ತೆಪ್ಪ ಎಂದರೆ ಆಧಾರಕ್ಕಾಗಿ ಅಥವಾ ನೀರಿನ ಮೇಲೆ ಸಾರಿಗೆಗಾಗಿ ಬಳಸಲಾದ ಯಾವುದೇ ಚಪ್ಪಟೆಯಾದ ರಚನೆ. ಇದು ದೋಣಿ ವಿನ್ಯಾಸದಲ್ಲಿ ಅತ್ಯಂತ ಮೂಲಭೂತವಾದದ್ದು, ಮತ್ತು ಇದರ ಮುಖ್ಯ ಲಕ್ಷಣವೆಂದರೆ ಒಡಲು ಇಲ್ಲದಿರುವುದು. ಈ ವ್ಯಾಖ್ಯಾನವನ್ನು ಮಸುಕುಗೊಳಿಸುವ ಮಿಶ್ರ ದೋಣಿ ಪ್ರಕಾರಗಳಿವೆಯಾದರೂ, ತೆಪ್ಪಗಳನ್ನು ಸಾಮಾನ್ಯವಾಗಿ ಕಟ್ಟಿಗೆ, ಮುಚ್ಚಿದ ಪೀಪಾಯಿಗಳು, ಅಥವಾ (ಚಪ್ಪಟೆ ಓಡಗಳಂತಹ) ಗಾಳಿತುಂಬಿದ ವಾಯುಕೋಷ್ಠಗಳಂತಹ ತೇಲುವ ವಸ್ತುಗಳ ಯಾವುದೇ ಸಂಯೋಜನೆಯನ್ನು ಬಳಸಿ ತೇಲುವಂತೆ ಮಾಡಲಾಗುತ್ತದೆ, ಮತ್ತು ಇವು ಸಾಮಾನ್ಯವಾಗಿ ಬಿಣಿಗೆಯಿಂದ ಚಾಲಿತವಾಗಿರುವುದಿಲ್ಲ.

ಸಾಂಪ್ರದಾಯಿಕ ಅಥವಾ ಪ್ರಾಚೀನ ತೆಪ್ಪಗಳನ್ನು ಕಟ್ಟಿಗೆ ಅಥವಾ ಜೊಂಡುಗಳಿಂದ ನಿರ್ಮಿಸಲಾಗುತ್ತಿತ್ತು. ಆಧುನಿಕ ತೆಪ್ಪಗಳು ತೇಲುರಚನೆಗಳು, ಪೀಪಾಯಿಗಳು, ಅಥವಾ ನಿಸ್ಸರಿಸಿದ ಪಾಲಿಸ್ಟೈರೀನ್ ಕೊರಡುಗಳನ್ನು ಕೂಡ ಬಳಸಬಹುದು. ಗಾಳಿ ತುಂಬಬಲ್ಲ ತೆಪ್ಪಗಳು ತಾಳಿಕೆಯ, ಬಹು ಪದರ ರಬ್ಬರೀಕೃತ ಬಟ್ಟೆಗಳನ್ನು ಬಳಸುತ್ತವೆ. ಅದರ ಬಳಕೆ ಮತ್ತು ಗಾತ್ರವನ್ನು ಅವಲಂಬಿಸಿ, ಅದು ಅಧಿರಚನೆ, ಪಟಸ್ತಂಭಗಳು, ಅಥವಾ ಚುಕ್ಕಾಣಿ ಫಲಕಗಳನ್ನು ಹೊಂದಿರಬಹುದು. ದಿಮ್ಮಿ ಉದ್ಯಮವು ಮರದ ದಿಮ್ಮಿಗಳ ಸಾಗಣೆಗೆ ಮರದ ತೆಪ್ಪಗಳನ್ನು ಬಳಸುತ್ತದೆ. ಮರದ ದಿಮ್ಮಿಗಳನ್ನು ಒಟ್ಟಾಗಿ ಕಟ್ಟಿ ತೆಪ್ಪಗಳನ್ನು ರಚಿಸಿ ನದಿಯಲ್ಲಿ ತೇಲಿ ಬಿಡಲಾಗುತ್ತದೆ ಅಥವಾ ಎಳೆಯಲಾಗುತ್ತದೆ. ಈ ವಿಧಾನವು ೨೦ನೇ ಶತಮಾನದ ಮಧ್ಯದವರೆಗೆ ಬಹಳ ಸಾಮಾನ್ಯವಾಗಿತ್ತು ಆದರೆ ಈಗ ಅಪರೂಪವಾಗಿ ಬಳಸಲ್ಪಡುತ್ತದೆ.

ಬಾಲ್ಸಾ ದಿಮ್ಮಿಗಳಿಂದ ನಿರ್ಮಿಸಲಾದ ಮತ್ತು ನೌಕಾಯಾನಕ್ಕಾಗಿ ಹಾಯಿಗಳನ್ನು ಬಳಸುವ ದೊಡ್ಡ ತೆಪ್ಪಗಳು ದಕ್ಷಿಣ ಅಮೇರಿಕಾದ ಪೆಸಿಫಿಕ್ ಮಹಾಸಾಗರದ ಕರಾವಳಿ ಮೇಲಿನ ಕಡಲ ವ್ಯಾಪಾರದಲ್ಲಿ ಕೊಲಂಬಸ್-ಪೂರ್ವ ಕಾಲದಿಂದ ೧೯ನೇ ಶತಮಾನದವರೆಗೆ ಮುಖ್ಯವಾಗಿದ್ದವು. ಮೆಕ್ಸಿಕೊದಷ್ಟು ದೂರದ ಸ್ಥಳಗಳಿಗೆ ಸಮುದ್ರಯಾನಗಳನ್ನು ಕೈಗೊಳ್ಳಲಾಗಿತ್ತು, ಮತ್ತು ದಕ್ಷಿಣ ಅಮೇರಿಕಾ ಹಾಗೂ ಪಾಲಿನೇಷ್ಯಾ ನಡುವೆ ಸಂಭಾವ್ಯ ಸಂಪರ್ಕಗಳನ್ನು ಪ್ರಮಾಣೀಕರಿಸಲು ಪ್ರಾಚೀನ ತೆಪ್ಪಗಳ ಪ್ರತಿಕೃತಿಗಳನ್ನು ಬಳಸಿ ಅನೇಕ ಪೆಸಿಫಿಕ್ ಆಚೆಗಿನ ಸಮುದ್ರಯಾನಗಳನ್ನು ಕೈಗೊಳ್ಳಲಾಗಿದೆ.[] ಮನೊರಂಜನಾ ತೆಪ್ಪಸಂಚಾರಕ್ಕಾಗಿ ಬಳಸಲಾದ ತೆಪ್ಪದ ಬಗೆಯು ಬಹುತೇಕ ಪ್ರತ್ಯೇಕವಾಗಿ ಗಾಳಿತುಂಬಿಸಬಲ್ಲ ದೋಣಿಯಾಗಿರುತ್ತದೆ, ಮತ್ತು ಆಳವಿಲ್ಲದ ವಿಸ್ತಾರದಲ್ಲಿ ಬಳಕೆಗಾಗಿ ಬಾಗುವ ವಸ್ತುಗಳಿಂದ ನಿರ್ಮಿಸಲ್ಪಟ್ಟಿರುತ್ತದೆ.

ಜೀವಶಾಸ್ತ್ರದಲ್ಲಿ, ವಿಶೇಷವಾಗಿ ಜೀವಭೂಗೋಳಶಾಸ್ತ್ರ, ಮಾನವರಿಂದ ನಿರ್ಮಿತವಾಗಿರದ ತೆಪ್ಪಗಳು ಒಂದು ಮುಖ್ಯವಾದ ಪರಿಕಲ್ಪನೆಯಾಗಿದೆ. ಇಂತಹ ತೆಪ್ಪಗಳು ಬಿರುಗಾಳಿ, ಸುನಾಮಿ, ಉಬ್ಬರವಿಳಿತ, ಭೂಕಂಪ ಅಥವಾ ಹೋಲುವ ಘಟನೆಯಿಂದ ಒಣ ಭೂಮಿಯಿಂದ ನೀರಿನೊಳಗೆ ಜಾರಿಹೋದ ಸಸ್ಯಗಳ ಹೆಣೆದುಕೊಂಡ ಮುದ್ದೆಗಳನ್ನು ಹೊಂದಿರುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Smith, Cameron M. and Haslett, John F. (1999), "Construction and Sailing Characteristics of a Pre-Columbian Raft Replica", Bulletin of Primitive Technology, pp. 13–18
"https://kn.wikipedia.org/w/index.php?title=ತೆಪ್ಪ&oldid=846424" ಇಂದ ಪಡೆಯಲ್ಪಟ್ಟಿದೆ