ಉಹುದ್ ಪರ್ವತ (ಅರೇಬಿಕ್ جبل أحد - ಜಬಲ್ ಉಹುದ್) ಸೌದಿ ಅರೇಬಿಯಾದ ಮದೀನಾ ನಗರದ ಉತ್ತರ ದಿಕ್ಕಿನಲ್ಲಿರುವ ಪರ್ವತ. ಮದೀನಾ ಮಸೀದಿಯಿಂದ 5 ಕಿ.ಮೀ. ದೂರದಲ್ಲಿರುವ ಈ ಪರ್ವತವು ಪೂರ್ವದಿಂದ ಪಶ್ಚಿಮಕ್ಕೆ ಸರಪಳಿಯಾಗಿ ವಿಸ್ತರಿಸುತ್ತಾ ಉತ್ತರದ ಕಡೆಗೆ ವಾಲುತ್ತದೆ.[] ಇಸ್ಲಾಮಿಕ್ ಇತಿಹಾಸದಲ್ಲಿ ಈ ಪರ್ವತವು ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ ಮತ್ತು ಈ ಪರ್ವತಕ್ಕೆ ಇಸ್ಲಾಂ ಧರ್ಮದಲ್ಲಿ ಮಹತ್ವವನ್ನು ಕಲ್ಪಿಸಲಾಗಿದೆ.

ಉಹುದ್ ಪರ್ವತ
Highest point
ಎತ್ತರ1,077 m (3,533 ft)

ನಾಮಕರಣ

ಬದಲಾಯಿಸಿ

ಅರೇಬಿಕ್ ಭಾಷೆಯಲ್ಲಿ ಉಹುದ್ ಎಂದರೆ "ಒಂದು". ಉಹುದ್ ಪರ್ವತಕ್ಕೆ "ಉಹುದ್" ಎಂದು ನಾಮಕರಣ ಮಾಡಲು ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ಏನೆಂದರೆ, ಈ ಪರ್ವತವು ಇತರ ಪರ್ವತಗಳಿಂದ ಬೇರ್ಪಟ್ಟು ಕಣಿವೆ ಮತ್ತು ಬಯಲು ಪ್ರದೇಶಗಳಿಂದ ಸುತ್ತುವರಿದು ಏಕಾಂಗಿಯಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆಯೆಂದು ಹೇಳಲಾಗುತ್ತದೆ. ಇನ್ನೊಂದು ಅಭಿಪ್ರಾಯದ ಪ್ರಕಾರ, ಉಹುದ್ ಪರ್ವತ ಪ್ರದೇಶದಲ್ಲಿ ಮೊತ್ತಮೊದಲು ನೆಲೆಸಿದವರು ಅಮಾಲೀಕರು. ಇವರಲ್ಲಿದ್ದ "ಉಹುದ್" ಎಂಬ ಹೆಸರಿನ ವ್ಯಕ್ತಿ ಈ ಪರ್ವತದಲ್ಲಿ ನೆಲೆಸಿದ ಕಾರಣ ಇದಕ್ಕೆ ಅವನ ಹೆಸರನ್ನೇ ಇಟ್ಟು ಕರೆಯಲಾಗಿದೆ ಎನ್ನಲಾಗುತ್ತದೆ. ಮೂರನೆಯ ಅಭಿಪ್ರಾಯ ಪ್ರಕಾರ ಈ ಪರ್ವತವು ದೇವರ ಏಕೈಕತೆಯನ್ನು ಸೂಚಿಸುವುದರಿಂದ ಇದಕ್ಕೆ ಉಹುದ್ (ಒಂದು) ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಭೌಗೋಳಿಕ ವಿನ್ಯಾಸ

ಬದಲಾಯಿಸಿ

ಈ ಪರ್ವತ ಶ್ರೇಣಿಯನ್ನು ರೂಪಿಸುವ ಬಂಡೆಗಳು ಪೂರ್ವ ಕ್ಯಾಂಬ್ರಿಯನ್ ಯುಗಕ್ಕೆ (800-690 ಮಿಲಿಯನ್ ವರ್ಷಗಳ ಹಿಂದಕ್ಕೆ) ಸೇರಿವೆ. ಉಹುದ್ ಪರ್ವತದಲ್ಲಿ ಕಂಡುಬರುವ ಬಂಡೆಗಳು ಅಷ್ಟೇನೂ ವಿರೂಪಗೊಳ್ಳುವುದಿಲ್ಲ ಮತ್ತು ಹೆಚ್ಚಿನ ಮಟ್ಟದ ಗಡಸುತನವನ್ನು ಹೊಂದಿದೆ ಎಂದು ಸೌದಿ ಭೂವೈಜ್ಞಾನಿಕ ಪ್ರಾಧಿಕಾರದ ಭೂವೈಜ್ಞಾನಿಕ ಸರ್ವೇಕ್ಷಣಾ ವಿಭಾಗದ ನಿರ್ದೇಶಕ ಡಾ. ವಾದಿಈ ಕಶ್ಕರಿ ಹೇಳುತ್ತಾರೆ. ಉಹುದ್ ಪರ್ವತದ ಬಹುಪಾಲು ಕೆಂಪು-ಗುಲಾಬಿ ಬಣ್ಣದ ರೈಯೋಲೈಟ್ ಮತ್ತು ತಿಳಿ ಬೂದು ಬಣ್ಣದ ಡಾಸೈಟ್, ಹಾಗೆಯೇ ಬ್ರೆಸಿಯಾದ ಗಟ್ಟಿ ಜ್ವಾಲಾಮುಖಿ ಬಂಡೆಗಳು ಮತ್ತು ಗಟ್ಟಿ ಜ್ವಾಲಾಮುಖಿ ಬೂದಿಯನ್ನು ಒಳಗೊಂಡಿದೆ ಎಂದು ಅವರು ಹೇಳುತ್ತಾರೆ.[]

ಮದೀನಾ ನಗರದ ಇತಿಹಾಸ ಮತ್ತು ಹೆಗ್ಗುರುತುಗಳ ಸಂಶೋಧಕರಾದ ಡಾ. ತನೀಬ್ ಅಲ್-ಫೈದಿ ಹೇಳುವಂತೆ, ಉಹುದ್ ಪರ್ವತವು ನೈಸರ್ಗಿಕ ಕುಳಿಗಳನ್ನು ಒಳಗೊಂಡಿದ್ದು, ಇವು ವರ್ಷದ ಬಹುಪಾಲು ಮಳೆನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. "ಲೂಝ್ ಅನ್ನಬಿ" (ಅಗಲವಾದ ಎಲೆಗಳನ್ನು ಹೊಂದಿರುವ ಸಣ್ಣ ಸಸ್ಯ) ಮುಂತಾದ ಹಲವಾರು ವಿಶಿಷ್ಟ ಮರಗಳು ಮತ್ತು ಸಸ್ಯಗಳು ಈ ಪರ್ವತದಲ್ಲಿ ಬೆಳೆಯುತ್ತವೆ.[] ಈ ಪರ್ವತವು ಹಲವಾರು ಗುಹೆಗಳನ್ನು ಹೊಂದಿದ್ದು ಕೆಲವು ಗುಹೆಗಳು ಒಂದೂವರೆ ಮೀ. ಎತ್ತರ ಮತ್ತು 15 ಮೀ. ಆಳವನ್ನು ಹೊಂದಿವೆ.

ಉಹುದ್ ಪರ್ವತ ಶ್ರೇಣಿಯು 7 ಕಿ.ಮೀ. ಉದ್ದ, 2 ರಿಂದ 3 ಕಿ.ಮೀ. ಅಗಲ ಮತ್ತು ಸುಮಾರು 1077 ಮೀ. ಎತ್ತರವಾಗಿದೆ.

 
ಉಹುದ್ ಪರ್ವತ

ಉಹುದ್ ಪರ್ವತವು ಉತ್ತರದಲ್ಲಿ ವಿಶ್ವವಿದ್ಯಾನಿಲಯಗಳ ರಸ್ತೆ, ದಕ್ಷಿಣದಲ್ಲಿ ದಕ್ಷಿಣ ರಿಂಗ್ ರಸ್ತೆ, ಪೂರ್ವದಲ್ಲಿ ವಿಮಾನ ನಿಲ್ದಾಣ ರಸ್ತೆ, ವಾಯುವ್ಯದಲ್ಲಿ ತಯಾಬ್ ಪರ್ವತ ಮತ್ತು ಸೌರ್ ಪರ್ವತ ಹಾಗೂ ನೈಋತ್ಯದಲ್ಲಿ ಐನೈನ್‌ ಪರ್ವತದಿಂದ (ಇದನ್ನು ರುಮಾತ್ ಪರ್ವತವೆಂದು ಕೂಡ ಕರೆಯಲಾಗುತ್ತದೆ) ಸುತ್ತುವರಿದಿದೆ. ಇದರ ತಳಭಾಗದಿಂದ ಕನಾತ್ ಕಣಿವೆ ಹಾದುಹೋಗುತ್ತದೆ.

ಐತಿಹಾಸಿಕ ಹಿನ್ನೆಲೆ

ಬದಲಾಯಿಸಿ

ಉಹುದ್ ಪರ್ವತದ ತಳದಲ್ಲಿರುವ ಮೈದಾನವು ಮುಸ್ಲಿಮರು ಮತ್ತು ಕುರೈಷರ ನಡುವೆ ಉಹುದ್ ಯುದ್ಧ ಜರುಗಿದ ಸ್ಥಳ. ಈ ಯುದ್ಧವು ಹಿಜರಿ 3ನೇ ವರ್ಷದಲ್ಲಿ ಪರ್ವತದ ನೈಋತ್ಯ ದಿಕ್ಕಿನಲ್ಲಿ ರುಮಾತ್ ಪರ್ವತದ ಬಳಿ ನಡೆಯಿತು. ಈ ಯುದ್ಧದಲ್ಲಿ ಮುಹಮ್ಮದ್ ಪೈಗಂಬರರ ಚಿಕ್ಕಪ್ಪ ಹಂಝ ಬಿನ್ ಅಬ್ದುಲ್ ಮುತ್ತಲಿಬ್ ಸೇರಿದಂತೆ 70 ಮುಸಲ್ಮಾನರು ಹತರಾದರು. ಈ 70 ಮುಸಲ್ಮಾನರನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ. ಮದೀನಕ್ಕೆ ಭೇಟಿ ನೀಡುವ ಮುಸಲ್ಮಾನರು ಈ ಪರ್ವತದ ತಳದಲ್ಲಿರುವ ಸಮಾಧಿಗಳಿಗೂ ಭೇಟಿ ನೀಡುತ್ತಾರೆ.[]

 
ಉಹುದ್ ಪರ್ವತಕ್ಕೆ ಪ್ರವಾಸಿಗಳು ಭೇಟಿ ನೀಡುತ್ತಿರುವುದು

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Mount Uhud ಆರ್ಕೈವ್ ಮಾಡಲಾದ ಪುಟ.
  2. ೨.೦ ೨.೧ Mountain of Uhud continues to tell story of the prophecy ಆರ್ಕೈವ್ ಮಾಡಲಾದ ಪುಟ.