ಬಹುರಾಷ್ಟ್ರೀಯ ನಿಗಮಗಳು
ಬಹುರಾಷ್ಟ್ರೀಯ ನಿಗಮಗಳ ಉಗಮ ಮತ್ತು ಬೆಳವಣಿಗೆಯು ದ್ವಿತೀಯ ಜಾಗತಿಕ ಮಹಾಯುದ್ಧದ ನಂತರದ ವಿದ್ಯಮಾನವಾಗಿದೆ. ಬಹುರಾಷ್ಟ್ರೀಯ ನಿಗಮಗಳು[೧] ಇಂದು ಜಗತ್ತಿನಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಸುಮಾರು ಶೇ.೩೦ ರಷ್ಟನ್ನು ಬಹುರಾಷ್ಟ್ರೀಯ ನಿಗಮಗಳು ಉತ್ಪಾದಿಸುತ್ತಿವೆ ಎಂಬ ಅಂಶವನ್ನು ಗಮನಿಸಿದರೆ ವಿಶ್ವ ಆರ್ಥಿಕತೆಯಲ್ಲಿ ಅವುಗಳ ಮಹತ್ವ ಅರಿವಿಗೆ ಬರುತ್ತದೆ. ಈ ಕಂಪನಿಗಳ ಒಟ್ಟು ಮಾರಾಟಗಳು ಎಲ್ಲಾ ಪ್ರಗತಿಶೀಲ ದೇಶಗಳ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಸಮನಾಗಿದೆ. ಬಹುರಾಷ್ಟ್ರೀಯ ನಿಗಮಗಳು ಇಂದು ಅಸಾಧಾರಣ ಗಾತ್ರ ಮತ್ತು ವಿಸ್ತೃತ ಜಾಲವನ್ನು ಹೊಂದಿದ್ದು ವಿಶ್ವದಲ್ಲಿ ಅಗ್ರಮಾನ್ಯ ಸ್ಥಾನಗಳಿಸಿವೆ. ವಿವಿಧ ದೇಶಗಳ ಅಭಿವೃದ್ಧಿಯ ಚಟುವಟಿಕೆಗಳಲ್ಲಿ ಈ ನಿಗಮಗಳ ಪಾತ್ರವನ್ನು ಕಡೆಗಣಿಸದಂತಹ ಪರಿಸ್ಥಿತಿ ಇದೆ.
ಅಂತರರಾಷ್ಟ್ರೀಯ ವ್ಯಾಪಾರ ಸಿದ್ಧಾಂತ, ವಾಣಿಜ್ಯ ನೀತಿ , ವಿದೇಶಿ ವಿನಿಮಯ, ಸಂದಾಯ ಶುಲ್ಕ, ಅಭಿವೃದ್ಧಿಯ ಅಂತರರಾಷ್ತ್ರೀಯ ಅರ್ಥಶಾಸ್ತ್ರ ಮೊದಲಾದ ವಿಷಯಗಳೆಲ್ಲವೂ ಇಂದು ಬಹುರಾಷ್ಟ್ರೀಯ ನಿಗಮಗಳ ಕಾರ್ಯಾಚರಣೆಯಿಂದ ಪ್ರಾಭಾವಕ್ಕೆ ಒಳಗಾದ ವಿಷಯಗಳಾಗಿವೆ. ಬಹುರಾಷ್ಟ್ರೀಯ ನಿಗಮಗಳ ಹೆಚ್ಚಿನ ಪಾಲಿನ ಕಾರ್ಯಚರಣೆ ಪ್ರಗತಿಶೀಲ ದೇಶಗಳಿಗೆ ಮೀಸಲಾಗಿದ್ದು, ಅವು ಇಂದು ಪ್ರಪಂಚದ ಬಹುತೇಕ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ತಮ್ಮ ಕಾರ್ಯಜಾಲವನ್ನು ವಿಸ್ತರಿಸಿಕೊಂಡಿವೆ.
ಬಹುರಾಷ್ಟ್ರೀಯ ನಿಗಮ ಎಂದರೇನು?
ಬದಲಾಯಿಸಿಬಹುರಾಷ್ಟ್ರೀಯ ನಿಗಮಗಳ ಅರ್ಥವಿವರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಈ ಕಂಪನಿಗಳನ್ನು ಕುರಿತು ಸರ್ವಸಮ್ಮತವಾದ ವ್ಯಾಖ್ಯಾನವೊಂದು ದೊರಕುವುದು ದುರ್ಲಭ. ಬಹುರಾಷ್ಟ್ರೀಯ ನಿಗಮಗಳು ಇಂದು ಬಹುರಾಷ್ಟ್ರೀಯ ಉದ್ಯಮ, ಅಂತರಾಷ್ಟ್ರೀಯ ನಿಗಮಗಳು, ಗೋಳಾವೃತ ನಿಗಮಗಳು, ಟ್ರಾನ್ಸ್-ನ್ಯಾಷನಲ್ ಕಾರ್ಪೋರೇಷನ್[೨] ಹಾಗೂ ಇನ್ನೂ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟಿವೆ. ಯಾವುದೇ ಒಂದು ಕಂಪನಿ ಅಥವಾ ನಿಗಮ ಒಂದಕ್ಕಿಂತ ಹೆಚ್ಚಿನ ದೇಶಗಳಲ್ಲಿ ನೇರ ವಿದೇಶಿ ಹೂಡಿಕೆಯ ಮುಖೇನ ಉತ್ಪಾದನಾ ಸೌಲಭ್ಯಗಳನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಅದು ಬಹುರಾಷ್ಟ್ರೀಯ ನಿಗಮವಾಗುತ್ತದೆ.[೩] ಯಾವುದೋ ಒಂದು ದೇಶದಲ್ಲಿ ತನ್ನ ನೆಲೆಯನ್ನು ಅಥವಾ ಆಡಳಿತ ನಿರ್ವಹಣ ಕೇಂದ್ರ ಸ್ಥಾನವನ್ನು ಹೊಂದಿದ್ದು ಜಗತ್ತಿನ ಇತರೆ ಹಲವು ದೇಶಗಳಲ್ಲಿ ಉದ್ಯಮ ಕಾರ್ಯಚರಣೆಯನ್ನು ನಡೆಸುತ್ತಿರುವ ಬೃಹತ್ ಉದ್ಯಮ ಸಂಸ್ಥೆಗಳೇ ಬಹುರಾಷ್ಟ್ರೀಯ ಕಂಪನಿ ಅಥವಾ ನಿಗಮಗಳು.[೩]
ಸಾಲ್ವಟೋರ್ ಅವರ ಪ್ರಕಾರ ಬಹುರಾಷ್ಟ್ರೀಯ ನಿಗಮ ಎಂದರೆ, "ವಿವಿಧ ರಾಷ್ಟ್ರಗಳಲ್ಲಿ ಉತ್ಪಾದನಾ ಸೌಲಭ್ಯಗಳ ಒಡೆತನ, ಹತೋಟಿ ಅಥವಾ ನಿರ್ವಹಣೆ ಹೊಂದಿರುವ ಉದ್ಯಮಗಳಾಗಿವೆ." ಜೆ.ಎಚ್.ಡನ್ನಿಂಗ್ ಅವರ ಅಭಿಪ್ರಾಯದಲ್ಲಿ, "ಒಂದಕ್ಕಿಂತ ಹೆಚ್ಚಿನ ದೇಶದಲ್ಲಿ ಆದಾಯ ಉತ್ಪತ್ತಿ ಮಾಡುವ ಆಸ್ತಿಪಾಸ್ತಿಗಳ ಮೇಲೆ ಒಡೆತನ ಮತ್ತು ಹತೋಟಿ ಹೊಂದಿರುವ ಯಾವುದೇ ಉದ್ಯಮ "ಬಹುರಾಷ್ಟ್ರೀಯ ನಿಗಮವಾಗುತ್ತದೆ. ಜೇಮ್ಸ್ ಸಿ.ಬೇಕರ್ ಅವರು ಬಹುರಾಷ್ಟ್ರೀಯ ನಿಗಮವನ್ನು, [೪][೫]
೧ "ಹಲವು ರಾಷ್ಟ್ರಗಳಲ್ಲಿ ನೇರ ಹೂಡಿಕೆಯ ಅಸ್ತಿಭಾರ ಹೊಂದಿರುವ,
೨ ವಿದೇಶಿ ಚಟುವಟಿಕೆಗಳಿಂದ ಸಾಮಾನ್ಯವಾಗಿ ಶೇಕಡ ೨೦ ರಿಂದ ೫೦ ರಷ್ಟು ನಿವ್ವಳ ಲಾಭ ಸಂಪಾದಿಸುವ ಮತ್ತು
೩ ಜಗತ್ತಿನ ಯಾವುದೇ ಭಾಗದಲ್ಲಿ ಲಭ್ಯವಿರುವ ಪರ್ಯಾಯಗಳ ಆಧಾರದಲ್ಲಿ ತನ್ನ ಧೋರಣೆ ನಿರ್ಣಯಗಳನ್ನು ಕೈಗೊಳ್ಳುವ ಆಡಳಿತ ಹೊಂದಿರುವ ಒಂದು ನಿಗಮ" ಎಂದು ವ್ಯಾಖ್ಯಾನಿಸಿದ್ದಾರೆ.
ವಿವಿಧ ವಿದ್ವಾಂಸರು ಬಹುರಾಷ್ಟ್ರೀಯ ನಿಗಮಗಳ ಬಗ್ಗೆ ತಮ್ಮ ವ್ಯಾಖ್ಯಾನಗಳನ್ನು ನೀಡುವ ವೇಳೆ ಅವುಗಳ ಗಾತ್ರ, ವಿಸ್ತರಣೆ ಮತ್ತು ಹೂಡಿಕೆಯ ಪ್ರಮಾಣಕ್ಕೆ ಪ್ರಾಶಸ್ತ್ಯ ನೀಡಲೆತ್ನಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ನಿಗಮವು ಬಹುರಾಷ್ಟ್ರೀಯ ನಿಗಮ ಎಂದು ಪರಿಗಣಿತವಾಗಬೇಕಾದರೆ ಅದು ವಾರ್ಷಿಕ ೧೦೦ ದಶಲಕ್ಷ ಡಾಲರುಗಳಿಗಿಂತ ಅಧಿಕ ಪ್ರಮಾಣದ ನಿವ್ವಳ ಮಾರಾಟವನ್ನು ಹೊಂದಿ ಎರಡಕ್ಕಿಂತ ಹೆಚ್ಚಿನ ರಾಷ್ಟ್ರಗಳಲ್ಲಿ ವಿಸ್ತರಣೆಗೊಂಡು ಅಂತರರಾಷ್ಟ್ರೀಯ ಲಕ್ಷಣ ಹೊಂದಿರಬೇಕಾಗುತ್ತದೆ.
ಬಹುರಾಷ್ಟ್ರೀಯ ನಿಗಮವು ಸಾಮಾನ್ಯವಾಗಿ ತನ್ನ ಕಾರ್ಯಚರಣೆಯ ಕೇಂದ್ರ ಸ್ಥಾನವನ್ನು ಯಾವುದೋ ಒಂದು ಮುಂದುವರಿದ ದೇಶದಲ್ಲಿ ಹೊಂದಿರುತ್ತದೆ ಮತ್ತು ಅದರ ಕಾರ್ಯಚರಣೆಯನ್ನು ಇತರೆ ಮುಂದುವರಿದ ಮತ್ತು ಮುಂದುವರಿಯುತ್ತಿರುವ ದೇಶಗಳಲ್ಲಿ ವಿಸ್ತರಿಸಿಕೊಂಡಿರುತ್ತದೆ. ಬಹುರಾಷ್ಟ್ರೀಯ ನಿಗಮವು ಯಾವ ದೇಶದಲ್ಲಿ ಕೇಂದ್ರ ಸ್ಥಾನ ಅಥವಾ ನೆಲೆಯನ್ನು ಹೊಂದಿರುತ್ತದೆಯೋ ಆ ದೇಶವನ್ನು "ಸ್ವದೇಶ" ಎಂತಲೂ, ಯಾವ ದೇಶದಲ್ಲಿ ಅದು ತನ್ನ ಕಾರ್ಯಚರಣೆಯನ್ನು ಹೊಂದಿರುತ್ತದೆಯೋ ಆ ದೇಶವನ್ನು "ಅತಿಥೇಯ ದೇಶ" ಎಂದೂ ಕರೆಯಲಾಗುತ್ತದೆ.
ನಿಜ ಅರ್ಥದಲ್ಲಿ ಬಹುರಾಷ್ಟ್ರೀಯ ನಿಗಮ ಎಂದರೆ
೧ ತನ್ನ ಎಲ್ಲಾ ಅಂಗಸಂಸ್ಥೆಗಳಿಗೆ ಒಂದು ಗುರಿ ಅಥವಾ ಉದ್ದೇಶವನ್ನು ಈಡೇರಿಸಲು ಪ್ರಯತ್ನಿಸುವ ಸಂಘಟನೆ,
೨ ಇಡೀ ವಿಶ್ವವನ್ನೇ ತನ್ನ ಕಾರ್ಯಚರಣೆಯ ಪ್ರದೇಶವನ್ನಾಗಿ ಇಟ್ಟುಕೊಳ್ಳಬಯಸುತ್ತದೆ ಹಾಗೂ
೩ ಈ ಎರಡು ಉದ್ದೇಶಗಳನ್ನು ಈಡೇರಿಸಲು ಅಗತ್ಯವಾಗಿರುವ ಮಾರ್ಗವನ್ನು ಅನುಸರಿಸಿ ತನ್ನ ಎಲ್ಲಾ ಕಾರ್ಯಗಳನ್ನು ಸಂಯೋಜಿಸುತ್ತದೆ.
ಈ ನಿಗಮಗಳು ಅತಿಥೇಯ ದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಉತ್ಪಾದನೆಯನ್ನು ಕೈಗೊಳ್ಳುತ್ತವೆ. ಹಾಗೆ ಉತ್ಪಾದನೆಯನ್ನು ಮಾಡುವಾಗ ಸ್ವದೇಶದ ಬಂಡವಾಳವನ್ನು ಹೂಡಿ ಉದ್ಯಮಗಳನ್ನು ಸ್ಥಾಪಿಸುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ಮುಖ್ಯವಾಗಿ ಖನಿಜವನ್ನು ಹೊರ ತೆಗೆಯುವ ಕಾರ್ಯ, ಟೀ, ರಬ್ಬರ್, ಕಾಫಿ ಮತ್ತು ಕೋಕೋ ಬೇಸಾಯ, ರಾಸಾಯನಿಕ ಪದಾರ್ಥಗಳು, ತೈಲಶುದ್ದೀಕರಣ, ಮೃದುಪೇಯಗಳು, ಎಲೆಕ್ಟ್ರಾನಿಕ್ಸ್ ಸರಕುಗಳು ಹಾಗೂ ಇನ್ನೂ ಹಲವು ಸರಕುಗಳ ಉತ್ಪಾದನೆಯಲ್ಲಿ ತೊಡಗಿವೆ.
ಬಹುರಾಷ್ಟ್ರೀಯ ನಿಗಮಗಳ ಬೆಳವಣಿಗೆಗೆ ಮುಖ್ಯವಾದ ಕಾರಣಗಳೆಂದರೆ ಇವುಗಳು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದಿದ್ದು ಇವುಗಳ ಉತ್ಪನ್ನಗಳು ಶ್ರೇಷ್ಠ ಮಟ್ಟವಾಗಿವೆ. ಈ ಕಂಪನಿಗಳು ಬೃಹತ್ ಪ್ರಮಾಣದ ಸಂಪನ್ಮೂಲವನ್ನು ಹೊಂದಿದ್ದು, ಆರ್ಥಿಕವಾಗಿ ತುಂಬಾ ಪ್ರಬಲವಾಗಿವೆ ಹಾಗೂ ತಾಂತ್ರಿಕವಾಗಿ ತುಂಬಾ ಬೆಳವಣಿಗೆ ಹೊಂದಿವೆ. ಈ ನಿಗಮಗಳು ಸಂಶೋಧನೆ ಮತ್ತು ಅಭಿವೃದ್ಧಿಯ ಕೆಲಸಗಳಲ್ಲಿ ವಿಶೇಷ ಆಸಕ್ತಿ ಹೊಂದಿವೆ.
ಬಹುರಾಷ್ಟ್ರೀಯ ನಿಗಮಗಳ ಪ್ರಾಬಲ್ಯ
ಬದಲಾಯಿಸಿಬಹುರಾಷ್ಟ್ರೀಯ ನಿಗಮಗಳು ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಶೇ.೩೦ ರಷ್ಟನ್ನು ತಾವೇ ಉತ್ಪಾದಿಸುತ್ತಿವೆ, ಜಗತ್ತಿನ ಅನೇಕ ದೇಶಗಳ ಒಟ್ಟು ದೇಶಿಯ ಉತ್ಪನ್ನವು ಈ ಬಹುರಾಷ್ಟ್ರೀಯ ಕಂಪನಿಗಳ ವಾರ್ಷಿಕ ವಹಿವಾಟುಗಳ ಪ್ರಮಾಣಕ್ಕಿಂತ ಕಡಿಮೆ ಇದೆ. ಒಂದು ದಶಲಕ್ಷ ಜನಸಂಖ್ಯೆಗಿಂತಲೂ ಹೆಚ್ಚಿರುವ ಜಗತ್ತಿನ ೧೦೧ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತ, ಚೈನಾ, ಮೆಕ್ಸಿಕೋ, ಬ್ರೆಜಿಲ್, ಅರ್ಜೆಂಟೈನಾ, ಇಂಡೋನೇಷಿಯಾ, ಟರ್ಕಿ, ರಷ್ಯಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಮಾತ್ರ.ಜಗತ್ತಿನಲ್ಲೇ ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಯಾದ ಅಮೆರಿಕಾದ ಸಿಟಿ ಗ್ರೂಪ್ ಕಂಪನಿಯ ವಾರ್ಷಿಕ ಮಾರಾಟಕ್ಕಿಂತ ಅವುಗಳ ದೇಶಿಯ ಉತ್ಪನ್ನ ಜಾಸ್ತಿ ಇದೆ.
ಕೆಲವು ಮುಂದುವರಿದ ದೇಶಗಳ ಒಟ್ಟು ದೇಶಿಯ ಉತ್ಪನ್ನ ಕೂಡ ಈ ಕಂಪನಿಯ ಮಾರಾಟ ಮೌಲ್ಯದಷ್ಟಿಲ್ಲ. ವಿಶ್ವಸಂಸ್ಥೆಯ ೨೦೦೯ರ ಜಾಗತಿಕ ಹೂಡಿಕೆಯ ವರದಿಯ ಪ್ರಕಾರ ೮೨೫೦೩ಕ್ಕಿಂತಲೂ ಹೆಚ್ಚು ಮೂಲ ಪೋಷಕ ಟ್ರಾನ್ಸ್ ನ್ಯಾಷನಲ್ ಕಾರ್ಪೋರೇಷನ್‌ಗಳಿದ್ದು, ಅವುಗಳು ೮೦೭೩೬೩ ಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದ್ದವು. ಇದೇ ವರದಿಯ ಪ್ರಕಾರ ೨೦೦೮ ರಲ್ಲಿ ಒಟ್ಟರೆಯಾಗಿ ೮೮೯೪೧೬ ಬಹುರಾಷ್ಟ್ರೀಯ ನಿಗಮಗಳು ಕಾರ್ಯನಿರ್ವಹಿಸುತ್ತಿದ್ದವು.
೨೦೦೯ರಲ್ಲಿನ ಮೂರು ಅತ್ಯಂತ ದೊಡ್ಡ ಬಹುರಾಷ್ಟ್ರೀಯ ನಿಗಮಗಳೆಂದರೆ:
- ಸಿಟಿ ಗ್ರೂಪ್[೬]
- ಅಲಿಯಂಜ್ ಎಸ್.ವಿ
- ABN ಅಮ್ರೋ[೭]
ಹೆಚ್ಚಿನ ಬಹುರಾಷ್ಟ್ರೀಯ ಕಂಪನಿಗಳಿಗೆ ಅಮೆರಿಕಾ ಮತ್ತು ಯೂರೋಪ್ ಪ್ರಮುಖ ನೆಲೆಯಾಗಿದೆ. ಆದರೆ ಇತ್ತೀಚೆಗೆ ಬೇರೆ ರಾಷ್ಟ್ರಗಳಲ್ಲೂ ಕೂಡ ಈ ಕಂಪನಿಗಳು ಹುಟ್ಟಿಕೊಂಡಿವೆ. ೧೯೭೦ ಮತ್ತು ೧೯೮೦ರ ಅವಧಿಯಲ್ಲಿ ಜಪಾನಿನ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಿನ ಅಭಿವೃದ್ಧಿ ಸಾಧಿಸಿವೆ. ೧೯೯೧ರ ಅಂದಾಜಿನ ಪ್ರಕಾರ ಜಗತ್ತಿನ ಹತ್ತು ಬಹುದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಜಪಾನ್ ದೇಶಕ್ಕೆ ಸಂಬಂಧಿಸಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ದಕ್ಷಣ ಕೊರಿಯಾ ಮತ್ತು ತೈವಾನ್ ದೇಶಗಳಲ್ಲೂ ಕೂಡ ಬಹುರಾಷ್ಟ್ರೀಯ ಕಂಪನಿಗಳು ಇತ್ತೀಚೆಗೆ ಬೆಳೆಯುತ್ತಿರುವುದು ಕಂಡುಬಂದಿದೆ.
ಇತ್ತೀಚಿನ ದಿನಗಳಲ್ಲಿ ಹಿಂದುಳಿದ ದೇಶಗಳಲ್ಲಿನ ಆರ್ಥಿಕ ಉದಾರೀಕರಣ ನೀತಿಯಿಂದಾಗಿ ವಿದೇಶಿ ನೇರ ಹೂಡಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಯು ಹೆಚ್ಚಾಗಿ ಕೇಂದ್ರೀಕೃತವಾಗಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದರೆ-ಮೆಕ್ಸಿಕೋ,ಬ್ರೆಜಿಲ್,ಚೈನಾ,ಇಂಡಿಯ,ಹಾಂಕಾಂಗ್,ಫಿಲಿಫೈನ್ಸ್,ಸಿಂಗಪುರ ಮತ್ತು ದಕ್ಷಿಣ ಕೊರಿಯಾ. ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆ ಇಂದಿಗೂ ಕೂಡ ಮುಂದುವರಿದ ದೇಶಗಳಲ್ಲೇ ಜಾಸ್ತಿ ಇದ್ದು ವಿವಿಧ ಕಾರಣಗಳಿಂದಾಗಿ ಹಿಂದುಳಿದ ದೇಶಗಳಲ್ಲಿ ಅದು ಕಡಿಮೆ ಪ್ರಮಾಣದಲ್ಲೇ ಇದೆ. ಇಂದಿಗೂ ಕೂಡ ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯವೇ ಮುಂದುವರಿದಿದೆ.
ಹೂಡಿಕೆಯ ಉದ್ದೇಶಗಳು
ಬದಲಾಯಿಸಿಬಹುರಾಷ್ಟ್ರೀಯ ನಿಗಮಗಳು ವಿದೇಶಿ ಹೂಡಿಕೆಗೆ ಮುಂದಾಗುತ್ತಿರುವುದಕ್ಕೆ ಅನೇಕ ಕಾರಣ ಮತ್ತು ಉದ್ದೇಶಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
೧ ಸುಂಕ ಅಥವಾ ತೆರಿಗೆ ನಿಯಂತ್ರಣಗಳಿಂದ ತಪ್ಪಿಸಿಕೊಳ್ಳುವುದು.[೮]
೨ ಅತಿಥೇಯ ದೇಶಗಳಲ್ಲಿ ಲಭ್ಯವಿರುವ ಅಗ್ಗದ ಶ್ರಮ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನಾ ವೆಚ್ಚವನ್ನು ತಗ್ಗಿಸುವುದು.
೩ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು ಪೈಪೊಟಿಯನ್ನು ಎದುರಿಸುವುದು.
೪ ಅತಿಥೇಯ ದೇಶಗಳ ಸರ್ಕಾರೀ ನಿಯಂತ್ರಣಕ್ಕೆ ಹೊಂದಿಕೊಳ್ಳುವುದು.
೫ ಸ್ವದೇಶದ ನಿಯಂತ್ರಣಗಳಿಂದ ತಪ್ಪಿಸಿಕೊಳ್ಳುವುದು.
೬ ಅತಿಥೇಯ ದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಳ್ಳುವುದು.
೭ ಅತಿಥೇಯ ದೇಶಗಳಲ್ಲಿ ಲಭ್ಯವಿರುವ ತೆರಿಗೆ ವಿನಾಯ್ತಿಗಳನ್ನು ಬಳಸಿಕೊಳ್ಳುವುದು.
ಬಹುರಾಷ್ಟ್ರೀಯ ನಿಗಮಗಳ ಪಾತ್ರ ಅಥವಾ ಗುಣಗಳು
ಬದಲಾಯಿಸಿಬಹುರಾಷ್ಟ್ರೀಯ ನಿಗಮಗಳು ದೇಶವೊಂದರ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತವೆ.[೯] ಅವುಗಳು ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತವೆಯೆಂದು ವಾದಿಸಲಾಗಿದೆ.[೧೦] ಬಹುರಾಷ್ಟ್ರೀಯ ಕಂಪನಿಗಳಿಂದ ಅತಿಥೇಯ ದೇಶಗಳಿಗೆ ಆಗುವ ಅನುಕೂಲಗಳು ಅಥವಾ ಉಪಯೋಗಗಳು ಹೀಗಿವೆ:
ಹೂಡಿಕೆಯಲ್ಲಿ ಹೆಚ್ಚಳ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತಿಥೇಯ ದೇಶಗಳಲ್ಲಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಬಂಡವಾಳ ಕೊರತೆಯನ್ನು ಅನುಭವಿಸುತ್ತಿರುವ ಈ ದೇಶಗಳಲ್ಲಿ ಉಳಿತಾಯ ಮತ್ತು ಹೂಡಿಕೆಗಳು ತುಂಬಾ ಕೆಳಮಟ್ಟದಲ್ಲಿವೆ. ಬಹುರಾಷ್ಟ್ರೀಯ ಕಂಪನಿಗಳು ನೇರ ವಿದೇಶಿ ಹೂಡಿಕೆಯ ಮೂಲಕ ಈ ದೇಶಗಳಲ್ಲಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ.
ಆದಾಯ ಮತ್ತು ಉದ್ಯೋಗಾವಕಾಶಗಳ ವೃದ್ಧಿ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತಿಥೇಯ ದೇಶಗಳಲ್ಲಿ ತಮ್ಮ ಬಂಡವಾಳವನ್ನು ಹೂಡಲು ಮುಂದಾಗುವುದರಿಂದ ಅಲ್ಲಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಲು ಸಾಧ್ಯವಾಗುತ್ತವೆ. ಹೆಚ್ಚು ಹೆಚ್ಚು ಉದ್ಯಮಗಳನ್ನು ಸ್ಥಾಪಿಸಲಾಗುವುದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ.
ನಿರ್ವಹಣಾ ಕ್ರಾಂತಿ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತಿಥೇಯ ದೇಶಗಳಲ್ಲಿನ ಉದ್ಯಮ ನಿರ್ವಹಣಾ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತವೆ. ನಿಪುಣ ಸಂಘಟನಾಕಾರರು ಮತ್ತು ನಿರ್ವಹಣಾಕಾರರನ್ನು ಈ ಕಂಪನಿಗಳು ನೇಮಿಸಿಕೊಂಡು ಉದ್ಯಮ ನಿರ್ವಹಣೆಗೆ ಪ್ರಯತ್ನಿಸುವುದರಿಂದ ಅತಿಥೇಯ ದೇಶಗಳ ಉದ್ಯಮ ನಿರ್ವಹಣಾ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲು ಕಾರಣವಾಗುತ್ತವೆ.
ತಂತ್ರಜ್ಞಾನ ವರ್ಗಾವಣೆ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಸ್ವದೇಶಗಳಿಂದ ಅತಿಥೇಯ ದೇಶಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸುವ ವಾಹಕಗಳಾಗಿವೆ. ಅವುಗಳು ಅತಿಥೇಯ ದೇಶಗಳಿಗೆ ಬಂಡವಾಳ ಹೂಡಿಕೆಗೆ ಬರುವ ವೇಳೆಗೆ ತಮ್ಮ ದೇಶದ ಅತ್ಯಾಧುನಿಕ ತಂತ್ರಜ್ಞಾನವನ್ನು ತಂದು ಬಳಸಿಕೊಳ್ಳಲು ಪ್ರಯತ್ನಿಸುವೆಯಾದ್ದರಿಂದ ಅತಿಥೇಯ ದೇಶಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಅವಕಾಶ ಮಾಡಿ ಕೊಡುತ್ತವೆ. ಇದರಿಂದಾಗಿ ಈ ದೇಶಗಳಲ್ಲಿ ತಾಂತ್ರಿಕ ಕೌಶಲ್ಯ ಹೆಚ್ಚುತ್ತದೆ.
ಉತ್ಪಾದನಾ ವೆಚ್ಚದ ಸಮಾನತೆ
ಬದಲಾಯಿಸಿಸಾಗಣೆ ವೆಚ್ಚ, ತೆರಿಗೆಗಳು, ವೇತನ ಮುಂತಾದ ಕಾರಣಗಳಿಂದಾಗಿ ವಿವಿಧ ದೇಶಗಳಲ್ಲಿನ ಉತ್ಪಾದನಾ ವೆಚ್ಚ ಬೇರೆ ಬೇರೆಯಾಗಿರುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ತೊಡಗಿಸಿ ಉತ್ಪಾದನೆ ಮಾಡಲು ಪ್ರಯತ್ನಿಸುವುದರಿಂದ ಸಾಗಣೆ ವೆಚ್ಚದ ಪ್ರಮಾಣವನ್ನು ತಗ್ಗಿಸಿ ಜಗತ್ತಿನಾದ್ಯಂತ ಉತ್ಪಾದನೆಯ ವೆಚ್ಚವೂ ಸಮವಾಗುವಂತೆ ಮಾಡುತ್ತವೆ.
ರಫ್ತುಗಳ ಹೆಚ್ಚಳ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತಿಥೇಯ ದೇಶಗಳಲ್ಲಿ ಉತ್ಪಾದನೆಯನ್ನು ಕೈಗೊಳ್ಳುವುದರಿಂದ ಅವುಗಳ ರಫ್ತುಗಳು ಹೆಚ್ಚಲು ಕಾರಣವಾಗುತ್ತವೆ. ಅಷ್ಟೇ ಅಲ್ಲದೆ ಈ ದೇಶಗಳ ಆಮದು ಕೋರಿಕೆಗಳು ಕಡಿಮೆಯಾಗುವುದರಿಂದ ಅವುಗಳ ಪಾವತಿ ಶಿಲ್ಕಿನ ಪರಿಸ್ಥಿತಿ ಸುಧಾರಿಸುತ್ತದೆ.
ಅರ್ಥವ್ಯವಸ್ಥೆಗಳ ಸಮ್ಮಿಲನ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಉತ್ಪಾದನೆಯಲ್ಲಿ ತೊಡಗುವುದರಿಂದ ಈ ಕಂಪನಿಗಳು ವಿವಿಧ ರಾಷ್ಟ್ರದ ಆರ್ಥಿಕ ವ್ಯವಸ್ಥೆಗಳ ವ್ಯಾಪಕ ಸಂಘಟನೆಗೆ ಕಾರಣವಾಗುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕಂಪನಿಗಳು ವಿವಿಧ ದೇಶಗಳ ಸರಕುಗಳನ್ನು ತಂದು ಮಾರಲು ಪ್ರಯತ್ನಿಸುತ್ತವೆ.
ಸಂಶೋಧನೆ ಮತ್ತು ಅಭಿವೃದ್ಧಿ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅಗಾಧ ಸಂಪನ್ಮೂಲವನ್ನು ಹೊಂದಿರುತ್ತವೆಯಾದ್ದರಿಂದ, ಇವುಗಳು ಹೊಸ ಹೊಸ ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳಲ್ಲಿ ತೊಡಗುತ್ತವೆ.ಅತಿಥೇಯ ದೇಶಗಳಲ್ಲಿ ಈ ಕಂಪನಿಗಳು ವಿವಿಧ ರೀತಿಯ ಸಂಶೋಧನೆ ಮತ್ತು ಅವಿಷ್ಕಾರಗಳಲ್ಲಿ ತೊಡಗುತ್ತವೆಯಾದ್ದರಿಂದ ಈ ದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ಪಾದನಾ ವ್ಯವಸ್ಥೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಇದರಿಂದಾಗಿ ಅತಿಥೇಯ ರಾಷ್ಟ್ರಗಳಲ್ಲಿ ಹೊಸ ಹೊಸ ಸರಕುಗಳು ಲಭ್ಯವಾಗುವಂತಾಗುತ್ತದೆ.
ಸ್ವದೇಶಿ ಉದ್ಯಮಗಳಿಗೆ ಉತ್ತೇಜನ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಾರ್ಯಚರಣೆಗೆ ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ತಮ್ಮ ಕಾರ್ಯಸಾಧನೆಗೆ ಅನುಕೂಲ ವೀಯುವ ಅತಿಥೇಯ ದೇಶಗಳ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಹೀಗೆ ಪ್ರೋತ್ಸಾಹ ನೀಡುವುದರಿಂದ ಅತಿಥೇಯ ರಾಷ್ಟ್ರಗಳಲ್ಲಿ ಸ್ವದೇಶಿ ಉದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತವೆ. ಈ ರಾಷ್ಟ್ರಗಳಲ್ಲಿನ ಉದ್ಯಮಶೀಲತೆಗೂ ಉತ್ತೇಜನ ದೊರೆಯುತ್ತದೆ.
ಏಕಸ್ವಾಮ್ಯದ ನಿರ್ಮೂಲನೆ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತಿಥೇಯ ದೇಶದಲ್ಲಿ ಪೈಪೋಟಿಯ ಬೆಳವಣಿಗೆಗೆ ಕಾರಣವಾಗಿ ಏಕಸ್ವಾಮ್ಯ ಉತ್ಪಾದನೆ ಪರಿಸ್ಥಿತಿಯ ನಿರ್ಬಂಧಕ್ಕೆ ಅವಕಾಶ ಮಾಡುತ್ತವೆ. ಏಕೆಂದರೆ ಅತಿಥೇಯ ದೇಶಗಳಲ್ಲಿ ಸ್ವದೇಶಿ ಉದ್ಯಮಗಳು ಬಹುರಾಷ್ಟ್ರೀಯ ಕಂಪನಿಗಳ ಸರಕುಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಇದರಿಂದಾಗಿ ಈ ದೇಶಗಳಲ್ಲಿನ ಅನುಭೋಗಿಗಳಿಗೆ ಉತ್ತಮ ಗುಣಮಟ್ಟದ ಸರಕುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತಾಗುತ್ತದೆ.
ಬಂಡವಾಳದ ವರ್ಗಾವಣೆ
ಬದಲಾಯಿಸಿಬಹುರಾಷ್ಟ್ರೀಯ ನಿಗಮಗಳು ವಿಪುಲ ಪ್ರಮಾಣದ ಬಂಡವಾಳವನ್ನು ಹೊಂದಿರುತ್ತವೆ. ಅವು ತಮ್ಮ ನೇರ ಹೂಡಿಕೆಯ ಮೂಲಕ ಬಂಡವಾಳ ಕೊರತೆ ಅನುಭವಿಸುತ್ತಿರುವ ಅಭಿವೃದ್ಧಿಶೀಲ ದೇಶಗಳಿಗೆ ಬಂಡವಾಳ ಲಭ್ಯವಾಗುವಂತೆ ಮಾಡುತ್ತವೆ.
ಮಾರುಕಟ್ಟೆ ಅಭಿವೃದ್ಧಿ
ಬದಲಾಯಿಸಿಬಹುರಾಷ್ಟ್ರೀಯ ನಿಗಮಗಳು ಅತಿಥೇಯ ದೇಶಗಳಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ವಿಶೇಷವಾದ ಕೊಡುಗೆ ಸಲ್ಲಿಸುತ್ತವೆ. ಅವುಗಳು ತಮ್ಮ ಉತ್ಪಾದಿತ ಸರಕಿಗೆ ವಿಸ್ತೃತ ಮಾರುಕಟ್ಟೆಯನ್ನು ಪಡೆಯುವ ಸಲುವಾಗಿ ವಿಶಿಷ್ಟ ಮಾರಾಟ ಮತ್ತು ಪ್ರಚಾರ ತಂತ್ರಗಳಲ್ಲಿ ತೊಡಗುತ್ತವೆ.
ಸಂಪನ್ಮೂಲಗಳ ಸದುಪಯೋಗ
ಬದಲಾಯಿಸಿತಮ್ಮ ಬೃಹತ್ ಬಂಡವಾಳ ಹೂಡಿಕೆಯ ಮೂಲಕ ಬಹುರಾಷ್ಟ್ರೀಯ ನಿಗಮಗಳು ಮಾನವ ಸಂಪನ್ಮೂಲದ ಪೂರ್ಣ ಅಭಿವೃದ್ಧಿಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದುಪಯೋಗಕ್ಕೆ ಕಾರಣವಾಗುತ್ತವೆ.
ಮೂಲ ಸೌಕರ್ಯ ನಿರ್ಮಾಣ
ಬದಲಾಯಿಸಿಅಭಿವೃದ್ಧಿಶೀಲ ರಾಷ್ಟ್ರಗಳು ಇಂಧನ, ವಿದ್ಯುಚ್ಛಕ್ತಿ, ರಸ್ತೆ, ಸಾರಿಗೆ, ಸಂಪರ್ಕ, ನೀರಾವರಿ, ಶಿಕ್ಷಣ, ವೈದ್ಯಕೀಯ ಮುಂತಾದ ಮೂಲ ಸೌಕರ್ಯಗಳ ತೀವ್ರ ಅಭಾವವನ್ನು ಎದುರಿಸುತ್ತಿವೆ. ಬಹುರಾಷ್ಟ್ರೀಯ ನಿಗಮಗಳು ತಮ್ಮ ಬೃಹತ್ ಬಂಡವಾಳ ಹೂಡಿಕೆಯ ಮೂಲಕ ಈ ಕೊರತೆಯನ್ನು ನೀಗುವಲ್ಲಿ ನೆರವಾಗುತ್ತವೆ.
ಗಂಡಾಂತರಗಳನ್ನು ಎದುರಿಸುವುದು
ಬದಲಾಯಿಸಿಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉತ್ಪಾದನೆಯ ವಿವಿಧ ಗಂಡಾಂತರಗಳನ್ನು ಎದುರಿಸಿ ಹೂಡಿಕೆ ಮಾಡುವ ಸಾಮರ್ಥ್ಯ ಅಲ್ಲಿನವರಿಗಿರುವುದಿಲ್ಲ. ಇಂಥಹ ಗಂಡಾಂತರಗಳನ್ನು ಎದುರಿಸಿ ಹೂಡಿಕೆ ಮಾಡುವ ಸಾಮರ್ಥ್ಯ ಬಹುರಾಷ್ಟ್ರೀಯ ನಿಗಮಗಳಿಗಿವೆ. ಬಹುರಾಷ್ಟ್ರೀಯ ಕಂಪನಿಗಳು ಹಿಂದುಳಿದ ದೇಶಗಳಲ್ಲಿ ಬಂಡವಾಳ ಸಂಗ್ರಹಣೆಗೆ ಕಾರಣವಾಗಿ ಆದಾಯ ವೃದ್ಧಿಯಾಗುವಂತೆ ಮಾಡುತ್ತವೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚುವಂತೆ ಮಾಡುತ್ತವೆ. [೧೧]
ಬಹುರಾಷ್ಟ್ರೀಯ ನಿಗಮಗಳ ದೋಷಗಳು
ಬದಲಾಯಿಸಿಮೇಲೆ ಚರ್ಚಿಸಿದ ಅನೇಕ ಅನುಕೂಲಗಳು ಬಹುರಾಷ್ಟ್ರೀಯ ಕಂಪನಿಗಳಿಂದ ಲಭ್ಯವಾದರೂ, ಅವುಗಳು ದೋಷಗಳಿಂದ ಮುಕ್ತವಾಗಿಲ್ಲ.[೯] ಪ್ರಮುಖ ದೋಷಗಳು ಈ ಕೆಳಕಂಡಂತಿವೆ.
ಶೋಷಣೆಯ ಪ್ರತಿನಿಧಿಗಳು
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತಿಥೇಯ ದೇಶಗಳ ಶೋಷಣೆಗೆ ಕಾರಣವಾಗುತ್ತವೆ ಎಂದು ದೂರಲಾಗಿದೆ. ಈ ಕಂಪನಿಗಳು ಹಿಂದುಳಿದ ದೇಶಗಳಲ್ಲಿ ಲಭ್ಯವಿರುವ ಬೃಹತ್ ಪ್ರಮಾಣದ ಶ್ರಮ ಶಕ್ತಿಯನ್ನು ಕಡಿಮೆ ಬೆಲೆಗೆ ಪಡೆದು ಕಾರ್ಮಿಕರನ್ನು ಶೋಷಿಸಲು ಪ್ರಯತ್ನಿಸುತ್ತವೆ. ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಈ ಕಂಪನಿಗಳು ಹಿಂದೇಟು ಹಾಕುತ್ತವೆ. ಈ ಕಂಪನಿಗಳು ಅತಿಥೇಯ ದೇಶಗಳನ್ನು ಪ್ರವೇಶಿಸುವುದೇ ಅಲ್ಲಿ ಕದಿಮೆ ಬೆಲೆಯಲ್ಲಿ ಶ್ರಮಶಕ್ತಿಯು ಲಭ್ಯವಿದೆಯೆಂದು. ಕೆಲವು ವೇಳೆ ಅವು ಅನುಭೋಗಿಗಳ ಶೋಷಣೆಯಲ್ಲೂ ತೊಡಗುತ್ತವೆ.
ಏಕಸ್ವಾಮ್ಯದ ಉಗಮ
ಬದಲಾಯಿಸಿಅತಿಥೇಯ ದೇಶಗಳಲ್ಲಿನ ಸ್ವದೇಶಿ ಉದ್ಯಮಗಳು ಬಹುರಾಷ್ಟ್ರೀಯ ಕಂಪನಿಗಳ ಸರಕುಗಳ ಜೊತೆ ಪೈಪೋಟಿ ನಡೆಸುವ ಸಾಮರ್ಥ್ಯ ಹೊಂದಿರುವದಿಲ್ಲ. ಏಕೆಂದರೆ ಈ ಎಲ್ಲಾ ಉದ್ಯಮಗಳು ಯಾವುದೋ ಹಳೆಯದಾದ ಮತ್ತು ಸವೆದುಹೋದ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಪಾದನೆ ಮಾಡುತ್ತಿರುತ್ತವೆ. ಹೀಗೆ ಅತಿಥೇಯ ರಾಷ್ಟ್ರಗಳಲ್ಲಿನ ಉದ್ಯಮಗಳನ್ನು ಈ ಕಂಪನಿಗಳು ನಾಶಗೊಳಿಸಿ ಪೈಪೋಟಿ ಇಲ್ಲದಂತಹ ಪರಿಸ್ಥಿತಿಯನ್ನು ನಿರ್ಮಿಸುವುದರಿಂದ ಏಕಸ್ವಾಮ್ಯ ಅಧಿಕಾರದ ಬೆಳವಣಿಗೆಗೆ ಕಾರಣವಾಗುತ್ತವೆ.
ಹೊಂದಿಕೊಳ್ಳದ ತಂತ್ರಜ್ಞಾನ
ಬದಲಾಯಿಸಿಈ ಕಂಪನಿಗಳು ಬಲಸುವ ತಂತ್ರಜ್ಞಾನವು ಅವುಗಳು ಜಗತ್ತಿನಾದ್ಯಂತ ಲಾಭಗಳಿಸುವ ದೃಷ್ಟಿಕೋನದಿಂದ ತಯಾರು ಮಾಡಿದುದಾಗಿರುತ್ತದೆಯೇ ಹೊರತು ಅದು ಬಡ ದೇಶಗಳ ಅಭಿವೃದ್ಧಿಯ ಅವಶ್ಯಕತೆಗಳನ್ನು ಪೂರೈಸುವಂತದ್ದಾಗಿರುವುದಿಲ್ಲ. ಈ ಕಂಪೆನಿಗಳ ತಂತ್ರಜ್ಞಾನ ಹಿಂದುಳಿದ ದೇಶಗಳ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದಿಲ್ಲ. ಅಗಾಧ ಜನಸಂಖ್ಯೆಯ ಕಾರಣದಿಂದಾಗಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಈ ದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಈ ತಂತ್ರಜ್ಞಾನ ಸೃಷ್ಟಿಸಲಾರದು.ಕೆಲವೊಮ್ಮೆ ಅವು ಯಾವುದೋ ಹಳೆಯ ಮತ್ತು ಬಳಕೆಗೆ ಬಾರದ ತಂತ್ರಜ್ಞಾನವನ್ನು ತರುತ್ತವೆ.
ಸಂಪನ್ಮೂಲ ಬರಿದು
ಬದಲಾಯಿಸಿಹಿಂದುಳಿದ ದೇಶಗಳಲ್ಲಿ ಸಂಪನ್ಮೂಲಗಳು ಹೇರಳವಾಗಿವೆ. ಈ ಸಂಪನ್ಮೂಲಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಬಳಸಿಕೊಂಡು ಉತ್ಪಾದನೆ ಮಾಡಿ ಗರಿಷ್ಟ ಲಾಭ ಗಳಿಸಲು ಪ್ರಯತ್ನಿತ್ತವೆ. ಈ ಕಾರಣದಿಂದಾಗಿ ಈ ದೇಶಗಳಲ್ಲಿನ ಸಂಪನ್ಮೂಲಗಳು ಬೇಗ ಬರಿದಾಗುವ ಅಪಾಯವಿರುತ್ತದೆ.
ಸಾರ್ವಭೌಮತ್ವಕ್ಕೆ ಧಕ್ಕೆ
ಬದಲಾಯಿಸಿಅತಿಥೇಯ ದೇಶಗಳಲ್ಲಿ ಉತ್ಪಾದನೆಯಲ್ಲಿ ತೊಡಗಿರುವ ಬಹುರಾಷ್ಟ್ರೀಯ ಕಂಪನಿಗಳಿಂದ ಈ ದೇಶಗಳ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯೊದಗಬಹುದು. ತಮ್ಮ ದೈತ್ಯ ಗಾತ್ರ ಹಾಗೂ ಆರ್ಥಿಕ ಮತ್ತು ರಾಜಕೀಯ ಶಕ್ತಿಯಿಂದಾಗಿ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವ ಅಪಾಯವಿದೆ. ತಮ್ಮ ಕಪಿಮುಷ್ಟಿಯಿಂದ ಈ ದೇಶಗಳು ಬಿಡಿಸಿಕೊಳ್ಳದಂತೆ ನೋಡಿಕೊಳ್ಳಬಹುದು.
ಪಾವತಿಶಿಲ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ತಾವು ಅತಿಥೇಯ ದೇಶಗಳಲ್ಲಿನ ಉತ್ಪಾದನೆಯಲ್ಲಿ ಗಳಿಸಿದ ಲಾಭವನ್ನು ಅಲ್ಲೇ ಮರುಹೂಡಿಕೆ ಮಾಡುವುದರ ಬದಲು ಸ್ವದೇಶಕ್ಕೆ ಹೊತ್ತೊಯ್ಯಬಹುದು. ಇದರಿಂದ ಅತಿಥೇಯ ದೇಶಗಳಲ್ಲಿನ ಬಂಡವಾಳ ಮುಂದುವರಿದ ದೇಶಗಳಿಗೆ ವರ್ಗಾವಣೆಯಾಗುತ್ತದೆ. ಅತಿಥೇಯ ದೇಶಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳಿಗೆ ಇದರಿಂದಾಗಿ ಧಕ್ಕೆಯುಂಟಾಗುತ್ತದೆ. ಬಂಡವಾಳದ ಲಾಭದ ರೂಪದಲ್ಲಿನ ಚಲನೆಯಿಂದಾಗಿ ಈ ಹಿಂದುಳಿದ ದೇಶಗಳ ಪಾವತಿ ಶಿಲ್ಕಿನ ಪರಿಸ್ಥಿತಿಯ ಮೇಲೆ ಪ್ರತಿಕೂಲಕರ ಪರಿಣಾಮ ಉಂಟಾಗುತ್ತದೆ.
ಆಂತರಿಕ ಹಸ್ತಕ್ಷೇಪ
ಬದಲಾಯಿಸಿಈ ಕಂಪನಿಗಳು ಅತಿಥೇಯ ದೇಶಗಳಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಗಳಿರುತ್ತವೆ. ರಾಜಕೀಯ ಭ್ರಷ್ಟಾಚಾರಕ್ಕೆ ಕುಮ್ಮುಕ್ಕು ಕೊಡುತ್ತವೆಯಲ್ಲದೆ, ದೇಶದ ಆರ್ಥಿಕ ಮತ್ತು ರಾಜಕೀಯ ಧೋರಣೆಗಳನ್ನು ತಮ್ಮ ಅನುಕೂಲಗಳಿಗೆ ತಕ್ಕಂತೆ ಮಾರ್ಪಾಟು ಮಾಡಿಸಿಕೊಳ್ಳುತ್ತವೆ.
ಪ್ರಾದೇಶಿಕ ಅಸಮತೋಲನ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಮತ್ತು ಹೆಚ್ಚು ಮುಂದುವರಿದ ಮತ್ತು ಸೌಲಭ್ಯಗಳು ಲಭ್ಯವಿರುವ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆಯಲ್ಲಿ ತೊಡಗುತ್ತವೆ. ಇದರಿಂದಾಗಿ ಹಿಂದುಳಿದ ದೇಶಗಳಲ್ಲಿನ ಪ್ರಾದೇಶಿಕ ಅಸಮತೋಲನ ಸಮಸ್ಯೆಯ ನಿವಾರಣೆ ಸಾಧ್ಯವಾಗುವುದಿಲ್ಲ, ಏಕೆಂದರೆ ಈ ಕಂಪನಿಗಳು ಹಿಂದುಳಿದ ಪ್ರದೇಶಗಳಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸುವ ಪ್ರಯತ್ನಕ್ಕೇ ಕೈ ಹಾಕುವುದಿಲ್ಲ.
ತೆರಿಗೆ ವಂಚನೆ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ತೆರಿಗೆ ವಂಚನೆಯಂತಹ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಗಳಿರುತ್ತವೆ .ಇದರಿಂದಾಗಿ ಸರ್ಕಾರದ ಆದಾಯ ಖೋತಾ ಆಗುವುದಲ್ಲದೆ ಸರ್ಕಾರಗಳು ಬಂಡವಾಳದ ಕೊರತೆಯನ್ನು ಅನುಭವಿಸಬೇಕಾಗುತ್ತದೆ.
ರಾಷ್ಟ್ರೀಕರಿಸುವಂತಿಲ್ಲ
ಬದಲಾಯಿಸಿಬಹುರಾಷ್ಟ್ರೀಯ ಕಂಪನಿಗಳು ಅತಿಥೇಯ ದೇಶದ ಹಿತಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೂ ಸಹ ಅವುಗಳನ್ನು ರಾಷ್ಟ್ರೀಕರಿಸುವಂತಿಲ್ಲ. ಆಕಸ್ಮಿಕವಾಗಿ ಯಾವುದೇ ದೇಶದಲ್ಲಿ, ಅವುಗಳನ್ನು ರಾಷ್ಟ್ರೀಕರಿಸುವ ಪ್ರಯತ್ನವನ್ನೇನಾದರೂ ಮಾಡಿದರೆ ಅವುಗಳು ಅಂತರರಾಷ್ಟ್ರೀಯ ಒತ್ತಡ ಹೇರಲು ಪ್ರಯತ್ನಿಸುತ್ತವೆ.
ಉಪೇಕ್ಷೆಯ ಮನೋಭಾವನೆ
ಬದಲಾಯಿಸಿಬೃಹತ್ ಪ್ರಮಾಣದ ಉತ್ಪಾದನೆಯು ಅನೇಕ ಅನಿಷ್ಟಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ವಿನಾಶ ಇತ್ಯಾದಿ.ಇಂತಹ ಸಮಸ್ಯೆಗಳನ್ನು ಬಗೆಹರಿಸುವತ್ತ ಈ ಕಂಪೆನಿಗಳು ಗಮನ ನೀಡುವುದೇ ಇಲ್ಲ. ಅತಿಥೇಯ ದೇಶಗಳ ಒಳಿತು ಈ ಕಂಪನಿಗಳಿಗೆ ಬೇಕಾಗಿಯೇ ಇರುವುದಿಲ್ಲ. ಅವುಗಳು ಎಂತಹ ಅನೀತಿಯ ಚಟುವಟಿಕೆಗಳಲ್ಲಾದರೂ ತೊಡಗಿ ಲಾಭ ಗಳಿಸಲು ಮುಂದಾಗುತ್ತವೆ. ಇಷ್ಟೆಲ್ಲಾ ದೋಷಗಳಿದ್ದರೂ, ಬಹುರಾಷ್ಟ್ರೀಯ ಕಂಪನಿಗಳು ಕೇವಲ ಶೋಷಣೆಯ ಪ್ರತಿನಿಧಿಗಳಾಗದೆ ಅಭಿವೃದ್ಧಿಯ ಪ್ರತಿನಿಧಿಗಳಾಗಿಯೂ ಕಾಣಿಸಿಕೊಂಡಿವೆ. ಅನೇಕ ಉದ್ಯಮಗಳನ್ನು ಸ್ಥಾಪಿಸುದರ ಮೂಲಕ ಮತ್ತು ಉತ್ಪಾದನಾ ವೃದ್ಧಿ, ನಿರ್ವಹಣೆ, ತಾಂತ್ರಿಕ, ಸಂಘಟನೆ ಮತ್ತು ಮಾರುಕಟ್ಟೆಯ ಕುಶಲತೆಗಳನ್ನು ಒದಗಿಸುವುದರ ಮೂಲಕ ಬಹುರಾಷ್ಟ್ರೀಯ ಕಂಪನಿಗಳು ಸಿಂಗಪುರ, ಹಾಂಕಾಂಗ್, ತೈವಾನ್,ಕೆನಡಾ ಮುಂತಾದ ದೇಶಗಳ ಆರ್ಥಿಕಾಭಿದ್ಧಿಯಲ್ಲಿ ಗಣನೀಯ ಪಾತ್ರವಹಿಸಿರುವುದು ಕಂಡುಬರುತ್ತದೆ. ಈ ಕಂಪನಿಗಳು ಅನೇಕ ಹಿಂದುಳಿದ ದೇಶಗಳಲ್ಲಿ ವಿವಿಧ ಬಗೆಯ ಉದ್ಯಮಗಳನ್ನು ಸ್ಥಾಪಿಸಿ ಉತ್ಪಾದನೆಯನ್ನು ಹೆಚ್ಚಿಸಿವೆ.
ಮುಂಬರುವ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚಿನ ಪುರಸ್ಕಾರ ಮತ್ತು ಮಹತ್ವ ದೊರೆಯುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಹಿಂದುಳಿದ ದೇಶಗಳು ತಮ್ಮ ಆರ್ಥಿಕ ವ್ಯವಸ್ಥೆಗಳನ್ನು ಉದಾರೀಕರಣಗೊಳಿಸುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನೆಯನ್ನು ಈ ದೇಶಗಳು ಎದುರು ನೋಡುತ್ತಿವೆ. ಜಗತ್ತಿನ ಎಪ್ಪತ್ತಕ್ಕಿಂತಲೂ ಹೆಚ್ಚಿನ ದೇಶಗಳು ಖಾಸಗೀಕರಣದ ಕಾರ್ಯದಲ್ಲಿ ತೊಡಗಿದ್ದು,ಇದು ವಿದೇಶಿ ಬಂಡವಾಳ ಹೂಡಿಕೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸುತ್ತಿದೆ. ಸಮಾಜವಾದಿ ದೇಶಗಳೂ ಸಹ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಸ್ವಾಗತವನ್ನು ನೀಡಲು ಮುಂದಾಗುತ್ತಿವೆ.
ಪ್ರಾದೇಶಿಕ ಆರ್ಥಿಕ ಕೂಟಗಳು, ತೀವ್ರವಾಗಿ ಬೆಳೆಯುತ್ತಿರುವ ಮತ್ತು ಬದಲಾಗುತ್ತಿರುವ ತಂತ್ರಜ್ಞಾನ, ಖಾಸಗಿ ರಂಗಕ್ಕೆ ಹೆಚ್ಚುತ್ತಿರುವ ಪ್ರಾಮುಖ್ಯತೆ, ಮಾರುಕಟ್ಟೆ ವ್ಯವಸ್ಥೆಗಳ ಉಗಮ, ಉದ್ಯಮ ಮತ್ತು ಕೈಗಾರಿಕೆಗಳ ಹೆಚ್ಚು ಹೆಚ್ಚು ಜಾಗತೀಕರಣ, ಸೇವೆಗಳ ವಲಯದ ಪ್ರಾಧಾನ್ಯತೆ ಇತ್ಯಾದಿಗಳು ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯ ಮತ್ತು ಪ್ರಾಮುಖ್ಯತೆಯನ್ನು ದಿನೇ ದಿನೇ ಹೆಚ್ಚಿಸುತ್ತಿವೆ. ಮುಂಬರುವ ಶತಮಾನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಎಲ್ಲಿಲ್ಲದ ಪ್ರಾಮುಖ್ಯತೆ ಪಡೆಯುವ ಸಾಧ್ಯತೆಗಳಿವೆ. ಅದೂ ಅಲ್ಲದೆ ಒಂದು ಕಾಲದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮುಂದುವರಿದ ದೇಶಗಳ ಸ್ವತ್ತಾಗಿದ್ದವು. ಆದರೆ ಈಗ ಕಾಲ ಬದಲಾವಣೆಯಾಗಿದ್ದು ಅನೇಕ ಹಿಂದುಳಿದ ದೇಶಗಳೂ ಈ ಕ್ಷೇತ್ರವನ್ನು ಪ್ರವೇಶಿಸುತ್ತಿವೆ.
ಭಾರತದ ಕೈಗಾರಿಕಾ ನೀತಿಯಲ್ಲಿ ಸಾರ್ವಜನಿಕ ವಲಯಕ್ಕೆ ಪ್ರಾಧಾನ್ಯತೆ ನೀಡಿದ್ದರಿಂದಾಗಿ ಹಾಗೂ ವಿದೇಶಿ ಹೂಡಿಕೆಯ ಮೇಲೆ ಸರ್ಕಾರದ ಬಿಗುನೀತಿಯಿಂದಾಗಿ ಭಾರತದಲ್ಲಿ ಇದುವರೆಗಾಗಿರುವ ವಿದೇಶಿ ಬಂಡವಾಳ ಹೂಡಿಕೆಯು ಕಡಿಮೆ ಎಂದೇ ಹೇಳಬಹುದು. ಕೋಕೋ ಕೋಲಾ,ಐ.ಬಿ.ಎಂ.,ಮುಂತಾದ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರದ ಬಿಗು ನೀತಿಯಿಂದಾಗಿ ೧೯೭೦ರ ದಶಕದ ಅಂತ್ಯಭಾಗದ ವೇಳೆಗೆ ದೇಶವನ್ನೇ ಬಿಟ್ಟು ತೊಲಗಿದವು. ಬಹುರಾಷ್ಟ್ರೀಯ ಕಂಪನಿಗಳ ಮೇಲಿರುವ ಒಂದು ಪ್ರಮುಖ ಟೀಕೆ ಎಂದರೆ; ಈ ಕಂಪನಿಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಖ್ಯವಲ್ಲದ, ಆದರೆ ಹೆಚ್ಚು ಲಾಭ ತರುವ ವಲಯದಲ್ಲೇ ಬಂಡವಾಳ ತೊಡಗಿಸುತ್ತವೆಂಬುದು. ಇವುಗಳು ರಾಷ್ಟ್ರದ ಅಗತ್ಯತೆಗಳನ್ನು ಕಡೆಗಣಿಸುತ್ತವೆ. ಭಾರತ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಮತ್ತು ರಫ್ತು ವಲಯದ ಉನ್ನತ ತಂತ್ರಜ್ಞಾನ ಮತ್ತು ಬೃಹತ್ ಬಂಡವಾಳ ಬೇಕಾಗುವ ವಲಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿತು.
೧೯೭೩ರ ವಿವಾದಾಸ್ಪದ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯು ವಿದೇಶಿ ಕಂಪನಿಗಳು ಭಾರತದಲ್ಲಿ ಶೇ.೪೦ರಷ್ಟು ಈಕ್ವಿಟಿ ಪಾಲುದಾರಿಕೆ ಪಡೆಯಲು ಅವಕಾಶ ನೀಡಿತು. ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ವಿದೇಶಿ ವಿನಿಮಯ ಗಳಿಕೆಯ ವಿಚಾರದಲ್ಲಿ ಅಷ್ಟೇನೂ ಪ್ರಮುಖ ಪಾತ್ರ ವಹಿಸಿಲ್ಲ. ಆದರೆ ೧೯೮೦ರಿಂದ ಈಚೆಗೆ ಬಹುರಾಷ್ಟ್ರೀಯ ಕಂಪನಿಗಳು ಬೇರೆ ಬೇರೆ ಕಾರಣಗಳಿಂದ ರಫ್ತು ವ್ಯಾಪಾರದಲ್ಲಿ ತೊಡಗಿವೆ. ಭಾರತದ ಸರ್ಕಾರದ ಇತ್ತೀಚಿನ ನೂತನ ಆರ್ಥಿಕ ನೀತಿ ಮತ್ತು ಆರ್ಥಿಕತೆಯ ಉದಾರೀಕರಣದ ನೀತಿಗಳು ಹಾಗೂ ಹೊಸ ಕೈಗಾರಿಕಾ ನೀತಿಯು ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾಕಷ್ಟು ಪ್ರಾಮುಖ್ಯತೆ ಸಿಗುವಂತೆ ಮಾಡಿವೆ. ಆದರೂ ಸಹ ಈ ಕಂಪೆನಿಗಳಿಗೆ ಭಾರತದಲ್ಲಿನ ಹೂಡಿಕೆಯವಾತಾವರಣ ಅಷ್ಟೇನೂ ಆಕರ್ಷಣೀಯವಾಗಿ ಕಾಣುತ್ತಿಲ್ಲ.
ಇಷ್ಟೆಲ್ಲ ಅಡತೆಡೆಗಳ ನಡುವೆಯೂ ೨೦೧೦ರ ಮಾರ್ಚ್ ಅಂತ್ಯದ ವೇಳೆಗೆ ಭಾರತದಲ್ಲಿ ೩೦೫೭ ಬಹುರಾಷ್ಟ್ರೀಯ ಕಂಪನಿಗಳು ಕಾರ್ಯಪ್ರವೃತ್ತವಾಗಿದ್ದವು ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ೮೧೫ ಭಾರತೀಯ ಬಹುರಾಷ್ಟ್ರೀಯ ಕಂಪನಿಗಳ ಮತ್ತು ೨೨೪೨ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಇದ್ದವು.
ಭಾರತದಲ್ಲಿ ಕಾರ್ಯ ಪ್ರವೃತ್ತವಾಗಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಪಾಂಡ್ಸ್,ಜಾನ್ಸನ್ ಮತ್ತು ಜಾನ್ಸನ್,ಲಿಪ್ಟನ್,ಬ್ರೂಕ್ ಬಾಂಡ್,ಕಾಲ್ಗೇಟ್-ಪಾಲ್ಮೋಲಿವ್ ಮುಂತಾದ ಕಂಪನಿಗಳು ಕಡಿಮೆ ತಂತ್ರಜ್ಞಾನದ ಅನುಭೋಗಿ ಸರಕುಗಳ ಉತ್ಪಾದನೆಯಲ್ಲಿ ತೊಡಗಿವೆ. ಐ.ಟಿ.ಸಿ. ಕಂಪೆನಿಯು ಸಿಗರೇಟ್, ಹೋಟೆಲ್ಲುಗಳು, ತೈಲ, ಬ್ಯಾಂಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ಲಾಕ್ಸೋ, ಬಾಯರ್, ಸ್ಯಾಂಡೋಜ್,ಹೋಚೆಸ್ಟ್ ಕಂಪೆನಿಗಳು ಔಷಧ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿದ್ದರೆ ಮಾರುಬಿನಿ,ನಿಶ್ಯೋ ಇವಾಯಿ ವಿದೇಶಿವ್ಯಾಪಾರದಲ್ಲಿ ತೊಡಗಿವೆ.
ಹೊಸ ಆರ್ಥಿಕ ನೀತಿ ಮತ್ತು ಉದಾರೀಕರಣ ನೀತಿಯಿಂದಾಗಿ ಭಾರತದಲ್ಲಿ ಬರುವ ಕೆಲವೇ ಕೆಲವು ವರ್ಷಗಳಲ್ಲಿ ಸಾವಿರಾರು ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಈಗಾಗಲೇ ಅನೇಕ ವಿದೇಶಿ ಕಂಪನಿಗಳು ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಉತ್ಪಾದನಾ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲು ಮುಂದಾಗಿವೆ. ಭಾರತ ಹೆಚ್ಚು ಹೆಚ್ಚು ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯತ್ತ ಮುನ್ನುಗ್ಗುತ್ತಿದೆಯಾದ್ದರಿಂದ ಹಾಗೂ ಆರ್ಥಿಕತೆಯ ಉದಾರೀಕರಣದಿಂದ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ತೊಡಗಿಸಲು
ಮುಂದೆ ಬರುವ ಸಾದ್ಯತೆಗಳಿವೆ. ಉದಾರೀಕರಣ ನೀತಿಯ ಫಲವಾಗಿ ಇಂದು ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ಅಗಾದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಸರ್ಕಾರ ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಬಂಡವಾಳ ಹೂಡಲು ಮುಕ್ತವಾಗಿ ಸ್ವಾಗತಿಸುತ್ತಿದೆ.
ಇವುಗಳನ್ನು ನೋಡಿ
ಬದಲಾಯಿಸಿಬಾಹ್ಯ ಸಂಪರ್ಕ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ Pitelis, Christos; Roger Sugden (2000). The nature of the transnational firm. Routledge. p. 72. ISBN 0-415-16787-6.
- ↑ Roy D. Voorhees, Emerson L. Seim, and John I. Coppett, "Global Logistics and Stateless Corporations," Transportation Practitioners Journal 59, 2 (Winter 1992): 144-51.
- ↑ ೩.೦ ೩.೧ http://www2.econ.iastate.edu/classes/econ355/choi/mul.htm
- ↑ Mingst, Karen A. (2014). Essentials of international relations. W. W. Norton & Company. p. 310. ISBN 978-0-393-92195-3.
- ↑ https://books.google.co.in/books?id=lSE8BAAAQBAJ&pg=PA340&lpg=PA340&dq=definition+of+mnc+by+james+c+baker&source=bl&ots=-ani1TmMbF&sig=rXKFodp39UGyoLbkRTYyNEc51q4&hl=en&sa=X&ei=Up00VafVJtSVuATS5YCoCw&ved=0CCMQ6AEwAg#v=onepage&q=definition%20of%20mnc%20by%20james%20c%20baker&f=false
- ↑ "ಆರ್ಕೈವ್ ನಕಲು". Archived from the original on 2018-02-11. Retrieved 2015-04-20.
- ↑ "ಆರ್ಕೈವ್ ನಕಲು". Archived from the original on 2008-12-08. Retrieved 2015-04-20.
- ↑ http://www.taxjustice.net/topics/corporate-tax/taxing-corporations/
- ↑ ೯.೦ ೯.೧ "ಆರ್ಕೈವ್ ನಕಲು". Archived from the original on 2015-02-17. Retrieved 2015-04-20.
- ↑ "ಆರ್ಕೈವ್ ನಕಲು". Archived from the original on 2015-06-03. Retrieved 2015-04-20.
- ↑ "ಆರ್ಕೈವ್ ನಕಲು". Archived from the original on 2015-02-18. Retrieved 2015-02-10.
- ↑ http://business.mapsofindia.com/india-company/multinational.html