಮೂರರೊಡನೆ ಯುದ್ಧಗಳನ್ನು ನಡೆಸಿದರು. 2ನೆಯ ಜಾನನ ಆಳ್ವಿಕೆಯಲ್ಲಿ (1481-1495) ಹೊಸ ಪ್ರದೇಶಗಳನ್ನು ಶೋಧಿಸುವ ಕೆಲಸ ಮುಂದುವರಿಯಿತು. 1486 ರರೊಳಗೆ ಪೋರ್ಚುಗೀಸ್ ಹಡಗುಗಳು ಗುಡ್ ಹೋಪ್ ಭೂಶಿರದವರಗೆ ಆಫ್ರಿಕನ್ ತೀರದ ಸಮೀಕ್ಷೆಯನ್ನು ಮುಗಿಸಿದ್ದುವು. 1492 ರಲ್ಲಿ ಕೊಲಂಬಸ್ ವೆಸ್ಟ್‍ಇಂಡೀಸ್ ಕಂಡುಹಿಡಿದ. 1497-1498 ರಲ್ಲಿ ವಾಸ್ಕೋಡ ಗಾಮಾ ಆಫ್ರಿಕವನ್ನು ಬಳಸಿ ಭಾರತವನ್ನು ಮುಟ್ಟಿದ.

ಮುಂದಿನ ಕೆಲವು ದಶಕಗಳ ಕಾಲ ಪರಿಶೋಧನೆಯ ದೃಷ್ಟಿಯಿಂದ ಪೋರ್ಚುಗಲ್ಲಿನದು ಸುವರ್ಣಯುಗ. 1500 ರ ರಲ್ಲಿ ಕೆಬ್ರಾಲ್ ಎಂಬುವನು ಬ್ರಜಿಲ್‍ನ್ನು ಪರಿಶೋಧಿಸಿದ. 1513 ರಲ್ಲಿ ಮಲಕ್ಕ ದ್ವೀಪಗಳು ಪೋರ್ಚುಗೀಸರ ವಶವಾದುವು. 1517 ರಲ್ಲಿ ಅವರು ಚೀನಾ ಸಾಮ್ರಾಜ್ಯವನ್ನು ಮುಟ್ಟಿದರು. 1 ನೆಯ ಮ್ಯಾನ್ಯುಯೆಲನ ಆಳ್ವಿಕೆಯಲ್ಲಿ ಪೋರ್ಚುಗೀಸರ ಪ್ರಭಾವ ಪ್ರಾಬಲ್ಯಗಳು ಶಿಖರ ಮುಟ್ಟಿದುವು. ಅವನು ಯೂರೋಪಿನ ಅತ್ಯಂತ ಶ್ರೀಮಂತ ರಾಜರಲ್ಲೊಬ್ಬನಾಗಿದ್ದ. ಲಿಸ್ಬನ್ ಅತ್ಯಂತ ಪ್ರವರ್ಧಮಾನ ನಗರವೆನಿಸಿತ್ತು. ಸಾಹಿತ್ಯ ಲಲಿತಕಲೆಗಳು ಬೆಳೆದುವು. ಮಲಯಾರ್ ದಂಡೆಯ ಮೇಲೆ ಪೋರ್ಚುಗೀಸರ ವ್ಯಾಪಾರದ ಠಾಣೆಗಳು ಸ್ಥಾಪಿತವಾದವು. 1505 ರಲ್ಲಿ ಅಲ್ಲಿಗೆ ವೈಸ್‍ರಾಯನ ನೇಮಕವಾಯಿತು. ಅವನ ಮುಖ್ಯ ಠಾಣೆ ಕೊಚ್ಚಿಯಲ್ಲಿತ್ತು. 1509 ರಲ್ಲಿ ದೀವ್ ಪೋರ್ಚುಗೀಸರಿಗೆ ಸೇರಿತು. ಮುಂದೆ ಒಂದು ಶತಮಾನ ಕಾಲ ಹಿಂದೂ ಸಾಗರದ ಮೇಲೆ ಅವರ ಪ್ರಭುತ್ವವಿತ್ತು. ಮೊದಲನೆಯ ವೈಸ್‍ರಾಯ್ ಅಲ್ಮೇದನ ಅನಂತರ ಬಂದ ಆಲ್ಬುಕರ್ಕ ಸಾಮ್ರಾಜ್ಯ ಸ್ಥಾಪಕನಾದ. ಅವನು ವೈಸ್‍ರಾಯನ ಆಡಳಿತ ಕೇಂದ್ರವನ್ನು ಗೋವೆಗೆ ಬದಲಾಯಿಸಿದ. ಮಲಕ್ಕ ಮತ್ತು ಸುಮಾತ್ರ ದ್ವೀಪಗಳನ್ನು ವಶಪಡಿಸಿಕೊಂಡ. ಅನಂತರ ಬಂದವರು ಶ್ರೀಲಂಕಾ ಬಂಗಾಲ ಮತ್ತು ಪಶ್ಚಿಮ ಚೀನಗಳಲ್ಲಿ ಕೋಠಿಗಳನ್ನು ಸ್ಥಾಪಿಸಿದರು. ಜಪಾನಿನ ಯೋಕೋಹಾಮದಲ್ಲೂ ಒಂದು ಕೋಠಿಯನ್ನು ಸ್ಥಾಪಿಸಲಾಯಿತು (1548). ಈ ಮಧ್ಯೆ, ಬ್ರಜಿóಲ್ ಒಂದು ಶ್ರೀಮಂತ ವಸಾಹತಾಗಿ ಬೆಳೆದಿತ್ತು. ಇಂಗ್ಲೀಷರು ಅಮೆರಿಕದಲ್ಲಿ ಮಾಡಿದಂತೆ ಪೋರ್ಚುಗೀಸರು ಮಾಡಲಿಲ್ಲ. ಅಮೆರಿಕದಲ್ಲಿ ಬ್ರಜಿóಲ್ ಒಂದನ್ನು ಬಿಟ್ಟರೆ ಮತ್ತೆಲ್ಲೂ ಅವರು ಸಾಮ್ರಾಜ್ಯ ಕಟ್ಟಬಯಸಲಿಲ್ಲ. ಅವರ ಕೋಠಿಗಳು ಹೆಚ್ಚಾಗಿ ತೀರಗಳಲ್ಲಿರುತ್ತಿದ್ದವು. ವ್ಯಾಪಾರ ಮತ್ತು ಧರ್ಮಪ್ರಚಾರ ಅವರ ಮುಖ್ಯ ಉದ್ದೇಶಗಳಾಗಿದ್ದುವು.

Silves Castle, a Moorish-era fortification in the Algarve.
The Caliphate of Cordoba c. 1000 at the apogee of Al-Mansur.

16 ನೆಯ ಶತಮಾನದ ಉತ್ತರಾರ್ಧದಲ್ಲಿ ಪೋರ್ಚುಗೀಸರ ಪ್ರಾಬಲ್ಯ ಇಳಿಯತೊಡಗಿತು. 1557 ರಲ್ಲಿ ಪಟ್ಟಕ್ಕೆ ಬಂದ ದೊರೆ ಡಾಮ್ ಸೆಬಾಸ್ಟಿಯನ್ ಪ್ರಾಪ್ತ ವಯಸ್ಕನಾಗಿರಲಿಲ್ಲ. ರಾಜಪ್ರತಿನಿಧಿಗೆ ಪೋರ್ಚುಗಲ್ಲಿನಲ್ಲಿ ಹೆಚ್ಚಿನ ಪ್ರೀತಿ ಇರಲಿಲ್ಲ. ಇದು ಕೇಂದ್ರ ಸರ್ಕಾರದ ಬಲ ಕುಂದುವುದಕ್ಕೆ ಕಾರಣವಾಯಿತು. ದೊರೆ ಪ್ರಾಪ್ತ ವಯಸ್ಕನಾದ ಮೇಲೆ ಮೊರಾಕೋವನ್ನು ಗೆಲ್ಲವು ಹುಚ್ಚು ಸಾಹಸಕ್ಕಿಳಿದ. 1578 ರಲ್ಲಿ ಅವನು ಮರಣ ಹೊಂದಿದ. 1580 ರಲ್ಲಿ ಸ್ಪೇನಿನ 2 ನೆಯ ಫಿಲಿಪ್ ಪಟ್ಟಕ್ಕೆ ಹಕ್ಕುದಾರನಾದ. 1581 ರಲ್ಲಿ ಅವನನ್ನು ರಾಜನೆಂದು ಸ್ವೀಕರಿಸಲಾಯಿತು. ಮುಂದೆ 60 ವರ್ಷಗಳ ಕಾಲ ಪೋರ್ಚುಗಲ್ ಸ್ಪೇನಿನ ಹತೋಟಿಯಲ್ಲಿ ಉಳಿಯಿತು. ಇದರಿಂದ ಸ್ಪೇನಿನ ಶತ್ರುಗಳಾಗಿದ್ದ ಡಚ್ಚರು ಮತ್ತು ಇಂಗ್ಲೀಷರಿಗೆ ಆಫ್ರಿಕ ಮತ್ತು ದೂರ ಪೂರ್ವದ ಪೋರ್ಚುಗೀಸರ ವಸಾಹತುಗಳನ್ನು ವಶಪಡಿಸಿಕೊಳ್ಳುವುದಕ್ಕೆ ಅವಕಾಶವಾಯಿತು. 60 ವರ್ಷಗಳ ಕೊನೆಯಲ್ಲಿ ಪೋರ್ಚುಗಲ್ಲಿನಲ್ಲಿ ದಂಗೆಯುಂಟಾಯಿತು. 1640 ರ ಡಿಸೆಂಬರ್ 1 ರಂದು ಬ್ರಗಾನ್ಜಾ ಡ್ಯೂಕನನ್ನು 4 ನೆಯ ಜಾನ್ ಎಂಬ ಹೆಸರಿನಲ್ಲಿ ರಾಜನೆಂದು ಸಾರಲಾಯಿತು. ಪೋರ್ಚುಗಲ್ಲಿನ ಮೇಲೆ ಸ್ಪೇನಿನ ಅಧಿಕಾರ ಅಂತ್ಯಗೊಂಡಿತು.

ಮುಂದಿನ ಸುಮಾರು 150 ವರ್ಷಗಳ ಕಾಲ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದರಲ್ಲಿ ಹಾಗೂ ಅಳಿದುಳಿದ ಸಾಗರಾಂತರ ಸಾಮ್ರಾಜ್ಯದ ತುಣುಕುಗಳನ್ನು ಕಾಯ್ದುಕೊಳ್ಳುವುದರಲ್ಲಿ ಕಳೆಯಿತು. ಸ್ವಾತಂತ್ರ್ಯ ರಕ್ಷಣೆ ಬಹಳ ಮಟ್ಟಿಗೆ ಇಂಗ್ಲೀಷರ ನೆರವಿನಿಂದ ಸಾಧ್ಯವಾಯಿತು. 1669 ರ ಸುಮಾರಿಗೆ ಪೋರ್ಚುಗೀಸ್ ಸಾಮ್ರಾಜ್ಯದ ಹೆಚ್ಚು ಭಾಗಗಳು ಡಚ್ಚರ ವಶವಾಗಿದ್ದುವು. ಅವರು ಪೋರ್ಚುಗೀಸರನ್ನು ಮಲಬಾರ್ ಮತ್ತು ಕೋರಮಂಡಲ ತೀರಗಳಿಂದ ಹೊರದೂಡಿದ್ದರು. ಬ್ರಜಿಲ್ ಮಾತ್ರ ಅಭಿವೃದ್ಧಿ ಹೊಂದುತ್ತಿತ್ತು. 18 ನೆಯ ಶತಮಾನದಲ್ಲಿ ಪೋರ್ಚುಗಲ್ ರಾಜಕೀಯವಾಗಿ ಇಂಗ್ಲೆಂಡಿನ ಆಶ್ರಿತ ರಾಜ್ಯವಾಗಿ ಉಳಿಯಿತು. ಈ ಅವಧಿಯಲ್ಲಿ ರಾಜನ ನಿರಂಕುಶ ಪ್ರಭುತ್ವ ಸ್ಥಾಪಿತವಾಯಿತಲ್ಲದೆ ಅನೇಕ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಳಾದುವು. ಇದರಿಂದ 1755 ರ ಲಿಸ್ಬನ್ನಿನ ಭಯಂಕರ ಭೂಕಂಪದ ಪರಿಣಾಮಗಳಿಂದ ಚೇತರಿಸಿಕೊಳ್ಳುವುದು ಸಾಧ್ಯವಾಯಿತು.

ಫ್ರಾನ್ಸಿನ ಕ್ರಾಂತಿ ಹಾಗೂ ನೆಪೋಲಿಯನ್ನನ ಆಳ್ವಿಕೆಯ ಕಾಲದಲ್ಲಿ ಇಂಗ್ಲೆಂಡಿನ ಮಿತ್ರ ರಾಷ್ಟ್ರವಾಗಿದ್ದ ಪೋರ್ಚುಗಲ್ಲಿಗೆ ದುರ್ದಶೆ ಒದಗಿತು. 1807 ರಲ್ಲಿ ಫ್ರಾನ್ಸಿನ ಬೆಂಬಲವಿದ್ದ ಸ್ಪೇನ್ ಪಡೆಗಳು ಪೋರ್ಚುಗಲ್ಲನ್ನು ಆಕ್ರಮಿಸಿಕೊಂಡಿದ್ದರಿಂದ ರಾಜ ಮನೆತನ ಬ್ರಜಿóಲ್ಲಿಗೆ ಪಲಾಯನ ಮಾಡಿತು. ಅದು ಪೋರ್ಚುಗಲ್ ಸರ್ಕಾರದ ಸ್ಥಾನವಾಯಿತು. ಮುಂದೆ ನಡೆದ ಪರ್ಯಾಯ ದ್ವೀಪ ಯುದ್ಧದಲ್ಲಿ ಫ್ರೆಂಚ್ ಪಡೆಗಳು ಐಬೀರಿಯನ್ ಪರ್ಯಾಯ ದ್ವೀಪವನ್ನು ಬಿಟ್ಟೋಡಿದವು.

1815 ರಲ್ಲಿ ಬ್ರಜಿóಲ್‍ನಲ್ಲಿ ಹೊಸ ರಾಜ್ಯ ಸ್ಥಾಪಿತವಾಯಿತು. 1822 ರಲ್ಲಿ ಪೋರ್ಚುಗಲ್ಲಿನ ದೊರೆ 6 ನೆಯ ಜಾನನ (1816-1826) ಹಿರಿಯ ಮಗ ಡಾಮ್ ಪೇದ್ರೂ ಸ್ವತಂತ್ರ ಬ್ರಜಿಲ್ಲಿನ ರಾಜನಾದ. ಅದೇ ಸಮಯಕ್ಕೆ ಉದಾರವಾದಿಗಳ ಒಂದು ಗುಂಪು ರಾಜ್ಯದಲ್ಲಿ ತಲೆ ಎತ್ತಿತು. ಅವರನ್ನು ರಾಜ ವಿರೋಧಿಸಿದ. ಮುಂದಿನ ಕೆಲವು ದಶಕಗಳಲ್ಲಿ ಸಂವಿಧಾನವಾದಿಗಳ ಮತ್ತು ನಿರಂಕುಶ ರಾಜಪ್ರಭುತ್ತ್ವದ ಬೆಂಬಲಿಗರ ನಡುವೆ ಹೋರಾಟಗಳು ನಡೆದುವು. ಉತ್ತರಾಧಿಕಾರದ ಕಲಹಗಳೂ ಮುಂದುವರಿದುವು. 1847 ರಲ್ಲಿ ಇಂಗ್ಲೀಷರು ಮತ್ತು ಸ್ಪ್ಯಾನಿಷರು ಪೋರ್ಚುಗಲ್ ವ್ಯವಹಾರಗಳಲ್ಲಿ ಕೈಹಾಕುವವರೆಗೂ ದೇಶದಲ್ಲಿ ಅರಾಜಕತೆ ಇತ್ತು. 5 ನೆಯ ಪೇದ್ರೂ (1853-1861) ಮತ್ತು ಲೂಯಿಸ್ (1861-1889) ದೊರೆಗಳ ಆಳ್ವಿಕೆಗಳಲ್ಲಿ ಸ್ವಲ್ಪ ಮಟ್ಟಿಗೆ ಶಾಂತಿ ಇತ್ತಾದರೂ ರಾಜರ ವಿರುದ್ಧ ಅಸಮಾಧಾನ ಬೆಳೆಯಿತು. 1875 ರ ನವೆಂಬರಿನಲ್ಲಿ ರಿಪಬ್ಲಿಕನ್ ಪಕ್ಷದ ಉಮೇದುವಾರರು ಪಾರ್ಲಿಮೆಂಟಿಗೆ ಸ್ಪರ್ಧಿಸಿ ಲಿಸ್ಬನ್ ಮತ್ತು ಓಪೋರ್ಟೋಗಳಲ್ಲಿ ಗೆದ್ದರು. ರಾಜಸತ್ತ ಕ್ರಮೇಣ ಸಡಿಲವಾಗತೊಡಗಿತು. 1906 ರಲ್ಲಿ ಸ್ವಲ್ಪ ಕಾಲ ಪ್ರಧಾನಿ ಫ್ರಾಂಕೋ ಸರ್ವಾಧಿಕಾರ ನಡೆಸಿದ. 1908 ಫೆಬ್ರವರಿ 1 ರಂದು ದೊರೆ ಡಾಮ್ ಕಾರ್ಲೋಸನ ಮತ್ತು ಯುವರಾಜನ ಹತ್ಯೆ ನಡೆಯಿತು. ಎರಡು ವರ್ಷಗಳ ಅನಂತರ ದೇಶದಲ್ಲಿ ಕ್ರಾಂತಿಯುಂಟಾಗಿ 1911 ರಲ್ಲಿ ಪೋರ್ಚುಗಲ್ ಗಣರಾಜ್ಯವಾಯಿತು.

ಮುಂದಿನ ಎರಡು ದಶಕಗಳ ಕಾಲ ದೇಶದಲ್ಲಿ ಶಾಂತಿ ಇರಲಿಲ್ಲ. ರಾಜಸತ್ತೆಯನ್ನು ಪುನಃ ಸ್ಥಾಪಿಸುವುದಕ್ಕೆ ಪ್ರಯತ್ನಗಳು ನಡೆದುವು. 1 ನೆಯ ಮಹಾಯುದ್ಧದಲ್ಲಿ ಪೋರ್ಚುಗಲ್ ಮಿತ್ರ ರಾಷ್ಟ್ರಗಳ ಪರವಾಗಿ ಭಾಗವಹಿಸಿತು. ಗಣರಾಜ್ಯವಾದಾಗಿನಿಂದ 1926ರ ವರೆಗೆ ಎಂಟು ಅಧ್ಯಕ್ಷರು ಆಗಿಹೋದರು. ಸುಮರು 43 ಮಂತ್ರಿಮಂಡಲಗಳು ಬಂದುಹೋದುವು. ಆರ್ಥಿಕ ಸ್ಥಿತಿ ಹದಗೆಟ್ಟಿತು. 1932 ರಲ್ಲಿ ಕುಯಿಂಬ್ರ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿದ್ದ ಸಾಲಾಜಾರ್ ಪ್ರಧಾನಿಯಾದ. 1933ರ ಸಂವಿಧಾನಕ್ಕೆ ಅವನು ಬಹುಮಟ್ಟಿಗೆ ಕಾರಣ. ಅದು ಅವನಿಗೆ ನಿರಂಕುಶ ಪ್ರಭುತ್ವದ ಅಧಿಕಾರಗಳನ್ನು ನೀಡಿತು. 2ನೆಯ ಮಹಾಯುದ್ಧದ ಕಾಲದಲ್ಲಿ ಪೋರ್ಚುಗಲ್ ತಾಟಸ್ಥ್ಯ ವಹಿಸಿತ್ತು. 1955ರಲ್ಲಿ ಅದು ವಿಶ್ವಸಂಸ್ಥೆಯ ಸದಸ್ಯ ದೇಶವಾಯಿತು. ಭಾರತದಲ್ಲಿ ಪೋರ್ಚುಗೀಸರು ಗೋವಾ, ದಿಯೂ, ದಮನ್‍ಗಳನ್ನು 4 ಶತಮಾನಗಳ ಕಾಲ ಆಳಿದರು. 1961 ಡಿಸೆಂಬರಿನಲ್ಲಿ ಭಾರತ ಸೈನ್ಯ ಈ ಪ್ರದೇಶಗಳನ್ನು ವಿಮುಕ್ತಗೊಳಿಸಿತು.

ಪೋರ್ಚುಗಲ್ ಈಗ ಪ್ರಗತಿಪಥದಲ್ಲಿ ಮುಂದುವರಿಯುತ್ತಿದೆ. ದೇಶದಲ್ಲಿ ಗಮನಾರ್ಹ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಬದಲಾವಣೆಗಳಾಗುತ್ತಿವೆ. ಪ್ರಧಾನಿ ಸಾಲಾಜಾರನ ಅನಂತರ ದೇಶದಲ್ಲಿ ಅಧಿಕಾರಿಗಳ ಆಡಳಿತದ ಬಿಗಿ, ಆರ್ಥಿಕ ಕಟ್ಟುನಿಟ್ಟು ಹಾಗೂ ಸೆನ್ಸಾರ್ ವಿಧಿಗಳು ಸಡಿಲಗೊಂಡುವು. ಶಿಕ್ಷಣ ಸುಧಾರಣೆಗೆ ಹೊಸ ಯೋಜನೆಯನ್ನು ಕೈಗೊಳ್ಳಲಾಯಿತು. (ಜಿ.ಕೆ.ಯು.)

ಶಿಕ್ಷಣ ಪದ್ಧತಿ

ಬದಲಾಯಿಸಿ

ಸಾಗರೋತ್ತರ ವಸಾಹತು ರಾಜ್ಯಗಳನ್ನೂ ಒಳಗೊಂಡ ಪೋರ್ಚುಗಲ್ಲಿನಲ್ಲಿ ಕಡ್ಡಾಯ ಶಿಕ್ಷಣ ಆಚರಣೆಯಲ್ಲಿದ್ದರೂ ಸರ್ಕಾರದ ಶಾಲೆಯಂತೆ ಖಾಸಗಿ ಅಥವಾ ಚರ್ಚಿನ ಶಾಲೆಗಳಲ್ಲೋ ತಮ್ಮ ತಮ್ಮ ಮನೆಗಳಲ್ಲೋ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಳ್ಳಬಹುದಾದ ಸ್ವಾತಂತ್ರ್ಯ ಪೋಷಕರಿಗಿದೆ. ಜೊತೆಗೆ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಶಿಕ್ಷಣದ ಬಗ್ಗೆ ಇಂಥದೇ ಪಂಥವನ್ನು ಕುರಿತು ಬೋಧಿಸಬೇಕೆಂದು ಸರ್ಕಾರ ಸೂಚಿಸುವುದಿಲ್ಲ. ಆದರೆ, ನೈತಿಕ ಶಿಕ್ಷಣವೀಯುವಾಗ ರೋಮನ್ ಕ್ಯಾತೊಲಿಕ್ ಪಂಥದ ತತ್ತ್ವಾನುಸಾರ ನಡೆದುಕೊಳ್ಳಬೇಕೆಂಬ ನಿಯಮ ಮಾತ್ತ ಉಂಟು. ಶಾಲೆಗಳಿಗೆ ಪಠ್ಯಕ್ರಮವನ್ನು ಸೂಚಿಸುವುದರ ಜೊತೆಗೆ ಸರ್ಕಾರ ಪದವಿ ಪ್ರಶಸ್ತಿಗಳನ್ನು ನೀಡುವ ಅಧಿಕಾರವನ್ನೂ ಹೊಂದಿದೆ. ಅಂಗೀಕೃತ ಖಾಸಗಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೂ ಅವು ನೀಡುವ ಪದವಿಗಳಿಗೂ ಅಂಗೀಕಾರ ನೀಡುವ ಹಕ್ಕು ಅದರದೇ.

ಶಿಕ್ಷಣ ನಾಲ್ಕು ಅಂತಸ್ತುಗಳಲ್ಲಿ ವ್ಯವಸ್ಥೆಗೊಂಡಿದೆ. ಪ್ರಾಥಮಿಕ ಪೂರ್ವದ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪ್ರೌಢ (ಸೆಕೆಂಡರಿ) ಶಿಕ್ಷಣ (ಸಾಮಾನ್ಯ ಮತ್ತು ತಾಂತ್ರಿಕ) ಮತ್ತು ಉನ್ನತ ಶಿಕ್ಷಣ. ಕೊನೆಯ ಎರಡು ಅಂತಸ್ತುಗಳಲ್ಲಿ ಸಾಮಾನ್ಯ ಶಿಕ್ಷಣದಂತೆ ವೃತ್ತಿ ತಾಂತ್ರಿಕ ಹಾಗೂ ಟೆಕ್ನಾಲಾಜಿಕಲ್ ಶಿಕ್ಷಣಕ್ಕೂ ಅವಕಾಶ ಉಂಟು.

ಪ್ರಾಥಮಿಕ ಪೂರ್ವದ ಅಂತಸ್ತಿನ ಶಿಕ್ಷಣ ರಾಜ್ಯ ಸರ್ಕಾರದ ಹೊಣೆಗಾರಿಕೆಗೆ ಸೇರಿಲ್ಲವಾದರೂ ಅದನ್ನು ನಡೆಸುವ ಸಂಸ್ಥೆಗಳಿಗೆ ಸರ್ಕಾರ ಧನಸಹಾಯ ನೀಡುತ್ತದೆ. 3-7 ವರ್ಷ ವಯಸ್ಸಿನವರೆಗಿನ ಈ ಶಿಕ್ಷಣ ಅಷ್ಟಾಗಿ ವಿಸ್ತರಿಸಿಲ್ಲ. ಕೇವಲ ಸೇಕಡ ಒಂದರಷ್ಟು ಮಕ್ಕಳು ಮಾತ್ರ ಆ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಆರ್ಥಿಕ ಅಭಾವದ ಕಾರಣ ಅವನ್ನು ನಡೆಸಲು ಸಂಸ್ಥೆಗಳು ಅಷ್ಟಾಗಿ ಮುಂದೆ ಬರುತ್ತಿಲ್ಲ. ಅಲ್ಲದೆ, ಚದುರಿದಂತೆ ಹರಡಿಕೊಂಡಿರುವ ವಸತಿ ಗೃಹಗಳಿಂದಾಗಿ ಅಂಥ ಶಾಲೆಗಳನ್ನು ತಕ್ಕಷ್ಟು ಆರಂಭಿಸಲು ಅವಕಾಶ ಕಡಿಮೆಯಾಗಿದೆ. ಇಲ್ಲಿನ ಈ ಅಂತಸ್ತಿನ ಶಾಲೆಗಳು ಫ್ರೋಬೆಲ್, ಮಾಂಟಿಸೋರಿ ಅಥವಾ ಡೆಕ್ರೊಲಿ ಪದ್ಧತಿಗಳನ್ನು ಅನುಸರಿಸುತ್ತಿವೆ. ಕೆಲವು ಶಿಶುವಿಹಾರಗಳು ಪೋರ್ಚುಗಲ್ಲಿನ 19 ನೆಯ ಶತಮಾನದ ಕವಿ ಜೆವೋಡಿ ದೇವಸ ಎಂಬಾತನ ಹೆಸರಿನಿಂದ ಕರೆಯಲ್ಪಡುವ ಕಿಂಡರ್ ಗಾರ್ಟನ್‍ಗಳು ಆ ದೇಶದ ಸಾಹಿತ್ಯ, ಸಂಸ್ಕøತಿ, ಭೂಲಕ್ಷಣಾದಿ ಪರಂಪರೆಯಲ್ಲಿ ಅಭಿಮಾನ ಮೂಡಿಸುವ ಕಾರ್ಯಕ್ರಮಕ್ಕೆ ಪ್ರಾಧಾನ್ಯವಿತ್ತಿವೆ.

ಹದಿನೆಂಟನೆಯ ಶತಮಾನದ ಮಧ್ಯಕಾಲದಿಂದಲೂ ಪ್ರಚಾರದಲ್ಲಿರುವ ಇಲ್ಲಿನ ಪ್ರಾಥಮಿಕ ಶಾಲೆಗಳು 1940 ರಿಂದೀಚೆಗೆ ಸರ್ಕಾರದ ಪ್ರೋತ್ಸಾಹಕ್ಕೂ ಧನಸಹಾಯಕ್ಕೂ ಅರ್ಹತೆ ಪಡೆದುಕೊಂಡಿವೆ. ಜೊತೆಗೆ ಸರ್ಕಾರವು ದೇಶದ ಎಲ್ಲೆಡೆಗಳಲ್ಲೂ ನೂತನ ಶಾಲೆಗಳನ್ನು ಆರಂಭಿಸಿರುವುದಲ್ಲದೆ ಆ ಶಾಲೆಗಳ ಆಡಳಿತಕ್ಕೆ ತಕ್ಕ ಮೇಲ್ವಿಚಾರಣಾ ಸಿಬ್ಬಂದಿಯನ್ನು ನೇಮಿಸಿದೆ. ಹಿಂದಿನಿಂದಲೂ ಕಾನೂನಿನಲ್ಲಿ ಪ್ರಚಾರದಲ್ಲಿದ್ದ 11 ನೆಯ ವಯಸ್ಸಿನವರೆಗಿನ ಕಡ್ಡಾಯ ಶಿಕ್ಷಣದ ವಯೋಮಿತಿಯನ್ನು 13 ವರ್ಷ ವಯಸ್ಸಿನವರೆಗೆ ವಿಸ್ತರಿಸಲಾಯಿತು. ದೇಶದಲ್ಲಿ ಅಧಿಕವಾಗಿದ್ದ ನಿರಕ್ಷರತೆಯನ್ನು ತಗ್ಗಿಸಲು ವ್ಯಾಪಕವಾಗಿ ವಯಸ್ಕರ ತರಗತಿಗಳನ್ನು ಏರ್ಪಡಿಸಲಾಯಿತು. ಈಚೆಗೆ ಸರ್ಕಾರದ ಸ್ಥಾನಗಳಿಗೆ ಸೇರತಕ್ಕವರು 13 ವರ್ಷಗಳವರೆಗಿನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿರಬೇಕೆಂಬ ನಿಯಮವನ್ನು ಮಾಡಿದ ಮೇಲೆ ವಯಸ್ಕರಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗುತ್ತಿದೆ.

ಈ ಶಾಲೆಗಳಲ್ಲಿ ಮಹಿಳಾ ಶಿಕ್ಷಕರೇ ಹೆಚ್ಚಾಗಿರುವರು. ಅವರು ನಾರ್ಮಲ್ ಸ್ಕೂಲುಗಳಲ್ಲಿ ತರಬೇತು ಪಡೆದವರಾಗಿರುತ್ತಾರೆ. ಅಧ್ಯಾಪಕರ ಕೊರತೆ ಹೆಚ್ಚಾಗಿರುವುದರಿಂದ ಗ್ರಾಮಾಂತರ ಪ್ರದೇಶಗಳ ಸಣ್ಣ ಶಾಲೆಗಳಲ್ಲಿ ತಕ್ಕಷ್ಟು ಶಿಕ್ಷಣಾರ್ಹತೆಯಿಲ್ಲದ ರೀಜೆಂಟ್ ಉಪಾಧ್ಯಾಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಎರಡು ವಿಧಧ ಪ್ರೌಢಶಾಲೆಗಳು ಪ್ರಚಾರದಲ್ಲಿವೆ. ಸರ್ಕಾರದ ಪ್ರೌಢಶಾಲೆಗಳನ್ನು ಲೈಸಿಯಂ ಎಂದು ಕರೆಯುವರು. ಅವುಗಳ ಜೊತೆಗೆ ಚರ್ಚ್ ಮತ್ತು ಖಾಸಗಿ ಸಂಸ್ಥೆಗಳು ನಡೆಸುವ ಶಾಲೆಗಳೂ ಇವೆ. ಇಲ್ಲಿನ ಶಿಕ್ಷಣ ಮೂರು ಆವರ್ತಗಳಲ್ಲಿ ಏರ್ಪಟ್ಟಿದೆ. 3 ವರ್ಷದ ಮೊದಲನೆಯ ಆವರ್ತ, 2 ವರ್ಷದ ಎರಡನೆಯ ಆವರ್ತ ಮತ್ತು ಇನ್ನೆರಡು ವರ್ಷದ ಮೂರನೆಯ ಆವರ್ತ. ಮೊದಲ ಆವರ್ತದಲ್ಲಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿಷಯಗಳನ್ನೇ ಮುಂದುವರಿಸಲಾಗುವುದು. ಎರಡನೆಯ ಆವರ್ತ ಮುಗಿಸಿದವರಿಗೆ, ಕೊನೆಯಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಡಿಪ್ಲೊಮಾ ನೀಡಲಾಗುವುದು. 2 ವರ್ಷದ ಕೊನೆಯ ಆವರ್ತದಲ್ಲಿ ಕಾಲೇಜಿನ ಅಥವಾ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣಕ್ಕೆ ಸಿದ್ಧತೆ ನೀಡಲಾಗುವುದು.

ಈ ಮಟ್ಟದ ಸಮಾಂತರ ವೃತ್ತಿ ಶಾಲೆಗಳು ದೇಶಾದ್ಯಂತ ಏರ್ಪಟ್ಟಿವೆ. ಇವನ್ನು ಸೆಕೆಂಡರಿ ಟಕ್ನಿಕಲ್ ಶಾಲೆ. ವೃತ್ತಿ ಪ್ರೌಢಶಾಲೆ ಎಂದು ಕರೆಯುವುದುಂಟು. ಇಲ್ಲಿನ ಮೊದಲ 2 ವರ್ಷದ ಶಿಕ್ಷಣ ಲೈಸಿಯಮ್ಮಿನಲ್ಲಿರುವಂತೆಯೇ ಇರುತ್ತದೆ. ಎರಡನೆಯ ವರ್ಷ ವಿವಿಧ ಕಸಬುಗಳಲ್ಲಿ ತರಬೇತು ನೀಡಲಾಗುತ್ತದೆ. ಕಾರ್ಖಾನೆ, ಕೃಷಿ, ವಾಣಿಜ್ಯ ಈ ಕ್ಷೇತ್ರಗಳಲ್ಲಿ ಉದ್ಯೋಗ ಶಿಕ್ಷಣವನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಶಾಲೆಗಳಲ್ಲಿ ಮೂರನೆಯ ಆವರ್ತದಲ್ಲಿ ತಾಂತ್ರಿಕ ಶಿಕ್ಷಣವೀಯಲಾಗುವುದು. ಲೆಕ್ಕಾಚಾರ, ಪತ್ರ ವ್ಯವಹಾರ, ಬೆರಳಚ್ಚು, ಯಂತ್ರ ವಿಜ್ಞಾನ, ಎಂಜಿನಿಯರಿಂಗ್ ಇವು ಆಗ ಪಡೆಯುವ ಪ್ರಮುಖ ವೃತ್ತಿ ವಿಷಯಗಳು. ಈ ಹಂತದಲ್ಲಿ ಸಹಸ್ರಗಟ್ಟಲೆ ಭಾಗಶಃ ಕಾಲದ ವಿದ್ಯಾರ್ಥಿಗಳಿಗಾಗಿ ಸಂಜೆ ತರಗತಿಗಳನ್ನು ನಡೆಸಲಾಗುತ್ತಿದೆ. ಅಧ್ಯಾಪಕರ ಶಿಕ್ಷಣಕ್ಕಾಗಿ ನಾರ್ಮಲ್ ಸ್ಕೂಲುಗಳು ಸಂಗೀತ ನೃತ್ಯಾದಿ ಲಲಿತಕಲಾ ಶಿಕ್ಷಣಕ್ಕಾಗಿ ವಿಶಿಷ್ಟ ಪ್ರೌಢಶಾಲೆಗಳು ಏರ್ಪಟ್ಟಿವೆ.

ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲೂ ಕೆಲವು ವಿಶಿಷ್ಟ ಸಂಸ್ಥೆಗಳಲ್ಲೂ ಏರ್ಪಟ್ಟಿವೆ. ಪ್ರೌಢಶಾಲೆಯ ಎರಡನೆಯ ಆವರ್ತ ಮುಗಿಸಿ ಮೂರನೆಯ ಆವರ್ತಕ್ಕೆ ಪ್ರವೇಶಾವಕಾಶ ಪಡೆದವರೂ ಅದಕ್ಕೆ ಸಮಾನ ಡಿಪ್ಲೊಮಾ ಪಡೆದವರೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಬಹುದು. ಪೋರ್ಚುಗಲ್ಲಿನಲ್ಲಿ ಮೂರು ಪ್ರಮುಖ ವಿಶ್ವವಿದ್ಯಾಲಯಗಳೀವೆ. ಅವುಗಳಲ್ಲಿ ಕುಯಿಂಬ್ರ ವಿಶ್ವವಿದ್ಯಾಲಯ 1029 ರಲ್ಲಿ ಆರಂಭವಾಗಿದ್ದು ಯೂರೋಪಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯವೆಂಬ ಹೆಸರು ಪಡೆದಿದೆ. ಈ ಶತಮಾನದ ಆರಂಭದಲ್ಲಿ ರೂಪುಗೊಂಡ ಲಿಸ್ಬನ್ ಮತ್ತು ಓಪೋರ್ಟೋ ವಿಶ್ವವಿದ್ಯಾಲಯಗಳು ಈಚಿನವು. ಕುಯಿಂಬ್ರ ಮತ್ತು ಲಿಸ್ಬನ್ ವಿಶ್ವವಿದ್ಯಾಲಯಗಳು ಪೂರ್ಣ ವಿಶ್ವವಿದ್ಯಾಲಯಗಳಾಗಿದ್ದು ಎಲ್ಲ ರೀತಿಯ ಅಂಗ ಸಂಸ್ಥೆಗಳನ್ನೂ ವಿಷಯ ವಿಭಾಗಗಳನ್ನೂ ಒಳಗೊಂಡಿದ್ದು ಬ್ಯಾಚುಲರ್, ಮಾಸ್ಟರ್ ಮತ್ತು ಡಾಕ್ಟರ್ ಪದವಿ ಶಿಕ್ಷಣಕ್ಕೆ ಅವಕಾಶವನ್ನು ಏರ್ಪಡಿಸಿಕೊಂಡಿವೆ. ಓಪೋರ್ಟೋ ವಿಶ್ವವಿದ್ಯಾಲಯ ಕೇವಲ ವಿದ್ಯಾಲಯಗಳನ್ನು (ಸ್ಕೂಲ್ಸ್) ಒಳಗೊಂಡಿದೆ. ಅವುಗಳಲ್ಲಿ ವಿಜ್ಞಾನ, ವೈದ್ಯ, ಅರ್ಥಶಾಸ್ತ್ರ, ಎಂಜಿನಿಯರಿಂಗ್, ಔಷಧಿ ನಿರ್ಮಾಣಶಾಸ್ತ್ರ ಇವನ್ನು ಕಲಿಸುವ ವಿದ್ಯಾಲಯಗಳು ಮುಖ್ಯವಾದುವು. ಮೇಲಿನ ಮೂರು ಸಾಮಾನ್ಯ ವಿಶ್ವವಿದ್ಯಾಲಯಗಳ ಜೊತೆಗೆ ಪೋರ್ಚುಗಲ್ಲಿನಲ್ಲಿ ಒಂದು ಟೆಕ್ನಲಾಜಿಕಲ್ ವಿಶ್ವವಿದ್ಯಾಲಯವೂ ಇವೆ. ಅದು ಕೃಷಿ ಪಶುವೈದ್ಯ ಟೆಕ್ನಾಲಜಿ ಸಾಮಾಜಿಕ ಮತ್ತು ರಾಜಕೀಯ ಶಾಸ್ತ್ರಗಳು, ಅರ್ಥಶಾಸ್ತ್ರ-ಇವುಗಳಲ್ಲಿ ಉನ್ನತ ಶಿಕ್ಷಣವೀಯುತ್ತವೆ. ಲಿಸ್ಬನ್ ಮತ್ತು ಓಪೋರ್ಟೋ ವಿಶ್ವವಿದ್ಯಾಲಯಗಳಿಗೆ ಸೇರಿದಂತೆ ನಾಟ್ಯಕಲೆ ಮತ್ತು ಸಂಗೀತಗಳಲ್ಲಿ ಉನ್ನತ ಶಿಕ್ಷಣವೀಯುವ ಅಕಾಡೆಮಿಗಳಿವೆ. ಮಿಲಿಟರಿ ಮತ್ತು ನೌಕಾ ಅಕಾಡೆಮಿಗಳೂ ಇನ್ಸಿಟ್ಟ್ಯೂಟ್ ಆಫ್ ಟ್ರಾಫಿಕಲ್ ಮೆಡಿಸನ್, ದೈಹಿಕ ಶಿಕ್ಷಣದ ಸಂಸ್ಥೆ, ಸಮಾಜ ಪಾಠಗಳ ಸಂಸ್ಥೆ ಮುಂತಾದ ಇತರ ಉನ್ನತ ಶಿಕ್ಷಣ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ. ಈಚೆಗೆ ಆರಂಭವಾಗಿರುವ ಕ್ಯಾತೊಲಿಕ್ ವಿಶ್ವವಿದ್ಯಾಲಯದಲ್ಲಿ ಮನಶ್ಯಾಸ್ತ್ರ ಸಮಾಜಶಾಸ್ತ್ರ ಇವಕ್ಕೆ ಮೀಸಲಾಗಿರುವ ವಿದ್ಯಾಸಂಸ್ಥೆಗಳು ಏರ್ಪಟ್ಟಿವೆ. ಅಧ್ಯಾಪಕರ ಶಿಕ್ಷಣ, ವಾಣಿಜ್ಯ ವ್ಯವಹಾರ ವಿದ್ಯೆ, ವಸ್ತು ಸಂಗ್ರಹಾಲಯದ ಶಿಕ್ಷಣ, ಗ್ರಂಥಾಲಯ ವಿಜ್ಞಾನ ಸಸ್ಯವಿಜ್ಞಾನ - ಇವುಗಳಲ್ಲಿ ಉನ್ನತ ಶಿಕ್ಷಣವೀಯುವ ಸಂಸ್ಥೆಗಳೂ ಇವೆ.

ಸಂಶೋಧನೆ ಮುಖ್ಯವಾಗಿ ವಿಶ್ವವಿದ್ಯಾಲಯಗಳಲ್ಲೂ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ನಡೆಯುತ್ತದೆ. ಈಚೆಗೆ ಆರಂಭವಾಗಿರುವ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆ ಮಹತ್ವದ ಸಂಶೋಧನೆಗಳನ್ನು ನಡೆಸುತ್ತಿದೆ. ರಾಷ್ಟ್ರದಲ್ಲಿ ನಡೆಯತಕ್ಕ ಸಂಶೋಧನೆಗಳ ನಡುವೆ ಸಂಯೋಜನೆ ಏರ್ಪಡಿಸಲು ಇನ್ಸ್‍ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಎಂಬ ಸಂಸ್ಥೆ ಏರ್ಪಟ್ಟಿದೆ. ಗಲ್‍ಬೆಂಕಿಯನ್ ಪೌಂಡೇಷನ್ ಸಂಶೋಧನೆಗಳಿಗೆ ಉದಾರವಾಗಿ ಧನಸಹಾಯ ನೀಡುತ್ತಿದೆ.

ಸರ್ಕಾರ ಪರೀಕ್ಷೆ ಮತ್ತು ತೇರ್ಗಡೆಗಳಿಗೆ ಸಂಬಂಧಿಸಿದ ಎಲ್ಲ ನೀತಿ ನಿಯಮಗಳನ್ನೂ ರೂಪಿಸುತ್ತದೆ. ಎಲ್ಲ ಸಾರ್ವತ್ರಿಕ ಪರೀಕ್ಷೆಗಳಲ್ಲೂ ಬರವಣಿಗೆಯ ಪರೀಕ್ಷೆಯ ಜೊತೆಗೆ ಮೌಖಿಕ ಪರೀಕ್ಷೆಯನ್ನು ನಡೆಸಲಾಗುವುದು.

ಪ್ರಾಥಮಿಕ ಶಾಲೆಯ ಪಠ್ಯಕ್ರಮ ಸಾಂಪ್ರದಾಯಿಕ ವಿಷಯಗಳನ್ನೂ ಕಾರ್ಯಕ್ರಮಗಳನ್ನೂ ಒಳಗೊಂಡಿದೆ. ಲೈಸಿಯಂ ಮತ್ತು ವೃತ್ತಿ ಪ್ರೌಢಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧರನ್ನಾಗಿ ಮಾಡುವುದೇ ಅದರ ಉದ್ದೇಶ. 7 ರಿಂದ 11 ವರ್ಷದ ವಯಸ್ಸಿನ ವರೆಗಿನ ಈ ಶಿಕ್ಷಣವನ್ನು ಈಚೆಗೆ 13 ನೆಯ ವಯಸ್ಸಿನವರೆಗೆ ವಿಸ್ತರಿಸಲಾಗಿದೆ. ಪ್ರೌಢಶಾಲೆಯಲ್ಲಿ ಮಕ್ಕಳ ಬೌದ್ಧಿಕ ಮತ್ತು ನೈತಿಕ ಶಕ್ತಿಗಳು ವಿಕಸಿಸುವಂತೆ ಶಿಕ್ಷಣವೀಯಲಾಗುತ್ತಿದೆ. ಪಠ್ಯ ಕ್ರಮದಲ್ಲಿ ಸಾಂಪ್ರದಾಯಿಕ ವಿಷಯಗಳಾದ ಮಾತೃಭಾಷೆ, ಇತಿಹಾಸ, ಭೂವಿವರಣೆ, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ, ನೈತಿಕ ಶಿಕ್ಷಣ, ಚಿತ್ರರಚನೆ, ಸಂಗೀತ ಮುಂತಾದವು ಸೇರಿವೆ. ಮೊದಲ ಆವರ್ತದಲ್ಲಿ ಮಾತೃಭಾಷೆಯ ಜೊತೆಗೆ ಫ್ರೆಂಚನ್ನೂ ಎರಡನೆಯ ಆವರ್ತದಲ್ಲಿ ಫ್ರೆಂಚ್ ಮತ್ತು ಇಂಗ್ಲಿಷ್‍ಗಳನ್ನೂ ಬೋಧಿಸಲಾಗುವುದು. ಮೂರನೆಯ ಹಂತದಲ್ಲಿ ಇನ್ನೂ ಕೆಲವು ಐರೋಪ್ಯ ಭಾಷೆಗಳ ಬೋಧನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬೋಧನ ಕ್ರಮದಲ್ಲಿ ಪಾಠದ ಜೊತೆಗೆ ಶ್ರವ್ಯದೃಶ್ಯ ಶಿಕ್ಷಣ ಸೌಲಭ್ಯಗಳೂ ಉಂಟು.

ಉನ್ನತ ಶಿಕ್ಷಣದ ಪಠ್ಯಕ್ರಮವೂ ಸಾಂಪ್ರದಾಯಿಕ ರೀತಿಯದೇ ಆಗಿದ್ದು, ಬೋಧನೆ ಬಹುಮಟ್ಟಿಗೆ ಉಪನ್ಯಾಸಗಳ ರೂಪದಲ್ಲಿರುತ್ತದೆ. ಬ್ಯಾಚುಲರ್ ಪದವಿ ಶಿಕ್ಷಣದಲ್ಲಿ ಮಹಿಳೆಯರು ಅಧಿಕವಾಗಿರುತ್ತಾರೆ. ಪ್ರೌಢಶಾಲೆಯ ಅಧ್ಯಾಪಕರಾಗಲು ಈ ಪದವಿ ಅಗತ್ಯ. ಇದು 5 ವರ್ಷ ಅವಧಿಯದು. ಈ ಪರೀಕ್ಷೆಯಲ್ಲಿ ಬರವಣಿಗೆಯ ಪರೀಕ್ಷೆಯ ಜೊತೆಗೆ ಒಂದು ಪ್ರಬಂಧವನ್ನೂ ಸಲ್ಲಿಸಬೇಕು. ವೈದ್ಯ ಪದವಿ ಆರು ವರ್ಷದ ಅವಧಿಯದು. ಅಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಶಿಕ್ಷಣಗಳೆರಡನ್ನೂ ನೀಡಲಾಗುವುದು. ಡಾಕ್ಟರೇಟ್ ಪರೀಕ್ಷೆ ಅಷ್ಟಾಗಿ ಜನಪ್ರಿಯವಾಗಿಲ್ಲ. ಅದನ್ನು ಪಡೆಯತಕ್ಕವರು ಮೇಲ್ಮಟ್ಟದ ಸಂಶೋಧನೆಗಳನ್ನು ಪ್ರಕಟಿಸಿರಬೇಕು. ಅಲ್ಲದೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಮಾತ್ರ ಆ ಪದವಿಯನ್ನು ನಿಗದಿ ಮಾಡಲಾಗಿದೆ.

ಅಧ್ಯಾಪಕರ ಶಿಕ್ಷಣ ಎರಡು ಹಂತಗಳಲ್ಲಿ ಏರ್ಪಟ್ಟಿದೆ. ಪ್ರಾಥಮಿಕ ಶಾಲೆಯ ಶಿಕ್ಷಕರ ತರಬೇತಿಗಾಗಿ ನಾರ್ಮಲ್ ಸ್ಕೂಲ್‍ಗಳಿವೆ. ಪ್ರಥಮ ಆವರ್ತ ಲೈಸಿಯಂ ಮುಗಿಸಿದವರು ಇಲ್ಲಿ ಇನ್ನೆರಡು ವರ್ಷದ ಶಿಕ್ಷಣ ಪಡೆದು ಒಂದು ಸಾರ್ವತ್ರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪ್ರೌಢಶಾಲೆಯ ಅಧ್ಯಾಪಕರು ವಿಶ್ವವಿದ್ಯಾಲಯ, ಕೆಲವು ನಾರ್ಮಲ್ ಸ್ಕೂಲು ಅಥವಾ ಕೆಲವು ಲೈಸಿಯಂಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಎರಡು ವರ್ಷಗಳ ಈ ಉನ್ನತ ಶಿಕ್ಷಣ ಕ್ರಮದಲ್ಲಿ ಶಿಕ್ಷಣ ತತ್ತ್ವ, ಬೋಧನಕ್ರಮ, ಶಿಕ್ಷಣದ ಆಡಳಿತ, ಶೈಕ್ಷಣಿಕ ಮನೋವಿಜ್ಞಾನ, ಶಿಕ್ಷಣದ ಇತಿಹಾಸ ಮುಂತಾದ ಸೈದ್ಧಾಂತಿಕ ವಿಷಯಗಳ ಜೊತೆಗೆ ಶಾಲೆಯಲ್ಲಿ ಅಭ್ಯಾಸಾರ್ಥ ಬೋಧನ ಕಾರ್ಯವನ್ನೂ ಕಲಿಸಲಾಗುವುದು. ಇವೆರಡರಲ್ಲೂ ಪರೀಕ್ಷೆ ಉಂಟು. ಸಂಗೀತ, ಚಿತ್ರಕಲೆ, ವಾಣಿಜ್ಯ ಮತ್ತು ಇತರ ವೃತ್ತಿ ಅಧ್ಯಾಪಕರ ಶಿಕ್ಷಣಕ್ಕಾಗಿ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿವೆ. ಉನ್ನತ ಶಿಕ್ಷಣ ಸಂಸ್ಥೆಯ ಅಧ್ಯಾಪಕರಿಗೆ ಯಾವ ರೀತಿಯ ಪ್ರಶಿಕ್ಷಣವೂ ಇಲ್ಲ. ಅವರು ತಾವು ಬೋಧಿಸಬೇಕಾದ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದರೆ ಸಾಕು.

ಟೆಲಿವಿಷನ್ ಮೂಲಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸಿ ಅದಕ್ಕಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ
Government
Trade
Travel
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: