ಕರಿಮೆಣಸು

(ಒಳ್ಳೆಮೆಣಸು ಇಂದ ಪುನರ್ನಿರ್ದೇಶಿತ)

ಕರಿಮೆಣಸು ಒಂದು ಸಾಂಬಾರ ಬೆಳೆಯಾಗಿದ್ದು, ಆಯುರ್ವೇದ ಔಷಧಗಳಲ್ಲೂ ಉಪಯೋಗಿಸಲ್ಪಡುತ್ತದೆ. ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುವರು. ಇದನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.

ಕರಿಮೆಣಸು
ಎಳೆಯ ಕರಿಮೆಣಸಿನಿಂದ ಕೂಡಿದ ಗಿಡ
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
P. nigrum
Binomial name
ಪೈಪರ್ ನೀಗ್ರಮ್

ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ಪೆಪ್ಪರ್ ಎಂಬುದು ಸಂಸ್ಕೃತದ ಪದ ಪಿಪ್ಪಲಿ ಎಂಬ ಪದದ ಗ್ರೀಕ್ (ತನ್ಮೂಲಕ ಲ್ಯಾಟಿನ್) ಬಳಕೆಯಿಂದ ಬಂದಿದೆ ಎಂದು ನಂಬಲಾಗಿದೆ.

ವಿಧಗಳು

ಬದಲಾಯಿಸಿ
 
ಕರಿಮೆಣಸು ಮತ್ತು ಬಿಳಿಮೆಣಸು.

ಕರಿಮೆಣಸನ್ನು ಇನ್ನೂ ಮಾಗದ ಹಸಿ ಕಾಳುಮೆಣಸಿನಿಂದ ತಯಾರಿಸುತ್ತಾರೆ. ಹಸಿಯಾದ ಕಾಳುಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತಿನವರೆಗೆ ಕುದಿಸಿ ನಂತರ ಶುದ್ಧೀಕರಿಸಿದ ಕಾಳನ್ನು ಒಣಗಿಸುತ್ತಾರೆ. ಈ ಕ್ರಿಯೆಯು ಕಾಳಿನಲ್ಲಿರುವ ಜೀವಕೋಶದ ಹೊರಪದರವನ್ನು ತುಂಡರಿಸಿ, ಕಾಳು ಬೇಗನೆ ಕಂದಲು [ಪಚನಕ] ಸಹಾಯ ಮಾಡುತ್ತದೆ. ಕಾಳುಗಳನ್ನು ಸಾಮಾನ್ಯವಾಗಿ ಬಿಸಿಲಿನಲ್ಲಿ ಅಥವ ಯಂತ್ರಗಳಲ್ಲಿ ಕೆಲವು ದಿನಗಳವರೆಗೆ ಒಣಗಿಸಲಾಗುತ್ತದೆ. ಈ ಸಮಯದಲ್ಲಿ ಕಾಳಿನ ಸುತ್ತಲಿರುವ ಹಣ್ಣು ಸಂಕುಚನಗೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಒಣಗಿದ ಕಾಳನ್ನು ಕರಿಮೆಣಸು ಎನ್ನುತ್ತಾರೆ.

ಮೆಣಸಿನ ಹೊರ ಕವಚವನ್ನು ಬೇರ್ಪಡಿಸಿ ಉಳಿಯುವ ಕಾಳಿಗೆ ಬಿಳಿ ಮೆಣಸು ಎನ್ನುತ್ತಾರೆ. ಚೆನ್ನಾಗಿ ಹಣ್ಣಾದ ಮೆಣಸನ್ನು ಸುಮಾರು ಒಂದು ವಾರ ನೀರಿನಲ್ಲಿ ನೆನೆಸಿಟ್ಟರೆ, ಅದರ ಹಣ್ಣಿನಂಥಹ ಹೊರಕವಚ ಮೆತ್ತಗಾಗಿ ಕೊಳೆಯಲಾರಂಭಿಸುತ್ತದೆ. ನೀರಿನಿಂದ ಹೊರತೆಗೆದು ಉಜ್ಜಿದರೆ, ಈ ಹಣ್ಣಿನ ಅಂಶ ಹಾಗೂ ಬೀಜ ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಬೀಜವನ್ನು ಒಣಗಿಸಿದಾಗಿ ಬಿಳಿಮೆಣಸು ತಯಾರಾಗುತ್ತದೆ. ಇನ್ನೂ ಮಾಗದ ಮೆಣಸನ್ನು ಒಣಗಿಸಿ ತಯಾರಿಸಲಾದ ಕರಿಮೆಣಸಿನ ಹೊರ ಕವಚವನ್ನು ತಗೆದು ಬಿಳಿಮೆಣಸು ತಯಾರಿಸುವ ಪದ್ಧತಿಯೂ ಇದೆ.

 
ಹಸಿರು, ಕೆಂಪು ಹಾಗೂ ಒಣಗಿದ ಕಪ್ಪು ಕರಿಮೆಣಸು

ಮೆಣಸು ಕಾಳುಗಳನ್ನು ಅದರ ಮೂಲವನ್ನವಲಂಬಿಸಿ ವರ್ಗೀಕರಿಸಲಾಗುತ್ತದೆ. ಎರಡು ಬಹಳ ಜನಪ್ರಿಯ ತಳಿಗಳು ಭಾರತದ ಮಲಬಾರ್ ತೀರದಲ್ಲಿ ದೊರೆಯುವ ತಳಿಗಳು: ಮಲಬಾರ್ ಮೆಣಸು ಹಾಗೂ ತೆಲ್ಲಿಚೆರಿ ಮೆಣಸು. ತೆಲ್ಲಿಚೆರಿ ತಳಿ ದೊಡ್ಡ ಗಾತ್ರದ ಹೆಚ್ಚು ಹಣ್ಣಾದ ಒಳ್ಳೆಯ ಜಾತಿಯ ತಳಿಯೆಂದು ಹೇಳಲಾಗುತ್ತದೆ. ಸರವಾಕ ಎಂಬ ತಳಿಯ ಮೆಣಸು ಮಲೇಶಿಯದ ಬೋರ್ನಿಯೋ ಪ್ರಾಂತ್ಯದಲ್ಲಿ, ಹಾಗೂ ಲ್ಯಾಂಪೋಂಗ್ ಎಂಬ ತಳಿ ಇಂಡೋನೇಶಿಯದ ಸುಮಾತ್ರ ದ್ವೀಪದಲ್ಲಿ ದೊರಕುತ್ತವೆ. ಬಿಳಿಯ ಮುಂಟೋಕ್ ಮೆಣಸು ಇಂಡೋನೇಶಿಯದ ಮತ್ತೊಂದು ಉತ್ಪಾದನೆ, ಬಾಂಗ್ಕಾ ದ್ವೀಪದಲ್ಲಿ ದೊರೆಯುವಂತದ್ದು.[]

ತಳಿಗಳು

ಬದಲಾಯಿಸಿ

ಮೆಣಸಿನಲ್ಲಿ ವೊಕಲ ಮೊರಾಟ, ಕರಿಮಂಡ, ಕರಿಮೊರಾಟ, ಅರಿಸಿನ ಮೊರಾಟ, ದೊಡ್ಡಗ, ಬಾಲಂಕೊಟ್ಟ, ಮಲ್ಲಿಗೆ ಸರ, ತಟ್ಟಿಸರ ಮುಂತಾದ ಹಲವಾರು ತಳಿಗಳಿವೆ. ಇತ್ತೀಚೆಗೆ ಹಲವಾರು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಇವುಗಳ ಪೈಕಿ ಪೆನಿಯರ್ -1 ಹೆಚ್ಚು ಜನಪ್ರಿಯವಾಗಿದೆ.

ಮೆಣಸಿನ ಗಿಡದ ವಿವರಣೆ ಮತ್ತು ಕೃಷಿ

ಬದಲಾಯಿಸಿ
 
ಪೈಪರ್ ನೀಗ್ರಮ್ ೧೮೩೨ರ ಮುದ್ರಣವೊಂದರಿಂದ.

ಪೈಪರ್ ಜಾತಿಯ ಇತರ ಪ್ರಭೇದಗಳಾದ ವೀಳ್ಯೆದೆಲೆ, ಹಿಪ್ಪಲಿ, ಬಾಲಮೆಣಸುಗಳಿಗೆ ಇದು ಹತ್ತಿರ ಸಂಬಂಧಿ.

ಕರಿಮೆಣಸು ಒಂದು ಅಪ್ಪು ಸಸ್ಯ. ಕರಿಮೆಣಸಿನ ಗಿಡವು ಬಹುವಾರ್ಷಿಕ ಬಳ್ಳಿಯಾಗಿದ್ದು ಸುಮಾರು ೪ ರಿಂದ ೫ ಮೀಟರ್ ವರೆಗೂ ಬೆಳೆಯಬಲ್ಲದ್ದಾಗಿದೆ. ಇದು ಮರ, ಕಂಬ ಅಥವಾ ಚಪ್ಪರದ ಸಹಾಯದಿಂದ ಬೆಳೆಯಬಲ್ಲದು. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಇದು ಅಗಲವಾಗಿ ಹರಡುವಂಥಹ ಬಳ್ಳಿಯಾಗಿದ್ದು, ನೆಲ ಮುಟ್ಟಿದಲ್ಲೆಲ್ಲಾ ಬೇರೂರುತ್ತದೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದ ಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಎಲೆಗಳು ಹೆಚ್ಚುಕಡಿಮೆ ವೀಳ್ಯೆದೆಲೆಗಳಂತೆಯೇ ಇವೆ. ಎಲೆಗಳು ಪರ್ಯಾಯವಾಗಿದ್ದು, ೫ ರಿಂದ ೧೦ ಸೆ.ಮೀ ಉದ್ದವಾಗಿದ್ದು, ೩ ರಿಂದ ೬ ಸೆ.ಮೀ ಅಗಲವಾಗಿರುತ್ತದೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ. ಹೂವುಗಳು ಚಿಕ್ಕದ್ದಾಗಿದ್ದು, ತೂಗಾಡುವಂಥಹದ್ದಾಗಿದ್ದು, ಎಸಳುಗಳು ಎಲೆಗಳ ಹತ್ತಿರ ೪ ರಿಂದ ೮ ಸೆ.ಮೀ ಉದ್ದವಾಗಿದ್ದು, ಹಣ್ಣು ಬಲಿಯುತ್ತಿದ್ದಂತೆ ಎಸಳುಗಳು ೭ ರಿಂದ ೧೫ ಸೆ.ಮೀ ಉದ್ದವಾಗುತ್ತದೆ. ಹೂಗಳು ಸ್ಪೈಕ್ ಮಾದರಿಯ ಮಂಜರಿಗಳಲ್ಲಿ ಸ್ಥಿತವಾಗಿವೆ. ಇವು ಏಕಲಿಂಗಿಗಳಾಗಿದ್ದು ಬೇರೆ ಬೇರೆ ಗಿಡಗಳಲ್ಲಿ ಅರಳಿರಬಹುದು ಇಲ್ಲವೆ ದ್ವಿಲಿಂಗಿಗಳಾಗಿದ್ದು ಒಂದೇ ಗಿಡದಲ್ಲಿರಬಹುದು.

ಕರಿಮೆಣಸಿನ ಗಿಡವನ್ನು ತೀರ ಶುಷ್ಕವಲ್ಲದ ಹಾಗು ಪ್ರವಾಹಕ್ಕೆ ಒಳಗಾಗದಂಥಹ, ತೇವಾಂಶಸಹಿತ, ಹೀರಿಕೊಳ್ಳುವಂಥಹ ಹಾಗೂ ಸಾವಯವ ಕೂಡಿದ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಾಭಿವೃದ್ಧಿಯಾಗುತ್ತದೆ. ಗಿಡವನ್ನು ೪೦ - ೫೦ ಸೆ.ಮೀ ಉದ್ದದ ತುಂಡುಗಳಿಂದ, ಸುಮಾರು ೨ ಮೀ ದೂರದಲ್ಲಿರುವ ಒರಟಾದ ಮೇಲ್ಮೈ ಉಳ್ಳ ಮರಗಳ ಸಹಾಯದಿಂದ ಬೆಳೆಸಲಾಗುತ್ತದೆ. ಬಳ್ಳಿ ಚೆನ್ನಾಗಿ ಬೆಳೆಯಲು ನುಣುಪಾದ ಮೇಲ್ಮೈಗಿಂತ ಒರಟಾದ ಮೇಲ್ಮೈ ಅನುಕೂಲವಾಗಿರುತ್ತದೆ. ಅಕ್ಕ ಪಕ್ಕದ ಮರಗಳು ಅನತಿ ದೂರದಲ್ಲಿದ್ದು ಬಳ್ಳಿಗೆ ಬೇಕಾದ ನೆರಳು ಹಾಗು ವಾತಾಯನ ಕೊಡುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಬೇರುಗಳು ಕೊಳೆತ ಎಲೆಗಳಿಂದ ಹಾಗೂ ಗೊಬ್ಬರದಿಂದ ಆವೃತವಾಗಿದ್ದು, ಕಾಂಡಗಳನ್ನು ವರ್ಷಕ್ಕೆರಡು ಬಾರಿ ಕತ್ತರಿಸಿ ಅಚ್ಚುಕಟ್ಟಾಗಿರಿಸಲಾಗುತ್ತದೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ. ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಶುಷ್ಕ ವಾತಾವರಣದಲ್ಲಿ ೩ ವರ್ಷದ ವರೆಗೆ ನವ ಸಸ್ಯಗಳಿಗೆ ಶುಷ್ಕ ಮಣ್ಣಿನಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ನೀರುಣಿಸಬೇಕಾಗುತ್ತದೆ. ತಮ್ಮ ೪ನೇ ಅಥವಾ ೫ನೇ ವರ್ಷದಲ್ಲಿ ಸಸ್ಯಗಳಲ್ಲಿ ಹಣ್ಣು ಬಿಡುತ್ತವೆ ಹಾಗೂ ಅಲ್ಲಿಂದ ಸುಮಾರು ೭ ವರ್ಷಗಳ ವರೆಗೂ ಫಲ ಕೊಡುತ್ತವೆ. ನೆಡಲಿಕ್ಕಾಗಿ ಬಳ್ಳಿಯ ತುಂಡುಗಳನ್ನು, ಇಳುವರಿ ಮತ್ತು ಹಣ್ಣಿನ ಗುಣಮಟ್ಟವನ್ನು ಆಧರಿಸಿ ಆಯ್ಕೆಮಾಡಿದ ತಳಿಗಳಿಂದ ಸಾಧಾರಣವಾಗಿ ಪಡೆದುಕೊಳ್ಳಲಾಗುತ್ತದೆ.

ಒಂದು ಕಾಂಡದಲ್ಲಿ ಸುಮಾರು ೨೦ ರಿಂದ ೩೦ ಫಲ ಕೊಡುವ ಶೀರ್ಷಕಗಳಿರುತ್ತವೆ. ಶೀರ್ಷಕಗಳ ಮೂಲ ಕೆಂಪಗಿನ ಬಣ್ಣ ಬರಲಾರಂಭಿಸಿದಾಗಲಿಂದ ಹಣ್ಣಾಗುವ ಮೊದಲು ಕುಯಿಲು ಮಾಡಲಾಗುತ್ತದೆ. ಆದರೆ ಪೂರ್ತಿ ಬೆಳೆದ ಹಾಗೂ ಗಟ್ಟಿಯಾದ ಫಲವನ್ನು ಹಣ್ಣಾಗಲು ಬಿಟ್ಟರೆ ಅದು ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು, ನಂತರ ಉದುರಿ ಹೋಗಿ ಹಾಳಾಗುತ್ತದೆ. ಇವುಗಳನ್ನು ಸಂಗ್ರಹಿಸಿ ಶುಷ್ಕ ಬಿಸಿಲಿನಲ್ಲಿ ಒಣಗಿಸಿದಾಗ ಕಾಳುಮೆಣಸು ಸುಲಿದುಕೊಂಡು ಹೊರಬರುತ್ತವೆ.

ಕರ್ನಾಟಕದಲ್ಲಿ ಈ ಬೆಳೆಯನ್ನು ಉತ್ತರಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.

ಕೊಡುವ ಗೊಬ್ಬರ, ನೀರು ಮತ್ತು ತಳಿಗಳನ್ನು ಅನುಸರಿಸಿ ಇಳುವರಿ ವ್ಯತ್ಯಾಸವಾಗುತ್ತದೆ. ಒಂದು ಪೊದೆಗೆ 0.5 - 1.5 ಕಿಲೊಗ್ರಾಮಿನಂತೆ ಎಕರೆಗೆ 30 - 40 ಕೆಜಿ ಇಳುವರಿ ದೊರೆಯುತ್ತದೆ.

ಮೆಣಸಿಗೆ ಹಲವಾರು ಬಗೆಯ ಕೀಟಗಳೂ, ಶಿಲೀಂಧ್ರ ರೋಗಗಳೂ ತಗಲುವುದುಂಟು. ಕೀಟಗಳ ಪೈಕಿ ಕಾಳನ್ನು ಕೊರೆದು ಪೊಳ್ಳು ಮಾಡುವ ಕುರುವಾಯಿ, ಎಲೆ ಮತ್ತು ಕಾಂಡವನ್ನು ಹಾಳು ಮಾಡುವ ಶಲ್ಕಕೀಟ ಹಾಗೂ ಸಸ್ಯ ತಿಗಣೆಗಳು ಮುಖ್ಯವೆನಿಸಿವೆ. ಶಿಲೀಂಧ್ರರೋಗಗಳ ಪೈಕಿ ಬಾಡುರೋಗ (ವಿಲ್ಟ್) ಕೊಲೆಟೊರೈಕಮ್ ರೋಗ ಪ್ರಮುಖವಾಗಿವೆ.

ಇತಿಹಾಸ

ಬದಲಾಯಿಸಿ

ಭಾರತದಲ್ಲಿ ಕರಿಮೆಣಸು ಸಾಂಬಾರ ಪದಾರ್ಥವಾಗಿ ಪುರಾತನ ಕಾಲದಿಂದಲೂ ಬಳಕೆಯಾಗುತ್ತಿದೆ. ಕೇರಳದ ಮಲಬಾರ್ ತೀರದಲ್ಲಿ ಇದರ ಕೃಷಿ ಮೊಟ್ಟಮೊದಲು ಪ್ರಾರಂಭವಾಗಿರಬೇಕು ಎಂಬ ಊಹೆಯಿದೆ. "ಕಪ್ಪು ಚಿನ್ನ" ಎಂದೇ ಹೆಸರಾಗಿದ್ದ ಮೆಣಸಿನಕಾಳು ಬಹಳ ಬೆಲೆಬಾಳುವ ವಾಣಿಜ್ಯ ಸಾಮಗ್ರಿಯಾಗಿತ್ತು. ಇದನ್ನು ಹಣದ ರೂಪದಲ್ಲಿ ಬಳಸಿದ್ದೂ ಇದೆ. ಸಹ್ಯಾದ್ರಿಯ ಮೆಣಸು ಬೆಳೆ ಪಶ್ಚಿಮ ಕರಾವಳಿಯ ಹಳೆಯ ರೇವುಪಟ್ಟಣಗಳಿಂದ ಜಗತ್ತಿನ ಮೂಲೆಮೂಲೆಗಳಿಗೆ ರಫ್ತಾಗುತ್ತಿತ್ತು. ಪ್ರಾಚೀನ ರೋಮನ್ನರಿಗೆ, ಗ್ರೀಕರಿಗೆ ಭಾರತದ ಮೆಣಸಿನ ರುಚಿ ಹತ್ತಿತ್ತು. ನೇರವಾಗಿ ಭಾರತದೊಂದಿಗೆ ವ್ಯಾಪಾರ ಬೆಳಸದವರಿಗೆ ಅರಬ್ಬಿ ವರ್ತಕರು ಭಾರತದ ಮೆಣಸನ್ನು ಕೈಮುಟ್ಟಿಸುತ್ತಿದ್ದರು. ವಿಜಯನಗರದ ಅರಸರ ಕಾಲದಲ್ಲಿ ಅಮೇರಿಕಾ ಮೆಣಸಿನಕಾಯಿ ಭಾರತದಲ್ಲಿ ಕಾಲಿಡುವ ಮುನ್ನ ಅಡುಗೆಯಲ್ಲಿ ಖಾರಕ್ಕಾಗಿ ಮೆಣಸು, ಹಿಪ್ಪಲಿ ("Piper Longum"), ಶುಂಠಿ, ಜೀರಿಗೆಗಳ ಬಳಕೆಯಾಗುತ್ತಿತ್ತು. ಭಾರತಕ್ಕೆ ಮೆಣಿಸಿನಕಾಯಿಯನ್ನು ಪರಿಚಯಿಸಿದ ಐರೋಪ್ಯರು ಮೆಣಸನ್ನು ಕೊಂಡೊಯ್ದು ಮಡಗಾಸ್ಕರ್ (ಆಫ್ರಿಕಾ ಖಂಡದ ಪೂರ್ವಕ್ಕಿರುವ ಒಂದು ದ್ವೀಪರಾಷ್ಟ್ರ), ಜಾವಾ ದ್ವೀಪ, ಸುಮಾತ್ರ, ಮಲೇಷಿಯಾ ಮುಂತಾದ ಆಗ್ನೇಯ ಏಷಿಯಾದ ಪ್ರದೇಶಗಳಲ್ಲಿ ಬೆಳೆದು ತಾವುಗಳೆ ಚೀನಾದೊಂದಿಗೆ ವ್ಯಾಪಾರಕ್ಕೆ ತೊಡಗಿದರು.[]

ಕರಿಮೆಣಸಿನ ಪುರಾತನ ಇತಿಹಾಸ ಆಗಾಗ, ಒಣಗಿದ ಫಲವಾದ "ಪೈಪರ್ ಲೋಗಂ"ಗೆ ಹತ್ತಿರವಾದ ಹಿಪ್ಪಲಿಯ ಇತಿಹಾಸದೊಂದಿಗೆ ಸಂಬಂಧ ಹೊಂದಿರುತ್ತದೆ ಅಥವಾ ತಪ್ಪಾಗಿ ತಿಳಿಯಲ್ಪಡುತ್ತದೆ. ರೋಮನರಿಗೆ ಎರಡರ ಬಗ್ಗೆಯೂ ತಿಳಿದಿದ್ದು ಎರಡನ್ನೂ ಅವರು "ಪೈಪರ್" ಎಂದು ಕರೆಯುತ್ತಿದ್ದರು. ವಸ್ತುತಃ ಹೊಸ ಜಗತ್ತಿನ ಖಾರ ಮೆಣಸಿನ ಪ್ರಸಿದ್ಧಿಯ ಮುನ್ನ ಹಿಪ್ಪಲಿಯ ಖ್ಯಾತಿ ಪತನವಾಗಿರಲಿಲ್ಲ. ಒಣಗಿಸಿದಾಗ ಹಿಪ್ಪಲಿಯ ರುಚಿಗೆ ಹಾಗು ಆಕಾರಕ್ಕೆ ಹೊಂದುವ ಖಾರ ಮೆಣಸನ್ನು ಯೂರೋಪಿನ ಅನೇಕ ಸ್ಥಳಗಳಲ್ಲಿ ಬೆಳೆಸುವುದು ಸುಲಭವಾಗಿತ್ತು.

ವಾಸ್ತವವಾಗಿ, ಮಧ್ಯಮ ಯುಗದ ಅಂತ್ಯದ ನಂತರದವರೆಗೂ ಎಲ್ಲ ಕರಿಮೆಣಸೂ ಸಹ ಯೂರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ನಂತರದಲ್ಲಿ ಭಾರತದ ಮಲಬಾರ್ ಪ್ರದೇಶದಲ್ಲಿ ಕಾಣಸಿಗುತ್ತಿತ್ತು. ೧೬ನೇ ಶತಮಾನದ ಹೊತ್ತಿಗೆ ಮೆಣಸನ್ನು ಜಾವ, ಸುಂದ, ಸುಮಾತ್ರ, ಮಡಗಾಸ್ಕರ್, ಮಲೇಷ್ಯ ಮತ್ತು ಇತರ ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು, ಆದರೆ ಈ ಪ್ರದೇಶಗಳು ಮುಖ್ಯವಾಗಿ ಚೀನಾ ಜೊತೆಗೆ ವ್ಯಾಪಾರ ಮಾಡುತ್ತಿದ್ದವು ಅಥವಾ ಪ್ರಾದೇಶಿಕವಾಗಿ ಉಪಯೋಗಿಸುತ್ತಿದ್ದವು.[] ಮಲಬಾರ್ ಪ್ರದೇಶ ಬಂದರುಗಳು ಹಿಂದೂ ಮಹಾ ಸಾಗರದ ದೂರಪ್ರಾಚ್ಯಗಳಿಂದ ಇತರ ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆ ಕೇಂದ್ರಸ್ಥಾನವಾಗಿ ಆಧರಿಸಿತ್ತು.

ಪೂರ್ವ ಕಾಲದಲ್ಲಿ

ಬದಲಾಯಿಸಿ

ಅಲೆಕ್ಸಾಂಡರಿನ ಕಾಲಕ್ಕಾಗಲೆ ಗ್ರೀಕರಿಗೆ ಭಾರತದ ಮೆಣಸಿನ ಬಗ್ಗೆ ತಿಳಿದಿತ್ತು. ಅವರಲ್ಲಿ ಹಿಪ್ಪಲಿಯ ಬಳಕೆಯೂ ಇತ್ತು. ದಕ್ಷಿಣ ಭಾರತದ ಮೆಣಸು ಪಶ್ಚಿಮ ಸಮುದ್ರದ (ಅರಬ್ಬಿ ಸಮುದ್ರದ) ತೀರದ ಗುಂಟ ಸಾಗುತ್ತಿದ್ದ ವ್ಯಾಪಾರ ನೌಕೆಗಳಲ್ಲಿ ಗ್ರೀಸನ್ನು ತಲುಪುತ್ತಿತ್ತು. ಆದರೆ ವಾಯವ್ಯ ಭಾರತದ ಬೆಳೆಯಾದ ಹಿಪ್ಪಲಿಯನ್ನು ಭೂಮಾರ್ಗದಲ್ಲಿ ಸಾಗಿಸುತ್ತಿದರು. ಅಂತಲೆ ಗ್ರೀಕರಿಗೆ ಮೆಣಸಿಗಿಂತಲೂ ಹಿಪ್ಪಲಿಯು ಸುಲಭವಾಗಿ ಕೊಳ್ಳಲು ಬರುತ್ತಿತ್ತು. ಆದರೂ ಇವೆರಡೂ ತುಟ್ಟಿಯ ಪದಾರ್ಥಗಳಾಗಿದ್ದಿರಲೂ ಜನಸಾಮಾನ್ಯರ ಎಟುಕಿಗೆ ಮೀರಿ ಇದ್ದರಲೂ ಸಾಕು.

ಈಜಿಪ್ಟಿನ ಎರಡನೆಯ ರಾಮ್‌ಸೀಸ್ ದೊರೆಯ ಗೋರಿಯನ್ನು ಅಗೆದು ತೆಗೆದಾಗ ಶವದ ಮೂಗಿನ ಹೊಳ್ಳೆಗಳಲ್ಲಿ ಮೆಣಸುಕಾಳುಗಳು ಇದ್ದದ್ದು ಕಂಡುಬಂದಿತು. ಶವದ ರಕ್ಷಣೆಯ ಅಂಗವಾಗಿ ಇವನ್ನು ಇಟ್ಟಿರಬಹುದು. ಇದರಿಂದ ಈಜಿಪ್ಟಿನವರಿಗೆ ಮೆಣಸಿನ ಬಗ್ಗೆ ತಿಳಿದಿತ್ತು ಎಂದಾಯಿತಾದರೂ ಅವರಲ್ಲಿ ಮೆಣಸಿನ ಬಳಕೆಯ ಬಗ್ಗೆಯಾಗಲಿ ಭಾರತದೊಂದಿಗೆ ಮೆಣಸಿನ ವ್ಯಾಪಾರದ ಬಗ್ಗೆಯಾಗಲಿ ನಮಗೆ ಬೇರೇನೂ ತಿಳಿಯದು.

 
ಆಗಿನ ಕಾಲದಲ್ಲಿ ಇಟಲಿ ಹಾಗು ನೈರುತ್ಯ ಭಾರತದ ಮಧ್ಯೆ ಬಳಸುತಿದ್ದರೆನ್ನಲಾದ ದಾರಿ.

ರೋಮ್ ಸಾಮ್ರಾಜ್ಯದಲ್ಲೂ ಮೆಣಸನ್ನು ಬಳಸುತ್ತಿದ್ದರು. ಸಾಮಾನ್ಯ ಶಕೆಯ ೩ನೆಯ ಶತಕಕ್ಕೆ ಸೇರಿದ ಅಡುಗೆಯ ಪುಸ್ತಕದಲ್ಲಿ ಕೊಟ್ಟಿರುವ ಬಹುತೇಕ ಅಡುಗೆಗಳಿಗೆ ಮೆಣಸು ಬೇಕು. ಗಿಬ್ಬನ್ ತನ್ನ ರೋಮ್ ಸಾಮ್ರಾಜ್ಯದ ಅವನತಿಯೂ ಪತನವೂ ಗ್ರಂಥದಲ್ಲಿ ಹೇಳುವಂತೆ ಮೆಣಸು ಅಲ್ಲಿಯ ಮೇಲ್‍ಸ್ತರದ ಬಾಣಸಿಗರಗೆ ಅಚ್ಚುಮೆಚ್ಚಿನ ಸಾಂಬಾರ ಪದಾರ್ಥವಾಗಿತ್ತು.

ಜೂಲಿಯಸ್ ಸೀಸರಿನ ಕಾಲದ ಹೊತ್ತಿಗೆ ಪಶ್ಚಿಮ ಸಮುದ್ರವನ್ನು ನಡುಭಾಗದಲ್ಲಿ ದಾಟುವುದು ಸರ್ವೇಸಾಮಾನ್ಯವಾಗಿ ಹೋಗಿತ್ತು. ಈ ನೌಕಾಯಾನದ ವಿವರಗಳು ಎರಿತ್ರೆಯ ಸಮುದ್ರದ ಪೆರಿಪ್ಲಸ್ ಎಂಬ ನೌಕಾಯಾನದ ಕೈಪಿಡಿಯಲ್ಲಿ ದಾಖಲಾಗಿವೆ. ನೈಋತ್ಯ ಮುಂಗಾರಿನ ಬಿರುಗಾಳಿಗಳ ಬೆನ್ನೇರಿ ಹಡಗುಗಳು ಭಾರತದ ಪಡುಕರಾವಳಿಯನ್ನು ಸೇರುತ್ತಿದ್ದವು. ಹಿಂದಿರುಗುತ್ತ ಕೆಂಪು ಸಮುದ್ರದ ಉದ್ದಕ್ಕೂ ಸಾಗಿ ನೈಲ್ ನದಿಯ ಕಾಲುವೆಯ ಮೂಲಕ ನೈಲ್ ನದಿಗೂ ಅಲ್ಲಿಂದ ತೆಪ್ಪಗಳ ಮೇಲೆ ಅಲೆಕ್ಸಾಂಡ್ರಿಯಾಗೂ ಅದರಾಚೆ ರೋಮ್‌ಸಾಮ್ರಾಜಕ್ಕೂ ಸರಕನ್ನು ಸಾಗಿಸುತ್ತಿದ್ದರು. ವರ್ಷೇ ವರ್ಷೇ ೧೨೦ ಹಡಗುಗಳು ರೋಮ್ ಸಾಮ್ರಾಜ್ಯದಿಂದ ಭಾರತಕ್ಕೆ ಬರುತ್ತಿದ್ದವೆಂದು ಚರಿತ್ರಕಾರ ಸ್ಟ್ರಾಬೋ ತಿಳಿಸುತ್ತಾನೆ.

ಸಮುದ್ರತೀರದ ಗುಂಟ ಹಾಯದೆ ನೇರವಾಗಿ ನಡುಭಾಗದಲ್ಲಿ ದಾಟಿದ್ದೆ, ಮೆಣಸು ಬೇಗನೆ ಮಾರುಕಟ್ಟೆ ತಲುಪಲಾರಂಭಿಸಿತು. ಬೆಲೆಗಳು ಇಳಿದವು. ಸಾಮಾನ್ಯ ಶಕೆಯ ೭೭ನೆ ವರ್ಷದ ಸುಮಾರಿಗೆ "ಹಿಪ್ಪಲಿಯ ಬೆಲೆ ತೂಕವೊಂದಕ್ಕೆ ೧೫ ದೀನಾರಗಳು. ಬಿಳಿಮೆಣಸು ೭ ದೀನಾರಗಳಾದರೆ ಕರಿಮೆಣಸಿನ ಬೆಲೆ ತೂಕಕ್ಕೆ ೪ ದೀನಾರಗಳು" ಇದ್ದವು ಎನ್ನುತ್ತಾನೆ ಚರಿತ್ರಕಾರ ಹಿರಿಯ ಪ್ಲಿನಿ. "ಭಾರತ ರೋಮ್ ಸಾಮ್ರಾಜ್ಯದಿಂದ ೫ ಕೋಟಿ ಸೆಸ್ಟರ್ಸೆಸ್ ಮೊತ್ತದ ಹಣವನ್ನು ಹೀರದ ವರ್ಷವಿಲ್ಲ" ಎಂದು ಕೊರಗುತ್ತಾನೆ. ಅಲ್ಲಿಗೆ ನಿಲ್ಲದೆ

ಮೆಣಸನ್ನು ಬಳಸುವುದೆ ಒಂದು ಸೋಜಿಗ. ಅದೇನು ಸಿಹಿಯೆ? ಅಥವಾ ನೋಡಲಿಕ್ಕಾದರೂ ಅಂದವೆ? ಇತ್ತ ಹಣ್ಣಲ್ಲ ಅತ್ತ ಕಾಯಲ್ಲ. ತಿಂದರೆ ಹೊಟ್ಟೆ ತುಂಬುವುದಿಲ್ಲ. ಅದಕ್ಕಿರುವುದೊಂದೆ ಗುಣವೆಂದರೆ ಅದರ ಖಾರ. ಆದರೂ ಆ ರುಚಿಗೆಂದೆ ನಾವು ದೂರದ ಭಾರತದಿಂದಲಾದರೂ ಸರಿ, ತರಿಸಿಕೊಳ್ಳುತ್ತೇವೆ! ಮೆಣಸನ್ನು ಮೊದಲಬಾರಿಗೆ ತಿಂದ ಆ ಮಹಾನುಭಾವನಾದರೂ ಯಾರೋ! ಅಷ್ಟೇಕೆ, ಹಸಿವನ್ನು ಸಹಿಸದೆ ತಿನ್ನಲು ತೊಡಗಿದವನಾದರೂ ಯಾರೋ![]

ಎಂದು ದೂರುತ್ತಾನೆ.

ಐರೊಪ್ಯ ದೇಶಗಳ ಗತ ವೈಭವ ಕಾಲದಲ್ಲಿ

ಬದಲಾಯಿಸಿ

ಐರೋಪ್ಯ ದೆಶಗಳಲ್ಲಿ ಮೆಣಸಿಗೆ ಎಷ್ಟು ಬೆಲೆ ಇತ್ತೆಂದರೆ ಆ ಕಾಲದ ಜನ ಅದನ್ನು ಹಣದ ಹಾಗೆ ಹಾಗೂ ಗಿರವಿ(ಅಡ) ಇಟ್ಟುಕೊಳ್ಳುವ ವಸ್ತುವಾಗಿ ಉಪಯೋಗಿಸುತಿದ್ದರು. ಮೆಣಸಿನ ಉಲ್ಲೇಖ (ಮುಖ್ಯವಾಗಿ ಇದರ ಹಣದ ಬೆಲೆಗಾಗಿ) ರೋಮ್ ಸಾಮ್ರಾಜ್ಯದ ಗತ ವೈಭವದಲ್ಲೂ ಇದೆ. ಸುಮಾರು ಕ್ರಿ.ಶ ೫ನೇ ಶತಮಾನದಲ್ಲಿ ಹೂಣ ದೊರೆ ಅಟ್ಟಿಲ(Attila) ಮತ್ತು ವಿಸಿಗೋತ ರ (Visigoth) ರಾಜ ೧ನೆ ಅಲರಿಕ್(Alaric I) ರೋಮನ್ನು ಆಕ್ರಮಿಸಿದಾಗ ಅದರ ತೆರವಿಗಾಗಿ ಸುಮಾರು ಒಂದು(೧) ಟನ್ನಿಗೂ ಮಿಗಿಲಾಗಿ ಕಪ್ಪು ಮೆಣಸನ್ನು ಕೇಳಿದರಂತೆ. ರೋಮ್ ಸಾಮ್ರಾಜ್ಯದ ಪತನದ ನಂತರ ಸಾಂಬಾರ ಪದಾರ್ಥಗಳ ವ್ಯಾಪಾರವನ್ನು ಮೊದಲು ಭೈಜಾನಿಗಳು (Byzantium) ತದನಂತರ ಅರಬ್ಬರು ಮುಂದುವರೆಸಿದರು. ಯುರೋಪಿನ ಪೂರ್ವ ಮಧ್ಯಯುಗದ ಅಂಚಿನಲ್ಲಿ, ಯುರೋಪಿನ ಮಧ್ಯ ಭಾಗಗಳಲ್ಲಿ ಸಾಂಬಾರ ಪದಾರ್ಥಗಳ ವ್ಯವಹಾರ ಸಂಪೂರ್ಣವಾಗಿ ಮುಸಲ್ಮಾನರ ಬಿಗಿ ಹಿಡಿತದಲ್ಲಿತ್ತು. ಮೆಡಿಟೆರೇನಿಯನ್ ಭಾಗಗಳಲ್ಲಿ ಇದು ಇಟಲಿಯನ್ನರ, ಅದರಲ್ಲಿಯೂ ವೆನಿಸ್ ಮತ್ತು ಜಿನೀವಾ, ಏಕಸ್ವಾಮ್ಯದಲ್ಲಿತ್ತು. ಈ ನಗರಗಳ / ದೇಶದ ಅಭಿವೃದ್ಧಿಗೆ ಹಣ ಸರಬರಾಜು ಆಗುತ್ತಿದ್ದದ್ದು ಬಹುತೇಕ ಸಾಂಬಾರ ವ್ಯಾಪಾರದಿಂದಲೇ.

೭ನೇ ಶತಮಾನದ ಸ್ಯಾಲಿಸ್ಬರಿಯ ಬಿಷಪ್ ಸೇ.ಅಲ್ಧೆಲ್ಮ್ ಕರಿಮೆಣಸಿನ ಮೇಲೆ ಒಂದು ಒಗಟನ್ನೇ ಬರೆದಿದ್ದಾನೆ. ಇದು ಇಂಗ್ಲೆಂಡಿನಲ್ಲಿ ಆ ಕಾಲದಲ್ಲಿ ಮೆಣಸಿಗಿದ್ದ ಪ್ರಾಮುಖ್ಯತೆಯನ್ನು ತೋರಿಸುತ್ತದೆ:

ನಾನು ಹೊರಗಿನಿಂದ ಕಪ್ಪಗಿದ್ದೇನೆ,ಸುಕ್ಕುಗಟ್ಟಿದ ಕವಚ ತೊಟ್ಟಿದ್ದೇನೆ,
ಆದರೂ ಒಳಗಿನಿಂದ ಉರಿಯುವ ಶಕ್ತಿ ಹೊಂದಿದ್ದೇನೆ.
ನಾನು ರಾಜ ಮಹರಾಜರ ಔತಣಗಳು ಮತ್ತು ಶ್ರೀಮಂತರ ಭೋಜನಗಳನ್ನು ರುಚಿಗೊಳಿಸುತ್ತೇನೆ ,
ಅಡಿಗೆ ಮನೆಯ ಚಟ್ನಿ ಹಾಗು ಮೃದುವಾದ ಮಾಂಸ ಎರಡನ್ನೂ.
ಆದರೂ ನೀವು ನನ್ನನ್ನು ಯಾವುದಕ್ಕೂ ಬಾರದವನೆಂದು ಗುರುತಿಸುತ್ತೀರಿ,
ಎಲ್ಲಿಯವರೆಗೆ ಎಂದರೆ ನಿಮ್ಮ ಉದರದಲ್ಲಿ ನಾನು ನನ್ನ ಶಕ್ತಿ ಮೆರೆಸುವವರೆಗೆ.[]

ಮಧ್ಯಯುಗದಲ್ಲಿ ಮೆಣಸಿನಕಾಳನ್ನು ಹಳಸುತ್ತಿರುವ ಮಾಂಸದ ರುಚಿಯನ್ನು ಮರೆಮಾಚಲು ಉಪಯೋಗಿಸಲಾಗುತ್ತಿತ್ತು ಎಂಬ ಸಾಮಾನ್ಯ ಪ್ರತೀತಿಯಿದೆ. ಇದಕ್ಕೆ ಪುಷ್ಟಿಕೊಡುವಂತಹ ಯಾವುದೇ ಆಧಾರವಿಲ್ಲ. ಇತಿಹಾಸಕಾರರು ಕೂಡಾ ಇದು ಅಸಂಭವ ಎಂದು ಅಭಿಪ್ರಾಯಪಡುತ್ತಾರೆ. ಮಧ್ಯಯುಗದಲ್ಲಿ ಮೆಣಸು ಬರಿಯ ಶ್ರೀಮಂತರಿಗಷ್ಟೇ ಎಟುಕುವಂತಹ ಐಷಾರಾಮಿ ವಸ್ತುಗಳಲ್ಲಿ ಒಂದಾಗಿತ್ತು. ಅಂಥ ಶ್ರೀಮಂತರಿಗೆ ಹಳಸಲು ಮಾಂಸ ತಿನ್ನುವ ಅಗತ್ಯವೇನಿದ್ದೀತು! []

ಇದೇ ರೀತಿ ಆಹಾರ ಶೇಖರಿಸಲು ಮೆಣಸನ್ನು ಉಪಯೋಗಿಸುತಿದ್ದರು ಎಂಬ ಸುದ್ದಿ ಪ್ರಶ್ನಾರ್ಥಕವಾಗಿದೆ: ಮೆಣಸಿಗೆ ಖಾರ ಕೊಡುವ ಪೈಪರೈನ್‍ನಲ್ಲಿ ಅತೀ ಸೂಕ್ಷ್ಮ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ ಇದೆ ಅನ್ನುವುದು ಸತ್ಯವಾದರೂ, ಅದನ್ನು ಸಾಂಬಾರ ಪದಾರ್ಥಗಳಲ್ಲಿ ಬಳಸುವ ಸಾಂದ್ರತೆಯನ್ನು ಲೆಕ್ಕಕ್ಕಿರಿಸಿಕೊಂಡರೆ ರೋಗಾಣುಗಳ ಮೇಲೆ ಇದರ ಪರಿಣಾಮ ಬಹಳ ಕಮ್ಮಿ.[]

ಮೆಣಸಿಗೆ ಹೋಲಿಸಿದರೆ ಉಪ್ಪು ಶೇಖರಣೆಯಲ್ಲಿ ಹೆಚ್ಚು ಪರಿಣಾಮಕಾರಿ, ಉದಾಹರಣೆಗೆ ಚಳಿಗಾಲದಲ್ಲಿ ಮಾಂಸಕ್ಕೆ ಉಪ್ಪನ್ನು ಸವರಿ ಅದು ಕೆಡದಂತೆ ಶೇಖರಿಸುವುದು. ಆದರೂ ಮೆಣಸು ಮತ್ತು ಇತರ ಸಾಂಬಾರ ಪದಾರ್ಥಗಳು ಬಹಳ ದಿನಗಳ ಕಾಲ ಶೇಖರಿಸಿಡುವ ಮಾಂಸದ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

 
೧೫೭೨ ರಲ್ಲಿ ಪೋರ್ಚುಗೀಸರ ಹಿಡಿತದಲ್ಲಿದ್ದ ಮೆಣಸಿನ ವ್ಯಾಪಾರದ ಸಮಯದಲ್ಲಿ ಚಿತ್ರ ರೂಪದಲ್ಲಿ ಬಿಂಬಿಸಿರುವ ಕೇರಳದ ಕಲ್ಲಿಕೋಟೆ .

ಮಧ್ಯಯುಗದಲ್ಲಿ ಮೆಣಸಿನ ವಿಪರೀತ ಬೆಲೆ - ಮತ್ತು ಇಟಲಿಯ ಕಪಿಮುಷ್ಟಿಯಲ್ಲಿದ್ದ ಇದರ ವ್ಯಾಪಾರ - ಪೊರ್ಚುಗೀಸರು ಭಾರತಕ್ಕೆ ಸಮುದ್ರಮಾರ್ಗವನ್ನು ಹುಡುಕುವ ಪ್ರಯತ್ನಕ್ಕೆ ಇಂಬು ಕೊಟ್ಟಿತು. ವಾಸ್ಕೋಡಗಾಮ 1498ರಲ್ಲಿ ಸಮುದ್ರಮಾರ್ಗದಿಂದ ಭಾರತ ತಲುಪಿದ ಮೊದಲ ಐರೋಪ್ಯನಾದ. ಕಲ್ಲಿಕೋಟೆಯಲ್ಲಿ ಬಂದಿಳಿದ ಅವನ ತಂಡಕ್ಕೆ ಅಲ್ಲಿದ್ದ ಅರಬರು (ಅವರಿಗೆ ಸ್ಪಾನಿಷ್ ಮತ್ತು ಇಟಾಲಿಯನ್ ಭಾಷೆಗಳು ಬರುತ್ತಿದ್ದವು) ಇಲ್ಲಿಗೇಕೆ ಬಂದಿರಿ ಎಂದು ಪ್ರಶ್ನೆ ಹಾಕಲು "ಸಾಂಬಾರ ಪದಾರ್ಥ ಹಾಗೂ ಕಿರಿಸ್ತಾನರನ್ನು ಹುಡುಕಿಕೊಂಡು" ಎಂದು ಅವರಲ್ಲೊಬ್ಬ ಉತ್ತರಿಸಿದ. ಆಫ್ರಿಕಾದ ದಕ್ಷಿಣದ ಭೂಶಿರವನ್ನು ಬಳಸಿಕೊಂಡು ಬಂದ ಗಾಮನ ಈ ಮೊಟ್ಟಮೊದಲ ಯಾತ್ರೆಯ ಯಶಸ್ಸು ಅಷ್ಟಕ್ಕಷ್ಟೆಯಾದರೂ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮರಳಿದ ಪೋರ್ಚುಗೀಸರು, ತಮ್ಮ ಉತ್ಕೃಷ್ಟ ನೌಕಾಬಲದ ನೆರವಿನಿಂದ, ಅಂತೂ ಅರಬೀ ಸಮುದ್ರದ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದರು. ಯುರೋಪಿಯನ್ನರು ಏಷಿಯದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಇದೇ ನಾಂದಿಯಾಯಿತು. ಅದರಲ್ಲೂ ಕ್ರಿ.ಶ ೧೪೯೪ ರ ಟೊರ್ಡೆಸಿಲ್ಲಸ್ ಸಂಧಾನ ಪ್ರಪಂಚದ ಅರ್ಧದಷ್ಟು ಕಪ್ಪು ಮೆಣಸಿನ ಉಗಮ ಭಾಗಗಳನ್ನು ಪೋರ್ಚುಗೀಸರ ಅಧಿಕಾರಕ್ಕೆ ಒಳಪಡಿಸಿತು.

ಪೋರ್ಚುಗೀಸರು ಸಾಂಬಾರ ಪದಾರ್ಥಗಳ ವ್ಯಾಪಾರದಲ್ಲಿ ಬಹಳ ದಿನಗಳ ಕಾಲ ತಮ್ಮ ಏಕಸ್ವಾಮೇಯವನ್ನು ಕಾಯ್ದುಕೊಳ್ಳುವಲ್ಲಿ ವಿಪಲರಾದರು. ಹಳೆಯ ಅರಬ್ಬರು ಮತ್ತು ವೆನೇಸಿಯನ್ನರು ಪೋರ್ಚುಗೀಸರ ವ್ಯವಹಾರ ಪ್ರದೇಶಗಳಿಂದ ಬಹಳಷ್ಟು ಪ್ರಮಾಣದ ಸಾಂಬಾರ ಪದಾರ್ಥಗಳನ್ನು ಕಳ್ಳತನ ಮಾಡಲು ಶುರುಮಾಡಿದರು ಮತ್ತು ಅದರಲ್ಲಿ ಅವರು ಯಶಸ್ವಿ ಕೂಡ ಆದರು. ಮತ್ತೆ ಮೆಣಸು ಅಲೆಗ್ಸಾಂಡ್ರಿಯ ಮತ್ತು ಇಟಲಿ ಹಾಗು ಆಫ್ರಿಕಗಳ ಮುಖಾಂತರ ಬರಲಾರಂಬಿಸಿತು. ೧೭ನೇ ಶತಮಾನದಲ್ಲಿ ಪೋರ್ಚುಗೀಸರು ಅವರ ಒಡೆತನದಲ್ಲಿದ್ದ ಹಿಂದೂ ಮಹಾಸಾಗರದ ಅನೇಕ ಸಂಪದ್ಭರಿತ ಭಾಗಗಳನ್ನು ಡಚ್ಚರು ಹಾಗು ಬ್ರಿಟೀಷರಿಗೆ ಕಳೆದುಕೊಂಡರು. ಕ್ರಿ.ಶ. ೧೬೬೧ - ೧೬೬೩ ರ ಸಮಯದಲ್ಲಿ ಮೆಣಸಿನ ಬಂದರು ಮಲಬಾರ್ ಡಚ್ಚರ ತೆಕ್ಕೆಗೆ ಬಿದ್ದಿತು.

ಯುರೋಪಿಗೆ ಮೆಣಸಿನ ಒಳಹರಿವು ಜಾಸ್ತಿಯಾದಂತೆ ಅದರ ಮಾರಾಟದ ಬೆಲೆಯೂ ಕೂಡ ಕಡಿಮೆಯಾಗತೊಡಗಿತು (ಆದಾಗ್ಯೂ ಆಮದಿನ ಬೆಲೆಯಲ್ಲಿ ಇಳಿಮುಖವಾಗಲಿಲ್ಲ).

ಮಧ್ಯ ಯುಗದಲ್ಲಿ ಮೆಣಸು ಕೇವಲ ಶ್ರೀಮಂತರಿಗಷ್ಟೆ ಸೀಮಿತವಾಗಿತ್ತು ಆದರೆ ಕ್ರಮೇಣ ಅದು ಸಾಮಾನ್ಯ ಜನರಿಗೂ ನಿಲುಕುವಂತಾಯಿತು. ಈಗ ಪ್ರಪಂಚದ ಒಟ್ಟು ಸಾಂಬಾರ ಪದಾರ್ಥಗಳ ವ್ಯವಹಾರದಲ್ಲಿ ಸುಮಾರು ೧/೫ ರಷ್ಟು ಮೆಣಸಿನದಾಗಿದೆ.[]

ಚೀನಾದಲ್ಲಿ

ಬದಲಾಯಿಸಿ

ಸಂಶೋಧಕ ಟಾಂಗ್ ಮೇಂಗನ ಪುರಾತನ ಕಾವ್ಯಗಳು ಸರಿಯಾಗಿದ್ದರೆ, ಸುಮಾರು ಕ್ರಿ.ಪೂ. ೨ನೇ ಶತಮಾನದಲ್ಲೆ ಕರಿಮೆಣಸು ಚೀನಾದಲ್ಲಿತ್ತೆಂದಾಗುತ್ತದೆ. ನೈರುತ್ಯ ಚೀನಾದ ಚಕ್ರವರ್ತಿ ವೂ ಟಾಂಗ್ ಮೇಂಗನಿಗೆ ಒಂದು ಪದಾರ್ಥವನ್ನು ಕಳುಹಿಸಿದ್ದನು ಅದನ್ನು ಅವರು 'ಜುಜಿಯಾಂಗ್' ಅಥವಾ 'ವಿಳ್ಳೆ ಎಲೆ - ದ್ರವ್ಯ' ಎಂದು ಕರೆಯುತಿದ್ದರು.ಅವನಿಗೆ ಇದು ಶು ಮಾರುಕಟ್ಟೆ ಪ್ರದೇಶದಿಂದ (ಈಗಿನ ಶಿಚುಯನ್ ಪ್ರಾಂತ್ಯ) ಬಂತೆಂದು ಹೇಳಲಾಗಿತ್ತು. ಇತಿಹಾಸಕಾರರ ಸಾಂಪ್ರದಾಯಿಕ ದೃಷ್ಟಿಯಿಂದ ಅದು ವಿಳ್ಳೆ ಎಲೆಯಿಂದ ಮಾಡಲ್ಪಟ್ಟ ದ್ರವ್ಯವಾಗಿತ್ತು, ಆದರೆ ವಾದ-ವಿವಾದಗಳು ಅದು ಕಪ್ಪು ಅಥವ ಉದ್ದ ಮೆಣಸಿನಿಂದ ಮಾಡಲಾಗಿತ್ತೆಂದು ತಿಳಿಯಪಡುತ್ತದೆ.[]

ಕ್ರಿ.ಶ.೩ ನೇ ಶತಮಾನದಲ್ಲಿ ಚೀನಾದ ಪುಸ್ತಕಗಳಲ್ಲಿ ಪ್ರಥಮ ಬಾರಿಗೆ ಕರಿಮೆಣಸಿನ ಉಲ್ಲೇಖವಾಯಿತು. ಅದನ್ನು ಅವರು 'ಹುಜಿಯಾವ್' ಅಥವಾ 'ವಿದೇಶಿ ಮೆಣಸು' ಎಂದು ಉಲ್ಲೇಖಿಸಿದ್ದರು. ಮೆಣಸು ಆಗಿನ ಕಾಲದಲ್ಲಿ ಅಷ್ಟಾಗಿ ಎಲ್ಲರಿಗೂ ತಿಳಿದಿರಲಿಲ್ಲ ಏಕೆಂದರೆ ೪ನೇ ಶತಮಾನದಲ್ಲಿ ಚೀನಾದ ಸಾಂಬಾರ ಪದಾರ್ಥಗಳ ಒಂದು ಪ್ರಭಂದದಲ್ಲಿ ಮೆಣಸಿನ ಉಲ್ಲೇಖವಿರಲಿಲ್ಲ.[೧೦] ಆದರೆ ಕರಿಮೆಣಸು ಪ್ರಸಿದ್ದಿಯಾಗಿದ್ದು ೧೨ನೇ ಶತಮಾನದಲ್ಲಿ, ಇದು ಅನೇಕ ಶ್ರೀಮಂತರ ಹಾಗು ಪ್ರಭಾವಿತರ ಭೋಜನಗಳಲ್ಲಿ ನೆಲೆ ಮಾಡಿತ್ತು, ಬಹಳಷ್ಟು ಬಾರಿ ಚೀನಾದ ಪ್ರಸಿದ್ಧ ಶಿಚುಯನ್ ಮೆಣಸು (ನಾಲಿಗೆ ಜಡ ಬರಿಸುವ ಒಂದು ಗಿಡದ ಹಣ್ಣು).

೧೩ನೇ ಶತಮಾನದಲ್ಲಿ ಚೀನಾದ ಕಿನ್ಸಾಯ್ (ಝೆಜಿಯಾಂಗ್) ಮೆಣಸಿಗಿದ್ದ ಜನಪ್ರಿಯತೆಯನ್ನು ಮಾರ್ಕೊ ಪೋಲೊ ಹೀಗೆ ಬಣ್ಣಿಸುತ್ತಾನೆ: "...ಗ್ರೇಟ್ ಖಾನ್ ನ ಒಬ್ಬ ಸುಂಕಾಧಿಕಾರಿ, ಕಿನ್ಸಾಯ್ ಪಟ್ಟಣದಲ್ಲಿ ಒಂದು ದಿನದಲ್ಲಿ ಸುಮಾರು ೪೩ ಲೋಡುಗಳಷ್ಟು (ಒಂದು ಲೋಡು ಅಂದರೆ ೨೨೩ ಪೌಂಡು) ಮೆಣಸು ಖರ್ಚಾಗುತ್ತದೆ, ಎಂದು ಹೇಳುವುದನ್ನು ಮಾರ್ಕೊ ಕೇಳಿದ್ದನಂತೆ."[೧೧]

ಚೀನಾದ ಮಟ್ಟಿಗೆ ಮಾರ್ಕೊ ಪೋಲೊನನ್ನು ಒಬ್ಬ ನಂಬಿಕಸ್ಥ ಮೂಲ ಅಥವಾ ಆಕರ ಎಂದು ಪರಿಗಣಿಸಲಾಗುವುದಿಲ್ಲ, ಅದರಲ್ಲೂ ಇನ್ನೊಬ್ಬರಿಂದ ಕೇಳಿದ್ದು ಎನ್ನುವುದು ಹೆಚ್ಚಿನ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ, ಆದರೂ ಒಂದು ದಿನಕ್ಕೆ ಒಂದು ಪಟ್ಟಣದಲ್ಲಿ ೧೦,೦೦೦ ಪೌಂಡು (೪೫೦೦ ಕೆ.ಜಿ) ಖರ್ಚಾಗುತಿತ್ತು ಎನ್ನುವುದು ನಿಜಾಂಶಕ್ಕೆ ಹತ್ತಿರವಾಗಿದೆ.

ಔಷಧವಾಗಿ ಕರಿಮೆಣಸು

ಬದಲಾಯಿಸಿ
 
'ಈ ಎಸರಿನಲ್ಲಿ(ಸಾರು) ಖಂಡಿತವಾಗಿಯೂ ಮೆಣಸು ಜಾಸ್ತಿಯಾಗಿದೆ!' ಆಲೀಸ್ ಸೀನುವಾಗ ತನ್ನಷ್ಟಕ್ಕೆ ತಾನೆ ಹೇಳಿಕೊಳ್ಳುವುದು ಆಲೀಸ್ ಇನ್ ವಂಡರ್ ಲ್ಯಾಂಡ್ (೧೮೬೫). ಪಾಠ ೬: ಹಂದಿ ಮತ್ತು ಮೆಣಸು ಚಿತ್ರದಲ್ಲಿ ಅಡಿಗೆಯವಳ ಮೆಣಸಿನ ಯಂತ್ರ ಕಾಣಬಹುದು.

ಎಲ್ಲಾ ಪೌರಾತ್ಯ ಸಾಂಬಾರ ಪದಾರ್ಥಗಳಂತೆ, ಕರಿಮೆಣಸನ್ನೂ ಸಹ ಸಾಂಬಾರ ಪದಾರ್ಥವಾಗಿ ಅಷ್ಟೇ ಅಲ್ಲದೇ ಔಷಧವಾಗಿಯೂ ಬಳಸುವ ಕ್ರಮ ಹಿಂದಿನಿಂದಲೂ ಬಂದಿದೆ. ಹಿಪ್ಪಲಿಯನ್ನು ಮುಖ್ಯವಾಗಿ ಔಷಧಗಳಿಗೆ ಪ್ರಸ್ತಾಪಿಸದ್ದರು ಕರಿಮೆಣಸು ಕೂಡ ಔಷಧಿವಾಗಿ ಉಪಯೋಗಿಸುವರು.

ಭಾರತದಲ್ಲಿ ಆಯುರ್ವೇದ, ಸಿದ್ಧ ಮತ್ತು ಯುನಾನಿ ವೈದ್ಯಕೀಯ ಪದ್ಧತಿಗಳಲ್ಲಿ ಕರಿಮೆಣಸನ್ನು ಔಷಧಿಯಾಗಿ ಉಪಯೋಗಿಸುವುದು ಕಂಡುಬರುತ್ತದೆ. ೫ನೇ ಶತಮಾನದ ಸಿರಿಯಾಕ್ ಬುಕ್ ಆಫ್ ಮೆಡಿಸಿನ್ಸ್ ಎಂಬ ಪುಸ್ತಕವು ಮೆಣಸನ್ನು ಮಲಬದ್ಧತೆ, ಅತಿಸಾರ, ಕಿವಿನೋವು, ವ್ರಣ, ಹೃದಯ ವಿಕಾರಗಳು(ಹೃದ್ರೋಗ), ಹರ್ನಿಯಾ, ಗಂಟಲ ಬೇನೆ, ಅಜೀರ್ಣ, ಕೀಟ ವಿಷಭಾದೆ, ನಿದ್ರಾಹೀನತೆ, ಕೀಲು ನೋವು , ಯಕೃತ್ತಿನ ತೊಂದರೆ, ಪುಪ್ಪುಸ(ಶ್ವಾಶಕೋಶ)ದ ಕಾಯಿಲೆಗಳು, ಬಾಯಿ ಹುಣ್ಣು, ಚರ್ಮರೋಗ, ಹುಳುಕು ಹಲ್ಲು, ಮತ್ತು ಹಲ್ಲು ನೋವುಗಳಿಗೆ ಔಷಧಿಯಂತೆ ಉಪಯೋಗಿಸಬಹುದೆಂದು ತಿಳಿಸುತ್ತದೆ.[೧೨] ೫ನೇ ಶತಮಾನದ ನಂತರದ ಅನೇಕ ಗ್ರಂಥಗಳು ಮೆಣಸಿನ ಮಲಾಮು ಹಾಗೂ ಪಟ್ಟಿಗಳನ್ನು ಕಣ್ಣಿನ ತೊಂದರೆಗಳಿಗೂ ಉಪಯೋಗಿಸಬಹುದೆಂದು ಹೇಳುತ್ತವೆ. ಆದರೆ ಈ ಚಿಕಿತ್ಸೆಗೆ ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳಿಲ್ಲ. ಮೆಣಸನ್ನು ಕಣ್ಣಿಗೆ ನೇರವಾಗಿ ಲೇಪಿಸುವುದರಿಂದ ಕಣ್ಣು ಹಾಳಾಗುವ ಸಾಧ್ಯತೆಗಳೂ ಇದೆ.[೧೩]

ಕರಿಮೆಣಸು ಸೀನುವಿಕೆಯನ್ನು ಉಂಟು ಮಾಡುತ್ತದೆಂದು ಬಹುಕಾಲದಿಂದಲೂ ನಂಬಲಾಗಿದೆ. ಇದನ್ನು ನಿಜ ಎಂದು ಈಗಲೂ ನಂಬುತ್ತಾರೆ. ಕೆಲವು ಮೂಲಗಳ ಪ್ರಕಾರ ಮೆಣಸಿನಲ್ಲಿರುವ ಪಿಪರೀನ್ ಎಂಬ ಧಾತು ಮೂಗಿನ ಹೊಳ್ಳೆಗಳಿಗೆ ಉದ್ರೇಕಿಸಿ ಸೀನುಂಟು ಮಾಡುತ್ತದೆ ಎಂದು ಹೇಳುತ್ತವೆ.[೧೪] ಇನ್ನೂ ಅನೇಕರ ಪ್ರಕಾರ ಈ ಸೀನುವಿಕೆಯು ಮೆಣಸಿನ ಸಣ್ಣ ಹುಡಿ ರೂಪದಿಂದ ಉಂಟಾಗುತ್ತದೆಯೆಂದೂ, ಮೆಣಸು ಅಷ್ಟು ಶಕ್ತಿಯುತವಾದ ಸೀನು ಉತ್ಪಾದಕವಲ್ಲವೆಂದೂ ಹೇಳುತ್ತಾರೆ. ಈ ದಿಕ್ಕಿನಲ್ಲಿ ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ.

ಮೆಣಸಿನ ಖಾರದ ತೀಕ್ಷ್ಣತೆಯು ಬಹುಶಃ, ಹೊರಗಿನ ಕಾಳಿನಲ್ಲಿ, ಬಹುಪಾಲು ಹಣ್ಣಿನ ಹೊರಭಾಗದ ಸಿಪ್ಪೆ ಹಾಗು ಒಳಗಿನ ಬೀಜದಲ್ಲಿರುವ ಪೈಪರೈನ್ ಎಂಬ ಧಾತುವಿನಿಂದ ದೊರಕುತ್ತದೆ.

ಸಂಸ್ಕರಿಸಿದ ಮಿಲಿಗ್ರಾಂ ಪೈಪರೈನ್, ಮಿಲಿಗ್ರಾಂ ಕಾಯಪ್ಸಿಯಾಸಿನ್ ನ ಶೇ ೧ ರಷ್ಟು ಖಾರವಾಗಿರುತ್ತದೆ. ಕರಿಮೆಣಸಿನಲ್ಲಿ ಉಳಿದಿರುವ ಸಿಪ್ಪೆಯಲ್ಲಿ ವಾಸನೆ ನೀಡುವ ತೈಲಧಾತುಗಳಾದ (terpene) ಪೈನೆನೆ, ಸಬೀನೆನೆ, ಲಿಮೊನೆನೆ, ಕಾರ್ಯೊಫೈಲೆನೆ, ಮತ್ತು ಲಿನಲೂಲ್. ಈ ಸುಗಂಧಗಳು ಸಿಪ್ಪೆ ತೆಗೆದ ಬಿಳಿ ಮೆಣಸಿನಲ್ಲಿ ಬಹುಪಾಲು ಹೋಗಿರುತ್ತವೆ.

ಬಿಳಿ ಮೆಣಸು ತಯಾರಿಕೆಯಲ್ಲಿ ತುಂಬಾ ಕಾಲ ಹುದುಗುಬರಿಸಿದ್ದರೆ ಕೆಲವು ಬೇರೆ ವಾಸನೆಗಳು ಬರುತ್ತದೆ (ಹಳತಾದ ವಾಸನೆಯೂ ಸೇರಿದಂತೆ).[೧೫]

ಈ ಮೆಣಸು ಗಾಳಿಗೊಡ್ಡಿದರೆ ತನ್ನ ಸ್ವಾದ ಹಾಗೂ ಪರಿಮಳವನ್ನು ಕಳೆದುಕೊಳ್ಳುತ್ತದೆ, ಆದ್ಧರಿಂದ ಶೇಖರಿಸವಾಗ ಗಾಳಿಯಾಡದ ಜಾಗದಲ್ಲಿ ಶೇಖರಿಸಬೇಕು. ಅಂತಹ ವಾತಾವರಣದಲ್ಲಿ ಮೆಣಸು ದೀರ್ಘಕಾಲ ತನ್ನ ಸಾಂಬಾರ ಗುಣಗಳನ್ನು ಉಳಿಸಿಕೊಳ್ಳುತ್ತದೆ. ಮೆಣಸನ್ನು ದೀರ್ಘಕಾಲ ಬೆಳಕಿಗೊಡ್ಡಿದಾಗ ತನ್ನ ಸ್ವಾದಿಷ್ಟತೆಯನ್ನು ಕಳೆದುಕೊಳ್ಳುತ್ತದೆ, ಏಕೆಂದರೆ ಬೆಳಕಿನಲ್ಲಿ ಪೈಪರೈನ್ ಧಾತುವು ರುಚಿಯಿರದ ಇಸೊಚವಿಸಿನ್ ಆಗಿ ಪರಿವರ್ತನೆ ಹೊಂದುತ್ತದೆ.[೧೬]
ಒಮ್ಮೆ ಪುಡಿಮಾಡಿದ ನಂತರ ಮೆಣಸಿನ ಸುಗಂಧ ಬಹಳ ಬೇಗನೆ ಆವಿಯಾಗಿ ಹೋಗುತ್ತದೆ. ಇದೇ ಕಾರಣಕ್ಕಾಗಿ ಅನೇಕ ಅಡುಗೆ ವಿಧಾನಗಳಲ್ಲಿ ಮೆಣಸನ್ನು ಪುಡಿ ಮಾಡಿದ ಒಡನೆಯೇ ಉಪಯೋಗಿಸಲಾಗುತ್ತದೆ. ಅನೇಕ ಬಾರಿ ಚಿಕ್ಕ ಮೆಣಸು ಹುಡಿ ಮಾಡುವ ಕೈ-ಯಂತ್ರವನ್ನು ಮೊದಲೇ ಪುಡಿಮಾಡಿ ಶೇಖರಿಸಿರುವ ಮೆಣಸಿಗೆ ಬದಲಾಗಿ ಉಪಯೋಗಿಸುತ್ತಾರೆ. ೧೪ನೇ ಶತಮಾನದಿಂದಲೇ ಈ ರೀತಿಯ ಕೈ-ಯಂತ್ರಗಳು ಯೂರೋಪ್ ಹಾಗೂ ಭಾರತದಲ್ಲಿ ಅನೇಕ ಕಡೆ ಪ್ರಚಲಿತವಾಗಿತ್ತು. ಇಂದಿಗೂ ಈ ಯಂತ್ರಗಳು ಬಳಕೆಯಾಗುತ್ತಾ ಬಂದಿವೆ.[೧೭]

ಪ್ರಪಂಚದ ಸಾಂಬಾರ ಪದಾರ್ಥ ವ್ಯಾಪಾರದಲ್ಲಿ ಕರಿಮೆಣಸು

ಬದಲಾಯಿಸಿ

ಕರಿಮೆಣಸು ಕಾಳು ಪ್ರಪಂಚದಲ್ಲೇ ಅತಿ ಹೆಚ್ಚು ವ್ಯಾಪಾರವಾಗುವ ಸಾಂಬಾರ ಪದಾರ್ಥ (ಹಣದ ರೂಪದಲ್ಲಿ), ೨೦೦೨ ನೇ ಇಸವಿಯಲ್ಲಿ ಸಾಂಬಾರ ಪದಾರ್ಥಗಳ ಒಟ್ಟು ಆಮದಿನಲ್ಲಿ ಶೇ ೨೦ ಕರಿಮೆಣಸನ್ನು ಆಮದು ಮಾಡಿಕೊಳ್ಳಲಾಗಿತ್ತು. ಕರಿಮೆಣಸಿನ ಮಾರಾಟ ದರದಲ್ಲಿ ವ್ಯತ್ಯಾಸವಾಗುವುದು ಮಾಮೂಲು, ವರ್ಷದಿಂದ ವರ್ಷಕ್ಕೆ ಏರಿಳಿತವಾಗುತ್ತಿರುತ್ತದೆ; ೧೯೯೮ ರಲ್ಲಿ ಒಟ್ಟು ಸಾಂಬಾರ ಪದಾರ್ಥ ವ್ಯಾಪಾರದಲ್ಲಿ ಕರಿಮೆಣಸಿನ ಪಾಲು ಶೇ ೩೯.[೧೮] ತೂಕದ ರೂಪದಲ್ಲಿ ಕೆಂಪು ಮೆಣಸಿನ ವ್ಯಾಪಾರ ಕರಿಮೆಣಸಿನದಕ್ಕಿಂತಲೂ ಸ್ವಲ್ಪ ಹೆಚ್ಚು. ಅಂತರರಾಷ್ಟ್ರೀಯ ಕರಿಮೆಣಸು ವಿನಿಮಯ ಕೇಂದ್ರವು ಕೇರಳದ ಕೊಚ್ಚಿಯಲ್ಲಿದೆ.

ಇತ್ತೀಚಿಗೆ ವಿಯೆಟ್ನಾಮ್ ದೇಶವು ಅತಿ ಹೆಚ್ಚು ಕರಿಮೆಣಸು ಉತ್ಪಾದಕ ಹಾಗು ನಿರ್ಯಾತ ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೆಲವು ಮುಖ್ಯ ಉತ್ಪಾದಕ ದೇಶಗಳೆಂದರೆ ವಿಯೆಟ್ನಾಮ್ (೮೫,೦೦೦ ಟನ್ ೨೦೦೩ರಲ್ಲಿ), ಇಂಡೊನೇಷ್ಯಾ (೬೭,೦೦೦ ಟನ್), ಭಾರತ (೬೫,೦೦೦ ಟನ್), ಬ್ರೆಜಿಲ್ (೩೫,೦೦೦ ಟನ್), ಮಲೇಷ್ಯಾ ( ೨೨,೦೦೦ ಟನ್), ಶ್ರೀಲಂಕಾ (೧೨,೭೫೦ ಟನ್), ಥಾಯಲ್ಯಾಂಡ್ ಮತ್ತು ಚೀನಾ. ವಿಯೆಟ್ನಾಮ್ ದೇಶವು ಉತ್ಪಾದನೆಯ ಬಹುಪಾಲನ್ನು ನಿರ್ಯಾತ ಮಾಡುತ್ತದೆ. ನಿರ್ಯಾತ ಮಾಡುವ ಪ್ರಮುಖ ದೇಶಗಳೆಂದರೆ ವಿಯೆಟ್ನಾಮ್ (೮೨,೦೦೦ ಟನ್ ೨೦೦೩ರಲ್ಲಿ), ಇಂಡೊನೇಷ್ಯಾ (೫೭,೦೦೦ ಟನ್), ಬ್ರೆಜಿಲ್ (೩೭,೯೪೦ ಟನ್), ಮಲೇಷ್ಯಾ ( ೧೮,೫೦೦ ಟನ್), ಭಾರತ, (೧೭,೨೦೦ ಟನ್).[೧೯]

ಇತರ ಉಪಯೋಗಗಳು

ಬದಲಾಯಿಸಿ

ಮೆಣಸಿನಕಾಳುಗಳಿಂದ ಒಂದು ರೀತಿಯ ಚಂಚಲತೈಲವನ್ನೂ ಪಡೆಯಬಹುದಾಗಿದ್ದು ಇದನ್ನು ವಿವಿಧ ರೀತಿಯ ಆಹಾರವಸ್ತುಗಳಿಗೆ ಮತ್ತು ಪಾನೀಯಗಳಿಗೆ ರುಚಿ ಒದಗಿಸಲು ಬಳಸಲಾಗುತ್ತದೆ. ಕೇರಳದ ಕೆಲವಡೆ ಹಸುರುಮೆಣಸನ್ನೂ ಉಪ್ಪಿನಕಾಯಿಯ ರೂಪದಲ್ಲಿ ಬಳಸುವುದಿದೆ.

ಟಿಪ್ಪಣಿಗಳು

ಬದಲಾಯಿಸಿ
  1. ಕರಿಮೆಣಸಿನ ವಿಧಗಳ ಬಗ್ಗೆ ಮಾಹಿತಿ: A Cook's Wares Archived 2007-12-16 ವೇಬ್ಯಾಕ್ ಮೆಷಿನ್ ನಲ್ಲಿ.. ನವೆಂಬರ್ ೬, ೨೦೦೫ರಂದು ಪಡೆದದ್ದು.
  2. ಡಾಲ್ಬಿ ಪುಟ. ೯೩
  3. Dalby p. 93.
  4. ಬಾಸ್ಟಾಕ್ ಮತ್ತು ರಿಲೇಯವರ ೧೮೫೫ರಲ್ಲಿನ ಅನುವಾದ: Text online.
  5. ಟರ್ನರ್ ಅವರ ಅನುವಾದದಿಂದ, ಪುಟ ೯೪. ಈ ಸಮಸ್ಯೆಯ ಉತ್ತರ, ಕರಿಮೆಣಸು.
  6. ಡಾಲ್ಬಿ ಪುಟ. ೧೫೬; ಹಾಗೂ ಟರ್ನರ್ ಪುಟ. ೧೦೮-೧೦೯, ಆದರೆ ಟರ್ನರ್ ಮಸಾಲೆ ಪದಾರ್ಥಗಳ ಬಗ್ಗೆ ಬರೆಯುತ್ತಾ(ಪ್ರತ್ಯೇಕವಾಗಿ ಕರಿಮೆಣಸಿನ ಬಗ್ಗೆ ಬರೆಯದೆ), ವೈನ್ ಮತ್ತು ಬೀರ್‌ಗಳ ನಿಜಸ್ವರೂಪವನ್ನು ಮರೆಮಾಚಲು ಮಸಾಲೆ ಪದಾರ್ಥಗಳನ್ನು ಬಳಸಲಾಗುತಿತ್ತು ಎಂದಿದ್ದಾನೆ.
  7. ಹೆಚ್.ಜೆ.ಡಿ.ಡಾರ್ಮನ್ ಮತ್ತು ಎಸ್.ಜಿ.ಡೀನ್ಸ್ ಬರೆದಿರುವ "Antimicrobial agents from plants: antibacterial activity of plant volatile oils" ಎಂಬ ಗ್ರಂಥ. ಪೂರ್ಣಪಾಠ.
  8. ಜಾಫೀ ಪುಟ. ೧೦
  9. ಡಾಲ್ಬಿ ಪುಟಗಳು ೭೪-೭೫.
  10. ಡಾಲ್ಬಿ ಪುಟ ೭೭
  11. The Travels of Marco Polo: The Complete Yule-Cordier Edition, Vol. 2 ಕೃತಿಯಿಂದ ಅನುವಾದಿಸಿದ್ದು, Dover. ISBN 0486275876. ಪುಟ. ೨೦೪.
  12. ಟರ್ನರ್ ಪುಟ. ೧೬೦.
  13. ಟರ್ನರ್ ಪುಟ. ೧೭೧.
  14. ಅಮೇರಿಕಾ ಗ್ರಂಥಾಲಯ ಪರಿಷತ್ತಿನ ವಿಜ್ಞಾನ ವಿಭಾಗದಲ್ಲಿನ "ಪ್ರತಿದಿನದ ವಿಸ್ಮಯಗಳು", ಮೆಣಸು ಏಕೆ ನಿಮ್ಮನ್ನು ಸೀನುವಂತೆ ಮಾಡುತ್ತದೆ?. ಮಾಹಿತಿ ಪಡೆದ ದಿನಾಂಕ: ನವೆಂಬರ್ ೧೨, ೨೦೦೫.
  15. McGee p. 428.
  16. ibid.
  17. Montagne, Prosper (2001). Larousse Gastronomique. Hamlyn. p. 726. ISBN 0600602354. "Mill".
  18. Jaffee p. 12, table 2.
  19. Data from Multi Commodity Exchange of India, Ltd. Retrieved 6 November 2005.

ಆಕರಗಳು

ಬದಲಾಯಿಸಿ

ಹೆಚ್ಚಿನ ಮಾಹಿತಿಗಾಗಿ

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: