ಅಳಿವಿನ ಅಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಎಂದು ಕರೆಸಿಕೊಳ್ಳುವ ಈ Indian giant Squirrel ಅನ್ನು ಕನ್ನಡಿಗರು ಕೆಂಪು ಅಳಿಲು, ಕೆಂಜಳಿಲು, ಕೆಂದಳಿಲು ಹಾಗೂ ನೀಳ ಬಾಲದ ಬಣ್ಣದ ಅಳಿಲು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಗಂಡು ಅಳಿಲನ್ನು ಬಕ್ ಎಂದು ಹೆಣ್ಣು ಅಳಿಲನ್ನು ಡೊ ಎಂದು ಕರೆಯುತ್ತಾರೆ. ಇದರ ಮರಿಗಳನ್ನು ಪಪ್,ಕಿಟ್,ಕಿಟನ್ ಎಂದು ಕರೆಯುತ್ತಾರೆ. ಪರಿಸರ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಇವುಗಳ ಬಣ್ಣದಲ್ಲಿ ವ್ಯತ್ಯಾಸವಿದೆ. ಕೆಲವು ಪ್ರದೇಶಗಳಲ್ಲಿ ಅತಿಕೆಂಪು ಮತ್ತು ಕಂದು ಬಣ್ಣದ ಅಳಿಲು ಕಂಡು ಬಂದರೆ , ಒಣ ಹವೆ ಇರುವಂತಹ ಅರಣ್ಯಗಳಲ್ಲಿ ತಿಳಿಗೆಂಪು ಹಾಗೂ ಕಂದುಬಿಳುಪಿನ ಬಣ್ಣದ ಅಳಿಲುಗಳಿವೆ.

ಕೆಂಪು ಅಳಿಲು
ಕೆಂಪು ಅಳಿಲು
Egg fossil classification
Kingdom:
Animalia
Phylum:
Chordata
Suborder:

ವಾಸಸ್ಥಾನಸಂಪಾದಿಸಿ

ತನ್ನ ವಿಶಿಷ್ಟ ಬಣ್ಣ, ಗಾತ್ರ ಹಾಗು ಚಟುವಟಿಕೆಗಳಿಂದ ಕೂಡಿದ ಈ ವಿಶೇಷ ಅಳಿಲು ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣಸಿಗುವಂತದ್ದು.ದಟ್ಟ ಮರಗಳಿಂದ ಕೂಡಿದ ಅತಿ ಎತ್ತರದ ಮರಗಳಿರುವ ಕಾಡು ಪ್ರದೇಶ ಇದರ ನೆಚ್ಚಿನ ವಾಸಸ್ಥಾನ. ಭಾರತದಲ್ಲಿ ಮಧ್ಯಪ್ರದೇಶ,ಮಹಾರಾಷ್ಟ್ರದಲ್ಲಿ ಹರಡಿರುವ ಸತ್ಪುರ ಪವ೯ತ ಕಾಡುಗಳಲ್ಲಿ,ತಮಿಳುನಾಡಿನ ಮಧುಮಲೈ ಅರಣ್ಯ, ಆಂಧ್ರಪ್ರದೇಶದ ತಿರುಪತಿ ಪವ೯ತ ಭಾಗದಲ್ಲಿಇವುಗಳ ಸಂತತಿ ಹೆಚ್ಚಾಗಿದೆ. ಕನಾ೯ಟಕದಲ್ಲಿ ಬಿಳಿಗಿರಿರಂಗನ ಬೆಟ್ಟ, ಮುತ್ತೋಡಿ ಅರಣ್ಯ ಪ್ರದೇಶ,ಬಿಸಿಲೆ ಅರಣ್ಯ ಭಾಗ, ಲಿಂಗನಮಕ್ಕಿ ಹಿನ್ನೀರಿನ ಅರಣ್ಯ ಪ್ರದೇಶ,ಭದ್ರಾ ಅಭಯಾರಣ್ಯ, ನಾಗರಹೊಳೆ ಹೆಚ್ಚಾಗಿ ಪಶ್ಚಿಮಘಟ್ಟಗಳ ಸಹ್ಯಾದ್ರಿ ಕಾಡುಗಳಲ್ಲಿ ಕಾಣಸಿಗುತ್ತವೆ.

ನೋಡಲು ಹೇಗಿದೆಸಂಪಾದಿಸಿ

ಕಂದು, ಕೆಂಪು ,ಕಪ್ಪು ಬಣ್ಣಗಳಿಂದ ಕೂಡಿದ, ಮಿನುಗು ಕಣ್ಣುಗಳು,ನುಣುಪು ತುಪ್ಪಳದ ,ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದನೆಯ ಬಾಲವುಳ್ಳ ಈ ಅಳಿಲು ನೋಡಲು ಬಹಳ ಆಕರ್ಷಣೀಯವಾಗಿದೆ. ಇವುಗಳ ಎದೆ, ಹೊಟ್ಟೆಯ ಭಾಗ,ಮುಂಗಾಲುಗಳು ಮತ್ತು ಹಿಂಗಾಲುಗಳ ಒಳಭಾಗ ತಿಳಿ ಕಂದು ಬಣ್ಣದಲ್ಲಿದ್ದರೆ ಮೂತಿ ಗಾಢ ಕಂದು ಬಣ್ಣದಲ್ಲಿರುತ್ತದೆ. ಮೂತಿಯ ಮೇಲೆ ಅಲ್ಲಲ್ಲಿ ಕೆಂಪು ಮತ್ತು ಕಂದು ಬಣ್ಣದ ಕೂದಲು ಬೆಳೆದಿರುತ್ತವೆ.ಮುಂಗಾಲುಗಳ ಮೇಲ್ಭಾಗ ಹಾಗೂ ಬೆನ್ನು ಕಪ್ಪು ಬಣ್ಣದಲ್ಲಿದ್ದರೆ,ಸೊಂಟ ಮತ್ತು ಬೆನ್ನಿನ ಮಧ್ಯಭಾಗ ಕೆಂಪು ಬಣ್ಣದಲ್ಲಿರುತ್ತದೆ.ಬೆನ್ನಿನ ಕೆಳಭಾಗ, ಹಿಂಗಾಲುಗಳು ಮತ್ತು ಬಾಲದ ಆರಂಭ ಕಪ್ಪು ಬಣ್ಣದಲ್ಲಿರುತ್ತದೆ.ಬಾಲದ ತುದಿ ಭಾಗ ಕಂದು ಬಣ್ಣದಲ್ಲಿರುತ್ತದೆ.ಕಾಲುಗಳಲ್ಲಿ ನಾಲ್ಕು ಪುಟ್ಟ ಬೆರಳುಗಳಿದ್ದು, ನೀಳವಾದ ಉಗುರುಗಳು ಕಪ್ಪು ಬಣ್ಣದಲ್ಲಿರುತ್ತವೆ.ಕಣ್ಣುಗಳು ದೊಡ್ಡದಾಗಿದ್ದು ಕಪ್ಪು ಬಣ್ಣದಲ್ಲಿರುತ್ತವೆ.ತಲೆ ಮತ್ತು ಶರೀರ ೩೫ ರಿಂದ ೪೫ ಸೆ.ಮೀ ಇದ್ದರೆ ಬಾಲ ಮಾತ್ರ ಎರಡು ಅಡಿಯಷ್ಟು ಉದ್ದವಿರುತ್ತದೆ.ಸುಮಾರು ಮೂರರಿಂದ ನಾಲ್ಕು ಕೆ.ಜಿ.ತೂಕವಿರುವ ಈ ಮಲಬಾರ್ ಅಳಿಲುಗಳಿಗೆ ಹಿಂಭಾಗದಲ್ಲಿರುವ ಕಾಲುಗಳು ಮುಂಭಾಗದಲ್ಲಿರುವ ಕಾಲುಗಳಿಗಿಂತ ಉದ್ದ ಇರುತ್ತವೆ.[೧]

ವತ‍೯ನೆ ಮತ್ತು ಜೀವನ ಕ್ರಮಸಂಪಾದಿಸಿ

ಕೆಂದಳಿಲುಗಳ ಕೂಗು ಕಾಡನ್ನು ನಡುಗಿಸುವಂತೆ ಇರುತ್ತದೆ. ಸದಾ ಒಂಟಿಯಾಗಿರಲು ಇಷ್ಟಪಡುವ ಇದು ಅಪರೂಪಕೊಮ್ಮೆ ಅಥವಾ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಸಂಗಾತಿಯೊಂದಿಗೆ ಸುತ್ತುತ್ತದೆ.ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿರುತ್ತದೆ.ತಾಪಮಾನ ಹೆಚ್ಚಾದ ಅವಧಿಯಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ವಿರಮಿಸುತ್ತದೆ. ಚುರುಕು ಬುದ್ಧಿಯ ಪ್ರಾಣಿಯಾಗಿದ್ದು, ಆಹಾರಕ್ಕಾಗಿ ಇತರೆ ಸಸ್ಯಹಾರಿ ಪ್ರಾಣಿಗಳೊಂದಿಗೆ ಜಗಳ ಕೂಡ ಆಡುತ್ತದೆ.ಸದಾ ಮರದ ರೆಂಬೆಗಳ ಮೇಲೆ ಅಲೆಯುತ್ತಿರುತ್ತದೆ,ನೀರು ಕುಡಿಯಬೇಕು ಎನಿಸಿದಾಗ ಮಾತ್ರ ನೆಲದ ಮೇಲೆ ಸಂಚರಿಸುತ್ತದೆ.ವಿಶಿಷ್ಟ ಶಬ್ದಗಳು ಹಾಗೂ ದೇಹದ ಭಂಗಿಗಳ ಮೂಲಕ ಸಂಗಾತಿಯೊಂದಿಗೆ ಸಂವಹನ ನಡೆಸುತ್ತದೆ. ಪರಭಕ್ಷ ಪ್ರಾಣಿಗಳು ಎದುರಾದಾಗ ಒಂದಿಂಚೂ ಅಲುಗಾಡದಂತೆ ಸ್ತಬ್ದವಾಗುತ್ತದೆ.ನೆಲದ ಮೇಲೆ ಸಂಚರಿಸುವಾಗ ಅಪಾಯ ಎದುರಾದರೆ ಕ್ಷಣಾಧ೯ದಲ್ಲಿ ಮರ ಏರಿ ತಪ್ಪಿಸಿಕೊಳ್ಳುತ್ತದೆ. ಮರಗಳ ಮೇಲೆ ಅಪಾಯ ಎದುರಾದರೆ ಮರದ ಕಾಂಡವನ್ನು ಬಿಡಿಸಲಾಗದಂತೆ ಗಟ್ಟಿಯಾಗಿ ಬಿಗಿದಪ್ಪಿಕೊಳ್ಳುತ್ತದೆ.ಕೆಲವೊಮ್ಮೆ ಅಂಕುಡೊಂಕಾಗಿ ಓಡುತ್ತಾ ಇತರ ಪ್ರಾಣಿಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. ತೆಂಗು ಕಾಯಿಯಾಗುವುದಕ್ಕೆ ಬಿಡದೆ ಕೃಷಿಕರಿಗೆ ಈ ಅಳಿಲುಗಳು ಕಾಟ ಕೊಡುತ್ತವೆ.ಇದಕ್ಕೆ ಶಿವಮೊಗ್ಗ ಭಾಗದಲ್ಲಿ ಕ್ಯಾಸಾಳ ಎನ್ನುತ್ತಾರೆ.

ಆಹಾರಸಂಪಾದಿಸಿ

ಕಾಡಿನ ಮರಗಳ ಹಣ್ಣುಗಳು,ಎಲೆಗಳು,ಎಲೆಗಳ ಚಿಗುರು,ಮೊಗ್ಗು,ಹೂವು ಹಾಗೂ ನಾಯಿಕೊಡೆಗಳೇ ಇವುಗಳ ಪ್ರಮುಖ ಆಹಾರ. ಆದರೂ ಮರದ ಹಣ್ಣುಗಳನ್ನು ಅತಿಯಾಗಿ ತಿನ್ನುತ್ತವೆ.ಕೆಲವೊಮ್ಮೆ ಪಕ್ಷಿಗಳ ಮೊಟ್ಟೆಗಳನ್ನು, ಕೀಟಗಳನ್ನು ತಿನ್ನುತ್ತವೆ.

ಸಂತಾನೋತ್ಪತ್ತಿಸಂಪಾದಿಸಿ

ಎತ್ತರವಾದ ಮರಗಳ ಮೇಲೆ ಕವಲುಗಳ ನಡುವೆ ಪೊಟರೆ ಮಾಡಿಕೊಂಡು ಮರಿ ಹಾಕುತ್ತದೆ.ಕೆಲವೊಮ್ಮೆ ಮರದ ಕೊಂಬೆಗಳಲ್ಲಿ ಮರದ ಎಲೆಗಳು ಹಾಗೂ ತೊಗಟೆಗಳನ್ನು ಬಳಸಿ ಗೂಡು ಕಟ್ಟುತ್ತದೆ. ಈ ಅಳಿಲು ಮೂರರಿಂದ ಆರು ತಿಂಗಳವರೆಗೆ ವಷ೯ಕ್ಕೆ ಎರಡು ಮೂರು ಬಾರಿ ಮಾಚ್೯, ಏಪ್ರಿಲ್, ಸೆಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.ಸಾಮಾನ್ಯವಾಗಿ ಒಂಟಿಯಾಗಿ ಅಲೆಯುವ ಈ ಅಳಿಲು ಒಂದಕ್ಕಿಂತ ಹೆಚ್ಚು ಗೂಡುಗಳನ್ನುಕಟ್ಟುತ್ತದೆ.ಒಂದು ಗೂಡಿನಲ್ಲಿ ತನ್ನ ಮರಿಗಳ ಆರೈಕೆ ಮಾಡಿದರೆ ಉಳಿದ ಗೂಡುಗಳಲ್ಲಿ ನಿದ್ರಿಸುತ್ತದೆ. ಪ್ರತಿಬಾರಿ ಗೂಡು ಕಟ್ಟುವಾಗಲೂ ಕಿಲೋ ಮೀಟರ್ ಗಟ್ಟಲೆ ಅಂತರ ಕಾಯ್ದುಕೊಳ್ಳುತ್ತದೆ. ಇವುಗಳು ಗುಂಪಾಗಿ ಕಾಣಿಸಿಕೊಳ್ಳುವುದು ಬಹಳ ವಿರಳ.[೨]

ವಿಶೇಷ ಸಂಗತಿಗಳುಸಂಪಾದಿಸಿ

ಒಂದು ಮರದಿಂದ ಮತ್ತೊಂದು ಮರಕ್ಕೆ ಸುಮಾರು ಇಪ್ಪತ್ತು ಅಡಿಗಳಷ್ಟು ದೂರದವರೆಗೆ ಜಿಗಿಯುವ ಸಾಮರ್ಥ್ಯವಿರುವ ವಿಶೇಷವಾದ ಅಳಿಲಿದು.ಮರದಿಂದ ಮರಕ್ಕೆ ವೇಗವಾಗಿ ಸಂಚರಿಸುವಾಗ ದೇಹದ ಸಮತೋಲನ ಕಾಪಾಡಿಕೊಳ್ಳಲು ತನ್ನನೀಳ ಬಾಲವನ್ನು ನೇರ ಮಾಡಿಕೊಳ್ಳುತ್ತದೆ.ಇದರ ಗೂಡು ಹದ್ದಿನ ಗೂಡಿನಷ್ಟೇ ವಿಶಾಲವಾಗಿರುತ್ತದೆ. ದೇಹದ ಗ್ರಂಥಿಗಳಿಂದ ಕೆಲವು ಬಗೆಯ ರಾಸಾಯನಿಕಗಳನ್ನು ಸ್ರವಿಸಿ ಪ್ರತಿ ಅಳಿಲು ತನ್ನ ಗಡಿ ಗುರುತಿಸಿಕೊಳ್ಳುತ್ತದೆ.ನೋಡಲು ಬಹಳ ಮುದ್ದಾದ ಇವುಗಳನ್ನು ಮನುಷ್ಯರು ಪಳಗಿಸಿ ಗಿಳಿ, ಬೆಕ್ಕು,ನಾಯಿಗಳಂತೆ ಮನೆಯೊಳಗೆ ಸಾಕುತಿದ್ದರಂತೆ. ಹೆಚ್ಚಾಗಿ ಸೋಲಿಗರ ಮನೆಗಳಲ್ಲಿ ಈಗಲೂ ಇವುಗಳನ್ನು ಸಾಕುವುದನ್ನು ಕಾಣಬಹುದು.[೩]

ನಶಿಸುತ್ತಿರುವ ಸಂಕುಲಸಂಪಾದಿಸಿ

ಕೇಂದ್ರ ಸಕಾ೯ರವು ಕೆಂದಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಿದೆ.ಅರಣ್ಯ ಇಲಾಖೆ ಕೂಡ ಈ ಅಳಿಲುಗಳ ಬೇಟೆಯನ್ನು ನಿಷೇಧಿಸಿದೆ. ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ.ಆದರೂ ಕಾಡಿನ ಮೇಲೆ ಮನುಷ್ಯನ ಅತಿಯಾದ ಹಸ್ತಕ್ಷೇಪ, ಸ್ಥಳೀಯರ ಬಾಯಿ ಚಪಲ,ಬೇಟೆಗಾರರ ದುರಾಸೆ ಮತ್ತು ಶ್ರೀಮಂತರಿಗಾಗಿ ವಿಲಾಸಿ ಚಮ೯ ಉತ್ಪನ್ನಗಳ ತಯಾರಿಕೆಯಲ್ಲಿ ಈ ಅಳಿಲುಗಳು ಬಲಿಯಾಗುತ್ತಿವೆ.ಸುಮಾರು ನಾಲ್ಕರಿಂದ ಐದು ಕೆ.ಜಿ ತೂಗುವ ಇವುಗಳನ್ನು ಮಲೆನಾಡಿಗರು ಮತ್ತು ಗಿರಿಜನರು ತಿನ್ನುತ್ತಾರೆ. ರಾತ್ರಿಯ ವೇಳೆ ಮರದ ಟೊಂಗೆಗಳನ್ನು ಬಿಗಿದಪ್ಪಿ ಮಲಗುವ ಇವುಗಳ ಕಣ್ಣಿಗೆ ಬ್ಯಾಟರಿ ಬೆಳಕನ್ನು ಹಾಯಿಸಿ ಅವುಗಳು ಕದಲದಂತೆ ಮಾಡಿ ಬೇಟೆ ಆಡುತ್ತಾರೆ.[೪]

ಚಿತ್ರಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. https://www.prajavani.net/environment/animal-world/blue-color-squarell-664226.html
  2. https://www.nationalgeographic.com/animals/2019/04/indian-giant-squirrels-colors-camouflage/
  3. https://vijaykarnataka.com/news/shivamogga/-/articleshow/14725379.cms
  4. http://animalia.bio/indian-giant-squirrel