ಅಪ್ಪುಗಿಡ
ಅಪ್ಪುಗಿಡವು ಮತ್ತೊಂದು ಆಶ್ರಯ ಗಿಡದ ಮೇಲೆ ಬೆಳೆಯುವ ಗಿಡ ಆದರೆ ಆಶ್ರಯ ಸಸ್ಯದಿಂದ ಯಾವ ಬಗೆಯ ಪೋಷಣೆಯನ್ನೂ ಪಡೆಯದೆ, ಕೇವಲ ಆಶ್ರಯವನ್ನಷ್ಟೇ ಪಡೆಯುವ ಸಸ್ಯ(ಎಪಿಫೈಟ್). ಇಂಥ ಸಸ್ಯಗಳು ಕಂಟಿ, ಪೊದೆ, ಮರಗಳೆಂಬ ಭೇದವಿಲ್ಲದೆ ಸಾಮಾನ್ಯವಾಗಿ ಎಲ್ಲ ಬಗೆಯ ಗಿಡಗಳ ಮೇಲೂ ಬೆಳೆಯುತ್ತವೆ. ಹೆಚ್ಚಾಗಿ ಈ ಸಸ್ಯಗಳು ಹಸಿರು ಬಣ್ಣದವಾಗಿದ್ದು ಸ್ವತಂತ್ರವಾಗಿ ಆಹಾರ ತಯಾರಿಸಿಕೊಳ್ಳುವ ಸಾಮಥ್ರ್ಯ ಪಡೆದಿರುತ್ತವೆ. ಸಸ್ಯಗಳ ಜೀವನಕ್ಕೆ ಮೊಟ್ಟಮೊದಲು ಬೇಕಾದುದು ನೀರು ಮತ್ತು ಲವಣಗಳು. ಆದರೆ ಈ ಸಸ್ಯಗಳಿಗೆ ಇವೆರಡೂ ದೊರೆಯುವುದು ಅತಿ ದುರ್ಲಭವಾದುದರಿಂದ ಇವು ಅತ್ಯಂತ ಕಷ್ಟಕರ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ. ಇಂಥ ಸಸ್ಯಗಳು ಬೆಳೆಯುವ ಪರಿಸ್ಥಿತಿಯನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಇವು ಕೇವಲ ಮಳೆಯ ನೀರನ್ನೂ ಸಮಶೀತೋಷ್ಣವಲಯಗಳಲ್ಲಿ ಪರ್ವತ ಪ್ರದೇಶಗಳಲ್ಲಿ ಇಬ್ಬನಿಯ (ಮಂಜು) ನೀರನ್ನೂ ಅವಲಂಬಿಸಬೇಕಾಗುತ್ತದೆ.
ಅಪ್ಪುಗಿಡದ ಲಕ್ಷಣಗಳು
ಬದಲಾಯಿಸಿಸಾಮಾನ್ಯವಾಗಿ ಈ ಸಸ್ಯಗಳು ಆಶ್ರಯನೀಡುವ ಸಸ್ಯಗಳ ತೊಗಟೆಗಳಲ್ಲಿ ಶೇಖರವಾಗುವ ಮಣ್ಣಿನ ಧೂಳಿನಿಂದ ಆಹಾರ ಹೀರಿಕೊಳ್ಳುತ್ತವೆ. ಕೆಲವು ಸಸ್ಯಗಳು ತಮ್ಮ ಬೇರುಗಳ ಬಲೆಯಲ್ಲಿ ಗಾಳಿಯಿಂದ ತೂರಿಬಂದು ಸಂಗ್ರಹವಾಗುವ ಧೂಳುಕಣ, ಕೊಳೆತ ಎಲೆ, ಕಸಕಡ್ಡಿ, ಅಲ್ಪ ಸ್ವಲ್ಪ ಮಳೆನೀರು ಇವಿಷ್ಟನ್ನೇ ಅವಲಂಬಿಸುತ್ತವೆ. ಇನ್ನು ಕೆಲವು ಸಸ್ಯಗಳು ಜೋತುಬಿದ್ದ ಬೇರು, ಎಲೆ ಮುಂತಾದುವುಗಳಿಂದ ಮೇಲಿನಿಂದ ಹನಿ ಹನಿಯಾಗಿ ಕೆಳಕ್ಕೆ ಬೀಳುವ ನೀರನ್ನು ಹೀರಿಕೊಳ್ಳುತ್ತವೆ. ಸಾಧಾರಣವಾಗಿ ಅಪ್ಪುಗಿಡಗಳು ಅಲ್ಲೊಂದು ಇಲ್ಲೊಂದು ಮರಗಿಡಗಳ ಮೇಲೆ ಬೆಳೆಯುವಂತೆ ಕಂಡುಬಂದರೂ ಉಷ್ಣವಲಯದ ಅರಣ್ಯಪ್ರದೇಶಗಳಲ್ಲಿ ಹೆಚ್ಚಾಗಿರುತ್ತವೆ. ಕಾಂಡ ಮತ್ತು ಕೊಂಬೆಗಳ ಮೇಲಿನ ತೊಗಟೆಯನ್ನೆಲ್ಲ ಆವರಿಸಿರುತ್ತವೆ. ಮಳೆ ಮತ್ತು ಇಬ್ಬನಿಯನ್ನೇ ಅವಲಂಬಿಸಬೇಕಾಗುವುದರಿಂದ ಬೇಸಿಗೆಯ ದಿನಗಳು ಇವಕ್ಕೆ ಕಷ್ಟದ ದಿನಗಳು. ಅಂಥ ಕಠಿಣ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಗಿಡ ಎಲೆಗಳೆಲ್ಲವನ್ನೂ ಕಳೆದುಕೊಂಡು ಕನಿಷ್ಠ ಕ್ರಿಯಾವಸ್ಥೆಯಲ್ಲಿರಬೇಕಾಗುತ್ತದೆ. ಮುಂದೆ ಮಳೆಯಾದಾಗ ಎಲೆಗಳು ಮತ್ತೆ ಚಿಗುರುತ್ತವೆ. ಸಾಮಾನ್ಯವಾಗಿ ಅಪ್ಪುಗಿಡಗಳು ತಾವು ವಾಸಿಸಬೇಕಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೆಲವು ರಕ್ಷಣೋಪಾಯಗಳನ್ನು ಪಡೆದಿರುವುದುಂಟು. ಬೀಜ ಮೊಳೆತ ಅನಂತರ ಕೆಲವು ಅಪ್ಪುಬೇರುಗಳು ಶೀಘ್ರವಾಗಿ ಬೆಳೆದು, ಆಶ್ರಯವೀಯುವ ಗಿಡಕ್ಕೆ ಬಲವಾಗಿ ಅಂಟಿಕೊಳ್ಳುತ್ತವೆ. ಅನೇಕ ಅಪ್ಪು ಗಿಡಗಳು ಬರಗಾಡು ಅಥವಾ ಮರುಭೂಮಿ ಸಸ್ಯಗಳಂತೆ (ಕ್ಸೀರೊಫೈಟ್ಸ್) ಉಷ್ಣತೆಯನ್ನು ಸಹಿಸಲು, ನೀರು ದೇಹದಿಂದ ಆವಿಯಾಗುವುದನ್ನು ನಿಯಂತ್ರಿಸಲು, ಸಹಾಯಕವಾಗುವ ವಿವಿಧ ರೀತಿಯ ಬಾಹ್ಯ ಹಾಗೂ ಆಂತರಿಕ ಮಾರ್ಪಾಟುಗಳನ್ನು ಪಡೆದಿವೆ. ಆರ್ಕಿಡ್ ಬಗೆಯ ಅಪ್ಪುಗಿಡದಲ್ಲಿನ ಶುಷ್ಕಫಲಗಳಲ್ಲಿ ಹಗುರವಾದ ಸಣ್ಣ ಸಣ್ಣ ಅಸಂಖ್ಯಾತ ಬೀಜಗಳು ಉತ್ಪತ್ತಿಯಾಗುತ್ತವೆಯಾದ್ದರಿಂದ ಬೀಜ ಗಾಳಿಯಿಂದ ಪ್ರಸಾರವಾಗುತ್ತದೆ. ಅನೇಕ ಗಿಡಗಳಲ್ಲಿ ರಸಭರಿತವಾದ ಹುಸಿಲಶುನಗಳುಂಟು. ಕೆಲವು ಬೆಂಗಾಡು ಸಸ್ಯಗಳು ಬೇಸಿಗೆಯ ಕಠಿಣ ಪರಿಸ್ಥಿತಿಯಲ್ಲೂ ಒಣಗದೇ ತಮ್ಮ ಬೆಳೆವಣಿಗೆಯನ್ನು ಮುಂದುವರಿಸಿಕೊಂಡು ಹೋಗಬಲ್ಲವು. ಅನೇಕ ಬಗೆಯ ಅಪ್ಪುಗಿಡಗಳಲ್ಲಿ ಎಲೆಗಳು ಅಥವಾ ಕಾಂಡಗಳು ರಸಭರಿತವಾಗಿರುತ್ತವೆ (ಸಕ್ಯುಲೆಂಟ್). ಹೊರಚರ್ಮ ದಪ್ಪವಾಗಿ ಪತ್ರರಂಧ್ರಗಳು ಗುಣಿಗಳಲ್ಲಿರುತ್ತವೆ. ಎಲೆಗಳು ಗಾತ್ರ ಮತ್ತು ಸಂಖ್ಯೆಯಲ್ಲಿ ಕಡಿಮೆಯಾಗಿರುವುದುಂಟು. ಆರ್ಕಿಡ್ ನಂಥ ಅನೇಕ ಅಪ್ಪುಗಿಡಗಳು ಆಸರೆಮರಗಳ ಮೇಲೆಯೇ ತಮ್ಮ ಇಡೀ ಜೀವಮಾನವನ್ನು ಕಳೆಯುತ್ತವೆ. ಅವು ಪಕ್ಕಾ ಅಪ್ಪುಗಿಡಗಳು. ಇನ್ನು ಕೆಲವು ಬಗೆಯವು ಅದರಲ್ಲೂ ಬೇರುಗಳಿಂದ ಮೇಲೆ ಏರುವ ಬಳ್ಳಿಗಳು ಮೊದಲು ಭೂಮಿಯ ಮೇಲೆ ಬೆಳೆಯುತ್ತಿದ್ದು, ಅನಂತರ ಆಸರೆ ಗಿಡವೊಂದು ದೊರೆತಕೂಡಲೇ ಅದನ್ನು ಅಪ್ಪಿಕೊಂಡು ಕ್ರಮೇಣ ಭೂಮಿಯ ಸಂಪರ್ಕವನ್ನು ಕಳೆದುಕೊಳ್ಳುತ್ತವೆ. ಇಂಥವಕ್ಕೆ ಅರೆಅಪ್ಪುಗಿಡಗಳು ಎಂದು ಹೆಸರು. ಉದಾ: ಸೀರಿಯಸ್, ಸಿಂಡಾಪ್ಸಸ್ ಇತ್ಯಾದಿ.[೧] ಇದಕ್ಕೆ ವಿರುದ್ಧವಾಗಿ ಕೆಲವು, ಮೊದಲು ಅಪ್ಪುಗಿಡಗಳಂತೆ ಬೆಳದು ಅನಂತರ ಭೂಮಿಯಲ್ಲಿ ಬೇರು ಬಿಟ್ಟು ಸ್ವತಂತ್ರವಾಗುತ್ತವೆ. ಉದಾ: ಆಲ, ಅರಳಿ ಇತ್ಯಾದಿ.
ಅಪ್ಪುಗಿಡಗಳ ಕೆಲವು ಮುಖ್ಯ ಉದಾಹರಣೆಗಳು
ಬದಲಾಯಿಸಿಆವೃತಬೀಜ ಸಸ್ಯಗಳ ಪೈಕಿ ಆರ್ಕಿಡ್ ಗಳು ಬಹು ಮುಖ್ಯವಾದುವು; ಇವುಗಳ ಸಂಖ್ಯೆ ಅಪಾರ. ಉದಾ: ವ್ಯಾಂಡ, ಡೆಂಡ್ರೋಬಿಯಮ್ ಇತ್ಯಾದಿ. ಏರೇಸಿ ಕುಟುಂಬಕ್ಕೆ ಸೇರಿದ ಕೆಲವು ಸಸ್ಯಗಳು-ಸಿಂಡಾಪ್ಸಸ್, ಪೋತಾಸ್ ಇತ್ಯಾದಿ. ಬ್ರೊಮಿಲಿಯೇಸೀ ಕುಟುಂಬಕ್ಕೆ ಸೇರಿದ ಟೆಲ್ಯಾಂಡ್ಸಿಯ ಎಂಬುದು ಅಮೇರಿಕದ ಲ್ಲಿ ಬೆಳೆಯುವ ಗಿಡವಾಗಿದ್ದು ಅದರ ಬೇರು ಮತ್ತು ನಿಳವಾದ ಎಲೆಗಳು ಉದ್ದನೆಯ ಎಲೆಗಳಂತೆ ಗಾಳಿಯಲ್ಲಿ ಜೋಲಾಡುತ್ತಿರುತ್ತವೆ. ಆಸ್ಕ್ಲಿಪಿಯಡೇಸೀ ಕುಟುಂಬಕ್ಕೆ ಸೇರಿದ ಡಿಸ್ಕಿಡಿಯ, ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದ ಸಿರಿಯಸ್ ಎಂಬುವು ಗಮನಾರ್ಹವಾದುವು. ಸಿರಿಯಸ್ ಒಂದು ಬೃಹದಾಕಾರದ ಅಪ್ಪುಗಿಡ. ಅದರ ಕಾಂಡ ತ್ರಿಕೋನಾಕಾರವಾಗಿದ್ದು, ದೊಡ್ಡ ಮರಗಳ ಮೇಲೆ ಏರಿರುತ್ತದೆ. ಟೆರಿಡೋಫೈಟ್ ಎಂಬ ವರ್ಗಕ್ಕೆ ಸೇರಿದ ಕೆಲವು ಜರಿ ಗಿಡಗಳೂ ಅಪ್ಪುಗಿಡಗಳೇ. ಉದಾ: ಪಕ್ಷಿಗೂಡಿನಂಥ ಜರಿಗಿಡ ಪಾಲಿಪೋಡಿಯಮ್ ಮುಂತಾದವು ಮರದ ಕಾಂಡ ಮತ್ತು ಕೊಂಬೆಗಳ ಮೇಲೆಲ್ಲ ಗೊಂಚಲು ಗೊಂಚಲಾಗಿ ವ್ಯಾಪಿಸಿರುತ್ತವೆ. ಲೈಕೋಪೋಡಿಯಮ್ ಎಂಬುದು ಇನ್ನೊಂದು ಬಗೆಯ ಸಾಮಾನ್ಯವಾದ ಅಪ್ಪುಗಿಡ. ಬ್ರಯೋಫೈಟ್ ಕುಟುಂಬಕ್ಕೆ ಸೇರಿದ ಮಾಸಸ್, ಪೊರೆಲ್ಲ ಎಂಬ ಗಿಡಗಳೂ ಮರಗಳ ಕಾಂಡ, ಕೊಂಬೆಗಳ ಮೇಲೆಲ್ಲ ಹಸಿರು ಮೆತ್ತೆಯಂತೆ ವ್ಯಾಪಿಸಿರುತ್ತವೆ. ಪಾಚಿ ಅಥವಾ ಶೈವಾಲ ಕುಟುಂಬಕ್ಕೆ ಸೇರಿದ ಪ್ರೋಟೋಕಾಕಸ್ ಎಂಬುದು ಮರದ ತೊಗಟೆಯ ಮೇಲೂ ಟ್ರೆಂಟೆಪೊಲಿಯ ಎಂಬುದು ಎಲೆಗಳ ಮೇಲೂ ಕಂಡುಬರುವ ಅಪ್ಪುಗಿಡಗಳ ಕೆಲವು ನಿದರ್ಶನಗಳು.[೨][೩]
ಉಲ್ಲೇಖಗಳು
ಬದಲಾಯಿಸಿ- ↑ http://www.ourhouseplants.com/plants/pothos
- ↑ "ಆರ್ಕೈವ್ ನಕಲು". Archived from the original on 2014-05-11. Retrieved 2023-03-17.
- ↑ https://theplantsgarden.com