ಮೈನಾವತಿ
ಮೈನಾವತಿ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಮತ್ತು ಕಿರುತೆರೆ ಅಭಿನೇತ್ರಿ. ೧೯೫೦ ಮತ್ತು ೧೯೬೦ರ ದಶಕದಲ್ಲಿ ಸಕ್ರಿಯರಾಗಿದ್ದ ಮೈನಾವತಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯರ ಸೊಸೆ(೧೯೫೭), ಅಬ್ಬಾ ಆ ಹುಡುಗಿ(೧೯೫೯), ಅನುರಾಧ(೧೯೬೭), ಶ್ರೀಕೃಷ್ಣದೇವರಾಯ(೧೯೭೦) ಮತ್ತು ಅಳಿಯ ಗೆಳೆಯ(೧೯೭೧) ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಿಗೆ ಸಮರ್ಥವಾಗಿ ಜೀವ ತುಂಬಿ ಕನ್ನಡ ಪ್ರೇಕ್ಷಕರ ನೆಚ್ಚಿನ ಅಭಿನೇತ್ರಿ ಎನ್ನಿಸಿಕೊಂಡಿದ್ದರು. ತಮಿಳಿನ ಬೊಮ್ಮೈ ಕಲ್ಯಾಣಂ(೧೯೫೮), ಮಾಲಯಿಟ್ಟ ಮಂಗೈ(೧೯೫೮) ಮತ್ತು ಕುರವಂಜಿ(೧೯೬೦) ಮೈನಾವತಿ ಅಭಿನಯದ ಗಮನಾರ್ಹ ಚಿತ್ರಗಳಾಗಿವೆ[೧][೨][೩].
ಮೈನಾವತಿ | |
---|---|
ಜನನ | ಮೈನಾವತಿ ೨೬ ಜುಲೈ ೧೯೩೫ ಭಟ್ಕಳ, ಮುಂಬಯಿ ಪ್ರಾಂತ್ಯ, ಬ್ರಿಟಿಷ್ ಇಂಡಿಯಾ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೧೯೫೫-೨೦೧೨ |
ಸಂಗಾತಿ | ಡಾ.ರಾಧಾಕೃಷ್ಣ |
ಆರಂಭಿಕ ಜೀವನ
ಬದಲಾಯಿಸಿಮೈನವಾತಿಯವರು ೨೬ ಜುಲೈ ೧೯೩೫ರಂದು ಉತ್ತರ ಕನ್ನಡದ ಭಟ್ಕಳದಲ್ಲಿ ರಂಗ ರಾವ್ ಮತ್ತು ಕಾವೇರಿ ಬಾಯಿ ದಂಪತಿಯ ಮಗವಾಗಿ ಜನಿಸಿದರು. ಇವರ ತಂದೆ ರಂಗ ರಾವ್ ಅವರು ಪ್ರಖ್ಯಾತ ಹರಿಕಥಾ ವಿದ್ವಾನ್ ಆಗಿದ್ದರು ಮತ್ತು ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣಿತರು. ತಾಯಿ ಕಾವೇರಿ ಬಾಯಿ ಶಿಕ್ಷಕಿಯಾಗಿದ್ದರು. ಇವರ ಸಹೋದರ ಎಂ.ಪ್ರಭಾಕರ್ ಅವರು ಪ್ರಸಿದ್ಧ ಸಂಗೀತಗಾರ. ಮೈನಾವತಿಯವರ ಅಕ್ಕ ಪಂಢರೀಬಾಯಿಯವರು ಚಿಕ್ಕಂದಿನಿಂದಲೇ ಹರಿಕಥೆಗಳನ್ನು ಮಾಡುತ್ತಿದ್ದರು ಮತ್ತು ರಂಗಭೂಮಿಯಲ್ಲೂ ಅಭಿನಯಿಸುತ್ತಿದ್ದರು. ವಾಣಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಪಂಢರೀಬಾಯಿ ನಂತರದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿಯಾಗಿ ಅಪಾರ ಹೆಸರು ಮಾಡಿದರು. ಸಹೋದರಿ ಪಂಢರೀಬಾಯಿಯವರ ದಾರಿಯಲ್ಲಿ ನಡೆದ ಮೈನಾವತಿಯವರು ಪಂಢರೀಬಾಯಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಸತಿ ಸಕ್ಕು ಚಿತ್ರದಲ್ಲಿ ಚಿಕ್ಕ ಪಾತ್ರಕ್ಕಾಗಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು[೧][೪].
ವೃತ್ತಿ ಜೀವನ
ಬದಲಾಯಿಸಿಬೆಳ್ಳಿತೆರೆ
ಬದಲಾಯಿಸಿಸತಿ ಸಕ್ಕು ಚಿತ್ರದ ಚಿಕ್ಕ ಪಾತ್ರದಲ್ಲಿ ಚೊಕ್ಕ ಅಭಿನಯ ನೀಡಿದ ಮೈನಾವತಿ ತಮಿಳಿನ ಪೊಣ್ ವಾಯಲ್(೧೯೫೪) ಚಿತ್ರದಲ್ಲಿನ ಗಮನಾರ್ಹ ಅಭಿನಯದಿಂದ ಚಿತ್ರರಸಿಕರ ಮನಸೆಳೆದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶ ಗಳಿಸಲಿಲ್ಲ[೫]. ನಂತರದಲ್ಲಿ ಮೈನಾವತಿ ಅಭಿನಯಿಸಿದ ಚಿತ್ರ ತಮಿಳಿನ ಎನ್ ಮಗಳ್(೧೯೫೫). ಈ ಚಿತ್ರದಲ್ಲಿ ನಾಯಕಿಯಾಗಿ ಶಕ್ತ ಅಭಿನಯ ನೀಡಿದರರೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು[೬]. ಪಂಢರೀಬಾಯಿ ಅವರು ಮುಖ್ಯ ಭೂಮಿಕೆಯಲ್ಲಿದ್ದ ಕುಲ ದೈವಂ(೧೯೫೬) ಚಿತ್ರದಲ್ಲಿ ಬಾಲ್ಯದಲ್ಲೇ ಗಂಡನನ್ನು ಕಳೆದುಕೊಂಡ ಹುಡುಗಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದರು. ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾದದ್ದಲ್ಲದೇ ರಾಷ್ಟ್ರಮಟ್ಟದ ಪುರಸ್ಕಾರ ಪಡೆಯಿತು[೭].
ರಾಜ್ ಕುಮಾರ್ ಮತ್ತು ಪಂಢರೀಬಾಯಿ ಮುಖ್ಯ ಭೂಮಿಕೆಯಲ್ಲಿದ್ದ ಭಕ್ತ ವಿಜಯ(೧೯೫೬) ಮತ್ತು ಹರಿಭಕ್ತ(೧೯೫೬) ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿ ಗಮನ ಸೆಳೆದರು. ಹರಿಭಕ್ತ ಚಿತ್ರದಲ್ಲಿ ಋಣಾತ್ಮಕ ಛಾಯೆಯ ವೇಶ್ಯಯ ಪಾತ್ರದಲ್ಲಿ ಪ್ರಶಂಸನೀಯ ಭಾವಾಭಿನಯ ಮತ್ತು ನೃತ್ಯಾಭಿನಯ ನೀಡಿದ ಮೈನಾವತಿ ಮುತ್ತೈದೆ ಭಾಗ್ಯ(೧೯೫೬) ಚಿತ್ರದಲ್ಲಿ ನಟಶೇಖರ ಕಲ್ಯಾಣ್ ಕುಮಾರ್ ಅವರ ನಾಯಕಿಯಾಗಿ ನೀಡಿದ ಲವಲವಿಕೆಯ ಅಭಿನಯ ಪ್ರೇಕ್ಷಕರಿಗೆ ಹಿಡಿಸಿತ್ತು. ರಾಯರ ಸೊಸೆ(೧೯೬೭) ಚಿತ್ರದಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಮಾವನನ್ನು ತನ್ನ ಸದ್ಗುಣದಿಂದ ಗೆಲ್ಲುವ ಸೊಸೆಯ ಪಾತ್ರದಲ್ಲಿ ಮೈನಾವತಿಯವರದ್ದು ಅಪೂರ್ವ ಅಭಿನಯ. ೧೯೫೯ರಲ್ಲಿ ಬಿಡುಗಡೆಯಾದ ಅಬ್ಬಾ ಆ ಹುಡುಗಿ ಚಿತ್ರ ಮೈನಾವತಿಯವರ ವೃತ್ತಿ ಜೀವನದ ಮೈಲಿಗಲ್ಲು. ವಿಲಿಯಮ್ ಶೇಕ್ಸ್‌ಪಿಯರ್ ಅವರ ದಿ ಟೇಮಿಂಗ್ ಆಫ್ ಶ್ರೂ ನಾಟಕವನ್ನು ಆಧರಿಸಿದ ಈ ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಮನೋಜ್ಞ ಅಭಿನಯ ನೀಡಿದ ಮೈನಾವತಿಯವರು ಈ ಚಿತ್ರದಲ್ಲಿ ಪ್ಯಾಂಟು ಶರ್ಟು ಧರಿಸಿ ಗಮನ ಸೆಳೆದಿದ್ದರು[೧].
ಪ್ರಖ್ಯಾತ ಮಲಯಾಳಂ ನಟ ಪ್ರೇಮ್ ನಜೀರ್ ಅವರಿಗೆ ನಾಯಕಿಯಾಗಿ ಪುದುವಾಯಲ್(೧೯೫೭), ವಣ್ಣಕ್ಕಿಳಿ(೧೯೫೯), ಅನ್ಬುಕ್ಕೊರ್ ಅಣ್ಣಿ(೧೯೬೦) ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಮೈನಾವತಿಯವರು ಶಿವಾಜಿ ಗಣೇಶನ್ ಅವರೊಂದಿಗೆ ಬೊಮ್ಮೈ ಕಲ್ಯಾಣಂ(೧೯೫೮) ಮತ್ತು ಕುರವಂಜಿ(೧೯೬೦) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಸಮರ್ಥ ಅಭಿನಯ ನಿಡಿದ್ದರು. ಮಾಲಯಿಟ್ಟ ಮಂಗೈ(೧೯೫೮) ಚಿತ್ರದಲ್ಲಿ ಮೈನಾವತಿ ಅಭಿನಯದ ಸೆಂದಮಿಳ್ ತೇನ್ ಮೊಳಿಯಾಲ್... ಗೀತೆ ತಮಿಳಿನ ಅಮರ ಮಧುರ ಗೀತೆಗಳಲ್ಲೊಂದಾಗಿದೆ.
ರಾಜ್ ಕುಮಾರ್ ಅಭಿನಯದ ಅನ್ನಪೂರ್ಣ(೧೯೬೪) ಮತ್ತು ಸರ್ವಜ್ಞಮೂರ್ತಿ(೧೯೬೫) ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ಮೈನಾವತಿ ಮಹಾಸತಿ ಅನುಸೂಯ(೧೯೬೫) ಚಿತ್ರದಲ್ಲಿ ಪಾರ್ವತಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದರು. ಸುಬ್ಬಾಶಾಸ್ತ್ರಿ(೧೯೬೬) ಚಿತ್ರದಲ್ಲಿ ತನ್ನ ತಂದೆಗೆ ಮಂಕು ಬೂದಿ ಎರಚಿ ಆಸ್ಥಿ ಹೊಡೆದುಕೊಳ್ಳಲು ಹೊಂಚು ಹಾಕಿದ್ದ ಲಂಪಟ ಬುದ್ಧಿಯ ಸುಬ್ಬಾಶಾಸ್ತ್ರಿಯ ಅವಗುಣಗಳನ್ನು ತಂದೆ ಎದುರಿಗೇ ಟೀಕಿಸಿ ಅವನ ಕುತ್ಸಿತ ಬುದ್ಧಿಯನ್ನು ಧಿಕ್ಕರಿಸುವ ದಿಟ್ಟ ಹುಡುಗಿ ಸರಸ್ವತಿಯಾಗಿ ಅಮೋಘ ಅಭಿನಯ ನೀಡಿದ ಮೈನಾವತಿ ಪಂಢರೀಬಾಯಿ ನಿರ್ಮಾಣದ ಕುಟುಂಬ ಯೋಜನೆಯ ಮಹತ್ವ ಎತ್ತಿ ಹಿಡಿಯುವ ಕತೆಯನ್ನು ಹೊಂದಿದ್ದ ಅನುರಾಧ(೧೯೬೭) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದರು[೧].
೧೯೬೦ರ ದಶಕದ ಕೊನೆಯಲ್ಲಿ ನಾಯಕಿಯ ಪಾತ್ರಕ್ಕೆ ಅವಕಾಶಗಳು ಕಡಿಮೆಯಾದ್ದರಿಂದ ಹಾಸ್ಯ ಪಾತ್ರಗಳತ್ತ ಗಮನ ಹರಿಸಿದ ಮೈನಾವತಿಯವರು ಅಮ್ಮ(೧೯೬೮), ಗಂಡೊಂದು ಹೆಣ್ಣಾರು(೧೯೬೯), ಶ್ರೀಕೃಷ್ಣದೇವರಾಯ(೧೯೭೦) ಮತ್ತು ಅಳಿಯ ಗೆಳೆಯ(೧೯೭೧) ಚಿತ್ರಗಳಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಗೆ ಸರಿಸಾಟಿಯ ಅಭಿನಯ ನೀಡಿ ಪ್ರೇಕ್ಷಕರಿಂದ ಸೈ ಅನ್ನಿಸಿಕೊಂಡರು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ತೆನಾಲಿ ರಾಮಕೃಷ್ಣನ ಮಡದಿಯ ಪಾತ್ರಕ್ಕೆ ನವಿರು ಹಾಸ್ಯದಿಂದ ಜೀವ ತುಂಬಿದ ಪರಿ ಅಮೋಘ. ವಿವಾಹದ ನಂತರ ತಮ್ಮ ವೈಯಕ್ತಿಕ ಜೀವನಕ್ಕೆ ಮಹತ್ವ ಕೊಟ್ಟು ನಟನೆಯಿಂದ ಸುಧೀರ್ಘ ವಿರಾಮ ತೆಗೆದುಕೊಂಡ ಮೈನಾವತಿ ಮುಗಿಯದ ಕಥೆ(೧೯೭೬) ಮತ್ತು ಭಾಗ್ಯವಂತರು(೧೯೭೭) ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರೂ ಪೂರ್ಣ ಪ್ರಮಾಣದಲ್ಲಿ ಪೋಷಕ ನಟಿಯಾಗಿ ಚಿತ್ರರಂಗಕ್ಕೆ ಮರಳಿದ್ದು ೧೯೯೦ರ ದಶಕದಲ್ಲಿ. ಒಬ್ಬರಿಗಿಂತ ಒಬ್ಬರು(೧೯೯೨), ಚಿರಬಾಂಧವ್ಯ(೧೯೯೩), ಭಗವಾನ್ ಶ್ರೀ ಸಾಯಿಬಾಬ(೧೯೯೩), ಮಣಿಕಂಠನ ಮಹಿಮೆ(೧೯೯೩) ಮುಂತಾದ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಉತ್ತಮ ಅಭಿನಯ ನೀಡಿದ್ದರು[೧].
ಅಪ್ಪಟ ಭಾರತೀಯ ನಾರಿಯ ಪಾತ್ರಗಳ ಮೂಲಕ ಚಿರಸ್ಥಾಯಿಯಾಗಿರುವ ಸಹೋದರಿ ಪಂಢರೀಬಾಯಿಯವರ ಜೊತೆಗೆ ದಿಟ್ಟ ತುಂಟತನದ ಪಾತ್ರಗಳಲ್ಲಿ ಅಭಿನಯಿಸುತ್ತ ಚಿತ್ರರಸಿಕರ ಮನದಲ್ಲಿ ಗೌರವಾನ್ವಿತ ಸ್ಥಾನವನ್ನು ಸಂಪಾದಿಸಿದ ಮೈನಾವತಿ ಕನ್ನಡ ಚಿತ್ರರಂಗದ ಸುವರ್ಣಯುಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ದಕ್ಷಿಣ ಭಾರತದ ಜನಪ್ರಿಯ ನಟರಾದ ರಾಜ್ ಕುಮಾರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಕಲ್ಯಾಣ್ ಕುಮಾರ್, ಎಸ್.ಎಸ್.ರಾಜೇಂದ್ರನ್ ಮತ್ತು ರಾಜಾಶಂಕರ್ ಮುಂತಾದವರೊಂದಿಗೆ ಅಭಿನಯಿಸಿದ ಹಿರಿಮೆಗೆ ಪಾತ್ರರಾದ ಮೈನಾವತಿ ಹೆಚ್.ಎಲ್.ಎನ್.ಸಿಂಹ, ಬಿ.ವಿಠ್ಠಲಾಚಾರ್ಯ, ಟಿ.ವಿ.ಸಿಂಗ್ ಠಾಕೂರ್, ಕೃಷ್ಣನ್-ಪಂಜು ಮತ್ತು ಬಿ.ಆರ್.ಪಂತುಲು ಮುಂತಾದ ಜನಪ್ರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ[೮].
ಕಿರುತೆರೆ
ಬದಲಾಯಿಸಿ೧೯೯೦ರ ದಶಕದ ಕೊನೆಯಲ್ಲಿ ಕಿರುತೆರೆ ಪ್ರವೇಶಿಸಿದ ಮೈನಾವತಿಯವರು ಅಮ್ಮ ಮತ್ತು ಮನೆತನ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ವೈಯಕ್ತಿಕ ಜೀವನ
ಬದಲಾಯಿಸಿ೧೯೬೦ರ ದಶಕದ ಕೊನೆಯಲ್ಲಿ ಡಾ.ರಾಧಾಕೃಷ್ಣ ಅವರನ್ನು ಮದುವೆಯಾದ ಮೈನಾವತಿಯವರು ತಮ್ಮ ಕುಟುಂಬಕ್ಕೆ ಒತ್ತು ಕೊಟ್ಟು ನಟನೆಯಿಂದ ಧೀರ್ಘ ವಿರಾಮ ತೆಗೆದುಕೊಂಡರು. ಮೈನಾವತಿಯವರಿಗೆ ಶ್ಯಾಮಸುಂದರ್ ಮತ್ತು ಗುರುದತ್ ಎಂಬ ಇಬ್ಬರು ಪುತ್ರರು ಮತ್ತು ಗಾಯತ್ರಿ ಎಂಬ ಪುತ್ರಿ ಸೇರಿ ಮೂರು ಮಕ್ಕಳು. ಮೈನಾವತಿಯವರ ಮಗ ಗುರುದತ್ ಕಿರುತೆರೆ ಧಾರಾವಾಹಿಗಳ ನಿರ್ದೇಶಕ ಮತ್ತು ನಿರ್ಮಾಪಕ. ಮೈನಾವತಿಯವರು ಕೃಷ್ಣ ಮತ್ತು ದುರ್ಗಾ ದೇವಿಯ ಭಕ್ತೆಯಾಗಿದ್ದರು. ತಮ್ಮ ಪತಿ ರಾಧಾಕೃಷ್ಣ ಮತ್ತು ಮಗ ಶ್ಯಾಮಸುಂದರ್ ಅವರ ಅಕಾಲ ಮರಣದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದರು.
ನಿಧನ
ಬದಲಾಯಿಸಿಮೈನಾವತಿಯವರು ನವೆಂಬರ್ ೧೦, ೨೦೧೨ ರಂದು ತಮ್ಮ ೭೮ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಬೆಂಗಳೂರಿನ ಬಿ.ಜಿ.ಎಸ್.ಗ್ಲೋಬಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೈನಾವತಿ ಅಭಿನಯದ ಚಿತ್ರಗಳು
ಬದಲಾಯಿಸಿಕನ್ನಡ
ಬದಲಾಯಿಸಿತಮಿಳು
ಬದಲಾಯಿಸಿವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೫೪ | ಪೊಣ್ ವಾಯಲ್ | ಎ.ಟಿ.ಕೃಷ್ಣಸ್ವಾಮಿ | ಟಿ.ಆರ್.ರಾಮಚಂದ್ರನ್, ಅಂಜಲಿದೇವಿ | |
೧೯೫೫ | ಎನ್ ಮಗಳ್ | ಕೆ.ವಿ.ಆರ್.ಆಚಾರ್ಯ | ರಂಜನ್, ಎಸ್.ವರಲಕ್ಷ್ಮಿ, ಎಂ.ಎನ್.ನಂಬಿಯಾರ್ | |
೧೯೫೬ | ಕುಲ ದೈವಂ | ಕೃಷ್ಣನ್-ಪಂಜು | ಎಸ್.ವಿ.ಸಹಸ್ರನಾಮಮ್, ಪಂಢರೀಬಾಯಿ, ಎಸ್.ಎಸ್.ರಾಜೇಂದ್ರನ್ | |
೧೯೫೬ | ನಲ್ಲ ವೀಡು | ಜೆ.ಸಿನ್ಹಾ | ಶಿವಾಜಿ ಗಣೇಶನ್, ಪಂಢರೀಬಾಯಿ, ಎಂ.ಎನ್.ರಾಜಮ್ | |
೧೯೫೭ | ಅರವಲ್ಲಿ | ಅಲಂಗಾರವಲ್ಲಿ | ಕೃಷ್ಣನ್-ಪಂಜು | ಜಿ.ವರಲಕ್ಷ್ಮಿ, ಎಸ್.ಜಿ.ಈಶ್ವರ್ |
೧೯೫೭ | ಪುದುವಾಯಲ್ | ಕೃಷ್ಣನ್-ಪಂಜು | ಪ್ರೇಮ್ ನಜೀರ್, ಎಸ್.ಎಸ್.ರಾಜೇಂದ್ರನ್ | |
೧೯೫೮ | ಅನ್ಬು ಎಂಗೆ | ಡಿ.ಯೋಗಾನಂದ್ | ಪಂಢರೀಬಾಯಿ, ಎಸ್.ಎಸ್.ರಾಜೇಂದ್ರನ್, ಕೆ.ಬಾಲಾಜಿ | |
೧೯೫೮ | ನಾನ್ ವಾಲಾರ್ಥ ತಂಗೈ | ನಾರಾಯಣ ಮೂರ್ತಿ | ಪ್ರೇಮ್ ನಜೀರ್, ಪಂಢರೀಬಾಯಿ | |
೧೯೫೮ | ಬೊಮ್ಮೈ ಕಲ್ಯಾಣಂ | ಆರ್.ಎಂ.ಕೃಷ್ಣಸ್ವಾಮಿ | ಶಿವಾಜಿ ಗಣೇಶನ್, ಜಮುನಾ | |
೧೯೫೮ | ಮಾಲಯಿಟ್ಟ ಮಂಗೈ | ಜಿ.ಆರ್.ನಾಥನ್ | ಟಿ.ಆರ್.ಮಹಾಲಿಂಗಂ, ಪಂಢರೀಬಾಯಿ | |
೧೯೫೯ | ಎಂಗಳ್ ಕುಲ ದೇವಿ | ಎ.ಸುಬ್ಬರಾವ್ | ಕೆ.ಬಾಲಾಜಿ, ಪಂಢರೀಬಾಯಿ | |
೧೯೫೯ | ಕಣ್ ತಿರಂದದು | ಕೆ.ವಿ.ಶ್ರೀನಿವಾಸನ್ | ರಾಮನಾಥನ್ | |
೧೯೫೯ | ನಾಲು ವೆಳಿ ನೀಲಂ | ಮುಕ್ತ ವಿ.ಶ್ರೀನಿವಾಸನ್ | ಎಸ್.ವಿ.ಸಹಸ್ರನಾಮಮ್, ಪಂಢರೀಬಾಯಿ, ದೇವಿಕಾ. ಮುತ್ತುರಾಮನ್ | |
೧೯೫೯ | ವಣ್ಣಕ್ಕಿಳಿ | ಟಿ.ಆರ್.ರಘುನಾಥ್ | ಪ್ರೇಮ್ ನಜೀರ್ | |
೧೯೫೯ | ಸೊಲ್ಲು ತಂಬಿ ಸೊಲ್ಲು | ಟಿ.ವಿ.ಸುಂದರಂ | ಎಸ್.ಎಸ್.ರಾಜೇಂದ್ರನ್ | |
೧೯೬೦ | ಅನ್ಬುಕ್ಕೊರ್ ಅಣ್ಣಿ | ಟಿ.ಆರ್.ರಘುನಾಥ್ | ಪಂಢರೀಬಾಯಿ, ಪ್ರೇಮ್ ನಜೀರ್ | |
೧೯೬೦ | ಕುರವಂಜಿ | ಎ.ಕಾಸಿಲಿಂಗಂ | ಶಿವಾಜಿ ಗಣೇಶನ್, ಸಾವಿತ್ರಿ | |
೧೯೬೦ | ಮಹಾಲಕ್ಷ್ಮಿ | ಎ.ಎಲ್.ನಾರಾಯಣನ್ | ಪಂಢರೀಬಾಯಿ, ಕೆ.ಬಾಲಾಜಿ, ಮುತ್ತುರಾಮನ್ | |
೧೯೬೧ | ಮಲ್ಲಿಯುಂ ಮಂಗಲಂ | ಮಲ್ಲಿಯಂ ರಾಜಗೋಪಾಲ್ | ಎಸ್.ವಿ.ಸಹಸ್ರನಾಮಮ್, ಪಂಢರೀಬಾಯಿ | |
೧೯೫೯ | ವಳಿಕಾಟ್ಟಿ | ಪ್ರೇಮ್ ನಜೀರ್ |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ೧.೩ ೧.೪ "ಹಿರಿಯ ನಟಿ ಮೈನಾವತಿ ಇನ್ನಿಲ್ಲ". ಪ್ರಜಾವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಬೆಳ್ಳಿತೆರೆಯ ಹಿರಿಯ ಅಭಿನೇತ್ರಿ ಮೈನಾವತಿ ಇನ್ನಿಲ್ಲ". ಫಿಲ್ಮಿ ಬೀಟ್.
- ↑ "ಹಿರಿಯ ನಟಿ ಮೈನಾವತಿ ಇನ್ನಿಲ್ಲ". ಜಸ್ಟ್ ಕನ್ನಡ. Archived from the original on 2015-03-22. Retrieved 2016-10-02.
- ↑ "ಎಂ.ಪ್ರಭಾಕರ್". ಸೊಬಗು.
- ↑ "ಪೊಣ್ ವಾಯಲ್ ೧೯೫೪". ದಿ ಹಿಂದು.
- ↑ "ಎನ್ ಮಗಳ್ ೧೯೫೫". ದಿ ಹಿಂದು.
- ↑ "Blast from the past: Kula Deivam 1956". ದಿ ಹಿಂದು.
- ↑ "ಪಂಡರೀಬಾಯಿ ಸೋದರಿ, ನಟಿ ಮೈನಾವತಿ ನಿಧನ". ವಿಜಯ ಕರ್ನಾಟಕ.
- ↑ "ಮೈನಾವತಿ ಅಭಿನಯದ ಚಿತ್ರಗಳು". ಚಿಲೋಕ.