ವಿದೇಹ ರಾಜ್ಯ ಜನಕ ನಿಂದ ಸ್ಥಾಪಿತವಾದ ವೈದಿಕ ಭಾರತ ದಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು. ರಾಜ್ಯದ ಅಡ್ಡ ಗಡಿ ಪ್ರಸಕ್ತವಾಗಿ ಉತ್ತರ ಬಿಹಾರದ ಮಿಥಿಲಾ ಪ್ರದೇಶ ಮತ್ತು ನೇಪಾಳದ ಪೂರ್ವ ತರಾಯಿಯಲ್ಲಿ ಸ್ಥಿತವಾಗಿದೆ. ಪವಿತ್ರ ರಾಮಾಯಣದ ಪ್ರಕಾರ, ವಿದೇಹ ರಾಜ್ಯದ ರಾಜಧಾನಿಯನ್ನು ಮಿಥಿಲಾ ನಗರಿ ಎಂದು ಹೆಸರಿಸಲಾಗಿದೆ.[೧] ಮಿಥಿಲಾ ಪದವನ್ನು ಸಂಪೂರ್ಣ ರಾಜ್ಯವನ್ನೇ ಸೂಚಿಸಲು ಸಹ ಬಳಸಲಾಗಿದೆ.

ವಿದೇಹ ಮತ್ತು ಉತ್ತರ ವೈದಿಕ ಕಾಲದ ಇತರ ರಾಜ್ಯಗಳು

ಉತ್ತರ ವೈದಿಕ ಕಾಲದಲ್ಲಿ (ಕ್ರಿ.ಪೂ. ೧೧೦೦-೫೦೦), ಕುರು ಮತ್ತು ಪಾಂಚಾಲದ ಜೊತೆಗೆ ವಿದೇಹ ದಕ್ಷಿಣ ಏಷ್ಯಾದ ಪ್ರಮುಖ ರಾಜಕೀಯ ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದೆನಿಸಿತು. ಬ್ರಾಹ್ಮಣಗಳು ಮತ್ತು ಬೃಹದಾರಣ್ಯಕ ಉಪನಿಷತ್ತು ನಂತರದ ವೈದಿಕ ಸಾಹಿತ್ಯ ಜನಕನನ್ನು ಒಬ್ಬ ಮಹಾನ್ ದಾರ್ಶನಿಕ ರಾಜನೆಂದು ಹೆಸರಿಸುತ್ತದೆ. ಜನಕನು ವೈದಿಕ ಸಾಹಿತ್ಯ ಮತ್ತು ತತ್ವಶಾಸ್ತ್ರದ ಪ್ರೋತ್ಸಾಹಕ್ಕಾಗಿ ಪ್ರಸಿದ್ಧನಾಗಿದ್ದನು. ಇವನ ಆಸ್ಥಾನವು ಯಾಜ್ಞವಲ್ಕ್ಯರಂತಹ ಋಷಿಗಳಿಗೆ ಒಂದು ಬೌದ್ಧಿಕ ಕೆಂದ್ರವಾಗಿತ್ತು. ವಿದೇಹದಲ್ಲಿ ಬ್ರಾಹ್ಮಣಗಳು ಮತ್ತು ಉಪನಿಷತ್ತುಗಳ ರಚನೆಯಾದ ಕಾಲ ಕ್ರಿ.ಪೂ. ೧೪ ರಿಂದ ೮ ನೇ ಶತಮಾನ ವ್ಯಾಪ್ತಿಯಲ್ಲಿತ್ತು ಎಂದು ಕೆಲವು ವಿದ್ವಾಂಸರು ಸೂಚಿಸಿದರೆ, ಇತರ ವಿದ್ವಾಂಸರು ಈ ಕಾಲ ಕ್ರಿ.ಪೂ. ೯೦೦ ರಿಂದ ೫೦೦ರ ನಡುವಿತ್ತು ಎಂದು ಸೂಚಿಸುತ್ತಾರೆ. ಐತರೇಯ ವೈದಿಕ ಪರಂಪರೆ ಬಹುಶಃ ಉತ್ತರ ವೈದಿಕ ಕಾಲದಲ್ಲಿ ವಿದೇಹ ಮತ್ತು ವಿದ್ವತ್ತಿನ ಇತರ ಕೇಂದ್ರಗಳಿಗೆ ಸ್ಥಳಾಂತರಗೊಂಡಿತು.

ವಿದೇಹದ ಪ್ರದೇಶ ಮತ್ತು ಸಂಸ್ಕೃತಿಯನ್ನು ಹಿಂದೂ ಸಾಹಿತ್ಯದಲ್ಲಿ ಅನೇಕಸಲ ಉಲ್ಲೇಖಿಸಲಾಗಿದೆ. ಪಠ್ಯಗಳು ರಾಜ ವಂಶದ ಕಲ್ಪನೆ ಮತ್ತು ನಮಿ (ನಿಮಿ), ಜನಕ ಮತ್ತು ಇತರ ರಾಜರ ಉದಾಹರಣೆಗಳೊಂದಿಗೆ ಸಂನ್ಯಾಸತ್ವ ಸ್ವೀಕರಿಸುವ ದಾರ್ಶನಿಕ ರಾಜರ ಪರಂಪರೆಯನ್ನು ಉಲ್ಲೇಖಿಸುತ್ತವೆ. ಅವರ ಕಥೆಗಳು ಪ್ರಾಚೀನ ಅಸ್ತಿತ್ವದಲ್ಲಿರುವ ಹಿಂದೂ, ಬೌದ್ಧ ಮತ್ತು ಜೈನ ಪಠ್ಯಗಳಲ್ಲಿ ಸಿಕ್ಕಿವೆ, ಮತ್ತು ರಾಜರಿಂದ ಪರಿತ್ಯಾಗ ಬುದ್ಧನ ಜನನದ ಮೊದಲು ಒಂದು ಗೌರವಾನ್ವಿತ ಸಂಪ್ರದಾಯವಾಗಿತ್ತು ಎಂದು ಮತ್ತು ಈ ಸಂಪ್ರದಾಯ ವಿದೇಹವಲ್ಲದೇ ಪಾಂಚಾಲ, ಕಳಿಂಗ ಮತ್ತು ಗಾಂಧಾರದಂತಹ ಪ್ರದೇಶಗಳಲ್ಲಿಯೂ ಸ್ಥೂಲವಾಗಿ ಸ್ವೀಕೃತವಾಗಿತ್ತು ಎಂದು ಸೂಚಿಸುತ್ತವೆ. ವಿದೇಹದ ರಾಜ ನಿಮಿ ಅಥವಾ ನಮಿ ಜೈನ ಧರ್ಮದಲ್ಲಿ ೨೧ನೇ ತೀರ್ಥಂಕರ.

ವೈದಿಕ ಕಾಲದ ಕೊನೆಯಲ್ಲಿ, ವಿದೇಹ ಬಹುಶಃ ವಜ್ಜಿ (ವೃಜಿ) ಒಕ್ಕೂಟದ ಭಾಗವಾಯಿತು ಮತ್ತು ನಂತರ ಮಗಧ ಸಾಮ್ರಾಜ್ಯದಲ್ಲಿ ಸೇರಿಹೋಯಿತು. ವಿದೇಹ ರಾಜ್ಯವನ್ನು ಸಂಸ್ಕೃತ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣ ಗಳಲ್ಲಿಯೂ ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ, ಸೀತೆ ಯು ವಿದೇಹದ ರಾಜಕುಮಾರಿ. ಇವಳು ರಾಮನನ್ನು ಮದುವೆಯಾದ ನಂತರ ಕೋಸಲ ಮತ್ತು ವಿದೇಹ ರಾಜ್ಯಗಳ ನಡುವೆ ಮೈತ್ರಿ ಸೃಷ್ಟಿಯಾಯಿತು. ವಿದೇಹದ ರಾಜಧಾನಿ ಜನಕ್‍ಪುರ್ (ಇಂದಿನ ನೇಪಾಳದಲ್ಲಿದೆ) ಅಥವಾ ಬಲಿರಾಜ್‍ಗಡ್ (ಇಂದಿನ ಬಿಹಾರದ ಮಧುಬನಿ ಜಿಲ್ಲೆಯಲ್ಲಿದೆ).

ಉಲ್ಲೇಖಗಳು ಬದಲಾಯಿಸಿ

  1. Michael Witzel (1989), Tracing the Vedic dialects in Dialectes dans les litteratures Indo-Aryennes ed. Caillat, Paris, pages 13, 17 116-124, 141-143
"https://kn.wikipedia.org/w/index.php?title=ವಿದೇಹ&oldid=855513" ಇಂದ ಪಡೆಯಲ್ಪಟ್ಟಿದೆ