ಇದೇ ಹೆಸರಿನ ಕನ್ನಡ ವಾರಪತ್ರಿಕೆಯ ಬಗ್ಗೆ ಮಾಹಿತಿ ಈ ಪುಟದಲ್ಲಿ ಇದೆ

ಕಸ್ತೂರಿಯು ಗಂಡು ಕಸ್ತೂರಿಮೃಗದ ಉದರ ಮತ್ತು ಜನಕಾಂಗಗಳ ಮಧ್ಯೆ ಸ್ಥಿತವಾಗಿರುವ ಒಂದು ಗ್ರಂಥಿಯಲ್ಲಿ ಉತ್ಪಾದನೆಗೊಳ್ಳುವ ಸುವಾಸನೆ ಉಳ್ಳ ಪದಾರ್ಥ. ಅಂಗಡಿಯಲ್ಲಿ ಮಾರುವ ಕಸ್ತೂರಿ ಎಂಬ ವಸ್ತು ಈ ಪ್ರಾಣಿಯಿಂದಲೇ ಬಂದುದು. ಆದರೆ ಇತರ ಕೆಲವು ಬಗೆಯ ಪ್ರಾಣಿಗಳೂ ಇದೇ ವಾಸನೆಯನ್ನು ಹೊರಸೂಸುತ್ತವೆ.  ಉದಾಹರಣೆಗೆ ಕಸ್ತೂರಿ ದನ, ಕಸ್ತೂರಿ ಇಲಿ, ಕಸ್ತೂರಿ ಬಾತು, ಕಸ್ತೂರಿ ಮೂಗಿಲಿ ಇತ್ಯಾದಿ. ಅಲ್ಲದೆ ಕೆಲವು ಸಸ್ಯಗಳಲ್ಲೂ ಈ ಬಗೆಯ ವಾಸನೆ ಸೂಸುವ ಗ್ರಂಥಿಗಳಿವೆ. ಆ ಸಸ್ಯಗಳನ್ನು ಕಸ್ತೂರಿ ಗಿಡಗಳೆಂದು ಕರೆಯಲಾಗುತ್ತದೆ.

ಗಂಡು ಕಸ್ತೂರಿಮೃಗದಿಂದ ಪಡೆಯಲಾದ ಕಸ್ತೂರಿ ಚೀಲ

ಕಸ್ತೂರಿ ಮೃಗವನ್ನು ಕೊಂದು ಅದರ ಹೊಟ್ಟೆಯಲ್ಲಿನ ಕಸ್ತೂರಿ ಗ್ರಂಥಿಯನ್ನು ಹೊರತೆಗೆದು ಬಿಸಿಲಿನಲ್ಲೋ, ಬಿಸಿ ಎಣ್ಣೆಯಲ್ಲಿ ಅದ್ದಿಯೋ, ಒಣಗಿಸುತ್ತಾರೆ. ಕೆಲವು ಸಾರಿ ಕಸ್ತೂರಿ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆದು ಶುದ್ಧೀಕರಿಸಿ ಮಾರುವುದೂ ಉಂಟು.

ಕಸ್ತೂರಿಯಲ್ಲಿ ಮೂರು ಬಗೆಗಳುಂಟು : 1) ಟಾಂಕಿಂಗ್ ಅಥವಾ ಚೀನೀ ಕಸ್ತೂರಿ, 2) ಅಸ್ಸಾಮ್ ಅಥವಾ ನೇಪಾಳದ ಕಸ್ತೂರಿ, 3) ಕಬಾರ್ಡಿನ್ ಅಥವಾ ರಷ್ಯದ ಕಸ್ತೂರಿ. ಟಾಂಕಿಂಗ್ ಕಸ್ತೂರಿಯೇ ಇವುಗಳಲ್ಲೆಲ್ಲ ಶ್ರೇಷ್ಠವಾದುದು, ಹಾಗೂ ಹೆಚ್ಚಿನ ಬೆಲೆಯದು.

ಕಸ್ತೂರಿ ಹೊಚ್ಚ ಹೊಸದಾಗಿರುವಾಗ ಮೃದುವಾಗಿಯೂ ಜಿಡ್ಡುಜಿಡ್ಡಾಗಿಯೂ ಇರುತ್ತದೆ. ಅದರ ಬಣ್ಣ ಕೆನ್ನೀಲಿ. ವಾಸನೆ ಸಹಿಸಲಾಗದಷ್ಟು ಕಟು, ರುಚಿ ಕಹಿ. ಕುದಿಯುವ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಇದು ಸುಗಂಧ ದ್ರವ್ಯಗಳನ್ನು ತಯಾರಿಸಲು ಉಪಯೋಗಿಸುವ ಶ್ರೇಷ್ಠತಮ ಮೂಲದ್ರವ್ಯವೆಂದು ಹೆಸರಾಗಿದೆ.

ಔಷಧೀಯ ಗುಣಗಳು

ಬದಲಾಯಿಸಿ

ಕಸ್ತೂರಿಗೆ ಔಷಧೀಯ ಗುಣಗಳೂ ಉಂಟು. ಇದನ್ನು ಉತ್ತೇಜಕ, ಕಾಮೋದ್ದೀಪಕ, ಕಫಹಾರಕ, ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ.

ಸುಗಂಧದ ಕಾರಣ

ಬದಲಾಯಿಸಿ

ಕಸ್ತೂರಿಯ ವೈಶಿಷ್ಟ್ಯಪೂರ್ಣ ಸುಗಂಧಕ್ಕೆ ಕಾರಣ ಅದರಲ್ಲಿನ ಮಸ್ಕೋನ್‍ ಎಂಬ ವಸ್ತು. ವಾಲ್ಬಾಮ್ ಎಂಬಾತ 1906ರಲ್ಲಿ ಮೊದಲ ಬಾರಿಗೆ ಇದನ್ನು ಕಸ್ತೂರಿಯಿಂದ ಬೇರ್ಪಡಿಸಿ ಶುದ್ಧೀಕರಿಸಿದ. ರಾಸಾಯನಿಕವಾಗಿ ಇದು 3-ಮೀಥೈಲ್-ಸೈಕ್ಲೊಪೆಂಟ ಡಿಕಾನೋನ್ ಎಂದು ತಿಳಿದುಬಂದಿದೆ.

ಕೃತಕ ಕಸ್ತೂರಿ

ಬದಲಾಯಿಸಿ

ಸ್ವಾಭಾವಿಕ ಕಸ್ತೂರಿಯಂಥ ವಾಸನೆಯಿರುವ ಹಲವಾರು ಬಗೆಯ ಸಂಯುಕ್ತಗಳನ್ನು ಕೃತಕವಾಗಿ ಸಂಶ್ಲೇಷಿಸಬಹುದಾಗಿದೆ. (1888) ರಲ್ಲಿ ಬಾರ್ ಎಂಬಾತ ಅಲ್ಯೂಮಿನಿಯಮ್ ಕ್ಲೋರೈಡಿನೊಡನೆ ಟಾಲೀನ್ ಮತ್ತು ಐಸೊಬ್ಯೂಟೈಲ್ ಬ್ರೋಮೈಡುಗಳನ್ನು ಸಂಘನನ (ಕಂಡೆನ್ಸೇಷನ್) ಕ್ರಿಯೆಗೊಳಪಡಿಸಿ ಅದರಿಂದ ಬಂದ ವಸ್ತುವನ್ನು ನೈಟ್ರೀಕರಣ ಮಾಡಿ ಕೃತಕ ಕಸ್ತೂರಿಯನ್ನು ತಯಾರಿಸಿದ. ಇದಕ್ಕೆ ಬಾರ್‍ಮಸ್ಕ್ ಎಂದು ಹೆಸರು. ಇದಲ್ಲದೆ ಕಸ್ತೂರಿಯನ್ನು ಹೋಲುವ ಜ಼ೈಲೀನ್ ಮಸ್ಕ್, ಮಸ್ಕ್‌ಕೀಟೋನ್, ಮಾಸ್ಕೀನ್, ಫ್ಯಾಂಟೋಲಿಡ್ ಎಂಬ ಸಂಯುಕ್ತಗಳನ್ನು ಕೃತಕವಾಗಿ ತಯಾರಿಸಬಹುದಾಗಿದೆ. ಇವೆಲ್ಲವನ್ನು ಸಾಬೂನು ಇತ್ಯಾದಿ ವಸ್ತುಗಳಿಗೆ ಸುವಾಸನೆ ಕೊಡಲು ಬಳಸುತ್ತಾರೆ.

  This article incorporates text from a publication now in the public domainChisholm, Hugh, ed. (1911). "Musk" . Encyclopædia Britannica. Vol. 19 (11th ed.). Cambridge University Press. p. 90. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)

ಹೆಚ್ಚಿನ ಓದಿಗೆ

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಸ್ತೂರಿ&oldid=1108498" ಇಂದ ಪಡೆಯಲ್ಪಟ್ಟಿದೆ