ಜಮದಗ್ನಿಯು ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ರೇಣುಕಾದೇವಿ ಈತನ ಪತ್ನಿ. ಈತನಿಗೆ ಐದು ಜನ ಮಕ್ಕಳಿದ್ದರು. ವಿಷ್ಣುವಿನ ಅವತಾರವಾದ ಪರಶುರಾಮ ಈತನ ಕೊನೆಯ ಮಗ[].

ಚಿತ್ರ:Jamadagni telling Parasuram about kartyaveerarjun.jpg
ಪರಶುರಾಮನಿಗೆ ಕಾರ್ತವೀರಾರ್ಜುನನ ಬಗ್ಗೆ ಹೇಳುತ್ತಿರುವ ಜಮದಗ್ನಿ

ಜಮದಗ್ನಿ ಭೃಗುವಂಶದ ಋಷಿ. ಗೋತ್ರಪ್ರವರ್ತಕ.

ಕುಟುಂಬ

ಬದಲಾಯಿಸಿ

ತಂದೆ ಋಚೀಕ. ತಾಯಿ ಕುಶಿಕವಂಶದ ಗಾಧಿರಾಜನ ಮಗಳಾದ ಸತ್ಯವತಿ. ಭೃಗುವಂಶದ ಇವನಿಗೂ ಕೌಶಿಕವಂಶವಿಶ್ವಾಮಿತ್ರನಿಗೂ ಇದ್ದ ಸಂಬಂಧವನ್ನು ನಾವಿಲ್ಲಿ ಕಲ್ಪಿಸಿಕೊಳ್ಳಬಹುದು. ಪ್ರಸೇನಜಿತನ ಮಗಳಾದ ರೇಣುಕೆ ಈತನ ಹೆಂಡತಿ. ರುಮಣ್ವಂತ, ಸುಷೇಣ, ವಸು, ವಿಶ್ವಾವಸು ಮತ್ತು ಪರಶುರಾಮ-ಇವರು ಅನುಕ್ರಮವಾಗಿ ಐವರು ಮಕ್ಕಳು.

ಮಹಾಭಾರತದಲ್ಲಿ

ಬದಲಾಯಿಸಿ

ಮಹಾಭಾರತದ (ವನಪರ್ವ) ಪ್ರಕಾರ, ಒಂದು ದಿನ ರೇಣುಕೆ ನದೀಸ್ನಾನಕ್ಕಾಗಿ ಹೋದಳು. ಅಲ್ಲಿ ಚಿತ್ರರಥನೆಂಬ ಗಂಧರ್ವ ಜಲಕ್ರೀಡೆಯಾಡುತ್ತಿದ್ದುದನ್ನು ನೋಡಿ ಮೋಹವಶಳಾದಳು. (ಚಿತ್ರರಥ ತನ್ನ ಪ್ರೇಯಸಿಯರೊಡನೆ ಜಲಕ್ರೀಡೆಯಾಡುತ್ತ ರಮಿಸುತ್ತಿದ್ದನೆಂದೂ ಪಾಠಾಂತರವಿದೆ). ಇದರಿಂದ ಆಕೆ ಹಿಂದಿರುಗುವುದು ತಡವಾಯಿತು. ಮೊದಲೇ ಕೋಪದ ಅಪರಾವತಾರದಂತಿದ್ದ ಜಮದಗ್ನಿ ಸಂಶಯಗೊಂಡು ಶಿರಚ್ಛೇದನ ಮಾಡಲು ತನ್ನ ಮೊದಲ ನಾಲ್ವರು ಮಕ್ಕಳಿಗೆ ಅಜ್ಞಾಪಿಸಿದ. ಅವರಾರೂ ಅದಕ್ಕೆ ಒಪ್ಪಲಿಲ್ಲ. ಕಡೆಯ ಮಗ ಪರಶುರಾಮ ಮರುಮಾತಾಡದೆ ಹಿಂದು ಮುಂದು ನೋಡದೆ ತನ್ನ ಕೊಡಲಿಯಿಂದ ತಾಯಿಯ ತಲೆಯನ್ನು ಕತ್ತರಿಸಿಬಿಟ್ಟ. ಮಗನ ಸದ್ಯಃಪಿತೃವಾಕ್ಯಪರಿಪಾಲನಾ ಬುದ್ಧಿಯನ್ನು ಕಂಡು ಸಂತೃಪ್ತನಾದ ಜಮದಗ್ನಿ ವರವೊಂದನ್ನು ಕೇಳಿಕೊಳ್ಳಲು ಹೇಳಲು ಆತ ತನ್ನ ಪ್ರಿಯಮಾತೆಯನ್ನು ಮತ್ತೆ ಬದುಕಿಸಬೇಕೆಂದೂ ಇನ್ನು ಮುಂದೆ ಇಂಥ ಉಗ್ರಕೋಪ ಪ್ರದರ್ಶನವನ್ನು ಬಿಟ್ಟುಬಿಡಬೇಕೆಂದೂ ಬೇಡಿಕೊಂಡ. ರೇಣುಕಾ ಮಾತೆ ಬದುಕಿದಳು.

ಜನಪದದಲ್ಲಿ

ಬದಲಾಯಿಸಿ

ಶಿಷ್ಟಪುರಾಣಗಳು ಜನಪದ ಪುರಾಣಗಳನ್ನೂ ಜನಪದ ಪುರಾಣಗಳು ಶಿಷ್ಟ ಪುರಾಣಗಳನ್ನೂ ಸ್ಪರ್ಶಿಸಿರುವುದಕ್ಕೆ ಹಾಗೂ ಘರ್ಷಿಸಿರುವುದಕ್ಕೆ ಜಮದಗ್ನಿಯನ್ನು ಕುರಿತ ಪ್ರಸಂಗಗಳೂ ಉತ್ತಮ ನಿದರ್ಶನಗಳಾಗಿವೆ. ಇದರಿಂದಾಗಿ ಜಮದಗ್ನಿಯ ಐತಿಹಾಸಿಕತೆಯನ್ನು ಖಚಿತವಾಗಿ ಹೇಳುವುದು ತೀರ ಕ್ಲಿಷ್ಟವಾಗಿದೆ. ಹೆಸರಿನ ಸಾಮ್ಯ ಹಾಗೂ ಘಟನೆಗಳ ಏಕರೂಪತೆ ಇದ್ದಾಗಲಂತೂ ಒಬ್ಬನೇ ವ್ಯಕ್ತಿಯ ಹೆಸರಿನ ಸುತ್ತ ಹಲವಾರು ವ್ಯಕ್ತಿಗಳ ಜೀವನ ಪ್ರಸಂಗಗಳು ಸಮಾವೇಶಗೊಳ್ಳುವ ಸಾಧ್ಯತೆಗಳಿರುತ್ತವಾಗಿ ಅಲ್ಲಿನ ವಿಚಿತ್ರಕಥೆಗಳ ಪದರುಗಳನ್ನು ಶೋಧಿಸಿ ನೋಡಬೇಕಾಗುತ್ತದೆ.

ಓರಂಗಲ್ಲು ಪ್ರತಾಪರುದ್ರನ ಕಾಲವಾದ 13ನೆಯ ಶತಮಾನದಲ್ಲಿ ಜೀವಿಸಿದ್ದಿರಬಹುದಾದ ಸವದತ್ತಿ ಎಲ್ಲಮ್ಮನ ಪತಿಯ ಹೆಸರು ಜಮದಗ್ನಿ ಎಂದಿರುವುದರಿಂದ ಎಲ್ಲಮ್ಮನನ್ನೇ ರೇಣುಕೆಯನ್ನಾಗಿ ಆರೋಪಿಸಲಾಗಿದೆ. ಇವರಿಬ್ಬರ ಮಗನೂ ಪರಶುರಾಮನೇ ಆಗಿರುವುದರಿಂದ ಶಿಷ್ಟಪುರಾಣಗಳ ಜಮದಗ್ನಿ ರೇಣುಕೆಯರ ಜೀವನದ ಘಟನಾವಳಿಗಳು ಜನಪದ ಪುರಾಣಗಳಲ್ಲಿ ಹೆಣೆದುಕೊಂಡು ಅತ್ಯಂತ ತೊಡಕನ್ನುಂಟುಮಾಡಿವೆ.

ಜನಪದ ಪುರಾಣಗಳ ಪ್ರಕಾರ ಜಮದಗ್ನಿ ಗೌತಮಋಷಿಯ ಮಾನಸಪುತ್ರ. ಗೌತಮ ಅಹಲ್ಯೆಯನ್ನು ಪರಿಗ್ರಹಿಸುವ ಪೂರ್ವದಲ್ಲಿ ತಪಸ್ಸುಮಾಡುತ್ತಿದ್ದು ನಿಷ್ಪಲವಾದ ತಪಸ್ಸಾದರೂ ಏತಕ್ಕಾಗೆಂದು ಯೋಚಿಸುತ್ತಿರುವಾಗ ಜಲಜಲನೆ ಬೆವತುಹೋಗುತ್ತಾನೆ. ಹಣೆ ಬೆವರನ್ನು ತೆಗೆದು ಭೂಮಿಗೊಗೆದಾಗ ಆ ಜಲದಿಂದ ಉರಿಯುವ ಪುತ್ರನೊಬ್ಬ ಉದ್ಭ್ಬವಿಸುತ್ತಾನೆ. ಜಲದಿಂದ ಅಗ್ನಿಯಂತೆ ಉರಿಯುತ್ತ ಮೇಲೆದ್ದ ಆ ಕುಮಾರನೇ ಜಲದಗ್ನಿ. ಜಲದಗ್ನಿ ಎಂಬ ಹೆಸರು ರೂಪಾಂತರ ಹೊಂದಿ ಜಮದಗ್ನಿಯಾಗುತ್ತದೆ.

ಜಮದಗ್ನಿ ಋಷಿ ತಂದೆ ಗೌತಮನಾಜ್ಞೆಯಂತೆ ಆಲ್ಮುನಿ, ಬಾಲ್ಮುನಿ, ಕೆಂಜೆಡೆಮುನಿ, ರಗುತ್ಮುನಿ, ಹೆಪ್ಮುನಿ ಮುಂತಾದ ಮುನಿಪುಂಗವರೊಡನೆ ತಪಸ್ಸನ್ನಾಚರಿಸುತ್ತ ಕಾರಂಜಿ ಹೊಳೆಯಲ್ಲಿ ಸ್ನಾನಕ್ಕಿಳಿದಾಗ ಆ ಹೊಳೆಯಲ್ಲಿ ಎಲ್ಲಮ್ಮನ ಏಳ್ಮಾರುದ್ದ ಮಂಡೆಕೂದಲು ಜಾಲಾಡುತ್ತಿತ್ತು. ಜಮದಗ್ನಿಗೆ ಈ ಮಂಡೆಕೂದಲಿನವಳನ್ನೇ ತನ್ನ ಹೆಂಡತಿಯನ್ನಾಗಿ ಪಡೆಯಬೇಕೆಂಬ ಬಯಕೆಯಾಯಿತು. ಅವಳಿರುವ ನೆಲೆಯನ್ನರಸುತ್ತ ಎಲ್ಲಮ್ಮನ ತಂದೆತಾಯಿಗಳಾದ ಗಿರ್ರಾಜಮುನಿ ಮತ್ತು ಜಮ್ಕುನ್ದೇವಿ ಆಶ್ರಮಕ್ಕೆ ಬಂದ. ತನ್ನ ಬಯಕೆಯನ್ನು ತಿಳಿಸಿದಾಗ ಎಲ್ಲಮ್ಮ ಒಂದು ಸವಾಲೊಡ್ಡುತ್ತಾಳೆ : ಅದೇನೆಂದರೆ ಏಳುಸಮುದ್ರದಾಚೆ ಕೀಳು ಸಮುದ್ರ, ಅದರಾಚೆ ಎಡದಿಣ್ಣೆ, ಎಡದಿಣ್ಣೆ ಬೋರೆಯಲ್ಲಿ ಪಡುಲೆಂಕೆ, ಪಡುಲೆಂಕೆ ನೆರಳಲ್ಲಿ ಮಾವಿನಪುರು, ಅದರಾಚೆ ಜಾಪಾನುಪುರ. ಅದರಾಚೆ ಏಳ್ಸೆಲೆಹುತ್ತ, ಹುತ್ತದಾಚೆ ಗಂಗಾನದಿ. ಅದರಾಚೆ ಹಾಲ್ಗೊಣ ನೀರ್ಗೊಣ ಪನ್ನೀರ್ಬಾವಿ. ಆ ಬಾವಿ ನೀರನ್ನು ತಂದು ಯಾರು ತನಗೆ ಕೊಡಬಲ್ಲರೋ ಅವರೇ ತನ್ನ ಪತಿಯಾಗಬಲ್ಲರು-ಎಂದು ಹೇಳುತ್ತಾರೆ. ಜಮದಗ್ನಿ ತಪಶ್ಯಕ್ತಿಯಿಂದ ತನ್ನ ಮುಡಿಯನ್ನು ಬೆಳೆಸಿ ಹಾಲ್ಗೋಣ ನೀಲ್ಗೊಣ ಪನ್ನೀರ್ಬಾವಿಯ ನೀರನ್ನು ಕುಳಿತಲ್ಲಿಂದಲೇ ಅದ್ದಿ ಸೆಳೆದುಕೊಂಡು ಎಲ್ಲಮ್ಮನ ಮೇಲೆ ಹಿಂಡುತ್ತಾನೆ. ಹೀಗೆ ಎಲ್ಲಮ್ಮ ಜಮದಗ್ನಿಯರ ವಿವಾಹಕಾರ್ಯ ನಡೆಯುತ್ತದೆ.

ಜಮದಗ್ನಿಗೆ ಪರಮೇಶ್ವರ ಕಾಮಧೇನುವನ್ನು ಬಳುವಳಿಯಾಗಿ ಕೊಟ್ಟು ಹೋದ. ಎಲ್ಲಮ್ಮನ ಅಣ್ಣನಾದ ಕಾರ್ತವೀರ್ಯ ಕಾಮಧೇನುವನ್ನು ಬಯಸಿ ಜಮದಗ್ನಿಯ ಶಿರವನ್ನು ಕತ್ತರಿಸಿದ ಪ್ರಸಂಗ ಶಿಷ್ಟಪುರಾಣಗಳನ್ನೇ ಹೋಲುತ್ತದೆ. ಆದರೆ ಗಮನಿಸಬೇಕಾದ ಮುಖ್ಯ ವ್ಯತ್ಯಾಸವೆಂದರೆ-ಎಲ್ಲಮ್ಮ ತನ್ನ ಪತಿಯ ಶಿರವನ್ನು ತೆಗೆದುಕೊಂಡು ಹೋಗಿ ಪರಮೇಶ್ವರನನ್ನು ಕಾಣುತ್ತಾಳೆ. ಪಾರ್ವತಿ ಪರಮೇಶ್ವರರು ದೇವತೆಗಳು ಜಮದಗ್ನಿಗೆ ಪುನುರ್ಜನ್ಮವನ್ನು ಕೊಡುತ್ತಾರೆ. ಆದರೆ ಜಮದಗ್ನಿ ಮಹರ್ಷಿ ಜಮದಗ್ನಿಯಾಗಿ ಭೂಲೋಕಕ್ಕೆ ಬರದೆ ನಂಜನಗೂಡಿನ ನಂಜುಂಡನಾಗಿ ಬರುತ್ತಾನೆ. ಎಲ್ಲಮ್ಮ ತಾಯಿ ಆದಿಶಕ್ತಿಯ ಅಂಶವಾದ್ದರಿಂದ ಅವಳ ಇನ್ನೊಂದು ಅಂಶ ಚಾಮುಂಡಿಯಾಗಿ ಅವತರಿಸುತ್ತದೆ.

ಇನ್ನೊಂದು ಪಾಠದ ಕತೆಯಲ್ಲಿ ಎಲ್ಲಮ್ಮ ಜಮದಗ್ನಿಯರ ಸಮಾಗಮ ವಿಚಿತ್ರ ರೀತಿಯಾಗಿದೆ. ಎಲ್ಲಮ್ಮ ವಿವಾಹಪೂರ್ವದಲ್ಲಿ ಸಮುದ್ರಕ್ಕೆ ಹೋಗಿ ಒಂದು ಕಾಲನ್ನು ಆಮೆಯ ಮೇಲೂ ಮತ್ತೊಂದು ಕಾಲನ್ನು ಮೊಸಳೆಯ ಮೇಲೂ ಇಟ್ಟುಕೊಂಡು ಸ್ನಾನಮಾಡುತ್ತಿರುವಾಗ ಇವಳು ಮುಡಿದಿದ್ದ ಮರುಗ ಜವನಪುನುಗುಗಳ ಕಂಪು ಹನ್ನೆರಡು ಮೈಲಿ ದೂರದಲ್ಲಿ ತಪಸ್ಸು ಮಾಡುತ್ತಿದ್ದ ಜಮದಗ್ನಿಯನ್ನು ಸೋಂಕಿತು. ಇದಾವ ಕನ್ನಿಕೆಯ ಮೈಯಿಂದ ಇಂಥ ಪರಿಮಳ ಬರುತ್ತಿದೆಯೊ ಏನೋ ಎಂದು ಚಿಂತಿಸಿದ ಜಮದಗ್ನಿ ತನ್ನ ಮೈಬೆವರನ್ನು ತೆಗೆದು ಸಮುದ್ರಕ್ಕೆಸೆದ. ಅದು ಹೂವಾಗಿ ತೇಲಿಬಂದು ಎಲ್ಲಮ್ಮನ ದೇಹವನ್ನು ಸೇರಿ ಅವಳು ಗರ್ಭವತಿಯಾಗಿ ಹುಟ್ಟಿದ ಮಗ ಪರಶುರಾಮ ತಂದೆಯನ್ನು ತೋರಿಸೆಂದು ಹಟ ಹಿಡಿದಾಗ ಅಗ್ನಿಪರೀಕ್ಷೆಗೆ ಗುರಿಯಾಗುತ್ತಾಳೆ. ಕೊನೆಗೆ ಮಗನೊಡನೆ ಕೈಲಾಸ, ವೈಕುಂಠ, ಬ್ರಹ್ಮಲೋಕಗಳಲ್ಲೆಲ್ಲ ತನ್ನ ಪತಿಯಾರೆಂದು ವಿಚಾರಿಸಿ ಎಲ್ಲಿಯೂ ಸರಿಯಾದ ಉತ್ತರ ಸಿಗದೆ ಹಿಂದಿರುಗುತ್ತಿರುವಾಗ ನಾರದ ಬಂದು ಪಾತಾಳದಲ್ಲಿರುವ ತಪೋನಿರತ ಜಮದಗ್ನಿಯನ್ನು ತೋರಿಸುತ್ತಾನೆ. ಋಷಿಗಳೆಲ್ಲರ ಆದೇಶದಂತೆ ಜಮದಗ್ನಿ ಎಲ್ಲಮ್ಮನನ್ನು ಪರಿಗ್ರಹಿಸುತ್ತಾನೆ.

ಜಾನಪದ ಕಥೆಗಳು

ಬದಲಾಯಿಸಿ

ಎಲ್ಲಮ್ಮ ಜಮದಗ್ನಿಯರ ಜೀವನ ವೃತ್ತಾಂತಗಳ ವಿಚಿತ್ರ ಕತೆಗಳನ್ನು ದಕ್ಷಿಣ ಕರ್ನಾಟಕದ ವೃತ್ತಿಗಾಯಕರಾದ ಚೌಡಿಕೆಯವರು ಮತ್ತು ಉತ್ತರ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಕಾಣಸಿಗುವ ಗೊಂದಲಿಗರು ಚೌಡಿಕೆಯೆಂಬ ವಾದ್ಯವನ್ನು ನುಡಿಸಿಕೊಂಡು ಮೇಳ ನಡೆಸುತ್ತಾರೆ. ವಿಸ್ತಾರವಾದ ಈ ಎಲ್ಲಮ್ಮನ ಕಾವ್ಯಪುರಾಣ ಐತಿಹ್ಯ ಇತಿಹಾಸಗಳಿಂದಾಗಿ ಸಿಕ್ಕು ಸಿಕ್ಕಾಗಿ ಹೆಣೆದುಕೊಂಡಿದೆ. ಸಂಶೋಧಕರು ಈ ಪುರಾಣಕಾವ್ಯಗಳಿಂದ ಅಲಿಖಿತ ಇತಿಹಾಸವನ್ನು ಗ್ರಹಿಸಿ ನಿಜ ಇತಿಹಾಸವನ್ನು ಪುನರ್ರಚಿಸಬೇಕಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Avalon, Arthur (Sir John Woodroffe) (1913, reprint 1972) (tr.) Tantra of the Great Liberation (Mahāanirvāna Tantra), New York: Dover Publications, ISBN 0-486-20150-3, p. xli: The Rishi are seers who know, and by their knowledge are the makers of shastra and "see" all mantras. The word comes from the root rish Rishati-prāpnoti sarvvang mantrang jnānena pashyati sangsārapārangvā, etc. The seven great Rishi or saptarshi of the first manvantara are Marichi, Atri, Angiras, Pulaha, Kratu, Pulastya, and Vashishtha. In other manvantara there are other sapta-rshi. In the present manvantara the seven are Kashyapa, Atri, Vashishtha, Vishvamitra, Gautama, Jamdagnini, Bharadvaja. To the Rishi the Vedas were revealed. Vyasa taught the Rigveda so revealed to Paila, the Yajurveda to Vaishampayana, the Samaveda to Jaimini, Atharvaveda to Samantu, and Itihasa and Purana to Suta. The three chief classes of Rishi are the Brahmarshi, born of the mind of Brahma, the Devarshi of lower rank, and Rajarshi or Kings who became Rishis through their knowledge and austerities, such as Janaka, Ritaparna, etc. Thc Shrutarshi are makers of Shastras, as Sushruta. The Kandarshi are of the Karmakanda, such as Jaimini.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಮದಗ್ನಿ&oldid=754295" ಇಂದ ಪಡೆಯಲ್ಪಟ್ಟಿದೆ