ಸದಸ್ಯ:Sushma Uppin/sandbox1
'ಜೋಗತಿ ಕುಣಿತ
ಬದಲಾಯಿಸಿಮುನ್ನುಡಿ
ಬದಲಾಯಿಸಿ'ಜೋಗ' ಎನ್ನುವ ಶಬ್ಧವನ್ನು ಕೇಳಿದಾಗ ವೈದಿಕ ಪಾರಿಭಾಷಿಕ ಪದವಾದ ಯೋಗದ ನೆನಪು ಬರುತ್ತದೆ. ಹಾಗಾದಾಗ ಯೋಗದ ತದ್ಭವ ಜೋಗವಾಗುತ್ತದೆ. ಜೋಗತಿಯರನ್ನು ಯೋಗಿನಿಯರೆಂದು ವೈದಿಕ ಪರಿಭಾಷೆಯ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಆದರೆ ಜೋಗತಿಯರು 'ಜಗ' ಹೊತ್ತುಕೊಂಡು ಕುಣಿಯುವವರಿದ್ದಾರೆ. ಜಗ ಹೊತ್ತವರನ್ನೇ ಜೋಗತಿಯರೆಂದು ಪರಿಗಣಿಸುವುದು ಹೆಚ್ಚು ಗೋಜಿಲು ಇಲ್ಲದ ತೀರ್ಮಾನವೆಂದೆನಿಸುತ್ತದೆ. ಜಗದ ಮೂಲದಿಂದಲೇ ಜೋಗ, ಜೋಗತಿ ಪದಗಳು ಬಂದಿರಬೇಕು. ಜಗ ಎಂದರೆ ಯಲ್ಲಮ್ಮನ ಮೂರ್ತಿಯನ್ನು ಇರಿಸಿರುವ ತುಂಬಿದ ಕೊಡ ಇಲ್ಲವೇ ಬುಟ್ಟಿ. ಜೋಗತಿ ಸಂಪ್ರದಾಯವನ್ನು ಕುರಿತಂತೆ ಕೆಲವು ಪುರಾಣಗಳೂ ಇವೆ.
ಪುರಾಣ ಒಂದು
ಬದಲಾಯಿಸಿಪೌರಾಣಿಕ ಋಷಿಯಾದ ಜಮದಗ್ನಿಗೆ ರೇಣುಕೆಯು ಪ್ರತಿ ದಿನವೂ ಮಲಪ್ರಭಾ ನದಿಯಿಂದ ಉಸುಕಿನ ಮಡಿಕೆ ತಯಾರಿಸಿ ಸರ್ಪವನ್ನೇ ಸಿಂಬೆಯನ್ನಾಗಿ ಮಾಡಿ ನೀರು ತರಬೇಕಾಗುತ್ತಿತ್ತು. (ಇಲ್ಲಿ ಏಳು ಕೊಳ್ಳಗಳಿರುವುದರಿಂದ) ಯಲ್ಲಮ್ಮನಿಗೆ ಏಳು ಕೊಳ್ಳದ ಯಲ್ಲಮ್ಮನೆಂದು ಕರೆಯುತ್ತಾರೆ. ಒಮ್ಮೆ ಅವಳು ಮಲಾಪಹಾರೀ ನದಿಯಲ್ಲಿ ಗಂಧರ್ವ ದಂಪತಿಗಳು ಸ್ನಾನ ಮಾಡುವುದನ್ನು ಕಂಡು ಆಕರ್ಷಿತಳಾಗಿದ್ದರಿಂದ ಅವಳ ಕರ್ತವ್ಯದಲ್ಲಿ ಚ್ಯುತಿಯಾಗುತ್ತದೆ. ಆಗ ರೇಣುಕಾದೇವಿಯು ಜಮದಗ್ನಿ ಋಷಿಯ ಶಾಪಕ್ಕೆ ಗುರಿಯಾಗಿ ಕುರೂಪಿಯಾಗಿ, ಆಶ್ರಮದಿಂದ ಹೊರತಳ್ಳಲ್ಪಡುತ್ತಾಳೆ. ಇಂಥಾ ಪರಿಸ್ಥಿತಿಯಲ್ಲಿ ಅಡವಿಯಲ್ಲಿ ತಿರುಗಾಡುತ್ತಿರುವಾಗ ನಾಥ ಸಂಪ್ರದಾಯದ ಶೈವ ಋಷಿಗಳಾದ ಏಕನಾಥ ಮತ್ತು ಜೋಗಿನಾಥರನ್ನು ಭೇಟಿಯಾಗುತ್ತಾಳೆ. ಈ ಜೋಗಿಗಳು ಅವಳಿಗೆ ಜೋಗುಳ ಭಾವಿಯಲ್ಲಿ ಸ್ನಾನ ಮಾಡಿಸಿ ಉದರ ನಿರ್ವಹಣೆಗಾಗಿ ಐದು ಮನೆಗಳಿಂದ ಭಿಕ್ಷೆ ಬೇಡಲು 'ಹಡ್ಲಗಿ'ಯನ್ನು ಕೊಡುತ್ತಾರೆ. ಅದರಿಂದಾಗಿ ರೇಣಿಕಾದೇವಿಯು ದೈಹಿಕ ಪೂರ್ವ ಸೌಂದರ್ಯವನ್ನು ಹೊಂದುತ್ತಾಳೆ. ನಂತರ ತನ್ನ ಪತಿ ಜಮದಗ್ನಿ ಋಷಿಯ ಬಳಿ ಮೊರೆ ಹೋಗುತ್ತಾಳೆ. ಪರರಿಂದ ಶಾಪ ವಿಮೋಚನೆ ಪಡೆದು ತನ್ನ ಮುಂದೆ ಬಂದ ಅವಳ ತಲೆಯನ್ನು ಕಡಿದು ಹಾಕಲು ತನ್ನ ಮೊದಲ ನಾಲ್ಕು ಮಕ್ಕಳಿಗೆ ಹೇಳುತ್ತಾನೆ. ಅವರು ತಮ್ಮ ತಂದೆಯ ಆಜ್ಞೆಯನ್ನು ನಿರಾಕರಿಸಿದ್ದರಿಂದ ಅವರಿಗೆ ನಪುಂಸಕರಾಗಿ ಎಂದು ಶಾಪ ಕೊಡುತ್ತಾನೆ. ಕೊನೆಯ ಮಗ ಪರಶುರಾಮನು ತಂದೆಯ ಆಜ್ಞೆಯನ್ನು ಪಾಲಿಸುತ್ತಾನೆ. ನಪುಂಸಕರಾದ ಈ ನಾಲ್ಕು ಮಕ್ಕಳು ಜೋಗಪ್ಪಗಳಾಗಿ ತಮ್ಮ ತಾಯಿಯ ಭಕ್ತರಾಗುತ್ತಾರೆ. ಇವರಿಂದ ಜೋಗಪ್ಪಗಳ ಸಂಪ್ರದಾಯ ಹುಟ್ಟುತ್ತದೆ. ಈ ಕಾರಣದಿಂದ ಯಲ್ಲಮ್ಮನ ಭಕ್ತರು ಮತ್ತು ಜೋಗತಿಯರು ಪರಾಕು ಹಾಕುವಾಗ ಯಲ್ಲಮ್ಮ ನಿನ್ನಾಲ್ಕು ಉಧೋ ಉಧೋ ಎಂದು ಹೇಳಿ ಆ ನಾಲ್ವರನ್ನು ಸ್ಮರಿಸುತ್ತಾರೆ ಎಂದು ಭಾವಿಸಲಾಗುತ್ತದೆ.
ಪುರಾಣ ಎರಡು
ಬದಲಾಯಿಸಿ"ಸುಂದರಿಯಾದ ಯಲ್ಲಮ್ಮನ ರೂಪಕ್ಕೆ ಮನಸೊತ ಓರಂಗಲ್ಲಿನ ರಾಯ ಅವಳನ್ನು ಕರೆತರಲು ದೂತರನ್ನು ಕಳುಹಿಸುತ್ತಾನೆ. ಆದರೆ ಯಲ್ಲಮ್ಮ ಅವನ ಮೇಲೆ ಸಿಟ್ಟಾಗುತ್ತಾಳೆ. ಮುದುಕಿ ವೇಷದಲ್ಲಿ ಓರಂಗಲ್ಲಿಗೆ ಹೋಗಿ ಆತನ ದರ್ಪವನ್ನು ಮುರಿಯುತ್ತಾಳೆ. ಆಕೆಯ ಶಾಪದಿಂದ ಆತ ತನ್ನ ಪುರುಷತ್ವವನ್ನು ಕಳೆದುಕೊಳ್ಳುತ್ತಾನೆ. ಆ ಮೇಲೆ ಜಗ ಹೊತ್ತು ಸ್ತ್ರೀ ಆಗಿ ಯಲ್ಲಮ್ಮನ ಮಹಿಮೆಯನ್ನು ಪ್ರಚಾರ ಮಾಡುತ್ತಾ ಊರುರು ಅಲೆಯುತ್ತಾನೆ. ಹೀಗೆ ಓರಂಗಲ್ಲಿನ ರಾಯನೋರ್ವನು ಈ ರೀತಿಯ ಜೋಗತಿ ಸಂಪ್ರದಾಯದ ಮೂಲ ಪುರುಷನೆಂದು ನಂಬಲಾಗಿದೆ.
ಜೋಗತಿಯರ ದೀಕ್ಷೆ
ಬದಲಾಯಿಸಿಯಲ್ಲಮ್ಮನ ಭಕ್ತರು ದೀಕ್ಷಾಗೆ ಬದ್ಧರಾಗಿರುವರು. ಯಾವುದೇ ಸಂಪ್ರದಾಯದಲ್ಲಿ ದೀಕ್ಷೆ ಪಡೆಯುವುದೆಂದರೆ ಆ ಸಂಪ್ರದಾಯವನ್ನು ಪ್ರಚಾರ ಮಾಡಿರುವವರಾಗಿರುತ್ತಾರೆ. ಜೋಗತಿಯ ದೀಕ್ಷೆಯು ಪೂಜಾರಿಗಳ ಮನೆಯಲ್ಲಿ ನಡೆಯುತ್ತದೆ. ದೀಕ್ಷೆಯಾಗುವ ಮೊದಲು ಜೋಗತಿಯಾಗುವವರು ಗುಡ್ಡದ ಮೇಲಿನ ಮೂರು ಪವಿತ್ರ ಕೊಂಡಗಳಲ್ಲಿ ಸ್ನಾನ ಮಾಡುತ್ತಾರೆ. ಆ ಬಳಿಕ ಹಿರಿಯ ಜೋಗತಿಯವರೊಂದಿಗೆ, ಸಂಬಂಧಿಕರೊಂದಿಗೆ ವಾದ್ಯ ಸಮೇತರಾಗಿ ಹೋಗುತ್ತಾರೆ. ಪೂಜಾರಿಯ ಮನೆಯಲ್ಲಿ ರೇಣುಕಾದೇವಿಯನ್ನು ಮತ್ತು ಪರಶುರಾಮರನ್ನು ಪೂಜಿಸುತ್ತಾರೆ. ಆಗ ಹಿರಿಯ ಜೋಗತಿಯರು ಹೊಸ ಜೋಗತಿಗೆ ಹೂವಿನ ಹಾರ ಹಾಕುತ್ತಾರೆ. ಆನಂತರ ಪೂಜಾರಿಯಿಂದ ಅವರಿಗೆ ಹಿತೋಪದೇಶವಾಗುತ್ತದೆ. ಬಳಿಕ ಐದು ಮನೆಗಳಿಗೆ ಆಕೆಯನ್ನು ಭಿಕ್ಷೆಗೆ ಕಳಿಹಿಸಲಾಗುವುದು. ಆ ನಂತರ ಐದು ದಿನಗಳವರೆಗೆ ಮಾದಿಗರ ಮನೆಯಲ್ಲಿಯ ಮಾತಂಗಿ ಕಟ್ಟೆಯ ನೀರಿನಿಂದ ಶುದ್ದಳಾಗಿ ಮಾತಂಗಿಯನ್ನು ಪೂಜಿಸಬೇಕು. ಇದೇ ಸಂದರ್ಭದಲ್ಲಿ ಆಕೆ ಬಡವರಿಗೆ ಊಟವನ್ನು ನೀಡುತ್ತಿರಬೇಕು. ವರ್ಷಕ್ಕೆ ಎರಡು ಬಾರಿ ಬನದ ಹುಣ್ಣಿಮೆಗೆ ಮತ್ತು ದವನದ ಹುಣ್ಣಿಮೆಗೆ ಆಕೆ ಯಲ್ಲಮ್ಮನ ಗುಡ್ಡಕ್ಕೆ ಹೋಗಬೇಕು. ಬನದ ಹುಣ್ಣಿಮೆಗೆ ಯಲ್ಲಮ್ಮ ರಂಡೆಯಾಗಿ ದವನದ ಹುಣ್ಣಿಮೆಗೆ ಮುತ್ತೈದೆಯಾಗುವವಳೆಂಬುದು ನಂಬಿಕೆ. ಕ್ರಮವಾಗಿ ಅವನ್ನು ರಂಡೆ ಹುಣ್ಣಿಮೆ ಮತ್ತು ಮುತ್ತೈದೆ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಉಡುಗೆ ತೋಡುಗೆ
ಬದಲಾಯಿಸಿದೀಕ್ಷೆಯ ಸಂದರ್ಭದಲ್ಲಿ ಜೋಗತಿಯರಿಗೆ ಉಡುಪಿನ ಕುರಿತಾಗಿ ಕೆಲವೊಂದು ಆಚರಣೆಗಳಿವೆ. ತಾವೂ ಮೂರು ತರಹದ ಉಡುಪುಗಳಲ್ಲಿ ಯಾವುದಾರರೊಂದನ್ನು ಧರಿಸಿಸುವುದಾಗಿ ಯಲ್ಲಮ್ಮನಲ್ಲಿ ಅವರು ಬೇಡಿಕೊಂಡಿರುತ್ತಾರೆ. ದಿಗಂಬರರಾಗಿರುವುದು, ಬೇವಿನ ಉಡಿಗೆ, ವಸ್ತ್ರದ ಉಡಿಗೆಗಳೇ ಆ ಮೂರು ಬಗೆಯ ಉಡಿಗೆಗಳು.ದಿಗಂಬರಾಗಿರುವವರು ಬೆಳಗಿನ ಮುಂಚೆಯೇ ಆ ವಿಧಿಯನ್ನು ಮುಗಿಸುತ್ತಾರೆ. ಬೇವಿನ ಉಡಿಗೆ ಮತ್ತು ಬಟ್ಟೆ ಧರಿಸುವವರು ಮುಂಜಾನೆಗೆ ಸಿದ್ಧರಾಗಿರುತ್ತಾರೆ. ಈ ಮೂರು ರೀತಿಯ ಉಡುಗೆಯವರೂ ಅವರವರು ಆಯ್ಕೆ ಮಾಡಿಕೊಂಡ ವೇಳೆಯಲ್ಲಿ ಜೋಗುಳ ಬಾವಿಯಿಂದ ದೇವಾಲಯದವರೆಗೆ ವಾದ್ಯಮೇಳದೊಂದಿಗೆ ಹಾಗೂ ಸಂಬಂಧಿಕರೊಂದಿಗೆ ಬರುತ್ತಾರೆ. ದಾರಿಯಲ್ಲಿ ಅವರಿಗೆ ಬೇವಿನ ಎಲೆಗಳಿಂದ ಮುಖಕ್ಕೆ ಪವಿತ್ರ ನೀರನ್ನು ಸಿಂಪಡಿಸುತ್ತಾರೆ. ದೇವಾಲಯಕ್ಕೆ ತಲುಪಿದ ಮೇಲೆ ಪ್ರದಕ್ಷಿಣೆ ಹಾಕಿ ತಮ್ಮ ಉಡುಪುಗಳನ್ನು ಬದಲಾಯಿಸಿ ಎಂದರೆ ಆ ಉಡುಪುಗಳ ಮೆರವಣಿಗೆ ಮುಗಿಸಿ ಮತ್ತೆ ಕೊಂಡಗಳಲ್ಲಿ ಪವಿತ್ರ ಸ್ನಾನ ಮಾಡಿ ದೀಕ್ಷಿತರಾಗುತ್ತಾರೆ.
ಜೋಗತಿಯರ ಮುತ್ತುಗಳು
ಬದಲಾಯಿಸಿಜೋಗತಿಯವರನ್ನು ಅವರು ಧರಿಸುವ ಮುತ್ತಿನಾಧಾರದಿಂದ ಮೂರು ವಿಧವಾಗಿ ಗುರಿತಿಸುತ್ತಾರೆ.
೧. ಗರತಿ ಮುತ್ತು ಧರಿಸುವವರು.
೨. ಸೂಳೆ ಮುತ್ತು ಧರಿಸುವವರು.
೩. ಜೋಗತಿ ಮುತ್ತು ಧರಿಸುವವರು.
ಗರತಿ ಮುತ್ತಿನವರು ಬಿಳಿಯ ಬಣ್ಣದ. ಸೂಳೆ ಮುತ್ತಿನವರು ಕೆಂಪು ಬಣ್ಣದ ಹಾಗೂ ಜೋಗತಿ ಮುತ್ತಿನವರು ಈ ಎರಡೂ ಬಣ್ಣದ ಮಿಶ್ರ ಮುತ್ತುಗಳನ್ನು ಧರಿಸುತ್ತಾರೆ. ಗರತಿಮುತ್ತುಗಳನ್ನು ಧರಿಸುವವರು ಮದುವೆಯಾಗಬಹುದು. ಇದಕ್ಕೆ ಯಾವುದೇ ಜಾತಿ ನಿರ್ಭಂದನೆಗಳಿಲ್ಲದಿರುವುದರಿಂದ ಮೇಲ್ವರ್ಗದಿಂದ ಕೆಳವರ್ಗದವರೆಗೆ ಎಲ್ಲರೂ ಧರಿಸುತ್ತಾರೆ. ಸೂಳೆ ಮುತ್ತನ್ನು ಧರಿಸುವ ಜೋಗತಿಯರು ಬಸವಿಯಾಗಿರುತ್ತಾರೆ. ಇದು ಸಾಮಾನ್ಯವಾಗಿ ಹಿಂದುಳಿದ ಜಾತಿಯಲ್ಲಿ ರೂಢಿಯಲ್ಲಿದೆ. ಇದಲ್ಲದೆ ಮಂಗಳಾರತಿ ಜೋಗತಿಯರು ಎನ್ನುವ ಇನ್ನೊಂದು ರೀತಿಯ ಜೋಗತಿಯರೂ ಇದ್ದಾರೆ. ಇವರ ಕರ್ತವ್ಯವೆಂದರೆ ದೇವಾಲಯದ ಮಂಗಳಾರತಿಯನ್ನು ಹಿಡಿಯುವುದು ಮತ್ತು ಅದರ ನಿರ್ವಹಣೆಯನ್ನು ಮಾಡುವುದು. ಇಂಥವರು ದೇವಾಲಯದಲ್ಲಿಯೇ ಇರುತ್ತಾರೆ.
ಜೋಗತಿ ಸಂಪ್ರದಾಯ
ಬದಲಾಯಿಸಿಈಗಾಗಲೇ ಹೇಳಿರುವಂತೆ ಉತ್ತರ ಕರ್ನಾಟಕದ ಕಡೆ ಯಲ್ಲಮ್ಮನ ಭಕ್ತರನ್ನು ಯಲ್ಲಮ್ಮನ ಜೋಗಿಗಳೆಂದು ಕರೆಯುತ್ತಾರೆ. ಈ ಜೋಗಿಗಳಲ್ಲಿ ಜಗ ಹೊತ್ತ ಜೋಗಿ, ಕೊಡದ ಜೋಗಿಗಳೆಂಬ ವೆತ್ಯಾಸವಿದೆ. ಈ ಎರಡೂ ಪಂಥಗಳಲ್ಲಿಯೂ ಸ್ತ್ರೀ ಮತ್ತು ಪುರುಷರಿರುತ್ತಾರೆ. ಅವುಗಳಲ್ಲಿ ಪುರುಷರು ದೀಕ್ಷೆ ಪಡೆದು ಸ್ತ್ರೀಯೇ ಆಗಿ ಬಿಡುವುದು ಒಂದು ಕ್ರಮ. ಹಾಗೇಯೇ ದೀಕ್ಷೆ ಪಡೆದರೂ ಪುರುಷರಂತೆಯೇ ಇರುವವರದು ಇನ್ನೊಂದು ಕ್ರಮ. ಅದೇ ರೀತಿ ದೀಕ್ಷೆ ಪಡೆದು ಮದುವೆಯಾಗದೇ ದೇವರ ಹೆಸರಿನಲ್ಲಿಯೇ ಜೀವನ ನಡೆಸುವ ಹೆಂಗಸರು ಕೆಲವರಾದರೆ ಮತ್ತೆ ಕೆಲವರು ದೀಕ್ಷೆ ಪಡೆದು ಸಂಸಾರಂಸ್ಥರಾಗುವವರು. ಹಾಗೇ ಪುರುಷ ಮತ್ತು ಸ್ತ್ರೀ ಜೋಗತಿಯರಲ್ಲಿ ಗರತಿ ಮುತ್ತಿನ ಜೋಗತಿಯರು ಮತ್ತು ಸೂಳೆ ಮುತ್ತಿನ ಜೋಗತಿಯರೆಂಬ ಎರಡು ಮುಖ್ಯ ಭೇದಗಳಿವೆ.
ಜಗ ಹೊತ್ತ ಜೋಗತಿಯರು
ಬದಲಾಯಿಸಿಹೆಸರೇ ಹೇಳುವಂತೆ ಇವರು ಜಗ ಹೊತ್ತವರು. ಈ ಜಗಕ್ಕೆ ಹಡ್ಲಗೆ ಎನ್ನುತ್ತಾರೆ. ಜಗ ಎಂದರೆ ಗುಂಡನೆಯ ಬಿದಿರಿನ ಬುಟ್ಟಿ. ಈ ಬುಟ್ಟಿಯಲ್ಲಿ ಅಲ್ಲಲ್ಲಿ ಚೂಪುಗಳಿದ್ದು ಅವುಗಳಿಗೆ ಬೆಳೆ ಮತ್ತು ನಾಗರ ಹೆಡೆಗಳನ್ನು ಸಿಗಿಸಿರಲಾಗುತ್ತದೆ. ಈ ಜಗವನ್ನು ಹೊತ್ತ ಜೋಗಪ್ಪ ಮತ್ತು ಜೋಗಮ್ಮರು ಭಿಕ್ಷೆಗೆ ಹೋಗುತ್ತಾರೆ. ಉತ್ತರ ಕರ್ನಾಟಕದಲ್ಲಿ ಇವರು ತುಂತುಣಿಯನ್ನು ನುಡಿಸುತ್ತಾರೆ. ಮೈಸೂರು ಭಾಗದಲ್ಲಿ ಇಂತಹ ಜೋಗಿಗಳೂ ವಿರಳವಾಗಿ ಕಾಣಿಸಿಕೊಂಡರೂ ಯಾವುದೇ ವಾದ್ಯಗಳನ್ನು ಬಳಸುವುದಿಲ್ಲ. ಹಾಗಿದ್ದರೂ ಅವರು ಕಥೆಗಳನ್ನು ಹೇಳುತ್ತಾರೆ.
ಕೊಡ ಹೊತ್ತ ಜೋಗಿಗಳು
ಬದಲಾಯಿಸಿತಾಮ್ರದ ಕೊಡಕ್ಕೆ ಯಲ್ಲಮ್ಮನ ಮೂರ್ತಿಯನ್ನು ಕಟ್ಟಲಾಗುತ್ತದೆ. ಕೊಡದ ತುಂಬ ನೀರು ತುಂಬಿಸಿ ಅದರ ಕಂಟಕ್ಕೆ ಯಲ್ಲಮ್ಮನ ಮೂರ್ತಿಯನ್ನು ಕಟ್ಟಿ ನವಿಲುಗರಿ ಅಲಂಕಾರ ಮಾಡಲಾಗುತ್ತದೆ. ಇದನ್ನು ಹೊತ್ತುಕೊಂಡು ಕುಣಿಯುವವರೇ ಕೊಡ ಹೊತ್ತ ಜೋಗಿಗಳು. ಇದರೊಂದಿಗೆ ತುಂತುಣಿ ಕುಣಿತ ಮತ್ತು ಹಾಡು ಇರುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಇವರು ವಿರಳ.
ಚೌಡಿಕೆ ಜೋಗಿಗಳು
ಬದಲಾಯಿಸಿಚೌಡಿಕೆ ನುಡಿಸುವ ಜೋಗಿಗಳು ಹೆಚ್ಚಾಗಿ ಇವರು ಗರತಿ ಮುತ್ತಿನ ಜೋಗಿಗಳೇ ಆಗಿದ್ದಾರೆ. ಇವರು ಯಾವುದೇ ವಿಧವಾದ ವಸ್ತುವನ್ನು ಹೊರುವವರಲ್ಲ. ಚೌಡಿಕೆ ಇವರ ಬಂಡವಾಳ.
ವೇಷಭೂಷಣ ಮತ್ತು ಕುಣಿತ
ಬದಲಾಯಿಸಿಬಿಳಿ ಸೀರೆ, ಕೈಯಲ್ಲಿ ಜಾಗಟೆ ಅಥವಾ ಕರಡಿ ಕೂದಲಿನ ಚೌಡಿ, ಕೊರಳಲ್ಲಿ ಕವಡೆ ಸರ. ಕಾಲಿಗೆ ಗೆಜ್ಜೆ, ಹಣೆಗೆ ಅರಿಶಿನ ಮತ್ತು ಕುಂಕುಮ ತಲೆಯ ಮೇಲೆ ಕೊಡ ಅಥವಾ ಜಗ. ಇವರಲ್ಲಿ ಕೆಲವರು ಹೆಂಗಸರಾದರೆ ಮತ್ತೆ ಕೆಲವರು ಗಂಡೇ ಹೆಣ್ಣಾಗಿ ಮಾರ್ಪಟ್ಟ ನಪುಂಸಕರು. ಮುಖದ ಮೇಲಿನ ರೋಮಗಳನ್ನು ಒತ್ತಾಯವಾಗಿ ನಿರ್ಮೂಲನೆ ಮಾಡಿ ಎಷ್ಟು ಮುಚ್ಚಿಟ್ಟರೂ ಕಾಣುವ ಗಡಸು ಮುಖವನ್ನು ಮರೆಮಾಚಲು ಹೆಣ್ಣಿನ ಕೊಂಕು, ಬೆಡಗು ಮತ್ತು ವೈಯ್ಯಾರಗಳನ್ನು ಕೃತಕವಾಗಿ ತೋರುವವರು. ಕೊಡ ಅಥವಾ ಜಗವನ್ನು ತಲೆಯ ಮೇಲೆ ಇಟ್ಟುಕೊಂಡರೂ ಅದು ತಾನಾಗಿಯೇ ತನ್ನ ಸಮ ಸ್ಥಿತಿಯನ್ನು ಕಾದಿಟ್ಟುಕೊಳ್ಳುವಂತೆ ಸದಾ ತಲೆಯ ಮೇಲಿರುತ್ತದೆ. ನಡೆಯುವಾಗ, ಕೂರುವಾಗ, ಏಳುವಾಗ ಮತ್ತು ಕುಣಿಯುವಾಗ ಅದನ್ನು ಕೈಯಲ್ಲಿ ಹಿಡಿಯುವುದಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಅದು ಸದಾ ತಲೆಯ ಮೇಲಿದ್ದು ದೇಹದ ಒಂದು ಭಾಗ ಎಂಬಂತೆ ರೂಢಿಯಾಗಿರುತ್ತದೆ. ಈ ಕೊಡ ಅಥವಾ ಜಗ ಕುಣಿತವನ್ನು ನಾವು ಕುಣಿತ ಎಂದು ಕರೆಯುತ್ತೇವಾದರೂ ಅವರು ಅದನ್ನು ಕುಣಿತ ಎಂದು ಕರೆಯುವುದಿಲ್ಲ. ಅದನ್ನು ಅವರು ಜೋಗಾಡುವುದೆಂದು ಕರೆಯುತ್ತಾರೆ. ಅಂದರೆ ಅವರ ದೃಷ್ಟಿಯಲ್ಲಿ ಈ ಕುಣಿತ ಯಲ್ಲಮ್ಮನನ್ನು ಆರಾಧಿಸುವ ಆಚರಣೆಯ ಒಂದು ಆಟವೇ ಹೊರತು ಮನರಂಜನೆಯ ಕುಣಿತವಲ್ಲ.
ಉಲ್ಲೇಖ
ಬದಲಾಯಿಸಿ- ಹಿ.ಚಿ ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ.