ಲಚ್ಯಾಣ

ಭಾರತ ದೇಶದ ಗ್ರಾಮಗಳು

ಲಚ್ಯಾಣ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ.

ಲಚ್ಯಾಣ
India-locator-map-blank.svg
Red pog.svg
ಲಚ್ಯಾಣ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ವಿಜಯಪುರ
ನಿರ್ದೇಶಾಂಕಗಳು 17.276297222° N 75.967369444° E
ವಿಸ್ತಾರ
 - ಎತ್ತರ
೧೨೦೦ km²
 - 770 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೨)
 - ಸಾಂದ್ರತೆ
೧೫೦೦
 - ೫೦/ಚದರ ಕಿ.ಮಿ.

ಚರಿತ್ರೆಸಂಪಾದಿಸಿ

ಅಮೋಘಸಿದ್ದರ ವರಪ್ರಸಾದದಿಂದ ಧರೆಗಿಳಿದು ವಿಶ್ವಕರ್ಮದ ಜ್ಯೌತಿಯಾಗಿ ಜಗವ ಬೆಳಗಿದ ಮಹಾಮಹಿಮರು ಸುಕ್ಷೇತ್ರ ಲಚ್ಯಾಣದ ಲಿಂ. ಶ್ರೀ ಸಿದ್ಧಲಿಂಗ ಮಹಾರಾಜರು.

ಅಂತರ್ ಜ್ಞಾನಿಗಳಾಗಿದ್ದ ಸಿದ್ದಲಿಂಗ ಮಹಾರಾಜರು 1848 ರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಲಚ್ಚಪ್ಪ-ನಾಗಮ್ಮ ದಂಪತಿಗಳ ಪುಣ್ಯ ಉದರದಲ್ಲಿ ಶ್ರಾವಣ ಸೋಮವಾರದಂದು ಬ್ರಾಹ್ಮಿಣಿ (ರೋಹಿಣಿ ನಕ್ಷತ್ರ)ಮುಹೂರ್ತದಲ್ಲಿ ಜನಿಸಿದರು. ಅವರಿಗೆ ಅಮೊಘಸಿದ್ದನೆಂದು ನಾಮಕರಣ ಮಾಡಲಾಯಿತು. ಜನಿಸಿದ ಎರಡು ದಿನದಲ್ಲಿಯೇ ಆಕಳ ಕಾಲಲ್ಲಿ ಆಡುತ್ತ ಬಾಲಲೀಲೆ ತೋರಿದ ಸಿದ್ಧಲಿಂಗ ಮಹಾರಾಜರು ಬಾಲ್ಯದಿಂದಲೇ ಹತ್ತು ಹಲವು ಲೀಲೆಗಳ ಮೂಲಕ ತಮ್ಮ ಪವಾಡ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಪವಾಡಪುರುಷರು.

ಅವರು ಒಮ್ಮೆ ಇಂಡಿ ತಾಲೂಕಿನ ಬಂಥನಾಳ ಮಠದ ಗುರುಗಳಾದ ಶಂಕರಲಿಂಗ ಮಹಾ ಶಿವಯೋಗಿಗಳ ಬಳಿ ಹೋದಾಗ, ಗುರುಗಳು ಏಕಾಗ್ರದೃಷ್ಠಿಯಿಂದ ಈ ಬಾಲಕನನ್ನು ನೋಡಿ ನಿನ್ನ ಹೆಸರೇನು ಮಗು ಎಂದು ಕೇಳಿದರು. ಆಗ ನನ್ನ ಹೆಸರು ಸಿದ್ದ ಎಂದನು. ಹೌದಪ್ಪ ಹೌದು, ನೀನು ಸಿದ್ದನೇ ನಿಜ. ನೀನು ಆಡಿದ ಮಾತು ಸುಳ್ಳು ಆಗುವದಿಲ್ಲ. ನೀನು ಯಾವ ಕೆಲಸವನ್ನು ಮಾಡುತ್ತಿಯೋ ಅಂಥಹ ಕೆಲಸವನ್ನು ಯಾರಿಗೂ ಮಾಡಲಿಕ್ಕಾಗುವದಿಲ್ಲ. ಮೂರು ಲೋಕಗಳಲ್ಲಿ ಸಂಪೂರ್ಣವಾಗಿ ತುಂಬಿರುವಂಥಹ ಶಕ್ತಿಯನ್ನೊಳಗೊಂಡ ಸಿದ್ದಿ ಪುರುಷನೇ ಇರುತ್ತಿ ಎಂದರಂತೆ.

ಮುಂದೆ ಇವರು ಗುರು ಶಂಕರಲಿಂಗರ ಸೇವೆ ಗೈಯುತ್ತ, ಶ್ಯಾವಳ ಗ್ರಾಮದಲ್ಲಿ ಹೆಬ್ಬುಲಿಯಾಗಿ, ಜಿಗಜಿಣಗಿಯಲ್ಲಿ ಮಗುವಾಗಿ, ತಡವಲಗಾ ಮತ್ತು ಲಚ್ಯಾಣದಲ್ಲಿ ಏಕ ಕಾಲಕ್ಕೆ ಅಗ್ನಿ ಪ್ರವೇಶ ಮಾಡಿ, ಶ್ರೀಶೈಲದಲ್ಲಿ ಯಾರು ಪ್ರವೇಶಿಸಲಾಗದ ಕದಳಿ ಬನದ ಗುಹೆಯನ್ನು ಪ್ರವೇಶಿಸಿದ್ದು, ಹೀಗೆ ಹತ್ತು ಹಲವು ಲೀಲೆಗಳನ್ನು ತೋರಿ ಲೋಕ ಸಂಚಾರ ಮಾಡುತ್ತ ಇಂಡಿ ತಾಲ್ಲೂಕು ಲಚ್ಯಾಣ ಗ್ರಾಮಕ್ಕೆ ಬಂದು, ಗುರುವಿನ ಆದೇಶದಂತೆ ಕಮರಿಮಠವನ್ನು ಕಟ್ಟಿಸಿದರು.

ನಿನ್ನ ಸೇವೆಯನ್ನು ಮಾಡಬೇಕು ಎಂದು ಇಚ್ಛೆ ಇಟ್ಟುಕೊಂಡ ಜನರು ಉದ್ದಾರವಾಗಿ ಜಗತ್ತಿನಲ್ಲಿ ಕಮರಿಮಠದ ಮಹತ್ವ ತಿಳಿಸಲಿ. ಲಚ್ಯಾಣ ಮಠವು ಸುಕ್ಷೇತ್ರವಾಗಿ ಕೈಲಾಸದಂತೆ ಶೋಭಾಯಮಾನವಾಗಿ ಬೆಳಗಲಿ. ನಿನ್ನ ಕೀರ್ತಿ ಯುಗಯುಗಾಂತರವಾಗಿ ಜಗತ್ತಿನಲ್ಲಿ ಉಳಿಯಲಿ ಎಂದು ಗುರು ಶಂಕರಲಿಂಗ ಮಹಾ ಶಿವಯೋಗಿಗಳು ಸಿದ್ದಲಿಂಗೇಶನಿಗೆ ಆಶಿರ್ವದಿಸಿದರಂತೆ.

ಹಿಂದೆ ದೇಶವನ್ನು ಬ್ರಿಟಿಷರು ಆಳುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಸಿದ್ಧಲಿಂಗರ ದರ್ಶನಕ್ಕೆಂದು ಇಬ್ಬರು ಸಾಧುಗಳು ರೈಲಿನಲ್ಲಿ ಟಿಕೆಟ್ ಇಲ್ಲದೆ ಬರುತ್ತಿದ್ದರು. ಇದನ್ನು ಕಂಡ ಟಿಕೆಟ್ ಕಲೆಕ್ಟರ್ ಕಡುಕೋಪಗೊಂಡು ಆ ಸಾಧುಗಳಿಗೆ ಬಾಸುಂಡೆ ಬರುವ ಹಾಗೆ ಹೊಡೆದರು. ಇವರ ಮೈ ಪೆಟ್ಟು ಸಿದ್ದರಿಗೆ ಬಿತ್ತು. ರೈಲು ಅಧಿಕಾರಿಗಳ ವಿರುದ್ದ ಕೋಪಗೊಂಡ ಸಿದ್ದರು, ವೇಗವಾಗಿ ಚಲಿಸುತ್ತಿರುವ ರೈಲನ್ನು ಅಮೊಘ ಶಕ್ತಿಯಿಂದ ತಮ್ಮ ಹಸ್ತ ತೋರಿಸಿ ನಿಲ್ಲಿಸಿ ಬ್ರಿಟೇಷ್ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ್ದರು. ಆಗ ಬ್ರಿಟಿಷ ಅಧಿಕಾರಿಗಳು ಬಂದು ಕ್ಷಮೆಯಾಚಿಸಿದ ನಂತರ ಅವರು ನಿಂತಿದ್ದ ರೈಲು ಮುಂದೆ ಸಾಗುವಂತೆ ಮಾಡುವ ಮೂಲಕ ಭಯಭಕ್ತಿಯನ್ನು ಉಂಟು ಮಾಡಿದರೆಂದು ಈಗಲೂ ಭಕ್ತರು ಅವರ ಪವಾಡವನ್ನು ಹೇಳುತ್ತಾರೆ.

ಸಿದ್ದಿ ಪುರುಷ ಸಿದ್ದಲಿಂಗ ಮಹಾರಾಜರ ದರುಶನಕ್ಕಾಗಿ ಲಚ್ಯಾಣದ ಕಮರಿಮಠಕ್ಕೆ ನಿತ್ತವೂ ದೂರದ ಬೇರೆ-ಬೇರೆ ಊರುಗಳಿಂದ ಸಾಧು-ಸಂತರು ರೈಲು ಮೂಲಕ ಬರುವುದು ಸಾಮಾನ್ಯ. ಸಿದ್ದಲಿಂಗ ಮಹಾಜರ ಉಪದೇಶ ಪಡೆದು ಕೃತಾರ್ಥರಾದವರು ಅಸಂಖ್ಯಾತ ಜನ, ಅವರಲ್ಲಿ ಸಂನ್ಯಾಸ ದೀಕ್ಷೆ ಪಡೆದು ಗುರು ಸಿದ್ದಲಿಂಗ ಮಹಾರಾಜರ ಹೆಸರನ್ನು ಸಾರಿದವರು ಹಲವರು, ಅವರಲ್ಲಿ ಮುಗಳಖೋಡದ ಯಲ್ಲಾಲಿಂಗ ಮಹಾರಾಜರು, ಪುಣೆ ಮತ್ತು ಕೃಷ್ಣಾ ಮಠದ ಕ್ಷೀರಾಲಿಂಗ ಮಹಾರಾಜರು, ಆಹೇರಿಯ ಆತ್ಮಾನಂದ ಸ್ವಾಮಿಗಳು, ಮಧುರಖಂಡಿಯ ಸಿದ್ದಲಿಂಗ ಮಹಾರಾಜರು, ಕೆಂಭಾವಿಯ ಹಣಮಂತ ಮಹಾರಾಜರು, ಹಿರೇರೂಗಿ ಹಾಗೂ ಬೋಳೆಗಾಂವ ಮಠದ ಬಸವಲಿಂಗ ಶರಣರು ಹಾಗೂ ಗಿರಿಯಮ್ಮ ತಾಯಿ ಇವರ ಶಿಷ್ಯರು.

ಹಿಂದೆ ರುದ್ರಭೂಮಿಯಾಗಿದ್ದ ಕಮರಿಮಠದ ಸ್ಥಳವು ಸಿದ್ದಲಿಂಗ ಮಹಾರಾಜರ ಪಾದ ಸ್ಪರ್ಶದಿಂದ ಕಾಲಾಂತರ ಪುಣ್ಯ ಕ್ಷೇತ್ರವಾಯಿತು. ಈ ಕಮರಿ ಮಠವನ್ನು ತಮ್ಮ ಗುರು ಪೀಠವಾದ ಬಂಥನಾಳ ಪೀಠಕ್ಕೆ ಅರ್ಪಿಸಿದ ಸಿದ್ದಲಿಂಗ ಮಹಾರಾಜರು ಮುಂದೆ ಇದೇ ಕ್ಷೇತ್ರದಲ್ಲಿ 1927ರ ಭಾದ್ರಪದ ವದ್ಯ ಸಪ್ತಮಿ ದಿವಸ ಗುರುವಿನ ಪಾದಕ್ಕೆ ತಮ್ಮ ದೇಹವನ್ನು ಸಮರ್ಪಿಸಿದರು.[೧]

ಲಚ್ಯಾಣ ಹಾಗೂ ಬಂಥನಾಳದ ಪ್ರಸ್ತುತ ಪೀಠಾಧಿಪತಿ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳ ನೇತೃತ್ವದಲ್ಲಿ ಶ್ರೀಮಠದ ಅಭಿವೃದ್ದಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ. ಶ್ರೀಮಠದ ಪಕ್ಕದಲ್ಲಿ ಒಂದು ಗೋಶಾಲೆ ಸ್ಥಾಪಿಸಿದ್ದು, ಅಲ್ಲಿ ಅನೇಕ ಗೋವುಗಳನ್ನು ನಾವು ಕಾಣಬಹುದಾಗಿದೆ. ಇತ್ತೀಚಿಗೆ ಶಂಕರಲಿಂಗ ಶಿವಯೋಗಿಗಳ ನೂತನ ರಥವನ್ನು ನಿರ್ಮಾಣ ಮಾಡಲಾಗಿದೆ.

ಶ್ರೀಗಳ ನೇತೃತ್ವದಲ್ಲಿ 2005 ರಲ್ಲಿ ಸಿದ್ದಲಿಂಗ ಮಹಾರಾಜರ 155ನೇ ಜಯಂತ್ಯೌತ್ಸವ ಅದ್ದೂರಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಪ್ರಾರಂಭಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರತಿವರ್ಷವೂ ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಸುಕ್ಷೇತ್ರ ಲಚ್ಯಾಣ ಕಮರಿಮಠವು ಕರ್ನಾಟಕ, ಮಹಾರಾಷ್ಟ್ತ್ರ, ಆಂದ್ರ ಹಾಗೂ ಗೋವಾ ರಾಜ್ಯ ಸೇರಿದಂತೆ ನಾಡಿನ ನಾನಾ ಭಾಗಗಳ ಲಕ್ಷಾಂತರ ಭಕ್ತರನ್ನು ಹೊಂದಿದ್ದು, ನಿತ್ಯವೂ ಇಲ್ಲಿ ಅನ್ನ, ಅಕ್ಷರ ಹಾಗೂ ಜ್ಞಾನ ದಾಸೋಹ ನಡೆಯುತ್ತಿರುವುದು ಈ ಮಠದ ಒಂದು ವೈಶಿಷ್ಠ್ಯತೆ.

ಶ್ರೀ ಸಿದ್ಧಲಿಂಗ ಮಹಾರಾಜರು ಅನೇಕ ಪವಾಡಗಳನ್ನು ಮಾಡಿರುವ ಬಗ್ಗೆ ದಂತಕಥೆಗಳಿವೆ. ಅವುಗಳಲ್ಲಿ ಲಚ್ಯಾಣ ರೈಲು ನಿಲ್ದಾಣದಲ್ಲಿ ರೈಲನ್ನು ತಡೆದು ನಿಲ್ಲಿಸಿ, ಅದು ಮುಂದೆ ಚಲಿಸದಂತೆ ಮಾಡಿರುವದು.

ಬಂಥನಾಳದ ಶ್ರೀಗುರು ಶಂಕರಲಿಂಗ ಗುರುಗಳ ಸೇವೆಗೈದು ಅಂತರಂಗ – ಬಹಿರಂಗ ಶುದ್ಧವಾಗಿ ಪರಿಪಕ್ವಗೊಂಡು ಗುರುವಿನ ಸೂಚನೆಯಂತೆ ಸನ್ಯಾಸ ಧರ್ಮ ಸ್ವೀಕರಿಸಿ ದೇಶ ಸಂಚಾರಗೈದು, ಹೋದಲ್ಲೆಲ್ಲಾ ಭಜನೆ, ಧ್ಯಾನ, ಗುರುಸ್ಮರಣೆ, ಭಿಕ್ಷಾಟನೆ, ಅನ್ನ ಸಂತರ್ಪಣೆ ನಡೆಯುತ್ತಿತ್ತು. ನಿತ್ಯಕಾಯಕಯೋಗಿ ಸಿದ್ಧಲಿಂಗ ಸಾಧುರವರನ್ನು ಜನಸಮೂಹ ಆದರಿಸಿ, ಗೌರವಿಸಿ ನಮಿಸಿದರು. ಸೊಲ್ಲಾಪುರದಿಂದ ಕರ್ನಾಟಕದತ್ತ ಸಾಗಿ ಬಂದ ಸಿದ್ಧಲಿಂಗರು ಭೀಮೆಯಲ್ಲಿ ಮಿಂದು ಸಮೀಪದ ಲಚ್ಯಾಣ ಗ್ರಾಮದ ಗೌಡರಿಗಾಗಿ ಮೀಸಲಿರಿಸಿದ್ದ ರುದ್ರಭೂಮಿಯಲ್ಲಿ ಠಿಕಾಣಿ ಹೂಡಿದರು. ಆ ರುದ್ರಭೂಮಿ ಸಿದ್ಧಿಪುರುಷ ಸಿದ್ಧಲಿಂಗರ ಪಾದಸ್ಪರ್ಶದಿಂದ ಪುನೀತವಾಯಿತು. ಸಿದ್ಧಲಿಂಗರನ್ನು ನೋಡಿ ಜನಸಮುದಾಯ ಭಕ್ತಿಯಿಂದ ತಲೆಬಾಗಿದರು. ಅವರ ದರುಶನದಿಂದ ಪುಲಕಿತರಾದರು. ಅಲ್ಲಿ ಸಿದ್ಧಲಿಂಗರ ವಾಸಕ್ಕೆ ‘ಕೊಂಪೆ’ ನಿರ್ಮಾಣವಾಯಿತು. ರಣಗುಡುತ್ತಿದ್ದ ರುದ್ರಭೂಮಿಯಲ್ಲಿ ಆಧ್ಯಾತ್ಮದ ಜ್ಯೋತಿ ಬೆಳಗಿತು.

ಸ್ವತಃ ಸಿದ್ಧಲಿಂಗರು ಸದ್ಗುರು ಶಂಕರಲಿಂಗರ ವಿಶಾಲವಾದ ಮಂಟಪದ ಕೆಳಗಿನ ಗವಿಯಲ್ಲಿ ತಮ್ಮ ಸಮಾಧಿಯನ್ನು ಸಜ್ಜುಗೊಳಿಸಿಕೊಂಡರು. ೧೮ ನೆಯ ಸಪ್ಟಂಬರ ೧೯೨೭ ರಂದು ಧ್ಯಾನಾಸಕ್ತ ಸ್ಥಿತಿಯಲ್ಲಿ ಬೆಳಗಿನ ಜಾವ ದೇಹತ್ಯಾಗ ಮಾಡಿ ಲಿಂಗದಲ್ಲಿ ಲೀನವಾದರು.[೨]

ಸಿದ್ಧಲಿಂಗ ಮಹಾರಾಜರ ಸೂಚನೆ ಪ್ರಕಾರ ಲಚ್ಯಾಣ ಸುಕ್ಷೇತ್ರದಲ್ಲಿ

 • ೧. ಸರ್ವಧರ್ಮ ಸಮ್ಮೇಳನ
 • ೨. ಒಂದು ಲಕ್ಷ ತೊಂಭತ್ತಾರು ಸಾವಿರ ಗಣಂಗಗಳ ಸಾಮೂಹಿಕ ಇಷ್ಟಲಿಂಗ ಪೂಜಾ ಮಹೋತ್ಸವ
 • ೩. ಉಚಿತ ಪ್ರಸಾದ ನಿಲಯ
 • ೪. ಶಿಕ್ಷಕರ ತರಬೇತಿ ಕಾಲೇಜು- ಇವೆಲ್ಲ ಪ್ರಗತಿಯ ಸಂಕೇತಗಳಾದವು.

ಶಿಕ್ಷಕರ ಕಾಶಿಸಂಪಾದಿಸಿ

ಇದು ಅಕ್ಷರಶಹ ಗುರು ಗ್ರಾಮ. ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಓರ್ವ ಶಿಕ್ಷಕರಿದ್ದಾರೆ. ಈ ಗ್ರಾಮದಿಂದ ನಾಲ್ಕಾರು ಕಿಲೋ ಮೀಟರ್ ಸಂಚರಿಸಿದರೆ ಸಾಕು ಅಲ್ಲಿ ಸಿಗುತ್ತದೆ ಭೀಮಾ ನದಿ. ಅದನ್ನು ದಾಟಿದರೆ ಸಾಕು ಮಹಾರಾಷ್ಟ್ರದ ಗಡಿ ಆರಂಭವಾಗುತ್ತದೆ. ಇಲ್ಲಿ ಸುಮಾರು ಎರಡೂವರೆ ಸಾವಿರ ಮನೆಗಳಿವೆ. ಅಂದಾಜು 10 ಸಾವಿರ ಜನಸಂಖ್ಯೆಯಿದೆ. ಆದರೆ, ಈ ಗ್ರಾಮ ಕರ್ನಾಟಕ ಅಷ್ಟೇ ಏಕೆ ಗಡಿಯಾಚೆಗಿನ ರಾಜ್ಯಗಳಲ್ಲಿಯೂ ಸದ್ದು ಮಾಡುತ್ತಿದೆ.ಈ ಲಚ್ಯಾಣ ಗ್ರಾಮ ಪ್ರವೇಶಿಸಿದರೆ ಸಾಕು ಮೊದಲಿಗೆ ಕಾಣಸಿಗುವುದು ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠ. ಈ ಮಠದಲ್ಲಿ ಜೀವಂತ ಸಮಾಧಿಯಾಗಿರುವ ಪುಣ್ಯ ಪುರುಷರ ಗದ್ದುಗೆಯಿದ್ದು, ಇಲ್ಲಿ ಬಂದು ಹರಕೆ ಹೊತ್ತರೆ ಸಾಕು ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು. ಇಲ್ಲಿ ಪ್ರತಿದಿನ ನಡೆಯುವ ದಾಸೋಹವೇ ಇದಕ್ಕೆ ಸಾಕ್ಷಿಯಂತಿದೆ.

ಕಮರಿಮಠ ಕರ್ನಾಟಕ ಅಷ್ಟೇ ಅಲ್ಲದೆ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಈ ಮಠಕ್ಕೆ ಬಂದು ಹೋಗುತ್ತೇನೆ ಎಂದು ಹೇಳಿ ಬಂದು ಹೋದವರು ಸಿಎಂ ಕೂಡ ಆದ ನಿದರ್ಶನವಿದೆ. ಹೀಗಾಗಿ ಈ ಮಠದ ಪ್ರಭಾವ ಹೆಚ್ಚು ಎನ್ನುವ ಅಭಿಪ್ರಾಯಗಳಿವೆ.

ಧಾರವಾಡ ಕವಿಗಳ ಕಾಶಿಯಾದರೆ, ಈ ಲಚ್ಯಾಣ ಗ್ರಾಮ ಶಿಕ್ಷಕರ ಕಾಶಿ. ಈ ಗ್ರಾಮದಲ್ಲಿ ನಿಂತು ಸರ್ ಎಂದು ಕರೆದರೆ ಸಾಕು ಪ್ರತಿಯೊಂದು ಮನೆಯಿಂದ ಒಬ್ಬರಾದರೂ ಹೊರಗೆ ಬಂದು ನೋಡುತ್ತಾರೆ. ಇದು ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಓರ್ವರಾದರೂ ಶಿಕ್ಷಕರಿರುವುದಕ್ಕೆ ಸಾಕ್ಷಿ. ಈ ಗ್ರಾಮದ ಶಿಕ್ಷಕರು ರಾಜ್ಯದ ಹಾಗೂ ದೇಶದ ನಾನಾ ಭಾಗಗಳಲ್ಲಿ ಅಕ್ಷರ ಕಲಿಸುತ್ತಿದ್ದಾರೆ.

ಲಚ್ಯಾಣ ಉತ್ತರ ಕರ್ನಾಟಕದಲ್ಲಿಯೇ ಶಿಕ್ಷಣ ಕ್ರಾಂತಿಗೆ ಹೆಸರು ಮಾಡಿದ ಮೊದಲ ಗ್ರಾಮ. ಇಲ್ಲಿ ಬಂಥನಾಳದ ಶ್ರೀ ಸಂಗನಬಸವ ಶ್ರೀಗಳು ಮಾಡಿದ ಕಾಯಕ ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಅಷ್ಟೇ ಅಲ್ಲ, ಇವರು ಇಡೀ ವಿಜಯಪುರ ಜಿಲ್ಲೆಗೂ ಗುರುದೇವೋ ಭವ. 1950 ರಲ್ಲಿ ಆ ಪುಣ್ಯಪುರುಷರು ಇಲ್ಲಿ ಆರಂಭಿಸಿದ್ದ ಶಿಕ್ಷಣ ಕ್ರಾಂತಿ ಈಗ ಎಲ್ಲೆಡೆ ಪಸರಿಸಿದೆ.

ಇಲ್ಲಿನ ಗ್ರಾಮಸ್ಥರು ಪ್ರತಿದಿನ ಸಿದ್ದಲಿಂಗ ಮಹಾರಾಜರನ್ನು ನೆನೆಯದೇ ದಿನವನ್ನು ಆರಂಭಿಸುವುದಿಲ್ಲ. 1950ರ ಮೇ 25 ರಂದು ಬಂಥನಾಳ ಶ್ರೀಗಳು ಇಲ್ಲಿ ಆರಂಭಿಸಿದ್ದ ಶ್ರೀ ಸಿದ್ದೇಶ್ವರ ಶಿಕ್ಷಕರ ತರಬೇತಿ ಕೇಂದ್ರದ ಪರಿಣಾಮ ಇದು ಶಿಕ್ಷಕರ ಕಾಶಿ ಎನಿಸಿಕೊಂಡಿದೆ. ಅಂದಿನ ಮಹಾರಾಷ್ಟ್ರದ ಪುಣೆ ಸರ್ಕಾರದಿಂದ ಈ ಕೇಂದ್ರಕ್ಕೆ ಅನುದಾನ ಕೊಡಿಸಿದ್ದ ಕೀರ್ತಿ ಬಂಥನಾಳ ಶಿವಯೋಗಿಗಳಿಗಿದೆ. ಅಂದು 200 ಜನರಿಂದ ಆರಂಭವಾಗಿದ್ದ ಈ ಶಿಕ್ಷಣ ಕೇಂದ್ರದಿಂದ ಇಂದು ಸಾಕಷ್ಟು ಜನ ಗುರುಗಳು ತಯಾರಾಗಿದ್ದಾರೆ. ಅಂದು ಬಂಥನಾಳ ಶ್ರೀಗಳು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದ್ದು, ಇದುವರೆಗೆ 5500ಕ್ಕೂ ಹೆಚ್ಚು ಶಿಕ್ಷಕರು ಇಲ್ಲಿ ತಯಾರಾಗಿದ್ದಾರೆ. ಅವರಲ್ಲಿ ಬಹುತೇಕರು ಉನ್ನತ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. [೩]

ಭೌಗೋಳಿಕಸಂಪಾದಿಸಿ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆಸಂಪಾದಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 4586 ಇದೆ. ಅದರಲ್ಲಿ 2401 ಪುರುಷರು ಮತ್ತು 2185 ಮಹಿಳೆಯರು ಇದ್ದಾರೆ.

ಹವಾಮಾನಸಂಪಾದಿಸಿ

 • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
 • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
 • ಚಳಿಗಾಲ ಮತ್ತು
 • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
 • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
 • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕಸಂಪಾದಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು ಮತ್ತು ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿಸಂಪಾದಿಸಿ

 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳುಸಂಪಾದಿಸಿ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳುಸಂಪಾದಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ.

ದೇವಾಲಯಗಳುಸಂಪಾದಿಸಿ

ಲಚ್ಯಾಣದಲ್ಲಿ ಹಲವಾರು ದೇವಾಲಯಗಳಿದ್ದು ಕೆಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

 • ಶ್ರೀ ಸಿದ್ಧಲಿಂಗ ಮಹಾರಾಜರ ಮಠ
 • ಶ್ರೀ ಮಹಾಲಕ್ಷ್ಮಿ ದೇವಾಲಯ
 • ಶ್ರೀ ಮಲ್ಲಿಕಾರ್ಜುನ ದೇವಾಲಯ
 • ಶ್ರೀ ಹಣಮಂತ ದೇವಾಲಯ
 • ಶ್ರೀ ವೀರಭದ್ರ ಮತ್ತು ಕಾಳಿ ದೇವಾಲಯ
 • ಶ್ರೀ ಬೀರಪ್ಪ ದೇವಾಲಯ

ಮಸೀದಿಗಳುಸಂಪಾದಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿಸಂಪಾದಿಸಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಊರಿನ ಹಲವು ರೈತರ ತೋಟಗಳಿಗೆ ನೀರಿನ ಒಳ್ಳೆಯ ಅನುಕೂಲ ಆಗಿದೆ.

ಉದ್ಯೋಗಸಂಪಾದಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳುಸಂಪಾದಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಹಬ್ಬಗಳುಸಂಪಾದಿಸಿ

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣಸಂಪಾದಿಸಿ

ಊರಿನ ಇನ್ನೊಂದು ವಿಶೇಶ ಎಂದರೆ ಇಲ್ಲಿರುವ ಹಲವು ಶಾಲಾ-ಕಾಲೇಜುಗಳು. ಬಂಥನಾಳ ಶಿವಯೋಗಿಗಳಿಂದ ಸ್ಥಾಪಿತವಾದ ಬಿ.ಎಲ್.ಡಿ.ಈ. ಸಂಸ್ಥೆಯ ನೆರವಿನಿಂದ ೧೯೧೦ರ ಹೊತ್ತಿನಲ್ಲಿಯೇ ಹುಟ್ಟಿದ ಶಾಲೆ ಕಾಲೇಜುಗಳು ಊರಿಗೆ ವಿಜಯಪುರ ಜಿಲ್ಲೆಯ ಶೈಕ್ಶಣಿಕ ತವರು ಎನ್ನುವ ಹೆಸರನ್ನು ತಂದಿವೆ.

 • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಚ್ಯಾಣ
 • ಸಿದ್ಧಲಿಂಗ ಮಹಾರಾಜ ಕಿರಿಯ ಪ್ರಾಥಮಿಕ ಶಾಲೆ, ಲಚ್ಯಾಣ
 • ಮೊರಾರ್ಜಿ ದೇಸಾಯಿ ವಸತಿ ಶಾಲೆ, ಲಚ್ಯಾಣ
 • ಎಸ್.ಎಸ್.ಎಸ್. ಪ್ರೌಢ ಶಾಲೆ, ಲಚ್ಯಾಣ
 • ಸರಕಾರಿ ಪ್ರೌಢ ಶಾಲೆ, ಲಚ್ಯಾಣ
 • ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಲಚ್ಯಾಣ
 • ಶ್ರೀ ಸಂಗನಬಸವೇಶ್ವರ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಲಚ್ಯಾಣ, ಇಂಡಿ
 • ಬಿ.ಎಲ್.ಡಿ.ಈ. ಸಂಸ್ಥೆಯ ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ(ಸ್ಥಾಪನೆ:1950)

ವಿಶೇಶತೆಸಂಪಾದಿಸಿ

ಗ್ರಾಮವು ರಾಜ್ಯದಲ್ಲಿಯೇ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಊರಿನ ಪ್ರತೀ ಮನೆಯಲ್ಲಿ ಕನಿಷ್ಟ ಒಬ್ಬರಾದರೂ ಶಿಕ್ಷಕ ಕೆಲಸದಲ್ಲಿದ್ದಾರೆ.

ಸಾಕ್ಷರತೆಸಂಪಾದಿಸಿ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯಸಂಪಾದಿಸಿ

ಗ್ರಾಮವು ವಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಬ್ಯಾಂಕ್ಸಂಪಾದಿಸಿ

ಊರಿನಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಜೊತೆಗ ಹಲವು ಸಹಕಾರಿ ಒಕ್ಕೂಟದ ಬ್ಯಾಂಕುಗಳಿವೆ.

 • ಸಿಂಡಿಕೇಟ್ ಬ್ಯಾಂಕ್, ಲಚ್ಯಾಣ
 • ಶ್ರೀ ಸಿದ್ದಲಿಂಗೇಶ್ವರ ಪತ್ತಿನ ಸಹಕಾರಿ ಬ್ಯಾಂಕು
 • ಶ್ರೀ ಶಂಕರಲಿಂಗೇಶ್ವರ ಸಹಕಾರಿ ಬ್ಯಾಂಕು
 • ಶ್ರೀ ಶಾಂತೇಶ್ವರ ಸಹಕಾರಿ ಬ್ಯಾಂಕು

ಅಲ್ಲದೇ ಇಲ್ಲಿ ಸ್ತ್ರೀಶಕ್ತಿ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳಿವೆ.

ಗ್ರಾಮ ಪಂಚಾಯತಿಸಂಪಾದಿಸಿ

 • ಗ್ರಾಮ ಪಂಚಾಯತಿ ಕಾರ್ಯಾಲಯ, ಲಚ್ಯಾಣ

ದೂರವಾಣಿ ವಿನಿಮಯ ಕೇಂದ್ರಸಂಪಾದಿಸಿ

 • ದೂರವಾಣಿ ವಿನಿಮಯ ಕೇಂದ್ರ, ಲಚ್ಯಾಣ

ಅಂಚೆ ಕಚೇರಿಸಂಪಾದಿಸಿ

 • ಅಂಚೆ ಕಚೇರಿ, ಲಚ್ಯಾಣ
 • ಲಚ್ಯಾಣ - 586211 (ಅಹಿರಸಂಗ, ಬರಗುಡಿ, ಚಿಕ್ಕಬೇವನೂರ, ಹಂಜಗಿ, ಇಂಡಿ ರಸ್ತೆ, ನಿಂಬಾಳ ರೈಲು ನಿಲ್ದಾಣ, ನಿಂಬಾಳ ಕೆ.ಡಿ., ಪಡನೂರ).

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಸಂಪಾದಿಸಿ

 • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲಚ್ಯಾಣ

ಹಾಲು ಉತ್ಪಾದಕ ಸಹಕಾರಿ ಸಂಘಸಂಪಾದಿಸಿ

 • ಹಾಲು ಉತ್ಪಾದಕ ಸಹಕಾರಿ ಸಂಘ, ಲಚ್ಯಾಣ

ಪ್ರಾಥಮಿಕ ಆರೋಗ್ಯ ಕೇಂದ್ರಸಂಪಾದಿಸಿ

 • ಪ್ರಾಥಮಿಕ ಆರೋಗ್ಯ ಕೇಂದ್ರ, ಲಚ್ಯಾಣ

ಪಶು ಆಸ್ಪತ್ರೆಸಂಪಾದಿಸಿ

 • ಪಶು ಆಸ್ಪತ್ರೆ ಮತ್ತು ಕೃತಕ ಗರ್ಭಧಾರಣಾ ಕೇಂದ್ರ, ಲಚ್ಯಾಣ

ಉಚಿತ ಪ್ರಸಾದನಿಲಯಸಂಪಾದಿಸಿ

 • ಮೆಟ್ರಿಕ್ ಪೂರ್ವ ಬಾಲಕರ ಉಚಿತ ಪ್ರಸಾದನಿಲಯ, ಲಚ್ಯಾಣ

ವಿದ್ಯುತ್ ಪರಿವರ್ತನಾ ಕೇಂದ್ರಸಂಪಾದಿಸಿ

 • 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಲಚ್ಯಾಣ

ಪಶು ಚಿಕಿತ್ಸಾಲಯಸಂಪಾದಿಸಿ

 • ಪ್ರಾಥಮಿಕ ಪಶು ಚಿಕಿತ್ಸಾಲಯ, ಲಚ್ಯಾಣ

ರೈಲು ನಿಲ್ದಾಣಸಂಪಾದಿಸಿ

 • ರೈಲು ನಿಲ್ದಾಣ, ಲಚ್ಯಾಣ

ಉಲ್ಲೇಖಗಳುಸಂಪಾದಿಸಿ

 1. https://kannadamma.net/2012/10/%E0%B2%AA%E0%B2%B5%E0%B2%BE%E0%B2%A1%E0%B2%AA%E0%B3%81%E0%B2%B0%E0%B3%81%E0%B2%B7-%E0%B2%B2%E0%B2%9A%E0%B3%8D%E0%B2%AF%E0%B2%BE%E0%B2%A3%E0%B2%A6-%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%B2/
 2. http://sukshetra-lachyan.blogspot.com/2013/12/blog-post.html
 3. http://kannada.eenaduindia.com/State/Uttarkarnataka/Bijapur/BijapurCity/2017/09/02221211/This-village-created-Teachers-in-every-house.vpf
"https://kn.wikipedia.org/w/index.php?title=ಲಚ್ಯಾಣ&oldid=949088" ಇಂದ ಪಡೆಯಲ್ಪಟ್ಟಿದೆ