ನಂಜನಗೂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಪಟ್ಟಣ. ಇದು ಮೈಸೂರಿನಿಂದ ಸುಮಾರು ೨೩ ಕಿ.ಮಿ. ಅಂತರದಲ್ಲಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣ. ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ. ನಂಜನಗೂಡು"ದಕ್ಷಿಣ ಕಾಶಿ" ಎಂದು ವಿಖ್ಯಾತಿ ಪಡೆದಿದೆ. ನಂಜನಗೂಡು ತಾಲ್ಲೂಕಿನ ಮುಖ್ಯ ಕಾರ್ಯಾಲಯ ಆಗಿರುವ ಈ ನಗರವು "ಟೆಂಪಲ್ ಟೌನ್" ಎಂದು ಪ್ರಸಿದ್ಧವಾಗಿದೆ.[೨]

ನಂಜನಗೂಡು
ನಂಜನಗೂಡು ನಗರದ ಪಕ್ಷಿನೋಟ
ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ
India-locator-map-blank.svg
Red pog.svg
ನಂಜನಗೂಡು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಮೈಸೂರು
ನಿರ್ದೇಶಾಂಕಗಳು 12.12° N 76.68° E
ವಿಸ್ತಾರ
 - ಎತ್ತರ
 km²
 - 656 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
50598[೧]
 - -/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571 301
 - +08221
 - KA-09
Nanjangud Temple at Night
Kapila River
The Bridge across the Kabini

ಭೌಗೋಳಿಕ ಸ್ಥಾನಸಂಪಾದಿಸಿ

ತಾಲ್ಲೂಕು ಜಿಲ್ಲೆಯ ಮಧ್ಯದಲ್ಲಿದೆ. ತಾಲ್ಲೂಕಿನ ಉತ್ತರದಲ್ಲಿ ಮೈಸೂರು, ಪೂರ್ವದಲ್ಲಿ ತಿರುಮಕೂಡ್ಲು ನರಸೀಪುರ ಮತ್ತು ಚಾಮರಾಜನಗರ, ದಕ್ಷಿಣದಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ, ಪಶ್ಚಿಮದಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕುಗಳಿವೆ. ಇದರ ವಿಸ್ತೀರ್ಣ ೯೮೨ ಚ.ಕಿ.ಮೀ., ತಾಲ್ಲೂಕು ಜನಸಂಖ್ಯೆ ೩,೫೮,೪೧೫ (೨೦೦೧) ಹಾಗೂ ಪಟ್ಟಣದ ಜನಸಂಖ್ಯೆ ೫೦,೫೯೮ (೨೦೧೧). ಬಿಳಿಗೆರೆ, ಚಿಕ್ಕಯ್ಯನ ಛತ್ರ, ಹುಲ್ಲಹಳ್ಳಿ, ದೊಡ್ಡ ಕವಲಂದೆ, ನಂಜನಗೂಡು ಇವು ಈ ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿರುವ ಗ್ರಾಮಗಳ ಸಂಖ್ಯೆ ೧೮೮.[೩]

ಮೇಲ್ಮೈ ಲಕ್ಷಣಗಳುಸಂಪಾದಿಸಿ

ತಾಲ್ಲೂಕಿನ ನೆಲ ಈಶಾನ್ಯದ ಕಡೆಗೆ ಇಳಿಜಾರಾಗಿದೆ. ಅಲ್ಲಲ್ಲಿ ಕೆಲವು ಗುಡ್ಡಗಳಿವೆ. ಒಟ್ಟಿನಲ್ಲಿ ಇದು ಮೈದಾನ ಪ್ರದೇಶ. ತಾಲ್ಲೂಕಿನ ಮುಖ್ಯ ನದಿ ಕಪಿಲಾ. ವಾಯುವ್ಯದಲ್ಲಿ ಹೆಗ್ಗಡದೇವನಕೋಟೆ ಮತ್ತು ನಂಜನಗೂಡು ತಾಲ್ಲೂಕುಗಳ ಗಡಿಯಾಗಿ ಹರಿಯುವ ಈ ನದಿ ಅನಂತರ ತಾಲ್ಲೂಕಿನ ಉತ್ತರ ಭಾಗದಲ್ಲಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ನಂಜನಗೂಡು ಪಟ್ಟಣದ ಬಳಿ ಇದರ ಹರಿವು ಈಶಾನ್ಯ ದಿಕ್ಕಿಗೆ ಬದಲಾಗುತ್ತದೆ. ಮುಂದೆ ಈ ನದಿ ತಿರುಮಕೂಡ್ಲು ನರಸೀಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಗುಂಡ್ಲುಪೇಟೆ ತಾಲ್ಲೂಕಿನಿಂದ ಹರಿದು ಬರುವ ಗುಂಡ್ಲು ಹೊಳೆ ಈ ತಾಲ್ಲೂಕಿನ ನಡುವೆ ಉತ್ತರದ ಕಡೆಗೆ ಮುಂದುವರಿದು ನಂಜನಗೂಡು ಪಟ್ಟಣದಲ್ಲಿ ಕಪಿಲಾ ನದಿಯನ್ನು ಸೇರುತ್ತದೆ.

ತಾಲ್ಲೂಕಿನ ಬಹುಭಾಗ ಕಣಶಿಲೆ ಮತ್ತು ಫೆಲ್‍ಸ್ಟಾರ್‍ನಿಂದ ಕೂಡಿದ್ದು, ಕೆಂಪು ನುರುಜು ಹಾಗೂ ಕಪ್ಪು ಎರೆಮಣ್ಣುಗಳಿವೆ. ಗುಂಡ್ಲು ಹೊಳೆ ಮಳೆಗಾಲದಲ್ಲಿ ದಡ ಮೀರಿ ಹರಿದು ಇಕ್ಕೆಲಗಳಲ್ಲೂ ಮೆಕ್ಕಲುಮಣ್ಣನ್ನು ತಂದು ತುಂಬುತ್ತದೆ. ಕಪಿಲಾ ನದಿಯ ದಡಗಳಲ್ಲೂ ಮೆಕ್ಕಲುಮಣ್ಣು ಹರಡಿದೆ. ಕೋಣೂರಿನ ಬಳಿಯಲ್ಲಿ ಕಲ್ನಾರಿನ ನಿಕ್ಷೇಪವುಂಟು. ಅಂಬಳೆ, ವಳಗೆರೆಗಳಲ್ಲಿ ಚಿನ್ನ ತೆಗೆಯಲಾಗುತ್ತಿತ್ತು. ಗುಂಡ್ಲು ಹೊಳೆಯ ದಡಗಳಲ್ಲಿ ಸುಣ್ಣಕಲ್ಲು, ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಮ್ಯಾಗ್ನಸೈಟ್ ಮತ್ತು ಕ್ರೋಮೈಟ್, ವಾಯುವ್ಯ ಭಾಗದಲ್ಲಿ ಬಳಪದ ಕಲ್ಲು ಇವೆ. ತಗಡೂರು ಮತ್ತು ಚಿನ್ನಂಬಳ್ಳಿಯಲ್ಲಿ ಕಾಗೆಬಂಗಾರವನ್ನು ತೆಗೆಯಲಾಗುತ್ತಿತ್ತು. ತಾಲ್ಲೂಕಿನಲ್ಲಿ ವರ್ಷಕ್ಕೆ ಸರಾಸರಿ ಸು. 591 ಮಿ.ಮೀ. ಮಳೆಯಾಗುತ್ತದೆ.

ವ್ಯವಸಾಯಸಂಪಾದಿಸಿ

ಕಪಿಲಾ ನದಿಯ ಎಡದಂಡೆಯಲ್ಲಿ ರಾಮಪುರ ನಾಲೆಯೂ ಬಲದಂಡೆಯಲ್ಲಿ ಹುಲ್ಲಹಳ್ಳಿ ನಲೆಯೂ ಈ ತಾಲ್ಲೂಕಿನ ಉತ್ತರ ಭಾಗದಲ್ಲಿ ಉದ್ದಕ್ಕೂ ಸಾಗಿ ವಿಶಾಲವಾದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿವೆ. ನುಗು ಅಣೆಕಟ್ಟಿನಿಂದ ಬರುವ ನಾಲೆ ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣ ಭಾಗಗಳಿಗೆ ನೀರೊದಗಿಸುತ್ತದೆ. ತಾಲ್ಲೂಕಿನಲ್ಲಿ ಕೆರೆಗಳ ಸಂಖ್ಯೆ ಕಡಿಮೆ. ಉತ್ತಮ ನೀರಾವರಿ ಸೌಲಭ್ಯವಿರುವುದರಿಂದ ಭತ್ತ ಈಗ ತಾಲ್ಲೂಕಿನ ಮುಖ್ಯ ಬೆಳೆ. ಸ್ವಲ್ಪ ಮಟ್ಟಿಗೆ ಕಬ್ಬು, ಕಡಲೆಕಾಯಿ ಮತ್ತು ದ್ವಿದಳ ಧಾನ್ಯಗಳನ್ನೂ ಬೆಳೆಯುತ್ತಾರೆ. ಜೋಳ ಮತ್ತು ರಾಗಿ ಮುಖ್ಯ ಖುಷ್ಕಿ ಬೆಳೆಗಳು. ನೆಲಗಡಲೆ, ದ್ವಿದಳ ಧಾನ್ಯಗಳು, ಹತ್ತಿ ಇವೂ ಬೆಳೆಯುತ್ತದೆ. ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ತೆಂಗಿನ ತೋಟಗಳಿವೆ. ನಂಜನಗೂಡಿನ ಸುತ್ತಿನಲ್ಲಿ ಬೆಳೆಯುವ ರಸಬಾಳೆ ಪ್ರಸಿದ್ಧವಾದದ್ದು.

ಕೈಗಾರಿಕೆಗಳುಸಂಪಾದಿಸಿ

ಈ ತಾಲ್ಲೂಕಿನಲ್ಲಿ ಕೈಗಾರಿಕೆಗಳು ಕಡಿಮೆ. ಆದರೆ ನೇಯ್ಗೆ ಮತ್ತು ರೇಷ್ಮೆ ಉದ್ಯಮಗಳು ಅಲ್ಲಲ್ಲಿ ಇವೆ. ನಂಜನಗೂಡು ಪಟ್ಟಣದಲ್ಲಿ ಕೆಲವು ಕೈಗಾರಿಕೆಗಳುಂಟು.

ಸಂಪರ್ಕಸಂಪಾದಿಸಿ

ಮೈಸೂರು-ಚಾಮರಾಜನಗರ ರೈಲುಮಾರ್ಗ ಮತ್ತು ಮೈಸೂರು-ಗುಂಡ್ಲುಪೇಟೆ-ಉದಕಮಂಡಲ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಮೈಸೂರು-ಚಾಮರಾಜನಗರ-ತಿರುಚಿನಾಪಳ್ಳಿ ರಸ್ತೆ ನಂಜನಗೂಡು ಪಟ್ಟಣದ ಬಳಿ ಕವಲೊಡೆದು ಸ್ವಲ್ಪ ದೂರ ತಾಲ್ಲೂಕಿನಲ್ಲಿ ಸಾಗುತ್ತದೆ. ನಂಜನಗೂಡಿನಿಂದ ಟಿ.ನರಸೀಪುರ ಮತ್ತು ಹುಲ್ಲಹಳ್ಳಿಗೂ ಕವಲಂದೆಯಿಂದ ಕೊಳ್ಳೆಗಾಲಕ್ಕೂ ರಸ್ತೆಗಳಿವೆ.

ಪೌರ ಸೌಲಭ್ಯಗಳುಸಂಪಾದಿಸಿ

ತಾಲ್ಲೂಕಿನಲ್ಲಿ ವಿದ್ಯುತ್ ಸೌಕರ್ಯ ಸಾಕಷ್ಟಿದೆ. ಗ್ರಾಮೀಣ ವಿದ್ಯುತ್ ಸೌಲಭ್ಯ ವ್ಯಾಪಕವಾಗಿರುವುದಲ್ಲದೆ ಅನೇಕ ಕಡೆಗಳಲ್ಲಿ ವಿದ್ಯುತ್‍ಚಾಲಿತ ಪಂಪುಗಳು ಉಪಯೋಗದಲ್ಲಿವೆ. ಹಲವು ಗ್ರಾಮಗಳಲ್ಲಿ ಅಂಚೆ ಮತ್ತು ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಇವೆ.

ಈ ತಾಲ್ಲೂಕಿನ ಹದಿನಾರು, ಕಳಲೆ ಇವು ಹಿಂದೆ ಪಾಳೆಯಪಟ್ಟಿನ ಕೇಂದ್ರಗಳಾಗಿದ್ದವು. ಕಳಲೆ, ದೇವನೂರು, ಹೆಡತಲೆ, ಸುತ್ತೂರು ಈ ಸ್ಥಳಗಳಲ್ಲಿ ಪ್ರಾಚೀನ ದೇವಾಲಯಗಳಿವೆ. ದೇವನೂರು ಮತ್ತು ಸುತ್ತೂರಿನ ವೀರಶೈವ ಮಠಗಳು ಪ್ರಸಿದ್ಧವಾದವು. ಗಂಗರ ಕಾಲದಷ್ಟು ಪ್ರಾಚೀನತೆಯುಳ್ಳ ಇಮ್ಮಾವು ಗ್ರಾಮದಲ್ಲಿ ರಾಮ ದೇವಾಲಯವಿದೆ. ಇಲ್ಲಿ ಚತುರ್ಭುಜ ಲಕ್ಷ್ಮಣ ವಿಗ್ರಹ ಇದೆ. ನಂಜನಗೂಡಿನಿಂದ ಸುಮಾರು 1 ಕಿಮೀ. ಆಗ್ನೇಯದಲ್ಲಿರುವ ನಗರ್ಲೆ ಚೋಳರ ಕಾಲದಿಂದಲೂ ಪ್ರಸಿದ್ಧವಾದ ಊರು. ಇಲ್ಲಿ ಪ್ರಾಚೀನ ದುರ್ಗಾಪರಮೇಶ್ವರಿ ದೇವಾಲಯ ಮತ್ತು ಒಂದು ಜೀರ್ಣವಾದ ಪಾಶ್ರ್ವನಾಥ ಬಸ್ತಿ ಇದೆ. ನೇರಳೆಯಲ್ಲಿ ವೀರಭದ್ರ ದೇವಾಲಯವೂ ಹೆಮ್ಮರಗಾಲದಲ್ಲಿ ಪ್ರತಿವರ್ಷವೂ ಜಾತ್ರೆಗಳು ಜರುಗುತ್ತವೆ. ನಂಜನಗೂಡಿನ ಸಮೀಪದ ಗೋಳೂರಿನ ಬಳಿಯಲ್ಲಿ ಒಂದು ಮೂಲಶಿಕ್ಷಣ ಕೇಂದ್ರ (ವಿದ್ಯಾಪೀಠ) ಇದೆ.

ಪಟ್ಟಣಸಂಪಾದಿಸಿ

ನಂಜನಗೂಡು ಪಟ್ಟಣ ಮೈಸೂರಿನಿಂದ ದಕ್ಷಿಣ ಆಗ್ನೇಯಕ್ಕೆ 24 ಕಿಮೀ. ದೂರದಲ್ಲಿ ಕಪಿಲಾ ನದಿಯ ಬಲದಂಡೆಯ ಮೇಲಿದೆ. ಇದು ಕರ್ನಾಟಕದ ಮುಖ್ಯ ಯಾತ್ರಾಸ್ಥಳಗಳಲ್ಲೊಂದು. ಮೈಸೂರು-ಚಾಮರಾಜನಗರ ರೈಲುಮಾರ್ಗದ ಮೇಲೆ ಇದೊಂದು ನಿಲ್ದಾಣ; ಮೈಸೂರು-ಉದಕಮಂಡಲ ಹೆದ್ದಾರಿ ಈ ಮೂಲಕ ಸಾಗುತ್ತದೆ. ಇಲ್ಲಿಂದ ಕೊಯಮತ್ತೂರಿಗೆ ರಸ್ತೆಯಿದೆ. ಇದು ಸುತ್ತಲ ಅನೇಕ ಸ್ಥಳಗಳೊಡನೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಈ ಸುತ್ತಿನ ಪ್ರದೇಶಕ್ಕೆ ಇದೊಂದು ಮುಖ್ಯ ವ್ಯಾಪಾರ ಕೇಂದ್ರ. ಇಲ್ಲಿ ಬಟ್ಟೆ ಗಿರಣಿ, ಕಾಗದದ ಕಾರ್ಖಾನೆ, ಔಷಧ ಮತ್ತು ಸುಗಂಧ ದ್ರವ್ಯಗಳ ಕಾರ್ಖಾನೆ, ಅಕ್ಕಿ ಗಿರಣಿಗಳು ಮತ್ತು ಮರ ಕೊಯ್ಯುವ ಕಾರ್ಖಾನೆಗಳು ಇವೆ. ರೇಷ್ಮೆ ವ್ಯಾಪಾರ ಸ್ವಲ್ಪಮಟ್ಟಿಗೆ ನಡೆಯುತ್ತದೆ. ರೇಷ್ಮೆ ನೂಲುವ ಉದ್ಯಮವಿದೆ. ಅಂಚೆ-ತಂತಿ, ದೂರವಾಣಿ, ವಿದ್ಯುತ್ತು, ಸುರಕ್ಷಿತ ನೀರು ಸರಬರಾಜು ವ್ಯವಸ್ಥೆ ಇದೆ. ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಪಶುವೈದ್ಯಶಾಲೆ, ಶಾಲೆಗಳು ಮತ್ತು ಒಂದು ಪ್ರಥಮ ದರ್ಜೆ ಕಾಲೇಜು ಉಂಟು. ಪೌರಸಭೆ ಇದೆ. ಇಲ್ಲಿ ಪ್ರತಿ ಶುಕ್ರವಾರ ಸಂತೆ ಸೇರುತ್ತದೆ.

ಪ್ರಾಚೀನ ಕಾಲದಿಂದಲೂ ತೀರ್ಥಕ್ಷೇತ್ರವಾಗಿರುವ ನಂಜನಗೂಡು ಉಮ್ಮತ್ತೂರು ಪಾಳೆಯಗಾರರ ಮತ್ತು ಕಳಲೆ ಅರಸರ ಕಾಲದಲ್ಲಿ ಉಚ್ಛ್ರಾಯಸ್ಥಿತಿಗೆ ಬಂತು. ಸುಮಾರು ಈ ಕಾಲಕ್ಕೆ ಸೇರಿದ ಕೋಟೆಯ ಅವಶೇಷಗಳನ್ನು ಊರಿನ ದಕ್ಷಿಣ ಭಾಗದಲ್ಲಿ ಮತ್ತು ಗುಂಡ್ಲು ಹೊಳೆಯ ದಡದಲ್ಲಿ ಗುರುತಿಸಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದೊರಕಿದ ವಿಶೇಷ ಪ್ರೋತ್ಸಾಹದಿಂದ ನಂಜನಗೂಡು ವಿಶೇಷವಾಗಿ ಬೆಳೆಯಿತು.

ಶ್ರೀಕಂಠೇಶ್ವರ ದೇವಾಲಯಸಂಪಾದಿಸಿ

ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದಿಂದ. ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂರ್ವಾಭಿಮುಖವಾಗಿದೆ. ನದಿಗಳಲ್ಲಿ ಪ್ರವಾಹ ಬಂದಾಗ ದೇವಾಲಯದಿಂದ ಕೇವಲ ತೊಂಬತ್ತು ಮೀಟರುಗಳಷ್ಟು ದೂರದವರೆಗೆ ಸಂಗಮದಲ್ಲಿ ನೀರು ಬರುತ್ತದೆ. ಶ್ರೀಕಂಠೇಶ್ವರ ದೇವಾಲಯ ದ್ರಾವಿಡ ಶೈಲಿಯ ಕಟ್ಟಡ. ಇದು 117 ಮೀ. ಉದ್ದ, 48 ಮೀ. ಅಗಲ ಇದೆ. ಇದರಲ್ಲಿ 147 ಕಂಬಗಳಿವೆ. ಇದರ ಒಟ್ಟು ಆಚ್ಛಾದಿತ ಪ್ರದೇಶ 4,831 ಚ.ಮೀ. ಇದು ಕರ್ನಾಟಕದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಹೊರಗೋಡೆಗಳು ಸುಮಾರು 3.7 ಮೀ. ಎತ್ತರವಾಗಿವೆ. ಸುತ್ತಲೂ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಅಧಿಷ್ಠಾನ, ಹಿಂದೆ ಗೋಡೆ, ಮುಂದೆ ಕಂಬಸಾಲಿರುವ ಕೈಸಾಲೆ ಇವೆ. (ಈಗ ದಕ್ಷಿಣದ ಕೈಸಾಲೆಯನ್ನು ಪೂರ್ಣವಾಗಿಯೂ ಉತ್ತರದ್ದನ್ನು ಸ್ವಲ್ಪ ಭಾಗಗಳಲ್ಲಿಯೂ ಮುಚ್ಚಲಾಗಿದೆ). ಮೇಲೆ ಸುತ್ತಲೂ ದೇವ ಮತ್ತು ಇತರ ಶಿಲ್ಪಗಳಿರುವ ಕೂಟ ಮತ್ತು ಶಿಖರಗಳ ಗಚ್ಚಿನ ಹಾರ ಇದೆ. ಪೂರ್ವಭಾಗದಲ್ಲಿನ ಮಹಾದ್ವಾರದ ಮುಂದೆ ಇಕ್ಕೆಡೆ ಕೈಸಾಲೆಯಿರುವ ಒಂದು ಮುಖಮಂಟಪವಿದೆ. ಮಹಾದ್ವಾರ ಬೃಹತ್ ರಚನೆ. ಒಳಚಾವಣಿಯ ಎತ್ತರ ಸುಮಾರು 5.5 ಮೀ. ವಿಶಾಲ ಮಂಟಪದಂತಿರುವ ಈ ಭಾಗದಲ್ಲಿನ ದಪ್ಪ ಎತ್ತರದ ಬಾಗಿಲ ತೋಳುಗಳ ಮೇಲೆ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಮಹಾದ್ವಾರದ ಮೇಲೆ ಏಳು ಅಂತಸ್ತುಗಳಲ್ಲಿ ಎದ್ದಿರುವ ಸುಮಾರು 37 ಮೀ. ಎತ್ತರದ ಬೃಹತ್ ಗೋಪುರದ ಮೇಲ್ತುದಿಯಲ್ಲಿ ಚಿನ್ನದ ಗಿಲೀಟಿನ, 3 ಮೀಟರುಗಳಿಗೂ ಎತ್ತರವಾಗಿರುವ, ಏಳು ಕಲಶಗಳನ್ನು ಅಷ್ಟೇ ಎತ್ತರದ ಎರಡು ಕೊಂಬುಗಳ ಮಧ್ಯೆ ಸಾಲಾಗಿ ಜೋಡಿಸಲಾಗಿದೆ.

ವಾಸ್ತು ಶೈಲಿಸಂಪಾದಿಸಿ

ಮಹಾದ್ವಾರದಿಂದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ದೊಡ್ಡ ತೆರೆದ ಅಂಗಳವುಂಟು. ಇದರ ಮಧ್ಯಭಾಗದಲ್ಲಿ ಸುಂದರವಾದ ಒಂದು ವಸಂತ ಮಂಟಪ, ಆಗ್ನೇಯದಲ್ಲಿ ಪಾಕಶಾಲೆ ಮತ್ತು ಈಶಾನ್ಯದಲ್ಲಿ ಉಗ್ರಾಣ ಇವೆ. ದಕ್ಷಿಣದ ಭಾಗದಲ್ಲಿ ಒಂದು ಪ್ರವೇಶದ್ವಾರವುಂಟು. ಅಂಗಳದ ಇಕ್ಕೆಲದಲ್ಲೂ ಎತ್ತರದ ಎರಡು ಕಂಬಸಾಲುಗಳು ಉದ್ದುದ್ದವಾಗಿ ಹಬ್ಬಿವೆ. ಒಳಸಾಲಿನ ಹಿಂದಿನ ಅಂಕಣಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಂಗಳದ ಹಿಂದೆ ದೇವಾಲಯದ ಹಿಂಗೋಡೆಯವರೆಗೂ ಇರುವ ಈ ಭಾಗ ಪೂರ್ಣವಾಗಿ ಆಚ್ಛಾದಿತವಾಗಿರುವುದಲ್ಲದೆ ಅಂಗಳಕ್ಕಿಂತ ಸ್ವಲ್ಪ ಎತ್ತರದಲ್ಲಿದೆ. ಇಲ್ಲಿ ಮಧ್ಯದಲ್ಲಿರುವ ಗುಡಿಗಳನ್ನು ಬಿಟ್ಟು ಉಳಿದ ಭಾಗವನ್ನೆಲ್ಲ ಉದ್ದುದ್ದವಾಗಿ ಹಬ್ಬಿರುವ ಕಂಬಸಾಲುಗಳು ವಿಂಗಡಿಸುತ್ತವೆ. ಅಂಗಳದಿಂದ ಮುಂದಕ್ಕೆ ಹೋಗುತ್ತಿದ್ದಂತೆಯೇ ಮೊದಲು ಸಿಗುವುದು ಬಸವನಕಟ್ಟೆ. ಇದು ವಸಂತ ಮಂಟಪದ ಎದುರಿಗೆ ಇರುವ ವಿಶಾಲವಾದ ಜಗತಿ. ಇದರ ಮೇಲೆ ಮಧ್ಯಸ್ಥಳದಲ್ಲಿ ಚಾವಣಿಯನ್ನೂ ಮೀರಿ ಮೇಲೆದ್ದಿರುವ ಅಷ್ಟಮುಖದ ಶಿಲಾದೀಪಸ್ತಂಭವಿದೆ. ಇದರ ಈಶಾನ್ಯ ಭಾಗದಲ್ಲಿರುವುದು ಬೃಹನ್ನಂದಿಯ ಗುಡಿ. ಕಟ್ಟೆಯ ವಾಯುವ್ಯದಲ್ಲಿ ಎತ್ತರವಾದ ಅಧಿಷ್ಠಾನದ ಮೇಲಿರುವುದು ತಾಂಡವೇಶ್ವರ ಗುಡಿ. ಕಟ್ಟೆಯ ಪಶ್ಚಿಮಕ್ಕೆ ಇರುವ ಮತ್ತೊಂದು ಮಹಾದ್ವಾರ ಈಗ ಕಟ್ಟಡದ ಒಳಗೆ ಸೇರಿಹೋಗಿದೆ. ಆದರೆ ಹಿಂದೆ ಇದು ದೇವಾಲಯದ ಮುಖ್ಯ ಪ್ರವೇಶದ್ವಾರವಾಗಿತ್ತು. ಇದರ ಕೆಳಭಾಗ ಕಲ್ಲಿನ ಕಟ್ಟಡ. ಇದರ ಚಾವಣಿಯ ಮೇಲೆ ಐದು ಅಂತಸ್ತುಗಳು ಮತ್ತು ಚಿನ್ನದ ಗಿಲೀಟಿನ ಐದು ಕಲಶಗಳು ಇರುವ ಸುಮಾರು 18 ಮೀ. ಎತ್ತರದ ಇಟ್ಟಿಗೆ ಮತ್ತು ಗಾರೆಯ ಶಿಖರವುಂಟು. ಈ ಮಹಾದ್ವಾರಕ್ಕೆ ಸೇರಿದಂತೆಯೇ ಬಲಪಾಶ್ರ್ವ ಮತ್ತು ಮುಂಭಾಗದಲ್ಲಿ ಕೆಲವು ಚಿಕ್ಕ ಗುಡಿಗಳಿವೆ. ಎಡಪಾಶ್ರ್ವದಲ್ಲಿ ನವಗ್ರಹಗಳಿರುವ ಒಂದು ಆವರಣವೂ ಅದರ ಹಿಂದೆ ಯಜ್ಞಶಾಲೆಯೂ ಇವೆ. ಈ ಮಹಾದ್ವಾರದ ಪಶ್ಚಿಮಕ್ಕಿರುವುದೇ ಶ್ರೀಕಂಠೇಶ್ವರ ಲಿಂಗವಿರುವ ಮೂಲ ಗುಡಿ. ಇದಕ್ಕೂ ಮಹಾದ್ವಾರಕ್ಕೂ ಮಧ್ಯೆ ಒಂದು ಕಲ್ಲಿನ ಬಲಿಪೀಠವೂ ಅದರ ಮೇಲೆ ಹಿತ್ತಾಳೆಯ ಹೊದಿಕೆಯಿರುವ ಸುಮಾರು 7.6 ಮೀ. ಎತ್ತರದ ಮರದ ಯಷ್ಟಿ ಇರುವ ಧ್ವಜಸ್ತಂಭವೂ ಇದೆ.

ಮೂಲ ದೇವಾಲಯದಲ್ಲಿ ಗರ್ಭಗುಡಿ, ಸುತ್ತಲೂ ಪ್ರದಕ್ಷಿಣಾಪಥ ಮತ್ತು ಮುಂದೆ ಎರಡು ಕಂಬಗಳಿರುವ ಒಂದು ಒಳಮಂಟಪ ಇವೆ. ಅದರ ಮುಂದೆ 9 ಕಂಬಗಳ ಸಭಾಮಂಟಪ. ಹಿಂದೆ ಇದಕ್ಕೆ 16 ಕಂಬಗಳಿದ್ದವು. ಕೆಲವು ಕಂಬಗಳ ಮಧ್ಯೆ ಗೋಡೆಗಳನ್ನೆತ್ತಿ, ದಕ್ಷಿಣಾಭಿಮುಖವಾಗಿ ಉತ್ಸವ ವಿಗ್ರಹವಿರುವ ಒಂದು ಗುಡಿಯನ್ನೂ ಮುಂದೆ ಎರಡು ಪಕ್ಕಗಳಲ್ಲಿ ಮೂರು ಮೂರು ಲಿಂಗಸ್ಥಾಪಿತ ಮಂದಿರಗಳನ್ನೂ ಅಳವಡಿಸಲಾಗಿದೆ. ಮಂಟಪದ ಪೂರ್ವ ಮತ್ತು ದಕ್ಷಿಣದ ಎಡೆಗಳಲ್ಲಿ ದ್ವಾರಗಳಿವೆ. ದಕ್ಷಿಣದ್ವಾರದ ಬಲಗಡೆ ಸುಬ್ರಹ್ಮಣ್ಯನನ್ನೂ ಎಡಪಕ್ಕಗಳಲ್ಲಿ ಲಿಂಗಗಳನ್ನೂ ಸ್ಥಾಪಿಸಲಾಗಿದೆ. ಗರ್ಭಗುಡಿಯ ಬಲಭಾಗದಲ್ಲೂ ಹೊರಗಡೆ ಕೆಲವು ಲಿಂಗಗಳು ಇವೆ. ಮೂಲ ದೇವಾಲಯಕ್ಕೆ ಸೇರಿದಂತೆ ಎಡಗಡೆ ವಿಷ್ಣು ಗುಡಿಯೂ ಅದರ ಹಿಂದೆ ಚಂಡಿಕೇಶ್ವರ ಗುಡಿಯೂ ಇವೆ. ಈ ಘಟಕದ ವಾಯವ್ಯದಲ್ಲಿ ಗರ್ಭಗುಡಿ ಮತ್ತು ಮುಂದೆ ಸಭಾಮಂಟಪವಿರುವ ಪಾರ್ವತಿ ಗುಡಿ ಇವೆ. ದೇವಾಲಯದ ಬಲಭಾಗದಲ್ಲಿ ಪ್ರಾಕಾರದ ಗೋಡೆಗೂ ಅದರ ಸದ್ಯ ಮುಂದಿನ ಕಂಬ ಸಾಲೆಗೂ ಮಧ್ಯೆ ಇರುವ ಅಂಕಣಗಳಲ್ಲಿ ಅನೇಕ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳಲ್ಲಿ ದಕ್ಷಿಣದ ಗೋಡೆಗೆ ಸೇರಿದಂತೆ ಅಂಗಳದ ನೇರದಿಂದ ಪ್ರಾರಂಭವಾಗುವ ಸಾಲಿನಲ್ಲಿ ಶೈವ ಪುರಾತನರ ವಿಗ್ರಹಗಳೂ ಮುಂದೆ ಲಿಂಗಗಳೂ ಮುಮ್ಮಡಿ ಕೃಷ್ಣರಾಜ ಒಡೆಯರ ಮತ್ತು ಅವರ ಪತ್ನಿಪುತ್ರರ ವಿಗ್ರಹಗಳು ಇರುವ ಒಂದು ಕೋಣೆಯೂ ಪಶ್ಚಿಮದ ಸಾಲಿನಲ್ಲಿ ಲಿಂಗಗಳೂ ಇತರ ಕೆಲವು ವಿಗ್ರಹಗಳೂ ಇವೆ. ಉತ್ತರದ ಗೋಡೆಗೆ ಸೇರಿದಂತೆ ಉಗ್ರಾಣದ ಬಳಿಯಿಂದ ಸಾಲಾಗಿರುವವು ಲೀಲಾ ಮೂರ್ತಿಗಳು. ಚಾವಣಿಯ ಮೇಲುಗಡೆ ಶ್ರೀಕಂಠೇಶ್ವರ, ನಾರಾಯಣ, ಪಾರ್ವತಿ, ಚಂಡಿಕೇಶ್ವರ ಮತ್ತು ತಾಂಡವೇಶ್ವರ ದೇವರುಗಳ ಗರ್ಭಗುಡಿಗಳ ಮೇಲೆ ಚಿಕ್ಕವಾದ ಗಾರೆಯ ಶಿಖರಗಳುಂಟು.

ಇಡೀ ದೇವಾಲಯ ಒಂದು ಕಾಲದ ರಚನೆಯಲ್ಲ. ದೇವಾಲಯದ ಬೆಳವಣಿಗೆಯಲ್ಲಿ ಕನಿಷ್ಠ ನಾಲ್ಕು ಘಟ್ಟಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಶ್ರೀಕಂಠೇಶ್ವರ ಲಿಂಗ, ಗರ್ಭಗುಡಿ ಪ್ರದಕ್ಷಿಣಾಪಥ ಮತ್ತು ಬಹುಶಃ ಒಳಮಂಟಪ ಇವು ಬಹು ಪ್ರಾಚೀನವಾದುವು. ಈ ಭಾಗ ಕುಳ್ಳಾದ ಚಿಕ್ಕ ಕಟ್ಟಡ. ಗೋಡೆಯನ್ನು ಸರಳವಾಗಿ ಚಪ್ಪಡಿಗಳಿಂದ ಕಟ್ಟಲಾಗಿದೆ. ಹೊರಮೈಯಲ್ಲಿ ಅಧಿಷ್ಠಾನ, ಭಿತ್ತಿಭಾಗದಲ್ಲಿ ಅರೆಗಂಬಗಳು, ಮೇಲೆ ಬಳುಕಿನ ಕಪೋತ ಇವೆ. ಇದರ ಮೇಲೆ ಚಿಕ್ಕ ಯಾಳಿ ಸಾಲಿದ್ದಂತೆ ತೋರುತ್ತದೆ. ಉತ್ತರ, ಪಶ್ಚಿಮ ಮತ್ತು ದಕ್ಷಿಣದ ಗೋಡೆಗಳಲ್ಲಿ ಕಿರಿದಾದ ಜಾಲಂಧ್ರಗಳುಂಟು. ಒಳಮಂಟಪದ ಕಂಬಗಳು ದುಂಡು, ಬಹು ಕುಳ್ಳು. ಈ ಭಾಗವನ್ನು ಗಂಗರ ಅಥವಾ ಚೋಳರ ಕಾಲದಲ್ಲಿ 10-11ನೆಯ ಶತಮಾನಗಳಲ್ಲಿ ಕಟ್ಟಿರಬಹುದೆಂಬುದನ್ನು ಇದರ ಲಕ್ಷಣಗಳು ಸೂಚಿಸುತ್ತವೆ. ಇದರ ಮುಂಭಾಗದಲ್ಲಿರುವ ಮಂಟಪದಲ್ಲಿ ವಿವಿಧ ಮಾದರಿಯ ಕಂಬಗಳುಂಟು. ಇದನ್ನು ಹೊಯ್ಸಳರ ಕಾಲದಲ್ಲಿ ಸು. 13ನೆಯ ಶತಮಾನದಲ್ಲಿ ರಚಿಸಿರಬಹುದೆಂಬುದನ್ನು ಈ ಕಂಬಗಳ ರೀತಿಗಳಿಂದ ಊಹಿಸಬಹುದು. ಈ ಭಾಗದ ಮುಂದಿರುವ ಬಲಿಪೀಠವೂ ಬಹುಶಃ ಈ ಕಾಲದ್ದು. ಒಳಗಿನ ಮಹಾದ್ವಾರದ ಕಲ್ಲಿನ ಭಾಗದಲ್ಲಿ ಇಕ್ಕೆಲದಲ್ಲೂ ಹಂಪೆಯ ರಚನೆಗಳನ್ನು ಹೋಲುವ ಕಂಬಗಳುಂಟು. ಮೇಲಿನ ಗಾರೆಯ ಗೋಪುರ ವಿನ್ಯಾಸದಲ್ಲೂ ವಿಜಯನಗರ ಶೈಲಿಯನ್ನು ಗುರುತಿಸಬಹುದು. ದೇವಾಲಯದಲ್ಲಿ ಕೃಷ್ಣದೇವರಾಯನ (1509-29) ಒಂದು ದತ್ತಿಶಾಸನವೂ ಇರುವುದರಿಂದ ಈ ಮಹಾದ್ವಾರ ಮತ್ತು ಗೋಪುರ ಅವನ ಕಾಲದ ರಚನೆಯಿರಬಹುದು. ಪಾರ್ವತಿ ಮತ್ತು ನಾರಾಯಣ ಗುಡಿಗಳು ಮತ್ತು ಬಸವನ ಕಟ್ಟೆಯ ಮೇಲಿರುವ ದೀಪಸ್ತಂಭ ಸಹ ಇದೇ ಕಾಲದಲ್ಲಿ ರಚಿತವಾಗಿರುವಂತೆ ತೋರುತ್ತದೆ. ಮುಂದೆ ಮೈಸೂರು ಅರಸರು, ಕಳಲೆಯ ದಳವಾಯಿಗಳು ಮತ್ತು ದಿವಾನ್ ಪೂರ್ಣಯ್ಯ ಇವರು ದೇವಾಲಯದಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿದರೆಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಆದರೆ ಯಾವ ಯಾವ ಭಾಗಗಳು ರಚಿತವಾದುವೆಂದು ತೀರ್ಮಾನಿಸುವುದು ಕಷ್ಟ. ದೇವಾಲಯ ಇಂದಿನ ರೂಪವನ್ನು ತಳೆದುದು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ. ದೇವಾಲಯದ ಒಳಗೆ ಮತ್ತು ಸುತ್ತಲೂ ಹಬ್ಬಿರುವ ಸಾಲುಕಂಬಗಳು ಚತುರ್ಮುಖವಾಗಿದ್ದು ಮಧ್ಯೆ ಮಧ್ಯೆ ಅಷ್ಟಕೋನವಾಗಿ ಒಡೆದಿದೆ. ಈ ಕಂಬಗಳು ಮತ್ತು ಇವುಗಳ ಮೇಲಿನ ಶಿಲ್ಪಗಳ ರೀತಿಯಿಂದ ಇವು ಹೆಚ್ಚಿನ ಮಟ್ಟಿಗೆ 17-19ನೆಯ ಶತಮಾನದವೆಂದು ಹೇಳಬಹುದು. ಮೂಲಗುಡಿಯ ಮುಂಭಾಗದ ಕೋಣೆಗಳಲ್ಲಿ ಇರುವ ಲಿಂಗಗಳು 19ನೆಯ ಶತಮಾನದಲ್ಲಿ ಪ್ರತಿಷ್ಠಿತವಾದವು. 1820ರ ಅನಂತರದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ದೇವಾಲಯದಲ್ಲಿ ಬದಲಾವಣೆಗಳನ್ನು ಮಾಡಿಸಲು ಆರಂಭಿಸಿ ಹಿಂದಿದ್ದ ಹಲವು ಭಾಗಗಳನ್ನು ಉಪಯೋಗಿಸಿಕೊಂಡು ಇಂದಿನ ಕಟ್ಟಡವನ್ನು ರೂಪಿಸಿದಂತೆ ತೋರುತ್ತದೆ. ದೇವಾಲಯದ ಮುಂದಿರುವ ಮಹಾಗೋಪುರವನ್ನು ಅವರು 1845ರಲ್ಲಿ ನಿರ್ಮಿಸಿದರು. ಈ ವಿಷಯವನ್ನು ಸೂಚಿಸುವ ಶಾಸನ ಮಹಾದ್ವಾರದ ದೂಲದ ಮೇಲೆ ಇದೆ. ಬಹುಶಃ ಇದೇ ಕಾಲದಲ್ಲಿ ದೇವಾಲಯಕ್ಕೆ ಇಂದಿನ ರೂಪ ಬಂದಂತೆ ತೋರುತ್ತದೆ. ಮಹಾದ್ವಾರದ ಮುಂದಿನ ಅನೇಕ ಶಿಲ್ಪಗಳಿಂದ ಕೂಡಿದ ಸುಂದರ ಮಂಟಪವನ್ನು ಸುಮಾರು 1900ರಲ್ಲಿ ನೀಲಗಿರಿ ಮುದ್ದಣ್ಣ ಎಂಬವರು ಕಟ್ಟಿಸಿದರು.

ದೇವಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ವಿಗ್ರಹಗಳು ಪ್ರತಿಷ್ಠಾಪಿತವಾಗಿವೆ. ಇವುಗಳಲ್ಲಿ ಅರ್ಧದಷ್ಟು ಲಿಂಗಗಳು. ನಂಜುಂಡೇಶ್ವರ ಲಿಂಗ ಹಳೆಯದು; ಪೀಠಯುತವಾಗಿ ಸುಮಾರು 9 ಮೀ. ಎತ್ತರವಿದೆ. ಇತರ ಲಿಂಗಗಳ ಪೈಕಿ ಹೆಚ್ಚಿನವು ಬೇರೆಬೇರೆ ಕಾಲಗಳಲ್ಲಿ ಸ್ಥಾಪಿತವಾದವು. ಹೆಚ್ಚಿನವು ಪ್ರಾಕಾರದ ಗೋಡೆಗೆ ಸೇರಿದಂತಿರುವ ಒಳಸಾಲಿನಲ್ಲಿವೆ. ಗರ್ಭಗುಡಿಯ ಸಭಾಮಂಟಪದಲ್ಲಿಯೂ ದೇವಾಲಯದ ಈಶಾನ್ಯ ಮತ್ತು ವಾಯವ್ಯ ಭಾಗದ ಕೋಣೆಗಳಲ್ಲಿಯೂ ಅಲ್ಲಲ್ಲಿ ಬಿಡಿಬಿಡಿಯಾಗಿಯೂ ಕೆಲವು ಲಿಂಗಗಳು ಸ್ಥಾಪಿತವಾಗಿವೆ. ನಾರಾಯಣ ಮತ್ತು ಪಾರ್ವತಿ ಗುಡಿಗಳಲ್ಲಿರುವ ಮೂಲ ವಿಗ್ರಹಗಳು ಸುಮಾರು 13-14ನೆಯ ಶತಮಾನದವು. ಪಾರ್ವತಿ ಸುಂದರ ಶಿಲ್ಪ. ಇದರಲ್ಲಿ ಹೊಯ್ಸಳ ಶೈಲಿಯ ಛಾಯೆಯನ್ನು ಕಾಣಬಹುದು. ಒಳಗಿನ ಮಹಾದ್ವಾರದ ಮುಂದಿನ ಕೋಣೆಯಲ್ಲಿ ಹೊಯ್ಸಳ ಶೈಲಿಯ ಒಂದು ನೃತ್ಯಗಣಪತಿ ಇದೆ. ಸುಬ್ರಹ್ಮಣ್ಯ ಗುಡಿಯಲ್ಲಿರುವ ಸುಬ್ರಹ್ಮಣ್ಯ, ಹಿಂದಿನ ಪ್ರಾಕಾರ ಸಾಲಿನಲ್ಲಿರುವ ಷಣ್ಮುಖ, ಉಚ್ಚಿಷ್ಟ ಗಣಪತಿ ಇವು ವಿಶಿಷ್ಟವಾದವು. ದೇವಾಲಯದ ಬಹು ಮುಖ್ಯ ಶಿಲ್ಪಗಳೆಂದರೆ ದೇವಾಲಯದ ಬಲಪ್ರಾಕಾರ ಸಾಲಿನಲ್ಲಿರುವ ಶೈವಪುರಾತನರ ವಿಗ್ರಹಗಳು ಮತ್ತು ಎಡಸಾಲಿನಲ್ಲಿರುವ ಲೀಲಾ ಮೂರ್ತಿಗಳು. ಪುರಾತನರು ಸಾಮಾನ್ಯವಾಗಿ 63 ಇಂದು ಪರಿಗಣಿಸಲಾಗಿದ್ದರೂ ಇಲ್ಲಿ 66 ವಿಗ್ರಹಗಳು ತಲಾ ಮೂರರಂತೆ 22 ಗುಂಪುಗಳಲ್ಲಿವೆ. ಸುಮಾರು ಆಳೆತ್ತರದ ಈ ವಿಗ್ರಹಗಳಲ್ಲಿ ಒಂದೊಂದೂ ವೈಶಿಷ್ಟ್ಯಪೂರ್ಣವಾಗಿ ನಿರೂಪಿತವಾಗಿದೆ. 1 ರಿಂದ 1.5 ಮೀ ಎತ್ತರವಿರುವ ಚಂದ್ರಶೇಖರ, ಕಾಲಸಂಹಾರ, ಅಂಧಕಾಸುರಮರ್ದನ, ಲಿಂಗೋದ್ಭವ ಮೊದಲಾದ 25 ಆಗಮೋಕ್ತ ಶಿವಲೀಲಾ ಮೂರ್ತಿಗಳು ಆಗಮದೃಷ್ಟಿಯಿಂದಲೂ ಶಿಲ್ಪ ಸೌಂದರ್ಯದಿಂದಲೂ ಗಮನಾರ್ಹವಾಗಿದೆ. ಈ ಗುಂಪಿನ ದಕ್ಷಿಣಾಮೂರ್ತಿ ಆಕರ್ಷಕ ಕೃತಿ. ಪುರಾತನರ ಮತ್ತು ಲೀಲಾಮೂರ್ತಿಗಳ ವಿಗ್ರಹಗಳ ಸಮೂಹಗಳು ಕರ್ನಾಟಕದಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ನಂಜನಗೂಡಿನವು ದೊಡ್ಡವೂ ಸುಂದರವೂ ಆಗಿವೆ. ಲೀಲಾಮೂರ್ತಿಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಮಾಡಿಸಿದರು ಎಂಬುದಕ್ಕೆ ಐತಿಹಾಸಿಕ ದಾಖಲೆಗಳುಂಟು. ಪುರಾತನರ ವಿಗ್ರಹಗಳೂ ಇದೇ ಕಾಲದವಾಗಿರಬಹುದು. ಉತ್ಸವ ವಿಗ್ರಹದ ಗುಡಿಯ ನೇರ ಎದುರಿನಲ್ಲಿ ಪ್ರಾಕಾರ ಸಾಲಿನಲ್ಲಿ ಪ್ರತ್ಯೇಕಗೊಳಿಸಿರುವ ಒಂದು ಕೋಣೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಅವರ ನಾಲ್ವರು ಪತ್ನಿಯರ ಆಳೆತ್ತರದ ವಿಗ್ರಹಗಳನ್ನು ಇಡಲಾಗಿದೆ. ಒಡೆಯರ ಕಾಲದ ವ್ಯಕ್ತಿಶಿಲ್ಪಗಳಲ್ಲಿ ಇವು ಅತ್ಯುತ್ತಮವಾದವು. ಬಸವನಕಟ್ಟೆಯ ಪಕ್ಕದಲ್ಲಿರುವ ಸುಮಾರು, 1.2 ಮೀ ಎತ್ತರದ ನಂದಿ ಈ ದೇವಾಲಯದ ಬಹು ಭವ್ಯ ಶಿಲ್ಪ. 1644ರಲ್ಲಿ ದಳವಾಯಿ ವಿಕ್ರಮರಾಯ ಇದನ್ನು ಸ್ಥಾಪಿಸಿದ ಎಂಬುದು ಇದರ ಪೀಠದ ಮೇಲಿನ ಶಾಸನದಿಂದ ತಿಳಿಯುತ್ತದೆ.

ಈ ದೇವಾಲಯದಲ್ಲಿ ಲೋಹವಿಗ್ರಹಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಪಾರ್ವತೀಸಮೇತ ಚಂದ್ರಶೇಖರ, ಸುಬ್ರಹ್ಮಣ್ಯ, ಪಾರ್ವತಿ, ಗಣಪತಿ, ಚಂಡಿಕೇಶ್ವರ, ಶ್ರೀಭೂಸಮೇತ ನಾರಾಯಣ, ತಾಂಡವೇಶ್ವರ ಮೊದಲಾದ, ಲೋಹದ ಉತ್ಸವಮೂರ್ತಿಗಳಿವೆ. ಅಲ್ಲದೆ ಈ ದೇವಾಲಯದಲ್ಲಿ 63 ಪುರಾತನರ ಲೋಹ ವಿಗ್ರಹಗಳಿವೆ. ಇವು 1739-59ರಲ್ಲಿ ಮೈಸೂರಿನ ದಳವಾಯಿಯಾಗಿದ್ದ ಕಳಲೆ ನಂಜರಾಜಯ್ಯ ಮಾಡಿಸಿಕೊಟ್ಟವು.

ದೇವಾಲಯದ ಪ್ರಾಕಾರದ ಹಾರದ ಕೋಷ್ಠಗಳಲ್ಲಿ ಗಾರೆಯಲ್ಲಿ ಮಾಡಿದ 122 ದೇವಮೂರ್ತಿಗಳಿವೆ. ಇವುಗಳಲ್ಲಿ ಅಷ್ಟದಿಕ್ಪಾಲಕರು, ವೀರಭದ್ರ, ನಾರಾಯಣ, 10 ವಿವಿಧ ದಕ್ಷಿಣಾ ಮೂರ್ತಿಗಳು. 7 ಬಗೆಯ ತಾಂಡವೇಶ್ವರ ಮೂರ್ತಿಗಳು, 16 ಬಗೆಯ ಸುಬ್ರಹ್ಮಣ್ಯ ವಿಗ್ರಹಗಳು, 25 ಲೀಲಾಮೂರ್ತಿಗಳು, 32 ಬಗೆಯ ಗಣಪತಿಗಳು, ಸಪ್ತಮಾತೃಕೆಯರು ಮೊದಲಾದವರ ಮೂರ್ತಿಗಳು ಇವೆ. ಇವು ಶಿಲ್ಪಶಾಸ್ತ್ರ ಅಧ್ಯಯನ ದೃಷ್ಟಿಯಿಂದ ಬಹು ಮುಖ್ಯವಾದವು. ಅಲ್ಲದೆ ಮಹಾದ್ವಾರದ ಒಳಗೆ ಅಂಗಳದ ಸುತ್ತಣ ಹಾರದಲ್ಲೂ ಇಂಥವೇ ಮೂರ್ತಿಗಳಿವೆ. ಇವೂ 19ನೆಯ ಶತಮಾನದವು.

ದೇವಸ್ಥಾನದಲ್ಲಿ ಹಿಂದಿನಿಂದಲೂ ಸಂಗ್ರಹವಾಗಿರುವ ಅನೇಕ ವಸ್ತುವಾಹನಗಳುಂಟು. ದೊಡ್ಡ ತೇರು ಮತ್ತು ಪಾರ್ವತಿಯ ತೇರು 1819ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮಾಡಿಸಿಕೊಟ್ಟವು. ಇವರೂ ಇವರ ಪತ್ನಿಯರೂ ಸಲ್ಲಿಸಿದ ಬೆಳ್ಳಿಕುದುರೆ ವಾಹನ (1830), ಬೆಳ್ಳಿ ಮಂಟಪ ಮತ್ತು ಬೆಳ್ಳಿ ಆನೆ (1834), ಬೆಳ್ಳಿ ಬಸವ (1848), ರುದ್ರಾಕ್ಷಿ ಮಂಟಪ, U್ಪಜರಥ (1847), ಕುದುರೆವಾಹನ (1847), ಕೈಲಾಸ ವಾಹನ (1852), ಶೇಷವಾಹನ ಮೊದಲಾದವು ದೇವಾಲಯದಲ್ಲಿವೆ. ಟಿಪ್ಪು ಸುಲ್ತಾನ್ ಕೊಟ್ಟಿರುವ ಪಂಚರತ್ನಖಚಿತ ಬೆಳ್ಳಿ ಬಟ್ಟಲು ಮತ್ತು ಪಚ್ಚೆಹಾರ, ಶೃಂಗೇರಿಯ ನರಸಿಂಹಭಾರತಿ ಸ್ವಾಮಿಗಳು ಕೊಟ್ಟಿರುವ ಎರಡು ಚಿನ್ನದ ಆಭರಣಗಳು ಮೊದಲಾದ ನೂರಾರು ಆಭರಣಗಳು ಇವೆ.

ಈ ದೇವಾಲಯ ವರ್ಷವಿಡೀ ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ. ಪ್ರತಿ ಹುಣ್ಣಿಮೆಯಂದು ರಾತ್ರಿ ರಥೋತ್ಸವವುಂಟು. ಅಲ್ಲದೆ ಇಲ್ಲಿ ಎರಡು ವಾರ್ಷಿಕ ಜಾತ್ರೆಗಳಾಗುತ್ತವೆ. ಅಕ್ಟೋಬರ್-ನವಂಬರ್‍ನಲ್ಲಿ ನಡೆಯುವುದು ತ್ರಿರಥ (ಚಿಕ್ಕ ಜಾತ್ರೆ); ಮಾರ್ಚ್-ಏಪ್ರಿಲ್‍ನಲ್ಲಿ ಜರುಗುವುದು ಪಂಚ ರಥ (ದೊಡ್ಡ ಜಾತ್ರೆ).

ಯಾತ್ರಾರ್ಥಿಗಳ ಉಪಯೋಗಕ್ಕಾಗಿ ಇಲ್ಲಿ ಅನೇಕ ಛತ್ರಗಳಿವೆ. ನಂಜನಗೂಡಿನ ನಂಜುಂಡೇಶ್ವರನನ್ನು ಅನೇಕ ಜನ ಕುಲದೈವವೆಂದು ಪರಿಗಣಿಸುತ್ತಾರೆ. ಈ ಸುತ್ತಿನ ಜನಪದದಲ್ಲಿ ನಂಜುಂಡನಿಗೆ ವಿಶೇಷ ಸ್ಥಾನವುಂಟು.[೪]

ಇತರ ದೇವಾಲಯಗಳುಸಂಪಾದಿಸಿ

ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇವಾಲಯವಲ್ಲದೆ ಪರಶುರಾಮ, ಚಾಮುಂಡೇಶ್ವರಿ, ಸತ್ಯನಾರಾಯಣ, ದತ್ತಾತ್ರೇಯ, ಗಣಪತಿ ಮೊದಲಾದ ದೇವಾಲಯಗಳೂ ಇವೆ. ಇಲ್ಲಿಯ ಪರಶುರಾಮ ದೇವಾಲಯದಲ್ಲಿ ಒಂದು ಶಾಸನಕಲ್ಲು ಪೂಜಾವಸ್ತು. ಈ ದೇವಾಲಯವನ್ನು ಸಂದರ್ಶಿಸದಿದ್ದಲ್ಲಿ ನಂಜನಗೂಡಿನ ಯಾತ್ರೆ ಅಪೂರ್ಣವಾಗುವುದೆಂಬ ನಂಬಿಕೆಯುಂಟು.

ನಂಜನಗೂಡಿನಲ್ಲಿ ಶಂಕರ, ವೀರಶೈವ ಮತ್ತು ಮಾಧ್ವ ಸಂಪ್ರದಾಯದ ಮಠಗಳಿವೆ. ರಾಘವೇಂದ್ರಸ್ವಾಮಿ ಮಠ ಪ್ರಾಚೀನವಾದ್ದು. ಇದನ್ನು 15ನೆಯ ಶತಮಾನದಲ್ಲಿ ವಿಬುಧೇಂದ್ರತೀರ್ಥರು ಸ್ಥಾಪಿಸಿದರು. ಸುಧೀಂದ್ರ, ರಾಘವೇಂದ್ರ ಮೊದಲಾದ ಪ್ರಸಿದ್ಧ ಆಚಾರ್ಯರು ಈ ಮಠದ ಪರಂಪರೆಗೆ ಸೇರಿದವರು. ಮಠದಲ್ಲಿ 15, 18ನೆಯ ಶತಮಾನಗಳಿಗೆ ಸೇರಿದ ಅನೇಕ ತಾಮ್ರಪಟಗಳೂ ಇವೆ. ಇಲ್ಲಿ ಒಳ್ಳೆಯ ಹಸ್ತಪ್ರತಿಗಳ ಸಂಗ್ರಹವೂ ಉಂಟು.

ಸ್ಥಳಪುರಾಣಗಳ ಪ್ರಕಾರ ನಂಜನಗೂಡಿಗೆ ಗರಳಪುರಿ ಕ್ಷೇತ್ರ, ದಕ್ಷಿಣಕಾಶಿ ಎಂಬ ಹೆಸರುಗಳೂ ಇವೆ. ಇದು ತ್ರಿವೇಣೀಸಂಗಮಸ್ಥಾನ ಎಂಬುದು ನಂಬಿಕೆ. ಪರಶುರಾಮ ತನ್ನ ಮಾತೃಹತ್ಯಾಪಾಪವನ್ನು ಇಲ್ಲಿ ಶಿವಾನುಗ್ರಹದಿಂದ ಕಳೆದುಕೊಂಡ; ಗೌತಮ ಋಷಿಗಳ ಆಶ್ರಮ ಇಲ್ಲಿತ್ತು-ಎಂದು ಐತಿಹ್ಯವುಂಟು.


ನಂಜನಗೂಡಿನ ದೇವಾಲಯಗಳುಸಂಪಾದಿಸಿ

 • ಶ್ರೀಕಂಠೇಶ್ವರ ದೇವಾಲಯ
 • ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ
 • ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯ
 • ಪರಶುರಾಮ ದೇವಸ್ಥಾನ[೫]
 • ಅಯ್ಯಪ್ಪಸ್ವಾಮಿ ದೇಗುಲ.

ನಂಜನಗೂಡಿನ ಕುರಿತು ಕೆಲವು ಸಂಗತಿಗಳುಸಂಪಾದಿಸಿ

ಈ ಪಟ್ಟಣವು ಇಲ್ಲಿ ನೆಲೆಗೊಂಡಿರುವ ದೈವವಾದ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಕ್ಷೀರಸಾಗರ ಮಂಥನ ಮಾಡಿದಾಗ ಹೊರಬಂದ ವಿಷದಿಂದ ಭೂಮಿಯ ಜೀವಸಂಕುಲವನ್ನು ರಕ್ಷಿಸಲು ಶಿವನು ಆ ವಿಷವನ್ನು ಕುಡಿದು ನಂಜುಂಡನಾಗಿ ಈ ಕ್ಷೇತ್ರದಲ್ಲಿ ನೆಲೆಸಿದನು ಎಂಬ ಪ್ರತೀತಿ ಇದೆ. ನಂಜನಗೂಡು ದಕ್ಷಿಣ ಕಾಶಿಯೆಂದು ಪ್ರಸಿದ್ಧಿ ಪಡೆದಿದ್ದು, ಇಲ್ಲಿ ಮಾಡುವ ತೀರ್ಥ ಸ್ನಾನ ಮತ್ತು ದೈವದ ದರ್ಶನ ಪಾಪ ವಿಮೋಚಕ ಗುಣವುಳ್ಳದೆಂದು ಹೇಳಲಾಗುತ್ತದೆ.ನಂಜನಗೂಡಿಗೆ ಭೇಟಿ ಕೊಡುವವರು ಶ್ರೀ ರಾಘವೇಂದ್ರ ಸ್ವಾಮಿ ಮಠ ಮತ್ತು ಪರಶುರಾಮ ಕ್ಷೇತ್ರಗಳಿಗೆ ಭೇಟಿ ಕೊಡಬಹುದು. ಕೆಲವು ಅಪರೂಪದ ರಾಘವೇಂದ್ರ ಸ್ವಾಮಿಗಳ ಮೂರ್ತಿಗಳನ್ನು ನೀವು ನಂಜನಗೂಡಿನ ಮಠದಲ್ಲಿ ಕಾಣಬಹುದು.ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 30 ಕಿ.ಮೀ ದೂರದಲ್ಲಿ ಇರುವ ನಂಜನಗೂಡಿಗೆ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಕೇವಲ ತೀರ್ಥಕ್ಷೇತ್ರವೆಂದಷ್ಟೆ ಅಲ್ಲದೆ, ಮಿತವ್ಯಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಣವಾಗಿ ಸಹಾ ಇದನ್ನು ಸಂದರ್ಶಿಸಬಹುದು.ನಂಜನಗೂಡು ರಸಬಾಳೆ ಪ್ರಸಿದ್ದಿ ಹೊಂದಿವೆ.[೬]

ಆಯುರ್ವೇದಸಂಪಾದಿಸಿ

ದಿವಂಗತ ಶ್ರೀ ಬಿ.ವಿ.ಪಂಡಿತ್ ತಯಾರಿಸಿದ ಆಯುರ್ವೇದ ಔಷಧಿಗಳಿಗೆ ನಂಜನಗೂಡು ಪ್ರಸಿದ್ಧವಾಗಿದೆ. ಅವರು ಸ್ಥಾಪಿಸಿದ ಸದ್ವೈದ್ಯಶಾಲವು ಜನರಿಗೆ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತದೆ.

ಹೊರಗಿನ ಸಂಪರ್ಕಗಳುಸಂಪಾದಿಸಿ

ಚಿತ್ರಗಳುಸಂಪಾದಿಸಿ

ವಳಗರೆ ಮಾಹಿತಿಸಂಪಾದಿಸಿ

ವಳಗೆರೆ ಗ್ರಾಮವು ನಂಜನಗೂಡಿನಂದ ೧೦ ಕಿಲೋ ಮೀಟರ್ ದೂರದಲ್ಲಿದೆ.ಮೈಸೂರಿನಿಂದ ೩೫ ಕಿಲೋ ಮೀ ದೂರದಲ್ಲಿದೆ. ಇದರ ಮೊದಲ ಹೆಸರು ಹೊನ್ನಗೆರೆ ಏಕಂದರೆ ಈ ಗ್ರಾಮದಲ್ಲಿ ಚಿನ್ನದ ಗಣಿ ಇದೆ. ಈ ಗ್ರಾಮವು ಕಳಲೆ ಗಡಿಗೆ ಸೇರಿದೆ. ಇಲ್ಲಿ ೪೮ ಹಳ್ಳಿಗಳು ಸೇರಿದೆ.ಸಂಪಾದಿಸಿ

ಶ್ರೀ ಕಂತೆ ಮಾದೇಶ್ವರ ಸ್ವಾಮಿ ಬೆಟ್ಟಸಂಪಾದಿಸಿ

ಕಂತೆ ಮಹದೇಶ್ವರ ಬೆಟ್ಟವು  ನಿಸರ್ಗದ ಮಡಿಲಲ್ಲಿ ನೆಲೆಗೊಂಡಿರುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಕರ್ನಾಟಕದಲ್ಲಿ ಮಲೆ ಮಹದೇಶ್ವರ ಬೆಟ್ಟದಂತೆ ಕಂತೆ ಮಹದೇಶ್ವರ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಸುತ್ತಮುತ್ತ ದಟ್ಟ ಅರಣ್ಯದ ಮಧ್ಯೆ ಸುಮಾರು ಎತ್ತರದಲ್ಲಿ, ಪ್ರಶಾಂತ ಪರಿಸರದಲ್ಲಿ ಶ್ರೀಕ್ಷೇತ್ರ ಸೌಂದರ್ಯೋಪಾಸನೆ ದೃಷ್ಟಿಯಿಂದಲೂ ಪ್ರಮುಖ ಸ್ಥಳವಾಗಿದೆ.

        ಕಂತೆ ಮಹದೇಶ್ವರ ಬೆಟ್ಟದ ಸುತ್ತಲೂ  ಕಾಲುವೆಗಳಲ್ಲಿ ಹರಿಯುವ ನೀರು ಮಹದೇಶ್ವರನಿಗೆ ಮಾಲೆ ಹಾಕಿದಂತೆ ಕಾಣುತ್ತಿದೆ. ಈ ಬೆಟ್ಟದ ಸುತ್ತ ಮುತ್ತಲಿನ ಪರಿಸರವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ.

        ಕಂತೆ ಮಹದೇಶ್ವರ ಸ್ವಾಮಿ ಬೆಟ್ಟವು ನಂಜನಗೂಡಿನಿಂದ 25 ಕಿಲೋ ಮೀಟರ್ ದೂರದಲ್ಲಿದ್ದು. ಈ ಬೆಟ್ಟ ತರಗನಹಳ್ಳಿ ಗ್ರಾಮಕ್ಕೆ ಸೇರುತ್ತದೆ. ತರಗನಹಳ್ಳಿಯಿಂದ ಬೆಟ್ಟಕ್ಕೆ1.5 ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟವು ಸುತ್ತಲೂ ಹಸಿರಿನ ಗಿಡಮರಗಳಿಂದ ಕೂಡಿದ್ದು ಯಾವುದೇ ಮಲೆನಾಡಿಗೂ ಕಡಿಮೆ ಇಲ್ಲ. ಈ ಬೆಟ್ಟವು ಚಾರಣಕ್ಕೆ ತೆರಳುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವಂತೆ ಇದೆ.

           ಈ ಬೆಟ್ಟಕ್ಕೆ ಹೋಗಲು ಬೆಟ್ಟವನ್ನು ಹತ್ತಿ ಹೋಗಬೇಕಿತ್ತು ಆದರೆ ಇವಾಗ ಕಾರು ಮತ್ತು ಬೈಕ್ ಗಳ ಮೂಲಕ ಸರಾಗವಾಗಿ ಬೆಟ್ಟದ ತುದಿಯನ್ನು ತಲುಪಬಹುದು. ಈ ಬೆಟ್ಟದ ಸುತ್ತಮುತ್ತಲು ಯಾಲೇಹಳ್ಳಿ, ಕಪ್ಪಸೋಗೆ, ತರಗನಹಳ್ಳಿಗಳು ಇವೆ.

           ಈ ಬೆಟ್ಟದಲ್ಲಿ ಪ್ರತಿ ವರ್ಷಕ್ಕೆ ಒಂದು ಬಾರಿ ಕಂತೆ ಮಹದೇಶ್ವರ ಸ್ವಾಮಿಯ ಕೊಂಡೋತ್ಸವವನ್ನು     ದೀಪಾವಳಿ ಹಬ್ಬದ ದಿನದಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿ ವಿಜೃಂಭಣೆಯಿಂದ ನಡೆಸುತ್ತಾರೆ. ಪ್ರತಿ ತಿಂಗಳು  ಅಮಾವಾಸ್ಯೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿ ದೇವಸ್ಥಾನದ ಅರ್ಚಕರನ್ನು ತಮ್ಮಡಿಗಳು ಎಂದು ಕರೆಯುತ್ತಾರೆ.  ಇವರು ಲಿಂಗಗಳನ್ನು ಧರಿಸಿರುತ್ತಾರೆ.

           ಕಂತೆ ಮಹದೇಶ್ವರ ಬೆಟ್ಟದ ಹಿನ್ನೆಲೆ ಏನೆಂದರೆ  ಮಹದೇಶ್ವರ ಸ್ವಾಮಿ ತಮ್ಮ ಪ್ರಯಾಣ ಮಾಡುವಾಗ ಈ ಬೆಟ್ಟದಲ್ಲಿ ಒಂದು ದಿನ ತಂಗಿ ನಂತರ ಅವರ ಮುಂದಿನ ಪ್ರಯಾಣವನ್ನು ಕೈಗೊಂಡಿದ್ದರಿಂದ ಈ ಬೆಟ್ಟಕ್ಕೆ ಕಂತೆ ಮಹದೇಶ್ವರ ಬೆಟ್ಟ ಎಂದು ಹೆಸರು ಬಂದಿದೆ.  ಈ ಕಂತೆ ಮಹದೇಶ್ವರ ಸ್ವಾಮಿಯು ಸುತ್ತಲ 33 ಗ್ರಾಮದ ಜನರ ಆರಾಧ್ಯ ದೈವವಾಗಿದೆ.

           ಈ ಬೆಟ್ಟದ ಮತ್ತೊಂದು ವಿಶೇಷವೆಂದರೆ ಗದ್ದುಗೆಯು ಬೆಟ್ಟದ ಕಂತೆ ಮಹದೇಶ್ವರ ದೇವಸ್ಥಾನದ ಪಕ್ಕದಲ್ಲಿ ಬೆಟ್ಟದ ಮೇಲೆ ಇದೆ. ಇಲ್ಲಿ ಚಿದಾನಂದ ನಂಜುಂಡ ಶಿವ ಯೋಗೇಂದ್ರ ಶಿವಯೋಗಿಗಳು ಶಿವೈಕ್ಯ ಆಗಿದ್ದಾರೆ. ಇವರು ಸುಮಾರು 20 ವರ್ಷಗಳ ಹಿಂದೆ ಕಂತೆ ಮಹದೇಶ್ವರ ಬೆಟ್ಟಕ್ಕೆ ಬಂದು ಶಿವೈಕ್ಯ ಆಗಿದ್ದಾರೆ. ಗದ್ದುಗೆಯ ಜೊತೆಗೆ ಶೀಲಾ ಮಠವಿದೆ. ಇಲ್ಲಿ ಒಬ್ಬರು ಗುರುಗಳು ಇದ್ದಾರೆ ನಿತ್ಯ ದಾಸೋಹ ನಡೆಯುತ್ತದೆ.ಈ ಸ್ಥಳವನ್ನು ಪ್ರವಾಸಿ ಕೇಂದ್ರ ಮಾಡುವುದಾಗಿ ಸಚಿವ ಡಾ. ಎಸ್. ಸಿ.ಮಹದೇವಪ್ಪ ತಿಳಿಸಿದ್ದಾರೆ.


ಭೌಗೋಳಕ ಹಿನ್ನೆಲೆಸಂಪಾದಿಸಿ

ಈ ಊರು ಅರೆ ಮಲೆನಾಡು ಪ್ರದೇಶವಾಗಿದೆ,ಇದು ನೀರಾವರಿ ಪ್ರದೇಶವಾಗಿದೆ ಇಲ್ಲಿನ ಜನತೆ ಕಬಿನಿ ಜಲಾಶಯದ ಕಾಲುವೆ ನೀರನ್ನು ಭತ್ತ ಬೆಳೆಯಲು ಬಳಸುತ್ತಾರೆ. ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳಗಳೆಂದರೆ ಧಾನ್ಯಗಳು, ಭತ್ತ, ರಾಗಿ, ಜೋಳ, ಅಲಸಂದೆ , ಹುರುಳಿ, ಹೆಸರುಕಾಳು.

ಪ್ರಮುಖ ದೇವಾಲಯಸಂಪಾದಿಸಿ

ಗಡಿ ಬೈರವೇಶ್ವರ

ತೇನೂರು ಮಲ್ಲಪ್ಪ ದೇವಸ್ಥಾನ

ಗಣಪತಿ ದೇವಸ್ಥಾನ

ಮಾರಮ್ಮನ ದೇವಸ್ಥಾನ

 1. Nanjangud City Population Census 2011
 2. http://www.nanjanagudutown.gov.in/
 3. http://nanjangud.info/
 4. http://nanjangudtemple.kar.nic.in/about.html
 5. http://www.mysore.nic.in/Nanjangud.htm
 6. nanjanagud readable