ಕಂಪು ಸಾಮಾನ್ಯವಾಗಿ ಬಹಳ ಕ್ಷೀಣ ಸಾಂದ್ರಣಬಲದಲ್ಲಿ ಆವೀಕೃತ ರಾಸಾಯನಿಕ ಸಂಯುಕ್ತಗಳಿಂದ ಉಂಟಾಗುತ್ತದೆ, ಮತ್ತು ಇದನ್ನು ಮಾನವರು ಮತ್ತು ಇತರ ಪ್ರಾಣಿಗಳು ಆಘ್ರಾಣಇಂದ್ರಿಯದಿಂದ ಗ್ರಹಿಸುತ್ತವೆ. ಕಂಪುಗಳನ್ನು ವಾಸನೆಗಳೆಂದೂ ಕರೆಯಲಾಗುತ್ತದೆ, ಮತ್ತು ಈ ಪದವು ಹಿತಕರ ಹಾಗೂ ಅಹಿತಕರ ಕಂಪುಗಳು ಎರಡನ್ನೂ ನಿರ್ದೇಶಿಸಬಹುದು. ಪರಿಮಳ, ಸುವಾಸನೆ ಪದಗಳು ಮುಖ್ಯವಾಗಿ ಆಹಾರ ಮತ್ತು ಪ್ರಸಾಧನ ಉದ್ಯಮಗಳಿಂದ ಹಿತಕರ ಗಂಧವನ್ನು ವರ್ಣಿಸಲು ಬಳಸಲ್ಪಡುತ್ತವೆ, ಮತ್ತು ಕೆಲವೊಮ್ಮೆ ಸುಗಂಧಗಳನ್ನು ನಿರ್ದೇಶಿಸಲು ಬಳಸಲ್ಪಡುತ್ತವೆ.

ಒಂದು ಚಂದ್ರನುಸಿಯ ಸ್ಪರ್ಶಿಕೆಗಳ ಮೇಲಿರುವ ಕಂಪು ಗ್ರಾಹಕಗಳು

ವಾಸನೆಗೂ ರುಚಿಗೂ ನಿಕಟ ಸಂಬಂಧ ಉಂಟು. ಆದರೆ ಮಾನವನಿಗೆ ಆಹಾರದ ಪೂರ್ಣವಾದ ಮತ್ತು ಆನಂದದಾಯಕ ಅನುಭವ ಪಡೆಯಲು ಕೇವಲ ವಾಸನೆ ರುಚಿಗಳೆರಡೇ ಸಾಲವು. ಜೊತೆಗೆ ನೋಟ ಶಬ್ದಗಳ ಅರಿವು ಸಹ ಬೇಕು. ಸುಗಂಧದ್ರವ್ಯಗಳ ಇಂದ್ರಿಯಾನುಭವದಲ್ಲಿ ಘ್ರಾಣಾಂಶ ಪ್ರಮುಖ. ಕೆಲವು ವಸ್ತುಗಳ ಘ್ರಾಣಾನುಭವಕ್ಕೆ ಸ್ವರ್ಶಾಂಶವೂ ಅಗತ್ಯ. ಮಾನವನ ಘ್ರಾಣ ಜ್ಞಾನ ರಾಸಾಯನಿಕ ಪ್ರಚೋದನೆಯಾಗಿದೆ. ಈ ಪ್ರಚೋದನೆ ಘ್ರಾಣ ನರತಂತುಗಳ ತುತ್ತತುದಿಯ ಅಂಗಗಳಲ್ಲಿ ಪ್ರಾರಂಭವಾಗುತ್ತದೆ. ವಾಸನೆ ಮತ್ತು ರುಚಿಗಳಿಗೆ ರಾಸಾಯನಿಕ ಹಿನ್ನೆಲೆಯಿರುವುದರಿಂದಲೇ ಕೆಳದರ್ಜೆಯ ಜೀವಿಗಳು ತಮಗೆ ಹಿತವಾದ ಪದಾರ್ಥಗಳನ್ನು ಅಂಗೀಕರಿಸಲು ಮತ್ತು ಅಹಿತವಾದವನ್ನು ತ್ಯಜಿಸಲು ಸಾಧ್ಯವಾಗುತ್ತದೆ.

ಸಸ್ತನಿಗಳಲ್ಲಿ ಮತ್ತು ಕಶೇರುಕಗಳಲ್ಲಿ ಆಘ್ರಾಣ

ಬದಲಾಯಿಸಿ

ಸ್ತನಿಗಳಲ್ಲಿ ಘ್ರಾಣಗ್ರಾಹಿಕೋಶಗಳು (ಆಲ್‌ಫ್ಯಾಕ್ಟರಿ ಸೆಲ್ ರೆಸೆಪ್ಟರ್ಸ್) ಮೂಗಿನ ಹೊಳ್ಳೆಗಳ ಮೇಲ್ಭಾಗದಲ್ಲಿ ಅಡಕವಾಗಿವೆ. ಇವು ಘ್ರಾಣ ಪೊರೆಯಲ್ಲಿ ಸುಮಾರು 2-5 ಚದರ ಸೆಂಟಿಮೀಟರಿನಷ್ಟು ಕ್ಷೇತ್ರದ ಮಚ್ಚೆಗಳಲ್ಲಿವೆ. ಘ್ರಾಣಗ್ರಾಹಿಕೋಶಗಳು ನೀಳವಾಗಿ ತೆಳ್ಳಗಿವೆ. ಇವುಗಳ ತುದಿಗಳಿಂದ, ಸೂಕ್ಷ್ಮ ಕೂದಲಂತಿರುವ ಅನೇಕ ಎಳೆಗಳು, ಮೂಗಿನ ಲೋಳೆಪೊರೆಯಿಂದ ಹಾದು ಹೊರಚಾಚುತ್ತವೆ. ಈ ಕೋಶವನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡಿದರೆ ಪ್ರತಿ ಕೋಶದಲ್ಲೂ ಸುಮಾರು ನೂರಾರು ಎಳೆಗಳು ಇರುವುದನ್ನು ಕಾಣಬಹುದು. ಈ ಕೋಶಗಳ ಮತ್ತೊಂದು ತುದಿ ಮೊನಚಾಗಿ ಕಡೆಗೆ ನರತಂತುವಾಗಿ ಮಾರ್ಪಟ್ಟು, ಇದೇ ರೀತಿ ಇತರ ಘ್ರಾಣಗ್ರಾಹಿ ಕೋಶಗಳಿಂದ ಹೊರಡುವ ನರತಂತುಗಳೊಂದಿಗೆ ಘ್ರಾಣನರವಾಗಿ ಘ್ರಾಣಮುಕುಲವನ್ನು (ಆಲ್‍ಫ್ಯಾಕ್ಟರಿ ಬಲ್ಬ್) ಸೇರುತ್ತವೆ. ಮಿದುಳಿನ ನೇರ ಸಂಪರ್ಕವಿರುವ ನರಗಳಲ್ಲಿ ಒಂದಾದ ಟ್ರೈಜಮೈನಲ್ ನರದ ತಂತುಗಳು ಸಹ ಮೂಗಿನ ಹೊಳ್ಳೆ ಹಾಗೂ ಘ್ರಾಣ ಕ್ಷೇತ್ರದಲ್ಲಿ ಹರಡಿ ಉರಿಯ ಪ್ರಚೋದನೆಯಲ್ಲಿ ಭಾಗವಹಿಸುತ್ತವೆ. ಅತ್ಯಲ್ಪ ವಾಸನೆ ಇಲ್ಲವೇ ಕಿರುಕುಳ ಕೊಡುವಷ್ಟು ಉದ್ರೇಕಿಸುವ ವಾಸನೆಗಳು ಕೂಡ ಟ್ರೈಜಮೈನಲ್ ನರತಂತುಗಳ ಹಾಗೂ ಘ್ರಾಣ ನರತಂತುಗಳ ತುತ್ತತುದಿಯ ಅಂಗಗಳನ್ನು ಪ್ರಚೋದಿಸುತ್ತವೆ. ವಾಸನೆ ಬೀರುವ ಪದಾರ್ಥದ ಅಣುಗಳು ಮಾನವರು ಸಾಧಾರಣವಾಗಿ ಉಸಿರಾಡುವಾಗ ಉತ್ಪತ್ತಿಯಾಗುವ ವಾಯುಸುಳಿಗಳಲ್ಲಿ ಸಿಕ್ಕು ಘ್ರಾಣಕ್ಷೇತ್ರವನ್ನು ತಲಪುತ್ತವೆ. ಬಿರುಸಾಗಿ ಉಸಿರೆಳೆದರೆ ಈ ಅಣುಗಳು ಘ್ರಾಣಕ್ಷೇತ್ರಕ್ಕೆ ಅಪ್ಪಳಿಸುತ್ತವೆ. ಅಣುಗಳು ತುತ್ತತುದಿಯ ಅಂಗಗಳನ್ನು ಮುಟ್ಟಿದ ಕೂಡಲೆ ಅಲ್ಲಿ ಅಲ್ಪ ವಿದ್ಯುತ್ ಪ್ರವಾಹ ಹುಟ್ಟುತ್ತದೆ. ಇದನ್ನು ನರಗಳ ಕಂತೆ ಮಿದುಳಿನಲ್ಲಿರುವ ಘ್ರಾಣಕೇಂದ್ರಕ್ಕೆ ತತ್ ಕ್ಷಣ ಸಾಗಿಸತ್ತದೆ. ಈ ಕೇಂದ್ರ ವಿದ್ಯುತ್ ಪ್ರವಾಹವನ್ನು ವಿಘಟಿಸಿ ವಿವಿಧ ವಾಸನೆಗಳಾಗಿ ಗುರುತಿಸುವುದು.

ಕಶೇರುಕ ಪ್ರಾಣಿವರ್ಗದಲ್ಲಿ ಘ್ರಾಣನರತಂತುಗಳು ಘ್ರಾಣಮುಕುಲವನ್ನು ಹೊಕ್ಕು ಅದರಲ್ಲಿ ಒಂದು ರೀತಿಯ ಬುಟ್ಟಿ ಹೆಣಿಗೆಯಂತೆ ಹೆಣೆದುಕೊಂಡಿರುವ ಗ್ಲೋಮರುಲೈ ಎಂಬ ಗೊಂಚಲುಗಳಲ್ಲಿ ಕೊನೆ ಮುಟ್ಟುತ್ತವೆ. ಮೊಲದಲ್ಲಿ ಪ್ರತಿ ಒಂದು ಗ್ಲೋಮರುಲಸ್ ಸುಮಾರು 26,000 ಘ್ರಾಣ ಗ್ರಾಹಿಗಳಿಂದ (ರಿಸೆಪ್ಟರ್ಸ್) ಘ್ರಾಣ ವಿದ್ಯುತ್ ಸ್ಪಂದನವನ್ನು ಪಡೆದು 24 ಮೈಟ್ರಲ್ ಜೀವಕೋಶಗಳ ಮತ್ತು 68 ಜೀವಕೋಶಗಳ ಕುಚ್ಚಿನ (ಟಫ್ಟ್ ಸೆಲ್ಸ್) ಮೂಲಕ ಮುಂದಕ್ಕೆ ಸಾಗಿಸುತ್ತದೆ. ಎಡಬಲ ಒಂದೊಂದು ಕಡೆಯಲ್ಲೂ ಸುಮಾರು 60,000 ಮೈಟ್ರಲ್ ಜೀವಕೋಶಗಳಿರುತ್ತವೆಂದು ಅಂದಾಜು ಮಾಡಲಾಗಿದೆ. ಮೈಟ್ರಲ್ ಜೀವಕೋಶದ ಅಕ್ಷತಂತುಗಳು (ಆಕ್ಸೆಸ್ ಫೈಬರ್ಸ್) ಮಿದುಳಿನ ಬುಡದಲ್ಲಿರುವ ಘ್ರಾಣಕೇಂದ್ರವನ್ನು ಘ್ರಾಣಮಾರ್ಗದ ಮೂಲಕ ಸೇರುತ್ತವೆ. ವಾಸನೆಯನ್ನು ಪ್ರಚೋದಿಸುವಾಗ ಮೂಲ ಘ್ರಾಣನರ, ಘ್ರಾಣಮುಕುಲ, ಘ್ರಾಣಮಾರ್ಗ ಹಾಗೂ ಮಿದುಳಿನ ಪೈರಿಫಾರಮ್ ಹಾಲೆಗಳಲ್ಲಿ ವಿದ್ಯುತ್ ಚಟುವಟಿಕೆಯನ್ನು ಗುರುತಿಸಲು ಸಾಧ್ಯವಾಗಿದೆ. ಘ್ರಾಣಮುಕುಲವನ್ನೇ ಶಸ್ತ್ರಕ್ರಿಯೆಯಿಂದ ತೆಗೆದು ಹಾಕಿದರೆ ವಿವಿಧ ವಾಸನೆಗಳನ್ನು ಪತ್ತೆ ಮಾಡಲು ಅಸಾಧ್ಯ. ಘ್ರಾಣಕೇಂದ್ರದ ಕ್ರಿಯೆ ಹೀಗೇಯೇ ಉಂಟು ಎಂದು ಕರಾರುವಾಕ್ಕಾಗಿ ಹೇಳಲು ವಿವರಗಳು ಇನ್ನೂ ತಿಳಿದಿಲ್ಲ.

ಕೀಟಗಳಲ್ಲಿ ಆಘ್ರಾಣ

ಬದಲಾಯಿಸಿ

ಕೀಟಗಳಲ್ಲಿ ಗ್ರಾಹಕ ತಂತುಗಳೇ (ಆಂಟೆನ) ಪ್ರಮುಖ ಘ್ರಾಣೇಂದ್ರಿಯ. ದವಡೆ ತುಟಿಗಳ ಸ್ಪರ್ಶಾಂಗಗಳ ನರತಂತುಗಳ ಕೊನೆಯಲ್ಲೂ ಘ್ರಾಣಗ್ರಾಹಿಗಳು ಇರಬಹುದು. ಕೆಲವು ಕೀಟಗಳಲ್ಲಿ ಘ್ರಾಣೇಂದ್ರಿಯ ಚಪ್ಟಟೆಯಾದ ವಂದರಿಯಂತೆ, ಇನ್ನು ಕೆಲವಲ್ಲಿ ಬೆಣೆಯಂತಿರುವ ಸೂಕ್ಷ್ಮ ಕೂದಲಿನ ಎಳೆಯಂತೆ ಕಾಣುತ್ತವೆ. ಈ ಬೆಣೆಗಳ ಮೇಲು ಹೊದಿಕೆ (ಕ್ಯೂಟಿಕಲ್) ಕೇವಲ 1/1000 ಮಿಲಿಮೀಟರಿನಷ್ಟು ತೆಳುವಾಗಿದೆ. ಅದರ ಇಕ್ಕಡೆಗಳಲ್ಲೂ ಬಹುತೇಕ ನರತಂತುಗಳುಳ್ಳ ಕೋಶಗಳಿವೆ. ಆದ್ದರಿಂದ ನರಮಂಡಲಕ್ಕೂ ಹೊರಗೆ ಬೀರುವ ವಾಸನೆಗೂ ಮಧ್ಯೆ ಘ್ರಾಣೇಂದ್ರಿಯದ ನಿರ್ಜೀವ ಹೊದಿಕೆ (ಕ್ಯೂಟಿಕಲ್) ಅಡ್ಡ ಉಂಟು. ಈ ಹೊದಿಕೆಯಿಂದ ಲೋಳೆ ಅಥವಾ ಇತರ ಯಾವ ರೀತಿಯ ಸ್ರಾವವೂ ಸ್ರವಿಸುವುದಿಲ್ಲ. ಆದರೂ ವಾಸನೆಗೆ ಅಡ್ಡತಡೆಗಳಿಲ್ಲ. ವಾಸನೆಯ ಅಣುಗಳು ಘ್ರಾಣನರತಂತುಗಳನ್ನು ನೇರವಾಗಿ ಪ್ರಚೋದಿಸುತ್ತವೆ. ಅವು ದ್ರವರೂಪದಲ್ಲಿ ಇರಬೇಕಾದ ಅಗತ್ಯವಿಲ್ಲ ಎಂಬ ವಾದಕ್ಕೆ ಈ ಮೇಲಿನ ಪ್ರಾಯೋಗಿಕ ಅಧ್ಯಯನವೇ ಆಧಾರವೆಂದು ಕೆಲವರ ಅಭಿಪ್ರಾಯ.

ಮನುಷ್ಯನಿಗೂ ಅಕಶೇರುಕ ಪ್ರಾಣಿವರ್ಗಕ್ಕೂ ರಚನೆಯಲ್ಲಿ ಅನೇಕಾನೇಕ ವ್ಯತ್ಯಾಸಗಳಿವೆ. ಆದರೂ ಮನುಷ್ಯ ಹಾಗೂ ಕೀಟಗಳಲ್ಲಿ ವಾಸನಾ ಪ್ರಚೋದನೆಯ ಕ್ರಿಯೆ ಬಹುತೇಕ ಒಂದೇ ಎಂದು ಹೇಳಲಾಗಿದೆ. ಕೀಟಗಳ ಮೇಲೆ ನಡೆಸಿರುವ ಪ್ರಯೋಗಗಳು ಮನುಷ್ಯನಿಗೂ ಹೊಂದುತ್ತವೆ.

ವಾಸನೆಯ ಅನುಭವವಾಗುವ ಪ್ರಕ್ರಿಯೆ: ಒಂದು ಪದಾರ್ಥ ವಾಸನೆ ಬೀರಬೇಕಾದರೆ ಅದಕ್ಕೆ ಸ್ವಲ್ಪ ಮಟ್ಟಿಗಾದರೂ ಬಾಷ್ಪಗುಣ ಇರಬೇಕು. ಅದರಿಂದ ಅಣುಗಳು ಹೊರಬಿದ್ದು ವಾಯುವಿನ ಮೂಲಕ ಮೂಗಿನ ಹೊಳ್ಳೆಗಳಿಗೆ ಪ್ರವೇಶಿಸಬೇಕು. ನೀರಿನಲ್ಲಿಯೂ ಜಿಡ್ಡಿನಲ್ಲಿಯೂ ವಿಲೀನವಾಗುವ ವಸ್ತುಗಳಿಗೆ ಅಧಿಕ ವಾಸನೆ ಉಂಟು. ಆದರೆ ವಾಸನೆಯೇ ಇಲ್ಲದಂಥ ವಸ್ತುಗಳೂ ಇವೆ. ವಾಸನೆ ಬೀರುವ ಪದಾರ್ಥಗಳ ಭೌತ ಅಥವಾ ರಾಸಾಯನಿಕ ವೈಶಿಷ್ಟ್ಯಗಳೇನೆಂಬುದು ಇನ್ನೂ ತಿಳಿದಿಲ್ಲ. ರಾಸಾಯನಿಕ ಧಾತುಗಳಲ್ಲಿ ಕೇವಲ ಏಳು ವಸ್ತುಗಳಿಗೆ ಮಾತ್ರ ವಾಸನೆ ಉಂಟು: ಫ್ಲೂರಿನ್, ಕ್ಲೋರಿನ್, ಬ್ರೋಮಿನ್, ಅಯೋಡಿನ್, ಓಜೋನ್ ರೂಪದಲ್ಲಿರುವ ಆಕ್ಸಿಜನ್, ರಂಜಕ ಹಾಗೂ ಆರ್ಸೆನಿಕ್. ವಾಸನೆ ಬೀರುವ ರಾಸಾಯನಿಕಗಳಲ್ಲಿ ಅನೇಕವು ಆರ್ಗ್ಯಾನಿಕ್ ಗುಂಪಿಗೆ ಸೇರಿದವು. ಬಹುಶಃ ರಾಸಾಯನಿಕ ವ್ಯವಸ್ಥೆ, ರೂಪ, ಅಣುಗಳು ಇತ್ಯಾದಿ ಅವುಗಳಿಂದ ಬರುವ ವಾಸನೆಗೆ ಕಾರಣವಾಗಿವೆ.

ವಾಸನೆಯ ಗುಣಮಟ್ಟ ನಿರ್ಧಾರಣೆ: ಅತ್ಯಂತ ಅಲ್ಪ ಪ್ರಮಾಣದ ವಾಸನೆಯು ಘ್ರಾಣಕೇಂದ್ರವನ್ನು ಚೋದಿಸಬಲ್ಲುದು. ರುಚಿಗಿಂತ ಘ್ರಾಣಶಕ್ತಿ 10,000 ಪಾಲಿನಷ್ಟು ಸೂಕ್ಷ್ಮ. ವಾತಾವರಣದ ಉಷ್ಣತೆಯೂ ಆವಿಯೂ ಸಾಂದ್ರತೆಯೂ ವಾಸನೆಯ ಗುಣಮಟ್ಟವನ್ನು ನಿರ್ಧರಿಸಬಲ್ಲವು. ಉದಾಹರಣೆಗೆ, ಸುಗಂಧದ್ರವ್ಯಗಳನ್ನು ತಯಾರಿಸುವಾಗ ಅವು ಸುಲಭವಾಗಿ ವಾಸನೆ ಬೀರಿ ಅಲ್ಪಕಾಲದಲ್ಲೇ ಅಳಿದು ಹೋಗಬೇಕೇ ಅಥವಾ ಸ್ವಲ್ಪ ಕಾಲ ಇದ್ದು ತರುವಾಯ ಇಲ್ಲದಂತಾಗಬೇಕೇ ಎಂಬುದನ್ನು ಮೊದಲು ನಿರ್ಧರಿಸಿ ಸೂಕ್ತ ವಸ್ತುಗಳೊಂದಿಗೆ ಸುಗಂಧಗಳನ್ನು ಬೆರೆಸುತ್ತಾರೆ. ಆಲ್ಕೋಹಾಲ್ ಜೊತೆಗೆ ಬೆರಿಸಿದರೆ ಅದರ ಬಾಷ್ಪಶೀಲ ಗುಣದಿಂದಾಗಿ ವಾಸನೆ ಜಾಗ್ರತೆ ಮಾಯವಾಗುತ್ತದೆ. ನೀರಿನೊಂದಿಗೆ ಅತ್ಯಲ್ಪ ಪ್ರಮಾಣದಲ್ಲಿ ಇಂಡೋಲ್ ಸೇರಿಸಿ ದ್ರವ್ಯಗಳನ್ನು ಬೆರಿಸಿದರೆ ದೀರ್ಘ ಕಾಲ ವಾಸನೆ ಉಳಿಯಲು ಅವಕಾಶವುಂಟು (ಕ್ಲಿಂಗಿಂಗ್ ಓಡರ್).

ವಾಸನೆಗಳ ವರ್ಗೀಕರಣ

ಬದಲಾಯಿಸಿ

ಯಾವುದಾದರೂ ರಾಸಾಯನಿಕ ಅಥವಾ ಕಂಪು ಬೀರುವ ಕಾರ್ಖಾನೆಗೆ ಭೇಟಿ ಕೊಟ್ಟರೆ ಮೊತ್ತ ಮೊದಲು ವಾಸನೆ ಬಂದು ನಮಗೆ ಅಪ್ಪಳಿಸಿ ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಆದರೆ ಸ್ವಲ್ಪ ಕಾಲದ ಬಳಿಕ ಈ ವಾಸನೆಯ ಅನುಭವವೇ ಮಾಯವಾಗಿ ಹೋಗುವುದು.[] ನೀಲಗಿರಿ ತೈಲದ ವಾಸನೆ ಮೂಸಿ ತರುವಾಯ ಕರ್ಪೂರವನ್ನು ಮೂಸಿದರೆ ಇದರ ವಾಸನೆಯನ್ನು ಗುರುತಿಸುವುದು ಕಷ್ಟವಾದೀತು. ಸಾವಿರಾರು ರೀತಿಯ ವಾಸನೆಗಳಿವೆ. ಅವೆಲ್ಲವನ್ನು ವರ್ಗೀಕರಿಸುವುದು ಸಾಧ್ಯವಾಗಲಾರದಾದರೂ ಕೆಲವು ವಾಸನೆಗಳು ಮಾತ್ರ ಪ್ರಧಾನವಾಗಿರಬೇಕೆಂಬ ಅಂಶ ಮನನವಾಗಿದೆ. ವಾಸನೆಗಳ ವರ್ಗೀಕರಣ ವ್ಯಕ್ತಿಯ ಅನುಕೂಲತೆಗೆ ಸೇರಿದ್ದು. ಹೆನ್ನಿಂಗ್ ಎಂಬಾತ ಸುಮಾರು 400 ಕ್ಕೂ ಅಧಿಕ ಸಂಖ್ಯೆಯ ವಾಸನೆಗಳ ವಿಚಾರವಾಗಿ ಮನುಷ್ಯರ ಮೇಲೆ ಪ್ರಯೋಗಿಸಿ ಅಧ್ಯಯನ ಮಾಡಿದ್ದಾನೆ. ಆತ ವಾಸನೆಗಳನ್ನು ಆರು ಗುಂಪುಗಳಾಗಿ ವಿಂಗಡಿಸಿದ; ಹಣ್ಣು, ಹೂ, ಹೊಲಸು, ರಾಳ, ಸಂಬಾರ, ಸೀದ (ಸುಟ್ಟ) ಪದಾರ್ಥಗಳ ವಾಸನೆಗಳು. ಒಂದು ವಾಸನೆಗೂ ಮತ್ತೊಂದಕ್ಕೂ ಇರುವ ಮೂಲ ಸಂಬಂಧವನ್ನು ಚಿತ್ರದಲ್ಲಿ ತೋರಿಸಿದೆ.

 


ವಾಸನೆಗಳಿಂದ ಪ್ರಚೋದನೆ: ವಿದ್ಯುತ್ ಶರೀರ ಕ್ರಿಯಾ (ಎಲೆಕ್ಟ್ರೋ ಫಿಸಿಯಾಲಾಜಿಕಲ್) ವಿಧಾನವನ್ನು ಬಳಸಿಕೊಂಡು ವಿವಿಧ ವಾಸನೆಗಳ ಗುಣ ವಿಶೇಷಗಳ ಜ್ಞಾನ ಚೋದನೆಯ ಅಧ್ಯಯನ ನಡೆದಿದೆ. ಎಲೆಕ್ಟ್ರೋಡುಗಳನ್ನು ಮುಕುಲಕ್ಕೆ ಚುಚ್ಚಿ ಘ್ರಾಣಮುಕುಲದ ವಿದ್ಯುತ್ ಚಟುವಟಿಕೆಗಳನ್ನು ಪರಿಶೀಲಿಸಬಹುದು. ಈ ಚಟುವಟಿಕೆಗಳು ಎರಡು ವಿಧ: ಒಂದು, ಅಲೆಯೋಪಾದಿಯಲ್ಲಿ ಮುಕುಲದ ಹೊರಭಾಗದಿಂದ ಬರುವ ಅನುಕ್ರಿಯೆ (ರೆಸ್ಪಾನ್ಸ್); ಎರಡು, ಮೈಟ್ರಲ್ ಜೀವಕೋಶಗಳನ್ನು ಚೋದಿಸಿದರೆ ಹೊರಬೀಳುವ ವಿದ್ಯುತ್ಪ್ರವಾಹ.

ಮೊಲದ ಘ್ರಾಣಮುಕುಲದ ಮುಂಭಾಗ ಅಥವಾ ಬಾಯಿ ಕಡೆಗಿರುವ ಭಾಗ ನೀರಿನಲ್ಲಿ ವಿಲೀನವಾಗುವ ವಸ್ತುಗಳ ವಾಸನಾದ್ರವ್ಯಗಳಿಂದ ಹೆಚ್ಚು ಪ್ರಚೋದಿತವಾಗುತ್ತದೆ. ಇಷ್ಟೇ ಅಲ್ಲದೆ ಒಂದೇ ಒಂದು ಮೈಟ್ರಲ್ ಜೀವಕೋಶದ ಅಂಶವನ್ನು ಪ್ರಚೋದಿಸಲು ಸಾಧ್ಯವಾಗುವಷ್ಟು ಸೂಕ್ಷ್ಮವಾದ ಎಲೆಕ್ಟ್ರೋಡ್‌ನ್ನು ಉಪಯೋಗಿಸಿ ಪ್ರಚೋದಿಸಿದ ಸಂದರ್ಭಗಳಲ್ಲಿ ಬೇರೆಬೇರೆ ಮೈಟ್ರಲ್ ಜೀವಕೋಶಗಳು ವಿವಿಧ ವರ್ಗಕ್ಕೆ ಸೇರಿದ ರಾಸಾಯನಿಕಗಳಿಂದ ಪ್ರಚೋದಿತವಾಗುವುದು ಕಂಡುಬಂದಿತು.[]

ಅಮೂರ್‌ನ ಘ್ರಾಣ ಸಿದ್ಧಾಂತ

ಬದಲಾಯಿಸಿ

ಇತ್ತೀಚಿನವರೆಗೂ ವಿವಿಧ ಪದಾರ್ಥಗಳ ರಾಸಾಯನಿಕ ಧಾತು ವೈವಿಧ್ಯವೇ ಅವುಗಳ ವಿವಿಧ ವಾಸನೆಗಳಿಗೆ ಕಾರಣವಿರಬೇಕೆಂದು ತಿಳಿಯಲಾಗಿತ್ತು. ಆದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಮೂರ್ ಎಂಬ ವಿಜ್ಞಾನಿ ಇದು ಬೇರೆ ಕಾರಣದಿಂದ ಎಂದು ತೋರಿಸಿದ್ದಾನೆ. ಪ್ರಧಾನ ವಾಸನೆಗಳು ಯಾವುದೆಂದು ಗೊತ್ತಾದರೆ ವಾಸನೆಯ ರಹಸ್ಯವನ್ನು ಭೇದಿಸಿದಂತೆ ಎಂದು ಆತನ ಅಭಿಪ್ರಾಯ. ಅಮೂರ್ ಸುಮಾರು 600 ಘ್ರಾಣಸಂಯುಕ್ತಗಳನ್ನು ಆಯ್ದು ಅವು ಬೀರುವ ವಾಸನೆಗಳಲ್ಲಿ ಯಾವ ನಿರ್ದಿಷ್ಟ ವಾಸನೆಗಳು ಅತ್ಯಧಿಕ ವಸ್ತುಗಳಲ್ಲಿ ಪುನರಾವರ್ತಿಸುವುವೆಂಬುದನ್ನು ಹುಡುಕಿ ನೋಡಿದ. ಏಳು ವಾಸನೆಗಳು ಪ್ರಧಾನ ಘ್ರಾಣಗಳೆಂಬುದು ಅವನ ತೀರ್ಮಾನ.[][][] ಅವು ಕರ್ಪೂರ, ಕಸ್ತೂರಿ, ಹೂ, ಪೆಪ್ಪರ್‌ಮಿಂಟ್ ಅಥವಾ ಪುದಿನ ಸೊಪ್ಪು, ಕ್ಲೊರೋಫಾರಮ್ ಘಾಟಿನಿಂದ ಕೂಡಿದವು, ಕೊಳೆತವುಗಳ ಹೊಲಸು ನಾತ.

ಪದಾರ್ಥಗಳ ಅಣುವಿನ ಆಕಾರ ಮತ್ತು ಗುರುತಿಸುವಿಕೆ

ಬದಲಾಯಿಸಿ

ಪ್ರಾಚೀನ ಗ್ರೀಸಿನ ಮಹಾದಾರ್ಶನಿಕರಲ್ಲಿ ಒಬ್ಬನಾದ ಉಕ್ರಿಷಿಯಸ್ ವಸ್ತುಗಳ ವಾಸನೆ ಅವುಗಳ ಅಣುಗಳ ಗಾತ್ರ ಮತ್ತು ಆಕಾರವನ್ನು ಅವಲಂಬಿಸಿದೆ ಎಂಬ ವಾದವನ್ನು ಸುಮಾರು 2000 ವರ್ಷಗಳ ಹಿಂದೆಯೇ ಮಂಡಿಸಿದ್ದ. ಕರ್ಪೂರದ ವಾಸನೆಯನ್ನು ಹೋಲುವ ಸಂಯುಕ್ತಗಳನ್ನೆಲ್ಲ ವಿವಿಧ ಸೂಕ್ಷ್ಮದರ್ಶಕೀಯ ಪರೀಕ್ಷೆಗಳಿಗೆ ಒಳಪಡಿಸಿ ಪರಿಶೀಲಿಸಿದಾಗ ಅವುಗಳಲ್ಲಿ ರಾಸಾಯನಿಕ ರಚನಾ ಸಾಮ್ಯ ಕಂಡುಬರಲಿಲ್ಲ. ಅದರ ಬದಲು ಈ ಸಂಯುಕ್ತಗಳೆಲ್ಲ ಗೋಳಾಕಾರದ ಅಣುಗಳಾಗಿದ್ದುವು, ಅವುಗಳ ಗಾತ್ರವೆಲ್ಲ ಹೆಚ್ಚು ಕಡಿಮೆ ಸಮವಾಗಿದ್ದುವು. ಅವೆಲ್ಲ ಸುಮಾರಾಗಿ ಒಂದು ಸೆಂಟಿಮೀಟರಿನ ಕೋಟ್ಯಂಶದಷ್ಟು ವ್ಯಾಸದ ಗೋಲಿಗಳಾಗಿದ್ದವು. ಕಸ್ತೂರಿ ವಾಸನೆ ಇರುವ ಸಂಯುಕ್ತಗಳ ಅಣುಗಳೆಲ್ಲ ಮೊಟ್ಟೆ ಆಕಾರದ ಅಣುಗಳಾಗಿ ಕಂಡುಬಂದಿದೆ. ಗುಲಾಬಿ, ಮಲ್ಲಿಗೆಯಂಥ ಸುವಾಸನಾದ್ರವ್ಯ ಸಂಯುಕ್ತಗಳ ಅಣುಗಳ ಆಕಾರ ಬಾಲಕಟ್ಟಿರುವ ಗುಂಡು ಗಾಳೀಪಟವನ್ನು ಹೋಲುತ್ತದೆ. ಪುದಿನದ ವಾಸನೆ ಕೊಡುವ ಅಣುಗಳಿಗೆ ಬೆಣೆ ಆಕಾರ ಉಂಟು. ಕ್ಲೋರೊಫಾರಮ್ ವಾಸನೆ ಬೀರುವ ದ್ರವ್ಯಗಳ ಅಣುಗಳು ಗುಂಡು ಕಂಬಿ ಅಥವಾ ತಂತಿಯ ಆಕಾರವೆಂದು ತಿಳಿದಿದೆ.

ಗುರುತು ಹಚ್ಚಲು ಗಾತ್ರ ಮತ್ತು ಆಕಾರ ಮುಖ್ಯ. ಮೂಗಿನ ಘ್ರಾಣಮುಕುಲದ ಮೈಮೇಲೆ ಲಕ್ಷಾಂತರ ಗುಳಿಗಳಿವೆ. ಇವುಗಳಲ್ಲಿ ಕೆಲವು ಅರ್ಧಗೋಳಾಕಾರ (ಬಾಣಲೆಯಂತೆ) ಇವೆ. ಇವುಗಳ ಅಗಲ ಒಂದು ಸೆಂಟಿಮೀಟರಿನ ಕೋಟ್ಯಂಶದಷ್ಟು. ಆಳ ಅದರರ್ಧ. ಈ ಪುಟಾಣಿ ಬಾಣಲೆಗಳಲ್ಲಿ ಅದೇ ಗಾತ್ರದ ಗೋಳಾಣು ಸರಿಯಾಗಿ ಕೂರಬಹುದು. ಆದರೆ ಗೋಳದ ಅರ್ಧಭಾಗ ಮೇಲಿರುತ್ತದೆ. ಹೀಗೆ ಅಣು ಗೋಳದಲ್ಲಿ ಹೊಂದಿಕೊಂಡು ಕೂಡಿದ ಒಡನೆ ಕರ್ಪೂರಸದೃಶ ವಾಸನೆಯ ಅನುಭವವಾಗುತ್ತದೆ. ಘ್ರಾಣಮುಕುಲದಲ್ಲಿರುವ ಇತರ ಕೆಲವು ಗುಳಿಗಳು ಅಂಡಾಕಾರದ ತಟ್ಟೆಗಳಂತಿವೆ. ಇವುಗಳಲ್ಲಿ ಅದೇ ಗಾತ್ರದ ಮೊಟ್ಟೆಯಾಕಾರದ ಅಣುಗಳು ಸಲೀಸಾಗಿ ಅಳವಡುವುವು. ಕೂಡಲೇ ಕಸ್ತೂರಿ ವಾಸನೆಯ ಅನುಭವವಾಗುತ್ತದೆ. ಮತ್ತೆ ಕೆಲವು ಗುಳಿಗಳಿಗೆ ಒಂದು ಗುಂಡು ತಟ್ಟೆ, ಆ ತಟ್ಟೆಗೆ ಒಂದು ಉದ್ದವಾದ ಆದರೆ ತಟ್ಟೆಗಿಂತ ಆಳವಾದ ಕಾಲುವೆ ಹಿಡಿ ಜೋಡಿಸಿರುವ ಆಕಾರ ಉಂಟು. ಇಂಥ ಗುಳಿಗಳು ಗಾಳಿಪಟ ಆಕಾರದ ಅಣುಗಳಿಗೆ ತಕ್ಕ ಆಸನಗಳು. ಅಣುಗಳು ಆಯಾ ಗುಳಿಗಳಲ್ಲಿ ಕುಳಿತ ಒಡನೆ ಕುಸುಮದ ಸುವಾಸನೆಯಿಂದ ಮನಸ್ಸು ತಣಿಯುತ್ತದೆ. ಇದೇ ರೀತಿ ಬೆಣೆಯ ಆಕಾರದ, ದೋಣಿಯ ಆಕಾರದ ಗುಳಿಗಳನ್ನು ಆಯಾ ಘನಾಕಾರದ ಅಣುಗಳೂ ತುಂಬಿದಾಗ ಪುದಿನ ಮತ್ತು ಕ್ಲೋರೊಫಾರಮ್ ವಾಸನೆಗಳ ಗುರುತಾಗುತ್ತದೆ.

ಘ್ರಾಣ ಪ್ರಚೋದನೆ

ಬದಲಾಯಿಸಿ

ವಾಸನೆಯ ಜ್ಞಾನಪ್ರಚೋದನೆ ಆರಂಭವಾಗುವುದು ಮೂಗಿನ ಹೊಳ್ಳೆಯೊಳಗಿರುವ ಘ್ರಾಣಕ್ಷೇತ್ರದಲ್ಲಿ ಎಂದು ಮೊದಲು ಹೇಳಿದೆ. ವಿವಿಧ ವಾಸನೆಗಳ ಜ್ಞಾನದ ಅರಿವಾಗುವುದು ಘ್ರಾಣಮುಕುಲದಲ್ಲಿ ಎಂದು ಈಗ ಹೇಳಲಾಗಿದೆ. ಅಂದರೆ ಘ್ರಾಣ ಪ್ರಚೋದನೆ ಘ್ರಾಣಕ್ಷೇತ್ರದಲ್ಲೇ ಅಥವಾ ಘ್ರಾಣ ಮುಕುಲದಲ್ಲೇ ಎಂಬ ಗೊಂದಲ ಉಂಟಾಗಬಹುದು. ನಿಜಕ್ಕೂ ಹೇಳುವುದಾದರೆ ಈ ವಿಚಾರದಲ್ಲಿ ಇರುವ ಜ್ಞಾನ ಪರಿಪಕ್ವವಾಗಿಲ್ಲ. ಘ್ರಾಣಕ್ಷೇತ್ರದಲ್ಲಿ ವಾಸನೆಯ ಅರಿವು ಪ್ರಾರಂಭವಾಗುತ್ತದೆಂಬುದು ಮಾತ್ರ ಇತ್ಯರ್ಥವಾಗಿದೆ. ವಾಸನೆಗಳ ವೈವಿಧ್ಯದ (ಅಂದರೆ ಏಳು ವಾಸನೆಗಳಲ್ಲಿ ಯಾವುದು ಎಂದು ನಿರ್ಣಯಿಸುವ ಸಾಮರ್ಥ್ಯ) ಅರಿವನ್ನು ಉಂಟು ಮಾಡುವ ಕ್ಷೇತ್ರ ಘ್ರಾಣಮುಕುಲವೆಂದು ಹೇಳಲಾಗಿದೆ. ಇದನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದರೆ ವಿವಿಧ ವಾಸನೆಗಳನ್ನು ಗುರುತಿಸುವುದು ಅಸಾಧ್ಯವೆಂದೂ ತಿಳಿದಿದೆ. ಈ ವಿವರಗಳನ್ನು ಅಂಗೀಕರಿಸುವ ಮುನ್ನ ಮತ್ತೊಂದು ಪ್ರಶ್ನೆ ಏಳುವುದು ಸಹಜ-ವಾಸನೆಯ ಅಣುಗಳು ಮೂಗಿನ ಹೊಳ್ಳೆಯೊಳಗಿನ ಘ್ರಾಣಕ್ಷೇತ್ರ ಸ್ಪರ್ಶವಾದೊಡನೆ ವಿದ್ಯುತ್ಪ್ರವಾಹವಾಗಿ ಮಾರ್ಪಟ್ಟು ಅದು ನರತಂತುಗಳ ಮೂಲಕ ಘ್ರಾಣಮುಕುಲಕ್ಕೆ ಹಾಯುತ್ತದೆ;[] ಈಗ ಘ್ರಾಣವೈವಿಧ್ಯದ ಅರಿವಾಗಲು ಈ ವಿದ್ಯುತ್ಪ್ರವಾಹ ಪುನಃ ಅನುಕ್ರಮ ಆಕಾರ ಗಾತ್ರದ ಅಣುಗಳಾಗಿ ಘ್ರಾಣ ಮುಕುಲದಲ್ಲಿರುವ ಗುಳಿಗಳಲ್ಲಿ ಹೊಂದಿಕೊಳ್ಳಬೇಕೇ ಎಂಬುದು ತಿಳಿದಿಲ್ಲ.

ಇತರ ವಾಸನೆಗಳ ಅನುಭವ

ಬದಲಾಯಿಸಿ

ಘಾಟು ಹಾಗೂ ಕೊಳೆತು ಹೊಲಸು ಬೀರುವ ನಾತದ ಅನುಭದ ಮೂಲ ಈ ರೀತಿಯದಲ್ಲ. ಇವೆರಡು ವಾಸನೆಗಳ ಅನುಭವಕ್ಕೆ ಅಣುಗಳ ಗಾತ್ರ, ಆಕಾರ ಕಾರಣವಲ್ಲ, ಬದಲು ಅವುಗಳ ವಿದ್ಯುತ್ ಸ್ಥಿತಿಗಳು. ಕೆಲವು ಅಣುಗಳು ತಮ್ಮ ಹೊರಹೊದಿಕೆಯ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ. ಅಂದರೆ ಅವು ಧನ ವಿದ್ಯುತ್ತಿನ ಅಣುಗಳಾಗಿರುತ್ತವೆ. ಇಂಥ ಅಣುಗಳೂ ಗಾಳಿಯಲ್ಲಿ ಬೆರೆತಿದ್ದರೆ ಅವು ಘ್ರಾಣಮುಕುಲದಲ್ಲಿರುವ ಋಣವಿದ್ಯುತ್ ಪ್ರಾಂತಗಳ ಕಡೆ ಧಾವಿಸುತ್ತವೆ. ಹಾಗೆ ಮುಕುಲದ ಮೇಲೆ ಬಿದ್ದಾಗ ಘಾಟು ವಾಸನೆಯು-ಮೆಣಸು, ಸೀಗೆಪುಡಿ ಇತ್ಯಾದಿ ಗುಂಪಿಗೆ ಸೇರಿದ ವಸ್ತುಗಳ ವಾಸನೆ ಅರಿವು ಬರುತ್ತದೆ. ಈ ವಾಸನೆಗಳಿಗೆ ವಿದ್ಯುನ್ಮಿತ್ರ ಘ್ರಾಣಗಳೆಂದು ಹೆಸರು. ಇನ್ನು ಕೆಲವು ಅಣುಗಳ ಹೊರವಲಯಗಳಲ್ಲಿ ಸಮವಿದ್ಯುತ್ ಸ್ಥಿತಿಗೆ ಬೇಕಾದದ್ದಕ್ಕಿಂತ ಹೆಚ್ಚು ಎಲೆಕ್ಟ್ರಾನುಗಳಿರುತ್ತವೆ. ಈ ಅಣುಗಳನ್ನು ಮುಕುಲದಲ್ಲಿ ಅಲ್ಲಲ್ಲಿರುವ ಧನವಿದ್ಯುತ್ಪ್ರಾಂತಗಳು ತಮ್ಮ ಕಡೆಗೆ ಎಳೆದುಕೊಳ್ಳುತ್ತವೆ. ಇವೆರಡೂ ಸಂಧಿಸಿದಾಗ ಕೊಳೆತ ನಾತ ನಮ್ಮನ್ನು ಪೀಡಿಸುತ್ತದೆ. ಇಂಥ ವಾಸನೆಗಳಿಗೆ ಪರಮಾಣುಬೀಜಮಿತ್ರ ಅಥವಾ ಬೀಜಮಿತ್ರ ಘ್ರಾಣಗಳೆಂದು ಹೆಸರು. ಏಕೆಂದರೆ ಬೀಜಗಳು ಧನ ವಿದ್ಯುದಾವೇಶಗಳು. ಕೆಲವು ಅಣುಗಳ ಆಕಾರ ತೊಡಕಾಗಿದ್ದು ಅವು ಒಂದು ಭಂಗಿಯಲ್ಲಿ ಬೆಣೆಯಾಕಾರದ ಗುಳಿಯಲ್ಲಿ ಅವು ಹಿಡಿಸಬಹದು. ಈ ಸಂದರ್ಭದಲ್ಲಿ ಕರ್ಪೂರ ಹಾಗೂ ಪುದಿನಗಳ ಮಿಶ್ರವಾಸನೆಯ ಅನುಭವ ನಮಗಾಗುತ್ತದೆ. ಇದೇ ರೀತಿ ಇತರ ಮಿಶ್ರ ಘ್ರಾಣಗಳ ಪರಿಚಯವೂ ಆಗುವುದು.

ಪ್ರಾಯೋಗಿಕ ಸಮರ್ಥನೆ

ಬದಲಾಯಿಸಿ

ಅಮೂರನ ಈ ವಾದಕ್ಕೆ[] ಅವನ ಸಹಸಂಶೋಧಕರಾದ ರೂಬಿನ್ ಮತ್ತು ಜಾನ್‌ಸ್ಟನ್ ಎಂಬುವರು ಅತಿ ಸಮರ್ಪಕವಾದ ಪ್ರಾಯೋಗಿಕ ಸಮರ್ಥನೆಗಳನ್ನು ದೊರಕಿಸಿಕೊಟ್ಟಿದ್ದಾರೆ. ಅವರು ಕೃತಕ ಸಂಶ್ಲೇ಼ಷಣೆಯಿಂದ ವಿವಿಧ ಆಕಾರಗಳ ಅಣುಗಳನ್ನು ತಯಾರಿಸಿ ಅವನ್ನು ಆವಿಯ ರೂಪದಲ್ಲಿ ಕೊಳವೆ ಕವಾಟಗಳ ಮೂಲಕ ಗೊತ್ತಾದ ಪ್ರಮಾಣದಲ್ಲಿ ವಾಯುವಿನೊಂದಿಗೆ ಬೆರೆಸಿ ಘ್ರಾಣ ಪ್ರವೀಣರ ಮೂಗುಗಳಿಗೆ ಬೀರಿದ್ದಾರೆ. ಇಂಥ ಉಪಕರಣಗಳಿಗೆ ಘ್ರಾಣಮಾಪಿಗಳೆಂದು ಹೆಸರು. ಘ್ರಾಣಮಾಪಿಗಳಿಂದ ಹೊರಬಿದ್ದ ವಿವಿಧ ವಾಸನೆಗಳನ್ನು ಘ್ರಾಣ ಪ್ರವೀಣರು ನಿರೀಕ್ಷೆಗೆ ಅನುಗುಣವಾಗಿಯೇ ಗುರುತಿಸಿದ್ದಾರೆ. ಉದಾಹರಣೆಗೆ ಕರ್ಪೂರ, ಕಸ್ತೂರಿ, ಹೂ, ಪುದಿನಗಳ ವಾಸನೆಗಳನ್ನು ಸೂಸುವ ಅಣುಗಳನ್ನು ರಚಿಸಿ ತಕ್ಕ ಪ್ರಮಾಣದಲ್ಲಿ ಬೆರೆಸಿ ಅವರು ಗಂಧದೆಣ್ಣೆಯ ವಾಸನೆ ಬೀರುವ ದ್ರವ್ಯವನ್ನು ಯಶಸ್ವಿಯಾಗಿ ಸೃಷ್ಟಿಸಿದ್ದಾರೆ. ಈ ದ್ರವ್ಯದ ರಾಸಾಯನಿಕ ಸಂಯೋಜನೆಗೂ ಗಂಧದೆಣ್ಣೆಯ ಪರಮಾಣು ಸಂಯೋಜನೆಗೂ ಯಾವ ಸಂಬಂಧವೂ ಇಲ್ಲ.

ವಾಸನೆಗಳ ಮಿಶ್ರಣ ಹಾಗೂ ಸ್ವಾದ (ಓಡರ್ ಬ್ಲೆಂಡಿಂಗ್ ಅಂಡ್ ಫ್ಲೇವರ್)

ಬದಲಾಯಿಸಿ

ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಕ್ರಮವಿದು. ವಾಸನೆಗಳ ಸಂಯೋಜನೆ ಹಾಗೂ ವಿವಿಧ ಮಿಶ್ರಣಗಳು ವ್ಯವಹಾರದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಏಕಕಾಲದಲ್ಲಿ ಎರಡು ರೀತಿಯ ವಾಸನೆಗಳನ್ನು ಮೂಸಿದರೆ ಅವುಗಳ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯ. ಇವೆರಡೂ ವಾಸನೆಗಳಲ್ಲಿರುವ ವ್ಯತ್ಯಾಸ ಕಡಿಮೆಯಾದಷ್ಟೂ ಅವುಗಳ ಸಂಯೋಜನ ಸಾಮರ್ಥ್ಯ ಅಧಿಕಗೊಳ್ಳುತ್ತದೆ. ಹೀಗಿದ್ದರೂ ಒಬ್ಬ ಘ್ರಾಣಪ್ರವೀಣ ಎರಡು ಸಂಯೋಜಿತ ವಾಸನೆಗಳು ಯಾವುವೆಂಬುದನ್ನು ಸಾಮಾನ್ಯವಾಗಿ ಹೇಳಬಲ್ಲ. ಒಂದರ ವಾಸನೆ ಮತ್ತೊಂದಕ್ಕಿಂತ ಬಹುತೇಕ ಹೆಚ್ಚಿದ್ದರೆ ಇದು ಮತ್ತೊಂದರ ವಾಸನೆಗೆ ಅಡ್ಡಿ ಬರುತ್ತದೆ. ವಾಸನೆಯ ಅಳಿವಿಗೆ ರಾಸಾಯನಿಕ ತಟಸ್ಥೀಕರಣ (ನ್ಯೂಟ್ರಲೈಸೇಶನ್) ಅನೇಕವೇಳೆ ಮೂಲ ಆಧಾರ; ಮತ್ತು ರಾಸಾಯನಿಕಗಳಿಗೆ ಸಂಬಂಧವಿಲ್ಲದ ವಾಸನೆಗಳಲ್ಲಿ ಶರೀರವೈಜ್ಞಾನಿಕ (ಫಿಸಿಯಲಾಜಿಕಲ್) ಇಲ್ಲವೇ ಮನೋವೈಜ್ಞಾನಿಕ (ಸೈಕಲಾಜಿಕಲ್) ಪ್ರಚೋದನೆ ಆಧಾರ ಎಂಬುದು ಕೆಲವರ ಅಭಿಪ್ರಾಯ. ಆದರೆ ಸಾಮಾನ್ಯವಾಗಿ ಈ ಅಭಿಪ್ರಾಯಕ್ಕೆ ಮನ್ನಣೆ ದೊರೆತಿಲ್ಲ. ಸುಗಂಧ ಸಂಯೋಜನೆ ನಡೆಯುವುದು ಬಹುಮಟ್ಟಿಗೆ ಪ್ರವೀಣನ ಕುಶಲತೆಯಿಂದಲೇ ಹೊರತು ವೈಜ್ಞಾನಿಕ ಸೂತ್ರಗಳಿಂದಲ್ಲ.

ಆಹಾರ ಪದಾರ್ಥಗಳಿಗೆ ಇರುವ ಸ್ವಾದವೈಶಿಷ್ಟ್ಯ ವಾಸನೆಯನ್ನೇ ಅವಲಂಬಿಸುತ್ತದೆ. ಇದು ಅನೇಕ ಅನುಭವಗಳು ಒಂದುಗೂಡಿ ವ್ಯಕ್ತಿಯ ಪ್ರಜ್ಞೆಗೆ ಬರುವಂಥದು. ನೀರುಳ್ಳಿ ಕರಿಯುವಾಗ ಅಥವಾ ಕಾಫಿಬೀಜ ಹುರಿಯುವಾಗ ಹೊರಬರುವ ಘಮಘಮಗಳಲ್ಲಿ ಘ್ರಾಣಪ್ರಜ್ಞೆಯೇ ಪ್ರಧಾನ. ಆಹಾರ ಕೈಗಾರಿಕೆಯಲ್ಲಿ ಸ್ವಾದದ ಪಾತ್ರ ಬಹು ಮುಖ್ಯ. ಈಚೀಚೆಗೆ ಸ್ವಾದಗಳಿಂದ ಗಿರಾಕಿಗಳನ್ನು ಆಕರ್ಷಿಸಲು ಪ್ರವೀಣರ ತಂಡವನ್ನೇ ನೇಮಿಸುವುದು ವಾಡಿಕೆಯಾಗಿದೆ. ಇಂಥ ತಂಡ ಆಹಾರಗಳ ಸ್ವಾದಗಳಲ್ಲಿ ಅತಿ ಸೂಕ್ಷ್ಮವ್ಯತ್ಯಾಸಗಳನ್ನು ಶೋಧಿಸಿ ಗ್ರಾಹಕರ ದೃಷ್ಟಿಯಿಂದ ಯಾವುದು ಮೇಲು ಯಾವುದು ಕೀಳು ಎಂಬ ನಿರ್ಣಯವನ್ನು ಕೊಡುವುದು. ಆದರೆ ಈ ತಂಡದವರು ಮುಖ್ಯವಾಗಿ ತಮಗಿರುವ ರುಚಿ ಮತ್ತು ಘ್ರಾಣಸಾಮರ್ಥ್ಯಗಳ ಆಧಾರದಿಂದ ನಿರ್ಣಯಕ್ಕೆ ಬರುತ್ತಾರೆಯೇ ವಿನಾ ವೈಜ್ಞಾನಿಕ ನಿಮಯಗಳಿಂದಲ್ಲ.

ಘ್ರಾಣಸಾಮರ್ಥ್ಯ ಮತ್ತು ವ್ಯಕ್ತಿ ವರ್ತನೆ

ಬದಲಾಯಿಸಿ

ವಾಸನೆ ಹಿಡಿದು ತನ್ನ ವರ್ತನೆ ರೂಪಿಸಿಕೊಳ್ಳುವುದನ್ನು ಕೆಳವರ್ಗಗಳ ಪ್ರಾಣಿಗಳಲ್ಲಿ ಕಾಣಬಹುದು. ಸ್ನೇಹಿತ ಅಥವಾ ಶತ್ರು ಎಂಬುದನ್ನು ಕೀಟಗಳು ತಮ್ಮ ಘ್ರಾಣಸಾಮರ್ಥ್ಯದಿಂದಲೇ ತಿಳಿದುಕೊಳ್ಳುತ್ತವೆ. ಕೆಲವು ಜಾತಿಯ ಇರುವೆಗಳ ಗ್ರಾಹಕತಂತುಗಳನ್ನು ತೆಗೆದುಬಿಟ್ಟರೆ ಅವು ತಮ್ಮ ತಮ್ಮಲ್ಲೇ ಕಚ್ಚಾಡಿ ನಾಶಹೊಂದುವುದುಂಟು. ಜೇನ್ನೊಣಗಳು ತಮ್ಮ ಗೂಡಲ್ಲದೆ ಅನ್ಯ ಗೂಡಿನೊಳಗೆ ನುಗ್ಗಿದರೆ ಅವು ಪರಕೀಯ ಕೀಟಗಳೆಂದು ಆ ಗೂಡಿನ ಜೇನ್ನೊಣಗಳು ಘ್ರಾಣಸಾಮರ್ಥ್ಯದಿಂದಲೇ ನಿರ್ಧರಿಸಿ ಅವನ್ನು ಕೊಂದುಹಾಕುತ್ತವೆ. ಜೇನ್ನೊಣಗಳಿಗೆ ಗ್ರಾಹಕ ತಂತುಗಳ ಜೊತೆಗೆ ಹೊಟ್ಟೆಯ ತುದಿಯಲ್ಲಿ ಮತ್ತೊಂದು ಘ್ರಾಣಾಂಗವೂ ಉಂಟು. ಇವು ಅವುಗಳ ಆಹಾರಾನ್ವೇಷಣೆಯಲ್ಲಿ ಸಹಾಯಕವಾಗುತ್ತವೆ.

ವಾಸನೆಗೂ ಲೈಂಗಿಕ ಆಕರ್ಷಣೆ ಮತ್ತು ನಡತೆಗೂ ನಿಕಟ ಸಂಬಂಧವಿದೆ. ಹೆಣ್ಣು ಗಂಡುಗಳ ಗ್ರಾಹಕ ತಂತುಗಳಲ್ಲಿರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಇಲ್ಲಿ ಗಮನಿಸಬಹುದು. ಕಾಡುಗಳಲ್ಲಿರುವ ಸ್ತನಿ ಪ್ರಾಣಿಗಳು ಇತರ ಪ್ರಾಣಿಗಳನ್ನು ಆಕರ್ಷಿಸಲು ತಮ್ಮ ಘ್ರಾಣ ಗ್ರಂಥಿಗಳನ್ನು ಉಪಯೋಗಿಸಿಕೊಳ್ಳುತ್ತವೆ.[] ಮೃಗಗಳ ಬೆದೆಗಾಲದ ಅರಿವು ಮೂಡುವುದು ವಾಸನೆಯಿಂದಲೇ.[] ಋತುಚಕ್ರದ ವಿವಿಧ ವೇಳೆಗಳಲ್ಲಿ ಹೆಣ್ಣಿನ ವಾಸನೆ ವ್ಯತ್ಯಾಸ ಆಯಾ ಕಾಲದ ಅಂತಃಸ್ರಾವಗಳನ್ನು ಅವಲಂಬಿಸಿರುವುದು ಉಂಟು.[೧೦]

ಉಲ್ಲೇಖಗಳು

ಬದಲಾಯಿಸಿ
  1. Chaudhury, D; Manella, L; Arellanos, A; Escanilla, O; Cleland, T. A.; Linster, C (2010). "Olfactory bulb habituation to odor stimuli". Behavioral Neuroscience. 124 (4): 490–99. doi:10.1037/a0020293. PMC 2919830. PMID 20695648.
  2. Shepherd, Gordon M. (2004). The Synaptic Organization of the Brain. ISBN 9780195159561.
  3. Spengler, p. 483
  4. Oracle Education Foundation (25 Aug 2010). "Your Sense of Smell – The Senses". ThinkQuest Library. Archived from the original on 8 August 2011. Retrieved 30 November 2010.
  5. Auffarth, B. (2013). "Understanding smell – the olfactory stimulus problem". Neuroscience & Biobehavioral Reviews. 37 (8): 1667–79. doi:10.1016/j.neubiorev.2013.06.009. PMID 23806440. S2CID 207090474.
  6. de march, Claire A.; Ryu, sangEun; Sicard, Gilles; Moon, Cheil; Golebiowski, Jérôme (September 2015). "Structure–odour relationships reviewed in the postgenomic era". Flavour and Fragrance Journal. 30 (5): 342–61. doi:10.1002/ffj.3249.
  7. AMOORE, J E. “Stereochemical theory of olfaction.” Nature vol. 198 (1963): 271-2. doi:10.1038/198271a0
  8. Richard Estes (1992). The Behavior Guide to African Mammals: Including Hoofed Mammals, Carnivores, Primates. University of California Press. ISBN 978-0-520-08085-0. Scent glands.
  9. Rekwot, P.I.; Ogwu, D.; Oyedipe, E.O.; Sekoni, V.O. (March 2001). "The role of pheromones and biostimulation in animal reproduction". Animal Reproduction Science. 65 (3–4): 157–170. doi:10.1016/s0378-4320(00)00223-2. PMID 11267796.
  10. Grammer, Karl; Fink, Bernhard; Neave, Nick (February 2005). "Human pheromones and sexual attraction". European Journal of Obstetrics & Gynecology and Reproductive Biology. 118 (2): 135–142. doi:10.1016/j.ejogrb.2004.08.010. PMID 15653193.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಂಪು&oldid=1214396" ಇಂದ ಪಡೆಯಲ್ಪಟ್ಟಿದೆ