ಚಂದ್ರಿಕಾ
ಚಂದ್ರಿಕಾ ಕನ್ನಡ ಮತ್ತು ತಮಿಳು ಚಲನಚಿತ್ರ ನಟಿ. ೧೯೮೦ರ ದಶಕದ ಮಧ್ಯದಿಂದ ೧೯೯೦ರ ದಶಕದ ಮಧ್ಯದವರೆಗೆ ನಾಯಕ ನಟಿಯಾಗಿ ಜನಪ್ರಿಯತೆ ಗಳಿಸಿದ ತಾರೆ. ನಟ್ಪು(೧೯೮೬), ಗೋಲ್‍ಮಾಲ್ ರಾಧಾಕೃಷ್ಣ(೧೯೯೦), ಗಂಡನಿಗೆ ತಕ್ಕ ಹೆಂಡತಿ(೧೯೯೧) ಮತ್ತು ನೀನು ನಕ್ಕರೆ ಹಾಲು ಸಕ್ಕರೆ(೧೯೯೧) ಚಂದ್ರಿಕಾ ಗಮನಾರ್ಹ ಅಭಿನಯ ನೀಡಿದ ಪ್ರಮುಖ ಚಿತ್ರಗಳು. ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ನ ಮೊದಲ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಕನ್ನಡಿಗರ ಮನೆಮಾತಾಗಿರುವ ಚಂದ್ರಿಕಾ ಕಿರುತೆರೆಯ ನೃತ್ಯ ಕಾರ್ಯಕ್ರಮ ಸೈನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರೆ ಡಾನ್ಸಿಂಗ್ ಸ್ಟಾರ್ ೨ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಗಮನ ಸೆಳೆದಿದ್ದಾರೆ[೧][೨].
ಚಂದ್ರಿಕಾ | |
---|---|
ಜನನ | ಭಾರತಿ ಅರಸೀಕೆರೆ, ಕರ್ನಾಟಕ |
ವೃತ್ತಿ(ಗಳು) | ಚಲನಚಿತ್ರ ನಟಿ, ಉದ್ಯಮಿ |
ಸಕ್ರಿಯ ವರ್ಷಗಳು | ೧೯೮೫-೧೯೯೩, ೨೦೧೦-ಪ್ರಸ್ತುತ |
ಆರಂಭಿಕ ಜೀವನ
ಬದಲಾಯಿಸಿಅರಸೀಕೆರೆಯ ಕೋಳಗುಂದ ಎಂಬ ಗ್ರಾಮದ ಸಂಪ್ರದಾಯಸ್ಥ ಲಿಂಗಾಯತ ಕುಟುಂಬದಲ್ಲಿ ಜನಿಸಿದ ಚಂದ್ರಿಕಾರಿಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ. ಚಂದ್ರಿಕಾ ಅವರ ಮೂಲ ಹೆಸರು ಭಾರತಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅರಸೀಕೆರೆಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಡೆದ ಚಂದ್ರಿಕಾ ಕುಟುಂಬ ಬೆಂಗಳೂರಿಗೆ ವಲಸೆ ಬಂದಿದ್ದರಿಂದ ಮುಂದಿನ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಂದುವರೆಸಿದರು. ಬಾಲ್ಯದಲ್ಲಿ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಚಂದ್ರಿಕಾ ಶಾಲಾ ಕಾಲೇಜುಗಳಲ್ಲಿ ಅನೇಕ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಪ್ರಖ್ಯಾತ ನಟಿ ಮಂಜುಳಾ ಚಂದ್ರಿಕಾ ಅವರ ಹತ್ತಿರದ ಸಂಬಂಧಿ. ಚಿಕ್ಕಂದಿನಲ್ಲೇ ನಟಿಯಾಗಬೇಕೆಂದು ಕನಸು ಕಂಡಿದ್ದ ಚಂದ್ರಿಕಾ ಅವರ ಬಯಕೆಯನ್ನು ಇಮ್ಮಡಿಗೊಳಿಸಿದ್ದು ಖ್ಯಾತ ಪೋಷಕ ನಟ ಬಾಲಕೃಷ್ಣ. ಸಂದರ್ಭವೊಂದರಲ್ಲಿ ಚಂದ್ರಿಕಾ ಅವರ ಸೌಂದರ್ಯವನ್ನು ಗಮನಿಸಿದ ಬಾಲಕೃಷ್ಣ ಚಂದ್ರಿಕಾರ ತಂದೆಯವರಲ್ಲಿ ಮಗಳನ್ನು ನಟಿಯನ್ನಾಗಿ ಮಾಡವಂತೆ ಸಲಹೆ ನೀಡಿದರು. ಕುಟುಂಬದ ಆಪ್ತರ ಸಲಹೆಯ ಮೇರೆಗೆ ತಮ್ಮ ತಂದೆಯವರೊಂದಿಗೆ ಪುಟ್ಟಣ್ಣ ಕಣಗಾಲ್ ಅವರನ್ನು ಭೇಟಿ ಮಾಡಿದ ಚಂದ್ರಿಕಾ ಪುಟ್ಟಣ್ಣ ಅವರ ಮಸಣದ ಹೂವು(೧೯೮೫) ಚಿತ್ರದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಇವರ ಪ್ರತಿಭೆಯನ್ನು ಗಮನಿಸಿದ ಪುಟ್ಟಣ್ಣ ತಮ್ಮ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಅವಕಾಶ ನೀಡುವ ಭರವಸೆಯನ್ನು ನೀಡಿದರು. ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ತಮಿಳನ ಪ್ರಸಿದ್ಧ ಛಾಯಾಗ್ರಾಹಕ ಎಸ್.ಮಾರುತಿ ರಾವ್ ಅವರು ಚಂದ್ರಿಕಾರ ಭಾವಚಿತ್ರವನ್ನು ಚೆನ್ನೈನ ಚಿತ್ರ ತಯಾರಕರಿಗೆ ನೀಡಿದರು. ಆದರೆ ಪುಟ್ಟಣ್ಣ ಅವರ ಹಠಾತ್ ನಿಧನ ನಟಿಯಾಗಬೇಕೆಂದು ಕನಸು ಕಂಡಿದ್ದ ಚಂದ್ರಿಕಾಗೆ ಭಾರಿ ನಿರಾಸೆ ಮೂಡಿಸಿತ್ತು.
ವೃತ್ತಿ ಜೀವನ
ಬದಲಾಯಿಸಿಬೆಳ್ಳಿತೆರೆ
ಬದಲಾಯಿಸಿಮಸಣದ ಹೂವು ಚಿತ್ರದ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಚಂದ್ರಿಕಾ ನಮ್ಮ ಊರ ದೇವತೆ(೧೯೮೬) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದರೂ ಕನ್ನಡದಲ್ಲಿ ಗಮನಾರ್ಹ ಪಾತ್ರಗಳು ದೊರಕಲಿಲ್ಲ. ಎಸ್.ಮಾರುತಿ ರಾವ್ ಅವರಿಂದ ತಮಿಳು ಚಿತ್ರ ನಿರ್ದೇಶಕರಿಗೆ ಪರಿಚಯಿಸಲ್ಪಟ್ಟ ಚಂದ್ರಿಕಾ ಅಮೀರ್ ಜಾನ್ ಅವರ ನಟ್ಪು(೧೯೮೬) ಚಿತ್ರದಲ್ಲಿ ಜನಪ್ರಿಯ ನಟ ಕಾರ್ತಿಕ್ ಅವರ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಪೂರ್ವ ಯಶಸ್ಸು ಸಾಧಿಸಿತು. ನಂತರದಲ್ಲಿ ಉಳೈದು ವಾಳ ವೇಂಡುಂ(೧೯೮೮), ಪಾರ್ತಾಲ್ ಪಾಸು(೧೯೮೮) ಮತ್ತು ಮದುರಕಾರ ತಂಬಿ(೧೯೮೮) ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದರು. ತಮಿಳಿನಲ್ಲಿ ಚಂದ್ರಿಕಾ ಶ್ರೀಭಾರತಿ ಎಂಬ ಹೆಸರಿನಲ್ಲಿ ಅಭಿನಯಿಸಿದ್ದಾರೆ.
ಕಾಶಿನಾಥ್ ಅಭಿನಯದ ತಾಯಿಗೊಬ್ಬ ತರ್ಲೆ ಮಗ(೧೯೮೯) ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದ ಶ್ರೀನಿವಾಸಮೂರ್ತಿ ಮತ್ತು ಜೈಜಗದೀಶ್ ಚಂದ್ರಿಕಾರನ್ನು ನಾಯಕಿಯಾಗಿ ಆಯ್ಕೆ ಮಾದಿದರು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪರಿಚಿತರಾದ ಚಂದ್ರಿಕಾ ಖ್ಯಾತ ನಟ ಅನಂತ್ ನಾಗ್ ಅವರ ನಾಯಕಿಯಾಗಿ ಗೋಲ್‍ಮಾಲ್ ರಾಧಾಕೃಷ್ಣ(೧೯೯೦) ಮತ್ತು ಗೋಲ್‍ಮಾಲ್ ರಾಧಾಕೃಷ್ಣ ಭಾಗ-೨ ಚಿತ್ರಗಳಲ್ಲಿ ಮುಗ್ಧ ಸ್ವಭಾವದ ಗೃಹಿಣಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ. ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು. ಟೈಗರ್ ಪ್ರಭಾಕರ್ ಅವರ ಜೊಡಿಯಾಗಿ ತ್ರಿನೇತ್ರ(೧೯೯೦), ರಣಭೇರಿ(೧೯೯೦), ಕೆರಳಿದ ಕೇಸರಿ(೧೯೯೧) ಮತ್ತು ಸಿ.ಬಿ.ಐ.ವಿಜಯ್(೧೯೯೧) ಮುಂತಾದ ಸಾಹಸ ಪ್ರಧಾನ ಚಿತ್ರಗಳಲ್ಲಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಶಂಕರ್ ನಾಗ್ ಅವರಿಗೆ ನಾಯಕಿಯಾಗಿ ನರಸಿಂಹ(೧೯೮೯) ಮತ್ತು ಭಲೇ ಚತುರ(೧೯೯೦) ಚಿತ್ರಗಳಲ್ಲಿ ಶಕ್ತ ಅಭಿನಯ ನೀಡಿದ ಚಂದ್ರಿಕಾ ಐವರು ನಾಯಕಿಯರಿದ್ದ ನೀನು ನಕ್ಕರೆ ಹಾಲು ಸಕ್ಕರೆ(೧೯೯೧) ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ಚೊಕ್ಕದಾದ ಅಭಿನಯ ನೀಡಿದ್ದಾರೆ. ಶಶಿಕುಮಾರ್ ಅಭಿನಯದ ಗಂಡನಿಗೆ ತಕ್ಕ ಹೆಂಡತಿ ಚಿತ್ರದಲ್ಲಿ ಪೋಲಿಸ್ ಅಧಿಕಾರಿಯಾಗಿ ಸಮರ್ಥ ಅಭಿನಯ ನೀಡಿದ ಚಂದ್ರಿಕಾ ಹೊಸರಾಗ(೧೯೯೨) ಮತ್ತು ವಾಂಟೆಡ್(೧೯೯೩) ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಸ್ವತಃ ಚಂದ್ರಿಕಾ ಅವರೇ ನಿರ್ಮಿಸಿದ್ದ ವಾಂಟೆಡ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಇದರಿಂದ ಬೇಸರಗೊಂಡ ಚಂದ್ರಿಕಾ ನಟನೆಗೆ ವಿದಾಯ ಹೇಳಿ ವೈಯಕ್ತಿಕ ಬದುಕಿನೆಡೆಗೆ ಗಮನ ಹರಿಸಿದರು[೧].
ಶ್ರೀ ನಾಗಶಕ್ತಿ(೨೦೧೦) ಚಿತ್ರದ ಮೂಲಕ ಚಿತ್ರರಂಗಕ್ಕೆ ವಾಪಸಾಗಿರುವ ಚಂದ್ರಿಕಾ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ[೧]. ದುನಿಯಾ ಸೂರಿ ಅವರ ಕೆಂಡ ಸಂಪಿಗೆ(೨೦೧೫) ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಚಂದ್ರಿಕಾ ಅಮೋಘ ಅಭಿನಯ ನೀಡಿದ್ದಾರೆ[೩].
೧೯೮೦ರ ದಶಕದ ಕೊನೆಯಿಂದ ೧೯೯೦ರ ದಶಕದ ಆರಂಭದಲ್ಲಿ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಚಂದ್ರಿಕಾ ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಟೈಗರ್ ಪ್ರಭಾಕರ್, ಕಾರ್ತಿಕ್, ರಾಮ್ಕಿ, ಕಾಶಿನಾಥ್ ಮತ್ತು ಶಶಿಕುಮಾರ್ರಂತಹ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಪುಟ್ಟಣ್ಣ ಕಣಗಾಲ್, ದೊರೈ-ಭಗವಾನ್, ಭಾರ್ಗವ, ಕೆ.ವಿ.ಜಯರಾಂ ಮತ್ತು ಓಂ ಸಾಯಿಪ್ರಕಾಶ್ ಮುಂತಾದ ಮೇರು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ[೧].
ಕಿರುತೆರೆ
ಬದಲಾಯಿಸಿಈ ಟಿವಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ೧ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಚಂದ್ರಿಕಾ ತಮ್ಮ ನೇರವಂತಿಕೆಯಿಂದ ಬಹಳ ಜನಪ್ರಿಯರಾಗಿದ್ದರು[೧].
ವೈಯಕ್ತಿಕ ಜೀವನ
ಬದಲಾಯಿಸಿ೧೯೯೦ರ ದಶಕದ ಮಧ್ಯದಲ್ಲಿ ವಿವಾಹವಾದ ಚಂದ್ರಿಕಾರಿಗೆ ಆರ್ಯನ್ ಹೆಸರಿನ ಒಬ್ಬ ಮಗನಿದ್ದಾನೆ.
ಚಂದ್ರಿಕಾ ನಟಿಸಿದ ಚಿತ್ರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ೧.೩ ೧.೪ "ಐಟಂ ಸಾಂಗ್ ಮೂಲಕ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್". ಫಿಲ್ಮಿಬೀಟ್ ಕನ್ನಡ.
- ↑ "ಸಿನಿಮಾ ಪಾತ್ರಗಳಲ್ಲಿ ನಾನು ನಾನಲ್ಲ". ಪ್ರಜಾವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಸೂರಿ ಸಂಪಿಗೆಯಲ್ಲಿ ಚಂದ್ರಿಕಾ ನಗು!". ಉದಯವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಚಂದ್ರಿಕಾ, ಚಿಲೋಕ.ಕಾಮ್". Archived from the original on 2015-09-07. Retrieved 2016-01-13.