ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)
ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾಗಿದೆ . ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ.. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ.
ರಮೇಶ ಜಿಗಜಿಣಗಿ, ಪ್ರಸ್ತುತ ಸಂಸದರು | |
---|---|
ಕ್ಷೇತ್ರದ ಇತಿಹಾಸ
ಬದಲಾಯಿಸಿವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿಯಾಗಿತ್ತು . ಸೂಫಿ ಸಂತರ ಪ್ರಭಾವದ ನೆಲೆ, ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ,(ಮಿನಿ ತಾಜಮಹಲ್ ) ಭಾರ ಕಮಾನ್ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ.
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶಿವಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಗ್ರಾಮದ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತದ ಈ ಬಾವಿ ಈಗಲೂ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ.
ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇಯಾದ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾಖಂಡಕಿ ಗ್ರಾಮದಲ್ಲಿ ಮಹಿಪತಿದಾಸರ ಬೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ, ಐತಿಹಾಸಿಕ ಉಪ್ಪಲದಿನ್ನಿಯ ಸಂಗಮೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ಬಬಲೇಶ್ವರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದ್ದರು .
ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತೊಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ಇದರಂತೆ ಹತ್ತಾರು ಸಕ್ಕರೆ ಕಾರ್ಖಾನೆಗಳು ಆರಂಭಗೊಂಡಿವೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಲಿಂಬೆ ಹಣ್ಣಿನ ಖಣಜವಾದ ಇಂಡಿ ತಾಲ್ಲೂಕಿನಿಂದ ದೇಶ-ವಿದೇಶಕ್ಕೂ ನಿಂಬೆ ಹಣ್ಣು ರಫ್ತಾಗುತ್ತಿದೆ.
ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. 12ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು.
ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸಗಿ-ತಂಗಡಗಿಯಲ್ಲೇ. ತಾಳಿಕೋಟಿ ಸಮೀಪದ ಮಿಣಜಗಿಯ ಪರ್ಸಿ(ತಾರಸಿ) ಎಲ್ಲೆಡೆ ಪ್ರಸಿದ್ಧಿ. ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿವಾಗಿದೆ . 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲ ಸಂಗಮವು ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.
ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಸಾಕಷ್ಟು ಲಂಬಾಣಿ ಜನಾಂಗವನ್ನು ಕಾಣಬಹುದು. ಈತ್ತಿಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಉಷ್ಣ ವಿದ್ಯುತ್ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ.
ಕ್ಷೇತ್ರದ ವಿಶೇಷತೆ
ಬದಲಾಯಿಸಿ- ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವನ್ನು 1951 - 1967ವರೆಗೆ ಬಿಜಾಪುರ ಉತ್ತರ ಲೋಕ ಸಭೆ ಚುನಾವಣಾ ಕ್ಷೇತ್ರವೆಂದು ಕರೆಯುತ್ತಿದ್ದರು.
- 1951ರಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ವಿಧಾನಸಭೆ ಕ್ಷೇತ್ರವು ವಿಜಯಪುರ ಲೋಕ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.
- ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್ ಪಕ್ಷವು 9 ಬಾರಿ, ನಂತರದ ಸ್ಥಾನದಲ್ಲಿ ಬಿಜೆಪಿ 5 ಬಾರಿ ವಿಜಯಿಯಾಗಿದೆ.
- ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದು ವಿಜಯಪುರದಲ್ಲಿ ನೆಲೆಸಿರುವ ರಾಜಾರಾಮ ಗಿರಿಧರಲಾಲ ದುಬೆಯವರು ಕಾಂಗ್ರೆಸ್‍ನಿಂದ ಪ್ರ-ಪ್ರಥಮ ಬಾರಿಗೆ ಆಯ್ಕೆಯಾದರು.
- ರಾಜಾರಾಮ ಗಿರಿಧರಲಾಲ ದುಬೆಯವರು 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು.
- 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ವಿಜಯಪುರ ಲೋಕ ಸಭಾ ಕ್ಷೇತ್ರದಿಂದ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿ ದಾಖಲೆ ಬರೆದಿದ್ದಾರೆ. ನಂತರ 1967ರಲ್ಲಿ ಉತ್ತರ ಕನ್ನಡ ಲೋಕ ಸಭೆ ಚುನಾವಣಾ ಕ್ಷೇತ್ರ(ಹಳೆಯ ಕೆನರಾ)ದಿಂದ ದಿನಕರ ದೇಸಾಯಿ(ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು. ಅದರಂತೆ ಮಂಡ್ಯ ಲೋಕ ಸಭೆ ಚುನಾವಣಾ ಕ್ಷೇತ್ರದಿಂದ 2019ರಲ್ಲಿ ಸುಮಲತಾರವರು ಪಕ್ಷೇತರವಾಗಿ ಆಯ್ಕೆಯಾದ, ಕರ್ನಾಟಕದ ಮೂರನೇಯ ಹಾಗೂ ಪ್ರಥಮ ಮಹಿಳಾ ಸಂಸದರಾಗಿದ್ದಾರೆ.[೧][೨]
- 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾದಾಗ ಭೀಮಪ್ಪ ಎಲ್ಲಪ್ಪ ಚೌಧರಿಯವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು.
- 1967ರಲ್ಲಿ ಗುರುಲಿಂಗಪ್ಪ ದೇವಪ್ಪ ಪಾಟೀಲ(ಚಾಂದಕವಟೆ)ರು ಸ್ವತಂತ್ರ ಪಕ್ಷದಿಂದ ಆಯ್ಕೆಯಾಗಿದ್ದರು , 1984ರಲ್ಲಿ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿರವರು ಜನತಾ ಪಕ್ಷದಿಂದ ಮತ್ತು 1996ರಲ್ಲಿ ಬಸನಗೌಡ ರುದ್ರಗೌಡ ಪಾಟೀಲರು ಜನತಾ ದಳದಿಂದ ಆಯ್ಕೆಯಾದ ಕಾಂಗ್ರೆಸ್ಯೇತರ ಅಭ್ಯರ್ಥಿಗಳಾಗಿದ್ದಾರೆ.
- 1999ರಲ್ಲಿ ಬಸನಗೌಡ ಪಾಟೀಲ(ಯತ್ನಾಳ)ರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ಮಂತ್ರಿಮಂಡಳದಲ್ಲಿ 2002-2003ರಲ್ಲಿ ರಾಜ್ಯ ಜವಳಿ ಸಚಿವ ಹಾಗೂ 2003-2004ರಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದರು.
- 1999ರಲ್ಲಿ ಬಿ.ಕೆ.ಗುಡದಿನ್ನಿಯವರ ಪತ್ನಿಯಾದ ಲಕ್ಷ್ಮಿಬಾಯಿ ಗುಡದಿನ್ನಿಯವರು ಪ್ರಥಮ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲುಂಡರು.[೩]
- 2009 ಮತ್ತು 2014ರಲ್ಲಿ ರಮೇಶ್ ಜಿಗಜಿಣಗಿಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ನರೇಂದ್ರ ಮೋದಿ ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು.
- ರಾಜಾರಾಮ ಗಿರಿಧರಲಾಲ ದುಬೆ, ಕೆ.ಬಿ.ಚೌಧರಿ ಮತ್ತು ಬಸನಗೌಡ ಪಾಟೀಲ(ಯತ್ನಾಳ)ರವರು ಎರಡೆರಡು ಬಾರಿ ಆಯ್ಕೆಯಾಗಿದ್ದಾರೆ.
- ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಾಂಬೆ ಶಾಸನ ಸಭೆಗೆ ಆಯ್ಕೆಯಾಗಿದ್ದರು.
- ಎಂ.ಬಿ.ಪಾಟೀಲ, ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಗುರುಲಿಂಗಪ್ಪ ದೇವಪ್ಪ ಪಾಟೀಲ, ಮುರಿಗಪ್ಪ ಸಿದ್ದಪ್ಪ ಸುಗಂಧಿ, ಬಸನಗೌಡ ಪಾಟೀಲ(ಯತ್ನಾಳ) ಹಾಗೂ ರಮೇಶ್ ಜಿಗಜಿಣಗಿಯವರು ಸಂಸದರಾಗುವ ಮುಂಚೆ ಶಾಸಕರಾಗಿದ್ದರು.
- ಕಾಂಗ್ರೆಸ್‍ನ ಬಿ.ಕೆ.ಗುಡದಿನ್ನಿಯವರು 1967ರಲ್ಲಿ ನಡೆದ ಉಪಚುನಾವಣೆ ಮತ್ತು 1989, 1991ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಒಟ್ಟಾರೆ ಮೂರು ಬಾರಿ ಆಯ್ಕೆಯಾಗಿ 1971ರಲ್ಲಿ ಒಂದು ಬಾರಿ ಸೋತಿದ್ದಾರೆ.[೪]
- ಕಾಂಗ್ರೆಸ್‍ನ ಬಿ.ಕೆ.ಗುಡದಿನ್ನಿ ಹಾಗೂ ಬಿಜೆಪಿಯಿಂದ ರಮೇಶ್ ಜಿಗಜಿಣಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ.
- ಬಿಜೆಪಿಯಿಂದ ರಮೇಶ್ ಜಿಗಜಿಣಗಿಯವರು 2009, 2014 ಮತ್ತು 2019ರಲ್ಲಿ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ.
- 2019ರಲ್ಲಿ ಜೆಡಿಎಸ್ - ಕಾಂಗ್ರೆಸ್‍ನ ಮೈತಿ ಅಭ್ಯರ್ಥಿಯಾಗಿ ಸುನಿತಾ ದೇವಾನಂದ ಚವ್ಹಾಣರವರು ಪ್ರಥಮ ಬಾರಿ ಸ್ಪರ್ಧಿಸಿ ಸೋಲುಂಡರು.
- 1999ರಿಂದ 2019ರ ವರೆಗೆ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ.
ವಿಧಾನ ಸಭಾ ಚುನಾವಣಾ ಕ್ಷೇತ್ರಗಳು
ಬದಲಾಯಿಸಿವಿಜಯಪುರ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.
ವಿಧಾನಸಭೆ ಸಂಖ್ಯೆ | ವಿಧಾನಸಭೆ | ಮೀಸಲಾತಿ |
---|---|---|
26 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
27 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
28 | ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
29 | ಬಬಲೇಶ್ವರ ವಿಧಾನ ಸಭಾ ಕ್ಷೇತ್ರ | ಸಾಮಾನ್ಯ |
30 | ವಿಜಯಪುರ ನಗರ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
31 | ನಾಗಠಾಣ ವಿಧಾನಸಭಾ ಕ್ಷೇತ್ರ | ಪರಿಶಿಷ್ಟ ಜಾತಿ |
32 | ಇಂಡಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
33 | ಸಿಂದಗಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
ಪ್ರಮುಖ ರಾಜಕೀಯ ಪಕ್ಷಗಳು
ಬದಲಾಯಿಸಿವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಒಕ್ಕೂಟ) (NCO)
- ಭಾರತೀಯ ಜನತಾ ಪಕ್ಷ (BJP)
- ಜನತಾ ಪಕ್ಷ (JNP)
- ಜನತಾ ದಳ (JD)
- ಸ್ವತಂತ್ರ ಪಕ್ಷ(SWA)
- ಭಾರತೀಯ ಲೋಕ ದಳ (BLD)
- ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP)
- ಪಕ್ಷೇತರ(IND)
ಜನಪ್ರತಿನಿಧಿಗಳ ವಿವರ
ಬದಲಾಯಿಸಿಸಂಸತ್ತಿನ ಸದಸ್ಯರ ವಿವರಣೆ
ವರ್ಷ | ಲೋಕ ಸಭಾ ಕ್ಷೇತ್ರ | ವಿಜೇತರು | ಪಕ್ಷ | ಮತಗಳು | ಉಪಾಂತ ವಿಜೇತರು | ಪಕ್ಷ | ಮತಗಳು |
ಕರ್ನಾಟಕ ರಾಜ್ಯ | |||||||
2019 | ವಿಜಯಪುರ ಲೋಕಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | BJP | 635867 | ಸುನಿತಾ ದೇವಾನಂದ ಚವ್ಹಾಣ | JDS | 377829 |
2014 | ವಿಜಯಪುರ ಲೋಕಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | BJP | 471757 | ಪ್ರಕಾಶ ರಾಠೋಡ | INC | 401938 |
2009 | ವಿಜಯಪುರ ಲೋಕಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | BJP | 308939 | ಪ್ರಕಾಶ ರಾಠೋಡ | INC | 266535 |
2004 | ವಿಜಯಪುರ ಲೋಕಸಭಾ ಕ್ಷೇತ್ರ | ಬಸನಗೌಡ ಪಾಟೀಲ(ಯತ್ನಾಳ) | BJP | 344905 | ಬಿ.ಎಸ್.ಪಾಟೀಲ(ಮನಗೂಳಿ) | INC | 307372 |
1999 | ವಿಜಯಪುರ ಲೋಕಸಭಾ ಕ್ಷೇತ್ರ | ಬಸನಗೌಡ ಪಾಟೀಲ(ಯತ್ನಾಳ) | BJP | 348816 | ಲಕ್ಷ್ಮಿಬಾಯಿ ಗುಡದಿನ್ನಿ | INC | 312177 |
1998 | ವಿಜಯಪುರ ಲೋಕಸಭಾ ಕ್ಷೇತ್ರ | ಎಂ.ಬಿ.ಪಾಟೀಲ | INC | 261623 | ಬಸನಗೌಡ ಲಿಂಗನಗೌಡ ಪಾಟೀಲ | BJP | 208801 |
1996 | ವಿಜಯಪುರ ಲೋಕಸಭಾ ಕ್ಷೇತ್ರ | ಬಸನಗೌಡ ರುದ್ರಗೌಡ ಪಾಟೀಲ | JD | 185504 | ಬಸನಗೌಡ ಪಾಟೀಲ(ಯತ್ನಾಳ) | BJP | 154911 |
1991 | ವಿಜಯಪುರ ಲೋಕಸಭಾ ಕ್ಷೇತ್ರ | ಬಿ.ಕೆ.ಗುಡದಿನ್ನಿ | INC | 207887 | ರಾಜಶೇಖರ ಪಟ್ಟಣಶೆಟ್ಟಿ | BJP | 140233 |
1989 | ವಿಜಯಪುರ ಲೋಕಸಭಾ ಕ್ಷೇತ್ರ | ಬಿ.ಕೆ.ಗುಡದಿನ್ನಿ | INC | 306050 | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | JD | 182717 |
1984 | ವಿಜಯಪುರ ಲೋಕಸಭಾ ಕ್ಷೇತ್ರ | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | JNP | 206737 | ಡಾ.ಆರ್.ಬಿ.ಚೌಧರಿ | INC | 204318 |
1980 | ವಿಜಯಪುರ ಲೋಕಸಭಾ ಕ್ಷೇತ್ರ | ಕೆ.ಬಿ.ಚೌಧರಿ | INC(I) | 167091 | ನಿಂಗಪ್ಪ ಸಿದ್ದಪ್ಪ ಖೇಡ | JNP | 156529 |
1977 | ವಿಜಯಪುರ ಲೋಕಸಭಾ ಕ್ಷೇತ್ರ | ಕೆ.ಬಿ.ಚೌಧರಿ | INC(I) | 173700 | ಈರಪ್ಪ ಚನ್ನಮಲ್ಲಪ್ಪ ನಾಗಠಾಣ | BLD | 152026 |
ಮೈಸೂರು ರಾಜ್ಯ | |||||||
1971 | ವಿಜಯಪುರ ಲೋಕಸಭಾ ಕ್ಷೇತ್ರ | ಭೀಮಪ್ಪ ಎಲ್ಲಪ್ಪ ಚೌಧರಿ | INC(I) | 131486 | ಬಿ.ಕೆ.ಗುಡದಿನ್ನಿ | INC(O) | 83798 |
ಉಪಚುನಾವಣೆ 1968 | |||||||
1968 | ವಿಜಯಪುರ ಲೋಕಸಭಾ ಕ್ಷೇತ್ರ | ಬಿ.ಕೆ.ಗುಡದಿನ್ನಿ | INC | 107997 | ಆರ್.ಬಿ.ಪಾಟೀಲ | SWA | 59089 |
1967 | ವಿಜಯಪುರ ಲೋಕಸಭಾ ಕ್ಷೇತ್ರ | ಗುರುಲಿಂಗಪ್ಪ ದೇವಪ್ಪ ಪಾಟೀಲ | SWA | 113208 | ರಾಜಾರಾಮ ಗಿರಿಧರಲಾಲ ದುಬೆ | INC | 111104 |
1962 | ವಿಜಯಪುರ ಲೋಕಸಭಾ ಕ್ಷೇತ್ರ | ರಾಜಾರಾಮ ಗಿರಿಧರಲಾಲ ದುಬೆ | INC | 105452 | ಮುರಿಗಪ್ಪ ಸಿದ್ದಪ್ಪ ಸುಗಂಧಿ | SWA | 63456 |
1957 | ವಿಜಯಪುರ ಲೋಕಸಭಾ ಕ್ಷೇತ್ರ | ಮುರಿಗಪ್ಪ ಸಿದ್ದಪ್ಪ ಸುಗಂಧಿ | IND | 88209 | ರಾಜಾರಾಮ ಗಿರಿಧರಲಾಲ ದುಬೆ | INC | 77273 |
ಬಾಂಬೆ ರಾಜ್ಯ | |||||||
1951 | ವಿಜಯಪುರ ಲೋಕಸಭಾ ಕ್ಷೇತ್ರ | ರಾಜಾರಾಮ ಗಿರಿಧರಲಾಲ ದುಬೆ | INC | 119895 | ಮುರಿಗಪ್ಪ ಸಿದ್ದಪ್ಪ ಸುಗಂಧಿ | KMPP | 44095 |
ಉಲ್ಲೇಖಗಳು
ಬದಲಾಯಿಸಿ- ↑ http://kannada.vartamitra.com/2019/03/22/independent-candidate-sumalatha-won-a-new-record-in-karnataka/56184/
- ↑ https://m.dailyhunt.in/news/bangladesh/kannada/eesanje-epaper-eesanje/mandyadalli+sumalata+geddare+hosa+daakhaleyaagalide+enadu+gotte-newsid-111701500
- ↑ https://www.prajavani.net/mahilegilla-mannane-625052.html
- ↑ https://www.prajavani.net/vijayapura-no-hatrick-629132.html