ಗುಪ್ತರ ಕಾಲದ ಉತ್ತರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಪರಿಸ್ಥಿತಿಗಳನ್ನು ಅರಿಯುವಲ್ಲಿ ಅವರ ಶಾಸನಗಳು ಅತ್ಯಮೂಲ್ಯ ಸಾಧನಗಳಾಗಿವೆ. ಇದುವರೆಗೆ ತಿಳಿದಂತೆ ನಾಣ್ಯಗಳನ್ನು ಮೊದಲು ಅಚ್ಚು ಹಾಕಿಸಿದ ಗುಪ್ತ ದೊರೆ 1ನೆಯ ಚಂದ್ರಗುಪ್ತ. ಆದರೆ ಶಾಸನಗಳನ್ನು ಬರೆಯಿಸಿದವನು ಆತನ ಮಗ ಸಮುದ್ರಗುಪ್ತ. ಗುಪ್ತರ ಶಾಸನಗಳೆಲ್ಲ ಸಂಸ್ಕೃತ ಭಾಷೆಯಲ್ಲಿವೆ. ರಚನೆಯ ದೃಷ್ಟಿಯಿಂದ ಅವುಗಳನ್ನು ಗದ್ಯಶಾಸನಗಳು, ಪದ್ಯಶಾಸನಗಳು, ಗದ್ಯ-ಪದ್ಯ ಮಿಶ್ರಿತ ಶಾಸನಗಳೆಂದು ವಿಂಗಡಿಸಬಹುದು. ಗುಪ್ತರ ಶಾಸನಗಳ ಲಿಪಿ ಅಶೋಕನ ಕಾಲದ ಬ್ರಾಹ್ಮೀ ಲಿಪಿಯಿಂದಲೇ ಬೆಳೆದುಬಂದದ್ದು. ಇದನ್ನು ಗುಪ್ತಬ್ರಾಹ್ಮೀ ಲಿಪಿ ಎಂದು ಹೆಸರಿಸಿದೆ.[] ಇವುಗಳಲ್ಲಿ ಉತ್ತರಾದಿ ಮತ್ತು ದಕ್ಷಿಣಾದಿ ಎಂಬ ಎರಡು ಪ್ರಭೇದಗಳನ್ನು ಸಹ ಗುರುತಿಸಲಾಗಿದೆ. ಆದರೂ ಲಿಪಿಯ ಸ್ವರೂಪದ ಸೂಕ್ಷ್ಮ ಪರೀಕ್ಷೆಯಿಂದ ಕ್ರಿ.ಶ. 4ನೆಯ ಶತಮಾನದಲ್ಲಿ ಪ್ರಚಲಿತವಾಗಿದ್ದ ಕೌಶಾಂಬೀ, ಪೂರ್ವೀಮಾಳವ ಮತ್ತು ಮಥುರಾ ಶೈಲಿಗಳನ್ನೂ, 5-6ನೆಯ ಶತಮಾನಗಳ ಮಥುರಾ ಮತ್ತು ವಾಯುವ್ಯಪ್ರಾಂತ್ಯ, ಮಧ್ಯಭಾರತ-ರಾಜಸ್ಥಾನೀ ಹಾಗೂ ಕಾಠಿಯಾವಾಡೀ ಶೈಲಿಗಳನ್ನೂ ಇವುಗಳಲ್ಲಿ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಗುಪ್ತರ ಕಾಲ ಸುವರ್ಣಯುಗವಾಗಿತ್ತೆಂಬುದು ಅವರ ಶಾಸನ ಸಾಹಿತ್ಯದಿಂದ ಸ್ಪಷ್ಟವಾಗುತ್ತದೆ.

ಗುಪ್ತರ ಎಲ್ಲ ಶಾಸನಗಳಲ್ಲೂ ತೇದಿಯ ವಿವರಗಳನ್ನು ಕೊಟ್ಟಿಲ್ಲ. ಕೆಲವಲ್ಲಿ ರಾಜನ ಆಳ್ವಿಕೆಯ ಸಂವತ್ಸರದ ಸಂಖ್ಯೆಯನ್ನೋ, 319-20ರಲ್ಲಿ ಆರಂಭವಾದ ಗುಪ್ತಶಕೆಯ[] ಸಂಖ್ಯೆಯನ್ನೋ ನೀಡಲಾಗಿದೆ. ಇಮ್ಮಡಿ ಚಂದ್ರಗುಪ್ತನ ಮಥುರಾ ಸ್ತಂಭ ಶಾಸನದಲ್ಲಿ ರಾಜನ ಆಳ್ವಿಕೆಯ 5ನೆಯ ವರ್ಷದೊಂದಿಗೆ ಗುಪ್ತಶಕದ 61ನೆಯ ವರ್ಷವನ್ನೂ ಪ್ರಸ್ತಾಪಿಸಲಾಗಿದೆ.[] 1ನೆಯ ಕುಮಾರಗುಪ್ತನ ಮಾಂಡಸರ್ ಶಿಲಾ ಶಾಸನ ಕ್ರಿ.ಪೂ. 57ರಲ್ಲಿ ಜಾರಿಗೆ ಬಂದ ಮಾಳವ - ವಿಕ್ರಮ ಸಂವತ್ಸರದ 436 ಹಾಗೂ 473ನೆಯ ವರ್ಷಗಳನ್ನು ಪ್ರಸ್ತಾಪಿಸುತ್ತದೆ.[] ಕೆಲವೊಮ್ಮೆ ಈ ಕಾಲದ ಶಾಸನಗಳಲ್ಲಿ ಚೈತ್ರಾದಿ ಮಾಸಗಳ ಹಾಗೂ ತಿಥಿಯ ನಿರ್ದೇಶನವೂ ಕಂಡುಬರುತ್ತದೆ.

ಇತರ ಎಲ್ಲ ಶಾಸನಗಳಂತೆ ಗುಪ್ತರ ಶಾಸನಗಳನ್ನು ಸಹ ಅಧಿಕೃತ ಇಲ್ಲವೇ ವೈಯಕ್ತಿಕ ಶಾಸನಗಳೆಂದೋ, ಅವನ್ನು ಬರೆಯಲಾಗಿರುವ ಸಾಮಗ್ರಿಗಳ ಆಧಾರದ ಮೇಲೆ ಶಿಲಾಶಾಸನ, ಸ್ತಂಭಶಾಸನ, ತಾಮ್ರಶಾಸನ, ಪ್ರತಿಮಾಶಾಸನ, ಮುದ್ರಾಶಾಸನಗಳೆಂದೋ, ಶಾಸನ ವಿಷಯವನ್ನವಲಂಬಿಸಿ ದಾನಶಾಸನ, ಸ್ಮಾರಕಶಾಸನ, ನಿರ್ವಾಹಕ ಶಾಸನ, ಕ್ರಯಾಶಾಸನ, ಪ್ರತಿಷ್ಠಾಶಾಸನ ಅಥವಾ ಪ್ರಶಸ್ತಿಗಳೆಂದೋ ವಿಂಗಡಿಸಬಹುದು. ಕೆಲವು ಶಾಸನಗಳು ಗುಹೆಗಳಲ್ಲಿ ದೊರೆತ ಕಾರಣ ಗುಹಾ ಶಾಸನಗಳೆನಿಸಿಕೊಂಡಿವೆ.

ಕೆಲವು ಮುಖ್ಯ ಶಾಸನಗಳು

ಬದಲಾಯಿಸಿ

೧. ಸಮುದ್ರಗುಪ್ತನ ಅಲಹಾಬಾದ್ ಶಿಲಾ ಶಾಸನ. ಗುಪ್ತರ ಪ್ರಥಮ (ಇದುವರೆಗೆ ಲಭ್ಯವಿರುವ ಪ್ರಾಚೀನತಮ) ಶಾಸನವಿದು. ಇದರಲ್ಲಿ ತೇದಿಯನ್ನು ನೀಡಿಲ್ಲ. ಈ ಶಾಸನದ ಕವಿ ಸಂಧಿವಿಗ್ರಹಿ, ಕುಮಾರಾಮಾತ್ಯ, ಮಹಾದಂಡನಾಯಕ ಹರಿಷೇಣ.[] ಇದೊಂದು ಪ್ರಶಸ್ತಿ ಶಾಸನ. ಇದರಿಂದ ನಮಗೆ ಸಮುದ್ರಗುಪ್ತನ ಜೀವನದ ಅನೇಕ ಘಟನೆಗಳು ತಿಳಿದುಬಂದಿವೆ. ಶಾಸನದ ಮೊದಲ ಭಾಗ ಅಲ್ಲಲ್ಲಿ ತ್ರುಟಿತವಾಗಿರುವ ಕಾರಣ, ಕೆಲವು ವಿವರಣೆಗಳನ್ನು ತಿಳಿಯಲು ಸಾಧ್ಯವಿಲ್ಲವಾಗಿವೆ. ಒಂದನೆಯ ಚಂದ್ರಗುಪ್ತ ಸಮುದ್ರಗುಪ್ತನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದು, ಆಸ್ಥಾನದಲ್ಲಿ ನೆರೆದಿದ್ದ ಅನೇಕರಿಗೆ ಇದರಿಂದ ಸಂತೋಷವಾಯಿತಾದರೂ ಕೆಲವರಾದರೂ ಇದರಿಂದ ಅಸಂತುಷ್ಟರಾದ್ದು, ಅವರಲ್ಲಿ ಅಪ್ಪಾಯಿಕ ಮತ್ತು ಗೋವಿಂದ ಎಂಬಿಬ್ಬರನ್ನು ಸಮುದ್ರಗುಪ್ತ ಸೋಲಿಸಿದ್ದು, ಅನಂತರ ದಿಗ್ವಿಜಯ ಯಾತ್ರೆ ಕೈಗೊಂಡ ಈತ ಆರ್ಯಾವರ್ತದ ಅರಸರನ್ನು ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡದ್ದು ಮುಂತಾದವುಗಳ ಪ್ರಸ್ತಾಪ ಇಲ್ಲಿದೆ. ರುದ್ರದೇವ, ಮತಿಲ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಾಗಸೇನ, ಅಚ್ಯುತ-ನಂದಿ ಮತ್ತು ಬಲವರ್ಮ-ಈ ಒಂಬತ್ತು ಅರಸರ ಹೆಸರುಗಳನ್ನು ಮಾತ್ರ ಹೇಳಿವೆ. ದಕ್ಷಿಣಾಪಥದ ಅರಸರ ವಿರುದ್ಧ ಇವನು ಕೈಗೊಂಡ ನೀತಿ ಭಿನ್ನವಾಗಿತ್ತು. ಅಲ್ಲಿಯವರಾದ, ಕೋಸಲದ ಮಹೇಂದ್ರ, ಮಹಾಕಾಂತಾರದ ವ್ಯಾಘ್ರರಾಜ, ಕೋರಾಲದ ಮಂಟರಾಜ, ಪಿಷ್ಠಪುರದ ಮಹೇಂದ್ರಗಿರಿ (ಮಹೇಂದ್ರ), ಕೊಟ್ಟೂರಿನ (ಗಿರಿಕೊಟ್ಟೂರಿನ) ಸ್ವಾಮಿದತ್ತ, ಏರಂಡಪಲ್ಲದ ದಮನ, ಕಾಂಚಿಯ ವಿಷ್ಣುಗೋಪ, ಅವಮುಕ್ತದ ನೀಲರಾಜ, ವೇಂಗಿಯ ಹಸ್ತಿವರ್ಮ, ಪಾಲಕ್ಕಾದ ಉಗ್ರಸೇನ, ದೇವರಾಷ್ಟ್ರದ ಕುಬೇರ ಮತ್ತು ಕುಸ್ಥಲಪುರದ ಧನಂಜಯ, ಈ ಅರಸರನ್ನು ಸೋಲಿಸಿದರೂ, ಅವರನ್ನು ಅನಂತರ ಮುಕ್ತಮಾಡಿ ಅವರ ರಾಜ್ಯಗಳನ್ನು ಹಿಂದಿರುಗಿಸಿ, ಅವರ ಸಾಮಂತಿಕೆಯನ್ನು ಒಪ್ಪಿಕೊಂಡ.[]: 145  ಇವನದು ಗ್ರಹಣ, ಮೋಕ್ಷ ಮತ್ತು ಅನುಗ್ರಹದ ನೀತಿಯಾಗಿತ್ತು. ಅಲ್ಲದೆ ಎಲ್ಲ ವನರಾಜರನ್ನೂ, ಸಮತಟ, ಡವಾಕ, ಕಾಮರೂಪ, ಮುಂತಾದ ರಾಜ್ಯಗಳನ್ನು, ಅರ್ಜುನಾಯನ, ಮಾಲವ, ಯೌಧೇಯ ಮುಂತಾದ ದ್ವೀಪವಾಸಿಗಳನ್ನೂ ದಮನ ಮಾಡಿ ಅವರ ಸೇವೆಗೆ ಪಾತ್ರನಾದವನೆಂದೂ ವರ್ಣಿಸಲಾಗಿದೆ.[]: 142  ಇದೊಂದು ಪ್ರಶಸ್ತಿ ಶಾಸನ. ಶಾಸನದ ಉದ್ದಿಶ್ಯವೇ ಅದು. ಈ ಶಾಸನ ಸಮುದ್ರಗುಪ್ತನ ಮರಣಾನಂತರ ಹುಟ್ಟಿತೆಂದು ಫ್ಲೀಟ್ ವಾದಿಸಿದ್ದರೂ ಇದರಲ್ಲಿ ಇವನು ಮಾಡಿದ ಅಶ್ವಮೇಧ ಯಾಗದ ಉಲ್ಲೇಖವಿಲ್ಲದಿರುವ ಮತ್ತು ಇತರ ಕಾರಣಗಳಿಂದ ಅವರ ವಾದವನ್ನು ಒಪ್ಪಲಾಗಿಲ್ಲ.

೨. ಮಧ್ಯಪ್ರದೇಶದ ಏರಣದಲ್ಲಿ ದೊರೆತ ಸ್ತಂಭಶಾಸನ ಸಮುದ್ರಗುಪ್ತನಿಗೇ ಸೇರಿದ್ದು.[] ಬಹಳ ಮಟ್ಟಿಗೆ ಭಿನ್ನವಾಗಿರುವ ಈ ಶಾಸನದಲ್ಲಿ ಈತನ ಪತ್ನಿ ದತ್ತಾದೇವಿಯ[] ಉಲ್ಲೇಖವಿದೆ. ಐರಿಕಿಣದಲ್ಲಿ ಆಳುತ್ತಿದ್ದ ಇವನ ಸಾಮಂತನೊಬ್ಬ ಈ ಶಾಸನವನ್ನು ಕೆತ್ತಿಸಿರಬಹುದೆಂದು ಊಹಿಸಲಾಗಿದೆ.

೩. ಸಮುದ್ರಗುಪ್ತ ಅವನ ಆಳ್ವಿಕೆಯ 5ನೆಯ ಹಾಗೂ 9ನೆಯ ವರ್ಷಗಳಲ್ಲಿ ನೀಡಿದುದೆಂದು ಹೇಳಲಾದ-ನಾಲಂದ ಹಾಗೂ ಗಯಾಗಳ- ಎರಡು ತಾಮ್ರ ಶಾಸನಗಳು ದೊರೆತಿವೆ.[] ಆದರೆ ಇವು ಕೃತಕ ಶಾಸನಗಳು; ಕ್ರಿ.ಶ. 6ನೆಯ ಶತಮಾನದ ಸುಮಾರಿಗೆ ಹುಟ್ಟಿದಂಥವು. ಬಹುಶಃ ಮೂಲಶಾಸನಗಳು ಕಳೆದುಹೋಗಿದ್ದು, ಅವಕ್ಕೆ ಬದಲಾಗಿ ಇವನ್ನು ಕೆತ್ತಿಸಿದಾಗ ಸಹಜವಾಗಿಯೇ ಅನೇಕ ತಪ್ಪುಗಳು ಶಾಸನಗಳಲ್ಲಿ ನುಸುಳಿ ಇವುಗಳ ಕೃತಕತೆಯನ್ನು ಸಾರಿವೆ.

೪. ಗುಪ್ತಶಕೆಯ 61ನೆಯ ವರ್ಷದಲ್ಲಿ ಬರೆಯಲಾದ, ಆ ಶಕೆಯನ್ನು ಪ್ರಸ್ತಾಪಿಸುವ ಪ್ರಾಚೀನ ಶಾಸನ ಮಥುರಾದಲ್ಲಿ ದೊರೆತ, ಇಮ್ಮಡಿ ಚಂದ್ರಗುಪ್ತನ ಆಳ್ವಿಕೆಯ 5ನೆಯ ವರ್ಷದ, ಸ್ತಂಭಶಾಸನ, ಆರ್ಯೋದಿತಾಚಾರ್ಯ ಉಪಮಿತೇಶ್ವರ ಮತ್ತು ಕಪಿಲೇಶ್ವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದನೆಂಬ ಶಾಸನದ ವಿಷಯ.[][೧೦] ಇದೇ ಅರಸನ ಎರಡು ಶಾಸನಗಳು ಉದಯಗಿರಿಯ ಬೆಟ್ಟದ ಗುಹೆಗಳಲ್ಲಿ ದೊರೆತಿವೆ.[೧೧] ಇಲ್ಲಿಯ ಗುಹಾಲಯಗಳನ್ನು ಅರಸ ಕೊರೆಯಿಸಿದನೆಂದು ಅವು ತಿಳಿಸುತ್ತವೆ.

೫. ದೆಹಲಿಯ ಸಮೀಪದ ಮೆಹ್‌ರೌಲಿ ಗ್ರಾಮದಲ್ಲಿ ಕಬ್ಬಿಣದ ಕಂಬದ ಮೇಲೆ ಕೆತ್ತಲಾದ ಶಾಸನ ಚಂದ್ರನೆಂಬ ಅರಸನದು. ಈ ಚಂದ್ರನನ್ನು ಗುರುತಿಸುವುದರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಈತ ಗುಪ್ತವಂಶದ ಇಮ್ಮಡಿ ಚಂದ್ರಗುಪ್ತನೆಂದೇ ಬಹಳಮಟ್ಟಿಗೆ ಒಪ್ಪಲಾಗಿದೆ.[೧೨][೧೩] ಕ್ರಿ.ಶ. 5ನೆಯ ಶತಮಾನಕ್ಕೆ ಸೇರುವ ಈ ಶಾಸನ ಚಂದ್ರನ ಪ್ರಶಸ್ತಿಯನ್ನೊಳಗೊಂಡಿದೆ. ಪಶ್ಚಿಮದಲ್ಲಿ ಸಿಂಧೂ ನದಿ ಪ್ರಾಂತ್ಯ, ಉತ್ತರದಲ್ಲಿ ವಾಹ್ಲಿಕ, ಪೂರ್ವದಲ್ಲಿ ವಂಗ ಮತ್ತು ದಕ್ಷಿಣದಲ್ಲಿ ಸಮುದ್ರದವರೆಗಿನ ವಿಶಾಲ ಪ್ರದೇಶದಲ್ಲಿ ದಿಗ್ವಿಜಯ ಯಾತ್ರೆ ಕೈಗೊಂಡ. ಕೀರ್ತಿಶೇಷನಾಗಿದ್ದ ಚಂದ್ರ ವಿಷ್ಣುಪದವೆಂಬ ಗುಡ್ಡದ ಮೇಲೆ ವಿಷ್ಣುಧ್ವಜವನ್ನು ನಿಲ್ಲಿಸಿದನೆಂದು ಶಾಸನ ಹೇಳುತ್ತದೆ.[೧೪] ಇದು ಆ ಅರಸನ ಪ್ರಶಸ್ತಿ. ಸಾಂಪ್ರದಾಯಿಕವಾಗಿದ್ದರೂ ಇದರಲ್ಲಿ ಕೆಲವು ಸತ್ಯಾಂಶಗಳೂ ಇವೆ.

೬. ಇಮ್ಮಡಿ ಚಂದ್ರಗುಪ್ತನಿಗೆ ರಾಮಗುಪ್ತನೆಂಬ ಒಬ್ಬ ಹಿರಿಯ ಸೋದರನಿದ್ದನೆಂದು ಆ ಹೆಸರಿನ ಕೆಲವು ನಾಣ್ಯಗಳ ಆಧಾರದ ಮೇಲೆ ಊಹಿಸಲಾಗಿದೆ. ಅದು ಇನ್ನೂ ವಿವಾದಾಸ್ಪದವಾಗಿಯೇ ಇತ್ತು. ಆದರೆ, ಸು. 1968-69ರಲ್ಲಿ, ಮಧ್ಯಪ್ರದೇಶದ ದುರ್ಜನಪುರವೆಂಬಲ್ಲಿ ಮೂರು ಪ್ರತಿಮಾ ಶಾಸನಗಳು ದೊರೆತಿವೆ.[೧೫] ಅವುಗಳಲ್ಲಿ ಎರಡನ್ನು-ಚಂದ್ರಪ್ರಭ ಮತ್ತು ಪುಷ್ಪದಂತ ತೀರ್ಥಂಕರರ ಪ್ರತಿಮೆಗಳನ್ನು-ಮಹಾರಾಜಾಧಿರಾಜ ರಾಮಗುಪ್ತ ಮಾಡಿಸಿದನೆಂದು ತಿಳಿದಿದೆ. ಕ್ರಿ.ಶ. 4ನೆಯ ಶತಮಾನದ ಈ ಶಾಸನಗಳಲ್ಲಿ ಹೆಸರಿಸಲಾದ ಈ ಅರಸ ಸಾರ್ವಭೌಮಪ್ರಶಸ್ತಿ ಹೊಂದಿದ್ದ. ಈತ ಚಂದ್ರಗುಪ್ತನ ಸೋದರನಾದ ರಾಮಗುಪ್ತನೇ ಹೌದೆಂದು ಈಗ ಹೇಳಲಾಗಿದೆ. ಇದರಿಂದ ರಾಮಗುಪ್ತನ ಅಸ್ತಿತ್ವ ಖಚಿತಗೊಂಡಂತಾಗಿದೆ.

೭. ಬಾಂಗ್ಲಾದೇಶದಲ್ಲಿರುವ ದಾಮೋದರಪುರದ ತಾಮ್ರಶಾಸನ ಕ್ರಿ.ಶ 444ರದು.[೧೬] ಇದು ಕುಮಾರಗುಪ್ತನದು. ಇದೊಂದು ಕ್ರಯಶಾಸನ. ಅರಸನ ಅಧಿಕಾರಿಯಾಗಿ ಪುಂಡ್ರವರ್ಧನಭುಕ್ತಿಯನ್ನು ಆಳುತ್ತಿದ್ದ ಚಿರಾತದತ್ತನ ಆಜ್ಞಾನುಸಾರ ಕೋಟಿ ವರ್ಷ ವಿಷಯದ ಆಡಳಿತಾಧಿಕಾರಿಯಾದ ಕುಮಾರಾಮಾತ್ಯ ಕ್ಷೇತ್ರವರ್ಮ, ಕರ್ಪಟಿಕನೆಂಬ ಬ್ರಾಹ್ಮಣನಿಗೆ, ಆತ ಅಗ್ನಿಹೋತ್ರ ಕಾರ್ಯಗಳನ್ನು ಸಾಂಗವಾಗಿ ನಡೆಸಿಕೊಂಡು ಬರಲೆಂದು, ಮೂರು ದೀನಾರಗಳ ಬೆಲೆಗೆ ಒಂದು ಕುಲ್ಯವಾಪ ಭೂಮಿಯನ್ನು ದಾನಮಾಡಿದನೆಂದು ಶಾಸನ ತಿಳಿಸುತ್ತದೆ. ಮಧ್ಯಪ್ರದೇಶದ ಮಂಡಸೋರಿನಲ್ಲಿಯ ಕ್ರಿ.ಶ. 436 ಮತ್ತು 473ರ ಶಾಸನದಲ್ಲೂ ಈ ಅರಸನ ಪ್ರಸ್ತಾಪವಿದೆ. ಇದೊಂದು ವಿಶಿಷ್ಟ ಶಾಸನ; ಪದ್ಯರೂಪದಲ್ಲಿದೆ. ಗುಜರಾತಿನ ಲಾಟವಿಷಯದಿಂದ ದಶಪುರಕ್ಕೆ (ಮಂಡಸೋರ್) ಹಲವರು ರೇಷ್ಮೆ ನೇಕಾರ ಕುಟುಂಬದವರು ವಲಸೆ ಹೋದರು. ಅವರಲ್ಲಿ ಕೆಲವರು ಭಿನ್ನ ವೃತ್ತಿಗಳನ್ನವಲಂಬಿಸಿದರೂ, ಇತರರು ಸ್ವವೃತ್ತಿಯಲ್ಲಿ ತೊಡಗಿ, ತಮ್ಮದೇ ಆದ ಸಂಘವೊಂದನ್ನು ಸ್ಥಾಪಿಸಿಕೊಂಡರು. ಕುಮಾರಗುಪ್ತನ ಆಳ್ವಿಕೆಯ ಕಾಲದಲ್ಲಿ, 436ರಲ್ಲಿ, ಅವರು ದಶಪುರದಲ್ಲಿ ಸೂರ್ಯ ದೇವಾಲಯವೊಂದನ್ನು ನಿರ್ಮಿಸಿದ್ದರು. ಆದರೆ ಅದು ಸ್ವಲ್ಪಕಾಲಾನಂತರ ಹಾಳುಬಿದ್ದಿತು. ಮಾಳವ ರಾಜ್ಯದ ಅರಸನಾದ ಬಂಧುವರ್ಮನ ಆಳ್ವಿಕೆಯಲ್ಲಿ, ಕ್ರಿ.ಶ. 473ರಲ್ಲಿ, ಅದನ್ನು ಆ ಸಂಘದವರು ಜೀರ್ಣೋದ್ಧಾರಮಾಡಿಸಿದರೆಂದು ಹೇಳುತ್ತದೆ.[] ಶಾಸನದ ಕರ್ತೃ ವತ್ಸಭಟ್ಟಿ.

೮. ಜುನಾಗಢದಲ್ಲಿ (ಗಿರಿನಗರ) ಮಹಾಕ್ಷತ್ರಪ ರುದ್ರದಾಮನ್‍ನ ಶಾಸನದ ಕೆಳಗಡೆಯೇ ಬರೆಯಲಾದ ಸ್ಕಂದಗುಪ್ತನ ಶಾಸನ ಅಲ್ಲಿಯ ಸುದರ್ಶನ ಸರೋವರವನ್ನು ಜಿರ್ಣೋದ್ಧಾರ ಮಾಡಿದ್ದನ್ನು ತಿಳಿಸುತ್ತದೆ.[೧೭] ಸುರಾಷ್ಟ್ರದ ಪ್ರಾಂತ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಪರ್ಣದತ್ತನ[೧೮] ಮಗ ಚಕ್ರಪಾಲಿತ ಆ ನಗರದ ಅಧಿಕಾರಿಯಾಗಿದ್ದಾಗ ಆ ಕೆರೆಯ ಕಟ್ಟೆ ಒಡೆಯಲು ಅದನ್ನು ಆತ ಸರಿಪಡಿಸಿದ. ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ತೋಡಿಸಲಾದ ಈ ಕೆರೆಯ ಕಟ್ಟೆ ಒಮ್ಮೆ ಅಶೋಕನ ಕಾಲದಲ್ಲಿ, ಮತ್ತೊಮ್ಮೆ ರುದ್ರದಾಮನ ಕಾಲದಲ್ಲಿ, ಭಗ್ನಗೊಂಡು ಪುನಃ ಕಟ್ಟಲ್ಪಟ್ಟಿತ್ತು. ಬಹುಶಃ ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಶಾಸನದ ಮೊದಲ ಭಾಗದಲ್ಲಿ ಇದನ್ನು ಸುದರ್ಶನ ತಟಾಕ ಸಂಸ್ಕಾರ ಗ್ರಂಥವೆಂದು ಕರೆಯಲಾಗಿದೆ. ಇದೇ ಅರಸನದಾದ ಭಿತಾರೀ ಶಿಲಾಸ್ತಂಭಶಾಸನ ವಿಷ್ಣುವಿನ (ಶಾರ್ಞ್ಗ) ದೇಗುಲದ ರಚನೆ ಹಾಗೂ ಪ್ರತಿಮಾ ಪ್ರತಿಷ್ಠಾಪನೆಗೆ ಸಂಬಂಧಿಸಿದ್ದಾಗಿದೆ. ದುರವಸ್ಥೆಗಿಳಿದಿದ್ದ ಗುಪ್ತರ ವಂಶಸಿರಿಯನ್ನು ಪುನಃ ನೆಲೆಗೊಳಿಸುವಲ್ಲಿ ಅರಸ ಪಟ್ಟ ಪಾಡಿನ, ಒಂದು ಇಡೀ ರಾತ್ರಿ ಆತ ನೆಲದ ಮೆಲೆ ಮಲಗಿರಬೇಕಾಯಿತೆಂಬ ಕುತೂಹಲಕಾರಿಯಾದ ಘಟನೆಯ ನಿರೂಪಣೆ ಈ ಶಾಸನದಲ್ಲಿವೆ.

೯. ಬಿಹಾರದ ಶಿಲಾಸ್ತಂಭ ಶಾಸನವೊಂದು ಪುರುಗುಪ್ತನ ಆಳ್ವಿಕೆಯದು. ಹೆಚ್ಚಿನ ಭಾಗ ನಷ್ಟವಾಗಿರುವ ಈ ಶಾಸನ ಸ್ಕಂದಗುಪ್ತನದೆಂಬುದು ಫ್ಲೀಟನ ಅಭಿಪ್ರಾಯವಾದರೂ ಇದು ಪುರುಗುಪ್ತನ ಆಳ್ವಿಕೆಯದೆಂದು ಇತರ ವಿದ್ವಾಂಸರು ಈಚೆಗೆ ನಿರ್ಣಯಿಸಿದ್ದಾರೆ. ಮಹಾರಾಜಾಧಿರಾಜನೆಂದು ಬಿರುದಾಂಕಿತನಾದ ಈತ ಸ್ವಲ್ಪಕಾಲ ಆಳಿದ ಬಳಿಕ ಸ್ಕಂದಗುಪ್ತ ಈತನನ್ನು ಪದಚ್ಯುತಗೊಳಿಸಿರಬಹುದೆಂದು ಊಹಿಸಲಾಗಿದೆ.

೧೦. ಇಮ್ಮಡಿ ಕುಮಾರಗುಪ್ತನ ಶಾಸನವೊಂದು ಮುದ್ರೆಯ ಮೇಲೆ ದೊರೆತಿದೆ. ಇದರಲ್ಲಿ ಶ್ರೀಗುಪ್ತನಿಂದ ಆರಂಭಿಸಿ ಗುಪ್ತರ ವಂಶಾವಳಿಯನ್ನೂ, ಅರಸರ ಹಾಗೂ ಮಹಾರಾಣಿಯರ ಹೆಸರುಗಳನ್ನೂ ಉಲ್ಲೇಖಿಸಿದೆ. 1ನೆಯ ಕುಮಾರಗುಪ್ತನ ಅನಂತರ ಕ್ರಮವಾಗಿ ಪುರುಗುಪ್ತ, ಆತನ ಮಗ ನರಸಿಂಹಗುಪ್ತ, ಆತನ ಮಗ 2ನೆಯ ಕುಮಾರಗುಪ್ತ ಇವರು ಆಳಿದರೆಂದು ಇದರಿಂದ ತಿಳಿದುಬರುತ್ತದೆ. ಸ್ಕಂದಗುಪ್ತನ ಉಲ್ಲೇಖವಿಲ್ಲವಾದ ಕಾರಣ ಆತ ಪಟ್ಟದರಸಿಯ ಮಗನಾಗಿರಲಾರನೆಂಬ ಊಹೆಗೂ ಇದು ಎಡೆಮಾಡಿದೆ.

ಇವು ಗುಪ್ತವಂಶದ ಅರಸರ ಪ್ರಮುಖ ಶಾಸನಗಳು. ರಾಜಕೀಯ ದೃಷ್ಟಿಯಿಂದ ಮಾತ್ರವಲ್ಲದೆ ಅಂದಿನ ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳ ಮೇಲೂ ವಿಶಿಷ್ಟ ಬೆಳಕನ್ನು ಚೆಲ್ಲುವ ಇವುಗಳಲ್ಲಿ ಹಲವು ಶಾಸನಗಳು ಉತ್ಕೃಷ್ಟ ಶೈಲಿಯನ್ನೊಳಗೊಂಡು ಕಾವ್ಯಮಯವಾಗಿವೆ. ಅಂದಿನ ಸಾಹಿತ್ಯದ ಮೇಲ್ಮೆಯನ್ನರಿಯಲು ಇವು ಬಹಳ ಸಹಾಯಕವಾಗಿವೆ.

ಉಲ್ಲೇಖಗಳು

ಬದಲಾಯಿಸಿ
  1. Sharma, Ram. 'Brahmi Script' . Delhi: BR Publishing Corp, 2002
  2. R. C. Majumdar 1981, p. 15.
  3. Harry Falk 2004, pp. 169–170.
  4. ೪.೦ ೪.೧ R. C. Majumdar 1981, p. 67.
  5. ೫.೦ ೫.೧ ೫.೨ Majumdar, Ramesh Chandra; Altekar, Anant Sadashiv (1967). Vakataka - Gupta Age Circa 200-550 A.D. Motilal Banarsidass Publ. pp. 136–155. ISBN 9788120800267.
  6. Fleet, John F. Corpus Inscriptionum Indicarum: Inscriptions of the Early Guptas. Vol. III. Calcutta: Government of India, Central Publications Branch, 1888, pp20-21
  7. R. C. Majumdar 1981, p. 46.
  8. Tej Ram Sharma 1989, p. 67.
  9. Ashvini Agrawal 1989, p. 98.
  10. "Collections-Virtual Museum of Images and Sounds". vmis.in. American Institute of Indian Studies.
  11. Tej Ram Sharma 1989, p. 148.
  12. Finbarr Barry Flood, 2003, "Pillar, palimpsets, and princely practices", Res, Xliii, New York University, pp97.
  13. "IIT team solves the pillar mystery". The Times of India. 2005.
  14. R. Balasubramaniam 2005, p. 8.
  15. Ashvini Agrawal 1989, p. 158.
  16. Tej Ram Sharma 1989, p. 173.
  17. "Junagadh Rock Inscription of Rudradaman", Project South Asia. Archived 23 February 2009 ವೇಬ್ಯಾಕ್ ಮೆಷಿನ್ ನಲ್ಲಿ.
  18. R. C. Majumdar 1981, p. 75.


ಗ್ರಂಥಸೂಚಿ

ಬದಲಾಯಿಸಿ



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: