ಅಂತಾರಾಷ್ಟ್ರೀಯ ಏಕದಿನ ಪಂದ್ಯ

ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿ
ಶ್ರೇಯಾಂಕ ತಂಡ ಪಂದ್ಯಗಳು ಅಂಕಗಳು ರೇಟಿಂಗ್
1  ಇಂಗ್ಲೆಂಡ್ 38 4,820 127
2  ಭಾರತ 49 5,819 119
3  ನ್ಯೂ ಜೀಲ್ಯಾಂಡ್ 32 3,716 116
4  ದಕ್ಷಿಣ ಆಫ್ರಿಕಾ 31 3,385 108
5  ಆಸ್ಟ್ರೇಲಿಯಾ 33 3,518 107
6  ಪಾಕಿಸ್ತಾನ 32 3,254 102
7  ಬಾಂಗ್ಲಾದೇಶ 34 2,989 88
8  ಶ್ರೀಲಂಕಾ 39 3,297 85
9  ವೆಸ್ಟ್ ಇಂಡೀಸ್ 43 3,285 76
10  ಅಫ್ಘಾನಿಸ್ತಾನ 28 1,549 55
11  ಐರ್ಲೆಂಡ್‌ 21 1,039 49
12  ನೆದರ್ಲ್ಯಾಂಡ್ಸ್ 5 222 44
13  ಒಮಾನ್ 12 479 40
14  ಜಿಂಬಾಬ್ವೆ 24 935 39
15  ಸ್ಕಾಟ್ಲೆಂಡ್ 16 419 26
16  ನೇಪಾಳ 9 161 18
17  ಸಂಯುಕ್ತ ಅರಬ್ ಸಂಸ್ಥಾನ 15 259 17
18  ನಮೀಬಿಯ 9 152 17
19  ಅಮೇರಿಕ ಸಂಯುಕ್ತ ಸಂಸ್ಥಾನ 14 185 13
20  ಪಪುವಾ ನ್ಯೂಗಿನಿ 14 0 0
Reference: Cricinfo Rankings page,ICC ODI rankings 1 May 2020
ಪಂದ್ಯಗಳುಕೊನೆಯ ಮೇ ಮೊದಲು 12-24 ತಿಂಗಳುಗಳಲ್ಲಿ ಆಡಿದ ಪಂದ್ಯಗಳ ಸಂಖ್ಯೆ, ಅದಕ್ಕೂ ಮೊದಲು 24 ತಿಂಗಳಲ್ಲಿ ಅರ್ಧದಷ್ಟು ಸಂಖ್ಯೆ. See points calculations for more details.

ಅಂತಾರಾಷ್ಟ್ರೀಯ ಏಕದಿನ ಪಂದ್ಯ(ಒಡಿಐ) ಕ್ರಿಕೆಟ್‌ನ ಒಂದು ಮಾದರಿಯಾಗಿದ್ದು, ಇದರಲ್ಲಿ ಎರಡು ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡಗಳ ಮಧ್ಯೆ 50 ಓವರ್‌ಗಳನ್ನು ಪ್ರತಿ ತಂಡ ಆಡುತ್ತದೆ. ವಿಶ್ವಕಪ್ ಕ್ರಿಕೆಟ್‌ಅನ್ನು ಇದೇ ಮಾದರಿಯಲ್ಲಿ ಆಡಲಾಗುತ್ತದೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು "ಸೀಮಿತ ಅವಧಿಯ ಅಂತಾರಾಷ್ಟ್ರೀಯ ಪಂದ್ಯಗಳು(ಎಲ್‌ಒಐ)" ಎಂದೂ ಕರೆಯಲಾಗುತ್ತದೆ, ಏಕೆಂದರೆ ಅವು ಎರಡು ದೇಶಗಳ ತಂಡಗಳ ಮಧ್ಯೆ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯವಾಗಿರುತ್ತದೆ. ಹವಾಮಾನ ಅನನಕೂಲವಾಗಿದ್ದರೆ ಇವುಗಳನ್ನು ಒಂದು ದಿನದಲ್ಲಿ ಪೂರ್ಣಗೊಳಿಸುವುದಿಲ್ಲ. ಪ್ರಮುಖ ಏಕ-ದಿನ ಪಂದ್ಯಗಳು, ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳಿಗೆ ಹೆಚ್ಚಾಗಿ ಎರಡು ದಿನಗಳನ್ನು ಇಡಲಾಗಿರುತ್ತದೆ. ಎರಡನೇ ದಿನ "ಮೀಸಲು" ದಿನವಾಗಿದ್ದು, ಮೊದಲನೇ ದಿನ ಆಟ ಪೂರ್ಣಗೊಳ್ಳದಿದ್ದರೆ (ಉದಾಹರಣೆಗೆ ಮಳೆಯಿಂದಾಗಿ ಆಟವನ್ನು ನಿಲ್ಲಿಸಿದ್ದರೆ ಅಥವಾ ತೊಂದರೆಯಾಗಿದ್ದರೆ)ಆಟವನ್ನು ಪೂರ್ಣಗೊಳಿಸಲು ಹೆಚ್ಚು ಅವಕಾಶ ಕಲ್ಪಿಸಲಾಗುತ್ತದೆ. ಅಂತಾರಾಷ್ಟ್ರೀಯ ಏಕದಿನದ ಆಟಗಳು 20ನೇ ಶತಮಾನದ ಕೊನೆಯಲ್ಲಿ ಆದ ಬೆಳವಣಿಗೆ. ಮೊದಲ ಒಡಿಐಯನ್ನು 1971ರಲ್ಲಿ 1971 ಜನವರಿ 5ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವೆ ಮೆಲ್ಬೋರ್ನ್‌ ಕ್ರಿಕೆಟ್ ಮೈದಾನದಲ್ಲಿ ಆಡಲಾಯಿತು. ಮೂರನೇ ಟೆಸ್ಟ್‌ನ ಮೊದಲ ಮೂರು ದಿನಗಳ ಆಟ ಮಳೆಯಲ್ಲಿ ರದ್ದಾದ ನಂತರ, ಅಧಿಕಾರಿಗಳು ಪಂದ್ಯವನ್ನು ಕೈಬಿಡಲು ನಿರ್ಧರಿಸಿದರು. ಅದರ ಬದಲಿಗೆ ಎರಡೂ ತಂಡಕ್ಕೆ ಆರು-ಬಾಲ್‌ಗಳ 40 ಓವರ್‌ಗಳನ್ನು ಒಳಗೊಂಡ ಒನ್‌-ಆಫ್‌ ಒಂದು ದಿನದ ಆಟವನ್ನು ಆಡಿಸಲು ನಿರ್ಧರಿಸಿದರು. ಆಸ್ಟ್ರೇಲಿಯಾ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತು. 1970ರ ಕೊನೆಯ ಭಾಗದಲ್ಲಿ, ಕೆರ್ರಿ ಪ್ಯಾಕರ್‌ ಪ್ರತಿಸ್ಪರ್ಧಿಯಾಗಿ ವಿಶ್ವ ಸರಣಿ ಕ್ರಿಕೆಟ್‌ (ಡಬ್ಲ್ಯುಎಸ್‌ಸಿ) ಸ್ಪರ್ಧೆಯನ್ನು ಆರಂಭಿಸಿದರು. ನಂತರ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಅನೇಕ ಗುಣಲಕ್ಷಣಗಳನ್ನು ಪರಿಚಯಿಸಿದರು. ಅವು ಇನ್ನೂ ಸಾಮಾನ್ಯ ಬಳಕೆಯಲ್ಲಿವೆ, ಬಣ್ಣದ ಸಮವಸ್ತ್ರ, ಬಿಳಿಯ ಚೆಂಡು ಮತ್ತು ಗಾಢವರ್ಣದ ಸೈಟ್‌ ಸ್ಕ್ರೀನ್‌ಗಳೊಂದಿಗೆ ಹೊನಲುಬೆಳಕಿನಲ್ಲಿ ರಾತ್ರಿ ಪಂದ್ಯಗಳನ್ನು ಆಡುವುದು ಮತ್ತು ದೂರದರ್ಶನ ಪ್ರಸಾರಗಳಿಗೆ ಬಹುಮುಖಿ ಕೆಮರಾ ಕೋನಗಳು, ಪಿಚ್‌ನಲ್ಲಿ ಆಟಗಾರರಿಂದ ಶಬ್ದಗ್ರಹಣ ಮಾಡುವ ಮೈಕ್ರೋಫೋನ್‌ಗಳು ಮತ್ತು ಆನ್‌-ಸ್ಕ್ರೀನ್‌ ಗ್ರಾಫಿಕ್‌ಗಳು ಇತ್ಯಾದಿಗಳನ್ನು ಪರಿಚಯಿಸಿದರು. ಬಣ್ಣದ ಸಮವಸ್ತ್ರದೊಂದಿಗೆ ಆಡಿದ ಮೊದಲ ಪಂದ್ಯಗಳು ಎಂದರೆ ಹೊಳೆಯುವ ಬಂಗಾರಬಣ್ಣದಲ್ಲಿದ್ದ ಡಬ್ಲ್ಯುಎಸ್‌ಸಿ ಆಸ್ಟ್ರೇಲಿಯನ್ಸ್‌ ಮತ್ತು ಗುಲಾಬಿ ಬಣ್ಣದ ಉಡುಗೆಯಲ್ಲಿದ್ದ ವೆಸ್ಟ್‌ ಇಂಡೀಸ್‌ರ ನಡುವೆ ನಡೆದ ಪಂದ್ಯಗಳು. ಪಂದ್ಯವು ವಿಎಫ್‌ಎಲ್‌ ಪಾರ್ಕ್‌ ಮೆಲ್ಬೋರ್ನ್‌ನಲ್ಲಿ 1979ರ ಜನವರಿ 17ರಂದು ನಡೆಯಿತು. ಕ್ರಿಕೆಟ್‌ ಅನ್ನು ಇನ್ನೂ ಹೆಚ್ಚು ವೃತ್ತಿಪರ ಕ್ರೀಡೆಯಾಗಿ ಮಾಡಿದ ಗೌರವ ಇದಕ್ಕೆ ಸಲ್ಲುತ್ತದೆ.

ಆಸ್ಟ್ರೇಲಿಯಾ ಮತ್ತು ಭಾರತದ ನಡುವಣ ಒಡಿಐ ಪಂದ್ಯವನ್ನು ಆಯೋಜಿಸಿದ ಮೆಲ್ಬೋರ್ನ್‌ ಕ್ರಿಕೆಟ್ ಮೈದಾನ. ಹಳದಿ ಉಡುಗೆಯಲ್ಲಿರುವ ಆಸ್ಟ್ರೇಲಿಯಾ ತಂಡದವರು ಬ್ಯಾಟ್ಸ್‌ಮನ್‌ರು ಮತ್ತು ನೀಲಿ ಉಡುಗೆಯಲ್ಲಿರುವ ಭಾರತ ಫೀಲ್ಡಿಂಗ್ ತಂಡ.
ಹೊನಲು ಬೆಳಕಿನಲ್ಲಿ ಎಂಸಿಜಿಯಲ್ಲಿ ನಡೆದ ಒಂದು ಒಡಿಐ ಪಂದ್ಯ.

ನಿಬಂಧನೆಗಳು

ಬದಲಾಯಿಸಿ

ಮುಖ್ಯವಾಗಿ ಕ್ರಿಕೆಟ್‌‌‌‌ನ ನಿಬಂಧನೆಗಳು ಅನ್ವಯವಾಗುತ್ತವೆ. ಆದರೆ, ಒಡಿಐಗಳಲ್ಲಿ, ಪ್ರತಿ ತಂಡವೂ ನಿಗದಿತ ಸಂಖ್ಯೆಯ ಓವರ್‌ಗಳನ್ನು ಮಾತ್ರ ಬ್ಯಾಟ್ ಮಾಡಬಹುದು. ಒಡಿಐ ಕ್ರಿಕೆಟ್‌‌‌‌ನ ಆರಂಭಿಕ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿ ತಂಡಕ್ಕೆ 60 ಓವರ್‌ಗಳಿರುತ್ತಿದ್ದವು, ಆದರೆ ಈಗ ಏಕರೂಪವಾಗಿ 50 ಓವರ್‌ಗಳನ್ನು ನಿಗದಿಮಾಡಲಾಗಿದೆ. ಸರಳವಾಗಿ ಹೇಳಬೇಕೆಂದರೆ ಆಟವು ಈ ಕೆಳಗಿನಂತೆ ನಡೆಯುತ್ತದೆ:

  • ಒಂದು ಒಡಿಐನಲ್ಲಿ 11 ಆಟಗಾರರಿರುವ ಎರಡು ತಂಡಗಳು ಸ್ಪರ್ಧಿಸುತ್ತವೆ.
  • ಟಾಸ್‌ ಗೆದ್ದ ತಂಡದ ನಾಯಕ ಮೊದಲು ಬ್ಯಾಟ್ ಮಾಡಲು ಅಥವಾ ಬೌಲ್‌(ಫೀಲ್ಡ್‌) ಮಾಡಲು ಆಯ್ಕೆ ಮಾಡಿಕೊಳ್ಳಬಹುದು.
  • ಮೊದಲು ಬ್ಯಾಟ್ ಮಾಡುವ ತಂಡವು ಒಂದೇ ಇನ್ನಿಂಗ್ಸ್‌ನಲ್ಲಿ ಗುರಿಯ ಸ್ಕೋರ್‌ ಅನ್ನು ಮೊದಲು ನೀಡುತ್ತದೆ. ಬ್ಯಾಟಿಂಗ್‌ ಮಾಡುವವರು "ಆಲ್‌ ಔಟ್‌(ಎಲ್ಲರೂ ಔಟ್‌)" ಆದರೆ (ಅಂದರೆ 11 ಜನ ಬ್ಯಾಟಿಂಗ್ ಆಟಗಾರರಲ್ಲಿ 10 ಜನ "ಔಟ್" ಆದರೆ) ಅಥವಾ ಮೊದಲ ಕಡೆಯವರಿಗೆ ನೀಡಲಾದ ಎಲ್ಲ ಓವರ್‌ಗಳು ಮುಗಿದರೆ ಇನ್ನಿಂಗ್ಸ್‌ ಮುಕ್ತಾಯವಾಗುತ್ತದೆ.
  • ಪ್ರತಿ ಬೌಲರ್‌ ಗರಿಷ್ಠ 10 ಓವರ್‌ಗಳನ್ನು ಮಾತ್ರ ಬೌಲ್‌ ಮಾಡಬಹುದು (ಮಳೆಯಿಂದಾಗಿ ಪಂದ್ಯದ ಅವಧಿ ಕಡಿಮೆಯಾದರೆ ಇದನ್ನು ಕಡಿತ ಮಾಡುತ್ತಾರೆ ಮತ್ತು ಯಾವುದೇ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿ ಇನ್ನಿಂಗ್ಸ್‌ನ ಐದನೇ ಒಂದು ಭಾಗ ಅಥವಾ ಶೇ. 20ಕ್ಕಿಂತ ಅಧಿಕ ಬೌಲ್‌ ಮಾಡುವಂತಿಲ್ಲ).
  • ಎರಡನೆಯವರಾಗಿ ಬ್ಯಾಟ್ ಮಾಡುವ ತಂಡವು ಪಂದ್ಯವನ್ನು ಗೆಲ್ಲಲು ಗುರಿಯ ಸ್ಕೋರ್‌‌ಗಿಂತ ಅಧಿಕ ಸ್ಕೋರ್‌ ಮಾಡಲು ಪ್ರಯತ್ನಿಸುತ್ತದೆ. ಹಾಗೆಯೇ ಎಡನೆಯವರಾಗಿ ಬೌಲ್‌ ಮಾಡುವ ತಂಡವು ಎರಡನೇ ತಂಡವನ್ನು ಟಾರ್ಗೆಟ್‌ ಸ್ಕೋರ್‌ಗಿಂತ ಕಡಿಮೆ ರನ್‌ಗಳಿಗೆ ಔಟ್‌ ಮಾಡಲು ಪ್ರಯತ್ನಿಸುತ್ತದೆ.
  • ಎರಡನೇ ತಂಡ ತನ್ನೆಲ್ಲ ವಿಕೆಟ್‌‌ಗಳನ್ನು ಕಳೆದುಕೊಂಡರೆ ಅಥವಾ ತನ್ನೆಲ್ಲ ಓವರ್‌ಗಳನ್ನು ಬಳಸಿಬಿಟ್ಟಾಗ, ಎರಡೂ ತಂಡಗಳು ಗಳಿಸಿದ ರನ್‌ಗಳು ಸಮವಾಗಿದ್ದರೆ, ಆಗ ಆಟವನ್ನು 'ಟೈ' ಎಂದು ಘೋಷಿಸಲಾಗುವುದು (ಎರಡೂ ಟೀಮ್‌ಗಳು ಎಷ್ಟು ವಿಕೆಟ್‌ಗಳನ್ನು ಕಳೆದುಕೊಂಡಿವೆ ಎಂಬುದನ್ನು ಪರಿಗಣಿಸುವುದಿಲ್ಲ).

ಬಿರುಮಳೆ ಇನ್ನಿತರ ಹವಾಮಾನದ ಕಾರಣದಿಂದಾಗಿ ಕೆಲವು ಓವರ್‌ಗಳು ನಷ್ಟವಾದರೆ, ಆಗ ಒಟ್ಟು ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು. ಎರಡನೆಯವರಾಗಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಭ್ಯವಿರುವ ಓವರ್‌ಗಳ ಸಂಖ್ಯೆಯು ವಿಧಿಯಿಲ್ಲದೇ ಮೊದಲನೆಯವರಾಗಿ ಬ್ಯಾಟಿಂಗ್ ಮಾಡಿದ ತಂಡವು ಎದುರಿಸಿದ ಓವರ್‌ಗಳ ಸಂಖ್ಯೆಗಿಂತ ಭಿನ್ನವಾಗಿರುತ್ತದೆ. ಇದರ ಫಲಿತಾಂಶವನ್ನು ಡಕ್‌ವರ್ತ್‌-ಲೀವಿಸ್‌ ವಿಧಾನದಿಂದ ಕಂಡುಕೊಳ್ಳಬಹುದು. ರಾತ್ರಿ ಹೊನಲುಬೆಳಕನ್ನು (ಫ್ಲಡ್‌ಲೈಟ್‌ಗಳು) ಫೀಲ್ಡಿಂಗ್ ಮಾಡುವ ತಂಡಗಳಿಗೆ ಅನನುಕೂಲವಾಗದ ರೀತಿಯಲ್ಲಿ ಇಟ್ಟಿರುತ್ತಾರೆ ಮತ್ತು ಬಾಲ್‌ ಅನ್ನು ತೇವಗೊಳಿಸಲು ನಾಯಕರಿಗೆ ಫೀಲ್ಡ್‌ನಲ್ಲಿ ಒಂದು ಬಟ್ಟೆ ಇಟ್ಟುಕೊಳ್ಳಲು ಆಸ್ಪದ ನೀಡಲಾಗುವುದು.

ಪವರ್‌ಪ್ಲೇ

ಬದಲಾಯಿಸಿ
 
ಪವರ್‌ಪ್ಲೇಗಳಲ್ಲಿ ಸೀಮಿತ ಸಂಖ್ಯೆಯ ಫೀಲ್ಡರ್‌ಗಳು ಔಟ್‌ಫೀಲ್ಡ್‌ನಲ್ಲಿರುತ್ತಾರೆ.

ಬೌಲಿಂಗ್‌ ತಂಡಕ್ಕೆ ಫೀಲ್ಡಿಂಗ್‌ ನಿರ್ಬಂಧಗಳನ್ನು ಹೇರಲಾಗುವುದು. ಕೆಲವು ಓವರ್‌ಗಳವರೆಗೆ ಕ್ಯಾಚಿಂಗ್ ಸ್ಥಾನಗಳಲ್ಲಿರುವ ಇಬ್ಬರು ಫೀಲ್ಡರ್‌ಗಳೂ ಸೇರಿದಂತೆ ಒಂಬತ್ತು ಫೀಲ್ಡರ್‌ಗಳು ಫೀಲ್ಡಿಂಗ್ ವೃತ್ತದ ಒಳಗೇ ಇರಬೇಕು ಎಂಬುದು ಆ ನಿರ್ಬಂಧ. ಸಾಂಪ್ರದಾಯಿಕವಾಗಿ, ಫೀಲ್ಡಿಂಗ್ ನಿರ್ಬಂಧಗಳು ಪ್ರತಿ ಇನ್ನಿಂಗ್ಸ್‌‌‌ನ ಮೊದಲ 15 ಓವರ್‌ಗಳಿಗೆ ಅನ್ವಯವಾಗುತ್ತವೆ. 2005ರ ಜುಲೈ 30ರಿಂದ ಆರಂಭವಾಗಿ 10 ತಿಂಗಳ ಟ್ರಯಲ್ ಅವಧಿಯಲ್ಲಿ, ಐಸಿಸಿಯು ಹೊಸ ಒಡಿಐ ನಿಯಮಾವಳಿಗಳ ಒಂದು ಸರಣಿಯ ಭಾಗವಾಗಿ ಪವರ್‌ಪ್ಲೇಗಳನ್ನು ಪರಿಚಯಿಸಿದೆ. ಪವರ್‌ಪ್ಲೇಗಳ ನಿಯಮದಡಿಯಲ್ಲಿ, ಫೀಲ್ಡಿಂಗ್ ನಿರ್ಬಂಧಗಳು ಮೊದಲ 10 ಓವರ್‌ಗಳಿಗೆ ಅನ್ವಯವಾಗುತ್ತವೆ, ಜೊತೆಗೆ ಎರಡು ಬ್ಲಾಕ್‌ನ ಐದು ಓವರ್‌ಗಳು ಇರುತ್ತವೆ (ಅದನ್ನು ಪವರ್‌ಪ್ಲೇ ಫೈವ್ಸ್‌ ಎನ್ನಲಾಗುತ್ತದೆ). ಅಕ್ಟೋಬರ್‌ 2008ರಿಂದ ಬ್ಯಾಟಿಂಗ್ ಕಡೆಯವರು ಉಳಿದ ಎರಡು ಬ್ಲಾಕ್‌ಗಳಲ್ಲಿ ಒಂದನ್ನು ಯಾವಾಗ ನಡೆಯಬಹುದು ಎಂಬುದನ್ನು ನಿರ್ಧರಿಸುತ್ತಿದ್ದಾರೆ, ಫೀಲ್ಡಿಂಗ್ ಕಡೆಯವರು ಇನ್ನೊಂದು ಪವರ್‌ಪ್ಲೇ ಯಾವಾಗ ನಡೆಯಬಹುದು ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಮೊದಲ ಪವರ್‌ಪ್ಲೇನಲ್ಲಿ, ಇಬ್ಬರು ಫೀಲ್ಡರ್‌ ಬಿಟ್ಟು ಇನ್ನುಳಿದವರು 30 ಯಾರ್ಡ್‌ ವೃತ್ತದಿಂದ ಹೊರಗೆ ಇರುತ್ತಾರೆ (ಇದನ್ನು ಎರಡನೇ ಮತ್ತು ಮೂರನೇ ಪವರ್‌ಪ್ಲೇ ಬ್ಲಾಕ್‌ಗಳಿಗೆ ಮೂರಕ್ಕೆ ಏರಿಸಲಾಗುವುದು). ಮೊದಲ 10 ಓವರ್‌ಗಳಲ್ಲಿ, ಇಬ್ಬರು ಫೀಲ್ಡರ್‌ಗಳು ಕ್ಯಾಚಿಂಗ್ ಸ್ಥಾನಗಳ ಹತ್ತಿರವಿರುವುದು ಅಗತ್ಯವಿದೆ. ಐಸಿಸಿಯು 2007ರ ಅಕ್ಟೋಬರ್‌ 1ರಿಂದ ಪವರ್‌ಪ್ಲೇಗಳಿಗೆ ಸಂಬಂಧಿಸಿದಂತೆ, ಎರಡು 5-ಓವರ್‌ಗಳ ಪವರ್‌ಪ್ಲೇಗಳಲ್ಲಿ ಒಂದಕ್ಕೆ ಫೀಲ್ಡಿಂಗ್ ಕಡೆಯ ನಾಯಕರು 30 ಯಾರ್ಡ್‌ ವೃತ್ತದ ಹೊರಗೆ ಇರಿಸುವ 3 ಜನ ಫೀಲ್ಡರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಪ್ರಕಟಿಸಿದೆ. ಈ ನಿಯಮವನ್ನು ಮೊದಲು ಶ್ರೀಲಂಕಾ ಮತ್ತು ಇಂಗ್ಲೆಂಡ್‌ ನಡುವೆ ಡಂಬುಲ್ಲ ಕ್ರೀಡಾಂಗಣದಲ್ಲಿ 2007ರ ಅಕ್ಟೋಬರ್‌ 1ರಂದು ನಡೆದ ಪಂದ್ಯವೊಂದರಲ್ಲಿ ಅಳವಡಿಸಲಾಯಿತು. ಶ್ರೀಲಂಕಾ ಆ ಪಂದ್ಯವನ್ನು 119 ರನ್‌ಗಳಿಂದ ಗೆದ್ದುಕೊಂಡಿತು. ಪ್ರಸ್ತುತ 2ನೇ ಮತ್ತು 3ನೇ ಪವರ್‌ಪ್ಲೇ, ಎರಡರಲ್ಲಿಯೂ 3 ಜನ ಫೀಲ್ಡರ್‌ಗಳನ್ನು 30 ಯಾರ್ಡ್‌ ವೃತ್ತದಿಂದ ಹೊರಗೆ ಇರಿಸಲಾಗುತ್ತದೆ ಮತ್ತು ಒಂದು ಪವರ್‌ಪ್ಲೇಯನ್ನು ಬ್ಯಾಟಿಂಗ್ ತಂಡವು ಆಯ್ಕೆ ಮಾಡುತ್ತದೆ.

ಟ್ರಯಲ್ ನಿಬಂಧನೆಗಳು

ಬದಲಾಯಿಸಿ

ಟ್ರಯಲ್ ನಿಬಂಧನೆಗಳು ಒಂದು ಪರ್ಯಾಯ ನಿಯಮವನ್ನೂ ಪರಿಚಯಿಸಿದೆ, ಅದೆಂದರೆ ಪಂದ್ಯದ ಯಾವುದೇ ಹಂತದಲ್ಲಿಯೂ ಒಬ್ಬ ಬದಲೀ ಆಟಗಾರರನ್ನು ತೆಗೆದುಕೊಳ್ಳಬಹುದು ಎಂದು. ತಂಡಗಳು ಸೂಪರ್‌ಸಬ್‌ ಎಂದು ಕರೆಯಲಾಗುವ ತಮ್ಮ ಬದಲೀ ಆಟಗಾರನನ್ನು ಟಾಸ್‌ ಹಾಕುವ ಮೊದಲೇ ಹೆಸರಿಸುತ್ತವೆ. ಸೂಪರ್‌ಸಬ್ ಬ್ಯಾಟ್, ಬೌಲ್ ಅಥವಾ ಫೀಲ್ಡಿಂಗ್ ಮಾಡಬಹುದು ಅಥವಾ ವಿಕೆಟ್‌ ಕೀಪರ್ ಆಗಬಹುದು; ಬದಲಿಗೊಂಡ ಆಟಗಾರ ಮತ್ತೆ ಆಟದ ಯಾವುದೇ ಹಂತದಲ್ಲಿಯೂ ಭಾಗವಹಿಸುವಂತಿಲ್ಲ. ಇದು ಕಾರ್ಯಗತಗೊಂಡ ಆರು ತಿಂಗಳಿನಿಂದ, ಟಾಸ್‌ ಗೆದ್ದುಕೊಂಡ ತಂಡಕ್ಕೆ ಸೂಪರ್‌ಸಬ್‌ ತುಂಬಾ ಲಾಭಕರವಾಗಿದ್ದು, ಆಟವನ್ನು ಅಸಮತೋಲನಗೊಳಿಸುತ್ತದೆ ಎಂಬುದು ಸುಸ್ಪಷ್ಟವಾಗಿದೆ. ಹಲವಾರು ಅಂತಾರಾಷ್ಟ್ರೀಯ ನಾಯಕರು 2005ರ ಕೊನೆಯಲ್ಲಿ ಈ ನಿಯಮವನ್ನು ಮುಂದುವರೆಸದೇ ಇರಲು 'ಸಭ್ಯರ ಒಪ್ಪಂದ'ಗಳಿಗೆ (ಜಂಟಲ್‌ಮನ್ಸ್‌ ಅಗ್ರಿಮೆಂಟ್ಸ್‌) ತಲುಪಿದ್ದಾರೆ. ಅವರು ಸೂಪರ್‌ಸಬ್‌ಗಳನ್ನು ಹೆಸರಿಸುವುದನ್ನು ಮುಂದುವರೆಸಿದ್ದಾರೆ, ಆದರೆ ಅವರನ್ನು ಮೈದಾನಕ್ಕೆ ಇಳಿಸುವುದೇ ಇಲ್ಲ. 2006ರ ಫೆಬ್ರವರಿ 15ರಂದು, ಐಸಿಸಿಯು ಸೂಪರ್‌ಸಬ್‌ ನಿಯಮವನ್ನು 2006ರ ಮಾರ್ಚ್‌ 21ರಿಂದ ಮುಂದುವರೆಸುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಪ್ರಕಟಿಸಿದೆ.

ಒಡಿಐ ಸ್ಥಾನಮಾದ ತಂಡಗಳು

ಬದಲಾಯಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್‌‌‌‌ ಸಮಿತಿ(ಐಸಿಸಿ)ಯು ಯಾವ ತಂಡಗಳು ಒಡಿಐ ಸ್ಥಾನಮಾನ ಹೊಂದಿವೆ ಎಂಬುದನ್ನು ನಿರ್ಧರಿಸುತ್ತದೆ (ಅಂದರೆ ಅಂತಹ ತಂಡಗಳ ನಡುವೆ ಆಡುವ ಯಾವುದೇ ಪಂದ್ಯಗಳು ಏಕ ದಿನ ಮಾನದಂಡದ ನಿಯಮಗಳ (ಸ್ಟಾಂಡರ್ಡ್‌ ಒನ್ ಡೇ ರೂಲ್ಸ್‌) ಅಡಿಯಲ್ಲಿರುತ್ತವೆ, ಅವನ್ನು ಒಡಿಐ ಎಂದು ವರ್ಗೀಕರಿಸಲಾಗುತ್ತದೆ). ಟೆಸ್ಟ್‌‌-ಆಡುವ ಹತ್ತು ದೇಶಗಳು (ಐಸಿಸಿಯ ಪೂರ್ಣ ಸದಸ್ಯರು ಕೂಡ) ಶಾಶ್ವತ ಒಡಿಐ ಸ್ಥಾನಮಾನವನ್ನು ಹೊಂದಿವೆ. ಕೆಳಗೆ ದಿನಾಂಕದೊಂದಿಗೆ ಒಡಿಐ ದೇಶಗಳ ಪಟ್ಟಿ ಮಾಡಲಾಗಿದೆ, ದೇಶಗಳು ಪ್ರತಿ ದೇಶಗಳ ಒಡಿಐ ದಿನಾಂಕವೂ ಕಂಸದಲ್ಲಿ ಇದೆ:

  1.   ಆಸ್ಟ್ರೇಲಿಯಾ (5 ಜನವರಿ 1971)
  2.   ಇಂಗ್ಲೆಂಡ್ (5 ಜನವರಿ 1971)
  3.   ನ್ಯೂ ಜೀಲ್ಯಾಂಡ್ (11 ಫೆಬ್ರವರಿ 1973)
  4.   ಪಾಕಿಸ್ತಾನ (11 ಫೆಬ್ರವರಿ 1973)
  5.   ವೆಸ್ಟ್ ಇಂಡೀಸ್ (5 ಸೆಪ್ಟೆಂಬರ್‌ 1973)
  6.   India (13 ಜುಲೈ 1974)
  7.   ಶ್ರೀಲಂಕಾ (7 ಜೂನ್‌ 1975)
  8.   ಜಿಂಬಾಬ್ವೆ (9 ಜೂನ್‌ 1983)
  9.   ಬಾಂಗ್ಲಾದೇಶ (31 ಮಾರ್ಚ್‌ 1986)
  10.   ದಕ್ಷಿಣ ಆಫ್ರಿಕಾ (10 ನವೆಂಬರ್‌‌ 1991)

ಐಸಿಸಿ ತಾತ್ಕಾಲಿಕವಾಗಿ ಬೇರೆ ತಂಡಗಳಿಗೆ ಒಡಿಐ ಸ್ಥಾನಮಾನವನ್ನು ನೀಡುತ್ತದೆ: ಸದ್ಯ ತಾತ್ಕಾಲಿಕ ಸ್ಥಾನಮಾನ ಹೊಂದಿರುವ ತಂಡಗಳು ಹೀಗಿವೆ:

  •   ಕೀನ್ಯಾ (1996ರ ಫೆಬ್ರವರಿ18ರಿಂದ 2013ರವರೆಗೆ ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ)
  •   ಕೆನಡಾ (2006ರ ಜನವರಿ 1ರಿಂದ 2013ರವರೆಗೆ ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ)
  •   ಐರ್ಲೆಂಡ್‌ (2006ರ ಜನವರಿ 1ರಿಂದ 2013ರವರೆಗೆ ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ)
  •   ನೆದರ್ಲ್ಯಾಂಡ್ಸ್ (2006ರ ಜನವರಿ 1ರಿಂದ 2013ರವರೆಗೆ ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ)
  •   ಸ್ಕಾಟ್ಲೆಂಡ್ (2006ರ ಜನವರಿ 1ರಿಂದ 2013ರವರೆಗೆ ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ)
  •   ಅಫ್ಘಾನಿಸ್ತಾನ (2009ರಿಂದ 19 ಏಪ್ರಿಲ್‌ 2013ರವರೆಗೆ ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ)

ಕೆನಡಾ, ಐರ್ಲೆಂಡ್‌, ನೆದರ್‌ಲ್ಯಾಂಡ್‌ ಮತ್ತು ಸ್ಕಾಟ್‌ಲ್ಯಾಂಡ್‌‌ಗಳು 2005 ಐಸಿಸಿ ಟ್ರೋಫಿಯಲ್ಲಿ ತಮ್ಮ ಪ್ರದರ್ಶನದ ಫಲಿತಾಂಶವಾಗಿ ಈ ಸ್ಥಾನಮಾನವನ್ನು ಗಳಿಸಿವೆ. ಐಸಿಸಿಯು ಈ ಪೂರ್ವನಿದರ್ಶನವನ್ನು 2009ರಲ್ಲಿಯೂ ಅನುಸರಿಸಿದೆ ಮತ್ತು 2009 ಐಸಿಸಿ ವಿಶ್ವ ಕಪ್‌ ಅರ್ಹತೆಗಳಿಸುವ ತಂಡ (ಐಸಿಸಿ ಟ್ರೋಫಿಗೆ ಹೊಸ ಹೆಸರು)ಕ್ಕೆ ಕಳೆದ ನಾಲ್ಕು ವರ್ಷಗಳಿಂದ ಒಡಿಐ ಸ್ಥಾನಮಾನವನ್ನು ನೀಡಿದೆ. ಪಂದ್ಯಾವಳಿಯ ಅವಧಿಯಲ್ಲಿ ಆಫ್ಘಾನಿಸ್ತಾನವು 5ನೇ ಸ್ಥಾನ ಗಳಿಸಿ, ಒಡಿಐ ಸ್ಥಾನಮಾನ ಗಳಿಸಿದ್ದು, ಆ ತಂಡಕ್ಕೆ ಗಮನಾರ್ಹ ವರ್ಷವಾಗಿದೆ. ಒಂದು ಹಂತದಲ್ಲಿ, ಸಾಂದರ್ಭಿಕವಾಗಿ ಐಸಿಸಿಯು ಸಹಸಂಬಂಧಿ(ಅಸೋಶಿಯೇಟ್‌) ಸದಸ್ಯರಿಗೆ ಶಾಶ್ವತ ಒಡಿಐ ಸ್ಥಾನಮಾನ ಕೊಟ್ಟಿದ್ದರೂ, ಅವರಿಗೆ ಪೂರ್ಣ ಸದಸ್ಯತ್ವ ಮತ್ತು ಟೆಸ್ಟ್‌ ಸ್ಥಾನಮಾನ ನೀಡಿಲ್ಲ. ಅಸೋಶಿಯೇಟ್ ಸದಸ್ಯರು ಪೂರ್ಣ ಸದಸ್ಯತ್ವಕ್ಕೆ ಹೆಜ್ಜೆಯಿಡುವ ಮೊದಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಿಯಮಿತ ಅನುಭವ ಪಡೆಯಲು ಆಸ್ಪದ ಕಲ್ಪಿಸಲು ಇದನ್ನು ಪರಿಚಯಿಸಲಾಗಿದೆ. ಮೊದಲು ಬಾಂಗ್ಲಾದೇಶ ಮತ್ತು ನಂತರ ಕೀನ್ಯಾ ಈ ಸ್ಥಾನಮಾನ ಗಳಿಸಿವೆ. ಬಾಂಗ್ಲಾದೇಶವು ನಂತರ ಟೆಸ್ಟ್‌ ಸ್ಥಾನಮಾನ ಮತ್ತು ಸದಸ್ಯತ್ವವನ್ನು ಪಡೆದುಕೊಂಡಿದೆ; ಆದರೆ ಕೀನ್ಯಾದ ಕಳಪೆ ಪ್ರದರ್ಶನದಿಂದಾಗಿ ಐಸಿಸಿಯು ಅದರ ಶಾಶ್ವತ ಒಡಿಐ ಸ್ಥಾನಮಾನ ರದ್ದುಪಡಿಸಲು ನಿರ್ಧರಿಸಿದೆ. ಇದರೊಂದಿಗೆ, ಐಸಿಸಿಯು ಕೆಲವು ಉನ್ನತಶ್ರೇಣಿಯ ಪಂದ್ಯಾವಳಿಗಳಿಗೆ ವಿಶೇಷ ಒಡಿಐ ಸ್ಥಾನಮಾನವನ್ನು ನೀಡುವ ಹಕ್ಕನ್ನು ಉಳಿಸಿಕೊಂಡಿದೆ, ಇದರ ಪರಿಣಾಮವಾಗಿ ಕೆಳಗಿನ ದೇಶಗಳೂ ಕೂಡ ಪೂರ್ಣ ಒಡಿಐನಲ್ಲಿ ಭಾಗವಹಿಸಿವೆ:

  •  East Africa ( 7 ಜೂನ್‌ 1975ರಿಂದ 14 ಜೂನ್‌ 1975ರವರೆಗೆ)
  •   ಸಂಯುಕ್ತ ಅರಬ್ ಸಂಸ್ಥಾನ (13 ಏಪ್ರಿಲ್‌‌ 1994ರಿಂದ 17 ಏಪ್ರಿಲ್‌‌ 1994ರವರೆಗೆ; 16 ಫೆಬ್ರವರಿ 1996ರಿಂದ 1 ಮಾರ್ಚ್‌ 1996ರವರೆಗೆ; 16 ಜುಲೈ 2004ರಿಂದ 17 ಜುಲೈ 2004ರವರೆಗೆ ಮತ್ತು 24 ಜೂನ್‌ 2008ರಿಂದ 26 ಜೂನ್‌ 2008ರವರೆಗೆ)
  •   ನಮೀಬಿಯ (10 ಫೆಬ್ರವರಿ 2003ರಿಂದ 3 ಮಾರ್ಚ್‌ 2003ರವರೆಗೆ)
  •   ಹಾಂಗ್ ಕಾಂಗ್ (16 ಜುಲೈ 2004ರಿಂದ 18 ಜುಲೈ 2004ರವರೆಗೆ ಮತ್ತು 24 ಜೂನ್‌ 2008ರಿಂದ 25 ಜೂನ್‌ 2008ರವರೆಗೆ )
  •   ಅಮೇರಿಕ ಸಂಯುಕ್ತ ಸಂಸ್ಥಾನ (10 ಸೆಪ್ಟೆಂಬರ್‌ 2004ರಿಂದ 13 ಸೆಪ್ಟೆಂಬರ್‌ 2004ರವರೆಗೆ)
  •   ಬರ್ಮುಡಾ (1 ಜನವರಿ 2006ರಿಂದ 8 ಏಪ್ರಿಲ್‌‌ 2009ರವರೆಗೆ)

2005ದಲ್ಲಿ ಐಸಿಸಿಯು ಒಂದು ದೇಶಕ್ಕಿಂತ ಹೆಚ್ಚು ದೇಶಗಳ ಆಟಗಾರರನ್ನು ಹೊಂದಿದ ತಂಡಗಳ ಹಲವಾರು ಪಂದ್ಯಗಳಿಗೆ ಮೊಟ್ಟಮೊದಲ ಬಾರಿಗೆ ವಿವಾದಾತ್ಮಕವಾಗಿ ಒಡಿಐ ಸ್ಥಾನಮಾನವನ್ನು ನೀಡಿತು. ಇವೆಂದರೆ 2005ರ ಜನವರಿಯಲ್ಲಿ 2004ರ ಹಿಂದೂ ಮಹಾಸಾಗರ ಸುನಾಮಿಯ ಪರಿಹಾರ ಪ್ರಯತ್ನದ ಸಹಾಯಾರ್ಥವಾಗಿ ವಿಶ್ವ ಕ್ರಿಕೆಟ್‌‌‌‌ ಸುನಾಮಿ ಕೋರಿಕೆಯ ಭಾಗವಾಗಿ ಆಡಿದ ಏಷ್ಯಾ ವರ್ಲ್ಡ್ XI ವಿರುದ್ಧ ಐಸಿಸಿ ವರ್ಲ್ಡ್ XI ಪಂದ್ಯ ಮತ್ತು ಮತ್ತು ವಾಣಿಜ್ಯಕ ಪ್ರಾಯೋಜನೆಯ ಮೂರು ಪಂದ್ಯಗಳು; ಅಕ್ಟೋಬರ್‌ 2005ರಲ್ಲಿ ಮೆಲ್ಬೋರ್ನ್‌ನಲ್ಲಿ ಆಡಲಾದ "ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವರ್ಲ್ಡ್ XI"ಐಸಿಸಿ ಸೂಪರ್‌ ಸರಣಿಗಳು ಆಟಗಳು. ಕೊನೆಯ ಪಂದ್ಯಗಳಿಗೆ ವೀಕ್ಷಕರ ಕೊರತೆ ಇತ್ತು, ಒಂದೇ ತಂಡ ಶಕ್ತಿಶಾಲಿಯಾಗಿದ್ದು, ಕ್ರಿಕೆಟ್‌‌‌‌ ಜಗತ್ತಿನಲ್ಲಿ ತೀರಾ ಕಡಿಮೆ ಆಸಕ್ತಿಯನ್ನು ಹುಟ್ಟಿಸಿತು. ಇದೊಂದು ಪ್ರಯೋಗವಾಗಿದ್ದು, ಪುನಾರಾವರ್ತನೆ ಮಾಡದಿರಲು ಯೋಚಿಸಲಾಯಿತು ಮತ್ತು ಅನೇಕ ಕ್ರಿಕೆಟ್‌‌‌‌ ಅಂಕಿಸಂಖ್ಯೆ ತಜ್ಞರು (ಉದಾ: ಬಿಲ್ ಫ್ರಿಂಡಲ್‌) ಈ ಪಂದ್ಯಗಳನ್ನು ಅಧಿಕೃತ ಒಡಿಐ ದಾಖಲೆಗಳಲ್ಲಿ ಸೇರಿಸಬಾರದು ಎಂದು ಸಹಮತ ವ್ಯಕ್ತಪಡಿಸಿದ್ದಾರೆ.[][]

ಪಂದ್ಯಾವಳಿಗಳು

ಬದಲಾಯಿಸಿ

ಸಾಮಾನ್ಯವಾಗಿ ಒಡಿಐ ಸರಣಿಗಳನ್ನು 2 ತಂಡಗಳ ನಡುವೆ ಅಥವಾ ತ್ರಿಕೋನ-ಸರಣಿಗಳಾಗಿ ಆಡಲಾಗುತ್ತದೆ. ತುಂಬ ಜನಪ್ರಿಯವಾದ ಒಡಿಐ ಪಂದ್ಯಾವಳಿಗಳು ಹೀಗಿವೆ:

ಅಂತಾರಾಷ್ಟ್ರೀಯ ಏಕದಿನ ಪಂದ್ಯದ ದಾಖಲೆಗಳು

ಬದಲಾಯಿಸಿ

ಭಾರತದ ಸಚಿನ್ ತೆಂಡೂಲ್ಕರ್‌‌ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿಹೆಚ್ಚು ಶತಕ ಮತ್ತು ಅರ್ಧಶತಕಗಳ ದಾಖಲೆ ಹೊಂದಿದ್ದಾರೆ. ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್‌ಗಳನ್ನು ಹೊಂದಿದ್ದಾರೆ ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಏಕೈಕ ಆಟಗಾರನಾಗಿದ್ದಾರೆ. 2010ರ ಫೆಬ್ರವರಿ 24ರಂದು ಅವರು ಈ ಸಾಧನೆ ಮಾಡಿದ್ದಾರೆ. ಪಟ್ಟಿ ಎಯಲ್ಲಿ ಸೀಮಿತ ಓವರ್‌ಗಳ ಯಾವುದೇ ಪಂದ್ಯದಲ್ಲಿ ಒಟ್ಟು ಅತ್ಯಧಿಕ ಇನ್ನಿಂಗ್ಸ್ ದಾಖಲೆಯು 9 ವಿಕೆಟ್‌ಗಳಿಗೆ 443 ಆಗಿದ್ದು, ಶ್ರೀಲಂಕಾ ತಂಡವು ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಇಷ್ಟು ರನ್ ಗಳಿಸಿತು. 2006ರ ಜುಲೈ 4ರಂದು ಈ ಎರಡು ತಂಡಗಳ ಮಧ್ಯೆ ಆಮ್ಸ್‌ಟೆಲ್ವೀನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ 50-ಓವರ್‌ಗಳ ಪಂದ್ಯದಲ್ಲಿ ಶ್ರೀಲಂಕಾ ಈ ಸಾಧನೆ ಮಾಡಿದೆ. ತಂಡದ ಅತ್ಯಂತ ಕಡಿಮೆ ಮೊತ್ತ ಎಂದರೆ 2004ರಲ್ಲಿ ಹರಾರೆಯಲ್ಲಿ ಶ್ರೀಲಂಕಾದ ವಿರುದ್ಧ ಜಿಂಬಾಬ್ವೇ 35 ರನ್‌ಗಳಿಗೆ ಆಲ್‌ಔಟ್ ಆಗಿದ್ದು. ಪಟ್ಟಿ ಎಯಲ್ಲಿ ಸೀಮಿತ ಓವರ್‌ಗಳ ಯಾವುದೇ ಪಂದ್ಯದಲ್ಲಿ ಎರಡೂ ತಂಡಗಳು ಸೇರಿ ಗಳಿಸಿದ ಒಟ್ಟು ಅತ್ಯಧಿಕ ಮೊತ್ತ ಎಂದರೆ 872: 2006ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯ ದಲ್ಲಿ ಆಸ್ಟ್ರೇಲಿಯಾ, ಮೊದಲು ಬ್ಯಾಟ್ ಮಾಡಿ, 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 434 ರನ್‌ ಗಳಿಸಿತು ಮತ್ತು ದಕ್ಷಿಣ ಆಫ್ರಿಕಾವು 9 ವಿಕೆಟ್‌ ನಷ್ಟಕ್ಕೆ ಒಂದೇ ಒಂದು ಬಾಲ್‌ ಇದ್ದಾಗ 438 ರನ್ ಮಾಡಿ, ಆಸ್ಟ್ರೇಲಿಯಾವನ್ನು ಸೋಲಿಸಿತು. ಅತ್ಯುತ್ತಮ ಬೌಲಿಂಗ್ ಅಂಕಿಸಂಖ್ಯೆ ಎಂದರೆ 2001-02ರಲ್ಲಿ ಶ್ರೀಲಂಕಾ ವಿರುದ್ಧ ಜಿಂಬಾಂಬ್ವೆ ಪಂದ್ಯದಲ್ಲಿ ಶ್ರೀಲಂಕಾದ ಚಮಿಂದ ವಾಸ್‌ 19 ರನ್‌ ನೀಡಿ 8 ವಿಕೆಟ್‌ ಪಡೆದಿದ್ದು(8-19)- ಆತ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ತೆಗೆದುಕೊಂಡ ಏಕೈಕ ಆಟಗಾರ.

ಒಂದಕ್ಕಿಂತ ಹೆಚ್ಚು ತಂಡಕ್ಕೆ ಆಡಿದ ಆಟಗಾರರು

ಬದಲಾಯಿಸಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ತಂಡವನ್ನು ಪ್ರತಿನಿಧಿಸಲು ನಿವಾಸಿ ಮತ್ತು/ಅಥವಾ ರಾಷ್ಟ್ರೀಯತೆ ಅಗತ್ಯಗಳು ಇರುವುದರಿಂದ, ಸಾಮಾನ್ಯವಾಗಿ ಒಬ್ಬ ಆಟಗಾರ ತಮ್ಮ ವೃತ್ತಿಬದುಕಿನಲ್ಲಿ ಒಡಿಐಗಳಲ್ಲಿ ಒಂದೇ ಒಂದು ತಂಡವನ್ನು ಪ್ರತಿನಿಧಿಸುತ್ತಾರೆ. ಆದಾಗ್ಯೂ, ಹಲವಾರು ಆಟಗಾರರು ಒಂದಕ್ಕಿಂತ ಹೆಚ್ಚು ತಂಡಕ್ಕೆ ಆಡಿದ್ದಾರೆ. ಇವರೆಂದರೆ:[೧]

  • ಕೆಪ್ಲರ್‌ ವೆಸಲ್ಸ್ (ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ) ಟೆಸ್ಟ್‌ಗಳು ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು
  • ಕ್ಲೇಟನ್ ಲ್ಯಾಂಬರ್ಟ್‌ (ವೆಸ್ಟ್‌ ಇಂಡೀಸ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ)
  • ಡೌಗೀ ಬ್ರೌನ್ (ಇಂಗ್ಲೆಂಡ್‌ ಮತ್ತು ಸ್ಕಾಟ್‌ಲ್ಯಾಂಡ್‌)
  • ಆಂಡರ್‌ಸನ್‌ ಕ್ಯುಮಿನ್ಸ್‌ (ವೆಸ್ಟ್‌ ಇಂಡೀಸ್ ಮತ್ತು ಕೆನಡಾ)
  • ಇಯೋನ್ ಮೋರ್ಗಾನ್ (ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್‌)
  • ಡರ್ಕ್‌ ನ್ಯಾನ್ಸ್ (ನೆದರ್‌ಲ್ಯಾಂಡ್ಸ್‌ ಮತ್ತು ಆಸ್ಟ್ರೇಲಿಯಾ)

ಇದರೊಂದಿಗೆ, ಜಾನ್‌ ಟ್ರೈಕೊಸ್ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಂಬ್ವೆಗೆ ಟೆಸ್ಟ್‌ಗಳನ್ನು ಆಡಿದ್ದಾರೆ. ಆದರೆ ಒಡಿಐಗಳನ್ನು ಕೇವಲ ಜಿಂಬಾಂಬ್ವೆಗೆ ಆಡಿದ್ದಾರೆ. ಹಾಗೆಯೇ ಗೆವಿನ್ ಹ್ಯಾಮಿಲ್ಟನ್ ಸ್ಕಾಟ್‌ಲ್ಯಾಂಡ್‌ಗೆ ಮಾತ್ರ ಒಡಿಐ ಆಡಿದ್ದಾರೆ ಮತ್ತು ಒಂದು ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ಅನ್ನು ಪ್ರತಿನಿಧಿಸಿದ್ದರು. ಡರ್ಕ್‌ ನ್ಯಾನ್ಸ್‌ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯ 2009 ಐಸಿಸಿ ವಿಶ್ವ ಟ್ವೆಂಟಿ20ಯಲ್ಲಿ ನೆದರ್‌ಲ್ಯಾಂಡ್ಸ್‌ಅನ್ನು ಪ್ರತಿನಿಧಿಸಿದ್ದರು, ಆದರೆ ಸ್ಕಾಟ್‌ಲ್ಯಾಂಡ್‌ ವಿರುದ್ಧ ನಡೆದ ಒಡಿಐನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಡಿದ್ದರು. ನಂತರದಲ್ಲಿ ಆತ ಹೆಚ್ಚು ಟಿ20 ಪಂದ್ಯಗಳನ್ನು ಆಸ್ಟ್ರೇಲಿಯಕ್ಕಾಗಿ ಆಡಿದ್ದಾರೆ. ಇಮ್ರಾನ್‌ ತಾಹಿರ್‌ ಲಾಹೋರ್‌ನಿಂದ ಪಾಕಿಸ್ತಾನ ದೇಶೀಯ ತಂಡಕ್ಕೆ, ಪಾಕಿಸ್ತಾನ ಎ ತಂಡಕ್ಕೆ, ರೆಡ್ಕೋ ಪಾಕಿಸ್ತಾನ ಲಿ., ಪಾಕಿಸ್ತಾನ ಸ್ಯು ಗ್ಯಾಸ್‌ ಕಾರ್ಪೊರೇಶನ್‌ಗೆ ಆಡಿದ್ದು ಮತ್ತು ವಿಶ್ವ ಕಪ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆಡಲಿದ್ದಾರೆ.

ಇವನ್ನೂ ಗಮನಿಸಿ

ಬದಲಾಯಿಸಿ

ಟೆಂಪ್ಲೇಟು:Portal

  • ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌
  • ಸೀಮಿತ ಒವರುಗಳ ಕ್ರಿಕೆಟ್
  • ಅಂತಾರಾಷ್ಟ್ರೀಯ ಏಕದಿನ ಪಂದ್ಯ ದಾಖಲೆಗಳು
  • ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಗಳು
  • ಅಂತಾರಾಷ್ಟ್ರೀಯ ಏಕದಿನ ಪಂದ್ಯ ಹ್ಯಾಟ್ರಿಕ್‌ಗಳು
  • 10000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯ ಕ್ರಿಕೆಟ್‌‌‌‌ ರನ್‌ಗಳನ್ನು ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಉಲ್ಲೇಖಗಳು

ಬದಲಾಯಿಸಿ
  1. Martin Williamson (18 October 2005), Few outside Australia will mourn the end of this Sorry Series
  2. Bill Frindall (20 August 2008), Ask Bearders #176