ಆರ್ಕ್ಟಿಕ
ಆರ್ಕ್ಟಿಕ ಭೂಮಿಯ ಉತ್ತರ ಧ್ರುವವನ್ನು ಸುತ್ತವರೆಯುವ ಪ್ರದೇಶ. ಈ ಪ್ರದೇಶವು ಆರ್ಕ್ಟಿಕ್ ಮಹಾಸಾಗರವನ್ನು ಹೊಂದಿದೆ. ಕೆನಡ, ಗ್ರೀನ್‍ಲ್ಯಾಂಡ್, ರಷ್ಯಾ, ಅಲಾಸ್ಕಾ, ಐಸ್‍ಲ್ಯಾಂಡ್, ನಾರ್ವೆ, ಸ್ವೀಡನ್ ಮತ್ತು ಫಿನ್‍ಲ್ಯಾಂಡ್ಗಳ ಕೆಲವು ಭಾಗಗಳು ಈ ಪ್ರದೇಶಕ್ಕೆ ಸೇರುತ್ತವೆ.ಇದನ್ನು ಉತ್ತರಮೇರು ಪ್ರದೇಶ ಎಂದೂ ಹೇಳುತ್ತಾರೆ.
ಮೇಲ್ಮೈ ಲಕ್ಷಣ
ಬದಲಾಯಿಸಿಸ್ಥೂಲವಾಗಿ ಉತ್ತರ ಅಕ್ಷಾಂಶ 66º33' ಗೆ ಉತ್ತರದಲ್ಲಿ, ಉತ್ತರಮೇರುವಿನ ಮೇಲೆ ಹಾಗೂ ಅದರ ಸುತ್ತಮುತ್ತ ಇರುವ ಪ್ರದೇಶ (ಆರ್ಕ್ಟಿಕ್ ರೀಜನ್ಸ್). ಉತ್ತರ ಶೀತವಲಯವೆಂದೂ ಕರೆಯುವುದಿದೆ. 66º33' ಉತ್ತರ ಅಕ್ಷಾಂಶವಾದ ಉತ್ತರಮೇರು ವೃತ್ತ ಇದರ ಭೌಗೋಳಿಕ ಮೇರೆಯೇನೂ ಅಲ್ಲ. ಉತ್ತರಮೇರುವಿನಿಂದ ಹಿಡಿದು ವೃಕ್ಷಬೆಳೆವಣಿಗೆಯ ಉತ್ತರದ ಅಂಚಿನವರೆಗೆ, ಒಂದೇ ಬಗೆಯ ಸ್ವಾಭಾವಿಕ ಲಕ್ಷಣಗಳಿರುವ ಪ್ರದೇಶಗಳಾದ ಗ್ರೀನ್ ಲೆಂಡ್, ಸ್ವಿಟ್ಸ್‌ಬರ್ಗನ್, ಇತರ ಉತ್ತರಮೇರು ದ್ವೀಪಗಳು, ಸೈಬೀರಿಯಾದ ಉತ್ತರದ ಸಮುದ್ರತೀರ, ಅಲಾಸ್ಕ ಹಾಗೂ ಕೆನಡಗಳ ಉತ್ತರದ ಅಂಚು, ಲ್ಯಾಬ್ರಡಾರ್ ತೀರ, ಐಸ್ಲೆಂಡಿನ ಉತ್ತರಾರ್ಧ, ಯುರೋಪಿನ ಆರ್ಕ್ಟಿಕ್ ಸಮುದ್ರತೀರ-ಇಷ್ಟು ಇದರ ವ್ಯಾಪ್ತಿ. ಈ ಭೂಪ್ರದೇಶಗಳ ನಡುವೆ ಇರುವ ಖಂಡಾಂತರ ದಿಣ್ಣೆಯ ಮೇಲೆ ಅನೇಕ ದ್ವೀಪಗಳಿವೆಯಾದರೂ ಉತ್ತರಮೇರು ಬೋಗುಣಿಯಲ್ಲಿ ಯಾವ ದ್ವೀಪಗಳೂ ಕಂಡುಬಂದಿಲ್ಲ. ಉತ್ತರಮೇರುವಿನ ಭೂಪ್ರದೇಶಗಳು ಬೆಟ್ಟಗುಡ್ಡಮಯವಾಗಿವೆ. ಇವುಗಳ ಮೈಮೇಲೆಲ್ಲ ಕಿಗ್ಗಲ್ಲು ರಾಶಿರಾಶಿಯಾಗಿ ಹರಡಿದೆ. ವಿಚ್ಛಿದ್ರ ಸಮುದ್ರತೀರಗಳಲ್ಲಿ ಅಲ್ಲಲ್ಲಿ ಮುಖಜಭೂಮಿಗಳೇರ್ಪಟ್ಟಿವೆ.
ವಾಯುಗುಣ
ಬದಲಾಯಿಸಿಉತ್ತರಮೇರು ವೃತ್ತವನ್ನು ಸಾಮಾನ್ಯವಾಗಿ ಸಮಶೀತೋಷ್ಣ ಹಾಗೂ ಶೀತಾವಲಯಗಳ ಎಲ್ಲೆಯ ರೇಖೆಯನ್ನಾಗಿ ಪರಿಗಣಿಸಬಹುದಾದರೂ ಬೇಸಿಗೆಯಲ್ಲಿ 27º ಫ್ಯಾ. ಗಿಂತಲೂ ಚಳಿಗಾಲದಲ್ಲಿ 0º ಸೆ. ಗಿಂತಲೂ ಕಡಿಮೆ ಉಷ್ಣತೆಯಿರುವ ಭಾಗಗಳು ವೈಜ್ಞಾನಿಕ ಹಾಗೂ ಸೈನಿಕ ಕಾರ್ಯಾಚರಣೆ ನಡೆಸುವವರ ದೃಷ್ಟಿಯಿಂದ ಶೀತಪ್ರದೇಶ. ನಾಲ್ಕು ತಿಂಗಳ ಬೇಸಗೆ ಹೊಂದಿದ್ದು 27º ಸೆ. (50º ಫ್ಯಾ.) ಉಷ್ಣತೆಯಿದ್ದರೆ ಅಂಥ ಪ್ರದೇಶ ಉಪಮೇರು (ಸಬ್’-ಆರ್ಕ್ಟಿಕ್) ವಲಯವೆನಿಸುತ್ತದೆ. ಉತ್ತರ ಅಲಾಸ್ಕ, ಯೂಕಾನ್, ಸೈಬೀರಿಯದಲ್ಲಿನ ಯಕೂಟ್ ಅತ್ಯಂತ ಚಳಿಪ್ರದೇಶಗಳು. ಉತ್ತರಾರ್ಧಗೋಳದಲ್ಲೇ ಪರಮಾವಧಿ ಚಳಿ ಇರುವುದು ಯಕೂಟ್ನಲ್ಲಿ. ಉತ್ತರಮೇರುವೃತ್ತ ದಿಂದ 320 ಕಿ.ಮೀ. ಮೈಲಿ ದಕ್ಷಿಣಕ್ಕಿರುವ ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ (ನೆರಳಿನಲ್ಲಿ) 56º ಸೆ. ಉಷ್ಣತೆ: ಆದರೆ ಚಳಿಗಾಲದಲ್ಲಿ ಆಗಾಗ್ಗೆ -56º ಸೆ. ನಷ್ಟು ಕಡಿಮೆ. ಇದನ್ನುಳಿದು ಬೇರೆ ಯಾವ ಉತ್ತರಮೇರು ಪ್ರದೇಶದಲ್ಲೂ-33º ಸೆ. ಗಿಂತ ಕಡಿಮೆ ಉಷ್ಣತೆ ಇರುವುದಿಲ್ಲ. ಉತ್ತರಮೇರುವಿನಲ್ಲಿ-56º ಸೆ. ಕನಿಷ್ಠ ಗೆರೆ. ಉತ್ತರಮೇರುವಿನ ಭೂಪ್ರದೇಶದಲ್ಲಿ ಬೇಸಿಗೆಯಲ್ಲಿ ಉಷ್ಣತೆ ಯಾವಾಗಲಾದರೊಮ್ಮೆ 47º ಸೆ. ಇರುವುದುಂಟು. ಯೂಕಾನಿನಲ್ಲಿ 56º ಸೆ. (ನೆರಳಿನಲ್ಲಿ) ಬೇಸಗೆ ಉಷ್ಣತೆ. ಇಷ್ಟೊಂದು ಉಷ್ಣತೆ ಶೀತವಲಯ ಪ್ರದೇಶದಲ್ಲಿ ಕಂಡುಬರುವುದು ಆಶ್ಚರ್ಯವೆನಿಸಬಹುದಾದರೂ ಇದು ಸತ್ಯ. ಇಲ್ಲಿನ ತಗ್ಗು ಪ್ರದೇಶಗಳಲ್ಲಿ ಬೇಸಗೆಯಲ್ಲಿ ಕೆಲವು ಸಮಯದಲ್ಲಿ ಸೂರ್ಯಕಿರಣ ಬಲು ಪ್ರಖರ. ಈ ಪ್ರದೇಶ ಸಮುದ್ರಮಾರುತಗಳ ಹಾಗೂ ಮಂಜುಮುಸುಕಿನ ಪರ್ವತಾವಳಿಗಳಿಂದ ಬೀಸಿಬರುವ ಮಾರುತಗಳ ಪ್ರಭಾವದಿಂದ ದೂರವಿರುವುದೇ ಇದಕ್ಕೆ ಕಾರಣ. ಈ ಪ್ರದೇಶದ ಅನೇಕ ಕಡೆಗಳಲ್ಲಿ ಬಿರುಗಾಳಿಗಳಿಲ್ಲ. ಚಂಡಮಾರುತಗಳಂತೂ ಇಲ್ಲವೇ ಇಲ್ಲ. ಪ್ರಸ್ಥಭೂಮಿ, ಪರ್ವತ ಪ್ರದೇಶ ಹಾಗೂ ಸಮುದ್ರತೀರಗಳಲ್ಲಿ ಮಾತ್ರ ಕೊಂಚ ಬಿರುಸಾಗಿ ಗಾಳಿ ಬೀಸುವುದುಂಟು. ಇಲ್ಲಿನ ಹಿಮವೃಷ್ಟಿವನ್ನು ಅಳೆಯುವುದು ಕಷ್ಟ. ಮಳೆಯೂ ಕಡಿಮೆ. ಕೆನಡ, ಅಲಾಸ್ಕಗಳಲ್ಲಿ ಬೀಳುವ ಬೇಸಿಗೆ ಮಳೆಯನ್ನೂ ಚಳಿಗಾಲದ ಹಿಮವೃಷ್ಟಿವನ್ನೂ ಸೇರಿಸಿದರೂ ವರ್ಷಕ್ಕೆ 25 ಸೆಂ.ಮೀ.ಗಳಿಗಿಂತ ಹೆಚ್ಚೇನೂ ಆಗುವುದಿಲ್ಲ. ಸೈಬೀರಿಯದ ತಗ್ಗು ಪ್ರದೇಶಗಳಲ್ಲಿ ಇವು ಇನ್ನೂ ಕಡಿಮೆ. ಉತ್ತರಮೇರು ಪ್ರದೇಶಗಳಲ್ಲಿ ಹಿಮನದಿಗಳು ಕಡಿಮೆ. 3050ಮೀ ಎತ್ತರದ ಪ್ರದೇಶಗಳಲ್ಲಿ ಕೆಲವು ಹಿಮನದಿಗಳಿವೆ. ಉತ್ತರಮೇರು ದ್ವೀಪಗಳಲ್ಲೂ ತೀರಪ್ರದೇಶಗಳಲ್ಲಿ ಆಗಾಗ್ಗೆ ಮಂಜುಕವಿಯುವುದುಂಟು. ಬೇಸಿಗೆಯಲ್ಲಿ ನೆಲದ ಉಷ್ಣತೆ 44.4º ಸೆ. ಇದ್ದರೆ, ಹತ್ತಿರದ ಸಮುದ್ರದ್ದು 16.7º ಸೆ. ಉಷ್ಣತೆಯಲ್ಲಿನ ಈ ವ್ಯತ್ಯಾಸದ ಪರಿಣಾಮವೇ ಸಮುದ್ರದ ಮಂಜು. ಇದು ಸಮುದ್ರತೀರದಲ್ಲಿ ದಟ್ಟ ಹಾಗೂ ಸಾಮಾನ್ಯ. ಇಲ್ಲಿನ ಚಳಿಗಾಲಗಳು ದೀರ್ಘ ಅತಿಶೀತಕರ. ಬೇಸಗೆ ಕಿರುದಾಗಿದ್ದರೂ ಹೆಚ್ಚು ಸೆಕೆ. ಬೇಸಗೆಯಲ್ಲಿ ಸೈಬೀರಿಯದ ತೀರಗಳು ಸಾಮಾನ್ಯವಾಗಿ ನದಿಗಳಿಂದ ಬೆಚ್ಚನೆಯ ನೀರು ಪಡೆಯುವುದರಿಂದ ಅಲ್ಲಿ ಹಿಮ ಇರುವುದಿಲ್ಲ. ವರ್ಷದಲ್ಲಿ ಹೆಚ್ಚು ಕಾಲ ಕಡಲಿನ ಮೇಲ್ಭಾಗ ಹಿಮಾಚ್ಛಾದಿತವಾಗಿರುವುದರಿಂದಲೂ ನೀರು ಆವಿಯಾಗುವುದು ಕಡಿಮೆಯಾದ್ದ ರಿಂದಲೂ ನದಿಗಳಿಂದ ವರ್ಷೇ ವರ್ಷೇ ಹೊಸ ನೀರು ಬಂದು ಸೇರುವುದರಿಂದಲೂ ಆರ್ಕ್ಟಿಕ್ ಸಾಗರದ ನೀರಿನ ಲವಣತೆ ಕಡಿಮೆ. ಪರಿಣಾಮವಾಗಿ ನೀರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಅಲಾಸ್ಕ ಹಾಗೂ ಸೈಬೀರಿಯಗಳ ಬಳಿಯ ನೀರು ಸ್ವಿಟ್ಸ್‌ಬರ್ಗನ್ ಮತ್ತು ಗ್ರೀನ್ಲೆಂಡ್ ಕಡೆಗೆ ಹರಿದು, ಅಲ್ಲಿ ಹಿಮದಿಂದ ಒಡಗೂಡಿ ದಕ್ಷಿಣದ ಕಡೆಗೆ ಶೀತಸಾಗರ ಪ್ರವಾಹಗಳಾಗಿ ಹರಿಯುತ್ತದೆ. ಇಲ್ಲಿನ ವಿಚಿತ್ರ ವಾಯುಗುಣದಿಂದಾಗಿ ಮಾನವ ಇಲ್ಲಿ ಬಲು ಎಚ್ಚರಿಕೆಯಿಂದ ವಾಸಮಾಡಬೇಕು. ವಸಂತ ಋತುವಿನ ಆವಿರ್ಭಾವ ನಿಧಾನವಾದರೂ ಅದು ಬಂದ ಕೂಡಲೆ ಎಲ್ಲೆಲ್ಲೂ ಬಿಳುಪೇ ಕಂಡು ಬರುವುದರಿಂದ ಮಂಜಿನ ಕುರುಡು ಸಂಭವಿಸಬಹುದು. ಇಲ್ಲಿ ಕ್ರಿಮಿಗಳದೂ ಒಂದು ಕಾಟ. ಇದರಿಂದ ತಪ್ಪಿಸಿಕೊಳ್ಳಲು ತಲೆಯ ಬಲೆ ಉಪಯೋಗಿಸ ಬೇಕು.
ಸಸ್ಯವರ್ಗ
ಬದಲಾಯಿಸಿಮೇರುವಿನ ಹಿಮಾಚ್ಛಾದಿತ ಪ್ರದೇಶ ವಿನಾ ಉಳಿದ ಕಡೆಗಳಲ್ಲಿರುವುದು ಹಲಬಗೆಯ ತೆಳುವಾದ ಸಮುದ್ರ ಸಸ್ಯ. ಇಲ್ಲಿನ ಸಸ್ಯಗಳ ಬೆಳೆವಣಿಗೆ ಶೀಘ್ರ. ಹೂ, ಬೀಜಗಳು ಬಿಡುವುದು ಬೇಗ. ಈ ಸಸ್ಯಗಳ ಎತ್ತರ 1 ಮೀ. ಗಿಂತ ಹೆಚ್ಚಿಲ್ಲ. ಆದರೂ ಹೂಗಳು ಆಕರ್ಷಕ. ಹಣ್ಣುಗಳು ಚಿಕ್ಕವು, ಮೃದು. ಓಟೆಯಿಲ್ಲ. ಅನೇಕ ಸಸ್ಯಗಳ ಮೆದು ತಿರುಳಿನ ಎಲೆಗಳನ್ನು ಬೇಸಗೆಯಲ್ಲಿ ಆಹಾರವಾಗಿ ಬಳಸಬಹುದು. ಶೀತವಲಯದ ಬಯಲುಗಳಲ್ಲಿ (ತಂಡ್ರ) 30% ಶಿಲಾವಲ್ಕ, 25% ತೃಣವರ್ಗದ ಸಸ್ಯ, 25% ಕುರುಚಲು, 20% ಹುಲ್ಲು ಮತ್ತು ಹೂಗಿಡಗಳಿವೆ. ದಕ್ಷಿಣಕ್ಕಿರುವ ಉಪಮೇರು ಪ್ರದೇಶದ ಉತ್ತರದ ಸೆರಗಿನಲ್ಲಿ ತೂಲಕಾಷ್ಠವೃಕ್ಷಗಳನ್ನು (ಕಾಟನ್ವುಡ್) ಕಾಣಬಹುದು. ಈ ಅಂಚಿನ ದಕ್ಷಿಣಕ್ಕೆ ಸರಲ (ಪೈನ್), ವೃಕ್ಷದಂಥ ಅನೇಕ ಶಂಕುಧಾರಿ ಮರಗಳಿರುವ ಪ್ರದೇಶವಿದೆ (ಟೈಗ). ಈ ಪ್ರದೇಶದಲ್ಲಿ ಅಲ್ಲಲ್ಲಿ ಸರಲ (ಪೈನ್), ಭೂರ್ಜ (ಬರ್ಚ್) ಮುಂತಾದ ಮರಗಳೂ ಬೆರೆತಿವೆ. ದಕ್ಷಿಣಕ್ಕೆ ಸಾಗಿದಂತೆ ಇವೇ ಹೆಚ್ಚು.
ಪ್ರಾಣಿವರ್ಗ
ಬದಲಾಯಿಸಿಖಂಡಗಳ ನೆರೆಯ ಕಡಲಿನಲ್ಲಿ ಬಗೆ ಬಗೆಯ ಮೀನುಗಳುಂಟು. ಸೀಲ್ಗಳು ಹೇರಳ. ವಿರಳವಾಗಿ ತಿಮಿಂಗಿಲಗಳೂ ಇವೆ. ಭೂಪ್ರದೇಶದಲ್ಲಿ ಪರಿಸರಕ್ಕೆ ಬಲು ಚೆನ್ನಾಗಿ ಹೊಂದಿಕೊಳ್ಳುವ ಪ್ರಾಣಿಯೆಂದರೆ ಹಿಮಸಾರಂಗ. ಹಿಮಕರಡಿಯಂತೂ ಪ್ರಸಿದ್ಧ. ದನಕರು, ಕುರಿ, ಕುದುರೆ ಮತ್ತು ಮೇಕೆಗಳನ್ನು ಸಾಕಬಹುದಾದರೂ ಲಾಭದಾಯಕವಲ್ಲ. ಹಿಮಸಾರಂಗ ತಿನ್ನದಿರುವ ಸಸ್ಯಗಳು ಕಸ್ತೂರಿ ಮೃಗದ ಆಹಾರ. ಹಿಮಸಾರಂಗದಂತೆ ಇದೂ ಮಾಂಸ, ಚರ್ಮಗಳೊಂದಿಗೆ ಉಣ್ಣೆಯನ್ನೂ ಒದಗಿಸುತ್ತದೆ. ಇಲ್ಲಿರುವ ಕೀಟಗಳಲ್ಲಿ ಅನೇಕ ಬಗೆ. ಹಲವು ಮಾರಕ. ಸೊಳ್ಳೆ ಸಾಮಾನ್ಯ. ಮರಳುನೊಣ, ಕಪ್ಪುನೊಣ ಮತ್ತು ಜಿಂಕೆನೊಣಗಳೂ ಇವೆ. ಹೆಜ್ಜೇನು ವಿರಳ. ಬಗೆ ಬಗೆಯ ಚಿಟ್ಟೆಗಳೂ ಪತಂಗಗಳೂ ಧಾರಾಳ. ಕೆಲವು ಕಡೆ ಮಿಡತೆಗಳೂ ಜೀರುಂಡೆಗಳೂ ಉಂಟು. ಏಷ್ಯದ ಮೇರುಪ್ರದೇಶದಲ್ಲಿ ಹಿಮಸಾರಂಗ, ಮೊಲ, ನರಿ, ತೋಳಗಳು ಬೇಸಗೆಯಲ್ಲಿದ್ದು, ಚಳಿಗಾಲದಲ್ಲಿ ನಿರ್ಗಮಿಸುತ್ತವೆ. ದಂಶಕ ಜಾತಿಯ ಸಂಯಾತಿಗೆ (ಲೆಮಿಂಗ್) ಹಿಮದಡಿಯ ಸಸ್ಯವೇ ಆಹಾರ. ಸೊಳ್ಳೆ, ಮೀನು ಮುಂತಾದುವನ್ನು ತಿಂದು ಬದುಕುವ ಪೆಂಗ್ವಿನ್, ಪೆಲಿಕನ್ ಇತ್ಯಾದಿ ನೀರ ಹಕ್ಕಿಗಳು ಹೆಚ್ಚು.
ಜನಜೀವನ
ಬದಲಾಯಿಸಿಉತ್ತರ-ಪಶ್ಚಿಮ ಯುರೋಪಿನ ಮೂಲವಾಸಿಗಳಾದ ಲ್ಯಾಪ್ ಜನಕ್ಕೆ ಮೀನು ಹಿಡಿಯುವುದೂ ಹಿಮಸಾರಂಗ ಸಾಕುವುದೂ ಮುಖ್ಯೋದ್ಯೋಗ. ಉತ್ತರ-ಪೂರ್ವ ಯೂರೋಪ್ ಹಾಗೂ ಪಶ್ಚಿಮ ಸೈಬೀರಿಯದ ಮೂಲವಾಸಿಗಳಾದ ಸ್ಯಾಮೊಯೆಡ್ ಗಳದೂ ಇದೇ ಬಗೆಯ ಜೀವನ. ಪೂರ್ವ ಸೈಬೀರಿಯದ ಮೂಲವಾಸಿಗಳು ಚೂಕ್ಚೀಗಳು. ಇವರಲ್ಲಿ ಒಂದು ಪಂಗಡದವರಿಗೆ ಹಿಮಸಾರಂಗದ ಹಾಲೂ ಮಾಂಸವೂ ಆಹಾರ. ಇನ್ನೊಂದು ಪಂಗಡದವರಿಗೆ ಬೇಟೆ ಹಾಗೂ ಮೀನುಗಾರಿಕೆಯಿಂದ ಜೀವನ. ಯಕೂಡ್ ಜನ ಕುದುರೆ, ಹಿಮಸಾರಂಗ ಸಾಕುತ್ತಾರೆ. ಕೆನಡದ ಉತ್ತರದ ಅಂಚಿನಲ್ಲಿರುವ ಇಂಡಿಯನ್ನರು ಅಲೆಮಾರಿಜನ. ಎಸ್ಕಿಮೋಗಳು ಪೂರ್ವ ಸೈಬೀರಿಯ, ಅಲಾಸ್ಕ, ಲ್ಯಾಬ್ರಡಾರ್ ಮತ್ತು ಗ್ರೀನ್ಲ್ಯಾಂಡ್ಗಳಲ್ಲಿ ಹರಡಿದ್ದಾರೆ. ನಾಯಿ ಇವರ ಸಾಕುಪ್ರಾಣಿ. ಸೈಬೀರಿಯ, ಕೆನಡ ಮತ್ತು ಅಲಾಸ್ಕಗಳಲ್ಲಿ ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲ ದೊರೆಯುತ್ತವೆ. ಸೋವಿಯತ್ ಮೇರುಪ್ರದೇಶದಲ್ಲಿ ಕಲ್ಲಿದ್ದಲು, ತಾಮ್ರ, ಚಿನ್ನ, ಯುರೇನಿಯಂ ಸಿಗುವುದರಿಂದ ಗಣಿಗಾರಿಕೆ ಒಂದು ಮುಖ್ಯ ಕಸಬು. ಅನೇಕ ಕಡೆಗಳಲ್ಲಿ ಪಶುಪಾಲನೆ ರೂಢಿಯಲ್ಲಿದೆ. ಹೈನು ತಯಾರಿಕೆ ಒಂದು ಉದ್ಯೋಗ. ಅನುಕೂಲವಿರುವ ಕಡೆಗಳಲ್ಲಿ ವ್ಯವಸಾಯ ರೂಢಿಯಲ್ಲುಂಟು. ಗ್ರೀನ್ಲ್ಯಾಂಡಿನಿಂದ ತಿಮಿಂಗಿಲ ತೈಲ, ಉಪ್ಪು ತುಂಬಿದ ಮೀನು, ಮಾಂಸ-ಇವು ನಿರ್ಯಾತವಾಗುತ್ತವೆ.
ಉತ್ತರಮೇರು ವಲಯದ ಪ್ರಾಮುಖ್ಯ
ಬದಲಾಯಿಸಿಪ್ರಪಂಚಲ್ಲಿ ಶೇ.90ರಷ್ಟು ಜನ ಉತ್ತರಾರ್ಧಗೋಳದಲ್ಲಿ ವಾಸಿಸುತ್ತಾರಷ್ಟೇ ಅಲ್ಲ, ಭಾರತ ಚೀನಗಳನ್ನುಳಿದು ಉತ್ತರದ ಎಲ್ಲ ಮುಖ್ಯ ರಾಷ್ಟ್ರಗಳ ರಾಜಧಾನಿಗಳೂ ಭೂಮಧ್ಯ ರೇಖೆಗಿಂತ ಉತ್ತರ ಮೇರುವೃತ್ತಕ್ಕೆ ಹೆಚ್ಚು ಸಮೀಪವಾಗಿವೆಯೆಂಬುದು ಗಮನಾರ್ಹ. ಆಯಕಟ್ಟಿನ ದೃಷ್ಟಿಯಿಂದ ಈ ಪ್ರದೇಶಕ್ಕೆ ಹೆಚ್ಚಿನ ಪ್ರಾಮುಖ್ಯ. ವಾಣಿಜ್ಯ ದೃಷ್ಟಿಯಿಂದಲೂ ಇಲ್ಲಿನ ಸಂಚಾರಮಾರ್ಗಗಳು ಮುಖ್ಯವಾಗಿವೆ.
ಅಭಿವೃದ್ಧಿ
ಬದಲಾಯಿಸಿಈ ಪ್ರದೇಶದ ಸಂಪತ್ತಿನ ಉಪಯೋಗ ಎರಡು ಬಗೆ: ಒಂದು ಪುರಾತನವಾದರೆ ಇನ್ನೊಂದು ಅಧುನಿಕ. ಕೆಲವು ಜನಾಂಗಗಳು ಈಗಲೂ ಪ್ರಾಚೀನ ರೀತಿಯ ಕೃಷಿ, ಬೇಟೆ, ಮೀನುಗಾರಿಕೆಗಳನ್ನವಲಂಬಿಸಿವೆ. ಈಚೆಗೆ ಇಲ್ಲಿ ಖನಿಜೋದ್ಯಮಗಳೂ ನಿರ್ಯಾತಾವ ಲಂಬಿ ಉದ್ಯಮಗಳೂ ಬೆಳೆಯುತ್ತಿವೆ. ತುಪ್ಪುಳ ವ್ಯಾಪಾರ, ಗಣಿಗಾರಿಕೆ, ವಿದ್ಯುತ್ ಉತ್ಪತ್ತಿ, ಮರದ ತಿರುಳು (ಪಲ್ಪ್) ತಯಾರಿಕೆಗಳು ಮುಖ್ಯ. ದೊಡ್ಡ ಉದ್ಯಮಗಳು ಬಹುತೇಕ ಸರ್ಕಾರದ ವಶಕ್ಕೆ ಅಥವಾ ಹತೋಟಿಗೊಳಪಟ್ಟಿರುವುದು ಗಮನಾರ್ಹ. ಸೋವಿಯತ್ ಒಕ್ಕೂಟ ಪ್ರದೇಶದಲ್ಲಿ ಇವು ಸಂಪೂರ್ಣವಾಗಿ ಸರ್ಕಾರದ ವಶ. ಗ್ರೀನ್ಲೆಂಡಿನ ದೊಡ್ಡ ಉದ್ಯಮಗಳೂ ಸರ್ಕಾರದ ಏಕಸ್ವಾಮ್ಯಕ್ಕೊಳಪಟ್ಟಿವೆ. ಪಶ್ಚಿಮ ಯೂರೋಪು, ಕೆನಡ, ಅಲಾಸ್ಕಗಳಲ್ಲಿ ಖಾಸಗಿ ಉದ್ಯಮ ಸಂಸ್ಥೆಗಳಿಗೆ ಸರ್ಕಾರಗಳ ಸಹಾಯಧನ ಹೆಚ್ಚಾಗಿ ದೊರಕುತ್ತಿದೆ. ಭೌಗೋಳಿಕ ಕಾರಣಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಾರಿಗೆಗಿಂತ ವಿಮಾನ ಹಾಗೂ ಹಡಗುಸಾರಿಗೆ ವ್ಯವಸ್ಥೆಗಳು ಹೆಚ್ಚು ಪ್ರಗತಿ ಹೊಂದಿವೆ. ಉತ್ತರಮೇರು ಪ್ರದೇಶದ ಮೂಲಕ ಪೂರ್ವದ ರಾಷ್ಟ್ರಗಳಿಗೆ ಹಾದಿ ಕಂಡುಹಿಡಿಯುವ ಯತ್ನ ಹಿಂದಿನಿಂದಲೂ ನಡೆಯುತ್ತಿತ್ತು. ಅಲಾಸ್ಕವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಕೊಂಡದ್ದು ಬಹುಮಟ್ಟಿಗೆ ಈ ಉದ್ದೇಶದಿಂದಾಗಿಯೆ. ಈಚೆಗೆ ಪೂರ್ವ ಪಶ್ಚಿಮ ಗೋಳಗಳ ಕೆಲವು ವಿಮಾನ ಮಾರ್ಗಗಳು ಈ ಮೂಲಕ ಹಾದು ಹೋಗುತ್ತವೆ. ಉತ್ತರಮೇರು ವಲಯದ ಎಲ್ಲ ಪ್ರದೇಶಗಳ ಮೇಲೂ ಒಂದಿಲ್ಲೊಂದು ರಾಷ್ಟ್ರದ ಒಡೆತನ ಇದ್ದೇ ಇದೆ. ಗ್ರೀನ್ಲೆಂಡ್ನ ಮೇಲೆ ಡೆನ್ಮಾರ್ಕಿನ್ ಒಡೆತನ ನಡೆದುಕೊಂಡು ಬಂದಿದ್ದು ನಾರ್ಸ್ ವಸತಿಯ ಕಾಲದಿಂದ. ಸ್ವಿಟ್ಸ್ ಬರ್ಗನ್ ದ್ವೀಪಸ್ತೋಮದ ಭಾಗವಾದ ಸ್ವಾಲ್ ಬಾರ್ ದ್ವೀಪಾವಳಿ 1920ರ ಒಪ್ಪಂದ ಪ್ರಕಾರ ನಾರ್ವೆಗೆ ಸೇರಿತು. ಸೋವಿಯತ್ ಪ್ರದೇಶದ ಉತ್ತರಕ್ಕಿರುವ ದ್ವೀಪಗಳು ರಷ್ಯಕ್ಕೆ ಸೇರಿದವೆಂದು ಸಾರಲಾದದ್ದು 1916ರಲ್ಲಿ. ಮುಂದೆ 1926ರಲ್ಲಿ ಸೋವಿಯತ್ ಒಕ್ಕೂಟ ಮತ್ತೆ ಈ ದ್ವೀಪಗಳ ಮೇಲೆ ತನ್ನ ಹಕ್ಕು ಘೋಷಿಸಿತು. ಕೆನಡದ ಕಡೆಯ ಉತ್ತರ ಮೇರು ಪ್ರದೇಶವನ್ನು ಬ್ರಿಟನ್ನು 1880ರಲ್ಲೇ ಕೆನಡಕ್ಕೆ ಬಿಟ್ಟುಕೊಟ್ಟಿತ್ತಾ ದರೂ ಆ ಪ್ರದೇಶ ತನ್ನದೇ ಎಂದು ಕೆನಡ ಬಹಿರಂಗವಾಗಿ ಸಾರಿದ್ದು 1908ರಷ್ಟು ಈಚೆಗೆ. ಅಮೆರಿಕ ಸಂಯುಕ್ತಸಂಸ್ಥಾನ ಅಲಾಸ್ಕವನ್ನು ಕೊಂಡದ್ದು 1867ರಲ್ಲಿ. ಉತ್ತರಮೇರುವಿನ ಮೇಲೆ ಮಾತ್ರ ಯಾರ ಒಡೆತನವೂ ಇಲ್ಲ. ಇದು ವಿಶಾಲ ಸಮುದ್ರದ ನಡುವೆ ಇರುವುದರಿಂದ ಅಂತರರಾಷ್ಟ್ರೀಯ ಒಡಂಬಡಿಕೆಯ ಪ್ರಕಾರ ಯಾವ ರಾಷ್ಟ್ರವೂ ಇದರ ಮೇಲೆ ಹಕ್ಕು ಸ್ಥಾಪಿಸುವಂತಿಲ್ಲ.
ಉತ್ತರ ಮೇರು ವಲಯದ ಭೂವಿನ್ಯಾಸ
ಬದಲಾಯಿಸಿಇಲ್ಲಿನ ಭೂಭಾಗಗಳು ಮುಖ್ಯವಾಗಿ ಅತಿಪುರಾತನ ಶಿಲೆಗಳಿರುವ ನಾಲ್ಕು ಕೇಂದ್ರಗಳ ಸುತ್ತ ಶೇಖರಗೊಂಡು ಕ್ರಮೇಣ ಈಗಿನ ಪರಿಸ್ಥಿತಿ ತಲೆದೋರಿತು. ಇವುಗಳಲ್ಲಿ ಅತಿದೊಡ್ಡದು ಕೆನಡಿಯನ್ ಶಾಶ್ವತಭೂಖಂಡ. ಇದರಮೇಲೆ ಕೆನಡಿಯನ್ ಮೇರು ಪ್ರದೇಶದ ಬಹುಭಾಗ ಹರಡಿದೆ. ಅಲ್ಲದೆ ಪೂರ್ವದತ್ತ ಬ್ಯಾಫಿನ್ ಕೊಲ್ಲಿಯ ಅಡಿಯಲ್ಲಿ ಹರಡಿ ಗ್ರೀನ್ಲೆಂಡಿನ ಬಹುತೇಕ ಭಾಗವನ್ನೂ ಒಳಗೊಂಡಿದೆ. ಬಾಲ್ಟಿಕ್ ಶಾಶ್ವತಭೂಭಾಗ ಫಿನ್ಲೆಂಡನ್ನು ಕೆಂದ್ರಭಾಗದಲ್ಲಿ ಅಳವಡಿಸಿಕೊಂಡಿದೆ ಮತ್ತು ಇಡೀ ಉತ್ತರಸ್ಕಾಂಡಿನೇವಿಯ ಮತ್ತು ವಾಯವ್ಯ ರಷ್ಯವನ್ನು ಒಳಗೊಂಡಿದೆ. ಇತರ ಎರಡು ಶಾಶ್ವತ ಭೂಖಂಡಗಳು ವಿಸ್ತೀರ್ಣದಲ್ಲಿ ಕಿರಿಯವು. ಇವುಗಳಲ್ಲೊಂದಾದ ಅಂಗಾರ ಖಂಡಕೇಂದ್ರ ಸೈಬೀರಿಯದ ಉತ್ತರಭಾಗದಲ್ಲಿನ ಖಟಾಂಗಾ ಮತ್ತು ಲೇನಾ ನದಿಗಳ ನಡುವೆಯೂ ಮತ್ತೊಂದು ಶಾಶ್ವತ ಭೂಖಂಡವಾದ ಕೊಲಿಮಾ ನೈರುತ್ಯ ಸೈಬೀರಿಯ ಪ್ರಾಂತ್ಯದಲ್ಲೂ ಕಂಡುಬಂದಿವೆ. ಶಾಶ್ವತ ಭೂಭಾಗಗಳ ನಡುವೆ ಅದರಲ್ಲೂ ಅವುಗಳ ಅಂಚಿನುದ್ದಕ್ಕೂ ದೀರ್ಘ ಕಾಲದ ಸ್ತರ ಸಂಗ್ರಹಣಕಾರ್ಯ ನಡೆದ ಆಧಾರಗಳಿವೆ. ಹೀಗಾಗಿ ಹಲವು ಕಡೆ ಶಾಶ್ವತ ಭೂಭಾಗಗಳು ಜಲಜಶಿಲಾಸ್ತರಗಳಿಂದ ಮುಚ್ಚಿಹೋಗಿರುವುದೂ ಉಂಟು. ಇನ್ನು ಕೆಲವು ಪ್ರದೇಶಗಳಲ್ಲಿ ಹೀಗೆ ಶೇಖರವಾದ ಶಿಲಾಪ್ರಸ್ತರಗಳು ಮಡಿಕೆಬಿದ್ದು ಪರ್ವತಗಳಾಗಿ ರೂಪು ಗೊಂಡು ಕ್ರಮೇಣ ಭೂಸವೆತಕ್ಕೊಳಗಾಗಿ ನಶಿಸಿಹೋಗಿರುವುದೂ ಉಂಟು. ಉತ್ತರಮೇರು ಪ್ರದೇಶದಲ್ಲಿ ಎರಡು ಪ್ರಮುಖ ಪರ್ವತಗಳು ಜನಿಸಿದ ಕಾಲಗಳನ್ನು ಗುರುತಿಸಿದ್ದಾರೆ. ಪೆಲಿಯೊಜೋ಼ಯಿಕ್ ಕಲ್ಪದಲ್ಲಿ (600 ದ.ಲ.ವ. ಪ್ರಾಚೀನದಿಂದ 225 ದ.ಲ.ವ ಪ್ರಾಚೀನದ ವರೆಗೆ) ಕ್ಲಿಷ್ಟರಚನೆಯ ಪರ್ವತಗಳು ಮೈವೆತ್ತವು. ಇವುಗಳಲ್ಲಿ ಕೆಲೆಡೋನಿಯನ್ ಮತ್ತು ಹರ್ಸಿನಿಯನ್ ಪರ್ವತಗಳು ಜನಿಸಿದ ಯುಗಗಳ ಕುರುಹುಗಳನ್ನು ಗುರುತಿಸಬಹುದು. ಈ ಪ್ರರ್ವತ ಶ್ರೇಣಿ ಕ್ವೀನ್ ಎಲಿಜ಼ಬೆತ್ ದ್ವೀಪಗಳಿಂದ ಮೊದಲಾಗಿ ಪೀರಿಲ್ಯಾಂಡಿನಲ್ಲಿ ಹಾದು ದಕ್ಷಿಣಕ್ಕೆ ಗ್ರೀನ್ಲೆಂಡಿನ ಪೂರ್ವತೀರದುದ್ದಕ್ಕೂ ವಿಸ್ತರಿಸಿದೆ. ಇದೇ ಭೂಕಾಲದಲ್ಲಿ ಸ್ವಾಲ್ಬಾರ್ಡ್, ನಾವಯ ಝಿಂಲ್ಯಾ ಉತ್ತರಯೂರಲ್, ಟೆಮೀರ್ ಪ್ರಸ್ಥಭೂಮಿ, ಸ್ವೆವಿರ್ನಯ ಝಿಂಲ್ಯಾ-ಈ ಪ್ರದೇಶಗಳಲ್ಲಿ ಪರ್ವತಜನ್ಯಕ್ರಿಯೆ ತಲೆದೋರಿತು. ಈ ಎಲ್ಲ ಪರ್ವತಪಂಕ್ತಿಗಳೂ ಸಮುದ್ರದ ಅಡಿಯಲ್ಲಿ ಹೇಗೆ ಪರಸ್ಪರ ಅನುಸರಿಸಿ ಮಿಳಿತವಾಗಿವೆ ಎಂಬುದು ಬಿಡಿಸಲಾಗದ ಒಗಟು. ಎರಡನೆಯ ಪರ್ವತಗಳ ಜನನಕ್ರಿಯೆ ಮೀಸೊಜೋ಼ಯಿಕ್ (225 ದ.ಲ.ವ. ಪ್ರಾಚೀನ ದಿಂದ 65 ದ.ಲ.ವ. ಪ್ರಾಚೀನದವರೆಗೆ) ಮತ್ತು ಸೀನೋಜೋ಼ಯಿಕ್ ಕಲ್ಪಗಳಲ್ಲಿ (65 ದ.ಲ.ವ. ಪ್ರಾಚೀನದಿಂದ ಇಂದಿನವರೆಗೆ) ತಲೆದೋರಿತು. ಇದಕ್ಕೆ ಸಂಬಂಧಿಸಿದ ಪರ್ವತಗಳು ನೈರುತ್ಯ ಸೈಬೀರಿಯ ಮತ್ತು ಅಲಾಸ್ಕಗಳಲ್ಲಿವೆ. ಮಟ್ಟವಾದ ಅಥವಾ ಅಷ್ಟಾಗಿ ಮಡಿಕೆಬಿದ್ದಿರದ ಶಿಲಾಪ್ರಸ್ತರಗಳು ಉತ್ತರ ಕೆನಡ ಶಾಶ್ವತ ಭೂಭಾಗದ ತಗ್ಗು ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಕಂಡುಬಂದಿವೆ. ಉತ್ತರ ರಷ್ಯ ಪಶ್ಚಿಮ ಮತ್ತು ಕೇಂದ್ರ ಸೈಬೀರಿಯಗಳಲ್ಲಿ ಜಲಜಶಿಲಾನಿಕ್ಷೇಪಗಳು ಹೇರಳವಾಗಿವೆ. ಇವುಗಳ ವಯಸ್ಸು ಪೇಲಿಯೊಜೋ಼ಯಿಕ್ ಕಲ್ಪದಿಂದ ಕ್ವಾಟರ್ನರಿ ಕಲ್ಪದವರೆಗೆ. ಟರ್ಷಿಯರಿ ಕಲ್ಪದಲ್ಲಿ (65 ದ.ಲ.ವ. ಪ್ರಾಚೀನದಿಂದ 11 ದ.ಲ.ವ. ಪ್ರಾಚೀನದವರೆಗೆ) ಉತ್ತರ ಮೇರುವಿನ ಎರಡು ಪ್ರದೇಶಗಳಲ್ಲಿ ಅಗ್ನಿಶಿಲೆಗಳಿಗೆ ಸಂಬಂಧಿಸಿದ ಚಟುವಟಿಕೆ ಕಾಣಬಂತು, ಒಂದು ಪ್ರದೇಶದಲ್ಲಿ ಈ ಚಟುವಟಿಕೆ ಉತ್ತರ ಪೆಸಿಫಿಕ್ಕಿನ ಪರ್ವತಜನನ ಕಾರ್ಯಾಚರಣೆಗೆ ಸಂಬಂಧಿಸಿದೆ. ಈ ವಲಯದ ಜ್ವಾಲಾಮುಖಿಗಳನ್ನು ಇಂದಿಗೂ ಎರಡು ಮುಖ್ಯ ಜಾಡುಗಳಲ್ಲಿ ಕಾಣಬಹುದು. ಮೊದಲನೆಯ ಜಾಡು ಕಾಮ್ಚಾಟ್ಕ, ಅಲ್ಯೂಷಿಯನ್ ದ್ವೀಪಗಳು ಮತ್ತು ಅಲಾಸ್ಕ ದ್ವೀಪಗಳನ್ನೊಳಗೊಂಡಿದೆ. ಮತ್ತೊಂದು ಜಾಡು ಉತ್ತರ ಅಟ್ಲಾಂಟಿಕ್ ಸಾಗರವನ್ನು ಹಾದು ಇಡೀ ಐಸ್ಲೆಂಡ್, ಜಾನ್ ಮೆಯಿನ್ ದ್ವೀಪ ಮತ್ತು ಗ್ರೀನ್ಲೆಂಡುಗಳನ್ನೊಳಗೊಂಡಿದೆ. ಇಂದಿಗೂ ಈ ಜಾಡುಗಳಲ್ಲಿ ಹಲವಾರು ಜಾಗೃತ ಜ್ವಾಲಾಮುಖಿಗಳೂ ನೂರಾರು ಬಿಸಿನೀರಿನ ಚಿಲುಮೆಗಳೂ ಇವೆ. ಸು. 7,50,000 ವರ್ಷಗಳ ಹಿಂದೆ ಈಗಿನ ಮೇರು ಪ್ರದೇಶಗಳ ವಾಯುಗುಣದಲ್ಲಿ ತೀವ್ರ ಬದಲಾವಣೆಗಳು ತಲೆದೋರಿ ಹವಾಗುಣವು ಅತಿ ಶೀತಗೊಂಡು ಇಡೀ ಭೂಭಾಗ ನೀರ್ಗಲ್ಲ ಹಾಳೆಗಳಿಂದ ಮುಚ್ಚಿಹೋಯಿತು. ಹೀಗಾಗಿ ಹಿಮಯುಗವೇ ಪ್ರಾರಂಭವಾಯಿತು. ಉತ್ತರ ಅಮೆರಿಕದಲ್ಲಿ ನೀರ್ಗಲ್ಲ ಹಾಳೆ ಬ್ಯಾಫಿನ್ ದ್ವೀಪದಲ್ಲಿ ಮೊದಲಾಗಿ ಕ್ರಮೇಣ ದಕ್ಷಿಣ ಮತ್ತು ಪಶ್ಚಿಮದತ್ತ ವರ್ಧಿಸುತ್ತ ಹಲವಾರು ಸಣ್ಣಪುಟ್ಟ ಹಿಮನದಿಗಳನ್ನೂ ಅಳವಡಿಸಿಕೊಂಡು ವಿಸ್ತಾರವಾಗಿ ಬೆಳೆದು ಬೃಹದಾಕಾರದ ಲಾರೆಂಟೈಡ್ ನೀರ್ಗಲ್ಲ ಹಾಳೆ ಎನಿಸಿತು. ಪಶ್ಚಿಮ ಭಾಗದಲ್ಲಿ ಕಿರಿದಾದ ನೀರ್ಗಲ್ಲ ಹಾಳೆ ತಲೆದೋರಿತು. ಹೀಗಾಗಿ ಅಟ್ಲಾಂಟಿಕ್ ಸಾಗರದ ಮೇರು ವಲಯದ ದ್ವೀಪಗಳೆಲ್ಲ ನೀರ್ಗಲ್ಲಿನಿಂದ ಮುಚ್ಚಿಹೋಗಿದ್ದುವು. ಐಸ್ಲೆಂಡಿನ ಹಲಕೆಲವು ಪರ್ವತ ಶಿಖರಗಳು ಮಾತ್ರ ತಲೆ ಎತ್ತಿ ನಿಂತಿದ್ದುವು. ಯುರೋಪಿನಲ್ಲಿ ಸ್ಕಾಂಡಿನೇವಿಯನ್ ನೀರ್ಗಲ್ಲಿನ ಹಾಳೆ ರಷ್ಯದ ಇಡೀ ಉತ್ತರ ಭಾಗವನ್ನೆಲ್ಲ ಆವರಿಸಿತ್ತು. ಪೂರ್ವ ಸೈಬೀರಿಯ ಈ ಹಿಮಯುಗದ ಪ್ರಭಾವಕ್ಕೆ ಅಷ್ಟಾಗಿ ಒಳಪಟ್ಟಿರಲಿಲ್ಲ. ಆದರೆ ಇಲ್ಲಿ ಇನ್ನೂ ಹಳೆಯ ಭೂಯುಗದಲ್ಲಾದ ನೀರ್ಗಲ್ಲಿನ ಪ್ರಭಾವದ ಗುರುತುಗಳನ್ನು ಕಾಣಬಹುದು. ಕ್ರಮೇಣ ನೀರ್ಗಲ್ಲು ಕರಗಲು ಪ್ರಾರಂಭವಾಗಿ ವಿಶಾಲವಾದ ನೀರ್ಗಲ್ಲಿನ ಪ್ರಸ್ತರಗಳು ಗಾತ್ರದಲ್ಲಿ ಕುಗ್ಗಿ ಅವುಗಳಿಂದ ಮುಚ್ಚಿಹೋಗಿದ್ದ ಪ್ರದೇಶಗಳಲ್ಲಿ ಹೊಸರೀತಿಯ ಭೂವಿನ್ಯಾಸವೇ ತಲೆದೋರಿತು. ಮೇರು ಪ್ರದೇಶದಲ್ಲಿ ಅಷ್ಟಾಗಿ ಸಸ್ಯಸಮೃದ್ಧಿಯಿಲ್ಲದ ಕಾರಣ ಹೀಗೆ ಉಂಟಾದ ಭೂ ರಚನೆಯ ವಿವರಗಳು ಬಲು ಸ್ಪಷ್ಟವಾಗಿ ಗೋಚರವಾಗುತ್ತವೆ. ನೀರ್ಗಲ್ಲ ಪ್ರವಾಹಗಳು ಉತ್ತರ ಕೆನಡ ಮತ್ತು ಫಿನ್ಲೆಂಡ್ ದೇಶಗಳ ಅಗ್ನಿಶಿಲಾಪ್ರಾಂತ್ಯದಲ್ಲಿ ಅಸಂಖ್ಯಾತ ಹಳ್ಳಕೊಳ್ಳಗಳನ್ನೂ ನೂರಾರು ಸಣ್ಣಪುಟ್ಟ ಸರೋವರಗಳನ್ನೂ ನಿರ್ಮಿಸಿವೆ. ತಗ್ಗುಪ್ರದೇಶಗಳಲ್ಲಿ ಗಡುಸಾಗಿರುವ ಶಿಲೆಗಳಿರುವ ಕಡೆ ಅಷ್ಟು ಹೆಚ್ಚಿನ ಏರುಪೇರುಗಳಿರದ ಭೂವಿನ್ಯಾಸವನ್ನು ಕಾಣಬಹುದು. ಅಲ್ಲಲ್ಲೇ ಏಣುಗಳೂ ನೀರ್ಗಲ್ಲ ನಿಕ್ಷೇಪಗಳ ಗುಡ್ಡಗಳೂ ಕಾಣಸಿಗುತ್ತವೆ. ಎತ್ತರ ಭೂಪ್ರದೇಶ ಗಳಲ್ಲಿ ಹೀಗೆ ಉಂಟಾದ ವಿಶಾಲವಾದ ಆಕೃತಿಯ ಕಣಿವೆಗಳನ್ನೂ ನೋಡಬಹುದು. ಸಮುದ್ರ ತೀರಗಳಲ್ಲಿ ಕಚ್ಚು ಕಚ್ಚಾದ ಫಿಯರ್ಡ್ ಎಂಬ ವಿಶಿಷ್ಟರೀತಿಯ ಭೂವಿನ್ಯಾಸವನ್ನೂ ನೋಡಬಹುದು. ಈ ತೆರನಾದ ವಿನ್ಯಾಸ ದಕ್ಷಿಣ ಅಲಾಸ್ಕ, ಪೂರ್ವಕೆನಡ, ಗ್ರೀನ್ಲೆಂಡ್, ನಾರ್ವೆ, ಐಸ್ಲೆಂಡ್ ಮತ್ತು ಹಲವಾರು ಸಣ್ಣಸಣ್ಣ ದ್ವೀಪಗಳ ತೀರಗಳಲ್ಲಿ ಕಾಣಬಹುದು. ಪ್ಲೀಸ್ಟೊಸೀನ್ ಪರ್ವದಲ್ಲಿ (1 ದ.ಲ.ವ. ಪ್ರಾಚೀನದಿಂದ ಇಂದಿನವರೆಗೆ) ನೀರ್ಗಲ್ಲಿನ ಹಾಳೆಗಳು ಕರಗಿದ ಕಾರಣ ಮೇರು ಪ್ರದೇಶದ ತಗ್ಗು ಭೂಭಾಗಗಳನ್ನು ಸಮುದ್ರ ಅತಿಕ್ರಮಿಸಿ ವಿಸ್ತಾರವಾದ ಪ್ರದೇಶಗಳು ಮುಳುಗಡೆಯಾದುವು. ಕಾಲಕ್ರಮೇಣ ಹಲವು ಭೂಚಟುವಟಿಕೆಗಳಿ ಗೊಳಗಾಗಿ ಮತ್ತೆ ಮೇಲಕ್ಕೆ ಎದ್ದುವು. ಸಮುದ್ರಮಟ್ಟದಿಂದ ಎತ್ತರದಲ್ಲಿರುವ ಕರಾವಳಿ ನಿಕ್ಷೇಪಗಳು ಮತ್ತು ಸಮುದ್ರ ನಿಕ್ಷೇಪಗಳಿಂದ ಈ ಬಗೆಯ ಭೂ ಪ್ರದೇಶಗಳನ್ನು ಗುರುತಿಸ ಬಹುದು. ಪಶ್ಚಿಮ ಮತ್ತು ಮದ್ಯ ಕೆನಡ ಪ್ರದೇಶಗಳಲ್ಲಿ ಈ ಬಗೆಯ ನಿಕ್ಷೇಪಗಳು ಪ್ರಸ್ತುತ ಸಮುದ್ರ ಮಟ್ಟದಿಂದ 152ಟ-215ಟ ಎತ್ತರದಲ್ಲೂ ಪೂರ್ವ ಭಾಗದಲ್ಲಿ ಸು. 90ಮೀ. ಎತ್ತರದಲ್ಲೂ ಕಂಡುಬಂದಿವೆ. ಅಲ್ಲದೆ ಯೂರೇಷಿಯದ ಮೇರು ಪ್ರದೇಶದ ಅನೇಕ ಕಡೆ ಈ ಭೂಕುರುಹುಗಳನ್ನು ಗುರುತಿಸಬಹುದು. ಇದೂ ಅಲ್ಲದೆ ಸ್ಟಾಲ್ಬಾರ್ಡ್, ಎಲ್ಲೆಸ್ಮಿಯರ್ ದ್ವೀಪ, ಉತ್ತರ ಯೂರಲ್, ಫ್ರಾನ್ಸ್ ಜೋಸೆಫ್ ಪರ್ಯಾಯದ್ವೀಪ ಭಾಗಗಳಲ್ಲೂ ಈ ವಿಶಿಷ್ಟ ಭೂಲಕ್ಷಣಗಳನ್ನು ಸಮುದ್ರಮಟ್ಟದಿಂದ 456 ಮೀ. ಎತ್ತರದಲ್ಲಿ ಕಾಣಲು ಸಾಧ್ಯ. ಕೆನಡದ ಅನೇಕ ಕಡೆ ಇದಕ್ಕೆ ಸಂಬಂಧಿಸಿದ ಭೂಚಟುವಟಿಕೆ ಇನ್ನೂ ನಡೆಯುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳು ದೊರೆತಿವೆ. ಅಲ್ಲದೆ ಪ್ರತಿ ನೂರು ವರ್ಷಕ್ಕೆ 1ಮೀ.ಗಳಷ್ಟು ಮೇಲಕ್ಕೆ ಭೂಭಾಗಗಳು ಏಳುತ್ತಿವೆ ಎಂದೂ ಅಭಿಪ್ರಾಯ ಪಡಲಾಗಿದೆ. ಹೀಗೆಯೇ ಹಲವು ಕಡೆ ಭೂಕುಸಿತಗಳೂ ಆಗುತ್ತಿವೆ. ಮೇರು ಪ್ರದೇಶದ ಭೂವಿನ್ಯಾಸ ಬಲುಮಟ್ಟಿಗೆ ಪ್ಲಿಸ್ಟೊಸೀನ್ ಪರ್ವದ ನೀರ್ಗಲ್ಲ ಪ್ರವಾಹಗಳಿಗೆ ಸಂಬಂಧಿಸಿದ್ದರೂ ಮುಖ್ಯ ಭೂಲಕ್ಷಣಗಳು ಕೇವಲ ಇದನ್ನೇ ಅನುಸರಿಸದೆ ಮೂಲ ಭೂರಚನೆಯನ್ನೂ ಅವಲಂಬಿಸಿವೆ. ಶಾಶ್ವತ ಭೂಖಂಡಗಳಾದ ಕೆನಡಿಯನ್ ಮತ್ತು ಬಾಲ್ಟಿಕ್ ಪ್ರದೇಶಗಳಿಗೆ ಏಕರೀತಿಯ ಮೇಲ್ಮೈಲಕ್ಷಣಗಳಿವೆ. ಹಡ್ಸನ್ ಕೊಲ್ಲಿಯ ಪಶ್ಚಿಮಭಾಗ, ಬ್ಯಾಫಿನ್ ದ್ವೀಪದ ಈಶಾನ್ಯಭಾಗ ಮತ್ತು ಕರೇಲಿಯಗಳಲ್ಲಿ ಭೂಮಿ ತಗ್ಗು ಮತ್ತು ಕಡಿದಾಗಿದೆ. ಸಣ್ಣಪುಟ್ಟ ಹಳ್ಳಕೊಳ್ಳಗಳೂ ಸಣ್ಣಸಣ್ಣ ಸರೋವರಗಳೂ ತುಂಬಿವೆ. ಅಲ್ಲಲ್ಲೇ ನೀರ್ಗಲ್ಲಿನ ಪ್ರವಾಹ ನಿಕ್ಷೇಪಗಳಿಂದ ಕೂಡಿದ 300-600ಮೀ. ಎತ್ತರದ ಪ್ರಸ್ಥಭೂಮಿ ಗಳಿವೆ. ಮುಖ್ಯವಾಗಿ ಇವು ಕ್ವಿಬೆಕ್-ಲ್ಯಾಬ್ರಡಾರ್, ಕೆನಡದ ಪಶ್ಚಿಮ ಕೀವಾಟಿನ್ ಮತ್ತು ಪೂರ್ವ ಮೆಕೆನ್ಜಿû ಜಿಲ್ಲೆಗಳಲ್ಲೂ ಉತ್ತರ ಸ್ಕ್ಯಾಂಡಿನೇವಿಯದ ಲ್ಯಾಪ್ಲ್ಯಾಂಡ್ ಪ್ರಸ್ಥಭೂಮಿ ಯಲ್ಲೂ ಕಾಣಬರುತ್ತವೆ. ಕೆನಡಿಯನ್ ಶಾಶ್ವತಭೂಖಂಡದ ಪೂರ್ವ ಅಂಚಿನುದ್ದಕ್ಕೂ-ಲ್ಯಾಬ್ರಡಾರಿನಿಂದ ಎಲ್ಸ್‌ಮಿಯರ್ ದ್ವೀಪದವರೆಗೆ-ಕಡಿದಾದ ಫಿಯರ್ಡ್ ರಚನೆಯನ್ನೂ 1825ಮೀ. ಗಳಿಗೂ ಮೀರಿ ಎತ್ತರವಾಗಿರುವ ಪರ್ವತಶಿಖರಗಳನ್ನೂ ನೋಡಬಹುದು. ಗ್ರೀನ್ಲೆಂಡ್ ಶಾಶ್ವತ ಭೂಖಂಡದ ಪೂರ್ವ ಮತ್ತು ಪಶ್ಚಿಮ ತೀರಗಳಲ್ಲಿ ಇದೇ ರೀತಿಯ ಭೂಲಕ್ಷಣಗಳಿವೆ. ಜಲಜಶಿಲಾ ನಿಕ್ಷೇಪಗಳಿರುವ ಕಡೆ (ಉದಾ: ಉತ್ತರ ಸೈಬೀರಿಯ ಮತ್ತು ಹಡ್ಸನ್ ಕೊಲ್ಲಿಯ ಉತ್ತರಕ್ಕಿರುವ ಮೈದಾನ ಪ್ರದೇಶ) ಬೆಟ್ಟಗಳು, ಪ್ರಸ್ಥಭೂಮಿಗಳು ಮತ್ತು ಮೈದಾನಗಳು ಆವಿರ್ಭವಿಸುತ್ತವೆ. ಅಲ್ಲಲ್ಲೇ ಆಳವಾದ ಮತ್ತು ಕಿರಿದಾದ ಕಣಿವೆಗಳೂ ರೂಪಿತವಾಗುವುದುಂಟು. ಕೆನಡದಲ್ಲಿ ಬಲುಮಟ್ಟಿಗೆ ಮೈದಾನಗಳು ಮತ್ತು ಪ್ರಸ್ಥಭೂಮಿಗಳೂ ಅಂಗಾರ ಶಾಶ್ವತಭೂಖಂಡದ ಸುತ್ತ ಬೆಟ್ಟಗಳೂ ಪರ್ವತಶ್ರೇಣಿಗಳೂ ಎದ್ದುಕಾಣುತ್ತವೆ. ಶಾಶ್ವತ ಭೂಖಂಡಗಳಿಂದ ಬಲುದೂರದಲ್ಲಿ ಹರಡಿರುವ ಜಲಜಶಿಲಾ ಪ್ರಸ್ತರಗಳಿಂದ ಕೂಡಿದ ಭೂಪ್ರದೇಶಗಳಲ್ಲಿ ವಿಶಾಲವಾದ ಮೈದಾನಗಳು ರೂಪುಗೊಂಡಿವೆ. ಉತ್ತರ ಅಮೆರಿಕದ ಮೆಕೆನ್ಜಿû ತಗ್ಗು ಪ್ರದೇಶಗಳು ಬ್ಯಾಂಕ್ಸ್ ಮತ್ತು ಪ್ರಿನ್ಸ್‌ಪ್ಯಾಟ್ರಿಕ್ ದ್ವೀಪಗಳು, ಉತ್ತರ ಅಲಾಸ್ಕಾದ ಮೈದಾನ, ಉತ್ತರ ಯುರೋಪಿನ ಸೆವರ್ ನಾಯಾಡ್ವೀನ ಮತ್ತು ಪೆಕೋರ ಮೈದಾನಗಳು ಹೀಗೆ ರೂಪುಗೊಂಡುವು. ಇವಲ್ಲದೆ ಸೈಬೀರಿಯದ ಓಬ್ ನದೀಮುಖಜಭೂಮಿ ಮತ್ತು ಅದರ ನೈಋತ್ಯ ಭಾಗ, ಉತ್ತರ ಸೈಬೀರಿಯದ ಮೈದಾನ ಪ್ರದೇಶಗಳು, ಪಶ್ಚಿಮ ಸೈಬೀರಿಯದ ತಗ್ಗುಪ್ರದೇಶಗಳು ಮತ್ತು ಲೇನಾ-ಕೊಲಿಮಾ ಮೈದಾನ ಪ್ರದೇಶಗಳು ಹೀಗೆಯೇ ರೂಪುತಳೆದುವು. ಈ ಪ್ರದೇಶಗಳೆಲ್ಲ ಸರ್ವಸಾಮಾನ್ಯವಾಗಿ ಮಟ್ಟಸವಾಗಿದ್ದು ಎಲ್ಲೊ ಅಲ್ಲೊಂದು ಇಲ್ಲೊಂದು ಕಡಿದಾದ ಗುಡ್ಡಗಳು ಮತ್ತು ಅಸಂಖ್ಯಾತ ಚಿಕ್ಕ ಚಿಕ್ಕ ಸರೋವರಗಳು ಇವೆ. ಮೈದಾನ ಪ್ರದೇಶಗಳಲ್ಲಿ ದೊಡ್ಡ ನದಿಗಳು ಹರಿಯುತ್ತಿದ್ದು ಆಳವಾದ ಮೆಕ್ಕಲು ನಿಕ್ಷೇಪಗಳನ್ನು ಶೇಖರಿಸಿವೆ. ಮೇರುಪ್ರದೇಶದಲ್ಲಿ ಎರಡು ಬೇರೆ ಬೇರೆ ಪರ್ವತಜನನ ಕಲ್ಪಗಳಿಗೆ ಸಂಬಂಧಿಸಿದ ತೀವ್ರ ತೆರನಾಗಿ ಮಡಿಕೆಬಿದ್ದಿರುವ ಪರ್ವತಪ್ರದೇಶಗಳಿವೆ. ವಿಶಿಷ್ಟರೀತಿಯ ಮೇಲ್ಮೈಲಕ್ಷಣಗಳಿಂದ ಇವನ್ನು ಸುಲಭವಾಗಿ ಬೇರ್ಪಡಿಸಿ ಗುರುತಿಸಬಹುದು. ಹಳೆಯ ಪೇಲಿಯೋಝೋಯಿಕ್ ಯುಗಕ್ಕೆ ಸಂಬಂಧಿಸಿದ ಪರ್ವತಗಳ ಬಲುಭಾಗ ಭೂಸವೆತಕ್ಕೊಳಗಾಗಿ ನಶಿಸಿಹೋಗಿವೆ. ಅಳಿದುಳಿದ ಶಿಲೆಗಳು ಈಚಿನ ಭೂಚಟುವಟಿಕೆಗಳಿಗೆ ಮತ್ತೆ ಒಳಗಾಗಿ ಮೇಲಕ್ಕೆ ಎತ್ತಲ್ಪಟಿವೆ. ಕ್ರಮೇಣ ಇವು ನೀರ್ಗಲ್ಲಿನ ಪ್ರವಾಹಗಳ ಪ್ರಭಾವಕ್ಕೊಳಗಾಗಿ ವಿಶಿಷ್ಟ ಭೂವಿನ್ಯಾಸವನ್ನು ತಳೆದಿವೆ. ಈ ವರ್ಗದ ಪರ್ವತಗಳು ಪೀರಿಲ್ಯಾಂಡ್ ಮತ್ತು ವೆಸ್ಟ್ ಸ್ಪಿಟ್ಸ್‌ಬರ್ಗನ್ ಪ್ರದೇಶಗಳಲ್ಲಿ 1825ಮೀ, ಎಲ್ಸ್‌ಮಿಯರ್ ದ್ವೀಪದಲ್ಲಿ ಸುಮಾರು 3050ಮೀ. ಗಳಷ್ಟೂ ಪ್ರಸ್ಥಭೂಮಿಗಳು ಈಸ್ಟ್ ಸ್ವಿಟ್ಸ್ ಬರ್ಗನ್, ನಾವಯ ಝಿಂಲ್ಯಾ ಮತ್ತು ಸ್ವೆವಿರ್ ನಯ ಝಿಂಲ್ಯಾ ಪ್ರಾಂತ್ಯಗಳಲ್ಲಿ ಸುಮಾರು 600ಮೀ. ಗಳಷ್ಟೂ ಎತ್ತರವನ್ನು ಮುಟ್ಟಿವೆ. ಕಿರಿಯ ವರ್ಗದ ಪರ್ವತಗಳು ನೈರುತ್ಯ ಸೈಬೀರಿಯ ಮತ್ತು ಅಲಾಸ್ಕಗಳಲ್ಲಿ ಇನ್ನೂ ಹೆಚ್ಚಿನ ಎತ್ತರವಾಗಿವೆ. ಜೆಸಿರ್ಕ್ ಶ್ರೇಣಿಯ ಶಿಖರಗಳು 3050ಮೀ. ಕಾಮ್ಚಾಟ್ಕ ಶಿಖರಗಳು 4570 ಮೀ. ಎತ್ತರ ಇವೆ. ದಕ್ಷಿಣ ಅಲಾಸ್ಕದಲ್ಲಿ ಇನ್ನೂ ಉನ್ನತಶಿಖರಗಳಿವೆ. ಈ ಪ್ರದೇಶದ ವಿಶಾಲ ತಗ್ಗುಗಳಲ್ಲಿ ಯುಕಾಸ್, ಕೋಲಿಮಾ ಮುಂತಾದ ದೊಡ್ಡ ನದಿಗಳು ಪ್ರವಹಿಸುತ್ತವೆ. ಮೇರುಪ್ರದೇಶದ ಸಾಕಷ್ಟು ಭಾಗವನ್ನು ಮಂದವಾದ ಸ್ಥಾಯೀ ನೀರ್ಗಲ್ಲು (ಪರ್ಮಾ ಫ್ರಾಸ್ಟ್) ಅವರಿಸಿದೆ. ವರ್ಷಗಳುರುಳಿದರೂ ಇದು ಕರಗುವುದು ಅಪೂರ್ವ. ಆದರೆ ಬೇಸಿಗೆಯಲ್ಲಿ ಮಾತ್ರ ಇದರ ಮೇಲಿನ ತೆಳು ಪದರ ಸುಮಾರಾಗಿ ಕರಗುವುದುಂಟು. ಈ ಶಾಶ್ವತ ನೀರ್ಗಲ್ಲಿನ ಪದರವೇ ಸ್ಥಾಯೀನೀರ್ಗಲ್ಲು (ಪರ್ಮಾ ಫ್ರಾಸ್ಟ್). ಬೇಸಿಗೆಯಲ್ಲಿ ಕರಗುವ ತೆಳುವಾದ ಹೊರಮೈ ಕ್ರಿಯಾಪದರ (ಆಕ್ಟಿವ್ ಲೇಯರ್). ಉತ್ತರ ಅಲಾಸ್ಕ ಮತ್ತು ಕೆನಡದಲ್ಲಿ ಸ್ಥಾಯೀನೀರ್ಗಲ್ಲವಲಯದ ಆಳ ನೆಲಮಟ್ಟದಿಂದ 250-500ಮೀ. ಉತ್ತರ ಸೈಬೀರಿಯಾದ ನಾಡಿರ್ವ್‌ಕಿನಲ್ಲಿ ಈ ವಲಯ ಬಲು ಮಂದವಾಗಿದ್ದು ಸುಮಾರು 600ಮೀ. ಗಳಷ್ಟಿರಬಹುದೆಂದು ಅಂದಾಜುಮಾಡಲಾಗಿದೆ. ಸಾಮಾನ್ಯವಾಗಿ ಈ ವಲಯದ ಮಂದ ಆಯಾ ಪ್ರದೇಶದ ಭೂಲಕ್ಷಣ, ಅಲ್ಲಿಯ ಹವಾಮಾನ, ಸಸ್ಯವರ್ಗ ಮುಂತಾದುವನ್ನು ಅವಲಂಬಿಸಿದೆ. ಅತ್ಯಂತ ದಪ್ಪನೆಯ ಸ್ಥಾಯೀನೀರ್ಗಲ್ಲ ಪದರಗಳು ಹಿಮಯುಗದಲ್ಲಿ ಅಲ್ಲಿಯ ತನಕ ನೀರ್ಗಲ್ಲಿನ ಪ್ರಸ್ತರಗಳಿಂದ ಆವೃತವಾಗಿರದ ಭೂಪ್ರದೇಶಗಳಲ್ಲಿ ಉಂಟಾದು ವೆಂದು ಅಭಿಪ್ರಾಯಪಡಲಾಗಿದೆ. ದಕ್ಷಿಣಕ್ಕೆ ಸರಿದಂತೆಲ್ಲ ಇವು ಕ್ರಮೇಣ ತೆಳುವಾಗುತ್ತ ಹರಿದು ಹಂಚಿಹೋಗಿವೆ. ಕೆಲವು ಕಡೆ ಈ ತೆಳುಪದರಗಳ ಮೇಲೆ ಸಸ್ಯಾಗಾರದ ನಿಕ್ಷೇಪಗಳನ್ನು ಅಥವಾ ಜವುಗುಪ್ರದೇಶಗಳನ್ನು ಗುರುತಿಸಬಹುದು. ಇಂಥ ಕಡೆ ಅವು 15 ಸೆ.ಮೀ. ಗೂ ಹೆಚ್ಚು ಮಂದವಿರಲಾರವು. ಸ್ಥಾಯೀ ನೀರ್ಗಲ್ಲ ಪದರಗಳು ಮೂಲ ಮತ್ತು ಆನುಷಂಗಿಕ ಶಿಲೆಗಳ ಮೇಲೆ ಕಂಡುಬರುತ್ತವೆ. ಸಾಮಾನ್ಯವಾಗಿ ಈ ಶಿಲೆಗಳ ಮೇಲೆ ಇದರ ಪ್ರಭಾವ ಅಷ್ಟಾಗಿರುವುದಿಲ್ಲ. ಆದರೆ ಸೂಕ್ಷ್ಮ ಕಣರಚನೆಯ ಜಲಜಶಿಲಾ ನಿಕ್ಷೇಪಗಳಲ್ಲಿ ಮಂಜಿನ ಕಣಗಳು ಕ್ರಮೇಣ ಪ್ರಸರಿಸಿ ಅಲ್ಲಲ್ಲೇ ಶೇಖರಗೊಂಡು ಮಂಜುಗಡ್ಡೆಯ ಸಣ್ಣಪುಟ್ಟ ಪದರಗಳು ತಲೆದೋರ ಬಹುದು. ಇವನ್ನು ನೆಲಹಿಮ (ಗ್ರೌಂಡ್ ಐಸ್) ಎನ್ನುತ್ತಾರೆ. ನದೀತೀರಗಳಲ್ಲಿ ಮತ್ತು ಸಮುದ್ರ ಕರಾವಳಿಯ ಬಂಡೆಗಳ ಮೇಲೆ ಹಲವು ವೇಳೆ 50-70 ಸೆಂಮೀ ಸುಂದರವಿರುವ ನೆಲ ಹಿಮದ ನಿಕ್ಷೇಪಗಳನ್ನು ಕಾಣಬಹುದು. ಉತ್ತರ ಸೈಬೀರಿಯದಲ್ಲಿ 60 ಮೀಗೂ ಮೀರಿದ ಅತಿಪುರಾತನ ನೀರ್ಗಲ್ಲ ಪ್ರಸ್ತರಗಳಿವೆ. ಬಹುಶಃ ನೀರ್ಗಲ್ಲ ಪ್ರವಾಹ ಅಥವಾ ಘನೀಭೂತವಾದ ಸರೋವರ ಭಾಗ ನದೀಮೆಕ್ಕಲಿನಿಂದ ಸಂಪೂರ್ಣ ಮುಚ್ಚಿಹೋಗಿ ಇದಕ್ಕೆ ಮೂಲ ಕಾರಣವೆನಿಸಿರಬಹುದು. ಹಲವು ಸಂದರ್ಭಗಳಲ್ಲಿ ನೆಲದೊಳಗೆ ಹುದುಗಿರುವ ನೀರ್ಗಲ್ಲಿನ ಹಾಳೆಯಲ್ಲಿ ಅಲ್ಲಲ್ಲೆ ಗುಳಿಬಿದ್ದು ಕ್ರಮೇಣ ಈ ಗುಳಿಗಳೇ ವಿಸ್ತಾರಗೊಂಡು ನೀರು ಶೇಖರವಾಗಿ ಸರೋವರಗಳೂ ಉಂಟಾಗಬಹುದು. ಸಾಮಾನ್ಯವಾಗಿ ಜೇಡಿನೋಡನೆ ನೀರ್ಗಲ್ಲು ಬೆರೆತು ಉಂಟಾಗಿರುವ ಪ್ರಸ್ತರ ಗಡುಸಾಗಿರುತ್ತದೆ. ಆದರೆ ನೀರ್ಗಲ್ಲು ಕರಗಲು ಪ್ರಾರಂಭವಾದಾಗ ಈ ಗಡುಸುತನವೆಲ್ಲ ಮಾಯವಾಗಿ ಪ್ರಸ್ತರ ಕೆಸರಿನ ಮುದ್ದೆಯಾಗುತ್ತದೆ. ಈ ಬಗೆಯ ಬದಲಾವಣೆಗಳ ಅಧ್ಯಯನ ಶೀತಪ್ರದೇಶಗಳ ಇತಿಹಾಸದಲ್ಲಿ ಸಾಕಷ್ಟು ಪ್ರಾಮುಖ್ಯವನ್ನು ಪಡೆದಿದೆ. ಸ್ಥಾಯೀನೀರ್ಗಲ್ಲು ಅಂತರ್ಜಲ ಪಸರಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟುತ್ತದೆ. ಹೀಗಾಗಿ ಬೇಸಗೆಯಲ್ಲಿ ಮೇರುಪ್ರದೇಶಗಳಲ್ಲಿ ನೂರಾರು ಸಣ್ಣಪುಟ್ಟ ಸರೋವರಗಳು ಕಾಣಸಿಕೊಳ್ಳುತ್ತವೆ. ಇಳಿಜಾರು ಪ್ರದೇಶಗಳಲ್ಲಿ ಶಿಲಾಚೂರು ಮತ್ತು ಮಣ್ಣಿನೊಡನೆ ಬೆರೆತಿರುವ ನೀರ್ಗಲ್ಲು ಕರಗಲು ಪ್ರಾರಂಭವಾಗಿ ಇಡೀ ಭೂಭಾಗವೇ ಜರುಗಿ ಜಾರಿ ಭೂಪಾತಗಳಾಗು ವುದೂ ಉಂಟು. ಇದನ್ನು ಸಾಲಿಫ್ಲಕ್ಷನ್ ಎನ್ನುತ್ತಾರೆ. ಮೇರುಪ್ರದೇಶದಲ್ಲಿ ಇದು ಸಾಮಾನ್ಯ. ಉತ್ತರ ಅಲಾಸ್ಕದ ಕಡಲುತೀರ, ನಾರ್ವೆ ಸಮುದ್ರದ ಬೇರ್ ದ್ವೀಪ ಮುಂತಾದ ನಯಮಣ್ಣಿನ ಭೂಪ್ರದೇಶಗಳಲ್ಲಿ ಈ ಬಗೆಯ ಭೂಪಾತಗಳು ಅಸಂಖ್ಯಾತ. ಮೇರು ಪ್ರದೇಶದ ಅಂಚಿನಭಾಗಗಳಲ್ಲಿ ಮಂಜುಗಡ್ಡೆ ಕಟ್ಟುವುದು (ಫ್ರೀಸಿûಂಗ್) ಮತ್ತು ಕರಗುವ (ತಾಯಿಂಗ್) ಕ್ರಿಯೆಗಳಿಂದ ವಿಶಿಷ್ಟ ಭೂರಚನೆಗಳು ತಲೆದೋರಿವೆ. ಉದಾ : ನುರುಜುಗಲ್ಲು, ಗುಂಡುಕಲ್ಲು ಮುಂತಾದ ದಪ್ಪದಪ್ಪ ಶಿಲಾಕಣಗಳು ವಿಶಿಷ್ಟ ರೀತಿಯಲ್ಲಿ ಶೇಖರವಾಗಿ ಬಹುಭುಜಾಕೃತಿಂiÀi ಹೊರವಲಯಗಳನ್ನುಂಟುಮಾಡಿ ಅವುಗಳ ಮಧ್ಯೆ ನಯವಾದ ಧೂಳು ಶೇಖರವಾಗುತ್ತದೆ. ವೃತ್ತಾಕಾರಗಳೂ ಮಣ್ಣುಗುಡ್ಡೆಗಳೂ ಹೀಗೆಯೇ ತಲೆದೋರುವುದುಂಟು. ನೀರ್ಗಲ್ಲುಗಳಿಗೆ ದೊಡ್ಡ ದೊಡ್ಡ ಬಂಡೆಗಳನ್ನು ಚೂರಾಗಿಸಬಲ್ಲ ವಿಶೇಷ ಶಕ್ತಿ ಇದೆ. ಈ ಕಾರಣ ಬಂಡೆಗಳ ಮೇಲೆಲ್ಲ ಚೂಪಾದ ಕಲ್ಲಿನ ಚೂರುಗಳು ಹರಡಿರುವುದನ್ನು ಗುರುತಿಸಬಹುದು. ಇವನ್ನು ಶಿಲಾಸಮುದ್ರ (ಫ್ಲೆಸನ್ ಮಿಯರ್) ಎಂದು ಹೆಸರಿಸಿದ್ದಾರೆ. ಕೆಲವು ಕಡೆ ಈ ಶಿಲಾಚೂರಿನ ಮೇಲ್ಪದರ 3.6ಮೀಗೂ ಮೀರಿ ಮಂದವಾಗಿರುತ್ತದೆ. ಬೆಸಾಲ್ಟ್ ಮುಂತಾದ ಜ್ವಾಲಾಮುಖಿಜನ್ಯ ಶಿಲಾಭೂ ಪ್ರದೇಶಗಳಲ್ಲಿ ಈ ತೆರನಾದ ಭೂವಿನ್ಯಾಸ ಬಲು ಉತ್ತಮ ರೀತಿಯಲ್ಲಿ ಕಂಡುಬರುತ್ತದೆ. ಉದಾ : ಐಸ್ಲೆಂಡ್. ಹೀಗೆಯೇ ಈ ವಿನ್ಯಾಸವನ್ನು ಜಲಜಶಿಲಾಪ್ರದೇಶದಲ್ಲೂ ನೋಡಲು ಸಾಧ್ಯ. ಉದಾ : ಕೆನಡದ ಮೇರುಪ್ರದೇಶ. ನೀರ್ಗಲ್ಲಿನ ಪ್ರವಾಹಗಳು: ಮೇರುಪ್ರದೇಶವೆಲ್ಲ ನೀರ್ಗಲ್ಲಿನ ಪ್ರಸ್ತರಗಳಿಂದ ಆವೃತವಾಗಿದೆ ಎಂದು ತಿಳಿದಲ್ಲಿ ಅದು ತೀರ ತಪ್ಪು. ಇಲ್ಲಿಯ ಒಟ್ಟು ವಿಸ್ತೀರ್ಣದ ಕೇವಲ 2/5 ಭಾಗ ಮಾತ್ರ ವರ್ಷದುದ್ದಕ್ಕೂ ನೀರ್ಗಲ್ಲಿನ ಹಾಳೆಗಳಿಂದ ಆವೃತವಾಗಿರುವುದನ್ನು ಗಮನಿಸಬಹುದು. ಅತ್ಯಧಿಕ ಪ್ರಮಾಣದಲ್ಲಿ ಸತತವಾಗಿ ಹಿಮ ಶೇಖರವಾದಾಗ ಮಾತ್ರ ಅದು ಕ್ರಮೇಣ ಮಂಜುಗಡ್ಡೆಯಾಗಿ ಮಾರ್ಪಟ್ಟು ನೀರ್ಗಲ್ಲ ಹಾಳೆಯಾಗಿಯೊ ನೀರ್ಗಲ್ಲನದಿಯಾಗಿಯೊ ರೂಪುಗೊಳ್ಳತ್ತದೆ. ಮಂಜು ನೀರ್ಗಲ್ಲಾಗಿ ಮಾರ್ಪಡುವುದೂ ಬಲು ನಿಧಾನ. ಅದಕ್ಕೆ ವರ್ಷಗಳೇ ಬೇಕು. ಉದಾ : ವಾಯವ್ಯ ಗ್ರೀನ್ಲೆಂಡಿನ ಹಿಮಾಚ್ಛಾದಿತ ಪ್ರದೇಶವೊಂದರಲ್ಲಿ ರಂಧ್ರವನ್ನು ಕೊರೆದಾಗ 425ಮೀ ಆಳದವರೆಗೆ ಹಿಮನದಿಯೇ ಕಾಣಸಿಗಲಿಲ್ಲ. ಅಲ್ಲದೆ ಸುಮಾರು 800 ವಾರ್ಷಿಕ ಮಂಜಿನ ಪದರಗಳಿರುವುದೂ ವ್ಯಕ್ತವಾಯಿತು. ಇದರ ಸಹಾಯದಿಂದ ಅಲ್ಲಿನ 800 ವರ್ಷಗಳ ಹಿಮದ ಇತಿಹಾಸವನ್ನು ಅರಿಯಲು ಸಾಧ್ಯವಾಯಿತು. ಉತ್ತರಮೇರು ಪ್ರದೇಶ ಹಿಮನದಿ ಪ್ರವಾಹಗಳನ್ನು (ಗ್ಲೇಷಿಯರ್ಸ್) ಅವುಗಳಿಗೆ ಹಿಮ ಒದಗಿ ಬರುವ ಪ್ರದೇಶಗಳನ್ನು ಅನುಸರಿಸಿ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಇವುಗಳಲ್ಲಿ ದೊಡ್ಡದು ಅಟ್ಲಾಂಟಿಕ್ ಸಾಗರ ಪ್ರದೇಶಕ್ಕೂ ಚಿಕ್ಕದು ಪೆಸಿಫಿಕ್ ಸಾಗರಕ್ಕೂ ಸೀಮಿತವಾಗಿವೆ. ಅತಿದೊಡ್ಡ ನೀರ್ಗಲ್ಲಹಾಳೆ ಎಂದರೆ ಗ್ರೀನ್ಲೆಂಡಿನ ಇನ್ಲ್ಯಾಂಡ್ ಐಸ್ ಎಂಬುದು. ಉತ್ತರಾರ್ಧಗೋಳದಲ್ಲೆಲ್ಲ ಇದು ಅತ್ಯಂತ ದೊಡ್ಡ ನೀರ್ಗಲ್ಲಹಾಳೆ. ಉತ್ತರ ದಕ್ಷಿಣ 2512 ಕಿಮೀ ಉದ್ದವಿದ್ದು ಸುಮಾರು 960 ಕಿಮೀ ದಪ್ಪನಾಗಿಯೂ ಇದೆ. ಇದು 18,1300 ಚಕಿಮೀ ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿದೆ. ಗ್ರೀನ್ಲೆಂಡಿನ ಸುಮಾರು 85ರಷ್ಟು ಭಾಗ ಹಾಳೆಯಿಂದ ಆವೃತವಾಗಿದೆ. ಇದು ವಿಶಾಲ ಮತ್ತು ನೀಳವಾದ ಭೂತಗ್ಗಿನಲ್ಲಿದ್ದು ಇದರ ಇಕ್ಕೆಲಗಳಲ್ಲಿ ಕಡಿದಾದ ಪರ್ವತ ಶ್ರೇಣಿಗಳಿವೆ. ತಗ್ಗಿನ ಕೇಂದ್ರಭಾಗದಲ್ಲಿ ನೀರ್ಗಲ್ಲು 300 ಮೀ. ಮಂದವಾಗಿದ್ದು ಹಲವೆಡೆ ಸಮುದ್ರಮಟ್ಟದಿಂದ 1.6 ಕಿ.ಮೀ.ಗ್ರೀನ್ಲೆಂಡ್ ಮೀರಿದ ಆಳವನ್ನು ಮುಟ್ಟುತ್ತದೆಂದು ತಜ್ಞರ ಅಭಿಪ್ರಾಯ. ಈ ಆಧಾರವನ್ನನುಸರಿಸಿ ಗ್ರೀನ್ಲೆಂಡ್ ದ್ವೀಪವಲ್ಲವೆಂದೂ ಅದನ್ನು ಪರ್ಯಾಯದ್ವೀಪವೆಂದು ಪರಿಗಣಿಸಬೇಕೆಂದೂ ಹಲವರ ಅಭಿಪ್ರಾಯ. ಈ ನೀರ್ಗಲ್ಲಿನ ಹಾಳೆ ಕರಗಿದಲ್ಲಿ ಅದು ಆವೃತವಾಗಿರುವ ಭೂಪ್ರದೇಶ 915ಮೀ. ಎತ್ತರದ ಪ್ರಸ್ಥಭೂಮಿಯಾಗಿ ಮಾರ್ಪಡುತ್ತದೆ. ಈ ಬೃಹತ್ ನೀರ್ಗಲ್ಲಿನ ಹಾಳೆಯ ಅತ್ಯಂತ ಎತ್ತರವಾದ ಭಾಗ ಸಮುದ್ರಮಟ್ಟದಿಂದ 3050ಮೀ ಎತ್ತರದಲ್ಲಿದೆ. ಅದು ದ್ವೀಪದ ಉತ್ತರ ಭಾಗದಲ್ಲಿದೆ. ಮಧ್ಯ ಭಾಗದಲ್ಲಿ ನೀರ್ಗಲ್ಲ ಹಾಳೆಯ ಮೇಲು ಮೈ ಮಟ್ಟಸವಾಗಿರದೆ ಏರುತಗ್ಗಾಗಿದೆ. ತಗ್ಗುಗಳಲ್ಲಿ ಸಾಸ್ಟ್ರುಗಿ ಎಂಬ ವಾಯು ನಿಕ್ಷೇಪಗಳೂ ಇವೆ. ಅನೇಕ ಕಡೆ ನಿಧಾನವಾಗಿ ಪ್ರವಹಿಸುತ್ತ ಸಾಗರಗತವಾಗುವ ಅಸಂಖ್ಯಾತ ಹಿಮನದಿಗಳನ್ನೂ ನೋಡಬಹುದು. ಕೆಲವು ಕಡೆ ಸಾಗರವನ್ನು ಹಿಮನದಿ ಸೇರುವೆಡೆ ಅಸಂಖ್ಯಾತ ಹಿಮಗಡ್ಡೆಗ ಳಾಗಿ ಒಡೆದು ಛಿದ್ರವಾಗುವುದೂ ಉಂಟು. ಈ ಗಡ್ಡೆಗಳು (ಐಸ್ಬರ್ಗ್) ಸಮುದ್ರದಲ್ಲಿ ತೇಲುತ್ತಿರುತ್ತವೆ. ಇವೇ ನೀರ್ಗಲ್ಲ ದಿಬ್ಬಗಳು. ಇವು ಲ್ಯಾಬ್ರಡಾರ್ ಶೀತಪ್ರವಾಹದಲ್ಲಿ ತೇಲಿಕೊಂಡು ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ಮುಟ್ಟುವುದೂ ಉಂಟು. ಕೆನಡದ ಮೇರು ಪ್ರದೇಶದಲ್ಲಿ ಸ್ಥಾಯೀನೀರ್ಗಲ್ಲಿನ ಸ್ತರಗಳು ಅಷ್ಟು ವಿಶಾಲವಾಗಿಲ್ಲ. ಇರುವ ಹಾಳೆಗಳು ದೇಶದ ಈಶಾನ್ಯ ಭಾಗದಲ್ಲಿ ಕಂಡುಬರುತ್ತವೆ. ಇವುಗಳಲ್ಲೆಲ್ಲ ಮೈಘನ್ ಐಲೆಂಡಿನ ನೀರ್ಗಲ್ಲಿನ ಹಾಳೆ ಪ್ರಮುಖವಾದುದು. ಇದು ವೃತ್ತಾಕಾರವಾಗಿದ್ದು ತಗ್ಗುಪ್ರದೇಶ ದಲ್ಲಿದೆ. ಮೆಲ್ವಿಲ್ ದ್ವೀಪ ಭಾಗದಲ್ಲಿ ಮೂರು ಸಣ್ಣ ನೀರ್ಗಲ್ಲ ನದಿಗಳಿವೆ. ಕಡಲಕರೆಯಲ್ಲಿ ಹಲವು ನೀರ್ಗಲ್ಲ ನದಿಗಳು ಸಮುದ್ರವನ್ನು ಸೇರುವುದನ್ನೂ ನೋಡಬಹುದು. ಅಲ್ಲಲ್ಲೇ ತೇಲುತ್ತಿರುವ ನೀರ್ಗಲ್ಲ ದಿಬ್ಬಗಳೂ ಇವೆ. ಎಲ್ಸ್‌ಮಿಯರ್ ದ್ವೀಪದ ಉತ್ತರದಲ್ಲಿ ಸಾಗರದಲ್ಲಿ ತೇಲುತ್ತಿರುವ ಅತ್ಯಂತ ವಿಶಾಲವಾದ ನೀರ್ಗಲ್ಲ ಹಾಳೆ ಇದೆ. ತೇಲುತ್ತಿರುವ ಅನೇಕ ನೀರ್ಗಲ್ಲ ದ್ವೀಪಗಳು ಇದರಿಂದ ಮೂಡಿಬಂದಿವೆ. ಅಟ್ಲಾಂಟಿಕ್ ಸಾಗರದ ಉತ್ತರ ಮತ್ತು ಪೂರ್ವಭಾಗಗಳಲ್ಲಿ ಹಲಕೆಲವು ನೀರ್ಗಲ್ಲ ನದಿಗಳನ್ನು ನೋಡಬಹುದು. ಉದಾ: ನಾರ್ವೀಜಿಯನ್ ಮತ್ತು ಬರೆಂಟ್ಸ್ ಸಮುದ್ರಗಳು. ಐಸ್ಲೆಂಡಿನಲ್ಲಿ ಐದು ಮುಖ್ಯ ನೀರ್ಗಲ್ಲ ಹಾಳೆಗಳಿವೆ. ಇವುಗಳಲ್ಲಿ ಅತ್ಯಂತ ವಿಶಾಲವಾದುದು ವಟ್ನಜೋಕುಲ್. ಇದರ ವಿಸ್ತೀರ್ಣ 8806 ಚಕಿಮೀ ಇದರ ಅಂಚುಗಳಲ್ಲಿ ಹಲವಾರು ಕಡೆ ಹಿಮನದಿಗಳೂ ಹುಟ್ಟುತ್ತವೆ. ಪಶ್ಚಿಮದತ್ತ ಗ್ರಿಮ್ಸ್‌ವಾಟನ್ ಎಂಬ ಜ್ವಾಲಾಮುಖಿಯನ್ನಿದು ಮುಚ್ಚಿದೆ. ಈ ಅಗ್ನಿಪರ್ವತ ಪ್ರತಿ 6-10 ವರ್ಷಗಳಿಗೊಮ್ಮೆ ಜಾಗೃತಗೊಳ್ಳುತ್ತದೆ. ಇದರಿಂದ ಉತ್ಪತ್ತಿಯಾಗುವ ಅಗಾಧ ಉಷ್ಣದಿಂದ ಹಿಮದ ಹಾಳೆಯ ಬಹುಭಾಗ ಕರಗಿ ಪ್ರವಾಹಗಳೂ ಸಣ್ಣಪುಟ್ಟ ಸರೋವರಗಳೂ ಉಂಟಾಗುತ್ತವೆ. ಐಸ್ಲೆಂಡಿನ ಉತ್ತರಕ್ಕಿರುವ ಜಾನ್ ಮೇಯಿನ್ ದ್ವೀಪದಲ್ಲಿ ನೀರ್ಗಲ್ಲ ಹಾಳೆ ಮೌಂಟ್ ಬೀರೆನ್ಬರ್ಗ್ ಎಂಬ ಅಗ್ನಿಪರ್ವತದ ಮೇಲಿದೆ. ಸ್ಟಾಲ್ಬಾರ್ಡ್ ಎಂಬ ನೀರ್ಗಲ್ಲ ನದಿಗಳು ದ್ವೀಪದ ಬಹುಭಾಗವನ್ನು ಆವರಿಸಿವೆ. ವೆಸ್ಟ್‌ಸ್ವಿಟ್ಸ್ ಬರ್ಗನ್ ದ್ವೀಪದ ನೀರ್ಗಲ್ಲ ಹಾಳೆಯಿಂದ ನೂರಾರು ಹಿಮನದಿಗಳು ಹುಟ್ಟುತ್ತವೆ. ಸ್ಕ್ಯಾಂಡಿನೇವಿಯದ ಪ್ರಸ್ಥಭೂಮಿಯ ಸುಮಾರು 5200 ಚಕಿಮೀ ಪ್ರದೇಶದಲ್ಲಿ ನೀರ್ಗಲ್ಲಹಾಳೆಗಳಿವೆ. ಇವು ಉತ್ತರ ಸ್ವೀಡನ್ ಮತ್ತು ನಾರ್ವೆ ದೇಶಗಳಿಗೆ ಸೀಮಿತ. ಇನ್ನೂ ಉತ್ತರಕ್ಕಿರುವ ಫ್ರಾನ್ಸ್ ಜೋಸೆಫ್ ಪರ್ಯಾಯದ್ವೀಪ ಮತ್ತು ಅದರ ಸುತ್ತಲಿನ ಸಣ್ಣಪುಟ್ಟ ದ್ವೀಪಗಳು ನೀರ್ಗಲ್ಲಿನ ಸ್ತರಗಳಿಂದ ಮುಚ್ಚಿಹೋಗಿವೆ. ಅಲ್ಲಲ್ಲೇ ಹಿಮನದಿಗಳು ಮಂದಗತಿಯಿಂದ ಚಲಿಸುತ್ತ ಇರುವುದನ್ನೂ ಕಾಣಬಹುದು. ರಷ್ಯದ ಉತ್ತರಭಾಗದಲ್ಲಿ ಅಷ್ಟಾಗಿ ನೀರ್ಗಲ್ಲ ಯೂರಲ್ ಮತ್ತು ನೈಋತ್ಯ ಸೈಬೀರಿಯದ ಪರ್ವತಪ್ರದೇಶಗಳ ಕಣಿವೆಗಳಲ್ಲಿ ಹಲಕೆಲವು ಹಿಮನದಿಗಳಿವೆ. ಉತ್ತರ ಪೆಸಿಫಿಕ್ ಸಾಗರದ ಅಲಾಸ್ಕ ಪ್ರದೇಶದಲ್ಲಿ ಹಲವಾರು ಹಿಮನದಿಗಳಿವೆ. ಇನ್ನು ಇಡೀ ವಿಶ್ವದಲ್ಲೇ ಅತ್ಯಂತ ಉತ್ತಮದರ್ಜೆಯ ಪರ್ವತ ಹಿಮನದಿಗಳೆಂದು ಪರಿಗಣಿಸಲಾಗಿದೆ. ಇಲ್ಲಿಯ ಫೇರ್ವೆಸರ್ ಶ್ರೇಣಿ, ಸೇಂಟ್ ಎಲಿಯಾಸ್ ಪರ್ವತ ಮತ್ತು ಚುಗಾಷ್ ಪರ್ವತಗಳಲ್ಲಿ ವಿಸ್ತಾರವಾದ ಹಿಮ ಕೇಂದ್ರಗಳಿವೆ. ಇಲ್ಲಿ ಹಲವಾರು ಪ್ರಸಿದ್ಧ ನೀರ್ಗಲ್ಲನದಿಗಳು ಹುಟ್ಟುತ್ತವೆ. ಇವುಗಳಲ್ಲಿ ಮುಖ್ಯವಾದುವು144 ಕಿಮೀ ಉದ್ದದ ಹುಬ್ಬರ್ಡ್, ಸಿವರ್ಡ್ ಮತ್ತು ಮಲಾಸ್ಪಿನ ನೀರ್ಗಲ್ಲ ಪ್ರವಾಹಗಳು. ಇವಲ್ಲದೆ ಅಲಾಸ್ಕ, ಬ್ರೂಕ್ ಮತ್ತು ರೋಮನ್ ಜಾಫ್ ಪರ್ವತ ಶ್ರೇಣಿಗಳಲ್ಲೂ ಅಲ್ಯೂಷನ್ ದ್ವೀಪಗಳಲ್ಲೂ ಹಲವಾರು ನೀರ್ಗಲ್ಲ ನದಿಗಳಿವೆ. ಇವುಗಳಲ್ಲೆಲ್ಲ 16 ಕಿಮೀ ಉದ್ದದ ಓಕಿಯಾಲಾಕ್ ಪ್ರಸಿದ್ಧವಾದುದು. ಉತ್ತರ ಮೇರುಪ್ರದೇಶದ ಅನೇಕ ಹಿಮ ನದಿಗಳು ಕರಗಿ ಹಿಂಜರಿಯುತ್ತಿವೆ ಎಂದು ಭೂವಿಜ್ಞಾನಿಗಳ ಅಭಿಪ್ರಾಯ. ಹಿಂದಿನ ಭೂಯುಗಗಳಲ್ಲಿ ಹಿಮದಿಂದ ಆವೃತವಾಗಿದ್ದ ಅನೇಕ ಭೂಪ್ರದೇಶಗಳಲ್ಲಿ ಈಗ ಹಿಮದ ಸುಳಿವೇ ಇಲ್ಲ. ಈಚಿನ ಅಧ್ಯಯನಗಳಿಂದ ಐಸ್ಲೆಂಡಿನಲ್ಲಿ 10-14ನೆಯ ಶತಮಾನದ ವರೆಗೆ ಹಿಮದ ಪ್ರಭಾವ ಅಷ್ಟಾಗಿರದೆ 14ನೆಯ ಶತಮಾನದಿಂದೀಚೆಗೆ ನೀರ್ಗಲ್ಲು ವಿಶಾಲ ಪ್ರದೇಶಗಳನ್ನೂ ಆಕ್ರಮಿಸಿಕೊಂಡಿತೆಂಬುದಕ್ಕೆ ಅನೇಕ ಆಧಾರಗಳು ದೊರೆತಿವೆ. 1750ರಲ್ಲಿ ಇದು ಪರಾಕಾಷ್ಠೆ ಮುಟ್ಟಿ ಮತ್ತೆ ಹಿಂಜರಿಯತೊಡ ಗಿತ್ತು. ಮುಂದೆ 1850ರ ವೇಳೆಗೆ ಹೆಚ್ಚಾಯಿತು. ಆದರೆ 1890ರಲ್ಲಿ ಅತ್ಯಂತ ಹೆಚ್ಚಿನ ಹಿಂಜರಿತ ಕಂಡುಬಂತು. ತದನಂತರ ಹಿಂಜರಿತದ ವೇಗ ಬಲು ಕಡಿಮೆಯಾಗಿ 1930ರ ವೇಳೆಗೆ ಮತ್ತೆ ಅಧಿಕವಾಯಿತು. ಇಂದಿಗೂ ಈ ಹಿಂಜರಿತ ತೀವ್ರಗತಿಯಲ್ಲೇ ಮುಂದುವರಿಯುತ್ತಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Arctic Report Card
- International Arctic Research Center
- Arctic Theme Page Comprehensive Arctic Resource from NOAA.
- WWF International Arctic Programme Arctic environment and conservation information
- Bering Sea Climate and Ecosystem Current state of the Bering Sea Climate and Ecosystem. Comprehensive resource on the Bering Sea with viewable oceanographic, atmospheric, climatic, biological and fisheries data with ecosystem relevance, recent trends, essays on key Bering Sea issues, maps, photos, animals and more. From NOAA.
- Toxoplasma gondii in the Subarctic and Arctic
- Protecting U.S. Sovereignty: Coast Guard Operations in the Arctic: Hearing before the Subcommittee on Coast Guard and Maritime Transportation of the Committee on Transportation and Infrastructure, House of Representatives, One Hundred Twelfth Congress, First Session, December 1, 2011
- Maps
- Arctic Environmental Atlas Archived 2008-09-23 ವೇಬ್ಯಾಕ್ ಮೆಷಿನ್ ನಲ್ಲಿ. Circum-Arctic interactive map, with multiple layers of information
- Interactive Satellite Map with daily update (true color/infrared)
- Media
- The Emerging Arctic An Infoguide from the Council on Foreign Relations
- "Global Security, Climate Change, and the Arctic" – streaming video of November 2009 symposium at the University of Illinois
- Implications of an Ice-Free Arctic for Global Security Archived 2010-04-05 ವೇಬ್ಯಾಕ್ ಮೆಷಿನ್ ನಲ್ಲಿ. – November 2009 radio interview with Professor Klaus Dodds (Royal Holloway, University of London)
- The Canadian Museum of Civilization – The Story of the Canadian Arctic Expedition of 1913–1918
- UNEP/GRID-Arendal Maps and Graphics library Information resources from the UN Environment programme
- Arctic Institute of North America Digital Library Archived 2014-11-07 ವೇಬ್ಯಾಕ್ ಮೆಷಿನ್ ನಲ್ಲಿ. Over 8000 photographs dating from the late 19th century through the 20th century.
- euroarctic.com Archived 2008-08-27 ವೇಬ್ಯಾಕ್ ಮೆಷಿನ್ ನಲ್ಲಿ. News service from the Barents region provided by Norwegian Broadcasting Corp (NRK), Swedish Radio (SR) and STBC Murman.
- arcticfocus.com Independent News service covering Arctic region with daily updates on environment, Arctic disputes and business
- Vital Arctic Graphics Archived 2005-08-28 ವೇಬ್ಯಾಕ್ ಮೆಷಿನ್ ನಲ್ಲಿ. Overview and case studies of the Arctic environment and the Arctic Indigenous Peoples.
- Arctic and Taiga Canadian Atlas Archived 2007-02-05 ವೇಬ್ಯಾಕ್ ಮೆಷಿನ್ ನಲ್ಲಿ.
- Scientific Facts on Arctic Climate Change
- PolarTREC PolarTREC-Teachers and Researchers Exploring and Collaborating
- Arctic Change: Information on the present state of Arctic ecosystems and climate, presented in historical context (from NOAA, updated regularly)
- Monthly Sea Ice Outlook Archived 2014-01-18 ವೇಬ್ಯಾಕ್ ಮೆಷಿನ್ ನಲ್ಲಿ.
- UN Environment Programme Key Polar Centre at UNEP/GRID-Arendal
- Arctic Geobotanical Atlas, University of Alaska Fairbanks
- Polar Discovery
- Arctic Transform Transatlantic Policy Options for Supporting Adaptation in the Marine Arctic
- ArcticStat Circumpolar Database
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ |