ಆಮ್ಲಜನಕ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆಮ್ಲಜನಕ, O, 8 | ||||||||||||||
ರಾಸಾಯನಿಕ ಸರಣಿ | ಅಲೋಹ, chalcogens | ||||||||||||||
ಗುಂಪು, ಆವರ್ತ, ಖಂಡ | 16, 2, p | ||||||||||||||
ಸ್ವರೂಪ | ದ್ರವರೂಪದ ಆಮ್ಲಜನಕ | ||||||||||||||
ಅಣುವಿನ ತೂಕ | 15.9994(3) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s2 2s2 2p4 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 6 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಅನಿಲ | ||||||||||||||
ಸಾಂದ್ರತೆ | (0 °C, 101.325 kPa) 1.429 g/L | ||||||||||||||
ಕರಗುವ ತಾಪಮಾನ | 54.36 K (-218.79 °C, -361.82 °ಎಫ್) | ||||||||||||||
ಕುದಿಯುವ ತಾಪಮಾನ | 90.20 K (-182.95 °C, -297.31 °F) | ||||||||||||||
ಕ್ರಾಂತಿಬಿಂದು | 154.59 K, 5.043 MPa | ||||||||||||||
ಸಮ್ಮಿಲನದ ಉಷ್ಣಾಂಶ | (O2) 0.444 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | (O2) 6.82 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (O2) 29.378 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಘನಾಕೃತಿ | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 2, 1, −1, −2 (neutral oxide) | ||||||||||||||
ವಿದ್ಯುದೃಣತ್ವ | 3.44 (Pauling scale) | ||||||||||||||
ಅಣುವಿನ ತ್ರಿಜ್ಯ | 60 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 48 pm | ||||||||||||||
ತ್ರಿಜ್ಯ ಸಹಾಂಕ | 73 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 152 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | paramagnetic | ||||||||||||||
ಉಷ್ಣ ವಾಹಕತೆ | (300 K) 26.58x10-3 W·m−1·K−1 | ||||||||||||||
ಶಬ್ದದ ವೇಗ | (gas, 27 °C) 330 m/s | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7782-44-7 | ||||||||||||||
ಉಲ್ಲೇಖನೆಗಳು | |||||||||||||||
ಆಮ್ಲಜನಕ (Oxygen) ಪ್ರಕೃತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರೆಯುವ ಅನಿಲ ರೂಪದ ಒಂದು ಮೂಲಧಾತು[೧]. ಇದರ ರಾಸಾಯನಿಕ ಸಂಕೇತ ೦, ಪರಮಾಣು ಸಂಖ್ಯೆ ೮, ಪರಮಾಣು ತೂಕ ೧೫.೯೯೯೪, ಎಲೆಕ್ಟ್ರಾನ್ ಜೋಡಣೆ ೨,೬ ಅಥವಾ [He] 2s2 2p4. ಆವರ್ತಕೋಷ್ಟಕದಲ್ಲಿ ೬ನೆಯ ಗುಂಪಿಗೆ ಸೇರಿರುವ ಮೂಲವಸ್ತು. ಒಂದು ಅಲೋಹ. ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು. ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು. ವಾತಾವರಣದ ೧/೫ ರಷ್ಟು,ಭೂಪದರ(Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು,[೨] ಖನಿಜ ಹಾಗೂ ಶಿಲೆಗಳ ತೂಕದ ಅರ್ದದಷ್ಟು, ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ. ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ, ರುಚಿ ಇಲ್ಲದ,ವಾಸನೆ ಇಲ್ಲದ ಅನಿಲ. ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ. ಸಾಮಾನ್ಯವಾಗಿ ೨ ಪರಮಾಣು ಸೇರಿಕೊಂಡು ಇರುತ್ತವೆ. ಮೂರು ಪರಮಾಣುಗಳು ಸೇರಿ ಇದ್ದಾಗ ಓಜೋನ್ ಎಂದು ಕರೆಯಲ್ಪಡುತ್ತದೆ. ಇದು ಸೂರ್ಯನ ನೇರಳಾತೀತ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುವುದು. ಈ ಅನಿಲವು ದಹನ ಕ್ರಿಯೆಯನ್ನು ಬೆಂಬಲಿಸುವುದು. ಇದನ್ನು ಕಂಡು ಹಿಡಿದ ವ್ಯಕ್ತಿ ಜೋಸೆಫ್ ಪ್ರೀಸ್ಟ್ಲಿ[೩].
ಹೈಡ್ರೊಜನ್ ಮತ್ತು ಆಕ್ಸಿಜನ್‌ಗಳ ಸಂಯುಕ್ತ ನೀರು. ಗಾಳಿ, ನೀರುಗಳೆರಡೂ ಭೂಮಿಯ ಎಲ್ಲ ಜೀವಿಗಳಿಗೂ ಅತ್ಯಾವಶ್ಯಕ. ಜೊತೆಗೆ ನಿರವಯವ ರಸಾಯನವಿಜ್ಞಾನದಲ್ಲಿ (ಇನ್‌ಆರ್ಗ್ಯಾನಿಕ್ ಕೆಮಿಸ್ಟ್ರಿ) ಆಕ್ಸಿಜನ್ ಸಂಯುಕ್ತಗಳ ಪಾತ್ರ ಬಹು ಹಿರಿದು. ಬಹುತೇಕ ರಾಸಾಯನಿಕ ಕ್ರಿಯೆಗಳು ನಡೆಯುವುದು ನೀರಿನ ಮಾಧ್ಯಮದಲ್ಲಿಯೇ. ಜೀವಿಗಳ ಉಸಿರಾಟ, ದಹನಕ್ರಿಯೆ ಇವೆಲ್ಲವಕ್ಕೂ ಅಗಾಧ ಪ್ರಮಾಣದಲ್ಲಿ ಆಕ್ಸಿಜನ್ ವಿನಿಯೋಗವಾಗುತ್ತಿದ್ದರೂ ಗಾಳಿಯಲ್ಲಿನ ಇದರ ಅಂಶ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ಇರುತ್ತದೆ. ಕಾರಣ, ಗಿಡ ಮರಗಳ ಎಲೆಗಳ ದ್ಯುತಿಸಂಶ್ಲೇಷಣೆಯಲ್ಲಿ ಆಕ್ಸಿಜನ್ ಹೊರಬೀಳುತ್ತಿರುತ್ತದೆ. ವಾತಾವರಣದಲ್ಲಿ ನೀರಿನ ಆವಿ ಕೂಡ ಸೂರ್ಯನ ಕಿರಣಗಳಲ್ಲಿರುವ ಅತಿನೀಲ ರಶ್ಮಿಗಳಿಂದ ವಿಭಜನೆ ಹೊಂದಿ ಭಾರವಾದ ಆಕ್ಸಿಜನ್ ಗುರುತ್ವಾಕರ್ಷಣೆಯಿಂದ ಗಾಳಿಯಲ್ಲಿಯೇ ಉಳಿದು ಹಗುರವಾದ ಹೈಡ್ರೊಜನ್ ವಾತಾವರಣದ ಮೇಲ್ಪದರದೊಡನೆ ಮಿಲನವಾಗುತ್ತದೆ. ಪ್ರಕೃತಿಯಲ್ಲಿ ದೊರಕುವ ಅನೇಕ ಲೋಹಗಳ ಅಥವಾ ಅಲೋಹಗಳ ಅದುರುಗಳು ಅಥವಾ ಖನಿಜಗಳು ಆಕ್ಸಿಜನ್‌ನ್ನು ಹೊಂದಿವೆ. ಉದಾಹರಣೆಗೆ ಕಬ್ಬಿಣದ ಅದುರಾದ ಹೆಮಟೈಟ್ (Fe2O3), ಅಲ್ಯೂಮಿನಿಯಂ ಅದುರಾದ ಬಾಕ್ಸೈಟ್ (Al2O3), ಸುಣ್ಣಕಲ್ಲು (CaCO3), ಮರಳು ಮತ್ತು ಬೆಣಚು ಕಲ್ಲು (SiO2), ಇತರ ಸಿಲಿಕೇಟುಗಳು ಇತ್ಯಾದಿ. ಅಲ್ಲದೆ ಎಲ್ಲ ಪ್ರಾಣಿ ವರ್ಗ, ಸಸ್ಯವರ್ಗಗಳಲ್ಲೂ ಆಕ್ಸಿಜನ್ ಅಂಶವಿದೆ. ಕೊಬ್ಬು, ಪಿಷ್ಟ, ಸಕ್ಕರೆ ಪದಾರ್ಥಗಳು, ಪ್ರೋಟಿನ್ ಎಲ್ಲದರಲ್ಲೂ ಆಕ್ಸಿಜನ್ ಇದೆ.
ಆಕ್ಸಿಜನ್ ಕುರಿತು ಪ್ರಥಮ ಪ್ರಯೋಗ ನಡೆಸಿದವ ಶೀಲೆ. ಆತ ಕೆಲವು ಲೋಹಗಳ ಆಕ್ಸೈಡ್‌ಗಳನ್ನು ಕಾಯಿಸಿ ಉಷ್ಣ ವಿಭಜನೆಯಿಂದ ಒಂದು ಅನಿಲವನ್ನು ತಯಾರಿಸಿದ (೧೭೭೨). ಮುಂದೆ ೧೭೭೪ರಲ್ಲಿ ಅದೇ ವಿಧಾನದಿಂದ ಆದರೆ ಸ್ವತಂತ್ರವಾಗಿ ಜೋಸೆಫ್ ಪ್ರೀಸ್ಟ್ಲಿ ತಯಾರಿಸಿದ.[೪] ಆದರೆ ಆ ಅನಿಲ ಒಂದು ಮೂಲ ವಸ್ತು ಎಂದು ನಿರ್ಣಯಿಸಿದಾತ (೧೭೭೫-೧೭೭೭) ಲೆವಾಸಿಯೆ. ಪ್ರಮುಖ ಆಮ್ಲಗಳ (Oxy) ಮೂಲವೆಂದು (gene) ಭಾವಿಸಿದ ಅನಿಲಕ್ಕೆ ಆಕ್ಸಿಜನ್ (ಆಮ್ಲಜನಕ) ಎಂದು ಹೆಸರಿತ್ತ.[೫] ಆದರೆ ಈ ಕಲ್ಪನೆ ಎಲ್ಲ ಆಮ್ಲಗಳಿಗೂ ಸಮರ್ಥನೀಯವಲ್ಲ ಎಂಬುದು ಈಗ ಅರಿವಾಗಿದೆ. ಪ್ರಕೃತಿಯಲ್ಲಿ ದೊರಕುವ ಆಕ್ಸಿಜನ್ O16, O17 ಮತ್ತು O18 ಈ ಮೂರು ಸಮಸ್ಥಾನಿಗಳ ಮಿಶ್ರಣ. ಅವುಗಳ ಪರಸ್ಪರ ಪ್ರಮಾಣಾಂಶ, ೯೯.೭೫೯:೦.೦೩೭:೨೦೪. ರಸಾಯನವಿಜ್ಞಾನಿಗಳು ಬಹುಕಾಲದವರೆಗೂ ಪ್ರಕೃತಿಮೂಲ ಶುದ್ಧ ಆಕ್ಸಿಜನ್ನಿನ ಪರಮಾಣು ತೂಕ ೧೬.೦೦೦೦ ಎಂದು ನಿರ್ಣಯಿಸಿ ಅದರ ಆಧಾರದ ಮೇಲೆ ತಮ್ಮದೇ ಆದ ಮತ್ತೊಂದು ಮೂಲವಸ್ತುಗಳ ಪರಮಾಣು ಭಾರಪಟ್ಟಿಯನ್ನು ಸಿದ್ಧಪಡಿಸಿ ಉಪಯೋಗಿಸಲಾರಂಭಿಸಿದರು. ಆದರೆ ಈ ವಿರೋಧಾಭಾಸ ಈಗ ಕೊನೆಗೊಂಡು C12 ಸಮಸ್ಥಾನಿಯ ಆಧಾರದ ಮೇಲೆ ಉಳಿದೆಲ್ಲ ಮೂಲವಸ್ತುಗಳ ಪರಮಾಣು ಭಾರವನ್ನು ನಿರ್ಣಯಿಸುವ ಪದ್ದತಿ ಅಂತರ್‌ರಾಷ್ಟ್ರೀಯ ಒಪ್ಪಿಗೆ ಪಡೆದು ಸರ್ವಮಾನ್ಯತೆ ಹೊಂದಿದೆ. ಬಹು ಅಲ್ಪಾಯುಗಳಾದ ಮೂರು ವಿಕಿರಣಶೀಲ ಸಮಸ್ಥಾನೀಯಗಳಿರುವುದೂ ತಿಳಿದು ಬಂದಿದೆ: O14, O15 ಮತ್ತು O19.
ತಯಾರಿಸುವ ವಿಧಾನ
ಬದಲಾಯಿಸಿಪ್ರಯೋಗಶಾಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಶುದ್ದ ಆಕ್ಸಿಜನ್ ಅನ್ನು ತಯಾರಿಸಲು ಸಾಮಾನ್ಯವಾಗಿ ಬಳಸುವ ವಿಧಾನವೆಂದರೆ ಪೊಟ್ಯಾಸಿಯಂ ಕ್ಲೋರೇಟ್ ಸಂಯುಕ್ತವನ್ನು ಕಾಯಿಸುವುದು:
2KClO3 (ಘನ) → 2KCl (ಘನ)+3O2↑
ಪೊಟ್ಯಾಸಿಯಂ ಕ್ಲೋರೇಟ್‌ನೊಡನೆ ವೇಗವರ್ಧಕಗಳಾದ (ಕ್ಯಾಟಲಿಸ್ಟ್ಸ್) ಮ್ಯಾಂಗನೀಸ್ ಡೈಆಕ್ಸೈಡ್ ಅಥವಾ ಫೆರ‍್ರಿಕ್ ಆಕ್ಸೈಡ್, ಸಣ್ಣ ಮರಳು ಅಥವಾ ಗಾಜಿನ ಪುಡಿಗಳನ್ನು ಮಿಶ್ರಮಾಡುವುದರಿಂದ ಆಕ್ಸಿಜನ್ ಉತ್ಪತ್ತಿ ಸುಸೂತ್ರವಾಗುವುದು, ಮರ್‌ಕ್ಯೂರಿಕ್ ಆಕ್ಸೈಡ್, ಬೇರಿಯಂ ಪೆರಾಕ್ಸೈಡ್, ಪೊಟ್ಯಾಸಿಯಂ ಪರ್‌ಮ್ಯಾಂಗನೇಟ್ ಕೆಲವು ಆಕ್ಸಿಜನ್ ಅಂಶ ಹೆಚ್ಚಾಗಿರುವ ಸಂಯುಕ್ತಗಳನ್ನು ಕಾಯಿಸಿದಾಗಲೂ ವಿಭಜನೆ ಹೊಂದಿ ಆಕ್ಸಿಜನ್ ಹೊರಬೀಳುವುದು.
ಕೈಗಾರಿಕಾ ಪ್ರಮಾಣದಲ್ಲಿ ಆಕ್ಸಿಜನ್‌ಅನ್ನು ಉತ್ಪಾದಿಸಲು ಗಾಳಿ ಮತ್ತು ನೀರುಗಳೇ ಮೂಲಾಧಾರ. ಶುದ್ಧೀಕರಿಸಿದ ಗಾಳಿ ಮುಖ್ಯವಾಗಿ ನೈಟ್ರೊಜನ್, ಆಕ್ಸಿಜನ್ ಮತ್ತು ಅಲ್ಪ ಪ್ರಮಾಣದಲ್ಲಿ ಅರ್ಗಾನ್‌ನಂಥ ಕೆಲವು ಉತ್ಕೃಷ್ಟ ವಿರಳ ಅನಿಲಗಳ (ನೋಬಲ್ ಅಥವಾ ರೇರ್ ಗ್ಯಾಸಸ್) ಮಿಶ್ರಣ. ಗಾಳಿಯನ್ನು ದ್ರವೀಕರಿಸಿ ಅನಂತರ ನಿಯಂತ್ರಿತ ರೀತಿಯಲ್ಲಿ ಭಟ್ಟಿ ಇಳಿಸಿದರೆ ನೈಟ್ರೊಜನ್ ಮತ್ತು ಆರ್ಗಾನ್ ಅನಿಲಗಳು ಮೊದಲು ಹೊರಬೀಳುವುವು. ಉಳಿಕೆಯ ಗಾಳಿಯನ್ನು ಮತ್ತೆ ಮತ್ತೆ ನಿಯಂತ್ರಿತ ರೀತಿಯಲ್ಲಿ ಬಟ್ಟಿ ಇಳಿಸುವುದರ ಮೂಲಕ ಸುಮಾರು ೯೯.೫% ಶುದ್ಧ ಆಕ್ಸಿಜನ್ ಅನ್ನು ಪಡೆಯಬಹುದು. ನೀರಿನಿಂದಲೂ ಬಹುಶುದ್ಧ ಆಕ್ಸಿಜನ್ ಅನ್ನು ವಿದ್ಯುದ್ವಿಭಜನಾ ಕ್ರಮದಿಂದ ಪಡೆಯಬಹುದು. ಶುದ್ಧ ಹೈಡ್ರೋಜನ್ ಈ ವಿಧಾನದಲ್ಲಿ ಹೊರಬೀಳುವ ಮತ್ತೊಂದು ಕೈಗಾರಿಕಾ ಅನಿಲ. ಆದರೆ ಗಾಳಿಯ ಮೂಲದಿಂದ ಪಡೆದ ಆಕ್ಸಿಜನ್‌ಗಿಂತ ವಿದ್ಯುದ್ವಿಭಜನಾ ಕ್ರಮದಿಂದ ಪಡೆದ ಆಕ್ಸಿಜನ್ ಬೆಲೆ ದುಬಾರಿ. ಕೈಗಾರಿಕಾ ಉಪಯೋಗಗಳಿಗೆ ಆಕ್ಸಿಜನ್ನನ್ನು ತಾಮ್ರದ ಥರ್ಮೋಸ್ ಫ್ಲಾಸ್ಕ್ ಮಾದರಿಯ ಶೇಖರಣಾ ಪಾತ್ರೆಗಳಲ್ಲಿ ದ್ರವ ರೂಪದಲ್ಲಿಯೇ ಅಥವಾ ಉಕ್ಕಿನ ಸಿಲಿಂಡರ್‌ಗಳಲ್ಲಿ ಹೆಚ್ಚಿನ ಒತ್ತಡದಲ್ಲಿ ಶೇಖರಿಸಿ ಸಾಗಿಸುವುದು ಪದ್ಧತಿ.
ಗುಣಲಕ್ಷಣಗಳು
ಬದಲಾಯಿಸಿಸಾಮಾನ್ಯ ವಾತಾವರಣದ ಉಷ್ಣತೆಯ ಮಟ್ಟದಲ್ಲಿ ಆಕ್ಸಿಜನ್ ಒಂದು ಬಣ್ಣವಿಲ್ಲದ, ವಾಸನೆಯಿಲ್ಲದ, ರುಚಿಯಿಲ್ಲದ ಅನಿಲ. ಅದು -೧೮೨೦ ಸೆ. ಗಿಂತ ಕಡಿಮೆ ಉಷ್ಣತೆಯಲ್ಲಿ ದ್ರವರೂಪದಲ್ಲಿರುವುದು. ದ್ರವರೂಪದಲ್ಲಿ ತಿಳಿ ನೀಲಿ ಬಣ್ಣ ಹೊಂದಿರುತ್ತದೆ. -೨೧೮.೪೦ ಸೆ. ಗಿಂತ ಕಡಿಮೆ ಉಷ್ಣತೆಯಲ್ಲಿ ಘನರೂಪ ಹೊಂದುತ್ತದೆ. ಎಲ್ಲ ಸ್ಥಿತಿಗಳಲ್ಲಿಯೂ ಅಲ್ಪ ಆಯಸ್ಕಾಂತೀಯತೆಯನ್ನು ತೋರಿಸುವುದು. ಅನಿಲರೂಪದಲ್ಲಿ ಸಾಮಾನ್ಯವಾಗಿ ದ್ವಿಪರಮಾಣುಗಳ ಕೂಟದ ಅಣುಗಳಿಂದ ಕೂಡಿರುತ್ತದೆ. ಓಜೋನ್ (O3) ಆಕ್ಸಿಜನ್ನಿನ ಮತ್ತೊಂದು ಸ್ವರೂಪ. ಆಕ್ಸಿಜನ್ ನೀರಿನಲ್ಲಿ ಸ್ವಲ್ಪಮಟ್ಟಿಗೆ ಲೀನವಾಗುವುದು. (ಅಂದರೆ ಸುಮಾರು ೧೦೦ ಮಿಲಿ ಲೀಟರ್ ನೀರಿನಲ್ಲಿ ೨.೮ ಮಿಲಿ ಲೀಟರ್‌ನಷ್ಟು ೨೦೦ ಸೆ. ಉಷ್ಣತೆಯಲ್ಲಿ) ಸಮುದ್ರದ ನೀರಿನಲ್ಲಿ ಆಕ್ಸಿಜನ್‌ನ ಲೀನತೆ ಇನ್ನೂ ಕಡಿಮೆ. ಮೀನುಗಳು ನೀರಿನಲ್ಲಿ ಬದುಕಲು ಈ ಲೀನವಾಗಿರುವ ಆಕ್ಸಿಜನ್ ಅತ್ಯಾವಶ್ಯಕ.
ರಾಸಾಯನಿಕ ಗುಣಗಳು
ಬದಲಾಯಿಸಿರಾಸಾಯನಿಕವಾಗಿ ಆಕ್ಸಿಜನ್ ತೀವ್ರ ಪಟುವಾದ ಪದಾರ್ಥ. ರಾಸಾಯನಿಕ ಮೂಲವಸ್ತುಗಳಲ್ಲೆಲ್ಲ ಅತ್ಯಂತ ತೀಕ್ಷ್ಣ ಚಟುವಟಿಕೆಯುಳ್ಳದ್ದೆಂದು ಹೆಸರುವಾಸಿಯಾದ ಫ್ಲೋರಿನ್‍ನ ವಿದ್ಯುದೃಣತೆ ೪.೦. ಎರಡನೆಯ ಸ್ಥಾನ ಆಕ್ಸಿಜನ್ನಿಗೆ, ೩.೫. ಹೀಲಿಯಂ, ನಿಯಾನ್ ಆರ್ಗಾನ್‌ಗಳ ಹೊರತು ಲೋಹ ಮತ್ತು ಅಲೋಹಗಳಾದಿಯಾಗಿ ಉಳಿದೆಲ್ಲ ಮೂಲವಸ್ತುಗಳೊಡನೆ ಆಕ್ಸಿಜನ್ ಸಂಯೋಗವಾಗುತ್ತದೆ. ಒಂದು ಮೂಲವಸ್ತು ಮತ್ತು ಆಕ್ಸಿಜನ್ ಕೇವಲ ಇವೆರಡರ ಸಂಯುಕ್ತಗಳಿಗೆ ಆಕ್ಸೈಡ್‌ಗಳೆಂದು ಕರೆಯುವುದು ವಾಡಿಕೆ. ಹಾಗೆ ನೋಡಿದಾಗ ನೀರು ಹೈಡ್ರೊಜನ್-ಆಕ್ಸೈಡ್. ಅನೇಕ ಸಂಯುಕ್ತಗಳಲ್ಲಿ ಆಕ್ಸಿಜನ್ ಬಂಧ ಅಥವಾ ಸಂಯೋಗಶಕ್ತಿ ಸಾಮಾನ್ಯವಾಗಿ ೨. ಆಕ್ಸಿಜನ್ ನೇರವಾಗಿ ಒಂದು ಮೂಲವಸ್ತುವಿನೊಡನೆ ಸಂಯೋಗಿಸಿದಾಗ ಉತ್ಕರ್ಷಣ (ಆಕ್ಸಿಡೇಷನ್) ಕ್ರಿಯೆ ನಡೆದುದಾಗಿ ಹೇಳುವುದು ವಾಡಿಕೆ. ಅನೇಕ ಮೂಲವಸ್ತುಗಳು ಆಕ್ಸಿಜನ್‌ನೊಡನೆ ಸಾಮಾನ್ಯ ವಾತಾವರಣದ ಉಷ್ಣತೆಯ ಮಟ್ಟದಲ್ಲೇ ನೇರವಾಗಿ ಉತ್ಕರ್ಷಿತವಾಗುವುದಾದರೂ (ಉದಾಹರಣೆಗೆ ಸೋಡಿಯಂ ಗುಂಪಿನ ಲೋಹಗಳು, ಅಲ್ಯೂಮಿನಿಯಂ, ಕಬ್ಬಿಣ ಇತ್ಯಾದಿ) ಇನ್ನುಳಿದವು ಉತ್ಕರ್ಷಿತವಾಗಲು ಉಷ್ಣ ಪೂರೈಕೆಯಾಗಬೇಕು. (ಉದಾ: ಜರ‍್ಕೋನಿಯಂ, ಟಂಗ್‌ಸ್ಟನ್ ಇತ್ಯಾದಿ). ಇತ್ತೀಚೆಗೆ ಉತ್ಕರ್ಷಣ ಎಂಬ ಪದಕ್ಕೆ ಇನ್ನೂ ಹೆಚ್ಚಿನ ವ್ಯಾಪ್ತಿ ಇರುವ ಅರ್ಥ ಕೊಡಲಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಬಹುದು. ಸೋಡಿಯಂ ಲೋಹ ಆಕ್ಸಿಜನ್‌ನೊಡನೆ ಮೊದಲು ಸೋಡಿಯಂ ಆಕ್ಸೈಡ್ (Na2O) ಸಂಯುಕ್ತವನ್ನು ಕೊಡುತ್ತದೆ. ಮತ್ತಷ್ಟು ಆಕ್ಸಿಜನ್‌ನೊಡನೆ ಸಂಯೋಗಿಸಿ ಸೋಡಿಯಂ ಪೆರಾಕ್ಸೈಡ್ (Na2O2) ಉತ್ಪತ್ತಿಯಾಗುತ್ತದೆ. ಸೋಡಿಯಂ ಗುಂಪಿನ ಉಳಿದೆಲ್ಲ ಲೋಹಗಳಿಗೂ ಕ್ಯಾಲ್ಸಿಯಂ ಗುಂಪಿನ ಲೋಹಗಳು ಈ ಪೆರಾಕ್ಸೈಡ್‌ಗಳನ್ನು ಆಮ್ಲಗಳೊಡನೆ ಕ್ರಿಯೆಗೊಳಪಡಿಸಿ ಹೈಡ್ರೊಜನ್ ಪೆರಾಕ್ಸೈಡ್ ಪಡೆಯಬಹುದು.
BaO2 + H2SO4 → BaSO4 + H2O2
ಬೇರಿಯಂ ಪೆರಾಕ್ಸೈಡ್ + ಸಲ್ಫ್ಯೂರಿಕ್ ಆಮ್ಲ → ಬೇರಿಯಂ ಸಲ್ಫೇಟ್ + ಹೈಡ್ರೊಜನ್ ಪೆರಾಕ್ಸೈಡ್
ಲೋಹಗಳ ಆಕ್ಸೈಡ್‌ಗಳು ನೀರಿನಲ್ಲಿ ಲೀನವಾದಾಗ ಕ್ಷಾರಗಳನ್ನೂ ಅದೇ ಲೋಹಗಳ ಆಕ್ಸೈಡ್‌ಗಳ ಆಮ್ಲಗಳನ್ನೂ ಕೊಡುವುವು. ಉದಾಹರಣೆಗೆ-
Na2O + H2O → 2NaOH
ಸೋಡಿಯಂ ಆಕ್ಸೈಡ್ + ನೀರು → ಸೋಡಿಯಂ ಹೈಡ್ರಾಕ್ಸೈಡ್
SO3 + H2O → H2SO4
ಸಲ್ಫರ್ ಟ್ರೈಆಕ್ಸೈಡ್ + ನೀರು → ಸಲ್ಫ್ಯೂರಿಕ್ ಆಮ್ಲ
ಈ ಆಕ್ಸೈಡ್, ಪೆರಾಕ್ಸೈಡ್‌ಗಳಲ್ಲದೆ ಇಂಥ ಅನೇಕ ವಿಧದ ರಾಸಾಯನಿಕ ಸಂಯುಕ್ತಗಳ ಅಣುಗಳಲ್ಲಿಯೂ ಆಕ್ಸಿಜನ್ ಪಾತ್ರಧಾರಿ. ಗಾಳಿಯಲ್ಲಿ ಅಥವಾ ಅನಿಲಗಳ ಮಿಶ್ರಣದಲ್ಲಿನ ಆಕ್ಸಿಜನ್ ಅಂಶವನ್ನು ಅಳೆಯಲು ಆಕ್ಸಿಜನ್ ಅನ್ನು ಪ್ರಬಲವಾಗಿ ಹೀರಿ ತಮ್ಮಲ್ಲಿ ಲೀನ ಮಾಡಿಕೊಳ್ಳುವ ವಿಶಿಷ್ಟ ಲಕ್ಷಣಕಾರಿ ವಸ್ತುಗಳಾದ ಕ್ಷಾರ ಮಾಧ್ಯಮದಲ್ಲಿ ಪೈರೋಗಾಲೊಲ್, ಅಮೋನಿಯ ಮಾಧ್ಯಮದಲ್ಲಿ ತಾಮ್ರ (೧) ಲವಣಗಳು (ಅಮ್ಮೋನಿಯಕಲ್ ಕ್ಯುಪ್ರಸ್ ಸಾಲ್ಟ್ಸ್) ಇತ್ಯಾದಿಗಳನ್ನು ಉಪಯೋಗಿಸುವರು.
ಉಪಯೋಗಗಳು
ಬದಲಾಯಿಸಿಉಕ್ಕು, ಬೀಡುಕಬ್ಬಿಣ, ಅಲ್ಯೂಮಿನಿಯಂ ಮುಂತಾದ ಲೋಹಗಳನ್ನು ಕರಗಿಸುವುದು, ಒಂದಕ್ಕೊಂದನ್ನು ಬೆಸುಗೆ ಮಾಡುವದು (ವೆಲ್ಡಿಂಗ್), ದ್ರವೀಕರಿಸಿ ಕತ್ತರಿಸುವದು ಮುಂತಾದ ಕಾರ್ಯಗಳಲ್ಲಿ ಉನ್ನತಮಟ್ಟದ ಉಷ್ಣದ ಮೂಲವಾಗಿ ಆಕ್ಸಿಜನ್ ಅನ್ನು ಉಪಯೋಗಿಸುವರು. ಆಕ್ಸಿಅಸಿಟಲೀನಿನ ಮಿಶ್ರಣದ ಜ್ವಾಲೆ ೪೦೦೦೦ ಸೆ. ನಷ್ಟು ಉಷ್ಣತೆಯನ್ನು ಮುಟ್ಟಬಲ್ಲದು. ಹೈಡ್ರೊಜನ್ ಆಕ್ಸಿಜನ್‌ಗಳ ಮಿಶ್ರಣ ಜ್ವಾಲೆಯನ್ನು ಸಮುದ್ರದೊಳಗೆ ಮುಳುಗಡೆಯಾಗಿರುವ ಹಡುಗುಗಳನ್ನು ಕತ್ತರಿಸಿ ಭಾಗ ಭಾಗವಾಗಿ ಮೇಲೆತ್ತಲು ಉಪಯೋಗಿಸುವರು. ಅದನ್ನು ಕೃತಕ ರತ್ನಗಳಾದ ಕೆಂಪು, ನೀಲಿ ಹರಳುಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು. ಪೆಟ್ರೋಲಿಯಂ ಎಣ್ಣೆ ಬಾವಿಗಳನ್ನು ಕೊರೆಯುವಾಗ ಹೊರಬೀಳುವ ಅನಿಲವೊಂದು ಇಂಗಾಲ ಹೈಡ್ರೊಜನ್‌ಗಳ ಸಂಯುಕ್ತಗಳನ್ನು (ಹೈಡ್ರೊಕಾರ್ಬನ್ಸ್) ಹೊಂದಿರುತ್ತದೆ. ಆ ಅನಿಲದ ಇಂಗಾಲಾಂಶವನ್ನು ಆಕ್ಸಿಜನ್‌ನೊಂದಿಗೆ ಉತ್ಕರ್ಷಣದಿಂದ ಪ್ರತ್ಯೇಕಿಸಿ ಹೈಡ್ರೊಜನ್‌ನ್ನನ್ನು ಪಡೆಯುವರು. ಹೈಡ್ರೊಜನ್ನನ್ನು ಸೀಮೆಗೊಬ್ಬರ ತಯಾರಿಕೆಗೆ ಮೂಲವಾದ ಅಮೋನಿಯವನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಲು ಉಪಯೋಗಿಸುವರು. ಬೀಡು ಕಬ್ಬಿಣ ಮತ್ತು ಉಕ್ಕಿನ ತಯಾರಿಕೆಯಲ್ಲಿ ಕುಲುಮೆಯೊಳಕ್ಕೆ ಗಾಳಿಯೊಡನೆ ಅಥವಾ ಅದಕ್ಕೆ ಬದಲು, ಆಕ್ಸಿಜನ್ನನ್ನು ಉಪಯೋಗಿಸುವುದು ಇತ್ತೀಚೆಗೆ ವಾಡಿಕೆಯಾಗುತ್ತಲಿದೆ. ದ್ರವರೂಪದ ಆಕ್ಸಿಜನ್ ಅನ್ನು ರಾಕೆಟ್ ಚಾಲನವನ್ನು ಪ್ರೇರಿಸುವ ಇಂಧನಗಳಲ್ಲಿ ಉಪಯೋಗಿಸುತ್ತಾರೆ. ದ್ರವರೂಪದ ಆಕ್ಸಿಜನ್ ಅನೇಕ ಸಿಡಿಮದ್ದುಗಳ ತಯಾರಿಕೆಯಲ್ಲಿಯೂ ಸಹಾಯಕಾರಿ. ವೈದ್ಯಕೀಯದಲ್ಲಿ ನ್ಯೂಮೋನಿಯಾ ಅಥವಾ ವಿಷಗಾಳಿ ಸೇವನೆಯಿಂದಾಗುವ ರೋಗಗಳ ಸನ್ನಿವೇಶದಲ್ಲಿಯೂ ಕ್ಷೀಣ ಹೃದಯ ಸಂಬಂಧಿತ ರೋಗಾವಸ್ಥೆಯಲ್ಲಿಯೂ ಆಕ್ಸಿಜನ್ ಅನ್ನು ಕೊಡುವರು. ರಾಸಾಯನಿಕ ಕೈಗಾರಿಕೆಗಳಲ್ಲಿ ಉತ್ಕರ್ಷಣಕಾರಿಯಾಗಿಯೂ ಉಪಯೋಗಿಸುವುದುಂಟು. ಉದಾ: ಸಲ್ಫ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲಗಳ ತಯಾರಿಕೆ ಕಲ್ಲಿದ್ದಲಿನಿಂದ ಅನಿಲರೂಪದ ಇಂಧನಗಳನ್ನು (ವಾಟರ್ ಗ್ಯಾಸ್) ಉತ್ಪಾದಿಸುವ ಕ್ರಮಾನುಸರಣಿಯಲ್ಲಿ ಕಲ್ಲಿದ್ದಲಿನ ಜ್ವಾಲಾ ಉಷ್ಣತೆಯು ಮಟ್ಟವನ್ನು ಕಾಪಾಡಲು ಆಕ್ಸಿಜನ್ ಅನ್ನು ಉಪಯೋಗಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ http://www.uigi.com/oxygen.html
- ↑ Atkins, P.; Jones, L.; Laverman, L. (2016).Chemical Principles, 7th edition. Freeman. ISBN 978-1-4641-8395-9
- ↑ http://www.rsc.org/periodic-table/element/8/oxygen
- ↑ Cook & Lauer 1968, p. 500
- ↑ Parks, G. D.; Mellor, J. W. (1939). Mellor's Modern Inorganic Chemistry (6th ed.). London: Longmans, Green and Co.
ಸಾಮಾನ್ಯ ಉಲ್ಲೇಖಗಳು
ಬದಲಾಯಿಸಿ- Cook, Gerhard A.; Lauer, Carol M. (1968). "Oxygen". In Clifford A. Hampel (ed.). The Encyclopedia of the Chemical Elements. New York: Reinhold Book Corporation. pp. 499–512. LCCN 68-29938.
- Emsley, John (2001). "Oxygen". Nature's Building Blocks: An A–Z Guide to the Elements. Oxford, England: Oxford University Press. pp. 297–304. ISBN 978-0-19-850340-8.
- Raven, Peter H.; Evert, Ray F.; Eichhorn, Susan E. (2005). Biology of Plants (7th ed.). New York: W. H. Freeman and Company Publishers. pp. 115–27. ISBN 978-0-7167-1007-3.
ಹೊರಗಿನ ಕೊಂಡಿಗಳು
ಬದಲಾಯಿಸಿ- Oxygen at The Periodic Table of Videos (University of Nottingham)
- Oxidizing Agents > Oxygen
- Oxygen (O2) Properties, Uses, Applications
- Roald Hoffmann article on "The Story of O"
- WebElements.com – Oxygen
- Oxygen on In Our Time at the BBC. (listen now)