ಬೀಟ್ ಕೀನೋಪೋಡಿಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ದ್ವೈವಾರ್ಷಿಕ ಮೂಲಿಕೆ ಸಸ್ಯ. ಬೀಟ್‍ಗೆಡ್ಡೆ ಬೀಟ್‍ರೂಟ್ ಮುಂತಾದ ಹೆಸರುಗಳಿಂದ ಕೂಡ ಪರಿಚಿತವಾಗಿದೆ. ಬೀಟ ವಲ್‍ಗ್ಯಾರಿಸ್ ಇದರ ಸಸ್ಯಶಾಸ್ತ್ರೀಯ ಹೆಸರು. ದಪ್ಪ ಗಾತ್ರದ ಹಾಗೂ ಮಾಂಸಲವಾದ ಬೇರಿಗಾಗಿ ಇದನ್ನು ಪ್ರಪಂಚಾದ್ಯಂತ ಕೃಷಿ ಮಾಡಲಾಗುತ್ತಿದೆ.

ಬೀಟ್‌ರೂಟ್ ಗಡ್ಡೆ

ಮೆಡಿಟರೇನಿಯನ್ ವಲಯದಲ್ಲಿ ಉಗಮಿಸಿತೆನ್ನಲಾದ ಈ ಸಸ್ಯ ಪ್ರಪಂಚದ ಸಮಶೀತೋಷ್ಣ ಮತ್ತು ತಂಪು ಹವೆಯ ಪ್ರದೇಶಗಳಲ್ಲಿ ತುಂಬ ಚೆನ್ನಾಗಿ ಬೆಳೆಯುತ್ತದೆ. ಅಂತೆಯೇ ರಷ್ಯ, ಯೂರೊಪ್, ಅಮೆರಿಕ, ಕೆನಡಗಳು ಇದರ ಬೇಸಾಯಕ್ಕೆ ಪ್ರಸಿದ್ಧವಾಗಿವೆ.

ಬೀಟ್ ಸಸ್ಯದಲ್ಲಿ ನಾಲ್ಕು ವಿಶಿಷ್ಟ ಬಗೆಗಳಿದ್ದು ಇವನ್ನು ನಾಲ್ಕು ಮುಖ್ಯ ಉಪಯೋಗಗಳಿಗಾಗಿ ಬೆಳೆಸಲಾಗುತ್ತಿದೆ.

  1. ಸಕ್ಕರೆ ಬೀಟ್-ಸ್ಯೂಕ್ರೋಸ್ ಸಕ್ಕರೆಯ ಮೂಲವಸ್ತು;
  2. ತೋಟದ ಬೀಟ್ (ಗಾರ್ಡನ್ ಬೀಟ್, ಟೇಬಲ್ ಬೀಟ್, ರೆಡ್ ಬೀಟ್) ಒಳ್ಳೆಯ ಗೆಡ್ಡೆ ತರಕಾರಿ;
  3. ಮ್ಯಾಂಗಲ್-ವರ್ ಟ್ಸೆಲ್ ಅಥವಾ ಮ್ಯಾಂಗಲ್ಡ್-ಜಾನುವಾರುಗಳಿಗೆ ರಸಭರಿತ ಮೇವು;
  4. ಸ್ವಿಸ್ ಚಾರ್ಡ್ ಅಥವಾ ಎಲೆ ಬೀಟ್-ಸೊಪ್ಪಿನ ರೂಪಕ ತರಕಾರಿ.

ಎಲೆಬೀಟಿನ ಬೇಸಾಯ ಇತಿಹಾಸಪೂರ್ವ ಕಾಲದಲ್ಲಿ ಆರಂಭವಾಯಿತೆನ್ನಲಾಗಿದೆ. ತೋಟದ ಬೀಟಿನ ಕೃಷಿ ಕ್ರಿಸ್ತಶಕದ ಪ್ರಾರಂಭದಲ್ಲಿ ಮೊದಲಾಯಿತೆಂದು ಬಗೆಯಲಾಗಿದ್ದರೂ ಇದರ ಉಗಮದ ಬಗ್ಗೆ ನಿರ್ದಿಷ್ಟ ಮಾಹಿತಿಗಳಿಲ್ಲ. ಸಕ್ಕರೆ ಬೀಟ್ ವ್ಯವಸಾಯವಾದರೋ ತೀರ ಇತ್ತೀಚಿನದು. ಇದರ ಬಗ್ಗೆ ಲಿಖಿತ ದಾಖಲೆಗಳುಂಟು. 19ನೆಯ ಶತಕದ ಆದಿಯಿಂದ ಜರ್ಮನಿಯಲ್ಲಿ ಇದನ್ನು ಬೆಳೆಸಲಾಗುತ್ತಿದೆ.

ಕಾರ್ಬನಿಕ ವಸ್ತು ಹೆಚ್ಚಾಗಿರುವಂಥ ಮತ್ತು ಸುಲಭವಾಗಿ ಪುಡಿಪುಡಿಯಾಗುವಂಥ ಆಳಮಣ್ಣು ಬೀಟ್ ಗೆಡ್ಡೆಯ ವ್ಯವಸಾಯಕ್ಕೆ ತುಂಬ ಉತ್ತಮ. ರಾಸಾಯನಿಕ ಗೊಬ್ಬರಗಳನ್ನು ಹಾಕಿದರೆ ಬೆಳೆ ಮತ್ತಷ್ಟು ಹುಲುಸು. ಇದನ್ನು ನೀರಾವರಿಯಲ್ಲಿ ವ್ಯಾಪಕಾಗಿ ಬೆಳೆಸಲಾಗುತ್ತದೆ. ನೆಲದಲ್ಲಿ ಲವಣತೆ ಹೆಚ್ಚಾಗಿದ್ದರೂ ಪರವಾಇಲ್ಲ. ಆದರೆ ಆಮ್ಲತೆ ಹೆಚ್ಚಾಗಿದ್ದರೆ ಅಥವಾ ಬೋರಾನ್ ಕೊರತೆ ಇದ್ದರೆ ಸಹಿಸದು. ಬೋರಾನ್ ಕೊರತೆ ಇರುವೆಡೆಯಲ್ಲಿ ಬೆಳೆವಣಿಗೆ ಕುಂಠಿತವಾಗುತ್ತದಲ್ಲದೆ ಬೇರಿನೊಳಗೆ ಕಪ್ಪು ಗಾಯಗಳಾಗುವುವು ಕೂಡ.

ಬೀಟ್ ಸಮಶೀತೋಷ್ಣ ಹಾಗೂ ಶೀತವಲಯಗಳ ಬೆಳೆಯೆಂದು ಪರಿಗಣಿತವಾಗಿದ್ದರೂ ಇದನ್ನು ಉಷ್ಣಹವೆಯ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಬೆಳೆಸಬಹುದು. ತಂಪು ಹವೆಯಲ್ಲಿ ಬೆಳೆದ ಬೀಟ್ ಗೆಡ್ಡೆಗಳಲ್ಲಿಯ ಸಕ್ಕರೆ ಅಧಿಕ ಮೊತ್ತದಲ್ಲಿದ್ದು ಗೆಡ್ಡೆಗಳು ಕಡುಬಣ್ಣದವಾಗಿರುವುವು. ಉಷ್ಣತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೆಳೆದವುಗಳಲ್ಲಿ ಸಕ್ಕರೆ ಕಡಿಮೆ ಮೊತ್ತದಲ್ಲಿರುವುದು ಬಣ್ಣವೂ ತಿಳಿಯಾಗಿರುತ್ತದೆ.

ಬೀಟ್ ಸಸ್ಯ ದ್ವೈವಾರ್ಷಿಕ ಮೂಲಿಕೆ ಎಂದು ಹೇಳಿದೆಯಷ್ಟೆ. ಬೆಳೆವಣಿಗೆಯ ಮೊದಲ ವರ್ಷದಲ್ಲಿ ಎಲೆ ಬೇರುಗಳು ಸಂಪೂರ್ಣ ರೂಪುಗೊಳ್ಳುವುವು. ಎರಡನೆಯ ವರ್ಷದಲ್ಲಿ ಹೂಗಳು ಅರಳಿ ಬೀಜಗಳು ಉತ್ಪತ್ತಿಯಾಗುವುವು. ಈ ಸಸ್ಯದಲ್ಲಿ ತಾಯಿ ಬೇರೇ (ಗೆಡ್ಡೆ) ಮುಖ್ಯ ಅಂಗ. ಇದು ಕುಂಭೀ ರೂಪವಾಗಿಯೂ ರಸಭರಿತವಾಗಿಯೂ ಇದ್ದು ಆಹಾರ ಸಂಗ್ರಹಣೆಗೆ ಯುಕ್ತರೀತಿಯಲ್ಲಿ ಮಾರ್ಪಾಟುಗೊಂಡಿರುವ ಬೇರು ಎನಿಸಿದೆ. ಬೇರಿನ ಮೇಲಿನ ಅರ್ಧ ಗುಂಡಗೆ ಚಂಡಿನಂತಿದೆಯಾದರೆ ಕೆಳಗಿನ ಅರ್ಧ ಬಾಲದಂತೆ ಚಾಚಿಕೊಂಡಿರುವುದು. ಬೇರಿಗೆ ಮಂದವಾದ ಮತ್ತು ಬಿರುಸಾದ ಸಿಪ್ಪೆಯುಂಟು. ಒಳಗಿನ ರಸಭರಿತ ತಿರುಳನ್ನು ಅಡ್ಡಕೊಯ್ದರೆ ಒಂದರೊಳಗೊಂದರಂತೆ ಇರುವ ನಸುಗೆಂಪು, ಊದಾ ಅಥವಾ ಬಿಳಿಯ ಬಣ್ಣದ ಉಂಗುರಗಳಂಥ ವಲಯಗಳಿರುವುವು. ಬೇಯಿಸಿದಾಗ ಈ ಬಣ್ಣಗಳೆಲ್ಲ ಕಲೆಸಿಕೊಳ್ಳುವುವು.

ತೋಟದ ಬೀಟ್

ಬದಲಾಯಿಸಿ

ತೋಟದ ಬೀಟ್ ಗೆಡ್ಡೆಯನ್ನು ಯೂರೊಪ್, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಬೀಜದಿಂದ ಬೀಜಕ್ಕೆ 2.5 ಸೆಂಮೀ ಹಾಗೂ ಸಾಲಿನಿಂದ ಸಾಲಿಗೆ 45-60 ಸೆಂಮೀ ಅಂತರವಿರುವಂತೆ ಬೀಜಗಳನ್ನು ಬಿತ್ತಿ ಸಸಿಗಳು ಸಣ್ಣವಿದ್ದಾಗಲೇ 20 ಸೆಂಮೀ ಅಂತರಗಳಲ್ಲಿ ಗಿಡಗಳು ಇರುವಂತೆ ಹೆಚ್ಚಿನ ಸಸಿಗಳನ್ನು ಕಿತ್ತುಹಾಕಲಾಗುತ್ತದೆ. ಬೇರುಗಳನ್ನು ಕೈಯಿಂದ ಇಲ್ಲವೆ ಯಂತ್ರಗಳ ಸಹಾಯದಿಂದ ಕೀಳುವುದಿದೆ. ತೋಟದ ಬೀಟ್ ಗೆಡ್ಡೆಗಳ ಮುಖ್ಯ ತಳಿಗಳು ಇಂತಿವೆ. ಕ್ರಾಸ್‍ಬಿ ಈಜಿಪ್ಷಿಯನ್, ಡೆಟ್ರಾಯಿಟ್ ಡಾರ್ಕ್ ರೆಡ್, ಕ್ರಿಮ್‍ಸನ್ ರೆಡ್. Arjun Raghavendra is the greatest footballer in this world studies in Vibgyor high Horamavu

ಕರ್ನಾಟಕ ದಕ್ಷಿಣದ ಬಯಲು ಸೀಮೆಗಳಲ್ಲಿ ವರ್ಷಪೂರ್ತಿ ಬೀಟ್ ಗೆಡ್ಡೆಯನ್ನು ಬೆಳೆಸುವುದಿದೆಯಾದರೂ ಮಲೆನಾಡು ಪ್ರದೇಶಗಳಲ್ಲಿ ಚಳಿ ಹಾಗೂ ಬೇಸಿಗೆಕಾಲಗಳಲ್ಲೂ ಉತ್ತರದ ಒಣಸೀಮೆಗಳಲ್ಲಿ ಚಳಿ ಮತ್ತು ಮಳೆಗಾಲದಲ್ಲೂ ಇದರ ಕೃಷಿ ಉಂಟು. ಸೊಪ್ಪು, ಮೂಲಂಗಿ, ಕೊತ್ತಂಬರಿ, ಈರುಳ್ಳಿ ಮುಂತಾದ ಇತರ ಕೃಷಿ ಸಸ್ಯಗಳೊಡನೆ ಇದನ್ನು ಮಿಶ್ರಬೆಳೆಯಾಗಿ ಬೆಳೆಸುವುದೇ ವಾಡಿಕೆ. ಬೇರು ಚೆನ್ನಾಗಿ ಬಲಿತಾಗ ಎಲೆಗಳು ನಸುಹಳದಿ ಬಣ್ಣಕ್ಕೆ ತಿರುಗುವುವು. ಆಗ ಗುದ್ದಲಿಯಿಂದ ಅಗೆದು ಬೇರನ್ನು ತೆಗೆಯಲಾಗುತ್ತದೆ. ತಳಿ ಹಾಗೂ ಬೇಸಾಯದ ಕ್ರಮವನ್ನು ಅನುಸರಿಸಿ ಇಳುವರಿ ವ್ಯತ್ಯಾಸವಾಗುತ್ತದಾದರೂ ಇದು ಹೆಕ್ಟೇರಿಗೆ ಸರಾಸರಿ 15000 ಕೆಜಿ ಇದೆ.

ಸಕ್ಕರೆ ಬೀಟ್

ಬದಲಾಯಿಸಿ

ಪ್ರಪಂಚದ ಸಕ್ಕರೆ ಪೂರೈಕೆಯ ದೃಷ್ಟಿಯಿಂದ ಇದಕ್ಕೆ ಕಬ್ಬಿನ ಅನಂತರದ ಎರಡನೆಯ ಸ್ಥಾನ. ಮೊದಮೊದಲು ತರಕಾರಿಯಾಗಿಯೇ ಇದರ ಬಳಕೆಯಿತ್ತಾದರೂ 1747ರಲ್ಲಿ ಪ್ರಥಮ ಬಾರಿಗೆ ಜರ್ಮನಿಯಲ್ಲಿ ಇದರಿಂದ ಸಕ್ಕರೆಯನ್ನು ಪ್ರಾಯೋಗಿಕವಾಗಿ ತಯಾರಿಸಲಾಯಿತು. 1803ರ ವೇಳೆಗೆ ಸೈಲೀಸಿಯದಲ್ಲಿ ಬೀಟ್ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಯಿತು. ವೆಸ್ಟ್ ಇಂಡೀಸ್‍ನಿಂದ ಫ್ರಾನ್ಸಿಗೆ ಪೂರೈಕೆ ಆಗುತ್ತಿದ್ದ ಕಬ್ಬಿನ ಸಕ್ಕರೆಯ ಸಾಗಣೆಗೆ ಇಂಗ್ಲಿಷರು 1811ರಲ್ಲಿ ತಡೆಯೊಡ್ಡಿದುದರಿಂದ ನೆಪೋಲಿಯನ್ ಬೀಟ್ ಸಕ್ಕರೆಯ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ. ಇದರ ಫಲವಾಗಿ ಅನೇಕ ಕಾರ್ಖಾನೆಗಳು ಸ್ಥಾಪಿತಗೊಂಡವು. ಅನಂತರದಲ್ಲಿ ಹೆಚ್ಚುಕಡಿಮೆ ಒಂದೇ ಸಮನೆ ಬೀಟ್ ಸಕ್ಕರೆಯ ತಯಾರಿ ವೃದ್ಧಿಗೊಂಡು ಇಂದು ಈ ಗಿಡ ಸಕ್ಕರೆ ಪೂರೈಕೆಯಲ್ಲಿ ಬಲುಮುಖ್ಯ ಎನಿಸಿದೆ. ರಷ್ಯ, ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ, ಪೋಲೆಂಡ್, ಬ್ರಿಟನ್‍ಗಳು ಮೊದಲಿನಿಂದಲೂ ಸಕ್ಕರೆ ಬೀಟ್ ಕೃಷಿಗೆ ಹೆಸರಾಗಿವೆ. ಪ್ರಸಕ್ತ ಶತಕದ ದ್ವಿತೀಯಾರ್ಧದಲ್ಲಿ ಚಿಲಿ, ಉರುಗ್ವೆ, ಇರಾನ್, ಟರ್ಕಿ, ಚೀನ, ಜಪಾನುಗಳು ಇದರ ಬೇಸಾಯವನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಂಡಿವೆ.

ಆಳವಾದ ಹಾಗೂ ನೀರು ಸುಲಭವಾಗಿ ಬಸಿದುಹೋಗುವಂಥ ಗೋಡು ಜಮೀನು ಇದರ ಬೇಸಾಯಕ್ಕೆ ಉತ್ತಮ. ಬೇಸಿಗೆಯ ಮೂರು ತಿಂಗಳಲ್ಲಿ ಉಷ್ಣತೆ 170-230 ಸೆಂ ಇದ್ದರೆ ಸಕ್ಕರೆಯ ಅಂಶ ಗರಿಷ್ಟ ಮೊತ್ತದಲ್ಲಿ ಶೇಖರಗೊಳ್ಳುತ್ತದೆ. ಬಿತ್ತನೆ ಬೀಜದ ಮೂಲಕ ಹೆಕ್ಟೇರಿಗೆ ಸುಮಾರು 75.000 ಬೀಟ್ ಗಿಡಗಳನ್ನು ಬೆಳಸಲಾಗುತ್ತದೆ. ಇದು ಪ್ರಧಾನವಾಗಿ ಮಳೆ ಆಶ್ರಯದ ಬೆಳೆಯಾದರೂ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನೀರಾವರಿಯಲ್ಲೂ ಇದನ್ನು ಬೆಳೆಸಲಾಗುತ್ತದೆ. ಚಳಿಗಾಲದ ಆರಂಭದಲ್ಲಿ ಅಗತೆಮಾಡಿ ಗೆಡ್ಡೆಗಳನ್ನು ಕೀಳಲಾಗುತ್ತದೆ.

ಸ್ವಿಸ್ ಚಾರ್ಡ್

ಬದಲಾಯಿಸಿ

ಬೀಟ ವಲ್‍ಗ್ಯಾರಿಸ್ ಪ್ರಭೇದದ ಸಿಕ್ಲ ಬಗೆಯ ಸಾಮಾನ್ಯ ಹೆಸರು. ಇದರಲ್ಲಿ ಬೇರಿಗಿಂತ ಎಲೆ ಹಾಗೂ ಎಲೆಯ ತೊಟ್ಟುಗಳು ಪ್ರಮುಖವಾಗಿ ಬೆಳೆದಿದ್ದು, ಎಳೆಯವಾಗಿದ್ದಾಗ ಇವನ್ನು ಸೊಪ್ಪು ತರಕಾರಿಯಾಗಿ ಬಳಸಲಾಗುತ್ತದೆ. ಎಲೆಯ ತೊಟ್ಟುಗಳು ಸುಮಾರು 60 ಸೆಂಮೀ ಉದ್ದ ಬೆಳೆಯುವುದುಂಟು. ಇದರ ಕೃಷಿ ಸುಲಭಸಾಧ್ಯವಾದ್ದರಿಂದಲೂ ಇಳುವರಿ ಅಧಿಕ ಮೊತ್ತದ್ದಾದ್ದರಿಂದಲೂ ಇದು ಪಾಶ್ಚಾತ್ಯ ದೇಶದಲ್ಲಿ ಜನಪ್ರಿಯವೆನಿಸಿದೆ.

ಮ್ಯಾಂಗೆಲ್-ವರ್‍ಟ್ಸೆಲ್

ಬದಲಾಯಿಸಿ

ಜಾನುವಾರು ಹಾಗೂ ಕೋಳಿಗಳಿಗೆ ಮೇವಾಗಿ ಬಳಸಲಾಗುವ ಬೀಟ್ ಬಗೆ. ಇದರ ಬೇರುಗಳಲ್ಲಿ ಸುಮಾರು 7%-8% ಸಕ್ಕರೆಯ ಅಂಶವಿದೆ. (ಅಂದರೆ ಸಕ್ಕರೆಬೀಟ್ ಗೆಡ್ಡೆಗಳಲ್ಲಿ ಇರುವುದರ ಅರ್ಧದಷ್ಟು). ಪಶ್ಚಿಮ ಯೂರೊಪಿನ ಕರಾವಳಿ ಪ್ರದೇಶಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳು ಹಾಗೂ ಕೆನಡದ ಪೆಸಿಫಿಕ್ ಕರಾವಳಿ ಪ್ರದೇಶಗಳು ಇದರ ಬೇಸಾಯಕ್ಕೆ ಹೆಸರಾಂತಿವೆ. ದನಕರುಗಳು, ಕುರಿಗಳು ಇದನ್ನು ಬಲುಮೆಚ್ಚಿನಿಂದ ತಿನ್ನುವುವು. ಅಲ್ಲದೆ ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚುವುದೆನ್ನಲಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

[೧]

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬೀಟ್&oldid=1096130" ಇಂದ ಪಡೆಯಲ್ಪಟ್ಟಿದೆ