ಮಾಂಸಭಕ್ಷಕ ಕೆಂಪಿರುವೆ
ಬಾಲ್ಟಿಕ್ ಶಿಲಾರಾಳದಲ್ಲಿ ಹುದುಗಿಹೋಗಿರುವ ಕೆಲವು ಇರುವೆಗಳು.

ಇರುವೆ ಹೈಮನೊಪ್ಟುರ ವರ್ಗದ್ದುಸಂಪಾದಿಸಿ

ಇರುವೆಯು ಪ್ರಾಣಿಶಾಸ್ತ್ರದ ವರ್ಗೀಕರಣದ ಪ್ರಕಾರ ಹೈಮೆನೋಪೆಟ್ರಾ(ಹೈಮನೊಪ್ಟುರ - Hymenoptera)ವರ್ಗದಲ್ಲಿ ಫಾರ್ಮಿಸೀಡೇ ಕುಟುಂಬಕ್ಕೆ ಸೇರಿದ ಜೀವಿ. ಕಣಜ ಮತ್ತು ದುಂಬಿಗಳು ಸಹ ಈ ವರ್ಗಕ್ಕೆ ಸೇರಿದ ಜೀವಿಗಳಾಗಿವೆ. ಇರುವೆಗಳಲ್ಲಿ ೧೨,೦೦೦ ಕ್ಕೂ ಅಧಿಕ ತಳಿಗಳಿವೆ. ಉಷ್ಣ ವಲಯದಲ್ಲಿ ಇರುವೆಗಳ ಪ್ರಭೇದ ಉಳಿದೆಡೆಗಿಂತ ಹೆಚ್ಚು. ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬ ಜೀವನಕ್ಕೆ ಹೆಸರಾಗಿವೆ. ಇರುವೆಗಳ ಒಂದು ಗೂಡಿನಲ್ಲಿ ಕಲವೊಮ್ಮೆ ಲಕ್ಷಾಂತರ ಇರುವೆಗಳು ನೆಲೆಸುವುದುಂಟು.

ವಿಭಾಗಕ್ರಮಸಂಪಾದಿಸಿ

ಇರುವೆಯ ವೈಶಿಷ್ಟ್ಯ
.
 • ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆಯೇ ಹೆಚ್ಚಿದೆ. ಇದು ಹೇಗೆಂದರೆ ಒಂದು ತಕ್ಕಡಿಯಲ್ಲಿ ಜಗತ್ತಿನ ಎಲ್ಲ ಮನುಷ್ಯರನ್ನು ಮತ್ತು ಇರುವೆಗಳನ್ನು ಒಟ್ಟಿಗೇ ತೂಗಿದರೆ ಮನುಷ್ಯರು ಇರುವೆಗಳನ್ನು ತಲೆ ತಗ್ಗಿಸಿ ನೋಡಬೇಕಂತೆ. ಕಾರಣ ಮನುಷ್ಯರು ಕುಳಿತ ತಕ್ಕಡಿ ಕಡಿಮೆ ಭಾರದಿಂದ ಮೇಲಕ್ಕೆ ಹೋಗಿರುತ್ತದೆ. ಅದೇ ಇರುವೆಗಳಿರುವತಕ್ಕಡಿ ಹೆಚ್ಚು ಭಾರದಿಂದ ಕೆಳ್ಳಕ್ಕೆ ಹೋಗಿರುತ್ತದೆ ಅದಕ್ಕಾಗಿ ಮನುಷ್ಉ ಇರುವೆಗಳಿರುವ ತಕ್ಕಡಿಯನ್ನಿ ಬಗ್ಗಿನೋಡಬೇಕಾಗುತ್ತದೆ.
 • ಇರುವೆಗಳಿಗೆ ಕಿವಿ ಇಲ್ಲ. ಆದರೆ ಅದರ ಕಾಲೇ ಕಿವಿಗಳು ಇದ್ದಂತೆ. ಶಬ್ದಗಳ ಕಂಪನಗಳನ್ನು ತನ್ನ ಕಾಲಿನ ಮೂಲಕ ಅರಿತು ಎಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತವೆ.
 • ಇರುವೆಗಳಿಗೆ ಎರಡು ಹೊಟ್ಟೆಗಳಿವೆ. ಒಂದರಲ್ಲಿ ತಮಗೆ ಬೇಕಿರುವಷ್ಟು ಆಹಾರ ಸಂಗ್ರಹ ಮಾಡಿಟ್ಟುಕೊಂಡರೆ ಇನ್ನೊಂದರಲ್ಲಿ ಉಳಿದ ಇರುವೆಗಳಿಗೆ ಹಂಚಲು ಆಹಾರ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ.
 • ಸಿಹಿ ಪದಾರ್ಥಗಳನ್ನು ಎಲ್ಲಿಯೇ ಅಡಗಿಸಿ ಇಟ್ಟರೂ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಇವುಗಳಿಗೆ ಸಿಹಿ ತುಂಬಾ ಇಷ್ಟ. ತಮ್ಮ ವಿಶೇಷ ವಾಸನಾಗ್ರಂಥಿಯಿಂದ ಇವು ಸಿಹಿ ಪದಾರ್ಥಗಳನ್ನು ಹುಡುಕಿ ಬರುತ್ತವೆ. ಇವುಗಳ ಮೂಗು ತುಂಬ ಸೂಕ್ಷ್ಮ. ತಮ್ಮ ಆಹಾರ ಎಷ್ಟು ದೂರವಿದ್ದರೂ ಅದನ್ನು ಗ್ರಹಿಸಿ ಹುಡುಕಲು ಹೋಗುತ್ತವೆ.
 • ಇರುವೆಗಳು ತನ್ನ ತೂಕಕ್ಕಿಂತ 50 ಪಟ್ಟಿನಷ್ಟು ಜಾಸ್ತಿ ಭಾರ ಎತ್ತುವ ಸಾಮರ್ಥ ಹೊಂದಿವೆ.
 • ಗಂಡು ಇರುವೆಗಳು ಮಿಲನಕ್ಕೆ ಮಾತ್ರ ಸೀಮಿತ. ರಾಣಿ ಇರುವೆಯೊಂದಿಗಿನ ಮಿಲನ ಮಾಡಿದ ನಂತರ ಇವು ಸಾಯುತ್ತವೆ. ಆದರೆ ರಾಣಿ ಇರುವೆಗಳು ತುಂಬಾ ವರ್ಷ ಬದುಕುತ್ತವೆ. ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಮರಿಗಳಿಗೆ ಜನ್ಮ ನೀಡುತ್ತವೆ.
 • ಇರುವೆಗಳು ಒಂದು ಸಲ ಹೊಡೆದಾಡಲು ಶುರುವಿಟ್ಟುಕೊಂಡರೆ ಒಂದು ಅಥವಾ ಎರಡೂ ಇರುವೆಗಳು ಸಾಯುವವರೆಗೂ ಮುಂದುವರಿಸುತ್ತವೆ.

[೧]

.
 • ಇರುವೆಗಳು ತಮ್ಮ ಶಾರೀರಿಕ ಗುಣಗಳಿಗನುಗುಣವಾಗಿ ಅರೆಬಂಜೆ ಅಥವಾ ಪೂರ್ಣಬಂಜೆ ಹೆಣ್ಣಿರುವೆಗಳು, ಗಂಡಿರುವೆಗಳು ಮತ್ತು ರಾಣಿ ಇರುವೆಗಳೆಂದು ವಿಭಾಗಿಸಲ್ಪಡುತ್ತವೆ. ರಾಣಿಯ ಹೊರತಾಗಿ ಇತರ ಹೆಣ್ಣಿರುವೆಗಳು ಕೆಲಸಗಾರ ಇರುವೆಗಳು (ಹಲ ಜಾತಿಯವು), ಸೈನಿಕ ಇರುವೆಗಳೆಂದು ಇನ್ನೆರಡು ಉಪಗುಂಪುಗಳಿಗೆ ಸೇರಿರುತ್ತವೆ. ಗಂಡಿರುವೆಯನ್ನು ಡ್ರೋನ್ ಎಂದು ಸಹ ಕರೆಯಲಾಗುವುದು. ನೆಲದಡಿಯಲ್ಲಿನ ಇರುವೆಗೂಡು ಬಲು ವಿಸ್ತಾರವಾದ ಪ್ರದೇಶವನ್ನು ಆವರಿಸಿರುತ್ತದೆ.
 • ಇರುವೆಗಳು ವಿಶ್ವದ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ. ಆದರೆ ಅಂಟಾರ್ಕಟಿಕ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಹವಾಯ್, ಮತ್ತು ಪಾಲಿನೇಷ್ಯಾಗಳಲ್ಲಿ ಸ್ಥಳೀಯ ಇರುವೆಗಳು ಕಂಡುಬರುವುದಿಲ್ಲ. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ ೧೫% ದಿಂದ ೨೫% ರಷ್ಟಾಗುವುದು.
 • ಬಿಳಿ ಇರುವೆಯೆಂದು ಕರೆಯಲ್ಪಡುವ ಗೆದ್ದಲು ಹುಳಗಳು ಇರುವೆಗಳಂತೆಯೇ ಸಂಘಟಿತ ಕುಟುಂಬಜೀವಿಗಳಾದರೂ ಇರುವೆಗಳ ಗುಂಪಿಗೆ ಸೇರಿಲ್ಲ. ಹಾಗೆಯೇ ದೊಡ್ಡ ಇರುವೆಯನ್ನು ಹೋಲುವ ವೆಲ್ವೆಟ್ ಇರುವೆಯು ವಾಸ್ತವದಲ್ಲಿ ರೆಕ್ಕೆರಹಿತ ಹೆಣ್ಣು ಕಣಜ.

ಇರುವೆಯ ವಿಕಾಸಸಂಪಾದಿಸಿ

ಸಂಶೋಧನೆಗಳು ಮತ್ತು ಅಧ್ಯಯನಗಳ ಪ್ರಕಾರ ಇರುವೆಯು ಕಣಜಗಳಿಂದ ವಿಕಸನಗೊಂಡ ಪ್ರಾಣಿ. ಸುಮಾರು ೧೨೦ ರಿಂದ ೧೭೦ ದಶಲಕ್ಷ ವರ್ಷಗಳ ಹಿಂದೆ ಇರುವೆಯು ಕಣಜದಿಂದ ಬೇರೆಯಾಗಿ ಹೊಸ ತಳಿಯ ಸ್ವತಂತ್ರ ಜೀವಿಯಾಗಿ ವಿಕಸನ ಹೊಂದಿತೆಂದು ನಂಬಲಾಗಿದೆ. ೧೦೦ ದಶಲಕ್ಷ ವರ್ಷಗಳ ಹಿಂದೆ ನೆಲದ ಮೇಲೆ ಆಂಗಿಯೋಸ್ಪರ್ಮ್ ಸಸ್ಯಗಳ ವಿಕಸನವಾದ ನಂತರ ಇರುವೆಗಳು ತೀವ್ರವಾಗಿ ಅಭಿವೃದ್ಧಿ ಹೊಂದಿದುವು ಮತ್ತು ಹೊಸ ಹೊಸ ತಳಿಗಳ ರೂಪದಲ್ಲಿ ಭೂಮಿಯ ಬಹುತೇಕ ಪ್ರದೇಶಗಳಲ್ಲಿ ವ್ಯಾಪಿಸಿದುವು. ಇರುವೆ ಮತ್ತು ಕಣಜಗಳ ಸಂಬಂಧಕ್ಕೆ ೮೦ ದಶಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆಯೊಂದು ಪುಷ್ಟಿ ಕೊಡುತ್ತದೆ.

ದೇಹರಚನೆಸಂಪಾದಿಸಿ

 
ಕೆಲಸಗಾರ ಇರುವೆಯ ದೇಹರಚನೆ.
 
ಗೂಳಿ ಇರುವೆಯ ಒಸಡುಗಳ ಮತ್ತು ದೊಡ್ಡ ಸಂಕೀರ್ಣ ಕಣ್ಣುಗಳ ಹತ್ತಿರದ ನೋಟ.
 • ಇತರ ಕೀಟಗಳಂತೆ ಇರುವೆಯು ಕೂಡ ಎಕ್ಸೋಸ್ಕೆಲಿಟನ್ ಎಂದು ಕರೆಯಲ್ಪಡುವ ಹೊರಕವಚನ್ನು ಹೊಂದಿರುತ್ತದೆ. ಈ ಕವಚವು ಶರೀರದ ಇತರ ಅಂಗಗಳಿಗೆ ರಕ್ಷಣಾಕವಚವಾಗಿ ಮತ್ತು ಸ್ನಾಯುಗಳನ್ನು ಶರೀರಕ್ಕೆ ಅಂಟಿಸುವ ಸ್ಥಾನವಾಗಿ ಕಾರ್ಯನಿರ್ವಹಿಸುವುದು. ಇದು ಮಾನವ ಮತ್ತು ಇತರ ಕಶೇರುಕಗಳಲ್ಲಿನ ಆಂತರಿಕ ಅಸ್ಥಿಪಂಜರದ ರಚನೆಗಿಂತ ಈ ರೀತಿ ಭಿನ್ನವಾಗಿದೆ. ಕೀಟಗಳಲ್ಲಿ ಶ್ವಾಸಕೋಶವಿರುವುದಿಲ್ಲ.
 • ಆದರೆ ದೇಹದೊಳಕ್ಕೆ ಆಮ್ಲಜನಕ ಮತ್ತು ದೇಹದಿಂದ ಹೊರಕ್ಕೆ ಇಂಗಾಲಾಮ್ಲಗಳು ಮೇಲೆ ತಿಳಿಸಿದ ಎಕ್ಸೋಸ್ಕೆಲಿಟನ್ ಕವಚದಲ್ಲಿರುವ ಸೂಕ್ಷ್ಮ ದ್ವಾರಗಳ ಮೂಲಕ ಚಲಿಸುತ್ತವೆ. ಈ ದ್ವಾರಗಳಿಗೆ ಸ್ಪೈರಾಕಲ್ಸ್ ಎಂದು ಹೆಸರು. ಇತರ ಪ್ರಾಣಿಗಳಲ್ಲಿರುವಂತಹ ರಕ್ತನಾಳ ವ್ಯವಸ್ಥೆಯು ಸಹ ಕೀಟಗಳಲ್ಲಿರುವುದಿಲ್ಲ. ಕೀಟಗಳ ದೇಹದ ಮೇಲ್ಭಾಗದಲ್ಲಿ ಉದ್ದನೆಯ ಮತ್ತು ರಂಧ್ರಗಳಿರುವ ಸಣಕಲಾದ ನಳಿಕೆಯೊಂದಿರುತ್ತದೆ. ಈ ನಳಿಕೆಯು ಹೃದಯದ ಕಾರ್ಯವನ್ನು ಕೊಂಚಮಟ್ಟಿಗೆ ನಿರ್ವಹಿಸುತ್ತದೆ.
 • ಈ ನಳಿಕೆಯ ಮೂಲಕವೇ ಶರೀರದ ಅಂತರಿಕ ರಸವಸ್ತುಗಳು ಮತ್ತು ಹೆಮೋಲಿಂಫ್ ಎಂಬ ಜೀವರಸ ತಲೆಯ ಭಾಗಕ್ಕೆ ಒಯ್ಯಲ್ಪಡುತ್ತವೆ. ಇರುವೆಯ ನರತಂತುಗಳ ವವಸ್ಥೆಯು ಸಹ ಸರಳ. ಒಂದು ದೀರ್ಘ ನರತಂತು ಶರೀರದ ಉದ್ದಕ್ಕೂ ಚಾಚಿದ್ದು ಇದರಿಂದ ಹಲವು ಶಾಖೆಗಳು ಶರೀರದ ಅಂಚುಗಳಿಗೆ ಹಬ್ಬಿರುತ್ತವೆ. ಇರುವೆಗೂ ಮತ್ತು ಇತರ ಕೀಟಗಳಿಗೆ ಕೆಲ ಮುಖ್ಯ ವ್ಯತ್ಯಾಸಗಳಿವೆ. ಇವುಗಳಲ್ಲಿ ಗಮನಾರ್ಹವೆಂದರೆ ಮೊಣಕೈಯಂತೆ ಬಾಗಿರುವ ಮೀಸೆ, ಎರಡನೆಯ ಹೊಟ್ಟೆಯ ಭಾಗಗಳು.
 • ಇರುವೆಯ ತಲೆಯಲ್ಲಿ ಹಲವು ಸ್ಪರ್ಶೇಂದ್ರಿಯಯಗಳಿವೆ. ಇರುವೆಯು ನೊಣದಂತೆ ಸಂಕೀರ್ಣ ಕಣ್ಣುಗಳನ್ನು ಹೊಂದಿರುವುದು. ಈ ಸಂಕೀರ್ಣ ಕಣ್ಣು ಒತ್ತಾಗಿ ಜೋಡಿಸಲ್ಪಟ್ಟಿರುವ ಹಲವು ಸಣ್ಣಸಣ್ಣ ಮಸೂರಗಳಿಂದ ಕೂಡಿದ್ದು ಸುತ್ತಲಿನ ಅತಿ ಸೂಕ್ಷ್ಮ ಚಲನೆಗಳನ್ನು ಸಹ ಗುರುತಿಸುವಲ್ಲಿ ಸಹಕಾರಿಯಾಗಿದೆ. ಇವುಗಳ ಜೊತೆಗೆ ಇರುವೆಯು ಎರಡು ಸರಳ ಕಣ್ಣುಗಳನ್ನು ತಲೆಯ ಮೇಲ್ಭಾಗದಲ್ಲಿ ಹೊಂದಿದ್ದು ಇವು ಬೆಳಕನ್ನು ಗ್ರಹಿಸುವಲ್ಲಿ ನೆರವಾಗುತ್ತವೆ.
 • ಇವುಗಳ ಹೊರತಾಗಿಯೂ ಇರುವೆಗಳ ದೃಷ್ಟಿ ಬಲು ಮಂದ ಮತ್ತು ಹಲವು ತಳಿಯ ಇರುವೆಗಳು ಪೂರ್ತಿ ಕುರುಡು. ಇದಕ್ಕೆ ಅಪವಾದವೆಂಬಂತೆ ಆಸ್ಟ್ರೇಲಿಯಾದ ಬುಲ್ ಡಾಗ್ ಇರುವೆಯು ಅತಿ ಸೂಕ್ಷ್ಮದೃಷ್ಟಿಯನ್ನು ಹೊಂದಿದೆ. ತಲೆಯ ಭಾಗಕ್ಕೆ ಸೇರಿದಂತೆ ಇರುವೆಯು ಎರಡು ಫೀಲರ್ ಎಂದು ಕರೆಯಲ್ಪಡುವ ಗ್ರಾಹಕಕಡ್ಡಿಗಳನ್ನು (ಮೀಸೆ) ಹೊಂದಿರುತ್ತದೆ. ಈ ಗ್ರಾಹಕಗಳು ರಾಸಾಯನಿಕಗಳನ್ನು ಗುರುತಿಸುವಲ್ಲಿ ಇರುವೆಗೆ ಸಹಕಾರಿಯಾಗಿವೆ. ಜೊತೆಗೆ ಇರುವೆಗೆ ಈ ಮೀಸೆಗಳು ಸಂಪರ್ಕಸಾಧನವಾಗಿ ಸಹ ಬಳಕೆಗೆ ಬರುತ್ತವೆ.
 • ಇತರ ಇರುವೆಗಳು ಹೊರಸೂಸಿದ ಫೆರೋಮೋನ್ಸ್ ಎಂಬ ರಾಸಾಯನಿಕದ ಪತ್ತೆಹಚ್ಚುವಲ್ಲಿ ಸಹ ಮೀಸೆ ಬಳಸಲ್ಪಡುವುದು. ಈ ಗ್ರಾಹಕಗಳು ತನ್ನ ಮುಂದಿರುವ ವಸ್ತುವಿನ ಬಗ್ಗೆ ತಿಳಿಯಲು ಇರುವೆಗೆ ನೆರವಾಗುತ್ತವೆ. ಇರುವೆಯ ಶಿರದಲ್ಲಿ ಎರಡು ಬಲಿಷ್ಠ ಒಸಡುಗಳು ಇದ್ದು ಇವು ನಾನಾ ರೀತಿಯಲ್ಲಿ ಬಳಸಲ್ಪಡುತ್ತವೆ. ಇವುಗಳ ಮೂಲಕ ಇರುವೆಯು ಆಹಾರವನ್ನು ಹೊತ್ತೊಯ್ಯುವುದು, ವಸ್ತುಗಳನ್ನು ಅಲ್ಲಿಂದಿಲ್ಲಿಗೆ ಎತ್ತಿಡುವುದು, ಗೂಡುಗಳನ್ನು ನಿರ್ಮಿಸುವುದು ಮತ್ತು ತನ್ನ ರಕ್ಷಣೆಗೆ ಆಯುಧವನ್ನಾಗಿ ಸಹ ಬಳಸುವುದು.
 • ಕೆಲ ತಳಿಗಳ ಇರುವೆಗಳು ಬಾಯಿಯ ಒಳಗೆ ಸಣ್ಣ ಚೀಲವನ್ನು ಹೊಂದಿದ್ದು ಇವುಗಳಲ್ಲಿ ಇರುವೆಯು ತನ್ನ ಸಂಗಾತಿಗಳಿಗೆ ಅಥವಾ ಮೊಟ್ಟೆಯೊಡೆದು ಬಂದ ಎಳೆಯ ಲಾರ್ವಾಗಳಿಗಾಗಿ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು. ಥೊರಾಕ್ಸ್ ಎಂದು ಕರೆಯಲ್ಪಡುವ ಇರುವೆಯ ಮುಂಡದಲ್ಲಿ ಆರು ಕಾಲುಗಳಿರುತ್ತವೆ. ಪ್ರತಿ ಕಾಲಿನ ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಉಗುರಿನ ರಚನೆಯಿದ್ದು ಇದು ಇರುವೆಗೆ ಹತ್ತುವಲ್ಲಿ ಮತ್ತು ವಸ್ತುಗಳಿಗೆ ಜೋತುಬೀಳುವುದಕ್ಕೆ ನೆರವಾಗುತ್ತದೆ.
 • ಹೆಚ್ಚಿನ ರಾಣಿ ಇರುವೆ ಮತ್ತು ಗಂಡಿರುವೆಗಳು ರೆಕ್ಕೆಗಳನ್ನು ಹೊಂದಿರುತ್ತವೆ. ರಾಣಿಗಳು ತಮಗೆ ಸಂಗಾತಿ ದೊರೆತ ನಂತರ ರೆಕ್ಕೆಗಳನ್ನು ಉದುರಿಸಿಬಿಡುತ್ತವೆ. ಇರುವೆಯ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಪ್ರಮುಖ ಅಂತರಿಕ ಅಂಗಗಳು ಮತ್ತು ಜನನಾಂಗಗಳು ಇರುತ್ತವೆ. ಹಲವು ಜಾತಿಯ ಇರುವೆಗಳು ಕೊಂಡಿಗಳನ್ನು ಪಡೆದಿದ್ದು ಇವು ತಮ್ಮ ಮತ್ತು ತಮ್ಮ ಗೂಡಿನ ರಕ್ಷಣೆಗಾಗಿ ಆಯುಧದಂತೆ ಬಳಸಲ್ಪಡುತ್ತವೆ.

ಬೆಳವಣಿಗೆಸಂಪಾದಿಸಿ

 
ಮಾಂಸ ಭಕ್ಷಕ ಇರುವೆಯ ಗೂಡಿನ ದ್ವಾರ.
 
ಫಲವತಿ ರಾಣಿಯು ಹೊಸ ವಸಾಹತಿಗಾಗಿ ನೆಲವನ್ನು ಅಗೆಯುತ್ತಿರುವಳು.
 • ಮೊಟ್ಟೆಯಿಂದ ಇರುವೆಯ ಜೀವನವು ಆರಂಭವಾಗುವುದು. ಮೊಟ್ಟೆಯು ಫಲಿತವಾಗಿದ್ದಲ್ಲಿ ಅದರಿಂದ ಹೆಣ್ಣು ಇರುವೆ ಮತ್ತು ಇಲ್ಲದೆ ಹೋದರೆ ಗಂಡು ಇರುವೆ ಜನಿಸುತ್ತದೆ. ಇರುವೆಯು ಪ್ರೌಢಾವಸ್ಥೆಯನ್ನು ತಲುಪುವ ಮೊದಲು ಲಾರ್ವಾ ಮತ್ತು ಪ್ಯೂಪಾ ಅವಸ್ಥೆಗಳನ್ನು ಕಳೆಯುತ್ತದೆ. ಲಾರ್ವಾ ಹಂತದಲ್ಲಿರುವ ಇರುವೆಯು ಸಂಪೂರ್ಣವಾಗಿ ಅಸಹಾಯಕವಾಗಿದ್ದು ತನ್ನ ಬೇಕುಬೇಡಗಳಿಗಾಗಿ ಇತರರನ್ನು ಪೂರ್ಣವಾಗಿ ಅವಲಂಬಿಸಿರುತ್ತದೆ. ಲಾರ್ವಾ ಹಂತದಲ್ಲಿ ಆಹಾರವೂಡಿಸುವ ರೀತಿಯ ಮೇಲೆ ಬೆಳೆಯುವ ಇರುವೆಯ ಪಂಗಡ ನಿರ್ಧರಿಸಲ್ಪಡುತ್ತದೆ. *ಉದಾಹರಣೆಗೆ - ರಾಣಿ ಇರುವೆ ಅಥವಾ ಸಾಧಾರಣ ಹೆಣ್ಣಿರುವೆಗಳಾಗಿ ಮತ್ತು ಕೆಲಸಗಾರ ಇರುವೆಗಳ ಜಾತಿ ಯಾವುದೆಂದು. ಲಾರ್ವಾಗೆ ನೀಡುವ ಆಹಾರವನ್ನು ಕೆಲಸಗಾರ ಇರುವೆಗಳು ಮೊದಲು ಚೆನ್ನಾಗಿ ಜಗಿದು ಮೆತ್ತಗಾಗಿಸಿ ನಂತರ ತಿನ್ನಿಸುತ್ತವೆ. ಲಾರ್ವಾ ಮತ್ತು ಪ್ಯೂಪಾಗಳ ಬೆಳವಣಿಗೆಗೆ ಸ್ಥಿರ ಉಷ್ಣತೆಯ ಅವಶ್ಯಕತೆಯಿದ್ದು ಇದಕ್ಕಾಗಿ ಇವುಗಳನ್ನು ಗೂಡಿನೊಳಗೆ ಅತ್ತಿಂದಿತ್ತ ಒಯ್ಯಲಾಗುತ್ತಿರುತ್ತದೆ.
 • ಪ್ರೌಢಾವಸ್ಥೆಗೆ ತಲುಪಿದ ಹೊಸ ಕೆಲಸಗಾರ ಇರುವೆಯು ತನ್ನ ಮೊದಲ ಕೆಲ ದಿನಗಳನ್ನು ರಾಣಿ ಇರುವೆ ಮತ್ತು ಮರಿ ಇರುವೆಗಳ ಆರೈಕೆಯಲ್ಲಿ ಕಳೆಯುತ್ತದೆ. ಕ್ರಮೇಣ ಅದು ನೆಲ ಅಗೆಯುವ ಮತ್ತು ಗೂಡು ನಿರ್ಮಾಣದಂತಹ ಇತರ ಕೆಲಸಗಳಿಗೆ ಬಡ್ತಿ ಪಡೆಯುವುದು. ಅಂತಿಮವಾಗಿ ಆಹಾರ ಸಂಗ್ರಹಣೆ ಮತ್ತು ಗೂಡಿನ ರಕ್ಷಣೆಯ ಕೆಲಸಗಳಲ್ಲಿ ಸಹ ತೊಡಗುವುದು. ಸಾಮಾನ್ಯವಾಗಿ ಇರುವೆಯ ಕುಟುಂಬದಲ್ಲಿ ಸ್ಪಷ್ಟವಾದ ಜಾತಿ ವ್ಯವಸ್ಥೆಯಿದ್ದು ಆಯಾ ಜಾತಿಯ ಇರುವೆಗಳು ತಮಗೆ ನಿಗದಿಯಾಗಿರುವ ಕೆಲಸದಲ್ಲಿಯೇ ತೊಡಗುವುವು.
 • ಕೆಲ ತಳಿಗಳಲ್ಲಿ ಬೇರೆಬೇರೆ ಜಾತಿಯ ಇರುವೆಗಳು ವಿಭಿನ್ನ ಶರೀರ ಗಾತ್ರಗಳನ್ನು ಹೊಂದಿದ್ದು ತಮ್ಮ ದೇಹಶಕ್ತಿಗೆ ಅನುಗುಣವಾದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿಯ ಕ್ರಮವು ಹೆಚ್ಚಿನ ಇರುವೆ ತಳಿಗಳಲ್ಲಿ ಒಂದೇ ವಿಧವಾಗಿರುವುದು. ರಾಣಿ ಇರುವೆ ಮತ್ತು ಇತರ ಕೆಲ ಫಲವತಿ ಹೆಣ್ಣಿರುವೆಗಳು ಮಾತ್ರ ಗಂಡಿನೊಂದಿಗೆ ಕೂಡಬಲ್ಲವು.
 • ಗರ್ಭದಾನ ಮಾಡುವ ಗಂಡಿರುವೆಗಳು ಮತ್ತು ಗರ್ಭ ಧರಿಸುವ ರಾಣಿ ಮತ್ತು ಇತರ ಹೆಣ್ಣಿರುವೆಗಳು ಪ್ರೌಢಾವಸ್ಥೆಯನ್ನು ತಲುಪಿದ ನಂತರ ಉಣ್ಣುವುದು ಮತ್ತು ಸಂತಾನೋತ್ಪತ್ತಿಗಾಗಿ ಕೂಡುವುದು ಈ ಎರಡು ಕಾರ್ಯಗಳಲ್ಲಿ ಮಾತ್ರವೇ ತೊಡಗಿರುತ್ತವೆ. ಇವೆರಡು ಇರುವೆಗಳು ರೆಕ್ಕೆಯನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿಯ ಋತುವಿನಲ್ಲಿ ಈ ರೆಕ್ಕೆಹೊಂದಿದ ಗಂಡು ಹೆಣ್ಣು ಇರುವೆಗಳು ಎಲ್ಲ ಗೂಡುಗಳಿಂದಲೂ ಹೊರಗೆ ಬಂದು ಗಾಳಿಯಲ್ಲಿ ಹಾರಾಡತೊಡಗುತ್ತವೆ. ಹಾರಾಡುತ್ತಿರುವಾಗಲೇ ಇವು ಸಂಗಮಿಸುತ್ತವೆ.
 • ಇದರ ಕೆಲ ಹೊತ್ತಿನಲ್ಲಿಯೇ ಗಂಡಿರುವೆಗಳು ಮರಣ ಹೊಂದುತ್ತವೆ. ಹೆಣ್ಣಿರುವೆಗಳು ನೆಲಕ್ಕಿಳಿದು ಗೂಡು ಕಟ್ಟಿ ಮೊಟ್ಟೆಯಿಡಲು ಸೂಕ್ತ ಸ್ಥಳವನ್ನು ಅರಸುತ್ತವೆ. ನಂತರ ತಮ್ಮ ರೆಕ್ಕೆಗಳನ್ನು ಕಳಚಿ ಹಾಕುವ ಈ ಹೆಣ್ಣಿರುವೆಗಳು ಮೊಟ್ಟೆಗಳನ್ನಿಟ್ಟು ಅವುಗಳ ಪಾಲನೆಯಲ್ಲಿ ತೊಡಗುತ್ತವೆ. ಗಂಡಿನಿಂದ ಪಡೆದ ವೀರ್ಯವನ್ನು ಕಾಪಿಟ್ಟುಕೊಳ್ಳುವ ಹೆಣ್ಣಿರುವೆಗಳೂ ಅದನ್ನು ತಾವಿಡುವ ಮೊಟ್ಟೆಗಳನ್ನು ಫಲವತ್ತಾಗಿಸಲು ಬಳಸುತ್ತವೆ. ಮೊದಮೊದಲು ಮೊಟ್ಟೆ ಒಡೆದು ಹೊರಬರುವ ಕೆಲಸಗಾರ ಇರುವೆಗಳು ಬಹಳ ದುರ್ಬಲವಾಗಿದ್ದು ನಂತರದವು ಕ್ರಮೇಣ ಸಶಕ್ತವಾಗಿರುವುವು. *ದುರ್ಬಲವಾದರೂ ಸಹ ಈ ಕೆಲಸಗಾರರು ತಮ್ಮ ಕುಟುಂದ ಸೇವೆಯಲ್ಲಿ ಕೂಡಲೇ ತಮ್ಮನ್ನು ತೊಡಗಿಸಿಕೊಳ್ಳುತ್ತವೆ. ಈ ರೀತಿಯಾಗಿ ಹೊಸದೊಂದು ಇರುವೆಯ ಕುಟುಂಬ ಸ್ಥಾಪಿತವಾಗುವುದು. ಕೆಲ ತಳಿಗಳಲ್ಲಿ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರಾಣಿ ಇರುವೆಗಳಿದ್ದು ಅವುಗಳಲ್ಲೊಂದು ರಾಣಿ ಇರುವೆಯು ಕೆಲವು ಕೆಲಸಗಾರರನ್ನು ತನ್ನೊಂದಿಗೆ ಕರೆದುಕೊಂಡು ಕುಟುಂಬದಿಂದ ಹೊರಬಿದ್ದು ತನ್ನದೇ ಆದ ಹೊಸ ಕುಟುಂಬವನ್ನು ಸ್ಥಾಪಿಸುವುದು.
 • ರಾಣಿ ಇರುವೆಯು ೩೦ ವರ್ಷಗಳವರೆಗೆ ಜೀವಿಸಬಲ್ಲುದು. ಕೆಲಸಗಾರ ಇರುವೆಗಳ ಆಯುಷ್ಯ ೧ ರಿಂದ ೩ ವರ್ಷಗಳು. ಆದರೆ ಗಂಡಿರುವೆಗಳು ಕೆಲವೇ ವಾರಗಳವರೆಗೆ ಜೀವಿಸಿರುವುವು. ಚಳಿಗಾಲದಲ್ಲಿ ಇರುವೆಗಳು ನಿಷ್ಕ್ರಿಯಾವಸ್ಥೆಯನ್ನು ತಲುಪುತ್ತವೆ. ಶೀತವಲಯದ ಚಳಿಗಾಲವನ್ನು ಕ್ಷೇಮವಾಗಿ ದಾಟಲು ಇರುವೆಗಳು ಈ ವಿಧಾನವನ್ನು ಅನುಸರಿಸುತ್ತವೆ. ಆದರೆ ಉಷ್ಣವಲಯದಲ್ಲಿ ಈ ವಿದ್ಯಮಾನ ಕಂಡುಬರುವುದಿಲ್ಲ.

ಇರುವೆಯ ಬಹುರೂಪಗಳುಸಂಪಾದಿಸಿ

 
ಬರವನ್ನು ಎದುರಿಸಲು ಇರುವೆಗಳು ಮುಂದಾಗಿಯೇ ಆಹಾರ ಸಂಗ್ರಹಿಸುತ್ತವೆ.
 • ಇರುವೆಗಳು ತಮ್ಮ ಜಾತಿಗನುಗುಣವಾಗಿ ರೂಪ ಮತ್ತು ಆಕಾರಗಳಲ್ಲಿ ಭಿನ್ನವಾಗಿರುತ್ತವೆ. ಕೆಲ ತಳಿಗಳಲ್ಲಿ ಈ ವ್ಯತಾಸವು ಗಮನಾರ್ಹವಾದರೆ ಇನ್ನು ಕೆಲವುಗಳಲ್ಲಿ ಬಲು ಕಡಿಮೆ. ಕೆಲಸಗಾರ ಇರುವೆಗಳಲ್ಲಿ ಇಂತಹ ವ್ಯತ್ಯಾಸವು ಗಣನೀಯ. ಸೇವಕ ಇರುವೆಗಳು ಲೈಂಗಿಕ ಸಂತಾನೋತ್ಪತ್ತಿಗೆ ಅಸಮರ್ಥವಾದರೂ ಅನೇಕ ತಳಿಗಳಲ್ಲಿ ಈ ಜಾತಿಯ ಇರುವೆಗಳು ಫಲಹರಿತವಲ್ಲದ ತತ್ತಿಗಳನ್ನಿಡುತ್ತವೆ. ಇಂತಹ ತತ್ತಿಗಳಿಂದ ಸಮರ್ಥ ಗಂಡಿರುವೆಗಳು ಜನಿಸುತ್ತವೆ.
 • ಹನಿಪಾಟ್ ಇರುವೆಗಳೆಂದು ಕರೆಯಲ್ಪಡುವ ತಳಿಯ ಇರುವೆಗಳಲ್ಲಿ ರೆಪ್ಲೀಟ್ ಎಂದೆನಿಸಿಕೊಳ್ಳುವ ವಿಶಿಷ್ಟ ಸೇವಕ ಇರುವೆಗಳಿವೆ. ತಮ್ಮ ಕುಟುಂಬಕ್ಕಾಗಿ ಆಹಾರವನ್ನು ತಮ್ಮೊಡಲಿನಲ್ಲಿ ಸಂಗ್ರಹಿಸುವುದೇ ಇವುಗಳ ಏಕೈಕ ಕಾಯಕವಾಗಿರುವುದು. ಈ ಇರುವೆಗಳು ಕ್ರಮೇಣ ಭಾರೀ ಗಾತ್ರದ ಹೊಟ್ಟೆಯಿಂದಾಗಿ ನಿಶ್ಚಲ ಸ್ಥಿತಿಯನ್ನು ತಲುಪುತ್ತವೆ. ಜಗತ್ತಿನ ಕೆಲಭಾಗಗಳಲ್ಲಿ ಈ ಇರುವೆಗಳನ್ನು ಮಾನವನು ಸ್ವಾದಭರಿತ ತಿನಿಸಾಗಿ ಉಪಯೋಗಿಸುವುದಿದೆ.

ನಡವಳಿಕೆ ಮತ್ತು ಸುತ್ತಲಿನ ಜಗತ್ತಿನೊಡನೆ ಸಂವಹನಸಂಪಾದಿಸಿ

ಸಂಪರ್ಕ ಸಾಧನೆಸಂಪಾದಿಸಿ

 
ಗೂಡಿನ ದ್ವಾರದ ಬಳಿಯ ದಿಬ್ಬಗಳು ಮಳೆಯ ನೀರನ್ನು ತಡೆಯುತ್ತವೆ.
 
ಗಡಿಬಿಡಿಯ ಚಟುವಟಿಕೆಯಲ್ಲಿ ತೊಡಗಿರುವ ಇರುವೆ ಸಮೂಹ.
 • ಫೆರೊಮೋನ್ ಎಂಬ ರಾಸಾಯನಿಕದ ಮೂಲಕ ಇರುವೆಗಳು ಪರಸ್ಪರೊಡನೆ ಸಂಪರ್ಕ ಸಾಧಿಸುತ್ತವೆ. ಹೆಮ್ನೋಪೆಟ್ರಾ ವರ್ಗದ ಇತರ ಜೀವಿಗಳಿಗಿಂತ ಇರುವೆಗಳಲ್ಲಿ ಈ ಸಂಕೇತ ವ್ಯವಸ್ಥೆಯು ಹೆಚ್ಚು ಪ್ರಬುದ್ಧವಾಗಿದೆ. ಇತರ ಕೀಟಗಳಂತೆಯೇ ಸಾಕಷ್ಟು ಚಲನಶಕ್ತಿಯನ್ನು ಹೊಂದಿರುವ ಮೀಸೆಗಳ ಮೂಲಕ ಇರುವೆಗಳು ವಾಸನೆಯನ್ನು ಗ್ರಹಿಸುತ್ತವೆ. ಶಿರದ ಎರಡೂ ಕಡೆಯಲ್ಲಿ ಒಂದೊಂದರಂತೆ ಇರುವ ಈ ಮೀಸೆಗಳು ವಾಸನೆಯ ತೀವ್ರತೆ ಮತ್ತು ದಿಕ್ಕುಗಳೆರಡನ್ನೂ ಕರಾರುವಾಕ್ಕಾಗಿ ಅರಿಯಲು ಇರುವೆಗಳಿಗೆ ಸಹಕಾರಿಯಾಗಿವೆ.
 • ಸಾಮಾನ್ಯವಾಗಿ ಇರುವೆಗಳು ತಮ್ಮೆಲ್ಲ ಜೀವನಾವಧಿಯನ್ನು ನೆಲದ ಸಂಪರ್ಕದಲ್ಲಿಯೇ ಕಳೆಯುವುದರಿಂದ ಫೆರೊಮೋನ್ ರಾಸಾಯನಿಕವನ್ನು ಉಳಿಸಿಕೊಳ್ಳುವ ಮಾಧ್ಯಮವಾಗಿ ನೆಲವು ಬಳಸಲ್ಪಡುವುದು. ಈ ರಾಸಾಯನಿಕದ ಜಾಡನ್ನು ಹಿಡಿದು ಉಳಿದ ಇರುವೆಗಳು ಹಿಂಬಾಲಿಸಲು ಅನುವಾಗುವುದು. ಗುಂಪಾಗಿ ಹೊರಟು ಆಹಾರವನ್ನು ಹುಡುಕುವ ಇರುವೆಗಳು ಆಹಾರವು ಕಂಡಾಗ ಆ ಸ್ಥಾನದಿಂದ ತಮ್ಮ ಗೂಡಿನವರೆಗೆ ಫೆರೊಮೋನ್ ರಾಸಾಯನಿಕದ ಮೂಲಕ ಒಂದು ದಾರಿಯನ್ನು ಗುರುತು ಮಾಡುತ್ತವೆ.
 • ಮುಂದೆ ಗೂಡಿನ ಇತರ ಇರುವೆಗಳು ಈ ಜಾಡಿನಲ್ಲಿ ಸಾಗಿ ಆಹಾರವಿರುವ ಸ್ಥಳವನ್ನು ತಲುಪುವುವು. ಈ ಜಾಡಿನಲ್ಲಿ ಯಾವುದಾದರೂ ಹೊಸ ಅಡಚಣೆಗಳುಂಟಾಗಿ ದಾರಿಯು ಮುಚ್ಚಿಹೋದಾಗ ಎಲ್ಲಕ್ಕೂ ಮುಂದಿರುವ ಇರುವೆಗಳು ಹೊಸ ದಾರಿಯನ್ನು ಹುಡುಕತೊಡಗುತ್ತವೆ. ಇದರಲ್ಲಿ ಯಶಸ್ವಿಯಾದ ಇರುವೆಯು ಹಿಂದಕ್ಕೆ ಮರಳುವಾಗ ಮತ್ತೊಮ್ಮೆ ಫೆರೊಮೋನ್ ಅನ್ನು ಉದುರಿಸುತ್ತಾ ಹೊಸ ಜಾಡನ್ನು ಸೃಷ್ಟಿಸುತ್ತದೆ. ಈ ಹೊಸದಾದ ಜಾಡನ್ನು ಮತ್ತಷ್ಟು ಇರುವೆಗಳು ಹಿಂಬಾಲಿಸಿ ಎಲ್ಲವೂ ಈ ದಾರಿಯಲ್ಲಿ ರಾಸಾಯನಿಕವನ್ನು ಉದುರಿಸುತ್ತಾ ಸಾಗುತ್ತವೆ.
 • ಹೀಗೆ ಅತ್ಯಂತ ಗಾಢವಾದ ರಾಸಾಯನಿಕವುಳ್ಳ ಜಾಡು ಉಳಿದ ಇರುವೆಗಳಿಗೆ ಅಧಿಕೃತ ಹಾದಿಯಾಗುವುದು. ಆಹಾರವನ್ನು ಅರಸುತ್ತ ಗೂಡಿನಿಂದ ಬಲು ದೂರ ಸಾಗುವ ಇರುವೆಗಳು ಕೆಲ ಗುರುತುಗಳ ಆಧಾರದ ಮೇಲೆ ಮತ್ತು ಸೂರ್ಯನ ಸ್ಥಾನದ ಮೇಲೆ ತಮ್ಮ ಮನೆಯನ್ನು ಸೇರಿಕೊಳ್ಳುತ್ತವೆ. ಫೆರೊಮೋನ್ ರಸಾಯನವು ಇರುವೆಗಳಿಗೆ ಇತರ ರೀತಿಯಲ್ಲಿ ಸಹ ಬಳಕೆಗೆ ಬರುವುದು.
 • ತುಳಿಯಲ್ಪಟ್ಟ ಅಥವಾ ಜಜ್ಜಲ್ಪಟ್ಟ ಇರುವೆಯು ಅತಿ ದೊಡ್ಡ ಪ್ರಮಾಣದಲ್ಲಿ ಈ ರಸಾಯನವನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಸಂಗಾತಿಗಳಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತದೆ. ಇಂತಹ ಸೂಚನೆ ದೊರೆತ ಕೂಡಲೇ ಸುತ್ತಲಿನ ಇರುವೆಗಳು ಆಕ್ರಮಣಸನ್ನದ್ಧವಾಗುತ್ತವೆ. ಮಧ್ಯಮ ಪ್ರಮಾಣದಲ್ಲಿ ಬಿಡುಗಡೆಯಾದ ಫೆರೊಮೋನ್ ಇರುವೆಗೆ ಸುತ್ತಲಿನ ಇರುವೆಗಳನ್ನು ತನ್ನತ್ತ ಆಕರ್ಷಿಸಿಕೊಳ್ಳಲು ನೆರವಾಗುವುದು.
 • ಅನೇಕ ತಳಿಗಳ ಇರುವೆಗಳು ತಮ್ಮ ತಳಿಯ ಫೆರೊಮೋನ್ ಮಾತ್ರವಲ್ಲದೆ ಇತರ ತಳಿಗಳ ಫೆರೊಮೋನ್ ಗಳನ್ನು ಸಹ ಉತ್ಪಾದಿಸುವ ಶಕ್ತಿ ಪಡೆದಿವೆ. ಶತ್ರು ಇರುವೆಗಳು ಇದಿರಾದಾಗ ಇವು ಶತ್ರು ಗುಂಪಿನವುಗಳ ಫೆರೊಮೋನ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೊರಹಾಕಿ ಶತ್ರುಗಳಲ್ಲಿ ಗೊಂದಲ ಮೂಡಿಸುತ್ತವೆ. ಇದರಿಂದಾಗಿ ಅನೇಕ ವೇಳೆ ಶತ್ರುಗಳು ತಮ್ಮತಮ್ಮಲ್ಲೇ ಕಾದಾಟ ನಡೆಸುವುದೂ ಇದೆ.
 • ಇರುವೆಗೆ ಫೆರೊಮೋನ್ ನ ಅವಶ್ಯಕತೆ ಬಹಳ ಹೆಚ್ಚಾಗಿರುವುದರಿಂದ ಬೇಡಿಕೆಯನ್ನು ಪೂರೈಸಲು ದೇಹದ ಅನೇಕ ಗ್ರಂಥಿಗಳು ಈ ರಸಾಯನದ ಉತ್ಪಾದನೆಯನ್ನು ಮಾಡುತ್ತವೆ. ಅಹಾರದ ಜೊತೆಗೆ ಫೆರೊಮೋನ್ ಅನ್ನು ಮಿಶ್ರಮಾಡಿ ಇತರ ಇರುವೆಗಳೊಂದಿಇಗೆ ವಿನಿಮಯ ಮಾಡಿಕೊಳ್ಳುವುದರ ಮೂಲಕ ಇರುವೆಗಳು ಪರಸ್ಪರರ ಯೋಗಕ್ಷೇಮ ತಿಳಿದುಕೊಳ್ಳುತ್ತವೆ. ಇದೇ ಫೆರೊಮೋನ್ ಕೆಲಸಗಾರ ಇರುವೆಯ ನಿಗದಿತ ಕಸುಬಿನ ಬಗ್ಗೆ ಕೂಡ ಮಾಹಿತಿ ನೀಡುತ್ತದೆ.

ಸ್ವರಕ್ಷಣೆಸಂಪಾದಿಸಿ

 
ಒಸಡನ್ನು ಅಗಲವಾಗಿ ತೆರೆದು ಯುದ್ಧಸನ್ನದ್ಧವಾಗಿರುವ ನೇಕಾರ ಇರುವೆ.
 
ಕೆಂಪಿರುವೆಯೊಂದನ್ನು ಕಿತ್ತು ಛಿದ್ರಗೊಳಿಸುವ ಯತ್ನದಲ್ಲಿ ನೇಕಾರ ಇರುವೆಗಳ ಗುಂಪು.
 • ಇರುವೆಗಳು ಕಚ್ಚುವುದರ ಮೂಲಕ ಮತ್ತು (ಕೆಲ ತಳಿಗಳಲ್ಲಿ) ಕೊಂಡಿಯಿಂದ ಕುಟುಕುವುದರ ಮೂಲಕ ಆಕ್ರಮಣ ಮತ್ತು ಸ್ವರಕ್ಷಣೆ ಎರಡನ್ನೂ ಸಾಧಿಸುತ್ತವೆ. ಅನೇಕ ವೇಳೆ ಫಾರ್ಮಿಕ್ ಆಮ್ಲದಂತಹ ಉರಿ ತರುವ ರಾಸಾಯನಿಕಗಳನ್ನು ವೈರಿಯ ದೇಹಕ್ಕೆ ಸಾಗಿಸುತ್ತವೆ. ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಬುಲೆಟ್ ಇರುವೆಗಳ ಕುಟುಕು ಸಮಸ್ತ ಕೀಟಜಗತ್ತಿನಲ್ಲಿಯೇ ಅತಿ ತೀಕ್ಷ್ಣವಾದುದು.
 • ಆಸ್ಟ್ರೇಲಿಯಾದ ಜ್ಯಾಕ್ ಜಂಪರ್ ಇರುವೆಗಳ ಕುಟುಕುವಿಕೆಯಿಂದಾಗಿ ಕೆಲ ಮಾನವರು ಸಾವನ್ನಪಿದ್ದರೆ ಮತ್ತು ಪ್ರತಿ ವರ್ಷ ಅನೇಕ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ. ಇತರ ಜೀವಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇರುವೆಗಳಿಗೆ ತಮ್ಮ ಗೂಡನ್ನು ರೋಗ ಹರಡುವ ಸೂಕ್ಷ್ಮಜೀವಿ ಮತ್ತು ಸಸ್ಯಗಳಿಂದ ಕಾಪಾಡಿಕೊಳ್ಳುವ ಜವಾಬ್ದಾರಿಯು ಸಹ ಇರುತ್ತದೆ. ಪ್ರತಿ ಗೂಡಿನಲ್ಲಿ ಸ್ವಚ್ಛತೆಯನ್ನು ಕಾಪಾಡುವುದಕ್ಕಾಗಿಯೇ ಕೆಲವು ಕೆಲಸಗಾರ ಇರುವೆಗಳು ನಿಯೋಜಿತವಾಗಿರುತ್ತವೆ.
 • ಮರಣಿಸಿದ ತಮ್ಮ ಸಂಗಾತಿಗಳ ಶರೀರವನ್ನು ಸಾಗಿಸುವುದು ಇವುಗಳ ಮುಖ್ಯ ಕಾಯಕವಾಗಿರುತ್ತದೆ. ಸತ್ತ ಇರುವೆಗಳ ದೇಹದಿಂದ ಒಲೀಕ್ ಆಮ್ಲ ವೆಂಬ ರಾಸಾಯನಿಕವು ಹೊರಬೀಳುವುದು. ಇದರ ಸೂಚನೆಯು ದೊರೆತೊಡನೆಯೇ ಕೆಲಸಗಾರರು ಅಂತ್ಯಸಂಸ್ಕಾರ ಚಟುವಟಿಕೆಯಲ್ಲಿ ತೊಡಗುತ್ತಾರೆ. ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳಿಂದ ಗೂಡನ್ನು ರಕ್ಷಿಸಿಕೊಳ್ಳಲು ಇರುವೆಗಳು ಗೂಡಿನ ದ್ವಾರದಲ್ಲಿ ಬಲು ಸಂಕೀರ್ಣ ರೂಪದ ನಿರ್ಮಾಣಗಳನ್ನು ಮಾಡಿಕೊಂಡಿರುತ್ತವೆ.
 • ಅಲ್ಲದೆ ನೀರು ನುಗ್ಗಿದಾಗ ಆಶ್ರಯ ಪಡೆಯಲು ಗೂಡಿನ ಒಳಗೆ ಒಂದು ವಿಶೇಷ ಕೊಠಡಿ ಸಹ ಇರುತ್ತದೆ. ನೆಲದಿಂದ ಎತ್ತದಲ್ಲಿ ಮರದ ಪೊಟರೆಗಳಲ್ಲಿ ಜೀವಿಸುವ ಕೆಲ ತಳಿಯ ಇರುವೆಗಳು ಸಹ ಪ್ರವಾಹದ ನೀರಿನಿಂದ ಗೂಡನ್ನು ಉಳಿಸಿಕೊಳ್ಳಲು ವಿಶಿಷ್ಟ ವಿಧಾನ ಅನುಸರಿಸುತ್ತವೆ. ಈ ತಳಿಗಳಲ್ಲಿ ಕೆಲಸಗಾರ ಇರುವೆಗಳು ಒಳನುಗ್ಗಿದ ನೀರನ್ನು ಹೊಟ್ಟೆತುಂಬ ಕುಡಿದು ಗೂಡಿನ ಹೊರಬಂದು ವಿಸರ್ಜಿಸಿ ಮತ್ತೆ ಇನ್ನಷ್ಟು ನೀರು ಕುಡಿಯಲು ಒಳತೆರಳುತ್ತವೆ. ಪ್ರತಿ ಇರುವೆಯು ಹೀಗೆ ಹೊರಸಾಗಿಸುವ ನೀರಿನ ಪ್ರಮಾಣ ನಗಣ್ಯವೆಂದು ತೋರಿದರೂ ಅಗಾಧ ಸಂಖ್ಯೆಯ ಕೆಲಸಗಾರ ಇರುವೆಗಳು ಈ ಕಾಯಕದಲ್ಲಿ ತೊಡಗಿದಾಗ ಗೂಡಿನೊಳಗೆ ನುಗ್ಗಿದ ನೀರು ಕೊಂಚ ಸಮಯದಲ್ಲಿಯೇ ಖಾಲಿಯಾಗುವುದು ಸಹಜ.

ಕಲಿಕೆಸಂಪಾದಿಸಿ

 • ಬಹಳಷ್ಟು ವಿಧದ ಪ್ರಾಣಿಗಳು ಇತರರ ಅನುಕರಣೆಯಿಂದ ನಡವಳಿಕೆಗಳನ್ನು ಕಲಿಯುತ್ತವೆ. ಆದರೆ ಇರುವೆಯು ಸಸ್ತನಿ ಪ್ರಾಣಿಗಳಂತೆ ತನ್ನ ಕುಟುಂಬದ ಕಿರಿಯ ಸದಸ್ಯರಿಗೆ ಕಲಿಸುತ್ತದೆ. ಆಹಾರ ಹುಡುಕುವ ಅನುಭವಿ ಇರುವೆಯೊಂದು ತನ್ನ ಕುಟುಂಬದ ಮರಿ ಇರುವೆ ಒಂದನ್ನು ಆಹಾರವಿರುವ ಸ್ಥಳಕ್ಕೆ ತನ್ನೊಡನೆ ಕರೆದೊಯ್ಯುತ್ತದೆ. ಬಲು ನಿಧಾನಗತಿಯಲ್ಲಿ ಸಾಗುವ ಈ ಪಯಣದಲ್ಲಿ ಗುರು ಮತ್ತು ಶಿಷ್ಯರಿಬ್ಬರೂ ತಮ್ಮತಮ್ಮ ಸ್ಥಾನದ ಬಗ್ಗೆ ಪೂರ್ಣ ಅರಿವಿಟ್ಟುಕೊಂಡಿರುತ್ತಾರೆ.
 • ಹಿರಿ ಇರುವೆಯು ಹಿಂಬಾಲಿಸುತ್ತಿರುವ ಮರಿಯು ಬಹಳ ಹಿಂದೆ ಬಿದ್ದಾಗ ತನ್ನ ವೇಗ ಕಡಿಮೆಗೊಳಿಸುವುದು ಮತ್ತು ಅಂತರ ತೀರ ಕಡಿಮೆಯಾದಾಗ ತನ್ನ ವೇಗ ಹೆಚ್ಚಿಸಿಕೊಳ್ಳುವುದು. ಅದೇ ರೀತಿಯಲ್ಲಿ ಮರಿಯು ಸಹ ತಮ್ಮ ನಡುವಿನ ಅಂತರ ಒಂದೇ ತೆರನಾಗಿರುವಂತೆ ನೋಡಿಕೊಳ್ಳಲು ಶ್ರಮಿಸುತ್ತದೆ. ಇಂತಹ ಕೆಲವು ಮಾರ್ಗದರ್ಶಕ ತರಗತಿಗಳ ನಂತರ ಮರಿಯು ಸ್ವತಂತ್ರವಾಗಿ ಆಹಾರ ಹುಡುಕಲು ತೆರಳುವಲ್ಲಿ ಶಕ್ತವಾಗುತ್ತದೆ. ಅಲ್ಲದೆ ಒಂದು ಕಾಯಕವನ್ನು ಕಲಿಯುವಲ್ಲಿ ವಿಫಲವಾದರೆ ಇರುವೆಯು ಮತ್ತೊಂದು ಕಾಯಕದಲ್ಲಿ ತೊಡಗಿಕೊಳ್ಳುವುದು ಸಹ ಅಧ್ಯಯನಗಳಿಂದ ಕಂಡುಬಂದಿದೆ.

ಗೂಡಿನ ನಿರ್ಮಾಣಸಂಪಾದಿಸಿ

 
ನೇಕಾರ ಇರುವೆಗಳ ಪರ್ಣಕುಟಿ.
 • ಕೆಲ ತಳಿಯ ಇರುವೆಗಳು ಅತಿ ಸಂಕೀರ್ಣವಾದ ಗೂಡುಗಳನ್ನು ಮತ್ತು ಗ್ಯಾಲರಿಗಳನ್ನು ನಿರ್ಮಿಸಿಕೊಂಡರೆ ಇನ್ನು ಕೆಲ ತಳಿಯವು ಅಲೆಮಾರಿ ಸ್ವಭಾವದವಾಗಿದ್ದು ಶಾಶ್ವತವಾದ ಗೂಡುಗಳನ್ನು ಕಟ್ಟಿಕೊಳ್ಳುವುದಿಲ್ಲ. ನೆಲದಡಿಯಲ್ಲಿ ಗೂಡು ನಿರ್ಮಿಸುವ ತಳಿಗಳು ಅಧಿಕ. ಆದರೆ ಇದಲ್ಲದೆ ಮರದ ಪೊಟರೆಯಲ್ಲಿ, ದಿಮ್ಮಿಗಳಲ್ಲಿ, ರೆಂಬೆಗಳಲ್ಲಿ ಮತ್ತು ಕಲ್ಲುಬಂಡೆಗಳಡಿಯಲ್ಲಿ ಸಹ ಇರುವೆಯ ಗೂಡು ಕಂಡುಬರುವುದು. ಸಾಮಾನ್ಯವಾಗಿ ಗೂಡಿನ ನಿರ್ಮಾಣಕ್ಕೆ ಇರುವೆಯು ಮಣ್ಣು ಮತ್ತು ಸಸ್ಯಜನ್ಯ ವಸ್ತುಗಳನ್ನು ಬಳಸುವುದು.
 • ಗೂಡಿಗಾಗಿ ಸ್ಥಳವನ್ನು ಇರುವೆಗಳು ಬಲು ಮುತುವರ್ಜಿಯಿಂದ ಆರಿಸುತ್ತವೆ. ಯಾವುದೇ ರೀತಿಯ ರೋಗ ಮತ್ತು ಇತರ ಕೀಟಗಳಿಂದ ಅಪಾಯವುಂಟಾಗುವ ಸೂಚನೆ ಕಂಡ ಹೂಡಲೇ ಇರುವೆಗಳು ಗೂಡನ್ನು ಸಂಪೂರ್ಣವಾಗಿ ತೊರೆದು ಹೊಸ ಸ್ಥಾನಕ್ಕೆ ತೆರಳುತ್ತವೆ. ದಕ್ಷಿಣ ಅಮೆರಿಕಾದ ಆರ್ಮಿ ಇರುವೆ ಮತ್ತು ಆಫ್ರಿಕಾದ ಡ್ರೈವರ್ ಇರುವೆಗಳು ಇದಕ್ಕಿಂತ ಭಿನ್ನವಾಗಿದ್ದು ಕೆಲಕಾಲವನ್ನು ಅಲೆಯುವುದರಲ್ಲಿ ಕಳೆದರೆ ಮತ್ತೆ ಕೆಲಕಾಲ ಸೇವಕ ಇರುವೆಗಳು ನಿರ್ಮಿಸಿಕೊಟ್ಟ ತಾತ್ಕಾಲಿಕ ನೆಲೆಗಳಲ್ಲಿ ಕಳೆಯುತ್ತವೆ.
 • ನೇಕಾರ ಇರುವೆಗಳು ಮರದ ಕೊಂಬೆಗಳಲ್ಲಿ ಎಲೆಗಳನ್ನು ಹೆಣೆದು ಗೂಡು ನಿರ್ಮಿಸುತ್ತವೆ. ಈ ಮೊದಲು ತಿಳಿಸಿದಂತೆ ಪ್ರಜಾವೃದ್ಧಿಯು ಸ್ವಯಂವರ ಹಾರಾಟದ ಮೂಲಕ ನಡೆಯುವುದು. ಅಥವಾ ಕೆಲವೊಮ್ಮೆ ಹಲ ಕೆಲಸಗಾರ ಇರುವೆಗಳು ಕುಟುಂಬದಿಂದ ಹೊರಬಂದು ನೆಲದಲ್ಲಿ ಹೊಸ ಕುಳಿಯನ್ನು ತೋಡಿ ಅದರಲ್ಲಿ ಹೊಸ ರಾಣಿಯೊಬ್ಬಳನ್ನು ಸ್ಥಾಪಿಸುತ್ತವೆ. ವಾಸನೆಯ ಮೂಲಕ ವಸಾಹತಿನ ಸದಸ್ಯರನ್ನು ಗುರುತಿಸಲಾಗುತ್ತದೆ. ಭಿನ್ನ ವಾಸನೆಯುಳ್ಳ ಇರುವೆಯೊಂದು ಗೂಡಿನ ಹತ್ತಿರ ಸುಳಿದಲ್ಲಿ ತಕ್ಷಣ ಆಕ್ರಮಣಕ್ಕೊಳಗಾಗುತ್ತದೆ.

ಬೇಸಾಯಸಂಪಾದಿಸಿ

 • ಮಾನವನನ್ನು ಹೊರತುಪಡಿಸಿದರೆ ಇರುವೆಯು ಆಹಾರಕ್ಕಾಗಿ ವ್ಯವಸಾಯದಲ್ಲಿ ತೊಡಗುವ ಏಕೈಕ ಪ್ರಾಣಿಯಾಗಿದೆ. ಲೀಫ್‌ಕಟರ್ (ಎಲೆಕತ್ತರಿಸುವ) ಇರುವೆಗಳು ತಮ್ಮ ವಸಾಹತಿನೊಳಗಡೆ ಬೆಳೆದು ಜೀವಿಸುವ ಒಂದು ವಿಶಿಷ್ಟ ಶಿಲೀಂಧ್ರವನ್ನು ಮಾತ್ರ ತಿನ್ನುತ್ತವೆ. ಈ ಇರುವೆಗಳು ಸದಾಕಾಲ ಎಲೆಗಳ ಸಂಗ್ರಹಣೆಯಲ್ಲಿ ತೊಡಗಿರುತ್ತವೆ. ಸಂಗ್ರಹಿಸಿದ ಎಲೆಗಳನ್ನು ಸಣ್ಣ ಆಕಾರದಲ್ಲಿ ಕತ್ತರಿಸಿ ಚೆನ್ನಾಗಿ ಜಗಿದು ತಮ್ಮ ಗೂಡಿನೊಳಗಿನ ಹೊಲಗಳಲ್ಲಿ ಹಾಕುತ್ತವೆ.
 • ಇಂತಹ ಹೊಲಗಳಲ್ಲಿ ಶಿಲೀಂಧ್ರ (ಬೂಷ್ಟು) ಬೆಳೆದು ಮುಂದೆ ಇರುವೆಗಳಿಗೆ ಆಹಾರವಾಗುತ್ತದೆ. ಈ ಎಲೆಗಳ ಸಂಗ್ರಹಣೆ, ಕತ್ತರಿಸುವುದು ಮತ್ತು ಜಗಿಯುವುಕೆಗಳನ್ನು ಮಾಡಲು ವಿಭಿನ್ನ ಗಾತ್ರದ ಕೆಲಸಗಾರ ಜಾತಿಗಳು ವಸಾಹತಿನಲ್ಲಿರುತ್ತವೆ. ಬೂಷ್ಟಿನ ಬೆಳವಣಿಗೆ ಮತ್ತು ಅದಕ್ಕಾಗಿ ಒದಗಿಸಲಾದ ಎಲೆಗಳ ಬಗ್ಗೆ ಬೂಷ್ಟಿನ ಪ್ರತಿಕ್ರಿಯೆಗಳನ್ನು ಈ ಇರುವೆಗಳು ಸೂಕ್ಷ್ಮವಾಗಿ ಗಮನಿಸುತ್ತವೆ.
 • ಇದನ್ನು ಬಹುಶ ಬೂಷ್ಟಿನಿಂದ ಪಸರಿಸುವ ಕೆಲ ಸೂಕ್ಷ್ಮ ರಾಸಾಯನಿಕ ವಸ್ತುಗಳ ಮೂಲಕ ಇರುವೆಗಳು ಅರಿಯುತ್ತವೆ. ಯಾವುದೇ ಜಾತಿಯ ಎಲೆಯು ಬೂಷ್ಟಿಗೆ ವಿಷಕಾರಿಯೆಂಬ ಸೂಚನೆ ದೊರೆತಾಗಿನಿಂದ ಆ ವಿಧದ ಎಲೆಗಳ ಸಂಗ್ರಹಣೆಯನ್ನು ನಿಲ್ಲಿಸಲಾಗುತ್ತದೆ. ಈ ವಿಧದ ಬೂಷ್ಟುಗಳಲ್ಲಿ ಉತ್ಪತ್ತಿಯಾಗುವ ಗಾಂಗಿಲೀಡಿಯಾ ಎಂಬ ವಸ್ತುವು ಇರುವೆಗೆ ಆಹಾರವಾಗಿದೆ.

ಚಲನವಲನಗಳುಸಂಪಾದಿಸಿ

 
ತೆಪ್ಪವಾಗಿ ತೇಲುತ್ತಿರುವ ಇರುವೆಗಳ ಬೃಹತ್ ಗುಂಪು.
 • ಮರುಭೂಮಿಯ ಇರುವೆಗಳು ನೆಲದ ಮೇಲೆ ಕಣ್ಣಿಗೆ ಕಾಣುವ ಸ್ಥಾನಗಳನ್ನು ಗುರುತಾಗಿಟ್ಟುಕೊಂಡು ಸಂಚಾರದಲ್ಲಿ ತೊಡಗುತ್ತವೆ. ಸಹಾರಾ ಮರುಭೂಮಿಯಲ್ಲಿ ಇಂತಹ ಯಾವುದೇ ಚಿಹ್ನೆಗಳು ಇಲ್ಲದೆಡೆಯಲ್ಲಿ ಇರುವೆಗಳು ದಿಕ್ಕುಗಳನ್ನು ಗುರುತಿಸಿಟ್ಟುಕೊಳ್ಳುವ ಯತ್ನ ಮಾಡುತ್ತವೆ ಅಲ್ಲದೆ ತಾವು ಕ್ರಮಿಸಿದ ದೂರವನ್ನು ಸಹ ನೆನಪಿನಲ್ಲಿಟ್ಟುಕೊಳ್ಳುತ್ತವೆ.
 • ತಾವು ಸಂಚರಿಸುವಾಗ ಇಟ್ಟ ಒಟ್ಟು ಹೆಜ್ಜೆಗಳ ಲೆಕ್ಕವನ್ನು ಈ ಇರುವೆಗಳು ತಿಳಿದಿರುತ್ತವೆಯೆಂದು ನಂಬಲಾಗಿದೆ. ಗೂಡಿಗೆ ಮರಳುವಾಗ ದಿಕ್ಕಿನ ಜ್ಞಾನ ಮತ್ತು ಕ್ರಮಿಸಿದ ಹೆಜ್ಜೆಯ ಗಣನೆಗಳು ಇವಕ್ಕೆ ಗೂಡಿಗೆ ಅತಿ ಸಮೀಪದ ದಾರಿಯನ್ನು ಕಂಡುಕೊಳ್ಳುವಲ್ಲಿ ನೆರವಾಗುತ್ತವೆ.
 
ನೆಗೆಯುವ ಇರುವೆ.
 • ಕೆಲಸಗಾರ ಇರುವೆಗಳಿಗೆ ರೆಕ್ಕೆಯಿರುವುದಿಲ್ಲ ಮತ್ತು ಹೆಣ್ಣಿರುವೆಗಳು ಸಂತಾನೋತ್ಪತ್ತಿಯ ಕಾಲದಲ್ಲಿ ರೆಕ್ಕೆಗಳನ್ನು ಕಳಚಿಬಿಡುತ್ತವೆ. ಹೀಗಾಗಿ ಹೆಚ್ಚಿನೆಲ್ಲ ಇರುವೆಗಳು ನಡೆದಾಡುವುದರ ಮೂಲಕವೇ ಚಲಿಸುತ್ತವೆ. ಹೆಚ್ಚಿನ ಸಹಕಾರಿ ಮನೋಭಾವುಳ್ಳ ಇರುವೆಯ ತಳಿಗಳಲ್ಲಿ ಕೆಲಸಗಾರರು ತಮ್ಮ ದೇಹಗಳಿಂದ ಸರಪಳಿಯನ್ನು ನಿರ್ಮಿಸಿ ಆ ಶರೀರಗಳ ಸೇತುವೆಯ ಮೇಲೆ ಕುಟುಂಬದ ಇತರ ಸದಸ್ಯರು ನಡೆದುಕೊಂಡು ಹೋಗಲು ಅನುವು ಮಾಡಿಕೊಡುತ್ತವೆ.
 • ಇಂತಹ ಇರುವೆ ಸೇತುವೆಯು ನೆಲದೊಳಗಿನ ಕಂದಕವನ್ನು, ನೀರಿನ ಸಣ್ಣ ತೊರೆಯನ್ನು ದಾಟಲು ಬಳಸಲ್ಪಡುವುದು. ಕೆಲವೊಮ್ಮೆ ಮರದ ರೆಂಬೆಗಳ ಅಂತರವನ್ನು ಕ್ರಮಿಸಲು ಗಾಳಿಯಲ್ಲಿ ಸಹ ಇಂತಹ ಸೇತುವೆಗಳು ರಚಿಸಲ್ಪಡುತ್ತದೆ. ಇನ್ನು ಕೆಲ ತಳಿಯ ಇರುವೆಗಳು ಅಗಾಧ ಸಂಖ್ಯೆಯಲ್ಲಿ ಒಟ್ಟುಗೂಡಿ ಒಂದನ್ನೊಂದು ಕಚ್ಚಿಕೊಂಡು ತೇಲುವ ತೆಪ್ಪವನ್ನು ರಚಿಸಿಕೊಳ್ಳುತ್ತವೆ. ಈ ತೆಪ್ಪದ ಸಹಾಯದಿಂದ ಇವು ಪ್ರವಾಹದ ಕಾಲದಲ್ಲಿ ಬೇರೆ ಸ್ಥಳಕ್ಕೆ ತಲುಪುತ್ತವೆ.
 • ಅಲ್ಲದೆ ಇಂತಹ ವ್ಯವಸ್ಥೆಯ ಮೂಲಕವೇ ಹೊಸಹೊಸ ದ್ವೀಪಗಳಲ್ಲಿ ಇರುವೆಗಳು ನೆಲೆಯೂರಿದವೆಂದು ನಂಬಲಾಗಿದೆ. ಜೋರ್ಡಾನಿನ ನೆಗೆಯುವ ಇರುವೆಯಂತಹ ತಳಿಗಳು ಚಿಮ್ಮುವ ಸಾಮರ್ಥ್ಯವನ್ನು ಹೊಂದಿವೆ. ಮಧ್ಯದ ಜೋಡಿ ಮತ್ತು ಹಿಂಬದಿಯ ಜೋಡಿ ಕಾಲುಗಳ ವಿಶಿಷ್ಟ ಸಂಯೋಜನೆಯಿಂದ ಈ ಇರುವೆಗಳು ನೆಗೆಯುತ್ತವೆ. ಆಸ್ಟ್ರೇಲಿಯಾದ ಇರುವೆಯ ತಳಿಯೊಂದು ನೀರಿನಲ್ಲಿ ಈಜಬಲ್ಲುದು. ಈ ಇರುವೆಯು ನೀರಿನೊಳಗೆ ಮುಳುಗಿರುವ ಗೂಡಿನಲ್ಲಿ ನೆಲೆಸುತ್ತದೆ.
 • ಇಂತಹ ಗೂಡಿನೊಳಗೆ ಬಂದಿಯಾಗಿರುವ ಗಾಳಿಯ ಗುಳ್ಳೆಗಳನ್ನು ಈ ಇರುವೆಯು ಉಸಿರಾಟಕ್ಕೆ ಬಳಸುತ್ತದೆ. ಇನ್ನು ಕೆಲ ತಳಿಯ ಇರುವೆಗಳು ಗಾಳಿಯಲ್ಲಿ ಸ್ವಲ್ಪಕಾಲ ತೇಲುವ ಸಾಮರ್ಥ್ಯವನ್ನು ಹೊಂದಿವೆ. ಮರದ ಮೇಲೆ ವಾಸಿಸುವ ಇರುವೆಗಳಲ್ಲಿ ಈ ಗುಣವು ವಿಶೆಷವಾಗಿ ಕಂಡುಬರುತ್ತದೆ. ಈ ಇರುವೆಯು ತೇಲಾಟದ ನಂತರ ನೆಲಕ್ಕಿಳಿಯುವಾಗ ತನ್ನ ದಿಕ್ಕನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುವುದು.

ತಳಿಗಳ ಮಧ್ಯೆ ಸಹಕಾರ ಮತ್ತು ಸ್ಪರ್ಧೆಸಂಪಾದಿಸಿ

 
ಒಟ್ಟಾಗಿ ಆಹಾರಸಂಗ್ರಹದಲ್ಲಿ ತೊಡಗಿರುವ ಮಾಂಸಭಕ್ಷಕ ಇರುವೆಗಳು.
 • ಎಲ್ಲಾ ತರಹದ ಇರುವೆಗಳೂ ಸಂಘಜೀವಿಗಳಲ್ಲ. ಆಸ್ಟ್ರೇಲಿಯಾದ ಬುಲ್‌ಡಾಗ್ ಇರುವೆಯು ಅತಿ ಪ್ರಾಚೀನ ತಳಿಯಾಗಿದ್ದು ಗಾತ್ರದಲ್ಲಿ ಬಲು ದೊಡ್ಡದು. ಈ ಇರುವೆಯು ಒಂಟಿಯಾಗಿಯೇ ಬೇಟೆಯಾಡುತ್ತದೆ. ಈ ಜಾತಿಯ ಇರುವೆಯು ತನ್ನ ಆಹಾರವನ್ನು ಹುಡುಕಲು ದೊಡ್ಡದಾಗಿರುವ ತನ್ನ ಕಣ್ಣುಗಳನ್ನು ಮುಖ್ಯವಾಗಿ ಬಳಸುತ್ತದೆ. ಕೆಲ ತಳಿಯ ಇರುವೆಗಳು ಇತರ ತಳಿಯ ಇರುವೆಗಳ ವಸಾಹತಿನ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುವ ಸ್ವಭಾವವನ್ನು ಹೊಂದಿವೆ.
 • ಇನ್ನು ಕೆಲವು ಪರರ ಗೂಡಿನ ಮೇಲೆ ದಾಳಿ ನಡೆಸಿದರೂ ಕೇವಲ ಮೊಟ್ಟೆಗಳನ್ನು ಮತ್ತು ಲಾರ್ವಾಗಳನ್ನು ಮಾತ್ರ ದೋಚುತ್ತವೆ. ಈ ಮೊಟ್ಟೆ ಮತ್ತು ಲಾರ್ವಾಗಳನ್ನು ಅಹಾರವಾಗಿ ಉಪಯೋಗಿಸುತ್ತವೆ ಅಥವಾ ಅವನ್ನು ಪೋಷಿಸಿ ಮುಂದೆ ಹುಟ್ಟುವ ಮರಿಗಳನ್ನು ಗುಲಾಮ ರನ್ನಾಗಿಸಿಕೊಳ್ಳುತ್ತವೆ. ಅಮೆಜಾನ್ ಇರುವೆಯಂತಹ ಹಲವು ತಳಿಗಳ ಇರುವೆಗಳು ತಮ್ಮ ಆಹಾರವನ್ನು ತಾವೇ ಉಣ್ಣುವ ಸಾಮರ್ಥ್ಯವನ್ನು ಹೊಂದಿಲ್ಲ. ಇವುಗಳ ಪಾಲನೆ ಪೋಷಣೆಯು ಗುಲಾಮ ಇರುವೆಗಳ ಜವಾಬ್ದಾರಿಯಾಗಿರುತ್ತದೆ.
 • ಕೆಲವೊಮ್ಮೆ ಇರುವೆಗಳ ವಸಾಹತಿನಲ್ಲಿ ಒಂದಕ್ಕಿಂತ ಹೆಚ್ಚು ತಳಿಯ ಇರುವೆಗಳ ಕುಟುಂಬ ಮತ್ತು ಗೆದ್ದಲು ಹುಳಗಳು ಸಹ ಒಟ್ಟಾಗಿ ಬಾಳುವುದಿದೆ. ಪೇವ್‌ಮೆಂಟ್ ಇರುವೆಯು ತನ್ನ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರಾದುದು. ಈ ತಳಿಯ ಇರುವೆಗಳು ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ಯತ್ನದಲ್ಲಿ ಆಗಾಗ ಇತರ ಗೂಡುಗಳ ಮೇಲೆ ದಾಳಿ ನಡೆಸುತ್ತವೆ. ಆಗ ಸಂಭವಿಸುವ ಕದನದ ಪರಿಣಾಮವಾಗಿ ಕಾಲುಹಾದಿಯುದ್ದಕ್ಕೂ ಸಹಸ್ರಾರು ಸಂಖ್ಯೆಯ ಇರುವೆಗಳ ಶವಗಳು ಬಿದ್ದಿರುತ್ತವೆ. ಇದರಿಂದಲೇ ಈ ತಳಿಗೆ ಮೇಲ್ಕಾಣಿಸಿದ ಹೆಸರು ಬಂದಿದೆ.
 • ಇರುವೆಗಳು ತಮ್ಮ ಬಂಧುಗಳನ್ನು ಮತ್ತು ತಮ್ಮ ಗೂಡಿನ ಇತರ ಇರುವೆಗಳನ್ನು ವಾಸನೆಯ ಸಹಾಯದಿಂದ ಗುರುತಿಸುತ್ತವೆ. ತಮ್ಮ ಶರೀರಕವಚದ ಮೇಲೆ ಲೇಪಿಸಲ್ಪಟ್ಟಿರುವ ಸಾವಯವ ವಸ್ತುವನ್ನುಳ್ಳ ದ್ರವ್ಯವು ಈ ವಾಸನೆಗೆ ಮೂಲವಾಗಿದ್ದು ಪ್ರತಿ ತಳಿಯಲ್ಲಿ ಮತ್ತು ಕುಟುಂಬದಲ್ಲಿ ವಿಭಿನ್ನವಾಗಿರುತ್ತದೆ. ಬೇರೆ ವಾಸನೆಯನ್ನು ಹೊಂದಿರುವ ಇರುವೆಯು ಹತ್ತಿರ ಸುಳಿದಲ್ಲಿ ಕೂಡಲೇ ದಾಳಿಗೊಳಗಾಗುತ್ತದೆ.

ಭಿನ್ನತೆಸಂಪಾದಿಸಿ

ಬಲು ದೊಡ್ಡ ಸಂಖ್ಯೆಯಲ್ಲಿರುವ ಇರುವೆಗಳ ತಳಿಗಳು ಸಾಕಷ್ಟು ವಿಭಿನ್ನ ಸ್ವಭಾವ ಮತ್ತು ಲಕ್ಷಣಗಳನ್ನು ಹೊಂದಿವೆ. ಇರುವೆಗಳ ಗಾತ್ರವು ೨ ರಿಂದ ೨೫ ಮಿಲಿಮೀಟರ್ ವರೆಗೆ ಇರುವುದು. ಇರುವೆಗಳು ಬೇರೆಬೇರೆ ಬಣ್ಣವನ್ನು ಹೊಂದಿರಬಹುದು. ಆದರೆ ಕೆಂಪು ಮತ್ತು ಕಪ್ಪು ಬಣ್ಣಗಳು ಸಾಮಾನ್ಯ. ಉಷ್ಣವಲಯದ ಕೆಲ ಇರುವೆಗಳು ಲೋಹದಂತೆ ಹೊಳೆಯುವ ಮೈಬಣ್ಣದವು.

ಇತರ ತಳಿಗಳೊಂದಿಗೆ ಸಂಬಂಧಸಂಪಾದಿಸಿ

 
ಹನಿಡ್ಯೂಗಾಗಿ ಕೀಟವೊಂದನ್ನು ಉಪಚರಿಸುತ್ತಿರುವ ಇರುವೆ.
 
ಆಫಿಡ್‌ನಿಂದ ಹನಿಡ್ಯೂ ಸಂಗ್ರಹಿಸುತ್ತಿರುವ ಇರುವೆ.
 • ಇರುವೆಗಳು ಇತರ ತಳಿಗಳ ಇರುವೆಗಳು ಮತ್ತು ಬೇರೆ ಜೀವಿಗಳೊಂದಿಗೆ ಗಾಢ ಸಂಬಂಧವನ್ನು ಹೊಂದಿರುತ್ತವೆ. ಕೆಲವು ಕೀಟಗಳು, ಶಿಲೀಂಧ್ರಗಳು ಮತ್ತು ಸಸ್ಯಗಳೊಂದಿಗೆ ಇರುವೆಗಳು ಪರಸ್ಪರ ಸಹಕಾರದ ಒಪ್ಪಂದದಡಿಯಲ್ಲಿ ಜೀವಿಸುತ್ತವೆ. ಆಫಿಡ್ ಕೀಟವು ಸಸ್ಯಗಳನ್ನು ಭಕ್ಷಿಸುವ ಸಮಯದಲ್ಲಿ ಹನಿಡ್ಯೂ ಎಂಬ ಸಿಹಿ ದ್ರವವನ್ನು ಸ್ರವಿಸುತ್ತದೆ. ಇದರಲ್ಲಿರುವ ಶರ್ಕರವು ಅಧಿಕ ಚೈತನ್ಯ ನೀಡುವ ಆಹಾರವಾಗಿದ್ದು ಇದನ್ನು ಹಲ ತಳಿಯ ಇರುವೆಗಳು ಸಂಗ್ರಹಿಸುತ್ತವೆ.
 • ಕೆಲವೊಮ್ಮೆ ಆಫಿಡ್ ತನ್ನ ದೇಹದ ಮೇಲೆ ಇರುವೆಯು ತನ್ನ ಮೀಸೆಯಿಂದ ತಟ್ಟಿದಾಗ ಸಹ ಹನಿಡ್ಯೂ ವನ್ನು ಸ್ರವಿಸುತ್ತವೆ. ಈ ಲಾಭಕ್ಕೆ ಪ್ರತಿಫಲವಾಗಿ ಇರುವೆಗಳು ಆಫಿಡ್ ಅನ್ನು ಇತರ ಭಕ್ಷಕ ಪ್ರಾಣಿಗಳಿಂದ ರಕ್ಷಿಸುತ್ತವೆ ಮತ್ತು ಅವುಗಳನ್ನು ಉತ್ತಮ ಮೇವಿರುವ ಜಾಗಕ್ಕೆ ಒಯ್ಯುತ್ತವೆ. ಇರುವೆಗಳು ತಮ್ಮ ವಸಾಹತನ್ನು ಸ್ಥಳಾಂತರಿಸುವಾಗ ಕೆಲವು ಆಫಿಡ್ ಗಳನ್ನು ಸಹ ತಮ್ಮೊಂದಿಗೆ ಕರೆದೊಯ್ಯುತ್ತವೆ.
 • ಇರುವೆಗಳು ಪಶು ಸಂಗೋಪನೆಯನ್ನು ಸಹ ನಡೆಸುತ್ತವೆ. ಮೈರ್ಮೆಕೋಫಿಲಸ್ ಜಾತಿಯ ಕ್ಯಾಟರ್‍ಪಿಲ್ಲರ್ ಗಳ ಹಿಂಡನ್ನು ಇರುವೆಗಳು ಸಾಕುತ್ತವೆ. ಹಗಲಿನ ವೇಳೆ ಇವುಗಳ ಹಿಂಡನ್ನು ಇರುವೆಗಳು ಬಯಲು ಪ್ರದೇಶಕ್ಕೆ ಮೇಯಿಸಲು ಕರೆದೊಯ್ದು ಸಂಜೆಯಾಗುತ್ತಲೇ ಮತ್ತೆ ತಮ್ಮ ಗೂಡಿಗೆ ಅಟ್ಟಿಕೊಂಡು ಬರುತ್ತವೆ. ಈ ಕ್ಯಾಟರ್‍ಪಿಲ್ಲರ್ ನ ದೇಹದಲ್ಲಿ ಹನಿಡ್ಯೂ ಸ್ರವಿಸುವ ಗ್ರಂಥಿಯೊಂದಿರುತ್ತವೆ. ಇರುವೆಗಳು ಇವುಗಳ ದೇಹವನ್ನು ತೀಡಿದಾಗ ಗ್ರಂಥಿಯಿಂದ ಹನಿಡ್ಯೂ ಒಸರುತ್ತದೆ.
 • ಇದನ್ನು ಇರುವೆಯು ಆಹಾರವಾಗಿ ಬಳಸುತ್ತದೆ. ಕಾಲಕ್ರಮೇಣ ಈ ಕ್ಯಾಟರ್‍ಪಿಲ್ಲರ್ ನ ಕೆಲ ತಳಿಗಳು ಇರುವೆಯನ್ನು ಪ್ರೀತಿಸುವುದರ ಬದಲಾಗಿ ಭಕ್ಷಣೆಯಲ್ಲಿ ತೊಡಗುವುದು ಸಹ ಇದೆ. ಲೆಮನ್ ಇರುವೆ ಎಂಬ ತಳಿಯ ಇರುವೆಗಳು ಡುರೋಯಾ ಹಿರುಸ್ಟಾ ಎಂಬ ಮರದೊಂದಿಗೆ ವಿಶಿಷ್ಟ ಸಂಬಂಧವನ್ನು ಹೊಂದಿವೆ. ಈ ಮರದಿಂದ ಒಸರುವ ಮಕರಂದವು ಈ ಇರುವೆಗಳಿಗೆ ಮುಖ್ಯ ಆಹಾರವಾಗಿದೆ. ಮರದ ಉತ್ತಮ ಬೆಳವಣಿಗೆಗೆ ಅನುವು ಮಾಡಿಕೊಡಲು ಲೆಮನ್ ಇರುವೆಗಳು ಈ ಮರದ ಸುತ್ತಮುತ್ತ ಇರುವ ಇತರ ಎಲ್ಲ ಸಸ್ಯಗಳನ್ನು ನಾಶಮಾಡಿಬಿಡುತ್ತವೆ.
 • ಹೀಗೆ ಸಂಪೂರ್ಣ ಬೋಳು ಪ್ರದೇಶಗಳ ಮಧ್ಯೆ ಮಧ್ಯೆ ಈ ಮರಗಳಿರುವ ಸ್ಥಳವನ್ನು ದೆವ್ವದ ಉದ್ಯಾನ ಎಂದು ಕರೆಯಲಾಗುತ್ತದೆ. ಜೊತೆಗೆ ಈ ಮರವನ್ನು ಎಲ್ಲ ಬಗೆಯ ಕೀಟಗಳಿಂದ ಲೆಮನ್ ಇರುವೆಗಳು ರಕ್ಷಿಸುತ್ತವೆ.ಹಲವು ಜಾತಿಯ ಪಕ್ಷಿಗಳು ಇರುವೆ ಗೂಡಿನ ಮೇಲೆ ಕುಳಿತು ಇರುವೆಗಳನ್ನು ಹೆಕ್ಕಿ ತಮ್ಮ ರೆಕ್ಕಗಳ ಮೇಲೆ ಇರಿಸಿಕೊಳ್ಳುತ್ತವೆ. ರೆಕ್ಕೆಗಂಟಿರುವ ಪರೋಪಜೀವಿಗಳಿಂದ ವಿಮೋಚನೆ ಪಡೆಯಲು ಅವು ಈ ರೀತಿ ಮಾಡುತ್ತವೆ.
 • ಕಾರ್ಡಿಸೆಪ್ಸ್ ಎಂಬ ಶಿಲೀಂಧ್ರವು ಇರುವೆಗಳಿಗೆ ಸೋಂಕನ್ನುಂಟುಮಾಡುತ್ತದೆ. ಸೋಂಕು ತಗಲಿದ ಇರುವೆಯು ಮರವನ್ನೇರಿ ತಮ್ಮ ಒಸಡುಗಳನ್ನು ಅಳವಾಗಿ ಕಾಂಡಕ್ಕೆ ಊರುತ್ತವೆ. ಈ ಶಿಲೀಂಧ್ರವು ಇರುವೆಯನ್ನು ಸಾಯಿಸಿ ಅದರ ದೇಹವನ್ನು ಸುತ್ತುವರೆದು ತಾನು ಬೆಳೆಯುತ್ತದೆ.

ಹಲವು ಜಾತಿಯ ಪ್ರಾಣಿಗಳು ಇರುವೆಗಳನ್ನು ಭಕ್ಷಿಸುತ್ತವೆ. ಇವುಗಳಲ್ಲಿ ದಕ್ಷಿಣ ಅಮೆರಿಕಾದ ಕೆಲ ಕಪ್ಪೆಗಳು, ಕಂದು ಕರಡಿ, ಪಾಂಗೊಲಿನ್ ಗಳು ಸೇರಿವೆ. ಕೆಲ ಪಕ್ಷಿಗಳು ಸಹ ಇರುವೆಗಳನ್ನು ತಿನ್ನುತ್ತವೆ.

ಮಾನವ ಮತ್ತು ಇರುವೆಸಂಪಾದಿಸಿ

 
ಎಲೆ ಕತ್ತರಿಸುವ ಇರುವೆಗಳು (ಅಟ್ಟೀನಿ).
 
ಸುಮಾತ್ರಾದ ಮಳೆಕಾಡಿನಲ್ಲಿ ಇರುವೆಗಳು.
 
ದೊಡ್ಡ ಕೀಟವೊಂದರ ಮೇಲೆ ದಾಳಿಯಿಟ್ಟಿರುವ ಇರುವೆಗಳು.
 • ಉಪದ್ರವಕಾರಿ ಕೀಟಗಳಿಂದ ಬಿಡುಗಡೆ ಹೊಂದುವಲ್ಲಿ ಮಾನವನಿಗೆ ಇರುವೆಗಳು ನೆರವಾಗುತ್ತವೆ. ಅಲ್ಲದೆ ನೆಲದಲ್ಲಿ ಗಾಳಿಯಾಡಲೂ ಸಹ ಇರುವೆಗಳು ಸಹಕರಿಸುತ್ತವೆ. ನಿಂಬೆ ಜಾತಿಯ ಮರಗಳನ್ನು ರಕ್ಷಿಸಲು ಚೀನಾದಲ್ಲಿ ಬಲು ಹಿಂದಿನಿಂದಲೇ ನೇಕಾರ ಇರುವೆಗಳನ್ನು ಬಳಸಲಾಗುತ್ತಿದೆ. ಇರುವೆಗಳು ಮನೆಯನ್ನು, ಹೊಲಗಳನ್ನು,ತೋಟಗಳನ್ನು ಆಕ್ರಮಿಸಿದಾಗ ಮಾತ್ರ ಮಾನವನಿಗೆ ಪಿಡುಗಾಗುತ್ತವೆ. ಬಡಗಿ ಇರುವೆಗಳು ಗೂಡು ನಿರ್ಮಿಸಲು ಮರವನ್ನು ತೀವ್ರವಾಗಿ ಕೊರೆದು ಹಾಕಿಬಿಡುತ್ತವೆ.
 • ಕಿಲ್ಲರ್ ಇರುವೆಗಳು ಬಲು ದೊಡ್ಡ ಗಾತ್ರದ ಪ್ರಾಣಿಗಳ ಮೇಲೆ ಸಹ ದಾಳಿಯಿಡುತ್ತವೆ. ಆದರೆ ಮಾನವನ ಮೇಲೆ ಇರುವೆಗಳ ದಾಳಿ ಬಲು ಅಪರೂಪ. ಆದರೆ ದೊಡ್ಡ ಸಂಖ್ಯೆಯಲ್ಲಿ ಇರುವೆಗಳು ಮಾನವನನ್ನು ಕಚ್ಚಿದರೆ ಅಂಗವೈಕಲ್ಯವುಂಟಾಗುವ ಸಾಧ್ಯತೆ ಇದೆ. ಆಫ್ರಿಕಾದ ಸೈಫು ಇರುವೆಯು ಹೊಟ್ಟೆಬಾಕತನಕ್ಕೆ ಹೆಸರಾದುದು. ಇವುಗಳ ಸೈನ್ಯ ಹೊಲ ತೋಟಗಳಿಗೆ ನುಗ್ಗಿ ಅಲ್ಲಿನ ಎಲ್ಲಾ ಕೀಟಗಳನ್ನೂ ಭಕ್ಷಿಸಿ ಬಲು ಬೇಗ ಮುಂದೆ ಹೊರಟುಬಿಡುವುದರಿಂದ ಆಫ್ರಿಕಾದ ಮಸಾಯ್ ಜನಾಂಗದವರು ಇವನ್ನು ಬಲು ಗೌರವದಿಂದ ಕಾಣುವರು.

ಆಹಾರವಾಗಿ ಇರುವೆಸಂಪಾದಿಸಿ

ಇರುವೆ ಮತ್ತದರ ಲಾರ್ವಾಗಳನ್ನು ಜಗತ್ತಿನ ಹಲವು ಭಾಗಗಳಲ್ಲಿ ಮಾನವನು ಆಹಾರವಾಗಿ ಬಳಸುವನು. ಆಫ್ರಿಕಾ, ಮಧ್ಯ ಅಮೇರಿಕಾ ಮತ್ತು ಏಷ್ಯಾದ ಕೆಲಭಾಗಗಳಲ್ಲಿ ಇದು ಪ್ರಚಲಿತವಾಗಿದೆ.

ಸೂರ್ಯ, ಸ್ಮರಣಾಶಕ್ತಿ ಬಳಸಿ ಗೂಡಿಗೆಸಂಪಾದಿಸಿ

 • ಲಂಡನ್‌‍ ನ ಸಂಶೋಧನೆ ವರದಿಯಂತೆ, ತನಗಿಂತಲೂ ಹೆಚ್ಚು ತೂಕ ಮತ್ತು ದೊಡ್ಡ ಗಾತ್ರದ ಆಹಾರ ಪದಾರ್ಥಗಳನ್ನು ಹೊತ್ತು ಹಿಮ್ಮುಖವಾಗಿ ಸಾಗುವ ಇರುವೆಗಳಿಗೆ ಸೂರ್ಯಪಥ ಮತ್ತು ದೃಶ್ಯ ಸ್ಮರಣೆಯೇ ಆಧಾರ. ಹೊಸ ಅಧ್ಯಯನದ ಪ್ರಕಾರ, ಇರುವೆಗಳಲ್ಲಿನ ಸಾಗುವ ಹಾದಿ ಗುರುತಿಟ್ಟುಕೊಳ್ಳುವ ಕಲೆ ಹಿಂದೆ ತಿಳಿದಿರುವುದಕ್ಕಿಂತೂ ಸೂಕ್ಷ್ಮವಾದುದಾಗಿದೆ.
 • ವಸ್ತುಗಳನ್ನು ಎಳೆದು ಸಾಗಿಸುವಾಗ ಹಿಂದಕ್ಕೆ ಹೆಜ್ಜೆಯಿಡುವ ಇರುವೆಗಳು ಸೂರ್ಯನ ಪಥವನ್ನು ಗಮನಿಸುತ್ತವೆ. ಹಾಗೂ ಬಂದ ಹಾದಿಯ ದೃಶ್ಯ ಸ್ಮರಣೆಯನ್ನು ಬಳಸಿ ನಿರ್ದಿಷ್ಟ ಜಾಗವನ್ನು ತಲುಪುತ್ತವೆ. ಇಂಗ್ಲೆಂಡ್‌ನ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯ ಸೇರಿದಂತೆ ಇತರೆ ವಿಜ್ಞಾನಿಗಳು 'ಇರುವೆ ಚಲನೆ' ಕುರಿತು ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಅಧ್ಯಯನವು ರೋಬೋಟ್‌ ಚಲನಾ ವ್ಯವಸ್ಥೆ ರೂಪಿಸುವಲ್ಲಿ ಸಹಕಾರಿಯಾಗಬಹುದಾಗಿದೆ.[೨]

ಭಾರತದ ಕೆಂಪು ಇರುವೆ ಅಥವಾ ಚಿಗುಳಿಸಂಪಾದಿಸಿ

 • ಕರ್ನಾಟಕದ ಮಲೆನಾಡಿನಲ್ಲಿ‘ವೀವರ್ ರೆಡ್’ ಎನ್ನುವ ಪುಟ್ಟ ಇರುವೆಗಳು ಕುತೂಹಲವನ್ನು ಉಂಟುಮಾಡುತ್ತವೆ. ಮಲೆನಾಡಿನಲ್ಲಿ ಇವನ್ನು ಚಿಗಳಿ, ಚಿಗುಳಿ, ಚವುಳಿ ಎಂದು ಕರೆಯುತ್ತಾರೆ. ಮರಗಳಲ್ಲಿ ಎಲೆಗಳನ್ನು ಒಟ್ಟು ಸೇರಿಸಿ ಗೂಡು ಕಟ್ಟಿ ವಾಸ ಮಾಡುತ್ತವೆ. ಇವು ನಮ್ಮಲ್ಲಿ ಮಾತ್ರವಲ್ಲದೆ ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌, ಆಸ್ಟ್ರೇಲಿಯಾಗಳಲ್ಲೂ ಕಂಡುಬರುತ್ತವೆ, ಆದರೆ ಅವು ಹೆಚ್ಚು ಉಗ್ರವಾದವು. ಚಿಗಳಿಗಳು ಗೂಡು ಕಟ್ಟುವ ಬಗೆ ಕುತೂಹಲಕರ. ತಮ್ಮ ದೇಹದಿಂದ ಉತ್ಪತ್ತಿಯಾಗುವ ಒಂದು ಬಗೆಯ ರೇಷ್ಮೆಯನ್ನು ಉಪಯೋಗಿಸಿ, ಎಲೆಗಳನ್ನು ಎಳೆದು ಅಂಟು ಹಾಕಿ ಇವು ಗೂಡು ಕಟ್ಟುತ್ತವೆ. ಇವನ್ನು ಕೆಲವರು ಆಹಾರವಾಗಿಯೂ ಉಪಯೋಗಿಸುತ್ತಾರೆ. ಕಚ್ಚಿದರೆ ಸಾಮಾನ್ಯಕ್ಕೆ ಬಿಡುವುದಿಲ್ಲ. ಇವು ಬೇರೆ ದೇಶಗಳ ಇರುವೆಗಳಂತೆ ಮನುಷ್ಯರಿಗೆ ಇವುಗಳಿಂದ ಪ್ರಾಣಾಪಾಯವಿಲ್ಲ, ಮತ್ತು ಸ್ವಲ್ಪ ದದ್ದುಗಳು ಏಳುತ್ತವೆ ಬೇಗ ಗುಣವಾಗುತ್ತವೆ. ಹುಳಿವಾಸನೆ ರುಚಿ ಇರುತ್ತವೆ. [೩]

ನೋಡಿಸಂಪಾದಿಸಿ

ಹೊರಸಂಪರ್ಕಸಂಪಾದಿಸಿ

 • ಇರುವೆ ಎಂಬ ಸ್ನೇಹಿತನಿಗೆ...ಅನಿತಾ ಈ.Tue,24/05/2016 prajavani. [೧]

ಉಲ್ಲೇಖಸಂಪಾದಿಸಿ

 1. ಇರುವೆಯ ಜಗದೊಳು...14 Oct, 2016
 2. ಇರುವೆಗಳ ಹಿಮ್ಮುಖ ಚಲನೆ: ಸೂರ್ಯ, ಸ್ಮರಣಾಶಕ್ತಿ ಬಳಸಿ ಗೂಡಿಗೆ;22 Jan, 2017
 3. ಚಿಗಳಿ ದೋಸ್ತರು ಗೂಡು ಕಟ್ಟಿದ ಕಥೆ;ಆದಿತ್ಯ ಬೀಳೂರು;Published: 07 ಫೆಬ್ರವರಿ 2019,
"https://kn.wikipedia.org/w/index.php?title=ಇರುವೆ&oldid=942049" ಇಂದ ಪಡೆಯಲ್ಪಟ್ಟಿದೆ