ಮೀಮಾಂಸಾ - ಮೀಮಾಂಸ ದರ್ಶನ- ಕರ್ಮ ಮೀಮಾಂಸಾ- ಪೂರ್ವ ಮೀಮಾಂಸಾ- ಕರ್ಮ ಕಾಂಡ.

(ಕನ್ನಡ-ಮೀಮಾಂಸೆ-ಮೀಮಾಂಸ)

ಪೀಠಿಕೆ

ಬದಲಾಯಿಸಿ
ಸಾಂಖ್ಯ ದರ್ಶನ, ಯೋಗ ದರ್ಶನ/ರಾಜಯೋಗ/ಪತಂಜಲ ಯೋಗ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸಾ ದರ್ಶನ, ಉತ್ತರ ಮೀಮಾಂಸಾ/ವೇದಾಂತ ದರ್ಶನ , ಇವು ರೂಢಿಯಲ್ಲಿ ಬಂದ ಭಾರತೀಯ ತತ್ವ ಶಾಸ್ತ್ರದ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು); ಮೀಮಾಂಸವು ಅವುಗಳಲ್ಲಿ ಒಂದು
ದಾರ್ಶನಿಕ ಕ್ಷೇತ್ರದಲ್ಲಿ ವಿಚಿತ್ರವಾದ ದರ್ಶನ -ಮೀಮಾಂಸಾ ದರ್ಶನ . ಅತಿರೇಕದ ವೇದ ನಿಷ್ಠೆ ; ಪ್ರಖರ ವೈಚಾರಿಕತೆ ; ಮತಾಚಾರದಲ್ಲಿ ಅತಿಶ್ರದ್ಧೆ ; ಲೌಕಿಕ ಜೀವನದಲ್ಲಿ ಗೌರವ; ಈ ವಿಚಿತ್ರಗಳ ಮಿಶ್ರಣವಾಗಿದೆ ಮೀಮಾಂಸಾ ದರ್ಶನ .
ವೇದ ವ್ಯಾಖ್ಯಾನ : ಮೀಮಾಂಸ ವೆಂದರೆ 'ಆಳವಾದ ವಿಚಾರ' , 'ವಿಮರ್ಶೆ', ಎಂದು ಅರ್ಥವಿದ್ದರೂ, ಮೂಲತಃ "ಪೂಜಿತ ವಿಚಾರ" ಎಂದರ್ಥ . ವೇದ ಮತ್ತು ವೈದಿಕ ಧರ್ಮದ ವ್ಯಾಖ್ಯಾನವೇ ಮೀಮಾಂಸೆ..
ಇದು ವೇದ ವ್ಯಾಖ್ಯಾನದ ನಿಯಮಗಳನ್ನು ಹೇಳುತ್ತದೆ; ಯಜ್ಞಗಳ ದಾರ್ಶನಿಕ ಸಿದ್ಧಾಂತವನ್ನು ಹೇಳುತ್ತದೆ .
ವೇದವೆಂದರೆ ಮಂತ್ರಗಳು ಮತ್ತು ಬ್ರಾಹ್ಮಣಗಳು - ||ಮಂತ್ರ ಬ್ರಾಹ್ಮಣಯೋರ್ವೇದಃ||
ಇದಕ್ಕೆ ಕರ್ಮಕಾಂಡವೆಂದು ಹೆಸರು. ಕರ್ಮವೆಂದರೆ ಯಜ್ಞ - ವೈದಿಕ ಕರ್ಮ. ಈ ಕರ್ಮಗಳಿಗೆ ಸಂಬಂಧಪಟ್ಟ ವಿಚಾರಗಳು -ಮಂತ್ರಗಳು ವೇದದ ಮೊದಲ ಭಾಗದಲ್ಲಿದೆ ; ಆದ್ದರಿಂದ ಈ ದರ್ಶನಕ್ಕೆ ಪೂರ್ವ ಮೀಮಾಂಸಾ (ಪೂರ್ವ =ಹಿಂದಿನ, ಮೊದಲಿನ ; ಉತ್ತರ = ನಂತರದ -ಉತ್ತರ ಮೀಮಾಂಸ) ಎಂದು ಹೆಸರು . ವೇದಗಳ ಮುಂದಿನ ಭಾಗ ಉಪನಿಷತ್ತುಗಳು ;ಅವು ಸತ್ಯದ ತತ್ವದ ವಿಚಾರಮಾಡುತ್ತವೆ . ಅವಕ್ಕೆ ಉತ್ತರ ಮೀಮಾಂಸಾ ಎಂದು ಹೆಸರು. ಇವೆರಡೂ ಪೂರ್ವಮೀಮಾಂಸಾ ಮತ್ತು ಉತ್ತರ ಮೀಮಾಂಸಾಗಳು ಕರ್ಮಪ್ರಧಾನ ವಾದ ವೈದಿಕರಿಗೂ, ತತ್ವ ಚಿಂತನೆ -ವಿಚಾರ ಮಾಡುವ ವೇದಾಂತಿಗಳಿಗೂ ಗೌರವದ ದರ್ಶನ -ದರ್ಶನಗಳು.

ಇತಿಹಾಸ

ಬದಲಾಯಿಸಿ
ಕ್ರಿ.ಪೂ. ೪೦೦ ರ ೧೬ ಅಧ್ಯಾಯ, ೨೩೪೪ ಸೂತ್ರಗಳಿರುವ , ವೇದವ್ಯಾಸರ ಶಿಷ್ಯರಾದ ಜೈಮಿನಿ ಮಹರ್ಷಿಗಳು ರಚಿಸಿರುವ ಜೈಮಿನಿಯ ಸೂತ್ರಗಳು ವೇದ ವಿಚಾರದ ಬಗೆಗೆ, ತಿಳಿಸುವ ಪ್ರವರ್ತಕ ಗ್ರಂಥ ಮತ್ತು ಮೀಮಾಂಸೆಗೆ ಮೂಲ. ಇದಕ್ಕೆ ಅನೇಕ ಭಾಷ್ಯ - ಟೀಕೆಗಳಿವೆ. ಶಬರಸ್ವಾಮಿಯ ಭಾಷ್ಯ ಪ್ರಸಿದ್ಧವಾದುದು. ಬೌದ್ಧರ ಪ್ರಚಂಡ ತರ್ಕದಿಂದ ವೈದಿಕ ಮತವನ್ನು ರಕ್ಷಿಸಿ ಲೋಕಪ್ರಿಯಗೊಳಿಸಿದವನು ಕುಮಾರಿಲ ಭಟ್ಟ.. ಶಾಬರ ಭಾಷ್ಯದ ಮೇಲಿನ ಅವನ ಮೂರು ವೃತ್ತಿ ಗ್ರಂಥಗಳು "ಮೀಮಾಸಾ ದರ್ಶನ" ದ ಆಧಾರ ಸ್ಥಂಬಗಳು. ಇದನ್ನು ಭಾಟ್ಟ ಮತವೆನ್ನುತ್ತಾರೆ. ಇಂದಿಗೂ ರೂಢಿಯಲ್ಲಿದೆ.
ಪ್ರಭಾಕರನ ಪ್ರಭಾಕರ ಮತ, ಮುರಾರಿಮಿಶ್ರನ ಮೂರನೆಯ ಸಂಪ್ರದಾಯ ಪ್ರಸಿದ್ಧ , || ಮುರಾರೇ ಸ್ತ್ರಿತೀಯಾ ಪಂಥಾಃ || .

ಪ್ರಮಾಣಗಳು

ಬದಲಾಯಿಸಿ
ಪ್ರಮೆ ಯಾಗಿರುವುದು ಪ್ರಮಾಣ. "ಪ್ರಮೆ" ಅಥವಾ "ಯತಾರ್ಥ ಜ್ಞಾನ"ವನ್ನು ಮಾಡುವ /ಕೊಡುವ ಸಾಧನಗಳು -ಪ್ರಮೆ. ||ಪ್ರಮಾಕರಣಂ ಪ್ರಮಾಣಂ ||. "ದೋಷ ರಹಿತವಾದ ಜ್ಞಾನಕ್ಕೆ ಪ್ರಮೆ" ಯೆಂದು ಹೆಸರು.
ನೆನಪು, ಅನುವಾದ, ತಪ್ಪು ತಿಳುವಳಿಕೆ, ಸಂಶಯವುಳ್ಳದ್ದು , ಪ್ರಮೆಯಲ್ಲ.
ಇವರ ಪ್ರಕಾರ ಆರು ಪ್ರಮಾಣಗಳು. ಪ್ರತ್ಯಕ್ಷ, ಅನುಮಾನ*, ಉಪಮಾನ , ಶಬ್ದ, ಅರ್ಥಾಪತ್ತಿ , ಮತು ಅನುಪಲಬ್ಧಿ . : ಇದು ಕುಮಾರಿಲ ಪಂಥ . (ಅಭಿಪ್ರಾಯ: ಮೊದಲಿನ ಮೂರು ಪ್ರಮಾಣಗಳಲ್ಲಿ ನ್ಯಾಯವನ್ನು ಹೋಲುತ್ತದೆ)
ಇವರು ಪ್ರತ್ಯಕ್ಷದಲ್ಲಿ ಎರಡೇ ಸನ್ನಿಕರ್ಷಗಳನ್ನು ಒಪ್ಪುತ್ತಾರೆ. ಅವು "ಸಂಯೋಗ" , "ಸಂಯುಕ್ತ" ಈ ಎರಡೇ ತದಾತ್ಮ್ಯಗಳು ಸಾಕೆನ್ನುತ್ತಾರೆ.
ಪಂಚವಾಕ್ಯಗಳ ಬದಲಿಗೆ' ಪ್ರತಿಜ್ಞಾ , ಹೇತು , ದೃಷ್ಟಾಂತ; ಅಥವಾ ದೃಷ್ಟಾಂತ ಉಪನಯ, ನಿಗಮ , ಈ ಮೂರೇ ಸಾಕೆನ್ನುತ್ತಾರೆ.
(*inference :The reasoning involved in drawing a conclusion or making a logical judgment on the basis ofcircumstantial evidence and prior conclusions rather than on the basis of direct observation)

ಶಬ್ದ -ವೇದ

ಬದಲಾಯಿಸಿ
ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ , ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು 'ಶಬ್ದ ಪ್ರಮಾಣ'ದಿಂದ ತಿಳಿಯಬಹುದು . ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದ ವೊಂದೇ ಸಾಧನ ಅಥವಾ ಪ್ರಮಾಣ. ಬೇರೆ ಪ್ರಮಾಣಗಳು ಅನುಪಯುಕ್ತವೆಂದು ತೋರಿಸಲು ಅವುಗಳನ್ನು (ಶಬ್ದ ಪರಮಾಣವನ್ನು) ಉಪಯೋಗಿಸಬೇಕಾಗುವುದು.
ಶಬ್ದ ಎಂದರೆ ಮಾತು. ಅದು ಎರಡು ವಿಧ . ಪೌರುಷೇಯ ಮತ್ತು ಅಪೌರುಷೇಯ .
ಪೌರುಷೇಯ ಲೌಕಿಕ ವಿಷಯಕ್ಕೆ ಸಂಬಧಿಸಿದ ಪ್ರಮಾಣ. ಅದನ್ನು ಆಪ್ತ ವಾಕ್ಯ ವೆಂದು ಕರೆಯಬಹುದು . ಆದರೆ ಅದು ಸಾಪೇಕ್ಷ ಸತ್ಯ..
ಅಪೌರುಷೇಯ ವಾಕ್ಯಗಳು ವೇದಗಳು ವೇದಗಳು ಈಶ್ವರನಿಂದ ಬಾರದಿದ್ದರೂ, ಅವು ಸ್ವತಃ ಸಿದ್ಧ ವಾಕ್ಯಗಳು . ;ಮೀಮಾಂಸಕರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ವೇದವನ್ನು ಒಪ್ಪುತ್ತಾರೆ .
ಋಷಿಗಳು ಸ್ವತಃ-ಸಿದ್ಧ ವಾಕ್ಯಗಳನ್ನು ಕಂಡವರು.; ದೃಷ್ಠಾರರು ಅವರು ಕರ್ತೃಗಳಲ್ಲ .
ಶಬ್ದ- ಅರ್ಥ, ಅದರ ಸಂಬಂಧಗಳು ನಿತ್ಯ ವಾದದ್ದು . ವರ್ಣ(ಅಕ್ಷರ)(ಲಿಪಿ ) ರೂಪವುಳ್ಳದ್ದು . ವರ್ಣಗಳ ಸಮೂಹವೇ ಪದ. ಧ್ವನಿಯು ಮತ್ತು ರೂಪಗಳು ವರ್ಣದ ಅಭಿವ್ಯಕ್ತಿ ರೂಪ. ಧ್ವನಿಯು ಅನಿತ್ಯ ವರ್ಣವು ನಿತ್ಯ.
ಶಬ್ದಕ್ಕೆ ನಿತ್ಯ, ಅನಿತ್ಯ ಎಂಬ ಎರಡು ರೂಪಗಳಿರುತ್ತವೆ. ಅವ್ಯಕ್ತ ರೂಪದಲ್ಲಿ ಅದು ನಿತ್ಯವೂ ಸರ್ವಗತವೂ ಆಗಿರುತ್ತದೆ.
ವರ್ಣ. 'ಧ್ವನಿ'ಗೆ ಹುಟ್ಟುಸಾವುಗಳಿವೆ. ವರ್ಣಗಳು ನಿತ್ಯವಾದ್ದರಿಂದ,ಅವುಗಳ ಸಮೂಹವಾದ ಪದವೂ ನಿತ್ಯ.
ಈ ಶಬ್ದಗಳು ತಿಳಿಸುವ ಅರ್ಥವೂ ನಿತ್ಯವೇ. ಶಬ್ದ ಮತ್ತು ಅರ್ಥಗಳ ಸಂಬಂಧವೂ ನಿತ್ಯ. ಕಾರಣ, 'ದನ', ಎಂಬ ಶಬ್ದಕ್ಕೆ ಅದೇ ಅರ್ಥಬರಲು ಮಾನವೇಚ್ಛೆ ಅಥವಾ ಈಶ್ವರೇಚ್ಛೆ ಕಾರಣವಲ್ಲ. ಅದು ಸ್ವತಃಸಿದ್ಧ. ಭಾಷೆ ಸಹಜವಾದದ್ದು. ಶಬ್ಧಾರ್ಥಗಳ ಸಂಬಂಧವು ತನ್ನಿಂದತಾನೆ ಹುಟ್ಟಿಕೊಂಡಿದೆ. ರೂಢಿ -ಅರ್ಥವನ್ನು ತಿಳಿಸುವ ಸಾಧನ ಮಾತ್ರಾ. ವಸ್ತುವನ್ನು ತಿಳಿಯಲು ಬೆಳಕಿದ್ದಂತೆ. .
ವೇದಗಳ, 'ಪದ', 'ಪಾಠ ಕ್ರಮ', ವಿಶಿಷ್ಠವಾಗಿದ್ದು ಬದಲಾಯಿಸಲಾಗದ್ದು. ಬದಲಾಯಿಸಲು ಬಾರದ್ದಾಗಿರುವುದರಿಂದ, ಈ ಅನುಪೂರ್ವಿಯು ಸ್ವಯಂ ಸಿದ್ಧವೂ ನಿತ್ಯವೂ ಆಗಿದೆ .
ವೇದಗಳಲ್ಲಿ ಐದು ಪ್ರಕಾರದ ವಿಷಯಗಳಿವೆ : ವಿದಿ , ಮಂತ್ರ , ನಾಮಧೇಯ , ನಿಷೇಧ , ಮತ್ತು ಅರ್ಥವಾದ ; :ಮಾಡಬೇಕಾದ್ದು , 'ವಿಧಿ' ; ಮಾಡಬಾರದ್ದು 'ನಿಷೇಧ' ; ಅನುಷ್ಠಾನಕಾರಕಗಳು, 'ಮಂತ್ರಗ'ಳು (ಅರ್ಥಸ್ಮಾರಕ) , ಯಜ್ಞದ ಹೆಸರು, 'ನಾಮಧೇಯ'.
ವೇದ ವಾಕ್ಯಗಳಲ್ಲಿ , ಸಿದ್ಧಾರ್ಥವಾಕ್ಯ, ವಿಧಾಯಕ ವಾಕ್ಯಗಳುಂಟು.ಇದ್ದದ್ದನ್ನು ಹೇಳುವುದು ; ಉದಾ: "ಸತ್ಯಂ ಜ್ಞಾನಮನಂತಂ ಬ್ರಹ್ಮ"  ; ಇದು ಬ್ರಹ್ಮದ ಪರಿಚಯ . ವೇದದ ತಾತ್ಪರ್ಯವಿರುವುದು- ವಿಧಿ ವಾಕ್ಯಗಳಲ್ಲಿ .- ಉದಾ: ಸ್ವರ್ಗ ಕಾಮೋ ಯಜೇತ ; 'ಸ್ವರ್ಗ ಬಯಸುವವನು ಯಜ್ಞ ಮಾಡಬೇಕು'. ಆದ್ದರಿಂದ ವೇದ ವಿಹಿತ ಕರ್ಮವೇ ಧರ್ಮ. ಅದೇ ಜೀವನದ ಗುರಿ . ಸಿದ್ಧಾರ್ಥದ ವಾಕ್ಯಗಳು ವ್ಯರ್ಥ. ಆದ್ದರಿಂದ ಮೀಮಾಂಸೆಯು ವಿದಿ ವಿಚಾರವನ್ನು ನಿರ್ಣಯಿಸುತ್ತದೆ.

ಅರ್ಥಾಪತ್ತಿ

ಬದಲಾಯಿಸಿ
ಪ್ರಮಾಣ : ಮೀಮಾಂಸಕರು ಹೊಸದಾಗಿ ಸೇರಿಸಿದ ಪ್ರಮಾಣ . ಕೇಳಿದ ಸಂಗತಿಯಲ್ಲಿ ವಿರೋಧವನ್ನು ಪರಿಹರಿಸಿಕೊಳ್ಳಲು ಅರ್ಥಾಂತರವನ್ನು ಕಲ್ಪಿಸಿಕೊಳ್ಳುವುದು - ಇದು ಅರ್ಥಾಪತ್ತಿ. ಉದಾಹರಣೆ; 'ದೇವದತ್ತನು ಹಗಲಿನಲ್ಲಿ ಊಟಮಾಡುವುದಿಲ್ಲ, ಆದರೆ ದಪ್ಪಗಿದ್ದಾನೆ'; -'ಹಾಗಿದ್ದರೆ ರಾತ್ರಿ ಊಟಮಾಡುತ್ತಾನೆ', ಎಂದು ಕಲ್ಪಿಸಿಕೊಳ್ಳುವುದು. (ಕಾರಣ -ಇಲ್ಲದಿದ್ದರೆ ತೆಳ್ಳಗಿರಬೇಕಾಗಿತ್ತು). ಇದರಲ್ಲಿ, 'ದೃಷ್ಟ' ಕಂಡಿದ್ದು; 'ಶಬ್ದ ' (ಮಾತು ) , ಎಂದು ಎರಡು ವಿಧ. ನ್ಯಾಯದಲ್ಲಿ ಇದನ್ನು ಅನುಮಾನ ಪ್ರಮಾಣದಲ್ಲಿ ಸೇರಿಸುತ್ತಾರೆ. ಅರ್ಥಾಪತ್ತಿ ಪ್ರಮಾಣವನ್ನು ಮರಣಾನಂತರ ಆತ್ಮವಿರುತ್ತದೆ, ಎಂಬುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕರ್ಮಕ್ಕೆ ಫಲವಿರುವುರಿಂದ - ಇಲ್ಲಿ ಭೋಗಿಸದ ಕರ್ಮ ಫಲವನ್ನು ಭೋಗಿಸಲು ಮರಣಾನಂತರ ಆತ್ಮವಿರುತ್ತದೆ -ಇರಬೇಕು.
ಅನುಪಲಬ್ಧಿ : ಅಭಾವ , ಇಲ್ಲದ್ದನ್ನು ತಿಳಿಯಲು ಪ್ರಮಾಣ. ಉದಾ: ನೆಲದ ಮೇಲೆ ಗಡಿಗೆ ಇಲ್ಲ. ಪ್ರತ್ಯಕ್ಷ ವಸ್ತು ಇಲ್ಲ. ಅಭಾವವನ್ನು ಶೂನ್ಯವೆಂದು ಹೇಳಲಾಗದು. ಆದ್ದರಿಂದ ಅಭಾವವನ್ನು ತಿಳಿಯಲೂ ಪ್ರಮಾಣ ಬೇಕು.

ಸ್ವತಃ ಪ್ರಾಮಾಣ್ಯವಾದ

ಬದಲಾಯಿಸಿ
ಪ್ರಮಾಣಗಳಿಂದ ದೊರೆತ ಜ್ಞಾನದ ಸತ್ಯತೆಯನ್ನು ತೀರ್ಮಾನಿಸುವುದು, ಹೇಗೆಂಬುದು ಜ್ಞಾನ ಮೀಮಾಂಸೆಯ ಸಮಸ್ಯೆ . ಇಂದ್ರಿಯಗಳು ಉಪಕರಣಗಳು ದೋಷರಹಿತವಾಗಿದ್ದರೆ ಜ್ಞಾನ ಯತಾರ್ಥ. ಉದಾ : ಕಣ್ಣು -ಬೆಳಕನ್ನೂ , ಕೆಂಪು ಲೇಖನಿಯನ್ನೂ ಸರಿಯಾಗಿ ಗುರುತಿಸುವುದು. ಅಂದರೆ ಜ್ಞಾನವು ಹುಟ್ಟಿನಲ್ಲಿಯೂ (ಉತ್ಪತ್ತಿಯಲ್ಲಿಯೂ) (ಉತ್ಪತ್ತೌ), ಜ್ಞಪ್ತಿಯಲ್ಲಿಯೂ, ಪ್ರಾಮಾಣಿಕವಾಗಿರುತ್ತದೆ.
೧. ಜ್ಞಾನದ ಪ್ರಾಮಾಣಿಕತೆಯು, ಬಾಹ್ಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದರೆ ಅದು ಜ್ಞಾನಗಳನ್ನು ಉಂಟುಮಾಡುವ ವಸ್ತುಗಳ ಜೊತೆಗೇ ಹುಟ್ಟುತ್ತದೆ. (ಪ್ರಮಾಣಂ ಸ್ವತಃ ಉತ್ಪದ್ಯತೇ)
೨. ಜ್ಞಾನವು ಹುಟ್ಟಿದ ಕ್ಷಣದಲ್ಲಿಯೇ ಅದರ ಪ್ರಮಾಣ್ಯದ ಜ್ಞಾನವೂ ಉಂಟಾಗುತ್ತದೆ. ಅದಕ್ಕೆ ಇತರ ಪ್ರಮಾಣದ ಅವಶ್ಯಕತೆ ಇಲ್ಲ. (ಪ್ರಮಾಣ ಸ್ವತಃ ಜ್ಞಾಯತೇ) ; ಇದು ಮೀಮಾಂಸಕರ ಸ್ವತಃ ಪ್ರಾಮಾಣ್ಯವಾದ.
ಜ್ಞಾನವೆಲ್ಲವೂ ಸತ್ಯವಾದುದು ಎಂಬುದು ಮೀಮಾಂಸಕರ ನಿಲುವು. ಒಮೆ ಅದು ತಪ್ಪಾಗಿದ್ದರೆ , ಸರಿಪಡಿಸಿಕೊಂಡಿದ್ದು ಸತ್ಯ ಜ್ಞಾನ . -ಅಲ್ಲಿಯವರೆಗೆ ಅದು ಸತ್ಯ. (ಕಪ್ಪೆ ಚಿಪ್ಪು -ಬೆಳ್ಳಿಯಂತೆ) (ಅಪ್ರಾಮಣ್ಯಂ ಪರತಃ) ಇತರೆ ಪ್ರಮಾಣಗಳಿಂದ ಜ್ಞಾನದ ಪ್ರಾಮಾಣಿಕತೆಯನ್ನು ತಿಳಿಯುತ್ತೇವೆ.
ಪರತಃ ಪ್ರಾಮಾಣ್ಯವನ್ನು ನ್ಯಾಯದಂತೆ ಇವರು ಒಪ್ಪುವುದಿಲ್ಲ. ನೀರನ್ನು ಕುಡಿದಾಗ ಮಾತ್ರಾ ಪ್ರಮಾಣವೆಂದು ಒಪ್ಪುವುದು ನ್ಯಾಯದ ನಿಲುವು. ನೋಡಿದರೆ ಸಾಕೆಂದು ಮೀಮಾಂಸಕರು. ; ಏಕೆಂದರೆ ಅದು ಅವ್ಯವಹಾರಿಕ. ಎಲ್ಲವನ್ನೂ ದೃಢಪಡಿಸುವುದೇ ಬೇರೆ. ನೀರನ್ನು ಕುಡಿದದ್ದರಿಂದ ತಿಳಿಯಿತೋ ದೃಢಪಟ್ಟಿತೋ ? ಲೋಕವ್ಯವಹಾರವು ನಡೆಯುವುದು ನಾವು ತಿಳಿದಿದ್ದು ಸತ್ಯವೆಂಬ ನಂಬುಗೆಯಿಂದ . ಅಂದರೆ ಜ್ಞಾನವು ಸ್ವತಃ ಸಿದ್ಧವಾಗಿದೆ.
ಮೀಮಾಂಸಕರ ಈ ವಾದಕ್ಕೆ ಕಾರಣವೇನೆಂದರೆ.-ಪರತಃ ಜ್ಞಾನವನ್ನು (ಪರೀಕ್ಷಿಸದ) ಒಪ್ಪಿದರೆ, ವೇದ ವಾಕ್ಯಗಳ , ಸ್ವತಃ ಸಿದ್ಧ ಸತ್ಯತೆಯನ್ನು ಸಂದೇಹಿಸಬೇಕಾಗುತ್ತದೆ. ಸ್ವತಃ ಪ್ರಾಮಾಣ್ಯ ವಾದವನ್ನು ಅವಲಂಬಿಸಿದರೆ ಸಂದೇಹಿಸುವ ಅಗತ್ಯವಿಲ್ಲ. :ಪೌರುಷೇಯ ಪ್ರಾಮಾಣ್ಯವನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ ಅಪೌರುಷೇಯ ವೇದ ವಾಕ್ಯಗಳು ಸ್ವತಃ ಸಿದ್ಧವಾದ್ದರಿಂದ ಪರೀಕ್ಷಿಸದೆ ನಂಬಬೇಕಾಗುತ್ತದೆ.
ಆಖ್ಯಾತಿವಾದ :
ಎರಡು ಭಿನ್ನವಾದ ಜ್ಞಾನಗಳ ಬೇಧವನ್ನು ತಿಳಿಯುವುದರಿಂದ , -ತಿಳಿಯಲಾರದ್ದರಿಂದ ತಪ್ಪು ಜ್ಞಾನವಾಗುತ್ತದೆ. ಇದು ಭ್ರಮೆ _ (ಉದಾ: ಚಿಪ್ಪು - ಬೆಳ್ಳಿ) ಇದಕ್ಕೆ ಆಖ್ಯಾತ ವಾದವೆಂದು ಹೆಸರು .
ವಿಪರೀತ ಖ್ಯಾತಿ ವಾದ :-
ಬೆಳ್ಳಿಯ ಜ್ಞಾನ - ಕಪ್ಪೆ ಚಿಪ್ಪಿನಲ್ಲಿ ಅದರ ಆರೋಪ. -ಇದರಿಂದ ಭ್ರಮೆ . ಇದು ವಿಪರೀತ ಖ್ಯಾತಿವದ -ಇದು ಕುಮಾರಿಲ ಭಟ್ಟರ ಮತ.

ಜಗತ್ತು

ಬದಲಾಯಿಸಿ
ಮೀಮಾಂಸ ಜಗತ್ತನ್ನು ನಿತ್ಯವೆಂದು ಹೇಳುತ್ತದೆ.
ಬದಲಾವಣೆಗಳನ್ನು ಒಪ್ಪಿದರೂ ಅದು ಅನಿತ್ಯವಲ್ಲ, ವಾಸ್ತವ (ಸತ್ಯ).ಅದು ಪರಿಣಾಮ ನಿತ್ಯವಾಗಿದೆ. ಅದಕ್ಕೆ ಆದಿಯೂಇಲ್ಲ , ಅಂತ್ಯವೂ ಇಲ್ಲ. ಪ್ರಳಯ ಕೇವಲ ಕಲ್ಪನೆ. ಸಂಸಾರದಲ್ಲಿ (ಜಗತ್ತು) ನಮಗೆ ಮೂರು ವಸ್ತುಗಳ ಜ್ಞಾನವಾಗುತ್ತದೆ. -ಶರೀರ , ಇಂದ್ರಿಯಗಳು . ಪದಾರ್ಥಗಳು. ಆತ್ಮವು ಇದರಲ್ಲಿದ್ದುಕೊಂಡು, ಸುಖ , ದುಃಖವನ್ನು ಅನುಭವಿಸುತ್ತದೆ. ಈಂದ್ರಿಯಗಳು ಭೋಗ ಸಾಧನಗಳು. ಪದಾರ್ಥಗಳು ಭೋಗ ವಿಷಯಗಳು.
ಕುಮಾರಿಲ ಮತದಲ್ಲಿ ಪದಾರ್ಥಗಳು ಐದು. ದ್ರವ್ಯ , ಗುಣ , ಕರ್ಮ, ಮತ್ತು ಸಾಮಾನ್ಯಗಳು-ಭಾವ ಪದಾರ್ಥಗಳು , ಅಭಾವವು ಐದನೆಯದು. ದ್ರವ್ಯದಲ್ಲಿ ತಮಸ್ಸು , ಶಬ್ದ ಸೇರಿದೆ. ಕತ್ತಲೆಗೆ -ಕಪ್ಪು ಬಣ್ಣ , ಚಲನೆಗೆ ಶಕ್ತಿ ಇದೆ ಎಂಬುದು ಇವರ ವಾದ.
ಆದರೆ ವೈಶೇಷಿಕರು , ಬೆಳಕಿನ ಅಭಾವವೇ ಕತ್ತಲೆ ಎನ್ನುತ್ತಾರೆ. ಆದರೆ ಮುರಾರಿ ಮಿಶ್ರನು , ಬ್ರಹ್ಮ ವೊಂದೇ ಪರಮಾರ್ಥಪದಾರ್ಥವೆಂದಿದ್ದಾನೆ. ಕೆಲವರು ಪರಮಾಣು ವಾದವನ್ನು ಒಪ್ಪಿದರೂ, ಕುಮಾರಿಲರು ಮೀಮಾಂಸಕರಿಗೆ ಪರಮಾಣುವಾದವು ಅವಶ್ಯವಿಲ್ಲವೆನ್ನುತ್ತಾರೆ.
ಮೀಮಾಂಸಕರು ಶರೀರ, ಇಂದ್ರಿಯ, ಬುದ್ಧಿಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತಾರೆ. ಆತ್ಮವೇ ಇಲ್ಲದಿದ್ದರೆ ಇದ್ದಾಗ ಮತ್ತು ಸತ್ತಮೇಲೆ ಕರ್ಮಫಲವನ್ನು ಭೋಗಿಸುವವನೇಇಲ್ಲವಾದೀತು.

ಇವರ ಪ್ರಕಾರ , ಆತ್ಮದಲ್ಲಿ ಪರಿಣಾಮ ಅಥವಾ ಬದಲಾವಣೆ ಇದೆ. ಆದರೆ ಅನಿತ್ಯವಲ್ಲ . ಅದು ಜ್ಞಾನ ಸ್ವರೂಪಿಯಲ್ಲ. ಜ್ಞಾನವು ಆತ್ಮದ ಕ್ರಿಯೆ. ಆತ್ಮದಲ್ಲಿ ಚಿತ್ , ಅಚಿತ್ , ಅಂಶಗಳಿವೆ . ಚಿತ್ ಅಂಶದಿಂ ಜ್ಞಾನ , ಅಚಿತ್ನಿಂದ ಬದಲಾವಣೆ. ಆತ್ಮವು ಸರ್ವವ್ಯಾಪಿ , ಆದರೆ , ಪ್ರತಿಯೊಂದು ಶರೀರಕ್ಕೂ ಒಂದೊಂದು ಆತ್ಮವಿದೆ . ಪ್ರಭಾಕರನ ಪ್ರಕಾರ, ಅಹಂ ಪ್ರತ್ಯಯ ವೇದ್ಯ. ನಾನು ಎಂಬ ತಿಳುವಿನಿಂದ ತಿಳಿಯಲ್ಪಡುತ್ತದೆ. ಅದರಲ್ಲಿ ಕ್ರಿಯೆ ಇಲ್ಲ. ಆದರೆ ಕೆಲವರು ಅದಕ್ಕೆ ಎರಡೂ ಗುಣಗಳಿವೆ ಎನ್ನುತ್ತಾರೆ. ಅದು ಮಾನಸ ಪ್ರತ್ಯಕ್ಷ ವೆನ್ನುತ್ತಾರೆ .

ಈ ದರ್ಶನದಲ್ಲಿ ಪ್ರಧಾನವಾದುದು ಕರ್ಮತತ್ವ. ವೇದ ವಿಹಿತವಾದ ಯಾಗಾದಿಗಳ ಆಚರಣೆಯೇ, ಧರ್ಮ . ಇದೇ ಕರ್ಮ ಅಥವಾ ಕರ್ತವ್ಯ. ವೇದ ನಿಷೇಧವಾದದ್ದು ಅಧರ್ಮ. ವೇದ ವಿಧಿಸಿದ ಕರ್ಮಗಳು ಮೂರು ವಿಧ. :- ನಿತ್ಯ , ನೈಮಿತ್ತಿಕ , ಕಾಮ್ಯ .
೧. ಸಂಧ್ಯಾವಂದನೆ , ದೇವರ ಪೂಜೆ ಮೊದಲಾದವು -ನಿತ್ಯಕರ್ಮ.
೨. ಶ್ರಾದ್ಧಾದಿ ವಿಶೇಷ ಕರ್ಮಗಳು ನೈಮಿತ್ತಿಕ ಕರ್ಮಗಳು.
೩. ಕಾಮನೆಯ (ಬಯಕೆಯ) ಪೂರ್ತಿಗಾಗಿ ಮಾಡುವುದು ಕಾಮ್ಯ ಕರ್ಮ.
ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.
೧. ನಿತ್ಯ ಕರ್ಮಗಳಿಗೆ ಫಲವಿಲ್ಲ. ಬಿಟ್ಟರೆ ಪ್ರತ್ಯವಾಯು (ಲೋಪ) ಸಂಭವಿಸುತ್ತದೆ. ಆದರೆ ಮಾಡಿದ್ದರಿಂದ ಪಾಪಗಳು ಕ್ಷಯಿಸುತ್ತವೆ ಎಂದು ಕುಮಾರಿಲರು ಹೇಳುತ್ತಾರೆ. ಮಾಡಿದ್ದರಿಂದ ಪುಣ್ಯವಿದೆ ಬಿಟ್ಟದ್ದರಿಂದ ಪಾಪವಿಲ್ಲ ಎಂದು ಕೆಲವರು ಹೇಳುತ್ತಾರೆ.



ಅಪೂರ್ವ

ಬದಲಾಯಿಸಿ

ಕರ್ಮಫಲವು ಹೇಗೆ ಉಂಟಗುತ್ತದೆ ? ಈವಿಚಾರ :

ಕರ್ಮವನ್ನು ಮಾಡುವಾಗ ಫಲವಿಲ್ಲ; ಕರ್ಮವನ್ನು ಅನುಭವಿಸುವಾಗ ಕರ್ಮವಿಲ್ಲ. ಇದೊಂದು ವಾದ. ಕರ್ಮ (ಯಜ್ಞ) ಮಾಡುವಾಗ ಯಜಮಾನನಲ್ಲಿ ಒಂದು ವಿಶಿಷ್ಟವಾದ (ಅಪೂರ್ವವಾದ)ಶಕ್ತಿಯು ಹುಟ್ಟಿಕೊಂಡು, ಫಲವನ್ನು (ಯಥಾಕಾಲದಲ್ಲಿ ) ಕೊಡುತ್ತದೆ. ಇದು ಅಪೂರ್ವ.

ಮೋಕ್ಷ :

ಬದಲಾಯಿಸಿ
ಜೈಮಿನಿ ಅವರ ಶಿಷ್ಯರಾದ , ಶಬರಸ್ವಾಮಿಗಳ ಮಾತುಗಳಲ್ಲಿ ಮೋಕ್ಷದ ಪ್ರಸ್ತಾಪವಿಲ್ಲ. ಸ್ವರ್ಗವೇ ಮೊದಲಾದ ಅಭ್ಯುದಯದ ಪ್ರಸ್ತಾಪ ಮಾತ್ರಾ ಇದೆ. ಪುನರ್ಜನ್ಮವಿಲ್ಲ ದಿರುವುದೇ ಮೋಕ್ಷವೆಂದು ಕುಮಾರಿಲರು; ಕರ್ಮಶೇಷವಿಲ್ಲದಾಗ , ಶರೀರ , ಇಂದ್ರಿಯ, ಪದಾರ್ಥಗಳಿಂದ ಬಿಡುಗಡೆಯಾದಾಗ, ಮೋಕ್ಷ . ಮೋಕ್ಷದ ಸ್ಥಿತಿಯಲ್ಲಿ ಆನಂದಾನುಭವಗಳಿಲ್ಲ. ಇಂದ್ರಿಯಗಳಿಲ್ಲದಾಗ, ಭೋಗ ಸಾಧನವಿಲ್ಲದೆ ಆನಂದವಿಲ್ಲ.

ಮೋಕ್ಷಕ್ಕೆ ಜ್ಞಾನವು ನೇರ ಸಾಧನವಲ್ಲ . ನಿತ್ಯ -ನೈಮಿತ್ತಿಕ ಕರ್ಮಗಳನ್ನು ಆಚರಿಸಿ, ಜ್ಞಾನ ಮತ್ತು ಕರ್ಮದಿಂದ ಮೋಕ್ಷ. ಮೀಮಾಂಸಕರು ಜ್ಞಾನ -ಕರ್ಮ ಸಂಯೋಗವನ್ನು ಪ್ರತಿಪಾದಿಸುತ್ತಾರೆ.

ಈಶ್ವರ :

ಬದಲಾಯಿಸಿ
ಈ ದರ್ಶನದಲ್ಲಿ ಈಶ್ವರನಿಗೆ ಯಾವ ಸ್ಥಾನವೂ ಇಲ್ಲ. ಪ್ರಪಂಚವು ಅನಾದಿ, ಅನಂತ ; ವೇದವೂ ಅನಾದಿ , ಅನಂತ.ಅವುಗಳಿಗೆ ಅವನನ್ನು (ಈಶ್ವರನನ್ನು) ಕರ್ತೃವೆಂದು ಹೇಳುವಂತಿಲ್ಲ. ಕರ್ಮಫಲವನ್ನು ವಿತರಿಸಲೂ, ಅವನ ಅವಶ್ಯಕತೆ ಇಲ್ಲ . ಅಪೂರ್ವವೆನ್ನುವ ಶಕ್ತಿಯೇ ಆ ಕೆಲಸ ಮಾಡುತ್ತದೆ. ಪ್ರಾಚೀನ ಮೀಮಾಂಸಕರು ಈಶ್ವರನ ಪ್ರಸ್ತಾಪವನ್ನು ಎತ್ತುವುದಿಲ್ಲ. ಕುಮಾರಿಲರು ,ಶ್ಲೋಕ ವಾರ್ತಿಕದಲ್ಲಿ ಈಶ್ವರನ ಅಸ್ತಿತ್ವವನ್ನು ನಿರಾಕರಿಸುತ್ತಾರೆ.

ಹಾಗಾದರೆ ವೇದಗಳಲ್ಲಿ ಹೇಳಿದ ದೇವತೆಗಳ ವಿಚಾರವೇನು ಎಂದು ಕೇಳಿದರೆ- ದೇವತೆಗಳಿಗೆ ದೇಹವಿಲ್ಲ, ಏಕೆಂದರೆ ಅನೇಕ ಕಡೆ ಯಾಗ ಮಾಡಿದಾಗ, ಅನೇಕ ಕಡೆ ಅವರು ಇರುವುದು (ಒಂದೇ ದೇಹವಿದ್ದಲ್ಲಿ ) ಸಾದ್ಯವಿಲ್ಲ. ,ಅಗ್ನಿ, ಇಂದ್ರ, ಮೊದಲಾದ ದೇವತೆಗಳು ಶಬ್ದಗಳೇ ವಿನಃ ರೂಪವಲ್ಲ. ಯಜ್ಞದಲ್ಲಿ ಕೊಡುವುದು, ತ್ಯಾಗ ಬುದ್ಧಿ, ; ದ್ರವ್ಯವನ್ನು ಯಜ್ಞದಲ್ಲಿ ಕೊಟ್ಟು ತ್ಯಾಗವನ್ನು ಮಾಡಬೇಕು. ದೇವತೆಗಳು ಅಪ್ರಧಾನ ; ಇದ್ದರೂ ಅವರಿಗೆ ಮಹತ್ವವಿಲ್ಲ.

ನಂತರದ ಮೀಮಾಂಸಕರು, ಈಶ್ವರನನ್ನು ಈ ಸಿದ್ಧಾಂತದಲಿ ಸೇರಿಸಲು ಪ್ರಯತ್ನಿಸಿದ್ದಾರೆ.
ಆದರೆ ಕುಮಾರಿಲರು, ತಮ್ಮ ವಾರ್ತಿಕದ ಆರಂಭದಲ್ಲಿ ಶಿವನನ್ನು ಸ್ತುತಿಸಿರುವುದು ವಿಶೇಷ.

ಸಮೀಕ್ಷೆ -ಉಪಸಂಹಾರ

ಬದಲಾಯಿಸಿ
ಈಗಿನ ಪಂಡಿತರ-ವಿದ್ವಾಂಸರ ಅಭಿಪ್ರಾಯ : ಮೀಮಾಂಸೆಯು ಎತ್ತಿ ಹಿಡಿದಿರುವ ಯಜ್ಞ ಧರ್ಮವು ಶುಷ್ಕವಾದುದು. ಅವರ ಕರ್ಮಯೋಗದ ಆದರ್ಶ ದೊಡ್ಡದು. ಅವರ ತರ್ಕ ವಾದಗಳು , ಶೈಲಿ, ಧರ್ಮಜಿಜ್ಞಾಸೆಗೆ ಉತ್ತಮ ಕೊಡಿಗೆ.
ಮೀಮಾಂಸಕರ ಈಶ್ವರ ಖಂಡನೆಯು, ತುಂಬಾ ಪ್ರಬಲವಾಗಿದೆ. ಕುಮಾರಿಲರು (೮ ನೇ ಶತಮಾನದಲ್ಲೇ) ;ಈಶ್ವರನನ್ನು ಒಪ್ಪಿದರೆ, ಜಗತ್ತಿನಲ್ಲಿರುವ ಅನ್ಯಾಯವನ್ನು ವಿವರಿಸಲು ಅಸಾದ್ಯವೆಂದು ಧೀರವಾಗಿ ಹೇಳಿದ್ದಾರೆ.
ಅವರು ಪುರಾಣ ಕಥೆಗಳು ನೀತಿ ಬೋಧಕಗಳೇ ಹೊರತು, ನಿಜವಲ್ಲವೆಂದು ಹೇಳಿದ್ದಾರೆ. ಅವರ ಧೈರ್ಯ ಮೆಚ್ಚಬೇಕಾದದ್ದು.
ಮೀಮಾಂಸಕರ ಜೀವನ ಪ್ರೀತಿ, , ಗೃಹಸ್ಥಾಶ್ರಮಕ್ಕೆ ಅವರು ನೀಡಿದ ಪ್ರಾಮುಖ್ಯತೆ, ಶ್ಲಾಘ್ಯವಾದುದು. ;ಕುಮಾರಿಲರು ಯೋಗ ಸಿದ್ಧಿ ; ಸಂನ್ಯಾಸಗಳನ್ನು ಲೇವಡಿ ಮಾಡಿದ್ದಾರೆ .
ಮೀಮಾಂಸದ ಪ್ರವರ್ತಕರು, ಪ್ರತಿಪಾದಕರು , ಅಸಾಧಾರಣ ಯೋಗ್ಯತೆಯ ಚಿಂತಕರಾಗಿದ್ದರು . [][]
ಓಂ ತತ್ಸತ್
ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ

ಉಲ್ಲೇಖಗಳು

ಬದಲಾಯಿಸಿ
  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.