ಮಿಡತೆ ಆರ್ತಾಪ್ಟರ ಗಣ ಹಾಗೂ ಅಕ್ರಿಡೈಡಿಯ ಉಪಗಣದ ಲೋಕಸ್ಟಿಡೀ ಅಥವಾ ಆಕ್ರಿಡೈಯಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಕೀಟಗಳಿಗಿರುವ ಸಾಮಾನ್ಯ ಹೆಸರು. ಚಿಮ್ಮಂಡೆ ಪರ್ಯಾಯನಾಮ. ಇದರಲ್ಲಿ ಎರಡು ಪ್ರಧಾನ ಬಗೆಗಳುಂಟು. ಒಂದ ಬಗೆಯವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಷಂಪ್ರತಿ ವಲಸೆ ಹೋಗುವಂಥವು (ಲೋಕಸ್ಟ್ಸ್). ಇನ್ನೊಂದು ಬಗೆಯವು ವಲಸೆ ಹೋಗದೆ ಇರುವಂಥವು (ಗ್ರಾಸ್‍ಹಾಪರ್ಸ್). ಎರಡೂ ಗುಂಪಿನವು ಸಸ್ಯಾಹಾರಿಗಳಾಗಿದ್ದು ಅನೇಕ ವೇಳೆ ಧಾನ್ಯ ಬೆಳೆಗಳಿಗೆ, ಆರ್ಥಿಕ ಬೆಳೆಗಳಿಗೆ ಮುತ್ತಿ ಅಪಾರ ಹಾನಿಯನ್ನು ಉಂಟುಮಾಡುವುವು.[] ಇಂತವುಗಳ ಪೈಕಿ ಆಫ್ರಿಕ ಹಾಗೂ ಏಷ್ಯದ ಹಲವಾರು ದೇಶಗಳಲ್ಲಿ ವರ್ಷೇ ವರ್ಷೇ ಕಂಡುಬರುವ ಮಿಡತೆಗಳು ಅತ್ಯಂತ ಕುಪ್ರಸಿದ್ಧವಾಗಿವೆ. ಈ ಕೀಟಗಳ ಹಾವಳಿ ಎಷ್ಟು ಭೀಕರವಾಗಿರುತ್ತದೆ ಎಂದರೆ ಈ ಭೂಖಂಡಗಳ ದೇಶಗಳಲ್ಲಿ ಇವು ದಾಳಿಯಿಕ್ಕುವ ತಿಂಗಳುಗಳಲ್ಲಿ ಮಿಡತೆಗಳ ದಂಡು ಕಾರ್ಮೋಡಗಳ ತೆರದಲ್ಲಿ ಎರಗಿ ಪೈರುಗಳನ್ನು ಅತ್ಯಲ್ಪ ಸಮಯದಲ್ಲಿ ಸಂಪೂರ್ಣವಾಗಿ ಕಬಳಿಸಿ ಬರಗಾಲ ಪರಿಸ್ಧಿತಿಗಳನ್ನು ಉಂಟು ಮಾಡುವುದಿದೆ. ಉದಾಹರಣೆಗೆ ಶಿಸ್ಟೊಸರ್ಕ ಗ್ರಿಗೇರಿಯ (ಡೆಸರ್ಟ್ ಲೋಕಸ್ಟ್), ಎಂಬ ಮಿಡತೆ ಈಜಿಪ್ಟ್, ಉತ್ತರ ಆಫ್ರಿಕ, ಅರೇಬಿಯ, ಆಫ್‍ಘಾನಿಸ್ತಾನ ಹಾಗೂ ಉತ್ತರ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಪೈರುಗಳ ಮೇಲೆ ದಾಳಿಯಿಕ್ಕಿ ಅಗಾಧ ನಷ್ಟವನ್ನುಂಟುಮಾಡುತ್ತದೆ.[]

ದೇಹರಚನೆ

ಬದಲಾಯಿಸಿ

ಎಲ್ಲ ಮಿಡತೆಗಳೂ ಸುಮಾರು 2.5-5 ಸೆಂಮೀ ಉದ್ದದ ಕೀಟಗಳು: ಎರಡು ಜೊತೆ ರೆಕ್ಕೆಗಳನ್ನು ಪಡೆದಿವೆ. ಇವುಗಳ ಪೈಕಿ ಮುಂದಿನವಾದ ಟೆಗ್ಮಿನ ಎಂಬವು ಕಿರಿಯಗಲದವೂ ದೃಢವಾದವೂ ಆಗಿವೆ. ಹಿಂದಿನ ಜೊತೆ ರೆಕ್ಕೆಗಳು ತೆಳುವಾದವೂ ಅಗಲವಾದವೂ ಆಗಿದ್ದು ಕೀಟ ಕುಳಿತಿರುವಾಗ ಮಡಿಚಿಕೊಂಡಿದ್ದು ಮುಂದಿನ ರೆಕ್ಕೆಗಳಿಂದ ಮುಚ್ಚಿಹೋಗಿರುತ್ತವೆ. ಹಾರುವಾಗ ಎರಡು ಜೊತೆಗಳೂ ಬಳಕೆಯಾಗುತ್ತವೆ. ದೇಹದಲ್ಲೆಲ್ಲ ಪ್ರೋಥೊರ್‍ಯಾಕ್ಸ್ ಭಾಗ ಅತ್ಯಂತ ದೊಡ್ಡದು. ಸ್ಪರ್ಶಾಂಗಗಳು ಉದ್ದವೂ ನಳಿಕೆಯಾಕಾರದವೂ ಆಗಿದ್ದು ಹಲವಾರು ಖಂಡಗಳಿಂದ ರಚಿತವಾಗಿವೆ. ಕಣ್ಣುಗಳು ದೊಡ್ಡ ಗಾತ್ರದವು. ಇರುವ ಮೂರು ಜೊತೆ ಕಾಲುಗಳ ಪೈಕಿ ಮೊದಲನೆಯವು ಮತ್ತು ಎರಡನೆಯವು ಚಿಕ್ಕವು: ಕೀಟ ತೆವಳಲು, ಆಸರೆಗಳ ಮೇಲೆ ಹತ್ತಲು: ಹಿಡಿಯಲು ಬಳಕೆಯಾಗುತ್ತವೆ. ಮೂರನೆಯ ಜೋಡಿ ಮಾತ್ರ ಬಲಯುತವಾಗಿದ್ದು ಕೀಟ ಜಿಗಿಯಲು ಸಹಾಯಕವಾಗಿವೆ. ಹಿಂಭಾಗದ ಕಾಲುಗಳ ತೊಡೆ ಭಾಗದ ಒಳಮುಖದ ಮೇಲೆ ಅನೇಕ ಮುಳ್ಳುಗಳಿವೆ. ಇವನ್ನು ಮುಂದಿನ ರೆಕ್ಕೆಗಳ ಮೇಲೆ ಇರುವ ಏಣಿನ ಮೇಲೆ ಉಜ್ಜುವುದರ ಮೂಲಕ ಮಿಡತೆಗಳು ಕೀಚುಕೀಚಾದ ಸದ್ದನ್ನು ಉಂಟುಮಾಡುವುವು. ಜೊತೆಗೆ ಮಿಡತೆಗಳ ರೆಕ್ಕೆಗಳ ಬುಡದಲ್ಲಿ ಶಬ್ದಗ್ರಾಹಕ ಸಾಮರ್ಥ್ಯವುಳ್ಳ ಕಿವಿತಮ್ಮಟೆಯುಂಟು.

ಸಂತಾನವೃದ್ಧಿ

ಬದಲಾಯಿಸಿ

ಸಂತಾನವೃದ್ಧಿಯ ಕಾಲದಲ್ಲಿ ಹೆಣ್ಣುಮಿಡತೆ ತನ್ನ ಉದರದ ಹಿಂತುದಿಯಿಂದ ನೆಲವನ್ನು ತೋಡಿ ಕುಳಿ ನಿರ್ಮಿಸಿ ಅದರೊಳಗೆ 20 ರಿಂದ 100 ಮೊಟ್ಟೆಗಳನ್ನು ಇಡುತ್ತದೆ. ಸಾಮಾನ್ಯವಾಗಿ ಮೊಟ್ಟೆಗಳ ಸುತ್ತ ಗಟ್ಟಿಯಾದ ಕವಚವಿರುವುದುಂಟು. ಮೊಟ್ಟೆಯೊಡೆದು ಹೊರಬರುವ ಮರಿಗಳು ನೋಡಲು ವಯಸ್ಕ ಕೀಟಗಳಂತೆಯೇ ಇರುವುವು. ಆದರೆ ಗಾತ್ರದಲ್ಲಿ ಚಿಕ್ಕವೂ ರೆಕ್ಕೆರಹಿತವೂ ಆಗಿರುವುವು. ಬೆಳೆಯುತ್ತ ಹೋದಂತೆ 5-8 ಸಲ ಪೊರೆಕಳಚಿ ವಯಸ್ಕ ಹಂತವನ್ನು ತಲುಪುತ್ತವೆ.

ಕೆಲವು ಪ್ರಭೇದಗಳು

ಬದಲಾಯಿಸಿ

ಮಿಡತೆಗಳ ಪೈಕಿ ಪರಿಚಿತವಾದ ಇತರ ಪ್ರಭೇದಗಳೆಂದರೆ ದಕ್ಷಿಣ ಆಫ್ರಿಕದ ಲೋಕಸ್ಟಾನ ಪಾರ್ಡಲೈನ (ಬ್ರೌನ್ ಲೋಕಸ್ಟ್), ದಕ್ಷಿಣ ಅಮೆರಿಕದ ಶಿಸ್ಟೂಸರ್ಕ ಪ್ಯಾರನೆನ್ಸಿಸ್, ಉತ್ತರ ಅಮೆರಿಕದ ಮೆಲನೋಪ್ಲಸ್ ಸ್ಪ್ರೀಟಸ್ ಮತ್ತು ಮೆಲನೋಪ್ಲಸ್ ಬೈವಿಟೇಟಸ್.

ಉಲ್ಲೇಖಗಳು

ಬದಲಾಯಿಸಿ
  1. Antsey, Michael; Rogers, Stephen; Swidbert, R.O.; Burrows, Malcolm; Simpson, S.J. (30 January 2009). "Serotonin mediates behavioral gregarization underlying swarm formation in desert locusts". Science. 323 (5914): 627–630. Bibcode:2009Sci...323..627A. doi:10.1126/science.1165939. PMID 19179529. S2CID 5448884.
  2. Harmon, Katherine (30 January 2009). "When Grasshoppers Go Biblical: Serotonin Causes Locusts to Swarm". Scientific American. Retrieved 7 April 2015.


ಬಾಹ್ಯ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಿಡತೆ&oldid=1197608" ಇಂದ ಪಡೆಯಲ್ಪಟ್ಟಿದೆ