ಕೆನಡಾ

ಉತ್ತರ ಅಮೇರಿಕ ಖಂಡದಲ್ಲಿರುವ ಒಂದು ದೇಶ
(ಕೆನಡ ಇಂದ ಪುನರ್ನಿರ್ದೇಶಿತ)

ಕೆನಡಾ - ಉತ್ತರ ಅಮೇರಿಕ ಖಂಡದ ಒಂದು ದೇಶ. ಕಾಮನ್‍ವೆಲ್ತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರ.

Canada
ಕೆನಡಾ
Formal Name:Canada
Common Name:ಕೆನಡಾ
Flag of ಕೆನಡ
Flag
Coat of arms of ಕೆನಡ
Coat of arms
Motto: [A Mari Usque Ad Mare] Error: {{Lang}}: text has italic markup (help)
(ಲ್ಯಾಟಿನ್‌ನಲ್ಲಿ "ಸಮುದ್ರದಿಂದ ಸಮುದ್ರಕ್ಕೆ")
Anthem: O Canada
Royal anthem: God Save the King
Location of ಕೆನಡ
Capitalಆಟ್ವಾ
Largest cityಟೊರಾನ್ಟೊ
Official languagesಆಂಗ್ಲ, ಫ್ರೆಂಚ್
Governmentಸಂಸದೀಯ ಗಣತಂತ್ರ
ಮತ್ತು federal ಸಾಂವಿಧಾನಿಕ ಚಕ್ರಾಧಿಪತ್ಯ
ಸಂಸ್ಥಾಪನೆ
ಜುಲೈ ೧, ೧೮೬೭

ಡಿಸೆಂಬರ್ ೧೧, ೧೯೩೧
ಏಪ್ರಿಲ್ ೧೭, ೧೯೮೨
• Water (%)
8.92 (891,163 km²)
Population
• ೨೦೦೭ estimate
32,810,700 (36th)
• ೨೦೦೧ census
30,007,094
GDP (PPP)೨೦೦೫ estimate
• Total
$1.105 trillion (11th)
• Per capita
$34,273 (7th)
GDP (nominal)೨೦೦೫ estimate
• Total
$1.132 trillion (8th)
• Per capita
$35,133 (16th)
HDI (೨೦೦೪)0.950
very high · 6th
Currencyಕೆನಡಾದ ಡಾಲರ್ ($) (CAD)
Time zoneUTC-3.5 to -8
• Summer (DST)
UTC-2.5 to -7
Calling code1
Internet TLD.ca

ಆಟ್ವಾ ಈ ದೇಶದ ರಾಜಧಾನಿ. ಟೊರಾಂಟೋ, ಮ್ಯಾಂಟ್ರಿಯಲ್, ವಾನ್ಕೂವರ್, ಕ್ಯಾಲ್ಗರಿಗಳು ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ.

ಭಾರತದಿಂದ ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.

ಕೆನಡದ ಇತಿಹಾಸಸಂಪಾದಿಸಿ

ಕೆನಡದ ಚರಿತ್ರೆ ೧೫ ನೆಯ ಶತಮಾನದಿಂದ, ಅಂದರೆ ಐರೋಪ್ಯರ ನೌಕಾಯಾನ ಸಾಹಸದ ಸುವರ್ಣಯುಗದಿಂದ ಪ್ರಾರಂಭವಾಗುತ್ತದೆ. ಪೌರಸ್ತ್ಯ ದೇಶಗಳಿಗೆ ಸಮುದ್ರಮಾರ್ಗ ಕಂಡುಹಿಡಿಯಲು ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಪ್ರಯತ್ನಿಸಿದುವು. ಈ ಪ್ರಯತ್ನದ ಫಲವಾಗಿ ಸ್ಪೇನ್ ದೇಶ ಕ್ಯಾರಿಬೀಯನ್ ಮತ್ತು ಮಧ್ಯ ಅಮೆರಿಕ ಪ್ರದೇಶಗಳಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿ, ಸೈನ್ಯಬಲದಿಂದ ವಿದೇಶೀಯರ ಪ್ರವೇಶವನ್ನು ತಡೆಗಟ್ಟಿತು. ಇಂಗ್ಲೆಂಡಿನ ದೊರೆ ೭ ನೆಯ ಹೆನ್ರಿಯ ಕಾಲದಲ್ಲಿ (೧೪೯೭) ಜಾನ್ ಕ್ಯಾಬಟ್ ಬ್ರಿಸ್ಟಲ್‍ನಿಂದ ಪ್ರಯಾಣ ಮಾಡಿ ಕೆನಡದ ತೀರವನ್ನು ತಲುಪಿ, ಅಲ್ಲಿಯ ನ್ಯೂ ಫೌಂಡ್‍ಲೆಂಡ್ ೭ ನೆಯ ಹೆನ್ರಿಗೆ ಸೇರಿದ್ದೆಂದು ಘೋಷಿಸಿದ. ೧೫೩೪ ರಲ್ಲಿ ಫ್ರಾನ್ಸಿನ ಅರಸ ಒಂದನೆಯ ಫ್ರಾನ್ಸಿಸ್ ಕಳುಹಿಸಿದ ನೌಕಾಯಾತ್ರೆ ಜಾಕ್ವಿಸ್ ಕಾಟ್ರ್ಯೇನ್ ನೇತೃತ್ವದಲ್ಲಿ ಸೇಂಟ್ ಲಾರೆನ್ಸ್ ಕೊಲ್ಲಿ ಪ್ರವೇಶಿಸಿತು. ಅನಂತರ ಗ್ಯಾಸ್ಟ್ ಪರ್ಯಾಯ ದ್ವೀಪ ೧ ನೆಯ ಫ್ರಾನ್ಸಿಸನಿಗೆ ಸೇರಿದ್ದೆಂದು ಘೋಷಿತವಾಯಿತು. ಮರುವರ್ಷ ಕಾಟ್ರ್ಯೆರ್ ಮಾಂಟ್ರಿಯಾಲ್ ವರೆಗೆ ನೌಕಾಯಾನ ಮಾಡಿದ.

೧೭ ನೆಯ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸಿನ ದೊರೆ ೪ ನೆಯ ಹೆನ್ರಿ ಕೆನಡದ ಬಗ್ಗೆ ಆಸಕ್ತಿ ವಹಿಸಿದ. ಆದ್ದರಿಂದ ಅದರ ಇತಿಹಾಸದ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ೧೬೦೮ ರಲ್ಲಿ ಸ್ಯಾಮುಯಲ್ ಡಿ ಚಾಂಪ್ಲೆನ್ ಸೇಂಟ್ ಲಾರೆನ್ಸ್ ಕಣಿವೆಯಲ್ಲಿಯ ಕ್ವಿಬೆಕ್ ಪ್ರದೇಶವನ್ನು ಫ್ರಾನ್ಸಿನ ವಸಾಹತನ್ನಾಗಿಸಿ ಅದರ ರಕ್ಷಣೆಗಾಗಿ ಕೋಟೆಕೊತ್ತಳಗಳನ್ನು ನಿರ್ಮಿಸಿದ. ಅನಂತರ ವೆಸ್ಟ್ ಇಂಡೀಸ್‍ನೊಂದಿಗೆ ವ್ಯಾಪಾರ ವಿಸ್ತರಿಸಿದ. ಇದರೊಂದಿಗೆ ಕ್ಯಾಥೊಲಿಕ್ ಪಾದ್ರಿಗಳಿಂದ ಧರ್ಮ ಪ್ರಸಾರವೂ ಪ್ರಾರಂಭವಾಯಿತು. ೧೬೨೯ ರಲ್ಲಿ ಕ್ವಿಬೆಕ್‍ನಲ್ಲಿ ಇಂಗ್ಲಿಷರ ಸೈನ್ಯ ಆಗಮಿಸಿದಾಗ ಚಾಂಪ್ಲೆನ್ ಶರಣಾಗತನಾದ. ಆದರೆ ೧೬೩೨ ರಲ್ಲಾದ ಸೇಂಟ್ ಜರ್ಮೈನ್-ಎನ್-ಲಾಯ್ ಒಪ್ಪಂದದಂತೆ ಕೆನಡ ಮತ್ತೆ ಫ್ರೆಂಚರಿಗೆ ದೊರೆಯಿತು. ೧೬೪೨ ರಲ್ಲಿ ಮಾಂಟ್ರಿಯಾಲ್ ಫ್ರಾನ್ಸಿನ ವಸಾಹತಾಯಿತು. ೧೬೬೩ ರಲ್ಲಿ ಕೆನಡ (ಹೊಸ ಫ್ರಾನ್ಸ್) ಫ್ರಾನ್ಸಿನ ವಸಾಹತೆಂದು ಘೋಷಿಸಲಾಯಿತು. ಅಲ್ಲಿ ಫ್ರೆಂಚ್ ಮಾದರಿಯ ಆಡಳಿತ ಜಾರಿಗೆ ಬಂತು. ೧೪ ನೆಯ ಲೂಯಿಯ ಮಂತ್ರಿ ಕಾಲ್ಬರ್ ಕೆನಡಕ್ಕೆ ವಲಸೆ ಹೋಗಲು ಫ್ರೆಂಚರನ್ನು ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ೧೬೬೫ ರಲ್ಲಿ ಸುಮಾರು ಎರಡು ಸಾವಿರ ಫ್ರೆಂಚರು ಕೆನಡದಲ್ಲಿ ನೆಲೆಸಿದರು.

ಅಮೆರಿಕ ಭೂಖಂಡದಲ್ಲಿ ಒಂದು ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಫ್ರಾನ್ಸಿನ ಉದ್ದೇಶವಾಗಿತ್ತು. ಇದರಿಂದಾಗಿ ಇಂಗ್ಲೆಂಡಿನೊಡನೆ ಯುದ್ಧ ಅನಿವಾರ್ಯವಾಯಿತು. ಕೆನಡದ ರಾಜ್ಯಪಾಲ ಫ್ರಾಂಟ್ ನ್ಯಾಕ್ ನ್ಯೂ ಇಂಗ್ಲೆಡಿನ ಮೇಲೆ ಆಕ್ರಮಣ ನಡೆಸಲು ನಿರ್ಧರಿಸಿದ. ಆದರೆ ೧೬೯೦ ರಲ್ಲಿ ಸರ್ ವಿಲಿಯಂ ಫಿಫ್ಸ್ ಬಾಸ್ಟನ್‍ನಿಂದ ನೌಕಾಪಡೆಯನ್ನು ಕೊಂಡೊಯ್ದು ನೋವ ಸ್ಕೋಷವನ್ನು ಗೆದ್ದುಕೊಂಡ. ೧೬೯೭ ರಲ್ಲಿ ರೈಸ್‍ವಿಕ್ ಒಪ್ಪಂದವಾಗಿ ಫ್ರೆಂಚರು ಮತ್ತೆ ಆ ಪ್ರದೇಶವನ್ನು ಪಡೆದುಕೊಂಡರು. ಆದರೆ ಯುದ್ಧ ಮಾತ್ರ ನಿಲ್ಲಲಿಲ್ಲ. ಕೊನೆಯಲ್ಲಿ ಫ್ರಾನ್ಸ್ ಸೋತು ೧೭೧೩ ರಲ್ಲಿ ಒಡಂಬಡಿಕೆ ಮಾಡಿಕೊಳ್ಳಬೇಕಾಯಿತು. ಅದರ ಪ್ರಕಾರ ಹಡ್ಸನ್ ಕೊಲ್ಲಿ, ನ್ಯೂ ಫೌಂಡ್‍ಲೆಂಡ್ ಮತ್ತು ನೋವ ಸ್ಕೋಷಗಳನ್ನು ಫ್ರಾನ್ಸ್ ಇಂಗ್ಲೆಂಡಿಗೆ ಬಿಟ್ಟುಕೊಡಬೇಕಾಯಿತು. ಅಲ್ಲಿ ಸ್ವಲ್ಪ ಕಾಲ ಶಾಂತಿ ನೆಲಸಿದ್ದರೂ ೧೭೪೦ ರಲ್ಲಿ ಯೂರೋಪಿನಲ್ಲಿ ಆಸ್ಟ್ರಿಯದ ಸಿಂಹಾಸನಕ್ಕಾಗಿ ಯುದ್ಧ ಪ್ರಾರಂಭವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳು ವಿರುದ್ಧ ಬಣಗಳಲ್ಲಿದ್ದುದರ ಫಲವಾಗಿ ಅಮೆರಿಕದಲ್ಲೂ ಯುದ್ಧ ಪ್ರಾರಂಭವಾಯಿತು. ೧೭೪೮ ರಲ್ಲಿ ಎ-ಲಾ-ಚಾಪೆಲೇ ಒಪ್ಪಂದದಿಂದ ಯೂರೋಪಿನಲ್ಲಿ ಯುದ್ಧ ಕೊನೆಗೊಂಡಾಗ ಇಲ್ಲೂ ಶಾಂತಿ ಏರ್ಪಟ್ಟರೂ ಬ್ರಿಟನ್ ಭೂಶಿರದಲ್ಲಿರುವ ಲೂಯಿಬರ್ಗ್ ಫ್ರಾನ್ಸಿನ ಕೈಬಿಟ್ಟಿತು. ೧೭೫೬ ರಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್‍ಗಳ ಮಧ್ಯೆ ಏಳು ವರ್ಷಗಳ ಯುದ್ಧ ಪ್ರಾರಂಭವಾಯಿತು. ಅಮೆರಿಕದಲ್ಲಿ ಇಂಗ್ಲೆಂಡಿಗಿದ್ದಷ್ಟು ಅನುಕೂಲಗಳು ಫ್ರಾನ್ಸಿಗೆ ಇರಲಿಲ್ಲ. ಅಲ್ಲದೆ ಇಂಗ್ಲೆಂಡಿನ ನೌಕಾಪಡೆ ಬಲಶಾಲಿಯಾಗಿತ್ತು. ೧೭೫೯ ರ ಸೆಪ್ಟೆಂಬರಿನಲ್ಲಿ ಇಂಗ್ಲೆಂಡಿನ ಜೇಮ್ಸ್ ವುಲ್ಛ್ ಕ್ವಿಬೆಕ್‍ನಲ್ಲಿ, ಒಂದು ವರ್ಷದ ಅನಂತರ ಮಾಂಟ್ರಿಯಾಲ್‍ನಲ್ಲಿ ಅದ್ಭುತ ವಿಜಯ ಪಡೆದ. ಕೆನಡದಲ್ಲಿದ್ದ ಫ್ರೆಂಚ್ ಸೈನ್ಯ ಶರಣಾಗತವಾಯಿತು. ೧೭೬೩ ರಲ್ಲಿ ಪ್ಯಾರಿಸ್ ಒಪ್ಪಂದವಾಗಿ ೭ ವರ್ಷಗಳ ಯುದ್ಧ ಕೊನೆಗೊಂಡಿತು, ಕೆನಡ ಇಂಗ್ಲೆಂಡಿನ ವಶವಾಯಿತು.

ಆಧುನಿಕ ಕೆನಡದ ಚರಿತ್ರೆ ಅಮೆರಿಕದ ಸ್ವಾತಂತ್ರ್ಯ ಯುದ್ಧದ ಅನಂತರ ನಿಖರವಾಗಿ ಪ್ರಾರಂಭವಾಯಿತು. ಅಮೆರಿಕನರ ಕ್ರಾಂತಿಯ ಪರಿಣಾಮವಾಗಿ ರಾಜಪ್ರಭುತ್ವವಾದಿ ಇಂಗ್ಲಿಷರು ಸಹಸ್ರಾರು ಸಂಖ್ಯೆಯಲ್ಲಿ ಕೆನಡದಲ್ಲಿ ಆಶ್ರಯ ಪಡೆದರು. ಇದರಿಂದಾಗಿ ಫ್ರೆಂಚರಂತೆ ಇಂಗ್ಲಿಷರೂ ಕೆನಡದ ನಿವಾಸಿಗಳಾದರು. ಪ್ಯಾರಿಸ್ ಒಪ್ಪಂದದ ಅನಂತರ ೧೭೭೪ ರಲ್ಲಿ ಕ್ವಿಬೆಕ್ ಮಸೂದೆ ಜಾರಿಗೆ ಬರುವವರೆಗೆ ಕೆನಡ ಇಂಗ್ಲೆಂಡಿನ ರಾಜಪ್ರಭುತ್ವಕ್ಕೆ ಒಳಪಟ್ಟಿತ್ತು. ೧೭೭೫ ರಲ್ಲಿ ಅಮೆರಿಕದ ಸ್ವಾತಂತ್ರ್ಯ ಯುದ್ಧ ಪ್ರಾರಂಭವಾಯಿತು. ಕೆನಡವನ್ನು ವಶಪಡಿಸಿಕೊಳ್ಳುವುದು ಅಮೆರಿಕನರ ಯೋಜನೆಗಳಲ್ಲಿ ಒಂದಾಗಿತ್ತು. ಆದರೆ ಅದು ವಿಫಲವಾಯಿತು. ಕೆನಡ ಇಂಗ್ಲಿಷರ ವಶವಾದಮೇಲೆ ಅಲ್ಲಿ ಫ್ರೆಂಚ್ ಮಾದರಿಯ ಆಡಳಿತ ಪದ್ಧತಿ ಕ್ರಮೇಣ ಮಾಯವಾಯಿತು. ೧೭೯೧ ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟು ಒಂದು ಸಂವಿಧಾನ ರಚಿಸಿ, ಆಟ್ಟವ ನದಿಯ ಆಧಾರದ ಮೇಲೆ ಕೆನಡವನ್ನು ಪ್ರತ್ಯೇಕ ಸರ್ಕಾರಗಳನ್ನು ಹೊಂದಿದ ಎರಡು ಭಾಗಗಳನ್ನಾಗಿ ವಿಭಾಗಿಸಿತು. ದಕ್ಷಿಣ ಕೆನಡದಲ್ಲಿ ಫ್ರೆಂಚ್ ಮಾದರಿಯ ಸರ್ಕಾರ ಉತ್ತರ ಕೆನಡದಲ್ಲಿ ಇಂಗ್ಲೆಂಡ್ ಮಾದರಿಯ ಸರ್ಕಾರ ಅಸ್ತಿತ್ವದಲ್ಲಿ ಬಂದುವು. ಕೆನಡದ ಎರಡು ಪ್ರದೇಶಗಳಿಗೂ ಸೇರಿದಂತೆ ಒಬ್ಬ ರಾಜ್ಯಪಾಲನನ್ನು ಮತ್ತು ಪ್ರತಿಯೊಂದಕ್ಕೂ ಒಬ್ಬ ಉಪರಾಜ್ಯಪಾಲರನ್ನು ನೇಮಕ ಮಾಡಲಾಯಿತು. ಕೆನಡದ ವಸಾಹತುಗಳು ಪರಿಪೂರ್ಣತೆ ಪಡೆದಂತೆ ಅಲ್ಲಿ ಸ್ವಯಮಾಡಳಿತ ಪಡೆಯಬೇಕೆಂಬ ಉತ್ಕಟ ಅಪೇಕ್ಷೆ ಉಂಟಾಯಿತು. ೧೯ ನೆಯ ಶತಮಾನದಲ್ಲಿ ಇಂಗ್ಲೆಂಡ್, ಅಮೆರಿಕ ಮೊದಲಾದ ದೇಶಗಳಲ್ಲಿದ್ದ ಪ್ರಜಾಪ್ರಭುತ್ವ ಭಾವನೆಗಳು ಕೆನಡದ ವಸಾಹತುಗಳಲ್ಲೂ ಪ್ರತಿಧ್ವನಿತವಾದವು.

ಕೆನಡಿಯನರಲ್ಲಿ ಅತೃಪ್ತಿ ಕ್ರಮೇಣ ಬೆಳೆದು ೧೮೩೭ ರಲ್ಲಿ ಉಗ್ರಸ್ವರೂಪದ ಚಳವಳಿ ಪ್ರಾರಂಭವಾಯಿತು. ಉತ್ತರ ಕೆನಡದಲ್ಲಿ ಲಿಯಾನ್ ಮೆಕೆನ್‍ಜಿóಯ ನೇತೃತ್ವದಲ್ಲಿ ಕ್ರಾಂತಿ ಪ್ರಾರಂಭವಾಯಿತು. ಆದರೆ ಅದನ್ನು ಸುಲಭವಾಗಿ ಅಡಗಿಸಲಾಯಿತು, ಮತ್ತು ಮೆಕೆನ್‍ಜಿóಗೆ ಗಡಿಪಾರು ಶಿಕ್ಷೆ ವಿಧಿಸಲಾಯಿತು. ದಕ್ಷಿಣ ಕೆನಡದಲ್ಲಿ ಲೂಯಿ ಜೋಸೆಫನ ನೇತೃತ್ವದಲ್ಲಿ ಪ್ರಾರಂಭವಾದ ಕ್ರಾಂತಿ ಬೆಂಬಲ ಸಿಗದೆ ವಿಫಲವಾಯಿತು. ೧೮೩೮ ರಲ್ಲಿ ವಿಗ್ ಪಾರ್ಟಿಯ ಮುಖಂಡ ಲಾಡ ಡರ್ಹಾಮ್ ಕೆನಡದ ರಾಜ್ಯಪಾಲನಾಗಿ ನೇಮಕಗೊಂಡ. ಆಂತರಿಕ ವ್ಯವಹಾರಗಳಲ್ಲಿ ಕೆನಡದ ಪ್ರದೇಶಗಳಿಗೆ ಸ್ವಯಮಾಡಳಿತ ನೀಡಬೇಕು ಮತ್ತು ಎರಡು ಪ್ರದೇಶಗಳ ಏಕೀಕರಣವಾಗಬೇಕು ಎಂದು ಡರ್ಹಾಮ್ ಸಲಹೆ ನೀಡಿದ. ಅದರಂತೆ ೧೮೪೦-೪೧ ರಲ್ಲಿ ಏಕೀಕರಣದ ಮಸೂದೆಯೊಂದು ಜಾರಿಯಾಗಿ ಕೆನಡದ ಎರಡೂ ರಾಜ್ಯಗಳು ಒಂದಾದುವು. ಪಾರ್ಲಿಮೆಂಟಿಗೆ ಎರಡೂ ರಾಜ್ಯಗಳು ಸಮಸಂಖ್ಯೆಯಲ್ಲಿ ಸದಸ್ಯರನ್ನು ಕಳಿಸಿಕೊಡಬೇಕೆಂದು ತೀರ್ಮಾನಿಸಲಾಯಿತು. ೧೮೪೯ ರಲ್ಲಿ ಲಾರ್ಡ್ ಎಲ್ಗಿನ್ ಗವರ್ನರ್-ಜನರಲ್ ಆಗಿದ್ದಾಗ ಕೆನಡ ಸ್ವಲ್ಪಮಟ್ಟಿನ ಸ್ವಯಮಾಡಳಿತ ಪಡೆಯಿತು.

ಕೆನಡದ ಎರಡೂ ಪ್ರಾಂತ್ಯಗಳ ಏಕೀಕರಣದಿಂದ ಅನುಕೂಲಕ್ಕಿಂತ ಹೆಚ್ಚಾಗಿ ಪ್ರತಿಕೂಲವುಂಟಾಯಿತು. ಪರಸ್ಪರ ವೈರಿಗಳಾದ ಇಂಗ್ಲಿಷರು ಮತ್ತು ಫ್ರೆಂಚರು ಅದಕ್ಕೆ ಕಾರಣರಾಗಿದ್ದರು. ಇದರಿಂದಾಗಿ ದೇಶದಲ್ಲಿ ಸುಭದ್ರ ಸಕಾರದ ರಚನೆಗೆ ತೊಡಕಾಯಿತು. ಕ್ಯಾಥೊಲಿಕರಾಗಿದ್ದ ಫ್ರೆಂಚರೂ ಪ್ರಾಟೆಸ್ಟಂಟರಾಗಿದ್ದ ಇಂಗ್ಲಿಷರೂ ಪಾರ್ಲಿಮೆಂಟಿನಲ್ಲಿ ಸಮಪ್ರಾತಿನಿಧ್ಯ ಹೊಂದಿದ್ದುದರಿಂದ ದೇಶದ ಯಾವ ಕೆಲಸವೂ ಸುಸೂತ್ರವಾಗಿ ನಡೆಯದೆ ರಾಜಕೀಯ ಬಿಕ್ಕಟ್ಟು ಅನಿವಾರ್ಯವಾಯಿತು. ೧೮೬೦ರಲ್ಲಿ ಹಲವಾರು ಸಚಿವ ಸಂಪುಟಗಳ ಬದಲಾವಣೆಯಾಗಿ ದೇಶದ ಪ್ರಗತಿ ಕುಂಠಿತವಾಯಿತು. ಯಾವುದಾದರೊಂದು ರಾಜಕೀಯ ಪರಿಹಾರದ ಅವಶ್ಯಕತೆ ಇತ್ತು. ಇದೇ ಸಮಯದಲ್ಲಿ ನೋವ ಸ್ಕೋಷ, ನ್ಯೂ ಬ್ರನ್‍ಸ್óವಿಕ್ ಮತ್ತು ಪ್ರಿನ್ಸ್ ಎಡ್ವರ್ಡ್ ವಸಾಹತುಗಳಲ್ಲಿ ಕ್ರಾಂತಿ ಪ್ರಾರಂಭವಾಗಿ ಅವು ತಮ್ಮದೇ ಆದ ಒಂದು ಸ್ಥಾನಿಕ ಏಕೀಕರಣ ಮಾಡಿಕೊಳ್ಳಲು ಯೋಚಿಸಿದುವು. ಕೆನಡದ ಮುತ್ಸದ್ದಿಗಳಾದ ಮ್ಯಾಕ್ಟೊನಾಲ್ಡ್, ಕಾರ್ಟಿಯರ್, ನೋವ ಸ್ಕೋಷದ ಟಪ್ಪರ್, ನ್ಯೂ ಬ್ರನ್‍ಸ್óವಿಕ್‍ನ ಟಿಲ್ಲಿ ಮೊದಲಾದವರು ಐಕ್ಯ ಕೆನಡ ಒಕ್ಕೂತ ನಿರ್ಮಾಣಮಾಡಲು ಸಿದ್ಧರಾದರು. ಷಾರ್ಲಟ್‍ಟೌನ್ ಮತ್ತು ಕ್ವಿಬೆಕ್ ನಗರಗಳಲ್ಲಿ ಅನೇಕ ಸಭೆಗಳನ್ನು ನಡೆಸಿ ಅಂತಿಮ ತೀರ್ಮಾನಕ್ಕಾಗಿ ಲಂಡನಿಗೆ ಹೋದರು. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ೧೮೬೭ ರಲ್ಲಿ ಬ್ರಿಟಿಷ್ ಉತ್ತರ ಅಮೆರಿಕದ ಕಾಯಿದೆಗೆ ಒಪ್ಪಗೆ ದೊರಕಿತು. ನೋವ ಸ್ಕೋಷ ನ್ಯೂ ಬ್ರನ್‍ಸ್óವಿಕ್ ವಸಾಹತುಗಳು ಏಕೀಕರಣವನ್ನು ವಿರೋಧಿಸಿದರೂ ಆರ್ಥಿಕ ಸಹಾಯದ ಭರವಸೆಯ ಮೇಲೆ ಶಾಂತವಾದುವು. ೧೮೭೦ ರಲ್ಲಿ ಮ್ಯಾನಿಟೋಬ, ೧೮೭೧ ರಲ್ಲಿ ಬ್ರಿಟಿಷ್ ಕೊಲಂಬಿಯ, ೧೮೭೩ ರಲ್ಲಿ ಪ್ರಿನ್ಸ್ ಎಡ್ವರ್ಡ್ ವಸಾಹತುಗಳು ಒಕ್ಕೂಟವನ್ನು ಸೇರಿಕೊಂಡುವು. ಕೆನಡ ದೇಶ ಅಟ್ಲಾಂಟಿಕ್‍ನಿಂದ ಪೆಸಿಫಿಕ್‍ವರೆಗೆ ವಿಸ್ತರಿಸಿತು. ಹೀಗೆ ಕೆನಡ ರಾಜ್ಯಕ್ಕೆ ೧೮೬೭ ರ ಜುಲೈ ಒಂದರಿಂದ ಅಧಿರಾಜ್ಯದ ಸ್ಥಾನ ಲಭ್ಯವಾಯಿತು. (ನೋಡಿ-ಕೆನಡದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ) ವಿದೇಶಾಂಗ ನೀತಿ: ಕೆನಡದ ವಿದೇಶಾಂಗ ನೀತಿಯ ವಿಕಾಸವನ್ನು ೧೮೬೭ ರಿಂದ ೧೯೧೮ ರ ವರೆಗೆ, ೧೯೧೯ ರಿಂದ ೧೯೩೯ ರ ವರೆಗೆ ಹಾಗೂ ೧೯೩೯ ರಿಂದ ಇಂದಿನ ವರೆಗೆ ಎಂದು ವಿಭಾಗಿಸಬಹುದು. ೧೮೬೭-೧೯೧೮: ಈ ಅವಧಿಯಲ್ಲಿ ಕೆನಡಕ್ಕೆ ತನ್ನದೇ ಆದ ಪರಿಣಾಮಕಾರಿ ವಿದೇಶಾಂಗ ನೀತಿ ಇರಲಿಲ್ಲ. ಕೆನಡದ ಕಾರ್ಯಾಂಗದ ಅಧಿಕಾರ ಇಂಗ್ಲೆಂಡಿನ ರಾಣಿಯನ್ನು ಪ್ರತಿನಿಧಿಸುತ್ತಿದ್ದ ಗವರ್ನರ್-ಜನರಲನ ಕೈಯಲ್ಲಿತ್ತು. ಅವನು ವಿದೇಶಾಂಗ ನೀತಿಯ ಬಗ್ಗೆ ಇಂಗ್ಲೆಂಡಿನ ಸರ್ಕಾರದಿಂದ ಸಲಹೆಗಳನ್ನು ಪಡೆಯುತ್ತಿದ್ದ. ಇಂಗ್ಲೆಂಡಿನೊಡನೆ ನಿರಂತರ ಸಂಪರ್ಕ ಹೊಂದಲು ಕೆನಡ ಸರ್ಕಾರ ಲಂಡನ್ ನಗರದಲ್ಲಿ ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಿತ್ತು. ಇತರ ದೇಶಗಳೊಂದಿಗೆ ಸಂಪರ್ಕ ಪಡೆಯಲು ಕೆನಡದಲ್ಲಿ ೧೯೦೯ ರಲ್ಲಿ ವಿದೇಶಾಂಗ ವ್ಯವಹಾರದ ವಿಭಾಗ ಸ್ಥಾಪಿತವಾಯಿತು. ರಾಜತಾಂತ್ರಿಕ ವಿಷಯದಲ್ಲಿ ಸ್ವಾವಲಂಬಿಯಾಗಲು ವಲಸೆಗಾರರ ಸಮಸ್ಯೆ ಕೆನಡಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತ್ತು. ಬ್ರಿಟಿಷ್ ಕೊಲಂಬಿಯ ಪ್ರಾಂತ್ಯದಲ್ಲಿ ಚೀನಿಯರ ಮತ್ತು ಜಪಾನೀಯರ ವಲಸೆ ಹೆಚ್ಚಾಗಿ ಅನೇಕ ಕಡೆ ದೊಂಬಿಗೆ ಕಾರಣವಾಯಿತು. ಕೆನಡದ ಕಾರ್ಮಿಕ ಸಚಿವ ಟೋಕಿಯೋಗೆ ಹೋಗಿ ಅಲ್ಲಿದ್ದ ಇಂಗ್ಲೆಂಡಿನ ರಾಯಭಾರಿಯ ಸಹಾಯದಿಂದ ಜಪಾನಿನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಜಪಾನಿನ ವಲಸೆ ನಿಂತಿತು. ಚೀನದ ಆಂತರಿಕ ಸಮಸ್ಯೆಗಳಿಂದಾಗಿ ಆ ದೇಶದೊಡನೆ ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ೧೯೧೪ ರಲ್ಲಿ ಇಂಗ್ಲೆಂಡ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿದಾಗ ಕೆನಡ ಇಂಗ್ಲೆಂಡ್ ದೇಶವನ್ನನುಸರಿಸಿ ದೊಡ್ಡ ಸೈನ್ಯವನ್ನು ಕಳಿಸಿತು. ೧೯೧೯-೧೯೩೯: ಪ್ಯಾರಿಸ್ ಶಾಂತಿಸಮ್ಮೇಳನದಲ್ಲಿ ಕೆನಡದ ಪ್ರಧಾನಿ ರಾಬರ್ಟ್ ಬೋರ್ಡನ್ ಇಂಗ್ಲೆಂಡಿನಿಂದ ಪ್ರತ್ಯೇಕವಾಗಿ ತಮ್ಮ ದೇಶವನ್ನು ಪ್ರತಿನಿಧಿಸುವ ಹಕ್ಕನ್ನು ಪಡೆದುಕೊಂಡರು. ಇದೇ ನೆಪದಿಂದ ಲೀಗ್ ಆಫ್ ನೇಷನ್ಸ್‍ನಲ್ಲೂ ಕೆನಡ ಪ್ರತ್ಯೇಕ ಸದಸ್ಯತ್ವ ಪಡೆಯಿತು. ಅನಂತರ ಅಂತರರಾಷ್ಟ್ರೀಯ ಕಾರ್ಮಿಕ ಹಿತರಕ್ಷಣ ಸಂಸ್ಥೆಯಲ್ಲಿ ಕೂಡ ಪ್ರತ್ಯೇಕ ಸ್ಥಾನ ಪಡೆಯಿತು. ಹೀಗೆ ಕೆನಡ ಅಂತರರಾಷ್ಟ್ರೀಯವಾಗಿ ತನ್ನ ಪ್ರತಿಮೆಯನ್ನು ಸ್ಥಾಪಿಸಿಕೊಂಡಿತು. ೧೯೨೩ ರಲ್ಲಿ ಕೆನಡ ಮೊದಲ ಬಾರಿಗೆ ಇಂಗ್ಲೆಂಡಿಗೆ ತಿಳಿಸದೆ ಅಮೆರಿಕದೊಡನೆ ಹ್ಯಾಲಿಬಟ್ ಕೌಲು ಮಾಡಿಕೊಂಡಿತು. ಅಲ್ಲಿಂದ ಕಾಮನ್‍ವೆಲ್ತ್ ಒಕ್ಕೂಟದ ಏಕಮುಖ ವಿದೇಶಾಂಗನೀತಿ ಪದ್ಧತಿ ಮುರಿದುಬೀಳಲಾರಂಭಿಸಿತು. ಬ್ರಿಟನಿನೊಂದಿಗೆ ಅಧಿರಾಜ್ಯಗಳು ಪಾಲುದಾರ ರಾಷ್ಟ್ರಗಳೆಂದೂ ಅವು ಎಲ್ಲ ರೀತಿಯಲ್ಲೂ ಪರಸ್ಪರ ಸಮಾನವೆಂದೂ ದೊರೆತನಕ್ಕೆ ಇವೆಲ್ಲ ವಿಧೇಯವೆಂದೂ ೧೯೨೬ ರಲ್ಲಿ ಸಮಾವೇಶಗೊಂಡಿದ್ದ ಸಾಮ್ರಾಜ್ಯ ಸಮ್ಮೇಳನದಲ್ಲಿ ಸಾರಲಾಯಿತು. ಈ ಘೋಷಣೆಯನ್ನು ೧೯೩೧ ರಲ್ಲಿ ವೆಸ್ಟ್‍ಮಿನ್‍ಸ್ಟರ್ ಸ್ಟಾಚ್ಯೂಟಿನ ಮೂಲಕ ಕಾನೂನುಬದ್ಧವಾಗಿ ಮಾಡಲಾಯಿತು. ೧೯೩೯ ರಿಂದ: ಎರಡನೆಯ ಮಹಾಯುದ್ಧದಿಂದ ಕೆನಡದಲ್ಲಿ ರಾಷ್ಟ್ರೀಯತೆ ಜಾಗೃತಗೊಂಡಿತು. ಆ ಯುದ್ಧದಿಂದಾಗಿ ಯೂರೋಪಿನ ಅನೇಕ ದೇಶಗಳು ದುರ್ಬಲಗೊಡಿದ್ದರಿಂದ ಮತ್ತು ಕೆನಡದ ಆರ್ಥಿಕಸ್ಥಿತಿ ಸುಧಾರಿಸಿದ್ದರಿಂದ ಕೆನಡ ವಿಶ್ವದ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವುದು ಅನಿವಾರ್ಯವಾಯಿತು. ಎರಡನೆಯ ಮಹಾಯುದ್ಧ ಮುಕ್ತಾಯವಾಗುವುದರೊಳಗೆ ಕೆನಡ ಮಿತ್ರರಾಷ್ಟ್ರಗಳ ಪೈಕಿ ನೌಕಾಪಡೆಯಲ್ಲಿ ಮೂರನೆಯ ಹಾಗೂ ವೈಮಾನಿಕ ಪಡೆಯಲ್ಲಿ ನಾಲ್ಕನೆಯ ರಾಷ್ಟ್ರವಾಗಿ ಪರಿಣಮಿಸಿತು. ಈ ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಕೆನಡದಿಂದ ಕೋಟ್ಯಂತರ ಡಾಲರುಗಳ ಸಹಾಯ ಪಡೆದುವು. ಇಂಗ್ಲೆಂಡಿಗೂ ಕೆನಡ ಸಾಲ ನೀಡಿತು. ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರದಲ್ಲಿ, ಅಂತರ ರಾಷ್ಟ್ರೀಯ ಆಹಾರ ಮತ್ತು ವ್ಯವಸಾಯ ಸಂಸ್ಥೆಗೆ ಸಂಬಂಧಿಸಿದ ಅನೇಕ ಮಹತ್ತ್ವದ ಕಾರ್ಯಗಳಲ್ಲಿ ಕೆನಡದ ತಜ್ಞರು ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ಕಾಮನ್‍ವೆಲ್ತ್ ರಾಷ್ಟ್ರಸಮುದಾಯದಲ್ಲಿ ಕೆನಡದ ನೀತಿ ಎರಡನೆಯ ಮಹಾಯುದ್ಧದ ಕಾಲದಲ್ಲಾಗಲಿ ಅನಂತರವಾಗಲಿ ಯಾವ ಬದಲಾವಣೆಗೂ ಒಳಗಾಗಲಿಲ್ಲ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಘಾನ ಮತ್ತು ಮಲಯ ದೇಶಗಳು ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದಲ್ಲಿ ಪೂರ್ಣ ಸದಸ್ಯತ್ವ ಪಡೆದಾಗ ಕೆನಡ ಅದನ್ನು ಸ್ವಾಗತಿಸಿತು. ಭಾರತ ಗಣರಾಜ್ಯವಾದಾಗ ಅದು ಕಾಮನ್‍ವೆಲ್ತ್ ಸಮುದಾಯದಲ್ಲೇ ಉಳಿಯುವುದು ಸಾಧ್ಯವಾಗುವಂತೆ ಕಾಮನ್‍ವೆಲ್ತ್ ವ್ಯವಸ್ಥೆಯನ್ನು ಮಾರ್ಪಡಿಸಲು ಕೆನಡ ಸಹಾಯ ಮಾಡಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
 
ಪೆಗ್ಗಿ & # 039; ಕೋವ್, ಹ್ಯಾಲಿಫ್ಯಾಕ್ಸ್
"https://kn.wikipedia.org/w/index.php?title=ಕೆನಡಾ&oldid=1166137" ಇಂದ ಪಡೆಯಲ್ಪಟ್ಟಿದೆ