ಸಲ್ಲಲ್ಲಾಹು ಅಲೈಹಿ ವಸಲ್ಲಂ
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ (ಅರೇಬಿಕ್: صلى الله عليه وسلم) — ಮುಸಲ್ಮಾನರು ಮುಹಮ್ಮದ್ ಪೈಗಂಬರರ ಹೆಸರು ಕೇಳುವಾಗ, ಹೇಳುವಾಗ ಮತ್ತು ಬರೆಯುವಾಗ ಬಳಸುವ ಪ್ರಾರ್ಥನೆಯ ರೂಪದಲ್ಲಿರುವ ನುಡಿಗಟ್ಟು. ಮುಸಲ್ಮಾನರ ನಂಬಿಕೆಯ ಪ್ರಕಾರ ಮುಹಮ್ಮದ್ ಪೈಗಂಬರರ ಹೆಸರು ಕೇಳುವಾಗ, ಹೇಳುವಾಗ ಮತ್ತು ಬರೆಯುವಾಗ ಈ ನುಡಿಗಟ್ಟನ್ನು ಬಳಸುವುದು ಕಡ್ಡಾಯವಾಗಿದೆ. ಈ ನುಡಿಗಟ್ಟನ್ನು ಸ್ವಲಾತ್ (ಅರೇಬಿಕ್: صلاة) ಎನ್ನಲಾಗುತ್ತದೆ. ಉರ್ದು ಭಾಷೆಯಲ್ಲಿ ಇದನ್ನು ದುರೂದ್ ಎನ್ನುತ್ತಾರೆ. ಈ ನುಡಿಗಟ್ಟನ್ನು ಬಳಸುವ ಉದ್ದೇಶವು ಮುಹಮ್ಮದ್‌ರನ್ನು ಗೌರವಿಸುವುದು ಮತ್ತು ಅವರಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದಾಗಿದೆ.
ವಿಭಿನ್ನ ರೂಪಗಳು
ಬದಲಾಯಿಸಿಈ ನುಡಿಗಟ್ಟನ್ನು ಮೂರು ವಿಭಿನ್ನ ರೂಪಗಳಲ್ಲಿ ಬಳಸಲಾಗುತ್ತದೆ.
- ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ (ಅರೇಬಿಕ್: صلى الله عليه وسلم): ಇದು ಮುಹಮ್ಮದ್‌ರನ್ನು ಮಾತ್ರ ನಿರ್ದಿಷ್ಟವಾಗಿ ಬಳಸುವ ನುಡಿಗಟ್ಟು. ಇದರ ಅರ್ಥ: ಅವರ ಮೇಲೆ (ಅಂದರೆ ಮುಹಮ್ಮದ್‌ರ ಮೇಲೆ) ದೇವರ ಶಾಂತಿ ಮತ್ತು ಅಶೀರ್ವಾದಗಳು (ಅಥವಾ ಅನುಗ್ರಹಗಳು) ಸದಾ ವರ್ಷಿಸುತ್ತಿರಲಿ. ಇದು ಸಾಮಾನ್ಯವಾಗಿ ಮುಸ್ಲಿಂ ಜನಸಾಮಾನ್ಯರು ಅತಿಹೆಚ್ಚಾಗಿ ಬಳಸುವ ನುಡಿಗಟ್ಟು.
- ಸ್ವಲ್ಲಲ್ಲಾಹು ಅಲೈಹಿ ವಆಲಿಹಿ ವಸಲ್ಲಂ (ಅರೇಬಿಕ್: صلى الله عليه وآله وسلم): ಇದು ಮುಹಮ್ಮದ್‌ರೊಂದಿಗೆ ಅವರ ಕುಟುಂಬವನ್ನು ಸೇರಿಸಿ ಬಳಸುವ ನುಡಿಗಟ್ಟು. ಇದರ ಅರ್ಥ: ಅವರ ಮೇಲೆ (ಅಂದರೆ ಮುಹಮ್ಮದ್‌ರ ಮೇಲೆ) ಮತ್ತು ಅವರ ಕುಟುಂಬದ ಮೇಲೆ ದೇವರ ಶಾಂತಿ ಮತ್ತು ಅಶೀರ್ವಾದಗಳು (ಅಥವಾ ಅನುಗ್ರಹಗಳು) ಸದಾ ವರ್ಷಿಸುತ್ತಿರಲಿ. ಇದು ಸಾಮಾನ್ಯವಾಗಿ ಮುಸ್ಲಿಂ ವಿದ್ವಾಂಸರು ಬಳಸುವ ನುಡಿಗಟ್ಟು.
- ಸ್ವಲ್ಲಲ್ಲಾಹು ಅಲೈಹಿ ವಆಲಿಹಿ ವಸಹ್ಬಿಹಿ ವಸಲ್ಲಂ (ಅರೇಬಿಕ್: صلى الله عليه وآله وصحبه وسلم): ಇದು ಮುಹಮ್ಮದ್‌ರೊಂದಿಗೆ ಅವರ ಕುಟುಂಬವನ್ನು ಮತ್ತು ಅವರ ಸಹಾಬಿಗಳನ್ನು (ಸಂಗಡಿಗರನ್ನು) ಸೇರಿಸಿ ಬಳಸುವ ನುಡಿಗಟ್ಟು. ಇದರ ಅರ್ಥ: ಅವರ ಮೇಲೆ (ಅಂದರೆ ಮುಹಮ್ಮದ್‌ರ ಮೇಲೆ), ಅವರ ಕುಟುಂಬದ ಮೇಲೆ ಮತ್ತು ಅವರ ಸಂಗಡಿಗರ ಮೇಲೆ ದೇವರ ಶಾಂತಿ ಮತ್ತು ಅಶೀರ್ವಾದಗಳು (ಅಥವಾ ಅನುಗ್ರಹಗಳು) ಸದಾ ವರ್ಷಿಸುತ್ತಿರಲಿ. ಇದರ ಬಳಕೆ ಬಹಳ ವಿರಳವಾಗಿದ್ದು ಸಾಮಾನ್ಯವಾಗಿ ಬರವಣಿಗೆಗಳಲ್ಲಿ ಮಾತ್ರ ಕಂಡುಬರುತ್ತದೆ.