ಪ್ರತಿಮಾದೇವಿ ಕನ್ನಡ ಚಿತ್ರರಂಗ (ಏಪ್ರಿಲ್ ೯,೧೯೩೨) ಮತ್ತು ರಂಗಭೂಮಿಯ ಪ್ರಸಿದ್ಧ ನಾಯಕಿಯರಲ್ಲಿ ಒಬ್ಬರು. ಇವರು ೧೯೪೭ ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಬಾಕ್ಸ್ ಆಫೀಸ್ನಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರ ಜಗನ್ಮೋಹಿನಿ (೧೯೫೧) ನಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು.[೨]

ಪ್ರತಿಮಾದೇವಿ
ಜನ್ಮನಾಮ೯ ಎಪ್ರಿಲ್ ೧೯೩೨[೧]
ವೃತ್ತಿನಟಿ,
ಸಕ್ರಿಯ ವರ್ಷಗಳು೧೯೪೭–೧೯೮೩
ಬಾಳ ಸಂಗಾತಿ(ಗಳು)ಶಂಕರ್ ಸಿಂಗ್

ಕಲಾಕುಟುಂಬಸಂಪಾದಿಸಿ

ಪ್ರತಿಮಾದೇವಿ ಅವರು ಜನಿಸಿದ್ದು ಫೆಬ್ರುವರಿ ೯, ೧೯೩೨ರ ವರ್ಷದಲ್ಲಿ. ಪ್ರತಿಮಾದೇವಿಯವರು ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ಮಾಪಕ ನಿರ್ದೇಶಕ ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರ ಪತ್ನಿ.. ಕನ್ನಡದ ಪ್ರಸಿದ್ಧ ನಿರ್ಮಾಪಕ - ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್, ಪ್ರಸಿದ್ಧ ನಟಿ ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪ್ರತಿಮಾದೇವಿ ಅವರ ಮಕ್ಕಳು. ಅವರ ಮೊಮ್ಮಕ್ಕಳು ಸಹಾ ಚಿತ್ರರಂಗದಲ್ಲಿ ಭಾಗವಹಿಸಿದ್ದಾರೆ. ಹೀಗೆ ಅವರದ್ದು ಸಂಪೂರ್ಣವಾದ ಕಲಾ ಕುಟುಂಬ.

“ಅವಕಾಶ ಸಿಕ್ಕಿದರೆ ಈಗಲೂ ಅಭಿನಯಿಸಲು ಸಿದ್ಧ. ನಟನೆ ಎಂದರೆ ಇವತ್ತಿಗೂ ಪ್ರಾಣ” ಎನ್ನುವ ಅವರು ರಮೇಶ್ ಅರವಿಂದ್ ಇತ್ತೀಚನ ವರ್ಷದಲ್ಲಿ ನಿರ್ದೇಶಿಸಿದ ರಾಮ, ಶ್ಯಾಮಾ, ಭಾಮಾದಲ್ಲಿ ನಟಿಸಿದ್ದರು. ಮೈಸೂರಿನಲ್ಲಿದ್ದಾಗ ಈಗಲೂ ಕುಕ್ಕರಹಳ್ಳಿ ಕೆರೆ ಏರಿಯ ಮೇಲೆ ಬೆಳಗಿನ ವೇಳೆಯ ಚುರುಕು ನಡುಗೆಯಲ್ಲಿ ಅವರನ್ನು ಕಾಣಬಹುದಾಗಿದೆ. ಎಂಭತ್ತೊಂದರ ವಯಸ್ಸಿನವರೆಂದು ನೀವು ಅವರನ್ನು ಹೇಳಲೇ ಆಗುವುದಿಲ್ಲ. ಅಷ್ಟು ಚುರುಕುತನ ಇಂದೂ ಅವರಲ್ಲಿದೆ.

ಅದೇ ಆ ಸ್ನಿಗ್ಧ ಸೌಂದರ್ಯ. ಮುಗ್ಧ ಮುಖಭಾವ. ಹಾಲುಬಿಳುಪು ತ್ವಚೆ ಸುಕ್ಕಿನ ಸೊಕ್ಕಿಗೆ ಬಾಡಿಲ್ಲ. ಮಾಜಿ ಅಭಿನೇತ್ರಿ ಎಂಬ ಹಮ್ಮು ಬಿಮ್ಮು ಇಲ್ಲದ ತಣ್ಣಗೆ ನಗು, ಆತ್ಮೀಯ ಮಾತು. "ನನ್ನನ್ನು ಬೆಳೆಸಿದವರು ಜನರೇ" ಎಂಬ ವಾಸ್ತವದ ಕೃತಜ್ಞತೆ ಅವರಲ್ಲಿ ಜೀವಂತವಾಗಿದೆ.

ರಂಗಭೂಮಿಯ ಗೀಳುಸಂಪಾದಿಸಿ

ನಲ್ವತ್ತು-ಐವತ್ತರ ದಶಕವೆಂದರೆ ರಂಗಭೂಮಿಯಲ್ಲಿ ಕಲಾವಿದರಾಗಿ ರೂಪುಗೊಂಡು ಚಿತ್ರರಂಗದಲ್ಲಿ ನೆಲೆನಿಲ್ಲುವುದು ಒಂದು ಸಂಪ್ರದಾಯವೇ ಆಗಿದ್ದ ಕಾಲ. ಪ್ರತಿಮಾದೇವಿ ಆ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ಅವರು ಎಂಟನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯ್ತು. ಏಳು-ಎಂಟನೇ ವಯಸ್ಸಿನಿಂದಲೂ ಅವರಿಗೆ ನಾಟಕದ ಹುಚ್ಚಿತ್ತು. “ಮನಸ್ಸಿನಲ್ಲಿ ಬಣ್ಣದ ಗೀಳು ತುಂಬಿರುವಾಗ ಓದು ತಲೆಗೆ ಹತ್ತೋದಾದ್ರೂ ಹ್ಯಾಗೆ ಆಲ್ವಾ?” ಎನ್ನುತ್ತಾರೆ ಪ್ರತಿಮಾದೇವಿ ಅವರು. ಆಗ ಅವರ ಹೆಸರು ಮೋಹಿನಿ ಎಂದಿತ್ತು. ಸಹಪಾಠಿಯಾಗಿದ್ದ ಪುಷ್ಪಾ ಅವರ ಸಂಗಾತಿ. ಈ ಈರ್ವರದು ತುಂಬಾ ಜನಪ್ರಿಯ ಜೋಡಿ. ಸಿನಿಮಾರಂಗ ಪ್ರವೇಶವಾದದ್ದು ಆಕಸ್ಮಿಕ. ಆಗ ಅವರ ತುಡಿತವೇನಿದ್ದರೂ ರಂಗಭೂಮಿ ಬಗ್ಗೆಯಷ್ಟೇ ಇತ್ತು. ‘ಮಂಗಮ್ಮನ ಶಪಥ’ ನಾಟಕದಲ್ಲಿ ವೈಜಯಂತಿ ಮಾಲಾ ಅವರ ತಾಯಿ ವಸುಂದರಾದೇವಿ ಅವರ ಅಭಿನಯ, ‘ಸತ್ಯವಾನ್ ಸಾವಿತ್ರಿ’ಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ನಟನೆ ಅಂದರೆ ಪ್ರತಿಮಾದೇವಿ ಅವರಿಗೆ ಅಚ್ಚುಮೆಚ್ಚಾಗಿತ್ತು. ಟಿಕೆಟ್ ಗೆ ಎರಡೂಕಾಲಾಣೆ ಹೇಗೋ ಹೊಂದಿಸಿ ತಮ್ಮ ಗೆಳತಿ ಪುಷ್ಪಾ ಜತೆ ಆ ನಾಟಕಗಳನ್ನು ಮತ್ತೆ ಮತ್ತೆ ನೋಡುತ್ತಿದ್ದರು. ಇದಕ್ಕಾಗಿ ಶಾಲೆಗೆ ಚಕ್ಕರ್ ಆಗುತ್ತಿತ್ತು. ಹೀಗೆ ಅವರ ಓದು ಮೊಟಕುಗೊಂಡಿತು.

ಪ್ರತಿಮಾದೇವಿಯವರು ವಿವಿಧ ನಾಟಕ ಕಂಪೆನಿಗಳಲ್ಲಿ ನಟಿಸಿ ಉತ್ತಮ ಕಲಾವಿದೆ ಎಂದು ಹೆಸರು ಗಳಿಸಿಕೊಂಡಿದ್ದರ ಜೊತೆಗೆ ಅಪ್ರತಿಮ ಸುಂದರಿಯೂ ಆಗಿದ್ದರು. ಜತೆಗೆ ಪ್ರತಿಭೆಯ ಗನಿಯೂ ಆಗಿದ್ದರು. ಅವರ ನಿಷ್ಠೆ ಸದಾ ಕಾಯಕದೆಡೆಗೆ ಇತ್ತು. ಇದೇ ಗುಣಗಳೇ ಅವರನ್ನು ಬೆಳೆಸಿದವು.

ವಯಕ್ತಿಕ ಜೀವನಸಂಪಾದಿಸಿ

ಅವರು ನಿರ್ದೇಶಕ ಶಂಕರ್ ಸಿಂಗ್ ಅವರನ್ನು ವಿವಾಹವಾದರು. ಅವರ ಮಗ ರಾಜೇಂದ್ರ ಸಿಂಗ್ ಬಾಬು ಚಲನಚಿತ್ರ ನಿರ್ದೇಶಕರು ಮತ್ತು ಮಗಳು ವಿಜಯಲಕ್ಷ್ಮಿ ಸಿಂಗ್ ನಟಿ ಮತ್ತು ನಿರ್ಮಾಪಕಿ.[೩]

ಮಹಾತ್ಮ ಪಿಕ್ಚರ್ಸ್ಸಂಪಾದಿಸಿ

ಪ್ರತಿಮಾ ದೇವಿಯವರು ಕನ್ನಡ ಚಿತ್ರರಂಗದಲ್ಲಿ ‘ಸಿಂಗ್ ಠಾಕೂರ್’ ಎಂದೇ ಹೆಸರಾಗಿದ್ದ ಶಂಕರ್ ಸಿಂಗ್ ಅವರನ್ನು ಪ್ರೇಮಿಸಿ ವಿವಾಹವಾದರು. ಅದು ಸಾಧ್ಯವಾದ ಬಗೆಯನ್ನು ಅವರು ವಿವರಿಸುವುದು ಹೀಗೆ- “ನಲವತ್ತನೇ ದಶಕದ ಕೊನೆಯ ದಿನಗಳು ಎಂದು ನೆನಪು. ನನಗೆ ರಾಧೆಯ ಪಾತ್ರ. ಬಹಳ ಶ್ರದ್ಧೆಯಿಂದ ಮಾಡುತ್ತಿದ್ದೆ. ಚಿತ್ರೀಕರಣ ಮುಂದುವರೆಯುತ್ತಿದ್ದಂತೆ ಹಣದ ಮುಗ್ಗಟ್ಟು ಎದುರಾಯಿತು. ಶೂಟಿಂಗ್ ಕುಂಟುತ್ತಾ ಸಾಗಲಾರಂಭಿಸಿತು. ಕೊನೆಗೆ ಚಿತ್ರೀಕರಣವೇ ಸ್ಥಗಿತವಾಯಿತು. ಆದರೆ ತಮ್ಮ ಮಹತ್ವಾಕಾಂಕ್ಷೆಯ ಚಿತ್ರವೊಂದು ಆರ್ಥಿಕ ಮುಗ್ಗಟ್ಟಿಗೆ ಬಲಿಯಾಗುವುದು ‘ಕೃಷ್ಣಲೀಲಾ’ದ ರಾಜು ಅವರಿಗೆ ಬೇಕಾಗಿರಲಿಲ್ಲ. ಹಾಗಾಗಿ ಸಿನಿಮಾದ ಮೂಲಪ್ರತಿಯನ್ನು ಯಥಾವತ್ ಮಾರಾಟ ಮಾಡುವ ಇರಾದೆಯನ್ನು ಅವರು ವ್ಯಕ್ತಪಡಿಸಿದರು. ಆಗ ಸ್ಯಾಂಡಲ್ ವುಡ್ ದೊಡ್ಡಣ್ಣನಂತಿದ್ದ ‘ಮಹಾತ್ಮ ಪ್ರೊಡಕ್ಷನ್’ (ಶಂಕರ್ ಸಿಂಗ್) ಜತೆ ಖರೀದಿ ಮಾತುಕತೆಯಾಯಿತು. ಖರೀದಿಯೂ ಆಯಿತು. ಚಿತ್ರತಂಡಕ್ಕೆ ಮರುಜೀವ ಸಿಕ್ಕಂತಾಯಿತು. ನಾನಂತೂ ರಾಧೆಯ ಪಾತ್ರಕ್ಕೊಸ್ಕರ ನೃತ್ಯಾಭ್ಯಾಸ ಮಾಡಿದ್ದು ಅಷ್ಟಿಷ್ಟಲ್ಲ. ಆದರೆ ಅಲ್ಲೊಂದು ಎಡವಟ್ಟಾಯಿತು. ಚಿತ್ರದ ನೃತ್ಯ ನಿರ್ದೇಶಕರಾಗಿದ್ದ ಸೋಹನ್ ಲಾಲ್ ಅವರು ರಾಧೆಯ ಪಾತ್ರವನ್ನು ಕಾಂತಾ ಅವರಿಗೆ ಕೊಡಿಸುವಂತೆ ಪಟ್ಟುಹಿಡಿದರು. ಹೀಗಾಗಿ ನಾನು ಒಲ್ಲದ ಮನಸ್ಸಿನಿಂದಲೇ ಗೋಪಿಕಾ ಪಾತ್ರದಲ್ಲಿ ನಟಿಸಬೇಕಾಯಿತು. ಹೀಗೆ, ‘ಕೃಷ್ಣಲೀಲಾ’ದ ಸಂಕಷ್ಟದ ದಿನಗಳಲ್ಲಿ ಶಂಕರ್ ಸಿಂಗ್ ಅವರು ಚಿತ್ರತಂಡಕ್ಕೆ ಆಸರೆಯಾದರು. ಮಾತ್ರವಲ್ಲ. ನಾವಿಬ್ಬರೂ ಆತ್ಮೀಯರಾಗಿಬಿಟ್ಟೆವು. ‘ರಾಮದಾಸ್’ ಚಿತ್ರದ ವೇಳೆಗೆ ನಮ್ಮ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಕೆಲವೇ ಸಮಯದಲ್ಲಿ ಮದುವೆಯಾದೆವು”

ಈ ಪ್ರೇಮವಿವಾಹ ಪ್ರತಿಮಾದೇವಿಯವರ ಚಿತ್ರ ಬದುಕಿನ ಹಾದಿಯಲ್ಲಿಯೂ ಬದಲಾವಣೆ ತಂದಿತು. ಅಲ್ಲಿಯವರೆಗೆ ಇತರ ಬ್ಯಾನರುಗಳ ಗಂಧರ್ವಕನ್ಯೆ, ದೈವಸಂಕಲ್ಪದಂತಹ ಬೆರಳೆಣಿಕೆಯ ಚಿತ್ರಗಳನ್ನು ಬಿಟ್ಟರೆ ಪ್ರತಿಮಾ ದೇವಿ ಅವರು, ಸಿಂಗ್ ಅವರ ಮಹಾತ್ಮ ಪಿಕ್ಚರ್ಸ್ ಸಂಸ್ಥೆಗಷ್ಟೇ ಸೀಮಿತಗೊಂಡರು. ಆ ಕಾಲಕ್ಕೆ ಮಹಾತ್ಮ ಪಿಕ್ಚರ್ಸ್ ಹೆಮ್ಮೆಯ ಸಂಸ್ಥೆಯಾಗಿತ್ತು. “ಮಹಾತ್ಮ ಪಿಕ್ಚರ್ಸ್ ಅಂದರೆ ಕನ್ನಡ ಚಿತ್ರರಂಗದ ತವರುಮನೆ ಇದ್ದಂತೆ. ಅದರಲ್ಲಿ ನಟಿಸುವುದು ಅದೃಷ್ಟವೇ ಸರಿ” – ಇದು ಅಂದಿನ ಕಾಲದ ‘ಶ್ರೀನಿವಾಸ ಕಲ್ಯಾಣ’ದಲ್ಲಿ ಪುಟ್ಟ ಪಾತ್ರ ಮಾಡಿದ್ದ ಡಾ. ರಾಜ್ ಕುಮಾರ್ ಅವರು ಹೇಳುತ್ತಿದ್ದ ಮಾತು,

ಹಲವಾರು ಚಿತ್ರಗಳಲ್ಲಿಸಂಪಾದಿಸಿ

ಕೃಷ್ಣಲೀಲಾ, ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಮುಟ್ಟಿದ್ದೆಲ್ಲಾ ಚೀನಾ, ಚಂಚಲಕುಮಾರಿ, ಧರ್ಮಸ್ಥಳ ಮಹಾತ್ಮೆ, ಪ್ರಭುಲಿಂಗ ಲೀಲೆಮಂಗಳ ಸೂತ್ರ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸುಮಾರು ಅರವತ್ತೈದು ಚಿತ್ರಗಳಲ್ಲಿ ಪ್ರತಿಮಾದೆವಿಯವರು ನಟಿಸಿದ್ದಾರೆ. ಜಗನ್ಮೋಹಿನಿ, ವರದಕ್ಷಿಣೆ, ಧರ್ಮಸ್ಥಳ ಮಹಾತ್ಮೆಯಲ್ಲಿನ ಅಭಿನಯಕ್ಕೆ ಪ್ರತಿಮಾದೇವಿಯವರು ಅಪಾರ ಪ್ರಸಿದ್ಧಿ ಗಳಿಸಿದ್ದರು.

‘ನಾನು ಅಭಿನಯಿಸಿದ ಕೆಲ ಹಳೆಯ ಸಿನಿಮಾಗಳ ಪ್ರತಿ ಈಗ ಲಭ್ಯವಿಲ್ಲ. ಅವುಗಳ ಛಾಯಾಚಿತ್ರಗಳೂ ಇಲ್ಲ. ಸ್ಯಾಂಡಲ್ ವುಡ್ ಗೆ ತಂತ್ರಜ್ಞಾನದ ಟಚ್ ಅಪ್ ಸಿಕ್ಕಿರದ ದಿನಗಳವು. ಹಾಗಾಗಿ ಫಿಲಂಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೆಂದರೆ ಹರಸಾಹಸ. ಲಭ್ಯವಿದ್ದ ಕೆಲವು ಪ್ರತಿಗಳು ಕೆಲವು ವರ್ಷಗಳ ಹಿಂದೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಶವಾದವು. ಮೊಮ್ಮಕ್ಕಳು, ಹಿತೈಷಿಗಳು ನಿಮ್ಮ ಹಳೆಯ ಚಿತ್ರಗಳನ್ನು ತೋರಿಸಿ ಎಂದು ಕೇಳ್ತಾರೆ. ಆದರೆ ಒಂದೂ ಇಲ್ಲ. ನನಗಂತೂ ಇದು ದೊಡ್ಡ ಬೇಸರದ ಸಂಗತಿ’ ಎನ್ನುತಾರೆ ಪ್ರತಿಮಾದೇವಿ.

ಮಕ್ಕಳ ಸಾಧನೆಸಂಪಾದಿಸಿ

“ಮಕ್ಕಳಾದ ಎಸ್. ವಿ. ರಾಜೇಂದ್ರಸಿಂಗ್ (ಬಾಬು) ಮತ್ತು ವಿಜಯಲಕ್ಷ್ಮಿ ಸಿಂಗ್ ತಂದೆ ನಡೆದ ಹಾದಿಯಲ್ಲಿ ಸಾಗಿದ್ದಾರೆ. ಅವರ ಸಾಧನೆ ನೋಡಿ ಖುಷಿಯಾಗುತ್ತದೆ. ಅವರು ಇನ್ನೂ ಬೆಳೆಯಬೇಕು ಎಂಬುದು ನನ್ನಾಸೆ” ಎನ್ನುತ್ತಾರೆ ಪ್ರತಿಮಾದೇವಿಯವರು.

ಪ್ರತಿಮಾದೇವಿ ಅಭಿನಯದ ಚಿತ್ರಗಳುಸಂಪಾದಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೪೭ ಕೃಷ್ಣಲೀಲಾ ಸಿ.ವಿ.ರಾಜು ಕೆಂಪರಾಜ್ ಅರಸ್, ಮೇರಿ ರಾಯ್
೧೯೪೭ ಮಹಾನಂದ ಟಿ.ಜಾನಕಿರಾಮ್ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್
೧೯೪೯ ನಾಗಕನ್ನಿಕ ಜಿ.ವಿಶ್ವನಾಥನ್ ಜಯಶ್ರೀ
೧೯೫೦ ಶಿವ ಪಾರ್ವತಿ ಟಿ.ಜಾನಕಿರಾಮ್ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್
೧೯೫೧ ಜಗನ್ಮೋಹಿನಿ ಡಿ.ಶಂಕರ್ ಸಿಂಗ್ ಹರಿಣಿ
೧೯೫೨ ಶ್ರೀ ಶ್ರೀನಿವಾಸ ಕಲ್ಯಾಣ ಡಿ.ಶಂಕರ್ ಸಿಂಗ್, ಬಿ.ವಿಠ್ಠಲಾಚಾರ್ಯ
೧೯೫೩ ಚಂಚಲ ಕುಮಾರಿ ಡಿ.ಶಂಕರ್ ಸಿಂಗ್ ಇಂದುಶೇಖರ್
೧೯೫೩ ದಲ್ಲಾಳಿ ಡಿ.ಶಂಕರ್ ಸಿಂಗ್ ಸಂಪತ್, ಹರಿಣಿ
೧೯೫೪ ಮಾಡಿದ್ದುಣ್ಣೋ ಮಹಾರಾಯ ಡಿ.ಶಂಕರ್ ಸಿಂಗ್ ಸಂಪತ್, ಹರಿಣಿ
೧೯೫೪ ಮುಟ್ಟಿದ್ದೆಲ್ಲ ಚಿನ್ನ ಡಿ.ಶಂಕರ್ ಸಿಂಗ್ ಹರಿಣಿ, ಬಾಲಕೃಷ್ಣ
೧೯೫೫ ಶಿವಶರಣೆ ನಂಬಿಯಕ್ಕ ಡಿ.ಶಂಕರ್ ಸಿಂಗ್ ಕೆ.ಎಸ್.ಅಶ್ವಥ್
೧೯೫೭ ಪ್ರಭುಲಿಂಗ ಲೀಲೆ ಶ್ರೀ ಮಂಜುನಾಥ ಕೆ.ಎಸ್.ಅಶ್ವಥ್, ಹರಿಣಿ
೧೯೫೮ ಮಂಗಳ ಸೂತ್ರ ಡಿ.ಶಂಕರ್ ಸಿಂಗ್ ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ
೧೯೬೦ ಶಿವಲಿಂಗ ಸಾಕ್ಷಿ ಡಿ.ಶಂಕರ್ ಸಿಂಗ್ ಉದಯಕುಮಾರ್
೧೯೬೧ ಭಕ್ತ ಚೇತ ಎಂ.ಬಿ.ಗಣೇಶ್ ಸಿಂಗ್ ರಾಜ್ ಕುಮಾರ್
೧೯೬೧ ರಾಜ ಸತ್ಯವೃತ ಡಿ.ಶಂಕರ್ ಸಿಂಗ್ ಉದಯಕುಮಾರ್
೧೯೬೨ ಶ್ರೀ ಧರ್ಮಸ್ಥಳ ಮಹಾತ್ಮೆ ಡಿ.ಶಂಕರ್ ಸಿಂಗ್ ಡಿಕ್ಕಿ ಮಾಧವ್ ರಾವ್
೧೯೬೩ ಪಾಲಿಗೆ ಬಂದದ್ದು ಪಂಚಾಮೃತ ಎಂ.ಬಿ.ಗಣೇಶ್ ಸಿಂಗ್ ಡಿಕ್ಕಿ ಮಾಧವ್ ರಾವ್
೧೯೬೫ ಪಾತಾಳ ಮೋಹಿನಿ ಎಸ್.ಎನ್.ಸಿಂಗ್ ಬಿ.ಎಂ.ವೆಂಕಟೇಶ್, ವಾಣಿಶ್ರೀ
೧೯೮೦ ನಾರದ ವಿಜಯ ಸಿದ್ದಲಿಂಗಯ್ಯ ಅನಂತ್ ನಾಗ್, ಪದ್ಮಪ್ರಿಯ
೧೯೮೧ ಭಾರಿ ಭರ್ಜರಿ ಬೇಟೆ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಂಬರೀಶ್, ಶಂಕರ್ ನಾಗ್
೧೯೮೨ ಟೋನಿ ಭಾರ್ಗವ ಅಂಬರೀಶ್, ಶ್ರೀನಾಥ್
೧೯೮೩ ಧರಣಿ ಮಂಡಲ ಮಧ್ಯದೊಳಗೆ ಪುಟ್ಟಣ್ಣ ಕಣಗಾಲ್ ಶ್ರೀನಾಥ್, ಜೈಜಗದೀಶ್, ಪದ್ಮಾವಾಸಂತಿ
೨೦೦೨ ಲಾ ಅಂಡ್ ಆರ್ಡರ್ ಶಿವಮಣಿ ಸಾಯಿಕುಮಾರ್, ಶರತ್ ಬಾಬು
೨೦೦೫ ರಾಮ ಶ್ಯಾಮ ಭಾಮ ರಮೇಶ್ ಅರವಿಂದ್ ಕಮಲ್ ಹಾಸನ್, ರಮೇಶ್ ಅರವಿಂದ್, ಊರ್ವಶಿ, ಶ್ರುತಿ

ಮಾಹಿತಿ ಕೃಪೆಸಂಪಾದಿಸಿ

'ಮಯೂರ' ಮಾಸಪತ್ರಿಕೆಯಲ್ಲಿ ರೋಹಿಣಿ ಮುಂಡಾಜೆ ಅವರ ಲೇಖನ ಮತ್ತು ಪ್ರತಿಮಾ ದೇವಿ ಅವರ ಬೆಳ್ಳಿ ಹೆಜ್ಜೆ ಕಾರ್ಯಕ್ರಮ ವರದಿ ಮುಂತಾದವು.

ಉಲ್ಲೇಖಗಳುಸಂಪಾದಿಸಿ

  1. "Prathima Devi : Kannada Actress Age, Movies, Biography". chiloka.com. Retrieved 19 March 2020.
  2. "An evening with Jaganmohini". The Hindu (in ಇಂಗ್ಲಿಷ್). 11 June 2011. Retrieved 19 March 2020.
  3. "Sepia stories at 60". The Hindu (in ಇಂಗ್ಲಿಷ್). 16 March 2007. Retrieved 19 March 2020.