ಚಮರೀಮೃಗ
ಚಮರೀಮೃಗ Temporal range: ಪ್ಲಿಯೊಸಿನ್‌ನಿಂದ -ಇಂದಿನವರೆಗೆ
ಆರಂಭಿಕ | |
---|---|
ನೇಪಾಳದ ಹಿಮಾಲಯ ಭಾಗದಲ್ಲಿರುವ ಚಮರೀಮೃಗ. | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | ಆರ್ಟಿಯೊಡಕ್ಟೈಲ
|
ಕುಟುಂಬ: | |
ಉಪಕುಟುಂಬ: | ಬೋವಿನೇ
|
ಕುಲ: | ಬಾಸ್
|
ಪ್ರಜಾತಿ: | ಬಾ. ಗ್ರುನ್ನಿಯೆನ್ಸ್ ಕಾರ್ಲ್ ಲಿನ್ನೇಯಸ್, 1766
|
Synonyms | |
ಪೊಯೆಫ್ಯಾಗಸ್ ಗ್ರುನ್ನಿಯೆನ್ಸ್ |
ಚಮರೀಮೃಗ[೨] ಅಥವಾ ಯಾಕ್ ಬೋವಿಡೇ ಕುಟುಂಬಕ್ಕೆ ಸೇರಿದ ಪ್ರಾಣಿ. ಇದು ದಕ್ಷಿಣ ಕೇಂದ್ರ ಏಷ್ಯಾದ ಹಿಮಾಲಯ ಪ್ರಾಂತದಾದ್ಯಂತ, ಟಿಬೆಟ್ ಪ್ರಸ್ಥಭೂಮಿ ಮತ್ತು ಉತ್ತರಕ್ಕೆ ಮಂಗೋಲಿಯ ಮತ್ತು ರಷ್ಯವರೆಗೂ ಜೀವಿಸುತ್ತದೆ. ಬಹಳಷ್ಟು ಚಮರೀಮೃಗಗಳು ಬಾಸ್ ಗ್ರುನ್ನಿಯೆನ್ಸ್ ಪ್ರಭೇದಕ್ಕೆ ಸೇರಿದವು. ಅಪಾಯದ ಅಂಚಿನಲ್ಲಿರುವ ಬಾಸ್ ಮ್ಯೂಟಸ್‌ನ ಸಣ್ಣ ವನ್ಯ ಜನಸಂಖ್ಯೆಯೂ ಇದೆ.[೩] ಇವೆರಡೂ ನೋಡಲು ಒಂದೇ ತೆರನಾಗಿವೆಯಾದರೂ ಬಣ್ಣದಲ್ಲಿ ವಿಭಿನ್ನ. ಕಾಡು ಯಾಕ್ ಕಗ್ಗಂದು ಬಣ್ಣದ್ದಾದರೆ, ಸಾಕಿರುವ ಯಾಕ್ ತಿಳಿಗಂದು, ಕಪ್ಪು ಇಲ್ಲವೆ ಹಂಡಬಂಡ ಬಣ್ಣದ್ದು. ಮೂತಿಯ ತುದಿ ಮಾತ್ರ ಕೊಂಚ ಬಿಳಿಯ ಬಣ್ಣದ್ದಾಗಿರುತ್ತದೆ.
ದಕ್ಷಿಣ ಭಾರತದಲ್ಲಿ ದೊರೆಯುವ ಕಾಟಿ, ಅಸ್ಸಾಮ್ ಮತ್ತು ಬರ್ಮದಲ್ಲಿ ಸಿಕ್ಕುವ ಗಾಯಲ್ ಹಾಗೂ ಸಾಕುದನಗಳ ಹತ್ತಿರ ಸಂಬಂಧಿ.
ವರ್ಗೀಕರಣ
ಬದಲಾಯಿಸಿಚಮರೀಮೃಗ ಬಾಸ್ ಕುಲಕ್ಕೆ ಸೇರಿದೆ. ಹೀಗಾಗಿ ಇದು ದನಗಳ (ಬಾಸ್ ಪ್ರೈಮಿಜೀನಿಯಸ್ ಪ್ರಭೇದದ) ಸಂಬಂಧಿ. ಚಮರೀಮೃಗಗಳ ವಿಕಾಸದ ಇತಿಹಾಸ ಅರಿಯಲು ಮಾಡಿದ ಮೈಟೊಕಾಂಡ್ರಿಯನ್‌ನ ವಿಶ್ಲೇಷಣೆ ಫಲಿತಾಂಶ ನೀಡಿಲ್ಲ.
ಚಮರೀಮೃಗ ದನಗಳಿಂದ 1 ದಶಲಕ್ಷದಿಂದ 5 ದಶಲಕ್ಷ ವರುಷಗಳ ಹಿಂದೆ ಕವಲೊಡೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಕುಲದ ದನಗಳಿಗಿಂತ ಬೈಸಾನ್ (ಅಮೆರಿಕ ಕಾಡುಕೋಣ) ಗೆ ಹೆಚ್ಚು ಹತ್ತಿರ ಎಂದು ಭಾವಿಸಲಾಗಿದೆ.[೪] ಇದರ ಹತ್ತಿರ ಸಂಬಂಧಿಯಾದ ಬೋಸ್ ಬೈಕಲೆನ್ಸಿಸ್ನ ಪಳೆಯುಳಿಕೆ ಪೂರ್ವ ರಷ್ಯಾದಲ್ಲಿ ಪತ್ತೆಯಾಗಿದೆ. ಇದು ಚಮರೀಮೃಗವನ್ನು ಹೋಲುವ ಅಮೆರಿಕ ಕಾಡುಕೋಣದ ಪೂರ್ವಜರು ಅಮೆರಿಕ ಖಂಡಗಳಿಗೆ ಹೋದ ದಾರಿಯನ್ನು ಸೂಚಿಸುತ್ತದೆ.[೫]
ಈ ಪ್ರಭೇದವನ್ನು ಮೊದಲು 1766ರಲ್ಲಿ ಲಿನ್ನೇಯಸ್ ಬಾಸ್ ಗ್ರುನ್ನಿಯೆನ್ಸ್ ಎಂದು ಕರೆದ. ಆದರೆ ಈ ಹೆಸರನ್ನು ಸಾಮಾನ್ಯವಾಗಿ ಸಾಕುಪ್ರಾಣಿ ಚಮರೀಮೃಗಕ್ಕೆ ಅನ್ವಯಿಸಲಾಗುತ್ತದೆ ಮತ್ತು ವನ್ಯ ಚಮರೀಮೃಗವನ್ನು ಬಾಸ್ ಮ್ಯೂಟಸ್ ಎಂದು ಕರೆಯಲಾಗುತ್ತದೆ. ಈಗಲೂ ಕೆಲವು ಲೇಖಕರು ವನ್ಯ ಪ್ರಭೇದವನ್ನು ಒಂದು ಉಪಪ್ರಭೇದವೆಂದು ಪರಿಗಣಿಸಿ ಬಾಸ್ ಗ್ರುನ್ನಿಯೆನ್ಸ್ ಮ್ಯೂಟಸ್ ಎಂದು ಕರೆಯುತ್ತಾರೆ. ಐಸಿಜೆಡ್‌ಎನ್ (ಅಂತರರಾಷ್ಟ್ರೀಯ ಪ್ರಾಣಿಶಾಸ್ತ್ರ ಹೆಸರಿಸುವಿಕೆ ಕಮಿಶನ್) 2003ರಲ್ಲಿ[೬] ಅಧಿಕೃತ ಸೂಚನೆ ನೀಡಿ ವನ್ಯ ಚಮರೀಮೃಗಗಳಿಗೆ ಬಾಸ್ ಮ್ಯೂಟಸ್ ಎಂದು ಕರೆಯಲು ಅನುಮತಿಸಿತು.[೧][೫][೭] ವನ್ಯ ಚಮರೀಮೃಗವನ್ನು ಬಾಸ್ ಗ್ರುನ್ನಿಯೆಸ್ನ ಉಪಪ್ರಭೇದ ಎಂದು ಕರೆದುದನ್ನು ಹೊರತುಪಡಿಸಿ ಇದಕ್ಕೆ ಇನ್ನಾವ ಗುರುತಿಸಲಾದ ಉಪಪ್ರಭೇದವೂ ಇಲ್ಲ.
ಭೌತಿಕ ಲಕ್ಷಣಗಳು
ಬದಲಾಯಿಸಿಬೋವಿಡೇ ಕುಟುಂಬದಲ್ಲಿ ಚಮರೀಮೃಗ ಬುಜದ ಎತ್ತರವನ್ನು ಪರಿಗಣಿಸಿದಲ್ಲಿ ಅತಿಹೆಚ್ಚು ಎತ್ತರವಿರುವ ಎರಡನೆಯ ಸದಸ್ಯ ಮತ್ತು ಮೊದಲನೆಯದು ಭಾರತೀಯ ಕಾಡುಕೋಣ (ಗೌರ್ ಅಥವಾ ಬಾಸ್ ಗೌರಸ್). ಅವುಗಳ ವ್ಯಾಪ್ತಿಯಲ್ಲಿ ಚಮರೀಮೃಗಗಳು ಅತಿದೊಡ್ಡ ಪ್ರಾಣಿಗಳು. ವನ್ಯ ವಯಸ್ಕ ಚಮರೀಮೃಗ 1.6 ರಿಂದ 2.2 ಮೀ (5.2 ಯಿಂದ 7.2 ಅಡಿ) ಎತ್ತರವಿರುತ್ತವೆ (ಬುಜದ ವರೆಗಿನ ಎತ್ತರ). ಇವುಗಳ ತೂಕ 305-1000 ಕೆಜಿ (672 ರಿಂದ 2205 ಪೌಂಡ್) ವರೆಗೂ ಇರುತ್ತದೆ. ಮುಖ ಮತ್ತು ದೇಹದ ಅಳತೆ 2.5 ರಿಂದ 3.3 ಮೀ (8.2 ರಿಂದ 11 ಅಡಿ) ಮತ್ತು ಇದರ ಸುಮಾರು 60-100 ಸೆಮೀ (24 ರಿಂದ 39 ಇಂಚು) ಇರುವ ಬಾಲವನ್ನು ಪರಿಗಣಿಸಲಾಗಿರುವುದಿಲ್ಲ. ವನ್ಯ ಗಂಡು ಚಮರೀಮೃಗಕ್ಕೆ ಹೋಲಿಸಿದರೆ ಹೆಣ್ಣು ತೂಕದಲ್ಲಿ ಮೂರರ ಒಂದರಷ್ಟು ಇದ್ದರೆ ಮತ್ತು ಉದ್ದದಲ್ಲಿ ಶೇ 30ರಷ್ಟು ಕಡಿಮೆ ಇರುತ್ತವೆ.[೮][೯][೧೦][೧೧] ವನ್ಯವಕ್ಕೆ ಹೋಲಿಸಿದರೆ ಸಾಕು ಚಮರೀಮೃಗಗಳು ಸಣ್ಣವು ಮತ್ತು ಗಂಡುಗಳು 350 ರಿಂದ 280 ಕೆಜಿ (770 ರಿಂದ 1280 ಪೌಂಡ್) ತೂಗಿದರೆ ಹೆಣ್ಣುಗಳು 225 ರಿಂದ 255 ಕೆಜಿ (496 ರಿಂದ 562 ಪೌಂಡ್) ತೂಗುತ್ತವೆ.[೧೨][೧೩]
ಚಮರೀಮೃಗಗಳು ಗಟ್ಟಿಮುಟ್ಟಾದ ಕಾಲುಗಳುಳ್ಳ, ದುಂಡಾದ ಸೀಳು ಗೊರಸುಗಳ ಭಾರೀ ಗಾತ್ರದ ಪ್ರಾಣಿಗಳು. ಈ ಗಾತ್ರದ ಬೊವಿಡೇ ಕುಟುಂಬದ ವನ್ಯ ಸದಸ್ಯರಲ್ಲಿ ಇವಕ್ಕೆ ಮಾತ್ರ ತೀರಾ ಒತ್ತಾದ, ತುಪ್ಪುಳವಿದೆ ಮತ್ತು ಇದು ಹೊಟ್ಟೆಯ ಕೆಳ ಭಾಗದಲ್ಲಿ ತೂಗುಬಿದ್ದಿದೆ. ವನ್ಯ ಚಮರೀಮೃಗಗಳು ಸಾಮಾನ್ಯವಾಗಿ ಕಪ್ಪಿನ ಛಾಯೆಯ, ಕಪ್ಪಿನಿಂದ ಕಂದಿನವರೆಗೂ ಬಣ್ಣ ಹೊಂದಿರುತ್ತವೆ. ಇವುಗಳಿಗೆ ಸಣ್ಣ ಕಿವಿ, ವಿಶಾಲವಾದ ಮುಂದಲೆ ಮತ್ತು ನುಣ್ಣನೆಯ ಕಪ್ಪು ಕೋಡುಗಳಿವೆ. ಗಂಡಿನಲ್ಲಿ ಕೋಡುಗಳು ಪಕ್ಕಕ್ಕೆ ಬಂದು ನಂತರ ಮುಂದೆ ತಿರುಗುತ್ತವೆ ಮತ್ತು ಸಾಮಾನ್ಯವಾಗಿ ಇವುಗಳ ಉದ್ದ 48 ರಿಂದ 99 ಸೆಂಮೀ (19 ರಿಂದ 39 ಇಂಚು) ಇರುತ್ತದೆ. ಹೆಣ್ಣಿನ ಕೋಡುಗಳು ಹೆಚ್ಚು ಮುಂದೆ ಇದ್ದು ಸಾಮಾನ್ಯವಾಗಿ ಇವುಗಳ ಉದ್ದ 27 ರಿಂದ 64 ಸೆಂಮೀ (11 ರಿಂದ 25 ಇಂಚು) ಇರುತ್ತದೆ. ಇವುಗಳ ಕುತ್ತಿಗೆ ಸಣ್ಣದಿದ್ದು ಡುಬ್ಬ ಎದ್ದುಕಾಣುವಂತೆ ಇದೆ ಮತ್ತು ಗಂಡುಗಳಲ್ಲಿ ದೊಡ್ಡದು ಹಾಗೂ ಹೆಚ್ಚು ಎದ್ದುಕಾಣುತ್ತದೆ.[೫]
ಚಮರೀಮೃಗದ ಎರಡೂ ಲಿಂಗಗಳಲ್ಲಿಯೂ ಎದೆಯ ಮೇಲೆ, ಪಕ್ಕದಲ್ಲಿ ಮತ್ತು ತೊಡೆಗಳ ಮೇಲೆ ದಟ್ಟವಾದ ಉಣ್ಣೆಯಂತಹ ತುಪ್ಪಳ ಇದ್ದು ಇವು ಪ್ರಾಣಿಗಳನ್ನು ಶೀತಲ ಹವಮಾನದಲ್ಲಿ ರಕ್ಷಿಸುತ್ತವೆ. ಅವುಗಳ ಬಾಲವು ದನ ಮತ್ತು ಕಾಡುಕೋಣಗಳ ಕುಚ್ಚದಂತಹ ಬಾಲವನ್ನು ಹೋಲದೆ ಕುದುರೆಯ ಬಾಲವನ್ನು ಹೆಚ್ಚು ಹೋಲುತ್ತದೆ. ವನ್ಯ ಚಮರೀಮೃಗಗಳು ಕಪ್ಪು ಅಥವಾ ಕಡು ಕಂದು ಬಣ್ಣದ ಕೂದಲುಗಳನ್ನು ದೇಹದಾದ್ಯಂತ ಹೊಂದಿರುತ್ತವೆ ಮತ್ತು ಮೂತಿಯು ಕಂದು ಬಣ್ಣದಾಗಿರುತ್ತದೆ. ಕೆಲವು ಚಮರೀಮೃಗಗಳಲ್ಲಿ ಬಂಗಾರದ-ಕಂದು ಬಣ್ಣ ಸಹ ವರದಿಯಾಗಿದೆ. ಚೀನಾದಲ್ಲಿ ವನ್ಯ ಬಂಗಾರದ ಚಮರೀಮೃಗ ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಬೇರೆಯದೇ ಉಪಪ್ರಭೇದವೆಂದು ಪರಿಗಣಿಸಲಾಗುತ್ತದೆ. ಇವು ವಿನಾಶದ ಅಂಚಿನಲ್ಲಿದ್ದು ಕೇವಲ 170 ವನ್ಯ ಸ್ಥಿತಿಯಲ್ಲಿ ಉಳಿದೊಕೊಂಡಿವೆ ಎಂದು ಅಂದಾಜಿಸಲಾಗಿದೆ. ಸಾಕುಪ್ರಾಣಿಗಳು ಹಲವು ಬಣ್ಣಗಳಲ್ಲಿದ್ದು ಬಿಳಿ, ಬೂದು, ಕಂದು, ರೋನ್ (ಮಿಶ್ರವರ್ಣ-ಕೆಂಪು ಯಾ ನೀಲಿ ಬಣ್ಣದ ಒಡಲಿನಲ್ಲಿ ಬೂದು ಅಥವಾ ಬಿಳಿಯ ಬಣ್ಣ) ಅಥವಾ ಪೀಬಾಲ್ಡ್ (ಇಬ್ಬಣ್ಣ-ಸಾಮಾನ್ಯವಾಗಿ ಕಪ್ಪು ಮತ್ತು ಬಿಳುಪು)ಗಳನ್ನು ಒಳಗೊಂಡಿವೆ. ಹೆಣ್ಣಿನ ಕೆಚ್ಚಲು ಮತ್ತು ಗಂಡಿನ ವೃಷಣಕೋಶಗಳು ಸಣ್ಣವಿರುತ್ತವೆ ಮತ್ತು ಶೀತಲ ಹವಮಾನದ ರಕ್ಷೆಣೆಗೆ ಅವುಗಳ ಮೇಲೆ ಕೂದಲಿರುತ್ತವೆ. ಹೆಣ್ಣಿನಲ್ಲಿ ತೊಟ್ಟುಗಳು ನಾಲ್ಕು ಇರುತ್ತವೆ.[೫]
ಶರೀರಶಾಸ್ತ್ರ
ಬದಲಾಯಿಸಿಚಮರೀಮೃಗಗಳ ಶರೀರವು ಎತ್ತರ ಪ್ರದೇಶಗಳಿಗೆ ಹೊಂದಿಕೊಂಡಿವೆ. ಹೀಗಾಗಿ ಅವುಗಳು ಕೆಳಗಿನ ಎತ್ತರಗಳ ದನಗಳಿಗಿಂತ ದೊಡ್ಡದಾದ ಶ್ವಾಸಕೋಶ ಮತ್ತು ಹೃದಯಗಳನ್ನು ಹೊಂದಿವೆ. ಅಲ್ಲದೆ ಅವುಗಳ ರಕ್ತ ಹೆಚ್ಚಿನ ಆಮ್ಲಜನಕ ಸಾಗಣೆ ಮಾಡಬಲ್ಲದು.[೧೪] ಇದನ್ನು ಭ್ರೂಣ ಹಿಮೊಗ್ಲೋಬಿನ್[೧೫] ಜೀವನದಾದ್ಯಂತ ಉಳಿಸಿಕೊಳ್ಳುವ ಮೂಲಕ ಸಾಧಿಸುತ್ತವೆ.[೧೬] ಶೀತಲ ಪರಿಸ್ಥಿತಿಗೆ ಹೊಂದಿಕೊಳ್ಳುವದರಲ್ಲಿ ಚರ್ಮದಡಿಯ ಕೊಬ್ಬು ಮತ್ತು ಬೆವರಿನ ಗ್ರಂಥಿಗಳ ಪೂರ್ಣ ಇರದಿರುವಿಕೆಗಳೂ ಸೇರಿವೆ. ಈ ಹೊಂದಾಣಿಕೆಗಳ ಕಾರಣಕ್ಕೆ ಕೆಳ ಎತ್ತರದ ಪ್ರದೇಶಗಳಲ್ಲಿ ಅವು ಬದುಕಲಾರವು[೧೭] ಮತ್ತು 15 °ಸೆಂ. (59 °ಎಫ್) ಗೂ ಹೆಚ್ಚಿನ ತಾಪಮಾನದಲ್ಲಿ ಬಳಲಿಕೆ ತೋರುತ್ತವೆ.[೧೪]
ನೀರು ಸಿಕ್ಕದಿದ್ದರೆ ಮಂಜುಗಡ್ಡೆಯನ್ನೇ ತಿಂದು ಬಾಯಾರಿಸಿಕೊಳ್ಳುತ್ತದೆ.
ಸಂತಾನೋತ್ಪತ್ತಿ
ಬದಲಾಯಿಸಿಚಮರೀಮೃಗಗಳ ಲೈಂಗಿಕ ಮಿಲನದ ಕಾಲ ಬೇಸಿಗೆ ಮತ್ತು ಸಾಮಾನ್ಯವಾಗಿ ಇದು ಜೂಲೈ ಮತ್ತು ಸೆಪ್ಟಂಬರ್‌ಗಳ ನಡುವೆ ಇದ್ದು ಸ್ಥಳೀಯ ಪರಿಸ್ಥಿತಿಯನ್ನು ಸಹ ಅವಲಂಬಿಸಿರುತ್ತದೆ. ಉಳಿದ ಕಾಲಮಾನದಲ್ಲಿ ಗಂಡುಗಳು ಸಣ್ಣ ಗುಂಪುಗಳಲ್ಲಿ ಅಲೆಯುತ್ತವೆ. ಬೆದೆಯ ಕಾಲ ಹತ್ತಿರವಾಗುತ್ತಿದ್ದಂತೆ ಅವು ಆಕ್ರಮಣಕಾರಿಯಾಗುತ್ತವೆ ಮತ್ತು ಹೊಡೆದಾಟಕ್ಕೆ ಇಳಿಯುತ್ತವೆ. ದನಗಳಂತೆ ಅಲ್ಲದೆ ಆದರೆ ಕಾಡುಕೋಣಗಳಂತೆ ಅವು ಒಣ ಮಣ್ಣಿನಲ್ಲಿ ಹೊರಳಾಡುತ್ತವೆ ಮತ್ತು ಕೆಲವೊಮ್ಮೆ ಉಚ್ಚೆ ಮತ್ತು ಸೆಗಣಿಯ ವಾಸನೆಯ ಮೂಲಕ ಪ್ರದೇಶವನ್ನು ಗುರುತು ಮಾಡುತ್ತವೆ.[೫] ಹೆಣ್ಣುಗಳು ವರ್ಷಕ್ಕೆ ನಾಲ್ಕು ಸಲ ಬೆದೆಗೆ ಬರುತ್ತವೆ ಮತ್ತು ಪ್ರತೀ ಚಕ್ರವೂ ಕೆಲವು ಗಂಟೆಗಳಷ್ಟೇ ಇರುತ್ತದೆ.[೧೮]
ಚಮರೀಮೃಗಗಳು 257 ರಿಂದ 270 ದಿನಗಳಲ್ಲಿ ಮರಿ ಹಾಕುತ್ತವೆ.[೧೪] ಸಾಮಾನ್ಯವಾಗಿ ಮರಿ ಹುಟ್ಟುವ ಕಾಲವು ಮೇ-ಜೂನ್‌ಗಳಲ್ಲಿ ಇರುತ್ತದೆ. ಒಂದು ಸಲಕ್ಕೆ ಒಂದೇ ಮರಿಯನ್ನು ಹಾಕುತ್ತವೆ. ಹೆಣ್ಣು ಏಕಾಂತ ಸ್ಥಳದಲ್ಲಿ ಈಯುತ್ತದೆ ಮತ್ತು ಮರಿಯು ಹುಟ್ಟಿದ ಹತ್ತು ನಿಮಿಷದಲ್ಲಿಯೇ ನಡೆಯಬಲ್ಲದು ಮತ್ತು ಮಂದೆಯನ್ನು ಸೇರಿಕೊಳ್ಳುತ್ತದೆ. ಸಾಮಾನ್ಯವಾಗಿ ವನ್ಯ ಹಾಗೂ ಸಾಕು ಸ್ಥಿತಿಗಳೆರಡರಲ್ಲಿಯೂ ಇವು ವರುಷ ಬಿಟ್ಟು ವರುಷ ಈಯುತ್ತವೆ.[೫] ಆದರೆ ಆಹಾರ ಸರಬರಾಜು ಹೆಚ್ಚಾದಲ್ಲಿ ಇದು ಹೆಚ್ಚಾಗಬಹುದು.
ಮರಿಗಳು ಒಂದು ವರುಷಕ್ಕೆ ಮೊಲೆಹಾಲು ಬಿಡುತ್ತವೆ ಮತ್ತು ನಂತರದ ಸ್ವಲ್ಪಕಾಲದಲ್ಲಿಯೇ ಸ್ವತಂತ್ರವಾಗುತ್ತವೆ. ವನ್ಯದಲ್ಲಿ ಮರಿಗಳು ಆರಂಭದಲ್ಲಿ ಕಂದು ಕೂದಲುಗಳನ್ನು ಹೊಂದಿರುತ್ತವೆ ಮತ್ತು ನಂತರದಲ್ಲಿಯೇ ಅವುಗಳಿಗೆ ಕಪ್ಪು ಕೂದಲು ಬೆಳೆಯುತ್ತವೆ. ಹೆಣ್ಣುಗಳು ಮೂರರಿಂದ ನಾಲ್ಕು ವರುಷಕ್ಕೆ ಮೊದಲ ಮರಿ ಹಾಕುತ್ತವೆ[೧೯] ಮತ್ತು ಸುಮಾರು ಆರು ವರುಷಗಳಲ್ಲಿ ಸಂತಾನೋತ್ಪತ್ತಿಯ ಉತ್ತುಂಗವನ್ನು ಮುಟ್ಟುತ್ತವೆ. ಚಮರೀಮೃಗಗಳು ಸಾಕು ಅಥವಾ ಬಂಧನದ ಸ್ಥಿತಿಯಲ್ಲಿ ಸುಮಾರು 20 ವರುಷಕ್ಕೂ ಹೆಚ್ಚು ಬದುಕುತ್ತವೆ.[೫] ವನ್ಯ ಸ್ಥಿತಿಯಲ್ಲಿ ಅವುಗಳ ಆಯುಷ್ಯ ಕಡಿಮೆ ಇದ್ದಿರಲು ಸಾಧ್ಯ.
ವನ್ಯ ಸ್ಥಿತಿ
ಬದಲಾಯಿಸಿವನ್ಯ ಚಮರೀಮೃಗಗಳು (ಬಾಸ್ ಗ್ರುನ್ನಿಯೆನ್ಸ್ ಅಥವಾ ಬಾಸ್ ಗ್ರುನ್ನಿಯೆನ್ಸ್ ಮ್ಯೂಟಸ್ ) ಸಾಮಾನ್ಯವಾಗಿ 10 ರಿಂದ 30ರ ಮಂದೆಗಳಲ್ಲಿ ಇರುತ್ತವೆ. ಅವು ಜಡೆಗಟ್ಟಿದ ಒಳಕೂದಲು ಮತ್ತು ಪೊದೆಪೊದೆಯಾದ ಹೊರಕೂದಲಿನಿಂದ ಚಳಿಯಿಂದ ರಕ್ಷಿಸಲ್ಪಟ್ಟಿವೆ.[೨೦] ಅವುಗಳ ಬೆವರಿನಲ್ಲಿ ಅಂಟು ಪದಾರ್ಥಿವಿದ್ದು ಅದು ತುಪ್ಪಳವನ್ನು ಜಡೆಗಟ್ಟಿಸುತ್ತದೆ. ನೇಪಾಳದ ವೈದ್ಯಕೀಯ ಪದ್ಧತಿಯಲ್ಲಿ ಈ ಅಂಟು ಪದಾರ್ಥವನ್ನು ಬಳಸಲಾಗುತ್ತದೆ.[೨೧] ಚೀನಾದಲ್ಲಿ ಇದನ್ನು ಆಹಾರಕ್ಕಾಗಿ ಬೇಟೆಯಾಡಲಾಗುತ್ತದೆ ಮತ್ತು ಇಲ್ಲಿ ಅದು ಅಪಾಯದಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿದೆ.[೨೨]
ಕೆಲವೊಮ್ಮೆ ಮಂದೆಗಳಲ್ಲಿನ ಸಂಖ್ಯೆ ನೂರರಷ್ಟು ದೊಡ್ಡದಿರಬಹುದು. ಮಂದೆಯು ಹೆಣ್ಣುಗಳು ಮತ್ತು ಮರಿಗಳನ್ನು ಹೊಂದಿದ್ದು ಸಣ್ಣ ಸಂಖ್ಯೆಯ ಗಂಡುಗಳನ್ನು ಹೊಂದಿರುತ್ತದೆ. ಉಳಿದ ಗಂಡುಗಳು ಸುಮಾರು ಆರರ ಸಣ್ಣ ಸಂಖ್ಯೆಯ ಗುಂಪುಗಳಲ್ಲಿ ಕಂಡುಬರುತ್ತವೆ. ಮರಿಗಳ ರಕ್ಷಣೆಗೆ ಮತ್ತು ಬೆದೆಯ ಸಮಯದಲ್ಲಿ ಹೊರತುಪಡಿಸಿದರೆ ವನ್ಯ ಚಮರೀಮೃಗಗಳು ಆಕ್ರಮಣಕಾರಿಯಲ್ಲ ಮತ್ತು ಮಾನವರನ್ನು ಕಂಡರೆ ದೂರಹೋಗುತ್ತವೆ.[೫]
ಚಮರೀಮೃಗದ ಪ್ರಮುಖ ಆಹಾರ ಹುಲ್ಲು ಮತ್ತು ಜೊಂಡುಗಳು. ಇವು ಸಣ್ಣ ಪೊದೆಗಳನ್ನೂ, ಪಾಚಿ ಮತ್ತು ಕಲ್ಲುಹೂವುಗಳನ್ನು ಸಹ ತಿನ್ನುತ್ತದೆ. ಐತಿಹಾಸಿಕವಾಗಿ ಇವುಗಳನ್ನು ಬೇಟೆಯಾಡುವ ಪ್ರಾಣಿ ಟಿಬೆಟ್‌ನ ತೋಳ. ಅಲ್ಲದೆ ಕಂದು ಕರಡಿಗಳು ಮತ್ತು ಹಿಮ ಚಿರತೆ ಸಹ ಕೆಲವೊಮ್ಮೆ, ವಿಶೇಷವಾಗಿ ಮರಿ ಮತ್ತು ಬಲಹೀನ ಚಮರೀಮೃಗಗಳನ್ನು ಬೇಟೆಯಾಡುತ್ತವೆ.[೫]
ಹಂಚಿಕೆ ಮತ್ತು ವಾಸಸ್ಥಾನ
ಬದಲಾಯಿಸಿಚಮರೀಮೃಗಗಳು ಉತ್ತರ ಟಿಬೆಟ್ ಮತ್ತು ಪಶ್ಚಿಮ ಕ್ವಿನ್‌ಘೈನಲ್ಲಿ (ಚೀನಾ) ವನ್ಯವಾಗಿ ಕಂಡುಬರುತ್ತವೆ. ಕ್ಸಿನ್‌ಕ್ಸಿಯಾಂಗ್‌ನ (ಚೀನಾ) ದಕ್ಷಿಣದ ಭಾಗದಲ್ಲಿ ಕಂಡು ಬರುತ್ತವೆ ಮತ್ತು ಇದರ ವಿಸ್ತರಣೆ ಭಾರತದ ಲಡಾಕ್‌ವರೆಗೂ ಇದೆ. ಪಶ್ಚಿಮ ಟಿಬೆಟ್, ಪೂರ್ವ ಕ್ವಿನ್‌ಘೈ ಅಲ್ಲದೆ ಹುಯಾಂಗ್ಲಾಂಗ್‌ನ ಸಿಚುಯಾನ್‌ನಲ್ಲಿಯೂ (ಚೀನಾ) ಅಲ್ಲಲ್ಲಿ ಕಂಡುಬರುತ್ತವೆ. ಐತಿಹಾಸಿಕವಾಗಿ ಒಮ್ಮೆ ಚಮರೀಮೃಗಗಳು ನೇಪಾಳ ಮತ್ತು ಭೂತಾನ್‌ಗಳಲ್ಲಿ ಸಹ ವನ್ಯ ಸ್ಥಿತಿಯಲ್ಲಿ ಇದ್ದವು. ಆದರೆ ಇಂದು ಕೇವಲ ಸಾಕುಪ್ರಾಣಿಗಳಾಗಿ ಮಾತ್ರ ಉಳಿದುಕೊಂಡಿವೆ.[೧]
ಚಮರೀಮೃಗಗಳು ಪ್ರಮುಖ ವಾಸಸ್ಥಾನ 3000 ದಿಂದ 5500 ಮೀಟರ್ (9800 ರಿಂದ 18000 ಅಡಿ) ಎತ್ತರದ ಮರಗಳಲ್ಲಿದ ಬೆಟ್ಟಗಳು ಮತ್ತು ಪ್ರಸ್ಥಭೂಮಿ ಪ್ರದೇಶಗಳು. ಇವು ಒಣ ಸ್ಟೆಪ್ಪೆ (ಅರೆ ಒಣ, ಮರಗಳಲ್ಲಿದ ಹುಲ್ಲುಗಾವಲು) ಪ್ರದೇಶಗಳಿಗಿಂತ ಹುಲ್ಲಿನ ಹಾಸು ಮತ್ತು ಜೊಂಡುಗಳಿರುವ ಅಲ್ಪೈನ್ ಟಂಡ್ರ (ಮರಗಳು ಬೆಳೆಯದ ಶೀತ ಪ್ರದೇಶ)ಗಳಲ್ಲಿ ಕಾಣಬರುತ್ತವೆ.[೨೩]
ಸಾಕು ಪ್ರಾಣಿಗಳಾಗಿ
ಬದಲಾಯಿಸಿಚಮರೀಮೃಗಗಳನ್ನು ಸಾಕು ಪ್ರಾಣಿಗಳಾಗಿ ಸಾವಿರಾರು ವರುಷಗಳಿಂದ ಬಳಸಲಾಗುತ್ತಿದೆ. ಇವನ್ನು ಹಾಲು, ನಾರು, ಮಾಂಸ ಮತ್ತು ಹೇರು ಪ್ರಾಣಿಗಳಾಗಿ ಬಳಸಲಾಗುತ್ತದೆ. ಇದರ ಒಣ ಸಗಣಿಯನ್ನು ಟಿಬೆಟ್‌ನಾದ್ಯಂತ ಉರುವಲಾಗಿ ಬಳಸಲಾಗುತ್ತದೆ ಮತ್ತು ಬಹಳಷ್ಟು ಸಲ ಟಿಬೆಟ್‌ನ ಮರಗಳಲ್ಲಿದ ಪ್ರಸ್ತಭೂಮಿಯಲ್ಲಿ ಲಭ್ಯವಿರುವ ಏಕ ಮಾತ್ರ ಉರವಲು. ಅವು ಸ್ಥಳೀಯ ರೈತರಿಗೆ, ವ್ಯಾಪಾರಿಗಳಿಗೆ ಮತ್ತು ಪರ್ವತಾರೋಹಿ ಗುಂಪುಗಳಿಗೆ ಸರಕು ಸಾಗಣೆಯ ಹೇರು ಪ್ರಾಣಿಗಳು. ಒಂದೇ ಸಮಸ್ಯೆಯೆಂದರೆ ಬಂಜರು ನೆಲೆಗಳಲ್ಲಿನ ದೀರ್ಘ ಪ್ರವಾಸ. ಚಮರೀಮೃಗಗಳು ಅವು ಹೊತ್ತೊಯ್ಯುವ ಕಾಳುಕಡಿಗಳನ್ನೂ ಸಹ ತಿನ್ನುವುದಿಲ್ಲ. ಹೀಗಾಗಿ ಅವುಗಳನ್ನು ಹುಲ್ಲಿನ ಪ್ರದೇಶಕ್ಕೆ ತರದಿದ್ದರೆ ಹಸಿವಿನಿಂದ ಸಾಯುತ್ತವೆ.[೨೪] ಅವುಗಳನ್ನು ನೇಗಿಲಿಗೆ ಹೂಡಲಾಗುತ್ತದೆ. ಚಮರೀಮೃಗದ ಹಾಲನ್ನು ಗಿಣ್ಣಾಗಿ ಕೆಲವೊಮ್ಮೆ ಮಾಡಲಾಗುತ್ತದೆ ಮತ್ತು ಇದನ್ನು ನೇಪಾಳ ಮತ್ತು ಟಿಬೆಟ್‌ನಲ್ಲಿ ಛುರ್ಪಿ ಮತ್ತು ಮಂಗೋಲಿಯಾದಲ್ಲಿ ಬಯಾಸ್ಲಾಗ್ ಎಂದು ಕರೆಯಲಾಗುತ್ತದೆ. ಇದರ ಹಾಲಿನಿಂದ ಪಡೆಯುವ ಬೆಣ್ಣೆಯನ್ನು ಟಿಬೆಟ್ಟಿಯನ್ನರು ದೊಡ್ಡ ಮಟ್ಟದಲ್ಲಿ ಸೇವಿಸುವ ಬೆಣ್ಣೆಯ ಟೀ ಪಾನೀಯದ ಭಾಗ.[೨೫] ಈ ಬೆಣ್ಣೆಯನ್ನು ಲಾಂದ್ರಗಳಲ್ಲಿಯೂ ಮತ್ತು ಟೆಬೆಟ್‌ನ ಧಾರ್ಮಿಕ ಸಂಪ್ರದಾಯದಲ್ಲಿ ಬೆಣ್ಣೆಯ ಶಿಲ್ಪಾಕೃತಿಗಳನ್ನು ರಚಿಸಲು ಬಳಸಲಾಗುತ್ತದೆ.[೨೬] ಅದು ದನಗಳಂತೆ ‘‘ಅಂಬಾ' ದನಿ ಹುಟ್ಟುಹಾಕುವುದಿಲ್ಲ.
ಯಾಕ್‌ನ ಕೂದಲಿನಿಂದ ಚವರಿಯನ್ನು ತಯಾರಿಸುವುದಲ್ಲದೆ, ಬಾಲದ ಗೊಂಡೆಯನ್ನು ಉನ್ನತ ಅಧಿಕಾರಿಗಳು ಧಾರ್ಮಿಕ, ಮುಖಂಡರು ತಮ್ಮ ಸ್ಥಾನದ ಪ್ರತಿಷ್ಠಿತ ಲಾಂಛನವಾಗಿ ಬಳಸುವರು.
ಟಿಬೆಟ್‌ನಲ್ಲಿ ಚಮರೀಮೃಗಗಳ ರೇಸ್ ಸಾಂಪ್ರದಾಯಿಕ ಹಬ್ಬಗಳಲ್ಲಿನ ಮನೋರಂಜನೆ ಮತ್ತು ಅಲ್ಲಿನ ಸಂಸ್ಕೃತಿಯ ಭಾಗ. ಅಲ್ಲದೆ ಕೆಲವೆಡೆ ಚಮರೀಮೃಗ ಹಿಮಜಾರಾಟ (ಇದರಲ್ಲಿ ಚಮರೀಮೃಗವು ಎಳೆಯುವ ಮೂಲಕ ಹಿಮಜಾರಾಟ ನಡೆಯುತ್ತದೆ) ಅಥವಾ ಚಮರೀಮೃಗ ಪೋಲೋಗಳನ್ನು ಪ್ರವಾಸಿ ಆಕರ್ಷಣೆಗಳಾಗಿ ಬಳಸಲಾಗುತ್ತಿದೆ.
ಸಂಕರ
ಬದಲಾಯಿಸಿನೇಪಾಳ, ಟಿಬೆಟ್ ಮತ್ತು ಮಂಗೋಲಿಯಗಳಲ್ಲಿ ಜಾನುವಾರು ಮತ್ತು ಚಮರೀಮೃಗಗಳ ನಡುವಿನ ಸಂಕರ ಪ್ರಾಣಿಗಳನ್ನು ಉತ್ಪಾದಿಸಲಾಗಿದೆ. ಇದು ಬಂಜೆ ಗಂಡು ಡೊಜೊ ಮತ್ತು ಫಲವತ್ತಾದ ಹೆಣ್ಣು ಡೊಜೊಮ್ ಅಥವಾ ಜೋಮ್‌ಗಳಿಗೆ ಕಾರಣವಾಗುತ್ತದೆ. ಇವುಗಳನ್ನು ಮತ್ತೆ ದನಗಳೊಂದಿಗೆ ಸಂಕರಗೊಳಿಸಲಾಗುತ್ತದೆ. "ಗಿಡ್ಡ ಲುಲು" ತಳಿ ಮಾತ್ರ ಟಾರೈನ್ ದನ ಮತ್ತು ಜೆಬು ದನ (ಬಾಸ್ ಪ್ರೈಮಿಜೀನಿಯಸ್ ಟಾರಸ್ ಮತ್ತು ಬಾಸ್ ಪ್ರೈಮಿಜೀನಿಯಸ್ ಇಂಡಿಕಸ್) ಹಾಗೂ ಚಮರೀಮೃಗಗಳ ನಡುವಿನ ಸಂಕರ ಎಂದು ವಂಶವಾಹಿ ಅಧ್ಯಯನಗಳು ಸೂಚಿಸಿವೆ.[೨೭] ಪಶುವೈದ್ಯಕೀಯ ಅಂತರಾಷ್ಟ್ರೀಯ ಮಾಹಿತಿ ಸೇವೆಯ ಪ್ರಕಾರ ಎರಡನೆ ಪೀಳಿಗೆಯ ತಳಿಗಳ ಉತ್ಪಾದಕತೆ ಕಡಿಮೆ ಇದ್ದು ಇವನ್ನು ಮಾಂಸದ ಅಗತ್ಯಗಳಿಗೆ ಬಳಸಬಹುದು.[೨೮] ಅಮೆರಿಕದ ಕಾಡುಕೋಣ (ಬೈಸನ್)[೨೮], ಭಾರತೀಯ ಕಾಡುಕೋಣ (ಗೌರ್) ಮತ್ತು ಬಲಿ ದನಗಳೊಂದಿಗೆ (ಆಗ್ನೇಯ ಏಶಿಯಾದ ಬಾಂಟೆಂಗ್) ಚಮರೀಮೃಗದ ಸಂಕರವನ್ನು ಯಶಸ್ವೀಯಾಗಿ ಸಾಧಿಸಲಾಗಿದೆ. ಆದರೆ ಸಾಕು ದನಗಳೊಂದಿಗಿನ ಸಂಕರದ ಅನುಭವಕ್ಕಿಂತ ಇದು ಭಿನ್ನವಾಗಿಲ್ಲ.[೫]
ಉಲ್ಲೇಖ ಮತ್ತು ಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ ೧.೨ Harris, R.B.; Leslie, D. (2008). "Bos mutus". IUCN Red List of Threatened Species. Version 2014.2. International Union for Conservation of Nature. Retrieved 4 September 2014.
- ↑ ಇಂಗ್ಲೀಶ್ ವಿಕಿಪೀಡಿಯದ Yak ಪುಟದ ಬಾಗಶಹ ಅನುವಾದ, ಪಡೆದ ದಿನಾಂಕ 2011-11-25
- ↑ Grubb, P. (2005). "Order Artiodactyla". In Wilson, D.E.; Reeder, D.M. Mammal Species of the World: A Taxonomic and Geographic Reference (3rd ed.). Johns Hopkins University Press. p. 691. ISBN 978-0-8018-8221-0. OCLC 62265494.
- ↑ Guo, S.; et al. (2006). "Taxonomic placement and origin of yaks: implications from analyses of mtDNA D-loop fragment sequences". Acta Theriologica Sinica. 26 (4): 325–330.
- ↑ ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ Leslie, D.M.; Schaller, G.B. (2009). "Bos grunniens and Bos mutus (Artiodactyla: Bovidae)". Mammalian Species. 836: 1–17. doi:10.1644/836.1.
- ↑ International Commission on Zoological Nomenclature (2003). "Opinion 2027. Usage of 17 specific names based on wild species which are predated by or contemporary with those based on domestic animals (Lepidoptera, Osteichthyes, Mammalia): conserved". Bulletin of Zoological Nomenclature. 60: 81–84.
- ↑ Gentry, A.; Clutton-Brock, J.; Groves, C. P. (2004). "The naming of wild animal species and their domestic derivatives". Journal of Archaeological Science. 31 (5): 645. doi:10.1016/j.jas.2003.10.006
- ↑ Nowak, R. (1999). Walker's Mammals of the World, 6th Edition, Volume II. Baltimore: Johns Hopkins University Press (quoted in Oliphant, M. 2003. "Bos grunniens" (On-line), Animal Diversity Web. Accessed 4 April 2009)
- ↑ Boitani, Luigi (1984). Simon & Schuster's Guide to Mammals. Simon & Schuster/Touchstone Books, ISBN 978-0-671-42805-1
- ↑ Bos grunniens (Linnaeus). zsienvis.nic.in at the Wayback Machine (archived 16 April 2009)
- ↑ Burnie D and Wilson DE (eds.) (2005). Animal: The Definitive Visual Guide to the World's Wildlife. DK Adult, ISBN 0789477645
- ↑ Buchholtz, C. (1990). True Cattle (Genus Bos). pp. 386–397 in S. Parker, ed. Grzimek's Encyclopedia of Mammals, Volume 5. New York: McGraw-Hill Publishing Company. (quoted in Oliphant, M. (2003). Bos grunniens (On-line), Animal Diversity Web. Accessed 4 April 2009)
- ↑ Wild yak photo – Bos mutus – G13952 Archived 2013-03-10 ವೇಬ್ಯಾಕ್ ಮೆಷಿನ್ ನಲ್ಲಿ.. ARKive. Retrieved on 2012-12-19.
- ↑ ೧೪.೦ ೧೪.೧ ೧೪.೨ Wiener, Gerald; Jianlin, Han; Ruijun, Long (2003). "4 The Yak in Relation to Its Environment", The Yak, Second Edition. Bangkok: Regional Office for Asia and the Pacific Food and Agriculture Organization of the United Nations, ISBN 92-5-104965-3. Accessed 8 August 2008.
- ↑ ಭ್ರೂಣಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಹೆಚ್ಚಿನ ರಕ್ತವನ್ನು ಸಾಗಿಸುವ ಶಕ್ತಿ ಇರುವ ಪ್ರೋಟೀನ್, ಮಗು ಬೆಳದಂತೆ ಇಲ್ಲವಾಗುತ್ತದೆ
- ↑ Sarkar, M.; Das, D. N.; Mondal, D. B. (1999). "Fetal Haemoglobin in Pregnant Yaks (Poephagus grunniens L.)". The Veterinary Journal. 158 (1): 68–70. doi:10.1053/tvjl.1999.0361. PMID 10409419.
- ↑ Yak, Animal genetics training resources version II: Breed Information. Adopted from: Bonnemaire, J. "Yak". In: Mason, Ian L. (ed). (1984). Evolution of Domesticated Animals. London: Longman, pp. 39–45. ISBN 0-582-46046-8. Accessed 8 August 2008.
- ↑ Sarkar, M.; Prakash, B.S. (2005). "Timing of ovulation in relation to onset of estrus and LH peak in yak (Poephagus grunniens L.)". Animal Reproduction Science. 86 (4): 353–362. doi:10.1016/j.anireprosci.2004.08.005.
- ↑ Zi, X.D. (2003). "Reproduction in female yaks (Bos grunniens) and opportunities for improvement". Theriogenology. 59 (5–6): 1303–1312. doi:10.1016/S0093-691X(02)01172-X. PMID 12527077.
- ↑ Massicot, Paul (5 March 2005) Animal Info – Wild Yak. Accessed 8 August 2008.
- ↑ Red Orbit Reference Library Yak. redorbit.com
- ↑ Yak. Alaska Zoo.
- ↑ Schaller, G.B.; Liu, Wilin (1996). "Distribution, status, and conservation of wild yak Bos grunniens". Biological Conservation. 76 (1): 1–8. doi:10.1016/0006-3207(96)85972-6.
- ↑ Golden Book Encyclopedia, Vol. 16 p. 1505b. Rockefeller Center, NY: Golden Press (1959).
- ↑ Tibet and Tibetan Foods Archived 2013-07-01 ವೇಬ್ಯಾಕ್ ಮೆಷಿನ್ ನಲ್ಲಿ.. Flavorandfortune.com. Retrieved on 2012-12-19.
- ↑ Yaks, butter & lamps in Tibet Archived 2004-02-27 ವೇಬ್ಯಾಕ್ ಮೆಷಿನ್ ನಲ್ಲಿ., webexhibits.org
- ↑ Takeda, K.; Satoh, M.; Neopane, S.P.; Kuwar, B.S.; Joshi, H.D.; Shrestha, N.P.; Fujise, H.; Tasai, M.; Tagami, T.; Hanada, H. (2004). "Mitochondrial DNA analysis of Nepalese domestic dwarf cattle Lulu". Animal Science Journal. 75 (2): 103. doi:10.1111/j.1740-0929.2004.00163.x.
- ↑ ೨೮.೦ ೨೮.೧ Zhang, R.C. (14 December 2000). "Interspecies Hybridization between Yak, Bos taurus and Bos indicus and Reproduction of the Hybrids". In: Recent Advances in Yak Reproduction, Zhao, X.X.; Zhang, R.C. (eds.). International Veterinary Information Service.