ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು
ಪೀಠಿಕೆ
ಬದಲಾಯಿಸಿ- ಜೀವ, ಜಗತ್ತುಗಳಂತೆ ದರ್ಶನಗಳಲ್ಲಿ ಪ್ರಧಾನವಾದುದು ಈಶ್ವರ ತತ್ತ್ವ. ಸಮಸ್ತ ಪ್ರಪಂಚವನ್ನೂ ಆವರಿಸಿ ಅದನ್ನೆಲ್ಲಾ ನಿಯಂತ್ರಿಸುವ ಒಂದು ಶಕ್ತಿ ಇದೆಯೇ ? ಅದೊಂದು ವ್ಯಕ್ತಿಯೇ ? ಶಕ್ತಿಯೇ ? ಜಗತ್ತಿಗೂ ಈಶ್ವರನಿಗೂ ಇರುವ ಸಂಬಂಧವೇನು ? ಜಗತ್ತಿನಲ್ಲಿ ಅನುಭವಿಸುವ ಕಷ್ಟಗಳಿಗೆ ಆವ್ಯಕ್ತಿ - ಶಕ್ತಿಯಿಂದ ಸಹಾಯ ದೊರೆತೀತೇ ? ಈ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಯತ್ನಸಿರುವುದೇ ದರ್ಶನ ಶಾಸ್ತ್ರ.
- ಡಿ.ವಿ.ಜಿ.ಯವರು ಜೀವನ ಧರ್ಶನ ಕಾವ್ಯವಾಗಿರುವ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಮೊದಲಿಗೆ ಈ ಪ್ರಶ್ನೆಗಳನ್ನು ಎತ್ತುತ್ತಾರೆ .
- ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
- ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
- ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
- ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||
- (ವಿಶ್ವಕ್ಕೆ ಆದಿ ಮತ್ತು ಮೂಲ-ಕಾರಣವಾದದ್ದು/ ಕಾಣದೊಡಂ-ಕಾಣದಿದ್ದರೂ ಅಳ್ತಿಯಿಂ-ಪ್ರೀತಿಯಿಂದ/ಭಕ್ತಿಯಿಂದ ಜನ ನಂಬಿರುವರೋ ಆ ವಿಚಿತ್ರಕ್ಕೆ ನಮಸ್ಕಾರ !! )
- ಜೀವ ಜಡರೂಪ ಪ್ರಪಂಚವನದಾವುದೋ|
- ಆವರಿಸಿಕೊಂಡುಮೊಳನೆರೆದುಮಿಹುದಂತೆ||
- ಭಾವಕೊಳಪಡದಂತೆ ಅಳತೆಗಳವಡದಂತೆ|
- ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||
- (ಪ್ರಪಂಚವನ್ನು ಅದು ಆವುದೋ ಆವರಿಸಿಕೊಂಡುಂ+ ಒಳ+ನೆರೆ-ಒಳಗೆ ತಂಬಿಹುದಂತೆ;ಭಾವಕೆ ಮನಸ್ಸಿಗೆ ಸಿಗದ ಅಳತೆಗೆ ಅಳವಡದ-ಸಿಗದ ಆ ವಿಶೇಷಕ್ಕೆ ನಮಿಸು !!)
- ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
- ಮಹಿಮೆಯಿಂ ಜಗವಾಗಿ ಜೀವವೇಷದಲಿ||
- ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
- ಗಹನ ತತ್ವಕೆ ಶರಣೊ - ಮಂಕುತಿಮ್ಮ||
- (ಇದೆ ಅಥವಾ ಇಲ್ಲ ಎಂದು ತಿಳಿಯಲು ಆಗದ /ಆಸ್ಪದಕೊಡದ -ತರ್ಕಕ್ಕೆ ಸಿಗದ ನಿಜ-ತನ್ನ ಶಕ್ತಿಯಿಂದ ಜಗತ್ತಾಗಿ ರೂಪಗೊಂಡು/ಜೀವವಾಗಿ ಪರಿಣಮಿಸಿ,ನಿಸದ=ನಿಜ- ನಿಜವಾದೊಡೆ/ನಿಜವಿದ್ದರೂ ಇರಬಹುದು -ಅದಕ್ಕೆ ನಮಿಸು !! )
ದರ್ಶನ ಶಾಸ್ತ್ರಗಳಲ್ಲಿ ಈಶ್ವರ
ಬದಲಾಯಿಸಿ- ಚರ್ವಾಕ
- ಚರ್ವಾಕರು ಮೋಕ್ಷ , ಪುನರ್ಜನ್ಮ , ಪರಲೋಕ , ಈಶ್ವರ , ಇವನ್ನೆಲ್ಲಾ ನಿರಾಕರಿಸುತ್ತಾರೆ. ಅವೆಲ್ಲಾ ಭ್ರಮೆ ಎನ್ನುತ್ತಾರೆ . ಸುಖ ದುಃಖಗಳೆಲ್ಲಾ ಪ್ರಕೃತಿ ಸಹಜವಾದದ್ದು ; ರಾಜನೇ ಈಶ್ವರನ ಕೆಲಸಮಾಡುತ್ತಾನೆ ಎಂಬುದು ಅವರ ಸಿದ್ಧಾಂತ.
- ಜೈನ
- ಜೈನದರ್ಶನವು ಈಶ್ವರನನ್ನು ಒಪ್ಪದಿದ್ದರೂ , ಅನಂತ ಜ್ಞಾನಶಕ್ತಿಗಳಿರುವ ಆತ್ಮ ತತ್ವನ್ನೊಪ್ಪಿದೆ.ಅನೇಕ ಅನಂತ ಆತ್ಮಗಳಿವೆ ಎನ್ನುತ್ತಾರೆ. ಕೆಲವು ದೇವತೆಗಳನ್ನೊಪ್ಪುತ್ತಾರೆ (ವೇದಗಳಲ್ಲಿ ಹೇಳಿದವು - ಕೆಲವು ಹೊಸ ದೇವತೆಗಳಿದ್ದಾರೆ). ಜಿನ , ಅರ್ಹತ, ತೀರ್ಥಂಕರರು, ಪೂರ್ಣಜೀವರು .
- ಬೌದ್ಧ
- ಬೌದ್ಧರೂ ಪರಮಾತ್ಮನನ್ನು ಒಪ್ಪುವುದಿಲ್ಲ. ಜೀವನನ್ನು ಒಪ್ಪಿದರೂ ;ರಾಗ ದ್ವೇಷಾದಿಗಳನ್ನೂ-ಕರ್ಮಗಳನ್ನು ಜ್ಞಾನದಿಂದ ಬಿಡಿಸಿಕೊಂಡ ನಂತರ ಶೂನ್ಯದಲ್ಲಿ ಒಂದಾಗುವುದು (ಮೋಕ್ಷ) ; ಆದರೂ ಪೂರ್ಣಾತ್ಮನೆಂದು ಬುದ್ಧನನ್ನೇ ಸ್ವೀಕರಿಸಿ ಅವನನ್ನೇ ಈಶ್ವರ ಸ್ಥಾನಕ್ಕೇರಿಸಿದೆ. ಬೌದ್ಧ ದರ್ಶನವು ದೇವತೆಗಳನ್ನು ಸ್ವೀಕರಿಸುವುದು . ಆದರೆ ಜಗತ್ತೆಲ್ಲಾ ಕ್ಷಣಿಕ -ಭ್ರಮೆ ಎಂಬ ನಿಲುಮೆ ಅದರ ಪ್ರಕಾರ ಶೂನ್ಯವೇ ಸತ್ಯ .
ಷಡ್ದರ್ಶನಗಳಲ್ಲಿ ದೇವರು
ಬದಲಾಯಿಸಿ- ಸಾಂಖ್ಯ
- ಪ್ರಾಚೀನ ಸಾಂಖ್ಯರಲ್ಲಿ ಈಶ್ವರನ ವಿಚಾರವಿಲ್ಲ. ಪ್ರಕೃತಿ ಪುರುಷರೇ ಎಲ್ಲಕ್ಕೂ ಕಾರಣ . ಪುರುಷರ ಸಾನ್ನಿಧ್ಯವು ಪ್ರಕೃತಿಗೆ - ಸೃಷ್ಟಿಗೆ ಪ್ರೇರಣೆಯನ್ನೊದಗಿಸುತ್ತದೆ.
- ಯೋಗ ದರ್ಶನ
- ಯೋಗ ದರ್ಶನದಲ್ಲಿ ಈಶ್ವರನನ್ನು ಒಪ್ಪಲಾಗಿದೆ. ಪತಂಜಲಿಯ ಪ್ರಕಾರ ಈಶ್ವರನು ನಿತ್ಯ, ಮುಕ್ತ , ಕರ್ಮಾತೀತ , ಸರ್ವಜ್ಞ ಸರ್ವಶಕ್ತ , ಸರ್ವವ್ಯಾಪಿ . ಹಿಂದಿನ ಋಷಿಗಳ ಗುರು , ಸಮಾಧಿ ಪಡೆಯಲು , ಅತನ ಅನುಗ್ರಹ ಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಜೀವರ ಶಿಷ್ಟ -ರಕ್ಷೆ ಯ ಹೊಣೆ ಅವನಿಗಿಲ್ಲ. ದೇವನು ಮೋಕ್ಷದಾಯಕನೂ ಅಲ್ಲ .ಜಗತ್ತಿನ ಸ್ರಷ್ಟಿ, ಸ್ಥಿತಿ,ಲಯಗಳಿಗೆ ಇವನು ಕಾರಣನಲ್ಲ . ಪ್ರಕೃತಿಗೆ ಕೇವಲ ಪ್ರೇರಕನಾಗಿ , -ನಿಮಿತ್ತ ಕಾರಣನಾಗಿದ್ದಾನೆ.
- ವೈಶೇಷಿಕ ದರ್ಶನ
- ವೈಶೇಷಿಕ ದರ್ಶನದಲ್ಲಿ -ಅದರ ಸೂತ್ರಗಳಲ್ಲಿ ಸ್ಪಷ್ಟವಾಗಿ ದೇವರ ಉಲ್ಲೇಖವಿಲ್ಲ. ಸೂತ್ರದ ವಿ ತದ್ವಚನಾತ್ ವಿ ಂಬಸೂತ್ರ-ವ್ಯಾಖ್ಯಾನಕ್ಕರ ವೇದದ ಆಧಾರದಮೇಲೆ , ತದ್ ಎಂದರೆ ಅದನ್ನು (ದೇವರನ್ನು) ಒಪ್ಪಲಾಗಿದೆ.
- ಮೀಮಾಂಸಾ ದರ್ಶನ
- ಮೀಮಾಂಸಾ ದರ್ಶನದಲ್ಲಿ ಜೈಮಿನಿ , ಶಬರಸ್ವಾಮಿ , ಇವರು ಈಶ್ವರನನ್ನು ನಿರಾಕರಿಸುತ್ತಾರೆ. ವೇದ -ಅದರ ಮಂತ್ರಗಳು , ಯಜ್ಞ ಕರ್ಮಗಳು ನಿತ್ಯ ಅಥವಾ ಪ್ರಾಮುಖ್ಯ . ದೇವತೆಗಳ ಅಸ್ಥಿತ್ವವನ್ನೂ ಒಪ್ಪುವುದಿಲ್ಲ .
- ವೇದಗಳು ಅನಾದಿ , ತಾನಾಗಿ ಸೃಷ್ಟಿಯಾದವು ಎನ್ನುತ್ತಾರೆ. ನಂತರದ ಮೀಮಾಂಸಕರು ದೇವರನ್ನು ಒಪ್ಪಿದ್ದಾರೆ . ಆದರೆ ದೇವರಿಗೆ ಮಹತ್ವವಿಲ್ಲ. ಕುಮಾರಿಲರು ವೇದಪುರುಷನನ್ನು ಒಪ್ಪಿದರೂ, ಈಶ್ವರನನ್ನು ಒಪ್ಪಿಲ್ಲ . ಕಾರಣ ದೇವರನ್ನು ಒಪ್ಪಿದರೆ ಜಗತ್ತಿನಲ್ಲಿರುವ ಅನ್ಯಾಯವನ್ನು ವಿವರಿಸಲು ಅದಕ್ಕೆ ಕಾರಣ ಹೇಳಲು ಅಸಾದ್ಯವೆಂದು ಅವರ ಮತ,
- ಅದ್ವೈತ
- ಅದ್ವೈತ ದರ್ಶನದಲ್ಲಿ ನಿರ್ಗುಣನೂ, ನಿರಾಕಾರನೂ ಸಚ್ಚದಾನಂದ ರೂಪಿಯೂ ಆದ ಪರಬ್ರಹ್ಮನನ್ನು ಒಪ್ಪಲಾಗಿದೆ. ಬ್ರಹ್ಮ ವೊಂದೇ ಸತ್ಯ ,ಅದೇ ಪರಬ್ರಹ್ಮ , ಮಾಯೆ ಸೇರಿದಾಗ , ಅದು ಅಪರ ಬ್ರಹ್ಮ ವೆನಿಸಿ ,ಜಗತ್ತಿನ ಸೃಷ್ಟಿ , ಸ್ಥಿತಿಲಯಗಳಿಗೆ , ಉಪಾದಾನ ಮತ್ತು ನಿಮಿತ್ತ ಕಾರಣವಾಗಿದೆ.
- ಅವಿದ್ಯೆಯ ಮಾಯೆಎ) ಆವರಣದಿಂದ , ಅದೇ ಬ್ರಹ್ಮ ವು ಜೀವ ಗಳೆ/ನೆನಿಸುತ್ತದೆ/ ವೆ. ಆದರೆ ವ್ಯವಹಾರಿಕ ಸತ್ತೆಯ ದೃಷ್ಟಿಯಿಂದ ಉಪಸನಾ ದೃಷ್ಟಿಯಿಂದ , ಈಶ್ವರನನ್ನು (ಸಗುಣ ಬ್ರಹ್ಮ) ಒಪ್ಪಲಾಗಿದೆ. ಆದರೆ ಪಾರಮಾರ್ಥಿಕ ದೃಷ್ಟಿಯಿಂದ ,ಸಗುಣ ಬ್ರಹ್ಮ , ನಿರ್ಗುಣಬ್ರಹ್ಮ ಜೀವರಲ್ಲಿ ಬೇಧವಿಲ್ಲ. ; ಜಗತ್ತು ಒಂದು ಮಿಥ್ಯೆ ; (ವಿವರಿಸಲಾಗದ ವಸ್ತು)ಅದು ಬ್ರಹ್ಮ ನಿಂದ ಬೇರೆಯಿಲ್ಲ.ಅಥವಾ -ಇಲ್ಲವೇ ಇಲ್ಲ.
ಇತರ ದರ್ಶನಗಳಲ್ಲಿ ದೇವರು
ಬದಲಾಯಿಸಿಭಕ್ತಿ ಪಂಥ ವಿಶಿಷ್ಟಾದ್ವೈತ
- ರಾಮಾನುಜರ ವಿಶಿಷಾದ್ವೈತದಲ್ಲಿ ನಿರ್ಗುಣ ಬ್ರಹ್ಮಕ್ಕೆ ಸ್ಥಾನವಿಲ್ಲ.
- ಸಗುಣ ಸವಿಶೇಷ ಬ್ರಹ್ಮವೇ ಈಶ್ವರ. ಅವನೇ ವಿಷ್ಣು ; ಅವನೇ ಶ್ರೀಮನ್ನಾರಾಯಣ . ಅವನು ಲಕ್ಷ್ಮಿಯೊಡನೆ ವೈಕುಂಠದಲ್ಲಿ ವಾಸಿಸುತ್ತಾನೆ . ಈ ಈಶ್ವರನಲ್ಲಿಯೇ ಚಿತ್ (ಚೇತನ) ಅಚಿತ್ ಮತ್ತು ಸಗುಣ ಈಶ್ವರ ತತ್ವವನ್ನು ಕಾಣಬಹುದು.ಅವನೇ ಏಕಮಾತ್ರ ಸತ್ತೆ (ಸತ್ಯ -ಇರುವವನು) . ಜೀವ , ಜಗತ್ತು ಅವನನ್ನು ಅವಲಂಬಿಸಿಕೊಂಡಿದ್ದೂ ಬೇರೆಯಾಗಿವೆ. ಆದರೆ ಬಿಡಿಸಲಾಗದಂತೆ ಹೊಂದಿಕೊಂಡಿವೆ. ಪ್ರಳಯ ಕಾಲದಲ್ಲಿ ಜೀವ ಜಗತ್ತುಗಳು ಸೂಕ್ಷ್ಮಾವಸ್ಥೆಯಲ್ಲಿ ಈಶ್ವರನಲ್ಲಿ ಅಡಗಿರುತ್ತವೆ. ಪುನಃ ಸೃಷ್ಟಿಯಾದಾಗ ಪ್ರಕಟವಾಗುತ್ತವೆ . ಪರಮಾತ್ಮನಾದ ವಾಸುದೇವನು ಜಗತ್ತಿನ ಸೃಷ್ಟಿ, ಸ್ಥಿತಿ , ಲಯಗಳಿಗೆ ಉಪಾದಾನ ಹಾಗೂ ನಿಮಿತ್ತ ಕಾರಣನಾಗಿದ್ದಾನೆ. ಸ್ವತಃ ಅವನಲ್ಲಿ ಯಾವ ಬದಲಾವಣೆಯೂ ಇಲ್ಲ. ಅವನಿಗೆ ಅಪ್ರಾಕೃತವಾದ ಅಂದರೆ ದಿವ್ಯವಾದ ದೇಹವಿದೆ. ಹಾಗಿದ್ದರೂ ಕರ್ಮದ ಬಂಧಕ್ಕೆ ಸಿಲುಕುವುದಿಲ್ಲ. ಆದರೆ ಅವನು ಕರ್ಮಾಧ್ಯಕ್ಷ.ಅವನ ಅನುಗ್ರಹದಿಂದ ಮುಕ್ತಿಯನ್ನು ಪಡೆಯಬಹುದು.
ಮಧ್ವರ ದ್ವೈತ ಮತ್ತು ದೇವರು.
ಬದಲಾಯಿಸಿನಿಂಬಾರ್ಕರು - ದ್ವೈತಾದ್ವೈತ
ಬದಲಾಯಿಸಿವಲ್ಲಭರ -ಶುದ್ಧಾದ್ವೈತ
ಬದಲಾಯಿಸಿ- ವಲ್ಲಭಾಚಾರ್ಯರ ಶುದ್ಧಾದ್ವೈತವೂ ಸಾಕಾರ ಈಶ್ವರನನ್ನು ಪ್ರತಿಪಾದಿಸುತ್ತದೆ . ಈ ಬ್ರಹ್ಮನೇ (ಕೃಷ್ಣನೇ), ಸತ್ ಚಿತ್ , ಆನಂದ ಮತ್ತು ರಸನಾಗಿದ್ದಾನೆ . ಅನೋರಣಿಯಾನ್ ಮಹತೋಮಹೀಯಾನ್ ಆಗಿರುವವನೂ ಅವನೇ. ಕರ್ತೃವೂ ಅವನೇ ಭೋಕ್ತೃವೂ ಅವನೇ ; ಈ ವಿಶ್ವ ಅವನ ಲೀಲೆ . ಅವನು ಅಧಿದೈವಿಕದಲ್ಲಿ ಪರಬ್ರಹ್ಮ , ಅಧ್ಯಾತ್ಮಿಕದಲ್ಲಿ ಅಕ್ಷರಬ್ರಹ್ಮ ; ಅಧಿಭೌತಿಕದಲ್ಲಿ ಜಗತ್ತು . ಕಾರ್ಯ ಕಾರಣಗಳು ಬೇರೆ ಅಲ್ಲವಾದುದರಿಂದ , ಜಗತ್ತು ಬ್ರಹ್ಮ ರೂಪವೇ ಆಗಿದೆ. ಕಾರಣ ಅವನು ಜಗತ್ತಿಗೆ ಉಪಾದಾನ ,ಮತ್ತು ನಿಮಿತ್ತ ಕಾರಣನಾಗಿದ್ದಾನೆ.
ಚೈತನ್ಯ ಪ್ರಭು
- ಚೈತನ್ಯರ ಪ್ರಕಾರ ಬ್ರಹ್ಮ ಅಥವಾ ಶ್ರೀಕೃಷ್ಣ ಸಚ್ಚಿದಾನಂದ ರೂಪಿ ; ಸಕಲ ಕಲ್ಯಾಣಗುಣನಿಧಿ ; ಅವನು ಬೇಧಗಳಿಂದ ಶೂನ್ಯನಾದವನು ; ಅಚಿಂತ್ಯ ; ನಕಾರಾತ್ಮಕವಾಗಿ ಕಂಡರೂ , ಏಕಾತ್ಮ ; ಸರ್ವವ್ಯಾಪಿ ; ಅವನ ಮೂರು (೪?) ಶಕ್ತಿಗಳೆಂದರೆ ಸ್ವರೂಪ ಶಕ್ತಿ , ತಟಸ್ಥ ಶಕ್ತಿ , ಜೀವಶಕ್ತಿ ಅಥವಾ ಮಾಯಾ ಶಕ್ತಿ. ಸ್ವರೂಪ ಶಕ್ತಿಯಿಂದ ಸತ್ತೆ ವ್ಯಾಪ್ತಿ , ಜ್ಞಾನ, ಆನಂದ ; ತಟಸ್ಥ ಶಕ್ತಿಯಿಂದ ಜೀವಿಗಳ ಉತ್ಪತ್ತಿ ; (ಜೀವ ಶಕ್ತಿ) ಮಾಯಾಶಕ್ತಿಯಿಂದ ಜಗತ್ತು ಉಂಟಾಗುತ್ತದೆ.ಈ ಮೂರು ಶಕ್ತಿಗಳು ಒಟ್ಟಾಗಿ -ಪರಾಶಕ್ತಿ- ಎನಿಸುತ್ತದೆ. ಸ್ವರೂಪ ಶಕ್ತಿಯಿಂದ ಜಗತ್ತಿಗೆ ನಿಮಿತ್ತ ಕಾರಣ ; ಮಾಯಾ ಶಕ್ತಿ ಮತ್ತು ಜೀವ ಶಕ್ತಿಯಿಂದ ಉಪಾದಾನ ಕಾರಣ. ಅವನು (ದೇವನು, ಬ್ರಹ್ಮ ,ಶ್ರೀಕೃಷ್ಣ ) ಅನೇಕ ಅವತಾರವೆತ್ತುತ್ತಾನೆ . ಆದರೆ ಶ್ರೀ ಕೃಷ್ಣನು ಮಾತ್ರಾ ಪರಬ್ರಹ್ಮವೇ .
ಶೈವ ಸಿದ್ಧಾಂತಗಳಲ್ಲಿ ದೇವರು
ಬದಲಾಯಿಸಿ- ಶೈವ ಸಿದ್ಧಾಂತಗಳ ಪ್ರಕಾರ ಶಿವನೇ (ಪರಬ್ರಹ್ಮ) ಪ್ರಪಂಚದ ಸೃಷ್ಟಿ -ಸ್ಥಿತಿ -ಲಯಗಳಿಗೆ ಕಾರಣ. ಅವನ ಆಣವ ಮಲದ (ಅವಿದ್ಯೆ) ಸಂಬಂಧದಿಂದ ಜಗತ್ತು ಹೊರಹೊಮ್ಮುತ್ತದೆ. ಕಾಲ-ದಂತೆ ಅವನಲ್ಲಿ ಬದಲಾವಣೆ ಇಲ್ಲ . ಅವನ ಸಂಕಲ್ಪದಿಂದ ಎಲ್ಲಾ ಬದಲಾವಣೆಗಳಾಗುತ್ತವೆ. ಜೀವಿಗಳ ಬಂಧವನ್ನು ಹರಿಸುವುದರಿಂದ ಅವನು -ಹರ ; ಮಂಗಳಕರನಾದುದರಿಂದ ಅವನು -ಶಿವ ; ಅವನು ನಿರ್ಗುಣ ; ನಿರ್ಗುಣನೆಂದರೆ ತ್ರಿಗುಣಾತೀತ ; ಪೂರ್ಣ ; ವಿಶ್ವಾತ್ಮಕ ; ವಿಶ್ವಾತೀತ ; ಸಾಕಾರನೂ ಹೌದು ; ನಿರಾಕಾರನೂ ಹೌದು . ಅವನಿಗೆ ಪಂಚ ಕೃತ್ಯಗಳುಂಟು : -ಅವು ಸೃಷ್ಟಿ , ಸ್ಥಿತಿ , ಲಯ , ತಿರೋಧಾನ , ಅನುಗ್ರಹ .
- ಕಾಶ್ಮೀರ ಶೈವ -ಪ್ರತ್ಯಭಿಜ್ಞಾ ದರ್ಶನ
- ಕಾಶ್ಮೀರ ಶೈವದ ಪ್ರಕಾರ ಶಿವನೇ ಪರಮ ತತ್ವ . ಈ ತತ್ವವು ಶಿವ-ಶಕ್ತಿಯರ ಸಾಮ್ಯ ರೂಪದ್ದು. ಅವನು ಚೈತನ್ಯ-ಎಲ್ಲದರಲ್ಲೂ ವ್ಯಾಪಿತ ; ವಿಶ್ವಾತ್ಮಕನಾಗಿ ಪ್ರತಿವಸ್ತುವಿನಲ್ಲಿದ್ದಾನೆ . ಅಲ್ಲದೆ ವಿಶ್ವೋತ್ತೀರ್ಣ , ವಿಶ್ವದ ಹೊರಗೂ ಇದ್ದಾನೆ . ಈ ಜಗತ್ತು ಶಿವನಿಂದ ಬೇರೆಯಲ್ಲ . ಅವನ ಪ್ರಧಾನ ಶಕ್ತಿಗಳು : ಚಿತ್ , ಆನಂದ , ಇಚ್ಛಾ , ಜ್ಞಾನ , ಮತ್ತು ಕ್ರಿಯಾ . ಕಾಶ್ಮೀರೀ ಶೈವವು ಅದ್ವೈತವನ್ನೇ ಹೇಳಿದರೂ ಶಿವನಿಗೆ ಕರ್ತೃತ್ವವನ್ನು ಹೇಳುತ್ತದೆ. ಅವನೇ ನಿಪುಣ ನಟನಾಗಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ .
ಪಾಶ್ಚಿಮಾತ್ಯ ತತ್ವಶಾಸ್ತ್ರ ಮತ್ತು ದೇವರು
ಬದಲಾಯಿಸಿವೈಜ್ಞಾನಿಕ ವಿಚಾರ ವಾದಿಗಳು ಅನೇಕರು "ಇಲ್ಲದ" ವಿಚಾರದಲ್ಲಿ ಅನಗತ್ಯ ದೀರ್ಘ ಚರ್ಚೆ ಅನಗತ್ಯವೆಂದು ಅಭಿಪ್ರಾಯ ಪಡುತ್ತಾರೆ ಮತ್ತು ಈ ಚರ್ಚೆಗೆ ಸಮಯ ವ್ಯರ್ಥವೆಂದು ಹೇಳುತ್ತಾರೆ . ಆದರೆ ಪಶ್ಚಿಮದ ಆಸ್ತಿಕರು ದೇವನು ಒಂದು ಸರ್ವಶಕ್ತಿಯುಳ್ಳ ದೇವಲೋಕದಲ್ಲಿರುವ ಒಂದು ವ್ಯಕ್ತಿಯೆಂದು, ಅವರ ಮತ ಗ್ರಂಥದ ಆಧಾರದ ಮೇಲೆ ನಂಬುಗೆ ಇಟ್ಟು ಒಪ್ಪಿದ್ದಾರೆ . ಅವರ ಮತಗ್ರಂಥದ ಆದಾರದ ಮೇಲೆ ದೇವರನ್ನು ಒಪ್ಪುವ ಅವರು ಡಾರ್ವಿನ್ನನ ಜೀವವಿಕಾಸ ವಾದವನ್ನೂ , ವೈಜ್ಞಾನಿಕ ವಿಶ್ವ ವಿಕಾಸ ವಾದವನ್ನೂ, ತಿರಸ್ಕರಿಸುತ್ತಾರೆ.
- ಮುಖ್ಯ ಮತಧರ್ಮ ಕ್ರಿಶ್ಚಿಯನ್ನರು ಮುಖ್ಯವಾಗಿ ಮೂರು ತತ್ವಗಳನ್ನು ಅಂತಿಮ ದೈವಿಕ ಶಕ್ತಿಗಳೆಂದು ನಂಬುತ್ತಾರೆ.
- ದೇವಲೋಕದ ಪಿತ (ದೇವ ಪಿತ) ;
- ದೇವ ಪುತ್ರ (ಏಸು ) ;
- ಪವಿತ್ರಾತ್ಮ ಅಥವಾ ಪವಿತ್ರ ಶಕ್ತಿ;
- ಎಂದು, ಈ ಮೂರು ತತ್ವಗಳುಳ್ಳ ದೇವನನ್ನು ನಂಬಬೇಕೆಂದು ವಿಧಿಸಲಾಗಿದೆ
ದೇವರು ಇದ್ದಾನೋ ಇಲ್ಲವೋ-ವಾದ-ವಿವಾದ
ಬದಲಾಯಿಸಿ- ಈಶ್ವರನ ಅಸ್ತಿತ್ವ~ ನಿರಾಕರಣೆ -ಸಮರ್ಥನೆ .
- ಈಶ್ವರನು (ದೇವನು) ಪ್ರತ್ಯಕ್ಷ ಪ್ರಮಾಣಕ್ಕೆ ವಿಷಯನಲ್ಲ (ಕಣ್ಣಿಗೆ ಕಾಣುವುದಿಲ್ಲ) .ಅದರಿಂದ ಅನುಮಾನ ಅಥವಾ ಶಬ್ದಪ್ರಮಾಣವನ್ನು ಆಶ್ರಯಿಸಿ ಈಶ್ವರನು ಇದ್ದಾನೆಂದು ನಿರೂಪಿಸಬೇಕಾಗುವುದು. ಮೀಮಾಂಸಕರಾದ ಕುಮಾರಿಲರು ಅನುಮಾನ ಪ್ರಮಾಣದಿಂದಲೂ ದೇವರಿದ್ದಾನೆಂದು ಸಾಧಿಸಲುಬರುವುದಲ್ಲವೆನ್ನುತ್ತಾರೆ .
ಅದಕ್ಕೆ ಉದಯನನ ತನ್ನ ನ್ಯಾಯ ಕುಸುಮಾಂಜಲಿಯಲ್ಲಿ , ಹೂಡುವ ವಾದವು ಪ್ರಸಿದ್ಧವಾಗಿದೆ. (ನ್ಯಾಯ ದರ್ಶನ)
- ದೇವರು ಇದ್ದಾನೆ ಎಂಬ ಸಮರ್ಥನೆಯ ವಾದ
ಉದಯನನ ಸಮರ್ಥನೆ
ಬದಲಾಯಿಸಿ- ಕಾರ್ಯಕಾರಣ ಯೋಜನದೃತ್ಯಾದೇಃ | ಪದಾತ್ ಪ್ರತ್ಯಯ ಶ್ರುತೇಃ |
- ವಾಕ್ಯಾತ್ , ಸಾಂಖ್ಯಾ ವಿಷೇಶಾಚ್ಯ ಸಾಧ್ಯೋ , ವಿಶ್ವ ವಿದವ್ಯ : ||
- ವ್ಯಾಖ್ಯಾನ :-
- ಕಾರ್ಯಾತ್ : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ; ಅವನೇ ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದ್ದಂತೆ.
- ಆಯೋಜನಾತ್ : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ, ಚೇತನ ಶಕ್ತಿ ಬೇಕು. ಅವನೇ ಈಶ್ವರ.
- ಧೃತ್ಯಾದೇ :(ಧರಿಸುವಿಕೆ): ಗ್ರಹ, ತಾರೆ, ನಕ್ಷತ್ರಗಳು ನಿಂತಿದ್ದರೆ ಅದು ಈಶ್ವರನ ಮಹಿಮೆ. ಇಲ್ಲದಿದ್ದರೆ ಎಲ್ಲಾ ನಾಶವಾಗುತ್ತಿತ್ತು.
- ಪದಾತ್ : ಪದಗಳು ಅರ್ಥವನ್ನು ಸೂಚಿಸುತ್ತವೆ. ಅದು ಅವನ ಶಕ್ತಿಯಿಂದ . ಕಲಾ ಕೌಶಲ್ಯಗಳೂ ಅವನ ಶಕ್ತಿಯಿಂದ.
- ಪ್ರತ್ಯಯತಃ : ಯಾವ ತಪ್ಪೂ ಇಲ್ಲದ ವೇದಗಳ ರಚನೆ , ಈಶ್ವರನಿಂದ ಮಾತ್ರಾ ಸಾಧ್ಯ.
- ಶ್ರುತೇ : ವೇದಗಳು ಈಶ್ವರನ ಅಸ್ತಿತ್ವವನ್ನು ಹೇಳುತ್ತವೆ.
- ವಾಕ್ಯಾತ್ : ವೇದ ವಾಕ್ಯಗಳು ವಿಧಿ -ನಿಷೇಧವನ್ನು ಹೇಳುತ್ತವೆ. ಆ ಧರ್ಮ ಪ್ರವರ್ತಕನು ಈಶ್ವರ.
- ಸಂಖ್ಯಾ ವಿಶೇಷಾತ್ : ಎರಡು ಪರಮಾಣುಗಳ ಸಂಯೋಗ , ದ್ವಣುಕ ಉತ್ಪತ್ತಿ ಸಂಖ್ಯಾದ್ವಯದಿಂದ ಆಗುತ್ತದೆ. ಈ ದ್ವಿತ ಸಂಖ್ಯೆಯ ಅಪೇಕ್ಷಾ ಬುದ್ಧಿ ಜನ್ಯ. ಅದು ಚೇತನಾ ವ್ಯಕ್ತಿಯಿಂದ ಆಗತಕ್ಕದ್ದು. ಅವನೇ ಈಶ್ವರ.
- ಅದೃಷ್ಟಾತ್ : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು , ಪ್ರೇರಿಸುವ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ ಈಶ್ವರ.(ನ್ಯಾಯ ದರ್ಶನ)
- (ಕರ್ಮಫಲವನ್ನು ಅದೃಷ್ಟ ವಸ್ತು ಪ್ರೇರೇಪಿಸುವುದು ; ಈ ಕೆಲಸವನ್ನು ಚೇತನ-ವ್ಯಕ್ತಿಯೇ ಮಾಡಬೇಕಾಗುವುದು. ಇದು ಈ ಚೇತನ ದೇವರು. ಯೋಗ ಸೂತ್ರದಂತೆ ನಮ್ಮಲ್ಲಿರುವ , ಭೂತ,ಭವಿಷ್ಯತ್,ವರ್ತಮಾನ , ಜ್ಞಾನ ಶಕ್ತಿ , ಈಶ್ವರನಿಂದಲೇ ಬಂದಿರಬಹುದು. ಅದಕ್ಕೆ ಶ್ರತಿ ಯು ಪ್ರಮಾಣ, ಅನುಮಾನ ಮತ್ತು ಶ್ರುತಿ ಇವು ಪ್ರಮಾಣ ,)
- ವೇದಾಂತಿಗಳು ಈಶ್ವರನನ್ನು ತಿಳಿಯಲು , ವೇದಗಳು ಮಾತ್ರಾ ಪ್ರಬಲ ಪ್ರಮಾಣವೆನ್ನುತ್ತಾರೆ , ಅದಕ್ಕೆ ಅನುಮಾನ ಪ್ರಮಾಣಗಳನ್ನು ನಿರಾಕರಿಸುವುದಿಲ್ಲ . ಆದರೆ ಶ್ರೀ ಶಂಕರರು , ಅನುಮಾನ ಪ್ರಮಾಣದಿಂದ , ಈ ಜಗತ್ತನ್ನು ಕಾರ್ಯವೆಂದು ಒಪ್ಪಿದರೂ , ಅದಕ್ಕೆ ಈಶ್ವರನು ಕಾರಣವೋ ಬೇರೆ ಕಾರಣವೋ ಎಂದು ನಿರ್ಧರಿಸುವುದು /ತೀರ್ಮಾನಿಸುವುದು ಕಷ್ಟವೆನ್ನುತ್ತಾರೆ. (ಬ್ರ,ಊ. ಭಾಷ್ಯ : ೨.೨) ಪ್ರಸಿದ್ಧ ಮೀಮಾಂಸಕರಾದ , ಕುಮಾರಿಲ ಭಟ್ಟರದೂ ಅದೇ ಅಭಿಪ್ರಾಯ.
ಈಶ್ವರಾಸ್ತಿತ್ವದ ನಿರಾಕರಣೆಯ ವಾದ
ಬದಲಾಯಿಸಿ- ಈಶ್ವರನ ಅಸ್ತಿತ್ವವನ್ನು ನಿರಾಕರಿಸುವವರು ಕಾರ್ಯ-ಕಾರಣ ವಾದವು ಪ್ರಬಲವಾದುದೆಂದು ಅಂಗೀಕರಿಸಿದ್ದಾರೆ. ಏಕೆಂದರೆ ದೇವರು ಇದ್ದಾನೆ ಎನ್ನುವುದಕ್ಕೆ ಹೇಗೋ ಹಾಗೆ ಇಲ್ಲವೆನ್ನುವುದಕ್ಕೂ ಅದೇ ವಾದವನ್ನು ಉಪಯೋಗಿಸುತ್ತಾರೆ.
- ಈಶ್ವರನ ನಿರಾಕರಣೆ ವಾದಗಳು
- ೧. ಕಾರ್ಯಕಾರಣವಾದದಲ್ಲಿ , ಮುಖ್ಯ ಅಂಶ ‘ಜಗತ್ತು ಒಂದು ಕಾರ್ಯ‘ (ಸೃಷ್ಟಿಸಲ್ಪಟ್ಟಿದ್ದು) ಎಂಬುದಾಗಿದೆ. ಜೈನರಲ್ಲಿ ಪ್ರಸಿದ್ಧನಾದ ಗುಣರತ್ನನು ಜಗತ್ತನ್ನು ಕಾರ್ಯವೆಂದೇ ಒಪ್ಪುವುದಿಲ್ಲ. ಏಕೆಂದರೆ ‘ಅವಯುವ‘ ಸಂಬಂಧವಾಗಿದ್ದರೆ ಮಾತ್ರಾ ಕಾರ್ಯವೆಂದು ಪರಿಗಣಿಸಬಹುದು (ಅವಯುವ=ಮೂರು ಆಯಾಮದ ವಸ್ತು /ತ್ರೀ ಡೈಮೆನ್ಶನಲ್ ಮ್ಯಾಟರ್) .ಆದರೆ ಆಕಾಶವು (ಪಂಚ ಭೂತಗಳಲ್ಲಿ ಒಂದು.) ಕಾರ್ಯವಾಗಲಾರದು ;ಎಲ್ಲಾ ವಸ್ತುಗಳಿಗೂ ಆಶ್ರಯವಾದದ್ದು . ಅಥವಾ (ವಸ್ತುಗಳು) ‘ಸಾವಯುವ‘ ವೆಂದರೆ (ಮೂಲದ್ರವ್ಯ) ಸಮವೇತ ದ್ರವ್ಯತ್ವ ಅಥವಾ ದ್ರವ್ಯದಲ್ಲಿ ದ್ರವ್ಯತ್ವ (ಎಲಿಮೆಂಟ್?)ಎಂದರೂ ಸರಿಯಾಗದು -ಮೂಲದಲ್ಲಿರುವುದು ಎಂದರೂ ಸರಿಯಾಗದು. ಬುದ್ಧಿಗೆ ಗೋಚರವೆಂದರೆ - `ಆತ್ಮ` ವು ‘ಕಾರ್ಯ‘ ವೆನ್ನಬೇಕಾಗುವುದು. ಆದ್ದರಿಂದ ಜಗತ್ತು ‘ಕಾರ್ಯ‘ ವೆಂದು ಹೇಳುವುದು ಸರಿಯಲ್ಲ.
- ಜಗತ್ತಿನ ಸೃಷ್ಟಿ ಕಾರ್ಯವಲ್ಲದಿದ್ದ ಮೇಲೆ ಅದಕ್ಕೆ ಕಾರಣವೆಂದು ಈಶ್ವರನನ್ನು ಹೇಳಲುಬರುವುದಿಲ್ಲ. ಆದ್ದರಿಂದ ಈಶ್ವರನನ್ನು ಒಪ್ಪಬೇಕಾದ್ದಿಲ್ಲ.
- ೨.ಈಶ್ವರನು ಒಬ್ಬನೇ ಜಗತ್ತನ್ನು ಸೃಷ್ಟಿಸಿದನೇ ? ಈ ವಿಶಾಲ ಜಗತ್ತು ಒಬ್ಬನಿಂದಾಗಲಾರದು . ಮನೆ ಕಟ್ಟಲು ಅನೇಕ ಜನರಿರುವಂತೆ ಜಗತ್ ಸೃಷ್ಟಿಗೆ ಅನೇಕರು ಬೇಕಾಗುವುದು. ; ಅದೂ ಸಿದ್ಧಿಸದು (ತರ್ಕಕ್ಕೆ ಒಪ್ಪದು) ಏಕೆಂದರೆ ಅವರಲ್ಲಿ ಸದಾ ಮತಬೇಧವಿದ್ದು ಕೆಲಸ ಕೆಡುವುದು.
- ೩. ಸಾಂಖ್ಯ ಸೂತ್ರದಲ್ಲಿ ‘ಈಶ್ವರಾಸಿದ್ಧೇ‘ (ಈಶ್ವರನು ಇದ್ದಾನೆಂದು ಸಾಧಿಸಲು ಸಾಧ್ಯವಿಲ್ಲ), ಎಂಬ ಮಾತಿದೆ. ಅದರ ವ್ಯಾಖ್ಯಾನ ಮಾಡುತ್ತಾ ‘ಅನಿರುದ್ಧಪಂಡಿತ‘ , -ಅವನು ಶರೀರವಿರುವವನೋ ಇಲ್ಲದವನೋ ? ಶರೀರವಿದೆಯೆಂದರೆ ಅವನಿಗೆ ಮಿತಿಗಳಿವೆ. ಶರೀರ ಹೇಗುಂಟಾಯಿತು ಎಂಬ ಪ್ರಶ್ನೆ ಏಳುವುದು . ಇಲ್ಲವೆಂದರೆ ಅವನಿಗೆ (ದೇವನಿಗೆ) ಇಚ್ಛೆಯೂ ಉಂಟಾಗದು. ಎಂದರೆ ಜಗತ್ತಿನ ಸೃಷ್ಟಿಯೂ ಅವನಿಂದಾಗದು , ಇದು ಪ್ರತಿವಾದ.
- ೪.ಈಶ್ವರನು ಸರ್ವವ್ಯಾಪಿಯಾಗಿದ್ದರೆ , ಬೇರೆಯವರಿಗೆ ಸೃಷ್ಟಿಸಲು ಎನೂ ಇಲ್ಲವೆಂದಾಗುವುದು. ಎಲ್ಲಾ ಅವನೇ, ಆದ್ದರಿಂದ ಅದು ಸರಿಯಲ್ಲ. ಹಾಗಿದ್ದರೆ ದೇವರು ನರಕದಲ್ಲೂ ಇದ್ದಾನೆ ಎಂದಂತೆ ಆಯಿತು. ಆಗ ಅದು ನರಕವೇ ಆಗದು . ನರಕದಲ್ಲಿ ಇಲ್ಲವೆಂದರೆ ಅವನು ಸರ್ವವ್ಯಾಪಿಯಾಗಲಾರ. ಆದ್ದರಿಂದ ದೇವರ ಕಲ್ಪನೆಯೇ ಸರಿಯಲ್ಲ.
- ೫. ಈಶ್ವರನು ಸ್ವತಂತ್ರನೆಂದರೆ ಅವನ ಸೃಷ್ಟಿಯಲ್ಲಿರುವವರೆಲ್ಲಾ ಸುಖಿಗಳಾಗಿರಬೇಕಿತ್ತು. ದುಃಖವನ್ನೇ ಸೃಷ್ಟಿಸುತ್ತಿರಲಿಲ್ಲ. ಸುಖ ದುಃಖಗಳು ಕರ್ಮಾಧೀನವೆಂದರೆ ಈಶ್ವರನಿಗೆ ಸ್ವತಂತ್ರ ಶಕ್ತಿ ಇಲ್ಲ ಎಂದಾಗುವುದು . ಕರ್ಮವೇ ಪ್ರಬಲವಾಗುವುದು . ಆದ್ದರಿಂದ ಸರ್ವಶಕ್ತ ದೇವರಿದ್ದಾನೆ ಎಂದು ಹೇಳುವುದು ಸರಯಲ್ಲ .
- ೬. ಈಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆಂದರೆ -ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ ? -ಎಂದು ವಿವರಿಸುವುದು ಕಷ್ಟ. ಅವನಿಗೆ ಆಸೆಗಳಿಲ್ಲ . ‘ಪೂರ್ಣಕಾಮನಾದ‘ ,(ಸಂತೃಪ್ತ ) ಅವನಿಗೆ ಸ್ವಾರ್ಥವೇನು? ಇಚ್ಛೆ ಏಕೆ ? ಅಂಥ ಅಪೇಕ್ಷೆ ಇದೆ ಎಂದಾದರೆ ಅವನಲ್ಲಿ ಏನೋ ಕೊರತೆ ಇದೆ ಎಂದಾಗುತ್ತದೆ . ಹಾಗಾಗಿ ಈಶ್ವರನನ್ನು (ಅಸ್ತಿತ್ವವನ್ನು) ನಾಸ್ತಿಕರು , ಮೀಮಾಂಸಕರು ಒಪ್ಪುವುದಿಲ್ಲ.
- ೭. ವೇದಾಂತಿಗಳು ಜಗತ್ತನ್ನು ಈಶ್ವರನ ಲೀಲೆ ಎನ್ನುತ್ತಾರೆ . ಆದರೆ ನಿರೀಶ್ವರವಾದಿಗಳು , ಅದನ್ನೊಪ್ಪುವುದಿಲ್ಲ. ತನ್ನ ಲೀಲಾ ವಿನೋದಕ್ಕಾಗಿ ದೇವನು , ಜೀವಿಗಳನ್ನು ದುಃಖ , ಕಷ್ಟ , ಕೋಟಲೆಗೆ ನೂಕಿ ತಾನು ಆನಂದ ಪಡುವುದಾದರೆ. ಅವನು ಕ್ರೂರಿಯೂ ಕರಣಾಹೀನನೂ ಆಗುತ್ತಾನೆ . ಆ ಬಗೆಯ ದೇವನನ್ನು ಒಪ್ಪಲು ಆಗುವುದಿಲ್ಲ.
- ೮. ಪ್ರಾಚೀನ ಮೀಮಾಂಸಕರು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳು ಕಟ್ಟು ಕಥೆ ಎನ್ನುತ್ತಾರೆ. ಜಗತ್ತು ತಾನಾಗಿಯೇ ಯಾವಾಗಲೂ ಇದೆ ಎನ್ನುತ್ತಾರೆ ಅದಕ್ಕೆ (ಸೃಷ್ಟಿಸಲು) ಈಶ್ವರನ ಅಗತ್ಯವಿಲ್ಲ ಎನ್ನುವುದು ಅವರ ಮತ. ವೇದಗಳು ಅನಾದಿಯಾದವು -ತಂತಾನೆ ಪ್ರಕಟವಾದವು ; ಅವು ನಿತ್ಯ ; ಕರ್ಮಫಲಗಳು ತನ್ನಿಂದ ತಾನೇ ಪ್ರವರ್ತಿಸುತ್ತವೆ . ಅದಕ್ಕೆ ಯಜಮಾನ-ಈಶ್ವರ ಬೇಕಿಲ್ಲ ಎಂಬುದು ಅವರ ಮತ . ಅವರು ದೇವರನ್ನು ಒಪ್ಪದಿದ್ದರೂ ವೇದಗಳನ್ನು ಒಪ್ಪುತ್ತಾರೆ.
- ೯ , ಅಂತ್ಯದಲ್ಲಿ ತಾರ್ಕಿಕರೆಲ್ಲಾ ಮೂಲೆಗೆ ಬಿದ್ದು , ಈಶ್ವರನ ಅಸ್ತಿತ್ವವಾದ ಗೆದ್ದು , ಧಾರ್ಮಿಕ ವಿಧಿಗಳ ಅವಶ್ಯಕತೆ ಪ್ರಬಲವಾಗಿ ಜಗತ್ತಿನಲ್ಲಿ ಬೇರೂರಿದೆ ಎನ್ನಬಹುದು .
- ೧೦. ಜೀವ-ಜಗತ್ತಿಗೆ ಕಾರಣವಾದ ಚೇತನ ಮತ್ತು ಮನಸ್ಸುಗಳಿಗೆ ಸಕಾರಣವನ್ನ ಹೇಳಲು ನಿರೀಶ್ವರವಾದಿಗಳಿಂದಲೂ ಸಾಧ್ಯವಿಲ್ಲ.
ತಾತ್ಪರ್ಯ -ಉಪಸಂಹಾರ
ಬದಲಾಯಿಸಿ- ಒಟ್ಟು ನಾಲ್ಕು ಬಗೆಯ ಈಶ್ವರನಿಗೆ ಸಂಬಂಧಿಸಿದ ವಾದಗಳು ಕಂಡುಬರುತ್ತವೆ :
- ಈಶ್ವರನಿಲ್ಲ ಜಗತ್ತು ಮಾತ್ರವಿದೆ (ಶೂನ್ಯ ವಾದ ) ;
- ಈಶ್ವರನು ಜಗತ್ತಿಗೆ ಕಾರಣ ಅವನು ಸ್ವತಂತ್ರ ಜಗತ್ತು ಅವನಿಗೆ ಅಧೀನ ;
- ಈಶ್ವರನು ಜಗತ್ತಿಗೆ ಪ್ರಭು ; ಆದರೂ ಅವನು ಸೃಷ್ಟಿ -ಸ್ಥಿತಿ-ಲಯಗಳಿಗೆ ಕಾರಣನಲ್ಲ ಕರ್ತೃತ್ವವಿಲ್ಲ. ;
- ಈಶ್ವರ ಮತ್ತು ಚಿತ್ ಶಕ್ತಿ ಎರಡೂ ಒಂದೇ
- ವಿಚಾರ ವಾದಿಗಳು ಈಶ್ವರನನ್ನು ಒಪ್ಪದೆ , ಕುಟುಂಬದ ಯಜಮಾನನ ಕಲ್ಪನೆಯಿಂದ ಈಶ್ವರ ಕಲ್ಪನೆ ಉಂಟಾಗಿರಬಹುದೆನ್ನುವರು . ಆಪತ್ತಿನಕಾಲದಲ್ಲಿ ರಕ್ಷಣೆಗೆ ಮೊರೆ ಇಡಲು ಒಂದು ಅದೃಷ್ಟ ಶಕ್ತಿಬೇಕಾಗುವುದು ; ಅದು ಮಾನವ ಮನಸ್ಸಿನ ಸ್ವಭಾವ . ಆದ್ದರಿಂದ ಸರ್ವಜ್ಞನೂ, ಸರ್ವಶಕ್ತನೂ ಬೇಕೆಂಬ ಬಯಕೆ ಈಶ್ವರ ಕಲ್ಪನೆಗೆ ಕಾರಣವೆನ್ನವವರೂ ಇದ್ದಾರೆ. ಕಡು ದುಃಖಿತನಿಗೆ - ಪರಿಹಾರವಿಲ್ಲದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದವನಿಗೆ ದೇವರೇ ಗತಿಯಲ್ಲವೇ !! - ಎಂಬುದು ಒಂದು ಅಭಿಪ್ರಾಯ . : ಓಂ ತತ್ಸತ್ :
ನೋಡಿ
ಬದಲಾಯಿಸಿಚಾರ್ವಾಕ ದರ್ಶನ | ಜೈನ ದರ್ಶನ | ಬೌದ್ಧ ದರ್ಶನ | ಸಾಂಖ್ಯ ದರ್ಶನ |
ರಾಜಯೋಗ | ನ್ಯಾಯ | ವೈಶೇಷಿಕ ದರ್ಶನ | ಮೀಮಾಂಸ ದರ್ಶನ |
ಆದಿ ಶಂಕರರು ಮತ್ತು ಅದ್ವೈತ | ಅದ್ವೈತ- ಜ್ಞಾನ-ಕರ್ಮ ವಿವಾದ | ವಿಶಿಷ್ಟಾದ್ವೈತ ದರ್ಶನ | ದ್ವೈತ ದರ್ಶನ |
ಮಾಧ್ವ ಸಿದ್ಧಾಂತ | ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ | ಭಾರತೀಯ ತತ್ವಶಾಸ್ತ್ರ ಸಮೀಕ್ಷೆ | ಭಗವದ್ಗೀತಾ ತಾತ್ಪರ್ಯ |
ಕರ್ಮ ಸಿದ್ಧಾಂತ | ವೀರಶೈವ ತತ್ತ್ವ | ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು | - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು |
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ | ಮೋಕ್ಷ | ಗೀತೆ | ಬ್ರಹ್ಮಸೂತ್ರ |
ಚಾರ್ವಾಕ ದರ್ಶನ ; ಜೈನ ಧರ್ಮ - ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ ; ಕರ್ಮ ಸಿದ್ಧಾಂತ ; ವೇದ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ
ಆಧಾರ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ