ವೈದಿಕ ಯುಗ
ವೈದಿಕ ಯುಗ (ಅಥವಾ ವೈದಿಕ ಕಾಲ) ಹಿಂದೂ ಧರ್ಮದ ಅತ್ಯಂತ ಹಳೆಯ ಧರ್ಮಗ್ರಂಥಗಳಾದ ವೇದಗಳ ರಚನೆಯಾದ ಇತಿಹಾಸದಲ್ಲಿನ ಕಾಲವಾಗಿತ್ತು. ಈ ಯುಗದ ಕಾಲಾವಧಿ ಅನಿಶ್ಚಿತವಾಗಿದೆ. ವೇದಗಳಲ್ಲಿ ಅತಿ ಹಳೆಯದಾದ ಋಗ್ವೇದವು, ಆರಂಭಿಕ ವೈದಿಕ ಯುಗ ಎಂದೂ ನಿರ್ದೇಶಿಸಲಾಗುವ, ಸರಿಸುಮಾರು ಕ್ರಿ.ಪೂ. ೧೭೦೦ ಮತ್ತು ೧೧೦೦ರ ನಡುವೆ ರಚಿಸಲ್ಪಟ್ಟಿತು ಎಂದು ಬರಹದರಿಮೆಯ ಹಾಗು ಭಾಷಾಶಾಸ್ತ್ರ ಸಾಕ್ಷ್ಯಾಧಾರ ಸೂಚಿಸುತ್ತದೆ.[೧][೨]
ಭೌಗೋಳಿಕ ವ್ಯಾಪ್ತಿ | ದಕ್ಷಿಣ ಏಷ್ಯಾ |
---|---|
ಕಾಲ | ಕಬ್ಬಿಣ ಯುಗ |
ಅವಧಿಗಳು | ಕ್ರಿ.ಪೂ. 1500 - 500 |
ಇದಕ್ಕಿಂತ ಮೊದಲು | ಸಿಂಧೂ ತಟದ ನಾಗರೀಕತೆ |
ಇದಾದ ನಂತರ | ಬೃಹದ್ರಥಸ್ ರಾಜವಂಶ, ಹರ್ಯಂಕ ರಾಜವಂಶ, ಮಹಾಜನಪದಗಳು |
ವೈದಿಕ ಕಾಲದ ಮುಂಚಿನ ಭಾಗದಲ್ಲಿ ಇಂಡೋ-ಆರ್ಯರು ಉತ್ತರ ಭಾರತದಲ್ಲಿ ನೆಲೆಸಿದರು, ತಮ್ಮ ಜೊತೆಗೆ ನಿರ್ದಿಷ್ಟ ಧಾರ್ಮಿಕ ಸಂಪ್ರದಾಯಗಳನ್ನು ತಂದರು. ಸಂಬಂಧಿತ ಸಂಸ್ಕೃತಿಯು ಆರಂಭದಲ್ಲಿ ಭಾರತೀಯ ಉಪಖಂಡದ ವಾಯವ್ಯ ಭಾಗಗಳಲ್ಲಿ ಕೇಂದ್ರಿತವಾದ ಒಂದು ಬುಡಕಟ್ಟು, ಗ್ರಾಮೀಣ ಸಮಾಜವಾಗಿತ್ತು; ಇದು ಕ್ರಿ.ಪೂ. ೧೨೦೦ ರ ನಂತರ ಗಂಗಾ ಬಯಲಿಗೆ ಹರಡಿತು, ಏಕೆಂದರೆ ಹೆಚ್ಚುತ್ತಿರುವ ಸ್ಥಿರ ಕೃಷಿ, ನಾಲ್ಕು ಸಾಮಾಜಿಕ ವರ್ಗಗಳ ಶ್ರೇಣಿ, ಮತ್ತು ರಾಜಪ್ರಭುತ್ವ, ರಾಜ್ಯಮಟ್ಟದ ವ್ಯವಸ್ಥೆಗಳ ಹೊರಹೊಮ್ಮುವಿಕೆಯಿಂದ ಆಕಾರತಾಳಿತು. ವಿದ್ವಾಂಸರು ವೈದಿಕ ನಾಗರೀಕತೆಯನ್ನು ಇಂಡೋ-ಆರ್ಯನ್ ಮತ್ತು ಹರಪ್ಪನ್ ಸಂಸ್ಕೃತಿಗಳ ಮಿಶ್ರಣವೆಂದು ಪರಿಗಣಿಸುತ್ತಾರೆ.
ವೈದಿಕ ಕಾಲದ ಅಂತ್ಯವು ದೊಡ್ಡ, ನಗರೀಕೃತ ರಾಜ್ಯಗಳು, ಜೊತೆಗೆ ವೈದಿಕ ಸಂಪ್ರದಾಯಬದ್ಧತೆಗೆ ಸವಾಲೊಡ್ಡಿದ ಶ್ರಮಣ ಚಳುವಳಿಗಳ (ಜೈನ ಧರ್ಮ ಮತ್ತು ಬೌದ್ಧ ಧರ್ಮವನ್ನು ಒಳಗೊಂಡಂತೆ) ಉಗಮಕ್ಕೆ ಸಾಕ್ಷಿಯಾಯಿತು. ಕ್ರಿಸ್ತ ಶಕದ ಆರಂಭದ ಸುಮಾರು, ವೈದಿಕ ಸಂಪ್ರದಾಯವು ಹಿಂದೂ ಸಮನ್ವಯದ ಮುಖ್ಯ ಘಟಕಗಳಲ್ಲಿ ಒಂದೆನಿಸಿತು.
ಇತಿಹಾಸ
ಬದಲಾಯಿಸಿಪೂರ್ವ ವೈದಿಕ ಯುಗದ ಸಾಮಾನ್ಯವಾಗಿ ಪ್ರಸ್ತಾಪಿಸಲಾದ ಕಾಲಾವಧಿ ಕ್ರಿ.ಪೂ. ೨ನೇ ಸಹಸ್ರಮಾನ. ಕ್ರಿ.ಪೂ. ೧೯೦೦ರಲ್ಲಿ ಕೊನೆಗೊಂಡ ಸಿಂಧೂತಟದ ನಾಗರೀಕತೆಯ ಪತನದ ನಂತರ, ಇಂಡೋ-ಆರ್ಯ ಜನರ ಗುಂಪುಗಳು ವಾಯವ್ಯ ಭಾರತಕ್ಕೆ ವಲಸೆ ಬಂದು ಉತ್ತರ ಸಿಂಧೂ ಕಣಿವೆಯಲ್ಲಿ ನೆಲೆಸಲು ಆರಂಭಿಸಿದರು.
ಆರ್ಯರ ಬಗ್ಗೆ ಜ್ಞಾನ ಬಹುತೇಕವಾಗಿ ಋಗ್ವೇದ ಸಂಹಿತಾದಿಂದ ಬರುತ್ತದೆ. ಇದರ ರಚನೆ ಕ್ರಿ.ಪೂ. ೧೫೦೦-೧೨೦೦ ನಡುವೆ ಆಯಿತು. ತಮ್ಮ ಜೊತೆ ಅವರು ತಮ್ಮ ವಿಶಿಷ್ಟ ಧಾರ್ಮಿಕ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ತಂದರು. ಪೂರ್ವ ಶಾಸ್ತ್ರೀಯ ಯುಗದ ವೈದಿಕ ನಂಬಿಕೆಗಳು ಮತ್ತು ಆಚರಣೆಗಳು ಊಹಿಸಲಾದ ಪ್ರೋಟೊ ಇಂಡೊ-ಯೂರೋಪಿಯನ್ ಧರ್ಮ ಹಾಗೂ ಇಂಡೊ-ಇರಾನಿಯನ್ ಧರ್ಮಕ್ಕೆ ನಿಕಟವಾಗಿ ಸಂಬಂಧಿಸಿದ್ದವು. ಹಳೆಯ ಭಾರತೀಯ ಧರ್ಮವು ಇಂಡೊ-ಯೂರೋಪಿಯನ್ ವಲಸಿಗರಲ್ಲಿ ಸಂಭಾವ್ಯವಾಗಿ ಜ಼ೇರಶ್ವಾನ್ ನದಿ (ಇಂದಿನ ಉಜ಼್‍ಬೇಕಿಸ್ತಾನ್) ಮತ್ತು (ಇಂದಿನ) ಇರಾನ್‍ನ ನಡುವಿನ ಸಂಪರ್ಕ ವಲಯದಲ್ಲಿ ಹೊರಹೊಮ್ಮಿತು. ಕನಿಷ್ಠಪಕ್ಷ ೩೮೩ ಇಂಡೋ-ಐರೋಪ್ಯೇತರ ಶಬ್ದಗಳು ಈ ಸಂಸ್ಕೃತಿಯಿಂದ ಎರವಲು ಪಡೆದದ್ದಾಗಿವೆ, ಇಂದ್ರ ಮತ್ತು ಧಾರ್ಮಿಕ ಪಾನೀಯವಾದ ಸೋಮ ಸೇರಿದಂತೆ. ಇಂದ್ರನು ಋಗ್ವೇದದ ೨೫೦ ಸ್ತೋತ್ರಗಳ ವಿಷಯವಸ್ತುವಾಗಿದ್ದಾನೆ. ಅವನನ್ನು ಬೇರೆ ಯಾವ ದೇವತೆಗಿಂತಲೂ ಹೆಚ್ಚಾಗಿ ಸೋಮದೊಂದಿಗೆ ಸಂಬಂಧಿಸಲಾಗಿತ್ತು.
ಪೂರ್ವ ವೈದಿಕ ಕಾಲ (ಕ್ರಿ.ಪೂ. ೧೫೦೦-೧೧೦೦)
ಬದಲಾಯಿಸಿಈ ವಲಸೆಗಳ ಜೊತೆ ಈ ಪ್ರದೇಶದಲ್ಲಿ ಮೊದಲೇ ನೆಲೆಸಿದ್ದ ಜನಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳು ಆಗಿರಬಹುದು. ಋಗ್ವೇದವು ಆರ್ಯರು ಮತ್ತು ದಾಸರು ಹಾಗೂ ದಸ್ಯುಗಳ ನಡುವಿನ ಸಂಘರ್ಷಗಳ ಕಥನವನ್ನು ಹೊಂದಿದೆ. ದಾಸರು ಮತ್ತು ದಸ್ಯುಗಳು ಯಜ್ಞಗಳನ್ನು ಮಾಡದ (ಅಕ್ರತು) ಅಥವಾ ದೇವರ ಆಜ್ಞೆಗಳನ್ನು ಪಾಲಿಸದ (ಅವ್ರತ) ಜನರು ಎಂದು ಋಗ್ವೇದವು ವರ್ಣಿಸುತ್ತದೆ. ಅವರ ಮಾತನ್ನು ಮೃಧ್ರ ಎಂದು ವರ್ಣಿಸಲಾಗಿದೆ, ಇದರ ಅರ್ಥ ನಾನಾ ಬಗೆಯಾಗಿ ಮೃದು, ಒರಟು, ಪ್ರತಿಕೂಲ, ತಿರಸ್ಕಾರದಿಂದ ಕೂಡಿದ ಅಥವಾ ನಿಂದಾತ್ಮಕ ಎಂದು ಆಗಿರಬಹುದು. ದಾಸರು ಮತ್ತು ದಸ್ಯುಗಳು ವೈದಿಕ ಆರ್ಯರಿಗಿಂತ ಮೊದಲು ಉಪಖಂಡದಲ್ಲಿ ಆಗಮಿಸಿದ ಮುಂಚಿನ ಇಂಡೊ ಆರ್ಯ ವಲಸಿಗರು ಎಂದು ಅನೇಕ ಆಧುನಿಕ ವಿದ್ವಾಂಸರು ನಂಬುತ್ತಾರೆ.
ವೈದಿಕ ಆರ್ಯರ ವಿವಿಧ ಬುಡಕಟ್ಟುಗಳ ನಡುವಿನ ಅನ್ಯೋನ್ಯ ಮಾರಕ ಸೇನಾ ಸಂಘರ್ಷಗಳನ್ನೂ ಋಗ್ವೇದದಲ್ಲಿ ವರ್ಣಿಸಲಾಗಿದೆ. ಅಂತಹ ಸಂಘರ್ಷಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ದಾಶರಾಜ್ಞ ಯುದ್ಧ. ಈ ಯುದ್ಧವು ಪರುಷ್ಣಿ ನದಿ (ಇಂದಿನ ರಾವಿ) ತೀರದಲ್ಲಿ ನಡೆಯಿತು. ಈ ಯುದ್ಧವು ಸುದಾಸನ ನೇತೃತ್ವದಲ್ಲಿ ಭಾರತ ಬುಡಕಟ್ಟು ಮತ್ತು ಹತ್ತು ಬುಡಕಟ್ಟುಗಳಾದ ಪುರು, ಯದು, ತುರ್ವಶ, ಅನು, ದ್ರುಹ್ಯು, ಅಲೀನ, ಭಾಲನರು, ಪಕ್ಥ, ಶಿವ, ಮತ್ತು ವಿಷಾಣಿನರ ಒಕ್ಕೂಟದ ನಡುವೆ ನಡೆಯಿತು. ಭಾರತರು ಸರಸ್ವತಿ ನದಿಯ ಮೇಲಿನ ಪ್ರದೇಶಗಳ ಸುತ್ತ ವಾಸಿಸುತ್ತಿದ್ದರೆ, ಅವರ ಪಶ್ಚಿಮ ನೆರೆಹೊರೆಯವರಾದ ಪುರುಗಳು ಸರಸ್ವತಿಯ ಕೆಳಗಿನ ಪ್ರದೇಶಗಳ ಉದ್ದಕ್ಕೂ ವಾಸಿಸುತ್ತಿದ್ದರು. ಇತರ ಬುಡಕಟ್ಟುಗಳಿ ಭಾರತರ ವಾಯವ್ಯಕ್ಕೆ ಪಂಜಾಬ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ರಾವಿ ನದಿಯ ನೀರಿನ ವಿಭಜನೆಯು ಯುದ್ಧದ ಒಂದು ಕಾರಣವಾಗಿರಬಹುದು. ಬುಡಕಟ್ಟುಗಳ ಒಕ್ಕೂಟವು ರಾವಿಯ ಒಡ್ಡುಗಳನ್ನು ತೆರೆದು ಭಾರತರನ್ನು ಮುಳುಗಿಸಲು ಪ್ರಯತ್ನಿಸಿತು, ಆದರೂ ಸುದಾಸನು ವಿಜಯಿಯಾದನು. ಪುರುಗಳ ಮುಖಂಡನಾದ ಪುರುಕುತ್ಸನು ಈ ಯುದ್ಧದಲ್ಲಿ ಮೃತನಾದನು ಮತ್ತು ಭಾರತರು ಹಾಗೂ ಪುರುಗಳು ಯುದ್ಧದ ನಂತರ ಕುರು ರಾಜ್ಯ ಎಂಬ ಹೊಸ ಬುಡಕಟ್ಟಾಗಿ ವಿಲೀನಗೊಂಡರು.
ಉತ್ತರ ವೈದಿಕ ಕಾಲ (ಕ್ರಿ.ಪೂ. ೧೧೦೦-೫೦೦)
ಬದಲಾಯಿಸಿಕ್ರಿ.ಪೂ. ೧೨ನೇ ಶತಮಾನದ ನಂತರ, ಋಗ್ವೇದವು ತನ್ನ ಅಂತಿಮ ರೂಪವನ್ನು ತೆಗೆದುಕೊಂಡಂತೆ ವೈದಿಕ ಸಮಾಜವು ಅರೆ ಅಲೆಮಾರಿ ಜೀವನದಿಂದ ನೆಲೆಯೂರಿದ ಕೃಷಿಗೆ ಪರಿವರ್ತನೆಗೊಂಡಿತು. ವೈದಿಕ ಸಂಸ್ಕೃತಿಯು ಪಶ್ಚಿಮ ಗಂಗಾ ಬಯಲಿಗೆ ವಿಸ್ತರಿಸಿತು. ದಟ್ಟ ಅರಣ್ಯಾವರಣದ ಕಾರಣ ಗಂಗಾ ಬಯಲು ವೈದಿಕ ಬುಡಕಟ್ಟುಗಳಿಗೆ ಗಡಿಯಾಚೆ ಉಳಿದಿತ್ತು. ಕ್ರಿ.ಪೂ. ೧೦೦೦ ರ ನಂತರ,ಬೋಡುದಿಕಿ ಮತ್ತು ನೇಗಿಲುಗಳ ಬಳಕೆ ವ್ಯಾಪಕವಾಯಿತು ಮತ್ತು ಅರಣ್ಯಗಳನ್ನು ಸುಲಭವಾಗಿ ಕಡಿಯಬಹುದಿತ್ತು. ಇದು ವೈದಿಕ ಆರ್ಯರಿಗೆ ಪಶ್ಚಿಮ ಗಂಗಾ ಬಯಲಿನಲ್ಲಿ ನೆಲೆಸಲು ಸಾಧ್ಯವಾಗಿಸಿತು. ಅನೇಕ ಹಳೆ ಬುಡಕಟ್ಟುಗಳು ಒಂದುಗೂಡಿ ದೊಡ್ಡ ರಾಜಕೀಯ ಘಟಕಗಳಾಗಿ ರೂಪಗೊಂಡವು.
ಕ್ರಿ.ಪೂ. ೧೧೦೦ರ ನಂತರ ಇಂಡೊ-ಆರ್ಯರು ಗಂಗಾ ಬಯಲಿಗೆ ವಲಸೆ ಹೋಗಿ ನೆಲೆಗೊಂಡ ರೈತರಾದಾಗ, ವೈದಿಕ ಧರ್ಮ ಮತ್ತಷ್ಟು ಅಭಿವೃದ್ಧಿಗೊಂಡಿತು, ಮತ್ತು ಉತ್ತರ ಭಾರತದ ಸ್ಥಳೀಯ ಸಂಸ್ಕೃತಿಗಳೊಂದಿಗೆ ಇನ್ನಷ್ಟು ಸಮನ್ವಯಗೊಂಡಿತು. ಈ ಅವಧಿಯಲ್ಲಿ ವರ್ಣಾಶ್ರಮ ಪದ್ಧತಿ ಹೊರಹೊಮ್ಮಿತು. ಭಾರತೀಯ ಇತಿಹಾಸದ ಈ ಹಂತದಲ್ಲಿ ಈ ಪದ್ಧತಿಯು ವಿವಿಧ ಸಾಮಾಜಿಕ ವರ್ಗಗಳಲ್ಲಿ ಶ್ರಮ ವಿಭಜನೆಯನ್ನು ಪ್ರತಿಬಿಂಬಿಸುವ ವರ್ಗಗಳ ಒಂದು ಶ್ರೇಣಿ ವ್ಯವಸ್ಥೆಯಾಗಿತ್ತು. ವೈದಿಕ ಕಾಲದ ವರ್ಗಗಳು ನಾಲ್ಕು: ಬ್ರಾಹ್ಮಣ ಪುರೋಹಿತರು ಮತ್ತು ಯೋಧ ಕುಲೀನರು ಮೇಲಿದ್ದರು, ಮುಕ್ತ ಕೃಷಿಕರು ಮತ್ತು ವರ್ತಕರು ಮೂರನೆಯ ವರ್ಗ, ಮತ್ತು ಸೇವಕರು, ಕಾರ್ಮಿಕರು ಮತ್ತು ಕುಶಲಕರ್ಮಿಗಳು, ಅನೇಕರು ಸ್ಥಳೀಯ ಜನರಾಗಿದ್ದರು, ನಾಲ್ಕನೇ ವರ್ಗ. ಈ ಅವಧಿಯಲ್ಲಿ ಕೃಷಿ, ಲೋಹ, ಮತ್ತು ಸರಕು ಉತ್ಪಾದನೆ, ಜೊತೆಗೆ ವ್ಯಾಪಾರ, ಬಹಳವಾಗಿ ವಿಸ್ತರಿಸಿತು, ಮತ್ತು ಮುಂಚಿನ ಉಪನಿಷತ್ತುಗಳು ಹಾಗೂ ಅನೇಕ ಸೂತ್ರಗಳು ಸೇರಿದಂತೆ ನಂತರದ ಹಿಂದೂ ಸಂಸ್ಕೃತಿಗೆ ಪ್ರಧಾನವಾದ ವೈದಿಕ ಯುಗದ ಪಠ್ಯಗಳನ್ನು ಪೂರ್ಣಗೊಳಿಸಲಾಯಿತು.
ಒಂದು ಬೃಹತ್ ಬುಡಕಟ್ಟು ಹಲವಾರು ಬುಡಕಟ್ಟುಗಳೊಂದಿಗೆ ಸೇರಿ ಹೊಸ ಘಟಕವಾಗಿ ಅತ್ಯಂತ ಮುಂಚಿನ ವೈದಿಕ ರಾಜ್ಯವಾದ ಕುರು ರಾಜ್ಯದ ರಚನೆಯಾಯಿತು. ಈ ರಾಜ್ಯವನ್ನು ಆಳಲು ವೈದಿಕ ಸೂಕ್ತಗಳನ್ನು ಸಂಗ್ರಹಿಸಿ ಕೈ ಅಕ್ಷರದಲ್ಲಿ ಪ್ರತಿ ಮಾಡಲಾಯಿತು, ಮತ್ತು ಹೊಸ ಧರ್ಮಾಚರಣೆಗಳನ್ನು ಅಭಿವೃದ್ಧಿಗೊಳಿಸಲಾಯಿತು. ಇವೇ ಈಗಿನ ಸಂಪ್ರದಾಯಬದ್ಧ ಶ್ರೌತ ಕ್ರಿಯಾವಿಧಿಗಳನ್ನು ರೂಪಿಸಿದವು. ರಾಜ ಪರೀಕ್ಷಿತ ಮತ್ತು ಅವನ ಉತ್ತರಾಧಿಕಾರಿ ಜನಮೇಜಯ ಕುರು ರಾಜ್ಯದ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿನ ಇಬ್ಬರು ಪ್ರಮುಖ ವ್ಯಕ್ತಿಗಳು. ಇವರಿಬ್ಬರು ಈ ರಾಜ್ಯವನ್ನು ಕಬ್ಬಿಣ ಯುಗದ ಉತ್ತರ ಭಾರತದ ಪ್ರಬಲ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯಾಗಿ ಮಾರ್ಪಡಿಸಿದರು.
ಈ ಅವಧಿಯಲ್ಲಿ ಉದಯಿಸಿದ ಹೊಸ ಧಾರ್ಮಿಕ ಯಜ್ಞಗಳಲ್ಲಿ ಅಶ್ವಮೇಧ ಯಜ್ಞ ಅತ್ಯಂತ ಸುಪರಿಚಿತವಾದದ್ದು. ಈ ಯಜ್ಞದಲ್ಲಿ ಒಂದು ಪವಿತ್ರೀಕರಿಸಿದ ಕುದುರೆಯನ್ನು ರಾಜ್ಯಗಳನ್ನು ಸಂಚರಿಸಲು ಒಂದು ವರ್ಷ ಮುಕ್ತವಾಗಿ ಬಿಡಲಾಗುತ್ತಿತ್ತು. ಕುದುರೆಯನ್ನು ಆಯ್ದ ಯೋಧರ ಗುಂಪು ಅನುಸರಿಸುತ್ತಿತ್ತು. ಕುದುರೆಯು ಅಲೆದಾಡಿದ ರಾಜ್ಯಗಳು ಮತ್ತು ಪ್ರದೇಶಗಳು ಗೌರವ ಸಲ್ಲಿಸಬೇಕಾಗಿತ್ತು ಅಥವಾ ಕುದುರೆಯು ಸೇರಿದ ರಾಜನೊಂದಿಗೆ ಯುದ್ಧ ಮಾಡಲು ಸಿದ್ಧವಾಗಬೇಕಾಗಿತ್ತು. ಈ ಯುಗದಲ್ಲಿ ಈ ಯಜ್ಞವು ಅಂತರರಾಜ್ಯ ಸಂಬಂಧಗಳ ಮೇಲೆ ಗಣನೀಯ ಒತ್ತಡ ಹಾಕಿತು. ಈ ಅವಧಿಯು ವರ್ಣ ಪದ್ಧತಿಯ ಬಳಕೆಯಿಂದ ಸಾಮಾಜಿಕ ಶ್ರೇಣೀಕರಣದ ಆರಂಭವನ್ನೂ ಕಂಡಿತು. ವರ್ಣ ಪದ್ಧತಿ ಎಂದರೆ ಕ್ಷತ್ರಿಯ, ಬ್ರಾಹ್ಮಣ, ವೈಶ್ಯ ಹಾಗೂ ಶೂದ್ರ ವರ್ಗಗಳಲ್ಲಿ ವೈದಿಕ ಸಮಾಜದ ವಿಭಜನೆ.
ಅವೈದಿಕ ಶಾಲ್ವ ಬುಡಕಟ್ಟಿನಿಂದ ಸೋಲು ಕಂಡ ನಂತರ ಕುರು ರಾಜ್ಯ ಕ್ಷೀಣಿಸಿತು, ಮತ್ತು ವೈದಿಕ ಸಂಸ್ಕೃತಿಯ ರಾಜಕೀಯ ಕೇಂದ್ರ ಪೂರ್ವಕ್ಕೆ ಗಂಗಾ ತೀರದ ಪಾಂಚಾಲ ರಾಜ್ಯದೊಳಗೆ ಸ್ಥಳಾಂತರಗೊಂಡಿತು. ನಂತರ, ಮತ್ತಷ್ಟು ಪೂರ್ವಕ್ಕಿದ್ದ ಇಂದಿನ ಉತ್ತರ ಬಿಹಾರ ಮತ್ತು ಆಗ್ನೇಯ ನೇಪಾಳ ಪ್ರದೇಶದಲ್ಲಿದ್ದ ವಿದೇಹ ರಾಜ್ಯವು ರಾಜಕೀಯ ಕೇಂದ್ರವಾಗಿ ಹೊರಹೊಮ್ಮಿತು. ಇದು ರಾಜ ಜನಕನ ಆಳ್ವಿಕೆಯಲ್ಲಿ ಪ್ರಾಧಾನ್ಯ ಮುಟ್ಟಿತು. ಈ ರಾಜನ ಆಸ್ಥಾನ ಬ್ರಾಹ್ಮಣ ಋಷಿಗಳು ಮತ್ತು ಯಾಜ್ಞವಲ್ಕ್ಯ ಹಾಗೂ ಉದ್ದಾಲಕ ಆರುಣಿಯರಂತಹ ದಾರ್ಶನಿಕರಿಗೆ ಆಶ್ರಯ ನೀಡಿತು.
ಎರಡನೇ ನಗರೀಕರಣ
ಬದಲಾಯಿಸಿಕ್ರಿ.ಪೂ. ೬ನೇ ಶತಮಾನದ ವೇಳೆಗೆ, ರಾಜಕೀಯ ಘಟಕಗಳು ಮಹಾಜನಪದಗಳು ಎಂದು ಕರೆಯಲಾದ ದೊಡ್ಡ ರಾಜ್ಯಗಳಲ್ಲಿ ಏಕೀಕರಣಗೊಂಡವು. ಈ ರಾಜ್ಯಗಳಲ್ಲಿ ನಗರೀಕರಣದ ಪ್ರಕ್ರಿಯೆ ಆರಂಭವಾಗಿತ್ತು ಮತ್ತು ಬಹಳ ದೂರವಿರುವ ಪ್ರದೇಶಗಳ ನಡುವೆಯೂ ವಾಣಿಜ್ಯ ಹಾಗೂ ಪ್ರಯಾಣ ಸುಲಭವಾಯಿತು. ಮಗಧಕ್ಕೆ ಪೂರ್ವದಲ್ಲಿನ ಒಂದು ಸಣ್ಣ ರಾಜ್ಯವಾದ ಮತ್ತು ಆಧುನಿಕ ದಿನದ ಪಶ್ಚಿಮ ಬಂಗಾಳದ ನೆರೆರಾಜ್ಯ ಅಂಗವು ವೈದಿಕ ಸಂಸ್ಕೃತಿಯ ಪೂರ್ವ ಗಡಿಯಾಗಿತ್ತು. ಯಾದವರು ದಕ್ಷಿಣದ ಕಡೆ ವಿಸ್ತರಿಸಿ ಮಥುರಾದಲ್ಲಿ ನೆಲೆಸಿದರು. ಅವರ ರಾಜ್ಯದ ದಕ್ಷಿಣಕ್ಕೆ ವತ್ಸ ರಾಜ್ಯವಿತ್ತು. ವತ್ಸವನ್ನು ಅದರ ರಾಜಧಾನಿ ಕೌಶಾಂಬಿಯಿಂದ ಆಳಲಾಗುತ್ತಿತ್ತು. ನರ್ಮದಾ ನದಿ ಮತ್ತು ವಾಯವ್ಯ ದಖ್ಖನದ ಭಾಗಗಳು ದಕ್ಷಿಣ ಸೀಮೆಯಾಗಿದ್ದವು. ಹೊಸದಾಗಿ ರಚನೆಯಾದ ರಾಜ್ಯಗಳು ಪ್ರಾಬಲ್ಯಕ್ಕಾಗಿ ಹೆಣಗಾಡಿದವು ಮತ್ತು ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸಲು ಆರಂಭಿಸಿದವು.
ವೈದಿಕ ಭಾರತದ ಅಂತ್ಯ ಭಾಷಾ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಂದ ಗುರುತಿಸಲ್ಪಟ್ಟಿದೆ. ಪಾಣಿನಿಯ ವ್ಯಾಕರಣವು ಸೂತ್ರ ಪಠ್ಯಗಳ ಕ್ರೋಢೀಕರಣದಲ್ಲಿ ಅಂತಿಮ ತುದಿಯನ್ನು, ಮತ್ತು ಅದೇ ವೇಳೆಗೆ ಶಾಸ್ತ್ರೀಯ ಸಂಸ್ಕೃತದ ಆರಂಭವನ್ನು ಗುರುತಿಸುತ್ತದೆ. ಕ್ರಿ.ಪೂ. ೬ನೇ ಶತಮಾನದ ಪೂರ್ವಾರ್ಧದಲ್ಲಿ ಮೊದಲನೇ ದಾರ್ಯಸ್‍ನ ಸಿಂಧೂ ಕಣಿವೆಯ ಮೇಲಿನ ಆಕ್ರಮಣ ಬಾಹ್ಯ ಪ್ರಭಾವದ ಆರಂಭವನ್ನು ಗುರುತಿಸುತ್ತದೆ, ಮತ್ತು ಇಂಡೊ ಗ್ರೀಕರ ರಾಜ್ಯಗಳಲ್ಲಿ ಮುಂದುವರೆಯಿತು. ಏತನ್ಮಧ್ಯೆ, ಭಾರತದೊಳಗೆ, ಶ್ರಮಣ ಚಳುವಳಿಗಳು ವೈದಿಕ ಧರ್ಮಗ್ರಂಥಗಳು ಮತ್ತು ಧರ್ಮಾಚರಣೆಗಳ ಅಧಿಕಾರ ಮತ್ತು ಸಂಪ್ರದಾಯಬದ್ದತೆಗೆ ಸವಾಲು ಒಡ್ಡಿದವು.
ಸಂಸ್ಕೃತಿ
ಬದಲಾಯಿಸಿಸಮಾಜ
ಬದಲಾಯಿಸಿಋಗ್ವೈದಿಕ ಸಮಾಜವು ತುಲನಾತ್ಮಕವಾಗಿ ಸಮಾನತಾವಾದಿಯಾಗಿತ್ತು, ಸಾಮಾಜಿಕ-ಆರ್ಥಿಕ ವರ್ಗಗಳು ಅಥವಾ ಜಾತಿಗಳ ವಿಶಿಷ್ಟ ಶ್ರೇಣಿ ವ್ಯವಸ್ಥೆ ಇರಲಿಲ್ಲ ಎಂಬ ಅರ್ಥದಲ್ಲಿ. ಆದರೆ, ರಾಜಕೀಯ ಶ್ರೇಣಿ ವ್ಯವಸ್ಥೆಯು ದರ್ಜೆಯಿಂದ ನಿರ್ಧಾರಿತವಾಗಿತ್ತು, ಇದರಲ್ಲಿ ರಾಜನು ಅಗ್ರದಲ್ಲಿದ್ದನು ಮತ್ತು ದಾಸಿ ಅತ್ಯಂತ ಕೆಳಗಿದ್ದಳು. ಬ್ರಾಹ್ಮಣ ಹಾಗೂ ಕ್ಷತ್ರಿಯ ಶಬ್ದಗಳು ಋಗ್ವೇದದ ವಿವಿಧ ಕುಲಗ್ರಂಥಗಳಲ್ಲಿ ಕಾಣುತ್ತವೆ, ಆದರೆ ಅವು ವರ್ಣ ಪದದೊಂದಿಗೆ ಸಂಬಂಧಿಸಿಲ್ಲ. ವೈಶ್ಯ ಹಾಗೂ ಶೂದ್ರ ಶಬ್ದಗಳು ಇಲ್ಲ. ಋಗ್ವೇದದ ಸ್ತುತಿಗೀತೆ ಪಂಕ್ತಿಗಳು, ಉದಾಹರಣೆಗೆ ೩.೪೪-೪೫, ಕಟ್ಟುನಿಟ್ಟಿನ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ನಿರುಪಸ್ಥಿತಿ ಮತ್ತು ಸಾಮಾಜಿಕ ಚಲನಶೀಲತೆಯ ಉಪಸ್ಥಿತಿಯನ್ನು ಸೂಚಿಸುತ್ತವೆ:
ಓ, ಇಂದ್ರನೇ, ಸೋಮವನ್ನು ಇಷ್ಟಪಡುವವನೇ, ನೀನು ನನ್ನನ್ನು ಜನರ ರಕ್ಷಕನನ್ನಾಗಿ ಮಾಡುವೆಯಾ, ಅಥವಾ ನನ್ನನ್ನು ರಾಜನನ್ನಾಗಿ ಮಾಡುವೆಯಾ, ನನ್ನನ್ನು ಸೋಮ ಕುಡಿದ ಋಷಿಯಾಗಿ ಮಾಡುವೆಯಾ, ನನಗೆ ಅಂತ್ಯವಿಲ್ಲದ ಸಂಪತ್ತು ನೀಡುವೆಯಾ.
ವೈದಿಕ ಮನೆಯು ಪಿತೃಪ್ರಭುತ್ವ ಹಾಗೂ ಪಿತೃವಂಶೀಯವಾಗಿತ್ತು. ಮದುವೆಯ ಸಂಪ್ರದಾಯ ಮುಖ್ಯವಾಗಿತ್ತು ಮತ್ತು ವಿಭಿನ್ನ ಬಗೆಯ ಮದುವೆಗಳು— ಏಕವಿವಾಹ, ಬಹುಪತ್ನಿತ್ವ ಮತ್ತು ಬಹುಪತಿತ್ವವನ್ನು ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ವೈದಿಕ ಆರ್ಯರಿಗೆ ಹೆಣ್ಣು ಋಷಿಗಳು ಮತ್ತು ಹೆಣ್ಣು ದೇವತೆಗಳ ಪರಿಚಯವಿತ್ತು. ಆದರೆ, ಹೆಣ್ಣು ಋಷಿಗಳು ರಚಿಸಿರಬಹುದಾದ ಸೂಕ್ತಗಳು ಕಡಿಮೆ ಇವೆ ಮತ್ತು ಹೆಣ್ಣು ದೇವತೆಗಳು ಗಂಡು ದೇವತೆಗಳಷ್ಟು ಮುಖ್ಯವಿರಲಿಲ್ಲ. ಮಹಿಳೆಯರು ತಮ್ಮ ಪತಿಗಳನ್ನು ಆಯ್ಕೆಮಾಡಬಹುದಿತ್ತು ಮತ್ತು ತಮ್ಮ ಗಂಡಂದಿರು ಸತ್ತರೆ ಅಥವಾ ಕಾಣೆಯಾದರೆ ಮರುಮದುವೆ ಆಗಬಹುದಿತ್ತು. ಹೆಂಡತಿಯು ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಳಾದರೂ, ಅವಳು ತನ್ನ ಗಂಡನಿಗೆ ಅಧೀನಳಾಗಿದ್ದಳು. ಜನರು ಹಾಲು, ಹಾಲಿನ ಉತ್ಪನ್ನಗಳು, ಧಾನ್ಯಗಳು, ಹಣ್ಣುಗಳು, ತರಕಾರಿಗಳು ಹಾಗೂ ಮಾಂಸವನ್ನು ಸೇವಿಸುತ್ತಿದ್ದರು. ಹತ್ತಿ, ಉಣ್ಣೆ ಮತ್ತು ಪ್ರಾಣಿ ಚರ್ಮದ ಬಟ್ಟೆಗಳನ್ನು ಧರಿಸಲಾಗುತ್ತಿತ್ತು. ಋಗ್ವೈದಿಕ ಸಮಾಜದಲ್ಲಿ ಸೋಮ ಮತ್ತು ಸುರ ಜನಪ್ರಿಯ ಪೇಯಗಳಾಗಿದ್ದವು, ಇವುಗಳಲ್ಲಿ ಸೋಮವು ಧರ್ಮದಿಂದ ಪವಿತ್ರ ಎಂದು ಭಾವಿಸಲ್ಪಟ್ಟಿತ್ತು. ಕೊಳಲು (ವಣ), ವೀಣೆ, ಹಾರ್ಪ್, ಝಲ್ಲರಿಗಳು, ಮತ್ತು ಡೋಲು ನುಡಿಸಲಾಗುತ್ತಿದ್ದ ಸಂಗೀತ ವಾದ್ಯಗಳಾಗಿದ್ದವು ಮತ್ತು ಏಳು ಸ್ವರಗಳ ಶ್ರೇಣಿಯನ್ನು ಬಳಸಲಾಗುತ್ತಿತ್ತು. ಕುಣಿತ, ನಾಟಕ, ರಥದ ಓಟ ಮತ್ತು ಜೂಜು ಇತರ ಜನಪ್ರಿಯ ವಿನೋದ ಚಟುವಟಿಕೆಗಳಾಗಿದ್ದವು.
ನಂತರದ ವೈದಿಕ ಕಾಲದಲ್ಲಿ ರಾಜಪ್ರಭುತ್ವದ ರಾಜ್ಯಗಳ ಉದಯವು ರಾಜನು ಜನರಿಂದ ದೂರವಾಗುವುದಕ್ಕೆ ಮತ್ತು ವರ್ಣ ವ್ಯವಸ್ಥೆಯ ಉದಯಕ್ಕೆ ಕಾರಣವಾಯಿತು. ಸಮಾಜವು ನಾಲ್ಕು ಸಾಮಾಜಿಕ ಗುಂಪುಗಳಲ್ಲಿ ವಿಭಜನೆಯಾಗಿತ್ತು— ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು. ನಂತರದ ವೈದಿಕ ಪಠ್ಯಗಳು ಪ್ರತಿ ಗುಂಪಿಗೆ ಸಾಮಾಜಿಕ ಸೀಮೆಗಳು, ಪಾತ್ರಗಳು, ಸ್ಥಾನಮಾನ ಮತ್ತು ಧರ್ಮಾಚರಣಾ ಶುದ್ಧತೆಯನ್ನು ದೃಢಪಡಿಸಿತು. ಶತಪಥ ಬ್ರಾಹ್ಮಣವು ಬ್ರಾಹ್ಮಣನನ್ನು ಮನೆತನದ ಶುದ್ಧತೆ, ಒಳ್ಳೆ ನಡತೆ, ವೈಭವ, ಬೋಧನೆ ಅಥವಾ ಜನರ ರಕ್ಷಣೆಗೆ; ಕ್ಷತ್ರಿಯನನ್ನು ಶಕ್ತಿ, ಖ್ಯಾತಿ, ಆಳ್ವಿಕೆ, ಮತ್ತು ಯುದ್ಧದೊಂದಿಗೆ; ವೈಶ್ಯನನ್ನು ವಸ್ತುದ್ರವ್ಯ ಸಮೃದ್ಧಿ ಮತ್ತು ದನ ಸಾಕಣೆ ಹಾಗೂ ಕೃಷಿಯಂತಹ ಉತ್ಪಾದನಾ ಸಂಬಂಧಿತ ಚಟುವಟಿಕೆಗಳಿಗೆ; ಶೂದ್ರನನ್ನು ಮೇಲಿನ ವರ್ಣಗಳ ಸೇವೆಗೆ ಸಂಬಂಧಿಸುತ್ತದೆ. ರಾಜಸೂಯ ಯಾಗದ ಪರಿಣಾಮಗಳು ಯಾಗಮಾಡುವವನ ವರ್ಣವನ್ನು ಅವಲಂಬಿಸಿದ್ದವು. ರಾಜಸೂಯ ಯಾಗವು ಬ್ರಾಹ್ಮಣನಿಗೆ ಹೊಳಪು, ಕ್ಷತ್ರಿಯನಿಗೆ ಶೌರ್ಯ, ವೈಶ್ಯನಿಗೆ ಹುಟ್ಟಿಸಬಲ್ಲ ಶಕ್ತಿ ಮತ್ತು ಶೂದ್ರನಿಗೆ ಸ್ಥಿರತೆ ನೀಡುತ್ತಿತ್ತು. ಮೇಲಿನ ಮೂರು ವರ್ಣಗಳ ಶ್ರೇಣಿ ವ್ಯವಸ್ಥೆಯು ನಂತರದ ವೈದಿಕ ಪಠ್ಯಗಳಲ್ಲಿ ಅಸ್ಪಷ್ಟವಾಗಿದೆ. ಪಂಚವಂಶ ಬ್ರಾಹ್ಮಣ ಮತ್ತು ಶತಪಥ ಬ್ರಾಹ್ಮಣದ ಶ್ಲೋಕ 13.8.3.11 ಕ್ಷತ್ರಿಯನನ್ನು ಬ್ರಾಹ್ಮಣ ಮತ್ತು ವೈಶ್ಯನ ಮೇಲೆ ಇಡುತ್ತವೆ, ಅದೇ, ಶ್ಲೋಕ 1.1.4.12 ಬ್ರಾಹ್ಮಣ ಮತ್ತು ವೈಶ್ಯನನ್ನು ಕ್ಷತ್ರಿಯ ಮತ್ತು ಶೂದ್ರನ ಮೇಲೆ ಇಡುತ್ತದೆ. ಪುರುಷ ಸೂಕ್ತವು ನಾಲ್ಕು ವರ್ಣಗಳನ್ನು ಕ್ರಮಾನುಗತವೆಂದು ದೃಶ್ಯೀಕರಿಸಿತು, ಆದರೆ ಒಂದು ಸಾವಯವ ಸಮಗ್ರದ ಅಂತರ ಸಂಬಂಧಿತ ಭಾಗಗಳಾಗಿ. ನಂತರದ ವೈದಿಕ ಕಾಲದಲ್ಲಿ ಹೆಚ್ಚಿದ ಸಾಮಾಜಿಕ ಶ್ರೇಣೀಕರಣದ ಹೊರತಾಗಿಯೂ, ಋಗ್ವೇದದ ೯.112 ಸೂಕ್ತದ ಹಾಗೆ ಕೆಲವು, ಸ್ವಲ್ಪ ಪ್ರಮಾಣದ ಸಾಮಾಜಿಕ ಚಲನಶೀಲತೆಯನ್ನು ಸೂಚಿಸುತ್ತವೆ: "ನಾನು ಸೂಕ್ತಗಳ ವಾಚಕ, ನನ್ನ ತಂದೆ ವೈದ್ಯ, ಮತ್ತು ನನ್ನ ತಾಯಿ ಕಲ್ಲಿನಿಂದ ಬೀಸುತ್ತಾಳೆ. ನಾವು ವಿವಿಧ ಕ್ರಿಯೆಗಳಲ್ಲಿ ಸಂಪತ್ತು ಗಳಿಸಲು ಬಯಸುತ್ತೇವೆ."
ಉತ್ತರ ವೈದಿಕ ಕಾಲದಲ್ಲಿ ಮನೆಯು ಒಂದು ಮುಖ್ಯ ಘಟಕವಾಯಿತು. ಋಗ್ವೈದಿಕ ಯುಗದ ಮನೆಗಳ ವಿವಿಧತೆಯು ಗೃಹಪತಿಯ ಮೇಲಾಳುತನದಲ್ಲಿ ಒಂದು ಆದರ್ಶೀಕೃತ ಮನೆಯಿಂದ ಅನುಸರಿಸಲ್ಪಟ್ಟಿತು. ಗಂಡ ಮತ್ತು ಹೆಂಡತಿ, ಅಪ್ಪ ಮತ್ತು ಮಗನ ನಡುವಿನ ಸಂಬಂಧಗಳನ್ನು ಕ್ರಮಾನುಗತವಾಗಿ ವ್ಯವಸ್ಥೆಗೊಳಿಸಲಾಗಿತ್ತು ಮತ್ತು ಮಹಿಳೆಯರನ್ನು ಗೌಣ ಹಾಗೂ ಮುಗ್ಧ ಪಾತ್ರಗಳಿಗೆ ಇಳಿಸಲಾಯಿತು. ಬಹುಪತ್ನಿತ್ವವು ಬಹುಪತಿತ್ವಕ್ಕಿಂತ ಹೆಚ್ಚು ಸಾಮಾನ್ಯವಾಗಿತ್ತು ಮತ್ತು ತೈತ್ತಿರೀಯ ಸಂಹಿತೆಯಂತಹ ಪಠ್ಯಗಳು ಮುಟ್ಟಾದ ಸ್ತ್ರೀಯರ ಸುತ್ತವಿದ್ದ ಪ್ರತಿಬಂಧಗಳನ್ನು ಸೂಚಿಸುತ್ತವೆ. ನಂತರದ ವೈದಿಕ ಪಠ್ಯಗಳಲ್ಲಿ ಸ್ತ್ರೀಯರು ತೆಗೆದುಕೊಂಡ ವಿವಿಧ ವೃತ್ತಿಗಳನ್ನು ಹೆಸರಿಸಲಾಗಿದೆ. ಸ್ತ್ರೀಯರು ದನಗಳ ನೋಡಿಕೊಳ್ಳುತ್ತಿದ್ದರು, ಆಕಳ ಹಾಲು ಕರೆಯುತ್ತಿದ್ದರು, ಉಣ್ಣೆಯನ್ನು ಹಿಂಜುತ್ತಿದ್ದರು; ನೇಕಾರರು, ರಂಗುಹಾಕುವವರು, ಮತ್ತು ಜೋಳ ಬೀಸುವವರಾಗಿದ್ದರು. ಯುದ್ಧದಲ್ಲಿ ಒಂದು ಕಾಲು ಕಳೆದುಕೊಂಡ ವಿಷ್ಫಲಳಂಥ ಸ್ತ್ರೀ ಯೋಧೆಯರನ್ನು ಹೆಸರಿಸಲಾಗಿದೆ. ಉಪನಿಷತ್ತುಗಳಲ್ಲಿ ಇಬ್ಬರು ತತ್ವಶಾಸ್ತ್ರಜ್ಞೆಯರನ್ನು ಹೆಸರಿಸಲಾಗಿದೆ. "ಮಹಿಳೆಯರನ್ನು ದೇವತಾಶಾಸ್ತ್ರದ ವಿಷಯಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಸಮರ್ಥಿಸುವ ಅಥವಾ ವಿವರಿಸುವ ಯಾವುದೇ ಪ್ರಯತ್ನವಿಲ್ಲದೆಯೇ ಈ ಸ್ತ್ರೀಯರನ್ನು ಪರಿಚಯಿಸಲಾಗಿದೆ ಎಂಬ ವಾಸ್ತವಾಂಶ, ಈ ಅವಧಿಯಲ್ಲಿ ಕನಿಷ್ಠಪಕ್ಷ ಯಾವುದೋ ಸಾಮಾಜಿಕ ಶ್ರೇಣಿಯ ಮಹಿಳೆಯರ ತುಲನಾತ್ಮಕವಾಗಿ ಉನ್ನತ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನಮಾನವನ್ನು ಸೂಚಿಸುತ್ತದೆ" ಎಂದು ಒಬ್ಬ ವಿದ್ವಾಂಸ ಬರೆಯುತ್ತಾನೆ.
ರಾಜಕೀಯ ವ್ಯವಸ್ಥೆ
ಬದಲಾಯಿಸಿಪೂರ್ವ ವೈದಿಕ ಆರ್ಯರು ರಾಜ್ಯಗಳ ಬದಲಾಗಿ ಬುಡಕಟ್ಟುಗಳಾಗಿ ಸಂಘಟಿತವಾಗಿದ್ದರು. ಒಂದು ಬುಡಕಟ್ಟಿನ ಮುಖಂಡನನ್ನು ರಾಜ ಎಂದು ಕರೆಯಲಾಗುತ್ತಿತ್ತು. ರಾಜನ ಸ್ವಾಯತ್ತತೆಯು ಸಭೆ ಮತ್ತು ಸಮಿತಿ ಎಂದು ಕರೆಯಲಾದ ಬುಡಕಟ್ಟು ಪರಿಷತ್ತುಗಳಿಂದ ಪ್ರತಿಬಂಧಿತವಾಗಿತ್ತು. ಈ ಎರಡೂ ಮಂಡಲಗಳು ಬುಡಕಟ್ಟಿನ ಭಾಗಶಃ ಆಡಳಿತಕ್ಕೆ ಜವಾಬ್ದಾರವಾಗಿದ್ದವು. ರಾಜನು ಅವುಗಳ ಸಮ್ಮತಿಯಿಲ್ಲದೆ ಸಿಂಹಾಸನ ಏರುವಂತಿರಲಿಲ್ಲ. ಈ ಎರಡೂ ಮಂಡಲಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿಲ್ಲ. ಸಭೆಯು ಬುಡಕಟ್ಟಿನ ಮಹಾನ್ ಪುರುಷರ ಕೂಟವೆಂದು, ಮತ್ತು ಸಮಿತಿಯು ಎಲ್ಲ ಸ್ವತಂತ್ರ ಬುಡಕಟ್ಟುವಾಸಿಗಳ ಕೂಟ ಎಂದು ಒಬ್ಬ ವಿದ್ವಾಂಸನು ಸಿದ್ಧಾಂತಿಸುತ್ತಾನೆ. ಕೆಲವು ಬುಡಕಟ್ಟುಗಳು ಆನುವಂಶಿಕ ಮುಖಂಡರನ್ನು ಹೊಂದಿರಲಿಲ್ಲ ಮತ್ತು ಬುಡಕಟ್ಟು ಪರಿಷತ್ತುಗಳಿಂದ ನೇರವಾಗಿ ಆಡಳಿತಕ್ಕೊಳಪಟ್ಟಿದ್ದವು. ರಾಜನು ಸಭಾಸದರು ಮತ್ತು ಗ್ರಾಮಣಿಗಳು ಭಾಗವಹಿಸುತ್ತಿದ್ದ ಮೂಲಭೂತ ಆಸ್ಥಾನವನ್ನು ಹೊಂದಿದ್ದನು. ಬುಡಕಟ್ಟನ್ನು ರಕ್ಷಿಸುವುದು ರಾಜನ ಮುಖ್ಯ ಜವಾಬ್ದಾರಿಯಾಗಿತ್ತು. ಪುರೋಹಿತ, ಸೇನಾನಿ, ದೂತರು, ಸ್ಪಶರು ಸೇರಿದಂತೆ ಹಲವಾರು ಪದಾಧಿಕಾರಿಗಳು ಅವನಿಗೆ ನೆರವಾಗುತ್ತಿದ್ದರು. ಯುದ್ಧದಲ್ಲಿ ಯಶಸ್ಸು ಮತ್ತು ಶಾಂತಿಯಲ್ಲಿ ಸಮೃದ್ಧಿಗಾಗಿ ಪುರೋಹಿತನು ಸಮಾರಂಭಗಳು ನಡೆಸಿಕೊಡುತ್ತಿದ್ದನು ಮತ್ತು ಮಾಟಮಂತ್ರ ಮಾಡುತ್ತಿದ್ದನು.
ಉತ್ತರ ವೈದಿಕ ಕಾಲದಲ್ಲಿ, ಬುಡಕಟ್ಟುಗಳು ರಾಜಧಾನಿ ಮತ್ತು ಮೂಲಭೂತ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಸಣ್ಣ ರಾಜ್ಯಗಳಾಗಿ ಏಕೀಕರಣಗೊಂಡವು. ಈ ಹೊಸ ರಾಜ್ಯಗಳನ್ನು ಆಳಲು ನೆರವಾಗಲು, ಮತ್ತು ಹೊರಹೊಮ್ಮುತ್ತಿದ್ದ ಸಾಮಾಜಿಕ ಶ್ರೇಣಿ ವ್ಯವಸ್ಥೆಯನ್ನು ಬಲಪಡಿಸಲು ರಾಜರು ಮತ್ತು ಅವರ ಬ್ರಾಹ್ಮಣ ಪುರೋಹಿತರು ವೈದಿಕ ಸೂಕ್ತಗಳನ್ನು ಸಂಗ್ರಹಗಳಲ್ಲಿ ಕ್ರಮಬದ್ಧಗೊಳಿಸಿದರು ಮತ್ತು ಧಾರ್ಮಿಕ ಕ್ರಿಯಾವಿಧಿಗಳ ಹೊಸ ಸಮೂಹವನ್ನು (ಈಗಿನ ಸಂಪ್ರದಾಯಬದ್ಧ ಶ್ರೌತ ಕ್ರಿಯಾವಿಧಿಗಳು) ಅಭಿವೃದ್ಧಿಪಡಿಸಿದರು. ರಾಜನನ್ನು ಸಮಾಜ ವ್ಯವಸ್ಥೆಯ ಪಾಲಕ ಮತ್ತು ರಾಷ್ಟ್ರದ ರಕ್ಷಕನಾಗಿ ಕಾಣಲಾಯಿತು. ಆನುವಂಶಿಕ ರಾಜತ್ವ ಹೊರಹೊಮ್ಮಲು ಶುರುವಾಯಿತು ಮತ್ತು ಹಿಂದೆ ರಾಜನಾಗಲು ಯೋಗ್ಯನಾದವನನ್ನು ನಿರ್ಧರಿಸಲು ಆಯೋಜಿಸಲಾಗುತ್ತಿದ್ದ ರಥದ ಓಟಗಳು, ದನದ ಮೇಲೆ ದಾಳಿಗಳು, ಮತ್ತು ಪಗಡೆ ಆಟದಂತಹ ಸ್ಪರ್ಧೆಗಳು ನಾಮಮಾತ್ರವಾದವು. ಈ ಯುಗದಲ್ಲಿ ಧರ್ಮಾಚರಣೆಗಳು ತನ್ನ ಜನರ ಮೇಲೆ ರಾಜನ ಸ್ಥಾನಮಾನವನ್ನು ಹೊಗಳುತ್ತಿದ್ದವು. ಸಾಂದರ್ಭಿಕವಾಗಿ ಅವನನ್ನು ಸಾಮ್ರಾಟನೆಂದು ಸೂಚಿಸಲಾಗುತ್ತಿತ್ತು. ರಾಜನ ಹೆಚ್ಚುತ್ತಿರುವ ರಾಜಕೀಯ ಅಧಿಕಾರವು ಅವನಿಗೆ ಉತ್ಪಾದಕ ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯಲು ಸಾಧ್ಯವಾಗಿಸಿತು. ಸ್ವಯಂಪ್ರೇರಿತ ಕಾಣಿಕೆಯ ಅರ್ಪಣೆಯು (ಬಲಿ) ಕಡ್ಡಾಯದ ತಲೆಗಂದಾಯವಾಯಿತು; ಆದರೆ, ತೆರಿಗೆ ಸಂದಾಯದ ಸಂಘಟಿತ ವ್ಯವಸ್ಥೆ ಇರಲಿಲ್ಲ. ನಂತರದ ವೈದಿಕ ಪಠ್ಯಗಳಲ್ಲಿ ಸಭೆ ಮತ್ತು ಸಮಿತಿಯನ್ನು ಇನ್ನೂ ಉಲ್ಲೇಖಿಸಲಾಗಿತ್ತು, ಆದರೆ, ರಾಜನ ಹೆಚ್ಚುತ್ತಿರುವ ಅಧಿಕಾರದೊಂದಿಗೆ ಅವುಗಳ ಪ್ರಭಾವ ಇಳಿಯಿತು. ಉತ್ತರ ವೈದಿಕ ಕಾಲದ ಅಂತ್ಯದ ವೇಳೆಗೆ, ರಾಜ್ಯಗಳು, ಗಣ ಅಥವಾ ಸಂಘ, ಮತ್ತು ಬುಡಕಟ್ಟು ಸಂಸ್ಥಾನಗಳಂತಹ ಭಿನ್ನ ಬಗೆಯ ರಾಜಕೀಯ ವ್ಯವಸ್ಥೆಗಳು ಭಾರತದಲ್ಲಿ ಹೊರಹೊಮ್ಮಿದ್ದವು.
ಅರ್ಥವ್ಯವಸ್ಥೆ
ಬದಲಾಯಿಸಿಋಗ್ವೈದಿಕ ಕಾಲದಲ್ಲಿನ ಅರ್ಥವ್ಯವಸ್ಥೆಗೆ ಗ್ರಾಮೀಣ ಶೈಲಿ ಮತ್ತು ಕೃಷಿಯ ಸಂಯೋಜನೆ ಆಧಾರವಾಗಿತ್ತು. ಋಗ್ವೇದದಲ್ಲಿ ಹೊಲಗಳ ಸಮತಲವಾಗಿಸುವಿಕೆ, ಬೀಜ ಸಂಸ್ಕರಣೆ, ದೊಡ್ಡ ಜಾಡಿಗಳಲ್ಲಿ ಧಾನ್ಯ ಸಂಗ್ರಹದ ಉಲ್ಲೇಖಗಳಿವೆ. ಯುದ್ಧದ ಲೂಟಿಯೂ ಸಂಪತ್ತಿನ ಒಂದು ಪ್ರಮುಖ ಮೂಲವಾಗಿತ್ತು. ಆರ್ಥಿಕ ವಿನಿಮಯಗಳನ್ನು ಕಾಣಿಕೆ ಅರ್ಪಣೆ, ವಿಶೇಷವಾಗಿ ರಾಜರಿಗೆ (ಬಲಿ) ಮತ್ತು ಪುರೋಹಿತರಿಗೆ (ದಾನ), ಮತ್ತು ಚಲಾವಣೆಯ ಏಕಮಾನವಾಗಿ ದನಗಳನ್ನು ಬಳಸಿ ವಸ್ತು ವಿನಿಮಯದ ಮೂಲಕ ಮಾಡಲಾಗುತ್ತಿತ್ತು. ಕೆಲವು ಸೂಕ್ತಗಳಲ್ಲಿ ಚಿನ್ನವನ್ನು ಉಲ್ಲೇಖಿಸಲಾಗಿದೆಯಾದರೂ, ನಾಣ್ಯಗಳ ಬಳಕೆಯ ಯಾವುದೇ ಸೂಚನೆ ಇಲ್ಲ. ಋಗ್ವೇದದಲ್ಲಿ ಲೋಹಶಾಸ್ತ್ರವನ್ನು ಉಲ್ಲೇಖಿಸಲಾಗಿಲ್ಲ, ಆದರೆ ಅಯಸ್ ಶಬ್ದ ಮತ್ತು ಅದರಿಂದ ತಯಾರಿಸಿದ ಕ್ಷೌರದ ಕತ್ತಿಗಳು, ಬಳೆಗಳು, ಕೊಡಲಿಗಳಂತಹ ಉಪಕರಣಗಳನ್ನು ಉಲ್ಲೇಖಿಸಲಾಗಿದೆ. ಒಂದು ಶ್ಲೋಕ ಅಯಸ್‍ನ ಶುದ್ಧೀಕರಣವನ್ನು ಉಲ್ಲೇಖಿಸುತ್ತದೆ. ಅಯಸ್ ಶಬ್ದವು ಕಬ್ಬಿಣವನ್ನು ಸೂಚಿಸುತ್ತದೆ ಮತ್ತು ಧಮ್ ಹಾಗೂ ಕರ್ಮರ ಶಬ್ದಗಳು ಕಬ್ಬಿಣದ ಬೆಸುಗೆಗಾರರನ್ನು ಸೂಚಿಸುತ್ತವೆ ಎಂದು ಕೆಲವು ವಿದ್ವಾಂಸರು ನಂಬುತ್ತಾರೆ. ಆದರೆ, ಋಗ್ವೇದದಲ್ಲಿ ಅಯಸ್ ಶಬ್ದವು ಕೇವಲ ತಾಮ್ರ ಮತ್ತು ಕಂಚನ್ನು ಸೂಚಿಸುತ್ತದೆ ಎಂದು ಭಾಷಿಕ ಸಾಕ್ಷ್ಯಾಧಾರ ನಿರ್ದೇಶಿಸುತ್ತದೆ. ಕಬ್ಬಿಣ ಅಥವಾ ಶ್ಯಾಮ ಅಯಸ್ ಅನ್ನು ಮೊದಲು ಋಗ್ವೈದಿಕ ಕಾಲದ ನಂತರದ ಅಥರ್ವವೇದದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಹಾಗಾಗಿ ಪೂರ್ವ ವೈದಿಕ ಕಾಲವು ಕಂಚಿನ ಯುಗ ಸಂಸ್ಕೃತಿಯಾದರೆ ಉತ್ತರ ವೈದಿಕ ಕಾಲವು ಕಬ್ಬಿಣ ಯುಗ ಸಂಸ್ಕೃತಿಯಾಗಿತ್ತು.
ಉತ್ತರ ವೈದಿಕ ಕಾಲದಲ್ಲಿ ಅರೆ ಅಲೆಮಾರಿ ಜೀವನದಿಂದ ನೆಲೆಸಿದ ಕೃಷಿಗೆ ವೈದಿಕ ಸಮಾಜದ ಪರಿವರ್ತನೆಯು ವ್ಯಾಪಾರದಲ್ಲಿ ಹೆಚ್ಚಳ ಮತ್ತು ಸಂಪನ್ಮೂಲಗಳಿಗಾಗಿ ಸ್ಪರ್ಧೆಗೆ ಕಾರಣವಾಯಿತು. ಈ ಅವಧಿಯಲ್ಲಿ ಗಂಗಾ ಬಯಲಿನುದ್ದಕ್ಕೂ ಕೃಷಿ ಪ್ರಧಾನವಾದ ಆರ್ಥಿಕ ಚಟುವಟಿಕೆಯಾಗಿತ್ತು. ಕೃಷಿ ಕಾರ್ಯಾಚರಣೆಗಳು ಸಂಕೀರ್ಣತೆಯಲ್ಲಿ ಬೆಳೆದವು ಮತ್ತು ಕಬ್ಬಿಣದ ಉಪಕರಣಗಳ (ಕೃಷ್ಣ ಅಯಸ್ ಅಥವಾ ಶ್ಯಾಮ ಅಯಸ್) ಬಳಕೆ ಹೆಚ್ಚಾಯಿತು. ಗೋಧಿ, ಅಕ್ಕಿ, ಮತ್ತು ಜವೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಹೆಚ್ಚುವರಿ ಉತ್ಪಾದನೆಯು ಈ ಕಾಲದಲ್ಲಿ ಹೊರಹೊಮ್ಮುತ್ತಿದ್ದ ಕೇಂದ್ರೀಕೃತ ರಾಜ್ಯಗಳನ್ನು ಬೆಂಬಲಿಸಲು ಸಹಾಯಮಾಡಿತು. ಮರಗೆಲಸ, ಚರ್ಮದ ಕೆಲಸ, ಚರ್ಮಸಂಸ್ಕರಣ, ಕುಂಬಾರಿಕೆ, ಜ್ಯೋತಿಷ, ಆಭರಣ ತಯಾರಿಕೆ, ರಂಗುಹಾಕುವಿಕೆ, ಮತ್ತು ಪಾನ ತಯಾರಿಕೆಯಂತಹ ಹೊಸ ಕರಕೌಶಲಗಳು ಮತ್ತು ವೃತ್ತಿಗಳು ಹುಟ್ಟಿಕೊಂಡವು. ತಾಮ್ರ, ಕಂಚು, ಮತ್ತು ಚಿನ್ನವಲ್ಲದೇ ನಂತರದ ವೈದಿಕ ಪಠ್ಯಗಳು ತವರ, ಸೀಸ, ಮತ್ತು ಬೆಳ್ಳಿಯನ್ನೂ ಉಲ್ಲೇಖಿಸುತ್ತವೆ.
ಕೆಲವು ಸೂಕ್ತಗಳಲ್ಲಿ ಪಣಿ ಶಬ್ದವು ವರ್ತಕರನ್ನು ಸೂಚಿಸುತ್ತದೆ, ಬೇರೆಯವುಗಳಲ್ಲಿ ತಮ್ಮ ಸಂಪತ್ತನ್ನು ಅಡಗಿಸಿ ವೈದಿಕ ಯಾಗಗಳನ್ನು ಮಾಡದ ಕೃಪಣ ಜನರನ್ನು ಸೂಚಿಸುತ್ತದೆ. ಪಣಿಗಳು ಸಿಮಿಟಿಕ್ ವ್ಯಾಪಾರಿಗಳು ಎಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ, ಆದರೆ ಇದಕ್ಕೆ ಸಾಕ್ಷಿ ಕಡಿಮೆಯಿದೆ. ಯೋಧರು, ಪುರೋಹಿತರು, ದನಪಾಲಕರು, ಕೃಷಿಕರು, ಬೇಟೆಗಾರರು, ಕ್ಷೌರಿಕರು, ಪಾನ ವ್ಯಾಪಾರಿಗಳ ವೃತ್ತಿಗಳು ಮತ್ತು ರಥ ತಯಾರಿಕೆ, ಬಂಡಿ ತಯಾರಿಕೆ, ಮರಗೆಲಸ, ಲೋಹಗೆಲಸ, ಚರ್ಮಸಂಸ್ಕರಣದ ಕರಕೌಶಲಗಳು, ಬಿಲ್ಲು ತಯಾರಿಕೆ, ಹೊಲಿಗೆ, ನೇಯ್ಗೆ, ಹುಲ್ಲು ಮತ್ತು ಜೊಂಡಿನ ಚಾಪೆಗಳ ತಯಾರಿಕೆಯನ್ನು ಋಗ್ವೇದದ ಸೂಕ್ತಗಳಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಕೆಲವಕ್ಕೆ ಪೂರ್ಣಕಾಲಿಕ ತಜ್ಞರು ಬೇಕಾಗಿದ್ದಿರಬಹುದು. ದೋಣಿಗಳು ಮತ್ತು ಸಾಗರಗಳ ಉಲ್ಲೇಖಗಳಿವೆ. ಋಗ್ವೇದದ ಮಂಡಲ ೧೦ ಪೂರ್ವ ಮತ್ತು ಪಶ್ಚಿಮ ಎರಡೂ ಸಾಗರಗಳನ್ನು ಉಲ್ಲೇಖಿಸುತ್ತದೆ. ವೈಯಕ್ತಿಕ ಆಸ್ತಿ ಒಡೆತನ ಇರಲಿಲ್ಲ ಮತ್ತು ಕುಲಗಳು ಒಟ್ಟಾರೆಯಾಗಿ ಜಮೀನು ಮತ್ತು ಹಿಂಡುಗಳ ಮೇಲೆ ಹಕ್ಕು ಹೊಂದಿದ್ದವು. ಯುದ್ಧದ ಅವಧಿಯಲ್ಲಿ ಅಥವಾ ಸಾಲದ ಪಾವತಿಮಾಡದ ಪರಿಣಾಮವಾಗಿ ಗುಲಾಮಗಿರಿಯನ್ನು (ದಾಸ, ದಾಸಿ) ಉಲ್ಲೇಖಿಸಲಾಗಿದೆ. ಆದರೆ, ಸೇವಕರು ಉತ್ಪಾದನಾ ಸಂಬಧಿತ ಚಟುವಟಿಕೆಗಳ ಬದಲಾಗಿ ಮನೆಗಳಲ್ಲಿ ಕೆಲಸಮಾಡುತ್ತಿದ್ದರು.
ಧರ್ಮ
ಬದಲಾಯಿಸಿನಂಬಿಕೆಯ ವೈದಿಕ ರೂಪಗಳು ಆಧುನಿಕ ಹಿಂದೂ ಧರ್ಮದ ಅಗ್ರಗಾಮಿಗಳಲ್ಲಿ ಒಂದು. ಮುಖ್ಯವಾಗಿ ನಾಲ್ಕು ವೇದಗಳು ವೈದಿಕ ಕಾಲದ ಪಠ್ಯಗಳು ಎಂದು ಪರಿಗಣಿಸಲಾಗಿವೆ, ಆದರೆ ಬ್ರಾಹ್ಮಣಗಳು, ಆರಣ್ಯಕಗಳು, ಮತ್ತು ಹೆಚ್ಚು ಹಳೆಯ ಉಪನಿಷತ್ತುಗಳು ಜೊತೆಗೆ ಅತ್ಯಂತ ಹಳೆಯ ಶ್ರೌತಸೂತ್ರಗಳು ಕೂಡ ವೈದಿಕ ಕಾಲದ್ದೆಂದು ಪರಿಗಣಿತವಾಗಿವೆ. ವೇದಗಳು ೧೬ ಅಥವಾ ೧೭ ಶ್ರೌತ ಪುರೋಹಿತರು ಮಾಡುವ ಧರ್ಮಾಚರಣೆಗಳು ಮತ್ತು ಯಜ್ಞಗಳಿಗೆ ಸಂಬಂಧಿಸಿದ ಆರಾಧನಾ ವಿಧಾನವನ್ನು ದಾಖಲಿಸುತ್ತವೆ.
ಋಗ್ವೇದದ ಸೂಕ್ತಗಳ ರಚನೆಕಾರರಾದ ಋಷಿಗಳನ್ನು ಪ್ರೇರಿತ ಕವಿಗಳು ಮತ್ತು ಕಾಲಜ್ಞಾನಿಗಳೆಂದು ಪರಿಗಣಿಸಲಾಗುತ್ತದೆ (ವೈದಿಕ ಕಾಲದ ನಂತರದಲ್ಲಿ ಶಾಶ್ವತವಾಗಿ ಅಸ್ತಿತ್ವದಲ್ಲಿರುವ ವೇದದ ಕೇಳುಗರೆಂದು ತಿಳಿಯಲಾಯಿತು, ಶ್ರೌತ ಅಂದರೆ "ಕೇಳಿದ್ದು").
ಯಜ್ಞಗಳನ್ನು ನಡೆಸುವುದು ಪೂಜೆಯ ವಿಧಾನವಾಗಿತ್ತು ಮತ್ತು ಇದರಲ್ಲಿ ಋಗ್ವೈದಿಕ ಶ್ಲೋಕಗಳ (ವೇದ ಪಠಣ ನೋಡಿ) ಪಠಣ, ಸಾಮನ್‍ಗಳ ಗಾಯನ ಮತ್ತು ಯಾಗ ಮಂತ್ರಗಳ (ಯಜುಸ್) ಗೊಣಗುಟ್ಟುವಿಕೆ ಸೇರಿತ್ತು. ಯಜ್ಞದಲ್ಲಿ ಬಲಿ ಮತ್ತು ಅಗ್ನಿಯಲ್ಲಿ ಹವನ ಸಾಮಗ್ರಿಯ (ನಾರು ಬೇರುಗಳ ಪದಾರ್ಥಗಳು) ಉತ್ಪತನ ಜೊತೆಗೆ ವೇದ ಮಂತ್ರಗಳ ಪಠಣ ಸೇರಿರುತ್ತಿತ್ತು. ಯಜ್ಞ ಶಬ್ದದ ಭವ್ಯವಾದ ಅರ್ಥ ಸಂಸ್ಕೃತ ಕ್ರಿಯಾಪದ ಯಜ್ ಇಂದ ಹುಟ್ಟಿಕೊಂಡಿದೆ, ಇದಕ್ಕೆ ಮೂರು ಅರ್ಥಗಳಿವೆ, ದೇವಪೂಜನ, ಏಕತೆ (ಸೌಗತೀಕರಣ) ಮತ್ತು ದಾನ. ಯಾಗದ ಅಗ್ನಿ ಒಂದು ಅಗತ್ಯ ಅಂಶವಾಗಿತ್ತು - ದೈವಿಕ ಅಗ್ನಿ - ಇದರಲ್ಲಿ ಆಹುತಿಗಳನ್ನು ಸುರಿಯಲಾಗುತ್ತಿತ್ತು, ಮತ್ತು ಅಗ್ನಿಯಲ್ಲಿ ಅರ್ಪಿಸಿದ ಎಲ್ಲವೂ ದೇವರನ್ನು ಮುಟ್ಟುತ್ತದೆಂದು ನಂಬಲಾಗಿತ್ತು. ಜನರು ಹೇರಳ ಮಳೆ, ದನ, ಪುತ್ರರು, ದೀರ್ಘಾಯುಷ್ಯ ಮತ್ತು ಸ್ವರ್ಗ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಿದ್ದರು.
ವೈದಿಕ ಜನರು ಆತ್ಮದ ದೇಹಾಂತರದಲ್ಲಿ ನಂಬಿಕೆಯಿಟ್ಟಿದ್ದರು ಮತ್ತು ಅಥರ್ವವೇದದ ವೇಳೆಗೆ ಅಶ್ವತ್ಥಮರ ಹಾಗೂ ಹಸುವನ್ನು ಪವಿತ್ರೀಕರಿಸಲಾಗಿತ್ತು. ಧರ್ಮ, ಕರ್ಮ, ಇತ್ಯಾದಿಗಳಂತಹ ನಂತರ ಸಮರ್ಥಿಸಲ್ಪಟ್ಟ ಭಾರತೀಯ ತತ್ವಶಾಸ್ತ್ರದ ಅನೇಕ ಪರಿಕಲ್ಪನೆಗಳು ತಮ್ಮ ಮೂಲವನ್ನು ವೇದಗಳಲ್ಲಿ ಪತ್ತೆಹಚ್ಚುತ್ತವೆ.
ವೈದಿಕ ದೇವತಾಗಣದ ಮುಖ್ಯ ದೇವತೆಗಳು ಇಂದ್ರ, ಅಗ್ನಿ ಮತ್ತು ಸೋಮ ಮತ್ತು ಸಮಾಜ ವ್ಯವಸ್ಥೆಯ ಕೆಲವು ದೇವತೆಗಳು ಉದಾಹರಣೆಗೆ ಮಿತ್ರಾ-ವರುಣ, ಆರ್ಯಮಾನ್, ಭಗ ಮತ್ತು ಅಂಸ, ಜೊತೆಗೆ ಸೂರ್ಯ, ವಾಯು, ಮತ್ತು ಪೃಥ್ವಿಯಂತಹ ಪ್ರಕೃತಿ ದೇವತೆಗಳು. ಹೆಣ್ಣು ದೇವತೆಗಳಲ್ಲಿ ಉಷಸ್, ಪೃಥ್ವಿ ಮತ್ತು ಅದಿತಿ (ಆದಿತ್ಯ ದೇವತೆಗಳ ಅಥವಾ ಕೆಲವೊಮ್ಮೆ ಆಕಳಿನ ತಾಯಿ) ಸೇರಿದ್ದರು. ನದಿಗಳನ್ನೂ, ವಿಶೇಷವಾಗಿ ಸರಸ್ವತಿಯನ್ನು, ದೇವತೆಗಳೆಂದು ಪರಿಗಣಿಸಲಾಗಿತ್ತು. ದೇವತೆಗಳನ್ನು ಸರ್ವಶಕ್ತವೆಂದು ಕಾಣಲಾಗುತ್ತಿರಲಿಲ್ಲ. ಮಾನವರು ಮತ್ತು ದೇವರ ನಡುವಿನ ಸಂಬಂಧ ವಹಿವಾಟಿನ ರೀತಿಯದಾಗಿತ್ತು, ಮತ್ತು ಅಗ್ನಿಯು ಇಬ್ಬರ ನಡುವಿನ ಸಂದೇಶವಾಹಕನ ಪಾತ್ರ ತೆಗೆದುಕೊಳ್ಳುತ್ತಿದ್ದನು. ಒಂದು ಸಮಾನವಾದ ಇಂಡೊ-ಇರಾನಿಯನ್ ಧರ್ಮದ ಬಲವಾದ ಕುರುಹುಗಳು ಕಾಣಿಸುತ್ತವೆ, ವಿಶೇಷವಾಗಿ ಸೋಮ ವಿಧಿ ಮತ್ತು ಅಗ್ನಿ ಪೂಜೆಯಲ್ಲಿ, ಇವೆರಡನ್ನೂ ಪಾರಸಿ ಧರ್ಮದಲ್ಲಿ ಸಂರಕ್ಷಿಸಲಾಗಿದೆ.
ವೇದಗಳಲ್ಲಿ ನೀತಿಗಳು ಸತ್ಯ ಮತ್ತು ಋತದ ಪರಿಕಲ್ಪನೆಗಳನ್ನು ಆಧರಿಸಿವೆ. ಸತ್ಯವು ಪರಮದಲ್ಲಿ ಬೇರೂರಿರುವ ಏಕೀಕರಣದ ತತ್ವ. ಋತವು ಸತ್ಯದ ಅಭಿವ್ಯಕ್ತಿ ಮತ್ತು ಬ್ರಹ್ಮಾಂಡ ಹಾಗೂ ಅದರೊಳಗಿನ ಎಲ್ಲದರ ಕಾರ್ಯಾಚರಣೆಯನ್ನು ನಿಯಂತ್ರಿಸುವ ಮತ್ತು ಸುಸಂಘಟಿತವಾಗಿಸುವಂಥದ್ದು. ಋತದೊಂದಿಗೆ ಅನುಸರಣೆ ಪ್ರಗತಿಯನ್ನು ಸಾಧ್ಯವಾಗಿಸುತ್ತದೆ ಮತ್ತು ಅದರ ಉಲ್ಲಂಘನೆ ಶಿಕ್ಷೆಗೆ ಕಾರಣವಾಗುತ್ತದೆ.
ವೈದಿಕ ಧರ್ಮವು ಹಿಂದೂ ಪಥಗಳಾದ ಯೋಗ ಮತ್ತು ವೇದಾಂತದಲ್ಲಿ ವಿಕಸನಗೊಂಡಿತು. ವೇದಾಂತವು ತನ್ನನ್ನು ವೇದಗಳ ಮೂಲತತ್ವವೆಂದು ಪರಿಗಣಿಸಿಕೊಳ್ಳುವ ಒಂದು ಧಾರ್ಮಿಕ ಪಥ, ಮತ್ತು ವೈದಿಕ ದೇವತಾಗಣವನ್ನು ಬ್ರಹ್ಮಾಂಡದ ಏಕೀಕೃತ ದೃಷ್ಟಿಯಾಗಿ ಅರ್ಥೈಸುತ್ತದೆ ಮತ್ತು ದೇವರನ್ನು (ಬ್ರಹ್ಮನ್) ಈಶ್ವರ ಮತ್ತು ಬ್ರಹ್ಮನ್‍ನ ರೂಪಗಳಲ್ಲಿ ಅಂತರ್ಭೂತ ಹಾಗೂ ಅತೀಂದ್ರಿಯವೆಂದು ಕಾಣಲಾಗುತ್ತದೆ. ಈ ವೈದಿಕೋತ್ತರ ವೈಚಾರಿಕ ಪದ್ಧತಿಗಳು, ಜೊತೆಗೆ ಉಪನಿಷತ್ತುಗಳು, ಮಹಾಕಾವ್ಯಗಳಂತಹ (ಮಹಾಭಾರತದ ಭಗವದ್ಗೀತೆ) ನಂತರದ ಪಠ್ಯಗಳನ್ನು ಸಂಪೂರ್ಣವಾಗಿ ಸಂರಕ್ಷಿಸಿಡಲಾಗಿದೆ ಮತ್ತು ಆಧುನಿಕ ಹಿಂದೂ ಧರ್ಮದ ಆಧಾರವನ್ನು ರೂಪಿಸುತ್ತವೆ. ವೈದಿಕ ಧರ್ಮದ ಮತಾಚರಣಾ ಸಂಪ್ರದಾಯಗಳನ್ನು ಸಂಪ್ರದಾಯವಾದಿ ಶ್ರೌತ ಸಂಪ್ರದಾಯದಲ್ಲಿ ಸಂರಕ್ಷಿಸಲಾಗಿದೆ.
ಸಾಹಿತ್ಯ
ಬದಲಾಯಿಸಿವೈದಿಕ ಭಾರತದ ಇತಿಹಾಸದ ಪುನರ್ನಿರ್ಮಾಣವು ಪಠ್ಯಗಳೊಳಗಿರುವ ವಿವರಗಳನ್ನು ಆಧರಿಸಿದೆ, ಆದರೆ ಅವಶ್ಯಕ ಪುರಾತತ್ವ ವಿವರಗಳಿಗೆ ಸಂಬಂಧಿಸಬಹುದು. ಭಾಷಿಕವಾಗಿ, ವೈದಿಕ ಪಠ್ಯಗಳನ್ನು ಐದು ಕಾಲಾನುಸಾರವಾದ ಪದರಗಳಲ್ಲಿ ವರ್ಗೀಕರಿಸಬಹುದು:
1. ಋಗ್ವೈದಿಕ ಪಠ್ಯ: ಋಗ್ವೇದವು ಇದುವರೆಗಿನ ಸಂರಕ್ಷಿತ ವೈದಿಕ ಪಠ್ಯಗಳ ಪೈಕಿ ಅತ್ಯಂತ ಪುರಾತನವಾದದ್ದು, ಮತ್ತು ಇದು ಅನೇಕ ಸಾಮಾನ್ಯ ಇಂಡೊ-ಇರಾನಿಯನ್ ಅಂಶಗಳನ್ನು ಉಳಿಸಿಕೊಂಡಿದೆ, ಭಾಷೆ ಮತ್ತು ವಿಷಯ ಎರಡರಲ್ಲೂ. ಈ ಅಂಶಗಳು ಯಾವುದೇ ಬೇರೆ ವೈದಿಕ ಪಠ್ಯಗಳಲ್ಲಿ ಇಲ್ಲ.
2. ಮಂತ್ರ ಭಾಷೆ ಪಠ್ಯಗಳು: ಈ ಅವಧಿಯು ಅಥರ್ವವೇದ (ಪೈಪ್ಪಲಾದ ಮತ್ತು ಶೌನಕೀಯ), ಋಗ್ವೇದ ಖಿಲಾನಿ, (ಋಗ್ವೇದದಲ್ಲಿರದ ಸುಮಾರು ೭೫ ಮಂತ್ರಗಳನ್ನು ಹೊಂದಿರುವ) ಸಾಮವೇದ ಸಂಹಿತಾ, ಮತ್ತು ಯಜುರ್ವೇದದ ಮಂತ್ರಗಳ ಮಂತ್ರ ಮತ್ತು ಗದ್ಯ ಭಾಷೆ ಎರಡನ್ನೂ ಒಳಗೊಂಡಿದೆ. ಈ ಪಠ್ಯಗಳಲ್ಲಿ ಅನೇಕ ಪಠ್ಯಗಳು ಋಗ್ವೇದದಿಂದ ಹೆಚ್ಚಾಗಿ ಪಡೆದುಕೊಂಡಿವೆ, ಭಾಷಿಕ ಬದಲಾವಣೆ ಮತ್ತು ಮರು ವ್ಯಾಖ್ಯಾನದ ದೃಷ್ಟಿಯಿಂದ. ಎದ್ದುಕಾಣುವ ಬದಲಾವಣೆಗಳಲ್ಲಿ ವಿಶ್ವದ ಬದಲು ಸರ್ವ, ಮತ್ತು ಕುರು ಧಾತುವಿನ ಹರಡುವಿಕೆ ಸೇರಿವೆ. ಇದರ ಕಾಲಮಾನ ಕ್ರಿ.ಪೂ. ೧೨ ರಿಂದ ೧೧ನೇ ಶತಮಾನ.
3. ಸಂಹಿತಾ ಗದ್ಯ ಪಠ್ಯಗಳು: ಈ ಅವಧಿಯು ಅಂಗೀಕೃತ ವೈದಿಕ ಗ್ರಂಥಗಳ ಸಂಗ್ರಹ ಮತ್ತು ಕ್ರೋಡೀಕರಣದ ಆರಂಭದ ಗುರುತಾಗಿದೆ. ಕೃಷ್ಣ ಯಜುರ್ವೇದದ ಬ್ರಾಹ್ಮಣ ಭಾಗ (ಮಂತ್ರಗಳು ಮತ್ತು ಕ್ರಿಯಾವಿಧಿ ಮೇಲಿನ ಭಾಷ್ಯ) ಈ ಅವಧಿಗೆ ಸೇರಿವೆ. ಇದರ ಕಾಲಾವಧಿ ಕ್ರಿ.ಪೂ ೧೦೦೦ ಅಥವಾ ೯೦೦ ರಿಂದ.
4. ಬ್ರಾಹ್ಮಣ ಗದ್ಯ ಪಠ್ಯಗಳು: ನಾಲ್ಕು ವೇದಗಳ ಬ್ರಾಹ್ಮಣಗಳು, ಜೊತೆಗೆ ಆರಣ್ಯಕಗಳು, ಉಪನಿಷತ್ತುಗಳಲ್ಲಿ ಅತ್ಯಂತ ಹಳೆಯದಾದ ಬೃಹದಾರಣ್ಯಕ ಉಪನಿಷತ್, ಛಾಂದೋಗ್ಯ ಉಪನಿಷತ್, ಜೈಮಿನೀಯ ಉಪನಿಷತ್ ಬ್ರಾಹ್ಮಣ, ಮತ್ತು ಅತ್ಯಂತ ಹಳೆಯ ಶ್ರೌತಸೂತ್ರಗಳು (ಬೌಧಾಯನ ಶ್ರೌತ ಸೂತ್ರ) ಈ ಅವಧಿಗೆ ಸೇರಿವೆ.
5. ಸೂತ್ರ ಭಾಷೆಯ ಪಠ್ಯಗಳು: ಇದು ವೈದಿಕ ಸಂಸ್ಕೃತದ ಕೊನೆಯ ಪದರ ಕ್ರಿ.ಪೂ. ೫೦೦ರ ವರೆಗೆ. ಈ ಅವಧಿಯಲ್ಲಿ ಶ್ರೌತಸೂತ್ರದ ಬಹುಪಾಲು, ಗೃಹ್ಯಸೂತ್ರ, ಮತ್ತು ಕೆಲವು ಉಪನಿಷತ್ತುಗಳು (ಉದಾ. ಕಠ ಉಪನಿಶತ್, ಮೈತ್ರಾಯಣೀಯ ಉಪನಿಷತ್) ಸೇರಿವೆ.
ಉಲ್ಲೇಖಗಳು
ಬದಲಾಯಿಸಿ- ↑ Samuel 2010, p. 49-52.
- ↑ Oberlies (1998:155) gives an estimate of 1100 BCE for the youngest hymns in book 10. Estimates for a terminus post quem of the earliest hymns are more uncertain. Oberlies (p. 158) based on 'cumulative evidence' sets wide range of 1700–1100