ಸಾತ್ಪುರ ಪರ್ವತಗಳು

ಸಾತ್ಪುರ ಪರ್ವತಗಳು ಭಾರತದ ಮಧ್ಯಭಾಗದಲ್ಲಿನ ಒಂದು ಪರ್ವತಶ್ರೇಣಿ. ಗುಜರಾತ್ ರಾಜ್ಯದ ಪೂರಭಾಗದಲ್ಲಿ ಆರಂಭಗವಾಗಿ ಮಹಾರಾಷ್ಟ್ರ,ಮಧ್ಯ ಪ್ರದೇಶಗಳನ್ನು ಹಾದು ಛತ್ತೀಸ್‌ಗಢದವರೆಗೆ ಸಾತ್ಪುರ ಪರ್ವತಗಳು ಹಬ್ಬಿವೆ. ಸಾತ್ಪುರ ಪರ್ವತಗಳು ಕೊಂಚ ಉತ್ತರಕ್ಕಿರುವ ವಿಂಧ್ಯ ಪರ್ವತಗಳಿಗೆ ಸರಿಸುಮಾರು ಸಮಾನಾಂತರವಾಗಿ ಸಾಗಿವೆ. ಈ ಎರಡು ಪೂರ್ವ-ಪಶ್ಚಿಮ ಪರ್ವತಶ್ರೇಣಿಗಳು ಉತ್ತರ ಭಾರತದ ಗಂಗಾ ಬಯಲು ಮತ್ತು ದಕ್ಷಿಣ ಭಾರತದ ದಖ್ಖನ್ ಪೀಠಭೂಮಿಗಳ ನಡುವೆ ಗೋಡೆಗಳಂತೆ ನಿಂತಿವೆ. ಈ ಎರಡು ಶ್ರೇಣಿಗಳ ನಡುವಿನ ತಗ್ಗಿನಲ್ಲಿ ನರ್ಮದಾ ನದಿಯು ಹರಿಯುತ್ತದೆ. ತಾಪ್ತಿ ಮತ್ತು ಗೋದಾವರಿ ನದಿಗಳು ಸಾತ್ಪುರ ಪರ್ವತಗಳ ದಕ್ಷಿಣದಂಚಿನಲ್ಲಿ ಹರಿದರೆ ಮಹಾನದಿಯು ಶ್ರೇಣಿಯ ಪೂರ್ವದಂಚಿನಲ್ಲಿ ಸಾಗುವುದು. ತನ್ನ ಪೂರ್ವ ಅಂಚಿನಲ್ಲಿ ಸಾತ್ಪುರ ಪರ್ವಶ್ರೇಣಿಯು ಛೋಟಾ ನಾಗ್ಪುರ ಪೀಠಭೂಮಿಯನ್ನು ಸಂಧಿಸುವುದು. ಒಂದುಕಾಲದಲ್ಲಿ ದಟ್ಟ ಕಾಡುಗಳಿಂದ ಕೂಡಿದ್ದ ಸಾತ್ಪುರ ಪರ್ವತಗಳು ಇಂದು ಗಮನಾರ್ಹವಾಗಿ ಬೋಳಾಗಿವೆ. ಕೊಂಚ ಮಟ್ಟಿಗೆ ಉಳಿದಿರುವ ದಟ್ಟ ಅರಣ್ಯಗಳಲ್ಲಿ ಹುಲಿ, ಕಾಡೆಮ್ಮೆ, ಚೌಸಿಂಘಾ, ಕರಡಿ, ಕೃಷ್ಣಮೃಗ ಮುಂತಾದ ವನ್ಯಜೀವಿಗಳು ನೆಲೆಸಿವೆ.