ಮುಹಮ್ಮದ್

ಇಸ್ಲಾಂ ಮತ್ತು ಬಹಾಯಿಯ ಪ್ರವಾದಿ
(ಪ್ರವಾದಿ ಮುಹಮ್ಮದ್ ಇಂದ ಪುನರ್ನಿರ್ದೇಶಿತ)

ಮುಹಮ್ಮದ್ ಬಿನ್ ಅಬ್ದುಲ್ಲಾ (ಅರೇಬಿಕ್ محمد بن عبد الله‎)[೧] [೨] (ಜನನ 22 ಎಪ್ರಿಲ್ 571 - ಮರಣ 8 ಜೂನ್ 632)[೩] ಅರಬ್ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಂದಾಳು. ಸಾಮಾನ್ಯವಾಗಿ ಇಸ್ಲಾಂ ಧರ್ಮದ ಸ್ಥಾಪಕರೆಂದು ಹೇಳಲಾಗುತ್ತದೆ. ಆದರೆ ಮುಸ್ಲಿಮರ ನಂಬಿಕೆಯ ಪ್ರಕಾರ ಅಬ್ರಹಾಂ, ಮೋಸೆ, ಯೇಸು ಮುಂತಾದ ಪ್ರವಾದಿಗಳಂತೆ ದೇವರಿಂದ ಕಳುಹಿಸಲ್ಪಟ್ಟ ಕಟ್ಟಕಡೆಯ ಪ್ರವಾದಿ. ಇತರೆಲ್ಲಾ ಪ್ರವಾದಿಗಳಂತೆ ಇವರೂ ಕೂಡ ಏಕದೇವಾರಾಧನೆ, ಪ್ರವಾದಿತ್ವ ಮತ್ತು ಪರಲೋಕದ ಬಗ್ಗೆ ಬೋಧಿಸಿದರು. ಆದರೆ ಇತರ ಪ್ರವಾದಿಗಳಿಗೆ ವ್ಯತಿರಿಕ್ತವಾಗಿ ಇವರನ್ನು ಸಂಪೂರ್ಣ ಮಾನವಕುಲಕ್ಕೆ ಪ್ರವಾದಿಯಾಗಿ ಕಳುಹಿಸಲಾಗಿದೆ ಮತ್ತು ಇವರು ದೇವರ ಸೃಷ್ಟಿಗಳಲ್ಲೇ ಅತಿಶ್ರೇಷ್ಠರು ಹಾಗೂ ಪಾಪಸುರಕ್ಷಿತರು ಎಂದು ಮುಸಲ್ಮಾನರು ನಂಬುತ್ತಾರೆ. ಇವರ ಹೆಸರನ್ನು ಹೇಳುವಾಗ, ಕೇಳುವಾಗ, ಅಥವಾ ಬರೆಯುವಾಗ ಮುಸಲ್ಮಾನರು "ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ" (ಅರೇಬಿಕ್ صلى الله عليه وسلم) (ಅವರ ಮೇಲೆ ದೇವರ ಕೃಪೆ ಮತ್ತು ಶಾಂತಿ ಸದಾ ಇರಲಿ ಎಂದರ್ಥ) ಎಂಬ ನುಡಿಗಟ್ಟನ್ನು ಸೇರಿಸುತ್ತಾರೆ. ಈ ನುಡಿಗಟ್ಟನ್ನು ಸೇರಿಸಬೇಕೆಂದು ಕುರ್‌ಆನ್ ಮತ್ತು ಪ್ರವಾದಿಚರ್ಯೆಯಲ್ಲಿ ನಿರ್ದೇಶನವಿದೆಯೆಂದು ಅವರು ಹೇಳುತ್ತಾರೆ.[೪]

ಇಸ್ಲಾಂ ಧರ್ಮದ ಪ್ರವಾದಿ

ಮುಹಮ್ಮದ್
محمد
Calligraphic representation of Muhammad's name.jpg
ಅರೇಬಿಕ್ ಭಾಷೆಯಲ್ಲಿ ಬರೆದ ಮುಹಮ್ಮದ್‌ರ ಹೆಸರು
Personal
ಜನನ(೫೭೧-೦೪-೨೨)೨೨ ಏಪ್ರಿಲ್ ೫೭೧ (ಹಿ.ಪೂ. 53 ರಬೀಉಲ್ ಅವ್ವಲ್ 12)
ಮಕ್ಕಾ, ಅರೇಬಿಯಾ
ಮರಣ8 ಜೂನ್ 632(632-06-08) (ಹಿ.ಶ. 11 ರಬೀಉಲ್ ಅವ್ವಲ್ 12)
ಮದೀನ, ಅರೇಬಿಯಾ
ಧರ್ಮಇಸ್ಲಾಂ
ಹೆತ್ತವರುಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ (ತಂದೆ)
ಆಮಿನ ಬಿಂತ್ ವಹಬ್ (ತಾಯಿ)

ಮುಹಮ್ಮದ್ ಕ್ರಿ.ಶ. 571 ರಲ್ಲಿ (ಹಿಜರಿ ಕ್ಯಾಲೆಂಡರ್ ಪ್ರಕಾರ ಹಿಜರಿ ಪೂರ್ವ 53, ರಬೀಉಲ್ ಅವ್ವಲ್ ತಿಂಗಳ 12ನೇ ದಿನ ಸೋಮವಾರ)[೩] ಇಂದಿನ ಸೌದಿ ಅರೇಬಿಯಾದಲ್ಲಿರುವ ಮಕ್ಕಾ ನಗರದಲ್ಲಿ ಹುಟ್ಟಿದರು. ತಂದೆ ಅಬ್ದುಲ್ಲಾ ಬಿನ್ ಅಬ್ದುಲ್-ಮುತ್ತಲಿಬ್ ಮತ್ತು ತಾಯಿ ಆಮಿನ ಬಿಂತ್ ವಹ್ಬ್.[೫] ಮುಹಮ್ಮದ್ ಹುಟ್ಟುವುದಕ್ಕೆ ಮೊದಲೇ ಅವರ ತಂದೆ ಇಹಲೋಕವನ್ನು ತ್ಯಜಿಸಿದ್ದರು.[೫] ಆರು ವರ್ಷವಾದಾಗ ತಾಯಿ ಕೂಡ ಅಸುನೀಗಿದರು. ತಂದೆ-ತಾಯಿ ಇಲ್ಲದೆ ತಬ್ಬಲಿಯಾದ ಮುಹಮ್ಮದ್‌ರನ್ನು ಅವರ ತಾತ ಅಬ್ದುಲ್ ಮುತ್ತಲಿಬ್ ಆರೈಕೆ ಮಾಡಿದರು. ಆದರೆ ಸ್ವಲ್ಪದರಲ್ಲೇ ಅವರು ಕೂಡ ಸಾವನ್ನಪ್ಪಿದರು. ಆಗಿನ್ನೂ ಚಿಕ್ಕ ಹುಡುಗನಾಗಿಯೇ ಇದ್ದ ಮುಹಮ್ಮದ್‌ರನ್ನು ಅವರ ದೊಡ್ಡಪ್ಪ ಅಬೂತಾಲಿಬ್ ಸಾಕಿ ಸಲಹಿದರು.[೬][೭]

ಮುಹಮ್ಮದ್ ಚಿಕ್ಕಂದಿನಲ್ಲಿ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದರು. ನಂತರ ಅವರು ವ್ಯಾಪಾರ ಮಾಡಲು ಪ್ರಾರಂಭಿಸಿದರು. 25ನೇ ವಯಸ್ಸಿನಲ್ಲಿ ಖದೀಜ ಬಿಂತ್ ಖುವೈಲಿದ್ ಎಂಬ ಮಹಿಳೆಯನ್ನು ವಿವಾಹವಾದರು.[೮] ಮುಸಲ್ಮಾನರ ನಂಬಿಕೆ ಪ್ರಕಾರ 40ನೇ ವಯಸ್ಸಿನಲ್ಲಿ ಅವರಿಗೆ ದೇವರಿಂದ ದಿವ್ಯವಾಣಿ ಅವತೀರ್ಣವಾಗಲು ಆರಂಭವಾಗಿ ಅವರು ಪ್ರವಾದಿಯಾಗಿ ಆರಿಸಲ್ಪಟ್ಟರು.[೯] ಅವರು ಮಕ್ಕಾದಲ್ಲಿ ಮೂರು ವರ್ಷಗಳ ಕಾಲ ರಹಸ್ಯವಾಗಿ ಮತಪ್ರಚಾರ ಮಾಡಿದರು ಮತ್ತು ನಂತರದ ಹತ್ತು ವರ್ಷ ಬಹಿರಂಗವಾಗಿ ಮತಪ್ರಚಾರ ಮಾಡಿದರು. ಇದಕ್ಕಾಗಿ ಅವರು ತಮ್ಮ ಜನರಿಂದ ನಿರಂತರ ಕಿರುಕುಳ ಮತ್ತು ಹಿಂಸೆಯನ್ನು ಸಹಿಸಬೇಕಾಗಿ ಬಂತು. ಮಕ್ಕಾದ ಜನರು ಅವರ ಕುಟುಂಬಕ್ಕೆ ಮೂರು ವರ್ಷಗಳ ಕಾಲ ಸಾಮೂಹಿಕ ಬಹಿಷ್ಕಾರ ಹಾಕಿದರು.[೧೦] ಹಿಂಸೆ ತೀವ್ರವಾಗಿ ಮಕ್ಕಾ ನಿವಾಸಿಗಳು ಅವರನ್ನು ಕೊಲ್ಲುವ ಹಂತಕ್ಕೆ ಬಂದಾಗ, ಕ್ರಿ.ಶ. 622 ರಲ್ಲಿ ತಮ್ಮ 53ನೇ ವಯಸ್ಸಿನಲ್ಲಿ ಅವರು ದೇವರ ನಿರ್ದೇಶನದಂತೆ ಮಕ್ಕಾದಿಂದ ಸುಮಾರು 400 ಮೈಲು ಉತ್ತರದಲ್ಲಿರುವ ಮದೀನಾ ನಗರಕ್ಕೆ ವಲಸೆ ಹೋದರು.[೧೧]

ಈ ಘಟನೆಯನ್ನು ಮುಸಲ್ಮಾನರು ಹಿಜ್ರ ಎಂದು ಕರೆಯುತ್ತಾರೆ. ಹಿಜರಿ ಕಾಲಗಣನೆಯು ಈ ವರ್ಷದಿಂದ ಆರಂಭವಾಗುತ್ತದೆ. ಮುಹಮ್ಮದ್‌ ಮದೀನದಲ್ಲಿ ತಮ್ಮ ಮತಪ್ರಚಾರವನ್ನು ಮುಂದುವರಿಸಿದರು. ಅಲ್ಲಿ ಅವರು ಇಸ್ಲಾಮಿಕ್ ನಾಗರಿಕತೆಗೆ ಅಸ್ತಿವಾರ ಹಾಕಿದರು. ಒಂದು ಸುದೃಢ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕೆಲವೇ ವರ್ಷಗಳಲ್ಲಿ ಸಂಪೂರ್ಣ ಅರೇಬಿಯನ್ ಪರ್ಯಾಯ ದ್ವೀಪವು ಅವರ ವಶಕ್ಕೆ ಬಂತು. ಕ್ರಿ. ಶ. 632 ರಲ್ಲಿ (ಹಿಜರಿ ಕ್ಯಾಲೆಂಡರ್ ಪ್ರಕಾರ ಹಿಜರಿ ಶಕೆ 11 ರಬೀಉಲ್ ಅವ್ವಲ್ ತಿಂಗಳ 12ನೇ ದಿನ ಸೋಮವಾರ) ಅವರು ತಮ್ಮ 63ನೇ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯಕೋರಿದರು.[೧೨]

ವಂಶಾವಳಿಸಂಪಾದಿಸಿ

ಮುಹಮ್ಮದ್‌ರ ವಂಶಾವಳಿಯನ್ನು ಮುಸ್ಲಿಂ ಇತಿಹಾಸಕಾರರು ಮೂರು ಪ್ರಮುಖ ವಿಭಾಗಳಲ್ಲಿ ವಿಂಗಡಿಸಿದ್ದಾರೆ:

 1. ಮುಹಮ್ಮದ್‌ರಿಂದ ಅದ್ನಾನ್ ವರೆಗಿನ ವಂಶವಾಳಿ.
 2. ಅದ್ನಾನ್‌ರಿಂದ ಅಬ್ರಹಾಂ ವರೆಗಿನ ವಂಶಾವಳಿ
 3. ಅಬ್ರಹಾಂರಿಂದ ಆದಮ್ ವರೆಗಿನ ವಂಶಾವಳಿ.

ಇದರಲ್ಲಿ ಮೊದಲ ವಿಭಾಗದ ಬಗ್ಗೆ ಎಲ್ಲಾ ಮುಸ್ಲಿಂ ಇತಿಹಾಸಕಾರರಿಗೆ ಸಹಮತವಿದ್ದರೆ, ಎರಡನೇ ಮತ್ತು ಮೂರನೇ ವಿಭಾಗದ ಬಗ್ಗೆ ಸಹಮತವಿಲ್ಲ.[೧೩]

ಮುಸ್ಲಿಂ ಇತಿಹಾಸಕಾರರೆಲ್ಲವೂ ಒಪ್ಪಿಕೊಳ್ಳುವ ಅದ್ನಾನ್ ವರೆಗಿನ ಮುಹಮ್ಮದ್‌ರ ವಂಶಾವಳಿ ಹೀಗಿದೆ:

ಮುಹಮ್ಮದ್‌ರ ತಂದೆಯ ಹೆಸರು ಅಬ್ದುಲ್ಲಾ. ಇವರು ಅಬ್ದುಲ್ ಮುತ್ತಲಿಬ್ ಮತ್ತು ಫಾತಿಮ ಬಿಂತ್ ಅಮ್ರ್ ದಂಪತಿಗಳ ಸುಪುತ್ರ. ಮುಹಮ್ಮದ್‌ರ ತಾಯಿಯ ಹೆಸರು ಆಮಿನ. ಇವರು ವಹಬ್ ಬಿನ್ ಅಬ್ದು ಮನಾಫ್ ಮತ್ತು ಬರ್‍ರ ಬಿಂತ್ ಅಬ್ದುಲ್ ಉಝ್ಝ ದಂಪತಿಯ ಪುತ್ರಿ. ವಹಬ್ ಬಿನ್ ಅಬ್ದು ಮನಾಫ್ ಬನೂ ಝುಹ್ರ ಗೋತ್ರದ ಮುಖಂಡರು.

ಜನನಸಂಪಾದಿಸಿ

ಅಬ್ದುಲ್ ಮುತ್ತಲಿಬ್ ಪುತ್ರ ಅಬ್ದುಲ್ಲಾರಿಗೆ ಬನೂ ಝುಹ್ರ ಗೋತ್ರದ ಮುಖಂಡ ಮತ್ತು ಹಿರಿಯ ವ್ಯಕ್ತಿ ವಹಬ್ ಬಿನ್ ಅಬ್ದ್ ಮನಾಫ್‌ರ ಮಗಳು ಆಮಿನರನ್ನು ಆರಿಸಿದರು. ಅರಬ್ ಸಂಪ್ರದಾಯದಂತೆ ವಿವಾಹದ ಬಳಿಕ ಮೂರು ದಿನ ಅಬ್ದುಲ್ಲಾ ಆಮಿನರ ಮನೆಯಲ್ಲಿ ತಂಗಿ, ನಂತರ ಪತ್ನಿ ಜೊತೆಗೆ ಮನೆಗೆ ಹಿಂದಿರುಗಿದರು. ವಿವಾಹವಾಗಿ ಹೆಚ್ಚು ದಿನ ಕಳೆಯುವುದಕ್ಕೆ ಮೊದಲೇ ಅಬ್ದುಲ್ ಮುತ್ತಲಿಬ್ ಮಗನನ್ನು ವ್ಯಾಪಾರ ನಿಮಿತ್ತ ಸಿರಿಯಾಗೆ ಕಳುಹಿಸಿದರು. ಅಬ್ದುಲ್ಲಾ ಹೊರಡುವಾಗ ಆಮಿನ ಬಸುರಿಯಾಗಿದ್ದರು. ಅಬ್ದುಲ್ಲಾ ಕೆಲವು ತಿಂಗಳ ಕಾಲ ಪ್ಯಾಲಸ್ತೀನಿನ ಗಾಝಾದಲ್ಲಿ ಉಳಿದು, ನಂತರ ಊರಿಗೆ ಹಿಂದಿರುಗುವಾಗ ಕಾಯಿಲೆ ಬಿದ್ದರು. ವಿಶ್ರಾಂತಿಗಾಗಿ ದಾರಿಮಧ್ಯೆ ಯಸ್ರಿಬ್‌ನಲ್ಲಿ ಬನೂ ಅದೀ ಬಿನ್ ನಜ್ಜಾರ್ ಗೋತ್ರದ ತನ್ನ ಸೋದರ ಮಾವಂದಿರ ಬಳಿ ತಂಗಿ, ಅಲ್ಲೇ ಕೊನೆಯುಸಿರೆಳೆದರು.[೧೪] ಅವರನ್ನು ಅಲ್ಲೇ ಸಮಾಧಿ ಮಾಡಲಾಯಿತು. ಈ ಘಟನೆ ನಡೆದದ್ದು ಮುಹಮ್ಮದ್ ಹುಟ್ಟುವುದಕ್ಕೆ ಸುಮಾರು ಎರಡು ತಿಂಗಳು ಮೊದಲು.[೧೫]

 
ಮಕ್ಕಾದಲ್ಲಿರುವ ಮುಹಮ್ಮದ್ ಜನಿಸಿದ ಸ್ಥಳ. ಈಗ ಇಲ್ಲಿ ಗ್ರಂಥಾಲಯ ಅಸ್ತಿತ್ವದಲ್ಲಿದೆ.

ಮಕ್ಕಾದ ಶಿಅಬ್ ಅಬೂತಾಲಿಬ್‌ನಲ್ಲಿರುವ ಅಬ್ದುಲ್ ಮುತ್ತಲಿಬರ ಮನೆಯಲ್ಲಿ ಆಮಿನ ಗಂಡು ಮಗುವಿಗೆ ಜನ್ಮ ನೀಡಿದರು. ಹೆರಿಗೆಯಾದ ತಕ್ಷಣ ಮಾವ ಅಬ್ದುಲ್ ಮುತ್ತಲಿಬ್‌ರಿಗೆ ಹೇಳಿ ಕಳುಹಿಸಿದರು. ಅಬ್ದುಲ್ ಮುತ್ತಲಿಬ್ ಬಹಳ ಸಂತೋಷದಿಂದ ಮಗುವನ್ನು ಹಿಡಿದು ಕಅಬಾಗೆ ಹೋಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕೃತಜ್ಞತೆಯನ್ನು ಸೂಚಿಸಿದರು. ಮಗುವಿಗೆ "ಮುಹಮ್ಮದ್" ಎಂದು ನಾಮಕರಣ ಮಾಡಿದರು.[೧೬] ಮುಹಮ್ಮದ್ ಎಂದರೆ ಪ್ರಶಂಸಾರ್ಹನು, ಸ್ತುತಿ ಪ್ರಶಂಸೆಗೆ ಪಾತ್ರನಾದವನು ಎಂದರ್ಥ. ಈ ಹೆಸರು ಅರಬ್ಬರಲ್ಲಿ ಅಷ್ಟೇನೂ ರೂಢಿಯಲ್ಲಿರಲಿಲ್ಲ.[೧೭] ಮಗು ಹುಟ್ಟಿದ ಏಳನೇ ದಿನ ಅಬ್ದುಲ್ ಮುತ್ತಲಿಬ್ ಅರಬ್ ಸಂಪ್ರದಾಯದ ಪ್ರಕಾರ ಮಗುವಿಗೆ ಸುನ್ನತಿ ಮಾಡಿಸಿ[೧೭] ಔತಣಕೂಟ ಏರ್ಪಡಿಸಿದರು.

ಮುಹಮ್ಮದ್ ಹುಟ್ಟಿದ್ದು ಯಾವ ವರ್ಷ ಎಂಬ ಬಗ್ಗೆ ಗೊಂದಲಗಳಿವೆ. ಪ್ರಬಲ ಅಭಿಪ್ರಾಯದಂತೆ ಅದು ಆನೆಯ ವರ್ಷ (ಅಂದರೆ ಕ್ರಿ.ಶ. 570 ಅಥವಾ 571) ಎಂದು ಹೇಳಲಾಗಿದೆ.[೧೮] ಅವರು ಹುಟ್ಟಿದ ತಿಂಗಳ ಬಗ್ಗೆಯೂ ಗೊಂದಲಗಳಿದ್ದು, ಬಹುಸಂಖ್ಯಾತ ಇತಿಹಾಸಕಾರರು ರಬೀಉಲ್ ಅವ್ವಲ್ ತಿಂಗಳು ಎಂದಿದ್ದಾರೆ. ಹುಟ್ಟಿದ ದಿನದ ಬಗ್ಗೆಯೂ ಗೊಂದಲಗಳಿವೆ. ಕೆಲವರು ರಬೀಉಲ್ ಅವ್ವಲ್ 8,[೧೯] ಕೆಲವರು ರಬೀಉಲ್ ಅವ್ವಲ್ 9,[೧೭] ಕೆಲವರು ರಬೀಉಲ್ ಅವ್ವಲ್ 12[೨೦] ಎಂದು ಹೇಳಿದ್ದಾರೆ. ಇವುಗಳಲ್ಲಿ ರಬೀಉಲ್ ಅವ್ವಲ್ 12 ಹೆಚ್ಚು ಪ್ರಸಿದ್ಧ ಅಭಿಪ್ರಾಯ.[೧೮] ಮುಹಮ್ಮದ್ ಹುಟ್ಟಿದ್ದು ಸೋಮವಾರ ಎಂಬ ವಿಷಯ ತರ್ಕಾತೀತ.[೨೧] ಏಕೆಂದರೆ ಸ್ವತಃ ಮುಹಮ್ಮದ್‌ರೇ ಇದನ್ನು ಹೇಳಿದ್ದಾರೆ.[೨೨] ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮುಹಮ್ಮದ್ ಹುಟ್ಟಿದ್ದು ಕ್ರಿ.ಶ. 571, ಏಪ್ರಿಲ್ 20 ಅಥವಾ 22.[೧೬]

ಬಾಲ್ಯಸಂಪಾದಿಸಿ

ಮುಹಮ್ಮದ್‌ರ ತಾಯಿ ಆಮಿನ ಒಂದು ವಾರದ ಕಾಲ ಮಗುವಿಗೆ ಎದೆಹಾಲುಣಿಸಿದರು. ನಂತರ ಮಗುವಿಗೆ ಎದೆಹಾಲುಣಿಸುವ ಜವಾಬ್ದಾರಿಯನ್ನು ಹೊತ್ತುಕೊಂಡದ್ದು ಸುವೈಬ ಎಂಬ ಮಹಿಳೆ.[೨೩] ಈಕೆ ಮುಹಮ್ಮದ್‌ರ ದೊಡ್ಡಪ್ಪ ಅಬೂಲಹಬ್‌ರ ದಾಸಿ. ಮುಹಮ್ಮದ್‌ರ ಜನನ ವಾರ್ತೆಯನ್ನು ಕೇಳಿದ ತಕ್ಷಣ ಅಬೂಲಹಬ್ ಆಕೆಯನ್ನು ದಾಸ್ಯ ವಿಮೋಚನೆಗೊಳಿಸಿದ್ದರು.[೨೪] ಅಬ್ದುಲ್ಲಾರ ಸೇವಕಿಯಾಗಿದ್ದ ಇಥಿಯೋಪಿಯನ್ ದಾಸಿ ಉಮ್ಮು ಐಮನ್ ಮುಹಮ್ಮದ್‌ರ ಆರೈಕೆ ಮಾಡಿದರು.[೨೩]

ಮಗು ಹುಟ್ಟಿದರೆ ಅದಕ್ಕೆ ಎದೆಹಾಲುಣಿಸಿ ಬೆಳೆಸಲು ಮರುಭೂಮಿಯ ದಾದಿಗಳಿಗೆ ಒಪ್ಪಿಸುವುದು ಅರಬ್ಬರ ರೂಢಿ. ಮಕ್ಕಳು ಮರುಭೂಮಿಯ ಮುಕ್ತ ಮತ್ತು ಆರೋಗ್ಯಕರ ವಾತಾವರಣದಲ್ಲಿ ಬೆಳೆದು, ಸುದೃಢ ದೇಹ, ಶುದ್ಧ ಭಾಷೆ ಮತ್ತು ಉತ್ತಮ ಸಂಸ್ಕಾರವನ್ನು ಕಲಿಯಬೇಕೆಂಬುದೇ ಇದರ ಉದ್ದೇಶ.[೭] ಹೀಗೆ ಮುಹಮ್ಮದ್‌ರನ್ನು ಬನೂ ಸಅದ್ ಬಿನ್ ಬಕರ್ ಗೋತ್ರಕ್ಕೆ ಸೇರಿದ ಹಲೀಮ ಬಿಂತ್ ಅಬೂ ದುಐಬ್ ಎಂಬ ಮಹಿಳೆಗೆ ಒಪ್ಪಿಸಲಾಯಿತು.[೨೫] ಆಕೆಯ ಗಂಡನ ಹೆಸರು ಹಾರಿಸ್ ಬಿನ್ ಅಬ್ದುಲ್ ಉಝ್ಝ.[೨೫]

ಮುಹಮ್ಮದ್‌ರನ್ನು ಪಡೆದ ನಂತರ ಹಲೀಮರ ಅದೃಷ್ಟ ಖುಲಾಯಿಸಿ ಅವರ ಸಂಪತ್ತಿನಲ್ಲಿ ಅಭಿವೃದ್ಧಿಯುಂಟಾಯಿತು[೨೬] ಮತ್ತು ಇದರಿಂದಾಗಿ ಅವರು ಆಮಿನರನ್ನು ಒತ್ತಾಯಿಸಿ ಮಗುವನ್ನು ತನ್ನ ಬಳಿಯೇ ಇಟ್ಟುಕೊಂಡರು ಎನ್ನಲಾಗುತ್ತದೆ. ಮುಹಮ್ಮದ್‌ರಿಗೆ ನಾಲ್ಕು ವರ್ಷವಾದಾಗ, ದೇವದೂತ ಗೇಬ್ರಿಯಲ್ ಅವರ ಎದೆಯನ್ನು ಸೀಳಿ ಹೃದಯವನ್ನು ಹೊರತೆಗೆದು ತೊಳೆದು ಶುಚೀಕರಿಸಿ ಪುನಸ್ಥಾಪಿಸಿದ ಘಟನೆ ಜನಜನಿತವಾಗಿದೆ. ಈ ಘಟನೆಯು ಮುಸಲ್ಮಾನರು ಅತ್ಯಂತ ಅಧಿಕೃತವೆಂದು ಪರಿಗಣಿಸುವ ಸಹೀಹ್ ಮುಸ್ಲಿಂ[೨೭] ಪುಸ್ತಕದಲ್ಲಿದೆ.

ಈ ಆಘಾತಕಾರಿ ಘಟನೆ ಜರುಗಿದ ನಂತರ ಹಲೀಮ ಭಯದಿಂದ ಮುಹಮ್ಮದ್‌ರನ್ನು ಅವರ ತಾಯಿ ಮತ್ತು ಅಜ್ಜನಿಗೆ ಮರಳಿ ಒಪ್ಪಿಸಿದರು ಎನ್ನಲಾಗುತ್ತದೆ.[೨೮][೨೯]

ಮುಹಮ್ಮದ್‌ರಿಗೆ ಆರು ವರ್ಷ ಪ್ರಾಯವಾದಾಗ, ಅವರ ತಾಯಿ ಆಮಿನ ಬನೂ ನಜ್ಜಾರ್ ಗೋತ್ರದ ತಮ್ಮ ಮಾವಂದಿರನ್ನು ಭೇಟಿಯಾಗಲು ಹೋಗಿದ್ದಾಗ, ಜೊತೆಗೆ ಮುಹಮ್ಮದ್ ಕೂಡ ಇದ್ದರು. ಮರಳಿ ಬರುವಾಗ ಅಬ್ವಾ ಎಂಬ ಸ್ಥಳದಲ್ಲಿ ಆಮಿನ ಕೊನೆಯುಸಿರೆಳೆದರು.[೩೦] ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅಕ್ಷರಶಃ ತಬ್ಬಲಿಯಾದ ಮುಹಮ್ಮದ್‌ರನ್ನು ಅವರ ಅಜ್ಜ ಅಬ್ದುಲ್ ಮುತ್ತಲಿಬ್ ಸಾಕಿದರು.[೩೧] ಆದರೆ ಅವರಿಗೆ ಎಂಟು ವರ್ಷ ಪ್ರಾಯವಾಗುವಷ್ಟರಲ್ಲಿ, ಅಜ್ಜ ಕೂಡ ಇಹಲೋಕಕ್ಕೆ ವಿದಾಯ ಹೇಳಿದರು.[೩೦] ನಂತರ ಮುಹಮ್ಮದ್‌ರನ್ನು ಸಾಕಲು ಮುಂದೆ ಬಂದದ್ದು ಅವರ ದೊಡ್ಡಪ್ಪ ಅಬೂತಾಲಿಬ್.[೭][೩೨]

ಯೌವನಸಂಪಾದಿಸಿ

ಮುಹಮ್ಮದ್ ಅಬೂತಾಲಿಬರ ಮನೆಯಲ್ಲಿ ಬೆಳೆಯುತ್ತಿದ್ದರು. ಅಲ್ಲಿ ಬಡತನ ತಾಂಡವವಾಡುತ್ತಿತ್ತು. ಅಬೂತಾಲಿಬರಿಗೆ ತಮ್ಮದೇ ಮಕ್ಕಳನ್ನು ಸಾಕಲಾಗುತ್ತಿರಲಿಲ್ಲ. ಆದ್ದರಿಂದ ಮುಹಮ್ಮದ್ ಮಕ್ಕಾದ ಸರದಾರರ ಕುರಿಮಂದೆಗಳನ್ನು ಬೆಟ್ಟ ಗುಡ್ಡಗಳಲ್ಲಿ ಮೇಯಿಸಿ[೩೩] ಅದರಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣವನ್ನು ದೊಡ್ಡಪ್ಪನಿಗೆ ನೀಡಿ ಸಹಾಯ ಮಾಡುತ್ತಿದ್ದರು.[೩೪]

 
ಸಿರಿಯಾದ ಬುಸ್ರಾದಲ್ಲಿರುವ ಬಹೀರಾ ಸನ್ಯಾಸಿಯ ಮಠ

ಅಬೂತಾಲಿಬ್ ಮುಹಮ್ಮದ್‌ರನ್ನು ಬಹಳ ಪ್ರೀತಿಸುತ್ತಿದ್ದರು. ಒಂದು ಕ್ಷಣ ಮುಹಮ್ಮದ್‌ರನ್ನು ಕಾಣದಿದ್ದರೆ ಅವರು ಆತಂಕಪಡುತ್ತಿದ್ದರು.[೩೪] ಆದ್ದರಿಂದ ಒಮ್ಮೆ ಅವರು ವ್ಯಾಪಾರಕ್ಕಾಗಿ ಮಕ್ಕಾದ ವರ್ತಕರೊಂದಿಗೆ ಸಿರಿಯಾಗೆ ಹೊರಟಾಗ ಮುಹಮ್ಮದ್‌ರನ್ನೂ ಜೊತೆಯಲ್ಲಿ ಸೇರಿಸಿಕೊಂಡರು.[೭] ಆಗ ಮುಹಮ್ಮದ್‌ರಿಗೆ ಹೆಚ್ಚೆಂದರೆ 10-12 ವರ್ಷ ಪ್ರಾಯ.[೩೪] ಈ ಯಾತ್ರೆಯಲ್ಲಿ ಜರುಗಿದ ಒಂದು ಅದ್ಭುತ ಘಟನೆಯನ್ನು ಬಗ್ಗೆ ಅನೇಕ ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.[೩೫] ಅದೇನೆಂದರೆ, ವರ್ತಕ ತಂಡವು ಸಿರಿಯಾದ ಬುಸ್ರಾ ಎಂಬ ಊರಿಗೆ ತಲುಪಿದಾಗ, ವಿಶ್ರಾಂತಿಗಾಗಿ ಒಂದು ಮರದ ಬುಡದಲ್ಲಿ ಇಳಿದರು. ಅಲ್ಲೇ ಹತ್ತಿರದ ಒಂದು ಮಠದಲ್ಲಿ ಬಹೀರಾ ಎಂಬ ಕ್ರಿಶ್ಚಿಯನ್ ಸನ್ಯಾಸಿಯಿದ್ದರು. ಅವರು ಮುಹಮ್ಮದ್‌ರನ್ನು ಕಂಡು ಕುತೂಹಲದಿಂದ ವೀಕ್ಷಿಸಿದರು. ಬೈಬಲ್ ಬಗ್ಗೆ ಆಳಜ್ಞಾನವನ್ನು ಹೊಂದಿದ್ದ ಬಹೀರಾ ಅಬೂತಾಲಿಬ್ ಮತ್ತು ಇತರ ವರ್ತಕರನ್ನು ಮಠಕ್ಕೆ ಕರೆಸಿ, ನೀವು ಈ ಹುಡುಗನನ್ನು ಈಗಿಂದೀಗಲೇ ನಿಮ್ಮ ಊರಿಗೆ ವಾಪಸು ಕರೆದೊಯ್ಯಿರಿ. ಇವರು ಮುಂದೆ ಪ್ರವಾದಿಯಾಗುವ ಎಲ್ಲಾ ಲಕ್ಷಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ನೀವು ಸಿರಿಯಾಗೆ ಹೋದರೆ ಅಲ್ಲಿ ಈ ಹುಡುಗನಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದರು.[೩೬] ಇದರಿಂದ ಭಯಭೀತರಾದ ಅಬೂತಾಲಿಬ್ ತಕ್ಷಣ ಕೆಲವು ಜನರೊಡನೆ ಮುಹಮ್ಮದ್‌ರನ್ನು ಊರಿಗೆ ಕಳುಹಿಸಿಕೊಟ್ಟರು.[೩೭]

ಖದೀಜರೊಂದಿಗೆ ವಿವಾಹಸಂಪಾದಿಸಿ

ಖದೀಜ ಬಿಂತ್ ಖುವೈಲಿದ್ ಮಕ್ಕಾದ ದೊಡ್ಡ ವರ್ತಕಿಯಾಗಿದ್ದರು. ಅವರು ತಮ್ಮ ಪರವಾಗಿ ವ್ಯಾಪಾರ ಮಾಡಲು ಜನರನ್ನು ನೇಮಿಸಿ ವ್ಯಾಪಾರದಲ್ಲಿ ಸಿಗುವ ಲಾಭದ ಒಂದಂಶವನ್ನು ಅವರಿಗೆ ನೀಡುತ್ತಿದ್ದರು.[೩೮] ಅವರು ಎರಡು ಬಾರಿ ವಿವಾಹವಾಗಿದ್ದರೂ ಸಹ ವಿಧವೆಯಾಗಿದ್ದರು.[೩೯] ಖದೀಜರಿಗೆ ಮುಹಮ್ಮದ್‌ರ ಪ್ರಾಮಾಣಿಕತೆ, ಮುಗ್ಧತೆ ಮತ್ತು ವ್ಯಾಪಾರದಲ್ಲಿರುವ ಚಾಣಾಕ್ಷತೆಯ ಬಗ್ಗೆ ತಿಳಿದಾಗ, ಅವರನ್ನು ತನ್ನೊಂದಿಗೆ ವ್ಯಾಪಾರ ಮಾಡಲು ಕರೆದರು. ಹೆಚ್ಚಿನ ಆದಾಯ ನೀಡುವ ಭರವಸೆಯಿತ್ತರು. ಮುಹಮ್ಮದ್ ಒಪ್ಪಿಕೊಂಡು ಮೈಸರ ಎಂಬ ಗುಲಾಮನ ಜೊತೆಗೆ ಖದೀಜರ ಸರಕು ಮಾರಲು ಸಿರಿಯಾಗೆ ಹೊರಟರು.[೪೦] ಮೈಸರ ಮುಹಮ್ಮದ್‌ರನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದರು. ಮುಹಮ್ಮದ್‌ರಲ್ಲಿ ಅವರು ಅನೇಕ ಉತ್ತಮ ಗುಣಗಳನ್ನು ಕಂಡರು.[೪೦] ವ್ಯಾಪಾರ ಮುಗಿದು ಹಿಂದಿರುಗಿದಾಗ, ಇತರ ವರ್ತಕರಿಗಿಂತಲೂ ಮುಹಮ್ಮದ್ ತಂದ ಲಾಭವು ಹಲವು ಪಟ್ಟು ಹೆಚ್ಚಾಗಿತ್ತು.[೪೧]

ಮೈಸರ ಮುಹಮ್ಮದ್‌ರ ಉತ್ತಮ ಗುಣಗಳ ಬಗ್ಗೆ ತಿಳಿಸಿದಾಗ, ಖದೀಜರಿಗೆ ಮುಹಮ್ಮದ್‌ರಲ್ಲಿ ಇಷ್ಟವಾಯಿತು.[೪೦] ತನ್ನ ಗೆಳತಿಯ ಮೂಲಕ ತನ್ನ ಆಸೆಯನ್ನು ಮುಹಮ್ಮದ್‌ಗೆ ತಿಳಿಸಿದಾಗ, ಮುಹಮ್ಮದ್ ಕೂಡ ಒಪ್ಪಿಕೊಂಡರು.[೩೮] ಖದೀಜರ ಚಿಕ್ಕಪ್ಪ ಅಮ್ರ್ ಬಿನ್ ಅಸದ್ ವಿವಾಹ ನೆರವೇರಿಸಿಕೊಟ್ಟರು. ಆಗ ಮುಹಮ್ಮದ್‌ರಿಗೆ 25 ವರ್ಷ ಪ್ರಾಯವಾಗಿದ್ದರೆ ಖದೀಜರಿಗೆ 40 ವರ್ಷ ಪ್ರಾಯ. 65ನೇ ವಯಸ್ಸಿನಲ್ಲಿ ಖದೀಜ ಮರಣಹೊಂದುವ ತನಕ ಈ ದಾಂಪತ್ಯ ಜೀವನ ಮುಂದುವರಿದಿತ್ತು. ಅಲ್ಲಿಯ ತನಕ ಮುಹಮ್ಮದ್ ಬೇರೆ ವಿವಾಹವಾಗಿರಲಿಲ್ಲ.[೩೮] ಈ ದಾಂಪತ್ಯದಲ್ಲಿ ಮುಹಮ್ಮದ್‌ರಿಗೆ ಏಳು ಮಕ್ಕಳು ಹುಟ್ಟಿದರು. ನಾಲ್ಕು ಹೆಣ್ಣು ಮತ್ತು ಮೂರು ಗಂಡು. ಕಾಸಿಂ, ರುಕಯ್ಯ, ಝೈನಬ್, ಉಮ್ಮು ಕುಲ್ಸೂಂ, ಫಾತಿಮ, ಅಬ್ದುಲ್ಲಾ (ತಯ್ಯಿಬ್) ಮತ್ತು ತಾಹಿರ್. ಗಂಡು ಮಕ್ಕಳೆಲ್ಲರೂ ಎಳೆ ವಯಸ್ಸಿನಲ್ಲೇ ಅಸುನೀಗಿದರು. ಹೆಣ್ಣು ಮಕ್ಕಳಲ್ಲಿ ಫಾತಿಮ ಹೊರತು ಉಳಿದವರೆಲ್ಲರೂ ಮುಹಮ್ಮದ್ ಬದುಕಿರುವಾಗಲೇ ನಿಧನರಾದರು.[೩೮]

ಪ್ರಪ್ರಥಮ ದೇವವಾಣಿಸಂಪಾದಿಸಿ

 
ಮಕ್ಕಾದಲ್ಲಿರುವ ಜಬಲ್ ನೂರ್ ಪರ್ವತ

ಮುಹಮ್ಮದ್‌ರಿಗೆ 40ರ ಪ್ರಾಯವಾಗುವ ಹೊತ್ತಿಗೆ[೪೨] ಅವರಿಗೆ ಏಕಾಂತವಾಸವು ಇಷ್ಟವಾಗತೊಡಗಿತು. ಅವರು ಬುತ್ತಿ ಕಟ್ಟಿಕೊಂಡು ಮಕ್ಕಾದ ಸಮೀಪದ ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆಗೆ ಹೋಗಿ ಧ್ಯಾನ ನಿರತರಾಗುತ್ತಿದ್ದರು.[೪೩] ಕೆಲವೊಮ್ಮೆ ಅವರು ವಾರಗಳ ಕಾಲ ಮನೆಗೆ ಹಿಂದಿರುಗುತ್ತಿರಲಿಲ್ಲ. ಆಗ ಅವರಿಗೆ ಆಹಾರವನ್ನು ಸ್ವತಃ ಖದೀಜರೇ ತಲುಪಿಸಿಕೊಡುತ್ತಿದ್ದರು.[೪೪] ಹೀಗೆ ಒಮ್ಮೆ ಅವರು ಗುಹೆಯಲ್ಲಿದ್ದಾಗ, ದೇವದೂತ ಗೇಬ್ರಿಯಲ್ ಅವರ ಮುಂದೆ ಪ್ರತ್ಯಕ್ಷರಾಗಿ "ಓದು" ಎಂದರು.[೪೫] ಮುಹಮ್ಮದ್, ನನಗೆ ಓದು-ಬರಹ ತಿಳಿದಿಲ್ಲ ಎಂದು ಉತ್ತರಿಸಿದರೂ, ಆ ದೇವದೂತರು ಅವರನ್ನು ಬಲವಾಗಿ ಅಪ್ಪಿಹಿಡಿದು ನಂತರ ಸಡಿಲು ಬಿಟ್ಟು ಪುನಃ "ಓದು" ಎಂದರು. ಮುಹಮ್ಮದ್ ಪುನಃ ಅದೇ ಉತ್ತರ ಕೊಟ್ಟರು. ಆಗಲೂ ದೇವದೂತರು ಅವರನ್ನು ಅಪ್ಪಿ ಹಿಡಿದು, ಮೂರನೇ ಬಾರಿ ಓದಲು ಹೇಳಿದಾಗ ಮುಹಮ್ಮದ್ ಭಯದಿಂದ, ಏನು ಓದಬೇಕು ಎಂದು ಕೇಳಿದರು. ಆಗ ದೇವದೂತರು ಕುರ್‌ಆನ್‌ನ ಈ ಶ್ಲೋಕಗಳನ್ನು ಓದಿ ಕೊಟ್ಟರು.[೪೪]

"ಸೃಷ್ಟಿಸಿದ ನಿನ್ನ ದೇವರ ನಾಮದಲ್ಲಿ ಓದು. ಅವನು ಮನುಷ್ಯನನ್ನು ಹೆಪ್ಪುಗಟ್ಟಿದ ರಕ್ತದಿಂದ ಸೃಷ್ಟಿಸಿದನು. ಓದು, ನಿನ್ನ ದೇವರು ಬಹಳ ಉದಾರಿಯಾಗಿದ್ದಾನೆ. ಮನುಷ್ಯನು ತಿಳಿಯದಿರುವುದನ್ನು ಅವನು ಮನುಷ್ಯನಿಗೆ ಕಲಿಸಿದ್ದಾನೆ."

 
ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆ. ಮುಹಮ್ಮದ್‌ರಿಗೆ ಮೊಟ್ಟಮೊದಲು ದೇವವಾಣಿ ಅವತೀರ್ಣವಾದದ್ದು ಈ ಗುಹೆಯಲ್ಲಿ ಎಂದು ನಂಬಲಾಗುತ್ತದೆ.

ಭಯದಿಂದ ನಡುಗುತ್ತಾ ಮುಹಮ್ಮದ್ ಖದೀಜರ ಬಳಿಗೆ ಓಡೋಡಿ ಬಂದರು.[೪೩] "ನನ್ನನ್ನು ಹೊದಿಯಿರಿ, ನನ್ನನ್ನು ಹೊದಿಯಿರಿ" ಎಂದು ಅವರು ಹೇಳುತ್ತಿದ್ದರು. ಖದೀಜ ಗಂಡನನ್ನು ಕಂಬಳಿಯಿಂದ ಹೊದ್ದು ಮಲಗಿಸಿದರು. ನಂತರ ಅವರ ಭಯ ನಿವಾರಣೆಯಾದಾಗ ವಿಷಯವೇನೆಂದು ಕೇಳಿದರು. ಮುಹಮ್ಮದ್ ನಡುಗುತ್ತಲೇ ನಡೆದ ಘಟನೆಯನ್ನು ವಿವರಿಸಿದರು. ನನಗೆ ನನ್ನ ಪ್ರಾಣದ ಬಗ್ಗೆ ಭಯವಾಗುತ್ತಿದೆ ಎಂದರು. ಆಗ ಖದೀಜ, "ಇಲ್ಲ, ನಿಮಗೇನೂ ಆಗಲ್ಲ, ದೇವರು ನಿಮ್ಮನ್ನು ಯಾವತ್ತೂ ನಿಂದಿಸಲಾರ, ನೀವು ಕುಟುಂಬ ಸಂಬಂಧಗಳನ್ನು ಕಾಪಾಡುತ್ತೀರಿ, ಕಷ್ಟಗಳನ್ನು ಸಹಿಸುತ್ತೀರಿ, ಬಡವರಿಗೆ ನೆರವಾಗುತ್ತೀರಿ, ಅನಾಹುತಗಳು ಸಂಭವಿಸುವಾಗ ನೆರವಿಗೆ ಧಾವಿಸುತ್ತೀರಿ" ಎನ್ನುತ್ತಾ ಗಂಡನನ್ನು ಸಾಂತ್ವನಪಡಿಸಿದರು.[೪೪] ನಂತರ ಗಂಡನನ್ನು ವರಕ ಬಿನ್ ನೌಫಲ್ ಎಂಬವರ ಬಳಿಗೆ ಕರೆದುಕೊಂಡು ಹೋದರು. ವರಕ ಒಬ್ಬ ಕ್ರಿಶ್ಚಿಯನ್ ವಿದ್ವಾಂಸರಾಗಿದ್ದು ಹೀಬ್ರೂ ಬೈಬಲನ್ನು ಅರೇಬಿಕ್ ಭಾಷೆಗೆ ಅನುವಾದ ಮಾಡಿದ್ದರು. ಮುಹಮ್ಮದ್ ನಡೆದ ಘಟನೆಯನ್ನು ತಿಳಿಸಿದಾಗ ವರಕ ಹೇಳಿದರು: "ಭಯಪಡಬೇಡಿ. ಅದು ಮೋಸೆಯ ಬಳಿಗೆ ಬಂದ ಅದೇ ದೇವದೂತರು. ನೀವು ಶೀಘ್ರವೇ ಪ್ರವಾದಿಯಾಗುತ್ತೀರಿ." ನಂತರ ಅವರು ಹೇಳಿದರು: "ನೀವು ಪ್ರವಾದಿಯಾಗುವ ಆ ಸಂದರ್ಭದಲ್ಲಿ ನಾನು ಜೀವಂತವಿರುತ್ತಿದ್ದರೆ, ಮತ್ತು ನಿಮ್ಮ ಜನರು ನಿಮ್ಮನ್ನು ಊರಿನಿಂದ ಹೊರಹಾಕುವಾಗ ನಾನು ಜೀವಂತವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಇದನ್ನು ಕೇಳಿದ ಮುಹಮ್ಮದ್ ಆಶ್ಚರ್ಯದಿಂದ "ನನ್ನ ಜನರು ನನ್ನನ್ನು ಹೊರಹಾಕುವರೇ?" ಎಂದು ಕೇಳಿದರು. ವರಕ ಹೇಳಿದರು: "ಹೌದು! ನೀವು ತರುವಂತಹ ಸಂದೇಶವನ್ನು ತಂದ ಯಾವುದೇ ಪ್ರವಾದಿಯನ್ನೂ ಅವರ ಜನರು ಹೊರಹಾಕದೆ ಬಿಟ್ಟಿಲ್ಲ. ನಿಮ್ಮನ್ನೂ ಹೊರಹಾಕುತ್ತಾರೆ. ಆ ಕಾಲದಲ್ಲಿ ನಾನು ಜೀವಂತವಿದ್ದರೆ ನಾನು ನಿಮಗೆ ಖಂಡಿತ ಸಹಾಯ ಮಾಡುವೆನು." ಆದರೆ ವರಕ ಹೆಚ್ಚು ಕಾಲ ಬದುಕಲಿಲ್ಲ.[೪೪]

ಮುಹಮ್ಮದ್‌ಗೆ ಮೊಟ್ಟಮೊದಲು ದೇವವಾಣಿ ಅವತೀರ್ಣವಾದದ್ದು ಯಾವಾಗ ಎಂಬ ಬಗ್ಗೆ ಗೊಂದಲಗಳಿವೆ. ಸರಿಯಾದ ಅಭಿಪ್ರಾಯ ಪ್ರಕಾರ ಅದು ರಮದಾನ್ ತಿಂಗಳ 21,[೪೩] ಎನ್ನಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಕ್ರಿ.ಶ. 610 ಆಗಸ್ಟ್ 10.[೪೩]

ನಂತರ ಕೆಲವು ದಿನಗಳ ತನಕ[೪೬] (ಕೆಲವರು ಹೇಳುವ ಪ್ರಕಾರ 6 ತಿಂಗಳು) ದೇವವಾಣಿ ಅವತೀರ್ಣವಾಗಲೇ ಇಲ್ಲ. ಅದರ ನಂತರ 23 ವರ್ಷಗಳ ಕಾಲ – ಅವರ ಮರಣದ ವರೆಗೆ – ದೇವವಾಣಿ ನಿರಂತರವಾಗಿ ಅವತೀರ್ಣವಾಗುತ್ತಲೇ ಇತ್ತು.[೪೭] ದೇವವಾಣಿ ಅವತೀರ್ಣವಾಗುತ್ತಿದ್ದ ರೂಪವನ್ನು ಮುಹಮ್ಮದ್ ಹೀಗೆ ವಿವರಿಸುತ್ತಿದ್ದರು: "ಕೆಲವೊಮ್ಮೆ ಅದು ಗಂಟೆಯ ನಾದದಂತೆ ಕೇಳಿಬರುತ್ತಿತ್ತು. ಅದನ್ನು ಸಹಿಸಲು ನನಗೆ ಬಹಳ ಕಷ್ಟವಾಗುತ್ತಿತ್ತು. ನಾನು ಅದನ್ನು ಕಂಠಪಾಠ ಮಾಡುವಷ್ಟರಲ್ಲಿ ಅದು ಮುಗಿದುಬಿಡುತ್ತಿತ್ತು. ಕೆಲವೊಮ್ಮೆ ದೇವದೂತರು ಮನುಷ್ಯರೂಪದಲ್ಲಿ ಬರುತ್ತಿದ್ದರು. ಆಗ ಅವರು ನನ್ನಲ್ಲಿ ಮಾತನಾಡುತ್ತಿದ್ದರು. ನಾನು ಅವರು ಹೇಳಿದ್ದನ್ನು ಕಂಠಪಾಠ ಮಾಡುತ್ತಿದ್ದೆ."[೪೮] ಅವರ ಮಡದಿ ಆಯಿಶ ಹೇಳುತ್ತಿದ್ದರು: "ತೀವ್ರ ಚಳಿಯಿರುವ ದಿನಗಳಲ್ಲಿ ಮುಹಮ್ಮದ್‌ರಿಗೆ ದೇವವಾಣಿ ಅವತೀರ್ಣವಾಗುವುದನ್ನು ನಾನು ಕಂಡಿದ್ದೇನೆ. ಅದು ಮುಗಿಯುವಷ್ಟರಲ್ಲಿ ಅವರ ಹಣೆಯಲ್ಲಿ ಬೆವರು ಹರಿಯುತ್ತಿತ್ತು!"[೪೯]

ಮತ ಪ್ರಚಾರದ ಆರಂಭಸಂಪಾದಿಸಿ

ಮುಹಮ್ಮದ್ ತನ್ನ ಆಪ್ತರನ್ನು ಕರೆದು ಅವರಿಗೆ ದೇವರ ಸಂದೇಶವನ್ನು ತಿಳಿಸಿದರು. ಮೊತ್ತಮೊದಲು ಅವರ ಸಂದೇಶದಲ್ಲಿ ನಂಬಿಕೆಯಿಟ್ಟವರು ಅವರ ಪತ್ನಿ ಖದೀಜ ಬಿಂತ್ ಖುವೈಲಿದ್.[೫೦][೫೧][೫೨] ಎರಡನೆಯದಾಗಿ ನಂಬಿಕೆಯಿಟ್ಟವರು ಅಬೂತಾಲಿಬರ ಮಗ ಅಲಿ. ಆಗ ಅವರು ಹತ್ತು ವರ್ಷದ ಹುಡುಗ.[೫೩] ಅಬೂತಾಲಿಬರ ಬಡತನವನ್ನು ಕಂಡು ಅಲಿಯನ್ನು ಸಾಕುವ ಜವಾಬ್ದಾರಿಯನ್ನು ಮುಹಮ್ಮದ್ ವಹಿಸಿಕೊಂಡಿದ್ದರು.[೫೦] ಮೂರನೆಯದಾಗಿ ನಂಬಿಕೆಯಿಟ್ಟದ್ದು ಅವರ ದತ್ತುಪುತ್ರ ಝೈದ್ ಬಿನ್ ಹಾರಿಸ ಎಂದು ಹೇಳಲಾಗುತ್ತದೆ.[೫೦] ಇದರ ನಂತರ ಅವರ ಆಪ್ತ ಸ್ನೇಹಿತರಾದ ಅಬೂಬಕರ್ ಬಿನ್ ಅಬೂ ಕುಹಾಫ ಮುಹಮ್ಮದ್‌ರ ಧರ್ಮವನ್ನು ಸ್ವೀಕರಿಸಿದರು.[೫೦] ಅಬೂಬಕರ್ ನಂತರ ಸುಮ್ಮನಿರಲಿಲ್ಲ. ತನ್ನ ಆಪ್ತರು ಮತ್ತು ಹಿತೈಷಿಗಳಿಗೂ ಅದನ್ನು ತಿಳಿಸಿದರು. ಹೀಗೆ ಉಸ್ಮಾನ್ ಬಿನ್ ಅಫ್ಫಾನ್, ಅಬ್ದುರ್‍ರಹ್ಮಾನ್ ಬಿನ್ ಔಫ್, ತಲ್ಹ ಬಿನ್ ಉಬೈದುಲ್ಲಾ, ಝುಬೈರ್ ಬಿನ್ ಅವ್ವಾಂ, ಸಅದ್ ಬಿನ್ ಅಬೂ ವಕ್ಕಾಸ್ ಮುಂತಾದವರು[೫೪] ಇಸ್ಲಾಂ ಧರ್ಮಕ್ಕೆ ಬಂದರು.[೫೦][೫೫]

ಮುಹಮ್ಮದ್ ಮೂರು ವರ್ಷಗಳ ಕಾಲ ಬಹಳ ರಹಸ್ಯವಾಗಿಯೇ ಮತಪ್ರಚಾರ ಮಾಡುತ್ತಿದ್ದರು.[೫೬][೫೭] ಅವರಿಗೆ ಮೊತ್ತಮೊದಲು ಬಂದ ದೈವಾಜ್ಞೆಯು ನಮಾಝ್‌ನ ಬಗ್ಗೆಯಾಗಿತ್ತು ಎನ್ನಲಾಗುತ್ತದೆ.[೫೮] ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಬೆಟ್ಟಕ್ಕೆ ಹೋಗಿ ನಮಾಝ್ ಮಾಡಿ ಬರುತ್ತಿದ್ದರು.[೫೯] ಅವರ ಅನುಯಾಯಿಗಳ ಸಂಖ್ಯೆ 30ಕ್ಕೆ ತಲುಪಿದಾಗ ಅವರು ಸಫಾ ಬೆಟ್ಟದ ಬಳಿಯಿದ್ದ ಅರ್ಕಂ ಬಿನ್ ಅಬೂ ಅರ್ಕಂರ ಮನೆಯನ್ನು ತಮ್ಮ ಧರ್ಮ ಪ್ರಚಾರದ ಕೇಂದ್ರವನ್ನಾಗಿ ಮಾಡಿ ಅಲ್ಲಿಯೇ ನಮಾಝ್ ಉಪದೇಶ ಮುಂತಾದಗಳನ್ನು ಮಾಡುತ್ತಿದ್ದರು.[೬೦]

 
ಮಕ್ಕಾ ಮಸೀದಿಯ ಒಳಾಂಗಣದಿಂದ ಕಾಣುವ ಸಫಾ ಬೆಟ್ಟದ ನೋಟ. ಮುಹಮ್ಮದ್ ಇದರ ಮೇಲೆ ನಿಂತು ಕುರೈಷರಿಗೆ ದೇವರ ಸಂದೇಶವನ್ನು ತಿಳಿಸಿದರು.

ಮೂರು ವರ್ಷಗಳು ಕಳೆದಾಗ, ಬಹಿರಂಗವಾಗಿ ಧರ್ಮಪ್ರಚಾರ ಮಾಡುವಂತೆ ಅವರಿಗೆ ದೈವಾಜ್ಞೆ ಬಂತು.[೬೧] ಅವರು ಮಕ್ಕಾದ ಸಫಾ ಬೆಟ್ಟವನ್ನು ಹತ್ತಿ ಕುರೈಷ್ ಗೋತ್ರದವರನ್ನು ಕೂಗಿ ಕರೆದರು.[೫೬] ಕುರೈಷರು ನೆರೆದು ವಿಷಯ ಏನೆಂದು ಕೇಳಿದಾಗ, ಮುಹಮ್ಮದ್ ಹೇಳಿದರು: "ಈ ಬೆಟ್ಟದ ಹಿಂಭಾಗದಿಂದ ಒಂದು ಸೇನೆ ನಿಮ್ಮ ಮೇಲೆ ದಾಳಿ ಮಾಡಲು ಬರುತ್ತಿದೆ ಎಂದು ನಾನು ಹೇಳಿದರೆ ನೀವು ನನ್ನ ಮಾತನ್ನು ನಂಬುತ್ತೀರೋ ಇಲ್ಲವೋ?"[೬೨] ಜನರು ಒಕ್ಕೊರಳಿನಿಂದ, "ಮುಹಮ್ಮದ್! ನಿನ್ನ ಮೇಲೆ ನಮಗೆ ನಂಬಿಕೆಯಿದೆ. ನೀನು ಈ ತನಕ ಸುಳ್ಳು ಹೇಳಿದ ಇತಿಹಾಸವಿಲ್ಲ." ಆಗ ಮುಹಮ್ಮದ್ ಹೇಳಿದರು: "ನಿಮಗೆ ಮುಂದೆ ಬರಲಿರುವ ಒಂದು ಕಠೋರ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ.[೬೨] ಓ ಅಬ್ದುಲ್ ಮುತ್ತಲಿಬರ ಮಕ್ಕಳೇ! ಓ ಅಬ್ದ್ ಮನಾಫರ ಮಕ್ಕಳೇ! ಓ ಝುಹ್ರರ ಮಕ್ಕಳೇ! ನನ್ನ ಹತ್ತಿರದ ಸಂಬಂಧಿಕರಿಗೆ ಈ ಎಚ್ಚರಿಕೆಯನ್ನು ತಿಳಿಸುವಂತೆ ದೇವರು ನನಗೆ ಆಜ್ಞಾಪಿಸಿದ್ದಾನೆ. ನಾನು ನಿಮ್ಮಿಂದ ಏನನ್ನೂ ಕೇಳುವುದಿಲ್ಲ. ನನಗೆ ನಿಮ್ಮ ಹಣ ಸಂಪತ್ತು ಏನೂ ಬೇಡ. ನಾನು ಒಂದು ಮಾತನ್ನು ಮಾತ್ರ ಹೇಳುತ್ತೇನೆ. ನೀವು ಆರಾಧಿಸುತ್ತಿರುವ ವಿಗ್ರಹಗಳು, ಮೂರ್ತಿಗಳು, ಮರಗಳು, ಕಲ್ಲುಗಳು ಯಾವುದೂ ದೇವರಲ್ಲ. ನಿಮ್ಮ ಸೃಷ್ಟಿಕರ್ತನೇ ನಿಮ್ಮ ದೇವರು. ನೀವು ನಿಮ್ಮ ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿರಿ. ಆರಾಧನೆಗೆ ಅರ್ಹನಾಗಿರುವುದು ಅವನು ಮಾತ್ರ." ಮುಹಮ್ಮದ್ ಇಷ್ಟು ಹೇಳುವಷ್ಟರಲ್ಲಿ ಅವರ ದೊಡ್ಡಪ್ಪ ಅಬೂಲಹಬ್ ಎದ್ದು ನಿಂತು, "ಓ ಮುಹಮ್ಮದ್! ನೀನು ನಾಶವಾಗಿ ಹೋಗು. ಇದನ್ನು ಹೇಳಲಿಕ್ಕಾ ನೀನು ನಮ್ಮನ್ನು ಇಲ್ಲಿ ಒಟ್ಟುಗೂಡಿಸಿದ್ದು?"[೬೩] ಎಂದು ಕೋಪದಿಂದಲೇ ಎದ್ದು ಹೋದರು. ಆಗ ದೇವರು ಈ ಶ್ಲೋಕಗಳನ್ನು ಅವತೀರ್ಣಗೊಳಿಸಿದನು:[೬೨]

"ಅಬೂಲಹಬನ ಎರಡು ಕೈಗಳು ನಾಶವಾಗಲಿ. ಅವನು ಕೂಡ ನಾಶವಾದನು."

ಮುಹಮ್ಮದ್ ಬಹಿರಂಗವಾಗಿ ಮತಪ್ರಚಾರ ಆರಂಭಿಸಿದ ದಿನದಿಂದಲೇ ಅವರ ಮತ್ತು ಮಕ್ಕಾದ ಕುರೈಷ್ ಗೋತ್ರದವರ ಮಧ್ಯೆ ಶತ್ರುತ್ವ ಆರಂಭವಾಯಿತು. ಮೊದಮೊದಲು ಅವರು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.[೫೯] ಆದರೆ ಮುಹಮ್ಮದ್ ಯಾವಾಗ ಅವರು ಪೂಜಿಸುತ್ತಿರುವ ದೇವರುಗಳು ದೇವರಲ್ಲ, ನಿಜವಾದ ದೇವರು ಸೃಷ್ಟಿಕರ್ತ ಮಾತ್ರ ಎಂದು ಹೇಳತೊಡಗಿದರೋ ಆಗ ಕುರೈಷ್ ಸರದಾರರು ಎಚ್ಚೆತ್ತರು.[೫೯] ಅವರು ಅದನ್ನು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಅಡಿಪಾಯಕ್ಕೆ ಬೆದರಿಕೆಯಾಗಿ ಕಂಡರು.[೬೪] ಏಕೆಂದರೆ ಮುಹಮ್ಮದ್‌ರ ಆಂದೋಲನಕ್ಕೆ ಸಮಾಜದ ಎಲ್ಲ ವರ್ಗಗಳ ಜನರೂ ಸೇರುತ್ತಿದ್ದರು. ಅವರಲ್ಲಿ ಅಬೂಬಕರ್, ಉಸ್ಮಾನ್‌ರಂತಹ ಉನ್ನತ ಕುಲದವರು ಮತ್ತು ಶ್ರೀಮಂತರಿದ್ದರು. ಬಿಲಾಲ್‌ರಂತಹ ತುಳಿತಕ್ಕೊಳಗಾದ ಗುಲಾಮರಿದ್ದರು. ಈ ಆಂದೋಲನವು ಮಕ್ಕಾದ ಚಿತ್ರವನ್ನೇ ಬದಲಿಸಿಬಿಬಹುದೆಂಬ ಆತಂಕ ಕುರೈಷ್ ಗೋತ್ರದವರನ್ನು ಕಾಡುತ್ತಿತ್ತು.[೬೫]

ಕುರೈಷರು ಈ ಆಂದೋಲನವನ್ನು ಹಿಂಸಾತ್ಮಕವಾಗಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದರು.[೬೬] ಅವರು ಮುಹಮ್ಮದ್‌ರ ಅನುಯಾಯಿಗಳನ್ನು — ವಿಶೇಷವಾಗಿ ತುಳಿತಕ್ಕೊಳಗಾದವರನ್ನು — ಸಾರ್ವಜನಿಕವಾಗಿ ಹಿಂಸಿಸತೊಡಗಿದರು.[೬೭][೬೮] ಮುಹಮ್ಮದ್‌ರ ಶಿಷ್ಯ ಇಬ್ನ್ ಮಸ್‌ಊದ್ ಹೇಳುತ್ತಾರೆ: "ಮೊತ್ತಮೊದಲು ಏಳು ಜನರು ನಾವು ಇಸ್ಲಾಂ ಧರ್ಮಕ್ಕೆ ಸೇರಿದ್ದೇವೆಂದು ಬಹಿರಂಗವಾಗಿ ಘೋಷಿಸಿದರು. ಮುಹಮ್ಮದ್, ಅಬೂಬಕರ್, ಬಿಲಾಲ್, ಖಬ್ಬಾಬ್, ಸುಹೈಬ್, ಅಮ್ಮಾರ್ ಮತ್ತು ಸುಮಯ್ಯ. ಮುಹಮ್ಮದ್ ಮತ್ತು ಅಬೂಬಕರ್‌ರಿಗೆ ಬೆಂಗಾವಲಾಗಿ ಅವರ ಗೋತ್ರವಿತ್ತು. ಆದ್ದರಿಂದ ಅವರನ್ನು ಹಿಂಸಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಉಳಿದವರು ಗುಲಾಮರಾಗಿದ್ದರು. ಅವರನ್ನು ಕುರೈಷರು ತೀವ್ರವಾಗಿ ಹಿಂಸಿಸಿದರು. ಕುರೈಷ್ ಮುಖಂಡ ಅಬೂಜಹಲ್ ಸುಮಯ್ಯರಿಗೆ ತೀವ್ರ ಹಿಂಸೆ ನೀಡಿ ಕೊನೆಗೆ ಭರ್ಚಿಯಿಂದ ತಿವಿದು ಕೊಂದುಬಿಟ್ಟ."[೬೯] ಮುಹಮ್ಮದ್‌ರಿಗೆ ಬೆಂಗಾವಲಾಗಿ ಅವರ ಗೋತ್ರವಿದ್ದರೂ ಸಹ, ಕುರೈಷರು ಅವಕಾಶ ಸಿಕ್ಕಿದಾಗಲೆಲ್ಲಾ ಅವರನ್ನು ನಿಂದಿಸುತ್ತಲೂ ಹಿಂಸಿಸುತ್ತಲೂ ಇದ್ದರು.[೭೦] ಒಮ್ಮೆ ಮುಹಮ್ಮದ್ ಕಅಬಾದಲ್ಲಿ ನಮಾಝ್ ಮಾಡಲು ನಿಂತಿದ್ದಾಗ, ಉಕ್ಬ ಬಿನ್ ಅಬೂ ಮುಈತ್ ಅವರ ಕೊರಳಿಗೆ ಶಾಲನ್ನು ಬಿಗಿದು ಉಸಿರು ಕಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದರು. ಆಗ ಅಬೂಬಕರ್ ಎಲ್ಲಿಂದಲೋ ಓಡಿ ಬಂದು ಅವರನ್ನು ಪಾರು ಮಾಡಿದರು.[೭೧]

ಮುಹಮ್ಮದ್ ಮತ್ತು ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿಸಿದವರು ಅಬೂಜಹಲ್, ಅಬೂಲಹಬ್ (ಮುಹಮ್ಮದ್‌ರ ದೊಡ್ಡಪ್ಪ), ಅಸ್ವದ್ ಬಿನ್ ಅಬ್ದ್ ಯಗೂಸ್, ಹಾರಿಸ್ ಬಿನ್ ಕೈಸ್ ಬಿನ್ ಅದೀ, ವಲೀದ್ ಬಿನ್ ಮುಗೀರ, ಉಮಯ್ಯ ಬಿನ್ ಖಲಫ್, ಉಕ್ಬ ಬಿನ್ ಅಬೂ ಮುಈತ್ ಮುಂತಾದವರು. ಇವರ ಹಿಂಸೆ ತಾಳಲಾಗದೆ ಒಮ್ಮೆ ಮುಹಮ್ಮದ್ ಇವರ ವಿರುದ್ಧ ದೇವರಲ್ಲಿ ಪ್ರಾರ್ಥಿಸಿದ್ದರು.

ಹಿಂಸೆಯಿಂದ ಇದನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದರಿತಾಗ ಕುರೈಷರು ಪರ್ಯಾಯ ಮಾರ್ಗಗಳನ್ನು ಶೋಧಿಸಿದರು. ಅವರು ಮುಹಮ್ಮದ್‌ರ ಮನವೊಲಿಸಲು ಉತ್ಬ ಬಿನ್ ರಬೀಅ ಎಂಬ ತಮ್ಮ ಒಬ್ಬ ಮುಖಂಡನನ್ನು ಕಳುಹಿಸಿದರು.[೭೨] ಉತ್ಬ ಮುಹಮ್ಮದ್‌ರ ಬಳಿಗೆ ಹೋಗಿ ಹೋಗಿ, "ಮುಹಮ್ಮದ್! ನಿನಗೆ ಹಣದ ಆವಶ್ಯಕತೆಯಿದ್ದರೆ ನಾವೆಲ್ಲರೂ ನಮ್ಮ ಸಂಪತ್ತಿನಿಂದ ಒಂದು ಭಾಗವನ್ನು ನೀಡಿ ನಿನ್ನನ್ನು ಶ್ರೀಮಂತನನ್ನಾಗಿ ಮಾಡುತ್ತೇವೆ, ನಿನಗೆ ಗೌರವ ಬೇಕಾಗಿದ್ದರೆ, ನಾವು ನಿನ್ನನ್ನು ನಮ್ಮ ಸರದಾರನನ್ನಾಗಿ ಮಾಡುತ್ತೇವೆ, ನಿನ್ನ ಮಾತನ್ನು ನಾವು ಮೀರುವುದಿಲ್ಲ, ನಿನ್ನ ಅಧಿಕಾರ ಬೇಕಾಗಿದ್ದರೆ, ನಾವು ನಿನ್ನನ್ನು ನಮ್ಮ ರಾಜನನ್ನಾಗಿ ಮಾಡುತ್ತೇವೆ, ಇನ್ನು ನಿನಗೆ ಏನಾದರೂ ದೆವ್ವದ ತೊಂದರೆಯಿದ್ದರೆ ನಾವು ಅತ್ಯಂತ ನುರಿತ ವೈದ್ಯರನ್ನು ತಂದು ಚಿಕಿತ್ಸೆ ಮಾಡಿಸುತ್ತೇವೆ."[೭೨] ಉತ್ಬ ಮಾತು ಮುಗಿಸಿದ ಬಳಿಕ ಮುಹಮ್ಮದ್ ಕೇಳಿದರು: "ನೀನು ಹೇಳಬೇಕಾದುದನ್ನೆಲ್ಲಾ ಹೇಳಿರುವೆ. ಈಗ ನನ್ನ ಮಾತು ಕೇಳು." ನಂತರ ಮುಹಮ್ಮದ್ ಕುರ್‌ಆನ್ ಶ್ಲೋಕಗಳನ್ನು ಪಠಿಸತೊಡಗಿದರು. ಕುರ್‌ಆನನ್ನು ಕಿವಿಗೊಟ್ಟು ಕೇಳಿದ ನಂತರ ಉತ್ಬ ಕುರೈಷರ ಬಳಿಗೆ ಬಂದು ಹೇಳಿದರು:[೭೩] "ಓ ಕುರೈಷ್ ಸರದಾರರೇ! ನನ್ನ ಮಾತನ್ನು ಕೇಳಿ. ಮುಹಮ್ಮದ್‌ನನ್ನು ಅವನ ಪಾಡಿಗೆ ಬಿಟ್ಟು ಬಿಡಿ. ಅವನನ್ನು ಸಂಪೂರ್ಣ ನಿರ್ಲಕ್ಷಿಸಿ. ಏಕೆಂದರೆ ದೇವರಾಣೆ! ಅವರು ಕೆಲವು ಶ್ಲೋಕಗಳನ್ನು ಪಠಿಸುವುದನ್ನು ನಾನು ಕೇಳಿದೆ. ಅವು ಕ್ರಾಂತಿಕಾರಿ ಶ್ಲೋಕಗಳಾಗಿವೆ. ಅರಬ್ಬರಲ್ಲಿ ಯಾರಾದರೂ ಮುಹಮ್ಮದ್‌ನ ಕಥೆ ಮುಗಿಸಿದರೆ ನಿಮ್ಮ ಕೆಲಸ ಸುಲಭವಾಯಿತು. ಇನ್ನು ಮುಹಮ್ಮದ್ ಅರಬ್ಬರನ್ನು ಗೆದ್ದು ಸಾಮ್ರಾಜ್ಯ ಸ್ಥಾಪಿಸಿದರೆ ಅದು ನಿಮ್ಮ ಸಾಮ್ರಾಜ್ಯವೂ ಆಗುತ್ತದೆ. ಅವರ ಪೌರುಷ ನಿಮ್ಮ ಪೌರುಷವೂ ಆಗುತ್ತದೆ."[೭೪][೭೫]

ಕುರೈಷರು ಹಲವಾರು ವಿಧಗಳಲ್ಲಿ ಮುಹಮ್ಮದ್‌ರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೂ ಯಶಸ್ವಿಯಾಗಲಿಲ್ಲ. ಕೊನೆಗೆ ಅವರು ಮುಹಮ್ಮದ್‌ರ ದೊಡ್ಡಪ್ಪ ಅಬೂತಾಲಿಬರ ಬಳಿಗೆ ಹೋಗಲು ನಿರ್ಧರಿಸಿದರು.[೭೬] ಅಬೂತಾಲಿಬ್ ಮುಹಮ್ಮದ್‌ರ ಧರ್ಮವನ್ನು ಸ್ವೀಕರಿಸಿರಲಿಲ್ಲ.[೭೭] ಕುರೈಷರ ನಿಯೋಗವು ಪದೇ ಪದೇ ಅಬೂತಾಲಿಬರನ್ನು ಭೇಟಿಯಾಗಿ ಮುಹಮ್ಮದ್‌ರ ಮನವೊಲಿಸಲು ವಿನಂತಿಸಿದರು.[೬೪] ಕೊನೆಗೆ ಗತ್ಯಂತರವಿಲ್ಲದೆ ಅಬೂತಾಲಿಬ್ ಮುಹಮ್ಮದ್‌ರನ್ನು ಕರೆದು ಹೇಳಿದರು: "ಸಹೋದರ ಪುತ್ರ! ಕುರೈಷ್ ಗೋತ್ರದವರು ನನ್ನ ಬಳಿಗೆ ಬಂದಿದ್ದರು. ಅವರು ನನಗೆ ದೊಡ್ಡ ಹೊಣೆಗಾರಿಕೆಯನ್ನು ಹೊರಿಸಿದ್ದಾರೆ. ಅದನ್ನು ಹೊರಲು ನನಗೆ ಸಾಧ್ಯವಾಗುತ್ತಿಲ್ಲ. ಮಗೂ! ನಿನ್ನ ಜನರನ್ನು ಬಿಟ್ಟುಬಿಡು. ಅವರಿಗೆ ಇಷ್ಟವಿಲ್ಲದ ಮಾತುಗಳನ್ನು ಹೇಳಬೇಡ."[೭೮] ದೊಡ್ಡಪ್ಪನ ಮಾತು ಕೇಳಿ ಮುಹಮ್ಮದ್ ಎದೆಗುಂದಲಿಲ್ಲ. ದೊಡ್ಡಪ್ಪ ಕೂಡ ತನ್ನ ಕೈಬಿಟ್ಟರು ಎಂದು ಭಾವಿಸಿ ವಿಚಲಿತರಾಗಲಿಲ್ಲ.[೬೪] ಬದಲಾಗಿ ಅವರು ತಮ್ಮ ದಿಟ್ಟ ನಿರ್ಧಾರವನ್ನು ಹೇಳಿಯೇ ಬಿಟ್ಟರು. "ಪ್ರೀತಿಯ ದೊಡ್ಡಪ್ಪ! ಅವರು ನನ್ನ ಬಲಗೈಯಲ್ಲಿ ಸೂರ್ಯನನ್ನು ಮತ್ತು ಎಡಗೈಯಲ್ಲಿ ಚಂದ್ರನನ್ನು ತಂದಿಟ್ಟರೂ ದೇವರು ಈ ಆಂದೋಲನವನ್ನು ವಿಜಯಗೊಳಿಸುವ ತನಕ ಅಥವಾ ಈ ದಾರಿಯಲ್ಲಿ ನನ್ನ ಸಾವು ಸಂಭವಿಸುವ ತನಕ ನಾನು ಇದರಿಂದ ಹಿಂಜರಿಯುವುದಿಲ್ಲ."[೬೪] ನಂತರ ಮುಹಮ್ಮದ್ ಗಟ್ಟಿಯಾಗಿ ಅಳತೊಡಗಿದರು.[೭೯] ಮನಕರಗಿದ ಅಬೂತಾಲಿಬ್ ಹೇಳಿದರು: "ಸಹೋದರ ಪುತ್ರ! ಸರಿ, ನಿನ್ನ ಆಂದೋಲನವನ್ನು ಮುಂದುವರಿಸು. ನಿನಗೆ ಇಷ್ಟವಿರುವುದನ್ನು ಮಾಡು. ಆದರೆ ದೇವರಾಣೆಗೂ ಸತ್ಯ! ನಾನು ಜೀವಂತವಿರುವ ತನಕ ಅವರು ನಿನ್ನ ಕೂದಲನ್ನು ಮುಟ್ಟಲೂ ನಾನು ಬಿಡಲಾರೆ."[೭೮][೮೦][೮೧]

ಪ್ರಥಮ ಹಿಜ್ರಸಂಪಾದಿಸಿ

ಮನವೊಲಿಸುವ ಪ್ರಯತ್ನ ಕೈಗೂಡದಿದ್ದಾಗ, ಕುರೈಷರು ಪುನಃ ಹಿಂಸೆಯ ದಾರಿಗಿಳಿದರು.[೮೨] ಅವರ ಹಿಂಸೆ ಮಿತಿಮೀರಿದಾಗ ಮುಹಮ್ಮದ್ ತಮ್ಮ ಕೆಲವು ಅನುಯಾಯಿಗಳಿಗೆ ಇಥಿಯೋಪಿಯಾಗೆ ವಲಸೆ ಹೋಗಲು ಅಪ್ಪಣೆ ಕೊಟ್ಟರು.[೮೩] ಅವರು ಹೇಳಿದರು: "ಇಥಿಯೋಪಿಯಾದಲ್ಲಿ ಒಬ್ಬ ದೊರೆಯಿದ್ದಾರೆ. ಅವರು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ದೇವರು ಇಲ್ಲಿ ನೆಮ್ಮದಿಯಿಂದ ಬದುಕುವಂತೆ ಮಾಡುವ ತನಕ ಅಥವಾ ಬೇರೆ ಯಾವುದಾದರೂ ಮಾರ್ಗವನ್ನು ತೋರಿಸುವ ತನಕ ನೀವು ಅಲ್ಲಿಗೆ ವಲಸೆ ಹೋಗಿರಿ."[೮೪] ಹೀಗೆ ಮುಹಮ್ಮದ್‌ರ ಮಗಳು ರುಕಯ್ಯ ಮತ್ತು ಆಕೆಯ ಗಂಡ ಉಸ್ಮಾನ್ ಬಿನ್ ಅಫ್ಫಾನ್‌ರ ಮುಖಂಡತ್ವದಲ್ಲಿ 11 ಪುರುಷರು ಮತ್ತು 4 ಮಹಿಳೆಯರು ಇಥಿಯೋಪಿಯಾಗೆ ಹೊರಟರು. ಇದು ಮುಹಮ್ಮದ್ ಪ್ರವಾದಿಯಾದ 5 ನೇ ವರ್ಷದ[೫೭] ರಜಬ್ ತಿಂಗಳು.

 
ಸೂರ ನಜ್ಮ್ ಅಧ್ಯಾಯದ ಕೊನೆಯ ಶ್ಲೋಕ. ಈ ಶ್ಲೋಕವನ್ನು ಪಠಿಸಿ ಮುಹಮ್ಮದ್ ಸಾಷ್ಟಾಂಗ ಮಾಡಿದಾಗ ನೆರೆದಿದ್ದ ಕುರೈಷರೆಲ್ಲರೂ ಸಾಷ್ಟಾಂಗ ಮಾಡಿದರು.

ಒಮ್ಮೆ ಮಕ್ಕಾದ ಕಅಬಾದ ಬಳಿ ಮುಹಮ್ಮದ್ ಕುರ್‌ಆನಿನ ಸೂರ ನಜ್ಮ್ ಪಠಿಸುತ್ತಿದ್ದರು. ಸುತ್ತಲೂ ಕುರೈಷರು ನೆರೆದಿದ್ದರು. ಅವರು ಈ ತನಕ ಕುರ್‌ಆನ್ ಶ್ಲೋಕಗಳನ್ನು ಅಲಿಸಿರಲಿಲ್ಲ. ಮುಹಮ್ಮದ್ ಸೂರದ ಕೊನೆಯನ್ನು ತಲುಪಿದಾಗ ಸಾಷ್ಟಾಂಗ ಮಾಡಿದರು. ನೆರೆದಿದ್ದ ಪ್ರೇಕ್ಷಕರೆಲ್ಲರೂ ಅವರಿಗರಿವಿಲ್ಲದಂತೆ ಮುಹಮ್ಮದ್‌ರ ಹಿಂದೆ ಸಾಷ್ಟಾಂಗ ಮಾಡಿದರು.[೮೫] ಇದರಿಂದ ಮಕ್ಕಾದ ಕುರೈಷರು ಇಸ್ಲಾಂ ಧರ್ಮ ಸ್ವೀಕರಿಸಿದರು ಎಂಬ ವದಂತಿ ಹಬ್ಬಿತು. ವದಂತಿ ಇಥಿಯೋಪಿಯಾಗೂ ತಲುಪಿತು.[೮೬][೮೭] ಇಥಿಯೋಪಿಯಾಗೆ ಹೋದ ಕೆಲವರು ಮಕ್ಕಾಗೆ ಮರಳಿದ‌‌ರು.[೮೭] ಕೆಲವರು ಹೇಳುವಂತೆ ಉಮರ್ ಬಿನ್ ಖತ್ತಾಬ್ ಇಸ್ಲಾಂ ಸ್ವೀಕರಿಸಿದ ವಿಷಯ ತಿಳಿದು ಅವರು ಮಕ್ಕಾಗೆ ಹಿಂದಿರುಗಿದರು.[೮೮] ಆದರೆ ಮಕ್ಕಾದ ಸ್ಥಿತಿ ಸುಧಾರಿಸಿಲ್ಲ ಎಂದು ಅರಿವಾದಾಗ ಅವರು ಪುನಃ ಇಥಿಯೋಪಿಯಾಗೆ ಹಿಂದಿರುಗಿದರು.[೮೭] ಅವರ ಜೊತೆಗೆ ಇತರ ಕೆಲವು ಮುಸ್ಲಿಮರೂ ಸೇರಿ ಒಟ್ಟು 83 ಜನರು ಇಥಿಯೋಪಿಯಾ ತಲುಪಿದರು.[೮೯]

ಮುಸ್ಲಿಮರು ಇಥಿಯೋಪಿಯಾದಲ್ಲಿ ಆಶ್ರಯಪಡೆದ ಸುದ್ದಿ ತಿಳಿದಾಗ, ಕುರೈಷರು ಅಬ್ದುಲ್ಲಾ ಬಿನ್ ಅಬೂ ರಬೀಅ ಮತ್ತು ಅಮ್ರ್ ಬಿನ್ ಆಸ್ ರನ್ನು[೮೭] ಹಲವಾರು ಉಡುಗೊರೆಗಳೊಂದಿಗೆ ಇಥಿಯೋಪಿಯಾ ದೊರೆ ನೇಗಸ್‌ನ ಬಳಿಗೆ ಕಳುಹಿಸಿದರು.[೮೪] ಇವರು ಮಕ್ಕಾದಿಂದ ಓಡಿ ಬಂದವರು ಇವರನ್ನು ಮಕ್ಕಾಗೆ ಮರಳಿ ಕಳುಹಿಸಬೇಕೆಂದು ವಿನಂತಿಸಿದರು. ನೇಗಸ್ ಮುಸ್ಲಿಮರನ್ನು ಕರೆಸಿ ವಿಚಾರಿಸಿದಾಗ, ಅವರಲ್ಲಿ ಒಬ್ಬರಾದ ಜಅಫರ್ ಬಿನ್ ಅಬೂತಾಲಿಬ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ನೇಗಸ್‌ಗೆ ಸೂರ ಮರ್ಯಮ್‌ನ ಶ್ಲೋಕಗಳನ್ನು ಓದಿಕೊಟ್ಟರು.[೯೦] ಶ್ಲೋಕಗಳನ್ನು ಆಲಿಸಿದ ನೇಗಸ್ ಕಣ್ಣಲ್ಲಿ ಕಣ್ಣೀರು ಹರಿಯಿತು.[೯೧] ಅವರು ಹೇಳಿದರು: "ಯೇಸುಕ್ರಿಸ್ತರ ಸಂದೇಶ ಮತ್ತು ಮುಹಮ್ಮದ್‌ರ ಸಂದೇಶ ಒಂದೇ ಮೂಲದ್ದಾಗಿದೆ.[೯೨] ನಾನು ಏನೇ ಆದರೂ ಇವರನ್ನು ಇಲ್ಲಿಂದ ಕಳಿಸಿಕೊಡುವುದಿಲ್ಲ."[೯೩] ನೇಗಸ್‌ರ ಮನವೊಲಿಸಲು ವಿಫಲರಾದ ಕುರೈಷ್ ಮುಖಂಡರು ಊರಿಗೆ ಮರಳಿದರು.[೯೨] ಮುಹಮ್ಮದ್ ಮದೀನಕ್ಕೆ ವಲಸೆ ಹೋಗುವ ತನಕ ಈ ಮುಸ್ಲಿಮರು ಇಥಿಯೋಪಿಯಾದಲ್ಲೇ ಇದ್ದರು. ನಂತರ ಅವರು ಅಲ್ಲಿಂದ ಮದೀನಕ್ಕೆ ಹೋದರು.

ಬಹಿಷ್ಕಾರಸಂಪಾದಿಸಿ

ಮುಹಮ್ಮದ್ ಪ್ರವಾದಿಯಾಗಿ ಏಳು ವರ್ಷಗಳಾದವು. ಮಕ್ಕಾದಲ್ಲಿ ಮುಹಮ್ಮದ್ ಮತ್ತು ಶಿಷ್ಯರು ಮತಪ್ರಚಾರವನ್ನು ಮುಂದುವರಿಸಿದ್ದರು. ಹೊಸ ಮುಖಗಳು ಆಂದೋಲನದಲ್ಲಿ ಭಾಗಿಯಾಗುತ್ತಿದ್ದವು. ಉಮರ್ ಬಿನ್ ಖತ್ತಾಬ್,[೯೩] ಹಂಝ ಬಿನ್ ಅಬ್ದುಲ್ ಮುತ್ತಲಿಬ್[೯೪] ಮುಂತಾದ ಕೆಲವು ಕುರೈಷ್ ದಿಗ್ಗಜರು ಮುಹಮ್ಮದ್‌ರ ಧರ್ಮಕ್ಕೆ ಸೇರಿದರು.[೯೫] ಇದರಿಂದ ಇಸ್ಲಾಂ ಬಲಪಡೆಯಿತು. ಮುಸ್ಲಿಮರು ಸಾರ್ವಜನಿಕವಾಗಿ ತಮ್ಮ ಧರ್ಮವನ್ನು ಆಚರಿಸತೊಡಗಿದರು. ಇಸ್ಲಾಂನ ಸಂದೇಶ ಮಕ್ಕಾದ ಹೊರಗಿರುವ ಗೋತ್ರಗಳಲ್ಲಿ ಮತ್ತು ಬುಡಕಟ್ಟುಗಳಲ್ಲಿ ಪ್ರತಿಧ್ವನಿಸತೊಡಗಿತು.[೯೬] ಕುರೈಷರು ಅಸಹಾಯಕರಾಗಿದ್ದರು. ಅವರು ಮುಹಮ್ಮದ್‌ರ ಗೋತ್ರವಾದ ಬನೂ ಹಾಶಿಂ ಗೋತ್ರದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.[೯೭] "ಮುಹಮ್ಮದ್‌ನನ್ನು ನಮಗೆ ಬಿಟ್ಟುಕೊಡಿ. ನಾವು ಅವನಿಗೆ ಏನು ಮಾಡಿದರೂ ನೀವು ಅಡ್ಡ ಬರಬಾರದು." ಆದರೆ ಬನೂ ಹಾಶಿಂ ಗೋತ್ರದವರು ಒಪ್ಪಲಿಲ್ಲ. ಅವರು ಮುಹಮ್ಮದ್‌ರಿಗೆ ಬೆಂಗಾವಲಾಗಿ ನಿಂತರು.[೯೮] ಆದರೆ ಮುಹಮ್ಮದ್‌ರ ದೊಡ್ಡಪ್ಪ ಅಬೂಲಹಬ್ ಮಾತ್ರ ಗೋತ್ರದವರಿಗೆ ವಿರುದ್ಧವಾಗಿ ಕುರೈಷರ ಜೊತೆಗೆ ಸೇರಿದರು.[೯೮]

ಬನೂ ಹಾಶಿಂ ಗೋತ್ರವು ಮುಹಮ್ಮದ್‌ರನ್ನು ಬಿಟ್ಟು ಕೊಡುವುದಿಲ್ಲ ಎಂಬುದು ಸ್ಪಷ್ಟವಾದಾಗ, ಕುರೈಷ್ ಮುಖಂಡರು ಸಭೆ ಸೇರಿ ಬನೂ ಹಾಶಿಂ ಮತ್ತು ಬನೂ ಮುತ್ತಲಿಬ್ ಗೋತ್ರದವರನ್ನು ಬಹಿಷ್ಕರಿಸಲು ತೀರ್ಮಾನಿಸಿದರು.[೯೯] "ಬನೂ ಹಾಶಿಂ ಗೋತ್ರದವರು ಮುಹಮ್ಮದ್‌ರನ್ನು ಬಿಟ್ಟುಕೊಡುವ ತನಕ ಅವರನ್ನು ವಿವಾಹವಾಗುವುದು, ಅವರೊಡನೆ ವ್ಯಾಪಾರ ಮಾಡುವುದು, ಅವರೊಡನೆ ಬೆರೆಯುವುದು, ಅವರೊಡನೆ ಕುಳಿತುಕೊಳ್ಳುವುದು ಎಲ್ಲವನ್ನೂ ಬಹಿಷ್ಕರಿಸಲಾಗಿದೆ" ಎಂದು ಘೋಷಿಸಿದರು.[೧೦೦] ಅದನ್ನು ಬಟ್ಟೆಯಲ್ಲಿ ಬರೆದಿಟ್ಟು ಕಅಬಾದ ಒಳಗಡೆ ತೂಗಿ ಹಾಕಿದರು.[೯೯] ಮುಹಮ್ಮದ್‌ರ ಗೋತ್ರವನ್ನು ಬಹಿಷ್ಕರಿಸುವ ವಿಷಯದಲ್ಲಿ ಇತರ ಗೋತ್ರಗಳು ಕೂಡ ಕುರೈಷರೊಂದಿಗೆ ಕೈ ಜೋಡಿಸಿದರು.

ಮುಹಮ್ಮದ್‌ರ ಕುಟುಂಬ ಮತ್ತು ಅನುಯಾಯಿಗಳು ಶಿಅಬ್ ಅಬೂತಾಲಿಬ್‌ನಲ್ಲಿ ಮೂರು ವರ್ಷಗಳ ಕಾಲ ದಿಗ್ಬಂಧನಕ್ಕೊಳಗಾದರು.[೧೦೧][೧೦೨] ದಿಗ್ಬಂಧನ ಮುಂದುವರಿದಂತೆ ಆಹಾರದ ಕೊರತೆಯುಂಟಾಯಿತು. ಕೆಲವು ಸಂಬಂಧಿಕರು ರಾತ್ರಿಯಲ್ಲಿ ರಹಸ್ಯವಾಗಿ ಆಹಾರಗಳನ್ನು ತಲುಪಿಸುತ್ತಿದ್ದರು ಎನ್ನುವುದನ್ನು ಬಿಟ್ಟರೆ ಅವರಿಗೆ ತಿನ್ನಲು ಆಹಾರವಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ಅವರು ಮರದ ಎಲೆಗಳನ್ನು ಮತ್ತು ಬೇರುಗಳನ್ನು ತಿಂದು ಹಸಿವು ನೀಗಿಸುತ್ತಿದ್ದರು.[೧೦೩] ಮಕ್ಕಳು ಹಸಿವಿನಿಂದ ರೋದಿಸುವುದು ಪರ್ವತದಾದ್ಯಂತ ಪ್ರತಿಧ್ವನಿಸುತ್ತಿತ್ತು.[೧೦೩] ಆದರೂ ಕುರೈಷರಿಗೆ ಕರುಣೆ ಉಕ್ಕಲಿಲ್ಲ. ಮುಹಮ್ಮದ್‌ರನ್ನು ಅವರ ಧರ್ಮದಿಂದ ಹಿಮ್ಮೆಟ್ಟಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು.

ಮೂರು ವರ್ಷಗಳ ಬಳಿಕ ಕೆಲವು ಕುರೈಷ್ ಮುಖಂಡರು ಬಹಿಷ್ಕಾರದ ವಿರುದ್ಧ ತಿರುಗಿ ಬಿದ್ದರು. ಕುರೈಷರಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವ ಹಿಶಾಂ ಬಿನ್ ಅಮ್ರ್ ಬಿನ್ ರಬೀಅ ಈ ಅನ್ಯಾಯದ ವಿರುದ್ಧ ಸಿಡಿದೆದ್ದರು.[೧೦೪][೧೦೫] ಅವರು ಇತರ ಕೆಲವು ಕುರೈಷ್ ಮುಖಂಡರನ್ನು ಸಮೀಪಿಸಿ ಬಹಿಷ್ಕಾರದ ವಿರುದ್ಧ ಧ್ವನಿಯೆತ್ತುವಂತೆ ವಿನಂತಿಸಿದರು.[೧೦೩] ಕುರೈಷರು ಸಭೆ ಸೇರಿದಾಗ ಈ ಅನ್ಯಾಯವನ್ನು ಕೊನೆಗೊಳಿಸುವುದೆಂದು ತೀರ್ಮಾನಿಸಲಾಯಿತು. ಮುತ್‌ಇಂ ಬಿನ್ ಅದೀ ಬಹಿಷ್ಕಾರದ ಘೋಷಣೆಯನ್ನು ಬರೆದ ಬಟ್ಟೆಯನ್ನು ಹರಿದು ಹಾಕಿದರು.[೧೦೬] ಆಗ ಅದರಲ್ಲಿ ದೇವರ ಹೆಸರಿನ ಹೊರತು ಇತರೆಲ್ಲಾ ಭಾಗಗಳು ಗೆದ್ದಲು ತಿಂದಿದ್ದವು. ಮುಹಮ್ಮದ್ ಮತ್ತು ಅವರ ಕುಟುಂಬದವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು.[೧೦೭]

ದುಃಖದ ವರ್ಷಸಂಪಾದಿಸಿ

ಬಹಿಷ್ಕಾರ ಕೊನೆಗೊಂಡ ಅದೇ ವರ್ಷ, ಅಂದರೆ ಮುಹಮ್ಮದ್ ಪ್ರವಾದಿಯಾದ ಹತ್ತನೇ ವರ್ಷ ರಜಬ್ ತಿಂಗಳಲ್ಲಿ[೧೦೮] ಮುಹಮ್ಮದ್‌ರ ದೊಡ್ಡಪ್ಪ ಅಬೂತಾಲಿಬ್ ನಿಧನರಾದರು. ಇಷ್ಟರ ತನಕ ತನಗೆ ಬೆನ್ನೆಲುಬಾಗಿ ನಿಂತಿದ್ದ, ಎಲ್ಲಾ ರೀತಿಯ ಕಷ್ಟಗಳಲ್ಲೂ ತನಗೆ ಆಸರೆಯಾಗಿದ್ದ ದೊಡ್ಡಪ್ಪನ ಮರಣದಿಂದ ಮುಹಮ್ಮದ್ ಅಕ್ಷರಶಃ ಉಡುಗಿಹೋದರು. ಅವರಿಗೆ ದುಃಖ ಸಹಿಸಲಾಗಲಿಲ್ಲ.[೧೦೯] ಆದರೆ ಈ ಆಘಾತದಿಂದ ಹೊರಬರುವುದಕ್ಕೆ ಮೊದಲೇ ಅವರಿಗೆ ಇನ್ನೊಂದು ಆಘಾತವು ಕಾದಿತ್ತು. ಅಬೂತಾಲಿಬ್ ನಿಧನರಾಗಿ ಕೇವಲ ಎರಡು ತಿಂಗಳುಗಳಲ್ಲೇ ಅವರ ಪತ್ನಿ ಖದೀಜ ಇಹಲೋಕಕ್ಕೆ ವಿದಾಯ ಕೋರಿದರು.[೧೧೦] ಈ ಎರಡು ಸಾವುಗಳಿಂದ ಮುಹಮ್ಮದ್ ಎಷ್ಟು ದುಃಖ ಅನುಭವಿಸಿದರೆಂದರೆ ಇತಿಹಾಸಕಾರರು ಈ ವರ್ಷವನ್ನು ದುಃಖದ ವರ್ಷ ಎಂದು ಕರೆದರು.

ತಾಯಿಫ್‌ಗೆ ಪ್ರಯಾಣಸಂಪಾದಿಸಿ

 
ತಾಯಿಫ್ ನಗರದ ಸುತ್ತಲಿರುವ ಪರ್ವತಗಳು

ಅಬೂತಾಲಿಬರ ಮರಣಾನಂತರ ಕುರೈಷರು ಮುಹಮ್ಮದ್‌ರನ್ನು ಮತ್ತು ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿಸತೊಡಗಿದರು.[೧೧೧] ಕುರೈಷರ ಹಿಂಸೆ ತಾಳಲಾಗದೆ ಮುಹಮ್ಮದ್ ತಾಯಿಫ್‌ಗೆ ಹೋಗಿ ಆಶ್ರಯ ಪಡೆಯಲು ನಿರ್ಧರಿಸಿದರು.[೧೧೨] ತಾಯಿಫ್‌ನಲ್ಲಿ ಸಕೀಫ್ ಗೋತ್ರದವರು ವಾಸವಾಗಿದ್ದರು. ಅವರೊಡನೆ ಸಹಾಯ ಕೇಳುವುದು ಮತ್ತು ಅವರನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸುವುದು ಮುಹಮ್ಮದ್‌ರ ಉದ್ದೇಶವಾಗಿತ್ತು.[೧೧೩] ಅವರು ತನ್ನ ಬಗ್ಗೆ ಮೃದು ನಿಲುವು ತಾಳುವರು ಎಂದು ಮುಹಮ್ಮದ್ ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು.[೧೧೪]

ಶವ್ವಾಲ್ ತಿಂಗಳಲ್ಲಿ (ಕ್ರಿ.ಶ. 619 ಮೇ ಅಥವಾ ಜೂನ್ ತಿಂಗಳು)[೧೧೫] ಮುಹಮ್ಮದ್ ಮಕ್ಕಾದಿಂದ 60 ಕಿ.ಮೀ. ದೂರದಲ್ಲಿರುವ ತಾಯಿಫ್‌ಗೆ ನಡೆದುಕೊಂಡು ಹೋದರು. ಅಲ್ಲಿ ಅವರು ಸಕೀಫ್ ಗೋತ್ರದ ಮುಖಂಡರೊಡನೆ ಮಾತುಕತೆ ನಡೆಸಿ ಅವರನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸಿದರು.[೧೧೫] ಆದರೆ ಗೋತ್ರದ ಮುಖಂಡರು ಮುಹಮ್ಮದ್‌ರ ಧರ್ಮವನ್ನು ತೀವ್ರವಾಗಿ ವಿರೋಧಿಸಿದ್ದು ಮಾತ್ರವಲ್ಲದೆ, ಅವರನ್ನು ಅಪಹಾಸ್ಯ ಮಾಡಿದರು.[೧೧೩] ಜನರನ್ನು ಅವರ ವಿರುದ್ಧ ಎತ್ತಿಕಟ್ಟಿದರು. ಮುಹಮ್ಮದ್ ಅಸಹಾಯಕರಾಗಿ ಹೊರಟು ನಿಂತಾಗ ಬೀದಿಯ ಎರಡೂ ಬದಿಗಳಲ್ಲಿ ಜನರು ಅವರ ವಿರುದ್ಧ ಘೋಷಣೆ ಕೂಗಿದರು. ಮಕ್ಕಳು ಕಲ್ಲೆಸೆದರು.[೧೧೫] ಮುಹಮ್ಮದ್‌ರ ದೇಹದಿಂದ ರಕ್ತ ಒಸರುತ್ತಿತ್ತು. ಅವರು ಅಲ್ಲೇ ಇದ್ದ ಒಂದು ಖರ್ಜೂರದ ಮರದ ಕೆಳಗೆ ಕುಸಿದು ಕುಳಿತರು.[೧೧೪] ಮಕ್ಕಾದ ಕುರೈಷರಿಗಿಂತಲೂ ತೀವ್ರವಾಗಿ ತಾಯಿಫ್‌ನವರು ಅವರನ್ನು ಹಿಂಸಿಸಿದ್ದರು. ಕಣ್ಣೀರಿನೊಂದಿಗೆ ಅವರು ದೇವರಲ್ಲಿ ಪ್ರಾರ್ಥಿಸಿದರು:[೧೧೬] "ಓ ದೇವರೇ! ನನ್ನ ಅಸಹಾಯಕತೆ, ಸಂಪನ್ಮೂಲದ ಕೊರತೆ ಮತ್ತು ಜನರು ನನ್ನನ್ನು ಹೀಯಾಳಿಸುತ್ತಿರುವುದನ್ನು ನೀನು ನೋಡುತ್ತಿಲ್ಲವೇ? ನಾನು ನನ್ನ ಬವಣೆಯನ್ನು ನಿನ್ನಲ್ಲಿ ತೋಡಿಕೊಳ್ಳುತ್ತಿದ್ದೇನೆ. ನೀನು ಕರುಣಾಮಯಿ. ನೀನು ದಬ್ಬಾಳಿಕೆಗೆ ಒಳಗಾದವರ ಸಂರಕ್ಷಕನು, ನೀನು ನನ್ನ ದೇವರು. ನೀನು ನನ್ನನ್ನು ಯಾರಿಗೆ ವಹಿಸಿಕೊಟ್ಟಿರುವೆ? ನನ್ನನ್ನು ಅಪಹಾಸ್ಯ ಮಾಡುವವರಿಗೋ? ಅಥವಾ ನನ್ನ ಮೇಲೆ ಪ್ರಾಬಲ್ಯವನ್ನು ಹೊಂದಿರುವ ನನ್ನ ಶತ್ರುವಿಗೋ? ಓ ದೇವರೇ! ನಿನಗೆ ನನ್ನಲ್ಲಿ ಕೋಪವಿಲ್ಲದಿದ್ದರೆ ನನಗೆ ಇದೆಲ್ಲಾ ದೊಡ್ಡ ವಿಷಯವೇ ಅಲ್ಲ. ನನಗೆ ನಿನ್ನ ಸಹಾಯ ಮಾತ್ರ ಸಾಕು. ನಿನ್ನ ಕೋಪ ನನ್ನ ಮೇಲೆ ಎರಗದಿರಲು ನಾನು ನಿನ್ನಲ್ಲಿ ಅಭಯ ಕೋರುತ್ತೇನೆ. ಓ ದೇವರೇ! ನನ್ನನ್ನು ಕ್ಷಮಿಸು, ನಿನ್ನಲ್ಲೇ ಅಲ್ಲದೆ ಯಾರಲ್ಲೂ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ."[೧೧೨][೧೧೪]

ಆಗ ದೇವರು ಮುಹಮ್ಮದ್‌ರ ಬಳಿಗೆ ಒಂದು ದೇವದೂತರನ್ನು ಕಳುಹಿಸಿದನು. ದೇವದೂತರು ಮುಹಮ್ಮದ್‌ರ ಬಳಿಗೆ ಬಂದು ತಾಯಿಫ್‌ನ ಜನರನ್ನು ನಾಶ ಮಾಡಬೇಕೇ? ಎಂದು ಕೇಳಿದಾಗ, ಮುಹಮ್ಮದ್ ಉತ್ತರಿಸಿದರು:[೧೧೭] "ಬೇಡ, ಈ ಜನರಲ್ಲಿ ದೇವರನ್ನು ಮಾತ್ರ ಆರಾಧಿಸುವಂತಹ ಜನರು ಉಂಟಾಗಲೂಬಹುದು."[೧೧೮] ಮುಹಮ್ಮದ್ ತಾಯಿಫ್‌ನಿಂದ ಭಾರವಾದ ಹೃದಯದೊಂದಿಗೆ ಮಕ್ಕಾಗೆ ಮರಳಿದರು.

ಮುಹಮ್ಮದ್ ಏಕಾಂಗಿಯಾಗಿದ್ದರು. ಅವರಿಗೆ ತಮ್ಮ ದುಃಖವನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ತನ್ನ ಅನುಯಾಯಿಗಳಲ್ಲಿ ಒಬ್ಬಳಾದ ಖೌಲ ಬಿಂತ್ ಹಕೀಮ್‌ಳ ಸಲಹೆಯಂತೆ ಅವರು ವಿಧವೆಯಾಗಿದ್ದ ಸೌದ ಬಿಂತ್ ಝಮಅರನ್ನು ವಿವಾಹವಾದರು. ನಂತರ ಅಬೂಬಕರ್‌ರ ಮಗಳು ಆಯಿಶರೊಂದಿಗೆ ಅವರ ನಿಶ್ಚಿತಾರ್ಥ ನಡೆಯಿತು.[೧೧೯]

ಆಕಾಶ ಯಾನಸಂಪಾದಿಸಿ

 
ಜೆರೂಸಲೇಮ್‌ನಲ್ಲಿರುವ ಬೈತುಲ್ ಮುಕದ್ದಸ್ ಅಥವಾ ಅಲ್-ಅಕ್ಸಾ ಮಸೀದಿ. ಇಲ್ಲಿ ಮುಹಮ್ಮದ್ ಇತರ ಪ್ರವಾದಿಗಳಿಗೆ ಮುಖಂಡತ್ವ ನೀಡಿ ನಮಾಝ್ ನಿರ್ವಹಿಸಿದರು ಎಂದು ನಂಬಲಾಗುತ್ತದೆ.
 
ಜೆರೂಸಲೇಮ್‌ನಲ್ಲಿರುವ ಶಿಲೆಯ ಗುಮ್ಮಟದ (Dome of the Rock) ಒಳಗಿರುವ ಶಿಲೆ. ಮುಹಮ್ಮದ್ ಇಲ್ಲಿಂದ ಏಳನೇ ಆಕಾಶಕ್ಕೆ ಪ್ರಯಾಣ ಮಾಡಿದರೆಂದು ಮುಸ್ಲಿಮರು ನಂಬುತ್ತಾರೆ.

ತಾಯಿಫ್‌ನಿಂದ ಮರಳಿದ ಬಳಿಕ ಮುಹಮ್ಮದ್ ಆಕಾಶಯಾನ ಮಾಡಿದರೆಂದು ಮುಸಲ್ಮಾನರು ನಂಬುತ್ತಾರೆ. ಇದು ನಡೆದದ್ದು ಯಾವಾಗ ಎಂಬ ಬಗ್ಗೆ ಇತಿಹಾಸಕಾರರಿಗೆ ಗೊಂದಲಗಳಿವೆ.[೧೨೦] ಅದೇ ರೀತಿ ಮುಹಮ್ಮದ್ ಆಕಾಶಯಾನ ಮಾಡಿದ್ದು ದೇಹ ಸಹಿತವೋ ಅಥವಾ ಅವರ ಆತ್ಮ ಮಾತ್ರವೋ ಎಂಬ ಬಗ್ಗೆಯೂ ಗೊಂದಲಗಳಿವೆ.[೧೨೧] ಹೆಚ್ಚಿನವರ ಅಭಿಪ್ರಾಯ ಪ್ರಕಾರ ಮುಹಮ್ಮದ್ ದೇಹ ಮತ್ತು ಆತ್ಮ ಸಹಿತ ಆಕಾಶಯಾನ ಮಾಡಿದರು. ಇದು ಸಂಭವಿಸಿದ್ದು ಮುಹಮ್ಮದ್ ಪ್ರವಾದಿಯಾದ ಹತ್ತನೇ ವರ್ಷದಲ್ಲಿ. ಮೊದಲು ಅವರು ದೇವದೂತ ಗೇಬ್ರಿಯಲ್‌ರೊಡನೆ ಬುರಾಕ್ ಎನ್ನುವ ವಿಶೇಷ ಮೃಗವನ್ನು ಏರಿ ಮಕ್ಕಾದಿಂದ ಜೆರೂಸಲೇಮ್‌ನಲ್ಲಿರುವ ಬೈತುಲ್ ಮುಕದ್ದಸ್‌ಗೆ ಪ್ರಯಾಣ ಮಾಡಿದರು.[೧೨೨] ಅಲ್ಲಿ ಅವರು ಎಲ್ಲಾ ಪ್ರವಾದಿಗಳಿಗೂ ಮುಖಂಡತ್ವ ನೀಡಿ ನಮಾಝ್ ನಿರ್ವಹಿಸಿದರು.[೧೨೦] ನಂತರ ಅಲ್ಲಿಂದ ಏಳನೇ ಆಕಾಶಕ್ಕೆ ಪ್ರಯಾಣ ಮಾಡಿದರು.[೧೨೩] ಒಂದೊಂದು ಆಕಾಶದಲ್ಲೂ ಒಬ್ಬೊಬ್ಬ ಪ್ರವಾದಿಯನ್ನು ಭೇಟಿಯಾದರು. ಸ್ವರ್ಗ ಮತ್ತು ನರಕವನ್ನು ವೀಕ್ಷಿಸಿದರು. ನಂತರ ಭೂಮಿಗೆ ಬಂದರು. ಇವೆಲ್ಲವೂ ಒಂದೇ ರಾತ್ರಿಯಲ್ಲಿ ಸಂಭವಿಸಿತು ಎಂದು ಮುಸ್ಲಿಮರು ನಂಬುತ್ತಾರೆ.[೧೧೭] ಮುಸ್ಲಿಮರಿಗೆ ನಮಾಝ್ ಕಡ್ಡಾಯವಾದದ್ದು ಈ ರಾತ್ರಿ ಎಂದು ನಂಬಲಾಗುತ್ತದೆ.[೧೨೪]

ಮೊದಲನೇ ಅಕಬಾ ಪ್ರತಿಜ್ಞೆಸಂಪಾದಿಸಿ

ಆಕಾಶಯಾನದ ಬಳಿಕ ಮುಹಮ್ಮದ್ ಅರೇಬಿಯಾದ ನಾನಾ ದಿಕ್ಕುಗಳಿಂದ ಮಕ್ಕಾಗೆ ಬರುವ ಅರಬ್ಬರಿಗೆ ಇಸ್ಲಾಂ ಧರ್ಮವನ್ನು ಬೋಧಿಸಲು ಆರಂಭಿಸಿದರು.[೧೨೫] ವಾರ್ಷಿಕ ಹಜ್ಜ್‌ನ ಸಮಯದಲ್ಲಿ ವಿಶೇಷ ಮುತುವರ್ಜಿ ವಹಿಸಿ ಮತಪ್ರಚಾರದಲ್ಲಿ ನಿರತರಾದರು.[೧೨೬] ಪ್ರವಾದಿಯಾದ ಹನ್ನೊಂದೇ ವರ್ಷದಲ್ಲಿ ಅವರು ಮಕ್ಕಾದ ಸಮೀಪವಿರುವ ಮಿನಾದಲ್ಲಿ ಅಕಬಾ ಎಂಬ ಸ್ಥಳದಲ್ಲಿ ಯಸ್ರಿಬ್ (ಮದೀನ) ನಿಂದ ಬಂದ ಖಝ್ರಜ್ ಗೋತ್ರದ ಆರು ಯಾತ್ರಾರ್ಥಿಗಳನ್ನು ಭೇಟಿಯಾಗಿ ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಬೋಧಿಸಿದರು.[೧೨೭] ಮುಹಮ್ಮದ್‌ರ ಬೋಧನೆಗಳಿಗೆ ಕಿವಿಗೊಟ್ಟ ನಂತರ ಅವರು ಪರಸ್ಪರ ಹೇಳಿದರು: "ಸಹೋದರರೇ, ನೋಡಿ! ನಮ್ಮ ಊರಿನ ಯಹೂದಿಗಳು ಒಬ್ಬ ಪ್ರವಾದಿ ಬರಲಿದ್ದಾರೆ, ಅವರೊಡನೆ ಸೇರಿ ನಾವು ನಿಮ್ಮ ವಿರುದ್ಧ ಹೋರಾಡುತ್ತೇವೆ ಎಂದು ನಮ್ಮನ್ನು ಬೆದರಿಸುತ್ತಿದ್ದರಲ್ಲವೇ? ಆ ಪ್ರವಾದಿ ಇವರೇ ಆಗಿರಬಹುದು. ಯಹೂದಿಗಳು ಅವರೊಡನೆ ಸೇರುವ ಮುನ್ನ ನಾವೇ ಅವರೊಡನೆ ಸೇರೋಣ."[೧೨೮] ಹೀಗೆ ಅವರು ಮುಹಮ್ಮದ್‌ರ ಆಮಂತ್ರಣವನ್ನು ಸ್ವೀಕರಿಸಿ ಮುಸ್ಲಿಮರಾದರು.[೧೨೯] ನಂತರ ಮದೀನಕ್ಕೆ ಹೋಗಿ ಇಸ್ಲಾಂ ಧರ್ಮದ ಪ್ರಚಾರ ಮಾಡಿದರು. ಮದೀನದ ಪ್ರತಿಯೊಂದು ಮನೆಯಲ್ಲೂ ಮುಹಮ್ಮದ್ ಮನೆಮಾತಾದರು.[೧೩೦]

 
ಮಕ್ಕಾದ ಬಳಿಯಿರುವ ಮಿನಾ ಪ್ರದೇಶ. ಇಲ್ಲಿ ಅಕಬಾ ಎಂಬ ಸ್ಥಳದಲ್ಲಿ ಮುಹಮ್ಮದ್ ಯಸ್ರಿಬ್ (ಮದೀನ) ನಿಂದ ಬಂದ ಖಝ್ರಜ್ ಗೋತ್ರದ ಆರು ಯಾತ್ರಾರ್ಥಿಗಳನ್ನು ಭೇಟಿಯಾಗಿ ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಬೋಧಿಸಿದರು.

ಮುಂದಿನ ವರ್ಷ ಹಜ್ಜ್‌ನ ಸಮಯದಲ್ಲಿ ಮದೀನದಿಂದ ಹನ್ನೆರಡು ಮಂದಿ[೧೩೧] ಮಕ್ಕಾಗೆ ಬಂದು ಅಕಬಾದಲ್ಲಿ ರಹಸ್ಯವಾಗಿ ಮುಹಮ್ಮದ್‌ರನ್ನು ಭೇಟಿಯಾದರು.[೧೩೨] ಅವರಿಗೆ ಅವರು, "ನಾವು ಏಕೈಕ ದೇವರನ್ನು ಮಾತ್ರ ಆರಾಧಿಸುತ್ತೇವೆ, ನಾವು ಕಳ್ಳತನ ಮಾಡುವುದಿಲ್ಲ, ವ್ಯಭಿಚಾರ ಮಾಡುವುದಿಲ್ಲ ಮತ್ತು ಮಕ್ಕಳನ್ನು ಕೊಲ್ಲುವುದಿಲ್ಲ, ಎಲ್ಲಾ ಸತ್ಕರ್ಮಗಳಲ್ಲೂ ಮುಹಮ್ಮದ್‌ರನ್ನು ಹಿಂಬಾಲಿಸುತ್ತೇವೆ" ಎಂದು ಪ್ರತಿಜ್ಞೆ ಮಾಡಿದರು.[೧೩೩] ಇದನ್ನು ಒಂದನೇ ಅಕಬಾ ಪ್ರತಿಜ್ಞೆ ಎಂದು ಕರೆಯಲಾಗುತ್ತದೆ. ಮುಹಮ್ಮದ್ ಅವರೊಡನೆ ತಮ್ಮ ಶಿಷ್ಯ ಮುಸ್‌ಅಬ್ ಬಿನ್ ಉಮೈರ್‌ರನ್ನು ಕಳುಹಿಸಿಕೊಟ್ಟರು. ಇಸ್ಲಾಂ ಮದೀನದಲ್ಲಿ ಹಬ್ಬತೊಡಗಿತು. ಮದೀನದ ಪ್ರತಿಯೊಂದು ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಮುಸ್ಲಿಮರಿದ್ದರು.[೧೩೪] ಸಅದ್ ಬಿನ್ ಮುಆದ್, ಉಸೈದ್ ಬಿನ್ ಹುದೈರ್ ಮುಂತಾದ ಮದೀನದ ದಿಗ್ಗಜರು ಕೂಡ ಇಸ್ಲಾಂ ಸ್ವೀಕರಿಸಿದರು.[೧೩೫]

ಎರಡನೇ ಅಕಬಾ ಪ್ರತಿಜ್ಞೆಸಂಪಾದಿಸಿ

ಮುಂದಿನ ವರ್ಷ ಹಜ್ಜ್ ಸಮಯದಲ್ಲಿ 73 ಪುರುಷರು ಮತ್ತು ಇಬ್ಬರು ಮಹಿಳೆಯರು[೧೩೪] ಮುಹಮ್ಮದ್‌ರನ್ನು ಅಕಬಾದಲ್ಲಿ ರಹಸ್ಯವಾಗಿ ಭೇಟಿಯಾದರು.[೧೩೬] ಅಲ್ಲಿ ಮುಹಮ್ಮದ್ ಅವರೊಡನೆ ಹೀಗೆ ಪ್ರತಿಜ್ಞೆ ಮಾಡಿಸಿದರು: "ನೀವು ನಾನು ಹೇಳಿದಂತೆ ಕೇಳುತ್ತೀರಿ. ಕಷ್ಟದಲ್ಲೂ ಸುಖದಲ್ಲೂ ದಾನಧರ್ಮ ಮಾಡುತ್ತೀರಿ, ಜನರಿಗೆ ಸದಾಚಾರವನ್ನು ಬೋಧಿಸುತ್ತೀರಿ ಮತ್ತು ದುರಾಚಾರವನ್ನು ವಿರೋಧಿಸುತ್ತೀರಿ, ದೇವರ ವಿಷಯದಲ್ಲಿ ನೀವು ಯಾರನ್ನೂ ಭಯಪಡುವುದಿಲ್ಲ ಮತ್ತು ನಾನು ಮದೀನಕ್ಕೆ ಬಂದರೆ ನೀವು ನಿಮ್ಮ ಮಡದಿ ಮಕ್ಕಳನ್ನು ರಕ್ಷಿಸುವಂತೆ ನನ್ನನ್ನು ರಕ್ಷಿಸುತ್ತೀರಿ."[೧೩೭] ಎಲ್ಲರೂ ಈ ನಿಯಮಗಳನ್ನು ಒಪ್ಪಿ ಪ್ರತಿಜ್ಞೆ ಮಾಡಿದರು. ಇದನ್ನು ಎರಡನೇ ಅಕಬಾ ಪ್ರತಿಜ್ಞೆ ಎನ್ನಲಾಗುತ್ತದೆ. ಮುಹಮ್ಮದ್ ಅವರಿಂದ ಹನ್ನೆರಡು ಮಂದಿಯನ್ನು ಮುಖಂಡರಾಗಿ ಆರಿಸಿದರು.[೧೩೮] ಒಂಬತ್ತು ಜನರು ಖಝ್ರಜ್ ಗೋತ್ರದವರು ಮತ್ತು ಮೂರು ಮಂದಿ ಔಸ್ ಗೋತ್ರದವರು.[೧೩೯]

ಮದೀನಕ್ಕೆ ಹಿಜ್ರ (ವಲಸೆ)ಸಂಪಾದಿಸಿ

ಎರಡನೇ ಅಕಬಾ ಪ್ರತಿಜ್ಞೆಯ ಬಳಿಕ ಮುಹಮ್ಮದ್ ಮಕ್ಕಾದಲ್ಲಿರುವ ತನ್ನ ಅನುಯಾಯಿಗಳೊಡನೆ ಮದೀನಕ್ಕೆ ವಲಸೆ ಹೋಗಲು ಆಜ್ಞಾಪಿಸಿದರು.[೧೪೦] ಮುಸ್ಲಿಮರು ಮದೀನಕ್ಕೆ ಹಿಜ್ರ ಹೊರಟರು.[೧೪೧] ಆದರೆ ಕುರೈಷರು ಅವರನ್ನು ಅಷ್ಟು ಸುಲಭವಾಗಿ ಮಕ್ಕಾ ತೊರೆಯಲು ಬಿಡಲಿಲ್ಲ. ಅಬೂ ಸಲಮರಿಗೆ ತಮ್ಮ ಪತ್ನಿ ಮಕ್ಕಳನ್ನು ತೊರೆದು ಹೋಗಬೇಕಾಯಿತು.[೧೪೨] ಸುಹೈಬ್‌ರಿಗೆ ತಮ್ಮ ಸಂಪೂರ್ಣ ಆಸ್ತಿಯನ್ನು ತ್ಯಜಿಸಿ ಹೋಗಬೇಕಾಯಿತು.[೧೪೩] ಹೀಗೆ ಮುಸಲ್ಮಾನರು ಬಹಳ ತ್ಯಾಗಗಳನ್ನು ಸಹಿಸಿ ಮದೀನಕ್ಕೆ ವಲಸೆ ಹೋದರು. ಕೊನೆಗೆ ಮುಹಮ್ಮದ್ ಮತ್ತು ಅವರು ಆಪ್ತ ಸಂಗಡಿಗರು ಮಾತ್ರ ಮಕ್ಕಾದಲ್ಲಿ ಉಳಿದರು.[೧೪೪]

ಮುಹಮ್ಮದ್ ಮದೀನಕ್ಕೆ ಹೊರಟಿದ್ದಾರೆಂಬ ಸುದ್ದಿ ಕುರೈಷರಿಗೆ ತಿಳಿದಾಗ ಅವರು ಯಾವುದೇ ಹಂತದಲ್ಲಾದರೂ ಅದನ್ನು ತಡೆಯಬೇಕೆಂದು ನಿರ್ಧರಿಸಿದರು.[೧೪೫] ಏಕೆಂದರೆ ಮುಹಮ್ಮದ್ ಮದೀನಕ್ಕೆ ತೆರಳಿ ಅಲ್ಲಿ ಅವರ ಆಂದೋಲನ ಪ್ರಬಲವಾದರೆ ಅದರಿಂದ ತಮಗೆ ಸಮಸ್ಯೆಯಿದೆ ಮತ್ತು ಮದೀನಕ್ಕೆ ಹೋಗಿ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಅವರು ಸಭೆ ಸೇರಿ ಸಮಾಲೋಚನೆ ಮಾಡಿದರು.[೧೪೬] ಕೊನೆಗೆ ಎಲ್ಲಾ ಗೋತ್ರಗಳಿಂದ ಒಬ್ಬೊಬ್ಬರು ಸೇರಿ ಎಲ್ಲರೂ ಒಟ್ಟಿಗೆ ಮುಹಮ್ಮದ್‌ರನ್ನು ಕೊಲೆ ಮಾಡುವುದೆಂದು ಅವರು ತೀರ್ಮಾನಿಸಿದರು. ಏಕೆಂದರೆ ಎಲ್ಲಾ ಗೋತ್ರದವರು ಸೇರಿ ಕೊಂದರೆ ಕೊಲೆಯ ಆರೋಪವು ಎಲ್ಲಾ ಗೋತ್ರಗಳಿಗೂ ಅಂಟುವುದರಿಂದ, ಮುಹಮ್ಮದ್‌ರ ಗೋತ್ರದವರಿಗೆ ಇವರೆಲ್ಲರ ಮೇಲೆ ಸೇಡು ತೀರಿಸಿಕೊಳ್ಳಲು ಸಾಧ್ಯವಿಲ್ಲ.[೧೪೭]

 
ಮಕ್ಕಾದಿಂದ 5 ಕಿ.ಮೀ. ದೂರದ ಒಂದು ಪರ್ವತದಲ್ಲಿರುವ ಸೌರ್ ಗುಹೆ. ಮುಹಮ್ಮದ್ ಮತ್ತು ಅಬೂಬಕರ್ ಮೂರು ದಿನಗಳ ಕಾಲ ಈ ಗುಹೆಯಲ್ಲಿ ಅಡಗಿದ್ದರು.

ಕುರೈಷರ ಸಂಚು ಮುಹಮ್ಮದ್‌ರಿಗೆ ತಿಳಿಯಿತು. ಅಥವಾ ದೇವರು ಅದನ್ನು ಅವರಿಗೆ ತಿಳಿಸಿದನು.[೧೪೮] ಮುಹಮ್ಮದ್ ತನ್ನ ಆಪ್ತ ಸಂಗಡಿಗ ಅಬೂಬಕರ್‌ರನ್ನು ಕರೆದು ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿದರು. ಆ ರಾತ್ರಿ ಕುರೈಷರು ಮುಹಮ್ಮದ್‌ರ ಮನೆಯನ್ನು ಸುತ್ತುವರಿದರು.[೧೪೯] ಮುಹಮ್ಮದ್ ತಾನು ಮಲಗುವ ಸ್ಥಳದಲ್ಲಿ ಅಲಿ ಬಿನ್ ಅಬೂತಾಲಿಬ್‌ರನ್ನು ಮಲಗಿಸಿ[೧೫೦] ಕುರೈಷರಿಗೆ ತಿಳಿಯದಂತೆ ಮನೆಯಿಂದ ಹೊರ ಬಿದ್ದರು.[೧೫೧] ಅವರು ಕುರೈಷರ ಕಣ್ಣೆದುರೇ ಅವರ ಕಣ್ಣಿಗೆ ಮಣ್ಣೆರಚಿ ಹೊರಟರು ಎಂದು ಕೂಡ ಹೇಳಲಾಗುತ್ತದೆ.[೧೪೮] ಬೆಳಗಾದರೂ ಮುಹಮ್ಮದ್ ಮಲಗಿದಲ್ಲಿಂದ ಏಳದಿರುವುದನ್ನು ಕಂಡು ಸಂಶಯದಿಂದ ಕುರೈಷರು ಒಳಹೋಗಿ ನೋಡಿದಾಗ ಅದು ಅಲಿ ಬಿನ್ ಅಬೂತಾಲಿಬ್ ಆಗಿದ್ದರು. ಮುಹಮ್ಮದ್ ತಪ್ಪಿಸಿಕೊಂಡಿದ್ದರು. ಇದು ನಡೆದದ್ದು12 ಅಥವಾ 13ನೇ ಸಪ್ಟೆಂಬರ್ 622.[೧೫೨]

ಮುಹಮ್ಮದ್ ನೇರವಾಗಿ ತನ್ನ ಸಂಗಡಿಗ ಅಬೂಬಕರ್ ಬಳಿಗೆ ಹೋದರು. ಅಬೂಬಕರ್ ಆಗಲೇ ಪ್ರಯಾಣಕ್ಕೆ ಎರಡು ಒಂಟೆಗಳನ್ನು ಸಿದ್ಧಪಡಿಸಿದ್ದರು. ಮುಹಮ್ಮದ್ ಮತ್ತು ಅಬೂಬಕರ್ ಮಕ್ಕಾದಿಂದ 5 ಕಿ.ಮೀ. ದೂರದಲ್ಲಿರುವ ಒಂದು ಪರ್ವತದಲ್ಲಿರುವ ಸೌರ್ ಗುಹೆಯೊಳಗೆ ಸೇರಿಕೊಂಡರು.[೧೫೩] ಅವರು ಮೂರು ದಿನ ಆ ಗುಹೆಯಲ್ಲೇ ತಂಗಿದರು. ಅಬೂಬಕರ್‌ರ ಮಗ ಅಬ್ದುಲ್ಲಾ ಅವರಿಗೆ ಮಕ್ಕಾದ ಸುದ್ದಿಯನ್ನು ತಲುಪಿಸುತ್ತಿದ್ದರು.[೧೫೩] ಆಮಿರ್ ಬಿನ್ ಫುಹೈರ ಒಂಟೆಯ ಹಾಲನ್ನು ಕರೆದು ರಾತ್ರಿ ವೇಳೆಯಲ್ಲಿ ಅವರಿಗೆ ತಲುಪಿಸುತ್ತಿದ್ದರು. ಅಬೂಬಕರ್‌ರ ಮಗಳು ಅಸ್ಮಾ ಅವರಿಗೆ ರಾತ್ರಿ ಹೊತ್ತಿನಲ್ಲಿ ಊಟ ತಲುಪಿಸುತ್ತಿದ್ದರು.[೧೫೪] ಎಲ್ಲವೂ ರಹಸ್ಯವಾಗಿಯೇ ನಡೆಯುತ್ತಿತ್ತು.

ಮುಹಮ್ಮದ್ ತಪ್ಪಿಸಿಕೊಂಡ ಸುದ್ದಿ ತಿಳಿದಾಗ ಕುರೈಷರು ನಾಲ್ಕೂ ದಿಕ್ಕಿಗೆ ಆಳುಗಳನ್ನು ಕಳುಹಿಸಿದರು. ಮುಹಮ್ಮದ್‌ರನ್ನು ಹಿಡಿದು ತಂದವರಿಗೆ 100 ಒಂಟೆಗಳ ಬಹುಮಾನವನ್ನು ಘೋಷಿಸಿದರು.[೧೫೫] ಬಹುಮಾನದ ಆಸೆಯಿಂದ ಜನರು ಎಲ್ಲಾ ಕಡೆ ಮುಹಮ್ಮದ್‌ರನ್ನು ಹುಡುಕತೊಡಗಿದರು. ಅವರು ಹುಡುಕುತ್ತಾ ಗುಹೆಯ ಬಳಿಗೂ ಬಂದರು. ಆದರೆ ಅದೃಷ್ಟವಶಾತ್ ಅವರು ಮುಹಮ್ಮದ್‌ರನ್ನು ನೋಡಲಿಲ್ಲ.[೧೫೬]

ಮೂರು ದಿನಗಳ ನಂತರ ಮಕ್ಕಾದ ಜನರ ಆವೇಶ ತಣಿದಾಗ, ಮುಹಮ್ಮದ್ ಮತ್ತು ಅಬೂಬಕರ್ ಮದೀನದ ದಾರಿ ಹಿಡಿದರು.[೧೫೪] ದಾರಿ ಮಧ್ಯೆ ಸುರಾಕ ಬಿನ್ ಮಾಲಿಕ್ ಎಂಬವರು ಮುಹಮ್ಮದ್‌ರನ್ನು ಅಟ್ಟಿಸಿಕೊಂಡು ಬಂದರು. ಆದರೆ ಅವರಿಗೂ ಮುಹಮ್ಮದ್‌ರನ್ನು ಹಿಡಿಯಲಾಗಲಿಲ್ಲ.[೧೫೭] ಅವರು ಮೂರು ಬಾರಿ ಮುಹಮ್ಮದ್‌ರನ್ನು ಹಿಡಿಯಲು ಪ್ರಯತ್ನಿಸಿದಾಗಲೂ ಅವರ ಕುದುರೆ ಮುಗ್ಗರಿಸಿ ಬಿದ್ದು ಅದರ ಕಾಲು ನೆಲದಲ್ಲಿ ಹೂತುಹೋಯಿತು ಎಂದು ಕೆಲವರು ಹೇಳಿದ್ದಾರೆ.[೧೫೮][೧೫೯]

ಮುಹಮ್ಮದ್ ಮದೀನದಲ್ಲಿಸಂಪಾದಿಸಿ

 
ಮದೀನದ ಕುಬಾದಲ್ಲಿರುವ ಕುಬಾ ಮಸೀದಿ. ಮುಹಮ್ಮದ್ ಮದೀನಕ್ಕೆ ಬಂದ ನಂತರ ನಿರ್ಮಿಸಿದ ಮೊದಲ ಮಸೀದಿ

ಮುಹಮ್ಮದ್ ರಬೀಉಲ್ ಅವ್ವಲ್ 8 ಸೋಮವಾರ (23 ಸೆಪ್ಟೆಂಬರ್ 622) ಕುಬಾ ತಲುಪಿದರು.[೧೬೦] ಮದೀನದ ಜನರು ದಿನಾಲು ಬೆಳಗ್ಗೆ ಸೂರ್ಯ ಆಗಸಕ್ಕೇರುವ ತನಕ ಮುಹಮ್ಮದ್‌ರಿಗಾಗಿ ಕಾಯುತ್ತಿದ್ದರು.[೧೬೧] ಮುಹಮ್ಮದ್‌ರ ಆಗಮಿಸಿಲ್ಲ ಎಂದು ಖಚಿತವಾಗುವಾಗ ಅವರು ನಿರಾಸೆಯಿಂದ ಹಿಂದಿರುಗುತ್ತಿದ್ದರು. ಹೀಗೆ ಒಂದಿನ ಅವರು ನಿರಾಸೆಯಿಂದ ಹಿಂದಿರುಗಿದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಒಬ್ಬ ಯಹೂದಿ ಅವರನ್ನು ಕೂಗಿ ಕರೆದು ಮುಹಮ್ಮದ್ ಬರುತ್ತಿದ್ದಾರೆ ಎಂದರು.[೧೬೨] ಜನರು ಮುಹಮ್ಮದ್‌ರನ್ನು ಸ್ವಾಗತಿಸಲು ಧಾವಿಸಿ ಬಂದರು.[೧೬೩]

ಮುಹಮ್ಮದ್ ಗುರವಾರ ತನಕ ನಾಲ್ಕು ದಿನಗಳ ಕಾಲ ಕುಬಾದಲ್ಲಿ ತಂಗಿದರು.[೧೬೪] ನಂತರ ಶುಕ್ರವಾರ ಬೆಳಗ್ಗೆ ಅಲ್ಲಿಂದ ಮದೀನಕ್ಕೆ ಹೊರಟು ಬನೂ ಸಲೀಂ ಬಿನ್ ಔಫ್ ಗೋತ್ರದವರ ಬಳಿಗೆ ತಲುಪಿ ಅಲ್ಲಿ ಶುಕ್ರವಾರದ ನಮಾಝ್ ನಿರ್ವಹಿಸಿದರು.[೧೬೫] ಮುಹಮ್ಮದ್ ತನ್ನ ಮನೆಯಲ್ಲಿ ತಂಗಬೇಕೆಂದು ಮದೀನದ ಪ್ರತಿಯೊಬ್ಬರೂ ಬಯಸುತ್ತಿದ್ದರು. ಅವರು ಅದಕ್ಕಾಗಿ ಒಂಟೆಯ ಲಗಾಮು ಹಿಡಿದಾಗ ಮುಹಮ್ಮದ್ ಹೇಳಿದರು: "ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಎಲ್ಲಿ ಹೋಗಿ ಮಂಡಿಯೂರಬೇಕೆಂದು ಅದಕ್ಕೆ ಗೊತ್ತಿದೆ."[೧೬೫] ಒಂಟೆ ಬನೂ ಮಾಲಿಕ್ ಬಿನ್ ನಜ್ಜಾರ್ ಗೋತ್ರದವರ ಸ್ಥಳದಲ್ಲಿ ಮಂಡಿಯೂರಿತು. ಆ ಸ್ಥಳ ಬನೂ ನಜ್ಜಾರ್ ಗೋತ್ರದ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು.[೧೬೬] ಮುಹಮ್ಮದ್ ಅಬೂ ಅಯ್ಯೂಬ್ ಬಿನ್ ಝೈದ್‌ರ ಮನೆಯಲ್ಲಿ ತಂಗಿದರು.[೧೬೫]

ಮಸೀದಿ ನಿರ್ಮಾಣಸಂಪಾದಿಸಿ

 
ಮದೀನಾ ಮಹಾ ಮಸೀದಿಯ ರಾತ್ರಿ ನೋಟ. ಇದು ಮುಹಮ್ಮದ್ ಸ್ವತಃ ಕಟ್ಟಿದ ಮಸೀದಿ. ಇದನ್ನು ಮಸ್ಜಿದ್ ನಬವಿ (ಪ್ರವಾದಿಯ ಮಸೀದಿ) ಎಂದು ಕರೆಯಲಾಗುತ್ತದೆ.

ಮುಹಮ್ಮದ್ ಆ ಇಬ್ಬರು ಅನಾಥ ಬಾಲಕರನ್ನು ಕರೆಸಿ ಸ್ಥಳದ ಬೆಲೆಯನ್ನು ತಿಳಿಸಲು ಹೇಳಿದರು.[೧೬೭] ಬಾಲಕರು ಉಚಿತವಾಗಿ ಕೊಡುತ್ತೇವೆಂದು ಹೇಳಿದಾಗ ಮುಹಮ್ಮದ್ ಒಪ್ಪಲಿಲ್ಲ. ಅವರು ಆ ಸ್ಥಳವನ್ನು ಹಣ ಕೊಟ್ಟು ಖರೀದಿಸಿದರು.[೧೬೮] ನಂತರ ತಮ್ಮ ಅನುಯಾಯಿಗಳ ಜೊತೆಗೆ ಅಲ್ಲಿ ಮಸೀದಿ ನಿರ್ಮಿಸಿದರು. ಮುಹಮ್ಮದ್ ಸ್ವತಃ ಕಲ್ಲುಗಳನ್ನು ಹೊತ್ತು ತರುತ್ತಿದ್ದರು.[೧೬೮] ಮಸೀದಿ ಮತ್ತು ಅದರ ಪಕ್ಕದಲ್ಲಿ ತನಗೆ ಮನೆ ನಿರ್ಮಾಣವಾಗುವ ತನಕ ಸುಮಾರು ಏಳು ತಿಂಗಳುಗಳ ಕಾಲ ಮುಹಮ್ಮದ್ ಅಬೂ ಅಯ್ಯೂಬ್‌ರ ಮನೆಯಲ್ಲೇ ತಂಗಿದ್ದರು.[೧೬೫] ಮಕ್ಕಾದಲ್ಲಿದ್ದ ಮುಹಮ್ಮದ್‌ರ ಅನುಯಾಯಿಗಳೆಲ್ಲರೂ ಮದೀನಕ್ಕೆ ವಲಸೆ ಬಂದರು. ಇವರನ್ನು ಮುಹಾಜಿರ್ ಎಂದು ಕರೆಯಲಾಗುತ್ತದೆ. ಮದೀನದಲ್ಲಿ ಅವರಿಗೆ ಊಟ-ವಸತಿಯ ವ್ಯವಸ್ಥೆ ಮಾಡಿಕೊಟ್ಟವರನ್ನು ಅನ್ಸಾರ್ ಎಂದು ಕರೆಯಲಾಗುತ್ತದೆ.[೧೬೯]

ಮುಹಮ್ಮದ್ ಮುಹಾಜಿರ್ ಮತ್ತು ಅನ್ಸಾರ್‌ಗಳ ನಡುವೆ ಭಾತೃತ್ವವನ್ನು ಸ್ಥಾಪಿಸಿದರು.[೧೭೦] ಅನ್ಸಾರ್‌ಗಳು ತಮ್ಮಲ್ಲಿರುವ ಎಲ್ಲವನ್ನೂ ಮುಹಾಜಿರ್‌ಗಳೊಡನೆ ಹಂಚಿದರು. ಮುಹಮ್ಮದ್ ಮದೀನದಲ್ಲಿದ್ದ ಯಹೂದಿಗಳೊಡನೆ ಕೂಡ ಕೆಲವು ಕರಾರುಗಳನ್ನು ಮಾಡಿಕೊಂಡರು.[೧೭೧] ಇಸ್ಲಾಂ ಮದೀನದಲ್ಲಿ ವ್ಯಾಪಿಸತೊಡಗಿತು. ಮದೀನದಲ್ಲಿ ಅಧಿಕಾರ ಗಳಿಸಿ ರಾಜನಂತೆ ಆಳಬೇಕೆಂದು ಕನಸು ಕಾಣುತ್ತಿದ್ದ ಅಬ್ದುಲ್ಲಾ ಬಿನ್ ಉಬೈ ರ ಕನಸು ಮುಹಮ್ಮದ್‌ರ ಆಗಮನದಿಂದ ನುಚ್ಚುನೂರಾಯಿತು. ಅವರು ಮನದೊಳಗೇ ರಹಸ್ಯವಾಗಿ ಮುಹಮ್ಮದ್‌ರ ವಿರುದ್ಧ ಕತ್ತಿ ಮಸೆಯತೊಡಗಿದರು.[೧೭೨] ಆದರೆ ನೇರವಾಗಿ ಮುಹಮ್ಮದ್‌ರನ್ನು ಎದುರಿಸುವ ಧೈರ್ಯ ಅವರಿಗಿರಲಿಲ್ಲ. ಆದ್ದರಿಂದ ಅವರು ಮತ್ತು ಅವರ ಅನುಯಾಯಿಗಳು ತೋರಿಕೆಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.[೧೭೩] ಆದರೆ ಮನಸ್ಸಿನಲ್ಲಿ ಅವರು ಇಸ್ಲಾಂ ಧರ್ಮವನ್ನು ದ್ವೇಷಿಸುತ್ತಿದ್ದರು. ಅವರು ಕಪಟವಿಶ್ವಾಸಿಗಳಾಗಿದ್ದರು. ಕೆಲವು ಯಹೂದಿಗಳು ಕೂಡ ಅವರೊಡನೆ ಸೇರಿಕೊಂಡರು.[೧೭೪] ಮುಹಮ್ಮದ್ ಮತ್ತು ಅನುಯಾಯಿಗಳು 16 ತಿಂಗಳುಗಳ ಕಾಲ ಜೆರೂಸಲೇಮ್‌ಗೆ ಮುಖಮಾಡಿ ನಮಾಝ್ ನಿರ್ವಹಿಸಿದರು. ನಂತರ ಅವರಿಗೆ ದೇವರಿಂದ ಮಕ್ಕಾಗೆ ತಿರುಗಬೇಕೆಂಬ ಆಜ್ಞೆ ಬಂತು.[೧೭೫] ಅಝಾನ್ ಕೊಡುವ ಪದ್ಧತಿ ಆರಂಭವಾಯಿತು.[೧೭೬] ಮುಹಮ್ಮದ್ ಮದೀನದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯ ನಿರ್ಮಿಸುವತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದರು. ಹಿಜರಿ ಎರಡನೇ ವರ್ಷದಲ್ಲಿ ಉಪವಾಸ ಕಡ್ಡಾಯವಾಯಿತು.[೧೭೭]

ಆಧಾರ ಗ್ರಂಥಗಳುಸಂಪಾದಿಸಿ

 1. Safi-ur-Rahman Mubarakpuri, The Sealed Nectar, 1996, Darussalam Publications, Riyadh.
 2. Sayyid Abul Hasan Ali Nadwi, Muhammad: The Last Prophet - A Model for All Time, 1993, UK Islamic Academy, UK.
 3. Ibn Kathir, The Life of the Prophet Muhammad, Trans. by Prof. Trevor Le Gassick, Garnet Publishing, UK.
 4. Ibn Ishaq, The Life of Muhammad, Trans. by A. Guillaume, 1998, Oxford University Press, Karachi.
 5. W. Montgomery Watt, Muhammad At Mecca, 1960, Oxford University Press, London.
 6. Washington Irving, Life of Mahomet, 1874, London George Bell & Sons.

ಉಲ್ಲೇಖಗಳುಸಂಪಾದಿಸಿ

 1. Unicode has a special "Muhammad" ligature at U+FDF4
 2.  click here  for the Arabic pronunciation.
 3. ೩.೦ ೩.೧ Mubarakpuri, p. 56.
 4. https://sunnah.com/tirmidhi:3546
 5. ೫.೦ ೫.೧ W. M. Watt, p. 47
 6. Mubarakpuri, p. 61.
 7. ೭.೦ ೭.೧ ೭.೨ ೭.೩ W. M. Watt, p. 48
 8. Mubarakpuri, p. 63.
 9. Mubarakpuri, p. 68.
 10. Mubarakpuri, p. 118.
 11. Mubarakpuri, p. 169.
 12. Mubarakpuri, p. 480.
 13. Mubarakpuri, p. 49.
 14. Ibn Kathir, 1/146
 15. Mubarakpuri, p.55
 16. ೧೬.೦ ೧೬.೧ Mubarakpuri, p. 56
 17. ೧೭.೦ ೧೭.೧ ೧೭.೨ Mubarakpuri, p. 56
 18. ೧೮.೦ ೧೮.೧ Umri, 1/97
 19. Ibn Kathir, 1/142
 20. Ibn Ishaq, p.69
 21. Ibn Kathir, 1/141
 22. https://sunnah.com/muslim:1162e
 23. ೨೩.೦ ೨೩.೧ Ibn Kathir, 1/160
 24. Umri, 1/102
 25. ೨೫.೦ ೨೫.೧ Ibn Ishaq, p.70
 26. Mubarakpuri, p. 58.
 27. https://sunnah.com/muslim:162c
 28. Mubarakpuri, p.59
 29. Umri, 1/105
 30. ೩೦.೦ ೩೦.೧ Ibn Ishaq, p.73
 31. Umri, 1/150
 32. Ibn Ishaq, p. 79
 33. Ibn Ishaq, p.72
 34. ೩೪.೦ ೩೪.೧ ೩೪.೨ Umri 1/106
 35. Ibn Ishaq, p. 79-81
 36. Ibn Ishaq, p. 80-81
 37. Mubarakpuri, p.60
 38. ೩೮.೦ ೩೮.೧ ೩೮.೨ ೩೮.೩ Mubarakpuri, p.62
 39. W.M. Watt, p.38
 40. ೪೦.೦ ೪೦.೧ ೪೦.೨ Ibn Ishaq, p.82
 41. Haykal, p.62
 42. Ibn Kathir, 1/281
 43. ೪೩.೦ ೪೩.೧ ೪೩.೨ ೪೩.೩ Mubarakpuri, p. 67
 44. ೪೪.೦ ೪೪.೧ ೪೪.೨ ೪೪.೩ https://sunnah.com/bukhari:3
 45. Ibn Ishaq, p.106
 46. Mubarakpuri, p. 70
 47. Ibn Kathir, 1/300
 48. https://sunnah.com/bukhari:3215
 49. https://sunnah.com/bukhari:2
 50. ೫೦.೦ ೫೦.೧ ೫೦.೨ ೫೦.೩ ೫೦.೪ Abul Hasan, p. 32-33
 51. Ibn Ishaq, p. 111
 52. W.M. Watt, p.86
 53. Ibn Ishaq, p.114
 54. Mubarakpuri, p.77
 55. Ibn Ishaq, p.115
 56. ೫೬.೦ ೫೬.೧ Abul Hasan, p. 34
 57. ೫೭.೦ ೫೭.೧ W.M. Watt, p.58
 58. Ibn Ishaq, p. 112
 59. ೫೯.೦ ೫೯.೧ ೫೯.೨ Mubarakpuri, p.79
 60. Mubarakpuri, p.98
 61. Ibn Ishaq, p.117
 62. ೬೨.೦ ೬೨.೧ ೬೨.೨ Mubarakpuri, p.83
 63. Abul Hasan, p. 35
 64. ೬೪.೦ ೬೪.೧ ೬೪.೨ ೬೪.೩ Haykal, p. 88
 65. Mubarakpuri, p.87
 66. Ibn Ishaq, p.144
 67. Abul Hasan, p.37
 68. Ibn Kathir, 1/347
 69. https://sunnah.com/ibnmajah:150
 70. Ibn Ishaq, p.130
 71. Abul Hasan, p.41
 72. ೭೨.೦ ೭೨.೧ Haykal, p.96
 73. Haykal, p.97
 74. Abul Hasan, p. 43
 75. Ibn Ishaq, p.132-133
 76. Mubarakpuri, p.85
 77. Haykal, p.88
 78. ೭೮.೦ ೭೮.೧ Abul Hasan, p.36
 79. Ibn Kathir, 1/344
 80. Haykal, p.90
 81. Ibn Kathir, 1/345
 82. Mubarakpuri, p.99
 83. Ibn Ishaq, p.146
 84. ೮೪.೦ ೮೪.೧ Abul Hasan, p. 44
 85. Haykal, p.106
 86. W.M. Watt, p.102
 87. ೮೭.೦ ೮೭.೧ ೮೭.೨ ೮೭.೩ Mubarakpuri, p.102
 88. Haykal, p.105
 89. W.M. Watt, p.110
 90. Abul Hasan, p.45
 91. Mubarakpuri, p.103
 92. ೯೨.೦ ೯೨.೧ Haykal, p.100
 93. ೯೩.೦ ೯೩.೧ Abul Hasan, p.47
 94. Haykal, p.95
 95. Mubarakpuri, p.108-109
 96. Haykal, p.131
 97. Mubarakpuri, p.105
 98. ೯೮.೦ ೯೮.೧ Mubarakpuri, p.116
 99. ೯೯.೦ ೯೯.೧ Abul Hasan, p.51
 100. Mubarakpuri, p.117
 101. Ibn Ishaq, p.160
 102. Mubarakpuri, p.117
 103. ೧೦೩.೦ ೧೦೩.೧ ೧೦೩.೨ Mubarakpuri, p.118
 104. Ibn Ishaq, p.172
 105. Haykal, p.132
 106. Haykal, p.133
 107. Mubarakpuri, p.119
 108. Mubarakpuri, p.123
 109. Haykal, p.135
 110. Mubarakpuri, p.124
 111. Mubarakpuri, p.125
 112. ೧೧೨.೦ ೧೧೨.೧ Ibn Ishaq, p.193
 113. ೧೧೩.೦ ೧೧೩.೧ W.M. Watt, p.139
 114. ೧೧೪.೦ ೧೧೪.೧ ೧೧೪.೨ Abul Hasan, p.54
 115. ೧೧೫.೦ ೧೧೫.೧ ೧೧೫.೨ Mubarakpuri, p.136
 116. Mubarakpuri, p.137
 117. ೧೧೭.೦ ೧೧೭.೧ Abul Hasan, p.55
 118. Mubarakpuri, p.138
 119. Haykal, p.139
 120. ೧೨೦.೦ ೧೨೦.೧ Mubarakpuri, p.147
 121. Haykal, p.140
 122. Ibn Ishaq, p.182
 123. Ibn Ishaq, p.185
 124. Mubarakpuri, p.149
 125. Ibn Ishaq, p.194
 126. Haykal, p.148
 127. Mubarakpuri, p.145
 128. Ibn Ishaq, p.198
 129. Mubarakpuri, p.146
 130. Abul Hasan, p.57
 131. W.M. Watt, p.145
 132. Ibn Ishaq, p.199
 133. Mubarakpuri, p.154
 134. ೧೩೪.೦ ೧೩೪.೧ Abul Hasan, p.58
 135. Mubarakpuri, p.155
 136. Ibn Ishaq, p.202
 137. Mubarakpuri, p.158
 138. Ibn Ishaq, p. 204
 139. Abul Hasan, p.59
 140. W.M. Watt, p.149
 141. Ibn Ishaq, p.216
 142. Mubarakpuri, p.163
 143. Mubarakpuri, p.164
 144. Abul Hasan, p.60
 145. Ibn Ishaq, p. 221
 146. Mubarakpuri, p.166
 147. W.M. Watt, p.150
 148. ೧೪೮.೦ ೧೪೮.೧ Ibn Ishaq, p. 222
 149. Mubarakpuri, p.169
 150. Haykal, p.163
 151. W.M. Watt, p.151
 152. Mubarakpuri, p.169
 153. ೧೫೩.೦ ೧೫೩.೧ Mubarakpuri, p.170
 154. ೧೫೪.೦ ೧೫೪.೧ Ibn Ishaq, p.224
 155. Mubarakpuri, p.171
 156. Haykal, p.165
 157. Mubarakpuri, p.172
 158. Ibn Ishaq, p.226
 159. Haykal, p.168
 160. Mubarakpuri, p.174
 161. Mubarakpuri, p.175
 162. Ibn Ishaq, p.227
 163. Abul Hasan, p.67
 164. Mubarakpuri, p.176
 165. ೧೬೫.೦ ೧೬೫.೧ ೧೬೫.೨ ೧೬೫.೩ Ibn Ishaq, p.228
 166. Haykal, p.171
 167. Abul Hasan, p.68
 168. ೧೬೮.೦ ೧೬೮.೧ Haykal, p.174
 169. Mubarakpuri, p.182
 170. Ibn Ishaq, p.234
 171. Ibn Ishaq, p.232
 172. Mubarakpuri, p.199
 173. Abul Hasan, p.70
 174. Ibn Ishaq, p.246
 175. Haykal, p.194
 176. Ibn Ishaq, p.235
 177. Abul Hasan, p.72