ವಿಶ್ವದಲ್ಲಿ ಆಯುರ್ವೇದ
ಭಾರತೀಯ ಉಪಖಂಡದಲ್ಲಿ ಬಹುತೇಕ ದೇಶಗಳಲ್ಲಿ ಆಯುರ್ವೇದವನ್ನು ವ್ಯಾಪಕವಾಗಿ ಅಭ್ಯಸಿಸಲಾಗುತ್ತದೆ.[೧] ಈಜಿಪ್ಟ್, ಚೀನಾ, ಗ್ರೀಸ್ ಮತ್ತು ಮೆಸೊಪೊಟೋಮಿಯಾ, ಭಾರತಗಳನ್ನು ವೈದ್ಯಕೀಯದ ತೊಟ್ಟಿಲು ಎಂದು ಕರೆಯಲಾಗುತ್ತಿತ್ತು.
ಗ್ರೀಸ್ ದೇಶ: ಗ್ರೀಸ್ ಚಿಕಿತ್ಸೆ ಭಾರತೀಯ ಮೂಲದ್ದಾಗಿದೆ ಎಂದು ತಿಳಿದು ಬರುತ್ತದೆ.
ಚೀನಾ: ಭಾರತದಿಂದ ಚೈನಾಕ್ಕೆ ಕ್ರಿ.ಶ. 67ರಲ್ಲಿ ಬೌದ್ಧ ಗ್ರಂಥಗಳೊಂದಿಗೆ ಸಂಸ್ಕೃತ, ಪ್ರಾಕೃತ, ವೈದ್ಯಕೀಯ ಯೋಗಶತಕದ ಹಸ್ತಪ್ರತಿಗಳು ತಲುಪಿದುವು.
ಟಿಬೆಟ್: ಟಿಬೆಟ್‌ನಲ್ಲಿ ಆಯುರ್ವೇದ ವೈದ್ಯಪದ್ಧತಿ ಅತಿಹೆಚ್ಚು ಜನಪ್ರಿಯತೆ ಗಳಿಸಿತ್ತು (8ನೇ ಶತಮಾನ). 'ಅಮೃತಹೃದಯ' ಸಂಸ್ಕೃತದಿಂದ ಟಿಬೇಟಿಗೆ ಅನುವಾದಗೊಂಡಿತು. 'ಬುದ್ಧ ಭೈಷಜ್ಯ'ದ ಬಹುತೇಕ ಪುಟಗಳು ಚರಕ ಮತ್ತು ಸುಶ್ರುತ ಸಂಹಿತೆಯ ಶ್ಲೋಕಗಳ ಅನುವಾದವಾಗಿದ್ದವು. ಇವೇ ಪುಸ್ತಕ ಟಿಬೆಟಿನಿಂದ ಮತ್ತೆ ಮಂಗೋಲಿಯನ್ ಭಾಷೆಗೆ ಅನುವಾದಗೊಂಡಿತು. ಮಂಗೊಲಿಯಾದಿಂದ ರಷ್ಯನ್ ಭಾಷೆಗೆ ತರ್ಜುಮೆಗೊಂಡು ಜನಪ್ರಿಯಗೊಂಡಿತು.
ಪರ್ಶಿಯಾ: ಆಯುರ್ವೇದದ ಕೆಲವು ಪುಸ್ತಕಗಳು ಪರ್ಶಿಯನ್ ಭಾಷೆಗೆ ತರ್ಜುಮೆಗೊಂಡವು.[೨] ನಂತರ ಪರ್ಶಿಯನ್ ಭಾಷೆಯ ಪುಸ್ತಕಗಳು ಅರೇಬಿಯಾಗೆ ಅನುವಾದಗೊಂಡವು. ಕ್ರಿ.ಶ. 850ರಲ್ಲಿ ಪರ್ಶಿಯನ್ ವೈದ್ಯ ಅಲಿ ಇಬ್ನ್ ರಬ್ಬನ್ "ಫಿರ್ದೌಸ್ ಅಲ್ ಹಿಕ್ಮಾ" ರಚಿಸಿದ. ಅದರಲ್ಲಿ ಆಯುರ್ವೇದದ ಎಲ್ಲ ವಿಚಾರಗಳನ್ನು ಮಂಡಿಸಿದ್ದಾನೆ.[೩]
ಅರೇಬಿಯಾ: ಅರಬ್ಬರು 7ನೇ ಶತಮಾನದಲ್ಲಿ ಸಾಂಬಾರ ಪದಾರ್ಥಗಳನ್ನು, ಡೈ, ಔಷಧಿ, ಸುಗಂಧ ದ್ರವ್ಯಗಳನ್ನು ಏಷ್ಯ, ಆಫ್ರಿಕಾ, ಮತ್ತು ಯೂರೋಪ್‌ಗೆ ಒಯ್ಯುತ್ತಿದ್ದರು. ಆಗಲೇ ಅವರಿಗೆ ಭಾರತೀಯ ಔಷಧಿಗಳ ಕುರಿತು ಹೆಚ್ಚು ಆಸಕ್ತಿ ಉಂಟಾಗಿತ್ತು. ಚರಕ ಸಂಹಿತೆ, ಸುಶ್ರುತ ಸಂಹಿತೆ, ಮಾಧವ ನಿದಾನ, ಅಷ್ಟಾಂಗ ಹೃದಯ ಅರೇಬಿಯಾಗಿ ಅನುವಾದಗೊಂಡಿದೆ.
ಪ್ರಸಿದ್ಧ ವಿಜ್ಞಾನಿ, ವಿಶ್ವಕೋಶಗಳ ತಜ್ಞ, ಪ್ರಕೃತಿ ಚಿಕಿತ್ಸಜ್ಞ ಅಬು ರೈಹಾನ್ ಬೈರೋನಿ (973-1048) ತನ್ನ ಪುಸ್ತಕ "ಕಿತಾಬ್-ಅಲ್-ಸೈದಾಲ-ಫಿ-ಅಲ್-ಟಿಬ್" (ಔಷಧ ವಿಜ್ಞಾನ) ಪುಸ್ತಕದಲ್ಲಿ 4500 ಗಿಡಗಳು, ಪ್ರಾಣಿಗಳು, ಖನಿಜಗಳ ಹೆಸರುಗಳನ್ನು ನೀಡಿದ್ದಾನೆ. ಅದರಲ್ಲಿ 350 ಭಾರತೀಯ ಹೆಸರುಗಳಿವೆ.[೪][೫]
ಯೂರೋಪ್: 15ನೇ ಶತಮಾನದ ಅಂತ್ಯದಲ್ಲಿ ಯೂರೋಪ್ ಮತ್ತು ಇಂಡಿಯಾದ ಸಂಬಂಧ ಆಯುರ್ವೇದದ ಕುರಿತಾಗಿ ಆರಂಭವಾಯಿತು. ಪೋರ್ಚುಗೀಸ್, ಡಚ್, ಫ್ರೆಂಚ್, ಡೇನ್ಸ್, ಬ್ರಿಟಿಷ್‌ರು ಇಲ್ಲಿಗೆ ಆಗಮಿಸಿದ ಮೇಲೆ ಇನ್ನಷ್ಟು ಬೆಳೆವಣಿಗೆ ಹೊಂದಿತು.
ಈಸ್ಟ್ ಇಂಡಿಯಾ ಕಂಪನಿಯ ವೈದ್ಯರು ಹಲವಾರು ನಾಟಿವೈದ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ 'ಫಾರ್ಮಾಕೋಪಿಯಾ'ವನ್ನು 1868ರಲ್ಲಿ ಹೊರತಂದರು.
ಭಾರತದಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಯೂರೋಪಿನ ತಜ್ಞವೈದ್ಯ ಗಾರ್ಸಿಯಾ ಡೆ ಆರ್ಟಾ Colloquies on the Simples and Drugs of India ಎಂಬ ಪುಸ್ತಕವನ್ನು ಭಾರತದಲ್ಲಿನ ಔಷಧಿಗಳ ಕುರಿತು ಬರೆದ. ಇದು 1563ರಲ್ಲಿ ಗೋವಾದಲ್ಲಿ ಪ್ರಕಟಿತವಾಯಿತು. ಈ ಪುಸ್ತಕದಲ್ಲಿ 49 ಅಧ್ಯಾಯಗಳಿದ್ದು ಪ್ರತಿಯೊಂದರಲ್ಲಿಯೂ ಭಾರತದ ಗಿಡಮೂಲಿಕೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಸರ್ಪಗಂಧ (Rauwolfia Serpentina)ದ ಹೆಸರನ್ನು ಲಿಯಾನಾರ್ಡ್ ರಾವುಲ್ಫ್ ಹೆಸರಿನ (1535-96) ಜರ್ಮನ್ ವೈದ್ಯ, ಸಸ್ಯಶಾಸ್ತ್ರಜ್ಞ ಮತ್ತು ವಿಶ್ವಪರ್ಯಟನಕಾರನ ಹೆಸರಿನಲ್ಲಿಯೇ ಗುರುತಿಸಲಾಗಿದೆ. ಈತ 'ಗಾರ್ಸಿಯಾ ಡ ಆರ್ಟಾ' ತನ್ನ ಪುಸ್ತಕದಲ್ಲಿ ತಾನು ಪ್ರಯಾಣಿಸುವಾಗ ಕಂಡ 500 ಗಿಡಗಳ ಕುರಿತು ವಿವರಣೆ ನೀಡಿದ್ದಾನೆ. ಈ ಪುಸ್ತಕವನ್ನು ಲ್ಯಾಟಿನ್, ಇಟಲಿ ಮತ್ತು ಫ್ರೆಂಚ್‌ಗೆ ಭಾಷಾಂತರಿಸಿ ಪ್ರಕಟಿಸಲಾಗಿದೆ.[೬] ಇದು ಇಂಗ್ಲಿಷಿಗೂ ಅನುವಾದಗೊಂಡಿದೆ.
19ನೇ ಶತಮಾನದಲ್ಲಿ: ಎರಡನೆ ಮಹಾಯುದ್ಧದ ನಂತರ ಆಯುರ್ವೇದದ ಮಹತ್ವವನ್ನು ಪಶ್ಚಿಮ ದೇಶಗಳು ಮತ್ತು ಅಮೆರಿಕಾ ಗುರುತಿಸಿದವು.
1898ರಲ್ಲಿ ನ್ಯೂಯಾರ್ಕ್‌ನಲ್ಲಿ ವೈದ್ಯರಿಂದ ಚರಕ ಕ್ಲಬ್ ಆರಂಭವಾಯಿತು.[೭] 1837ರಲ್ಲಿ ಲಂಡನ್‌ನಲ್ಲಿ ರಾಯ್ಲೆ ಹಿಂದೂ ಚಿಕಿತ್ಸಾಪದ್ಧತಿಯನ್ನು ಕುರಿತು ಲೇಖನ ಬರೆದ. 1844-47ರಲ್ಲಿ ಹೆಸ್ಲರ್ ಸುಶ್ರುತ ಸಂಹಿತೆಯನ್ನು ಎರಡು ಭಾಗಗಳಲ್ಲಿ ಅನುವಾದಿಸಿದ.
1864ರಲ್ಲಿ ಲ್ಯಾನ್‌ಸೆಟ್ ಭಾರತೀಯ ಔಷಧೀಯ ಪದ್ಧತಿಯನ್ನು ಅಭ್ಯಸಿಸಿ ಲೇಖನ ರಚಿಸಿತು. ಇದೇ ವರ್ಷ ಸ್ಟಿಂಜ್ಲರ್ ಭಾರತೀಯ ವೈದ್ಯಪದ್ಧತಿಯ ಇತಿಹಾಸ ಬರೆದ. 1864ರಲ್ಲಿ ಲಂಡನ್‌ನಲ್ಲಿ ವಿಲ್ಸನ್ ಭಾರತೀಯ ಔಷಧಿ ಮತ್ತು ಶಸ್ತ್ರಚಿಕಿತ್ಸೆಯ ಕುರಿತು ಬರೆದು ಪ್ರಕಟಿಸಿದ. ಜರ್ಮನಿಯಲ್ಲಿ ರೋಥ್ ಚರಿತ ಮೊನೋಗ್ರಫ್ 1872ರಲ್ಲಿ ಬರೆದ. 1896ರಲ್ಲಿ ಕಾರ್ಡಿಯರ್ ವಾಗ್ಭಟನ ಅಷ್ಟಾಂಗ ಹೃದಯ ಸಂಹಿತೆಯನ್ನು ಫ್ರೆಂಚ್ ಭಾಷೆಗೆ ತರ್ಜುಮೆಮಾಡಿದ.
20ನೇ ಶತಮಾನದಲ್ಲಿ: ಈ ಶತಮಾನದ ಮಧ್ಯಭಾಗದಲ್ಲಿ ಮಹರ್ಷಿ ಆಯುರ್ವೇದ ಸಂಸ್ಥೆಯ[೮][೯] ಪಂಡಿತ್ ಶಿವಶರ್ಮ ಮಹರ್ಷಿ ಮಹೇಶ್ ಯೋಗಿಯ ನಿರ್ದೇಶನದಂತೆ ಆಯುರ್ವೇದವನ್ನು ವಿಶ್ವದಾದ್ಯಂತ ಸಂಚರಿಸಿ ಟ್ರಾನ್ಸೆಂಡೆಂಟಲ್ ಮೆಡಿಟೇಶನ್‌ನೊಂದಿಗೆ ಪರಿಚಯಿಸಿದ.[೧೦]
ಯೂರೋಪ್: ಮಹರ್ಷಿ ಆಯುರ್ವೇದ ಸಂಸ್ಥೆಯಿಂದ ಯೂರೋಪಿನ ರಾಷ್ಟ್ರಗಳಲ್ಲಿ ಆಯುರ್ವೇದ ಬಹಳಷ್ಟು ಜನಪ್ರಿಯವಾಗಿದೆ. ನೆದರ್‌ಲ್ಯಾಂಡ್‌ನಲ್ಲಿ ಪ್ರಪ್ರಥಮಬಾರಿಗೆ ಟ್ರಾನ್ಸೆಂಡೆಂಟಲ್ ಮೆಡಿಸನ್ (TM) ಕಲಿಕಾ ಕೇಂದ್ರ ಆರಂಭಿಸಿ ನಂತರ ಅಲ್ಲಿಯೇ ಆಯುರ್ವೇದ ಕೇಂದ್ರವನ್ನು ಆರಂಭಿಸಿತು. ಜರ್ಮನಿಯಲ್ಲಿಯೂ ಮಹರ್ಷಿ ಆಯುರ್ವೇದ ಸಂಸ್ಥೆಯ ಶಾಖೆಗಳು ಹರಡಿದವು. ಅದೇ ರೀತಿ ಸ್ವಿಟ್ಜರ್‌ಲ್ಯಾಂಡ್, ಆಸ್ಟ್ರಿಯಾ, ಸ್ಪೇನ್, ಫ್ರಾನ್ಸ್ ಮತ್ತು ಇತರ ಸ್ಥಳಗಳಲ್ಲಿಯೂ ಹರಡಿತು. ಇವಲ್ಲದೇ ಯೂರೋಪಿನ ಅನೇಕ ವ್ಯಕ್ತಿಗಳು ವಿಶೇಷವಾಗಿ ಇಟಲಿ ಮತ್ತು ಜರ್ಮನಿಯಲ್ಲಿ ಆಯುರ್ವೇದದಲ್ಲಿ ಆಸಕ್ತಿಯಾಗಿ ಅನೇಕ ಹೆಲ್ತ್ ಸೆಂಟರ್‌ಗಳನ್ನು ಆರಂಭಿಸಿದ್ದಾರೆ.
ಜರ್ಮನಿ: ಟ್ರಾನ್ಸೆಂಡೆಂಟಲ್ ಮೆಡಿಟೇಶನ್ ಮತ್ತು ಆಯುರ್ವೇದದ 72 ಸಂಸ್ಥೆಗಳು ಕಾರ್ಯನಿರ್ವಹಿಸಿತ್ತಿವೆ. ಪಂಚಕರ್ಮ ಚಿಕಿತ್ಸೆ ಸೌಲಭ್ಯ ಹೊಂದಿದ 9 ಕ್ಲಿನಿಕ್-ಆಸ್ವತ್ರೆಗಳಿವೆ. ವರ್ನರ್ ವಿಲ್‍ಹೆಲ್ಮ್ ವಾಕರ್ ಶ್ರೀ ಸತ್ಯಸಾಯಿಬಾಬಾ ಅವರ ನಿರ್ದೇಶನದಂತೆ ಆಯುರ್ವೇದದ ಆಸ್ಪತ್ರೆ ತೆರೆದಿದ್ದು 60 ಹಾಸಿಗೆಗಳ ಆಸ್ಪತ್ರೆಯಿದೆ. ಇದು ಜರ್ಮನಿಯಲ್ಲಿಯೂ ಅತ್ಯಂತ ಜನಪ್ರಿಯತೆ ಹೊಂದಿರುವ ಆಸ್ಪತ್ರೆ. ಇಲ್ಲಿ ಪಂಚಕರ್ಮ ಚಿಕಿತ್ಸೆಯನ್ನಲ್ಲದೇ ಹೃದ್ರೋಗಿಗಳಿಗೂ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತದೆ. ವೈದ್ಯರಿಗೆ ಸೆಮಿನಾರ್‌ಗಳನ್ನು ನಡೆಸುವುದಲ್ಲದೇ ಆಯುರ್ವೇದದ ಅಡುಗೆ ಕೋರ್ಸ್ ಕೂಡ ನಡೆಸಲಾಗುತ್ತದೆ.
ಸ್ವಿಟ್ಜರ್‌ಲ್ಯಾಂಡ್: ಎರಡು ಟ್ರಾನ್ಸೆಂಡೆಂಟಲ್ ಮೆಡಿಸಿನ್ ಕಲಿಕಾ ಸಂಸ್ಥೆಗಳಿದ್ದು ಅಲ್ಲಿ ಆಯುರ್ವೇದ ಶಿಕ್ಷಣವನ್ನು ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಸೌಲಭ್ಯವಿದೆ.
1992ರಲ್ಲಿ ಆಯುರ್ವೇದ ರಿಸರ್ಚ್ ಕಂಪನಿ ವಾಲ್ಜೆನ್ ಹಾಸನ್, ಆಯುರ್ವೇದ ಕ್ಲಿನಿಕ್ ಆರಂಭಿಸಿತು. ಚಿಕ್ಕದಾದರೂ ಉತ್ತಮ ಸೌಲಭ್ಯ ಹೊಂದಿದ್ದು ಕೇರಳ ಸಂಪ್ರದಾಯಿಕ ಚಿಕಿತ್ಸೆ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಭಾರತದ ತಜ್ಞ ಆಯುರ್ವೇದ ವೈದ್ಯರು ಭೇಟಿನೀಡುತ್ತಿರುತ್ತಾರೆ. ಈ ಆಸ್ಪತ್ರೆಗೆ ಸ್ವಿಟ್ಜರ್‌ಲ್ಯಾಂಡ್‌ನಿಂದ ಮಾತ್ರವಲ್ಲದೇ ಆಸ್ಟ್ರಿಯಾ, ಜರ್ಮನಿ, ಡೆನ್ಮಾರ್ಕ್, ನಾರ್ವೆ, ಇಟಲಿ ಮತ್ತು ಫ್ರಾನ್ಸ್‌ನಿಂದಲೂ ರೋಗಿಗಳು ಬರುತ್ತಿರುತ್ತಾರೆ. ಈ ಆಸ್ಪತ್ರೆಯನ್ನು ಸ್ಥಾಪಿಸಿದ ಸಾಹಸಿ ಪ್ರಕೃತಿ ಚಿಕಿತ್ಸಜ್ಞ ಹಾನ್ಸ್ ಎಚ್. ರೈನರ್.
ಇಟಲಿ: 1984ರಲ್ಲಿ ಇಂಟರ್‌ನ್ಯಾಶನಲ್ ಅಸೋಸಿಯೋಷನ್ ಆಫ್ ಆಯುರ್ವೇದ ಮತ್ತು ನ್ಯಾಚುರೋಪತಿ ಆರಂಭಗೊಂಡಿತು. ಇಲ್ಲಿ 1985ರಲ್ಲಿ ಪ್ರಥಮ ಯೋಗ ಮತ್ತು ಆಯುರ್ವೇದ ವಿಶ್ವ ಕಾಂಗ್ರೆಸ್ ಜರುಗಿತು.[೧೧] ಅಲ್ಲಿಂದೀಚೆಗೆ ಎರಡು ವರ್ಷಕ್ಕೊಮ್ಮೆ ಆಯುರ್ವೇದ ವಿಶ್ವ ಕಾಂಗ್ರೆಸ್ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ವಾರಾಣಸಿಯ ಸುರೇಶ್ ಕುಮಾರ್‌ಗೆ ಚಿನ್ನದ ಪದಕ ಮತ್ತು ಬೆಂಗಳೂರಿನ ಜಯಪ್ರಕಾಶ್ ನಾರಾಯಣ್‌ಗೆ ಬೆಳ್ಳಿಯ ಪದಕ ನೀಡಿ ಗೌರವಿಸಲಾಯಿತು.
ನೆದರ್‌ಲ್ಯಾಂಡ್ಸ್: ಇನ್ಸಿಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ಗ್ರೊನಿಂಗೆನ್ ಯೂನಿವರ್ಸಿಟಿ ಮೂರ ದಶಕಗಳ ಹಿಂದೆಯೇ ಆಯುರ್ವೇದ ಕುರಿತಾದ ಅಧ್ಯಯನ ಆರಂಭಿಸಿತು. ಇಲ್ಲಿ 1983ರಲ್ಲಿ ಅಂತರರಾಷ್ಟ್ರೀಯ ವರ್ಕ್‌ಷಾಪ್ ಜರುಗಿತು. ಯೂರೋಪ್ ಮತ್ತು ಬ್ರಿಟನ್ನಿನ ಆಯುರ್ವೇದ ವೈದ್ಯರು ಭಾಗವಹಿಸಿದ್ದರು. ಅವರೆಲ್ಲರೂ ಸೇರಿ ಯೂರೋಪಿಯನ್ ಆಯುರ್ವೇದಿಕ್ ಸೊಸೈಟಿ ಆರಂಭಿಸಿದರು. ಈ ವಿಶ್ವವಿದ್ಯಾಲಯದಲ್ಲಿ ಆಯುರ್ವೇದದ ಬೋಧನೆ ಮತ್ತು ಸಂಶೋಧನೆ ನಡೆಸಲಾಗುತ್ತದೆ.
ಆಸ್ಟ್ರೇಲಿಯಾ: ಅನೇಕ ಆಸ್ಟ್ರೇಲಿಯಾದ ವೈದ್ಯರು ಪೂನಾದ ಅಂತರರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ಆಯುರ್ವೇದದ ಡಿಗ್ರಿ ಅಥವಾ ಡಿಪ್ಲೊಮಾ ಪದವಿ ಪಡೆದುಕೊಂಡರು. ನಂತರ ಅವರೆಲ್ಲ ಒಟ್ಟು ಸೇರಿ ಆಸ್ಟ್ರೇಲಿಯನ್ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್ ಆರಂಭಿಸಿದರು. ಕ್ಯಾನ್‌ಬೆರಾದಲ್ಲಿ ಈ ಸಂಸ್ಥೆ ನ್ಯಾಚುರೋಪತಿ ಪ್ರ್ಯಾಕ್ಟಿಷನರ್ಸ್ ಅಸೋಸಿಯೇಷನ್‌ನೊಂದಿಗೆ ಸೇರಿ ಆಯುರ್ವೇದದ ಶಿಕ್ಷಣ ನೀಡುವ ಕೋರ್ಸ್‌ಗಳನ್ನು ಆರಂಭಿಸಿತು.
ಜಪಾನ್: ಜಪಾನ್ನ ಪ್ರಾಚೀನ ರಾಜಧಾನಿ ನಾರಾದಲ್ಲಿ ಉತ್ಖನನ ಮಾಡಿದಾಗ ಔಷಧೀಯ ಗಿಡಮೂಲಿಕೆಗಳು ತ್ರಿಪುರಾ, ಹಿಪ್ಪಲಿ, ಮೆಣಸು ದೊರೆತಿದ್ದವು. ಇವುಗಳನ್ನು ಜಪಾನ್‌ನಲ್ಲಿ ಬೆಳೆಯುತ್ತಿದ್ದರೆಂದು ತಿಳಿದುಬರುತ್ತದೆ. ಇದರಿಂದ ಆಯುರ್ವೇದ ಪ್ರಾಚೀನ ಕಾಲದಲ್ಲಿಯೇ ಜಪಾನ್ ಪ್ರವೇಶಿಸಿತ್ತು ಎಂದರಿವಾಗುತ್ತದೆ. ಸುಶ್ರುತ ಸಂಹಿತೆಯನ್ನು 1934ರಲ್ಲಿ ಜೊಹಜೆನ್ ಓಚಿಹಾರ ಸಂಸ್ಕೃತದಿಂದಲೇ ಜಪಾನೀ ಭಾಷೆಗೆ ಅನುವಾದಿಸಿದ್ದ. ಟೋಕಿಯೋ, ಒಸಾಕಾದಲ್ಲಿ ಪ್ರತಿ ತಿಂಗಳೂ ಸೆಮಿನಾರ್‌ಗಳನ್ನು ನಡೆಸುತ್ತಿದ್ದ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ. ಟಿ.ವಿ. ಕಾರ್ಯಕ್ರಮಗಳಲ್ಲಿಯೂ ಆಯುರ್ವೇದ ವಿಷಯಗಳನ್ನು ಪ್ರಸಾರ ಮಾಡಿದೆ. ಅಲ್ಲದೇ ಆರ್.ಎಸ್.ಎ.ಜೆ (RSAJ) 'ನಾಡಿಯಂತ್ರ'ವನ್ನು ನಾಡಿಪರೀಕ್ಷಾ ವಿದಾನವನ್ನು ಆಧರಿಸಿ ತಯಾರಿಸಿದೆ. ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಈ ಯಂತ್ರ ಇಲ್ಲಿಯೇ ಕಂಡುಹಿಡಿದದ್ದು.
ಮಲೇಷಿಯಾ ಗ್ರಾಮಾಂತರ: ಮಲೇಷಿಯಾದಲ್ಲಿ ವಾಸಿಸುವ ಭಾರತೀಯರು ಭಾರತೀಯ ಸಾಂಪ್ರದಾಯಿಕ ಪದ್ಧತಿಗಳಾದ ಆಯುರ್ವೇದ, ಯುನಾನಿ, ಸಿದ್ಧ, ಮತ್ತು ಹೋಮಿಯೋಪತಿಯನ್ನು ಅನುಸರಿಸುತ್ತಾರೆ. ಭಾರತೀಯ ವೈದ್ಯರನೇಕರು ಇಲ್ಲಿ ಆಯುರ್ವೇದ ವೃತ್ತಿನಿರತರಾಗಿದ್ದಾರೆ.
ಬಾಂಗ್ಲಾದೇಶ: ಆಯುರ್ವೇದ ಮತ್ತು ಯುನಾನಿ ಎರಡೂ ಮುಖ್ಯ ವೈದ್ಯ ಪದ್ಧತಿಗಳಾಗಿವೆ. ಢಾಕಾದಲ್ಲಿ ಪದವೀಧರನಿಗೆ ನೋಂದಣಿ ನೀಡಲು ಒಂದು ಮಂಡಳಿಯು ಸ್ಥಿತವಿದ್ದು ಆಯುರ್ವೇದದ ಸಂಶೋಧನೆಗೂ ಪ್ರೋತ್ಸಾಹಿಸುತ್ತದೆ. 6000 ಜನರು ನೊಂದಾಯಿತ (ರಿಜಿಸ್ಟರ್ಡ್) ವೈದ್ಯವೃತ್ತಿ ನಿರತರಿದ್ದು ಅದರಲ್ಲಿ 1000 ಪದವಿ ಪಡೆದ ವೈದ್ಯರಿದ್ದಾರೆ. ಎಂಟು ಸಂಸ್ಥೆಗಳಲ್ಲಿ 4 ವರ್ಷದ ಆಯುರ್ವೇದ ಡಿಗ್ರಿ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಜಿಲ್ಲಾ ಬೋರ್ಡ್ ನಡೆಸುವ ಆಯುರ್ವೇದ ಡಿಸ್ಪೆನ್ಸರಿಗಳಿವೆ. 14 ಔಷಧೀಯ ಕಂಪನಿಗಳು ಕೂಡ ಇವೆ.
ಭೂತಾನ್: ಭೂತಾನ್‌ನಲ್ಲಿ ಒಂದು ಆಯುರ್ವೇದ ಆಸ್ಪತ್ರೆ ಮತ್ತು ನಾಲ್ಕು ಆಯುರ್ವೇದ ಡಿಸ್ಪೆನ್ಸರಿಗಳಿದ್ದು ಇವೆಲ್ಲವೂ ಭೂತಾನ್ ಸರ್ಕಾರದ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತವೆ.
ಇಂಡೋನೇಷ್ಯ: ಭಾರತದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಸೈನ್ಸಸ್, ನವದೆಹಲಿ (IIAS) 1989ರಲ್ಲಿ ಒಂದು ಆಯುರ್ವೇದಿಕ್ ಸೆಂಟರ್ ಆರಂಭಿಸಿತು.
ಮಾರಿಷಸ್: ಭಾರತೀಯ ಮೂಲದ ಗರಿಷ್ಠ ಜನ ಮಾರಿಷಸ್‌ನಲ್ಲಿ ವಾಸಿಸುತ್ತಿದ್ದಾರೆ. 1986ರಲ್ಲಿ ಪ್ರಧಾನಮಂತ್ರಿ ಅನಿರುಧ್ ಜಗನ್ನಾಥ್ ಕೌಲ್ ಬಸ್ಸಿಯಲ್ಲಿ ಸ್ಯಾಮಿ ಕೃಷ್ಣಾನಂದ ಸೇವಾಶ್ರಮದಲ್ಲಿ ಒಂದು ಆಯುರ್ವೇದ ಕೇಂದ್ರವನ್ನು ಆರಂಭಿಸಿತು. ಇದು ತುಂಬ ಜನಪ್ರಿಯತೆ ಪಡೆಯುತ್ತಾದ್ದರಿಂದ ಮಾರಿಷಸ್ ಸರ್ಕಾರ 1990ರಲ್ಲಿ ಆಯುರ್ವೇದಕ್ಕೆ ಮಾನ್ಯತೆ ನೀಡಿ ಒಂದು ಕಾಯ್ದೆಯನ್ನು ಜಾರಿಗೊಳಿಸಿತು ಮತ್ತು 20 ಎಕರೆ ಪ್ರದೇಶವನ್ನು ಔಷಧೀಯ ಸಸ್ಯಗಳನ್ನು ಬೆಳೆಯಲು ಮಂಜೂರು ಮಾಡಿತು. ನಂತರ ಕುರುಪ್ಪೆಯಲ್ಲಿ ಮತ್ತೊಂದು ಕೇಂದ್ರ ಆರಂಭಿಸಿತು. ಒಂದು ಆಸ್ಪತ್ರೆ ಮತ್ತು 10 ಡಿಸ್ಪೆನ್ಸರಿಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 1990ರಲ್ಲಿ ಮೊಟ್ಟಮೊದಲ ಅಂತರರಾಷ್ಟ್ರೀಯ ಸಮ್ಮೇಳನ ಜರುಗಿತು.
ಮಯನ್ಮಾರ್: ಸುಮಾರು 30,000 ಸಾಂಪ್ರದಾಯಿಕ ವೈದ್ಯರು ಇದ್ದಾರೆ. ದೇಶದ ಜನಸಂಖ್ಯೆಯ ಶೇಕಡಾ 85ರಷ್ಟು ಜನರು ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಅವಲಂಬಿಸಿದ್ದಾರೆ. ಮಂಡಾಲಯದಲ್ಲಿ 4 ವರ್ಷದ ಆಯುರ್ವೇದ ಕೋರ್ಸ್ ನಡೆಸುವ ಕಾಲೇಜಿದೆ. ಸರ್ಕಾರವು ಒಂದು ಆಯುರ್ವೇದ ಆಸ್ಪತ್ರೆ ಮತ್ತು 34 ಡಿಸ್ಪೆನ್ಸರಿಗಳನ್ನು ನಡೆಸುತ್ತಿದೆ.
ಥೈಲ್ಯಾಂಡ್: 1990ರಲ್ಲಿ ಆಯುರ್ವೇದ ಸೆಂಟರ್ ಆರಂಭವಾಯಿತು. ಬ್ಯಾಂಕಾಕ್‌ನಲ್ಲಿ ಒಂದು ಆಯುರ್ವೇದ ಕಾಲೇಜ್ ಇದ್ದು ದೇಶದಲ್ಲಿ 30,000 ವೈದ್ಯರು ಸಾಂಪ್ರದಾಯಿಕ ವೈದ್ಯ ವೃತ್ತಿನಿರತರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಯುರ್ವೇದ ಪದವೀಧರರು ಸೇವೆ ಸಲ್ಲಿಸುತ್ತಿದ್ದಾರೆ.
ನೇಪಾಳ: ನೇಪಾಳದಲ್ಲಿ ಪ್ರಾಚೀನ ಕಾಲದಲ್ಲಿಯೇ ಆಯುರ್ವೇದವನ್ನು ಅಭ್ಯಸಿಸಲಾಗುತ್ತಿತ್ತು. 100 ಆಯುರ್ವೇದ ಡಿಸ್ಪೆನ್ಸರಿಗಳು ಮತ್ತು 50 ಹಾಸಿಗೆಗಳ ಒಂದು ಆಯುರ್ವೇದ ಆಸ್ಪತ್ರೆ ಖಟ್ಮಂಡುವಿನಲ್ಲಿದೆ. ಇಲ್ಲಿ ಶೇಕಡಾ 75 ರಷ್ಟು ಜನಸಂಖ್ಯೆ ಆಯುರ್ವೇದ ಚಿಕಿತ್ಸೆಯ ಮೇಲೆ ಅವಲಂಬಿತರಾಗಿದ್ದಾರೆ.[೧೨][೧೩] ತ್ರಿಭುವನ್ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಕಾಲೇಜ್ ಇದೆ. 12 ಆಯುರ್ವೇದ ಔಷಧಿ ತಯಾರಿಕಾ ಕಂಪನಿಗಳಿವೆ. ಔಷಧೀಯ ಗಿಡಮೂಲಿಕೆಗಳ ಮೇಲೆ ಸಂಶೋಧನೆಯೂ ನಡೆಯುತ್ತಿದೆ.
ಶ್ರೀಲಂಕಾ: ಈ ದೇಶದಲ್ಲಿ ಆಯುರ್ವೇದ, ಸಿದ್ಧ, ಮತ್ತು ಯುನಾನಿ ವೈದ್ಯ ಪದ್ಧತಿಗಳು ಚಾಲ್ತಿಯಲ್ಲಿವೆ. 10,000 ವೈದ್ಯರು ರಿಜಿಸ್ಟರ್ಡ್ ಪ್ರಾಕ್ಟಿಷನರ್ಸ್ ಇದ್ದಾರೆ. ಕೊಲಂಬೊದಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಇದೆ. ಐದು ವರ್ಷದ ಡಿಗ್ರಿ ಕೋರ್ಸ್ ಇದ್ದು ಪ್ರತಿವರ್ಷ 150 ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದಾರೆ. ಕೆಲವು ಖಾಸಗಿ ಕಾಲೇಜುಗಳು ಅಸ್ತಿತ್ವದಲ್ಲಿವೆ. ಸಂಶೋಧನಾ ಚಟುವಟಿಕೆಗಳು ನಡೆಯುತ್ತಿವೆ. 4 ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು, 250 ಡಿಸ್ಪೆನ್ಸರಿಗಳು ಇವೆ.
ಉಲ್ಲೇಖಗಳು
ಬದಲಾಯಿಸಿ- ↑ Xiaorui Zhang (2001). "Legal Status of Traditional Medicine and Complementary/Alternative Medicine: A Worldwide Review". World Health Organization (WHO). Archived from the original on 31 August 2009. Retrieved 24 June 2014.
- ↑ Encyclopaedia of the History of Science, Technology, and Medicine in Non-Western Cultures. Springer. 2008. Bibcode:2008ehst.book.....S. ISBN 978-1-4020-4559-2. Archived from the original on 7 September 2023. Retrieved 22 January 2015.
- ↑ Raggetti 2020, p. 220.
- ↑ Kujundzić & Masić 1999.
- ↑ Levey 1973, p. 145.
- ↑ https://journals.sagepub.com/doi/10.1177/00732753211019848?icid=int.sj-full-text.similar-articles.1
- ↑ https://www.nyam.org/library/collections-and-resources/archives/finding-aids/ARC-0004.html/
- ↑ Wallace 1993, pp. 64–66
- ↑ Sharma & Clark 1998
- ↑ Sharma & Clark 1998, Preface
- ↑ https://www.sciencedirect.com/science/article/pii/S0975947622000729
- ↑ "Weeklong programme to observe Health Day". The Himalayan Times. 28 October 2013. Archived from the original on 23 March 2017. Retrieved 7 January 2015.
In Nepal, 80 per cent of the population receives Ayurvedic medicine as first aid treatment.
- ↑ Alam, Zulfeequar (2008). Herbal Medicines. New Delhi, India: A.P.H. Publishing. pp. 8–13, 122. ISBN 978-81-313-0358-0. Archived from the original on 7 September 2023. Retrieved 15 February 2022.