ಸಿದ್ದಲಿಂಗಯ್ಯ
ಸಿದ್ದಲಿಂಗಯ್ಯ(೧೫-೧೨-೧೯೩೬ರಿಂದ ೧೨-೦೩-೨೦೧೫) ಕನ್ನಡ ಚಿತ್ರರಂಗದ ಮಹತ್ವದ ಚಿತ್ರನಿರ್ದೇಶಕರಲ್ಲೊಬ್ಬರು. ೧೯೬೯ರಲ್ಲಿ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪರಿಚಿತರಾದ ಸಿದ್ದಲಿಂಗಯ್ಯ ಅವರು ಬಂಗಾರದ ಮನುಷ್ಯ, ದೂರದ ಬೆಟ್ಟ,ಭೂತಯ್ಯನ ಮಗ ಅಯ್ಯುನಂತಹ ಬಹು ಜನಪ್ರಿಯ ಸಿನೆಮಾಗಳು ಸೇರಿದಂತೆ ಕನ್ನಡದ ೨೩ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡವಲ್ಲದೆ ತಮಿಳು,ತೆಲುಗು ಚಿತ್ರರಂಗದಲ್ಲೂ ಸಹ ಕೆಲಸ ಮಾಡಿದ್ದಾರೆ.
ಸಿದ್ದಲಿಂಗಯ್ಯ | |
---|---|
ಜನನ | ೧೫ ಡಿಸೆಂಬರ್ ೧೯೩೬ ತರೂರು, ಶಿರಾ ತಾಲೂಕು, ತುಮಕೂರು ಜಿಲ್ಲೆ |
ಮರಣ | ೧೨ ಮಾರ್ಚ್ ೨೦೧೫ (ವಯಸ್ಸು ೭೮–೭೯) ಬೆಂಗಳೂರು, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಸಿನೆಮಾ ನಿರ್ದೇಶಕ |
ಸಕ್ರಿಯ ವರ್ಷಗಳು | ೧೯೬೯–೧೯೯೯ |
ಮಕ್ಕಳು | ಮುರಳಿ (ಮಗ) ಎಸ್.ಡಿ.ಸುರೇಶ್ (ಕಿರಿಯ ಮಗ) |
ಸಂಬಂಧಿಕರು | ಆಥರ್ವಾ (ಮೊಮ್ಮಗ) |
ಲೈಟ್ ಬಾಯ್ ನಿಂದ ನಿರ್ದೇಶಕನವರೆಗೆ
ಬದಲಾಯಿಸಿ೧೯೩೬ರಲ್ಲಿ ತುಮಕೂರಿನ ಶಿರಾ ತಾಲೂಕಿನ ತರೂರು ಎಂಬ ಊರಿನಲ್ಲಿ ಜನಿಸಿದ ಸಿದ್ಧಲಿಂಗಯ್ಯನವರ ತಂದೆ ಲಿಂಗಣ್ಣ, ತಾಯಿ ಸಿದ್ದಬಸಮ್ಮ. ತಾತ ಹಾಗೂ ಸೋದರಮಾವರಿಂದ ಪ್ರಭಾವಕ್ಕೊಳಗಾಗಿ ಕಲೆಯಲ್ಲಿ ಆಸಕ್ತಿ ತಳೆದು ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್ ಬಾಯ್/ಫ್ಲೋರ್ ಬಾಯ್ ಆಗಿ ಸೇರಿದರು. ಮುಂದೆ ಶಂಕರ ಸಿಂಗ್ ಮತ್ತು ವಿಠಲಾಚಾರ್ಯ ಅವರ ಬಳಿ ಸಹಾಯಕ ನಿರ್ದೇಶಕರಾದರು. ಹಾಸ್ಯನಟ ಬಾಲಕೃಷ್ಣ ಅವರ ಪ್ರೋತ್ಸಾಹದಿಂದ ದ್ವಾರಕೀಶ್ ನಿರ್ಮಾಣದಲ್ಲಿ ನಿರ್ದೇಶಕರಾಗಿ ಅವರ ಮೊದಲ ಚಿತ್ರ ಮೇಯರ್ ಮುತ್ತಣ್ಣ ತಯಾರಾಯಿತು .
ಸಿದ್ಧಲಿಂಗಯ್ಯನವರು ಗ್ರಾಮೀಣ ಕಥೆಯಾಧಾರಿತ ಸಿನಿಮಾಗಳಿಗೆ ಒತ್ತುಕೊಟ್ಟರು. ಗ್ರಾಮೀಣ ಜೀವನವನ್ನು ಒಳಗೊಂಡಿರುವ ಕತೆ/ಚಿತ್ರಕತೆಗಳ ಸಿನೆಮಾಗಳನ್ನು ಮಾಡಿದರು. ಅವರ ಹೆಚ್ಚಿನ ಸಿನೆಮಾಗಳು ಸಾಮಾಜಿಕ ಕಥಾವಸ್ತುಗಳನ್ನೊಳಗೊಂಡಿದ್ದರಿಂದ 'ಸಾಮಾಜಿಕ ನಿರ್ದೇಶಕ' ಎಂದು ಗುರುತಿಸಲ್ಪಟ್ಟರು.
ರಾಜ್ ಕುಮಾರ್, ಎನ್.ಟಿ. ರಾಮರಾವ್, ವಿಷ್ಣುವರ್ಧನ್ ಅಂತಹವರಿಗೆ ಉತ್ತಮ ಪಾತ್ರಗಳ ಚಿತ್ರಗಳನ್ನು ನೀಡಿ ಅವರ ತಾರಾಮೌಲ್ಯವನ್ನು ಬೆಳಗಿಸಿದವರು ಸಿದ್ಧಲಿಂಗಯ್ಯನವರು. ಲೋಕೇಶ್, ಚರಣ್ ರಾಜ್, ಮುರಳಿ, ಶ್ರೀನಿವಾಸಮೂರ್ತಿ ಅಂತಹ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪ್ರಧಾನವಾಗಿ ಪರಿಚಯಿಸಿದ್ದು ಸಹಾ ಸಿದ್ಧಲಿಂಗಯ್ಯನವರೆ.
ನಿರ್ದೇಶಿಸಿದ ಚಲನಚಿತ್ರಗಳು
ಬದಲಾಯಿಸಿಸಿದ್ಧಲಿಂಗಯ್ಯನವರು ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರು ನಿರ್ದೇಶಿಸಿದ ಚಿತ್ರಗಳೆಂದರೆ-
- ಮೇಯರ್ ಮುತ್ತಣ್ಣ, ೧೯೬೯
- ಬಾಳು ಬೆಳಗಿತು, ೧೯೭೦
- ನಮ್ಮ ಸಂಸಾರ, ೧೯೭೧
- ತಾಯಿ ದೇವರು, ೧೯೭೧
- ನ್ಯಾಯವೇ ದೇವರು, ೧೯೭೧
- ಬಂಗಾರದ ಮನುಷ್ಯ, ೧೯೭೨
- ದೂರದ ಬೆಟ್ಟ, ೧೯೭೩
- ಭೂತಯ್ಯನ ಮಗ ಅಯ್ಯು, ೧೯೭೪
- ಹೇಮಾವತಿ, ೧೯೭೭
- ನಾರದ ವಿಜಯ, ೧೯೭೯
- ಭೂಲೋಕದಲ್ಲಿ ಯಮರಾಜ, ೧೯೮೦
- ಬಿಳಿಗಿರಿಯ ಬನದಲ್ಲಿ, ೧೯೮೦
- ನಾರಿ ಸ್ವರ್ಗಕ್ಕೆ ದಾರಿ, ೧೯೮೧
- ಕೂಡಿ ಬಾಳಿದರೆ ಸ್ವರ್ಗ ಸುಖ, ೧೯೮೧
- ಪಾರಿಜಾತ, ೧೯೮೨
- ಪ್ರೇಮಪರ್ವ, ೧೯೮೩
- ಅಜೇಯ, ೧೯೮೫
- ಪುತಿರ್ (ಅಜೇಯ ತಮಿಳು ರಿಮೇಕ್), ೧೯೮೬
- ಸಂಭವಾಮಿ ಯುಗೇ ಯುಗೇ, ೧೯೮೮
- ಬಾರೆ ನನ್ನ ಮುದ್ದಿನ ರಾಣಿ, ೧೯೯೦
- ಬಾ ನನ್ನ ಪ್ರೀತಿಸು, ೧೯೯೨
- ಭೂತಾಯಿ ಮಕ್ಕಳು, ೧೯೯೪
- ಪ್ರೇಮ ಪ್ರೇಮ ಪ್ರೇಮ, ೧೯೯೯
ಬಂಗಾರದ ಮನುಷ್ಯ
ಬದಲಾಯಿಸಿಬಂಗಾರದ ಮನುಷ್ಯ ಚಿತ್ರ ಕನ್ನಡದಲ್ಲಿ ಇತಿಹಾಸವನ್ನೇ ನಿರ್ಮಿಸಿತು. ಟಿ.ಕೆ.ರಾಮರಾಯರ ಕಾದಂಬರಿ ಆಧಾರಿತವಾದ ಆ ಚಿತ್ರ ಶ್ರೇಷ್ಠ ಚಿತ್ರಕಥಾ ನಿರೂಪಣೆ, ಕಥಾಮೌಲ್ಯ, ಕನ್ನಡದ ಸ್ಥಳೀಯ ಮತ್ತು ಗ್ರಾಮಾಂತರ ಪ್ರದೇಶದ ವಾತಾವರಣ, ಶ್ರೇಷ್ಠ ಹಾಡುಗಳು ಮತ್ತು ಕಲಾವಿದರ ಪರಿಶ್ರಮದಿಂದ ಒಂದು ಮರೆಯಲಾಗದ ಚಿತ್ರವಾಗಿ ಮೂಡಿಬಂತು. ಇದು ಅನೇಕ ಚಿತ್ರಮಂದಿರಗಳಲ್ಲಿ ನೂರು ದಿನಗಳ ಪ್ರದರ್ಶನ ಕಂಡು ಬೆಂಗಳೂರಿನ ಒಂದು ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಪ್ರದರ್ಶನದ ದಾಖಲೆ ಮಾಡಿತು.
ಭೂತಯ್ಯನ ಮಗ ಅಯ್ಯು
ಬದಲಾಯಿಸಿಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಯಾಧಾರಿತ ಚಿತ್ರವಾದ 'ಭೂತಯ್ಯನ ಮಗ ಅಯ್ಯು' ಚಿತ್ರ ಕೂಡಾ ಚಿತ್ರನಿರ್ಮಾಣ ಮತ್ತು ಕಥಾಮೌಲ್ಯಗಳ ಶ್ರೇಷ್ಠ ಸಂಗಮವಾಗಿ ಕನ್ನಡ ಚಿತ್ರರಂಗದಲ್ಲಿ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ಉಳಿದಿದೆ.
ಪ್ರಶಸ್ತಿ, ಗೌರವಗಳು
ಬದಲಾಯಿಸಿ- 'ಬಂಗಾರದ ಮನುಷ್ಯ' ಚಿತ್ರಕ್ಕಾಗಿ ದ್ವೀತೀಯ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆಗಾಗಿ ರಾಜ್ಯಪ್ರಶಸ್ತಿ, ೧೯೭೧-೭೨
- 'ಭೂತಯ್ಯನ ಮಗ ಅಯ್ಯು' ಸಿನಿಮಾಗೆ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆಗಾಗಿ ರಾಜ್ಯಪ್ರಶಸ್ತಿ, ೧೯೭೪
- ೧೯೯೩-೯೪ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
- ೨೦೧೦ರಲ್ಲಿ ಬಿ.ಸರೋಜಾದೇವಿ ಪ್ರಶಸ್ತಿ
ನಿಧನ
ಬದಲಾಯಿಸಿ೧೨ ಮಾರ್ಚ್ ೨೦೧೫ ಗುರುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.[೧] ಅವರಿಗೆ ೭೯ ವರ್ಷ ವಯಸ್ಸಾಗಿತ್ತು.
ತಲೆಮಾರು
ಬದಲಾಯಿಸಿತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಸಿದ್ದಲಿಂಗಯ್ಯನವರ ಪುತ್ರ ಮುರಳಿ ೨೦೧೦ ಸೆಪ್ಟೆಂಬರ್ ೮ರಂದು ನಿಧನರಾದರು. ಮುರಳಿ ಪುತ್ರ, ಸಿದ್ದಲಿಂಗಯ್ಯನವರ ಮೊಮ್ಮಗ ಅಥರ್ವಾ ತಮಿಳು ಚಿತ್ರರಂಗದಲ್ಲಿ ನಟನಾಗಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ ‘ಬಂಗಾರದ ಮನುಷ್ಯ’ ಸಿದ್ದಲಿಂಗಯ್ಯ ಇನ್ನಿಲ್ಲ, ಪ್ರಜಾವಾಣಿ ವಾರ್ತೆ, ೧೩ಮಾರ್ಚ್೨೦೧೫
ಹೊರಕೊಂಡಿಗಳು
ಬದಲಾಯಿಸಿ- ಬಂಗಾರದ ಮನುಷ್ಯ ಸೃಷ್ಟಿಕರ್ತ ಇನ್ನು ನೆನಪು, ವಿಜಯವಾಣಿ, ೧೩ಮಾರ್ಚ್೨೦೧೫
- ಸಿನಿಜಗತ್ತಿನ ಮಣ್ಣಿನಮಗ, ವಿಜಯಕರ್ನಾಟಕ, ೧೩ಮಾರ್ಚ್೨೦೧೫
- ಧರೆಗುರುಳಿದ ಚಿತ್ರರಂಗದ ಮಹಾವೃಕ್ಷ ಸಿದ್ದಲಿಂಗಯ್ಯ, ಕನ್ನಡ ಫಿಲ್ಮಿಬೀಟ್
- ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ನಿಧನ Archived 2015-03-19 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ, ೧೩ಮಾರ್ಚ್೨೦೧೫
- ಬಂಗಾರದ ಮನುಷ್ಯ ಖ್ಯಾತಿಯ ನಿರ್ದೇಶಕ ಎಸ್. ಸಿದ್ದಲಿಂಗಯ್ಯ ಇನ್ನಿಲ್ಲ, ಉದಯವಾಣಿ, ೧೩ಮಾರ್ಚ್೨೦೧೫
- ಕನ್ನಡ ಚಿತ್ರರಂಗದ ‘ಬಂಗಾರದ ಮನುಷ್ಯ’ ಸಿದ್ದಲಿಂಗಯ್ಯ ಇನ್ನಿಲ್ಲ ವಿಕ ಸುದ್ದಿಲೋಕ, ೧೩ಮಾರ್ಚ್೨೦೧೫
- IMDB database, Siddalingayya