ಕಾಂಚನಾ (ನಟಿ)

ಭಾರತೀಯ ಚಲನಚಿತ್ರ ನಟಿ

ಕಾಂಚನಾ ದಕ್ಷಿಣ ಭಾರತದ ಪ್ರಖ್ಯಾತ ಚಲನಚಿತ್ರ ನಟಿ. ೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಅಪ್ರತಿಮ ಸೌಂದರ್ಯದಿಂದ ಮನೆಮಾತಾಗಿದ್ದ ಕಾಂಚನಾ ತಮ್ಮ ಅಭಿನಯ ಮತ್ತು ನಾಟ್ಯ ಕೌಶಲ್ಯಗಳಿಂದಲೂ ಹೆಸರುವಾಸಿಯಾಗಿದ್ದ ಪ್ರತಿಭಾವಂತ ನಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯ ಸುಮಾರು ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾದಲಿಕ್ಕ ನೇರಮಿಲ್ಲೈ(೧೯೬೪) ಚಿತ್ರದ ಮೋಹಕ ಪಾತ್ರದ ಮೂಲಕ ಚಿತ್ರರಸಿಕರ ಗಮನ ಸೆಳೆದ ಕಾಂಚನಾ ಆತ್ಮ ಗೌರವಂ(೧೯೬೫), ವೀರಾಭಿಮನ್ಯು(೧೯೬೫), ಭಾಮಾ ವಿಜಯಂ(೧೯೬೭), ಶಾಂತಿ ನಿಲಯಂ(೧೯೬೯), ಕಲ್ಯಾಣ ಮಂಡಪಂ(೧೯೭೧) ಮತ್ತು ಪವಿತ್ರ ಬಂಧಂ(೧೯೭೧) ಚಿತ್ರಗಳಲ್ಲಿನ ಪ್ರೌಢ ಅಭಿನಯದಿಂದ ಚಿತ್ರರಸಿಕರ ಮನರಂಜಿಸಿದ ಮೇರು ನಟಿ.[][][][]

ಕಾಂಚನಾ
ಜನನ
ವಸುಂಧರಾ ದೇವಿ

೧೬ ಅಗಸ್ಟ್ ೧೯೩೯
ವಿಜಯವಾಡ, ಆಂಧ್ರ ಪ್ರದೇಶ
ವೃತ್ತಿ(ಗಳು)ನಟಿ, ಗಗನಸಖಿ
ಸಕ್ರಿಯ ವರ್ಷಗಳು೧೯೬೪–೧೯೯೪

ಆರಂಭಿಕ ಜೀವನ

ಬದಲಾಯಿಸಿ

೧೯೩೯ರ ಅಗಸ್ಟ್ ೧೬ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಕಾಂಚನಾ ಅವರ ಮೂಲ ಹೆಸರು ವಸುಂಧರಾ ದೇವಿ. ಚಿಕ್ಕವರಾಗಿದ್ದಾಗ ಇವರ ಕುಟುಂಬ ಚೆನ್ನೈಗೆ ವಲಸೆ ಹೋಗಿದ್ದರಿಂದ ಬಾಲ್ಯವನ್ನು ಚೆನ್ನೈನಲ್ಲಿಯೇ ಕಳೆದರು. ಚಿಕ್ಕಂದಿನಲ್ಲಿ ಓದಿನಲ್ಲಿ ಮುಂದಿದ್ದ ಕಾಂಚನಾ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದರು.[] ತಮ್ಮ ತಂದೆಯವರ ಉದ್ದಿಮೆ ನಷ್ಟ ಹೊಂದಿದ್ದರಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡರು. ಸಹೋದ್ಯೋಗಿ ವರ್ಗದಲ್ಲಿ ದೇವಿ ಎಂದು ಗುರುತಿಸಲ್ಪಡುತ್ತಿದ್ದ ಕಾಂಚನಾ ಪ್ರಯಾಣಿಕ ವರ್ಗದಲ್ಲೂ ಚಿರಪರಿಚಿತರಾಗಿದ್ದರು. ತಮ್ಮ ಹೊಸ ಚಿತ್ರ ಕಾದಲಿಕ್ಕ ನೇರಮಿಲ್ಲೈನಲ್ಲಿ ನಾಯಕಿ ಪಾತ್ರಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿದ್ದ ತಮಿಳಿನ ಮೇರು ನಿರ್ದೇಶಕ ಸಿ.ವಿ.ಶ್ರೀಧರ್ ಅವರು ಏರ್ ಇಂಡಿಯಾದ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಗಗನಸಖಿಯಾಗಿದ್ದ ದೇವಿಯವರಿಗೆ ಅವಕಾಶ ನೀಡಿದರು. ಅದಾಗಲೇ ವಸುಂಧರಾ ದೇವಿ ಎಂಬ ನಟಿ ಇದ್ದುದರಿಂದ ಇವರ ಹೆಸರನ್ನು ಕಾಂಚನಾ ಎಂದು ಬದಲಾಯಿಸಿದರು.[][][]

ವೃತ್ತಿ ಜೀವನ

ಬದಲಾಯಿಸಿ

ತಮಿಳು ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಪ್ರಣಯಭರಿತ ಹಾಸ್ಯ ಚಿತ್ರಗಳಲ್ಲೊಂದು ಎಂದು ಗುರುತಿಸಲ್ಪಡುವ ಕಾದಲಿಕ್ಕ ನೇರಮಿಲ್ಲೈ(೧೯೬೪) ಕಾಂಚನಾ ಅಭಿನಯದ ಮೊದಲ ಚಿತ್ರ. ಬಾಲಯ್ಯ, ನಾಗೇಶ್ ಅವರೊಂದಿಗೆ ರಾಜಶ್ರೀ, ರವಿಚಂದ್ರನ್ ಮುಂತಾದ ಹೊಸ ಮುಖಗಳೇ ಇದ್ದ ಸಿ.ವಿ.ಶ್ರೀಧರ್ ಅವರ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತು. ಶ್ರೀಮಂತ ಬೆಡಗಿಯಾಗಿ ಮುತ್ತುರಾಮನ್ ಅವರ ಜೋಡಿಯಾಗಿ ನೀಡಿದ ಚೊಕ್ಕದಾದ ಅಭಿನಯ ಕಾಂಚನಾರನ್ನು ಬಹುಬೇಡಿಕೆಯ ತಾರೆಯನ್ನಾಗಿಸಿತು.[] ಈ ಚಿತ್ರದ ತೆಲುಗು ಅವತರಣಿಕೆಯಾದ ಪ್ರೇಮಿಂಚಿ ಚೂಡು(೧೯೬೫) ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಕಾಂಚನಾ ಅಲ್ಲೂ ಬೇಡಿಕೆಯ ನಟಿಯಾದರು.[] ೧೯೬೫ರಲ್ಲಿ ತೆರೆಗೆ ಬಂದ ತೆಲುಗು ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾದ ವಿ.ಮಧುಸೂಧನ್ ರಾವ್ ನಿರ್ದೇಶಿಸಿದ ವೀರಾಭಿಮನ್ಯು ಚಿತ್ರದಲ್ಲಿ ಉತ್ತರೆಯಾಗಿ ಪ್ರಭಾವಶಾಲಿ ಭಾವಾಭಿನಯ ಮತ್ತು ನೃತ್ಯಾಭಿನಯ ನೀಡುವ ಮೂಲಕ ಚಿತ್ರಪಂಡಿತರ ಗಮನ ಸೆಳೆದಿದ್ದರು. ಸಿ.ವಿ.ಶ್ರೀಧರ್ ಅವರ ಕೋಡಿಮಲರ್(೧೯೬೬) ಚಿತ್ರದಲ್ಲಿ ಗಂಡನ ಮನೆಯವರಿಂದ ತಿರಸ್ಕರಿಸಲ್ಪಟ್ಟ ಮೂಗಿ ಅಕ್ಕನ ವೈವಾಹಿಕ ಜೀವನವನ್ನು ಸರಿಪಡಿಸುವ ದಿಟ್ಟ ಹುಡುಗಿಯಾಗಿ ಗಮನ ಸೆಳೆದ ಕಾಂಚನಾ ತಾವು ಒಬ್ಬ ಉತ್ತಮ ಕಲಾವಿದೆ ಎಂದು ಸಾಬೀತುಪಡಿಸಿದರು.

ತೆಲುಗಿನ ಆತ್ಮಗೌರವಂ(೧೯೬೫) ಮತ್ತು ಮಂಚಿ ಕುಟುಂಬಂ(೧೯೬೮) ಚಿತ್ರಗಳಲ್ಲಿ ಮೇರುನಟ ಅಕ್ಕಿನೇನಿ ನಾಗೇಶ್ವರರಾವ್ ಅವರಿಗೆ ನಾಯಕಿಯಾಗಿ ನೀಡಿದ ಪ್ರಬುದ್ಧ ಅಭಿನಯ ಕಾಂಚನಾರಿಗೆ ಬಹಳ ಜನಪ್ರಿಯತೆ ತಂದುಕೊಟ್ಟವು. ನಿರ್ದೇಶಕ ಕೆ.ವಿಶ್ವನಾಥ್ ಅವರ ಚೊಚ್ಚಲ ನಿರ್ದೇಶನದ ಆತ್ಮಗೌರವಂ ಚಿತ್ರದಲ್ಲಿ ಮನಸಾರೆ ಪ್ರೀತಿಸಿದವನೊಂದಿಗೆ ಮದುವೆ ಸಾಧ್ಯವಿಲ್ಲವೆಂದು ತಿಳಿದು ಮನೆಬಿಟ್ಟು ಓಡಿಹೋಗಿ, ಆತ್ಮಹತ್ಯೆಗೆ ಯತ್ನಿಸಿ ನಾಯಕನ ಗೆಳತಿಯಿಂದ ರಕ್ಷಿಸಲ್ಪಟ್ಟು ಆಕೆಯ ಸಹಾಯದಿಂದ ನಾಯಕನ ಪ್ರೀತಿಯನ್ನು ಪುನ: ಗಳಿಸುವ ಮುಗ್ಧ ಯುವತಿಯಾಗಿ ಮತ್ತು ಮಂಚಿ ಕುಟುಂಬಂ ಚಿತ್ರದಲ್ಲಿ ತ್ಯಾಗಮಯಿ ಸಹೋದರಿಯಾಗಿ ಹದವರಿತ ಅಭಿನಯ ನೀಡಿದ್ದಾರೆ. ಜೀತೆಂದ್ರ ಮತ್ತು ಬಬಿತಾ ಅಭಿನಯದ ಫರ್ಜ್(೧೯೬೭) ಕಾಂಚನಾ ಅಭಿನಯದ ಮೊದಲ ಹಿಂದಿ ಚಿತ್ರ.

ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ತಯಾರಾದ ಅದೇ ಕಂಗಳ್ [ತೆಲುಗು: ಅವೆ ಕಳ್ಳು](೧೯೬೭) ಮತ್ತು ಭಾಮಾ ವಿಜಯಂ [ತೆಲುಗು: ಭಲೇ ಕೊಡಳ್ಲು](೧೯೬೭) ಕಾಂಚನಾ ವೃತ್ತಿ ಬದುಕಿನ ಪ್ರಮುಖ ಚಿತ್ರಗಳು. ಎ.ವಿ.ಎಂ ಪ್ರೊಡಕ್ಷನ್ ನಿರ್ಮಿಸಿ ಎ.ಸಿ.ತ್ರಿಲೋಗಚಂದರ್ ನಿರ್ದೇಶನದ ರಹಸ್ಯಮಯ ರೋಮಾಂಚಕಾರಿ ಚಿತ್ರ ಅದೇ ಕಂಗಳ್ನಲ್ಲಿ ಆಧುನಿಕ ಬೆಡಗಿಯಾಗಿ ಮೋಹಕ ಅಭಿನಯ ನೀಡಿದ ಕಾಂಚನಾ ತಮಿಳಿನಲ್ಲಿ ರವಿಚಂದ್ರನ್ ಮತ್ತು ತೆಲುಗಿನಲ್ಲಿ ಕೃಷ್ಣ ಅವರೊಂದಿಗೆ ಹೆಜ್ಜೆ ಹಾಕಿದ ಪಾಶ್ಚಾತ್ಯ ಶೈಲಿಯ ನೃತ್ಯಗಳು ಅಪಾರ ಜನಪ್ರಿಯತೆ ಪಡೆದಿದ್ದದವು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿತು. ಕೆ.ಬಾಲಚಂದರ್ ನಿರ್ದೇಶನದ ಸಾರ್ವಕಾಲಿಕ ಶ್ರೇಷ್ಠ ಹಾಸ್ಯಮಿಶ್ರಿತ ಸಾಮಾಜಿಕ ಚಿತ್ರ ಭಾಮಾ ವಿಜಯಂ. ಮಧ್ಯಮ ವರ್ಗದ ಸುಖಿ ತುಂಬು ಕುಟುಂಬದ ಮೂವರು ಸೊಸೆಯರುಂದಿರು ಪಕ್ಕದ ಮನೆಗೆ ಹೊಸದಾಗಿ ಬಂದ ಭಾಮಾ ಎಂಬ ನಟಿಯ ಜೀವನ ಶೈಲಿಯನ್ನು ಅನುಸರಿಸಲು ಹೋಗಿ ಜೀವನದಲ್ಲಿ ನೋವು ಅನುಭವಿಸುವ ಕಥಾನಕವಿದ್ದ ಈ ಚಿತ್ರದಲ್ಲಿ ಹಾಸ್ಯಭರಿತ ಪಾತ್ರದಲ್ಲಿ ಮಿಂಚಿದ ಕಾಂಚನಾ ಇನ್ನೀರ್ವ ನಟಿಯರಾದ ಸಾಹುಕಾರ್ ಜಾನಕಿ ಮತ್ತು ಜಯಂತಿ ಅವರೊಂದಿಗೆ ಪೈಪೋಟಿಯ ಅಭಿನಯ ನೀಡಿದ್ದಾರೆ. ಉತ್ತಮ ಸಾಮಾಜಿಕ ಮೌಲ್ಯಗಳಿದ್ದ ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಗುವುದರೊಂದಿಗೆ ಹಿಂದಿಯಲ್ಲಿ ತೀನ್ ಬಹುರಾಣಿಯಾ(೧೯೬೮) ಎಂಬ ಹೆಸರಿನಲ್ಲಿ ಪುನರ್ನಿರ್ಮಾಣಗೊಂಡು ಯಶ ಗಳಿಸಿತು. ಹಿಂದಿ ಅವತರಣಿಕೆಯಲ್ಲೂ ಸಾಹುಕಾರ್ ಜಾನಕಿ ಮತ್ತು ಜಯಂತಿ ಅವರೊಂದಿಗೆ ತಮ್ಮ ಪಾತ್ರವನ್ನು ಪುನರಾವರ್ತಿಸಿದ ಕಾಂಚನಾ ಮರಾಠಿ ಭಾಷೆಯ ಜನಪ್ರಿಯ ನಟ ರಮೇಶ್ ದೇವ್ ಅವರ ಜೋಡಿಯಾಗಿ ಅಭಿನಯಿಸಿದ್ದರು. ಎನ್.ಟಿ.ರಾಮರಾವ್ ಅವರೊಂದಿಗೆ ಭಲೇ ಮಾಸ್ಟರು(೧೯೬೬) ಮತ್ತು ಡಾ.ಆನಂದ್(೧೯೬೯) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ ಕಾಂಚನಾ ಕೆ.ವಿಶ್ವನಾಥ್ ಅವರ ಪ್ರೈವೇಟ್ ಮಾಸ್ಟರ್(೧೯೬೭) ಮತ್ತು ಕಲಿಸೊಚ್ಚಿನ ಅದೃಷ್ಟಂ(೧೯೬೮) ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಕೃಷ್ಣ ಮತ್ತು ಜಗ್ಗಯ್ಯ ಅವರೊಂದಿಗೆ ಅಭಿನಯಿಸಿದ ಜರಿಗಿನ ಕಥ(೧೯೬೯) ಚಿತ್ರದಲ್ಲೂ ಕಾಂಚನಾ ಅಭಿನಯ ಗಮನಾರ್ಹ.

ಸಿವಂದ ಮಣ್(೧೯೬೯) ಮತ್ತು ಶಾಂತಿ ನಿಲಯಂ(೧೯೬೯) ಚಿತ್ರಗಳಲ್ಲಿ ಕಾಂಚನಾ ಅಭಿನಯ ಸ್ಮರಣೀಯ. ವಿದೇಶದಲ್ಲಿ ಚಿತ್ರಿತವಾದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿ.ವಿ.ಶ್ರೀಧರ್ ನಿರ್ದೇಶನದ ದೇಶಭಕ್ತಿಯ ಕುರಿತಾಗಿದ್ದ ಸಿವಂದ ಮಣ್ ಚಿತ್ರದಲ್ಲಿ ರಾಜಕುಮಾರಿ ಚಿತ್ರಲೇಖಾ ಪಾತ್ರದಲ್ಲಿ ಶಿವಾಜಿ ಗಣೇಶನ್ ಅವರೊಂದಿಗೆ ಪ್ರಶಂಸನೀಯ ಅಭಿನಯ ನೀಡಿದ ಕಾಂಚನಾ ಜೆಮಿನಿ ಗಣೇಶನ್ ನಾಯಕರಾಗಿ ಅಭಿನಯಿಸಿದ ಶಾಂತಿ ನಿಲಯಂ ಚಿತ್ರದಲ್ಲಿ ವಿಧುರ ನಾಯಕನ ಮಕ್ಕಳನ್ನು ಮತ್ತು ಆತನ ಮನೆಯವರನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೋಳ್ಳುವ ಮೇಲ್ವಿಚಾರಕಿಯಾಗಿ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ.[] ಅಭಿನೇತ್ರಿ ಭಾರತಿ ಸಂಕೀರ್ಣ ಪಾತ್ರದಲ್ಲಿ ಅಭಿನಯಿಸಿದ ಅವಳುಕ್ಕೆಂಡ್ರು ಒರು ಮನಮ್(೧೯೭೧), ರವಿಚಂದ್ರನ್ ಅವರೊಂದಿಗೆ ಅಭಿನಯಿಸಿದ ಉತ್ತರವಿಂದ್ರಿ ಉಳ್ಳೆ ವಾ(೧೯೭೧) ಮತ್ತು ಎಂ.ಜಿ.ಆರ್ ಅವರೊಂದಿಗಿನ ನಾನ್ ಏನ್ ಪಿರಂದೇನ್(೧೯೭೨) ಕಾಂಚನಾ ಅಭಿನಯದ ಇನ್ನಿತರ ಪ್ರಮುಖ ತಮಿಳು ಚಿತ್ರಗಳು. ಪ್ರೇಮ್ ನಜೀರ್ ಅವರಿಗೆ ನಾಯಕಿಯಾಗಿ ಅಳಕುಲ್ಲ ಸಲೀನಾ(೧೯೭೩) ಎಂಬ ಮಲಯಾಳಂ ಚಿತ್ರದಲ್ಲಿ ಕಾಂಚನಾ ಹದವರಿತ ಅಭಿನಯ ನೀಡಿದ್ದಾರೆ.

೧೯೭೦ರ ದಶಕದಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಅವರೊಂದಿಗೆ ನಾಯಕಿಯಾಗಿ ಅಮಾಯಕುರಾಲು(೧೯೭೧), ಪವಿತ್ರ ಬಂಧಂ(೧೯೭೧), ಮಂಚಿ ರೋಜುಲು ವಚ್ಚಾಯಿ(೧೯೭೨) ಮತ್ತು ಮಂಚಿವಾಡು(೧೯೭೩) ಮುಂತಾದ ಚಿತ್ರಗಳಲ್ಲಿ ಪಕ್ವ ಅಭಿನಯ ನೀಡಿದ್ದಾರೆ. ವಿ.ಮಧುಸೂಧನ್ ರಾವ್ ನಿರ್ದೇಶನದ ಕಲ್ಯಾಣ ಮಂಡಪಂ(೧೯೭೧) ಕಾಂಚನಾ ಅವರೊಳಗಿನ ಪ್ರತಿಭೆಯನ್ನು ಒರೆಗೆ ಹಚ್ಚಿದ ಮಹತ್ವಪೂರ್ಣ ಚಿತ್ರ. ಕನ್ನಡದ ಗೆಜ್ಜೆಪೂಜೆ(೧೯೭೦) ಚಿತ್ರದ ತೆಲುಗು ಅವತರಣಿಕೆಯಾದ ಈ ಚಿತ್ರದಲ್ಲಿ ಕಲ್ಪನಾ ನಿರ್ವಹಿಸಿದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ಕಾಂಚನಾ ವೇಶ್ಯೆಯ ಮಗಳಾದರು ದೇವದಾಸಿ ಪದ್ಧತಿಗೆ ಮನಸ್ಸು ಒಪ್ಪದೇ ಮದುವೆಯಾಗಿ ಗೃಹಿಣಿಯಾಗಿ ಬಾಳಬೇಕೆಂದು ಹಂಬಲಿಸುವ ಹುಡುಗಿಯೊಬ್ಬಳ ಅಂತರಂಗವನ್ನು ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿದ್ದಾರೆ. ಎನ್.ಟಿ.ರಾಮರಾವ್ ಅವರೊಂದಿಗಿನ ಅಣ್ನದಮ್ಮುಲ ಅನುಬಂಧಂ(೧೯೭೫), ಕೃಷ್ಣಂರಾಜು ಜೊತೆಗಿನ ಪರಿವರ್ತನ(೧೯೭೫) ಮತ್ತು ರಾಮಕೃಷ್ಣ ಅವರೊಂದಿಗಿನ ಪೊರುಗಿಂಟಿ ಪುಲ್ಲಕೂರ(೧೯೭೬) ಚಿತ್ರಗಳು ಕಾಂಚನಾರಿಗೆ ನಾಯಕಿಯಾಗಿ ದೊರೆತ ಕೊನೆಯ ಉತ್ತಮ ಅವಕಾಶಗಳು.

ತಮಿಳು ಮತ್ತು ತೆಲುಗಿನಲ್ಲಿ ನಾಯಕಿ ಪಾತ್ರಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಕನ್ನಡ ಚಿತ್ರರಂಗದತ್ತ ಚಿತ್ತ ಹರಿಸಿದ ಕಾಂಚನಾ ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ಬಭ್ರುವಾಹನ(೧೯೭೭), ಶಂಕರ್ ಗುರು(೧೯೭೮) ಮತ್ತು ನಾನೊಬ್ಬ ಕಳ್ಳ(೧೯೭೯) ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದಾರೆ.

೧೯೭೦ರ ದಶಕದ ಕೊನೆಯಲ್ಲಿ ಪೋಷಕ ಪಾತ್ರಗಳತ್ತ ಸರಿದ ಕಾಂಚನಾ ಸಿಗಪ್ಪು ರೋಜಾಕ್ಕಳ್(೧೯೭೮), ದೊಂಗಲು ದೋಪಿಡಿ(೧೯೭೮), ಶ್ರೀರಾಮ ಪಟ್ಟಾಭಿಷೇಕಂ(೧೯೭೯), ಜಾನಿ(೧೯೮೦) ಮತ್ತು ಮೌನ ರಾಗಂ(೧೯೮೫) ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಶಕ್ತ ಅಭಿನಯ ನೀಡಿದ್ದಾರೆ. ಶ್ರೀಮದ್ ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರ(೧೯೮೪) ಮತ್ತು ಗಿರೀಶ್ ಕಾರ್ನಾಡ್ ಅವರೊಂದಿಗಿನ ಆನಂದ ಭೈರವಿ(೧೯೮೪) ಚಿತ್ರಗಳಲ್ಲಿ ಮನೋಜ್ಞ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.

ಉತ್ತಮ ನೃತ್ಯಗಾರ್ತಿಯೂ ಆಗಿರುವ ಕಾಂಚನಾ ತಮ್ಮ ಅಭಿನಯದ ಅನೇಕ ಚಿತ್ರಗಳಲ್ಲಿ ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಶೈಲಿಯ ನೃತ್ಯಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕ ವರ್ಗದಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಭಕ್ತ ತುಕಾರಾಂ(೧೯೭೩) ಚಿತ್ರದ ಸರಿ ಸರಿ ವಗಲು ತೆಲಿಸೆರ.... ಮತ್ತು ಪೂಜಕು ವೇಳಾಯೆರ... ಗೀತೆಗಳಲ್ಲಿ ಸೊಗಸಾದ ನೃತ್ಯಾಭಿನಯ ನೀಡಿದ್ದಾರೆ. ಆತ್ಮಗೌರವಂ ಚಿತ್ರದಲ್ಲಿ ರಾಜಶ್ರೀ ಅವರೊಂದಿಗೆ ನರ್ತಿಸಿದ ಮುಂದಟಿ ವಲೆ... ಮತ್ತು ಸಮಾಜ್ ಕೋ ಬದಲ್ ಡಾಲೊ(೧೯೭೦) ಚಿತ್ರದಲ್ಲಿ ಶಾರದಾ ಅವರೊಂದಿಗೆ ನರ್ತಿಸಿದ ಪಾಯಲ್ ಚಮ್ ಚಮ್ ಬೋಲೆ... ಗೀತೆಗಳು ಕಾಂಚನಾರ ಶಾಸ್ತ್ರೀಯ ನೃತ್ಯದಲ್ಲಿನ ಪ್ರಾವೀಣ್ಯಕ್ಕೆ ಉತ್ತಮ ನಿದರ್ಶನಗಳಾಗಿವೆ. ಖ್ಯಾತ ಗಾಯಕಿ ಎಲ್.ಆರ್.ಈಶ್ವರಿ ಅವರ ಗಾಯನದ ಸಿವಂದ ಮಣ್ ಚಿತ್ರದ ಪಟ್ಟತು ರಾಣಿ... ಮತ್ತು ದೇವುಡು ಚೇಸಿನ ಮನುಷುಲು(೧೯೭೩) ಚಿತ್ರದ ಮಸಕ ಮಸಕ ಚೀಕಟಿಲೊ... ಹಾಗೂ ಪಿ.ಸುಶೀಲಾ ಗಾಯನದ ಸಿವಂದ ಮಣ್ ಚಿತ್ರದ ಸೊಲ್ಲವೋ ಸುಗಮಾನ.. ಮುಂತಾದ ಪಾಶ್ಚಾತ್ಯ ಶೈಲಿಯ ಗೀತೆಗಳಿಗೆ ಕಾಂಚನಾ ನೃತ್ಯಾಭಿನಯ ಅಮೋಘ.

ದಶಕಗಳ ಕಾಲ ತಮ್ಮ ಮೋಹಕ ನಗು, ಅಸ್ಖಲಿತ ಮಾತುಗಾರಿಕೆ, ಅಪೂರ್ವ ನೃತ್ಯ ಮತ್ತು ಭಾವಾಭಿನಯದಿಂದ ದಕ್ಷಿಣ ಭಾರತದ ಚಿತ್ರರಸಿಕರ ಕನಸಿನ ರಾಣಿಯಾಗಿ ಮೆರೆದ ಕಾಂಚನಾ ಅಂದಿನ ಪ್ರಖ್ಯಾತ ನಟರಾದ ಅಕ್ಕಿನೇನಿ ನಾಗೇಶ್ವರರಾವ್, ಎನ್.ಟಿ.ಆರ್.,ಎಂ.ಜಿ.ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಡಾ.ರಾಜ್ ಕುಮಾರ್, ಪ್ರೇಮ್ ನಜೀರ್, ಉದಯಕುಮಾರ್, ಕಾಂತಾರಾವ್, ಮುತ್ತುರಾಮನ್, ರವಿಚಂದ್ರನ್, ಕೃಷ್ಣ, ಶೋಬನ್ ಬಾಬು, ಕೃಷ್ಣಂರಾಜು ಮುಂತಾದ ಬಹುತೇಕ ಎಲ್ಲ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಕ್ಕಿನೇನಿ ನಾಗೇಶ್ವರರಾವ್ ಮತ್ತು ಕಾಂಚನಾ ಜೋಡಿ ೧೯೭೦ರ ದಶಕದ ಯಶಸ್ವಿ ಜೋಡಿಗಳಲ್ಲೊಂದಾಗಿತ್ತು. ಸಿ.ವಿ.ಶ್ರೀಧರ್, ಕೆ.ಬಾಲಚಂದರ್, ವಿ.ಮಧುಸೂಧನ್ ರಾವ್, ಕೆ.ವಿಶ್ವನಾಥ್, ಕೆ.ಎಸ್.ಪ್ರಕಾಶ್ ರಾವ್, ದೊರೈ-ಭಗವಾನ್ ಮತ್ತು ಕೆ.ಎಸ್.ಸೇತುಮಾಧವನ್ರಂತಹ ಶ್ರೇಷ್ಠ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆಗೆ ಕಾಂಚನಾ ಪಾತ್ರರು.

ವೈಯಕ್ತಿಕ ಜೀವನ

ಬದಲಾಯಿಸಿ

ವೃತ್ತಿ ಜೀವನದಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಚಿತ್ರರಸಿಕರ ಮನರಂಜಿಸಿದ್ದ ಕಾಂಚನಾ ಅವರು ವೈಯಕ್ತಿಕ ಜೀವನದಲ್ಲಿ ತಮ್ಮ ಹೆತ್ತವರಿಂದಲೇ ಮೋಸಕ್ಕೊಳಗಾಗಿ ಅತೀವ ನೋವು ಅನುಭವಿಸಿದವರು. ಹೆತ್ತವರ ಕುತಂತ್ರದಿಂದ ನಾಯಕಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ದಿನಗಳಲ್ಲಿ ಗಳಿಸಿದ ಅಪಾರ ಸಂಪಾದನೆಯಲ್ಲ ಕಳೆದುಕೊಂಡ ಇವರು ಚೆನ್ನೈ ಬಿಟ್ಟು ಬೆಂಗಳೂರಿನಲ್ಲಿರುವ ತಮ್ಮ ತಂಗಿ ಗಿರಿಜಾ ಪಾಂಡೆ ಅವರ ನೆರವಿನೊಂದಿಗೆ ಜೀವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಜೀವನದಲ್ಲಿ ಅನುಭವಿಸಿದ ಕಷ್ಟಗಳಿಂದ ನೋವುಂಡ ಕಾಂಚನಾ ದೈವಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗಳತ್ತ ಆಸಕ್ತಿ ಬೆಳೆಸಿಕೊಂಡರು. ಬೆಂಗಳೂರಿನ ಪ್ರಸಿಧ್ದ ದೇವಾಲಯವೊಂದರಲ್ಲಿ ಪ್ರತಿನಿತ್ಯ ಸೇವೆ ಮಾಡುತ್ತಿದ್ದ ಕಾಂಚನಾರನ್ನು ತಪ್ಪಾಗಿ ಅರ್ಥೈಸಿಕೊಂಡ ತಮಿಳಿನ ಜನಪ್ರಿಯ ಪತ್ರಿಕೆಯೊಂದು ಕಾಂಚನಾ ದೇವಾಸ್ಥಾನದಲ್ಲಿ ನೀಡುವ ಪ್ರಸಾದವನ್ನು ಅವಲಂಬಿಸಿ ಬದುಕುತ್ತಿದ್ದಾರೆ ಎಂದು ಬರೆದಿತ್ತು. ಆದರೆ ಪತ್ರಿಕಾ ಪ್ರಕಟಣೆಯೊಂದರಲ್ಲಿ ಸ್ಪಷ್ಟೀಕರಣ ನೀಡಿದ ಕಾಂಚನಾ ಅದೆಲ್ಲ ಸುಳ್ಳು ಮತ್ತು ಪೂರ್ವಾಗ್ರಹ ಪೀಡಿತ ಎಂದು ದುಃಖದಿಂದ ನುಡಿದಿದ್ದರು.[][]

ಕೆಲವು ವರ್ಷಗಳ ಕಾನೂನು ಹೋರಾಟ ನಡೆಸಿದ ಕಾಂಚನಾ ನ್ಯಾಯಾಲಯದಲ್ಲಿದ್ದ ಪ್ರಕರಣದಲ್ಲಿ ವಿಜಯಿಯಾಗಿ ತಾವು ಗಳಿಸಿದ ಆಸ್ಥಿಯನ್ನು ಪುನಃ ಪಡೆದುಕೊಂಡದ್ದಲ್ಲದೇ ಸುಮಾರು ೧೫ ಕೋಟಿ ಬೆಲೆಬಾಳುವ ಆಸ್ಥಿಯನ್ನು ವಿಶ್ವಪ್ರಸಿದ್ಧ ತಿರುಪತಿಯ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ.[][][][][] ಅವಿವಾಹಿತೆಯಾಗಿರುವ ಕಾಂಚನಾ ಆಗಾಗ ಚಿತ್ರರಂಗದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕಾಣಿಸಿಕೊಂಡರೂ ಬಣ್ಣದ ಬದುಕಿನೆಡೆಗೆ ಸೆಳಕಿಗೊಳಗಾಗದೆ ಮನಸ್ಸನ್ನು ದೇವರಲ್ಲಿ ಕೇಂದ್ರೀಕರಿಸಿ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ.

ಪ್ರಶಸ್ತಿ/ಪುರಸ್ಕಾರ

ಬದಲಾಯಿಸಿ
  • 'ಎಮ್.ಜಿ.ಆರ್.' ಪ್ರಶಸ್ತಿ(೨೦೦೫)[]
  • 'ಎ.ಎನ್.ಆರ್.' ಸ್ವರ್ಣಕಮಲ ಪ್ರಶಸ್ತಿ(೨೦೦೭)[]
  • 'ಕಲಾರತ್ನ' ಉಗಾದಿ ಪುರಸ್ಕಾರಂ (೨೦೧೬) [೧೦]

ಕಾಂಚನಾ ಅಭಿನಯದ ಕೆಲವು ಚಿತ್ರಗಳು

ಬದಲಾಯಿಸಿ

ತೆಲುಗು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೫ ಆತ್ಮ ಗೌರವಂ ಸಾವಿತ್ರಿ/ಸರಳ ಕೆ.ವಿಶ್ವನಾಥ್ ಅಕ್ಕಿನೇನಿ ನಾಗೇಶ್ವರರಾವ್, ರಾಜಶ್ರೀ
೧೯೬೫ ಪ್ರೇಮಿಂಚಿ ಚೂಡು ಪಿ.ಪುಲ್ಲಯ್ಯ ಅಕ್ಕಿನೇನಿ ನಾಗೇಶ್ವರರಾವ್, ಜಗ್ಗಯ್ಯ, ರಾಜಶ್ರೀ
೧೯೬೫ ಮಂಚಿ ಕುಟುಂಬಂ ವಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ಸಾಹುಕಾರ್ ಜಾನಕಿ, ಕೃಷ್ಣ, ವಿಜಯನಿರ್ಮಲ
೧೯೬೫ ವೀರಾಭಿಮನ್ಯು ಉತ್ತರಾ ವಿ.ಮಧುಸೂಧನ್ ರಾವ್ ಎನ್.ಟಿ.ರಾಮರಾವ್, ಶೋಬನ್ ಬಾಬು
೧೯೬೬ ಡಾ.ಆನಂದ್ ವಿ.ಮಧುಸೂಧನ್ ರಾವ್ ಎನ್.ಟಿ.ರಾಮರಾವ್, ಅಂಜಲಿದೇವಿ
೧೯೬೬ ನವರಾತ್ರಿ ಅಕ್ಕಿನೇನಿ ನಾಗೇಶ್ವರರಾವ್, ಸಾವಿತ್ರಿ
೧೯೬೭ ಆವೆಕಳ್ಳು ಸುಶೀಲಾ ಎ.ಸಿ.ತ್ರಿಲೋಗಚಂದರ್ ಕೃಷ್ಣ
೧೯೬೭ ಪ್ರಾಣಮಿತ್ರುಲು ಪಿ.ಪುಲ್ಲಯ್ಯ ಅಕ್ಕಿನೇನಿ ನಾಗೇಶ್ವರರಾವ್, ಜಗ್ಗಯ್ಯ, ಸಾವಿತ್ರಿ
೧೯೬೭ ಪ್ರೈವೇಟ್ ಮಾಸ್ಟರ್ ಸುಂದರಿ ಕೆ.ವಿಶ್ವನಾಥ್ ಕೃಷ್ಣ, ರಾಮ್ ಮೋಹನ್, ಸುಕನ್ಯಾ
೧೯೬೭ ಮರಪುರಾನಿ ಕಥ ವಿ.ರಾಮಚಂದ್ರ ರಾವ್ ಕೃಷ್ಣ, ವಾಣಿಶ್ರೀ, ಚಂದ್ರಮೋಹನ್
೧೯೬೭ ವೀರ ಪೂಜ ಎ.ವಿ.ಶೇಷಗಿರಿ ರಾವ್ ಕಾಂತಾ ರಾವ್
೧೯೬೭ ಶ್ರೀಕೃಷ್ಣಾವತಾರಂ ಸತ್ಯಭಾಮ ಕಮಲಾಕರ ಕಾಮೇಶ್ವರ ರಾವ್ ಎನ್.ಟಿ.ರಾಮರಾವ್, ದೇವಿಕಾ
೧೯೬೭ ಸತಿ ಸುಮತಿ ವೇದಾಂತಂ ರಾಘವಯ್ಯ ಅಂಜಲಿದೇವಿ, ಕಾಂತಾ ರಾವ್
೧೯೬೮ ಕಲಿಸೊಚ್ಚಿನ ಅದೃಷ್ಟಂ ಕೆ.ವಿಶ್ವನಾಥ್ ಎನ್.ಟಿ.ರಾಮರಾವ್
೧೯೬೮ ತಲ್ಲಿ ಪ್ರೇಮ ಶ್ರೀಕಾಂತ್ ಎನ್.ಟಿ.ರಾಮರಾವ್, ಸಾವಿತ್ರಿ, ರಾಮ್ ಮೋಹನ್
೧೯೬೮ ದೇವಕನ್ಯಾ ಕೆ.ಹೇಮಾಂಬರಧರ ರಾವ್ ಕಾಂತಾ ರಾವ್
೧೯೬೮ ನೇನಂಟೆ ನೇನೆ ವಿ.ರಾಮಚಂದ್ರ ರಾವ್ ಕೃಷ್ಣ
೧೯೬೮ ಬಂದಿಪೋಟು ದೊಂಗಾಲು ಮಲ್ಲಿ ಕೆ.ಎಸ್.ಪ್ರಕಾಶ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ಜಗ್ಗಯ್ಯ, ಜಮುನಾ
೧೯೬೮ ಭಲೇ ಕೊಡಳ್ಲು ಕೆ.ಬಾಲಚಂದರ್ ಎಸ್.ವಿ.ರಂಗರಾವ್, ಸಾಹುಕಾರ್ ಜಾನಕಿ, ಜಯಂತಿ, ರಾಮಕೃಷ್ಣ
೧೯೬೮ ವೀರಾಂಜನೇಯ ಸುಲೋಚನಾ ಕಮಲಾಕರ ಕಾಮೇಶ್ವರ ರಾವ್ ಕಾಂತಾ ರಾವ್, ಅಂಜಲಿದೇವಿ, ಜಗ್ಗಯ್ಯ
೧೯೬೮ ವಿಂತ ಕಾಪುರಂ ವಿ.ವಿ.ಸುಬ್ಬರಾವ್ ಕೃಷ್ಣ
೧೯೬೯ ಜರಿಗಿನ ಕಥ ಕೆ.ಬಾಬು ರಾವ್ ಕೃಷ್ಣ, ಜಗ್ಗಯ್ಯ
೧೯೬೯ ನಾಟಕಲ ರಾಯುಡು ಗೀತಾದೇವಿ ಎ.ಸಂಜೀವಿ ನಾಗಭೂಷಣಂ, ಹೇಮಲತ
೧೯೬೯ ಭಲೇ ಮಾಸ್ಟರು ಎಸ್.ಡಿ.ಲಾಲ್ ಎನ್.ಟಿ.ರಾಮರಾವ್
೧೯೬೯ ಮನುಷುಲು ಮಾರಾಲಿ ವಿ.ಮಧುಸೂಧನ್ ರಾವ್ ಶೋಬನ್ ಬಾಬು, ಶಾರದಾ
೧೯೭೦ ಧರ್ಮದಾತ ಪದ್ಮ ಎ.ಸಂಜೀವಿ ಅಕ್ಕಿನೇನಿ ನಾಗೇಶ್ವರರಾವ್
೧೯೭೧ ಅಮಾಯಕುರಾಲು ಡಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ಶಾರದಾ
೧೯೭೧ ಅಂದಂ ಕೋಸಂ ಪಂದೆಂ ಎ.ಶೇಷಗಿರಿ ರಾವ್ ಕಾಂತಾ ರಾವ್, ಭಾರತಿ
೧೯೭೧ ಕಲಾಣ ಮಂಡಪಂ ವಿ.ಮಧುಸೂಧನ್ ರಾವ್ ಶೋಬನ್ ಬಾಬು
೧೯೭೧ ನೇನು ಮನಿಷಿನೆ ಜಿ.ವಿ.ಆರ್.ಶೇಷಗಿರಿ ರಾವ್ ಕೃಷ್ಣ
೧೯೭೧ ತಲ್ಲಿ ಕೂತುರು ತಾತಿನೇನಿ ರಾಮರಾವ್ ಶೋಬನ್ ಬಾಬು
೧೯೭೧ ಪವಿತ್ರ ಬಂಧಂ ವಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ವಾಣಿಶ್ರೀ
೧೯೭೧ ರಂಗೇಳಿ ರಾಜ ಸಿ.ಎಸ್.ರಾವ್ ಅಕ್ಕಿನೇನಿ ನಾಗೇಶ್ವರರಾವ್
೧೯೭೨ ನೀತಿ ನಿಜಾಯಿತಿ ಸಿಂಗೀತಂ ಶ್ರೀನಿವಾಸ ರಾವ್ ಕೃಷ್ಣಂರಾಜು
೧೯೭೨ ಮಂಚಿ ರೋಜುಲು ವಚ್ಚಾಯಿ ವಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್
೧೯೭೨ ರೈತು ಕುಟುಂಬಂ ತಾತಿನೇನಿ ರಾಮರಾವ್ ಅಕ್ಕಿನೇನಿ ನಾಗೇಶ್ವರರಾವ್
೧೯೭೨ ವಂಸೋದ್ಧಾರಕುಡು ಪಿ.ಸಾಂಬಶಿವ ರಾವ್ ಶೋಬನ್ ಬಾಬು
೧೯೭೩ ತಲ್ಲಿ ಕೊಡಕುಲು ಪಿ.ಚಂದ್ರಶೇಖರ್ ರೆಡ್ಡಿ ಕೃಷ್ಣ, ಅಂಜಲಿದೇವಿ, ಕೃಷ್ಣಂರಾಜು, ಚಂದ್ರಮೋಹನ್
೧೯೭೩ ದೇವುಡು ಚೇಸಿನ ಮನುಷುಲು ಗೀತಾ ವಿ.ರಾಮಚಂದ್ರ ರಾವ್ ಎನ್.ಟಿ.ರಾಮರಾವ್, ಜಯಲಲಿತಾ, ಕೃಷ್ಣ, ವಿಜಯನಿರ್ಮಲ
೧೯೭೩ ಪೆದ್ದ ಕೊಡಕು ಕೆ.ಎಸ್.ಪ್ರಕಾಶ್ ರಾವ್ ಶೋಬನ್ ಬಾಬು
೧೯೭೩ ಭಕ್ತ ತುಕಾರಾಂ ವಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ಅಂಜಲಿದೇವಿ
೧೯೭೩ ಮಂಚಿವಾಡು ವಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ವಾಣಿಶ್ರೀ
೧೯೭೪ ತಾತಮ್ಮ ಕಾಲ ಎನ್.ಟಿ.ರಾಮರಾವ್ ಎನ್.ಟಿ.ರಾಮರಾವ್, ಭಾನುಮತಿ
೧೯೭೫ ಅಣ್ನದಮ್ಮುಲ ಅನುಬಂಧಂ ಎಸ್.ಡಿ.ಲಾಲ್ ಎನ್.ಟಿ.ರಾಮರಾವ್, ಮುರಳಿ ಮೋಹನ್, ನಂದಮೂರಿ ಬಾಲಕೃಷ್ಣ
೧೯೭೫ ಪರಿವರ್ತನ ಕೆ.ಹೇಮಾಂಬರಧರ ರಾವ್ ಕೃಷ್ಣಂರಾಜು, ಜಮುನಾ
೧೯೭೫ ಮಾಯಾ ಮಚ್ಚೀಂದ್ರ ಬಾಬುಭಾಯಿ ಮಿಸ್ತ್ರಿ ಎನ್.ಟಿ.ರಾಮರಾವ್, ವಾಣಿಶ್ರೀ
೧೯೭೬ ಪೊರುಗಿಂಟಿ ಪುಲ್ಲಕೂರ ದಾಸರಿ ನಾರಾಯಣ ರಾವ್ ರಾಮಕೃಷ್ಣ, ಮುರಳಿಮೋಹನ್, ಜಯಚಿತ್ರ
೧೯೭೬ ಮಹಾಕವಿ ಕ್ಷೇತ್ರಯ್ಯ ಸಿ.ಎಸ್.ರಾವ್-ಅದುರ್ತಿ ಸುಬ್ಬರಾವ್ ಅಕ್ಕಿನೇನಿ ನಾಗೇಶ್ವರರಾವ್, ಮಂಜುಳಾ
೧೯೭೬ ಸೆಕ್ರೆಟರಿ ಕೆ.ಎಸ್.ಪ್ರಕಾಶ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ವಾಣಿಶ್ರೀ, ಚಂದ್ರಮೋಹನ್, ಜಯಸುಧಾ
೧೯೭೭ ಇಂದ್ರಧನುಸ್ಸು ಕೆ.ಬಪ್ಪಯ್ಯ ಕೃಷ್ಣ, ಶಾರದಾ
೧೯೭೭ ದಾನವೀರ ಶೂರ ಕರ್ಣ ಸುಭದ್ರಾ ಎನ್.ಟಿ.ರಾಮರಾವ್ ಎನ್.ಟಿ.ರಾಮರಾವ್, ಶಾರದಾ
೧೯೭೭ ರಾಜ ರಮೇಶ್ ವಿ.ಮಧುಸೂಧನ್ ರಾವ್ ಅಕ್ಕಿನೇನಿ ನಾಗೇಶ್ವರರಾವ್, ವಾಣಿಶ್ರೀ
೧೯೭೮ ದೊಂಗಲು ದೋಪಿಡಿ ಎಂ.ಮಲ್ಲಿಕಾರ್ಜುನ್ ರಾವ್ ಕೃಷ್ಣ, ಶ್ರೀಪ್ರಿಯಾ
೧೯೭೮ ಶ್ರೀರಾಮ ಪಟ್ಟಾಭಿಷೇಕಂ ಕೈಕೇಯಿ ಎನ್.ಟಿ.ರಾಮರಾವ್ ಎನ್.ಟಿ.ರಾಮರಾವ್, ಸಂಗೀತಾ, ರಾಮಕೃಷ್ಣ
೧೯೭೯ ಡ್ರೈವರ್ ರಾಮುಡು ಕಲಾವತಿ ಕೆ.ರಾಘವೇಂದ್ರ ರಾವ್ ಎನ್.ಟಿ.ರಾಮರಾವ್, ಜಯಸುಧಾ
೧೯೮೪ ಶ್ರೀಮದ್ ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರ ಗೋವಿಂದಮ್ಮ ಎನ್.ಟಿ.ರಾಮರಾವ್ ಎನ್.ಟಿ.ರಾಮರಾವ್, ರತಿ ಅಗ್ನಿಹೋತ್ರಿ
೧೯೮೫ ಶ್ರೀದತ್ತ ದರ್ಶನಂ ಕಮಲಾಕರ ಕಾಮೇಶ್ವರ ರಾವ್ ಸರ್ವದಮನ್ ಬ್ಯಾನರ್ಜಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೪ ಕಾದಲಿಕ್ಕ ನೇರಮಿಲ್ಲೈ ಕಾಂಚನಾ ಸಿ.ವಿ.ಶ್ರೀಧರ್ ರವಿಚಂದ್ರನ್, ಮುತ್ತುರಾಮನ್, ರಾಜಶ್ರೀ
೧೯೬೫ ವೀರಾಭಿಮನ್ಯು ಉತ್ತರಾ ವಿ.ಮಧುಸೂಧನ್ ರಾವ್ ಎ.ವಿ.ಎಂ.ರಾಜನ್, ಜೆಮಿನಿ ಗಣೇಶನ್
೧೯೬೬ ಕೋಡಿಮಲರ್ ಪಾರ್ವತಿ ಸಿ.ವಿ.ಶ್ರೀಧರ್ ಮುತ್ತುರಾಮನ್, ಎ.ವಿ.ಎಂ.ರಾಜನ್, ವಿಜಯಕುಮಾರಿ
೧೯೬೬ ತೇಡಿ ವಂದ ತಿರುಮಗಳ್ ಎಸ್.ಎಸ್.ರಾಜೇಂದ್ರನ್, ರವಿಚಂದ್ರನ್, ವಿಜಯಕುಮಾರಿ
೧೯೬೬ ಪರಕ್ಕುಮ್ ಪಾವೈ ಶಾಂತಾ ಟಿ.ಆರ್.ರಾಮಣ್ಣ ಎಂ.ಜಿ.ರಾಮಚಂದ್ರನ್, ಬಿ.ಸರೋಜಾದೇವಿ
೧೯೬೬ ಮರಕ್ಕ ಮುಡಿಯುಮಾ ಮುರಸೋಳಿ ಮಾರನ್ ದೇವಿಕಾ, ಎಸ್.ಎಸ್.ರಾಜೇಂದ್ರನ್
೧೯೬೬ ಮೋಟರ್ ಸುಂದರಂ ಪಿಳ್ಳೈ ಬಾಲು ಶಿವಾಜಿ ಗಣೇಶನ್, ಸಾಹುಕಾರ್ ಜಾನಕಿ, ಮಣಿಮಾಲ
೧೯೬೭ ಅದೇ ಕಂಗಳ್ ಸುಶೀಲಾ ಎ.ಸಿ.ತ್ರಿಲೋಗಚಂದರ್ ರವಿಚಂದ್ರನ್
೧೯೬೭ ತಂಗೈ ಲಲಿತಾ ಎ.ಸಿ.ತ್ರಿಲೋಗಚಂದರ್ ಶಿವಾಜಿ ಗಣೇಶನ್, ಕೆ.ಆರ್.ವಿಜಯಾ
೧೯೬೭ ಭಾಮಾ ವಿಜಯಂ ಸೀತಾ ಕೆ.ಬಾಲಚಂದರ್ ಸಾಹುಕಾರ್ ಜಾನಕಿ, ಜಯಂತಿ, ಮುತ್ತುರಾಮನ್
೧೯೬೯ ಚೆಲ್ಲ ಪೆಣ್ ಕೆ.ಕೃಷ್ಣಮೂರ್ತಿ ರವಿಚಂದ್ರನ್
೧೯೬೯ ತುಲಾಭಾರಂ ವತ್ಸಲಾ ಎ.ವಿನ್ಸೆಂಟ್ ಎ.ವಿ.ಎಂ.ರಾಜನ್, ಶಾರದಾ
೧೯೬೯ ಪೊಣ್ಣು ಮಾಪಿಳ್ಳೈ ಆರ್.ರಾಮನಾಥನ್ ಜೈಶಂಕರ್
೧೯೬೯ ಶಾಂತಿ ನಿಲಯಂ ಮಾಲತಿ ಜಿ.ಎಸ್.ಮಣಿ ಜೆಮಿನಿ ಗಣೇಶನ್
೧೯೬೯ ಸಿವಂದ್ ಮಣ್ಣ್ ಚಿತ್ರಲೇಖಾ ಸಿ.ವಿ.ಶ್ರೀಧರ್ ಶಿವಾಜಿ ಗಣೇಶನ್
೧೯೭೦ ಕಾದಲ್ ಜೋತಿ ಜೈಶಂಕರ್
೧೯೭೦ ನೂರಾಂಡು ಕಾಲಂ ವಾಳ್ಗ ಕೆ.ಸಂಪತ್ ಎ.ವಿ.ಎಂ.ರಾಜನ್, ವೆನ್ನಿರಾಡೈ ನಿರ್ಮಲ
೧೯೭೧ ಅವಳುಕ್ಕೆಂಡ್ರು ಒರು ಮನಂ ಸಿ.ವಿ.ಶ್ರೀಧರ್ ಭಾರತಿ, ಜೆಮಿನಿ ಗಣೇಶನ್, ಮುತ್ತುರಾಮನ್
೧೯೭೧ ಉತ್ತರವಿಂದ್ರಿ ಉಳ್ಳೆ ವಾ ಎನ್.ಸಿ.ಚಕ್ರವರ್ತಿ ರವಿಚಂದ್ರನ್
೧೯೭೧ ಪಾಟ್ಟೊಂದ್ರು ಕೇಟ್ಟೇನ್ ಎಸ್.ರಾಘವನ್ ರವಿಚಂದ್ರನ್, ಎ.ವಿ.ಎಂ.ರಾಜನ್, ರಾಜಶ್ರೀ
೧೯೭೨ ನಾನ್ ಯೇನ್ ಪಿರಂದೇನ್ ರಾಧ ಎಂ.ಕೃಷ್ಣನ್ ಎಂ.ವಿ.ರಾಮಚಂದ್ರನ್, ಕೆ.ಆರ್.ವಿಜಯಾ
೧೯೭೩ ನ್ಯಾಯಂ ಕೇಟಿಕ್ಕಿರೊಂ ಸಿ.ವಿ.ರಾಜೇಂದ್ರನ್ ಮುತ್ತುರಾಮನ್, ಲಕ್ಷ್ಮಿ
೧೯೭೫ ಎಂಗಳುಕ್ಕುಮ್ ಕಾದಲ್ ವರುಂ ಆರ್.ವಿಠಲ್ ರವಿಚಂದ್ರನ್
೧೯೭೭ ಅವನ್ ಒರು ಸರಿತಿರಂ ಕೆ.ಎಸ್.ಪ್ರಕಾಶ್ ರಾವ್ ಶಿವಾಜಿ ಗಣೇಶನ್, ಮಂಜುಳಾ
೧೯೭೮ ಸಿಗಪ್ಪು ರೋಜಾಕ್ಕಳ್ ಪಿ.ಭಾರತಿರಾಜ ಕಮಲ್ ಹಾಸನ್, ಶ್ರೀದೇವಿ
೧೯೭೯ ಜಯಾ ನೀ ಜಯಿಚ್ಚುಟ್ಟೆ ಎ.ಜಗನ್ನಾಥನ್ ಮೇಜರ್ ಸುಂದರ್ ರಾಜನ್, ಜಯಚಿತ್ರಾ, ಪ್ರಮೀಳಾ
೧೯೭೯ ನಿನೈವಿಲ್ ಒರು ಮಲರ್
೧೯೮೦ ಜಾನಿ ಜೆ.ಮಹೇಂದ್ರನ್ ರಜನೀಕಾಂತ್, ಶ್ರೀದೇವಿ
೧೯೮೩ ಕಾಕ್ಕುಮ್ ಕಾಮಾಕ್ಷಿ ಬಿ.ವಿಠ್ಠಲಾಚಾರ್ಯ ಕೆ.ಆರ್.ವಿಜಯಾ, ರಮ್ಯ ಕೃಷ್ಣ
೧೯೮೫ ಮೌನ ರಾಗಂ ಮಣಿರತ್ನಂ ಮೋಹನ್, ಕಾರ್ತಿಕ್, ರೇವತಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೭ ಬಭ್ರುವಾಹನ ಊಲೂಪಿ ಹುಣಸೂರು ಕೃಷ್ಣಮೂರ್ತಿ ಡಾ.ರಾಜ್ ಕುಮಾರ್, ಬಿ.ಸರೋಜಾದೇವಿ, ಜಯಮಾಲ
೧೯೭೮ ಶಂಕರ್ ಗುರು ಸುಮತಿ ವಿ.ಸೋಮಶೇಖರ್ ಡಾ.ರಾಜ್ ಕುಮಾರ್, ಜಯಮಾಲ, ಪದ್ಮಪ್ರಿಯ
೧೯೭೯ ನಾನೊಬ್ಬ ಕಳ್ಳ ದೊರೈ-ಭಗವಾನ್ ಡಾ.ರಾಜ್ ಕುಮಾರ್, ಲಕ್ಷ್ಮಿ
೧೯೮೩ ಆನಂದ ಭೈರವಿ ಜಾಂಧ್ಯಾಲ ಸುಬ್ರಹ್ಮಣ್ಯ ಶಾಸ್ತ್ರಿ ಗಿರೀಶ್ ಕಾರ್ನಾಡ್
೧೯೮೩ ಭಕ್ತ_ಪ್ರಹ್ಲಾದ ದಿತಿ ವಿಜಯ್ ಡಾ.ರಾಜ್ ಕುಮಾರ್,ಸರಿತಾ, ಮಾ.ಪುನೀತ್ , ಅನಂತನಾಗ್, ಸದಾಶಿವ ಬ್ರಹ್ಮಾವರ
೧೯೮೪ ಮರ್ಯಾದೆ ಮಹಲ್ ಎ.ವಿ.ಶೇಷಗಿರಿ ರಾವ್ ಉದಯಕುಮಾರ್, ರಾಮಕೃಷ್ಣ, ಚಂದ್ರಶೇಖರ್, ರೂಪಾದೇವಿ, ಪೂರ್ಣಿಮಾ
೧೯೮೮ ಧರ್ಮಪತ್ನಿ ಎಂ.ಎಸ್.ರಾಜಶೇಖರ್ ರಾಜೇಶ್, ಲಕ್ಷ್ಮಿ

ಮಲಯಾಳಂ

ಬದಲಾಯಿಸಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೩ ಅಳಕುಲ್ಲ ಸಲೀನಾ ಕೆ.ಎಸ್.ಸೇತುಮಾಧವನ್ ಪ್ರೇಮ್ ನಜೀರ್, ಜಯಭಾರತಿ
೧೯೮೨ ಇನಾ ಐ.ವಿ.ಶಶಿ ಮಾಸ್ಟರ್ ರಘು, ದೇವಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೭ ಫರ್ಜ್ ರವಿಕಾಂತ್ ನಾಗೇಶ್ ಜಿತೇಂದ್ರ, ಬಬಿತಾ, ಅರುಣಾ ಇರಾನಿ
೧೯೬೭ ತೀನ್ ಬಹುರಾಣಿಯಾ ಎಸ್.ಎಸ್.ಬಾಲನ್-ಎಸ್.ಎಸ್.ವಾಸನ್ ಪ್ರಥ್ವಿರಾಜ್ ಕಪೂರ್, ಸಾಹುಕಾರ್ ಜಾನಕಿ, ಜಯಂತಿ, ರಮೇಶ್ ದೇವ್
೧೯೭೦ ಸಮಾಜ್ ಕೊ ಬದಲ್ ಡಾಲೊ ವಿ.ಮಧುಸೂಧನ್ ರಾವ್ ಶಾರದಾ, ಅಜಯ್ ಸಾಹ್ನಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "ದೇವರ ಚಾಕರಿ ಮಾಡುತ್ತಿದ್ದಾಕೆ ದೇವರಿಗೇ 15 ಕೋಟಿ ಆಸ್ತಿ ಕೊಟ್ಟಳು!". ಡೈಲಿ ಹಂಟ್, ಕನ್ನಡ.
  2. ೨.೦ ೨.೧ "Nothing is permanent". ದಿ ಹಿಂದು.
  3. ೩.೦ ೩.೧ ೩.೨ ೩.೩ "Kanchana… The actress whose glitter only have we seen!". ಐಡಲ್ ಬ್ರೈನ್.ಕಾಮ್.
  4. ೪.೦ ೪.೧ ೪.೨ ೪.೩ ೪.೪ "ಕಾಂಚನಾ". ನೆಟ್ ಟಿ.ವಿ.ಫಾರ್ ಯು.
  5. ೫.೦ ೫.೧ "ಕಾದಲಿಕ್ಕ ನೇರಮಿಲ್ಲೈಗೆ ೫೦ ವರ್ಷ". ದಿ ಹಿಂದು.
  6. "ಶಾಂತಿ ನಿಲಯಂ ೧೯೬೯". ದಿ ಹಿಂದು.
  7. "FORMER ACTRESS CLARIFIES". ಬಿಹೈಂಡ್ ವುಡ್.
  8. "Former Dream Girl's Rs 50 Crore donation". ನ್ಯೂ ಇಂಡಿಯನ್ ಎಕ್ಸಪ್ರೆಸ್. Archived from the original on 2016-05-05. Retrieved 2016-09-18.
  9. "Rise fall rise of Kanchana! Great Gesture!". ಸೂಪರ್ ಗುಡ್.ಕಾಮ್. Archived from the original on 2016-10-03. Retrieved 2016-09-18.
  10. "Actor Kanchana receives Ugadi puraskaram". ಟೈಮ್ಸ್ ಆಫ್ ಇಂಡಿಯಾ.