ಗಂಡ
ಒಂದು ವೈವಾಹಿಕ ಸಂಬಂಧದಲ್ಲಿ, ಗಂಡನು ಪುರುಷನಾಗಿರುತ್ತಾನೆ. ತನ್ನ ಹೆಂಡತಿ ಮತ್ತು ಇತರರಿಗೆ ಸಂಬಂಧಿಸಿದಂತೆ ಒಬ್ಬ ಗಂಡನ ಹಕ್ಕುಗಳು ಮತ್ತು ಕರ್ತವ್ಯಗಳು, ಮತ್ತು ಸಮುದಾಯದಲ್ಲಿ ಹಾಗೂ ಕಾನೂನಿನಲ್ಲಿ ಅವನ ಸ್ಥಾನಮಾನ ಸಂಸ್ಕೃತಿಗಳ ಮಧ್ಯೆ ಬದಲಾಗುತ್ತದೆ ಮತ್ತು ಕಾಲಾಂತರದಲ್ಲಿ ಬದಲಾಗಿವೆ. ಏಕಪತ್ನಿ ಸಂಸ್ಕೃತಿಗಳಲ್ಲಿ, ಒಂದು ವಿವಾಹದಲ್ಲಿ ಕೇವಲ ಇಬ್ಬರು ಪಕ್ಷಗಳು ಇರುತ್ತಾರೆ. ಇವು ಇಬ್ಬರು ಅಥವಾ ಹೆಚ್ಚು ಹೆಂಡತಿಯರನ್ನು ನಿಷೇಧಿಸುವ ಕಾನೂನು ನಿಯಮಾವಳಿಗಳಿಂದ ಜಾರಿಗೆ ಬಂದಿರುತ್ತವೆ. ಹಾಗೆಯೇ, ಬಹುಪತಿತ್ವ, ಅಂದರೆ ಒಬ್ಬನಿಗಿಂತ ಹೆಚ್ಚು ಗಂಡುಗಳೊಂದಿಗೆ ಏಕಕಾಲದಲ್ಲಿ ಒಬ್ಬ ಸ್ತ್ರೀಯ ಮದುವೆಗೆ ಅನುಮತಿ ಇರುವುದಿಲ್ಲ. ಬಹುಪತಿ ಮತ್ತು ಬಹುಪತ್ನಿ ಸಂಸ್ಕೃತಿಗಳಲ್ಲಿ, ಒಂದು ಮದುವೆಯಲ್ಲಿ ಇಬ್ಬರಿಗಿಂತ ಹೆಚ್ಚು ಪಕ್ಷಗಳಿರಬಹುದು. ಇಬ್ಬರೂ ಸಂಗಾತಿಗಳು ಪುರುಷರಾಗಿರುವ ಮದುವೆಗಳಲ್ಲಿ, ಇಬ್ಬರನ್ನೂ ಗಂಡ ಎಂದು ಸೂಚಿಸಬಹುದು.
ಭಿನ್ನಲಿಂಗೀಯ ಮದುವೆಗಳಲ್ಲಿ, ಗಂಡನನ್ನು ಸಾಂಪ್ರದಾಯಿಕವಾಗಿ ಮನೆಯ ಮುಖ್ಯಸ್ಥನೆಂದು ಪರಗಣಿಸಲಾಗುತ್ತಿತ್ತು ಮತ್ತು ಅವನು ಏಕಮಾತ್ರ ಸಂಪಾದಿಸುವವನಾಗಿರುವನು ಎಂದು ನಿರೀಕ್ಷಿಸಲಾಗುತ್ತಿತ್ತು. ಕೆಲವು ಸಂಸ್ಕೃತಿಗಳಲ್ಲಿ, ಈಗಲೂ ಈ ಪಾತ್ರವು ಕಾಪಾಡಲ್ಪಟ್ಟಿದೆ (ಕೆಲವೊಮ್ಮೆ ಇದನ್ನು ಪೈತೃಕ ಸಂಸ್ಕೃತಿ ಎಂದು ವಿವರಿಸಲಾಗುತ್ತದೆ). ತನ್ನ ಹೆಂಡತಿಯಿಂದ ಬೇರ್ಪಟ್ಟಿರುವ ಪುರುಷನಿಗೂ ಈ ಪದವನ್ನು ಅನ್ವಯಿಸುವುದು ಮುಂದುವರೆದಿದೆ ಮತ್ತು ಕಾನೂನಾತ್ಮಕವಾಗಿ ಮಾನ್ಯಮಾಡಲಾದ ವಿಚ್ಛೇದನ ಅಥವಾ ಅವನ ಹೆಂಡತಿಯ ಮರಣದ ನಂತರ ಅವನ ವಿವಾಹವು ಕೊನೆಗೊಂಡಾಗ ಮಾತ್ರ ಅವನಿಗೆ ಆ ಪದವನ್ನು ಅನ್ವಯಿಸುವುದನ್ನು ನಿಲ್ಲಿಸಲಾಗುತ್ತದೆ. ಅವನ ಹೆಂಡತಿಯ ಮರಣದ ನಂತರ, ಗಂಡನನ್ನು ವಿಧುರನೆಂದು ಕರೆಯಲಾಗುತ್ತದೆ; ವಿಚ್ಛೇದನದ ನಂತರ ಪುರುಷನನ್ನು ತನ್ನ ಹಿಂದಿನ ಹೆಂಡತಿಯ ಮಾಜಿ ಗಂಡನೆಂದು ಕರೆಯಬಹುದು. ಇಂದಿನ ಸಮಾಜದಲ್ಲಿ, ಒಬ್ಬ ಗಂಡನನ್ನು ಅಗತ್ಯವಾಗಿ ಕುಟುಂಬದ ಸಂಪಾದಕನೆಂದು ಪರಿಗಣಿಸಲಾಗುವುದಿಲ್ಲ, ವಿಶೇಷವಾಗಿ ಅವನ ಹೆಂಡತಿಯು ಆರ್ಥಿಕವಾಗಿ ಹೆಚ್ಚು ಲಾಭದಾಯಕ ವೃತ್ತಿ ಅಥವಾ ಜೀವನೋಪಾಯವನ್ನು ಹೊಂದಿದ್ದಾಗ. ಅಂತಹ ಸಂದರ್ಭಗಳಲ್ಲಿ, ಆ ದಂಪತಿಗೆ ಮಕ್ಕಳಿದ್ದರೆ, ಗಂಡನನ್ನು ಮನೆಯಲ್ಲಿ ಇರುವ ತಂದೆ ಎಂದು ಪರಿಗಣಿಸುವುದು ಅಸಾಮಾನ್ಯವಲ್ಲ.
ಒಬ್ಬ ಹಿಂದೂ ಗಂಡನು ಸಾಂಪ್ರದಾಯಿಕವಾಗಿ ತನ್ನ ಹೆಂಡತಿಯನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅವಳ ಅಗತ್ಯಗಳನ್ನು ಒದಗಿಸುವನು ಮತ್ತು ಹಾಗೆ ಮಾಡಲು ತನ್ನ ಸಾಮರ್ಥ್ಯಗಳನ್ನು ಸಾಬೀತುಪಡಿಸುವನು ಎಂದು ನಿರೀಕ್ಷಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ವಿವಾಹವು ಏಳು ಜನ್ಮಗಳ ಸಂಬಂಧವಾಗಿರುತ್ತದೆ. ೧೯೫೧ರ ಮುಂಚೆ, ಹಿಂದೂ ವಿವಾಹದಲ್ಲಿ ವಿಚ್ಛೇದನಕ್ಕೆ ಅನುಮತಿ ಇರಲಿಲ್ಲ. ಹಿಂದೆ, ಅಂದರೆ ಕ್ರಿ.ಶ. ೧೭೫೦ಕ್ಕೆ ಮೊದಲು ಪುರುಷರು ಮತ್ತು ಸ್ತ್ರೀಯರು ಇಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗುತ್ತಿತ್ತು ಮತ್ತು ಅದನ್ನೇ ವಿವಾಹದಲ್ಲೂ ವಿಸ್ತರಿಸಲಾಗುತ್ತಿತ್ತು.