ಅವಿದ್ಯೆ
ವಿದ್ಯೆಯಲ್ಲದ್ದು ಅವಿದ್ಯೆ, ಅಜ್ಞಾನ ಎಂದರೆ ತಿಳಿಯದಿರುವುದು. ತಿಳಿಯದಿರುವುದರಿಂದ ತಪ್ಪು ತಿಳಿವಳಿಕೆ ಹುಟ್ಟುತ್ತದೆ. ಇದು ಸಾಮಾನ್ಯ ಅರ್ಥ. ಅದ್ವೈತದಲ್ಲಿ ಇದಕ್ಕೆ ವಿಶೇಷ ಅರ್ಥವಿದೆ. ಅವಿದ್ಯೆ ಬರಿಯ ಅಜ್ಞಾನವಲ್ಲ, ಈ ಲೋಕಕ್ಕೇ ಕಾರಣಭೂತವಾದುದು. ಅಂದರೆ ಈ ಲೋಕ ಲೋಕಸ್ವರೂಪವಾಗಿ ಇರುವುದು ಇದರ ದೆಸೆಯಿಂದ. ಇದಕ್ಕೆ ಎರಡು ಶಕ್ತಿಗಳಿವೆ. ಸದಾ ಇರುವುದನ್ನು ಮರೆ ಮಾಡುವುದು, ಸದಾ ಇಲ್ಲದ್ದನ್ನು ಇರುವಂತೆ ತೋರಿಸುತ್ತದೆ. ಬ್ರಹ್ಮನ್ ಸಹಾ ಇರುವುದು. ಅವಿದ್ಯೆ ಇದನ್ನು ಮರೆಮಾಡುತ್ತದೆ. ಈ ವಿಶ್ವ ಸದಾ ಬದಲಾವಣೆ ಹೊಂದತಕ್ಕದ್ದು. ಅವಿದ್ಯೆ ಇದನ್ನು ಸದಾ ಇರುವಂತೆ ತೋರಿಸುತ್ತದೆ. ಬ್ರಹ್ಮನ್ ಸದಾ ಇರುವುದು. ಅವಿದ್ಯೆ ಇದನ್ನು ಮರೆಮಾಡುತ್ತದೆ; ಈ ವಿಶ್ವ ಸದಾ ಬದಲಾವಣೆ ಹೊಂದತಕ್ಕದ್ದು. ಅವಿದ್ಯೆ ಇದನ್ನು ಸದಾ ಇರುವಂತೆ ತೋರಿಸುತ್ತದೆ. ಇದಕ್ಕೆ ಮಾಯಾಶಕ್ತಿಯೆಂದು ಹೆಸರು. ಮಾಯೆ ಈಶ್ವರನಲ್ಲಿರುವ, ಈಶ್ವರನಿಗೆ ಸೇರಿದ ಶಕ್ತಿ. ಅದು ಅವನ ಶಕ್ತಿಯೇ ಆದುದರಿಂದ ಅವನನ್ನು ಮೋಸಗೊಳಿಸಲಾರದು. ಈ ಮಾಯಾಶಕ್ತಿಯಿಂದ ಈ ವಿಶ್ವ ಹುಟ್ಟಿದೆ. ವಿಶ್ವವ್ಯಾಪಾರವೆಲ್ಲ ಮಾಯಾಜಾಲದ ಒಂದು ಭಾಗ. ಈ ಮಾಯಾಶಕ್ತಿ ಮೂಲಾವಿದ್ಯೆ. ಇದು ಒಂದಾಗಿದೆ. ಇದು ಅವ್ಯಕ್ತ. ಇದು ವ್ಯಕ್ತವಾಗಿ ಒಂದೊಂದು ವಸ್ತುವಿನಲ್ಲೂ ಮುಖ್ಯವಾಗಿ ಒಂದೊಂದು ವ್ಯಕ್ತಿಯಲ್ಲೂ ಅದಕ್ಕೆ ಸೇರಿದಂತೆ, ಅದು ಬೇರೆಯಾಗಿ ತೋರುವಂತೆ ನಡೆಸುವುದು-ತೂಲಾವಿದ್ಯೆ. ಮೂಲಾವಿದ್ಯೆ ಈಶ್ವರನನ್ನು ಬಾಧಿಸುವುದಿಲ್ಲ, ಏಕೆಂದರೆ ಅದು ಅವನಲ್ಲಿಯೇ ಅವನಿಗೆ ಅರಿಯದಂತೆ ಇದೆ. ಆದರೆ ಜೀವರಾದ ಮನುಷ್ಯರಿಗೆ ಅದು ಬೇರೆಯಾದದ್ದು. ಅದು ಅವರ ಸಮ್ಮುಖದಲ್ಲಿಲ್ಲ. ಅವರಲ್ಲಿ ಅವಿತುಕೊಂಡು ಅವರ ತಪ್ಪುತಿಳಿವಳಿಕೆಗೆ ಕಾರಣವಾಗಿದೆ. ಅದು ಅವರನ್ನು ಬಾಧಿಸುತ್ತದೆ. ಅದು ಮಾಯಾಸ್ವರೂಪವೆಂದು ತಿಳಿದಾಗ ಅವರ ಬಾಧೆ ಹರಿಯುತ್ತದೆ.