ರಾಜಾ ರವಿ ವರ್ಮ

(ರಾಜಾ ರವಿವರ್ಮ ಇಂದ ಪುನರ್ನಿರ್ದೇಶಿತ)
ಈ ಲೇಖನ ಕಲಾವಿದ ರವಿವರ್ಮರ ಬಗ್ಗೆ. ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ರವಿವರ್ಮ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ

ರಾಜಾ ರವಿವರ್ಮ ( ೨೯ ಏಪ್ರಿಲ್ ೧೮೪೮ - ೨ ಅಕ್ಟೋಬರ್ ೧೯೦೬) ಅವರು ಭಾರತೀಯ ವರ್ಣಚಿತ್ರಕಾರ ಮತ್ತು ಕಲಾವಿದ. ಅವರ ಕೃತಿಗಳು ಯುರೋಪಿಯನ್ ಶೈಕ್ಷಣಿಕ ಕಲೆಯನ್ನು ಸಂಪೂರ್ಣವಾಗಿ ಭಾರತೀಯ ಸಂವೇದನೆ ಮತ್ತು ಐಕಾನೋಗ್ರಫಿಯೊಂದಿಗೆ ಸಂಯೋಜಿಸುವ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.[][] ವಿಶೇಷವಾಗಿ, ಅವರು ತಮ್ಮ ವರ್ಣಚಿತ್ರಗಳ ಕೈಗೆಟುಕುವ ಲಿಥೋಗ್ರಾಫ್ಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವಲ್ಲಿ ಗಮನಾರ್ಹರಾಗಿದ್ದರು, ಇದು ವರ್ಣಚಿತ್ರಕಾರ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ಅವರ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ಬಹಳವಾಗಿ ಹೆಚ್ಚಿಸಿತು. ಅವರ ಲಿಥೋಗ್ರಾಫ್ ಗಳು ಲಲಿತಕಲೆಗಳೊಂದಿಗೆ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದವು ಮತ್ತು ಸಾಮಾನ್ಯ ಜನರಲ್ಲಿ ಕಲಾತ್ಮಕ ಅಭಿರುಚಿಯನ್ನು ವ್ಯಾಖ್ಯಾನಿಸಿದವು. ಇದಲ್ಲದೆ, ಹಿಂದೂ ದೇವತೆಗಳ ಧಾರ್ಮಿಕ ಚಿತ್ರಣಗಳು ಮತ್ತು ಭಾರತೀಯ ಮಹಾಕಾವ್ಯ ಮತ್ತು ಪುರಾಣಗಳ ಕೃತಿಗಳು ಆಳವಾದ ಮೆಚ್ಚುಗೆಯನ್ನು ಪಡೆದಿವೆ. ಅವರು ಮಲಪ್ಪುರಂ ಜಿಲ್ಲೆಯ ಹಿಂದಿನ ಪರಪ್ಪನಾಡ್‌ನ ರಾಜಮನೆತನದ ಭಾಗವಾಗಿದ್ದರು.

ರಾಜಾ ರವಿ ವರ್ಮ
೧೮೯೦ ರಲ್ಲಿ ರಾಜಾ ರವಿ ವರ್ಮಾ
Born(೧೮೪೮-೦೪-೨೯)೨೯ ಏಪ್ರಿಲ್ ೧೮೪೮[][]
Died2 October 1906(1906-10-02) (aged 58)
ಅಟ್ಟಿಂಗಲ್, ತಿರುವಾಂಕೂರು, ಬ್ರಿಟಿಷ್ ರಾಜ್
Other namesಕಿಲಿಮನೂರಿನ ಕೋಯಿಲ್ ತಂಪುರನ್, ರವಿವರ್ಮ ಕೋಯಿಲ್ ತಂಪುರನ್
Alma materಯೂನಿವರ್ಸಿಟಿ ಕಾಲೇಜ್ ತಿರುವನಂತಪುರಂ
Occupation(s)ವರ್ಣಚಿತ್ರಕಾರ, ಕಲಾವಿದ
Notable work
  • ಶಕುಂತಲಾ
  • ಶಕುಂತಲಾ ಪತ್ರ - ಲೇಖನ
  • ಕೂದಲನ್ನು ಅಲಂಕರಿಸಿದ ನಾಯರ್ ಮಹಿಳೆ
  • ದೇರ್ ಕಮ್ಸ್ ಪಾಪ
  • ಸಂಗೀತಗಾರರ ಗ್ಯಾಲಕ್ಸಿ
Spouseಪುರುರುತ್ತತಿ ತಿರುನಾಳ್ ಭಗೀರಥಿ ತಂಪುರಟ್ಟಿ
Awardsಕೈಸರ್-ಇ-ಹಿಂದ್ ಚಿನ್ನದ ಪದಕ
Signature

ರಾಜಾ ರವಿವರ್ಮ ಭಾರತದ ಇಂದಿನ ಕೇರಳ ರಾಜ್ಯದ ತಿರುವಾಂಕೂರಿನ ರಾಜಮನೆತನದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರ ಜೀವನದ ನಂತರ, ಅವರ ಇಬ್ಬರು ಮೊಮ್ಮಕ್ಕಳನ್ನು ರಾಜಮನೆತನದಿಂದ ದತ್ತು ತೆಗೆದುಕೊಳ್ಳಲಾಯಿತು. ಅವರ ವಂಶಸ್ಥರು ಇತ್ತೀಚಿನ ಮೂವರು ಮಹಾರಾಜರು (ಬಲರಾಮ ವರ್ಮ III, ಮಾರ್ತಾಂಡ ವರ್ಮ III ಮತ್ತು ಏಳನೇ ರಾಮವರ್ಮ) ಸೇರಿದಂತೆ ತಿರುವಾಂಕೂರಿನ ಪ್ರಸ್ತುತ ರಾಜಮನೆತನವನ್ನು ಒಳಗೊಂಡಿದ್ದಾರೆ.[]

ಆರಂಭಿಕ ಜೀವನ

ಬದಲಾಯಿಸಿ

ರಾಜಾ ರವಿವರ್ಮರು ಕಿಳಿಮಾನೂರು ಊರಿನ, ರಾಜವಂಶಕ್ಕೆ ಸೇರಿದವರು. ಈ ಗ್ರಾಮ, ತಿರುವನಂತಪುರದ ಉತ್ತರಕ್ಕೆ, ೨೫ ಮೈಲಿ ದೂರದಲ್ಲಿದೆ. ಕಂಡನೂರು ದೆಶತ್ತ್ ಮತ್ತು ಉಮಾ ಅಂಬಾಬಾಯಿಯವರ ಮಗನಾಗಿ, ೨೯, ಆಗಸ್ಟ್, ೧೮೪೮ ರಲ್ಲಿ ರವಿವರ್ಮರು ಜನಿಸಿದರು.[] ತಾಯಿ ಕವಯಿತ್ರಿ ಮತ್ತು ಸುಸಂಸ್ಕೃತರು. ತಂದೆ ಸಂಸ್ಕೃತವನ್ನು ಓದಿಕೊಂಡವರು. ಚಿಕ್ಕಂದಿನಿಂದಲೂ ರವಿಯವರು ದೈವಭಕ್ತರು. ಆಚಾರ, ನಿಷ್ಠೆ, ಆತ್ಮಸ್ಥೈರ್ಯ, ಮತ್ತು ಆತ್ಮವಿಶ್ವಾಸಗಳು, ಅವರಿಗೆ ಹುಟ್ಟಿನಿಂದಲೆ ಬಂದಿದ್ದವು. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಸೌಂದರ್ಯಲಹರಿ, ಸ್ವಯಂವರ, ಮಂತ್ರಗಳನ್ನು ಬಾಯಿಪಾಠವಾಗಿ ಹೇಳುತ್ತಿದ್ದರು.

 
ವರ್ಮಾ ಅವರ ಮಗಳು ಮಹಾಪ್ರಭಾ ತನ್ನ ಒಬ್ಬ ಪುತ್ರನೊಂದಿಗೆ ಅಪ್ಪ ಬರುತ್ತಾರೆ ಎಂಬುದನ್ನು ಸೂಚಿಸುವ ಚಿತ್ರ (೧೮೯೩)
 
ವರ್ಮಾ ಅವರ ಅತ್ತಿಗೆ, ಭರಣಿ ತಿರುನಾಳ್ ಲಕ್ಷ್ಮಿ ಬಾಯಿ, ಹಿರಿಯ ರಾಣಿ ಅಟ್ಟಿಂಗಲ್ ತಿರುವಾಂಕೂರು, ಅವರು ೧೯೦೦ ರಲ್ಲಿ ವರ್ಮಾ ಅವರ ಮೊಮ್ಮಕ್ಕಳನ್ನು ದತ್ತು ಪಡೆದರು

ರವಿವರ್ಮ ಅವರು ಸಾಹಿತ್ಯ, ವ್ಯಾಕರಣ, ಶಾಸ್ತ್ರೀಯ ಸಂಗೀತ, ಮತ್ತು ವೇದಪುರಾಣಗಳಲ್ಲಿ ಆಸಕ್ತರು. ರಾಮಾಯಣ, ಮಹಾಭಾರತ, ಅವರಿಗೆ ಬಲು ಪ್ರಿಯವಾದ ಗ್ರಂಥಗಳು. ಅಮರಕೋಶ, ಸಿದ್ಧರೂಪ, ಅವರಿಗೆ ೫ ನೆ ವಯಸ್ಸಿನಲ್ಲೇ ಬಾಯಿಪಾಠವಾಗಿತ್ತು. ಅವರ ಮಾವ, ರಾಜರಾಜವರ್ಮರು ಒಳ್ಳೆಯ ಕಲಾಸಾಧಕರು. ಅವರು ಆಗಿನ ತಿರುವಾಂಕೂರಿನ ಮಹಾರಾಜರಾದ, ಆಯಿಲ್ಯಂ ತಿರುನಾಳ್ ರವರಿಗೆ ರವಿಯನ್ನು ಪರಿಚಯಿಸಿದರು. ಆಗ ರವಿಗೆ ಕೇವಲ ೧೪ ವರ್ಷ ವಯಸ್ಸು. ದೊರೆಗಳು ರವಿಗೆ ಆಗಿನಕಾಲದ ಪ್ರಮುಖ ಚಿತ್ರಕಲಾವಿದರು ರಚಿಸಿದ, ಸಚಿತ್ರ ಪುಸ್ತಕವನ್ನು ಕೊಟ್ಟು ಅದನ್ನು ಅಭ್ಯಸಿಸಲು ಹೇಳಿದರು. ಅಳಗಿರಿ ನಾಯ್ಡು ಅವರನ್ನು ಪರಿಚಯಿಸಿ, ಅವರಬಳಿ ತಮ್ಮ ಕಲಾಭ್ಯಾಸವನ್ನು ಮುಂದುವರೆಸಲು ಅನುಮತಿ ನೀಡಲಾಯಿತು.

ತಿರುವನಂತಪುರದ ಅರಮನೆಯ ಆಸ್ಥಾನ ಕಲಾವಿದನಾಗಿ

ಬದಲಾಯಿಸಿ

೧೮೬೬ ರಲ್ಲಿ, "ವೀರಶೃಂಖಲೆ ", ಪ್ರಶಸ್ತಿಯ ಜೊತೆಗೆ, ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ, ನೇಮಿಸಲ್ಪಟ್ಟರು ; ತಿಂಗಳಿಗೆ ೫೦ ರೂಗಳ ಮಾಸಾಶನದ ಏರ್ಪಾಡುಮಾಡಲಾಯಿತು. ೧೮೬೮ ರಲ್ಲಿ, ಥಿಯೊಡರ್ ಜೆನ್ಸನ್, ಎಂಬ ಐರೋಪ್ಯ ಚಿತ್ರಕಲಾಕಾರನು ಕೇರಳಕ್ಕೆ ಬಂದಿದ್ದನು.[] ತನ್ನ ಐರೋಪ್ಯ ಚಿತ್ರಕಲೆಯ ವಿವರಗಳನ್ನು ತೋರಿಸಿ ಅಲ್ಲಿನ ಭಾವ ವೈವಿಧ್ಯತೆಗಳನ್ನು ವಿವರಿಸಿದನು. ತೈಲ ವರ್ಣಚಿತ್ರಗಳ ಸಂಯೋಜನೆಯನ್ನು ಅವನು ರವಿಗೆ ಹೆಳಿಕೊಟ್ಟನು. ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ನಮ್ಮ ದೇಶದ ವರ್ಣಚಿತ್ರಗಳಲ್ಲಿ ಮಾತ್ರ ಕಾಣಬಹುದು.[] ರವಿಯವರು ಅದನ್ನು ತಾವೇ ವೀಕ್ಷಿಸಿ ಕಲಿತುಕೊಂಡರು. ಮತ್ತು ರವಿ ದೂರದಿಂದ ನೋಡಿಯೇ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ಮನನಮಾಡಿದರು. ಅರಮನೆಯಲ್ಲಿ ಚಿತ್ರಕಲೆಗಾಗಿಯೇ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಾಗಿಟ್ಟಿದ್ದರು. ಹಿರಿಯ ಕಲಾವಿದರಾದ, ರಾಮಸ್ವಾಮಿ ನ್ಯಾಕರ್, ಮತ್ತು ಆರ್ಮುಗಂ ಪಿಳ್ಳೆಯವರ ಪ್ರಭಾವವೂ, ರವಿಯವರಮೇಲೆ ಆಯಿತು. ಈ ಗುರುಗಳು ರವಿಯವರಿಗೆ ತಕ್ಕ ಕಲಾಮೂಲ ಅಡಿಪಾಯವನ್ನು ಸುಸ್ಥಿರವಾಗಿ ಹಾಕಿಕೊಟ್ಟಿದ್ದರಿಂದ ಕಲೆಯ ಹೊಸ ಹೊಸ ಪದ್ಧತಿಗಳು, ವಿನ್ಯಾಸಗಳೂ ಬಂದಾಗ, ಪ್ರಾಕಾರಗಳನ್ನು ಅರಿಯಲು ಅವರಿಗೆ ತೊಂದರೆಯೇನೂ ಆಗಲಿಲ್ಲ. ರವಿವರ್ಮರು ತಮ್ಮ ಸ್ವಂತ ಸಹಾಯದ ಕಲಿಕೆಯಿಂದಲೇ ಕಲೆಯನ್ನು ತಮ್ಮದಾಗಿಸಿಕೊಂಡರು. ಕಲೆಗೆ ಪೂರಕವಾದ ಮಾಹಿತಿಗಳನ್ನು ಅವರು, ಪುರಾಣ ಪುಣ್ಯಕಥೆಗಳನ್ನು ಪಠಿಸುವ ಮೂಲಕ ತಮ್ಮ ಕಲಾ-ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು. ರವಿಯವರ ವಿವಾಹ, ರಾಜಕುಟುಂಬಕ್ಕೆ ಸೇರಿದ ಪುರೂರು ಟ್ಟಾತಿನಾಳ್ ರಾಣಿ,(ರಾಣಿ ಭಾಗೀರತಿಬಾಯಿ)(ಕೊಚ್ಚು ಪಂಗಿ ಅಮ್ಮ) ಎಂಬ ಕನ್ಯೆಯೊಡನೆ ನೆರವೇರಿತು. ಈಕೆ ಮಾವೇಲಿಕ್ಕರ ಮನೆತನದವಳು. ಈ ದಂಪತಿಗಳಿಗೆ ೩ ಗಂಡುಮಕ್ಕಳು ಹಾಗೂ ೨ ಹೆಣ್ಣು ಮಕ್ಕಳು ಜನಿಸಿದರು. ಚೊಚ್ಚಲು ಮಗ ಕೇರಳವರ್ಮ, ೧೮೭೬ ರಲ್ಲಿ ಜನಿಸಿದನು. ಎರಡನೆಯ ಮಗ ರಾಮವರ್ಮ ೧೮೭೯ ರಲ್ಲಿ ಹುಟ್ಟಿದ . ಮೂರನೆಯ ಮಗನೇ ರಾಜ ರಾಜ ವರ್ಮ. ಮಹಾಪ್ರಭ, ಮತ್ತು ಉಮಬಾಯಿ ಹೆಣ್ಣುಮಕ್ಕಳು.[] ಮಹಾಪ್ರಭ ತಂದೆಯವರ ೨ ಪ್ರಸಿದ್ಧ ತೈಲಚಿತ್ರಗಳಿಗೆ ರೂಪದರ್ಶಿಯಾಗಿದ್ದರು. ಇವರ ಮಗಳೇ ಮಹರಾಣೀ ಸೇತುಲಕ್ಷ್ಮಿ ಬಾಯಿ. ಈಕೆ ತಿರುವಂತಪುರದ ಮಹಾರಾಜರನ್ನು ಮದುವೆಯಾದಳು. ಕೇರಳವರ್ಮ ೧೯೧೨ ರಲ್ಲಿ ಎಲ್ಲೋ ಕಾಣೆಯಾದನು.[೧೦][೧೧] ಅವನ ಯಾವ ಸುಳಿವೂ ತಿಳಿಯಲಿಲ್ಲ. ರಾಮವರ್ಮ, ಬೊಂಬಾಯಿಯ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ ನಲ್ಲಿ ಚಿತ್ರಕಲಾ ವಿದ್ಯಾಭ್ಯಾಸ ಮಾಡಿದನು. ಈತನು ದಿವಾನ್ ಪೀ. ಜಿ. ಎನ್ ಉನ್ನಿಥನ್‌ರವರ ಸೋದರಿ, ಗೌರಿ ಕುಂಜಮ್ಮನವರೊಂದಿಗೆ ವಿವಾಹ ಮಾಡಿಕೊಂಡನು.[೧೨]

 
ವರ್ಮಾ ಅವರು ಲಕ್ಷ್ಮಿ ವಿಲಾಸ್ ಅರಮನೆಯಲ್ಲಿದ್ದಾಗ ಬಳಸಿದ ಸ್ಟುಡಿಯೋ

೧೮೭೦ ರಲ್ಲಿ, ಕೊಲ್ಲೂರಿನ ಮೂಕಂಬಿಕಾ ದೇವಿಸನ್ನಿಧಿಗೆ ಹೋಗಿ, ಅಲ್ಲಿ ೪೧ ದಿನಗಳ ವ್ರತಾಚರಣೆ ಮಾಡಿದರು. ಏಕಾಗ್ರತೆಯಿಂದ ಸರಸ್ವತಿ ದೇವಿಯ ಭಜನೆ, ನಡೆಯುತ್ತಿತ್ತು. ಕೊನೆಗೆ, ಮಂಗಳಕ್ಕೆ ೩ ದಿನ ಮೊದಲು, ಸರ್ವಾಂಗಸುಂದರಿ, ಮೂಕಾಂಬಿಕಾ ಅಮ್ಮನವರು ಕಾಣಿಸಿಕೊಂಡು, ಪ್ರೀತಿವಾತ್ಸಲ್ಯದಿಂದ ತಮ್ಮ ಸ್ನೇಹಹಸ್ತವನ್ನು ಅವರ ಮಸ್ತಕದಮೇಲೆ ಇಟ್ಟು ಹರಸಿದಂತೆ ಕನಸಾಯಿತಂತೆ. ಅಂದಿನಿಂದ ಅವರು ರಚಿಸಲು ಪ್ರಯತ್ನಿಸಿದ ಎಲ್ಲಾ ದೇವಿಯರ ಚಿತ್ರಗಳಿಗೂ, ಅಮ್ಮನವರೇ ರೂಪದರ್ಶಿಯಾಗಿ ಅವರಿಗೆ, ಸ್ಪೂರ್ತಿ ಕೊಟ್ಟರಂತೆ. ಉತ್ತರಭಾರತಕ್ಕೆ ಹೋದಾಗ, ಅಲ್ಲಿನ ವೇಷ-ಭೂಷಣ, ಜೀವನ-ಕ್ರಮವಿಧಾನ, ಆಚಾರ-ವ್ಯವಹಾರ, ಮರ್ಯಾದೆ ಕುಲಂಕುಶವಾಗಿ ನೋಡಿಕೊಂಡು ಬಂದರು. ಹೀಗೆ ಅವರು ತಮ್ಮ ಕಲೆಯ ಅಭಿವ್ಯಕ್ತಿಗಾಗಿ ಅನೇಕ ಏರ್ಪಾಡು, ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಯಿತು. ವಿಷ್ಣು ಧರಮೋತ್ತರ ಪುರಾಣದಲ್ಲಿ ವಿವರಿಸಿದ "ಚಿತ್ರಸೂತ್ರ" ಕಲಾ ಆಯಾಮಗಳು ತೀರ ನೀರಸವಾಗಿದ್ದು ಅವುಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಲಾರದ ಪ್ರಸಂಗವನ್ನು ಅವರು ತಿರಸ್ಕರಿಸಿ, ನಮ್ಮ ಪುರಾಣಪುರುಷರುಗಳು, ದೇವಿಯರು ಸಾಮಾನ್ಯಮಾನವರಂತೆ ಇರುವ ಚಿತ್ರಗಳನ್ನು ಅವರು ಪ್ರಸಿದ್ದಿಪಡಿಸಿದರು. ಇದು ಆ ಕಾಲದಲ್ಲಿ ರವಿಯವರು ಆಗಲೇ ಪ್ರಸ್ತುತದಲ್ಲಿದ್ದ ಕಲಾ ಪದ್ಧತಿಗೆ ವಿರೋಧವಾಗಿ ಸ್ಪಂದಿಸಿದ ರೀತಿಯಾಗಿತ್ತು. ಕೊನೆಗೆ ಅದೇ ಸರ್ವರ ಮನಗೆದ್ದಿತು.

ಊರ್ವಶಿ, ರಂಭೆ, ತಿಲೋತ್ತಮೆ, ಉಷೆ, ಎಂಬನಾಯಿಕೆಯರ ಚಿತ್ರಗಳನ್ನು ರಚಿಸಿದ್ದು ತಮ್ಮ ಪುರಾಣಗಳ ಅಧ್ಯಯನದ ಜ್ಞಾನದಿಂದ. ಮರಾಠಾ, ಗುಜರಾತೀ, ಮಲಬಾರೀ , ರಾಜ್ ಪೂತ್ ವನಿತೆಯರ ಸುಂದರ ಚಿತ್ರಗಳು ಅವರ ಕಲಾಸಂಗ್ರಹದಲ್ಲಿ ಸೇರಿಕೊಂಡವು. ಆಗಿನ ಪ್ರಮುಖ ವ್ಯಕ್ತಿಗಳಾದ ತಿಲಕ್, ರಾನಡೆಯವರ ಚಿತ್ರಗಳನ್ನೂ, ಹಿಮಾಲಯ ಪರ್ವತಶ್ರೇಣಿಯ ಭವ್ಯತೆಯನ್ನೂ, ಮತ್ತು ದೇಶದ ಎಲ್ಲಾ ಗಿರಿಧಾಮಗಳ, ಪ್ರದೇಶಗಳ ಪ್ರಕೃತಿಸಿರಿಯನ್ನೂ ತಮ್ಮ ಕುಂಚದಲ್ಲಿ ಸೆರೆಹಿಡಿದರು. ೧೯೦೪ ರಲ್ಲಿ, ರವಿವರ್ಮರಿಗೆ, ಬ್ರಿಟಿಶ್ ಸರ್ಕಾರ, " ಕೈಸರ್-ಎ ಹಿಂದ್ " ಎಂಬ ಪ್ರಶಸ್ತಿ ಕೊಡಲಾಯಿತು. ಪುದುಕೋಟೈ, ಆಳ್ವಾರ್, ಮೈಸೂರ್, ಬರೋಡ, ಇಂದೋರ್, ಗ್ವಾಲಿಯರ್, ಜೈಪುರ, ಉದಯಪುರಗಳ ರಾಜರ ಆಹ್ವಾನ ಬಂದಿತ್ತು.

ಒಬ್ಬ ಆಂಗ್ಲಸಂಸ್ಕೃತ ವಿದ್ವಾಂಸರು, ಪ್ರಕಟಿಸಿದ ಶಾಕುಂತಲ ಮಹಾಕಾವ್ಯದ ಮುಖಪುಟಕ್ಕೆ ತಕ್ಕದಾದ ಚಿತ್ರವನ್ನು ಬರೆದುಕೊಟ್ಟರು. ಈ ಪುಸ್ತಕ ಹೆಸರುವಾಸಿಯಾಗಿದ್ದು, ಕಾವ್ಯ ಸೌಂದರ್ಯಕ್ಕೆ. ಆದರೆ ಹೆಚ್ಚು ಜನಪ್ರಿಯವಾದದ್ದು ಪುಸ್ತಕದ ಹೊರಕವಚದಲ್ಲಿ ಮೂಡಿಸಿದ್ದ ಶಕುಂತಳೆಯ ಮುಗ್ಧ ಸೌಂದರ್ಯಕ್ಕೆ. ಹೀಗೆ ಪುಸ್ತಕದ ಜೊತೆಗೆ, ರವಿವರ್ಮರೂ ವಿಶ್ವದಾದ್ಯಂತ ಹೆಸರುವಾಸಿಯಾದ ವ್ಯಕ್ತಿಯಾದರು.

೧೮೭೬, ರಲ್ಲಿ ಪ್ಯಾರಿಸ್ಸಿನಲ್ಲಿ ಪ್ರದರ್ಶನಗೊಂಡ, "ವಸ್ತುಕಲಾ ಪ್ರದರ್ಶನ," ದಲ್ಲಿ ' " ಮಲೆಯಾಳದ ವನಿತೆ " ಎಂಬ ತೈಲಚಿತ್ರಕ್ಕೆ, ರವಿವರ್ಮರಿಗೆ "ಗೋಲ್ಡ್ ಮೆಡಲ್," ಪ್ರಶಸ್ತಿ ದೊರೆಯಿತು. ಅದೇ ವರ್ಷ ವಿಯನ್ನ ದಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲೂ, " ಮಲಯಾಳದ ವನಿತೆ", ಗೆ ಬಹುಮಾನ ದೊರೆಯಿತು. ಈ ಪ್ರದರ್ಶನಗಳಿಂದ ರವಿವರ್ಮರಿಗೆ ವಿಶ್ವಮಾನ್ಯತೆ ದೊರೆಯಿತು. ಸೀರೆ ಉಡುಪನ್ನು ಅವರ ಭವ್ಯಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಆಗಿನಕಾಲದಲ್ಲಿ ಕೇರಳ ಮುಂತಾದ ರಾಜ್ಯಗಳಲ್ಲಿ ಸೀರೆ ಉಡುವ ಪರಂಪರೆ ಇರಲಿಲ್ಲ. ಹಾಗಾಗಿ, ಸೀರೆಉಡುಪನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಬಕಿಂಗ್ ಹ್ಯಾಮ್ ಡ್ಯೂಕರ, ಎತ್ತರದ ನಿಲುವಿನ ತೈಲಚಿತ್ರವನ್ನು ಬರೆದುಕೊಟ್ಟಿದ್ದರು. ಅದನ್ನು ಮದ್ರಾಸ್ ಸರ್ಕಾರ, ತಮ್ಮ ಆಫೀಸಿನ ಮುಖ್ಯದ್ವಾರದಮುಂದೆ ಪ್ರದರ್ಶಿಸಿದ್ದರು.

೧೮೭೭ ರಲ್ಲಿ, ಮದ್ರಾಸ್ ಲಲಿತಕಲಾ ಅಕ್ಯಾಡಮಿಯವರು ಪ್ರಸ್ತುತಪಡಿಸಿದ, ವಸ್ತು ಪ್ರದರ್ಶನದಲ್ಲಿ, ರವಿವರ್ಮರ, " ವೀಣೆನುಡಿಸುವ ತಮಿಳು ಮಹಿಳೆ" ಎಂಬ ತೈಲಚಿತ್ರದ ಪ್ರದರ್ಶನವಾಗಿತ್ತು. ದುಶ್ಯಂತನಿಗೆ ಶಕುಂತಳೆ ಬರೆಯುತ್ತಿರುವ ಪ್ರೇಮ-ಪತ್ರ,ದ ತೈಲಚಿತ್ರಕ್ಕೆ ಬಹುಮಾನ ದೊರೆಯಿತು.

ಒಮ್ಮೆ ಆಗಿನ ಬ್ರಿಟಿಷ್ ಗವರ್ನರ್, ತಿರುವನಂತಪುರದ ಅರಮನೆಗೆ ಬಂದವರು, ನೇರವಾಗಿ ಶಕುಂತಲ, ತೈಲಚಿತ್ರವನ್ನು ನೋಡಲು ಹೋದರು. ಅಲ್ಲೇ ನಿಂತಿದ್ದರೂ ಗವರ್ನರ್ ಸಾಹೇಬರು ಆಯಿಲ್ಯಂರವರನ್ನು ವಿಚಾರಿಸದೇ ಹೋದ ಘಟನೆಯಿಂದ ರಾಜರು ತತ್ತರಿಸಿದರು. ಆಯಿಲ್ಯಂ ತಿರುನಾಳ್ ರವರಿಗೆ ಅವಮಾನವಾಗಿ, ಮುಖಭಂಗವಾಯಿತು. ಕೂಡಲೇ ರವಿವರ್ಮರನ್ನು ಅರಮನೆಯಿಂದ ವಜಾ ಮಾಡಿದರು.[೧೩] ೧೮೮೦ ರಲ್ಲಿ ಆಯಿಲ್ಯಂ ತಿರುನಾಳ್ ತೀರಿಕೊಂಡಮೇಲೆ ಹೊಸರಾಜ, ವಿಶಾಖಂ ತಿರು ಆಯಿಲ್ಯರು, ರವಿವರ್ಮರನ್ನು ಪುನಃ ಬರಮಾಡಿಕೊಂಡು ಸನ್ಮಾನಿಸಿದರು.

ಬರೋಡ ಮಹಾರಾಜರ ಬಳಿ

ಬದಲಾಯಿಸಿ

೧೮೮೧ ರಲ್ಲಿ, ದಮಯಂತಿ, ಸೈರಂಧ್ರಿ, ಸರಸ್ವತಿ, ಲಕ್ಷ್ಮಿ, ಮೊಘಲ್ ಶೈಲಿ ಮತ್ತು ರಾಜಸ್ಥಾನಿ ಶೈಲಿಗಳನ್ನು ಸ್ವಲ್ಪದಿನ ಅಭ್ಯಾಸಮಾಡಿದರು. ೩ ವರ್ಷಗಳಕಾಲ ಬರೋಡದಲ್ಲೆ ಇದ್ದರು. ಆ ಸಮಯದಲ್ಲಿ ಸೀತಾ-ಪರಿತ್ಯಾಗದ ತೈಲಚಿತ್ರವನ್ನು ರಚಿಸಿ ಅರಸರಿಗೆ ಕೊಟ್ಟಿದ್ದರು. ಮಹಾರಾಜರಿಗೆ ಅತಿಯಾದ ಆನಂದವಾಯಿತು.[೧೪][೧೫] ಬರೋಡದ ನರೇಶರು ರವಿವರ್ಮರಿಗೆ, ಗೌರವಾರ್ಥವಾಗಿ, ೫೦,೦೦೦ ರೂಪಾಯಿಗಳನ್ನೂ, ಆನೆ, ಧನ-ಕನಕಗಳನ್ನು ಉಡುಗೊರೆಯಾಗಿ ಕೊಟ್ಟರು. ಸ್ವಲ್ಪ ದಿನ ತಮ್ಮ ತಾಯ್ನಾಡಿಗೆ ಹೋಗಿ ತಮ್ಮಕಲಾಭ್ಯಾಸದ ಮನೆಗುರುಗಳಾದ, ಅವರ ಮಾವನವರ ಪಾದಗಳಮೇಲೆ ೫,೦೦೦ ರೂಪಾಯಿಗಳನ್ನು ಸಮರ್ಪಿಸಿ, ನಮಸ್ಕರಿಸಿ, ತಮ್ಮ ಭಕ್ತಿಭಾವವನ್ನು ಪ್ರದರ್ಶಿಸಿದರು. ೧೮೮೭ ರಲ್ಲಿ ಅವರು ಒಂದು ವರ್ಷ ಊರುಬಿಟ್ಟು ಹೋಗಲಿಲ್ಲ.

೧೮೯೧ ರಲ್ಲಿ, ತಾವು ರಚಿಸಿದ್ದ ೧೪ ಪೇಂಟಿಂಗ್ ತೆಗೆದುಕೊಂಡು ರೈಲಿನಲ್ಲಿ ಬರೋಡಾಕ್ಕೆ ಹೋಗುತ್ತಿರುವಾಗ, ಮಧ್ಯೆ, ಬೊಂಬಾಯಿನಲ್ಲಿ ಉಳಿದುಕೊಂಡರು. ಊರಿನಿಂದ ಬಂದ ತಂತಿವಾರ್ತೆಯಿಂದ ವಿಚಲಿತಗೊಂಡರು. ಊರಿನಲ್ಲಿ ಅವರ ಪ್ರೀತಿಯ ಪತ್ನಿ ತೀರಿಕೊಂಡಿದ್ದರು. ಈ ವಾರ್ತೆ ಸಿಡಿಲಿನಂತೆ ಎರಗಿತು. ಕೂಡಲೇ ವಾಪಸ್ಸು ಹೋಗಿ ೧ ತಿಂಗಳು ಊರಿನಲ್ಲೇ ಇದ್ದು ಮತ್ತೆ ಬರೋಡಾ ಹೋದರು.

ಮೈಸೂರು‌ ಮಹಾರಾಜರ ಬಳಿ

ಬದಲಾಯಿಸಿ

ಕೃಷ್ಣರಾಜವೊಡೆಯರ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು. ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ಅಲಂಕೃತವಾಗಬೇಕೆಂದು ಮನವಿ ಮಾಡಿಕೊಂಡರು. ಅವರ ಇಷ್ಟದಂತೆ ರವಿವರ್ಮರು ೯ ಭವ್ಯ ಚಿತ್ರಗಳನ್ನು ರಚಿಚಿದರು.[೧೬][೧೭] ಜೊತೆಗೆ, ರಾಜಪರಿವಾರದ ಜನರ, ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟರು. ಪಾಂಡವರ ದ್ಯೂತ, ಕೌರವನ ಆಸ್ತಾನದಲ್ಲಿ ಪ್ರವೇಶಿಸಿದ ಶ್ರೀ ಕೃಷ್ಣ, ಬಂಧನಕ್ಕಾಗಿ ಸಾಗರದ ಮುಂದೆ, ಬಿಲ್ಲು ಹೂಡಿದ ಶ್ರೀ ರಾಮಚಂದ್ರ. ಇವು ರವಿವರ್ಮರು ರಚಿಸಿದ ಕೆಲವಾರು ಶ್ರೇಷ್ಟಚಿತ್ರಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

 
ಛತ್ರಪತಿ ಶಿವಾಜಿಯ ವರ್ಣಚಿತ್ರ

ಇಲ್ಲಿ ದಾಖಲಿಸಬಹುದಾದ ಮತ್ತೊಂದು ಭವ್ಯ ತೈಲಚಿತ್ರವನ್ನು ಬರೆದು ರವಿವರ್ಮರು ಅತ್ಯಂತ ಯಶಸ್ಸನ್ನು ಗಳಿಸಿದರು. ೩ ಜನ ನಂಬಿಕೆಯ ಅನುಚರರೊಡನೆ, ಆಶ್ವಾಸನೆ ಕೊಡಲು ಕೈಯಲ್ಲಿ ಭವಾನಿ ತಾಯಿ ಪ್ರಸಾದಿಸಿದ ಖಡ್ಗವನ್ನು ಝಳಪಿಸುತ್ತಾ ಶಿವನೇರಿದುರ್ಗದ ಬಳಿ, ಅರಿಭಯಂಕರನಾಗಿ ಕುದುರೆಯನ್ನೇರಿ ಬರುತ್ತಿರುವ ಛತ್ರಪತಿ ಶಿವಾಜಿ ಮಹಾರಾಜನ ಚಿತ್ರ. ಬಹುಶಃ ಬಹುತೇಕ ಮಹಾರಾಷ್ಟ್ರದವರ ಮನೆಗಳಲ್ಲಿ ಈ ವರ್ಣಚಿತ್ರವನ್ನು ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾರೆ. ರವಿವರ್ಮರು ಚಿತ್ರಿಸಿದ ವರ್ಣಚಿತ್ರಗಳು ಒಟ್ಟು ೮೯. ಅವೆಲ್ಲಾ ಅಚ್ಚಾಗಿ ಮದ್ಯಮವರ್ಗದ ಕಲಾಪ್ರೇಮಿಗಳಿಗೆ ಸಾಂತ್ವನ ನೀಡುವಲ್ಲಿ ಸಹಕಾರಿಯಾದವು.

ತಿರುವಾಂಕೂರು ಮಹಾರಾಜರ ಆಸ್ಥಾನದಲ್ಲಿ

ಬದಲಾಯಿಸಿ

ಆಸ್ತಾನ ಕಲಾವಿದರಾಗಿ ನೇಮಿತರಾಗಿದ್ದರು. ವಿರಾಟನ ಆಸ್ಥಾನ, ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ ಮತ್ತು ಮೋಹಿನಿ. ಪ್ರತಿ ವರ್ಣಚಿತ್ರಗಳಿಗೂ ತಲಾ ೩,೦೦೦ ರೂ ಪ್ರಶಸ್ತಿ ಕೊಡಲಾಯಿತು. "ಚಿತ್ರ ಆರ್ಟ್ ಗ್ಯಾಲರಿ" ಎಂಬ ಸಂಸ್ತೆಯನ್ನು ಸ್ಥಾಪಿಸಲಾಯಿತು. ಅಲ್ಲಿ ರವಿವರ್ಮರ ೧೪ ಭಾರಿ ಎತ್ತರದ ತೈಲಚಿತ್ರಗಳನ್ನು ಸ್ಥಾಪಿಸಲಾಗಿದೆ. ೧೦ ಸಣ್ಣಗಾತ್ರದ ಪೇಂಟಿಂಗ್ ಗಳಿವೆ.[೧೮] ೨ ಅಪೂರ್ಣ ಚಿತ್ರಗಳೂ ಇವೆ. ಬಹುಶಃ ರವಿವರ್ಮರ ಕೊನೆಯದಿನಗಳಲ್ಲಿ ಅವರ ಮಾನಸಿಕಬಲ ಸ್ವಲ್ಪ ಕಡಿಮೆಯಾಗಿತ್ತು. ಹೆಚ್ಚು ಹೊತ್ತು ಕುಳಿತು ಕೆಲಸಮಾಡುವುದು ಸಾಧ್ಯವಿರಲಿಲ್ಲ. ಅವರ ಸೋದರ, ರಾಜರಾಜ ವರ್ಮರು ತೀರಿಕೊಂಡಮೇಲೆ ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗಿತ್ತು.[೧೯][೨೦] ಆರೋಗ್ಯವೂ ಸರಿಯಾಗಿರದೆ ಖಂಡಾಲ ಲೋನಾವಲಗಳಲ್ಲಿ ಸ್ವಲ್ಪದಿನ ಇದ್ದು ಸುಧಾರಿಸಿಕೊಡರು. ಇದೇ ಸಮಯದಲ್ಲಿ ಹೈದರಾಬಾದಿನ ರಾಜಾ ದೀನ ದಯಳರ ಒತ್ತಾಯಾಕ್ಕೆ ಮಣಿದು ಅಲ್ಲಿಗೆ ಹೋಗಿ, ೨ ತಿಂಗಳಿದ್ದು ವರ್ಣಚಿತ್ರಗಳನ್ನು ರಚಿಸಿಕೊಟ್ಟುಬಂದರು.[೨೧] ೧೯೦೬ ರಲ್ಲಿ ತಮ್ಮ ೫೭ ನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು.

ರವಿವರ್ಮರ ಚಿತ್ರಕಲಾ ಮುದ್ರಣಾಲಯ

ಬದಲಾಯಿಸಿ

ಸಾಮಾನ್ಯ ಜನರಿಗೆ ತೈಲಚಿತ್ರಗಳನ್ನು ಕೊಳ್ಳುವುದು ಸಾಧ್ಯವಿಲ್ಲದಮಾತು. ಅದಕ್ಕಾಗಿ ರವಿವರ್ಮರು, ಒಬ್ಬ ಪಾಲುದಾರನ ಜೊತೆಗೆ, ಒಪ್ಪಂದ ಮಾಡಿಕೊಂಡು ಒಂದು ಮುದ್ರಣಾಲಯವನ್ನು ಬೊಂಬಾಯಿನಲ್ಲಿ ಸ್ಥಾಪಿಸಿದರು. ಅದನ್ನು ನೋಡಿಕೊಳ್ಳಲು ಸದಾ ಅವರು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಪಾಲುದಾರ, ಹಣವನ್ನೆಲ್ಲಾ ಲಪಟಾಯಿಸಿದ್ದ. ೧೮೯೪ ರಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ತಮ್ಮ ಮುದ್ರಣಾಲಯವನ್ನು ಮಾರುವ ಪರಿಸ್ಥಿತಿ ಬಂತು. ಅವರು ಮೊದಲು ಕಾರ್ಲಿ ಎಂಬ ಜಾಗಕ್ಕೆ ಸ್ಥಳಾಂತರಿಸಿದರು. ಅಲ್ಲೂ ವ್ಯಾಪಾರ ಕುದುರದೆ, ಒಬ್ಬ ವಿದೇಶಿಗೆ ೨೫ ಸಾವಿರ ರೂಪಾಯಿಗಳಿಗೆ ಮಾರಿದರು.[೨೨]

 
೧೯೭೧ ರ ಭಾರತದ ಅಂಚೆಯಲ್ಲಿ ರವಿವರ್ಮ

ನಳ-ದಮಯಂತಿ, ಶಂತನು ಮತ್ತು ಮತ್ಸ್ಯಗಂಧಿ, ರಾಧಾ-ಮಾಧವ, ಶ್ರೀಕೃಷ್ಣ-ದೇವಕಿ, ಅರ್ಜುನ-ಸುಭದ್ರೆ, ದ್ರೌಪದಿ ವಸ್ತ್ರಾಪಹರಣ, ವಿಶ್ವಾಮಿತ್ರ-ಮೇನಕೆ, ಹರಿಶ್ಚಂದ್ರ-ತಾರಾಮತಿ, ಸೀತಾ-ಸ್ವಯಂವರ, ಭರತ, ಸಿಂಹದ ಮರಿಯಜೊತೆ, ಶ್ರೀಕೃಷ್ಣನ ಜನನ, ಕೀಚಕ ಸೈರಂಧ್ರಿ, ಕಂಸಮಾಯೆ, ಶಂತನು ಮತ್ತು ಗಂಗೆ, ಮುಂತಾದ ಒಟ್ಟು ೧೪ ತೈಲಚಿತ್ರಗಳು.

ಅಮೆರಿಕದ ಚಿಕಾಗೋನಲ್ಲಿ ನಡೆದ ' ವಸ್ತುಕಲಾ ಪ್ರದರ್ಶನ' ಕ್ಕೆ ೧೦ ವರ್ಣಚಿತ್ರಗಳನ್ನು ಭಾರತದಿಂದ ಕಳಿಸಲಾಗಿತ್ತು. ಅದು ರವಿವರ್ಮರದೇ ಎಂದು ಹೇಳಬೇಕಾಗಿಲ್ಲ.[೨೩] ಬರೋಡಾ ಮಹಾರಾಜರು ಕಳಿಸುವ ಏರ್ಪಾಡುಮಾಡಿದ್ದರು.[೨೪] ೨ ಪ್ರಶಸ್ತಿಗಳನ್ನು ರವಿವರ್ಮರು ಗಿಟ್ಟಿಸಿದ್ದರು. ಸ್ವಾಮಿ ವಿವೇಕಾನಂದರು ಆಗ ಅಮೆರಿಕೆಯಲ್ಲಿದ್ದರು. ರವಿವರ್ಮರ ತೈಲ ವರ್ಣಚಿತ್ರಗಳನ್ನು ನೋಡಿ ವಿಸ್ಮಯರಾದ ಅವರು, ಇದನ್ನು ಬರೆದ ಮಹಾಕಲಾಕಾರನನ್ನು ಭೇಟಿಮಾಡುವ ಉತ್ಸುಕತೆ ತೋರಿಸಿದ್ದರು. ಒಮ್ಮೆ ಬೊಂಬಾಯಿಗೆ ಬಂದಾಗ, ರವಿವರ್ಮರ ಮನೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರಂತೆ.

ರಾಜಾ ರವಿವರ್ಮರು ತಮ್ಮ ೫೮ ನೆಯ ಸಣ್ಣ ಪ್ರಾಯದಲ್ಲೇ ೨, ಅಕ್ಟೋಬರ್, ೧೯೦೬ ರಲ್ಲಿ ನಿಧನರಾದರು. ಭಾರತ ಸರ್ಕಾರ ಅವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಹೊರಡಿಸಿತ್ತು.[೨೫]


ಛಾಯಾಂಕಣ

ಬದಲಾಯಿಸಿ

ಬಾಹ್ಯಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Joshi, Om Prakash (1985). Sociology of Indian art. Rawat Publications. p. 40.
  2. K.R.N. Swamy (28 April 2002). "A great painter, no doubt, but controversial too". Spectrum–The Tribune. Archived from the original on 28 October 2014. Retrieved 28 October 2014.
  3. Nagam Aiya, The Travancore State Manual
  4. "Restoring works of art". The Hindu. 2005-07-19. Archived from the original on 18 April 2015. Retrieved 18 April 2015.
  5. Lord Padmanabha and his dasas Archived 8 February 2023 ವೇಬ್ಯಾಕ್ ಮೆಷಿನ್ ನಲ್ಲಿ. indianculture.gov.in. Retrieved 31 July 2021
  6. PAL, DEEPANJANA (2011). THE PAINTER. Random House India. ISBN 9788184002614. Retrieved 18 April 2015.
  7. "The Diary of C. Rajaraja Varma"
  8. "The Sunday Tribune - Spectrum - Article". Archived from the original on 7 February 2023. Retrieved 28 July 2021.
  9. Mitter, Partha (1994). Art and Nationalism in Colonial India, 1850-1922: Occidental Orientations. Cambridge University Press. pp. 69, 193, 208. ISBN 978-0-52144-354-8.
  10. Kilimanoor Chandran, Ravi Varmayum Chitrakalayum(in Malayalam), Department of Culture, Kerala, 1998.
  11. Vadodara, Lakshmi Vilas Palace. "Raja Ravi Varma Paintings, Vadodara". www.historyofvadodara.in. Archived from the original on 24 September 2015. Retrieved 24 January 2015.
  12. Vadodara, Lakshmi Vilas Palace. "Raja Ravi Varma Paintings, Vadodara". www.historyofvadodara.in. Archived from the original on 24 September 2015. Retrieved 24 January 2015.
  13. Davis, Richard (2012). Gods in Print: Masterpiece of India's Mythological Art. San Rafael, California: Mandala Publishing. p. 83. ISBN 9781608871094.
  14. "Jayant Parikh got Raja Ravi Varma Award Ref. by Mctears". www.mctears.co.uk (in ಇಂಗ್ಲಿಷ್). Archived from the original on 5 April 2023. Retrieved 25 March 2023.
  15. "Jayant Parikh - Awards". www.jayantparikh.com. Archived from the original on 25 November 2022. Retrieved 25 March 2023.
  16. "Gaekwads' Two-day Arts Festival In Ranjitsinh's Memory | Vadodara News - Times of India". The Times of India (in ಇಂಗ್ಲಿಷ್). 4 March 2022. Archived from the original on 25 November 2022. Retrieved 25 March 2023.
  17. "Event mentioned in Gujarati Language News Paper". Archived from the original on 8 February 2023. Retrieved 25 March 2023.
  18. "Raja Ravi Varma". Google Arts & Culture (in ಇಂಗ್ಲಿಷ್). Archived from the original on 6 April 2023. Retrieved 2020-04-28.
  19. Parimoo, Ratan (16 November 1975). "Kitsch: The Vulgarisation of Art". The Times of India. Archived from the original on 22 August 2019. Retrieved 22 August 2019.
  20. Parimoo, Ratan. "Pop Art with Religious Motifs" (PDF). Asia Art Archive. Archived (PDF) from the original on 3 March 2022. Retrieved 22 August 2019.
  21. Asian Art Department. "Unity in Diversity". Art Gallery of New South Wales. Archived from the original on 7 February 2023. Retrieved 22 August 2019.
  22. Kapur, Geeta (2000). What Was Modernism: Essays on Contemporary Cultural Practice in India (PDF). New Delhi: Tulika. p. 147. ISBN 81-89487-24-8. Archived (PDF) from the original on 22 August 2019. Retrieved 22 August 2019.
  23. Sheikh, Gulam Mohammed. "Ravi Varma in Baroda" (PDF). Asia Art Archive. Archived (PDF) from the original on 7 February 2023. Retrieved 22 August 2019.
  24. "Raja Ravi Varma Award". The Hindu. 11 February 2016. Archived from the original on 7 February 2023. Retrieved 4 August 2018.
  25. "Gazetteer of Planetary Nomenclature". Planetarynames.we.ugs.gov. Archived from the original on 7 February 2023. Retrieved 14 March 2014.