ಹಿಜರಿ ಕ್ಯಾಲೆಂಡರ್

ಸಾಮಾನ್ಯವಾಗಿ ಮುಸ್ಲಿಮರು ಬಳಸುವ ಚಾಂದ್ರಮಾನ ಕ್ಯಾಲೆಂಡರ್
(ಹಿಜರಿ ಕ್ಯಾಲೆಂಡರು ಇಂದ ಪುನರ್ನಿರ್ದೇಶಿತ)

ಹಿಜರಿ ಕ್ಯಾಲೆಂಡರ್ (ಅರಬ್ಬಿ: التقويم الهجري) — 12 ಚಾಂದ್ರಮಾನ ತಿಂಗಳುಗಳನ್ನು ಮತ್ತು ವರ್ಷದಲ್ಲಿ 354 ಅಥವಾ 355 ದಿನಗಳನ್ನು ಹೊಂದಿರುವ ಕ್ಯಾಲೆಂಡರ್. ಇದನ್ನು ಇಸ್ಲಾಮೀ ಕ್ಯಾಲೆಂಡರ್; (ಅರಬ್ಬಿ: التقويم الإسلامي) ಅಥವಾ ಅರಬ್ಬೀ ಕ್ಯಾಲೆಂಡರ್; (ಅರಬ್ಬಿ: التقويم العربي) ಎಂದು ಕೂಡ ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಮುಸಲ್ಮಾನರು ರಮದಾನ್, ನಾಲ್ಕು ಪವಿತ್ರ ತಿಂಗಳುಗಳು, ಹಜ್ ಯಾತ್ರೆಯ ತಿಂಗಳುಗಳು, ಹಬ್ಬಗಳು, ಇದ್ದತ್, ಝಕಾತ್ ಕೊಡಬೇಕಾದ ಸಮಯ ಮುಂತಾದವುಗಳನ್ನು ನಿರ್ಧರಿಸಲು ಈ ಕ್ಯಾಲೆಂಡರನ್ನು ಬಳಸುತ್ತಾರೆ.[]

ತುರ್ಕಿಯ ಕೋನ್ಯ ನಗರದ ಮ್ಯೂಸಿಯಂನಲ್ಲಿರುವ ಹಿಜರಿ ದಿನಾಂಕ

ವೈಶಿಷ್ಟ್ಯಗಳು

ಬದಲಾಯಿಸಿ

ಚಂದ್ರನನ್ನು ಅವಲಂಬಿಸಿಕೊಂಡಿದೆ

ಬದಲಾಯಿಸಿ

ಹಿಜರಿ ಕ್ಯಾಲೆಂಡರ್ ಚಾಂದ್ರಮಾನ ಕ್ಯಾಲೆಂಡರ್ ಆಗಿದ್ದು, ಅದರ ಸಮಯದ ಲೆಕ್ಕಾಚಾರವು ಚಂದ್ರನ ವೃದ್ಧಿ-ಕ್ಷಯಗಳಿಗೆ ಸಂಬಂಧಿಸಿದೆ. ಅದರ ಪ್ರತಿ ತಿಂಗಳು ಚಂದ್ರನ ಒಂದು ಪೂರ್ಣ ವೃದ್ಧಿಯವರೆಗೆ ಇರುತ್ತದೆ, ಅಂದರೆ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ವರೆಗೆ. ಹಿಜರಿ ಕ್ಯಾಲೆಂಡರ್‌ನಲ್ಲಿ ತಿಂಗಳುಗಳ ಸಮಯವು ಖಗೋಳ ವೀಕ್ಷಣೆಯನ್ನು ಆಧರಿಸಿದೆ. ಸೂರ್ಯಾಸ್ತದ ಸ್ವಲ್ಪ ಸಮಯದ ನಂತರ ಚಂದ್ರದರ್ಶನವಾದರೆ ಮಾತ್ರ ಹೊಸ ತಿಂಗಳು ಪ್ರಾರಂಭವಾಗುತ್ತದೆ.[]

ಸೌರವರ್ಷದೊಂದಿಗೆ ಸಂಬಂಧವಿಲ್ಲ

ಬದಲಾಯಿಸಿ

ಇತರ ಕ್ಯಾಲೆಂಡರ್‌ಗಳು ಸೌರ ವರ್ಷದೊಂದಿಗೆ ಹೊಂದಿಕೆಯಾಗಲು ಅಧಿಕ ದಿನಗಳು ಅಥವಾ ಅಧಿಕ ತಿಂಗಳುಗಳನ್ನು ಬಳಸುತ್ತವೆ. ಆದರೆ ಇದಕ್ಕೆ ಭಿನ್ನವಾಗಿ, ಹಿಜರಿ ಕ್ಯಾಲೆಂಡರ್ ಉತ್ತರಾಯಣ ಮತ್ತು ದಕ್ಷಿಣಾಯಣಗಳಿಂದ ಗುರುತಿಸಲ್ಪಡುವ ಖಗೋಳ ಋತುಗಳಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ. ಹಿಜರಿ ವರ್ಷವು ಸೌರ ವರ್ಷಕ್ಕಿಂತ ಸುಮಾರು 11 ಕಡಿಮೆ ದಿನಗಳನ್ನು ಹೊಂದಿದೆ. ಈ ಕಾರಣದಿಂದಲೇ, ಹಿಜರಿ ಕ್ಯಾಲೆಂಡರ್ ಅನ್ನು ಕೃಷಿ ಅಥವಾ ಇತರ ಚಟುವಟಿಕೆಗಳಿಗೆ ಬಳಸಲಾಗುವುದಿಲ್ಲ. ಹೆಚ್ಚಿನ ಮುಸ್ಲಿಂ ದೇಶಗಳು ಹಿಜರಿ ವ್ಯವಸ್ಥೆಯ ಜೊತೆಗೆ ಅಧಿಕೃತವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ತಮ್ಮ ನಾಗರಿಕ ಕ್ಯಾಲೆಂಡರ್ ಆಗಿ ಬಳಸುತ್ತವೆ.[]

 
10 ರಜಬ್ 1428 (24 ಜುಲೈ 2007) ರಂದು ಸೌದಿ ಅರೇಬಿಯಾದ ದೊರೆ ಖಾಲಿದ್ ವಿಮಾನ ನಿಲ್ದಾಣದಲ್ಲಿ ಬಳಸಲಾದ ಹಿಜರಿ ಕ್ಯಾಲೆಂಡರ್ ಮೊಹರು.

ಮೊರೊಕ್ಕೊ, ಸೌದಿ ಅರೇಬಿಯಾ ಮುಂತಾದ ಕೆಲವು ಇಸ್ಲಾಮೀ ದೇಶಗಳು ಸರಕಾರಿ ಇಲಾಖೆಗಳಲ್ಲಿ ಅಧಿಕೃತ ಪತ್ರವ್ಯವಹಾರ ನಡೆಸಲು ಹಿಜರಿ ಕ್ಯಾಲೆಂಡರನ್ನು ಅಧಿಕೃತ ಕ್ಯಾಲೆಂಡರ್ ಆಗಿ ಬಳಸುತ್ತಿವೆ. ಇಸ್ಲಾಮೀ ದೇಶಗಳ ಮೇಲಿನ ಪಾಶ್ಚಿಮಾತ್ಯ ವಸಾಹತುಶಾಹಿ ಪ್ರಾಬಲ್ಯದ ಪರಿಣಾಮವಾಗಿ ಅನೇಕ ಮುಸ್ಲಿಂ ದೇಶಗಳಲ್ಲಿ ಹಿಜರಿ ಕ್ಯಾಲೆಂಡರ್ ಬದಲು ಗ್ರೆಗೋರಿಯನ್ ಕ್ಯಾಲೆಂಡರ್ ಅಸ್ತಿತ್ವಕ್ಕೆ ಬಂತು. ವಸಾಹತುಶಾಹಿತ್ವದ ಅಂತ್ಯದ ಬಳಿಕವೂ ಪರಿಸ್ಥಿತಿ ಹಾಗೆಯೇ ಮುಂದುವರಿಯಿತು.

ಊಹಿಸುವುದು ಕಷ್ಟ

ಬದಲಾಯಿಸಿ

ಹಿಜರಿ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ತಿಂಗಳ ಆರಂಭವನ್ನು ಗುರುತಿಸಲು ಅಧಿಕೃತ ವ್ಯಕ್ತಿ ಅಥವಾ ಸಮಿತಿಯನ್ನು ಅವಲಂಬಿಸಲಾಗುತ್ತದೆ. ಈ ವ್ಯಕ್ತಿ ಅಥವಾ ಸಮಿತಿಯು ಚಂದ್ರದರ್ಶನವನ್ನು ದೃಢೀಕರಿಸಿದ ಬಳಿಕವೇ ತಿಂಗಳ ಆರಂಭವನ್ನು ಘೋಷಿಸಲಾಗುತ್ತದೆ. ತಿಂಗಳ ಆರಂಭವು ಚಂದ್ರದರ್ಶನದ ಮೇಲೆ ಅವಲಂಬಿತವಾಗಿರುವುದರಿಂದ, ಮೋಡಗಳು ಮತ್ತು ಇತರ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಿದ್ದರೆ ಚಂದ್ರದರ್ಶನವಾಗದೇ ಇರುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ತಿಂಗಳು ಒಂದು ದಿನ ವಿಳಂಬವಾಗುತ್ತದೆ. ಮುಸ್ಲಿಂ ಹಬ್ಬಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಥವಾ ಒಂದೇ ದೇಶದೊಳಗೆ ಬದಲಾಗಲು ಇದೇ ಕಾರಣ.[]

ಕ್ಯಾಲೆಂಡರ್ ರಚನೆ

ಬದಲಾಯಿಸಿ

ಹಿಜರಿ ಕ್ಯಾಲೆಂಡರ್ 12 ತಿಂಗಳುಗಳನ್ನು ಹೊಂದಿದ್ದು ಪ್ರತಿ ತಿಂಗಳು 29 ಅಥವಾ 30 ದಿನಗಳನ್ನು ಹೊಂದಿದೆ.[] 29 ನೇ ದಿನ ಸೂರ್ಯಾಸ್ತದ ನಂತರ ಚಂದ್ರದರ್ಶನವಾದರೆ, ಹೊಸ ತಿಂಗಳು ಆರಂಭವಾಗುತ್ತದೆ. ಚಂದ್ರದರ್ಶನವಾಗದಿದ್ದರೆ ಸದ್ರಿ ತಿಂಗಳಿಗೆ 30 ನೇ ದಿನವನ್ನು ಸೇರಿಸಿ ಪೂರ್ತಿಗೊಳಿಸಲಾಗುತ್ತದೆ. 30 ನೇ ದಿನ ಸೂರ್ಯಾಸ್ತದ ಬಳಿಕ ಹೊಸ ತಿಂಗಳು ಆರಂಭವಾಗುತ್ತದೆ.[] ಹಿಜರಿ ಕ್ಯಾಲೆಂಡರ್ ಪ್ರಕಾರ ದಿನವು ಆರಂಭವಾಗುವುದು ಸೂರ್ಯಾಸ್ತದ ಬಳಿಕ. ಅಂದರೆ ಇಂದು ಸೂರ್ಯಾಸ್ತವಾಗುವಾಗ ನಾಳೆ ಆರಂಭವಾಗುತ್ತದೆ.

ಇತಿಹಾಸ

ಬದಲಾಯಿಸಿ

ಇಸ್ಲಾಮೀ ಆಡಳಿತದ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್ ಹಿಜರಿ ಕ್ಯಾಲೆಂಡರನ್ನು ಮೊತ್ತಮೊದಲು ಸ್ಥಾಪಿಸಿದರು. ಕ್ರಿ.ಶ. 638 ರಲ್ಲಿ ಈ ಕ್ಯಾಲೆಂಡರ್ ರಚನೆಯಾಯಿತು.[] ಮುಹಮ್ಮದ್ ಪೈಗಂಬರ್ ಮಕ್ಕಾದಿಂದ ಮದೀನಕ್ಕೆ ಹಿಜ್ರ (ವಲಸೆ) ಮಾಡಿದ ವರ್ಷದಿಂದ (ಕ್ರಿ.ಶ. 622) ಈ ಕ್ಯಾಲೆಂಡರ್ ಆರಂಭವಾಗುತ್ತದೆ.[] ಇದು ಇಸ್ಲಾಮೀ ಆಡಳಿತದ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಕ್ಯಾಲೆಂಡರ್ ಆಗಿದ್ದರೂ ಸಹ ಇದರಲ್ಲಿ ಇಸ್ಲಾಮೀ ಪೂರ್ವ ಅರಬ್ಬರು ಬಳಸುತ್ತಿದ್ದ ತಿಂಗಳುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.[] ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜುಲೈ 16, 622 ಶುಕ್ರವಾರ ಹಿಜರಿ ಕ್ಯಾಲೆಂಡರ್‌ನ ಮೊದಲ ದಿನವಾಗಿದೆ. ಆದರೆ ಫ್ರೆಂಚ್ ಓರಿಯಂಟಲಿಸ್ಟ್ ಅರ್ಮಂಡ್ ಪಿಯರೆ ಕಾಸಿನ್ ಅದು ಏಪ್ರಿಲ್ 19, 622 ಎಂದು ಹೇಳುತ್ತಾರೆ.[]

ಹಿಜರಿ ದಿನಗಳನ್ನು ಸರಿಯಾಗಿ ಊಹಿಸಲು ಮತ್ತು ಸಾರ್ವತ್ರಿಕಗೊಳಿಸಲು, 8ನೇ ಶತಮಾನದಲ್ಲಿ ಮುಸ್ಲಿಂ ವಿದ್ವಾಂಸರು ಕೋಷ್ಟಕ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸಿದ್ದರು. ತಿಂಗಳ ದಿನಗಳನ್ನು ನಿರ್ಧರಿಸಲು ಇದು ಅಂಕಗಣಿತದ ನಿಯಮಗಳನ್ನು ಬಳಸುತ್ತದೆ ಮತ್ತು ನಿಯಮಿತವಾಗಿ ಅಧಿಕ ದಿನಗಳನ್ನು ಸೇರಿಸುತ್ತದೆ.[]

ತಿಂಗಳುಗಳು

ಬದಲಾಯಿಸಿ

ಹಿಜರಿ ಕ್ಯಾಲೆಂಡರ್ 12 ತಿಂಗಳುಗಳನ್ನು ಹೊಂದಿದೆ. ಇವು ಇಸ್ಲಾಮೀ ಪೂರ್ವ ಅರಬ್ಬರು ಬಳಸುತ್ತಿದ್ದ ಅವೇ ತಿಂಗಳುಗಳಾಗಿವೆ. ಅವರು ಪವಿತ್ರವೆಂದು ಪರಿಗಣಿಸುತ್ತಿದ್ದ ನಾಲ್ಕು ತಿಂಗಳುಗಳನ್ನೂ ಕೂಡ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹಿಜರಿ ಕ್ಯಾಲೆಂಡರಿನ ತಿಂಗಳುಗಳು
ಸಂಖ್ಯೆ ತಿಂಗಳ ಹೆಸರು ಅರೇಬಿಕ್ ಅರ್ಥ
1 ಮುಹರ್‍ರಮ್ المحرم ಪವಿತ್ರ ತಿಂಗಳು, ನಿಷಿದ್ಧ ತಿಂಗಳು
2 ಸಫರ್ صفر ಶೂನ್ಯ ತಿಂಗಳು
3 ರಬೀಉಲ್ ಅವ್ವಲ್ ربيع الأول ವಸಂತದ ಮೊದಲ ತಿಂಗಳು
4 ರಬೀಉಲ್ ಆಖಿರ್ ربيع الآخر ವಸಂತದ ಕೊನೆಯ ತಿಂಗಳು
5 ಜುಮಾದಲ್ ಊಲಾ جمادى الأولى ಹುಲ್ಲು ಬೆಳೆಯುವ ಮೊದಲ ತಿಂಗಳು
6 ಜುಮಾದಲ್ ಆಖಿರ جمادى الآخرة ಹುಲ್ಲು ಬೆಳೆಯುವ ಕೊನೆಯ ತಿಂಗಳು
7 ರಜಬ್ رجب ಗೌರವಾದರದ ತಿಂಗಳು
8 ಶಅಬಾನ್ شعبان ಹಂಚಿಹೋಗುವ ತಿಂಗಳು
9 ರಮದಾನ್ رمضان ಬಿಸಿಲಿನ ಝಳದ ತಿಂಗಳು
10 ಶವ್ವಾಲ್ شوال ಎತ್ತುವ ತಿಂಗಳು
11 ದುಲ್-ಕಅದ ذو القعدة ಕುಳಿತುಕೊಳ್ಳುವ (ಸಂಧಾನದ) ತಿಂಗಳು
12 ದುಲ್-ಹಿಜ್ಜ ذو الحجة ಹಜ್ಜ್ (ತೀರ್ಥಯಾತ್ರೆ) ನ ತಿಂಗಳು

ಇವುಗಳಲ್ಲಿ ಮುಹರ್‍ರಮ್, ರಜಬ್, ದುಲ್-ಕಅದ ಮತ್ತು ದುಲ್-ಹಿಜ್ಜ ಪವಿತ್ರ ತಿಂಗಳುಗಳಾಗಿವೆ.[]

ವಾರದ ದಿನಗಳು

ಬದಲಾಯಿಸಿ

ಯೌಮುಲ್ ಜುಮುಅ (ಶುಕ್ರವಾರ) ಮುಸಲ್ಮಾನರು ವಿಶೇಷ ನಮಾಝ್ ನಿರ್ವಹಿಸಲು ಮಸೀದಿಯಲ್ಲಿ ಸೇರುವುದರಿಂದ ಈ ದಿನವನ್ನು ವಾರದ ರಜಾದಿನ ಎಂದು ಪರಿಗಣಿಸಲಾಗಿದೆ. ಕೆಲವು ಮುಸ್ಲಿಂ ದೇಶಗಳು ಶುಕ್ರವಾರ ಮತ್ತು ಶನಿವಾರವನ್ನು ವಾರದ ರಜಾದಿನಗಳಾಗಿ ಮಾಡಿಕೊಂಡರೆ, ಇತರ ಕೆಲವು ದೇಶಗಳು ಗುರುವಾರ ಮತ್ತು ಶುಕ್ರವಾರವನ್ನು ವಾರದ ರಜಾದಿನಗಳಾಗಿ ಮಾಡಿಕೊಂಡಿವೆ. ತುರ್ಕಿ, ಪಾಕಿಸ್ತಾನ, ನೈಜೀರಿಯ, ಮೊರೊಕ್ಕೋ, ಮಲೇಶಿಯ ಮುಂತಾದ ದೇಶಗಳು ಶನಿವಾರ ಮತ್ತು ಭಾನುವಾರವನ್ನು ವಾರದ ರಜಾದಿನಗಳಾಗಿ ಮಾಡಿಕೊಂಡಿವೆ.

ಸಂಖ್ಯೆ ದಿನದ ಹೆಸರು ಅರೇಬಿಕ್ ಅರ್ಥ ಕನ್ನಡದಲ್ಲಿ
1 ಯೌಮುಲ್ ಅಹದ್ يوم الأحد ಒಂದನೆಯ ದಿನ ಭಾನುವಾರ
2 ಯೌಮುಲ್ ಇಸ್ನೈನ್ يوم الاثنين ಎರಡನೆಯ ದಿನ ಸೋಮವಾರ
3. ಯೌಮು ಸ್ಸುಲಾಸಾ يوم الثلاثاء ಮೂರನೆಯ ದಿನ ಮಂಗಳವಾರ
4. ಯೌಮುಲ್ ಅರ್ಬಿಆ يوم الأربعاء ನಾಲ್ಕನೆಯ ದಿನ ಬುಧವಾರ
5. ಯೌಮುಲ್ ಖಮೀಸ್ يوم الخميس ಐದನೆಯ ದಿನ ಗುರುವಾರ
6. ಯೌಮುಲ್ ಜುಮುಅ يوم الجمعة ಒಟ್ಟುಗೂಡುವ ದಿನ ಶುಕ್ರವಾರ
7. ಯೌಮು ಸ್ಸಬ್ತ್ يوم السبت ವಿರಾಮದ ದಿನ ಶನಿವಾರ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ ೧.೮ Bikos, Konstantin. "The Islamic Calendar". timeanddate.com. Archived from the original on 28-02-2023. Retrieved 28-02-2023. {{cite web}}: Check date values in: |access-date= and |archive-date= (help)
  2. "Islamic calendar". britannica.com. Feb 9, 2023.
  3. Juan E Campo, Encyclopedia of Islam (2009), Facts On File, p. 299
  4. Lane, Edward William (1863). Arabic-English Lexicon. Williams and Norgate. pp. 2880–2881.