ಕೊಬ್ಬು
ಕೊಬ್ಬು (ಮೇದಸ್ಸು, ನೆಣ) ಅಧಿಕ ಪ್ರಮಾಣದಲ್ಲಿ ಬೇಕಾದ ಮೂರು ಮುಖ್ಯ ಪೌಷ್ಟಿಕಾಂಶಗಳಲ್ಲಿ ಒಂದು, ಇತರ ಎರಡು ಪೌಷ್ಟಿಕಾಂಶಗಳೆಂದರೆ ಕಾರ್ಬೋಹೈಡ್ರೇಟುಗಳು ಮತ್ತು ಪ್ರೋಟೀನ್‍ಗಳು.[೧][೨] ಕೊಬ್ಬಿನ ಅಣುಗಳು ಪ್ರಧಾನವಾಗಿ ಇಂಗಾಲ ಮತ್ತು ಜಲಜನಕದ ಪರಮಾಣುಗಳನ್ನು ಹೊಂದಿರುತ್ತವೆ, ಹಾಗಾಗಿ ಅವುಗಳೆಲ್ಲ ಹೈಡ್ರೋಕಾರ್ಬನ್ ಅಣುಗಳಾಗಿವೆ. ಉದಾಹರಣೆಗಳಲ್ಲಿ ಕೊಲೆಸ್ಟರಾಲ್, ಟ್ರೈಗ್ಲಿಸರೈಡ್‍ಗಳು ಸೇರಿವೆ. ಕರಾರುವಾಕ್ಕಾದ ಅರ್ಥದಲ್ಲಿ "ಕೊಬ್ಬು" ಪದವು ನಿರ್ದಿಷ್ಟವಾಗಿ ಕೊಠಡಿಯ ತಾಪಮಾನದಲ್ಲಿ ಘನಪದಾರ್ಥಗಳಾಗಿರುವ ಲಿಪಿಡ್‍ಗಳನ್ನು ಸೂಚಿಸಬಹುದು. ಇತರ ಲಿಪಿಡ್‍ಗಳಂತೆ, ಕೊಬ್ಬುಗಳು ಸಾಮಾನ್ಯವಾಗಿ ನೀರಿನಲ್ಲಿ ಮಿಶ್ರಣವಾಗುವುದಿಲ್ಲ, ಮತ್ತು ಕಾರ್ಬನಿಕ ದ್ರಾವಕಗಳಲ್ಲಿ ಕರಗುತ್ತವೆ. ಕೊಬ್ಬು (ಮಾನವರು ಸೇರಿದಂತೆ) ಬಹುತೇಕ ಪರಾವಲಂಬಿ ಜೀವಿಗಳ ಆಹಾರದ ಅಗತ್ಯ ಭಾಗವಾಗಿದೆ ಮತ್ತು ಅತ್ಯಂತ ಶಕ್ತಿಸಾಂದ್ರವಾಗಿದೆ, ಹಾಗಾಗಿ ಶಕ್ತಿ ಸಂಗ್ರಹದ ಅತ್ಯಂತ ಫಲಕಾರಿ ರೂಪವಾಗಿದೆ ಮತ್ತು ನೀರನ್ನು ಬಂಧಿಸಿಕೊಳ್ಳದ್ದರಿಂದ ದೇಹದ ದ್ರವ್ಯರಾಶಿಯನ್ನು ಪ್ರೋಟೀನ್‍ಗಳಷ್ಟು ಹೆಚ್ಚಿಸುವುದಿಲ್ಲ.
ಬೆಣ್ಣೆ, ಲಾರ್ಡ್ ಎಂಬ ಹಂದಿಯ ಹೊಟ್ಟೆಯೊಳಗಿನ ಕೊಬ್ಬು, ಟ್ಯಾಲೋ ಎಂಬ ಪ್ರಾಣಿಗಳ ಮೇದಸ್ಸನ್ನು ಕರಗಿಸಿ ಪಡೆದ ಜಿಡ್ಡು ಪದಾರ್ಥ ಇವೆಲ್ಲ ಎಸ್ಟರುಗಳು.
ಇತಿಹಾಸ
ಬದಲಾಯಿಸಿಮೇದಸ್ಸುಗಳಿಂದ ದೀಪ ಉರಿಸುವುದು ಸಹಸ್ರಾರು ವರ್ಷಗಳಿಂದ ರೂಢಿಯಲ್ಲಿದೆ. ಕೊಬ್ಬುಗಳ ಬಳಕೆ ಶತಮಾನಗಳ ಹಿಂದೆ ಇದ್ದಂತೆಯೇ ಉಳಿದಿರುವುದು ವಿಶೇಷ ಸಂಗತಿ. ಅಲ್ಪ ಸ್ವಲ್ಪ ಬದಲಾವಣೆಗಳಾಗಿರಬಹುದಷ್ಟೆ. ಒಂದನೆಯ ಮಹಾಯುದ್ಧದ ತರುವಾಯ (೧೯೧೪-೧೮) ಕೊಬ್ಬಿನ ಆಮ್ಲಗಳು ಮತ್ತು ಗ್ಲಿಸರೈಡುಗಳ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚಿನ ಅರಿವು ಉಂಟಾಗಲು ಆರಂಭವಾಯಿತು. ಈಗ ಅವುಗಳ ಬಳಕೆ ಎಷ್ಟು ವ್ಯಾಪಕವಾಗಿದೆಯೆಂದರೆ ಕೊಬ್ಬಿನ ರಾಸಾಯನಿಕಗಳಿಗೆ ಸಂಬಂಧಿಸಿದ ಪ್ರತ್ಯೇಕ ಕೈಗಾರಿಕೆಯೇ ರೂಪುಗೊಳ್ಳುತ್ತಲಿದೆ.
ಮುಖ್ಯವಾದ ಕೊಬ್ಬುಗಳು
ಬದಲಾಯಿಸಿಮುಖ್ಯವಾದ ಕೊಬ್ಬುಗಳ ಪ್ರಸರಣ, ಉಪಯೋಗ ಇತ್ಯಾದಿ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ.
ಸಸ್ಯಜನ್ಯ ಕೊಬ್ಬುಗಳು
ಕೊಬ್ಬು | ಉತ್ಪಾದಿಸುವ ಮುಖ್ಯ ದೇಶಗಳು | ಅಯೋಡೀನ್ ಮೌಲ್ಯ | ಪ್ರಮುಖ ಉಪಯೋಗಗಳು |
ಮಾಹುವಾ ಬೆಣ್ಣೆ | ಭಾರತ, ಮಲಯ | ೫೩-೬೭ | ಆಹಾರ, ಸಾಬೂನು, ಮೇಣದ ಬತ್ತಿ |
ಷೀಯಾ ಬೆಣ್ಣೆ | ಪಶ್ಚಿಮ ಆಫ್ರಿಕ, ಸೂಡಾನ್ | ೫೩-೬೫ | ಆಹಾರ, ಸಾಬೂನು, ಮೇಣದ ಬತ್ತಿ |
ಪಾಮ್ ಬೆಣ್ಣೆ | ಪಶ್ಚಿಮ ಆಫ್ರಿಕ | ೫೦-೬೦ | ಸಾಬೂನು, ಮೇಣದಬತ್ತಿ, ತವರ ಲೇಪನ ಉದ್ಯಮ |
ಕೋಕೊ ಬೆಣ್ಣೆ | ವೆಸ್ಟ್ ಇಂಡೀಸ್ | ೩೨-೪೧ | ಚಾಕಲೇಟು, ವೈದ್ಯಕೀಯ, ಪರಿಮಳ ದ್ರವ್ಯಗಳು |
ಪ್ರಾಣಿಗಳ ಕೊಬ್ಬುಗಳು
ಲಾರ್ಡ್ | ಅಮೆರಿಕ ಸಂಯುಕ್ತ ಸಂಸ್ಥಾನ, ಮಧ್ಯ
ಯೂರೋಪ್ |
೪೫-೭೦ | ಆಹಾರ, ಸಾಬೂನು, ವೈದ್ಯಕೀಯ,
ರಾಸಾಯನಿಕಗಳು |
ಎಲುಬು | ಅಮೆರಿಕ ಸಂಯುಕ್ತ ಸಂಸ್ಥಾನ,
ಭಾರತ, ಯೂರೋಪ್ |
೪೬-೫೬ | ಸಾಬೂನು, ಮೇಣದ ಬತ್ತಿ |
ಟ್ಯಾಲೋ (ದನದ
ಮಾಂಸದಿಂದ) |
ಆರ್ಜಂಟೈನ, ಅಮೆರಿಕ ಸಂಯುಕ್ತ ಸಂಸ್ಥಾನ | ೩೦-೪೫ | ಆಹಾರ, ಸಾಬೂನು, ಮೇಣದಬತ್ತಿ,
ರಾಸಾಯನಿಕಗಳು |
ಟ್ಯಾಲೋ (ಕುರಿಯ
ಮಾಂಸದಿಂದ) |
ಆಸ್ಟ್ರೇಲೇಷಿಯ | ೨೫-೪೫ | ಆಹಾರ, ಸಾಬೂನು |
ಬೆಣ್ಣೆ | ಅಮೆರಿಕ ಸಂಯುಕ್ತ ಸಂಸ್ಥಾನ, ವಾಯುವ್ಯ
ಯೂರೋಪ್, ಆಸ್ಟ್ರೇಲೇಷಿಯ, ಕೆನಡ |
೨೫-೪೦ | ಆಹಾರ |
ಕೊಬ್ಬಿನ ಕ್ರಿಯಾವೈಶಿಷ್ಟ್ಯಗಳು. ಜಲವಿಶ್ಲೇಷಣೆ
ಬದಲಾಯಿಸಿಇದಕ್ಕಾಗಿ ಸೋಡಿಯಂ ಅಥವಾ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಕ್ಷಾರಗಳನ್ನು ಬಳಸುವುದು ವಾಡಿಕೆ. ಆಗ ಗ್ಲಿಸರಾಲ್ ಬೇರ್ಪಡುತ್ತದೆ. ಕೊಬ್ಬಿನ ಆಮ್ಲ ಅದರ ಸೋಡಿಯಂ ಅಥವಾ ಪೊಟ್ಯಾಸಿಯಂ ಲವಣವಾಗುತ್ತದೆ. ಇದೇ ಸಾಬೂನು. ಆದ್ದರಿಂದ ಈ ಕ್ರಿಯೆಗೆ ಸಾಬೂನೀಕರಣ (ಸ್ಯಾಪೊನಿಫಿಕೇಶನ್) ಎಂದು ಹೆಸರಾಗಿದೆ. ಇದನ್ನು ವಿವರಿಸಲು ಟ್ರೈಸ್ಟಿಯರಿನ್ ಉದಾಹರಣೆಯಾಗಿ ಬಳಸಬಹುದು.
ಕೊಬ್ಬಿನ ಆಮ್ಲಗಳ ಸೋಡಿಯಂ ಲವಣಗಳ ಸಂಕೀರ್ಣ ಮಿಶ್ರಣವೇ ಸಾಬೂನು. ಪೊಟ್ಯಾಸಿಯಂ ಹೈಡ್ರಾಕ್ಸೈಡಿನಿಂದ ಜಲವಿಶ್ಲೇಷಣೆಗೊಳಿಸಿದಾಗ ಮೆದು ಸಾಬೂನು ದೊರೆಯುತ್ತದೆ. ಆಲ್ಕೊಹಾಲನ್ನು ಸೇರಿಸಿ ಪಾರದರ್ಶಕ ಗ್ಲಿಸರಿನ್ ಸಾಬೂನನ್ನೂ ಆಲಿವ್‌ಎಣ್ಣೆಯಿಂದ ಕ್ಯಾಸ್ಟೀಲ್ ಸಾಬೂನನ್ನೂ ತಯಾರಿಸುವರು. ಪರಿಮಳ ದ್ರವ್ಯಗಳು ಆಕರ್ಷಕ ಬಣ್ಣಗಳು ಮತ್ತು ಕ್ರಿಮಿನಾಶಕಗಳನ್ನು ಸೇರಿಸಿ ಸಾಬೂನಿನ ಉಪಯುಕ್ತತೆಯನ್ನು ಹೆಚ್ಚಿಸಬಹುದು.
ಕೊಬ್ಬುಗಳ ಜಲವಿಶ್ಲೇಷಣೆಗೆ ಖನಿಜಾಮ್ಲ, ಒತ್ತಡದಲ್ಲಿರುವ ಉಗಿ ಅಥವಾ ಲೈಪೇಸ್ ಕಿಣ್ವ ಇದನ್ನು ಬಳಸಬಹುದು. ನ್ಯಾಫ್ತಲೀನ್, ಓಲಿಯಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣಕ್ಕೆ ಟ್ವಿಚೆಲ್ ಪರಿವರ್ತಕ ಎಂದು ಹೆಸರು. ಇದರೊಡನೆ ಕೊಬ್ಬನ್ನು ಉಗಿಯ ಉಷ್ಣತೆಗೆ ಒಡ್ಡಿದಾಗ ಕೊಬ್ಬಿನ ಆಮ್ಲಗಳು ಬೇಗ ಬಿಡುಗಡೆಯಾಗುತ್ತವೆ. ಕೈಗಾರಿಕೆಯಲ್ಲಿ ಈ ಕೊಬ್ಬಿನ ಆಮ್ಲಗಳಿಗೆ ವಿಶೇಷ ಮಹತ್ತ್ವವಿದೆ. ಜ಼ಿಂಕ್ ಸ್ಟಿಯರೇಟನ್ನು ಅಂಗರಾಗಪುಡಿಗಳಲ್ಲಿ ಮತ್ತು ತೇವನಿರೋಧಕವಾಗಿ ಉಪಯೋಗಿಸುವುದನ್ನು ನೆನೆಯಬಹುದು.
ಪ್ರತಿಎಸ್ಟರೀಕರಣ (ಟ್ರಾನ್ಸ್ಎಸ್ಟರಿಫಿಕೇಷನ್)
ಬದಲಾಯಿಸಿಕೊಬ್ಬನ್ನು ಮೀಥೈಲ್ ಅಥವಾ ಈಥೈಲ್ ಆಲ್ಕೊಹಾಲಿನೊಡನೆ ಆಮ್ಲೀಯ ಅಥವಾ ಕ್ಷಾರೀಯ ವೇಗವರ್ಧಕಗಳ ಸಂಪರ್ಕದಲ್ಲಿ ಕಾಯಿಸಿದಾಗ ಅದರಲ್ಲಿರುವ ಗ್ಲಿಸರೈಡುಗಳು ಕೊಬ್ಬಿನ ಆಮ್ಲಗಳ ಮೀಥೈಲ್ ಅಥವಾ ಈಥೈಲ್ ಎಸ್ಟರುಗಳಾಗಿ ಪರಿವರ್ತಿತವಾಗುವುವು. ಈ ವಿಶೇಷ ಕ್ರಿಯೆಯನ್ನು ಪ್ರತಿಎಸ್ಟರೀಕರಣ ಎಂದು ಕರೆಯುವರು.
ಈ ಮೀಥೈಲ್ ಎಸ್ಟರುಗಳನ್ನು ಆಂಶಿಕ ಬಾಷ್ಪೀಕರಣದಿಂದ ಬೇರ್ಪಡಿಸಿ ಅನಂತರ ಜಲವಿಶ್ಲೇಷಣೆಮಾಡಿದರೆ ಮೂಲ ಆಮ್ಲಗಳು ದೊರೆಯುವುವು. ಕೊಬ್ಬಿನ ಆಮ್ಲಗಳನ್ನು ಗುರುತಿಸಲು ಈ ವಿಧಾನ ಸಹಾಯಕವಾಗಿದೆ.
ಅಪಕರ್ಷಣ
ಬದಲಾಯಿಸಿಎಸ್ಟರುಗಳ ಅಪಕರ್ಷಣದಿಂದ ಆಲ್ಕೊಹಾಲುಗಳೂ ಲಭಿಸುವುವು. ಕೊಬ್ಬುಗಳೂ ಎಸ್ಟರುಗಳಾದುದರಿಂದ ಅವು ಅಪಕರ್ಷಣ ಹೊಂದಬೇಕು. ಹಾಗಾದಾಗ ಉದ್ದ ಸರಪಳಿ ರಚನೆಯುಳ್ಳ ಪ್ರೈಮರಿ ಆಲ್ಕೊಹಾಲುಗಳು ಹುಟ್ಟುತ್ತವೆ. ಇದಕ್ಕಾಗಿ ಬಳಸುವ ಅಪಕರ್ಷಣಕಾರಿಗಳೆಂದರೆ ಸೋಡಿಯಂ ಮತ್ತು ಆಲ್ಕೊಹಾಲ್, ತಾಮ್ರದ ಕ್ರೋಮೈಟ್ (CuO.CuCr2O4) ವೇಗವರ್ಧಕದ ಸಂಪರ್ಕದಲ್ಲಿರುವ ಹೈಡ್ರೊಜನ್ (೨೦೦ ವಾಯುಭಾರ ಒತ್ತಡದಲ್ಲಿ ಮತ್ತು ೨೫೦o...... ಸೆಂ.ಗ್ರೇ. ಉಷ್ಣತೆಯಲ್ಲಿ ಇತ್ಯಾದಿ. σ- ಪಾಮಿಟೊ σ'β ಡೈಲಾರಿನ್ ಅಪಕರ್ಷಿತವಾದಾಗ ಲಾರಿಲ್ ಮತ್ತು ಪಾಮಿಟಿಲ್ ಆಲ್ಕೊಹಾಲುಗಳೂ ಗ್ಲಿಸರಾಲೂ ಉತ್ಪತ್ತಿಯಾಗುವುವು.
ಕೊಬ್ಬರಿ ಎಣ್ಣೆಯ ಅಪಕರ್ಷಣದಿಂದ ಬಂದ ಆಲ್ಕೊಹಾಲುಗಳ ಮಿಶ್ರಣದಲ್ಲಿ ಲಾರಿಲ್ ಆಲ್ಕೊಹಾಲಿನ ಪ್ರಮಾಣ ಅಧಿಕವಾಗಿರುತ್ತದೆ. ಸಾಬೂನಿಗೆ ಉತ್ತಮ ಬದಲಿ ವಸ್ತುಗಳೆಂದು ಹೆಸರಾಗಿರುವ ಮಾರ್ಜಕಗಳ (ಡಿಟರ್ಜೆಂಟ್ಸ್) ತಯಾರಿಕೆಗೆ ಈ ಉನ್ನತ ಆಲ್ಕೊಹಾಲುಗಳ ವಿನಿಯೋಗವಾಗುತ್ತಿದೆ.
ಕೊಳೆಯುವಿಕೆ
ಬದಲಾಯಿಸಿಕೊಬ್ಬು ಹುಳಿಯಾಗಿ ದುರ್ವಾಸನೆ ಹುಟ್ಟಿದರೆ ಆಗ ಅದಕ್ಕೆ ಕಮಟು ಹಿಡಿದಿದೆ ಅಥವಾ ಕನರು ಬಂದಿದೆ ಎನ್ನುತ್ತೇವೆ. ದುರ್ಗಂಧಯುಕ್ತ ಆಮ್ಲಗಳು ಆಲ್ಡಿಹೈಡುಗಳು ಮತ್ತು ಕೀಟೋನುಗಳ ಉತ್ಪನ್ನದಿಂದ ಹೀಗಾಗುತ್ತದೆ. ಕನರು ವಾಸನೆಗೆ ಇನ್ನೂ ಹಲವಾರು ಕಾರಣಗಳಿರಬಹುದು. ಸೂಕ್ಷ್ಮ ಜೀವಾಣುಗಳ ಪ್ರೇರಣೆಯಿಂದ ಕೊಬ್ಬು ನಿಧಾನವಾಗಿ ಜಲವಿಶ್ಲೇಷಣೆ ಹೊಂದಿ ದುರ್ವಾಸನೆಯುಳ್ಳ C4-C10 ಆಮ್ಲಗಳಾಗಿರಬಹುದು. ಅಥವಾ ಈ ಆಮ್ಲಗಳು ಬೀಟಾ ಕೀಟಾನಿಕಾಮ್ಲಗಳಾಗಿ ಉತ್ಕರ್ಷಿತವಾಗಬಹುದು. ಇವು ಇಂಗಾಲದ ಡೈಆಕ್ಸೈಡ್‌ನ್ನು ಕಳೆದುಕೊಂಡು ಅಹಿತ ವಾಸನೆಯುಳ್ಳ ಕೀಟೋನುಗಳಾಗಿ ಪರಿವರ್ತಿತವಾಗಬಹುದು.
ವಾಯು ಮಂಡಲದ ಆಕ್ಸಿಜನ್ನಿನ ಸಂಪರ್ಕದಲ್ಲಿ ಕೊಬ್ಬಿನ ಅಪರ್ಯಾಪ್ತ ಭಾಗ ಪೆರಾಕ್ಸೈಡುಗಳಾಗಿ ಉತ್ಕರ್ಷಿತವಾಗಿ ಅನಂತರ ಅವು ದುರ್ವಾಸನೆಯುಳ್ಳ ಆಲ್ಡಿಹೈಡುಗಳಿಗೆ ವಿಭಜಿಸುವುದು ಕನರು (ಕಮಟು) ನಾತಕ್ಕೆ ಪ್ರದಾನ ಕಾರಣವೆಂದು ತೋರುತ್ತದೆ. ಇದನ್ನು ಟ್ರೈಓಲಿಯಿನ್ ಉದಾಹರಣೆಯಿಂದ ವಿವರಿಸಬಹುದು.
ಪರ್ಯಾಪ್ತ ಕೊಬ್ಬುಗಳು ಕಮಟು ಹಿಡಿಯದಿರಲು ಅವುಗಳಲ್ಲಿ ಅಪರ್ಯಾಪ್ತ ಗುಂಪುಗಳು ಇಲ್ಲದಿರುವುದೇ ಕಾರಣ. ಕಮಟು ಹಿಡಿಯುವುದನ್ನು ತಡೆಗಟ್ಟಲು ಕೊಬ್ಬಿನೊಡನೆ ಮೆಲೇಯಿಕ್ ಆನ್‌ಹೈಡ್ರೈಡಿನಂಥ ಉತ್ಕರ್ಷಣ ವಿರೋಧಿಗಳನ್ನು (ಆಂಟಿ ಆಕ್ಸಿಡೆಂಟ್ಸ್) ಮಿಶ್ರಣಮಾಡುವುದು ಪದ್ಧತಿ. ಕೊಬ್ಬು ಕಮಟು ಹಿಡಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕ್ರೀಸ್ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು. ಕೊಬ್ಬಿಗೆ ಈಥರ್, ಪ್ಲೋರೋ ಗ್ಲೂಸಿನಾಲ್ ಮತ್ತು ಹೈಡ್ರೊಕ್ಲೋರಿಕ್‌ಆಮ್ಲ ಸೇರಿಸಿದಾಗ ಕೆಂಪು ಬಣ್ಣ ಉಂಟಾದರೆ ಕೊಬ್ಬು ಕೊಳೆಯಲು ಆರಂಭವಾಗಿದೆ ಎಂದು ಖಚಿತವಾಗುತ್ತದೆ.
ಕೊಬ್ಬಿನ ವಿಶ್ಲೇಷಣೆ: ಸಾಬೂನಿಕರಣ ಮೌಲ್ಯ (ಸಪೋನಿಫಿಕೇಶನ್ ವ್ಯಾಲ್ಯೂ)
ಬದಲಾಯಿಸಿ೧ ಗ್ರಾಂ ಕೊಬ್ಬನ್ನು ಅಥವಾ ಎಣ್ಣೆಯನ್ನು ಸಂಪೂರ್ಣವಾಗಿ ಸಾಬೂನೀಕರಿಸಲು ಅಗತ್ಯವಾದ ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ಮಿಲಿಗ್ರಾಂ ತೂಕ ಅದರ ಸಾಬೂನೀಕರಣ ಮೌಲ್ಯ.
ನಿರ್ದಿಷ್ಟ ತೂಕ ಕೊಬ್ಬನ್ನು ಅಗತ್ಯಕ್ಕಿಂತ ಹೆಚ್ಚು ಪ್ರಮಾಣ ಶಿಷ್ಟ (ಪ್ರಬಲತೆ ಗೊತ್ತಿರುವ) ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದೊಡನೆ ಕುದಿಸಲಾಗುವುದು. ಆಗ ಕೊಬ್ಬು ಕ್ಷಾರದ ಒಂದು ಭಾಗವನ್ನು ತನ್ನ ಜಲವಿಶ್ಲೇಷಣೆಗೆ ಉಪಯೋಗಕೊಳ್ಳುವುದು. ಉಳಿದ ಕ್ಷಾರವನ್ನು ಶಿಷ್ಟ ಆಮ್ಲದೊಂದಿಗೆ ಫೀನಾಲ್ಫ್‌ಥ್ಯಾಲೀನ್ ಸೂಚಕದ ಸಹಾಯದಿಂದ ಅನುಮಾಪನ ಮಾಡಲಾಗುವುದು. ಅನಂತರ ಕೊಬ್ಬಿನ ಸಾಬೂನೀಕರಣ ಮೌಲ್ಯವನ್ನು ಗುಣಿಸಬಹುದು. ಟ್ರೈಬ್ಯುಟಿರಿನ್ ಉದಾಹರಣೆಯಾಗಿ ಇಟ್ಟುಕೊಂಡು ಮಾಡಿದ ಲೆಕ್ಕಾಚಾರದ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.
ಹೀಗೆ ೩೦೨.೩೬ ಗ್ರಾಂ ಟ್ರೈಬ್ಯುಟರಿನ್ನನ್ನು ಜಲವಿಶ್ಲೇಷಣೆ ಮಾಡಲು ೧೬೮.೩ ಗ್ರಾಂ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಬೇಕಾಗಿದೆ. ಆದ್ದರಿಂದ ೧ ಗ್ರಾಮನ್ನು ಜಲವಿಶ್ಲೇಷಣೆ ಮಾಡಲು ೫೫೭ ಮಿ.ಗ್ರಾಂ. ಬೇಕಾಗುತ್ತದೆ. ಹೀಗೆ ಟ್ರೈಬ್ಯೂಟೆರಿನ್ನಿನ ಸಾಬೂನೀಕರಣ ಮೌಲ್ಯ ೫೫೭.
ಸಂಯೋಜಿತ ಕೊಬ್ಬು
ಬದಲಾಯಿಸಿಪ್ಯಾರಫಿನ್ ಮೇಣವನ್ನು ಸೋಡಿಯಂ ಕಾರ್ಬೊನೇಟಿನ ದ್ರಾವಣದೊಡನೆ ಒತ್ತಡದಲ್ಲಿ ಸುಮಾರು ೧೭೦೦ ಸೆಂ.ಗ್ರೇ. ಉಷ್ಣತೆಗೆ ಕಾಯಿಸಿ ಗಾಳಿ ಹಾಯಿಸಿದರೆ ಬೆಸ ಸಂಖ್ಯೆಯ ಇಂಗಾಲದ ಪರಮಾಣುಗಳಿರುವ (C13-C19) ಕೊಬ್ಬಿನ ಆಮ್ಲಗಳು ಉತ್ಪತ್ತಿಯಾಗುವುವು. ಈ ಕ್ರಿಯೆಗೆ ಸೀಸ, ಮ್ಯಾಂಗನೀಸ್ ಮತ್ತು ವೆನೇಡಿಯಂ ಲೋಹಗಳು ವೇಗವರ್ಧಕಗಳಾಗಿ ವರ್ತಿಸುತ್ತವೆ. ಒಂದನೆಯ ಮಹಾಯುದ್ಧದ ಸಮಯದಲ್ಲಿ (೧೯೧೪-೧೮) ಜರ್ಮನಿಗೆ ವಿದೇಶಗಳಿಂದ ಎಣ್ಣೆಬೀಜಗಳ ಸರಬರಾಜು ಕಡಿದುಹೋಯಿತು. ಆಗ ಉಂಟಾದ ಎಣ್ಣೆಯ ಕೊರತೆಯನ್ನು ನೀಗಲು ಆ ದೇಶ ಈ ವಿಧಾನವನ್ನು ರೂಪಿಸಿತು. ಗ್ಲಿಸರಾಲನ್ನು ಫರ್ಮೆಂಟೇಷನ್ ವಿಧಾನದಿಂದ ಮಾಡಿಕೊಂಡು ಅದನ್ನು ಕೊಬ್ಬಿನ ಆಮ್ಲಗಳೊಂದಿಗೆ ಮೊಹರಾದ ಕೊಳವೆಗಳಲ್ಲಿ ೨೦೦೦-೨೬೦೦ ಸೆಂ.ಗ್ರೇ. ಉಷ್ಣತಾ ಮಿತಿಯಲ್ಲಿ ಕಾಯಿಸಿದರೆ ಕೊಬ್ಬು ದೊರೆಯುವುದು. ಮಾನೊ, ಡೈ ಮತ್ತು ಟ್ರೈಗ್ಲಿಸರೈಡುಗಳನ್ನು ಹೀಗೆ ಪಡೆಯಬಹುದು. ವರ್ಷವೊಂದಕ್ಕೆ ಪ್ರತಿಯೊಬ್ಬನೂ ೩-೪ ಕಿ.ಗ್ರಾಂ. ಕೊಬ್ಬನ್ನು ಮಲದೊಡನೆ ವಿಸರ್ಜಿಸುವನೆಂದು ಅಂದಾಜು ಮಾಡಲಾಗಿದೆ. ತನ್ನ ದೊಡ್ಡ ನಗರಗಳ ಗ್ರಾಮಸಾರದಲ್ಲಿ ವ್ಯರ್ಥವಾಗಿ ಹೋಗುತ್ತಲಿದ್ದ ಇಂಥ ಕೊಬ್ಬನ್ನು ಸಹ ಜರ್ಮನಿ ಆಗ ಸಂಸ್ಕರಿಸಿ ಸಂಪಾದಿಸಿತು. ಎರಡನೆಯ ಮಹಾ ಯುದ್ಧದ ಕಾಲದಲ್ಲಿ ಜರ್ಮನಿ ಫಿಷರ್-ಟ್ರೋಷ್ ವಿಧಾನದಿಂದ ಕೊರೆತ ಹೈಡ್ರೊಕಾರ್ಬನ್ನುಗಳನ್ನು ಉತ್ಕರ್ಷಿಸಿ ಆಮ್ಲಗಳನ್ನಾಗಿ ಮಾಡಿಕೊಂಡು ಅವುಗಳಿಂದ ಕೊಬ್ಬನ್ನು ಸಂಯೋಜಿಸಿತು.
ಕೊಬ್ಬಿನ ಮಹತ್ತ್ವ
ಬದಲಾಯಿಸಿಇವು ಶಕ್ತಿದಾತ ಆಹಾರಾಂಶಗಳು. ಒಂದು ಗ್ರಾಂ ಕೊಬ್ಬಿನ ದಹನದಿಂದ ೯,೫೦೦ ಕೆಲೊರಿಗಳಷ್ಟು ಶಕ್ತಿ ನಮಗೆ ಉಷ್ಣದ ರೂಪದಲ್ಲಿ ಲಭ್ಯವಾಗುತ್ತದೆ. ಅದೇ ಒಂದು ಗ್ರಾಂ ಸಸಾರಜನಕ ಅಥವಾ ಶರ್ಕರ ಪಿಷ್ಟಾದಿಗಳಿಂದ ಕೇವಲ ೪,೦೦೦ ಕೆಲೊರಿಗಳಷ್ಟು ಶಕ್ತಿ ಉತ್ಪಾದನೆಯಾಗುತ್ತದೆ. ಕೊಬ್ಬಿಗೆ ಉಷ್ಣವಾಹಕ ಗುಣ ಕಡಿಮೆ. ಆದ್ದರಿಂದ ನಮ್ಮ ಶರೀರದಿಂದ ಉಷ್ಣ ಹೊರಬೀಳುವುದನ್ನು ಇದು ತಡೆಗಟ್ಟುತ್ತದೆ.[೩] ಶೀತಹವೆಯಲ್ಲಿ ಅಥವಾ ತಣ್ಣೀರಿನಲ್ಲಿ ವಾಸಿಸುವ ಕರಡಿ ಮತ್ತು ತಿಮಿಂಗಲಗಳ ಚರ್ಮದ ಅಡಿಯಲ್ಲಿ ಅಗಾಧಪ್ರಮಾಣದ ಕೊಬ್ಬಿನ ಸಂಗ್ರಹವಿದ್ದು, ಅವುಗಳ ದೇಹದಿಂದ ಉಷ್ಣ ನಷ್ಟವಾಗದಂತೆ ರಕ್ಷಿಸುತ್ತದೆ. ಜೇನು ಗೂಡಿನಲ್ಲಿ ಶೇಖರಿಸುವ ಸಕ್ಕರೆಯ ಪಾಕ ಜಲಮಿಶ್ರಿತವಾಗದಂತೆ ಅಥವಾ ಕಲುಷಿತವಾಗದಂತೆ, ಅದರಲ್ಲಿರುವ ಮೇಣ ನೋಡಿಕೊಳ್ಳುತ್ತದೆ. ಕೊಬ್ಬಿನ ಅಥವಾ ಮೇಣದ ಹೊದಿಕೆಯಿರುವ ಎಲೆಗಳಿಂದ ನೀರು ನಷ್ಟವಾಗುವುದಿಲ್ಲ. ಅವುಗಳಿಗೆ ನೀರು ಕಂದುವುದೂ ಇಲ್ಲ. ಸೇಬು ಮತ್ತು ಸಿಟ್ರಸ್ ಜಾತಿಯ ಹಣ್ಣುಗಳಿಗೆ ಇಂಥ ಮೇಣದ ಕವಚವಿರುತ್ತದೆ.
ಊತಕಗಳಿಂದ ಬೇರ್ಪಡಿಸಿದ ಕೊಬ್ಬುಗಳಲ್ಲಿ ಅಲ್ಪಪ್ರಮಾಣದ ಫಾಸ್ಫೊಲೈಪಿಡ್ಡುಗಳು, ಸ್ಟೆರಾಲುಗಳು, A, D, E ಜೀವಾತುಗಳು ಮತ್ತು ಕ್ಯಾರೊಟೀನುಗಳು ಇರುತ್ತವೆ. ಇವುಗಳ ಪೈಕಿ ಕೆಲವು ವಸ್ತುಗಳಿಗೆ ಬೆಳೆವಣಿಗೆಯನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇಂಥ ಪೋಷಕವಸ್ತುಗಳ ವಾಹಕವಾಗಿ ಕೊಬ್ಬು ನಮಗೆ ಉಪಕರಿಸುತ್ತಿದೆ. ಗ್ಲಿಸರೈಡುಗಳಲ್ಲಿ ಅಪರ್ಯಾಪ್ತ ಭಾಗವಿರುವುದರಿಂದಲೇ ಅವು ಜೀರ್ಣ ಹೊಂದಿ ರಕ್ತಗತವಾಗಬಲ್ಲವು ಎಂದು ಭಾವಿಸಲಾಗಿದೆ. ಶರ್ಕರ ಪಿಷ್ಟಾದಿಗಳು ಇದ್ದರೂ ಸಹ, ಆಹಾರದಲ್ಲಿ ಕೊಬ್ಬು ಇಲ್ಲದಿದ್ದರೆ ಇಲಿಗಳಲ್ಲಿ ಕೊರತೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುವು. ಪಾದಗಳು ಮತ್ತು ಬಾಲಗಳು ಚಕ್ಕೆಗಟ್ಟಿ ಅವುಗಳಲ್ಲಿ ಹುರುಪೇಳುವುದು. ಹೀಗಾಗಲು ಅವುಗಳ ಆಹಾರದಲ್ಲಿ ಲಿನೊಲಿಯಿಕ್, ಲಿನೊಲಿನಿಕ್ ಮತ್ತು ರ‍್ಯಾಬಿಡೋನಿಕ್ ಆಮ್ಲಗಳ ಕೊರತೆ ಕಾರಣವೆಂದು ಗೊತ್ತಾಗಿದೆ. ಮಕ್ಕಳನ್ನು ಬಾಧಿಸುವ ಒಂದು ರೀತಿಯ ಇಸಬುರೋಗಕ್ಕೂ ಈ ಆಮ್ಲಗಳ ಕೊರತೆಗೂ ಸಂಬಂಧ ಕಲ್ಪಿಸುವುದುಂಟು. ವಿಕಿರಣಶೀಲ ಸಮಸ್ಥಾನಿಗಳಿಂದ ಗುರುತು ಮಾಡಿದ ಸ್ಟಿಯರಿಕ್ ಆಮ್ಲವನ್ನು ಒಳಗೊಂಡ ಆಹಾರವನ್ನು ಪ್ರಾಣಿಗಳಿಗೆ ತಿನ್ನಿಸಿದಾಗ ಅದರ ಒಂದು ಭಾಗ ಓಲಿಯಿಕ್‌ಆಮ್ಲವಾಗಿ ಪರಿವರ್ತಿತವಾಗುವುದು ತಿಳಿದಿದೆ. ಇದರಿಂದ ಪ್ರಾಣಿಶರೀರ ಓಲಿಯಿಕ್ ಆಮ್ಲವನ್ನು ಸ್ವತಃಸಂಯೋಜಿಸಬಲ್ಲುದು ಎಂದು ಗೊತ್ತಾಗುತ್ತದೆ. ಆದರೆ ಹೀಗೆಯೇ ಸಮಸ್ಥಾನಿಗಳಿಂದ ಗುರುತು ಹಬ್ಬಿದ ಕೊಬ್ಬಿನ ಆಮ್ಲಗಳಿಂದ ದೇಹ ಲಿಸೊಲಿಯಿಕ್, ಲಿನೊಲಿಯಿಕ್ ಮತ್ತು ರ‍್ಯಾಬಿಡೋನಿಕಾಮ್ಲಗಳನ್ನು ಮಾಡಿಕೊಂಡುದು ವ್ಯಕ್ತವಾಗಿಲ್ಲ. ಅಂದರೆ ನಮ್ಮ ಆಹಾರದ ಮೂಲಕ ಅವು ಒದಗಿದ ಹೊರತು ಕೊರತೆ ರೋಗಗಳು ಅನಿವಾರ್ಯ ಆದ್ದರಿಂದ ಈ ಮೂರು ಆಮ್ಲಗಳು ಅಗತ್ಯ ಕೊಬ್ಬಿನ ಆಮ್ಲಗಳು ಎನಿಸಿಕೊಂಡಿವೆ.
ಆಹಾರ ಜಠರದಲ್ಲಿರುವವರೆಗೂ ನಮಗೆ ಹಸಿವು ತೋರುವುದಿಲ್ಲ. ಆಹಾರದಲ್ಲಿರುವ ಕೊಬ್ಬು ಈ ಕಾಲಾವಧಿಯನ್ನು ಹೆಚ್ಚಿಸುತ್ತದೆ. ಅದರಿಂದ ನಮಗೆ ತೃಪ್ತಿಯ ಭಾವನೆ ಹೆಚ್ಚು ಕಾಲ ಉಳಿಯುತ್ತದೆ.
ಜೀವಿಗಳಲ್ಲಿ ಕೊಬ್ಬುಗಳ ಸಂಯೋಜನೆ ಮತ್ತು ವಿನಿಯೋಗ
ಬದಲಾಯಿಸಿಪಕ್ವವಾಗುವ ಕೊನೆಯ ಹಂತದಲ್ಲಿ ಬೀಜ ಮತ್ತು ಹಣ್ಣುಗಳಲ್ಲಿ ಕೊಬ್ಬು ರೂಪುಗೊಳ್ಳುತ್ತದೆ. ಅಪಕ್ವಸ್ಥಿತಿಯಲ್ಲಿ ಅವುಗಳಲ್ಲಿ ಶರ್ಕರ ಪಿಷ್ಟಾದಿಗಳು ಅಧಿಕವಾಗಿರುತ್ತವೆ. ಕಿಣ್ವಗಳು ಶರ್ಕರ ಪಿಷ್ಟಾದಿಗಳನ್ನು ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಿಗಾಗಿ ಪರಿವರ್ತಿಸುವುವು. ಅನಂತರ ಅವು ಕೂಡುವುದರಿಂದ ಗ್ಲಿಸರೈಡುಗಳು ಹುಟ್ಟುವುವು. ಶರ್ಕರ ಪಿಷ್ಟಾದಿಗಳಿಂದ ಕೊಬ್ಬು ಉಂಟಾಗುತ್ತದೆ ಎಂಬ ಸಿದ್ಧಾಂತಕ್ಕೆ ವಿಕಿರಣಶೀಲ ಸಮಸ್ಥಾನಿಗಳ ನೆರವಿನಿಂದ ನಡೆಸಿದ ಪ್ರಯೋಗಗಳು ಬೆಂಬಲ ನೀಡುತ್ತವೆ. ವಿಕಿರಣಶೀಲ ಸಮಸ್ಥಾನಿಗಳಿರುವ ಅಸಿಟೇಟ್‌ಯುಕ್ತ ಆಹಾರವನ್ನು ಪ್ರಾಣಿಗಳಿಗೆ ಒದಗಿಸಿದಾಗ ಅವುಗಳ ಊತಕಗಳಲ್ಲಿ ಅಸಿಟೇಟು ಕೊಬ್ಬಿನ ಆಮ್ಲಗಳಿಗೆ ಮಾರ್ಪಡುವುದು ಕಂಡು ಬಂದಿದೆ. ಕ್ರಿಯೆ ಇನ್ನೂ ಮುಂದುವರಿದು ಅಸಿಟೇಟು ಕೊಲೆಸ್ಟೆರಾಲ್ ಆಗುವುದೂ ವ್ಯಕ್ತವಾಗಿದೆ.
ನೈಸರ್ಗಿಕ ಕೊಬ್ಬುಗಳಲ್ಲಿರುವ ಆಮ್ಲಗಳಲ್ಲೆಲ್ಲ ಸಮಸಂಖ್ಯೆಯ ಇಂಗಾಲದ ಪರಮಾಣುಗಳಿರುವುದು ಗಮನಾರ್ಹ. ಅದರಲ್ಲೂ ೧೮ ಇಂಗಾಲದ ಪರಮಾಣುಗಳಿರುವ ಆಮ್ಲಗಳೇ ಹೆಚ್ಚಾಗಿರುವುದು ಮತ್ತೊಂದು ವೈಶಿಷ್ಟ್ಯ. ಆದ್ದರಿಂದ ಮೂರು ಗ್ಲೂಕೋಸ್ (C6H12O6) ಅಣುಗಳಿಂದ ಅಥವಾ ಪಾಲಿಸ್ಯಾಕರೈಡುಗಳ C18 ಚೌಕಟ್ಟಿನಿಂದ ಕೊಬ್ಬು ಆಗಿರಬಹುದೆಂದು ಒಮ್ಮೆ ಭಾವಿಸಲಾಗಿತ್ತು. ಆದರೆ ಎರಡು ಇಂಗಾಲದ ಪರಮಾಣುಗಳಿರುವ ಅಸಿಟೇಟ್ ಘಟಕಗಳಿಂದ ಕೊಬ್ಬು ಆಗಿರುವುದು ಹೆಚ್ಚು ಸಂಭವನೀಯ. ಸಸಾರಜನಕಗಳು ಅಥವಾ ಶರ್ಕರ ಪಿಷ್ಟಾದಿಗಳ ಉತ್ಕರ್ಷಣದಿಂದ ಅಸಿಟೇಟ್ ಆಗಬಹುದಾದ್ದರಿಂದ ಈ ಸಿದ್ಧಾಂತ ಆರ್ಕಷಕವಾಗಿದೆ. ಪ್ರಾಯಶಃ ಪಿತ್ತಜನಕಾಂಗದಲ್ಲಿ ಹೈಡ್ರೊಜನ್ ಸಂಯೋಗ ಮತ್ತು ವಿಯೋಗದ ಹಲವು ಕ್ರಿಯೆಗಳ ಫಲವಾಗಿ ಅಸಿಟೇಟಿನಿಂದಾದ ಕೊಬ್ಬುಗಳಲ್ಲಿ ದ್ವಿಬಂಧಗಳು ಮೂಡುವುವು. ಮುಂದೆ ಇತರ ಊತಕಗಳಲ್ಲಿ ಉತ್ಕರ್ಷಿತವಾಗಲು ಇದು ಅನುಕೂಲ.
ಸಂಗ್ರಹಿತ ಕೊಬ್ಬನ್ನು ಸಸ್ಯ ಭ್ರೂಣಗಳು ಹೇಗೆ ಬಳಸಿಕೊಳ್ಳುವುವು ಎಂಬುದು ೧೯೬೦ ರ ವರೆಗೆ ಪೂರ್ತಿಯಾಗಿ ವಿವರಿಸಲ್ಪಟ್ಟಿರಲಿಲ್ಲ. ಮೊಳೆಯುತ್ತಿರುವ ಭ್ರೂಣಗಳಲ್ಲಿ ಕಿಣ್ವಗಳು ಕೊಬ್ಬನ್ನು ಜಲವಿಶ್ಲೇಷಣೆಗೊಳಿಸಿ ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಾಗಿ ಪರಿವರ್ತಿಸುವುವು ಎಂದು ಈಗ ಗೊತ್ತಾಗಿದೆ. ಇವು ಎರಡು ಅಥವಾ ನಾಲ್ಕು ಇಂಗಾಲದ ಪರಿಮಾಣುಗಳನ್ನು ಒಳಗೊಂಡ ಉತ್ಕರ್ಷಣ ವಿಧಿಗಳ ಮೂಲಕ ಅಂತಿಮವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರಾಗಿ ಹೋಗುತ್ತವೆ.
ಪ್ರಾಣಿಗಳ ಆಹಾರ ಪಚನ ಪಥದಲ್ಲಿ ಲೈಪೇಸ್ ಎಂಬ ಕಿಣ್ವವಿರುವ ಪಚನಕಾರಿ ರಸಗಳಿರುತ್ತವೆ. ಇವು ಗ್ಲಿಸರೈಡುಗಳನ್ನು ಭಾಗಶಃ ಜಲವಿಶ್ಲೇಷಣೆ ಮಾಡಿ, ಎಮಲ್ಷನ್ ಸ್ಥಿತಿಗೆ ಬರುವುವು. ಉತ್ಪತ್ತಿಯಾದ ಗ್ಲಿಸರಾಲ್, ಕೊಬ್ಬಿನ ಆಮ್ಲಗಳು, ಉಳಿದ ಗ್ಲಿಸರೈಡುಗಳು ಮತ್ತು ಭಾಗಶಃ ಗ್ಲಿಸರೈಡುಗಳು, ಕರುಳಿನ ಪೊರೆಯ ಮೂಲಕ ಹೀರಲ್ಪಡುವುವು; ಮತ್ತೆ ಭಾಗಶಃ ಪುನಃ ಸಂಯೋಜಿಸಿ ಗ್ಲಿಸರೈಡುಗಳು ಮತ್ತು ಫಾಸ್ಫೊಲೈಪಿಡ್ಡುಗಳಾಗುವುವು. ಸೂಕ್ಷ್ಮ ಹನಿಗಳಾಗಿ ರಕ್ತದಲ್ಲಿ ಸೇರಿ, ಸಂಗ್ರಹ ಅಥವಾ ವಿನಿಯೋಗ ಕ್ಷೇತ್ರಗಳಿಗೆ ರವಾನೆಯಾಗುವುವು.
ಒಂದು ಪ್ರಾಣಿಯಲ್ಲಿರುವ ಕೊಬ್ಬಿನ ಗುಣ ಆ ಪ್ರಾಣಿ ಸೇವಿಸಿದ ಆಹಾರದಲ್ಲಿದ್ದ ಕೊಬ್ಬಿನ ಗುಣವನ್ನು ಅವಲಂಬಿಸಿದೆ. ಉದಾಹರಣೆಗೆ ಕಾಡ್ ಲಿವರ್ ಎಣ್ಣೆಯಿರುವ ಆಹಾರ ತಿಂದ ಹಂದಿಯ ಕೊಬ್ಬು ಮೃದುವಾಗಿಯೂ ಕೊಬ್ಬರಿ ಎಣ್ಣೆಯಿರುವ ಆಹಾರವನ್ನು ಒದಗಿಸಿದ ಹಸುವಿನ ಹಾಲಿನ ಕೊಬ್ಬು ಅದಕ್ಕೆ ಅನುಗುಣವಾಗಿಯೂ ಇರುತ್ತದೆ. ಆದ್ದರಿಂದ ಪ್ರಾಣಿಗಳ ಕೊಬ್ಬು ಕಿಣ್ವಗಳ ಸಹಾಯದಿಂದ ಸಂಯೋಜಿತವಾಗಿರಬಹುದು; ಅಥವಾ ಆಹಾರದಿಂದ ರೂಪಿತವಾಗಿರಬಹುದು. ಪರಿಣಾಮವಾಗಿ ಪ್ರಾಣಿಗಳ ಕೊಬ್ಬಿನಲ್ಲಿ ಈ ಎರಡು ಅಂಶಗಳೂ ಕೂಡಿರಬಹುದು. ಪ್ರಾಣಿದೇಹದಲ್ಲಿ ಸಂಯೋಜಿತವಾದ ಕೊಬ್ಬು ಅದರ ಜಾತಿಯನ್ನು ಅವಲಂಬಿಸಿದ್ದರೆ ಆಹಾರದಿಂದ ಪುನರ‍್ರೂಪಿತವಾದ ಕೊಬ್ಬು ಅದಕ್ಕೆ ಅನುಗುಣವಾಗಿರುವುದು ಸ್ವಾಭಾವಿಕ.
ಮಾನವದೇಹದಲ್ಲಿ ಕೊಬ್ಬಿನ ಪಚನ ಮತ್ತು ವಿನಿಯೋಗ
ಬದಲಾಯಿಸಿನಮ್ಮ ಆಹಾರದಲ್ಲಿರುವ ಕೊಬ್ಬು ಬಾಯಿಯಲ್ಲಿ ವಿಭಜಿಸುವುದಿಲ್ಲ. ಲಾಲಾರಸ ಈ ಕೆಲಸ ಮಾಡಲಾರದು. ಸ್ವಲ್ಪಮಟ್ಟಿಗೆ ಜಠರರಸ ಈ ಕಾರ್ಯ ನಿರ್ವಹಿಸುತ್ತದೆ. ಸಣ್ಣಕರುಳಿನ ರಸಕ್ಕೆ ಕ್ಷಾರೀಯ ಸನ್ನಿವೇಶ ಅಗತ್ಯ. ಆದ್ದರಿಂದ ಇಲ್ಲಿ ಗಣನೀಯ ಪ್ರಮಾಣದ ಕೊಬ್ಬು, ಅದರ ಆಮ್ಲ ಮತ್ತು ಗ್ಲಿಸರಾಲುಗಳಿಗೆ ಜಲವಿಶ್ಲೇಷಣೆಯಾಗುತ್ತದೆ. ಕೊಬ್ಬನ್ನು ಜಲವಿಶ್ಲೇಷಣೆ ಮಾಡುವ ಕಿಣ್ವಗಳಿಗೆ ಲೈಪೇಸುಗಳೆಂದು ಹೆಸರು. ಮಾನವದೇಹಕ್ಕೆ ಮುಖ್ಯವಾಗಿ ಎರಡು ಲೈಪೇಸುಗಳು ಬೇಕು. ಮೊದಲನೆಯದು ಸ್ಟೆಪ್ಸಿನ್. ಇದು ಮೆದೋಜೀರಕದಲ್ಲಿ ಹುಟ್ಟುತ್ತದೆ. ಯಕೃತ್ತಿನಲ್ಲಿ (ಲಿವರ್) ಉತ್ಪಾದಿಸಲ್ಪಟ್ಟು ಪಿತ್ತಕೋಶದ (ಗಾಲ್ ಬ್ಲ್ಯಾಡರ್) ದಾಸ್ತಾನಾಗುವ ಕೆಲವು ವಸ್ತುಗಳಿವೆ. ಇವೇ ಪಿತ್ತಲವಣಗಳು (ಬೈಲ್ ಸಾಲ್ಟ್ಸ್). ಇವು ಸಾಬೂನಿನಂಥ ವಸ್ತುಗಳಾದ್ದರಿಂದ ಕೊಬ್ಬನ್ನು ಎಮಲ್ಷನ್ ಸ್ಥಿತಿಗೆ ತಂದು ಕರುಳಿನ ರಸದೊಡನೆ ಮಿಳಿತವಾಗುವಂತೆಯೂ ಕರುಳಿನ ಭಿತ್ತಿಗಳಲ್ಲಿ ಕೊಬ್ಬಿನೊಡನೆ ವರ್ತಿಸಬಲ್ಲ ಎರಡನೆಯ ಮುಖ್ಯ ಕಿಣ್ವ ಉತ್ಪತ್ತಿಯಾಗುವಂತೆಯೂ ಮಾಡುತ್ತವೆ. ಜಲವಿಶ್ಲೇಷಣೆಯ ಉತ್ಪನ್ನಗಳಾದ ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳನ್ನು ಕರುಳಿನ ಭಿತ್ತಿಗಳು ಹೀರಿಕೊಳ್ಳುತ್ತವೆ. ಅವು ಪುನಃ ಸಂಯೋಜಿಸಿ ಕೊಬ್ಬಾಗುತ್ತವೆ. ಆದರೆ ಮೂಲ ಆಹಾರದಲ್ಲಿದ್ದ ಕೊಬ್ಬೇ ಆಗಬೇಕೆಂಬ ನಿಯಮವಿಲ್ಲ. ಸಂಯೋಜಿತ ಕೊಬ್ಬುಗಳು ರಕ್ತ ಮತ್ತು ದುಗ್ಧರಸದ (ಲಿಂಫ್) ಮೂಲಕ ದೇಹದ ನಾನಾ ಭಾಗಗಳಿಗೆ ರವಾನೆಯಾಗುತ್ತದೆ. ಕೊಬ್ಬಿನ ಕೋಠಿಗಳಲ್ಲಿ ಅವು ಸಂಗ್ರಹವಾಗಬಹುದು. ಹೀಗೆ ಕೂಡಿದ ಕೊಬ್ಬು ನಿಷ್ಕ್ರಿಯವಾಗಿ ಉಳಿಯುವುದಿಲ್ಲ. ಅವ್ಯಾಹತವಾಗಿ ರೂಪಾಂತರ ಹೊಂದುತ್ತಿರುತ್ತದೆ.
ಕೊಬ್ಬುಗಳ ಉತ್ಕರ್ಷಣ
ಬದಲಾಯಿಸಿದೇಹದಲ್ಲಿ ಕೊಬ್ಬುಗಳು ಇಂಗಾಲದ ಡೈಆಕ್ಸೈಡ್ ಮತ್ತು ನೀರಿಗೆ ಉತ್ಕರ್ಷಿತವಾಗಿ ಶಕ್ತಿನೀಡುತ್ತವೆ. ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಿಗೆ ಜಲವಿಶ್ಲೇಷಿತವಾಗುವುದು ಮೊದಲ ಹಂತ. ಮುಂದೆ ಇವು ಉತ್ಕರ್ಷಣ ಹೊಂದುತ್ತವೆ. ಯಕೃತ್ತಿನಲ್ಲಿ ಗ್ಲಿಸರಾಲು ಗ್ಲೈಕೊಜನ್ನಾಗಿ ಪರಿವರ್ತಿತವಾಗಬಹುದು. ಇಲ್ಲವೇ ಶರ್ಕರ ಪಿಷ್ಟಾದಿಗಳಂತೆ ಮಧ್ಯವರ್ತಿಗಳ ಮೂಲಕ ಉತ್ಕರ್ಷಣ ಹೊಂದಬಹುದು.
ಮಧುಮೇಹ ರೋಗಸ್ಥಿತಿಯಲ್ಲಿ ಪಿತ್ತಜನಕಾಂಗಕ್ಕೆ ಅದರ ಶಕ್ತಿಮೂಲವಾದ ಶರ್ಕರ ಪಿಷ್ಟಾದಿಗಳು ಒದಗದೆ ಸೊರಗುವುದು. ಆಗ ದೇಹ ಕೊಬ್ಬನ್ನು ಉತ್ಕರ್ಷಿಸಿ ಅಗತ್ಯಶಕ್ತಿಯನ್ನು ಪಡೆಯಲು ಹವಣಿಸುತ್ತದೆ. ಈ ಸಂದರ್ಭದಲ್ಲಿ ಬೀಟಾ ಹೈಡ್ರಾಕ್ಸಿ ಬ್ಯುಟರಿಕ್ ಆಮ್ಲ ಅಸಿಟೋ ಅಸಿಟಿಕ್‌ಆಮ್ಲ ಮತ್ತು ಅಸಿಟೋನುಗಳು (ಇವುಗಳಿಗೆ ಅಸಿಟೋನ್ ಕಾಯಗಳು ಎನ್ನುತ್ತಾರೆ) ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ರೋಗಿಯ ಮೂತ್ರದಲ್ಲಿ ವಿಸರ್ಜಿಸಲ್ಪಡುವುವು. ರೋಗಿಯ ಉಸಿರಿನಲ್ಲೂ ಅಸಿಟೋನಿನ ಮಧುರವಾಸನೆ ಹತ್ತುವುದು. ಕೊಬ್ಬಿನ ಆಮ್ಲಗಳ ಬೀಟಾ ಉತ್ಕರ್ಷಣ ಸಿದ್ಧಾಂತಕ್ಕೆ ಇದೊಂದು ಸಾಕ್ಷಿಯಾಗಿದೆ.
ಕೀಟೋಸಿಸ್
ಬದಲಾಯಿಸಿಆರೋಗ್ಯಸ್ಥಿತಿಯಲ್ಲೂ ಅಲ್ಪ ಪ್ರಮಾಣ ಅಸಿಟೋನ್ ಕಾಯಗಳು ಮೂತ್ರದಲ್ಲಿರಬಹುದು. ಆಹಾರದಲ್ಲಿ ಕೊಬ್ಬು ಹೆಚ್ಚಾಗಿದ್ದರೆ ಅಥವಾ ಮಧುಮೇಹ ರೋಗವಿದ್ದಾಗ ಅವುಗಳ ಅಂಶ ಗಣನೀಯವಾಗಿ ಏರುವುದು. ಮಾಂಸಖಂಡಗಳ ಊತಕಗಳಲ್ಲಿ, ಅವು ಸಾಮಾನ್ಯವಾಗಿ ವಿನಿಯೋಗವಾಗುವುವು. ಆದರೆ ನೂತನ ಪರಿಸ್ಥಿತಿಯಲ್ಲಿ ಮಾಂಸಖಂಡಗಳು ಹೆಚ್ಚುವರಿ ಅಸಿಟೋನ್ ಕಾಯಗಳನ್ನು ಉಪಯೋಗಿಸಿಕೊಳ್ಳಲಾರದೆ ಉಳಿಸಿಬಿಡುವುವು. ಅವು ರಕ್ತಗತವಾಗಿ ಕೀಟೋಸಿಸ್ ರೋಗ ಪ್ರಾಪ್ತವಾಗುವುದು. ಅಸಿಟೊ ಅಸಿಟಿಕ್ ಮತ್ತು ಬೀಟಾ ಹೈಡ್ರಾಕ್ಸಿಬ್ಯುಟಿರಿಕ್ ಆಮ್ಲಗಳನ್ನು ಲವಣಗಳ ರೂಪದಲ್ಲಿ ಹೊರದೂಡಲು ದೇಹ ಯತ್ನಿಸುವುದು. ಇದಕ್ಕಾಗಿ ದೇಹದ ಎಲ್ಲ ಭಾಗಗಳಿಂದ ಕ್ಷಾರಾಂಶ ಬಳಸಲ್ಪಡುವುದು. ಪರಿಣಾಮವಾಗಿ ರಕ್ತದ ಕ್ಷಾರೀಯತೆ ತಗ್ಗಿ ಆಮ್ಲೀಯತೆ (ಆಸಿಡೋಸಿಸ್) ಎಂಬ ಸ್ಥಿತಿ ಏರ್ಪಡುವುದು.
ಹೀಗೆ ಕೊಬ್ಬಿನ ಆಮ್ಲದ ಭಾಗ ಕೀಟೋನ್ ಕಾಯಗಳ ಜನಕನಾದರೆ ಗ್ಲಿಸರಾಲ್ ಭಾಗ (ಟ್ರಯೋಸ್) ಶರ್ಕರ ಪಿಷ್ಟಾದಿಗಳಂತೆ ವರ್ತಿಸಿ ಅವುಗಳ ಜನನವನ್ನು ವಿರೋಧಿಸುವುದು.[೪] ಒಟ್ಟಿನಲ್ಲಿ ರಕ್ತದ ಕ್ಷಾರೀಯತೆಗೆ ಧಕ್ಕೆ ಬರುವುದಿಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ Entry for "fat" "ಆರ್ಕೈವ್ ನಕಲು". Archived from the original on 2020-07-25. Retrieved 2023-01-12.
{{cite web}}
: CS1 maint: bot: original URL status unknown (link) in the online Merriam-Webster disctionary, sense 3.2. Accessed on 2020-08-09 - ↑ "Macronutrients: the Importance of Carbohydrate, Protein, and Fat". McKinley Health Center. University of Illinois at Urbana–Champaign. Archived from the original on 21 ಸೆಪ್ಟೆಂಬರ್ 2014. Retrieved 20 September 2014.
- ↑ "Introduction to Energy Storage". Khan Academy.
- ↑ Ward C (2015). "Ketone Body Metabolism". Diapedia. doi:10.14496/dia.51040851169.29. Archived from the original on 2018-11-11. Retrieved 30 September 2019.[self-published source?]