ಘಟ್ಟಗಳು ಎಂದರೆ ದಖನ್ ಪ್ರಸ್ಥಭೂಮಿಯ ಪಶ್ಚಿಮ ಮತ್ತು ಪೂರ್ವ ಅಂಚುಗಳಲ್ಲಿರುವ ಪರ್ವತ ಶ್ರೇಣಿಗಳು. ಇವಕ್ಕೆ ಅನುಕ್ರಮವಾಗಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳು ಎಂಬ ಹೆಸರುಗಳಿವೆ.[][] ನದಿ, ಕಾಲುವೆ, ಕೆರೆಗಳ ಅಂಚುಗಳಲ್ಲಿ, ನೀರಿಗೆ ಇಳಿದು ಸ್ನಾನ ಮಾಡುವುದೇ ಮುಂತಾದ ಉದ್ದೇಶಗಳಿಗಾಗಿ, ಕಟ್ಟಲಾದ ಸೋಪಾನ, ಜಗಲಿ ಮುಂತಾದವನ್ನೂ ಘಟ್ಟಗಳೆನ್ನುತ್ತಾರೆ.

ಪಶ್ಚಿಮ ಘಟ್ಟಗಳು

ಬದಲಾಯಿಸಿ

ತಪತೀ ನದಿಯ ದಕ್ಷಿಣದಲ್ಲಿ ಆರಂಭವಾಗುವ ಘಟ್ಟಗಳು ಥಟ್ಟನೆ 3,000'-4,000' ಏರುತ್ತವೆ. ಕೆಲವಡೆಗಳಲ್ಲಿ 5,000` ಎತ್ತರ ನಿಲುಕುವುದೂ ಉಂಟು. ದಖನ್ ಲಾವಾದಿಂದ ಆವೃತ್ತವಾಗಿರುವ ಈ ಭಾಗ ಸಮುದ್ರದ ಕಡೆಯಲ್ಲಿ ಗೋಡೆಯಂತೆ ಕಡಿದು, ಅಲ್ಲಲ್ಲಿ ಬಲು ಆಳವಾದ ಕಂದರಗಳಿವೆ. ಗೋವದಿಂದ ದಕ್ಷಿಣಕ್ಕೆ ನೈಸ್ ಶಿಲೆ ಮತ್ತು ಗ್ರಾನೈಟುಗಳಿಂದ ಕೂಡಿರುವ ಘಟ್ಟಗಳು ಮುಂದೆ 200 ಮೈ. ದೂರದಲ್ಲಿ 3,000' ಗಿಂತ ಕಡಿಮೆ ಎತ್ತರವಾಗಿವೆ. ಈ ಭಾಗದಲ್ಲಿ ಕರಾವಳಿಯ ಹಲವು ನದಿಗಳು ಘಟ್ಟಗಳ ಬೆನ್ನೇಣುಗಳನ್ನು ಕತ್ತರಿಸಿ ಆಳವಾದ ಪಾತ್ರ ಸೃಷ್ಟಿಸಿಕೊಂಡು, ದಖನ್ ಪ್ರಸ್ಥಭೂಮಿಯ ನದಿಗಳ ತಲೆಯ ನೀರನ್ನೂ ಸಂಗ್ರಹಿಸಿಕೊಳ್ಳುತ್ತವೆ. ಮುಂದೆ ಘಟ್ಟಗಳು ಎತ್ತರವಾಗುತ್ತ ಸಾಗಿ ನೀಲಗಿರಿ ವಿಭಾಗದಲ್ಲಿ ಸೇರಿಕೊಳ್ಳುತ್ತವೆ. ಅತ್ಯಂತ ಎತ್ತರದ ಶಿಖರವಾದ ದೊಡ್ಡ ಬೆಟ್ಟ (8,700') ಈ ಭಾಗದಲ್ಲಿದೆ. ಇಲ್ಲಿಂದ ದಕ್ಷಿಣಕ್ಕೆ ಪಾಲಕ್ಕಾಡ್ ಬಳಿ ಎತ್ತರ ಕಡಿಮೆ. ಈ ಭಾಗವನ್ನು ಪಶ್ಚಿಮ ಘಟ್ಟಗಳ ದಕ್ಷಿಣ ತುದಿ ಎಂದು ಪರಿಗಣಿಸಲಾಗಿದೆಯಾದರೂ ಇಲ್ಲಿಂದ ದಕ್ಷಿಣಕ್ಕೂ ಅಣೈಮಲೈ, ಪಳನಿ ಮತ್ತು ಏಲಕ್ಕಿ ಬೆಟ್ಟಗಳಲ್ಲಿ ಇವು ಮುಂದುವರಿದು ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿ ಭೂಶಿರದವರೆಗೂ ಸಾಗುತ್ತವೆ. ಅಣೈಮಲೈಯಲ್ಲಿ ಅಣೈಮುಡಿಯ ಎತ್ತರ 8,840'. ತಪತಿಯಿಂದ ಕನ್ಯಾಕುಮಾರಿಯವರೆಗೆ 880 ಮೈ. ದೂರ ಹಬ್ಬಿರುವ ಶ್ರೇಣಿಗಳನ್ನು ಪಾಲಕ್ಕಾಡ್ ಕಣಿವೆಯ ಮೂಲಕ ಮಾತ್ರ ಸುಲಭವಾಗಿ ದಾಟಬಹುದು.

ಪೂರ್ವ ಘಟ್ಟಗಳು

ಬದಲಾಯಿಸಿ

ಒರಿಸ್ಸಾದ ಮಹಾನದಿಯಿಂದ ಕನ್ಯಾಕುಮಾರಿವರೆಗೆ, ಪೂರ್ವದಲ್ಲಿ ಸುಮಾರು 850 ಮೈ. ಹಬ್ಬಿರುವ ಬೆಟ್ಟಗಳನ್ನು ಪೂರ್ವಘಟ್ಟಗಳೆನ್ನುತ್ತಾರಾದರೂ ಪಶ್ಚಿಮಘಟ್ಟಗಳೊಂದಿಗೆ ಹೋಲಿಸಿದರೆ ಇವುಗಳಿಗೆ ಮಹತ್ವವಿಲ್ಲ. ಇವು ಪಶ್ಚಿಮಘಟ್ಟಗಳಷ್ಟು ಎತ್ತರವಾಗಿಯಾಗಲಿ ಅವಿಚ್ಛಿನ್ನವಾಗಿಯಾಗಲಿ ಇಲ್ಲ. ಗೋದಾವರಿ ಮತ್ತು ಕೃಷ್ಣಾ ನದಿಗಳ ನಡುವೆ ಸುಮಾರು 100 ಮೈ. ಗಳಷ್ಟು ದೂರ ಇವು ಅದೃಶ್ಯವಾಗುತ್ತವೆ. ಒರಿಸ್ಸದಲ್ಲಿ ಮಾತ್ರ ಕೆಲವೆಡೆ ಇವುಗಳು ಸು. 3,000' ಗೂ ಮಿಗಿಲಾಗಿದೆ. ಅಲ್ಲಿ ಮಾತ್ರ ಈ ಪರ್ವತಪಂಕ್ತಿ ಬಹು ದಟ್ಟವಾದ ಅರಣ್ಯಗಳಿಂದ ತುಂಬಿದೆ. ಪೂರ್ವಘಟ್ಟದ ವಿವಿಧ ಭಾಗಗಳಿಗೆ ಸ್ಥಳೀಯವಾಗಿ ಬೇರೆ ಬೇರೆಡೆಗಳಲ್ಲಿ ಪ್ರತ್ಯೇಕ ಹೆಸರುಗಳೇ ಇವೆ. ಪಾಲಾರ್-ಪೆನ್ನಾರ್ ನದಿಯ ಎದುರಿಗಿನ ಶ್ರೇಣಿಗಳನ್ನು ಮಾತ್ರ ಪೂರ್ವ ಘಟ್ಟಗಳೆಂದು ಕರೆಯಬಹುದು. ಅವು ಮಾತ್ರ ಪಶ್ಚಿಮ ಘಟ್ಟಗಳೊಂದಿಗೆ ಸಾದೃಶ್ಯಹೊಂದಿವೆ. ಪಶ್ಚಿಮಘಟ್ಟದಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ, ಇಳಿಜಾರಾದ ದಕ್ಷಿಣದ ಪ್ರಸ್ಥಭೂಮಿಯಲ್ಲಿ, ಹರಿದು ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳೆಲ್ಲ ಈ ಘಟ್ಟಗಳ ನಡುವೆ ಸಾಗುತ್ತವೆ. ದಕ್ಷಿಣದ ಕೆಲವು ಭಾಗಗಳಲ್ಲಿ ಅಧಿಕವಾಗಿ ಕಬ್ಬಿಣದ ಅದುರಿನ ಮತ್ತು ಅಲ್ಪ ಸ್ವಲ್ಪ ತಾಮ್ರ ಮತ್ತು ಸೀಸಗಳ ನಿಕ್ಷೇಪಗಳುಂಟು. ಕೆಲವಡೆ ವಜ್ರವೂ ಸಿಕ್ಕಿವೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಧಿಕ (ಸುಮಾರು 100"-300"). ಪೂರ್ವ ಘಟ್ಟಗಳಲ್ಲಿ ಮಳೆ ಬಹು ಅಲ್ಪ. ಪಶ್ಚಿಮ ಘಟ್ಟಗಳಲ್ಲಿ ದಟ್ಟವಾದ, ಸದಾ ಹಸಿರಾದ ಅರಣ್ಯಗಳಿವೆ; ಮತ್ತು ಅನೇಕ ಜಲಪಾತಗಳೂ ಆಕರ್ಷಕ ದೃಶ್ಯಗಳೂ ಇವೆ. ಆದರೆ ಪೂರ್ವ ಘಟ್ಟಗಳಲ್ಲಿ ಕೆಲವೆಡೆ ಮಾತ್ರ ದಟ್ಟ ಅರಣ್ಯಗಳುಂಟು.

ಉಲ್ಲೇಖಗಳು

ಬದಲಾಯಿಸಿ
  1. "Western Ghats". Archived from the original on 2012-10-11. Retrieved 2010-01-28.
  2. "Eastern Ghats". Archived from the original on 2010-01-22. Retrieved 2010-01-28.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಘಟ್ಟಗಳು&oldid=1261442" ಇಂದ ಪಡೆಯಲ್ಪಟ್ಟಿದೆ