ಫ್ರಾನ್ಸ್

ಪಶ್ಚಿಮ ಯುರೋಪ್‍ನಲ್ಲಿರುವ ಒಂದು ದೇಶ
(ಫ್ರಾನ್ಸ್‌ ಇಂದ ಪುನರ್ನಿರ್ದೇಶಿತ)

ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ.[೧] ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ. ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ.[೨] ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತೊಂಭತ್ತನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು.[೩] ಸಾಂಸ್ಕೃತಿಕವಾಗಿ ಹಲವಾರು ಚಿಂತಕರು, ಕಲಾವಿದರು, ವಿಜ್ಞಾನಿಗಳನ್ನು ಹೊಂದಿ ಈಗಲೂ ಪ್ರಪಂಚದ ಗಮನಸೆಳೆಯುತ್ತಿದೆ. ಪ್ರಪಂಚದಲ್ಲಿ ನಾಲ್ಕನೆಯದಾಗಿ ಅತೀ ಹೆಚ್ಚು ಪಾರಂಪರಿಕ ತಾಣಗಳಿದ್ದು, ವರ್ಷಕ್ಕೆ ೮ ಕೊಟಿಗಿಂತಲೂ ಹೆಚ್ಚು ಪ್ರವಾಸಿಗಳನ್ನು ಸೆಳೆಯುತ್ತಿದೆ.[೪]

ಫ್ರೆಂಚ್ ಗಣರಾಜ್ಯ
République française
ರೆಪಬ್ಲಿಕ್ ಫ್ರಾನ್ಸೇಸ್
Flag of ಫ್ರಾನ್ಸ್
Flag
Motto: ಲಿಬರ್ತೆ, ಎಗಾಲಿತೆ, ಫ್ರತೆರ್ನಿತೆ
(ಫ್ರೆಂಚ್ ಭಾಷೆಯಲ್ಲಿ: "ಸ್ವಾತಂತ್ರ, ಸಮಾನತೆ, ಭ್ರಾತೃತ್ವ")
Anthem: ಲ ಮಾರ್ಸೈಎಸ್
Location of ಫ್ರಾನ್ಸ್
Capital
and largest city
ಪ್ಯಾರಿಸ್
Official languagesಫ್ರೆಂಚ್ ಭಾಷೆ
Governmentಏಕೀಕೃತ ಗಣರಾಜ್ಯ
• ರಾಷ್ಟ್ರಪತಿ
ಇಮ್ಮಾನ್ಯುವೆಲ್ ಮಾಕ್ರೋನ್
ಬರ್ನಾರ್ಡ್ ಕಾಜ಼ಾನುವೆ
ರಚನೆ
೮೪೩ (ವೆರ್ಡುನ್ ಒಪ್ಪಂದ)
೧೯೫೮ (೫ನೇ ಗಣರಾಜ್ಯ)
• ಮೆಟ್ರೋಪಾಲಿಟನ್ ಫ್ರಾನ್ಸ್
Population
• ೨೦೦೬5 estimate
೬೩,೫೮೭,೭೦೦ (೨೦ ನೇ)
• ಮೆಟ್ರೋಪಾಲಿಟನ್ ಫ್ರಾನ್ಸ್
೬೧,೦೪೪,೬೮೪ (೨೦ ನೇ)
GDP (PPP)2005 estimate
• Total
$1.830 trillion (7th)
• Per capita
$29,316 (20th)
HDI (2003)0.938
very high · 16th
Currencyಯುರೋ () 6, CFP Franc 7 (EUR,    XPF)
Time zoneUTC+1 (CET 2)
• Summer (DST)
UTC+2 (CEST 2)
Calling code33
Internet TLD.fr 8
1 Whole territory of the French Republic, including all the overseas departments and territories, but excluding the French territory of Terre Adélie in Antarctica where sovereignty is suspended since the signing of the Antarctic Treaty in 1959.

2 Metropolitan (i.e. European) France only.
3 French National Geographic Institute data.
4 French Land Register data, which exclude lakes, ponds, and glaciers larger than 1 km² (0.386 sq. mi. or 247 acres) as well as the estuaries of rivers.
5 Official INSEE source
6 Whole of the French Republic except the overseas territories in the Pacific Ocean.
7 French overseas territories in the Pacific Ocean only.

8 In addition to .fr, several other Internet TLDs are used in French overseas départements and territories: .re, .mq, .gp, .tf, .nc, .pf, .wf, .pm, .gf and .yt. France also uses .eu, shared with other members of the European Union.

ಫ್ರಾನ್ಸ್ ಅಧಿಕೃತವಾಗಿ ರಿಪಬ್ಲಿಕ್ ಫ್ರಾನ್ಸೇಸ್, ಪಶ್ಚಿಮ ಯುರೋಪಿನ ಗಣರಾಜ್ಯ. ಇದು ಪಶ್ಚಿಮ ಯುರೋಪಿನಲ್ಲಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ಹಬ್ಬಿದೆ. ಹೆಚ್ಚು ಕಡಿಮೆ ಷಟ್ಕೋನಾಕೃತಿಯಲ್ಲಿರುವ ಈ ದೇಶದ ಉತ್ತರದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಬೆಲ್ಜಿಯಮ್ ಮತ್ತು ಲಕ್ಸೆಂಬರ್ಗ್, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಬಿಸ್ಕೇಕೊಲ್ಲಿ, ದಕ್ಷಿಣದಲ್ಲಿ ಸ್ಪೇನ್ ಮತ್ತು ಮೆಡಿಟರೇನಿಯನ್ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮತ್ತು ಇಟಲಿ ಇವೆ. ಫ್ರಾನ್ಸ್ ಉತ್ತರ ದಕ್ಷಿಣವಾಗಿ ೯೫೦ ಕಿ.ಮೀ. ಪೂರ್ವ ಪಶ್ವಿಮವಾಗಿ ೯೭೪ ಕಿ.ಮೀ ಇದ್ದು ಒಟ್ಟು ವಿಸ್ತೀರ್ಣ ೫೫೧,೫೦೦ ಚ.ಕಿ.ಮೀ ಇದೆ. ೩೭೦೦ ಕಿ.ಮೀ ಉದ್ದ ಸಮುದ್ರ ತೀರ ಹೊಂದಿದೆ. ೧೯೯೦ ರಲ್ಲಿ ಇಲ್ಲಿನ ಜನಸಂಖ್ಯೆ ೫೬,೬೩೪,೨೯೯ ಇದ್ದು ೨೦೦೦ ದ ಗಣತಿಯಂತೆ ೫೯೦೨೪,೦೦೦ ಆಗಿದೆ. ಇದರ ರಾಜಧಾನಿ ಪ್ಯಾರಿಸ್.

ಭೌತಿಕ ಭೂವಿವರಣೆ

ಬದಲಾಯಿಸಿ

ಮೇಲ್ಮೈಲಕ್ಷಣ

ಬದಲಾಯಿಸಿ

ಫ್ರಾನ್ಸ್ ಯುರೋಪಿನಲ್ಲಿ ಅತ್ಯಂತ ವೈವಿಧ್ಯಮಯವಾದ ಮೇಲ್ಮೈ ಇರುವ ದೇಶ. ಸಮುದ್ರ ಪಾತಳಿಯಿಂದ ಹಿಡಿದು ಯೂರೊಪಿನ ಅತ್ಯುನ್ನತ ಶಿಖರವಾದ ಮೌಂಟ್ ಬ್ಲ್ಯಾಂಕಿನ (೪,೮೦೭ ಮೀ) ವರೆಗೆ ಫ್ರಾನ್ಸಿನ ನೆಲದ ಎತ್ತರದಲ್ಲಿ ವ್ಯತ್ಯಾಸಗಳಿವೆ.[೫] ದೇಶದ ಬಹುಭಾಗವನ್ನು ಪರ್ವತಗಳು ಸುತ್ತುವರಿದಿವೆ. ಉತ್ತರ ಮತ್ತು ಪಶ್ಚಿಮಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸೇನ್, ಲವಾರ್ ಮತ್ತು ಗರಾನ್‍ ನದಿಗಳ ಬಯಲು ಫ್ರಾನ್ಸಿನ ಅರ್ಧಕ್ಕೂ ಹೆಚ್ಚು ಪ್ರದೇಶವನ್ನು ಆವರಿಸಿದೆ. ವಾಯುವ್ಯದಲ್ಲಿರುವ ಬ್ರಿಟನಿ ಮತ್ತು ನಾರ್ಮಂಡಿಯಲ್ಲಿ ತಗ್ಗಾದ ಬೆಟ್ಟಗಳಿವೆ. ಈಶಾನ್ಯದಲ್ಲಿರುವ ಆರ್ಡೆನ್, ನೆರೆಯ ಬೆಲ್ಜಿಯಮ್ ಮತ್ತು ಲಕ್ಸೆಂಬರ್ಗ್‍ಗಳಿಗೆ ಹಬ್ಬಿದೆ. ಪೂರ್ವದಲ್ಲಿರುವ ಪರ್ವತಗಳು ವೋಷ್, ಆಲ್ಪ್ಸ್ ಮತ್ತು ಜುರಾ. ಸ್ಪೇನ್ ದೇಶದ ಕಡೆಯಲ್ಲಿರುವ ಎಲ್ಲೆಯಲ್ಲಿ ಪಿರನೀಸ್ ಪರ್ವತಶ್ರೇಣಿಗಳಿವೆ. ಆಲ್ಪ್ಸ್‍ನಂತೆ ಪಿರನೀಸ್ ಶ್ರೇಣಿಯು ಉನ್ನತವೂ ದುರ್ಗಮವೂ ಆಗಿದೆ.

ಇಲ್ಲಿಯ ನದಿಗಳ ಪೈಕಿ ಲವಾರ್, ಗರಾನ್, ಡಾರ್ಡೋನ್, ಅಡುರ್ ಇವು ಬಿಸ್ಕೇ ಕೊಲ್ಲಿಯನ್ನೂ ಹಾಗೂ ಸೇನ್, ಸಾಮ್ ಇಂಗ್ಲಿಷ್ ಕಡಲ್ಗಾಲುವೆಯನ್ನೂ ಹಾಗೂ ರೋನ್ ಮೆಡಿಟರೇನಿಯನ್ ಸಮುದ್ರವನ್ನೂ ಸೇರುತ್ತವೆ.

ವಾಯುಗುಣ

ಬದಲಾಯಿಸಿ

ಫ್ರಾನ್ಸಿನಲ್ಲಿ ಮೂರು ಬಗೆಯ ವಾಯುಗುಣಗಳಿವೆ. ದೇಶದ ಪಶ್ಚಿಮ ಭಾಗದ ವಾಯುಗುಣ ಸಾಗರಿಕ. ಅದರಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಬೇಸಗೆ ತಂಪಾಗಿರುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ. ಇಲ್ಲಿ ಯಥೇಚ್ಛ ಮಳೆ ಬೀಳುತ್ತದೆ. ಪೂರ್ವ ಮತ್ತು ಮಧ್ಯ ಫ್ರಾನ್ಸಿನ ಹೆಚ್ಚು ಭಾಗದ ವಾಯುಗುಣ ಖಂಡೀಯ. ಇಲ್ಲಿಯ ಬೇಸಗೆ ಪಶ್ಚಿಮದಲ್ಲಿರುವುದಕ್ಕಿಂತ ಹೆಚ್ಚು ಉಷ್ಣವಾಗಿರುತ್ತದೆ. ಚಳಿಗಾಲದಲ್ಲಿ ಚಳಿಯೂ ಹೆಚ್ಚು. ಮಳೆ ಸಾಕಷ್ಟು ಬೀಳುತ್ತದೆ. ಉನ್ನತ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹಿಮ ಬೀಳುತ್ತದೆ. ನೈಋತ್ಯದ ಪರ್ವತ ಪ್ರದೇಶವನ್ನುಳಿದು ದಕ್ಷಿಣ ಫ್ರಾನ್ಸಿನಲ್ಲೆಲ್ಲ ಮೆಡಿಟರೇನಿಯನ್ ವಾಯುಗುಣವಿರುತ್ತದೆ. ಇಲ್ಲಿ ಬೇಸಗೆಗಳು ಉಷ್ಣವಾಗಿಯೂ ಚಳಿಗಾಲಗಳು ತಂಪಾಗಿಯೂ ಇರುತ್ತವೆ. ಸೀಮಿತವಾಗಿ ಮಳೆಯಾಗುತ್ತದೆ. ಮಧ್ಯ ಉಷ್ಣತೆ ಪ್ಯಾರಿಸಿನಲ್ಲಿ ೧೦ ಡಿಗ್ರಿ, ನೀಸ್‍ನಲ್ಲಿ ೧೪ ಡಿಗ್ರಿ, ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಮಳೆ ಸಾಧಾರಣ. ಪ್ಯಾರಿಸ್ ಮತ್ತು ಮಾರ್ಸೇಲ್‍ಗಳಲ್ಲಿ ೫೫೮ ಮಿ.ಮೀ. ನಿಂದ ಬಾರ್ಡೋ ಮತ್ತು ಲ್ಯೇಯನ್ಸ್‍ನಲ್ಲಿ ೭೮೭ ಮಿ.ಮೀ ವರೆಗೆ ವ್ಯತ್ಯಾಸವಾಗುತ್ತದೆ. ಬ್ರಿಟನಿ, ಉತ್ತರ ಕರಾವಳಿ ಮತ್ತು ಪರ್ವತ ಪ್ರದೇಶಗಳಲ್ಲಿ ಬಹಳ ಹೆಚ್ಚು ಮಳೆಯಾಗುತ್ತದೆ. ಅಲ್ಲಿ ೧೩೯೭ ಮಿ.ಮೀ ಗಿಂತ ಅಧಿಕ ಮಳೆ ಆಗುತ್ತದೆ.

ಸಸ್ಯ ಪ್ರಾಣಿ ಜೀವನ

ಬದಲಾಯಿಸಿ

ಫ್ರಾನ್ಸಿನ ಸಸ್ಯ ಪ್ರಾಣಿ ಜೀವನ ವೈವಿದ್ಯಮಯವಾದ್ದು. ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಓಕ್, ಬೀಟ್, ಪೈನ್, ಬರ್ಚ್ ಪಾಪ್ಲರ್ ಮತ್ತು ವಿಲೋ ವೃಕ್ಷಗಳ ಕಾಡುಗಳಿವೆ. ಮಧ್ಯದ ಪರ್ವತ ಸಮುದಾಯ ಪ್ರದೇಶದಲ್ಲಿ ಚೆಸ್‍ನಟ್ ಮತ್ತು ಬೀಚ್ ಮರಗಳು ಹೆಚ್ಚು. ಆಲ್ಪ್ಸ್ ಪರ್ವತಗಳ ಎಲ್ಲೆಯಲ್ಲಿ ಜ್ಯೂನಿಪರ್ ಮತ್ತು ಡ್ವಾರ್ಫ್ ಪೈನ್ ಮರಗಳೂ ದಕ್ಷಿಣದಲ್ಲಿ ಪೈನ್ ಹಾಗೂ ವಿವಿಧ ಓಕ್ ಮರಗಳೂ ಇವೆ. ಪ್ರಾವೆನ್ಸ್‍ನಲ್ಲಿ ನೀಲಗಿರಿ ಮತ್ತು ಡ್ವಾರ್ಫ್ ಪೈನ್ ಮರಗಳು ಹೇರಳವಾಗಿವೆ. ಮೆಡಿಟರೇನಿಯನ್ ಸಮುದ್ರತೀರದ ಹತ್ತಿರದ ಪ್ರದೇಶದಲ್ಲಿ ದ್ರಾಕ್ಷಿಬಳ್ಳಿ, ಆಲಿವ್, ಹಿಪ್ಪನೇರಳೆ ಮತ್ತು ಅಂಜೂರ ವೃಕ್ಷಗಳು ಹಾಗೂ ಲಾರೆಲ್ ಗುಲ್ಮ ಮತ್ತು ಮಾಕ್ವಿಸ್ ಕುರುಚಲು ಬೆಳೆಯುತ್ತವೆ.

ಮುಳ್ಳುಹಂದಿ, ಉದ್ದಮೂತಿಯ ಸಣ್ಣ ಇಲಿ, ನರಿ, ಬ್ಯಾಡ್ಜರ್, ಮೊಲ, ಆಟ್ಟರ್, ವೀಸೆಲ್, ತೊಗಲುಬಾವಲಿ, ಅಳಿಲು ಮತ್ತು ಬೇವರ್ ಸಾಮಾನ್ಯ. ಪಿರನೀಸ್ ಮತ್ತು ಆಲ್ಪ್ಸ್ ಪರ್ವತ ಪ್ರದೇಶಗಳಲ್ಲಿ ಕಂದುಕರಡಿ, ಷಾಮಾಯ್ ಮಾರ್ಮಟ್ ಮತ್ತು ಆಲ್ಪೈನ್ ಮೊಲಗಳಿವೆ. ಅರಣ್ಯಗಳಲ್ಲಿ ಪೋಲ್‍ಕ್ಯಾಟ್, ಮಾರ್ಟಿನ್, ಕಾಡುಹಂದಿ, ಮತ್ತು ವಿವಿಧ ಜಾತಿಗಳ ಜಿಂಕೆಗಳಿವೆ. ಫ್ರಾನ್ಸಿನ ಪಕ್ಷಿಗಳು ಹೆಚ್ಚಾಗಿ ವಲಸೆ ಹೋಗುವಂಥವು. ಕಾಡುಹಕ್ಕಿ, ತ್ರಷ್, ಮ್ಯಾಗ್‍ಪೈ, ಗೂಗೆ, ಬಸರ್ಡ್ ಮತ್ತು ಸಾಮಾನ್ಯ ಅಲ್ಸೇಸ್ ಮತ್ತು ಇನ್ನೂ ಕೆಲವು ಕಡೆಗಳಲ್ಲಿ ಕೊಕ್ಕರೆ, ಪರ್ವತಗಳಲ್ಲಿ ಹದ್ದು ಮತ್ತು ಡೇಗೆ ಹಾಗೂ ದಕ್ಷಿಣ ಫ್ರಾನ್ಸಿನಲ್ಲಿ ಫೆಸಂಟ್ ಮತ್ತು ಕವುಜುಗ ಕಂಡುಬರುತ್ತವೆ. ಮೆಡಿಟರೇನಿಯನ್ ವಲಯದಲ್ಲಿ ಫ್ಲೆಮಿಂಗೊ, ಟರ್ನ್, ಬಂಟಿಂಗ್, ಹೆರಾನ್ ಮತ್ತು ಈಗ್ರೆಟ್‍ಗಳನ್ನು ಕಾಣಬಹುದು.

ನದಿಗಳಲ್ಲಿ ಈಲ್, ಪೈಕ್ ಪರ್ಚ, ಕಾರ್ಪ್, ರೋಜ್, ಸ್ಯಾಲ್ಮನ್ ಮತ್ತು ಟ್ರೌಟ್ ಮೀನುಗಳಿವೆ. ಭೂ ಮಧ್ಯ ಸಮುದ್ರದಲ್ಲಿ ಲಾಬ್ಸ್ಟರ್ ಮತ್ತು ಕ್ರೇಫಿಷ್ ಹೇರಳವಾಗಿವೆ.

ಫ್ರಾನ್ಸಿನ ಜನಸಂಖೈ ೫,೨೦,೨೦,೦೦೦ (೧೯೭೬). ೧೯೭೨ ರಲ್ಲಿ ಅದು ೫೧,೦೦೦,೦೦೦ ಕ್ಕೂ ಹೆಚ್ಚಿತ್ತು. ಆಗ ಪ್ರತಿ ೧,೦೪೭ ಹೆಂಗಸರಿಗೆ ೧೦೦೦ ಗಂಡಸರಿದ್ದರು. ಗಂಡಸರ ಮತ್ತು ಹೆಂಗಸರ ಆಯುಷ್ಯ ನಿರೀಕ್ಷಣೆಯಲ್ಲಿ ನೈಸರ್ಗಿಕ ಸಮತೆ ಮತ್ತು ಯುದ್ಧದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗಂಡಸರು ಸತ್ತಿದ್ದು ಇವು ಪುರುಷರ ಸಂಖ್ಯೆ ಸ್ತ್ರೀಯರದಕ್ಕಿಂತ ಕಡಿಮೆಯಾಗಿರುವುದಕ್ಕೆ ಕಾರಣವೆನ್ನಲಾಗಿದೆ. ೧೯೬೯ ಅಂದಾಜಿನ ಪ್ರಕಾರ ಶೇ. ೬ ರಷ್ಟು ಜನರು ಹೊರರಾಷ್ಟ್ರಗಳಲ್ಲಿ ಜನಿಸಿದವರಾಗಿದ್ದರು. ಅವರಲ್ಲಿ ಇಟಾಲಿಯನ್ನರು, ಸ್ವ್ಯಾನಿಷರು, ಪೋರ್ಚ್‍ಗೀಸರು ಮತ್ತು ಅಲ್ಜೀರಿಯನ್ನರು ಗಮನಾರ್ಹ ಸಂಖ್ಯೆಯಲ್ಲಿದ್ದರು.[೬] ೧೯೬೯ ರ ಜನಸಂಖ್ಯೆಯಲ್ಲಿ ಸುಮಾರು ಮುಕ್ಕಾಲುಪಾಲು ಜನರು ನಗರವಾಸಿಗಳೂ ಉಳಿದವರು ಗ್ರಾಮವಾಸಿಗಳೂ ಆಗಿದ್ದರು. ೨೦೦೦ ದ ಅಂದಾಜಿನಂತೆ ಫ್ರಾನ್ಸ್ ಜನಸಂಖ್ಯೆ ೫೯೦೨೪,೦೦೦ ಇದರಲ್ಲಿ ಶೇ. ೭೪ ಮಂದಿ ಪಟ್ಟಣ ವಾಸಿಗಳು, ಶೇ. ೨೬ ಮಂದಿ ಗ್ರಾಮವಾಸಿಗಳಿದ್ದಾರೆ.[೭]

ಫ್ರಾನ್ಸಿನ ನಿವಾಸಿಗಳಲ್ಲಿ ಶೇ. ೯೦ ರಷ್ಟು ಮಂದಿ ರೋಮನ್ ಕ್ಯಾಥೊಲಿಕರು ಶೇ. ೧ ಪ್ರಾಟೆಸ್ಟಂಟರು ಶೇ. ೧ ಯಹೂದ್ಯರು ಶೇ ೧ ಮುಸ್ಲಿಮರು ಸ್ವತಂತ್ರ ವಿಚಾರಿಗಳ ಅನೇಕ ಸಂಸ್ಥೆಗಳು ಇಲ್ಲಿವೆ.[೮] ಯಾವ ಧರ್ಮದಲ್ಲೂ ನಂಬಿಕೆಯಿಲ್ಲದವರ ಮತ್ತು ನಾಸ್ತಿಕವಾದಿ ಯುವಕರ ಸಂಖ್ಯೆಯೂ ಗಮನಾರ್ಹವಾಗಿದೆ.

ರಾಷ್ಟ್ರಭಾಷೆಯಾದ ಫ್ರೆಂಚಿನ ಬಳಕೆ ಸಾಮಾನ್ಯವಾಗಿದೆ.[೯] ಅದನ್ನು ಎಲ್ಲೆಲ್ಲೂ ಕಲಿಸಲಾಗುತ್ತದೆ. ಗ್ರಾಮ ಪ್ರದೇಶಗಳಲ್ಲಿ ಉಪಭಾಷೆಗಳು ಬಳಕೆಯಲ್ಲಿವೆ. ದೇಶದ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಫ್ಲೆಮಿಷ್ ಮತ್ತು ಅಲ್ಸೇಷನ್ ದಕ್ಷಿಣ ಪ್ರಾವೆನ್ನ್‍ನಲ್ಲಿ ಕಾರ್ಸ್ ಮತ್ತು ಕ್ಯಾಟರಾನ್ ಭಾಷೆಗಳು ಕೇಳುಬರುತ್ತವೆ. ಬ್ರಿಟನಿಯಲ್ಲಿ ಬಳಕೆಯಲ್ಲಿರುವ ಬ್ರಿಟನ್ ಮತ್ತು ನೈಋತ್ಯದಲ್ಲಿ ಬಳಕೆಯಲ್ಲಿರುವ ಬಾಸ್ಕ್ ಮೊದಲಿನಿಂದಲೂ ಇರುವ ಭಾಷೆಗಳು.[೧೦] ಅವುಗಳಲ್ಲಿ ಶಿಕ್ಷಣ ದೊರೆಯುವಂತಾಗಬೇಕು, ಫ್ರೆಂಚಿಗಿರುವ ಸ್ಥಾನ ಅವಕ್ಕೂ ದೊರಕಬೇಕು ಎನ್ನುವ ಬೇಡಿಕೆಗಳಿವೆ.

ಆರ್ಥಿಕತೆ

ಬದಲಾಯಿಸಿ

ಸಮತೋಲ ಸಂಪನ್ಮೂಲಗಳ ದೃಷ್ಟಿಯಿಂದ ಫ್ರಾನ್ಸ್ ಯುರೋಪಿನ ಅದೃಷ್ಟ ಶಾಲಿ ದೇಶಗಳಲ್ಲೊಂದು. ಅನಕೂಲಕರ ವಾಯುಗುಣ, ಫಲವತ್ತಾದ ವಿಶಾಲ ಮೈದಾನಗಳು, ಪರಂಪರೆಯಿಂದ ಬಂದ ವ್ಯವಸಾಯ ಕೌಶಲ್ಯ ಇವು ಕೃಷಿಯ ಅಭ್ಯುದಯಕ್ಕೆ ಕಾರಣವಾಗಿವೆ. ಕಬ್ಬಿಣದ ಅದುರಿನ ವ್ಯಾಪಕ ನಿಕ್ಷೇಪಗಳು, ಜಲ ಮತ್ತು ಶಾಖ ವಿದ್ಯುತ್ ಉತ್ಪಾದನ ಕೇಂದ್ರಗಳ ಜಾಲ, ಉತ್ತಮ ಸಾರಿಗೆ ವ್ಯವಸ್ಥೆ, ಉನ್ನತ ಮಟ್ಟದ ಸಾಂಪ್ರದಾಯಿಕ ಕೈಗಾರಿಕಾ ಕೌಶಲ ಇವು ಫ್ರಾನ್ಸಿನ ಸಂಕೀರ್ಣ ಕೈಗಾರಿಕೆಗಳು ಆಧುನಿಕ ರೀತಿಯಲ್ಲಿ ತೀವ್ರಗತಿಯಿಂದ ಬೆಳೆಯಲು ನೆರವಾಗಿವೆ.

ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಪ್ರಧಾನವಾದ್ದು.[೧೧] ಯುರೋಪಿನಲ್ಲಿ ಮೂಲ ಆಹಾರೋತ್ಪಾದನೆಯಲ್ಲಿ ಪೂರ್ಣವಾಗಿ ಬೆಳೆಯಲಾಗುವ ಗೋಧಿ ಮುಖ್ಯ ಆಹಾರಧಾನ್ಯ, ಬಾರ್ಲಿ ಮತ್ತು ಓಟ್ಸ್ ಅನಂತರ ಬರುತ್ತವೆ. ರೋನ್ ನದೀಮುಖದ, ನೀರಾವರಿ ಸೌಲಭ್ಯವಿರುವ, ನೆರೆಮಣ್ಣಿನ ಪ್ರದೇಶದಲ್ಲಿ ಭತ್ತ ಬೆಳೆಯುತ್ತದೆ. ಮೊದಲು ನೈಋತ್ಯಕ್ಕೆ ಸೀಮಿತವಾಗಿದ್ದ ಮುಸುಕಿನ ಜೋಳದ ಬೆಳೆ ಈಗ ಎಲ್ಲ ಕಡೆಗೂ ಹಬ್ಬಿದೆ. ದಕ್ಷಿಣಾರ್ಧದಲ್ಲಿ ಮತ್ತು ವಿಶೇಷವಾಗಿ ಮೆಡೆಟರೇನಿಯನ್ ಸಮುದ್ರತೀರದ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯುತ್ತದೆ. ಮದ್ಯ ತಯಾರಿಕೆಯಾಗುತ್ತಿದೆ. ರೇಷ್ಮೆಯ ವ್ಯವಸಾಯ ಗಮನಾರ್ಹವಾಗಿದೆ, ಹಣ್ಣು ಮತ್ತು ತರಕಾರಿ ಬೆಳೆಗಳು ಪ್ರಾಮುಖ್ಯಗಳಿಸುತ್ತಿವೆ. ಹಣ್ಣುಗಳಲ್ಲಿ ಸೇಬು, ಏಪ್ರಿಕಾಟ್, ಪೀಚ್, ಪ್ಲಮ್, ಪೇರು ಮತ್ತು ಚೆರಿ ಮುಖ್ಯವಾದವು. ಟೊಮೇಟೊ, ಈರುಳ್ಳಿ, ಕೋಸು, ಕಾಲಿಫ್ಲವರ್, ಬಟಾಣಿ, ಫ್ರೆಂಚ್ ಬೀನ್ಸ್ ಮುಂತಾದ ತರಕಾರಿಗಳು ಬೆಳೆಯುತ್ತವೆ. ಸಕ್ಕರೆಬೀಟು, ಬಟಾಟೆ, ಮೇವಿನಬೀಟು ಮತ್ತು ಮೇವಿನ ಟರ್ನಿಪ್ ಮುಖ್ಯ ಗಡ್ಡೆಗಳು. ನ್ಯೆಋತ್ಯ ಪ್ರದೇಶ ಮತ್ತು ಅಲ್ಸೇಸ್‍ನಲ್ಲಿ ಹೊಗೆಸೊಪ್ಪು ಬೆಳೆಯುತ್ತದೆ. ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಫ್ರಾನ್ಸ್ ಬಹಳ ಮುಂದಿದೆ. ಅವುಗಳ ಮತ್ತು ಔಷಧಿಗಳ ತಯಾರಿಕೆಗೆ ಅಗತ್ಯವಾದ ಗಿಡಗಳನ್ನು ಬೆಳೆಸಲಾಗುತ್ತದೆ.

ಪಶುಪಾಲನೆ

ಬದಲಾಯಿಸಿ

ದೇಶದ ಅನೇಕ ಕಡೆಗಳಲ್ಲಿ ಕೃಷಿಗಿಂತ ಪಶುಪಾಲನೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಜಾನುವಾರುಗಳಲ್ಲಿ ಅರ್ಧಕ್ಕೂ ಹೆಚ್ಚು ಸಂಖ್ಯೆ ದನಕರುಗಳದ್ದಾಗಿದೆ, ಕುರಿ ಮತ್ತು ಹಂದಿ ಅನಂತರ ಬರುವ ಜಾನುವಾರುಗಳು. ಮೆಡಿಟರೇನಿಯನ್ ಸಮುದ್ರ ತೀರ ಪ್ರದೇಶದ ಹೊರತಾಗಿ ಉಳಿದ ಎಲ್ಲ ಕಡೆಯಲ್ಲೂ ದನಕರು ಸಾಕಣೆ ನಡೆಯುತ್ತದೆ. ಮಧ್ಯದ ಮತ್ತು ದಕ್ಷಿಣದ ಪರ್ವತ ಪ್ರದೇಶಗಳಲ್ಲಿ ಕುರಿಸಾಕಣೆ ಪ್ರಧಾನ. ಮಾಂಸ ಮತ್ತು ಉಣ್ಣೆಗಾಗಿ ಕುರಿ ಸಾಕಲಾಗುತ್ತಿದೆ. ಪಶ್ಚಿಮ, ಮಧ್ಯ ಮತ್ತು ಆಗ್ನೇಯ ಪ್ರದೇಶಗಳಲ್ಲಿ ಗಿಣ್ಣು ತಯಾರಿಕೆಯಾಗಿ ಆಡುಗಳನ್ನು ಸಾಕುತ್ತಾರೆ, ಕೋಳಿ ಮತ್ತು ಮೊಲಗಳನ್ನೂ ಸಾಕಲಾಗುತ್ತಿದೆ. ಉತ್ತರದಲ್ಲಿ ಕುದುರೆಗಳನ್ನು ಸಾಕುತ್ತಾರೆ. ಹಾಲು ಬೆಣ್ಣೆಗಳ ಉತ್ಪಾದನೆ ಮತ್ತು ವಿಶೇಷ ಗಿಣ್ಣಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಫ್ರಾನ್ಸ್ ದ್ವಿತೀಯ ಸ್ಥಾನದಲ್ಲಿದೆ.

ಮೀನುಗಾರಿಕೆ

ಬದಲಾಯಿಸಿ

ಅನೇಕ ಸಣ್ಣ ಬಂದರುಗಳಿಂದ ಕೂಡಿರುವ ಫ್ರಾನ್ಸಿನ ಕರಾವಳಿ ಮತ್ತು ಸಮುದ್ರ ಇವು ಮೀನುಗಾರಿಕೆಗೆ ಸಹಾಯಕವಾಗಿವೆ.

ಅರಣ್ಯಗಾರಿಕೆ

ಬದಲಾಯಿಸಿ

ದೇಶದ ಸುಮಾರು ಕಾಲು ಭಾಗವನ್ನು ಅರಣ್ಯಗಳು ಆವರಿಸಿವೆ.[೧೨] ಅವು ಆರ್ಥಿಕತೆಯ ಅವಶ್ಯಕ ಆಂಗವಾಗಿವೆ. ಆರ್ಡೆನ್, ಕೊಂಪ್ಯೇನ್, ಫೌಂಟನ್ ಬ್ಲ್ಯೂ ಮತ್ತು ಆರ್ಲೇಯಾನ್ ಅರಣ್ಯಗಳು ಮುಖ್ಯವಾದವು. ಅರಣ್ಯಗಳ ಸುಮಾರು ೭೦% ಪ್ರದೇಶದಲ್ಲಿ ಓಕ್, ಬೀಟ್ ಮತ್ತು ಪಾಪ್ಲರ್ ಮರಗಳೂ ಉಳಿದ ಪ್ರದೇಶಗಳಲ್ಲಿ ರಾಳ ವೃಕ್ಷಗಳು ಇವೆ. ಆಲ್ಫ್ಸ್, ಜುರಾ, ವೋಷ್ ಮತ್ತು ಪಿರನೀಸ್ ಪರ್ವತ ಪ್ರದೇಶಗಳಲ್ಲಿ ಶಂಕುಧಾರಿ ವೃಕ್ಷಗಳು ವಿಶೇಷವಾಗಿವೆ. ಲಾಂಡ್ ಪ್ರದೇಶ ರಾಳ ಮತ್ತು ಚೌಬೀನೆಗಳ ದೃಷ್ಟಿಯಿಂದ ಮಹತ್ತ್ವದ್ದಾಗಿದೆ.

ಗಣಿಗಾರಿಕೆ

ಬದಲಾಯಿಸಿ

ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಬಾಕ್ಸೈಟ್ ಮುಖ್ಯ ಖನಿಜಗಳು. ಉತ್ತರದಲ್ಲಿ ಮತ್ತು ಲೊರೇನ್‍ನಲ್ಲಿ ಕಲ್ಲಿದ್ದಲು ದೊರಕುತ್ತದೆ. ಕಬ್ಬಿಣದ ಅದುರಿನ ಉತ್ಪಾದನೆಯಲ್ಲಿ ಫ್ರಾನ್ಸಿನ ಸ್ಥಾನ ಪ್ರಪಂಚದಲ್ಲಿ ಮೂರನೆಯದು; ಸೋವಿಯತ್ ಮತ್ತು ಅಮೆರಿಕಗಳ ಅನಂತರ ಇದು ಬರುತ್ತದೆ. ಲೊರೇನ್, ನಾರ್ಮಂಡಿ, ಅಂಜೂ ಬೋಗುಣಿ, ಪಿರನೀಸ್ ಇಲ್ಲಿ ಕಬ್ಬಿಣದ ಅದುರು ದೊರಕುತ್ತದೆ. ಬಾಕ್ಸೈಟಿನ ಉತ್ಪಾದನೆಯಲ್ಲಿ ಫ್ರಾನ್ಸ್ ಪ್ರಪಂಚದ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಸತು, ಸೀಸ, ತಾಮ್ರ, ತವರ, ಚಿನ್ನ, ಕಲ್ಲರಗು, ಕಲ್ಲುಪ್ಪು, ಪೊಟ್ಯಾಷ್ ಇವು ಇತರ ಖನಿಜಗಳು. ಮಧ್ಯದ ತಪ್ಪಲು ಮತ್ತು ವಾಂಡೇ ಪ್ರದೇಶಗಳಲ್ಲಿ ಯುರೇನಿಯಮ್ ದೊರಕುತ್ತದೆ. ಲಾಂಡ್ ಪ್ರದೇಶದಲ್ಲಿ ಪೆಟ್ರೋಲಿಯಮ್ ದೊರಕುತ್ತದೆಯಾದರೂ ಅವಶ್ಯಕತೆಯ ಹೆಚ್ಚುಭಾಗವನ್ನು ದೇಶ ಆಮದು ಮಾಡುತ್ತದೆ. ನೈಋತ್ಯ ಪ್ರದೇಶದಲ್ಲಿ ನೈಸರ್ಗಿಕ ಅನಿಲ ದೊರಕುತ್ತದೆ. ಚಿನ್ನದ ಉತ್ಪಾದನೆಯಲ್ಲಿ ಫ್ರಾನ್ಸಿನ ಸ್ಥಾನ ಮೂರನೆಯದು.

ವಿದ್ಯುಚ್ಛಕ್ತಿ

ಬದಲಾಯಿಸಿ

ಫ್ರಾನ್ಸ್ ವಿಶ್ವದ ಹತ್ತನೇ ಅತಿದೊಡ್ಡ ವಿದ್ಯುತ್ ಉತ್ಪಾದಕವಾಗಿದೆ.[೧೩] ದೇಶದಲ್ಲಿ ಜಲಸಂಪತ್ತು ಗಮನಾರ್ಹವಾಗಿರುವುದರಿಂದ ವಿದ್ಯುತ್ತಿನ ಉತ್ಪಾದನೆಗೆ ಸಹಾಯವಾಗಿದೆ. ೧೯೬೯ ರಲ್ಲಿ ೧೬೪೦ ಜಲವಿದ್ಯುತ್ತಿನ ಉತ್ಪಾದನ ಕೇಂದ್ರಗಳಿದ್ದುವು. ಬ್ರಿಟನಿ ತೀರದಲ್ಲಿ ರ್ಯಾನ್ಸ್ ನದಿಯ ಮೇಲೆ ಉಬ್ಬರವಿಳಿತದಿಂದ ವಿದ್ಯುತ್ತನ್ನು ಉತ್ಪಾದಿಸುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಪ್ರಪಂಚದಲ್ಲೇ ಮೊದಲನೆಯದು. ಪರಮಾಣುಶಕ್ತಿ ಉತ್ಪಾದನ ಕೇಂದ್ರಗಳೂ ಇವೆ.[೧೪]

ಕೈಗಾರಿಕೆ

ಬದಲಾಯಿಸಿ

ಎರಡನೆಯ ಮಹಾ ಯುದ್ಧದಿಂದ ಈಚೆಗೆ ಆಗಿರುವ ಕೈಗಾರಿಕಾ ವಿಸ್ತರಣೆ ಗರ್ಮನಾರ್ಹ. ಎಲೆಕ್ಟ್ರಾನಿಕ್ಸ್, ಸಾರಿಗೆ, ಸಂಸ್ಕರಣ ಮತ್ತು ವೈಜ್ಞಾನಿಕ ಉಪಕರಣ ಕ್ಷೇತ್ರಗಳಲ್ಲಿ ವಿಶೇಷವಾದ ಅಭಿವೃದ್ಧಿಯಾಗಿದೆ. ಉಕ್ಕು, ರಸಾಯನಿಕ, ಬಟ್ಟೆ, ಮದ್ಯ ಸುಗಂಧದ್ರವ್ಯ, ವಿಮಾನ, ಹಡಗು, ವಿಜ್ಞಾನೋಪಕರಣ, ಉಡುಪು, ರಬ್ಬರ್ ಸರಕು, ಮರದ ಸರಕು, ಸಕ್ಕರೆ, ಕಾಗದ ಪಿಂಗಾಣಿ, ಆಹಾರ, ಪ್ಲಾಸ್ಟಿಕ್, ಮೋಟಾರುವಾಹನ ಇವು ಮುಖ್ಯ ಕೈಗಾರಿಕೆಗಳು. ಉಕ್ಕನ್ನು ರಫ್ತುಮಾಡುವ ಪ್ರಪಂಚದ ಪ್ರಮುಖ ದೇಶಗಳಲ್ಲಿ ಫ್ರಾನ್ಸ್ ಒಂದು. ಫ್ರಾನ್ಸ್ ಅಲ್ಯೂಮಿನಿಯಮನ್ನೂ ಉತ್ಪಾದಿಸುತ್ತಿದೆ. ಕ್ಯಾರವಿಲ್, ಮಿರಾಜ್ ಮೊದಲಾದ ಫ್ರೆಂಚ್ ವಿಮಾನಗಳನ್ನು ಪ್ರಪಂಚದ ಅನೇಕ ದೇಶಗಳು ಬಳಸುತ್ತಿವೆ. ಗಂಧಕ ಇನ್ನೊಂದು ಪ್ರಮುಖ ಉತ್ಪನ್ನ. ದೂರದರ್ಶನ, ರೇಡಿಯೋ ಇಲ್ಲಿ ತಯಾರಾಗುತ್ತವೆ. ಗಡಿಯಾರ, ಚರ್ಮ ಸರಕು ಇವೂ ತಯಾರಾಗುತ್ತವೆ. ಪ್ಯಾರಿಸಿನ ಸುತ್ತುಮುತ್ತಲಿನ ಪ್ರದೇಶ, ಉತ್ತರ ಫ್ರಾನ್ಸಿನ ಕಲ್ಲಿದ್ದಲು ಬೋಗುಣಿ ಆಲ್ಸೇಸ್ ಮತ್ತು ಲೊರೈನ್, ಕ್ಲೆರ್ಮಾನ್ ಮತ್ತು ಫೆರಾಂಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳು ವಿಶೇಷವಾಗಿ ಕೇಂದ್ರೀಕೃತವಾಗಿವೆ. ಜಮಖಾನೆ ಮತ್ತು ಚಿತ್ರನೇಯ್ಗೆ ಬಟ್ಟೆಗಳೂ ಪ್ರಸಿದ್ಧವಾಗಿವೆ. ಕಲಾಬತು ಮತ್ತು ಕೈಚೀಲಗಳ ತಯಾರಿಕೆಯಲ್ಲೂ ಫ್ರಾನ್ಸ್ ಮುಂದಿದೆ. ಫ್ರಾನ್ಸಿನಲ್ಲಿ ರೇಷ್ಮೆ ಕೈಗಾರಿಕೆಯೂ ಬೆಳೆದಿದೆ. ಬಣ್ಣ ಹಾಕುವ ಮತ್ತು ಕ್ಯಾಲಿಕೊ ಮುದ್ರಣದ ಉದ್ಯಮಗಳು ಅಭಿವೃದ್ಧಿಹೊಂದಿವೆ.

ಸಾರಿಗೆ ಸಂಪರ್ಕ

ಬದಲಾಯಿಸಿ

ಯುರೋಪಿನಲ್ಲಿ ಅಭಿವೃದ್ಧಿ ಹೊಂದಿದ ಸಾರಿಗೆ ವ್ಯವಸ್ಥೆಗಳಲ್ಲಿ ಫ್ರಾನ್ಸಿನದೂ ಒಂದು. ದೀರ್ಘಕಾಲದಿಂದಲೂ ಇದು ಫ್ಯಾರಿಸಿನಲ್ಲಿ ಕೇಂದ್ರೀಕೃತವಾಗಿದೆ. ದೇಶದ ವಿಭಿನ್ನ ಭಾಗಗಳಿಗೆ ಅಲ್ಲಿಂದ ಸಾರಿಗೆ ಮಾರ್ಗಗಳು ಹೋಗುತ್ತವೆ. ಫ್ರಾನ್ಸಿನಲ್ಲಿ ರಸ್ತೆಗಳ ಒಟ್ಟು ಉದ್ದ ೭,೮೯,೦೦೦ ಕಿ.ಮೀ. ಇವುಗಳಲ್ಲಿ ಪ್ರಥಮ ದರ್ಜೆಯ ಹೆದ್ದಾರಿಗಳು, ದ್ವಿತೀಯ ದರ್ಜೆಯ ಮಾರ್ಗಗಳು, ಗ್ರಾಮೀಣ ರಸ್ತೆಗಳು ಮತ್ತು ವೇಗದ ಪ್ರಯಾಣದ ಮಾರ್ಗಗಳು ಸೇರಿವೆ.[೧೫] ರೈಲು ಮಾರ್ಗಗಳ ಉದ್ದ ೩೭,೦೦೦ ಕಿ.ಮೀ.[೧೬] ಜಲ ಮಾರ್ಗಗಳ ಉದ್ದ ಸುಮಾರು ೧೦,೩೦೦ ಕಿ.ಮೀ. ಅವುಗಳಲ್ಲಿ ಕಾಲುವೆ ಮಾರ್ಗಗಳೂ ನದೀಮಾರ್ಗಗಳೂ ಸೇರುತ್ತವೆ, ವಾಣಿಜ್ಯ ನೌಕೆಗಳ ಕ್ಷೇತ್ರದಲ್ಲಿ ಫ್ರಾನ್ಸಿನದು ಸ್ಥೂಲವಾಗಿ ೧೦ ನೆಯ ಸ್ಥಾನ.[೧೭] ಮಾರ್ಸೇಲ್, ಲ ಹಾವ್ರೆ ಡಂಕರ್ಕ್, ರೂವೆನ್‍ಬೋರ್ಡೋ ಮತ್ತು ಚೆರ್ಬಗ್ ಮುಖ್ಯ ಬಂದರುಗಳು. ಫ್ರಾನ್ಸಿನ ರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಫ್ರಾನ್ಸ್ ಸರ್ಕಾರದಿಂದ ಸಹಾಯಧನ ಪಡೆಯುತ್ತದೆ. ಇದರ ವಿಮಾನಗಳು ಎಲ್ಲ ಕಡೆಗಳಿಗೂ ಹೋಗುತ್ತವೆ. ಇದಲ್ಲದೆ ಎರಡು ಪ್ರಮುಖ ಖಾಸಗಿ ವಿಮಾನ ಸಂಸ್ಥೆಗಳಿವೆ. ಫ್ರಾನ್ಸಿನ ಸುಮಾರು ೭೧ ಪಟ್ಟಣಗಳಿಗೆ ವಿಮಾನ ನಿಲ್ದಾಣಗಳಿವೆ.

ಆಡಳಿತ ಮತ್ತು ಸಾಮಾಜಿಕ ಸ್ಥಿತಿ

ಬದಲಾಯಿಸಿ

ಫ್ರಾನ್ಸ್ ಒಂದು ಗಣರಾಜ್ಯವಾಗಿದೆ. ರಾಪ್ಟ್ರಪತಿ ೫ ವರ್ಷದ ಅವಧಿಗೆ ಚುನಾಯಿತನಾಗುತ್ತಾನೆ.[೧೮] ಅವನು ಸರ್ಕಾರದ ಮುಖ್ಯಸ್ಥನಾದ ಪ್ರಧಾನಿಯನ್ನೂ ಅವನ ಶಿಫಾರಸಿನ ಮೇರೆಗೆ ಮಂತ್ರಿಮಂಡಲದ ಇತರ ಸದಸ್ಯರನ್ನೂ ನೇಮಿಸುತ್ತಾನೆ. ಕಾನೂನುಗಳನ್ನು ಹೊರಡಿಸುವವನು ರಾಪ್ಟ್ರಾಧ್ಯಕ್ಷ. ಅವನಿಗೆ ರಾಷ್ಟ್ರೀಯ ಸಭೆಯನ್ನು ರದ್ದು ಮಾಡುವ ಅಧಿಕಾರವಿರುತ್ತದೆ. ಅವನು ಎಲ್ಲ ಸಶಸ್ತ್ರ ಪಡೆಗಳ ಅಧಿಪತಿ. ಪ್ರಧಾನ ಮಂತ್ರಿ ಸಾರ್ವಜನಿಕ ನೀತಿಯನ್ನು ನಿರ್ಧರಿಸುತ್ತಾನೆ ಮತ್ತು ನಾಗರಿಕ ಸೇವೆಯನ್ನು ಮೇಲ್ವಿಚಾರಣೆ ಮಾಡುತ್ತಾನೆ, ದೇಶೀಯ ವಿಷಯಗಳಿಗೆ ಒತ್ತು ನೀಡುತ್ತಾನೆ.[೧೯] ಸಂಸತ್ತಿನಲ್ಲಿ ರಾಷ್ಟ್ರೀಯ ಸಭೆ (ನ್ಯಾಷನಲ್ ಅಸೆಂಬ್ಲಿ), ಸೆನೆಟ್ ಎಂಬ ಎರಡು ಸದನಗಳಿರುತ್ತವೆ.[೨೦] ರಾಷ್ಟ್ರೀಯ ಸಭೆಯ ೪೮೫ ಸದಸ್ಯರು (ಡೆಪ್ಯುಟಿಗಳು) ೫ ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.[೨೧] ಸೆನೆಟ್‍ನ ೨೮೩ ಸದಸ್ಯರ ಅವಧಿ ೬ ವರ್ಷ. ಅವರಲ್ಲಿ ಮೂರನೆಯ ಒಂದರಷ್ಟು ಸಂಖ್ಯೆಯ ಸದಸ್ಯರನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ.[೨೨] ಸಂಸತ್ತಿನ ವಿಧಾನಾಧಿಕಾರ ಕೆಲವು ವಿಶೇಷ ಅನುಸೂಚಿತ ವಿಷಯಗಳಿಗೆ ಸೀಮಿತವಾಗಿರುತ್ತದೆ. ಉಳಿದೆಲ್ಲ ವಿಷಯಗಳನ್ನು ಸರ್ಕಾರಿ ವಿಧಿಗಳ ಮೂಲಕ ನೋಡಿಕೊಳ್ಳಲಾಗುತ್ತದೆ. ವರ್ಷದಲ್ಲಿ ಎರಡು ಸಲ ಸಂಸತ್ತಿನ ಅಧಿವೇಶನಗಳು ನಡೆಯುತ್ತವೆ. ೯ ಮಂದಿ ಸದಸ್ಯರು ಮತ್ತು ಗಣರಾಜ್ಯದ ನಿವೃತ್ತ ಅಧ್ಯಕ್ಷರಿಂದ ಕೂಡಿರುವ ಸಂವಿಧಾನ ಮಂಡಳಿ ಚುನಾವಣೆ ಮತ್ತು ಜನಾಭಿಪ್ರಾಯ ಸಂಗ್ರಹಣೆಯ ವಿಧಿಬದ್ಧತೆಯ ಮೇಲ್ವಿಚಾರಣೆ ಮಾಡುವುದಲ್ಲದೆ ಕಾನೂನು ಮತ್ತು ಸರ್ಕಾರಿ ವಿಧಿಗಳ ಸಂವಿಧಾನ ಬದ್ಧತೆಯನ್ನು ಪರಿಶೀಲಿಸುತ್ತದೆ. ರಾಪ್ಟ್ರೀಯ ಆಡಳಿತ ನೀತಿಯನ್ನು ರಚಿಸುವ ಮತ್ತು ಕಾನೂನುಗಳನ್ನು ಜಾರಿಯಲ್ಲಿ ತರುವ ಕೆಲಸ ಪ್ರಧಾನಿ ಮತ್ತು ಅವನ ಸರ್ಕಾರದ್ದು. ಯಾರು ಏಕ ಕಾಲದಲ್ಲಿ ಸಂಸತ್ತಿನ ಮತ್ತು ಸರ್ಕಾರದ ಸದಸ್ಯರಾಗುವಂತಿಲ್ಲ.

ನ್ಯಾಯಾಂಗ

ಬದಲಾಯಿಸಿ

ಸಿವಿಲ್ ಮೊಕದ್ದಮೆಗಳ ವಿಚಾರಣೆಗೆ ದೇಶದಲ್ಲಿ ೪೫೫ ಕೆಳದರ್ಜೆಯ ಹಾಗೂ ೧೭೨ ಮೇಲುದರ್ಜೆಯ ನ್ಯಾಯಾಲಯಗಳಿವೆ. ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗೆ ಶಿಕ್ಷಾ ನ್ಯಾಯಾಲಯಗಳು ಮತ್ತು ಸಣ್ಣ ಅಪರಾಧಗಳ ವಿಚಾರಣೆಗೆ ಪೊಲೀಸ್ ನ್ಯಾಯಾಲಯಗಳು ಇವೆ. ಈ ನ್ಯಾಯಾಲಯಗಳ ತೀರ್ಪುಗಳ ವಿರುದ್ಧ ಅಪೀಲುಗಳನ್ನು ನಿರ್ಧರಿಸುವುದಕ್ಕೆ ೨೮ ಅಪೀಲು ನ್ಯಾಯಾಲಯಗಳಿವೆ. ಘೋರ ಅಪರಾಧಗಳ ವಿಚಾರಣೆ ಅಸೈ ನ್ಯಾಯಾಲಯಗಳಿಂದ ನಡೆಯುತ್ತದೆ.[೨೩] ಈ ಎಲ್ಲ ನ್ಯಾಯಾಲಯಗಳು ಮತ್ತು ಕೈಗಾರಿಕಾ ಸಮನ್ವಯ ನ್ಯಾಯಲಯಗಳಂಥ ವಿಶಿಷ್ಟ ವೃತ್ತಿ ನ್ಯಾಯಾಲಯಗಳು ಕೋರ್ಟ್ ಡ ಕ್ಯಾಸೇಷನ್ ಎಂಬ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿವೆ. ಈ ನ್ಯಾಯಾಲಯ ಕಾನೂನುಗಳ ನಿರ್ವಚನ ಮಾಡುತ್ತದೆಯೇ ಹೊರತು ಮೊಕದ್ದಮೆಗಳನ್ನು ನಿರ್ಣಯಿಸುವುದಿಲ್ಲ. ಆದರೆ ಅದು ಒಂದು ಮೊಕದ್ದಮೆಯನ್ನು ಕೆಳಗಿನ ನ್ಯಾಯಾಲಯಕ್ಕೆ ಒಪ್ಪಿಸಬಹುದು. ಆಡಳಿತಾತ್ಮಕ ನ್ಯಾಯಾಲಯಗಳು ಅಧಿಕಾರ ಚಲಾವಣೆಯಲ್ಲಿ ಸಿವಿಲ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಏಳುವ ಮೊಕದ್ದಮೆಗಳನ್ನು ನಿರ್ಣಯಿಸುತ್ತದೆ. ಯಾವುದೇ ಮೊಕದ್ದಮೆಯ ವಿಚಾರಣೆ ಒಂದು ಸಾಮಾನ್ಯ ಆಡಳಿತಾತ್ಮಕ ನ್ಯಾಯಾಲಯದಿಂದ ಆಗಬೇಕು ಎನ್ನುವುದನ್ನು ವಿವಾದಗಳ ನ್ಯಾಯಾಲಯ ನಿರ್ಧರಿಸುತ್ತದೆ. ಲೆಕ್ಕಗಳ ನ್ಯಾಯಾಲಯ ಸರ್ಕಾರಿ ಲೆಕ್ಕಗಳನ್ನು ಪರೀಕ್ಷಿಸುತ್ತದೆ ಮತ್ತು ಕೆಲವು ಆಡಳಿತಾತ್ಮಕ ನಿರ್ಣಯಗಳ ವಿರುದ್ಧ ಅಪೀಲುಗಳ ವಿಚಾರಣೆ ನಡೆಸುತ್ತದೆ. ಆಡಳಿತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಮಂತ್ರಾಲೋಚನೆ ಸಭೆ ಅತ್ಯುಚ್ಚ ಅಪೀಲು ನ್ಯಾಯಾಲಯ, ರಾಷ್ಟ್ರ ಭದ್ರತಾ ನ್ಯಾಯಾಲಯ ರಾಷ್ಟ್ರದ ಭದ್ರತೆಯ ಧಕ್ಕೆಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ನಡೆಸುತ್ತದೆ.

ಆರೋಗ್ಯ

ಬದಲಾಯಿಸಿ

ಫ್ರಾನ್ಸಿನಲ್ಲಿ, ೧,೮೦೦ ಕ್ಕೂ ಹೆಚ್ಚು ಸಾರ್ವಜನಿಕ ಆಸ್ಪತ್ರೆಗಳು ೩೦೦೦ ಕ್ಕೂ ಹೆಚ್ಚು ಖಾಸಗಿ ಚಿಕಿತ್ಸಾ ಸಂಸ್ಥೆಗಳು ಇವೆ. ಆಸ್ಪತ್ರೆಗಳಲ್ಲಿಯ ಹಾಸಿಗೆಗಳ ಸಂಖ್ಯೆ ೪,೫೦,೦೦೦ ಕ್ಕೂ ಅಧಿಕ. ಅಲ್ಲದೆ ಸುಮಾರು ೧೦೦ ಮಾನಸಿಕ ರೋಗಿಗಳ ಆಸ್ಪತ್ರೆಗಳು, ೬೦೦ ಕ್ಷಯರೋಗ ನಿವಾರಣ ಸಂಸ್ಥೆಗಳು ಮತ್ತು ಸ್ಯಾನಿಟೇರಿಯಮ್‍ಗಳು, ೬೫೦ ಶಿಶು ಮತ್ತು ಮಕ್ಕಳ ಗೃಹಗಳು ಮತ್ತು ೧೦ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಇವೆ. ಕಡಿಮೆ ವರಮಾನವುಳ್ಳವರ ೧೦ ವರ್ಷಕ್ಕೂ ಕೆಳಗಿನ ವಯಸ್ಸಿನ ಮಕ್ಕಳ ಹಾಗೂ ನಿರುದ್ಯೋಗಿಗಳ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಪೂರ್ಣವಾಗಿ ಸರ್ಕಾರ ವಹಿಸುತ್ತದೆ.[೨೪] ಉಳಿದವರ ವೈದ್ಯಕೀಯ ಔಷಧ ಮತ್ತು ಆಸ್ಪತ್ರೆಯ ಚಿಕಿತ್ಸೆಯ ಖರ್ಚನ್ನು ಆರೋಗ್ಯವಿಮೆ ಭಾಗಶಃ ಮರುಪಾವತಿ ಮಾಡುತ್ತದೆ.

ಫ್ರಾನ್ಸಿನಲ್ಲಿ ೧೯೪೫ ರಿಂದಲೂ ವಸತಿ ಪ್ರಶ್ನೆ ಗಂಭೀರವಾಗಿಯೇ ಇದೆ. ನಗರೀಕರಣ, ಜನಸಂಖ್ಯೆಯ ಹೆಚ್ಚಳ, ಸುಮಾರು ೧೦,೦೦,೦೦೦ ಫ್ರೆಂಚ್ ಪ್ರಜೆಗಳು ಆಲ್ಜೀರಿಯದಿಂದ ವಾಪಸಾದದ್ದು, ಕಟ್ಟಡಗಳ ಜೀರ್ಣಾವಸ್ಥೆ ಇವುಗಳಿಂದಾಗಿ ವಸತಿಗಳ ಕೊರತೆ ತೀವ್ರವಾಗಿದೆ. ೧೯೭೦ ರಲ್ಲಿ ೪,೫೬,೦೦೦ ಹೊಸ ವಸತಿಗಳು ನಿರ್ಮಾಣವಾದುವು. ಈ ದಶಕದ ಮುಂದಿನ ವರ್ಷಗಳಲ್ಲಿ ೫,೦೦,೦೦೦ ವಸತಿಗಳು ನಿರ್ಮಾಣಗೊಳ್ಳುವ ನಿರೀಕ್ಷೆಯಿತ್ತು. ಸರ್ಕಾರ ಸ್ವತಃ ವಸತಿಗಳನ್ನು ನಿರ್ಮಿಸುತ್ತಿಲ್ಲವಾದರೂ ವಸತಿ ನಿರ್ಮಾಣಕ್ಕೆ ನಾನಾ ಬಗೆಯ ಪ್ರೋತ್ಸಾಹ ನೀಡುತ್ತಿದೆ.

ಸಮಾಜ ಕಲ್ಯಾಣ

ಬದಲಾಯಿಸಿ

ಸಾಮಾಜಿಕ ವಿಮೆ, ಕೌಟುಂಬಿಕ ಭತ್ಯೆ, ಮತ್ತು ಕಾರ್ಮಿಕರಿಗೆ ಪರಿಹಾರಗಳ ಕಾರ್ಯಕ್ರಮಗಳನ್ನು ಸಾಮಾಜಿಕ ಭಧ್ರತಾ ಆಡಳಿತ ನಿಯಂತ್ರಿಸುತ್ತಿದೆ. ಉದ್ಯೋಗಪತಿಗಳು ಕಾನೂನಿಗೆ ಅನುಸಾರವಾಗಿ ಸಂಬಳದಿಂದ ಹಿಡಿದುಕೊಳ್ಳುವ ಹಣದಿಂದ ಅದಕ್ಕೆ ಹಣವೊದಗುತ್ತದೆ. ೧೯೬೬ ರ ಒಂದು ಕಾನೂನು ಸ್ವಯಂ ಉದ್ಯೋಗಿಗಳಿಗೆ ಸಾಮಾಜಿಕ ವಿಮೆಯನ್ನು ಕಡ್ಡಾಯವಾಗಿ ವಿಧಿಸಿತು. ದೇಶದಲ್ಲಿ ಆರೋಗ್ಯ ವಿಮೆ, ಹೆರಿಗೆ ವಿಮೆ, ದೌರ್ಬಲ್ಯ ವಿಮೆ, ವೃದ್ಧಾಪ್ಯ ವಿಮೆ, ಮೃತ್ಯು ವಿಮೆ, ಕುಟುಂಬ ಭತ್ಯ, ಹೆರಿಗೆ ಭತ್ಯೆ, ವಸತಿ ಭತ್ಯೆ ಮೊದಲಾದವುಗಳಿಗೆ ವ್ಯವಸ್ಥೆಯಿದೆ.

ಗ್ರಂಥಾಲಯಗಳು, ವಸ್ತುಸಂಗ್ರಹಾಲಯಗಳು

ಬದಲಾಯಿಸಿ

ಎಲ್ಲ ಬೌದ್ಧಿಕ ಹವ್ಯಾಸಗಳಲ್ಲಿ ಮುಂದಾಗಿರುವ ರಾಜಧಾನಿ ಪ್ಯಾರಿಸಿನಲ್ಲಿ ಗ್ರಂಥಾಲಯಗಳು ಮತ್ತು ವಸ್ತುಸಂಗ್ರಹಾಲಯಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತವಾಗಿವೆ. ೧೪೮೦ ರಲ್ಲಿ ಸ್ಥಾಪಿತವಾದ ಪ್ಯಾರಿಸಿನ ರಾಷ್ಟ್ರೀಯ ಗ್ರಂಥಾಲಯ ಪ್ರಪಂಚದ ಅತ್ಯಂತ ದೊಡ್ಡ ಸಂಶೋಧನ ಗ್ರಂಥಾಲಯಗಳಲ್ಲೊಂದಾಗಿದೆ. ೧.೨ ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಗ್ರಂಥಗಳು, ಹಸ್ತಪ್ರತಿಗಳು, ಮುದ್ರಣಗಳು, ನಕಾಶೆಗಳು ಮತ್ತು ನಿಯತ ಕಾಲಿಕೆಗಳಿವೆ. ೪೦ ಲಕ್ಷಕ್ಕಿಂತ ಹೆಚ್ಚು ಗ್ರಂಥಗಳಿರುವ ಪ್ಯಾರಿಸ್ ವಿಶ್ವವಿದ್ಯಾಲಯ ಗ್ರಂಥಾಲಯ ಅತ್ಯಂತ ದೊಡ್ಡ ವಿದ್ಯಾಸಂಸ್ಥಾ ಗ್ರಂಥಾಲಯವಾಗಿದೆ. ಪ್ರತಿಯೊಂದು ದೊಡ್ಡ ಉಚ್ಚ ಶಿಕ್ಷಣ ಸಂಸ್ಥೆಯಲ್ಲೂ ಅದರದೇ ಗ್ರಂಥಾಲಯವಿದೆ. ದೇಶದ ೬೫೨ ಸಾರ್ವಜನಿಕ ಗ್ರಂಥಾಲಯಗಳ ಪೈಕಿ ೭೬ ಪ್ಯಾರಿಸಿನಲ್ಲಿವೆ. ರಾಷ್ಟ್ರೀಯ ಪತ್ರಾಗಾರಗಳು ಪ್ಯಾರಿಸಿನಲ್ಲಿವೆ.

ಎಲ್ಲ ಕಾಲ ಮತ್ತು ಪ್ರದೇಶಗಳ ಲಲಿತಕಲೆಗಳ ಎಲ್ಲ ಪ್ರಕಾರಗಳನ್ನೂ ಒಳಗೊಂಡ ಲಾವ್ರೆಯ ಕಲಾಸಂಗ್ರಹ ಪ್ರಪಂಚದ ಅತ್ಯಂತ ದೊಡ್ಡ ಸಂಗ್ರಹಗಳಲ್ಲಿ ಒಂದು. ಲಕ್ಸೆಂಬರ್ಗ್ ವಸ್ತುಸಂಗ್ರಹಾಲಯ ೧೯ ಮತ್ತು ೨೦ ನೆಯ ಶತಮಾನಗಳ ವರ್ಣಚಿತ್ರಗಳಿಗೂ ಕ್ಲೂನಿ ವಸ್ತು ಸಂಗ್ರಹಾಲಯ ಕಲಾಕೌಶಲಗಳಿಗೂ ಹೆಸರಾಗಿವೆ. ಮಾನವಶಾಸ್ತ್ರ ವಸ್ತುಸಂಗ್ರಹಾಲಯ ದೊಡ್ಡ ಸಂಶೋಧನ ಕೇಂದ್ರವೂ ಆಗಿದೆ.

ನಗರಗಳು

ಬದಲಾಯಿಸಿ

ಫ್ರಾನ್ಸಿನ ಪ್ರಮುಖ ನಗರಗಳು ಪ್ಯಾರಿಸ್ (ರಾಜಧಾನಿ) (೯೦೬೦೨೫೭), ಮಾರ್ಸೇಲ್ಸ್ (೧೦೮೭೩೭೬), ಲೀಯಾನ್ (೧೦೮೭೩೬೭), ಟ್ಯುಲೂಸ್ (೬೦೮೪೩೦), ನೀಸ್ (೩೪೫೬೭೪), ಬಾರ್ಡೋ (೨೧೩೨೭೪,) ನ್ಯಾನ್‍ಟ್ಸ್ (೨೫೨೦೨೯), ಸ್ಟ್ರಾಸ್‍ಬುರ್ಗ್ (೨೫೫೯೩೭), ಸಾನ್‍ಟೇಟೈನ್ (೨,೧೬,೦೨೦) ಮತ್ತು ಲ ಹಾವ್ರೆ (೧೯೭೨೧೯) ಆಗಿವೆ.[೨೫]

ಫ್ರಾನ್ಸಿನ ನಾಣ್ಯ ಫ್ರ್ಯಾಂಕ್. ಇದನ್ನು ೧೦೦ ಸೆಂಟೈಮ್‍ಗಳಾಗಿ ವಿಂಗಡಿಸಲಾಗಿದೆ.

ಕ್ರೀಡೆಗಳು

ಬದಲಾಯಿಸಿ

ಫುಟ್‍ಬಾಲ್, ರಗ್ಬಿ ಇವು ಫ್ರಾನ್ಸಿನ ಅತ್ಯಂತ ಜನಪ್ರಿಯ ಕ್ರೀಡೆಗಳು.

ಪ್ರಾಕ್ತನ

ಬದಲಾಯಿಸಿ

ಪುರಾತನ ಶಿಲಾಯುಗದ ಸಂಸ್ಕೃತಿಗಳ ಅಧ್ಯಯನ ಕ್ಷೇತ್ರದಲ್ಲಿ ಫ್ರಾನ್ಸಿಗೆ ಅಗ್ರಪ್ರಾಶಸ್ತ್ಯ ದೊರಕಿದೆ. ಫ್ರಾನ್ಸಿನ ಸೋಮ್ ನದಿ ದಂಡೆಯಲ್ಲಿ ಫ್ರೆಂಚ್ ಪುರಾತತಜ್ಞ ಬೂಷರ್ ಡಿ ಪೆರ್ತೆ ಗುರುತಿಸಿದ ಅವಶೇಷಗಳು ಪುರಾತತ್ವ ಶಾಸ್ತ್ರದ ವೈಜ್ಞಾನಿಕತೆಯನ್ನು ವಿದ್ವಾಂಸರು ಒಪ್ಪಿಕೊಳ್ಳಲು ತಳಹದಿಯಾದುವು. ಮತ್ತೆ ಮೊದಲ ಸಂಶೋಧನೆಗಳು ಫ್ರಾನ್ಸಿನ ನೆಲೆಗಳಲ್ಲಿ ಆದುದರಿಂದ ಶಿಲಾಯುಗದ ಅನೇಕ ಸಂಸ್ಕೃತಿಗಳಿಗೆ ಫ್ರೆಂಚ್ ಹೆಸರುಗಳನ್ನು ನೀಡಲಾಗಿದೆ. ಚಿಲಿಯನ್, ಅಬ್ಬೆ ವಿಲಿಯನ್ ಅಷ್ಯೂಲಿಯನ್, ಲೆವಲ್ವಾಸಿಯನ್, ಮೌಸ್ಟೀರಿಯನ್, ಆರಿಗ್ನೇಸಿಯನ್, ಸಲೂಟ್ರಿಯನ್, ಮ್ಯಾಗ್ಡಲೀನಿಯನ್ ಮುಂತಾದ ಸಂಸ್ಕೃತಿಗಳು ಆಯಾ ಹೆಸರಿನ ಫ್ರೆಂಚ್ ನೆಲೆಗಳಲ್ಲಿ ಮೊದಲಿಗೆ ಗುರುತಿಸಲಾದವು.

ಮಾನವನ ಪ್ರಾಚೀನ ಸಂಸ್ಕೃತಿಯ ಹಂತಕ್ಕೆ ಸೇರಿದ ಅಬ್ಬೆ ವಿಲಿಯನ್ ಕೈಕೊಡಲಿ ಸಂಸ್ಕೃತಿ ಫ್ರಾನ್ಸಿನ ಅಬ್ಬೆವಿಲೆ ಎಂಬಲ್ಲಿ ಕಂಡುಬಂತು. ಕಲ್ಲುಸುತ್ತಿಗೆಯ ಸಹಾಯದಿಂದ ತಯಾರಿಸಿದ ಒರಟಾದ ಕೈ ಕೊಡಲಿಗಳನ್ನು ಆ ಹಂತದಲ್ಲಿ ಬಳಸಲಾಗುತ್ತಿತ್ತು. ಕ್ರಮೇಣ ಶಿಲಾಯುಧ ತಯಾರಿಕಾ ತಂತ್ರಗಳಲ್ಲಿ ಸುಧಾರಣೆಗಳಾದವು. ಕೊಳವೆಯ ಆಕಾರದ ಸುತ್ತಿಗೆಯಿಂದ ಒರಟು ಆಯುಧಗಳ ಅಂಚುಗಳಿಂದ ಸಣ್ಣ ಚಕ್ಕೆಗಳನ್ನು ತೆಗೆದು ನೇರ ಮತ್ತು ಫಲಕಾರಿಯಾದ ಅಷ್ಯೂಲಿಯನ್ ಹಂತದ ಕೈಕೊಡಲಿಗಳನ್ನು ತಯಾರಿಸಿ ಬಳಸಲಾರಂಭಿಸಿದರು. ಆ ಹಂತದಲ್ಲಿ ಇಂಗ್ಲೆಂಡಿನಲ್ಲಿ ಮೊದಲಿಗೆ ತಲೆದೋರಿದ ಕ್ಲಾಕ್ಟೋನಿಯನ್ ಚಕ್ಕೆ ಕಲ್ಲಿನ ಆಯುಧಗಳು ಪ್ರತ್ಯೇಕವಾಗಿ ರೂಢಿಗೆ ಬಂದುವು. ಈ ದ್ವಿವಿಧ ಸಂಸ್ಕೃತಿಗಳೂ ಸಮನಾಗಿ ಫ್ರಾನ್ಸಿನಲ್ಲಿ ಬಳಕೆಯಲ್ಲಿದ್ದುವು ಅಷ್ಯೂಲಿಯನ್ ಸಂಸ್ಕೃತಿಯಲ್ಲಿ ಪ್ರಗತಿಪರ ಹಂತಗಳನ್ನು ಗುರುತಿಸಲಾಗಿದೆ ಮಧ್ಯ ಪ್ಲೀಸ್ಟೋಸೀನ್ ಯುಗದ ಅಂತ್ಯಭಾಗದಲ್ಲಿ ಕೈಕೊಡಲಿ ಸಂಸ್ಕೃತಿಯಲ್ಲಿ, ಕ್ಲೀವರ್ ಅಥವಾ ಸೀಳು ಕೊಡಲಿ ಬೆಳಕಿಗೆ ಬಂತು. ಚಕ್ಕೆ ಕಲ್ಲಿನ ಆಯುಧಗಳ ರೀತಿಯಲ್ಲೂ ಸುಧಾರಣೆಗಳು ಆದುವು. ಇದರಿಂದ ಕ್ಲಾಕ್ಟೋನಿಯನ್ ಸಂಸ್ಕೃತಿಯಿಂದ ಹುಟ್ಟಿದ ಮೌಸ್ಟೀರಿಯನ್ ಸಂಸ್ಕೃತಿ ಅಂತ್ಯ ಪ್ಲೀಸ್ಟೋಸೀನ್ ಯುಗದ ಮೊದಲಲ್ಲಿ ಅಸ್ತಿತ್ವದಲ್ಲಿದ್ದ ಮಧ್ಯ-ಪೂರ್ವ ಶಿಲಾಯುಗದಲ್ಲಿ ಪ್ರಬಲವಾಯಿತು. ಆ ಕಾಲದಲ್ಲಿ ತಲೆದೋರಿದ ಮತ್ತೊಂದು ಚಕ್ಕೆಕಲ್ಲಿನ ಆಯುಧಗಳ ಸಂಸ್ಕೃತಿ ಲೆವಾಲ್ವಾಸಿಯನ್, ಈ ಸಂಸ್ಕೃತಿಯಲ್ಲಿ ಪೂರ್ವಯೋಜಿತ ತಿರುಳ್ಗಲ್ಲಿನಿಂದ ತಯಾರಿಸಿದ ಹಲವು ಬಗೆಯ ಹೆರೆಯುವ ಆಯುಧಗಳು, ಕೊರೆಯುಳಿಗಳು ಮೊನೆಗಳು ಗಮನಾರ್ಹವಾಗಿದ್ದುವು. ಕ್ರಮೇಣ ಕೈಕೊಡಲಿ ಮತ್ತು ಚಕ್ಕೆ ಕಲ್ಲಿನ ಆಯುಧಗಳ ವಿಧಾನಗಳು ಪರಸ್ಪರ ಪ್ರಭಾವಕ್ಕೊಳಗಾದುವು. ಮೌಸ್ಟೀರಿಯನ್ ಸಂಸ್ಕೃತಿಯಲ್ಲಿ ಸಣ್ಣ ಹೃದಯಾಕಾರದ ಕೈಕೊಡಲಿಗಳು ರೂಢಿಗೆ ಬಂದುವು. ಚಕ್ಕೆಕಲ್ಲಿನ ಆಯುಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ತಂತ್ರಗಳು ಅಷ್ಯೂಲಿಯನ್ ಆಯುಧಗಳ ತಯಾರಿಕೆಯಲ್ಲಿ ಕಂಡುಬರುತ್ತವೆ.

ಪ್ಲೀಸ್ಟೋಸೀನ್ ಯುಗದ ಕೊನೆಗಾಲದಲ್ಲಿ ನೈಋತ್ಯ ಯುರೋಪಿನಲ್ಲಿ ಪ್ರಮುಖ ಬದಲಾವಣೆಗಳು ಆದವು. ಪಶ್ಚಿಮ ಏಷ್ಯದಲ್ಲಿ ಹುಟ್ಟಿ ಕ್ರಮೇಣ ಅಭಿವೃದ್ಧಿಗೊಂಡ ಕೂರಲಗು ಫಲಕ ಕೆತ್ತುಮೊಳೆ (ಬ್ಯೂರಿನ್) ಆಯುಧರೀತಿಗಳನ್ನು ಬಳಸುತ್ತಿದ್ದ ಆಧುನಿಕ ಮಾನವ ನಿರ್ಮಿತವೆಂದು ಪರಿಗಣಿಸಲಾದ ಅಂತ್ಯಶಿಲಾಯುಗ ಸಂಸ್ಕೃತಿ ಕಾಣಿಸಿಕೊಂಡಿತು. ಬೇಟೆ, ಮೀನುಗಾರಿಕೆ ಮತ್ತು ಸಂಗ್ರಹಣೆಯಿಂದ ಮಾನವ ಜೀವಿಸುವ ವಿಧಾನವನ್ನು ಮುಂದುವರಿಸಿದರೂ ಅಮೋಘವಾದ ಕಲೆಯನ್ನು ನಿರ್ಮಿಸತೊಡಗಿದ್ದು ಈ ಸಂಸ್ಕೃತಿಯ ವೈಶಿಷ್ಟ್ಯ. ಬಂಡೆಗಳ ಮೇಲಿನ ರೇಖಾ ಚಿತ್ರಗಳು, ಜೇಡಿ ಮಣ್ಣಿನಲ್ಲಿ ರೂಪಿಸಿದ ಗೊಂಬೆಗಳು, ಕಡೆದ ಶಿಲ್ಪಗಳು ಮತ್ತು ಮೂಳೆ ಕೊಂಬು ದಂತಗಳ ಮೇಲಿನ ಗೀಚಿದ ವಿನ್ಯಾಸಗಳು ಮೊದಲಿಗೆ ಕಂಡುಬರುತ್ತವೆ. ಆದರೆ ಕಡೆಗಾಲದಲ್ಲಿ ನೈಋತ್ಯ ಫ್ರಾನ್ಸ್ ಮತ್ತು ಈಶಾನ್ಯ ಸ್ಟೇನಿನ ಪ್ರದೇಶಗಳಲ್ಲಿ ಬೆಟ್ಟಗುಡ್ಡಗಳಲ್ಲಿರುವ ಪ್ರಾಕೃತಿಕ ಗುಹೆಗಳ ಒಳ ಚಾವಣಿ ಮತ್ತು ಗೋಡೆಗಳ ಮೇಲೆ ರೂಪಿಸಿರುವ ಚಿತ್ರಕಲೆ ನಿಜಕ್ಕೂ ಅಪೂರ್ವವಾದದ್ದು. ಸುಮಾರು ೩-೧೦ ಸಾವಿರ ವರ್ಷಗಳ ಹಿಂದಿನ ಈ ಚಿತ್ರಕಲೆ ಇಂದಿಗೂ ಅಚ್ಚಳಿಯದಂತೆ ಉಳಿದುಬಂದಿವೆ. ಇವು ಆಗಿನ ಚಿತ್ರಕಾರರ ಅಸಾಧಾರಣ ತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿ. ಈ ಕಲೆಯ ಅಧ್ಯಯನದಿಂದ ಸ್ವಲ್ಪಮಟ್ಟಿಗೆ ಆಗಿನ ಜನಜೀವನ, ಧರ್ಮ ಮತ್ತು ನಂಬಿಕೆಗಳನ್ನು ತಿಳಿದುಕೊಳ್ಳಬಹುದು. ಪೂರ್ವಶಿಲಾಯುಗದ ಕಲೆಯ ಪ್ರಮುಖ ನೆಲೆಗಳು ಫ್ರಾನ್ಸಿನಲ್ಲಿವೆ. ಇವುಗಳ ಅತ್ಯುತ್ತಮ ಅಧ್ಯಯನವೂ ಆಗಿವೆ. ಲಿಐಜೀಸ್, ಲಾಸ್ಕೊಡಾರ್ಡಾನ್, ಟಕ್ ಡಿ ಅಡೋಬರ್ಟ್ ಮುಂತಾದ ಕಲಾ ಕೇಂದ್ರಗಳು ಪೂರ್ವ ಶಿಲಾಯುಗದ ಕಲೆಯ ಅಧ್ಯಯನ ದೃಷ್ಟಿಯಿಂದ ಮುಖ್ಯವಾದವು.

ಹಿಮಯುಗದ ಅಥವಾ ಪ್ಲೀಸ್ಟೋಸೀನ್ ಯುಗದ ಅನಂತರ ವಾಯುಗುಣ ಪರಿಸ್ಥಿತಿ ಮೂಲಭೂತವಾಗಿ ಬದಲಾಯಿಸಿ ಹೊಸರೀತಿಯ ಪರಿಸರ ಅಸ್ತಿತ್ವಕ್ಕೆ ಬಂದಾಗ ಸೂಕ್ಷ್ಮ ಶಿಲಾಯುಧಗಳನ್ನು ಬಳಸುತ್ತಿದ್ದ ಬೇಟೆ ಮೀನುಗಾರಿಕೆ ಸಸ್ಯಮೂಲ ಆಹಾರ ಸಂಗ್ರಹಣೆಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ಪಂಗಡಗಳು ದಟ್ಟವಾದ ಅರಣ್ಯಪ್ರದೇಶಗಳಲ್ಲಿ ವಾಸಿಸುತ್ತಿದ್ದುವು. ಈ ಪಂಗಡದ ಜನರು ಕೊಂಬು ಮೂಳೆಗಳ ಆಯುಧೋಪಕರಣಗಳನ್ನು ಉಪಯೋಗಿಸುತ್ತಿದ್ದರು. ಬಿಲ್ಲು ಬಾಣಗಳ ಬಳಕೆ ಸಾಮಾನ್ಯವಾಗಿತ್ತು. ಕೊಂಬಿನ ಹಿಡಿಕೆಗಳಲ್ಲಿ ಸೇರಿಸಿದ ಕಲ್ಲಿನ ಸಣ್ಣಕೊಡಲಿಗಳಿಂದ ಮರಗಳನ್ನು ಕಡಿದು ಗುಡಿಸಿಲುಗಳನ್ನು ನಿರ್ಮಿಸುತ್ತಿದ್ದರು. ಇವರು ಅಂತ್ಯ ಪೂರ್ವಶಿಲಾಯುಗದ ಕಲೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋದರಾದರೂ ಆಗಿನ ಸತ್ತ್ವ ಕಾಣಬರುವುದಿಲ್ಲ. ಡೆನ್ಮಾರ್ಕಿನಲ್ಲಿ ಹುಟ್ಟಿ ಯೂರೊಪಿನಾದ್ಯಂತ ಪ್ರಸರಿಸಿದ ಮ್ಯಾಗೆಮೋಸಿಯಸ್ ಮತ್ತು ಪಶ್ಚಿಮ ಯುರೋಪಿನಲ್ಲಿ ತಲೆದೋರಿದ ಅಜಿಲಿಯನ್ ಟಾರ್ಡೆನಾಯಿಸಿನ್, ಸವೆಟೆರ್ರಿಯನ್ ಮಧ್ಯಶಿಲಾಯುಗ ಸಂಸ್ಕೃತಿಗಳ ಪೈಕಿ ಇವು ಪ್ರಮುಖವಾದವು. ಆ ಕಾಲದಲ್ಲಿ ಮಾನವ ಪ್ರಗತಿ ರಂಗದಲ್ಲಿ ಫ್ರಾನ್ಸ್ ಹಿಂದೆ ಬಿತ್ತು. ಹೊಸ ಸಂಸ್ಕೃತಿಗಳು ಪಶ್ಚಿಮ ಏಷ್ಯ ಪ್ರದೇಶಗಳಲ್ಲಿ ಉಗಮಿಸಿ ಕ್ರಮೇಣ ಪಶ್ಚಿಮ ಯೂರೋಪಿನತ್ತ ಹರಡುತ್ತಿದ್ದುವು. ಬೇಟೆಗಾಗಿ ಪಳಗಿದ ನಾಯಿಗಳ ಬಳಕೆ ಮತ್ತು ಕ್ರಮೇಣ ಆಹಾರೋತ್ಪಾದನೆಯತ್ತ ಪ್ರಗತಿ, ಇವು ಪಶ್ಚಿಮ ಏಷ್ಯದಿಂದ ಫ್ರಾನ್ಸಿಗೆ ಬರಲಾರಂಭಿಸಿದ್ದು ಈ ಕಾರಣದಿಂದಲೇ.

ನವಶಿಲಾಯುಗ ಕಾಲದಲ್ಲಿ ಇರಾಕ್, ಸಿರಿಯ ಮತ್ತು ಪ್ಯಾಲಸ್ತೀನ್ ಪ್ರದೇಶಗಳಿಂದ ಬಂದ ಸಾಂಸ್ಕೃತಿಕ ಲಕ್ಷಣಗಳು ಫ್ರಾನ್ಸಿನ ಲ್ಯಾಂಗ್ವೆಡಾಕ್ ಮತ್ತು ಪ್ರಾವೆನ್ಸ್ ಪ್ರದೇಶಗಳಲ್ಲಿ ಕಾಣಿಸಿಕೊಂಡವು. ಆ ಕಾಲದಲ್ಲಿ ಸಾಮಾನ್ಯವಾಗಿ ಗುಹೆ ಮತ್ತು ಗುಹಾಮುಖಗಳಲ್ಲಿ ವಾಸಿಸುತ್ತಿದ್ದ ಜನರು ಬೇಟೆ ಮತ್ತು ಆಹಾರಸಂಗ್ರಹಣೆಯಿಂದ ವಾಸಿಸುತ್ತಿದ್ದರಾದರೂ ಆಹಾರೋತ್ಪಾದನೆ ಅದರಲ್ಲೂ ವ್ಯವಸಾಯ ಕಾರ್ಯ ಪ್ರಾರಂಭಾವಸ್ಥೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಮೆಡಿಟೆರೇನಿಯನ್ ಸಮುದ್ರ ಪ್ರದೇಶದಿಂದ ಆಮದಾದ ಚಿಪ್ಪುಗಳಿಂದ ಆಭರಣಗಳನ್ನು ತಯಾರಿಸಿ ಬಳಸುತ್ತಿದ್ದರು. ಮೊದಲ ಮಡಕೆ-ಕುಡಿಕೆಗಳ ಬಳಕೆ ಪ್ರಾರಂಭವಾಯಿತು. ನಯಗೊಳಿಸಿದ ಕಲ್ಲಿನ ಕೊಡಲಿಗಳು ಕಾಣಿಸಿಕೊಂಡವು. ಫ್ರಾನ್ಸಿನ ಸವೊನ್-ಎಟ್-ಲೊಯರ್ ಪ್ರಾಂತ್ಯದಲ್ಲಿ ಅಂಥ ಅವಶೇಷಗಳನ್ನು ಕಾಣಬಹುದು. ಅದಕ್ಕೆ ಚಾಸ್ಸಿ ಸಂಸ್ಕೃತಿಯೆಂದು ಹೆಸರು. ಬಹುಶಃ ಆ ಕಾಲದಲ್ಲೇ ಲೆನಿನ್ ಬಟ್ಟೆಗಳ ಉಪಯೋಗ ಪ್ರಾರಂಭವಾಯಿತು. ನವಶಿಲಾಯುಗದ ಅಂತ್ಯಕಾಲದಲ್ಲಿ ಬೃಹಚ್ಛಿಲಾ ಸಮಾಧಿಗಳು ಬಳಕೆಗೆ ಬಂದುವು; ಫ್ರಾನ್ಸಿನ ಉದ್ದವಾದ ಮಣ್ಣಿನ ದಿಬ್ಬಗಳ ಕೆಳಗಿನ ಸಮಾಧಿಗಳೂ ಭೂಗತವಾದ ಕೋಣೆಗೋರಿಗಳೂ ಪ್ರಸಿದ್ಧವಾಗಿವೆ.

ಈ ವೇಳೆಗೆ ಪಶ್ಚಿಮ ಏಷ್ಯದಲ್ಲಿ ಬಳಕೆಗೆ ಬಂದಿದ್ದ ತಾಮ್ರ ಯುಗ ಸಂಸ್ಕೃತಿಯ ಪ್ರತಿಧ್ವನಿ ಫ್ರಾನ್ಸಿನಲ್ಲೂ ಕೇಳಿಬರಲಾರಂಭಿಸಿತು. ತಾಮ್ರದ ಅದುರಿನ ಶೋಧನೆಗಾಗಿ ಅನ್ವೇಷಣೆ ಮಾಡುತ್ತಿದ್ದ ಲೋಹಗಾರರು ಪಶ್ಚಿಮ ಮತ್ತು ಮಧ್ಯ ಯೂರೋಪಿನ ಅನೇಕ ಪ್ರದೇಶಗಳಲ್ಲಿ ಆ ಸಂಸ್ಕೃತಿಯ ಲಕ್ಷಣಗಳನ್ನು ರೂಢಿಗೆ ತಂದರು. ಅನತಿ ಕಾಲದಲ್ಲಿ ಕಬ್ಬಿಣದ ಬಳಕೆಯೂ ಪ್ರಾರಂಭವಾಯಿತು. ಆಗಿನ ಲಾಟೆನ್ ಸಂಸ್ಕೃತಿ ಪ್ರಮುಖವಾದುದು. ಆ ಸುಮಾರಿಗೆ ಕೆಲ್ಟರು ಫ್ರಾನ್ಸನ್ನು ಪ್ರವೇಶಿಸಿದರು. ಎಟ್ರಸ್ಕನ್ ಸಂಸ್ಕೃತಿಯೊಂದಿಗೆ ಇತಿಹಾಸಯುಗ ಪ್ರಾರಂಭವಾಯಿತು.

ಇತಿಹಾಸ

ಬದಲಾಯಿಸಿ

ಈಗಿನ ಫ್ರಾನ್ಸಿನ ಪ್ರದೇಶಕ್ಕೆ ಹಿಂದೆ ಗಾಲ್ ಎಂಬ ಹೆಸರಿತ್ತು. ಕ್ರಿ. ಪೂ. ಒಂದನೆಯ ಶತಮಾನದಲ್ಲಿ ರೋಮನ್ ಆಕ್ರಮಣಕ್ಕೆ ಗುರಿಯಾಗುವವರೆಗೂ ಈ ಪ್ರದೇಶದ ಇತಿಹಾಸ ಸ್ಪಷ್ಟವಾಗಿಲ್ಲ. ಜರ್ಮನ್ ಬುಡಕಟ್ಟಿಗೆ ಸೇರಿದ ಅನೇಕ ಗಾಲಿಕ್ ತಂಡಗಳ ನಾಯಕರು ಗಾಲ್ ಪ್ರದೇಶದ ವಿವಿಧ ಭಾಗಗಳನ್ನು ಆಳುತ್ತಿದ್ದರು. ಫ್ರಾನ್ಸಿನ ದಕ್ಷಿಣಭಾಗ ಕ್ರಿ. ಪೂ. ೧೨೧ ರಿಂದ ರೋಮಿನ ಪ್ರಾಂತ್ಯವಾಗಿತ್ತು. ಜೂಲಿಯಸ್ ಸೀಸರ್ ಉತ್ತರ ಮತ್ತು ಮಧ್ಯ ಭಾಗಗಳ ಮೇಲೆ ಕ್ರಿ. ಪೂ. ೫೧ ರಿಂದ ೫೮ ರ ವರೆಗೆ ದಂಡಯಾತ್ರೆಗಳನ್ನು ನಡೆಸಿ ಆ ಪ್ರದೇಶವನ್ನು ಗೆದ್ದ. ರೋಮನ್ ಆಳ್ವಿಕೆಗೆ ಒಳಪಟ್ಟ ಗಾಲ್ ಕ್ರಮೇಣ ರೋಮನ್ ನಾಗರಿಕತೆಯ ಪ್ರಭಾವಕ್ಕೊಳಗಾಯಿತು.[೨೬]

ಪ್ರಾಚೀನ ರೋಮನ್ ಸಾಮ್ರಾಜ್ಯದ ಪ್ರಾಬಲ್ಯ ಕ್ಷೀಣಿಸತೊಡಗಿದಾಗ, ಜರ್ಮನ್ ಬುಡಕಟ್ಟಿಗೆ ಸೇರಿದ ಬರ್ಗಂಡಿಯನರು, ವಿಸಿಗಾತರು, ಫ್ರಾಂಕರು ಮುಂತಾದವರು ಕ್ರಿ. ಶ. ೫ ನೆಯ ಶತಮಾನದಲ್ಲಿ ಈ ಪ್ರದೇಶದ ಮೇಲೆ ದಾಳಿ ನಡೆಸಿದರು. ಈ ದಾಳಿಕಾರದಲ್ಲಿ ಪ್ರಬಲರಾಗಿದ್ದ ಫ್ರಾಂಕರು ಕ್ಲೊವಿಸನ ನಾಯಕತ್ವದಲ್ಲಿ ಗಾಲ್‍ನ ಕೊನೆಯ ರೋಮನ್ ಗವರ್ನರನನ್ನು ೪೮೬ ರಲ್ಲಿ ಸೋಲಿಸಿದರು. ಫ್ರಾಂಕರೆಲ್ಲರನ್ನು ಅವನು ಒಂದುಗೂಡಿಸಿ ಅವರ ರಾಜನಾದನಲ್ಲದೆ, ವಿಸಿಗಾತರಿಂದ ದಕ್ಷಿಣ ಗಾಲನ್ನು ವಶಪಡಿಸಿಕೊಂಡು ಮೆರೊವಿಂಜಿಯನ್ ರಾಜಸಂತತಿಯನ್ನು ಸ್ಥಾಪಿಸಿದ. ಫ್ರಾಂಕರು ಗಾಲಿನ ಹೆಸರನ್ನು ಸಹ ಬದಲಾಯಿಸಿ ರೋಮನ್ ಸಂಸ್ಕೃತಿಯ ಉಪಯುಕ್ತತೆಯನ್ನು ಕಡೆಗಣಿಸಿದರು. ಫ್ರಾಂಕರ ನಾಡು ಫ್ರಾನ್ಸ್ ಆಯಿತು. ಫ್ರಾಂಕರು ಗಾಲ್ ಪ್ರದೇಶವನ್ನು ಸಂಘಟಿಸಿ ಆಧುನಿಕ ಫ್ರಾನ್ಸಿನ ಬೆಳೆವಣಿಗೆಗೆ ಆಸ್ತಿಭಾರ ಹಾಕಿದರು.[೨೭]

ಮೆರೊವಿಂಜಿಯನ್ ರಾಜರು ಫ್ರಾನ್ಸನ್ನು ೪೮೧ ರಿಂದ ೭೫೧ ರ ವರೆಗೆ ಆಳಿದರು. ಇವರುಗಳಲ್ಲಿ ಪ್ರಮುಖನಾದವನೆಂದರೆ ಕ್ಲೊವಿಸ್. ತನ್ನ ಶತ್ರುಗಳ ವಿರುದ್ಧಗಳಿಸಿದ ವಿಜಯದಿಂದಾಗಿ ಕ್ಲೊವಿಸ್ ಕ್ರಮೇಣ ಕೀರ್ತಿಗಳಿಸಿದ. ಪ್ಯಾರಿಸ್ ನಗರವನ್ನು ರಾಜಧಾನಿಯನ್ನಾಗಿ ಆರಿಸಿಕೊಂಡ. ತನ್ನ ಪ್ರಭುತ್ವವನ್ನು ಪಿರನೀಸ್ ಪರ್ವತ ಶ್ರೇಣಿಯವರೆಗೆ ವಿಸ್ತರಿಸಿದ. ಇವನು ಕ್ರೈಸ್ತಮತವನ್ನು ಸ್ವೀಕರಿಸಿದ. ಕ್ಲೊವಿಸನ ಅನಂತರ ಆಳಿದ ಮೆರೊವಿಂಜಿಯನ್ ರಾಜರು ಅಸಮರ್ಥರಾಗಿದ್ದರು. ಕರ್ತವ್ಯಭ್ರಷ್ಟರೂ ಅಶಕ್ತರೂ ಆಗಿದ್ದ ಅವರು ರಾಜ್ಯದ ವ್ಯವಹಾರಗಳನ್ನು ಅಧಿಕಾರಿಗಳಿಗೆ ವಹಿಸಿ, ಸುಖಜೀವನದಲ್ಲಿ ನಿರತರಾದರು. ಅರಮನೆಯ ಮೇಯರ್‌ಗಳಾಗಿದ್ದ ಅಧಿಕಾರಿಗಳು ಮೆರೊವಿಂಜಿಯನ್ ರಾಜರನ್ನು ಮೂಲೆಗೊತ್ತಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಇವರಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದ ಚಾಲ್ರ್ಸ್ ಮಾರ್ಟೆಲ್ ಕ್ಯಾರೊಲಿಂಜಿಯನ್ ರಾಜಮನೆತನವನ್ನು ಸ್ಥಾಪಿಸಿದ.

ಕ್ಯಾರೊಲಿಂಜಿಯನ್ ರಾಜರು ಸುಮಾರು ಒಂದೂವರೆ ಶತಮಾನಗಳ ಕಾಲ ಫ್ರಾನ್ಸನ್ನು ಆಳಿದರು. ಚಾಲ್ರ್ಸ್ ಮಾರ್ಟೆಲ್, ಷಾರ್ಲ್‍ಮೇನ್, ಲೂಯಿ ಪಯಸ್ ಇವರು ಪ್ರಮುಖರು. ಚಾಲ್ರ್ಸ್ ಮಾರ್ಟೆಲ್ ಫ್ರೆಂಚ್ ಶ್ರೀಮಂತರನ್ನು ಸಂಘಟಿಸಿ, ಫ್ರಾನ್ಸಿನ ಮೇಲೆ ದಾಳಿ ನಡೆಸುತ್ತಿದ್ದ ಮುಸ್ಲಿಮರನ್ನು ೭೩೨ ರಲ್ಲಿ ನಡೆದ ಟೂರ್ಸ್ ಕದನದಲ್ಲಿ ಸೋಲಿಸಿ, ರಾಷ್ಟ್ರದ ಏಕತೆಯನ್ನು ಸಾಧಿಸಿದ. ಅವನ ಮಗ ಪೆಪಿನ್ ೭೪೧ ರಿಂದ ೭೬೮ ರ ವರೆಗೆ ಆಳಿ ರಾಷ್ಟ್ರವನ್ನು ಮತ್ತಷ್ಟು ಭದ್ರಗೊಳಿಸಿ, ಫ್ರಾಂಕರ ಅಧಿಕಾರವನ್ನು ಕ್ರೋಢೀಕರಿಸಿದ. ಅಲ್ಲದೆ ಕ್ಯಾಥೊಲಿಕ್ ಚರ್ಚಿನ ಮತ್ತು ಪೋಪಿನ ಅಧಿಕಾರದ ಪ್ರಾಬಲ್ಯಕ್ಕೆ ಉತ್ತೇಜನ ನೀಡಿದ.[೨೮]

ಪೆಪಿನ್ನನ ಮಗ ಹಾಗೂ ಉತ್ತರಾಧಿಕಾರಿ ಷಾರ್ಲ್‍ಮೇನ್. ಇವನು ಮಧ್ಯಯುಗದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿ. ಈತ ಪವಿತ್ರ ರೋಮನ್ ಚಕ್ರವರ್ತಿಯಾದ. ಷಾರ್ಲ್‍ಮೇನ್ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ದೊರೆಯಾಗಿದ್ದು, ಸಮರ್ಥವಾಗಿ ಆಡಳಿತ ನಡೆಸಿದನಲ್ಲದೆ, ಶ್ಲಾಘನೀಯ ನ್ಯಾಯ ಪದ್ಧತಿಯನ್ನು ರೂಪಿಸಿ, ಕಲೆ, ಸಾಹಿತ್ಯ ಮತ್ತು ಜ್ಞಾನಾಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡಿದ. ಈತ ಲಂಬಾರ್ಡಿಯನ್ನರು, ಬವೇರಿಯನ್ನರು, ಸ್ಯಾಕ್ಸನರು ಮುಂತಾದವರನ್ನು ಸೋಲಿಸಿ ವಿಶಾಲವಾದ ಪವಿತ್ರ ರೋಮನ್ ಸಾಮ್ರಾಜ್ಯವನ್ನು ನಿರ್ಮಿಸಿದ.

ಅನಂತರ ಅಧಿಕಾರಕ್ಕೆ ಬಂದ ಲೂಯಿ ಪಯಸ್ ಅಷ್ಟೇನೂ ಸಮರ್ಥನಾಗಿರಲಿಲ್ಲ. ಇವನ ಉತ್ತರಾಧಿಕಾರಿಗಳ ಕಾಲದಲ್ಲಿ ಉಂಟಾದ ಒಳ ಜಗಳ ಮತ್ತು ರಾಜ್ಯವಿಭಜನೆಯಿಂದಾಗಿ ಕ್ಯಾರೊಲೀಜಿಯನ್ ಆಡಳಿತ ಕ್ಷೀಣಿಸತೊಡಗಿತು. ಊಳಿಗಮಾನ್ಯ ಪ್ರಭುಗಳು ರಾಜರಿಗಿಂತ ಹೆಚ್ಚು ಅಧಿಕಾರ ಪಡೆದರು. ಅನೇಕ ಪ್ರಾಂತ್ಯಗಳ ಡ್ಯೂಕರೂ ಕೌಂಟ್‍ಗಳೂ ಪ್ರಬಲರಾದರು. ಈ ಪರಿಸ್ಥಿತಿಯಿಂದಾಗಿ ೯೮೭ ರ ವೇಳೆಗೆ ಕ್ಯಾರೊಲಿಂಜಿಯನ್ ಮನೆತನ ಕೊನೆಗೊಂಡಿತು.

ಅನಂತರ ಫ್ರಾನ್ಸನ್ನು ಆಳಿದವರು ಕೆಫೀಷಿಯನ್ ಮನೆತನದವರು (೯೮೭-೧೩೨೮).[೨೯] ಹೂ ಕ್ಯಾಪೆಟ್ ಈ ವಂಶದ ಮೂಲಪುರುಷ, ಸಮರ್ಥ ರಾಜರ ಆಳ್ವಿಕೆ, ಪ್ರಬಲ ಹಾಗೂ ಆಯಕಟ್ಟಿನ ಪ್ರದೇಶಗಳ ಮೇಲೆ ಇವರ ಒಡೆತನ, ದೊರೆಗೂ ಚರ್ಚಿಗೂ ನಡುವೆ ಬೆಳೆದ ಮಧುರ ಬಾಂಧವ್ಯ-ಇವುಗಳಿಂದ ಈ ವಂಶದ ಹಿರಿಮೆ ಬೆಳೆಯಿತು. ಈ ವಂಶದ ದೊರೆಗಳ ಕಾಲದಲ್ಲಿ ಕೇಂದ್ರದ ಆಡಳಿತ ಬಿಗಿಯಾಗಿತ್ತು. ಇದನ್ನು ನಡಸಿಕೊಂಡು ಹೋಗಲು ಸಮರ್ಥ ಅಧಿಕಾರಿಗಳು ನೇಮಕ ಗೊಂಡಿದ್ದರು. ಈ ವಂಶದ ಪ್ರಮುಖ ಅರಸರಲ್ಲೊಬ್ಬನಾದ 6ನೆಯ ಲೂಯಿಯ ಕಾಲದಲ್ಲಿ ಪ್ರಭಾವಶಾಲಿ ಮಧ್ಯಮವರ್ಗದ ಜನರ ಬೆಂಬಲ ಸಹಕಾರಗಳು ದೊರಕಿದುವು. ಇದರಿಂದ ಕೆಫೀಷಿಯನ್ ದೊರೆಗಳು ಪ್ರಭುತ್ವ ಬಲಗೊಂಡಿತು. ಇವರು ಪ್ರಬಲ ಡ್ಯೂಕರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡರು. ಫ್ರಾನ್ಸಿನ ಅರ್ಧಭಾಗದಷ್ಟು ಪ್ರದೇಶಕ್ಕೆ ಒಡೆಯರಾಗಿದ್ದು ಫ್ರೆಂಚ್ ದೊರೆಗಳು ಸಾಮಂತರಾಗಿದ್ದ ಇಂಗ್ಲೆಂಡಿನ ರಾಜರಿಂದ ಫ್ರಾನ್ಸಿನ ಏಕತೆ ಮತ್ತು ಸ್ವಾತಂತ್ರ್ಯಕ್ಕೆ ಒದಗಬಹುದಾಗಿದ್ದ ಅಪಾಯವನ್ನು ತೊಡೆದು ಹಾಕಿದ್ದು ಕೆಫೀಷಿಯನ್ ದೊರೆಗಳ ಇನ್ನೊಂದು ಪ್ರಮುಖ ಸಾಧನೆ. ಇವನ್ನು ಸಾಧಿಸಿದ ಪ್ರಮುಖ ದೊರೆ ೨ ನೆಯ ಫಿಲಿಪ್ ಅಥವಾ ಫಿಲಿಪ್ ಆಗಸ್ಟಸ್. ಕುಶಾಗ್ರಮತಿಯಾದ ಈತ ಇಂಗ್ಲೆಂಡಿನ ರಾಜಕೀಯ ಪರಿಸ್ಥಿತಿ ಮತ್ತು ಇಂಗ್ಲಿಷ್ ದೊರೆಗಳ ಅಸಹಾಯಕತೆಯ ಲಾಭ ಪಡೆದು ತನ್ನ ರಾಜ್ಯವನ್ನು ವಿಸ್ತರಿಸಿದನಲ್ಲದೆ, ವಿಶಾಲ ರಾಜ್ಯಕ್ಕೆ ಅಗತ್ಯವಾಗಿದ್ದ ವ್ಯವಸ್ಥಿತ ಆಡಳಿತ ಪದ್ಧತಿಯನ್ನು ರೂಪಿಸಿದ. ಫಿಲಿಪ್ ಆಗಸ್ಟಸನ ಮಗ ೯ ನೆಯ ಲೂಯಿ. ಈತ ಸಂತ ಲೂಯಿ ಎಂದು ಖ್ಯಾತಿ ಪಡೆದ. ಧಾರ್ಮಿಕ ಪ್ರವೃತ್ತಿ ಮತ್ತು ಸಾಹಸ ಪ್ರವೃತ್ತಿಯ ಮಿಶ್ರಣವಾಗಿದ್ದ ಇವನು ಸಮರ್ಥ ಹಾಗೂ ನಿಷ್ಟಕ್ಷಪಾತವಾದ ಸಾರ್ವಜನಿಕ ಆಡಳಿತ ಪದ್ಧತಿ ಮತ್ತು ನ್ಯಾಯಾಂಗ ಪದ್ಧತಿಯನ್ನು ಜಾರಿಗೆ ತಂದು ಜನರ ಮೆಚ್ಚುಗೆ ಪಡೆದು ೧೩ ನೆಯ ಶತಮಾನದ ಅಸಾಧಾರಣ ದೊರೆ ಎನಿಸಿಕೊಂಡ.

ಇವನ ಮೊಮ್ಮಗ ೪ ನೆಯ ಫಿಲಿಪ್ಪನ ಕಾಲದಲ್ಲಿ ಫ್ರೆಂಚ್ ರಾಜಪ್ರಭುತ್ವ ಮತ್ತಷ್ಟು ಪ್ರಬಲಗೊಂಡಿತು.[೩೦] ಇವನಿಗೆ ನಿರಂಕುಶ ಪ್ರಭುತ್ವದ ಬಗ್ಗೆ ಹೆಚ್ಚು ಒಲವಿತ್ತಾದರೂ ಪಾದ್ರಿ, ಶ್ರೀಮಂತ ಮತ್ತು ಜನಸಾಮಾನ್ಯ ವರ್ಗದವರ ಪ್ರತಿ ನಿಧಿಗಳನ್ನೊಳಗೊಂಡ ಫ್ರಾನ್ಸಿನ ಶಾಸನ ಸಭೆಯನ್ನು ಕರೆದು. ತನ್ನ ಕಾರ್ಯ ವಿಧಾನದ ಬಗ್ಗೆ ಅದಕ್ಕೆ ವರದಿ ಸಲ್ಲಿಸುತ್ತಿದ್ದ. ಇವನ ಕಾಲದಲ್ಲಿ ಚರ್ಚಿಗೂ ಪ್ರಭುತ್ವಕ್ಕೂ ಘರ್ಷಣೆ ಪ್ರಾರಂಭವಾಗಿ, ಚರ್ಚನ್ನು ಸರ್ಕಾರದ ಅಧೀನಕ್ಕೊಳಪಡಿಸುವ ಪ್ರಯತ್ನಗಳು ನಡೆದುವು. ಒಟ್ಟಿನಲ್ಲಿ ಕೆಫೀಷಿಯನ್ ರಾಜರು ಅನುಸರಿಸಿದ ಸಮರ್ಥ ನೀತಿಯಿಂದಾಗಿ ಫ್ರಾನ್ಸ್ ೧೩ ನೆಯ ಶತಮಾನದ ವೇಳೆಗೆ ರಾಷ್ಟ್ರೀಯ ರಾಜ್ಯವಾಗಿ ಬೆಳೆಯಲು ಸಾಧ್ಯವಾಯಿತು.

ಕೆಫೀಷಿಯನ್ ದೊರೆಗಳ ಆಳ್ವಿಕೆಯ ಅನಂತರ, ಫ್ರಾನ್ಸನ್ನು ವ್ಯಾಲ್ವಾಯ್ ವಂಶದ ದೊರೆಗಳು ೧೩೨೮ ರಿಂದ ೧೫೮೯ ರವರೆಗೆ ಆಳಿದರು. ಇವರ ಆಳ್ವಿಕೆಯ ಕಾಲದಲ್ಲಿ ಫ್ರಾನ್ಸಿನಲ್ಲಿ ಅನೇಕ ಮಹತ್ತರ ಘಟನೆಗಳ ಸಂಭವಿಸಿದುವು, ಬದಲಾವಣೆಗಳಾದುವು. ೧೩೪೦ ರಿಂದ ೧೪೫೩ ರವರೆಗೆ ನಡೆದ ನೂರು ವರ್ಷಗಳ ಯುದ್ಧ ಅತ್ಯಂತ ಮಹತ್ತ್ವಪೂರ್ಣ ಘಟನೆ. ನಾಲ್ಕು ಹಂತಗಳಲ್ಲಿ ನಡೆದ ಈ ಯುದ್ಧ ಇಂಗ್ಲೆಂಡ್ ಮತ್ತು ಫ್ರಾನ್ಸ್‌‍ಗಳ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೇಂದ್ರಿಕೃತ ಫ್ರೆಂಚ್ ಪ್ರಭುತ್ವಕ್ಕೆ ಇಂಗ್ಲೆಂಡಿನ ರಾಜರು ಅಡ್ಡಿಯಾಗಿದ್ದುದು ಮತ್ತು ಇಂಗ್ಲೆಂಡಿನ ದೊರೆ ೩ ನೆಯ ಎಡ್ವರ್ಡ್ ಫ್ರೆಂಚ್ ಸಿಂಹಾಸನದ ಮೇಲೆ ತನ್ನ ಹಕ್ಕನ್ನು ಮುಂದೊಡ್ಡಿದ್ದು ನೂರು ವರ್ಷಗಳ ಯುದ್ಧಕ್ಕೆ ಪ್ರಮುಖ ಕಾರಣಗಳಾಗಿದ್ದುವು. ಮೊದಲ ಫ್ರಾನ್ಸ್ ಸೋಲಿನ ಮೇಲೆ ಸೋಲನ್ನು ಅನುಭವಿಸಿತಲ್ಲದೆ ಇಂಗ್ಲೆಂಡಿನ ರಾಜರು ಫ್ರಾನ್ಸಿನ ಮೇಲೆ ತಮ್ಮ ಪ್ರಭುತ್ವ ಸಾಧಿಸಲು ಹೆಚ್ಚು ಕಡಿಮೆ ಸಾಧ್ಯವಾಯಿತು. ಈ ಮಧ್ಯೆ ಫ್ರಾನ್ಸಿನ ಶ್ರೀಮಂತರೂ ಸೇನಾಧಿಪತಿಗಳೂ ಕಲಹದಲ್ಲಿ ನಿರತರಾಗಿದ್ದರಿಂದ ರಾಷ್ಟ್ರ ವಿಷಮ ಸ್ಥಿತಿಯಲ್ಲಿತ್ತು. ಇಂಥ ಗಂಡಾಂತರದ ಸಮಯದಲ್ಲಿ ರೈತನೊಬ್ಬನ ಮಗಳಾದ ಜೋನ್ ಆಫ್ ಆರ್ಕ್ ಫ್ರಾನ್ಸಿನ ಯೋಧರನ್ನು ಹುರಿದುಂಬಿಸಿದಳಲ್ಲದೆ, ಜನತೆಯಲ್ಲಿ ಉತ್ಕಟ ರಾಷ್ಟ್ರಾಭಿಮಾನ ಬೆಳೆಯುವಂತೆ ಮಾಡಿದಳು. ಜೋನ್ ಆಫ್ ಆರ್ಕ್‍ಳಿಂದ ಸ್ಫೂರ್ತಿಗೊಂಡ ಸೈನಿಕರು ಇಂಗ್ಲಿಷರನ್ನು ಸೋಲಿಸಲು ವೀರಾವೇಶದಿಂದ ಹೋರಾಡಿದರು. ಅವಳ ಸಾವಿನ ಅನಂತರವೂ ಫ್ರೆಂಚ್ ಸೈನಿಕರು ಉತ್ಸಾಹ ಶೌರ್ಯಗಳಿಂದ ಹೋರಾಡಿ ರಾಷ್ಟ್ರದ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ೧೪೫೩ ರಲ್ಲಿ ಕ್ಯಾಸ್ಟಿಲಾನ್ ಕದನದಲ್ಲಿ ಇಂಗ್ಲೆಂಡ್ ಅಪಜಯ ಹೊಂದಿತು. ನೂರು ವರ್ಷಗಳ ಯುದ್ಧ ಅಂತ್ಯಗೊಂಡಿತು, ಫ್ರಾನ್ಸ್ ಮತ್ತು ಇಂಗ್ಲೆಂಡ್‍ಗಳನ್ನು ಬೇರ್ಪಡಿಸಿ ಎರಡೂ ದೇಶಗಳಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ್ದು ನೂರುವರ್ಷಗಳ ಯುದ್ಧದ ಪ್ರಮುಖ ಸಾಧನೆ, ಈ ಯುದ್ಧ ಫ್ರಾನ್ಸಿನ ಪ್ರಾದೇಶಿಕ ಭದ್ರತೆಯನ್ನು ಊರ್ಜಿತಗೊಳಿಸಿತಲ್ಲದೆ, ವ್ಯಾಲ್ವಾಯ್ ರಾಜಮನೆತನದ ಪ್ರಭುತ್ವವನ್ನು ಭದ್ರಗೊಳಿಸಿತು.

ನೂರು ವರ್ಷಗಳ ಯುದ್ಧದಿಂದಾಗಿ ಫ್ರಾನ್ಸಿನ ಆರ್ಥಿಕ ಸ್ಥಿತಿ ಅಸ್ತವ್ಯಸ್ತಗೊಂಡಿತು. ದೇಶ ಅಂತಃಕಲಹಕ್ಕೆ ಗುರಿಯಾಯಿತು. ಆ ಸಂದಿಗ್ಧ ಸಮಯದಲ್ಲಿ ಫ್ರಾನ್ಸಿಗೆ ಅಗತ್ಯವಾಗಿದ್ದ ಸಮರ್ಥ ನಾಯಕತ್ವ ಮತ್ತು ಆಂತರಿಕ ಶಾಂತಿಯನ್ನು ೧೧ ನೆಯ ಲೂಯಿ (೧೪೬೧,೧೪೮೩) ನೀಡಿದ, ಇವನು ಮಹತ್ತ್ವಾಕಾಂಕ್ಷಿ, ಕುಶಲ ರಾಜಕಾರಣಿ. ಈತ ಅನೇಕ ಪ್ರಮುಖ ಕ್ರಮಗಳನ್ನು ಕೈಗೊಂಡು ಸಾಮಂತರ ಪ್ರಭಾವವನ್ನು ಅಳಿಸಿಹಾಕಿ, ಸಮರ್ಥ ಮತ್ತು ಕೇಂದ್ರೀಕೃತ ಆಡಳಿತ ಪದ್ಧತಿಯನ್ನು ಜಾರಿಗೆ ತಂದು, ರಾಷ್ಟ್ರದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿದ. ಅಲ್ಲದೆ ಬರ್ಗಂಡಿ, ಪಿಕಾರ್ಡಿ, ಫ್ರೆಂಚ್ ಕಾಮ್ಟೆ ಮತ್ತು ಆರ್ಟಾಯ್ ಪ್ರಾಂತ್ಯಗಳನ್ನು ಫ್ರೆಂಚ್ ಪ್ರಭುತ್ವಕ್ಕೆ ಒಳಪಡಿಸಿದ.

ಇವನ ಅನಂತರ ೮ ನೆಯ ಚಾರ್ಲ್ಸ್ (೧೪೮೩-೧೪೯೮) ಮತ್ತು ೧೨ ನೆಯ ಲೂಯಿ (೧೪೯೮-೧೫೧೫) ಅನುಕ್ರಮವಾಗಿ ಫ್ರಾನ್ಸನ್ನು ಆಳಿದರು. ಫ್ರಾನ್ಸ್ ಆ ವೇಳೆಗೆ ಆಂತರಿಕ ಹಾಗೂ ಹೊರಗಿನ ತೊಂದರೆಗಳಿಂದ ಮುಕ್ತವಾಗಿತ್ತು. ಆದ್ದರಿಂದ ಇವರಿಬ್ಬರೂ ರಾಜ್ಯವಿಸ್ತರಣೆಯ ಹೆಬ್ಬಯಕೆಯಿಂದ ಇಟಲಿಯಲ್ಲಿ ಫ್ರೆಂಚ್ ಪ್ರಾಬಲ್ಯ ಬೆಳೆಸಲು ಪ್ರಯತ್ನಿಸಿ ವಿಫಲರಾದರು.

ಒಂದನೆಯ ಫ್ರಾನ್ಸಿಸ್ (೧೫೧೫-೧೫೪೭) ೧೬ ನೆಯ ಶತಮಾನದ ಫ್ರೆಂಚ್ ದೊರೆಗಳಲ್ಲಿ ಪ್ರಸಿದ್ಧನಾದವನು. ಇವನು ಶೂರನೂ ಸಾಹಸಪ್ರಿಯನೂ ಆಗಿದ್ದ. ಕಲೆ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ. ಇಟಲಿಯಲ್ಲಿ ಫ್ರೆಂಚ್ ಪ್ರಭುತ್ವವನ್ನು ಸ್ಥಾಪಿಸಲು ಚಕ್ರವರ್ತಿ ೫ ನೆಯ ಚಾಲ್ರ್ಸ್‌ನೊಡನೆ ನಡೆಸಿದ ದೀರ್ಘ ಕಾಲದ ಹೋರಾಟ ಇವನ ಕಾಲದ ಪ್ರಮುಖ ರಾಜಕೀಯ ಘಟನೆ. ತನ್ನ ಗುರಿಯನ್ನು ಸಾಧಿಸಲು ಈತ ಜರ್ಮನಿಯ ಪ್ರಾಟೆಸ್ಟಂಟ್ ರಾಜನೊಡನೆ ಮತ್ತು ಆಟೊಮನ್ ತುರ್ಕರೊಡನೆ ಒಪ್ಪಂದ ಮಾಡಿಕೊಳ್ಳಲು ಹಿಂಜರಿಯಲಿಲ್ಲ. ಇವನು ೧೫೨೫ ರಲ್ಲಿ ನಡೆದ ಪೇವಿಯಾ ಕದನದಲ್ಲಿ ಸೋತು ಚಕ್ರವರ್ತಿ ೫ ನೆಯ ಚಾಲ್ರ್ಸ್‌ನ ಸೆರೆಯಾಳಾದ. ಒಪ್ಪಂದಕ್ಕೆ ಸಹಿ ಹಾಕಿ ಬಂಧನದಿಂದ ಮುಕ್ತನಾದ. ಅನಂತರ ಇವನು ಮತ್ತೆ ಯುದ್ಧ ಆರಂಭಿಸಿದ. ಆಗಾಗ್ಗೆ ನಡೆಯುತ್ತಿದ್ದ ಕದನಗಳಿಂದಾಗಿ ಇಬ್ಬರೂ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ಯಾರೊಬ್ಬರೂ ಜಯಗಳಿಸಲಾರದೆ ನಿತ್ರಾಣಗೊಂಡರು. ಅಂತಿಮವಾಗಿ ೧೫೪೪ ರಲ್ಲಿ ಒಪ್ಪಂದ ಮಾಡಿಕೊಂಡು ಇವರಿಬ್ಬರೂ ಹೋರಾಟವನ್ನು ಅಂತ್ಯಗೊಳಿಸಿದರು. ಇದರ ಪ್ರಮುಖ ಪರಿಣಾಮವೆಂದರೆ ಇಟಲಿಯಲ್ಲಿ ೫ ನೆಯ ಚಾಲ್ರ್ಸ್‌ನ ಅಧಿಕಾರ ಪ್ರಬಲಗೊಂಡದ್ದು.

ಒಂದನೆಯ ಫ್ರಾನ್ಸಿಸನ ಉತ್ತರಾಧಿಕಾರಿ ೨ ನೆಯ ಹೆನ್ರಿ ಇಟಲಿಯನ್ನು ಕಬಳಿಸಲು ಮತ್ತೆ ಸ್ಪೇನಿನೊಡನೆ ಯುದ್ಧ ಮುಂದುವರಿಸಿದ, ಆದರೆ ಮತ್ತೆ ಸ್ಪೇನ್ ವಿಜಯ ಪಡೆಯಿತು. ಎರಡೂ ರಾಷ್ಟ್ರಗಳಿಗೂ ನಡೆಯುತ್ತಿದ್ದ ಹೋರಾಟ ಒಪ್ಪಂದದಿಂದ ಕೊನೆಗೊಂಡಿತು. ಎರಡನೆಯ ಹೆನ್ರಿಯ ಅನಂತರ ಅವನ ಮಕ್ಕಳು ೨ ನೆಯ ಫ್ರಾನ್ಸಿಸ್ (೧೫೫೯-೬೦) ೯ ನೆಯ ಚಾಲ್ರ್ಸ್ (೧೫೬೦-೧೫೭೪) ಮತ್ತು ೩ ನೆಯ ಹೆನ್ರಿ (೧೫೭೪-೧೫೮೯) ಅನುಕ್ರಮವಾಗಿ ಫ್ರಾನ್ಸನ್ನು ಆಳಿದರು. ಇವರು ಅಸಮರ್ಥ ದೊರೆಗಳಾಗಿದ್ದುದರಿಂದ, ರಾಜಮಾತೆ ಕ್ಯಾತರಿನ್ ಡಿ ಮೆಡಿಸಿ ಸರ್ಕಾರ ನಡೆಸುತ್ತಿದ್ದಳು. ಇವರ ಆಳ್ವಿಕೆಯ ಕಾಲದಲ್ಲಿ ಕ್ಯಾಥೊಲಿಕರಿಗೂ ಅಲ್ಟಸಂಖ್ಯಾತ ಹ್ಯೂಜಿನಾಟರಿಗೂ ನಡೆದ ಧಾರ್ಮಿಕ ಕಲಹಗಳಿಂದಾಗಿ ಫ್ರಾನ್ಸಿನಲ್ಲಿ ವಿಷಮ ಪರಿಸ್ಥಿತಿ ತಲೆದೋರಿತು. ಮೂರನೆಯ ಹೆನ್ರಿಯ ಕಾಲದಲ್ಲಿ ಪರಿಸ್ಥಿತಿ ತುಂಬ ಹದಗೆಟ್ಟಿದ್ದರಿಂದ, ಫ್ರಾನ್ಸಿನ ಏಕತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿತು.

ಬೂರ್ಬನ್ ವಂಶ ಫ್ರಾನ್ಸಿನ ರಾಜಕೀಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದ ಸಮಯದಲ್ಲಿ ಇತಿಹಾಸ ಪ್ರಸಿದ್ಧ ಬೂರ್ಬನ್ ಮನೆತನದ ರಾಜರು ಅಧಿಕಾರಕ್ಕೆ ಬಂದರು. ೧೫೮೯ ರಲ್ಲಿ ಫ್ರಾನ್ಸಿನ ಸಿಂಹಾಸನವೇರಿದ ೪ ನೆಯ ಹೆನ್ರಿ ಈ ರಾಜವಂಶದ ಪ್ರಥಮ ದೊರೆ. ಬೂರ್ಬನ್ ಮನೆತನ ಅಧಿಕಾರಕ್ಕೆ ಬಂದದ್ದರಿಂದ ಫ್ರಾನ್ಸ್ ಮತ್ತು ಯೂರೋಪಿನ ಇತಿಹಾಸದಲ್ಲಿ ಉಜ್ಜಲ ಅಧ್ಯಾಯವೊಂದು ಆರಂಭವಾಯಿತು. ಫ್ರಾನ್ಸಿನ ಅತ್ಯಂತ ಹೆಸರಾಂತ ದೊರೆಗಳಲ್ಲಿ ಒಬ್ಬನಾದ ೪ ನೆಯ ಹೆನ್ರಿ ರಾಜಕೀಯ ನಿಪುಣ, ಕುಶಾಗ್ರ ಮತಿ, ಸಮರ್ಥ ವ್ಯಕ್ತಿ, ದಕ್ಷ ಆಡಳಿತಗಾರ ಹಾಗೂ ಉದಾರ ಮತ್ತು ಉಪಕಾರ ಬುದ್ಧಿಯವನು ಆಗಿದ್ದ. ರಾಷ್ಟ್ರವನ್ನು ಬಿಕ್ಕಟ್ಟಿನ ಪರಿಸ್ಥಿತಿಯಿಂದ ಬಿಡುಗಡೆ ಮಾಡಲು ತನ್ನ ಹಿಂದಿನ ಫ್ರಾಟೆಸ್ಟಂಟ್ ಧರ್ಮವನ್ನು ತ್ಯಜಿಸಿ ಕ್ಯಾತೊಲಿಕ್ ಮತಾವಲಂಬಿಯಾದ. ೧೫೯೮ ರಲ್ಲಿ ಚರಿತ್ರಾರ್ಹ ನ್ಯಾನ್ಟೀಸ್ ಶಾಸನವನ್ನು ಘೋಷಿಸಿ, ಹ್ಯೂಜಿನಾಟರಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸೌಲಭ್ಯಗಳನ್ನು ದೊರಕಿಸಿಕೊಟ್ಟ. ಆತನ ಈ ದೂರದೃಷ್ಟಿಯ ಕ್ರಮದಿಂದಾಗಿ ಫ್ರಾನ್ಸ್ ಧಾರ್ಮಿಕ ದ್ವೇಷಾಸೂಯೆಗಳಿಂದ ಮುಕ್ತಗೊಂಡು ಅಲ್ಲಿ ಆಂತರಿಕ ಶಾಂತಿ ನೆಮ್ಮದಿಗಳು ನೆಲಸಲು ಸಾಧ್ಯವಾಯಿತು. ಅವನು ಸ್ಪೇನಿನ ಎರಡನೆಯ ಫಿಲಿಪನನ್ನು ಸೋಲಿಸಿ, ರಾಷ್ಟ್ರದ ಸ್ವಾತಂತ್ರ್ಯ ಘನತೆ ಗೌರವಗಳನ್ನು ರಕ್ಷಿಸಿದ. ಪ್ರಾಮಾಣಿಕ ನಿಷ್ಠಾವಂತ ಮಂತ್ರಿಗಳ ಸಹಕಾರದಿಂದ ಸಮರ್ಥ ಹಾಗೂ ಸದೃಢ ಸರ್ಕಾರವನ್ನು ರಚಿಸಿ ಏಕರೀತಿಯ ಆಡಳಿತ ಕ್ರಮಗಳನ್ನು ರೂಪಿಸಿ, ಅನೇಕ ಪ್ರಚೋಪಕಾರಿ ಕೆಲಸಗಳನ್ನು ಮಾಡಿ ಪ್ರಜೆಗಳ ಹಿತವನ್ನು ಸಾಧಿಸಿದ. ಅವನು ಫ್ರಾನ್ಸಿನ ರಾಜಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ. ಅವನು ರಾಷ್ಟ್ರಕ್ಕೆ ಸಲ್ಲಿಸಿದ ಅಮೋಘ ಸೇವೆಯಿಂದಾಗಿ ಹೆನ್ರಿ ಮಹಾಶಯ ಎಂಬ ಗೌರವಕ್ಕೆ ಪಾತ್ರನಾದ.

ಅವನ ಮಗ ೧೩ ನೆಯ ಲೂಯಿ ೧೬೧೦ ರಲ್ಲಿ ಪಟ್ಟಕ್ಕೆ ಬಂದಾಗ ಒಂಬತ್ತು ವರ್ಷದ ಬಾಲಕನಾಗಿದ್ದ. ಇದರಿಂದ ಫ್ರಾನ್ಸ್ ಮತ್ತೆ ವಿಪತ್ತಿಗೆ ಗುರಿಯಾಯಿತು. ರಾಜಮಾತೆ ಮೇರಿ ಡಿ ಮೆಡಿಸಿ ರಾಷ್ಟ್ರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಅವಳು ಅನುಸರಿಸಿದ ಅಸಮರ್ಥ ಮತ್ತು ತಪ್ಪು ನೀತಿಗಳಿಂದಾಗಿ ರಾಷ್ಟ್ರದಲ್ಲಿ ವಿಚ್ಛಿದ್ರಕಾರದ ಶಕ್ತಿಗಳು ತಲೆ ಎತ್ತದುವು. ಅದೃಷ್ಟವಶಾತ್ ೧೬೨೪ ರಲ್ಲಿ ೧೩ ನೆಯ ಲೂಯಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾರ್ಡಿನಲ್ ರಿಚೆಲ್ಯೂ ರಾಷ್ಟ್ರವನ್ನು ವಿಪತ್ತಿನಿಂದ ಪಾರುಮಾಡಿದ. ಕಾರ್ಡಿನಲ್ ರಿಚೆಲ್ಯೂ ರಕ್ಷಣ ಮಂತ್ರಿಯಾಗಿದ್ದು, ಸಮರ್ಥ ನೀತಿಯನ್ನು ಅನುಸರಿಸಿದ. ಪ್ರಭುತ್ವದ ವಿರೋಧಿಗಳನ್ನು ಹತ್ತಿಕ್ಕಿ, ಪ್ರಾಟೆಸ್ಟೆಂಟರ ದಂಗೆಯನ್ನು ಅಡಗಿಸಿ, ದೇಶದಲ್ಲಿ ಉಂಟಾಗಿದ್ದ ಅರಾಜಕತೆಯನ್ನು ನಿರ್ಮೂಲಿಸಿದ.

ಹದಿಮೂರನೆಯ ಲೂಯಿಯ ಮಗ ೧೪ ನೆಯ ಲೂಯಿ (೧೬೪೩-೧೭೧೫) ಐದು ವರ್ಷಗಳ ಬಾಲಕನಾಗಿದ್ದಾಗ ಪಟ್ಟಕ್ಕೆ ಬಂದ. ರಾಜಮಾತೆ ಆಸ್ಟ್ರಿಯದ ಆನಿ ರಾಜಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಕಾರ್ಡಿನಲ್ ಮ್ಯಾಜರೀನ್ ಪ್ರಧಾನಿಯಾಗಿದ್ದ. ಅವನು ದೇಶದಲ್ಲಿ ಎದ್ದ ದಂಗೆಗಳನ್ನು ಅಡಗಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದನಲ್ಲದೆ ಪ್ರಭುತ್ವಕ್ಕೆ ಅಪತ್ತನ್ನು ನಿವಾರಿಸಿದ. ಪ್ರಾಪ್ತ ವಯಸ್ಸಿಗೆ ಬಂದ ೧೪ ನೆಯ ಲೂಯಿ ೧೬೬೧ ರಲ್ಲಿ ಸರ್ಕಾರಕ ವ್ಯವಹಾರಗಳನ್ನು ತಾನೇ ವಹಿಸಿಕೊಂಡ. ೧೬೬೧ ರಿಂದ ೧೭೧೫ ರ ವರೆಗಿನ ಅವನ ವ್ಯಕ್ತಿಗತ ಆಳ್ವಿಕೆ ಮಹತ್ವಪೂರ್ಣ ಘಟನೆಗಳಿಂದ ಕೂಡಿತ್ತು. ಅವನು ಮಹಾಪ್ರಭು ಮತ್ತು ಸೂಯಪ್ರಭು ಎಂದು ಪ್ರಸಿದ್ಧಿ ಪಡೆದ. ಇವನ ಕಾಲದಲ್ಲಿ ಫ್ರಾನ್ಸ್ ಇಡೀ ಯುರೋಪಿಗೆ ಮಾದರಿಯಾಯಿತು. ಫ್ರೆಂಚ್ ಸಾಹಿತ್ಯ ಸಂಗೀತ, ಭಾಷೆ, ಉಡುಗೆ ತೊಡಿಗೆಗಳು ಯುರೋಪಿನ ಮನೆಮಾತಾಗಿದ್ದುವು. ಯೂರೋಪಿನ ಮೇಲೆ ಫ್ರಾನ್ಸ್ ಬೀರಿದ ಪರಿಣಾಮದಿಂದಾಗಿ ಇವನ ಆಳ್ವಿಕೆಯ ಕಾಲವನ್ನು ೧೪ ನೆಯ ಲೂಯಿಯ ಯುಗ ಎಂದು ಬಣ್ಣಿಸಲಾಗಿದೆ.

ನಾನೇ ರಾಜ್ಯ ಎಂದು ಹೇಳಿಕೊಂಡ ೧೪ ನೆಯ ಲೂಯಿ ಅತ್ಯಂತ ವೈಭವದಿಂದ ಆಳಿದ. ಫ್ರಾನ್ಸನ್ನು ಯೂರೋಪಿನ ಮಹಾನ್ ರಾಷ್ಟ್ರವಾಗಿ ಮಾಡಬೇಕೆಂದು ಅವನ ಹೆಬ್ಬಯಕೆಯಾಗಿತ್ತು. ಅವನು ಸದೃಢ ಸರ್ಕಾರ ರಚಿಸಿ ಪರಿಣಾಮಕಾರಿ ಆಡಳಿತ ಪದ್ಧತಿಯನ್ನು ಜಾರಿಗೆ ತಂದ. ಫ್ರಾನ್ಸ್ ಸಂಪದ್ಭರಿತ ರಾಷ್ಟ್ರವಾಗಿ ಬೆಳೆಯಿತು. ದಕ್ಷ ಮಂತ್ರಿಗಳು ಸಾಧಿಸಿದ ಆರ್ಥಿಕ ದೃಢತೆಯನ್ನು ೧೪ ನೆಯ ಲೂಯಿ ತನ್ನ ಅವಿವೇಕದ, ಸಂಕುಚಿತ ನೀತಿಯಿಂದಾಗಿ ಹಾಳುಮಾಡಿದ. ಪ್ರಾಟೆಸ್ಟೆಂಟರನ್ನು ಚಿತ್ರಹಿಂಸೆಗೆ ಗುರಿಪಡಿಸಿ, ಪ್ರಸಿದ್ಧ ನ್ಯಾಸ್ಟೀಸ್ ಶಾಸನವನ್ನು ರದ್ದುಗೊಳಿಸಿದ. ಇದರಿಂದ ಸಹಸ್ರಾರು ಪ್ರಾಟೆಸ್ಟೆಂಟರು ಫ್ರಾನ್ಸನ್ನು ತ್ಯಜಿಸಿದರು. ಲೂಯಿಯ ಈ ಕ್ರಮ ರಾಷ್ಟ್ರದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿತು. ಫ್ರಾನ್ಸಿನ ಗಡಿ ಪ್ರದೇಶಗಳನ್ನು ವಿಸ್ತರಿಸಿ ವಿಶಾಲ ಸಾಮ್ರಾಜ್ಯ ನಿರ್ಮಿಸಿದ ಗುರಿಯಿಂದ ಅವನು ನಾಲ್ಕು ಯುದ್ಧಗಳನ್ನು ಮಾಡಿದ. ಇವು ಅತ್ಯಂತ ದುಬಾರಿ ಯುದ್ಧಗಳಾದ್ದು, ರಾಷ್ಟ್ರದ ಆರ್ಥಿಕ ಮತ್ತು ಸೈನಿಕ ಶಕ್ತಿಗಳನ್ನು ನಾಶಗೊಳಿಸಿದುವು; ಫ್ರಾನ್ಸಿನ ಪ್ರತಿಷ್ಟೆ ಗೌರವಗಳನ್ನು ಹೆಚ್ಚಿಸುವ ಬದಲು ರಾಷ್ಟ್ರದ ಸರ್ವನಾಶಕ್ಕೆ ಮೂಲವಾದವು.

೧೭೧೫ ರಿಂದ ೧೭೭೪ ರ ವರೆಗೆ ಫ್ರಾನ್ಸಿನ ದೊರೆಯಾಗಿದ್ದ ೧೫ ನೆಯ ಲೂಯಿ ಅಸಮರ್ಥನೂ ಅವಿವೇಕಿಯೂ ಆಗಿದ್ದ. ದೇಶದ ವ್ಯವಹಾರಗಳನ್ನು ಕಡೆಗಣಿಸಿ ನೃತ್ಯ, ಬೇಟೆ, ಸುಂದರ ಸ್ತ್ರೀಯರ ಸಹವಾಸ ಇವುಗಳಲ್ಲಿ ಮಗ್ನನಾಗಿದ್ದ. ತನ್ನ ಇಬ್ಬರು ರಾಣಿಯ ಕೆಟ್ಟ ಪ್ರಭಾವಕ್ಕೊಳಗಾಗಿ ರಾಷ್ಟ್ರ ಮತ್ತು ಪ್ರಜೆಗಳ ಹಿತಾಸಕ್ತಿಗಳನ್ನು ಗಾಳಿಗೆ ತೂರಿದ. ಇವನ ಕಾಲದಲ್ಲಿ ಪೊಲೀಸ್ ಉತ್ತರಾಧಿಕಾರ ಯುದ್ಧ ಆಸ್ಟ್ರಿಯನ್ ಉತ್ತರಾಧಿಕಾರ ಯುದ್ಧ ಮತ್ತು ಸಪ್ತವಾರ್ಷಿಕ ಯುದ್ಧದಲ್ಲಿ ಫ್ರಾನ್ಸ್ ಪಾಲ್ಗೊಂಡದ್ದರಿಂದ ದೇಶದ ಬೊಕ್ಕಸ ಬರಿದಾಗಿ ಫ್ರಾನ್ಸ್ ತೀವ್ರ ರೀತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು.

ಹದಿನೈದನೆಯ ಲೂಯಿಯ ಮೊಮ್ಮಗ ೧೬ ನೆಯ ಲೂಯಿ ೧೭೭೪ ರಲ್ಲಿ ಫ್ರಾನ್ಸಿನ ಗದ್ದುಗೆ ಏರಿದ. ಉತ್ಸಾಹಶಾಲಿಯಾಗಿದ್ದ. ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತರುವ ಸದುದ್ದೇಶ ಹೊಂದಿದ್ದ. ಆದರೆ ಸಮರ್ಥ ನಾಯಕತ್ವ ಮತ್ತು ದೃಢಸಂಕಲ್ಪದ ಕೊರತೆಗಳು ಅವನಲ್ಲಿದ್ದುದರಿಂದ, ೧೬ ನೆಯ ಲೂಯಿ ತನ್ನ ರಾಣಿ ಮೇರಿ ಆಂಟಾಯ್ನೆಟ್ಟಳ ಕೆಟ್ಟ ಪ್ರಭಾವಕ್ಕೆ ಗುರಿಯಾಗಿದ್ದ. ಇವನ ಕಾಲದ ಮಹತ್ವಪೂರ್ಣ ಘಟನೆಯೆಂದರೆ, ೧೭೮೯ ರಲ್ಲಿ ಸಂಬಂಧಿಸಿದ ಫ್ರೆಂಚ್ ಕ್ರಾಂತಿ. ಇದು ಮಾನವ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಸಾಮಾಜಿಕ ವಿಪ್ಲವವೂ ಹೌದು, ಮಹಾ ರಾಜಕೀಯ ಕ್ರಾಂತಿಯೂ ಹೌದು. ರಾಷ್ಟ್ರದ ಆರ್ಥಿಕ. ರಾಜಕೀಯ ಸಾಮಾಜಿಕ ಜೀವನದಲ್ಲಿ ಬೇರು ಬಿಟ್ಟಿದ್ದ ಲೋಪದೋಷಗಳಿಂದಾಗಿ ಕ್ರಾಂತಿ ಸಂಭವಿಸಿತು. ಜನತೆಯ ಅತೃಪ್ತಿ ಅಸಮಾಧಾನಗಳೇ ಕ್ರಾಂತಿಯ ಮೂಲ.

ಈ ಕ್ರಾಂತಿ ಎರಡು ಘಟ್ಟಗಳಲ್ಲಿ ನಡೆಯಿತು. ೧೭೮೯ ರ ಮೊದಲ ಕ್ರಾಂತಿಯಿಂದಾದ ನಿರಂಕುಶ ಪ್ರಭುತ್ವ ಅಸಮಾನತೆ, ಅಸಹಿಷ್ಣುತೆ ಮುಂತಾದ ಕೆಟ್ಟ ಪದ್ಧತಿಗಳನ್ನು ಕಿತ್ತೊಗೆಯಲಾಯಿತಾದರೂ ಫ್ರಾನ್ಸಿನ ಜನತೆ ರಾಜಪ್ರಭುತ್ವವನ್ನು ಉಳಿಸಿಕೊಂಡರು. ೧೭೯೩ ರಲ್ಲಿ ಸಂಭವಿಸಿದ ಎರಡನೆಯ ಘಟ್ಟ ಹೆಚ್ಚು ಮಹತ್ತ್ವದ್ದು. ಇದರಿಂದ ಫ್ರಾನ್ಸಿನಲ್ಲಿ ರಾಜಪ್ರಭುತ್ವವನ್ನು ಕೈಬಿಟ್ಟು ಪ್ರಜಾಸತ್ತಾತ್ಮಕ ಸರ್ಕಾರವನ್ನು ಸ್ಥಾಪಿಸಲಾಯಿತು. ಫ್ರಾನ್ಸಿನ ಕ್ರಾಂತಿಯ ಧ್ಯೇಯಗಳಾದ ಸ್ವಾತಂತ್ರ್ಯ, ಸಮಾನತೆ, ಸೌಭ್ರಾತೃತ್ವಗಳು ಪ್ರಪಂಚಾದ್ಯಂತ ಪ್ರತಿಧ್ವನಿಸಿದುವು. ಸಮಾನತೆಯ ಆಧಾರದ ಮೇಲೆ ನೂತನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸುವುದು ಕ್ರಾಂತಿಕಾರರ ಗುರಿಯಾಗಿತ್ತು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಪ್ರಪಂಚಾದ್ಯಂತ ನಡೆದ ರಾಷ್ಟ್ರೀಯ ಚಳವಳಿಗಳಿಗೆ ಸ್ಫೂರ್ತಿ ನೀಡಿದ ಈ ಕ್ರಾಂತಿ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ತತ್ತ್ವಗಳು ಮತ್ತು ಉದಾರಭಾವನೆಗಳಿಗೆ ಅವಕಾಶ ಮಾಡಿಕೊಟ್ಟು ಪ್ರಪಂಚದ ಜನರಲ್ಲಿ ಹೊಸ ಶಕ್ತಿ ಚೈತನ್ಯಗಳನ್ನು ಮೂಡಿಸಿತು.

ನೆಪೋಲಿಯನ್ ಕ್ರಾಂತಿಯ ಶಿಶು ಎನಿಸುಕೊಂಡ ನೆಪೋಲಿಯನ್ ಬೋನ ಪಾರ್ಟ್ ೧೭೯೦ ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ ಮುಂದೆ ಫ್ರಾನ್ಸಿನ ಸರ್ವಾಧಿಕಾರಿಯಾದ. ೧೭೯೯ ರಿಂದ ೧೮೧೮ ರ ವರೆಗಿನ ಕಾಲವನ್ನು ಫ್ರಾನ್ಸಿನ ಇತಿಹಾಸದಲ್ಲಿ ನೆಪೋಲಿಯನ್ನನ ಯುಗವೆಂದೇ ಪರಿಗಣಿಸಲಾಗಿದೆ. ೧೮೦೪ ರಲ್ಲಿ ಇವನು ಫ್ರಾನ್ಸಿನ ಚಕ್ರವರ್ತಿಯಾದ. ಇತಿಹಾಸದಲ್ಲಿ ಇವನು ೧ ನೆಯ ನೆಪೋಲಿಯನ್ ಎಂದು ಪ್ರಸಿದ್ಧನಾಗಿದ್ದಾನೆ. ಒಂದನೆಯ ನೆಪೋಲಿಯನ್ನನ ಆಳ್ವಿಕೆ ಫ್ರಾನ್ಸಿನ ಇತಿಹಾಸದಲ್ಲಿ ಮತ್ತು ಯುರೋಪಿನ ಇತಿಹಾಸದಲ್ಲಿ ಉಜ್ವಲ ಅಧ್ಯಾಯವೊಂದನ್ನು ಆರಂಭಿಸಿತು. ಇವನು ಪ್ರಚಂಡ ಸೈನಿಕ ಶಕ್ತಿಯ ಪ್ರತೀಕವಾಗಿದ್ದನಲ್ಲದೆ, ದಕ್ಷ ಆಡಳಿತಗಾರನೂ ಅಸಾಧಾರಣ ಪ್ರತಿಭಾಶಾಲಿಯೂ ಆಗಿದ್ದ. ಮಹಾಯೋಧನಾಗಿದ್ದ ಇವನು ತನ್ನ ಸೈನಿಕ ಶಕ್ತಿಯಿಂದ ಫ್ರಾನ್ಸಿನ ಅಂತರರಾಷ್ಟ್ರೀಯ ಘನತೆ ಗೌರವಗಳನ್ನು ಹೆಚ್ಚಿಸಿ ಅದನ್ನು ಯುರೋಪಿನ ಪ್ರಬಲ ರಾಜಕೀಯ ಮತ್ತು ಸೈನಿಕ ಶಕ್ತಿಯನ್ನಾಗಿ ಮಾಡುವ ಗುರಿ ಹೊಂದಿದ್ದ. ಇವನು ಯುರೋಪಿನ ಪ್ರಮುಖ ರಾಷ್ಟ್ರಗಳಾದ ಆಸ್ಟ್ರಿಯ, ಪ್ರಷ್ಯ, ರಷ್ಯಗಳನ್ನು ಸೋಲಿಸಿದ್ದ. ಇಂಗ್ಲೆಂಡನ್ನು ಉಳಿದ ಇಡೀ ಯುರೋಪು ನೆಪೋಲಿಯನ್ನನಿಗೆ ಮಣಿದಿತ್ತು. ಇವನು ಇಂಗ್ಲೆಂಡನ್ನು ಸೋಲಿಸಲು ಸರ್ವ ಪ್ರಯತ್ನ ನಡೆಸಿದಾಗ್ಯೂ ಸಫಲನಾಗಲಿಲ್ಲ. ಅಂತಿಮವಾಗಿ ೧೮೧೫ ರಲ್ಲಿ ವಾಟರ್‍ಲೂ ಕದನದಲ್ಲಿ ಗ್ರೇಟ್‍ಬ್ರಿಟನ್, ರಷ್ಯ, ಆಸ್ಟ್ರಿಯ ಮತ್ತು ಪ್ರಷ್ಯಗಳ ನೆಪೋಲಿಯನ್ನನನ್ನು ಪರಾಭವಗೊಳಿಸಿ, ಸೇಂಟ್ ಹೆಲೀನ ದ್ವೇಪಕ್ಕೆ ಗಡಿಪಾರು ಮಾಡಿದುವು.

ಒಂದನೆಯ ನೆಪೋಲಿಯನ್ ಬರೀ ಯೋಧನಾಗಿರದೆ ಪ್ರತಿಭಾವಂತ ಆಡಳಿತಗಾರನಾಗಿದ್ದ. ಹತ್ತು ವರ್ಷಗಳ ಕ್ರಾಂತಿಯ ಕ್ಷೋಭೆಯಿಂದ ಕಂಗೆಟ್ಟಿದ್ದ ಫ್ರಾನ್ಸಿಗೆ ಆಂತರಿಕ ಶಾಂತಿ ನೆಮ್ಮದಿಗಳನ್ನು ನೀಡಿದ. ಫ್ರಾನ್ಸಿನಲ್ಲಿ ಸದೃಡ ಸರ್ಕಾರ ರಚಿಸಿ, ಅನೇಕ ಸುಧಾರಣೆಗಳ ಮೂಲಕ ರಾಷ್ಟ್ರೀಯ ಜೀವನಕ್ಕೆ ಹೊಸ ರೂಪು ನೀಡಿದ. ರಾಷ್ಟ್ರದ ಆರ್ಥಿಕ ಸಮಸ್ಯೆಗಳನ್ನು ಸ್ಥಾಪಿಸಿ, ಶೈಕ್ಷಣಿಕ ಪ್ರಗತಿ ಸಾಧಿಸಿದ. ನೆಪೋಲಿಯನ್ನನ ಕೋಡ್ ನೆಪೋಲಿಯನ್ ಅವನ ಪ್ರತಿಭೆ ಮತ್ತು ರಚನಾತ್ಮಕ ಶಕ್ತಿಗೆ ಪ್ರಮುಖ ನಿದರ್ಶನವಾಗಿದೆ. ಇವನು ಅನೇಕ ಪ್ರಜೋಪಕಾರಿ ಕ್ರಮಗಳನ್ನು ಕೈಗೊಂಡ. ಇವನು ಪ್ಯಾರಿಸನ್ನು ಅತ್ಯಂತ ಸುಂದರ ನಗರವಾಗಿ ಪರಿವರ್ತಿಸಿದ. ಇವನ ಕಾಲದಲ್ಲಿ ಫ್ರಾನ್ಸ್ ಔನ್ನತ್ಯದ ತುದಿ ಮುಟ್ಟಿತು. ಇವನು ನಿರ್ಮಿಸಿದ ಫ್ರೆಂಚ್ ಸಾಮ್ರಾಜ್ಯ ಅತ್ಯಲ್ಪ ಕಾಲದಲ್ಲೇ ಅಂತ್ಯಗೊಂಡರೂ ಆಡಳಿತಗಾರನಾಗಿ ಇವನ ಸಾಧನೆಗಳೂ ಈತ ಸ್ಧಾಪಿಸಿದ ಆಡಳಿತ ಸಂಸ್ಧೆಗಳೂ ಆಧುನಿಕ ಫ್ರಾನ್ಸಿನ ಜನಜೀವನದ ಅವಿಭಾಜ್ಯ ಅಂಗಗಳಾಗಿವೆ.

ಒಂದನೆಯ ನೆಪೋಲಿಯನ್ನನ ಆಳ್ವಿಕೆಯ ಅನಂತರ ವಿಯೆನ್ನಾ ಸಮ್ಮೇಳನದ ತೀರ್ಮಾನದಂತೆ ಬೂರ್ಬನ್ ಮನೆತನದ ೧೮ ನೆಯ ಲೂಯಿಯನ್ನು ಫ್ರಾನ್ಸಿನ ರಾಜನೆಂದು ಘೋಷಿಸಲಾಯಿತು. ಹದಿನೆಂಟನೆಯ ಲೂಯಿ ಸಂವಿಧಾನ ಬದ್ಧವಾಗಿ ಆಳ್ವಿಕೆ ನಡೆಸಲು ಸಿದ್ಧನಿದ್ದರೂ ಇವನ ಕಾಲದಲ್ಲಿ ಪ್ರತಿಗಾಮಿಗಳಿಗೂ ಉದಾರ ವಾದಿಗಳಿಗೂ ಫ್ರಾನ್ಸಿನಲ್ಲಿ ಹೋರಾಟ ಆರಂಭವಾಯಿತು. ಪ್ರತಿಗಾಮಿಗಳು ವಿಶೇಷ ಸೌಲಭ್ಯಗಳನ್ನು ಪಡೆಯಲು ಮತ್ತು ಅಧಿಕಾರ ಕಸಿದುಕೊಳ್ಳಲು ಹವಣಿಸುತ್ತಿದ್ದರು. ರಾಷ್ಟ್ರದಲ್ಲಿ ಗೊಂದಲಕ್ಕೆ ಕಾರಣರಾದ ಪ್ರತಿಗಾಮಿಗಳನ್ನು ಹತ್ತಿಕ್ಕಲು ಅಸಮರ್ಥನಾಗಿದ್ದ ೧೮ ನೆಯ ಲೂಯಿ ೧೮೨೪ ರಲ್ಲಿ ಕಾಲವಾದ. ಅನಂತರ ಅವನ ಸೋದರ ೧೮ ನೆಯ ಚಾಲ್ರ್ಸ್ ಫ್ರಾನ್ಸಿನ ಸಿಂಹಾಸನವೇರಿದ. ಅವನ ಆಳ್ವಿಕೆ ಪ್ರತಿಗಾಮಿಗಳಿಗೆ ಅನುಕೂಲಕರವಾಗಿತ್ತು. ಅವನು ಪ್ರತಿಗಾಮಿ ಮತ್ತು ದಮನಕಾರಿ ನೀತಿಯನ್ನು ಅನುಸರಿಸಿ ನಿರಂಕುಶ ಪ್ರಭುವಿನಂತೆ ಆಳಲು ಯತ್ನಿಸಿದ. ಆದರೆ ಫ್ರಾನ್ಸಿನ ಜನರು ೧೮೩೦ ರ ಜುಲೈನಲ್ಲಿ ಅವನ ವಿರುದ್ಧ ದಂಗೆ ಎದ್ದರು. ಜುಲೈ ಕ್ರಾಂತಿ ಎಂದು ಹೆಸರು ಪಡೆದ ಇದರ ಉದ್ದೇಶ ಪ್ರಾನ್ಸಿನಲ್ಲಿ ಬೂರ್ಬನ್ ರಾಜವಂಶದ ಆಡಳಿತವನ್ನು ಕೊನೆಗೊಳಿಸಿ ಪ್ರಗತಿಪರ ಆಸಳಿತ ಸುಧಾರಣೆಗಳನ್ನು ಜಾರಿಗೆ ತರುವುದಾಗಿತ್ತು.

ಚಾರ್ಲ್ಸ್ ಸಿಂಹಾಸನ ತ್ಯಾಗ ಮಾಡಿದ ಅನಂತರ ಆರ್ಲಿಯನಿಸ್ಟ್ ಮನೆತನದ ಲೂಯಿ ಫಿಲಿಪ್ ಅಧಿಕಾರಕ್ಕೆ ಬಂದ (೧೮೩೦-೧೮೪೮). ಅವನೂ ದಮನಕಾರಿ ನೀತಿಯನ್ನೇ ಅನುಸರಿಸಿ ಪ್ರಜೆಗಳ ಹಿತಾಸಕ್ತಿಗಳನ್ನು ಗಾಳಿಗೆ ತೂರಿದ್ದ. ಫ್ರಾನ್ಸಿನ ಜನ ಮತ್ತೆ ೧೮೪೮ ರ ಫೆಬ್ರವರಿಯಲ್ಲಿ ಕ್ರಾಂತಿ ನಡೆಸಿದರು. ಈ ಕ್ರಾಂತಿಯಿಂದಾಗಿ ಲೂಯಿ ಫಿಲಿಪ್ ಸಿಂಹಾಸನ ಕಳೆದುಕೊಂಡು ಇಂಗ್ಲೆಂಡಿಗೆ ಓಡಿಹೋದ. ಈ ಕ್ರಾಂತಿಯ ಫಲವಾಗಿ ಫ್ರಾನ್ಸಿನಲ್ಲಿ ಎರಡನೆಯ ಗಣರಾಜ್ಯ ಅಸ್ತಿತ್ವಕ್ಕೆ ಬಂತು. ಫ್ರಾನ್ಸಿನ ೧೮೩೦ ರ ಜುಲೈ ಮತ್ತು ೧೮೪೮ ರ ಫೆಬ್ರವರಿ ಕ್ರಾಂತಿಗಳು ಮತ್ತೆ ಯುರೋಪಿನಲ್ಲಿ ಪ್ರತಿಗಾಮಿ ಶಕ್ತಿಗಳ ವಿರುದ್ಧ ರಾಷ್ಟ್ರೀಯ ಚಳವಳಿಗೆ ಅವಕಾಶ ಕಲ್ಪಿಸಿದವು.

ಎರಡನೆಯ ಫ್ರೆಂಚ್ ಸಾಮ್ರಾಜ್ಯ ಮತ್ತು ೩ ನೆಯ ನೆಪೋಲಿಯನ್

ಬದಲಾಯಿಸಿ

೧೮೪೮ ರ ಫೆಬ್ರವರಿ ಕ್ರಾಂತಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಎರಡನೆಯ ಗಣರಾಜ್ಯದ ಅಧ್ಯಕ್ಷನಾಗಿ ೧ ನೆಯ ನೆಪೋಲಿಯನ್ನನ ಸಂಬಂಧಿ ಲೂಯಿ ನೆಪೋಲಿಯನ್ ಬೋನಪಾರ್ಟನನ್ನು ಆರಿಸಲಾಯಿತು.[೩೧] ತನ್ನ ಚಿಕ್ಕಪ್ಪ ೧ ನೆಯ ನೆಪೋಲಿಯನ್ನನ ಹೆಸರು ಮತ್ತು ಸಾಧನೆಗಳ ಬಲದಿಂದ ಅಧಿಕಾರಕ್ಕೆ ಬಂದ ಲೂಯಿ ನೆಪೋಲಿಯನ್ ಬೋನಪಾರ್ಟ್ ಫ್ರೆಂಚ್ ಪ್ರಗತಿ ಮತ್ತು ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಹೋರಾಡುವುದಾಗಿ ಜನತೆಗೆ ಆಶ್ವಾಸನೆ ನೀಡಿದ. ಆದರೆ ಸರ್ವಾಧಿಕಾರಿಯಾಗಿ ಆಳುವ ಆಕಾಂಕ್ಷೆ ಹೊಂದಿದ್ದ ಅವನು ೧೮೫೧ ರ ಡಿಸೆಂಬರ್ ೨ ರಂದು ಕ್ಷಿಪ್ರ ಕ್ರಾಂತಿ ನಡೆಸಿ ನಿರಂಕುಶ ಪ್ರಭುವಾದ. ೧೮೫೨ ರಲ್ಲಿ ಗಣರಾಜ್ಯ ವ್ಯವಸ್ಥೆಯನ್ನು ರದ್ದುಗೊಳಿಸಿ, ಎರಡನೆಯ ಚಕ್ರಾಧಿಪತ್ಯವನ್ನು ಘೋಷಿಸಿ, ೩ ನೆಯ ನೆಪೋಲಿಯನ್ ಎಂಬ ಹೆಸರಿನಿಂದ ಫ್ರಾನ್ಸಿನ ಚಕ್ರವರ್ತಿಯಾದ.

ಅವನು ಅನೇಕ ಪ್ರಗತಿಪರ ಸುಧಾರಣೆಗಳನ್ನು ಜಾರಿಗೆ ತಂದದ್ದರಿಂದ ಫ್ರಾನ್ಸ್ ಮತ್ತೊಮ್ಮೆ ಪ್ರಗತಿಯ ಹಾದಿ ಹಿಡಿಯಿತು. ಆದರೂ ೩ ನೆಯ ನೆಪೋಲಿಯನ್ನನ ಆಂತರಿಕ ನೀತಿ ಜನಾನುರಾಗಿಯಾಗಿರಲಿಲ್ಲ. ಗಣರಾಜ್ಯವಾದಿಗಳೂ ಸಮಾಜವಾದಿಗಳೂ ೩ ನೆಯ ನೆಪೋಲಿಯನ್ನನ ನಿರಂಕುಶ ಪ್ರಭುತ್ವವನ್ನು ನಾಶಗೊಳಿಸಲು ಸಮಯ ಕಾಯುತ್ತಿದ್ದರು. ಅವನ ಆಳ್ವಿಕೆಯ ದುರ್ಬಲ ಅಂಶವೆಂದರೆ ಅವನ ಅಸಮರ್ಥ ವಿದೇಶಾಂಗ ನೀತಿ. ಮಹತ್ವಾಕಾಂಕ್ಷಿಯಾಗಿದ್ದ ೩ ನೆಯ ನೆಪೋಲಿಯನ್ ಫ್ರಾನ್ಸಿನ ಹಾಗೂ ತನ್ನ ವೈಯಕ್ತಿಕ ಪ್ರತಿಷ್ಠೆ ಗೌರವಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅನೇಕ ರಾಜ್ಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿ ವಿಫಲನಾದ. ಇಂಗ್ಲೆಂಡ್ ತುರ್ಕಿಗಳೊಡನೆ ಸೇರಿಕೊಂಡು ರಷ್ಯದ ವಿರುದ್ಧ ನಡೆದ ಕ್ರಿಮಿಯ ಯುದ್ಧದಲ್ಲಿ (೧೮೫೪-೧೮೫೬) ಪಾಲ್ಗೊಂಡ. ಯುದ್ಧದಲ್ಲಿ ಮಿತ್ರ ರಾಷ್ಟ್ರಗಳಿಗೆ ಜಯ ದೊರಕಿ ಪ್ಯಾರಿಸ್ ನಗರದಲ್ಲಿ ಶಾಂತಿ ಸಮ್ಮೇಳನ ಸಮಾವೇಶಗೊಂಡಿದ್ದರಿಂದ ಫ್ರಾನ್ಸಿನ ಗೌರವ ಸ್ವಲ್ಪ ಮಟ್ಟಗೆ ಹೆಚ್ಚಿತು. ಅವನು ಇಟಲಿಯ ಏಕೀಕರಣ ಚಳವಳಿಗೆ ಪ್ರೋತ್ಸಾಹ ನೀಡಿ ಸೈನಿಕ ನೆರವನ್ನು ಸಹ ನೀಡಿದ. ಆದರೆ ಇಟಾಲಿಯನ್ನರು ಆಸ್ಟ್ರಿಯದ ವಿರುದ್ಧ ಸಂಪೂರ್ಣ ಜಯ ಗಳಿಸುವ ಸ್ಥಿತಿಯಲ್ಲಿದ್ದಾಗ ಹಠಾತ್ತನೆ ಅವರಿಗೆ ಸೈನಿಕ ನೆರವು ನಿಲ್ಲಿಸಿ ಅವರ ದ್ವೇಷ ಕಟ್ಟಿಕೊಂಡ. ಅನಂತರ ಮೆಕ್ಸಿಕೋದಲ್ಲಿ ಫ್ರೆಂಚ್ ಕ್ಯಾತೊಲಿಕ್ ಸಾಮ್ರಾಜ್ಯವೊಂದನ್ನು ನಿರ್ಮಿಸಲು ಪ್ರಯತ್ನಿಸಿ ವಿಫಲಗೊಂಡ. ೧೮೭೦-೭೧ ರ ಫ್ರಾಂಕೋ-ಪ್ರಷ್ಯನ್ ಯುದ್ಧ ೩ ನೆಯ ನೆಪೋಲಿಯನ್ನನಿಗೆ ಮತ್ತೊಂದು ದುರಂತದ ಸಂಗತಿಯಾಗಿ ಪರಿಣಮಿಸಿತು. ಪ್ರಷ್ಯದ ಪ್ರಧಾನಿ ಬಿಸ್ಮಾರ್ಕನ ರಾಜತಾಂತ್ರಿಕ ಯುಕ್ತಿ ಮತ್ತು ಸೈನಿಕ ಶಕ್ತಿಯ ಮುಂದೆ 3ನೆಯ ನೆಪೋಲಿಯನ್ನನ ಆಟ ಸಾಗದಾಯಿತು. ಫ್ರಾಂಕೊ-ಪ್ರಷ್ಯನ್ ಯುದ್ಧದ ಪ್ರಮುಖ ಕದನದಲ್ಲಿ ೩ ನೆಯ ನೆಪೋಲಿಯನ್ ಅತ್ಯಂತ ಅವಮಾನಕರ ರೀತಿಯಲ್ಲಿ ಸೋತು ಶತ್ರುವಿಗೆ ಶರಣಾದ. ಅವನು ಸಿಂಹಾಸನ ಕಳೆದುಕೊಂಡ. ಎರಡನೆಯ ಫ್ರೆಂಚ್ ಸಾಮ್ರಾಜ್ಯ ಕೊನೆಗೊಂಡಿತು.[೩೨]

ಮೂರನೆಯ ಗಣರಾಜ್ಯ

ಬದಲಾಯಿಸಿ

ಫ್ರಾಂಕೊ-ಪ್ರಷ್ಯನ್ ಯುದ್ಧದ ಅನಂತರ ಫ್ರಾನ್ಸಿನಲ್ಲಿ ತಾತ್ಕಾಲಿಕ ಗಣರಾಜ್ಯ ವ್ಯವಸ್ಥೆ ಜಾರಿಗೆ ಬಂತು. ೧೮೭೧ ರಲ್ಲಿ ಜಾರಿಗೆ ಬಂದ ಮೂರನೆಯ ಗಣರಾಜ್ಯ ೧೯೪೦ ರವರೆಗೂ ಮುಂದುವರಿಯಿತು. ಆಡಾಲ್ಫ್ ಟ್ಯೇರ್ ಫ್ರಾನ್ಸಿನ ಮೂರನೆಯ ಗಣರಾಜ್ಯದ ಅಧ್ಯಕ್ಷನಾದ. ೧೮೭೧ ರ ಮೇ ೧೦ ರಂದು ಜರ್ಮನಿಯೊಡನೆ ಫ್ರಾಂಕ್‍ಫರ್ರ್ಟ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಪ್ರಕಾರ ಆಲ್ಸೇಸ್-ಲೊರೇನಿನ ಒಂದು ಭಾಗವನ್ನು ಫ್ರಾನ್ಸ್ ಜರ್ಮನಿಗೆ ಬಿಟ್ಟು ಕೊಡಬೇಕಾಯಿತಲ್ಲದೆ, ೫೦೦ ಕೋಟಿ ಫ್ರಾಂಕ್‍ಗಳನ್ನು ಯುದ್ಧ ಪರಿಹಾರ ಹಣವಾಗಿ ಜರ್ಮನಿಗೆ ಕೊಡಬೇಕಾಯಿತು.

ಈ ಅವಮಾನಕರ ಒಪ್ಪಂದದ ವಿರುದ್ಧ ಪ್ಯಾರಿಸ್ ನಗರದಲ್ಲಿ ಉಗ್ರ ಪ್ರತಿಭಟನೆಗಳು ನಡೆದುವು. ಫ್ರಾನ್ಸಿನಾದ್ಯಂತ ಅಲ್ಲಲ್ಲಿ ದಂಗೆಗಳಾದವು. ಆದರೆ ಟ್ಯೇರ್ ಪರಿಸ್ಥಿತಿಯನ್ನು ಹತೋಟಿಗೆ ತಂದ. ಅನೇಕ ಪ್ರಗತಿಪರ ಸುಧಾರಣೆಗಳನ್ನು ಜಾರಿಗೆ ತಂದು ಫ್ರಾನ್ಸನ್ನು ಶತ್ರುಸೇನೆಯಿಂದ ವಿಮೋಚನೆಗೊಳಿಸಿದ. ರಾಷ್ಟ್ರದ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ರಕ್ಷಿಸುವುದಕ್ಕಾಗಿ ಟ್ಯೇರ್ ಸಲ್ಲಿಸಿದ ಸೇವೆಯಿಂದಾಗಿ ಅವನನ್ನು ಫ್ರಾನ್ಸಿನ ವಿಮೋಚಕನೆಂದು ಕರೆಯಲಾಗಿದೆ. ೧೮೭೩ ರಲ್ಲಿ ಟ್ಯೇರ್ ಅಧ್ಯಕ್ಷ ಪದವಿಯನ್ನು ತ್ಯಜಿಸಿದ. ಮಾರ್ಷಲ್ ಮ್ಯಾಕ್‍ಮಾವಾನ್ ಮೂರನೆಯ ಗಣರಾಜ್ಯದ ಅಧ್ಯಕ್ಷನಾಗಿ ಏಳು ವರ್ಷಗಳ ಅವಧಿಗೆ ಚುನಾಯಿತನಾದ. ೧೮೭೫ ರಲ್ಲಿ ಫ್ರಾನ್ಸ್ ಹೊಸ ಸಂವಿಧಾನವೊಂದನ್ನು ಪಡೆಯಿತು.

ಫ್ರಾನ್ಸಿನ ಮೂರನೆಯ ಗಣರಾಜ್ಯ ಅನೇಕ ಗಂಡಾಂತರಗಳನ್ನು ಮೆಟ್ಟಿ ನಿಲ್ಲ ಬೇಕಾಯಿತು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅನೇಕ ಚಳವಳಿಗಳು ನಡೆದುವು. ಘಟನೆಗಳು ಸಂಭವಿಸಿದುವು. ಆದರೆ ಇವುಗಳಿಂದ ಫ್ರಾನ್ಸಿನ ಗಣರಾಜ್ಯ ವ್ಯವಸ್ಧೆ ಮತ್ತಷ್ಟು ಭದ್ರವಾಯಿತು. ಸಂದಿಗ್ಧ ಪರಿಸ್ಥಿತಿಯಿಂದ ಪಾರಾದ ಮೂರನೆಯ ಗಣರಾಜ್ಯ ಅಡ್ಡಿ ಆತಂಕಗಳಿಲ್ಲದೆ ಪ್ರಗತಿಪರ ನೀತಿಯನ್ನು ಮುಂದುವರಿಸಿಕೊಂಡು ಬರಲು ಸಾಧ್ಯವಾಯಿತು.

ಜರ್ಮನಿಯ ಚಾನ್ಸಲರ್ ಬಿಸ್ಮಾರ್ಕ್ ಅನುಸರಿಸಿದ ರಾಜತಾಂತ್ರಿಕ ನೀತಿ ಮತ್ತು ಅವನು ಫ್ರಾನ್ಸಿನ ವಿರುದ್ಧ ರಚಿಸಿದ ತ್ರಿರಾಷ್ಟ್ರ ಕೂಟದಿಂದ ಫ್ರಾನ್ಸ್ ಯೂರೋಪಿನಲ್ಲಿ ಒಂಟಿಯಾಗಿ ಉಳಿಯಬೇಕಾಯಿತು. ಆದ್ದರಿಂದ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಮೂರನೆಯ ಗಣರಾಜ್ಯ ಸರ್ಕಾರಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ಮತ್ತು ಮಿತ್ರರಾಷ್ಟ್ರಗಳನ್ನು ಪಡೆದುಕೊಳ್ಳಲು, ಫ್ರಾನ್ಸಿನ ಗಣರಾಜ್ಯ ಸರ್ಕಾರ ಹೆಚ್ಚು ಶ್ರಮಿಸಬೇಕಾಯಿತು. ಗ್ರೇಟ್ ಬ್ರಿಟನ್, ಇಟಲಿ, ರಷ್ಯಗಳೊಡನೆ ಇದ್ದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅವುಗಳೊಡನೆ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಲು ಅದು ಸರ್ವಪ್ರಯತ್ನ ನಡೆಸಿತು. ೧೮೯೪ ರಲ್ಲಿ ರಷ್ಯದೊಡನೆ ಸೈನಿಕ ಹಾಗೂ ರಾಜಕೀಯ ಒಪ್ಪಂದವೊಂದನ್ನು ಮಾಡಿಕೊಂಡು ತನ್ನ ಭದ್ರತೆಯನ್ನು ಹೆಚ್ಚಿಸಿಕೊಂಡಿತು. ಬ್ರಿಟನ್ನಿನೊಡನಿದ್ದ ವಸಾಹತು ಮತ್ತು ವಾಣಿಜ್ಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ೧೯೦೪ ರಲ್ಲಿ ಆ ರಾಷ್ಟ್ರದೊಡನೆ ಐತಿಹಾಸಿಕ ಒಪ್ಪಂದವೊಂದನ್ನು ಮಾಡಿಕೊಂಡಿತು. ಹೀಗೆ ರಾಜಕೀಯ ಒಂಟಿತನದಿಂದ ಪಾರಾಗಿ, ಮಿತ್ರರಾಷ್ಟ್ರಗಳ ಸ್ನೇಹ ಸಂಪಾದಿಸಿ, ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಫ್ರಾನ್ಸ್ ತನ್ನ ಸ್ಥಾನಮಾನಗಳನ್ನು ಹೆಚ್ಚಿಸಿಕೊಂಡಿತು.

ಇಷ್ಟೆಲ್ಲ ಪ್ರಗತಿ ಸಾಧಿಸಿದರೂ ಒಂದನೆಯ ಮಹಾಯುದ್ಧಕ್ಕೆ ಮುಂಚೆ ಫ್ರಾನ್ಸ್ ರಾಜಕೀಯ ಅಸ್ಥಿರತೆಯ ಸುಳಿಗೆ ಸಿಕ್ಕಿತ್ತು. ಮಂತ್ರಿ ಮಂಡಲಗಳ ಅಸ್ಥಿರತೆಯಿಂದಾಗಿ ಫ್ರಾನ್ಸಿನ ಆಂತರಿಕ ಪರಿಸ್ಥಿತಿ ಹದಗೆಟ್ಟಿತು. ೧೯೦೯ ರಿಂದ ೧೯೧೪ ರ ವರೆಗೆ ಸುಮಾರು ಹತ್ತು ಮಂತ್ರಿಮಂಡಲಗಳು ಅಸ್ತಿತ್ವಕ್ಕೆ ಬಂದಿದ್ದುವು. ಆದರೂ ಒಂದನೆಯ ಮಹಾಯುದ್ಧ ೧೯೧೪ ರಲ್ಲಿ ಆರಂಭವಾದಾಗ ಪ್ರತಿಯೊಬ್ಬ ಫ್ರೆಂಚ್ ಪ್ರಜೆಯು ಉತ್ಕಟ ರಾಷ್ಟ್ರಾಭಿಮಾನದಿಂದ ಪ್ರಭಾವಿತನಾಗಿ ಜರ್ಮನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಯುದ್ಧವನ್ನು ಸ್ವಾಗತಿಸಿದ. ೧೯೧೩ ರಲ್ಲಿ ರೇಮಾನ್‍ಪ್ವಾನ್‍ಕ್ಯಾರೇ ಫ್ರಾನ್ಸಿನ ಅಧ್ಯಕ್ಷನಾಗಿ ಚುನಾಯಿತನಾಗಿದ್ದ. ಯುದ್ಧದ ಆರಂಭದಲ್ಲಿ ಜರ್ಮನಿಯ ಸೇನೆಗಳನ್ನು ಹಿಮ್ಮೆಟ್ಟಿಸಲಾಯಿತಾದರೂ ಯುದ್ಧದಿಂದಾಗಿ ಫ್ರಾನ್ಸ್ ಅಪಾರ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ೧೯೧೭ ರ ನವೆಂಬರ್‍ನಲ್ಲಿ ಜಾರ್ ಕ್ಲೇಮಾನ್ಸೋ ಫ್ರಾನ್ಸಿನ ಪ್ರಧಾನಿ ಆದ. ೧೯೧೮ ರಲ್ಲಿ ಜರ್ಮನಿ ಸೋತು ಮಿತ್ರರಾಷ್ಟ್ರಗಳಿಗೆ ಶರಣಾಗತವಾಯಿತು.

ಯುದ್ಧಗಳನ್ನು ತಡೆಗಟ್ಟಿ ವಿಶ್ವಶಾಂತಿಯನ್ನು ಸ್ಥಾಪಿಸುವ ಮಾರ್ಗವನ್ನು ಕಂಡುಹಿಡಿಯಲು ಮತ್ತು ಸೋತ ರಾಷ್ಟ್ರಗಳೊಡನೆ ಕೌಲುಗಳನ್ನು ಮಾಡಿಕೊಳ್ಳಲು ೧೯೧೯ ರಲ್ಲಿ ಪ್ಯಾರಿಸ್ ನಗರದಲ್ಲಿ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನವೊಂದು ಸಮಾವೇಶಗೊಂಡಿತು. ಫ್ರಾನ್ಸಿನ ಪ್ರಧಾನಿ ಕ್ಲೇಮಾನ್ಸೋ ಇದರ ಅಧ್ಯಕ್ಷನಾಗಿದ್ದ. ಜರ್ಮನಿಯ ವಿರುದ್ಧ ಸೇಡಿನ ಮನೋಭಾವ ಹೊಂದಿದ್ದ ಕ್ಲೇಮಾನ್ಸೋ ಆ ರಾಷ್ಟ್ರಕ್ಕೆ ತಕ್ಕ ಶಿಕ್ಷೆಯಾಗಬೇಕೆಂದು ಶಾಂತಿ ಸಮ್ಮೇಳನದಲ್ಲಿ ವಾದಿಸಿದ. ಜರ್ಮನಿಯನ್ನು ಸಂಪೂರ್ಣವಾಗಿ ನಿತ್ರಾಣಗೊಳಿಸುವುದು ಅವನ ಗುರಿಯಾಗಿತ್ತು. ಜರ್ಮನಿಯೊಡನೆ ಮಿತ್ರರಾಷ್ಟ್ರಗಳು ಮಾಡಿಕೊಂಡ ವರ್ಸೇಲ್ಸ್ ಒಪ್ಪಂದದ ಪ್ರಕಾರ ಫ್ರಾನ್ಸ್ ತಾನು ಕಳೆದುಕೊಂಡಿದ್ದ ಅಲ್ಸೇಲ್ಸ್-ಲೊರೇನ್ ಪ್ರಾಂತ್ಯ ಪ್ರದೇಶವನ್ನು ಮರಳಿ ಪಡೆಯಿತು. ಜರ್ಮನಿಯ ಸಂಪನ್ಮೂಲಗಳನ್ನು ನಾಶಗೊಳಿಸಿ ಅದು ಘನತೆ ಗೌರವಗಳನ್ನು ಕಳೆದುಕೊಳ್ಳುವಂತೆ ಮಾಡುವ ಕಾರ್ಯದಲ್ಲಿ ಫ್ರಾನ್ಸ್ ಪ್ರಮುಖ ಪಾತ್ರ ವಹಿಸಿತ್ತು. ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಸ್ಥಾಪನೆಯಾದ ಅನಂತರ ಫ್ರಾನ್ಸ್ ಅದರ ಸದಸ್ಯ ರಾಷ್ಟ್ರವಾಯಿತಲ್ಲದೆ, ಅದರ ಸಮಿತಿಯ ಖಾಯಮ್ ಸದಸ್ಯತ್ವವನ್ನೂ ಪಡೆಯಿತು.

ಒಂದನೆಯ ಮಹಾಯುದ್ಧದಲ್ಲಿ ಜಯ ಪಡೆದಿದ್ದರೂ ಫ್ರಾನ್ಸ್ ಅನುಭವಿಸಿದ್ದ ಕಷ್ಟನಷ್ಟಗಳಿಂದಾಗಿ ನಿತ್ರಾಣಗೊಂಡಿತ್ತು. ಯುದ್ಧದ ಅನಂತರದ ಸಮಸ್ಯೆಗಳನ್ನು ಬಗೆಹರಿಸಿ, ರಾಷ್ಟ್ರದ ಪ್ರಗತಿ ಸಾಧಿಸಲು ಫ್ರೆಂಚ್ ಜನತೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿತ್ತು. ದುರದೃಷ್ಟವಶಾತ್ ರಾಷ್ಟ್ರದ ರಾಜಕೀಯ ವಲಯಗಳಲ್ಲಿಯ ದೋಷಗಳಿಂದಾಗಿ ಫ್ರೆಂಚ್ ಜನತೆ ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಯಿತು. ಅನೇಕ ರಾಜಕೀಯ ಪಕ್ಷಗಳು, ಪಂಗಡಗಳು ಇದ್ದುದರಿಂದ ಯಾವ ಮಂತ್ರಿಮಂಡಲವೂ ಹೆಚ್ಚು ಕಾಲ ಉಳಿಯುವಂತಿರಲಿಲ್ಲ. ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕಚ್ಚಾಡುತ್ತಿದ್ದು ಫ್ರಾನ್ಸಿನ ಪರಿಸ್ಥಿತಿ ಹದಗೆಡಲು ಕಾರಣರಾಗಿದ್ದರು. ೧೯೨೦ ರಲ್ಲಿ ಕ್ಲೇಮಾನ್ಸೋ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. ಮುಂದಿನ ಹತ್ತುವರ್ಷಗಳಲ್ಲಿ ಅನೇಕ ಮಂತ್ರಿ ಮಂಡಲಗಳು ಅಧಿಕಾರಕ್ಕೆ ಬಂದುವು. ಈ ಹಿಂದೆ ಫ್ರಾನ್ಸಿನ ಅಧ್ಯಕ್ಷನಾಗಿದ್ದ ಪ್ವಾನ್‍ಕ್ಯಾರೇ ೧೯೨೨ ರಲ್ಲಿ ಪ್ರಧಾನಿಯಾದ. ಜರ್ಮನಿಯ ವಿರುದ್ಧ ಗಡಸು ನೀತಿಯನ್ನು ಅನುಸರಿಸುವುದು ಇವನ ಗುರಿಯಾಗಿತ್ತು. ಇವನ ಕಾಲದಲ್ಲಿ ಫ್ರಾನ್ಸ್‍ರಹಿೂರ್ ಕಣಿವೆ ಪ್ರದೇಶವನ್ನು ಆಕ್ರಮೆಸಿಕೊಂಡದ್ದರಿಂದ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಕೆಟ್ಟಿತು. ೧೯೨೬ ರಿಂದ ೧೯೨೯ ರವರೆಗೆ ಮತ್ತೆ ಪ್ವಾನ್‍ಕ್ಯಾರೇ ಫ್ರಾನ್ಸಿನ ಪ್ರಧಾನಿಯಾಗಿದ್ದ.

೧೯೨೫ ರ ಏಪ್ರಿಲ್ ನಿಂದ ೧೯೩೨ ರ ಜನವರಿ ವರೆಗೆ ಫ್ರಾನ್ಸಿಗೆ ವಿದೇಶಾಂಗ ಮಂತ್ರಿಯಾಗಿದ್ದ ಆರಿಸ್ಟೀಡ್ ಬ್ರೀಯಾನ್ ಅನುಸರಿಸಿದ ಎಚ್ಚರಿಕೆಯ ನೀತಿಯಿಂದ ಫ್ರಾನ್ಸಿಗೆ ಹೆಚ್ಚು ಲಾಭವಾಯಿತು. ಅವನ ಸೇಡಿನ ಮನೋಭಾವವನ್ನು ಬಿಟ್ಟು ಜರ್ಮನಿಯೊಡನೆ ಸ್ನೇಹಭಾವದಿಂದಿರಲು ನಿರ್ಧರಿಸಿದ. ಬ್ರೀಯಾನ್ ವಿದೇಶಾಂಗ ಮಂತ್ರಿಯಾಗಿದ್ದ ಕಾಲದಲ್ಲಿ ಅನೇಕ ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಂಡು ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಫ್ರಾನ್ಸ್ ಸ್ಥಾನಮಾನಗಳನ್ನು ಉತ್ತಮಪಡಿಸಿಕೊಂಡಿತು. ೧೯೨೦ ರಲ್ಲಿ ಬೆಲ್ಜಿಯಂನೊಡನೆ, ೧೯೨೧ ರಲ್ಲಿ ಪೋಲೆಂಡಿನೊಡನೆ, ೧೯೨೬ರಲ್ಲಿ ಜೆಕೊಸ್ಲವಾಕಿಯ, ಮತ್ತು ರುಮೇನಿಯಗಳೊಡನೆ, ೧೯೨೭ ರಲ್ಲಿ ಯೂಗೊಸ್ಲಾವಿಯದೊಂದಿಗೆ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿತು. ಆದರೆ ೧೯೨೫ ರಲ್ಲಿ ಫ್ರಾನ್ಸ್, ಬ್ರಿಟನ್, ಬೆಲ್ಜಿಯಮ್, ಇಟಲಿ ಮತ್ತು ಜರ್ಮನಿಗಳಿಗೆ ಆದ ಲೊಕಾರ್ನೋ ಒಪ್ಪಂದ ಅತ್ಯಂತ ಮುಖ್ಯವಾದ್ದು. ಅನಾರೋಗ್ಯದ ನಿಮಿತ್ತ ೧೯೨೯ ರಲ್ಲಿ ಪ್ರಧಾನಿ ಪ್ವಾನ್ ಕ್ಯಾರೇ ಪ್ರಧಾನಿ ಪದವಿಯನ್ನು ಬಿಡಬೇಕಾಯಿತು. ಅವನ ಅಂತರ ಬಂದ ಪ್ರಧಾನಿಗಳಲ್ಲಿ ಪ್ಯೇರ್‍ಲ್ಯಾವ್ಯಾಲ್ ಪ್ರಮುಖ. ೧೯೨೯ ರಿಂದ ೧೯೩೨ ರವರೆಗೆ ಪ್ರಪಂಚಾದ್ಯಂತ ಸಂಭವಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಫ್ರಾನ್ಸಿನಲ್ಲೂ ಕೆಟ್ಟಪರಿಣಾಮಗಳಾದುವು.[೩೩] ನಿರುದ್ಯೋಗ ಸಮಸ್ಯೆ, ಏರುತ್ತಿದ್ದ ಬೆಲೆಗಳು, ಭ್ರಷ್ಟಾಚಾರ, ಲಂಚಗುಳಿತನ, ಫ್ರಾಂಕ್ ನಾಣ್ಯದ ಮೌಲ್ಯದ ಕುಸಿತ ಇವುಗಳಿಂದಾಗಿ ರಾಷ್ಟ್ರದಲ್ಲಿ ನಿರಾಶಾದಾಯಕ ಪರಿಸ್ಥಿತಿ ತಲೆದೋರಿತು. ಪ್ರಧಾನಿ ಲ್ಯಾವ್ಯಾಲ್ ಫ್ರಾನ್ಸಿನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದ. ಆದರೆ ಮಂತ್ರಿಮಂಡಲಗಳ ಅಸ್ಥಿರತೆಯಿಂದಾಗಿ ಫ್ರಾನ್ಸ್ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು. ಈ ಮಧ್ಯೆ ೧೯೩೩ ರಲ್ಲಿ ಜರ್ಮನಿಯ ಸರ್ವಧಿಕಾರಿಯಾದ ಆಡಾಲ್ಛ್ ಹಿಟ್ಲರನ ಅಕ್ರಮಣಕಾರಿ ಮತ್ತು ವಿಸ್ತರಣ ನೀತಿಯಿಂದ ಯುರೋಪಿನ ಸಮಸ್ಯೆಗಳು ತೀವ್ರವಾದುವು. ಅವನು ವರ್ಸೇಲ್ಸ್ ಲೊಕಾರ್ನೋ ಒಪ್ಪಂದಗಳನ್ನು ಕಡೆಗಣಿಸಿ, ೧೯೩೬ರಲ್ಲಿ ನಿಸ್ಸೇನಿಕೃತ ವಲಯವಾಗಿದ್ದ, ರೈನ್ ಪ್ರದೇಶಗಳತ್ತ ಸೇನೆಗಳನ್ನು ಕಳುಹಿಸಿದ್ದರಿಂದ ಫ್ರಾನ್ಸಿಗೆ ಹೆಚ್ಚು ಕಳವಳ ಉಂಟಾಯಿತು.

ಫ್ರಾನ್ಸ್ ಇಂಥ ವಿಷಮ ಸ್ಥಿತಿಯಲ್ಲಿದ್ದಾಗ, ಸಮಾಜವಾದ ನಾಯಕ ಲೇಯಾನ್ ಬ್ಲೂಮ್ ೧೯೩೬ ರಲ್ಲಿ ಸಂಮ್ಮಿಶ್ರ ಸರ್ಕಾರ ರಚಿಸಿದ. ಆದರೆ ಇವನ ಸರ್ಕಾರ ೧೯೩೭ ರಲ್ಲಿ ಪತನಹೊಂದಿತು. ೧೯೩೮ ರ ಏಪ್ರಿಲ್‍ನಲ್ಲಿ ಡ್ಯಾಲ್ಯಾಡ್ಯೇ ತೀವ್ರಗಾಮಿ ಮಂತ್ರಿಮಂಡಲ ರಚಿಸಿ ೧೯೪೦ ರ ಮಾರ್ಚ್‌ವರೆಗೂ ಪ್ರಧಾನಿಯಾಗಿದ್ದ. ಇವನು ದೇಶದಲ್ಲಿ ನಡೆಯುತ್ತಿದ್ದ ಚಳುವಳಿಗಳನ್ನು ನಿಲ್ಲಿಸಿ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ, ಆಯವ್ಯಯವನ್ನು ಸರಿದೂಗಿಸಿ, ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಿಸಿದ. ಬ್ರಿಟನ್ನಿನ ಪ್ರಧಾನಿ ನೆವಿಲ್ ಚೇಂಬರ್ಲಿನ್ನ ನೊಡನೆ ಸಹಕರಿಸಿ ಪ್ರಸಿದ್ಧ ಮ್ಯೂನಿಕ್ ಸಮ್ಮೇಳನದಲ್ಲಿ ಭಾಗವಹಿಸಿದ. ಫ್ರಾನ್ಸ್ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿತು.

ಎರಡನೆಯ ಮಹಾಯುದ್ಧ

ಬದಲಾಯಿಸಿ

೧೯೩೯ ರ ಸೆಪ್ಟೆಂಬರ್ ೩ ರಂದು ಬ್ರಿಟನ್ ಮತ್ತು ಫ್ರಾನ್ಸ್‌ಗಳು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದ ಅನಂತರ ಡ್ಯಾಲ್ಯಾಡ್ಯೇ ಫ್ರೆಂಚ್ ಜನತೆಯಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸಿ ವಿಫಲನಾದ. ೧೯೪೦ ರಲ್ಲಿ ಅವನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. ಪಾಲ್ ರೇನೋ ಪ್ರಧಾನಿಯಾದ, ಜರ್ಮನ್ ಪಡೆಗಳು ೧೯೪೦ ರ ಜೂನ್‍ನಲ್ಲಿ ಪ್ಯಾರಿಸ್ ನಗರವನ್ನು ವಶಪಡಿಸಿಕೊಂಡವು. ರೇನೋ ಸರ್ಕಾರ ಉರುಳಿತು. ಫ್ರಾನ್ಸಿನ ಬಹುಭಾಗ ಜರ್ಮನಿಯ ನಾಟ್ಸಿಗಳ ವಶದಲ್ಲಿತ್ತು. ರೇನೋನ ಅನಂತರ ಪ್ರಧಾನಿಯಾದ ಮಾರ್ಷಲ್ ಪೇಟ್ಯಾನ್ ೧೯೪೦ ರ ಜೂನ್ ೨೨ ರಂದು ನಾಟ್ಸಿ ಜರ್ಮನಿಯೊಂದಿಗೆ ಯುದ್ಧವಿರಾಮ ಒಪ್ಪಂದ ಮಾಡಿಕೊಂಡು, ವಿಷಯಲ್ಲಿ ಸರಕಾರ ಸ್ಥಾಪಿಸಿ ಫ್ರಾನ್ಸಿನ ಸ್ವಲ್ಪ ಭಾಗಕ್ಕೆ ಪ್ರಧಾನಿಯಾಗಿ ಮುಂದುವರಿದ. ಇದಕ್ಕೆ ಮುಂಚೆಯೇ ಜನರಲ್ ಡಿ ಗಾಲ್ ಇಂಗ್ಲೆಂಡಿನಲ್ಲಿ ಫ್ರೆಂಚ್ ವಿಮೋಚನಾ ಚಳುವಳಿಯನ್ನು ಆರಂಭಿಸಿದ. ೧೯೪೪ ರ ಆಗಸ್ಟ್‌ನಲ್ಲಿ ಮಿತ್ರ ರಾಷ್ಟ್ರಗಳು ಪ್ಯಾರಿಸ್ ನಗರವನ್ನು ಶತ್ರುಸೇನೆಗಳಿಂದ ವಿಮೋಚನೆಗೊಳಿಸಿದುವು. ಫ್ರಾನ್ಸಿನಲ್ಲಿ ಜನರಲ್ ಡಿ ಗಾಲನ ನಾಯಕತ್ವದಲ್ಲಿ ತಾತ್ಕಾಲಿಕ ಸರ್ಕಾರದ (೧೯೪೪-೧೯೪೬) ರಚನೆಯಾಯಿತು.

ಅಧ್ಯಕ್ಷ ಡಿ ಗಾಲ್ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ರಾಷ್ಟ್ರದ ಪ್ರಗತಿ ಮತ್ತು ರಾಜಕೀಯ ಏಕತೆಯನ್ನು ಸಾಧಿಸಲು ಪ್ರಯತ್ನಿಸಿದನಾದರೂ, ವಿವಿಧ ರಾಜಕೀಯ ಪಕ್ಷಗಳ ಅಸಹಾಯಕ ನೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ೧೯೪೬ ಜನವರಿಯಲ್ಲಿ ಡಿ ಗಲ್ ರಾಜೀನಾಮೆ ನೀಡಬೇಕಾಯಿತು. ೧೯೪೬ ರ ಅಕ್ಟೋಬರ್‌ನಲ್ಲಿ ನಾಲ್ಕನೆಯ ಗಣರಾಜ್ಯ ಅಸ್ತಿತ್ವಕ್ಕೆ ಬಂತು. ೧೯೪೬ ರಿಂದ ೧೯೫೧ ರ ವರೆಗೆ ಇದು ಅನೇಕ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಸಂಮಿಶ್ರ ಸರ್ಕಾರಗಳು ಅಸಮರ್ಥವೆನಿಸಿಕೊಂಡುವು. ಅಸ್ತವ್ಯಸ್ತಗೊಂಡಿದ್ದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಕಾರ್ಮಿಕರ ಸಮಸ್ಯೆಗಳು ಇವು ನಾಲ್ಕನೆಯ ಗಣರಾಜ್ಯ ಸರ್ಕಾರಕ್ಕೆ ಸವಾಲೆನಿಸಿದವು. ೧೯೪೮ ರಲ್ಲಿ ಮಾರ್ಷಲ್ ಯೋಜನೆಯಂತೆ ಅಮೆರಿಕ ನೀಡಿದ ಸಹಾಯ ದ್ರ್ರವ್ಯದಿಂದಾಗಿ ಸ್ವಲ್ಪಮಟ್ಟಿಗೆ ಫ್ರಾನ್ಸಿನ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಿಂದ ರಾಷ್ಟ್ರದ ಆರ್ಥಿಕ ಮತ್ತು ನೈತಿಕ ಸ್ಥೈರ್ಯ ಅಲುಗಿತು..[೩೪] ೧೯೫೪ ರ ಜಿನೀವ ಒಪ್ಪಂದದಂತೆ ಉತ್ತರ ವಿಯೆಟ್‍ನಾಮಿನಲ್ಲಿ ಕಮ್ಯೂನಿಸ್ಟ್ ನಾಯಕ ಹೋ ಚೀಮಿನ್ ಹೊಸ ಸರ್ಕಾರ ರಚಿಸಿದ. ದಕ್ಷಿಣ ವಿಯಿಟ್‍ನಾಮಿನಲ್ಲಿ ಕಮ್ಯೂನಿಸ್ಟೇತರ ರಾಷ್ಟ್ರೀಯ ಸರ್ಕಾರ ಅಧಿಕಾರಕ್ಕೆ ಬಂತು. ಮೊರಾಕೊ, ಟ್ಯುನೀಷಿಯ, ಆಲ್ಜೀರಿಯಗಳಲ್ಲೂ ಫ್ರಾನ್ಸಿನ ವಿರುದ್ಧವಾಗಿ ಸ್ವಾತಂತ್ರ್ಯ ಹೋರಾಟಗಳು ಆರಂಭವಾದುವು. ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ರಾಷ್ಟ್ರದ ಅನೇಕ ರಾಜಕೀಯ ನಾಯಕರು, ಜನರಲ್ ಡಿ ಗಾಲನನ್ನು ಅಧಿಕಾರ ವಹಿಸಿಕೊಳ್ಳುವಂತೆ ಒತ್ತಾಯಿಸಿದರು. ರಾಷ್ಟ್ರ ರಕ್ಷಣೆಯ ದೃಷ್ಟಿಯಿಂದ ಮತ್ತೆ ಜನರಲ್ ಡಿ ಗಾಲ್ ೧೯೫೮ ರಲ್ಲಿ ಅಧಿಕಾರ ವಹಿಸಿಕೊಂಡ.

ಕಮ್ಯೂನಿಸ್ಟರನ್ನುಳಿದು ಇತರ ರಾಜಕೀಯ ಪಕ್ಷಗಳ ಸಂಮಿಶ್ರ ಮಂತ್ರಿಮಂಡಲ ರಚನೆಯಾಯಿತು. ೧೯೫೮ ರ ಸೆಪ್ಟೆಂಬರ್‍ನಲ್ಲಿ ಐದನೆಯ ಗಣರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂತು. ೧೯೫೯ ಜನವರಿಯಲ್ಲಿ ಜನರಲ್ ಡಿ ಗಾಲ್ ಏಳು ವರ್ಷಗಳ ಅವಧಿಗೆ, ಐದನೆಯ ಗಣರಾಜ್ಯ ಸರ್ಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ. ವೈಭವ ಮತ್ತು ಕೀರ್ತಿಯ ನೀತಿಯನ್ನು ಅನುಸರಿಸಲು ಡಿ ಗಾಲ್ ನಿರ್ಧರಿಸಿದ. ಆಡಳಿತ ವ್ಯವಸ್ಥೆಯನ್ನು ಸುಧಾರಿಸಿ, ರಾಷ್ಟ್ರಕ್ಕೆ ದೃಢತೆ, ಪ್ರಗತಿ ಮತ್ತು ಸುಧಾರಣೆಗಳ ಹೊಸ ಯುಗವೊಂದನ್ನು ನೀಡಲು ನಿರ್ಧರಿಸಿದ. ಆಲ್ಜೀರಿಯನ್ನರ ರಾಷ್ಟ್ರೀಯ ಭಾವನೆಗಳನ್ನು ಗೌರವಿಸಿ, ೧೯೫೯ ರಲ್ಲಿ ಆಲ್ಜೀರಿಯನ್ನರಿಗೆ ಸ್ವಯಂ ನಿರ್ಣಯದ ಹಕ್ಕುಂಟೆಂದು ಘೋಷಿಸಿದ. ಆಲ್ಜೀರಿಯದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಡಿ ಗಾಲ್ ತಾಳಿದ ನಿಲುವಿಗೆ ಯುರೋಪಿಯನ್ನರು ಉಗ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರೂ ದೃಢನಿರ್ಧಾರದಿಂದ ೧೯೬೨ ರ ಜುಲೈನಲ್ಲಿ ಫ್ರಾನ್ಸ್ ಆಲ್ಜೀರಿಯಕ್ಕೆ ಸ್ವಾತಂತ್ರ್ಯ ನೀಡಿತು. ೧೯೬೨ ರಲ್ಲಿ ರಾಷ್ಟ್ರೀಯ ಸಭೆಗೆ ನಡೆದ ಚುನಾವಣೆಯಲ್ಲಿ ಡಿ ಗಾಲ್ ಪಕ್ಷಕ್ಕೆ ಜಯ ಲಭಿಸಿತು.

ಆಂತರಿಕ ರಾಜಕೀಯ ಸಂಸ್ಥೆಗಳನ್ನು ಬಲಪಡಿಸಿ, ಆರ್ಥಿಕ ದೃಢತೆಯನ್ನು ಸಾಧಿಸಿ, ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಫ್ರಾನ್ಸಿನ ಪ್ರಮುಖ ಸ್ಥಾನ ದೊರಕಿಸಿಕೊಡುವುದು ಡಿ ಗಾಲ್ ಯೋಜನೆಯಾಗಿತ್ತು. ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಿದ್ದರಿಂದ ಫ್ರಾನ್ಸಿನ ಹೆಚ್ಚು ಲಾಭವಾಯಿತು. ಆದರೂ ದೇಶದ ಎಲ್ಲ ವರ್ಗದ ಜನತೆಯಲ್ಲಿ ಅತೃಪ್ತಿ ಅಸಮಾಧಾನ ಇದ್ದುವು. ಕಾರ್ಮಿಕರು ರೈತರು, ಸರ್ಕಾರಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಪುಟ ನಡೆಸುತ್ತಿದ್ದರು. ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣ ಸೌಲಭ್ಯಗಳಿಗಾಗಿ ಪ್ರದರ್ಶನ ನಡೆಸುತ್ತಿದ್ದರು. ಆದರೂ ರಾಷ್ಟ್ರದ ಸಾಮಾನ್ಯ ಆರ್ಥಿಕ ಪ್ರಗತಿಗೆ ಧಕ್ಕೆ ಉಂಟಾಗಲಿಲ್ಲ.

ವಿದೇಶಾಂಗ ವ್ಯವಹಾರಗಳಲ್ಲಿ ಡಿ ಗಾಲ್ ತನ್ನ ವೈಯಕ್ತಿಕ ಪ್ರಭಾವವನ್ನು ಹೆಚ್ಚು ಹೆಚ್ಚಾಗಿ ಬೀರಿದ. ರಷ್ಯ ಮತ್ತು ಅಮೆರಿಕಗಳು ಪ್ರಪಂಚದ ವ್ಯವಹಾರಗಳಲ್ಲಿ ಗಳಿಸಿದ್ದ ಪ್ರತಿಷ್ಠಿತ ಸ್ಥಾನಮಾನಗಳು ಫ್ರಾನ್ಸಿಗೂ ದೊರಕಬೇಕೆಂಬುದು ಅವನ ಬಯಕೆಯಾಗಿತ್ತು. ಉತ್ತರ ಅಟ್ಲಾಂಟಿಕ್ ಕೌಲು ಕೂಟದಲ್ಲಿ ಬ್ರಿಟನ್ ಮತ್ತು ಅಮೆರಿಕಗಳು ಹೊಂದಿದ್ದ ಅಧಿಕಾರ ಪ್ರಭಾವಗಳು ಫ್ರಾನ್ಸಿಗೂ ಇರಬೇಕೆಂಬ ಆಶಯ ವ್ಯಕ್ತಪಡಿಸಿದ. ಫ್ರಾನ್ಸ್ ಪರಮಾಣು ರಾಷ್ಟ್ರವಾಗಬೇಕೆಂದು ದೃಢನಿಲುವು ಡಿ ಗಾಲ್‍ದು. ೧೯೬೦ ರಲ್ಲಿ ಫ್ರಾನ್ಸ್ ಮೊಟ್ಟಮೊದಲನೆಯ ಪರಮಾಣು ಪರೀಕ್ಷೆಯನ್ನು ಸಹಾರದಲ್ಲಿ ನಡೆಸಿತು. ೧೯೬೪ ರಲ್ಲಿ ಅದು ಕಮ್ಯೂನಿಸ್ಟ್ ಚೀನಕ್ಕೆ ಮನ್ನಣೆ ನೀಡಿತಲ್ಲದೆ, ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿಯನ್ ರಾಪ್ಟ್ರಗಳೊಡನೆ ನಿಕಟ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿತು. ಪಶ್ಚಿಮ ಜರ್ಮನಿಯೊಂದಿಗೂ ಉತ್ತಮ ಬಾಂಧವ್ಯ ಹೊಂದಿತ್ತು.

೧೯೬೫ ರ ಅಧ್ಯಕ್ಷ ಚುನಾವಣೆಯಲ್ಲಿ ಡಿ ಗಾಲ್ ಮತ್ತೆ ಜಯಗಳಿಸಿದನಾದರೂ ಆ ವೇಳೆಗಾಗಲೆ ಅವನ ಪ್ರಭಾವ ಕಡಿಮೆಯಾಗುತ್ತಿತ್ತು. ೧೯೬೭ ರಲ್ಲಿ ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಡಿ ಗಾಲ್ ಪಕ್ಷ ಅತ್ಯಲ್ಪ ಬಹುಮತದಿಂದ ಗೆದ್ದಿತು. ಫ್ರಾನ್ಸಿನಿಂದ ಉತ್ತರ ಅಟ್ಲಾಂಟಿಕ್ ಕೌಲು ಕೂಟದ ಸೇನೆಗಳು ಕಾಲ್ತೆಗೆಯುವಲ್ಲಿ ಡಿ ಗಾಲ್ ವಹಿಸಿದ ಪಾತ್ರ ಪ್ರಮುಖವಾದ್ದು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಬ್ರಿಟನ್ ಪ್ರವೇಶಿಸುವುದಕ್ಕೆ ಫ್ರಾನ್ಸ್ ವಿರೋಧ ವ್ಯಕ್ತಪಡಿಸಿತು. ಅರಬ್ ಇಸ್ರೇಲಿ ಹೋರಾಟದಲ್ಲಿ ಅರಬರಿಗೆ ಫ್ರಾನ್ಸ್ ಬಂಬಲ ವ್ಯಕ್ತಪಡಿಸಿತು. ಕ್ರಮೇಣ ಫ್ರಾನ್ಸ್ ಪ್ರಗತಿಯ ಹಾದಿ ಹಿಡಿಯಿತಲ್ಲದೆ ಪ್ಯಾರಿಸ್‍ನಗರ ವಿಯೆಟ್‍ನಾಮಿನ ಶಾಂತಿ ಸಂಧಾನದ ಕೇಂದ್ರವಾಯಿತು.

೧೯೬೮ ರಲ್ಲಿ ಡಿ ಗಾಲನ್ ಸರ್ವಾಧಿಕಾರಿ ಪ್ರವೃತ್ತಿಯ ಆಡಳಿತ ವಿರುದ್ಧ ಫ್ರಾನ್ಸಿನಲ್ಲಿ ವ್ಯಾಪಕ ಪ್ರದರ್ಶನಗಳು ನಡೆದವು. ಉತ್ತಮ ಶಿಕ್ಷಣ ಸೌಲಭ್ಯಗಳಿಗಾಗಿ ಪ್ಯಾರಿಸ್ ವಿಶ್ವವಿದ್ಯಾಲಯದ ಸಹಸ್ರಾರು ವಿದ್ಯಾರ್ಥಿಗಳು ಬೃಹತ್ ಪ್ರದರ್ಶನ ನಡೆಸಿದರು. ಹೆಚ್ಚು ವೇತನ, ಕಡಿಮೆ ಅವಧಿಯ ಕೆಲಸ, ಕೈಗಾರಿಕೆಗಳ ಆಡಳಿತ ಮಂಡಲಿಗಳಲ್ಲಿ ಪ್ರಾತಿನಿಧ್ಯಕ್ಕಾಗಿ ಕಾರ್ಮಿಕರು ಪ್ರದರ್ಶನ ನಡೆಸಿದರು. ಮುಷ್ಕರಗಳಿಂದಾಗಿ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಕುಸಿಯತೊಡಗಿತು. ಡಿ ಗಾಲ್ ದೃಢ ನಿರ್ಧಾರದಿಂದ ಪರಿಸ್ಥಿತಿಯನ್ನು ಎದುರಿಸಿ, ಮಧ್ಯಮ ವರ್ಗದ ಬೆಂಬಲದಿಂದ ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡ. ಡಿ ಗಾಲ್ ಸರ್ಕಾರದ ದಿಟ್ಟತನದ ಸ್ವತಂತ್ರ ನೀತಿ ಮುಂದುವರಿಯಿತು. ಪ್ರಾಥಮಿಕ ಮತ್ತು ವಿಶ್ವವಿದ್ಯಾಲಯ ಶಿಕ್ಷಣ ಅತ್ಯಾಧುನಿಕಗೊಂಡಿತು. ಜಲಜನಕ ಬಾಂಬಿನ ಪ್ರಯೋಗ ಪರೀಕ್ಷೆ ನಡೆಯಿತು. ಆದರೆ ಸಂವಿಧಾನದಲ್ಲಿ ಸುಧಾರಣೆಗಳ ಬಗ್ಗೆ ದೇಶದಲ್ಲಿ ನಡೆಸಲಾದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಡಿ ಗಾಲ್‍ಗೆ ಸೋಲಾಯಿತು. ಆದ್ದರಿಂದ ೧೯೬೮ ಏಪ್ರಿಲ್‍ನಲ್ಲಿ ಡಿ ಗಾಲ್ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಹೊಂದಿದ. ಹಿಂದೆ ಫ್ರಾನ್ಸಿನ ಪ್ರಧಾನಿಯಾಗಿದ್ದ ಪಾಂಪೆಡೂ ೧೯೬೯ ರ ಜೂನ್‍ನಲ್ಲಿ ಅಧ್ಯಕ್ಷನಾಗಿ ಅಧಿಕಾರಕ್ಕೆ ಬಂದ.[೩೫] ಡಿ ಎಸ್ಟೇಂಗ್ ಫ್ರಾನ್ಸಿನ ಅಧ್ಯಕ್ಷ. ೧೯೯೫ ರಲ್ಲಿ ಜಾಕ್ಯೂಸ್ ಚಿರಾಕ್ ಅಧ್ಯಕ್ಷರಾದರು.[೩೬]

ಶಿಕ್ಷಣ ಪದ್ಧತಿ

ಬದಲಾಯಿಸಿ

ಆಧುನಿಕ ವಿಜ್ಞಾನ ರಂಗದಲ್ಲಿ ಯೂರೋಪ್ ಖಂಡ ಮುಂಚೂಣಿಯಲ್ಲಿರುವಂತೆ ಮಾಡಿದ ಮಹಾಕ್ರಾಂತಿಗಳಿಗೆ ಅಂಕುರಾರ್ಪಣವೆಸಗಿದ ಫ್ರಾನ್ಸ್, ಮೊದಲಿಂದಲೂ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯವಿತ್ತಿದೆ.[೩೭] ಅಲ್ಲಿಯ ೫ ಕೋಟಿ ಜನಸಂಖ್ಯೆಯಲ್ಲಿ ಸುಮಾರು ಒಂದೂಕಾಲು ಕೋಟಿಯಷ್ಟು ವಿದ್ಯಾರ್ಥಿಗಳೆ ಆಗಿದ್ದಾರೆ. ನೆಪೋಲಿಯನ್ನನ ಕಾಲದಿಂದಲೂ ಶಿಕ್ಷಣದಿಂದ ಮಕ್ಕಳು ತಮ್ಮ ವ್ಯಕ್ತಿತ್ವವನ್ನೂ ಆತ್ಮಶಕ್ತಿಯನ್ನೂ ಬೆಳೆಸಿಕೊಂಡು ರಾಷ್ಟ್ರೀಯ ಐಕ್ಯದ ಮನೋಭಾವವನ್ನು ರೂಢಿಸಿಕೊಂಡು ಬಂದಿದ್ದಾರೆ. ಹದಿನೆಂಟನೆಯ ಶತಮಾನದ ಫ್ರೆಂಚ್ ತತ್ತ್ವಚಿಂತಕರು ಎತ್ತಿ ಹಿಡಿದ ರಾಷ್ಟ್ರೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕೆಂಬ ಆಕಾಂಕ್ಷ ಅಲ್ಲಿನವರಲ್ಲಿ ಬಲವಾಗಿ ಬೇರೂರಿದೆ. ಹಿಂದಿನಿಂದಲೂ ಸಂಸ್ಕೃತಿ ಸಾಹಿತ್ಯಗಳ ಸಂವರ್ಧನಕ್ಕೆ ಪ್ರಾಧಾನ್ಯವಿತ್ತಿದ್ದ ಫ್ರೆಂಚ್ ಶಿಕ್ಷಣಕ್ಷೇತ್ರ ಎರಡನೆಯ ಮಹಾಯುದ್ಧದ ಅನಂತರ ಹೊಸ ಆಯಾಮವನ್ನು ರೂಢಿಸಿಕೊಂಡಿತು. ರಾಷ್ಟ್ರದ ಆರ್ಥಿಕಾಭಿವೃದ್ಧಿಗೂ ರಕ್ಷಣಾ ಕಾರ್ಯಕ್ಕೂ ನೆರವಾಗಬಲ್ಲ ತಾಂತ್ರಿಕ ಜನಬಲವನ್ನು ರೂಢಿಸುವ ಕಾರ್ಯ ಶಿಕ್ಷಣದ ಪಾಲಿಗೆ ಬಂತು. ಅಂತೆಯೆ ಸ್ವತಂತ್ರವಾಗಿ ಆಲೋಚಿಸಿ ಜ್ಞಾನವಿಜ್ಞಾನಗಳ ಪ್ರಗತಿಗೆ ನೆರವಾಗುವ ಹಾಗೂ ಕಲ್ಟನಾ ಪ್ರಜ್ಞೆಯನ್ನು ಹೊಂದಿರುವ ಜನತೆಯ ಮೂಲಕ ಪ್ರಪಂಚದ ಕಲ್ಯಾಣಕ್ಕೆ ಸಹಾಯವಾಗತಕ್ಕ ಯುವಜನರ ನಿರ್ಮಾಣವೂ ಅದರ ಪಾಲಿಗೆ ಬಂತು.

ಫ್ರಾನ್ಸಿನ ಶಿಕ್ಷಣದ ಇತಿಹಾಸ ಐರೋಪ್ಯ ಜನಾಂಗದ ಧರ್ಮ ಸಂಸ್ಕೃತಿ ನಾಗರಿಕತೆಗಳ ಇತಿಹಾಸದೊಡನೆ ಬೆಳೆದು ಬಂದಿದೆ. ಮಹಾಕ್ರಾಂತಿಯವರೆಗೂ ಅಲ್ಲಿನ ಶಿಕ್ಷಣ ಚರ್ಚಿನ ನೇತೃತ್ವದಲ್ಲಿತ್ತು. ಶಾಲೆಗಳಲ್ಲಿ ಜೇಸೂಯಿಟ್ ಪಾದ್ರಿಗಳು ಅಧ್ಯಾಪಕರಾಗಿದ್ದುಕೊಂಡು ಕ್ರೈಸ್ತ ಧರ್ಮದಲ್ಲಿ ಅನೂಚಾನವಾಗಿ ಬಂದ ಸಿದ್ಧಾಂತಗಳನ್ನು ಕಟ್ಟುನಿಟ್ಟಾದ ಶಿಸ್ತಿನ ಸನ್ನಿವೇಶದಲ್ಲಿ ಕಟುಬಲುಮೆಯಿಂದ ಮಕ್ಕಳ ಮನಸ್ಸಿಗೆ ತುರುಕುತ್ತಿದ್ದರು. ೧೮ ನೆಯ ಶತಮಾನದ ಫ್ರೆಂಚ್ ತತ್ತ್ವಜ್ಞಾನಿಗಳು ಶಿಕ್ಷಣ ಕಾರ್ಯಕ್ಕೆ ನೂತನ ಆಯಾಮವನ್ನು ಒದಗಿಸಿದರು. ಶಿಕ್ಷಣ ಸ್ವತಂತ್ರವಾಗಿ, ಕಾರ್ಯಕಾರಣ ದೃಷ್ಟಿಯಲ್ಲಿ ಚಿಂತನೆ ನಡೆಸುವ ಸ್ವಾತಂತ್ರ್ಯವನ್ನು ದೊರಕಿಸಬೇಕೆಂಬುದೇ ಆ ಹೊಸ ಆಯಾಮ. ಶಿಕ್ಷಣವೇತ್ತರು ಪ್ರತಿಯೊಬ್ಬನಿಗೂ ಶಿಕ್ಷಣ ಸೌಲಭ್ಯವೊದಗಿಸಬೇಕಾಗಿ ಒತ್ತಾಯ ಹಾಕಿದರು. ೧೮೩೦ ರಲ್ಲಿ ರಾಷ್ಟ್ರೀಯ ಸರ್ಕಾರದ ಪ್ರತಿಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿ ಕಟ್ಟಡ ಉಪಕರಣ ಮುಂತಾದವನ್ನು ಒದಗಿಸುವ ಕಡೆ ಗಮನ ಕೊಟ್ಟಿತು.[೩೮][೩೯] ಅಧ್ಯಾಪಕರ ಸಂಬಳ ಸಾರಿಗೆಗಳನ್ನು ಗೊತ್ತುಮಾಡಿ ಅವರ ತರಬೇತಿಗಾಗಿ ಪ್ರತಿಜಿಲ್ಲೆಯಲ್ಲೂ ನಾರ್ಮಲ್ ಸ್ಕೂಲುಗಳ ಸ್ಥಾಪನೆಗೆ ಅಗತ್ಯವಾದದ್ದನ್ನೆಲ್ಲ ಮಾಡುತ್ತ ಬಂತು. ಆದರೆ ಸರ್ಕಾರ ಶಿಕ್ಷಣದ ಹೊಣೆಯನ್ನು ಹೊರಲು ಮುಂದೆ ಬಂದುದಕ್ಕೆ ಕ್ಯಾತೊಲಿಕ್ ಪಂಥದ ಪಾದ್ರಿಗಳು ತೀವ್ರವಾಗಿ ಪ್ರತಿಭಟಿಸ ಹತ್ತಿದರು. ಇಡೀ ಹತ್ತೊಂಬತ್ತನೆಯ ಶತಮಾನವೆಲ್ಲ ಈ ತಿಕ್ಕಾಟದಲ್ಲೇ ಕಳೆಯಿತು. ಕಡೆಗೆ ಆ ಶತಮಾನದ ಕೊನೆಯಲ್ಲಿ ಎಂದರೆ ೧೮೮೦ ರ ಸುಮಾರಿಗೆ ಆಗ ಶಿಕ್ಷಣ ಸಚಿವರಾಗಿದ್ದ ಜೂಲಿಷ್‍ಫೆರಿ ಧೈರ್ಯದಿಂದ ಟೀಕೆಗಳನ್ನು ಎದುರಿಸಿ ದೇಶದ ಎಲ್ಲ ಕಡೆಯೂ ಸರ್ಕಾರದ ಶಾಲೆಗಳನ್ನು ಆರಂಭಿಸಿ ರಾಷ್ಟ್ರೀಯ ಶಿಕ್ಷಣಕ್ಕೆ ತಳಹದಿ ಹಾಕಿದರು. ಶಾಲೆಗಳಲ್ಲಿ ಧಾರ್ಮಿಕ ಪಂಥ ಪಂಗಡಗಳ ಶಿಕ್ಷಣವನ್ನು ತೆಗೆದುಹಾಕಿ ಪ್ರಾಥಮಿಕ ಶಾಲೆಯಲ್ಲಿ ಶುಲ್ಕ ವಿನಾಯಿತಿ ನೀಡಿದರು. ಅನಂತರ ಅದರಿಂದ ಹದಿಮೂರು ವರ್ಷದ ಮಕ್ಕಳಿಗೆಲ್ಲ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು.

ಶಿಕ್ಷಣದ ಮೇಲಿನ ಪೂರ್ಣ ಒಡೆತನವನ್ನು ಸರ್ಕಾರ ಸ್ಥಾಪಿಸಿಕೊಂಡರೂ ಹಿಂದಿನ ಚರ್ಚಿನ ಪಾಠಶಾಲೆಗಳ ಶ್ರೀಮಂತಿಕೆಯನ್ನು ಕೆಲವು ಶಾಲೆಗಳಲ್ಲಿ ಉಳಿಸಿಕೊಳ್ಳಲಾಯಿತು. ಅಲ್ಲಿ ಶ್ರೀಮಂತರ ಹಾಗೂ ಮಧ್ಯಮ ವರ್ಗದವರ ಮಕ್ಕಳು ಶೀಘ್ರಾಭಿವೃದ್ಧಿ ಸಾಧಿಸುವಂಥ ಸನ್ನಿವೇಶ ಪಠ್ಯಕ್ರಮಾದಿಗಳನ್ನು ಉಳಿಸಿಕೊಂಡಿತು. ಕೆಳವರ್ಗದ ಮಕ್ಕಳಿಗೆ ಬೇರೆ ರೀತಿಯ ಶಾಲೆಗಳು ರೂಪುಗೊಂಡುವು. ಸಮತಾವಾದವನ್ನು ಪ್ರತಿಪಾದಿಸುತ್ತಿದ್ದ ರಾಜಕಾರಣಿಗಳು ಈ ವ್ಯವಸ್ಥೆಯನ್ನು ಬಲವಾಗಿ ಟೀಕಿಸಿದರು. ರೂಸೋನ ತತ್ತ್ವ ದೃಷ್ಟಿಯಂತೆ ಮಕ್ಕಳು ತಮ್ಮ ಶಕ್ತಿ ಸಾಮಥ್ರ್ಯಕ್ಕೆ ಒಪ್ಪುವ ವೇಗದಲ್ಲಿ ಶಿಕ್ಷಣ ಪಡೆಯುವ ಸ್ವಾತಂತ್ರ್ಯವಿರಬೇಕೆಂದು ಶಿಕ್ಷಣವೇತ್ತರು ಪ್ರತಿಪಾದಿಸಿದರು. ಆದರೂ ಶ್ರೀಮಂತರ ಶಾಲೆಗಳು ಮುಂದುವರಿದುಕೊಂಡೇ ಬಂದುವು. ರೂಸೋಪೆಸ್ಟಲಾಟ್ಸಿ ಮುಂತಾದವರ ತತ್ತ್ವಗಳು ಅನ್ಯದೇಶಗಳಲ್ಲಿ ಹೆಚ್ಚಿನ ಪ್ರಚಾರ ಪಡೆದು ಕಾರ್ಯ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬಂದಿದ್ದುವು. ಫ್ರಾನ್ಸಿನ ಪ್ರಾಥಮಿಕ ಪೂರ್ವದ ಶಿಕ್ಷಣದಲ್ಲಿ ರೂಸೋ ಪ್ರತಿಪಾದಿಸಿದ್ದ ಸ್ವಾತಂತ್ರ್ಯ ಚಟುವಟಿಕೆ, ಸ್ವಪ್ರಕಾಶನ ಈ ಅಂಶಗಳಿಗೆ ಪ್ರಾಶಸ್ತ್ಯ ಬಂದಿತು.

ಫ್ರಾನ್ಸಿನಲ್ಲಿ ೨ ರಿಂದ ೪ ವರ್ಷದ ಮಕ್ಕಳಲ್ಲಿ ಸುಮಾರು ೮೨% ರಷ್ಟು ಮಂದಿ ಶಿಶುವಿಹಾರಗಳಲ್ಲಿದ್ದಾರೆ. ಈ ಶಿಶುವಿಹಾರಗಳು ಮುಖ್ಯವಾಗಿ ನಗರಗಳಲ್ಲಿವೆ. ಗ್ರಾಮಾಂತರ ಪ್ರದೇಶದಲ್ಲಿ ತಾಯಂದಿರೂ ಸಾಮಾನ್ಯವಾಗಿ ಮನೆಯಲ್ಲಿ ಇರುವುದರಿಂದ ಅಲ್ಲಿ ಅವು ಅಷ್ಟಾಗಿ ಆರಂಭವಾಗಿಲ್ಲ. ಪಟ್ಟಣಗಳಲ್ಲಿ ತಾಯಂದಿರೂ ಕೆಲಸಕ್ಕೆ ಸೇರುವುದರಿಂದ ಅವುಗಳ ಆವಶ್ಯಕತೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ಕಡೆ ಅವು ದಿವಸದ ಹತ್ತು ಗಂಟೆಗಳ ಕಾಲ ತೆರೆದಿದ್ದು ಮಕ್ಕಳ ಶಿಕ್ಷಣದ ಜೊತೆಗೆ ಅವರ ಆಹಾರಾದಿ ಆವಶ್ಯಕತೆಗಳ ಕಡೆಯೂ ಗಮನ ಕೊಡುತ್ತಿವೆ. ಗ್ರಾಮಾಂತರ ಪ್ರದೇಶದ ಬಾಲಿಕಾ ಪ್ರಾಥಮಿಕ ಶಾಲೆಗಳ ಅಂಗವಾಗಿ ಕೆಲವು ಶಿಶುವಿಹಾರಗಳು ನಡೆಯುತ್ತವೆ. ಅಲ್ಲಿ ೪ ವರ್ಷದ ಮಕ್ಕಳನ್ನು ಸೇರಿಸಿಕೊಳ್ಳುವುದುಂಟು. ಇಲ್ಲೆಲ್ಲ ಉಚಿತಶಿಕ್ಷಣ ದೊರೆಯುತ್ತದೆ. ಇಂಗ್ಲೆಂಡಿನ ಮಾರ್ಗರೆಟ್ ಮ್ಯಾಕ್ಮಿಲ್ಲನ್ನರ ನರ್ಸರಿ ಶಿಕ್ಷಣ ಪದ್ಧತಿಯೊಡನೆ ಜರ್ಮನಿಯ ಫೊಬೆಲ್ಲನ ಕಿಂಡರ್‍ಗಾರ್ಟನ್ ಪದ್ಧತಿಯನ್ನು ಸಮನ್ವಯಗೊಳಿಸಿಕೊಂಡು ಶಿಕ್ಷಣ ವ್ಯವಸ್ಥೆಯೊಂದನ್ನು ಇಲ್ಲೆಲ್ಲ ಅನುಸರಿಸುತ್ತಿರುವರು.

ಫ್ರಾನ್ಸಿನ ಪ್ರತಿ ಹಳ್ಳಿಯಲ್ಲೂ ಪ್ರಾಥಮಿಕ ಶಾಲೆಯಿದೆ. ದೇಶದಲ್ಲಿ ಒಟ್ಟು ಎಂಬತ್ತು ಸಾವಿರ ಪ್ರಾಥಮಿಕ ಶಾಲೆಗಳಿವೆ. ೬ ರಿಂದ ೧೬ ವರ್ಷದವರೆಗೆ ಶಿಕ್ಷಣವನ್ನು ಕಡ್ಡಾಯ ಮಾಡಲಾಗಿದೆ. ೧೯೬೭ ರ ತನಕ ಮಕ್ಕಳು ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಶಾಲೆಯನ್ನು ಬಿಡುತ್ತಿದ್ದರು. ಈಚೆಗೆ ಪ್ರಾಥಮಿಕ ಶಾಲೆಗೆ ಆ ಶಾಲೆಯ ೮ ತರಗತಿಗಳ ಜೊತೆಗೆ, ೯ ಮತ್ತು ೧೦ ನೆಯ ತರಗತಿಗಳನ್ನು ಸೇರಿಸಲಾಗಿದೆ.

ಉನ್ನತ ಶಿಕ್ಷಣದಲ್ಲಿ ಅಭಿರುಚಿಯುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳು 5ನೆಯ ತರಗತಿಯಿಂದ ಎಂದರೆ ತಮ್ಮ ೧೧ ನೆಯ ವಯಸ್ಸಿನಲ್ಲಿ ೭ ವರ್ಷದ ಲೈಸಿಯಮ್ ಎಂಬ ಪ್ರೌಢಶಾಲೆಗೆ ಸೇರುತ್ತಾರೆ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ೧೨-೧೭ ರ ವಯೋಮಾನದ ಮಕ್ಕಳಲ್ಲಿ ೧೫% ಲೈಸಿಯಮ್ಮಿಗೆ ಸೇರಲು ಅವಕಾಶವೀಯಲಾಗುತ್ತಿತ್ತು. ಈಚೆಗೆ ಅದರ ಪ್ರಮಾಣ ೨೫% ಕ್ಕೆ ಏರಿದೆ. ಇದಕ್ಕೆ ಮುಖ್ಯವಾಗಿ ಕೆಳವರ್ಗದ ಹಾಗೂ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗುವ ಹಂಬಲ ಹೆಚ್ಚಿದ್ದೇ ಕಾರಣವೆನ್ನಬಹುದು. ಇದರ ಫಲವಾಗಿ ಲೈಸಿಯಮ್‍ಗಳು ಸಂಖ್ಯೆಯಲ್ಲಿ ಹೆಚ್ಚುತ್ತಿವೆ. ವಿಶ್ವವಿದ್ಯಾಲಯಕ್ಕೆ ಹೋಗತಕ್ಕವರಿಗೆ ಇದೊಂದೇ ಸಿದ್ಧತೆ ನೀಡುವ ಶಾಲೆಯಾದ್ದರಿಂದ ಇಂಗ್ಲೆಂಡಿನ ಗ್ರ್ಯಾಮ್ ಪ್ರೌಢಶಾಲೆಗಳಂತೆ ಇದಕ್ಕೆ ವಿಶೇಷ ಪ್ರತಿಷ್ಠೆಯುಂಟು. ಪ್ರೌಢಶಾಲಾ ವಯೋಮಾನದ ಮಕ್ಕಳಲ್ಲಿ ಇನ್ನುಳಿದ ೨೫% ರಷ್ಟು ಜನ ೫ ನೆಯ ತರಗತಿಯನ್ನು ಮುಗಿಸಿದ ಅನಂತರ ಲೋಯರ್ ಸೆಕೆಂಡರಿ ಶಾಲೆಗೆ ಸೇರುವರು. ಅವರು ಇಲ್ಲಿ ಕಡ್ಡಾಯ ಶಿಕ್ಷಣದ ಕಾಲದವರೆಗಿದ್ದು ಶಾಲೆಯನ್ನು ಬಿಟ್ಟು ಯಾವುದಾದರೂ ಉದ್ಯೋಗಕ್ಕೊ ಉದ್ಯೋಗ ತರಬೇತಿಶಾಲೆಗೂ ಸೇರಿಕೊಳ್ಳುವರು. ಪ್ರಾಥಮಿಕ ಶಾಲೆಯ ಅಧ್ಯಾಪಕರಾಗ ಬಯಸುವ ಕೆಲವರು ಅಪ್ಪರ್ ಸೆಕೆಂಡರಿ ತರಬೇತಿ ಶಾಲೆಗೆ ಸೇರಿಕೊಳ್ಳುವರು.

ಹನ್ನೊಂದನೆಯ ವಯಸ್ಸಿನ ಅನಂತರ ಮಕ್ಕಳನ್ನು ಪ್ರೌಢಶಾಲೆಗೆ ಆರಿಸಿ ಕಳುಹಿಸುವ ವಿಷಯದಲ್ಲಿ ತೀವ್ರವಾದ ಚರ್ಚೆ ನಡೆಯುತ್ತಿದೆ. ೪-೫ ನೆಯ ತರಗತಿಯ ಅನಂತರ ಲೈಸಿಯಮ್ಮಿಗೆ ಹೋಗದ ಮಕ್ಕಳು ಮುಂದೆ ದೇಶದಲ್ಲಿ ನಾಯಕ ಸ್ಥಾನಗಳಿಗೆ ಬರಲಾರದೆ ಹಿಂದುಳಿಯುವಂತಾಗುತ್ತದೆಂದು ವಾದಿಸಲಾಗುತ್ತಿದೆ. ಸಮತಾವಾದಿಗಳ ಈ ಟೀಕೆಯ ಫಲವಾಗಿ ಈಚೆಗೆ ಕಾಂಪ್ರಿಹೆನ್ಸಿವ್ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿ ಎಲ್ಲ ವರ್ಗದ ಮಕ್ಕಳಿಗೂ ಅವಕಾಶ ಕಲ್ಪಿಸಿದೆ; ಲ್ಯಾಟಿನ್ ಅಭ್ಯಾಸ ಮಾಡಲೂ ಏರ್ಪಾಡು ಮಾಡಿದೆ. ಆದರೂ ಇದರಿಂದ ತೃಪ್ತಿಗೊಳ್ಳದ ಜನತೆ ಅಕ್ಕಪಕ್ಕದ ಶಾಲಾ ಪದ್ಧತಿಯನ್ನು (ನೈಬರ್‍ಹುಡ್ ಸ್ಕೂಲ್ ಸಿಸ್ಟಂ) ಆಚರಣೆಗೆ ತರಬೇಕೆಂದು ಒತ್ತಾಯ ಹಾಕುತ್ತಿದೆ. ಆದರೆ ಇದರಿಂದ ಲೈಸಿಯಮ್ಮಗಳ ಶಿಕ್ಷಣದ ಮಟ್ಟಕ್ಕೆ ಹಾನಿಯುಂಟಾಗುವುದೆಂಬ ಕಳವಳ ಶಿಕ್ಷಣವೇತ್ತರಲ್ಲಿ ತಲೆದೋರುತ್ತಿದೆ.

೧೯೬೭ ವರೆಗೂ ೧೪ ನೆಯ ವಯಸ್ಸಿನಲ್ಲಿ ಯಾವ ಉದ್ಯೋಗ ಶಿಕ್ಷಣವೂ ಇಲ್ಲದೆ ವಿದ್ಯಾರ್ಥಿಗಳು ಶಾಲೆ ಬಿಡುತ್ತಿದ್ದರು. ಈಚೆಗೆ ಉದ್ಯೋಗ ಕಲಿಯುವವರಿಗಾಗಿ ಅಲ್ಲಿ ೯ ಮತ್ತು ೧೦ ನೆಯ ತರಗತಿಗಳನ್ನು ಸೇರಿಸಿದೆ. ಅಲ್ಲಿ ಅವರಿಗೆ ಅಂತಿಮ ರೂಪದ ಉದ್ಯೋಗಪರ ಶಿಕ್ಷಣ ಕೊಡಲಾಗುವುದು. ಜೊತೆಗೆ ತಾಂತ್ರಿಕ ಪ್ರೌಢಶಾಲೆಗಳೂ ಇವೆ. ಅಲ್ಲಿ ನಲ್ಲಿ ಮತ್ತು ಸ್ಯಾನಿಟರಿ ಕೆಲಸ ಮೆಕ್ಯಾನಿಕ್ ಕೆಲಸ ಕ್ಷೌರದ ಕೆಲಸ ಹೋಟೆಲ್ ಕೆಲಸ ಬೆರಳಚ್ಚು ಧರ್ಮ ಹದ ಮಾಡುವುದು ಪಾದರಕ್ಷೆ ತಯಾರಿಕೆ ಮಾರಾಟಗಾರಿಕೆ ಮುಂತಾದವುಗಳಲ್ಲಿ ಶಿಕ್ಷಣವೀಯಲಾಗುವುದು. ಈ ಪ್ರೌಢಶಾಲೆಗಳಲ್ಲಿ ೧೦, ೧೧, ಮತ್ತು ೧೨ ನೆಯ ತರಗತಿಗಳಿರುತ್ತವೆ. ಇವುಗಳಂತೆ ಉಮೇದುವಾರಿ ಕೇಂದ್ರಗಳೆಂಬ ಕೈಗಾರಿಕಾ ಶಾಲೆಗಳೂ ಇವೆ. ಅಲ್ಲಿ ವ್ಯಾಸಂಗದ ಜೊತೆಗೆ ಕೈಗಾರಿಕೆಯಲ್ಲೂ ತರಬೇತು ನೀಡಲಾಗುವುದು. ಟೆಕ್ನಿಕಲ್ ಪ್ರೌಢಶಾಲೆಯಲ್ಲಿ ಉತ್ತಮೋತ್ತಮವಾಗಿ ತೇರ್ಗಡೆಯಾಗುವ ಕೆಲವರಿಗೆ ಉನ್ನತ ವೃತ್ತಿ ಶಿಕ್ಷಣಕ್ಕೆ ಹೋಗುವ ಅವಕಾಶವುಂಟು.

೧೯೬೦ ರಲ್ಲಿ ಪ್ರೌಢಶಾಲೆಯ ವಯೋಮಾನದ ಕೇವಲ ೧೧% ಜನ ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದರು. ಈಗ ಅವರ ಸಂಖ್ಯೆ ಸುಮಾರು ೨೫% ರಷ್ಟಕ್ಕೆ ಏರಿದೆ. ಲೈಸಿಯಮ್ ಮತ್ತು ಉನ್ನತ ಶಿಕ್ಷಣದ ಕಾಲೇಜುಗಳನ್ನು ಹೆಚ್ಚಾಗಿ ಸ್ಥಾಪಿಸುತ್ತಿರುವುದೆ ಇದಕ್ಕೆ ಕಾರಣ. ಆದರೆ ವಿಶ್ವವಿದ್ಯಾಲಯ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗೆ ಸೇರಿದವರಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತ ಬಂದಿದೆ. ೧೦೦ ಕ್ಕೂ ಕೇವಲ ೪೦ ಮಂದಿ ಮಾತ್ರ ಪದವಿಗಳಿಸುವರು. ಪ್ರೌಢಶಾಲೆಯ ವಯೋಮಾನದ ಮಕ್ಕಳಲ್ಲಿ ಕೇವಲ ೮% ಮಾತ್ರ ಪದವಿ ಪಡೆಯುತ್ತಾರೆ.

೨೩ ಸರ್ಕಾರೀ ವಿಶ್ವವಿದ್ಯಾಲಯಗಳು ೫ ಕ್ಯಾಥೊಲಿಕ್ ವಿಶ್ವವಿದ್ಯಾಲಯಗಳು ಸುಮಾರು ೧೦೦ ಉನ್ನತ ವಿದ್ಯಾಲಯಗಳು ಇವು ಫ್ರಾನ್ಸಿನಲ್ಲಿ ಉನ್ನತ ಶಿಕ್ಷಣವೀಯುವ ಸಂಸ್ಥೆಗಳು. ಕ್ಯಾಥೊಲಿಕ್ ವಿಶ್ವವಿದ್ಯಾಲಯಗಳಲ್ಲಿ ೨% ವಿದ್ಯಾರ್ಥಿಗಳೂ ಉನ್ನತ ವಿದ್ಯಾಲಯಗಳಲ್ಲಿ ೧೦% ವಿದ್ಯಾರ್ಥಿಗಳೂ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಳಿದ ೮೮% ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಸೇವಾಶಾಖೆಗಳು ನಡೆಸುತ್ತಿರುವ ಗ್ರಾಂಡಿಸ್ ಇಕೋಲೆ ಎಂದು ಕರೆಯಲ್ಪಡುವ ಈ ವಿದ್ಯಾಲಯಗಳಲ್ಲಿ ಪದವಿಗಳಿಸುವುದು ತುಂಬ ಕಷ್ಟ. ಹಾಗೂ ಅಲ್ಲಿ ಪದವಿ ಪಡೆದವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ಕಾದಿರುತ್ತದೆ. ಜೊತೆಗೆ ಅಲ್ಲಿಗೆ ಸೇರುವಾಗ ಕಠಿಣ ರೀತಿಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಆದ್ದರಿಂದ ಪ್ರತಿ ವಿದ್ಯಾಲಯದಲ್ಲಿ ೫೦೦ಕ್ಕೂ ಕಡಿಮೆ ವಿದ್ಯಾರ್ಥಿಗಳೂ ಮಾತ್ರ ಇರುವರು. ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ದೊಡ್ಡ ಸಂಸ್ಥೆಯಲ್ಲಿ ೧ ಲಕ್ಷ ಮಂದಿಯೂ ಮಿಕ್ಕ ವಿಶ್ವವಿದ್ಯಾಲಯಗಳಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿರುವರು. ೧೯೬೦ ರಿಂದೀಚೆಗೆ ವಿಶ್ವವಿದ್ಯಾಲಯಗಳಿಲ್ಲದ ನಗರಗಳಲ್ಲಿ ಸರ್ಕಾರ ವಿಶ್ವವಿದ್ಯಾಲಯದ ಕಾಲೇಜುಗಳನ್ನು ಆರಂಭಿಸಿದೆ. ಅಲ್ಲಿ ವಿಶ್ವವಿದ್ಯಾಲಯದ ಮೊದಲ ವರ್ಷದ ತರಗತಿಗಳನ್ನು ಮಾತ್ರ ನಡೆಸಲಾಗುತ್ತಿದೆ. ಕಾಲಕ್ರಮದಲ್ಲಿ ಈ ಕಾಲೇಜುಗಳು ವಿಶ್ವವಿದ್ಯಾಲಯಗಳಾಗಿ ಮಾರ್ಪಡಬಹುದು.

ಫ್ರಾನ್ಸಿನ ಶಿಕ್ಷಣ ಬಹುಮಟ್ಟಿಗೆ ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಸೇರಿದೆ. ಸ್ಥಳೀಯ ಸರ್ಕಾರದ ಘಟಕಗಳು ಕೇವಲ ಕಟ್ಟಡದ ರಿಪೇರಿ ವಾತಾಯನ, ಶಾಖಾಯನ, ನಿರ್ಮಲೀಕರಣ ಮುಂತಾದ ಗೌಣ ಅಂಶಗಳನ್ನು ನೋಡಿಕೊಳ್ಳುವುವು. ಶಿಕ್ಷಣ ವೆಚ್ಚದ ೮೮% ಕೇಂದ್ರ ಸರ್ಕಾರದ ಬೊಕ್ಕಸದಿಂದ ಸಂದಾಯವಾಗುತ್ತದೆ. ಅದು ತನ್ನ ಒಟ್ಟು ಆದಾಯದ ೪% ನ್ನೂ ಒಟ್ಟು ವೆಚ್ಚದ ೧೭% ನ್ನೂ ಶಿಕ್ಷಣಕ್ಕೆ ವಿನಿಯೋಗ ಮಾಡುತ್ತಿದೆ. ಶಿಕ್ಷಣ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವ ಖಾಸಗಿ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಮೂರು ವಿಧವಾದ ಸಹಾಯಧನವನ್ನು ಪಡೆಯ ಬಹುದು. ಮೊದಲನೆಯದಾಗಿ ಸರ್ಕಾರದ ತನಿಖಾಧಿಕಾರಿಗಳ ಪರೀಕ್ಷೆಗೂ ಆಯವ್ಯಯಗಳ ತನಿಖೆಗೂ ಒಳಪಟ್ಟರೆ ಅವಕ್ಕೆ ಅಧ್ಯಾಪಕರ ಸಂಬಳ ಸಹಾಯಧನವಾಗಿ ದೊರೆಯುವುದು; ಸರ್ಕಾರದ ಶಾಲೆಗಳಲ್ಲಿರುವ ಪಠ್ಯಕ್ರಮವನ್ನು ಅನುಸರಿಸಿದರೆ ಅದಕ್ಕೆ ಅಧ್ಯಾಪಕರ ಸಂಬಳದ ಜೊತೆಗೆ ಕಾರ್ಯಾಚರಣೆಯ ವೆಚ್ಚವನ್ನೂ ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು. ಯಾವ ಖಾಸಗಿ ಸಂಸ್ಥೆಯಾಗಲಿ ಪೂರ್ಣವಾಗಿ ಸರ್ಕಾರಕ್ಕೆ ವರ್ಗಾವಣೆಯಾದರೆ ಅದರ ಪೂರ್ಣ ವೆಚ್ಚವನ್ನೂ ಕೇಂದ್ರ ಸರ್ಕಾರವೇ ವಹಿಸಿಕೊಳ್ಳುವುದು.

ಸರ್ಕಾರದ ಶಾಲಾಕಾಲೇಜುಗಳ ಆಡಳಿತ ಕ್ಯಾಬಿನೆಟ್ ದರ್ಜೆಯ ಮಂತ್ರಿಯೊಬ್ಬರಿಗೆ ಸೇರುತ್ತದೆ. ಅವರು ಅಧ್ಯಾಪಕರನ್ನು ನೇಮಕ ಮಾಡುವರು; ಪಾಠಕ್ರಮವನ್ನು ನಿರ್ಧರಿಸುವರು; ಪಠ್ಯಪುಸ್ತಕಗಳನ್ನು ನಿಷ್ಕರ್ಷಿಸುವರು; ಬೋಧನ ಕ್ರಮವನ್ನೂ ಗೊತ್ತುಮಾಡುವರು. ಅಲ್ಲದೆ ವಿಷಯವನ್ನು ಬೋಧಿಸಿ ಮುಗಿಸಬೇಕಾದ ಕಾಲಾವಧಿಯನ್ನೂ ಆ ಕಾರ್ಯದಲ್ಲಿ ಅನುಸರಿಸಬೇಕಾದ ವೇಗವನ್ನೂ ಗೊತ್ತು ಮಾಡುವರು. ಕೇಂದ್ರ ಸರ್ಕಾರ ಶಿಕ್ಷಣದ ಮೇಲೆ ಫ್ರಾನ್ಸಿನ ಕೇಂದ್ರದ ಶಿಕ್ಷಣ ಸಚಿವ ತನ್ನ ಕೊಠಡಿಯಲ್ಲೇ ಕುಳಿತು ದೇಶದ ಯಾವ ಶಾಲಾ ಕಾಲೇಜುಗಳಲ್ಲಿ ಯಾವ ದಿನ ಯಾವ ಪಾಠ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದು ವ್ಯಂಗ್ಯವಾಗಿ ಫ್ರಾನ್ಸಿನ ಇಷ್ಟು ಕಟ್ಟುನಿಟ್ಟಾದ, ನಿಯಮಗಳನ್ನು ಕೆಲವು ಐರೋಪ್ಯ ದೇಶಗಳು ಟೀಕಿಸಿದ್ದುಂಟು. ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಪ್ರತಿಶಾಲೆಯನ್ನೂ ಪ್ರತಿ ಅಧ್ಯಾಪಕರ ಬೋಧನೆಯನ್ನೂ ಪರೀಕ್ಷಿಸಿ ವರದಿ ಸಲ್ಲಿಸುತ್ತಾರೆ. ಕೇಂದ್ರ ಶಿಕ್ಷಣ ಸಚಿವಾಲಯ ದೇಶದಲ್ಲಿರುವ ತನ್ನ ೨೩ ಪ್ರಾಂತೀಯ ಉಪ ಕಚೇರಿ ಅಕಾಡೆಮಿಗಳ ಮೂಲಕ ಅಧ್ಯಾಪಕರ ವರ್ಗಾವಣೆ, ಬಡ್ತಿ, ರಜಾ ಮಂಜೂರಿ ಮುಂತಾದ ಆಡಳಿತ ಅಂಶಗಳನ್ನು ನಿರ್ವಹಿಸುತ್ತದೆ.

ಪ್ರಾಥಮಿಕ ಶಾಲೆಯ ಅಧ್ಯಾಪಕರ ಶಿಕ್ಷಣ ೪ ವರ್ಷಗಳ ಕಾಲಾವಧಿಯ ನಾರ್ಮಲ್ ಸ್ಕೂಲುಗಳಲ್ಲಿ ಏರ್ಪಟ್ಟಿದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ 18ನೆಯ ವಯಸ್ಸಿನಲ್ಲಿ ಇಲ್ಲಿಗೆ ಸೇರಿ ಪ್ರೌಢ ಶಿಕ್ಷಣದ ಜೊತೆಗೆ ಒಂದು ವರ್ಷದ ವೃತ್ತಿಶಿಕ್ಷಣವನ್ನು ಪಡೆದು ಪ್ರಾಥಮಿಕ ಶಾಲೆಯ ಅಧ್ಯಾಪಕರಾಗುವರು ಲೋಯರ್ ಸೆಕೆಂಡರಿ ಶಾಲೆಗೆ ಅಧ್ಯಾಪಕರನ್ನು ನೇಮಿಸುವಾಗ ಪ್ರಾಥಮಿಕ ಶಾಲೆಯ ದಕ್ಷ ಅಧ್ಯಾಪಕರನ್ನು ಆರಿಸಿಕೊಳ್ಳುವರು ಅಥವಾ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಶಿಕ್ಷಣ ಪಡೆದವರನ್ನು ನೇಮಿಸಿ ಕೊಳ್ಳುವರು.

ಲೈಸಿಯಮ್‍ಗಳಲ್ಲಿ (ಅಕಾಡೆಮಿ) ಅಧ್ಯಾಪಕರಾಗ ಬಯಸುವವರು ವಿಶ್ವವಿದ್ಯಾಲಯದಲ್ಲಿ ಮೂರುವರ್ಷ ವ್ಯಾಸಂಗಮಾಡಿ ಪದವಿ ಪಡೆದ ಅನಂತರ ಒಂದು ವರ್ಷ ಪ್ರಾದೇಶಿಕಶಿಕ್ಷಣ ಕೇಂದ್ರದಲ್ಲಿ ಅಭ್ಯಾಸಾರ್ಥ ಪಾಠ ಬೋಧನೆಯನ್ನು ಒಳಗೊಂಡಂತೆ ವೃತ್ತಿ ಶಿಕ್ಷಣ ಪಡೆಯುವರು. ಪ್ರಶಿಕ್ಷಣಾರ್ಥಿಗಳು ಅಲ್ಲಿನ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಬೋಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಚರ್ಚಿಸುವರು. ಬೋಧನ ಕ್ರಮ ಮನಶ್ಯಾಸ್ತ್ರ ಮುಂತಾದ ಶೈಕ್ಷಣಿಕ ವಿಷಯಗಳನ್ನು ವ್ಯಾಸಂಗ ಮಾಡುವರು. ಅವರಲ್ಲಿ ಸುಮಾರು 20% ರಷ್ಟು ಮತ್ತೊಂದು ವರ್ಷದ ಪ್ರಶಿಕ್ಷಣ ಪಡೆದು ಪರೀಕ್ಷೆಯೊಂದಕ್ಕೆ ಕೂಡುವರು. ಅದರಲ್ಲಿ ಉತ್ತೀರ್ಣರಾದವರಿಗೆ ವೃತ್ತಿಯಲ್ಲಿ ಹೆಚ್ಚಿನವೇತನ, ಸ್ಥಾನಮಾನ ದೊರಕುವುವು.

ಫ್ರೆಂಚ್ ಶಿಕ್ಷಣ ಪದ್ಧತಿಯಲ್ಲಿ ಅನುಸರಿಸಬೇಕಾದ ಬೋಧನಕ್ರಮದ ಬಗ್ಗೆ ಶಿಶು ವಿಹಾರಗಳಲ್ಲಿ ಮಾತ್ರ ಸ್ವಾತಂತ್ರ್ಯವುಂಟು. ಕೇಂದ್ರ ಸಚಿವಾಲಯ ಅಧ್ಯಾಪಕರಿಗೆ ಸ್ಥೂಲವಾದ ಕೆಲವು ನೀತಿನಿರ್ದೇಶನಗಳನ್ನು ಮಾತ್ರ ನೀಡುತ್ತದೆ. ಮಕ್ಕಳ ವ್ಯಕ್ತಿತ್ವಕ್ಕೆ ಗೌರವ, ಚಟುವಟಿಕೆಯ ಕಾರ್ಯ ವಿಧಾನ, ಕ್ರಿಯಾತ್ಮಕ ಇಂದ್ರಿಯ ಚಟುವಟಿಕೆಗಳ ಮೂಲಕ ಬೌದ್ಧಿಕ ಬೆಳೆವಣಿಗೆ, ಅಭಿವ್ಯಕ್ತಿಗೆ ವ್ಯಾಪಕ ಅವಕಾಶ, ಸಾಮಾಜಿಕ ಸನ್ನಿವೇಶದಲ್ಲಿ ಸಾಮಾಜಿಕ ಗುಣಶೀಲಗಳ ಬೆಳವಣಿಗೆ, ಆಟದ ಮೂಲಕ ದೈಹಿಕ ಶಿಕ್ಷಣ, ಸ್ವತಂತ್ರ ಮತ್ತು ನಿಯಂತ್ರಿತ ಪರಿಶೀಲನೆಗೆ ಅವಕಾಶ, ಸ್ವಾತಂತ್ರ್ಯದ ಸನ್ನಿವೇಶದಲ್ಲಿ ಶಿಸ್ತಿನ ಬೆಳವಣಿಗೆ-ಇವು ಆ ನೀತಿ ನಿರೂಪಣೆಯ ಮುಖ್ಯಾಂಶಗಳು.

ಪ್ರಾಥಮಿಕ ಶಾಲಾ ಬೋಧನ ಕ್ರಮ ಕೇಂದ್ರ ಸಚಿವಾಲಯ ನಿರ್ದೇಶಿಸುವ ರೀತಿಯಲ್ಲಿರುತ್ತದೆ. ತನಿಖಾಧಿಕಾರಿಗಳು ಅವರು ಅದನ್ನು ಅನುಸರಿಸುವ ಬಗ್ಗೆ ಪರೀಕ್ಷಿಸಿ ವರದಿ ಮಾಡುತ್ತಾರೆ. ಅಧ್ಯಾಪಕರು ಟಿಪ್ಪಣಿ ಬರೆಯಿಸಿ ವಿದ್ಯಾರ್ಥಿಗಳು ಹೃದ್ಗತ ಮಾಡಲು ಪ್ರೋತ್ಸಾಹಿಸುತ್ತಾರೆ. ತರಗತಿಯಲ್ಲಿ ಪ್ರಶ್ನೆ ಕೇಳಿ ಉತ್ತರ ಹೇಳಿಸುತ್ತಾರೆ. ಕೆಲವು ಪ್ರಗತಿಪರ ಶಾಲೆಗಳಲ್ಲಿ ವಿದ್ಯಾರ್ಥಿ ಚಟುವಟಿಕೆಗಳಿಗೂ ಸ್ವತಂತ್ರ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಿರುವರು. ಪ್ರವಾಸ ನಾಟಕ ಚರ್ಚೆ ಉದ್ಯಮ ಕಾರ್ಯಾಚರಣೆ-ಇವುಗಳಲ್ಲಿ ವಿದ್ಯಾರ್ಥಿಗಳು ಪಾತ್ರ ವಹಿಸುವರು.

ಪ್ರೌಢಶಾಲೆಗಳಲ್ಲಿ ಬೋಧನಕ್ರಮ ಬಹುಮಟ್ಟಿಗೆ ಉಪನ್ಯಾಸದ ಸ್ವರೂಪದಲ್ಲಿರುತ್ತದೆ. ಅಧ್ಯಾಪಕರು ಸೂಚಿಸಿದ ಪಠ್ಯಭಾಗಗಳನ್ನು ವಿದ್ಯಾರ್ಥಿಗಳು ಹೃದ್ಗತ ಮಾಡಿಕೊಳ್ಳುತ್ತಾರೆ.

ಈಚೆಗೆ ದೇಶದ ಕೆಲವೆಡೆ ಪ್ರಾಯೋಗಿಕ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿ ಪ್ರಚಾರಕ್ಕೆ ಬರುತ್ತಿರುವ ಕೆಲವು ನೂತನ ವಿಧಾನಗಳನ್ನು ಅನುಸರಿಸುವ ಯತ್ನ ನಡೆಯುತ್ತಿದೆ. ಆದರೆ ಅಂಥ ಪ್ರಾಯೋಗಿಕ ಶಾಲೆಗಳ ಸಂಖ್ಯೆ ತೀರ ಕಡಿಮೆ. ಜೊತೆಗೆ ಸಾಂಪ್ರದಾಯಿಕ ಬೋಧನ ಕ್ರಮಕ್ಕೆ ಅಧ್ಯಾಪಕರು ಅಂಟಿಕೊಂಡಿರುವುದು ಕಂಡುಬರುತ್ತದೆ.

ಪ್ರಾಥಮಿಕ ಶಾಲಾ ಪಠ್ಯಕ್ರಮ ಯೂರೋಪಿನ ಇತರ ದೇಶಗಳಲ್ಲಿರುವಂತೆಯೇ ಇದೆ. ಆದರೆ ಫ್ರೆಂಚ್ ಭಾಷೆಯ ವ್ಯಾಸಂಗಕ್ಕೆ ಹೆಚ್ಚು ಕಾಲವನ್ನು ಕೊಡಲಾಗಿದೆ. ಈಚೆಗೆ 10ನೆಯ ವಯಸ್ಸಿನಲ್ಲಿ ಇಂಗ್ಲಿಷ್ ಭಾಷೆಯ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಲಾಗಿದೆ. ಚರಿತ್ರೆ ಭೂವಿವರಣೆಗಳಿಗೆ ತೀರ ಕಡಿಮೆ ಕಾಲ ಒದಗಿಸಿದೆ. ಗಣಿತ ಬರವಣಿಗೆ ವಿಜ್ಞಾನ ನೀತಿಪಾಠ ಸಂಗೀತ ದೈಹಿಕಶಿಕ್ಷಣ ಚಿತ್ರ ಲೇಖನ-ಇವು ಇತರ ವ್ಯಾಸಂಗ ವಿಷಯಗಳು. ಖಾಸಗಿ ಶಿಕ್ಷಣಶಾಲೆಗಳಲ್ಲೂ ಪಠ್ಯ ಕ್ರಮ ಇದೇ ಮಾದರಿಯಲ್ಲಿದ್ದರೂ ರೋಮನ್ ಕ್ಯಾತೊಲಿಕ್ ವಿಚಾರಗಳಿಗೆ ಸಾಧ್ಯವಾದೆಡೆಗಳಲ್ಲೆಲ್ಲ ಸಂಬಂಧ ಕಲ್ಪಿಸಲಾಗಿದೆ.

ಪ್ರೌಢಶಾಲೆಗಳಲ್ಲಿ ಅಕಾಡೆಮಿಕ್ ಮತ್ತು ಮಾಡರ್ನ್ ವರ್ಗಗಳ ವ್ಯಾಸಂಗ ವಿಷಯದಲ್ಲಿ ವ್ಯತ್ಯಾಸ ಕಲ್ಪಿಸಲಾಗಿದೆ. ಅಕಾಡೆಮಿಕ್ ವರ್ಗದವರು ಒಂದು ವಿಶಾಲ ಗುಂಪಿನ ವಿಷಯಗಳನ್ನು ಆರಿಸಿಕೊಂಡು ಒಂದು ವಿಷಯವನ್ನು ಆಳವಾಗಿ ವ್ಯಾಸಂಗ ಮಾಡುವರು. ಲ್ಯಾಟಿನ್ ಹಿಂದೆ ಕಡ್ಡಾಯವಾಗಿತ್ತು. ಈಗ ಐಚ್ಛಿಕ ವಿಷಯವಾಗಿದೆ. ಚರಿತ್ರೆ ಭೂವಿವರಣೆ ವಿಜ್ಞಾನ ಗಣಿತ ಕಲೆ ಸಂಗೀತ ದೈಹಿಕ ಶಿಕ್ಷಣ ಫ್ರೆಂಚ್ ಇಂಗ್ಲಿಷ್―ಇವು ಸರ್ವಸಾಮಾನ್ಯ ವ್ಯಾಸಂಗ ವಿಷಯಗಳು. ಮಾಡರ್ನ್ ವರ್ಗದ ವಿದ್ಯಾರ್ಥಿಗಳು 15ನೆಯ ವಯಸ್ಸಿನ ಅನಂತರ ಶಾಲೆ ಬಿಡುವುದರಿಂದ ಮೇಲಿನ ಸಾಮಾನ್ಯ ವಿಷಯಗಳ ವ್ಯಾಸಂಗ ಇದ್ದರೂ ಅವರು ಯಾವ ವಿಷಯವನ್ನೂ ಆಳವಾಗಿ ವ್ಯಾಸಂಗ ಮಾಡುವ ನಿಯಮವಿಲ್ಲ.

ಫ್ರಾನ್ಸಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಶಾಸ್ತ್ರಗಳು ಮಾನವಿಕ ಶಾಸ್ತ್ರಗಳು ನ್ಯಾಯಶಾಸ್ತ್ರ ಅರ್ಥಶಾಸ್ತ್ರ ವೈದ್ಯಶಾಸ್ತ್ರ ಔಷಧಿ ನಿರ್ಮಾಣಶಾಸ್ತ್ರ ಮುಂತಾದ ಜ್ಞಾನ ಶಾಖಾವಿಭಾಗಗಳಿವೆ. ವಿದ್ಯಾರ್ಥಿಗಳು ಇವುಗಳಲ್ಲಿ ಯಾವುದಾದರೂ ವಿಭಾಗಕ್ಕೆ ಸೇರಿಕೊಂಡು ಒಂದು ವಿಷಯವನ್ನು ವ್ಯಾಸಂಗಕ್ಕೆ ಆರಿಸಿಕೊಳ್ಳುವರು. ಮೂರು ವರ್ಷದ ವ್ಯಾಸಂಗದ ಅನಂತರ ಪ್ರಥಮ ಪದವಿ ಪಡೆಯುವರು. ಮತ್ತೊಂದು ವರ್ಷದ ವ್ಯಾಸಂಗದ ಅನಂತರ ಮಾಸ್ಟರ್ ಪದವಿಯನ್ನೂ ಆ ಮೇಲೆ ಡಾಕ್ಟರ್ ಪದವಿ ಪಡೆಯವರು. ಎರಡು ಮೂರು ವರ್ಷಗಳ ವ್ಯಾಸಂಗಾನಂತರ ಸರ್ಕಾರದ ಸೇವಾಶಾಖೆಗಳು ನಡೆಸುವ ಮಹಾವಿದ್ಯಾಲಯಗಳಲ್ಲಿ ಎರಡು ವರ್ಷದ ವ್ಯಾಸಂಗದ ಅನಂತರ ಬ್ಯಾಚುಲರ್ ಪದವಿಗೆ ಸಮನಾದ ಪದವಿಯನ್ನು ನೀಡಲಾಗುವುದು.

ಹಿಂದಿನಿಂದಲೂ ಫ್ರೆಂಚರು ಜ್ಞಾನ, ಸಾಹಿತ್ಯ, ಸಂಸ್ಕೃತಿಗಳ ಪ್ರೇಮಿಗಳು. ಆದರೂ ಬಹುಪಾಲು ಜನತೆ ಕೇವಲ ೮-೧೦ ವರ್ಷಗಳ ಶಿಕ್ಷಣವನ್ನು ಮಾತ್ರ ಪಡೆದವರು. ಅವರ ಶಿಕ್ಷಣದ ಮಟ್ಟವನ್ನು ಹೆಚ್ಚಿಸಲು ತಕ್ಕಷ್ಟು ಸಂಜೆಯ ತರಗತಿ, ಅಲ್ಪ ಕಾಲದ ತರಗತಿ ಉಪನ್ಯಾಸಮಾಲೆ ಅಂಚೆ ಶಿಕ್ಷಣ ಪ್ರಸಾರಶಿಕ್ಷಣ ಮುಂತಾದವನ್ನು ಹೆಚ್ಚಿಸುವ ಯತ್ನ ನಡೆದಿದ್ದರೂ ತಕ್ಕಷ್ಟು ಯಶಸ್ಸು ಕಂಡಿಲ್ಲ. ಆದ್ದರಿಂದ ಜನಜೀವನದಲ್ಲಿ ಸಂಸ್ಕೃತ ಅಸಂಸ್ಕೃತ ಎಂಬ ವರ್ಗಭೇದ ಹೆಚ್ಚಿಕೊಳ್ಳುತ್ತಿದೆ. ವೃತ್ತಿಶಿಕ್ಷಣದಲ್ಲಿ ಜನತೆಗೆ ಅಷ್ಟಾಗಿ ಆಸಕ್ತಿಯಿಲ್ಲ. ಸಾಂಸ್ಕೃತಿಕ ಶಿಕ್ಷಣಕ್ಕೆ ನೀಡಿರುವ ಹೆಚ್ಚಿನ ಸ್ಥಾನಮಾನಗಳೇ ಇದಕ್ಕೆ ಕಾರಣ. ೧೯೫೦ ರಿಂದೀಚೆಗೆ ಜನತೆಯಲ್ಲಿ ವೃತ್ತಿ ಶಿಕ್ಷಣದ ಒಲವನ್ನು ಬೆಳೆಸಲು ಅದರ ಸ್ಥಾನವನ್ನು ಸಾಂಸ್ಕೃತಿಕ ಶಿಕ್ಷಣದೊಡನೆ ಸಮೀಕರಿಸಲಾಗಿದೆ. ಆದರೂ ಜನತೆಯಲ್ಲಿ ಉದ್ಯೋಗ ಶಿಕ್ಷಣದ ಬಗ್ಗೆ ತಕ್ಕಷ್ಟು ಒಲವು ಮೂಡಿಲ್ಲ. ಜೊತೆಗೆ ದೇಶದಲ್ಲಿ ಉದ್ಯೋಗ ಮತ್ತು ವೃತ್ತಿಶಿಕ್ಷಣದ ಸೌಲಭ್ಯವೂ ಸಾಕಷ್ಟು ವಿಸ್ತರಿಸಿಲ್ಲ.

ಫ್ರಾನ್ಸಿನ ಪ್ರೌಢಶಿಕ್ಷಣ ಬಹುಮಟ್ಟಿಗೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಉತ್ತೀರ್ಣಮಾಡಿಸುವ ಗುರಿಯನ್ನು ಪ್ರಧಾನವಾಗಿ ಹೊಂದಿದ್ದು ಸಾಂಪ್ರದಾಯಕ ವಿಧಾನವನ್ನು ಅನುಸರಿಸುತ್ತಿವೆಯೇ ಹೊರತು ನಿಜವಾಗಿ ಕಲಿವಿಗೆ ಯುಕ್ತವೆನಿಸುವ ವಿಧಾನಗಳನ್ನು ಅನುಸರಿಸುತ್ತಿಲ್ಲ. ಈಚೆಗೆ ಪರೀಕ್ಷೆಯ ಪ್ರಾಬಲ್ಯವನ್ನು ಕಡಿಮೆ ಮಾಡಿ ಅಲ್ಲಿನ ಶಿಕ್ಷಣದ ಸ್ವರೂಪವನ್ನು ಮಾರ್ಪಡಿಸುವ ಯತ್ನ ನಡೆಯುತ್ತಿದೆ. ಹಾಗೂ ಪ್ರೌಢಶಾಲೆಯ ಕೊನೆಯ ತರಗತಿಗಳಲ್ಲಿ ಆಧುನಿಕ ತಾಂತ್ರಿಕ ವಿಜ್ಞಾನ ವಿಷಯಗಳನ್ನು ವ್ಯಾಸಂಗ ವಿಷಯಗಳನ್ನಾಗಿ ಅಳವಡಿಸಲಾಗುತ್ತಿದೆ.

ಉನ್ನತಶಿಕ್ಷಣಕ್ಕೆ ಹೋಗತಕ್ಕವರ ಸಂಖ್ಯೆ ಕಡಿಮೆಯಿದ್ದು ಅದು ಕೆಲವು ಶ್ರೀಮಂತ ಕುಟುಂಬಗಳಿಗೆ ಮಾತ್ರ ಮೀಸಲಾಗಿದ್ದು ಜನತೆಯಲ್ಲಿ ಸಾಮಾಜಿಕ ಆರ್ಥಿಕ ಭೇದ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಲಾಗಿದೆ. ಇದರ ಫಲವಾಗಿ ಶಿಕ್ಷಣದ ಮಟ್ಟ ಇಳಿಮುಖವಾಗಿದೆ. ಅಲ್ಲಿಗೆ ಬರತಕ್ಕ ಪ್ರೌಢಶಾಲಾ ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಹೆಚ್ಚಬೇಕೆಂಬ ಕೂಗು ಕೇಳಿಬರುತ್ತಿದೆ. ಜೊತೆಗೆ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾಯತ್ತತೆಬೇಕೆಂದೂ ಅದರ ಆಡಳಿತ ಮಂಡಲಿಗಳಲ್ಲಿ ವಿದ್ಯಾರ್ಥಿಗಳಿಗೆ ಸದಸ್ಯತ್ವವಿರಬೇಕೆಂದೂ ಚಳವಳಿ ನಡೆದಿದೆ. ಆದರೆ ಸುಧಾರಣೆಗಳನ್ನು ಆಚರಣೆಗೆ ತರುವುದು ಕಷ್ಟವಾಗುತ್ತಿದೆ. ಇಂದಿಗೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಹಿಂದಿನ ಫ್ರೆಂಚ್ ವಸಾಹತುಗಳು ಸ್ವತಂತ್ರವಾಗಿದ್ದರೂ ಫ್ರೆಂಚ್ ಶಿಕ್ಷಣ ಪದ್ಧತಿಯನ್ನೇ ಅನುಸರಿಸುತ್ತಿವೆ. ಆ ದೇಶಗಳೂ ಫ್ರಾನ್ಸಿನ ಶಿಕ್ಷಣದಲ್ಲಾಗಬಹುದಾದ ಸುಧಾರಣೆಗಳನ್ನು ಕಾದು ನೋಡುತ್ತಿವೆ.

ಉಲ್ಲೇಖಗಳು

ಬದಲಾಯಿಸಿ
 1. "France". UNGEGN World Geographical Names. New York, NY: United Nations Group of Experts on Geographical Names. Retrieved 27 November 2020.
 2. "Europa Official Site – France". EU. Retrieved 28 October 2014.
 3. Jack S. Levy, War in the Modern Great Power System, 1495–1975, (2014) p. 29
 4. "France posts new tourist record despite Yellow Vest unrest". France 24. 17 May 2019.
 5. "Mont Blanc shrinks by 45 cm (17.72 in) in two years". The Sydney Morning Herald. 6 November 2009. Retrieved 9 August 2010.
 6. "Naissances selon le pays de naissance des parents 2010". Insee. Archived from the original on 27 September 2013.
 7. "Évolution générale de la situation démographique, France" (in ಫ್ರೆಂಚ್). Insee. Retrieved 20 January 2011.
 8. "Observatoire du patrimoine religieux". 1 February 2012. Archived from the original on 26 November 2013. 94% des édifices sont catholiques (dont 50% églises paroissiales, 25% chapelles, 25% édifices appartenant au clergé régulier)
 9. (in French) La Constitution- La Constitution du 4 Octobre 1958 – Légifrance.
 10. "French: one of the world's main languages". About-france.com. Archived from the original on 16 May 2016. Retrieved 21 July 2011.
 11. Country profil: France, CIA World factbook
 12. "Why France's forests are getting bigger". The Economist. 18 July 2019. ISSN 0013-0613. Retrieved 20 August 2019.
 13. "BP Statistical Review of World Energy July 2021"".
 14. Electricity production, consumption and market overview, Eurostat
 15. "Country comparison :: roadways". The World Factbook. CIA. Archived from the original on 13 May 2012. Retrieved 29 July 2010.
 16. "Chiffres clés du transport Édition 2010" (PDF) (in ಫ್ರೆಂಚ್). Ministère de l'Écologie, de l'Énergie, du Développement Durable et de la Mer. Archived from the original (PDF) on 1 June 2010. Retrieved 7 October 2010.
 17. "Strikes block French ports". The Journal of Commerce Online. 23 April 2008. Archived from the original on 17 May 2008 – via BDP International.
 18. "Le quinquennat : le référendum du 24 Septembre 2000" [The 5-year term: referendum of 24 September 2000] (in ಫ್ರೆಂಚ್). Archived from the original on 12 August 2010.
 19. "The French National Assembly – Constitution of October 4, 1958". 13 March 2013. Archived from the original on 13 March 2013. Retrieved 27 August 2021.
 20. "The National Assembly and the Senate – General Characteristics of the Parliament". Assemblée Nationale. Archived from the original on 5 December 2008.
 21. "Election of deputies". Assemblée Nationale. Archived from the original on 4 July 2011.
 22. "The senatorial elections". Sénate. Archived from the original on 15 June 2011. Retrieved 30 July 2010.
 23. In European countries, legal doctrine has long faced the question of succession of criminal laws in time: Buonomo, Giampiero (2015). "La rivendicazione di Gallo". Mondoperaio Edizione Online.
 24. The World Health Report 2000: WHO
 25. "Population municipale 2019 – France par aire d'attraction des villes – Tableau". Insee. Retrieved 2022-08-11.
 26. "Cornelius Tacitus, The History, BOOK II, chapter 91". perseus.tufts.edu.
 27. Carpentier et al. 2000, pp. 84–88.
 28. "Treaty of Verdun". History.howstuffworks.com. 27 February 2008. Archived from the original on 16 July 2011. Retrieved 17 July 2011.
 29. "History of France – The Capetian kings of France: AD 987–1328". Historyworld.net. Archived from the original on 6 August 2011. Retrieved 21 July 2011.
 30. Guerard, Albert (1959). France: A Modern History. Ann Arbor: University of Michigan Press. pp. 100, 101.
 31. Blanning, Tim (April 1998). "Napoleon and German identity". History Today. Vol. 48. London.
 32. Kiernan, Ben (2007). Blood and Soil: A World History of Genocide and Extermination from Sparta to Darfur. Yale University Press. p. 374. ISBN 978-0-300-10098-3.
 33. Spencer C. Tucker, Priscilla Mary Roberts (2005). Encyclopedia Of World War I: A Political, Social, And Military History. ABC-CLIO. ISBN 978-1-85109-420-2
 34. Crozier, Brian; Mansell, Gerard (July 1960). "France and Algeria". International Affairs. 36 (3): 310–321. doi:10.2307/2610008. JSTOR 2610008. S2CID 153591784.
 35. Marie-Christine Weidmann-Koop, Rosalie Vermette, "France at the dawn of the twenty-first century, trends and transformations", p. 160
 36. Hinnant, Lori; Adamson, Thomas (11 January 2015). "Officials: Paris Unity Rally Largest in French History". Associated Press. Archived from the original on 11 January 2015. Retrieved 11 January 2015.; "Paris attacks: Millions rally for unity in France". BBC News. 12 January 2015. Retrieved 12 January 2015.
 37. "Lycée". Encyclopædia Britannica. Retrieved 22 July 2011.
 38. (in French) II. L'évolution du contenu de l'obligation scolaire. Sénat.fr
 39. (in French) 1881–1882 : Lois Ferry École publique gratuite, laïque et obligatoire. Assemblé Nationale

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: