ಜೋಗಪ್ಪ - ಶ್ರೀ ಆದಿಚುಂಚನಗಿರಿ ಭೈರವ ಪಂಥಕ್ಕೆ ಸೇರಿದ ಗುಡ್ಡರನ್ನು ಜೋಗಪ್ಪಗಳೆಂದು ಸಂಬೋಧಿಸುತ್ತಾರೆ. ಕೇವಲ ದೈವಸಂಬಂಧವಾದ ಆಚರಣೆಗಳನ್ನು ನಡೆಸಿಕೊಂಡು ಬರುವ ದೇವರ ಮಕ್ಕಳು ಇವರು.

ಕಿನ್ನರಿ ಜೋಗಿಗಳಿಗೂ ಜೋಗಪ್ಪಗಳಿಗೂ ಯಾವ ಸಂಬಂಧವೂ ಇಲ್ಲ.

ತಿರುಪತಿ ವೆಂಕಟರಮಣನ ಒಕ್ಕಲುಗಳಿಗೆ ಸಂಬಂಧಪಡುವ ದಾಸಯ್ಯಗಳಂತೆ ಈ ಜೋಗಪ್ಪಗಳು ಚುಂಚನಗಿರಿಯ ಭೈರವನ ಒಕ್ಕಲಿನವರಿಗೆ ಸಂಬಂಧಪಡುತ್ತಾರೆ. ಆ ಒಕ್ಕಲುಗಳು ಇರುವ ಕಡೆಗಳಲ್ಲೆಲ್ಲ ಗ್ರಾಮಕ್ಕೊಬ್ಬನೋ ಹಲವು ಗ್ರಾಮಕ್ಕೆ ಒಬ್ಬನೋ ಜೋಗಪ್ಪ ಇದ್ದು ಅವರ ಧಾರ್ಮಿಕ ಸಂಪ್ರದಾಯಗಳಲ್ಲಿ, ಆಚರಣೆಗಳಲ್ಲಿ ಪಾಲುಗೊಳ್ಳಬೇಕು ಮುಖ್ಯ ಸೂತ್ರಧಾರನಾಗಿ ಪೂಜೆಯನ್ನು ನಡೆಸಿಕೊಡಬೇಕು.

ಚುಂಚನಗಿರಿ ಕ್ಷೇತ್ರಕ್ಕೆ ಎಲ್ಲ ಜಾತಿ ಮತಗಳಿಗೆ ಸಂಬಂಧಪಟ್ಟವರೂ ನಡೆದುಕೊಳ್ಳತ್ತಾದ್ದರಿಂದ ವಿವಿಧ ಮತಕ್ಕೆ ಸಂಬಂಧಪಟ್ಟ ಜೋಗಿಗಳೂ ಕಂಡುಬರುತ್ತಾರೆ. ಚುಂಚನಗಿರಿಯ ಸಮೀಪದ ಚುಂಚನಹಳ್ಳಿ. ಕಂಚನರ್ಹಳಿ, ಪಾಳ್ಯ ಈ ಗ್ರಾಮಗಳಲ್ಲಿ ಮಾತ್ರ ಕಾಪಾಲಿ ಮತಕ್ಕೆ ಸೇರಿದ ಜೋಗಪ್ಪಗಳು ಹೆಚ್ಚಾಗಿದ್ದಾರೆ. ಜೋಗಿಗಳಿಗೆ ವಿವಾಹಪೂರ್ವದಲ್ಲಿ ಚುಂಚನಗಿರಿ ಮಠದ ಅಧ್ಯಕ್ಷರು ದೀಕ್ಷೆ ನೀಡುತ್ತಾರೆ. ದೀಕ್ಷೆ ದೇವರ ಪ್ರೇರಣೆಯ ಮೇಲೆ ಆಗುತ್ತದೆ ಎಂದು ನಂಬಿಕೆ. ಸ್ವಪ್ನದಲ್ಲಿ ದೇವರು ಜೋಗಿಯನ್ನು ಬಿಡುವಂತೆ ಕೇಳಬಹುದು. ಜೋಗಿಯಾಗುತ್ತಾನೆಂದು ಜ್ಯೋತಿಶಾಸ್ತ್ರದಲ್ಲಿ ಹೇಳಿರಬಹುದು. ಕಷ್ಟಕಾರ್ಪಣ್ಯಗಳು ಒದಗಿದಾಗ ಹರಕೆಹೊತ್ತು ಹಿರಿಯಮಗನನ್ನು ಜೋಗಿ ಬಿಡಬಹುದು. ವಂಶಪಾರಂಪರ್ಯವಾಗಿಯೂ ಜೋಗಪ್ಪನನ್ನು ಬಿಡುವ ಸಂಪ್ರದಾಯ ಉಂಟು.

ದೀಕ್ಷೆಯ ದಿನ ವಟುವನ್ನು, ಬಂಧುಬಳಗದೊಡನೆ ಚುಂಚನಗಿರಿಗೆ ಕರೆದೊಯ್ಯಲಾಗುವುದು. ಅಲ್ಲಿ ಒಂದು ಪುಟ್ಟ ಸಮಾರಂಭವೇ ನಡೆಯುತ್ತದೆ. ಗುರುವಿನಿಂದ ದೀಕ್ಷೆಯಾದ ಮೇಲೆ ವಟುವಿನ ಮೆರವಣಿಗೆ ಆಗುತ್ತದೆ. ಲಾಂಛನವಾಗಿ ಈ ಮರಿಜೋಗಿಗೆ ಒಂದು ಸಿಂಗನಾದ, ಕಿವಿಗೆ ಚಿನ್ನದ ಅಥವಾ ಹಿತ್ತಾಳೆಯ ಮುದ್ರೆ, ಒಂದು ತಾಮ್ರದ ಪಾತ್ರೆ-ಇವನ್ನು ಕೊಡಲಾಗುವುದು. ಕೊರಳ ರುದ್ರಾಕ್ಷಿ, ಹಣೆಯ ವಿಭೂತಿ ಇವೂ ಜೋಗಿಯ ಸಂಕೇತಗಳೇ. ದೀಕ್ಷೆಯ ದಿನ ಮುಕ್ಕಣ್ಣ ಕುಲಾವಿಯನ್ನು ಜೋಗಿಗೆ ತೊಡಿಸಲಾಗುವುದು ಒಂದು ಕಾವಿಯ ವಸ್ತ್ರವನ್ನು ಮೈಮೇಲೆ ಹೊದಿಸಲಾಗುವುದು. ಆದರೆ ಇವನ್ನು ಜೋಗಪ್ಪ ಕೊನೆಯವರೆಗೂ ಉಳಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಈತ ಮುಂದೆ ಸಂಸಾರಿಯಾಗಿ ಬದುಕುತ್ತಾನೆ. ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಇವನ ಪಾತ್ರ ಮುಖ್ಯವಾದುದು.

ಸಿಂಗನಾದ ಜೋಗಪ್ಪಗಳ ವಾದ್ಯ. ಇದು ಯಾವ ಹಾಡುಗಾರಿಕೆಗೂ ಸಂಬಂಧಪಡುವುದಿಲ್ಲ. ಕೇವಲ ಪೂಜಾ ಸಂದರ್ಭದಲ್ಲಿ ಊದುವುದಕ್ಕಾಗಿ ಇದನ್ನು ಬಳಸಲಾಗುತ್ತದೆ. ಸಿಂಗನಾದ ಸಂಸ್ಕøತದ ಶೃಂಗನಾದದಿಂದ ಬಂದದ್ದು (ಶೃಂಗಸಿಂಗ-ಕೋಡು ಅಥವಾ ಕೊಂಬು). ಸಿಂಗಿನಾಥ ಎಂದರೆ ಪಾರ್ವತೀಪತಿ ಎಂಬ ಶಬ್ದದಿಂದ ಬಂದದ್ದು ಎಂದು ಒಬ್ಬ ವಕ್ತø ಹೇಳುತ್ತಾನೆ. ಆದರೆ ಮೊದಲ ನಿಷ್ಪತ್ತಿಯೇ ಇಲ್ಲಿ ಉಚಿತವಾದುದು. ಸಿಂಗನಾದ ಜಿಂಕೆಯ ಕೊಂಬಿನ ವಾದ್ಯ. ಒಂದೂವರೆ ಅಂಗುಲ ಉದ್ದವಿರಬಹುದು. ಒಂದು ಅಡಿ ಉದ್ದವಿರಬಹುದು. ಜಿಂಕೆಯ ಕೊಂಬು ಸಿಕ್ಕಿದ ಕಡೆ ಬೆಳ್ಳಿಯ ಸಿಂಗನಾದವನ್ನು ಬಳಸುತ್ತಾರೆ. ಸಿಂಗನಾದ ಜೋಗಪ್ಪನ ಕೊರಳಲ್ಲಿ ಸದಾ ಇರಬೇಕಾದ ಲಾಂಛನ. ಲಿಂಗವಂತರಲ್ಲಿ ಕರಡಿಗೆ ಇರುವಂತೆ ಕುರಿಯ ಉಣ್ಣೆಯಿಂದ ಹೊಸೆದ ದಾರವೊಂದನ್ನು ಇದಕ್ಕೆ ಕಟ್ಟಿ ಕೊರಳಿನಿಂದ ಇಳಿಬಿಟ್ಟಿರುತ್ತಾರೆ. ಜೋಗಪ್ಪಗಳು ನಿತ್ಯವೂ ದೇವರ ಹೆಸರನ್ನು ಹೇಳಿ ಸಿಂಗನಾದವನ್ನು ಒಮ್ಮೆ ಊದಿ ಯಾವುದೇ ಕಾರ್ಯಕ್ಕೆ ತೊಡಗುತ್ತಾರೆ.

ಜೋಗಪ್ಪನ ಪಾತ್ರೆ ವಿಶಿಷ್ಟವಾದುದು. ಕಪಾಲದ ಆಕಾರದ ಈ ಪಾತ್ರೆ ಬ್ರಹ್ಮಕಪಾಲಕ ಸಂಕೇತವೇ ಇರಬೇಕು. ಇದನ್ನು ಕಡ್ಡಾಯವಾಗಿ ಧಾರ್ಮಿಕ ಆಚರಣೆಗಳಲ್ಲಿ ತರಬೇಕು. ಒಂದು ಎಡೆಯನ್ನು ಈ ಪಾತ್ರೆಗೂ ಅರ್ಪಿಸಲಾಗುವುದು.

ಜೋಗಪ್ಪಗಳು ಭಾನುವಾರವನ್ನು ಆಚರಿಸುತ್ತಾರೆ. ಅದು ಭೈರವನ ವಾರ. ಆ ದಿನ ಮನೆಯನ್ನು ಸಾರಿಸಿ, ಮಡಕೆಕುಡಿಕೆಗಳನ್ನು ತೊಳೆದು ಮಿಂದು ಮಡಿಯುಟ್ಟು ಒಂದು ಹೊತ್ತು ಮಾತ್ರ ಊಟ ಮಾಡಬೇಕು. ಬಿರುದುಗಳನ್ನೆಲ್ಲ ಮನೆಯಲ್ಲಿ ಇಟ್ಟು ಪೂಜಿಸಬೇಕು. ಜೋಗಪ್ಪಗಳು ಭಾನುವಾರ ಭಿಕ್ಷೆ ಎತ್ತುವ ಸಂಪ್ರದಾಯ ಇದ್ದಿರಬೇಕು. ಜನಪದ ಸಾಹಿತ್ಯದಲ್ಲಿ ಇದಕ್ಕೆ ಆಧಾರವಿದೆ.

ಮೈಸೂರು ಕಡೆಯಲ್ಲಿ ಭೈರವಭಕ್ತರಾದ ಜೋಗಪ್ಪಗಳು ಆದಿತ್ಯವಾರ ತಮ್ಮ ಎಲ್ಲ ಬಿರುದುಗಳನ್ನೂ ಧರಿಸಿ, ಕಾವಿಯ ವಸ್ತ್ರ ಉಟ್ಟು ಹೆಗಲಲ್ಲಿ ದೊಡ್ಡ ತ್ರಿಶೂಲವನ್ನು ಇಟ್ಟುಕೊಂಡು ಸಿಂಗನಾದವನ್ನು ಊದುತ್ತ ಭಿಕ್ಷಾಟನೆಗೆ ಬರುವುದನ್ನು ಕಾಣಬಹುದು. ವ್ಯವಸಾಯವನ್ನು ಅವಲಂಬಿಸಿ ಜೀವಿಸುವ ಬಹುಪಾಲು ಜೋಗಿಗಳು ಭಿಕ್ಷಾಟನೆಯನ್ನು ಕೈಬಿಡುತ್ತಿದ್ದಾರೆ. ಅಂಥವರು ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ತಮ್ಮ ಲಾಂಛನಗಳನ್ನು, ಬಿರುದುಗಳನ್ನು ಕೈಗೆತ್ತಿಕೊಳ್ಳುವುದು ಕಾಣಬರುತ್ತದೆ. ಭೈರವನ ಒಕ್ಕಲಿನವರು ಅನೇಕ ಆಚರಣೆಗಳಲ್ಲಿ ಜೋಗಪ್ಪನನ್ನು ಬರಮಾಡಿಕೊಳ್ಳುತ್ತಾರೆ. ದೇವರ ತೇರು. ಹಬ್ಬ, ಭುಕ್ತಿ, ಪಿತೃಪಕ್ಷ, ಉತ್ತರ ಕ್ರಿಯೆ, ಮದುವೆ ಮುಂತಾದ ಸಂದರ್ಭಗಳಲ್ಲಿ ಮನೆದೇವರ ಪ್ರತಿನಿಧಿಯಾದ ಜೋಗಪ್ಪ ತನ್ನ ಬಿರುದುಗಳನ್ನೂ ದೇವರನ್ನೂ ತೆಗೆದುಕೊಂಡು ಬರಲೇಬೇಕು. ಇಲ್ಲಿ ದೇವರು ಎಂದರೆ ಒಂದು ತ್ರಿಶೂಲ ಅಷ್ಟೆ. ಮದುವೆಯ ಹಿಂದಿನ ದಿನ ಚಪ್ಪರದ ಶಾಸ್ತ್ರ. ಆ ರಾತ್ರಿ ಜೋಗಪ್ಪ ಬಂದು ದೇವರ ಎಡೆಯನ್ನು ಪೂಜಿಸಬೇಕು. ಎಡೆಗೆ ಮುಂಚೆ ಜೋಗಪ್ಪ ಮಡಿಬಟ್ಟೆಯನ್ನು ಹಾಸಿ ಮೇಲೆ ಅಗ್ರದ ಬಾಳೆಯ ಎಲೆ ಹಾಕಿ ಗೋಡೆಯ ಬದಿಯಲ್ಲಿ ತೊಳೆದ ಮಣೆಯೊಂದನ್ನು ಇಟ್ಟು ತಾನು ತಂದ ಎರಡು ಮೂರು ತ್ರಿಶೂಲಗಳನ್ನು ಇಡುತ್ತಾನೆ. ಮೂರು ಎಡೆಗಳನ್ನು ಇಡಲಾಗುವುದು. ಮಾಡಿದ ವಿಶೇಷ ಅಡುಗೆಯನ್ನೆಲ್ಲ ಎಡೆಗೆ ಇಡುತ್ತಾರೆ. ಮೂರು ಎಡೆಗಳಲ್ಲಿ ಒಂದು ಜೋಗಪ್ಪನಿಗೆ ಇನ್ನೊಂದು ಅವನ ಪಾತ್ರೆಗೆ. ಉಳಿದ ಒಂದು ಮನೆಯವರಿಗೆ. ಪೂಜೆಯ ಅನಂತರ ಮನೆಯವರೆಲ್ಲರೂ ಜೋಗಪ್ಪನಿಂದ ವಿಭೂತಿ ಇಡಿಸಿಕೊಳ್ಳುತ್ತಾರೆ.

ಭೈರವನಿಗೆ ಹರಕೆ ಮಾಡಿಕೊಂಡು ಒಂದು ವಿಶೇಷ ಆಚರಣೆಯನ್ನು ನಡೆಸಲಾಗುವುದು. ಇದನ್ನು ಭುಕ್ತಿ ಎಂದು ಕರೆಯಲಾಗುತ್ತದೆ. ಈ ಆಚರಣೆಗೂ ಜೋಗಪ್ಪ ಬರಬೇಕು. ಭುಕ್ತಿಯ ಬೆಳಗ್ಗೆ ದೇವರಿಗೆ ಮೊಸರು ಅನ್ನದ ತಳಿಗೆಯನ್ನು ಅರ್ಪಿಸಲಾಗುವುದು. ಜೋಗಪ್ಪ ಬಂದು ದೇವರನ್ನು ಪೂಜಿಸಿ, ಮರಿಗೆ ತೀರ್ಥ ಹಾಕುವನು. ದೇವರ ಮುಂದೆ ಮರಿಯನ್ನು ಕಡಿಯಲಾಗುವುದು. ಈ ಮರಿ ಕುರಿ ಅಥವಾ ಮೇಕೆ ಆಗಬಹುದು. ಅನಂತರ ಮರಿಯ ಅಡುಗೆಯನ್ನು ಮಾಡಿ ಜೋಗಪ್ಪನಿಂದ ದೇವರ ಪೂಜೆ ಮಾಡಿಸಲಾಗುವುದು. ಮಾಂಸದ ಎಡೆಯನ್ನು ಆರು ದೊನ್ನೆಗಳಲ್ಲಿ ಇಡುತ್ತಾರೆ. ಆರರಲ್ಲಿ ಎರಡು ಮನೆಯವರಿಗೆ, ನಾಲ್ಕು ಜೋಗಪ್ಪನಿಗೆ. ತೇರು, ಹಬ್ಬ, ಪಿತೃಪಕ್ಷಗಳಲ್ಲಿಯೂ ಜೋಗಪ್ಪನನ್ನು ಕರೆಸಿ ಇದೇ ಕ್ರಮದಲ್ಲಿ ದೇವರಿಗೆ ಎಡೆ ಅರ್ಪಿಸಲಾಗುವುದು. ಪಿತೃಪಕ್ಷದಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಸಿ ಮಧ್ಯಾಹ್ನ ಪಿತೃಗಳಿಗೆ ತರ್ಪಣ ಅರ್ಪಿಸಿದರೂ ರಾತ್ರಿ ಜೋಗಪ್ಪನನ್ನು ಕರೆಸಿ ಎಡೆಯನ್ನು ಪೂಜಿಸಬೇಕು. ಪಿತೃಗಳಿಗೆ ಅರ್ಪಿಸುವ ಎಡೆ ಜೋಗಪ್ಪನ ಮೂಲಕವೇ ಸಲ್ಲಬೇಕು. ತಿಲತರ್ಪಣಕ್ಕಿಂತ, ಎಡೆ ಇಡುವುದಕ್ಕೆ ವಿಶೇಷವಾದ ಮಹತ್ತ್ವ ಕೊಡಲಾಗಿದೆ. ಮನೆಯ ಯಜಮಾನ ದಿನವೆಲ್ಲ ಉಪವಾಸವಿದ್ದು ರಾತ್ರಿ ಎಡೆ ಇಟ್ಟು ಆದ ಮೇಲೆ ಜೋಗಪ್ಪ ಬಂದು ಪೂಜೆ ಮಾಡಿದ ಮೇಲೆ, ಊಟ ಮಾಡಬೇಕು.

ಮನೆಯ ಸೂತಕವನ್ನು ಕಳೆಯಲು, ಉತ್ತರಕ್ರಿಯೆಯಂದು ದೇವರನ್ನು ಪೂಜಿಸಲು ಜೋಗಪ್ಪ ಬರಲೇಬೇಕು. ಒಟ್ಟಿನಲ್ಲಿ ಜೋಗಪ್ಪ ದೇವರ ಪ್ರತಿನಿಧಿ. ಧರ್ಮಗುರುವಿನ ಪ್ರತಿನಿಧಿ, ಧರ್ಮಪ್ರಸಾರಕ. ಆದಿಚುಂಚನಗಿರಿ ಮಠವನ್ನೇ ಜೋಗಿಯ ಮಠ ಎಂದು ಕರೆಯಲಾಗಿದೆ.

ಇಲ್ಲಿ ಹರ ಗುರು ಜೋಗಪ್ಪಗಳ ನಡುವೆ ಯಾವ ಭಿನ್ನಭಾವವನ್ನೂ ಭಕ್ತರು ವ್ಯಕ್ತಪಡಿಸುವುದಿಲ್ಲ. ಹರನೇ ಬೆಟ್ಟದ ಮೇಲಿನ ಶ್ರೀಮಠದಲ್ಲಿ ಗುರುವಾಗಿದ್ದಾನೆ. ಆ ಗುರುವಿನ ಪ್ರತಿನಿಧಿ ಜೋಗಪ್ಪನೂ ಭೈರವನ ಸ್ವರೂಪಿ. ಆದುದರಿಂದಲೇ ಚುಂಚನಗಿರಿಯ ಒಕ್ಕಲುಗಳಲ್ಲಿ ಜೋಗಪ್ಪನಿಗೆ ವಿಶೇಷವಾದ ಸ್ಥಾನ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೋಗಪ್ಪ&oldid=1073896" ಇಂದ ಪಡೆಯಲ್ಪಟ್ಟಿದೆ