ಝೈನಬ್ ಬಿಂತ್ ಖುಝೈಮ

ಝೈನಬ್ ಬಿಂತ್ ಖುಝೈಮ (ಅರಬ್ಬಿ: زينب بنت خزيمة) (ಕ್ರಿ.ಶ 596 – 626) — ಮುಹಮ್ಮದ್ ಪೈಗಂಬರರ ಐದನೇ ಪತ್ನಿ.[] ಇವರಿಗೆ ಉಮ್ಮುಲ್ ಮಸಾಕೀನ್ (ಅರಬ್ಬಿ: أم المساكين - ಅನುವಾದ. ದೀನರ ಮಾತೆ) ಎಂಬ ಹೆಸರು ಕೂಡ ಇದೆ.[] ಇವರು ಮುಹಮ್ಮದ್ ರನ್ನು ವಿವಾಹವಾಗಿ ಕೇವಲ ಎಂಟು[] ತಿಂಗಳಲ್ಲೇ ನಿಧನರಾದರು.[] ಚಿಕ್ಕ ವಯಸ್ಸಿನಲ್ಲೇ ನಿಧನರಾದ ಕಾರಣ ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.[]

ಉಮ್ಮುಲ್ ಮೂಮಿನೀನ್

ಝೈನಬ್ ಬಿಂತ್ ಖುಝೈಮ
زينب بنت خزيمة
ವೈಯಕ್ತಿಕ
ಜನನಕ್ರಿ.ಶ. 596
ಮರಣಕ್ರಿ.ಶ. 625
ಧರ್ಮಇಸ್ಲಾಂ ಧರ್ಮ
ಸಂಗಾತಿ
ಹೆತ್ತವರು
  • ಖುಝೈಮ ಬಿನ್ ಹಾರಿಸ್ (father)
  • ಹಿಂದ್ ಬಿಂತ್ ಔಫ್ ಬಿನ್ ಝುಹೈರ್ (mother)
ವಂಶಾವಳಿಬನೂ ಹಿಲಾಲ್ ಗೋತ್ರ

ವಂಶಾವಳಿ

ಬದಲಾಯಿಸಿ

ಝೈನಬ್ ಬಿಂತ್ ಖುಝೈಮ ಬಿನ್ ಹಾರಿಸ್ ಬಿನ್ ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಅಬ್ದ್ ಮನಾಫ್ ಬಿನ್ ಹಿಲಾಲ್ ಬಿನ್ ಆಮಿರ್ ಬಿನ್ ಸಅ್‌ಸಅ ಬಿನ್ ಮುಆವಿಯ ಬಿನ್ ಬಕರ್ ಬಿನ್ ಹವಾಝಿನ್ ಬಿನ್ ಮನ್ಸೂರ್ ಬಿನ್ ಇಕ್ರಿಮ ಬಿನ್ ಖಸ್ಫ ಬಿನ್ ಕೈಸ್ ಐಲಾನ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಝೈನಬ್ ಕ್ರಿ.ಶ 596 ರಲ್ಲಿ ಮಕ್ಕಾದಲ್ಲಿ ಬನೂ ಹಿಲಾಲ್ ಕುಟುಂಬದಲ್ಲಿ ಹುಟ್ಟಿದರು. ಅವರ ತಂದೆಯ ಹೆಸರು ಖುಝೈಮ ಬಿನ್ ಹಾರಿಸ್.[] ಅವರ ತಾಯಿ ಹಿಂದ್ ಬಿಂತ್ ಔಫ್ ಮುಹಮ್ಮದ್ರ ಇನ್ನೊಬ್ಬ ಪತ್ನಿ ಮೈಮೂನ ಬಿಂತ್ ಹಾರಿಸ್ ರಿಗೂ ತಾಯಿಯಾಗಿದ್ದರು. ಝೈನಬ್ ಮೊದಲು ತುಫೈಲ್ ಬಿನ್ ಹಾರಿಸ್‌ ಎಂಬವನನ್ನು ವಿವಾಹವಾಗಿದ್ದರು.[] ಕೆಲವೇ ವರ್ಷಗಳಲ್ಲಿ ಆತ ನಿಧನನಾದಾಗ ಅಥವಾ ವಿಚ್ಛೇದನ ನೀಡಿದಾಗ ಅವರು ಉಬೈದ ಬಿನ್ ಹಾರಿಸ್ ಎಂಬ ವ್ಯಕ್ತಿಯನ್ನು ವಿವಾಹವಾದರು.[][]

ಇಸ್ಲಾಂ ಸ್ವೀಕಾರ

ಬದಲಾಯಿಸಿ

ಝೈನಬ್ ಆರಂಭಕಾಲದಲ್ಲೇ ಇಸ್ಲಾಂ ಸ್ವೀಕರಿಸಿದ್ದರು. ಮುಹಮ್ಮದ್ ಮದೀನಕ್ಕೆ ಹಿಜ್ರ (ವಲಸೆ) ಮಾಡಲು ಆದೇಶಿಸಿದಾಗ ಅವರು ಮದೀನಕ್ಕೆ ವಲಸೆ ಹೋದರು. ಝೈನಬರ ಗಂಡ ಉಬೈದ ಮದೀನದಲ್ಲಿ ಉಹುದ್ ಯುದ್ಧದಲ್ಲಿ ಅಸುನೀಗಿದರು. ಮುಹಮ್ಮದ್‌ರನ್ನು ವಿವಾಹವಾಗುವ ಮೊದಲು ಅವರಿಗೆ ಅಬ್ದುಲ್ಲಾ ಬಿನ್ ಜಹ್‌ಶ್ ಎಂಬ ಒಬ್ಬನೇ ಗಂಡನಿದ್ದು ಅವರು ಉಹುದ್ ಯುದ್ಧದಲ್ಲಿ ನಿಧನರಾದರೆಂದು ಹೇಳಲಾಗುತ್ತದೆ.[][] ಝೈನಬ್ ಗಂಡನನ್ನು ಕಳಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದರು.

ಮುಹಮ್ಮದ್‌ರೊಡನೆ ವಿವಾಹ

ಬದಲಾಯಿಸಿ

ಉಹುದ್ ಯುದ್ಧದಲ್ಲಿ ಗಂಡನನ್ನು ಕಳಕೊಂಡು ವಿಧವೆಯಾದ ಝೈನಬ್ ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಆಗ ಮುಹಮ್ಮದ್ ಹಫ್ಸರನ್ನು ವಿವಾಹವಾಗಿ ಕೆಲವು ತಿಂಗಳುಗಳಷ್ಟೇ ಆಗಿದ್ದವು. ಝೈನಬ್ ಗಂಡನನ್ನು ಕಳಕೊಂಡು ಬಹಳ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆಂದು ತಿಳಿದುಕೊಂಡ ಮುಹಮ್ಮದ್ ಆಕೆಯನ್ನು ವಿವಾಹವಾಗಲು ನಿರ್ಧರಿಸಿದರು.[] ಆಕೆಗೆ ವಿವಾಹ ಪ್ರಸ್ತಾಪವನ್ನು ಕಳುಹಿಸಿದಾಗ ಆಕೆ ಸಂತೋಷದಿಂದ ಒಪ್ಪಿಕೊಂಡರು. ಹಿಜರಿ ಶಕೆ 4ನೇ ರಮದಾನ್ ತಿಂಗಳಲ್ಲಿ ವಿವಾಹ ನೆರವೇರಿತು. ಯುದ್ಧದಲ್ಲಿ ಗಂಡಂದಿರನ್ನು ಕಳಕೊಂಡು ವಿಧವೆಯರಾಗುವ ಮಹಿಳೆಯರನ್ನು ಇಸ್ಲಾಂ ನಿರ್ಲಕ್ಷಿಸುವುದಿಲ್ಲ ಎಂದು ತೋರಿಸಿಕೊಡುವುದಕ್ಕಾಗಿ ಮುಹಮ್ಮದ್ ಝೈನಬರನ್ನು ವಿವಾಹವಾದರು ಎನ್ನಲಾಗುತ್ತದೆ. ಮುಹಮ್ಮದರ ಪತ್ನಿಯರ ಪೈಕಿ ಕುರೈಶ್ ಗೋತ್ರಕ್ಕೆ ಸೇರದ ಮೊದಲ ಪತ್ನಿ ಝೈನಬ್ ಆಗಿದ್ದರು.

ಉಮ್ಮುಲ್ ಮಸಾಕೀನ್

ಬದಲಾಯಿಸಿ

ಝೈನಬ್ ಇಸ್ಲಾಮೀ ಪೂರ್ವ ಕಾಲದಲ್ಲೇ ಉಮ್ಮುಲ್ ಮಸಾಕೀನ್ (ದೀನರ ಮಾತೆ) ಎಂದು ಜನಜನಿತರಾಗಿದ್ದರು.[][] ಇದಕ್ಕೆ ಕಾರಣ ಅವರು ಬಡವರಿಗೆ ತೋರುತ್ತಿದ್ದ ಅನುಕಂಪ ಮತ್ತು ಸಹಾಯ. ಅವರು ತಮ್ಮ ಕೈಯಲ್ಲಿರುವುದನ್ನೆಲ್ಲಾ ಬಡವರಿಗೆ ಮತ್ತು ದೀನರಿಗೆ ಹಂಚಿ ಬಿಡುತ್ತಿದ್ದರು.[]

ಮುಹಮ್ಮದರನ್ನು ವಿವಾಹವಾದ ಕೆಲವೇ ತಿಂಗಳುಗಳಲ್ಲಿ ಝೈನಬ್ ಅನಾರೋಗ್ಯಕ್ಕೆ ತುತ್ತಾಗಿ ತಮ್ಮ 30ನೇ ವಯಸ್ಸಿನಲ್ಲಿ[] ಕ್ರಿ.ಶ. 626 (ಹಿ.ಶ. 4 ರಬೀಉಲ್ ಆಖರ್ ತಿಂಗಳಲ್ಲಿ) ಇಹಲೋಕವನ್ನು ತ್ಯಜಿಸಿದರು. ಅವರನ್ನು ಮದೀನದ ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ಭಟ್ಟಿ, ಮುಹಮ್ಮದ್ ಇಸ್ಹಾಕ್ (2012). ಪ್ರವಾದಿ ಪತ್ನಿಯರು. ದಾವಾ ಪಬ್ಲಿಕೇಶನ್ಸ್, ಕಾಟಿಪಳ್ಳ. p. 23.
  2. ೨.೦ ೨.೧ ೨.೨ Ghadanfar, Mahmood Ahmad. Great Women of Islam. Darussalam Publishers and Distributors, Saudi Arabia. p. 73.
  3. Ghadanfar, Mahmood Ahmad. Great Women of Islam. Darussalam Publishers and Distributors, Saudi Arabia. p. 74.
  4. ೪.೦ ೪.೧ ೪.೨ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು. ಶಾಂತಿ ಪ್ರಕಾಶನ. p. 37.
  5. ೫.೦ ೫.೧ ೫.೨ ನದ್ವಿ, ಅಬೂಬಕರ್ (2010). ಆದರ್ಶ ನಾರಿಯರು. ಶಾಂತಿ ಪ್ರಕಾಶನ. p. 38.
  6. Ghadanfar, Mahmood Ahmad. Great Women of Islam. Darussalam Publishers and Distributors, Saudi Arabia. p. 74.