ಒಂದು ದೇಶದ ಕೈಗಾರಿಕೆಗಳ ಸ್ಥಾಪನೆ, ಬೆಳೆವಣಿಗೆ, ನಿರ್ವಹಣೆ, ಒಡೆತನ, ಅನ್ಯದೇಶೀಯರ ಸಹಭಾಗಿತ್ವ, ಕಾರ್ಮಿಕ-ಮಾಲೀಕ ಸಂಬಂಧ ಮುಂತಾದ ವಿಚಾರಗಳಲ್ಲಿ ಆ ದೇಶದ ಸರ್ಕಾರದ ಅಧಿಕೃತ ನೀತಿ (ಇಂಡಸ್ಟ್ರಿಯಲ್ ಪಾಲಿಸಿ). ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕೈಗಾರಿಕೆಯ ಪಾತ್ರ ಹಿರಿದಾದ್ದು. ಅಭಿವೃದ್ಧಿಶೀಲ ದೇಶಗಳ ಜನ ಬಹುಸಂಖ್ಯೆಯಲ್ಲಿ ಕೃಷಿಯಲ್ಲಿ ನಿರತರಾಗಿರುವುದರಿಂದ ಆ ಒತ್ತಡವನ್ನು ಕಡಿಮೆ ಮಾಡಲು ಕೈಗಾರಿಕಾಭಿವೃದ್ಧಿ ಅತ್ಯಾವಶ್ಯಕ. ಆ ದೇಶಗಳಲ್ಲಿರುವ ನಿರುದ್ಯೋಗ, ಆಂಶಿಕ ಉದ್ಯೋಗ, ಇವಕ್ಕೆ ಕೈಗಾರಿಕಾಭಿವೃದ್ಧಿಯೇ ಏಕಮಾತ್ರ ಪರಿಹಾರ. ಕೈಗಾರಿಕಾಭಿವೃದ್ಧಿಯ ಅವಶ್ಯಕತೆಯನ್ನು ಒಪ್ಪಿಕೊಂಡರೆ ಕೈಗಾರಿಕಾನೀತಿಯ ಪ್ರಾಮುಖ್ಯ ಉದ್ಭವಿಸುತ್ತದೆ. ಎಲ್ಲ ಬಗೆಯ ಕೈಗಾರಿಕೆಗಳ ಅಭಿವೃದ್ಧಿಯೂ ಸರ್ಕಾರದ ನೀತಿಯನ್ನೇ ಬಹಳಮಟ್ಟಿಗೆ ಅವಲಂಬಿಸಿರುತ್ತದೆ. ಕೈಗಾರಿಕಾನೀತಿ ಭಾಗಶಃ ರಾಜಕೀಯ, ಭಾಗಶಃ ಆರ್ಥಿಕ. ಆಡಳಿತ ನಡೆಸುತ್ತಿರುವ ಪಕ್ಷದ ರಾಜಕೀಯ ಸಿದ್ಧಾಂತಗಳಿಗೆ ಅನುಗುಣವಾಗಿರುವುದರಿಂದ ಇದು ಭಾಗಶಃ ರಾಜಕೀಯ, ಸರ್ಕಾರದ ಧೋರಣೆಯ ಅಂತಿಮಗುರಿ ಆರ್ಥಿಕಾಭಿವೃದ್ಧಿಯಾದುದರಿಂದ ಇದು ಭಾಗಶಃ ಆರ್ಥಿಕ, ಅಧಿಕಾರದಲ್ಲಿರುವ ಪಕ್ಷದ ಗುರಿ ಸಮಾಜವಾದದ ಸ್ಥಾಪನೆಯಾಗಿದ್ದರೆ, ಬಡವರ ಮತ್ತು ಸಮಾಜದಲ್ಲಿರುವ ದುರ್ಬಲರ ಆರ್ಥಿಕಾಭಿವೃದ್ಧಿಗೆ ಹೆಚ್ಚು ಗಮನ ಕೊಡುವುದೂ ವರಮಾನ, ಆಸ್ತಿ ಮತ್ತು ಆರ್ಥಿಕ ಶಕ್ತಿಗಳು ಕೆಲವು ಕಡೆ ಮಾತ್ರ ಕೇಂದ್ರಿಕೃತವಾಗುವುದನ್ನು ತಪ್ಪಿಸುವುದೂ ಅವಶ್ಯವಾಗುತ್ತದೆ. ಇದನ್ನು ಸಾಧಿಸಲು ಸರ್ಕಾರ ಕೈಗಾರಿಕಾಭಿವೃದ್ಧಿಯಲ್ಲಿ ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ. ಸರ್ಕಾರ ತಾನೇ ಹಲವು ಕೈಗಾರಿಕೆಗಳನ್ನು ವಹಿಸಿಕೊಂಡು ನಡೆಸಬೇಕಾಗುತ್ತದೆ. ಖಾಸಗಿ ವಲಯದ ಮೇಲೆ ಹೆಚ್ಚು ನಿಯಂತ್ರಣ ಹಾಕಬೇಕಾಗುತ್ತದೆ. ಇದನ್ನೆಲ್ಲ ಆಗಮಾಡಿಸಲು ಒಂದು ಕೈಗಾರಿಕಾ ನೀತಿ ಅವಶ್ಯಕ. ಖಾಸಗಿ ಮತ್ತು ಸರ್ಕಾರಿ ಉದ್ಯಮ ವಲಯಗಳ ನಡುವೆ ಘರ್ಷಣೆ-ಅಸಹಕಾರಗಳೂ ಅನಾವಶ್ಯಕವಾದ ನಿಯಂತ್ರಣವೂ ಆರ್ಥಿಕಾಭಿವೃದ್ಧಿಗೆ ಮಾರಕವಾಗಬಹುದು. ಖಾಸಗಿ ಮತ್ತು ಸರ್ಕಾರಿ ವಲಯಗಳ ಬಗ್ಗೆ ಸರ್ಕಾರ ತಳೆಯುವ ನಿಲುವು, ಆ ದೃಷ್ಟಿಯಲ್ಲಿ ಆಡಳಿತದ ಮತ್ತು ಕಾನೂನಿನ ವಿಧಿವಿಧಾನಗಳು-ಇವೆಲ್ಲ ಆರ್ಥಿಕಾಭಿವೃದ್ಧಿಯ ನಿರ್ಣಾಯಕಗಳು, ಆರ್ಥಿಕಾಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾತ್ರ ಸರ್ಕಾರದ ನೀತಿಯನ್ನು ಅನುಸರಿಸುತ್ತದೆ. ಖಾಸಗಿ ವಲಯವಿರಬೇಕೆಂದು ಸರ್ಕಾರ ಒಪ್ಪಿಕೊಂಡರೆ ಅದರ ಬೆಳೆವಣಿಗೆಗೆ ಸರಿಯಾದ ವಾತಾವರಣವನ್ನು ಕಲ್ಪಿಸಬೇಕು.[]

ಕೈಗಾರಿಕೆಗಳು

ಅಭಿವೃದ್ಧಿಶೀಲ ದೇಶಗಳ ತ್ವರಿತ ಆರ್ಥಿಕಾಭಿವೃದ್ಧಿ

ಬದಲಾಯಿಸಿ

ಅಭಿವೃದ್ಧಿಶೀಲ ದೇಶಗಳ ತ್ವರಿತ ಆರ್ಥಿಕಾಭಿವೃದ್ಧಿಯನ್ನು ಆಂತರಿಕ ಸಂಪತ್ಸಾಧನಗಳಿಂದಲೇ ಸಾಧಿಸಲು ಆಗಲಾರದು. ಇವುಗಳ ಆರ್ಥಿಕಾಭಿವೃದ್ಧಿಯಲ್ಲಿ ಹೊರಗಿನ ಸಂಪತ್ಸಾಧನಗಳೂ ತಾಂತ್ರಿಕ ನೆರವೂ ಅನೇಕ ವೇಳೆ ಪ್ರಮುಖ ಪಾತ್ರವಹಿಸಬೇಕಾಗುತ್ತದೆ. ಒಂದು ದೇಶದ ಕೈಗಾರಿಕಾಭಿವೃದ್ಧಿಗೆ ವಿದೇಶಗಳಿಂದ ಬರಬಹುದಾದ ಖಾಸಗಿ ಬಂಡವಾಳ ಅದರ ಕೈಗಾರಿಕಾ ನೀತಿಯನ್ನು ಅವಲಂಬಿಸಿರುತ್ತದೆ. ವಿದೇಶಿ ಬಂಡವಾಳದ ಆಮದನ್ನು ಪ್ರೋತ್ಸಾಹಿಸಬೇಕೆ, ಬೇಡವೆ-ಎಂಬುದನ್ನು ಕೈಗಾರಿಕಾ ನೀತಿಯಲ್ಲಿ ನಿರೂಪಿಸಲಾಗಿರುತ್ತದೆ.ಆರ್ಥಿಕಾಭಿವೃದ್ಧಿಯಲ್ಲಿ ಆರ್ಥಿಕ ಮತ್ತು ರಾಜಕೀಯ ಅಂಶಗಳ ಜೊತೆಗೆ ಮಾನಸಿಕ ಅಂಶಗಳೂ ಮುಖ್ಯ. ಖಾಸಗಿ ಉದ್ಯಮವೂ ಮುಖ್ಯವೆಂದು ಪರಿಭಾವಿಸಲಾದ ಪಕ್ಷದಲ್ಲಿ, ದೇಶದ ಉದ್ಯಮಿಗಳು ಸರ್ಕಾರದ ಕೈಗಾರಿಕಾ ನೀತಿಯಿಂದ ನಿರಾಶರಾದರೆ ಕೈಗಾರಿಕಾಭಿವೃದ್ದಿ ಸ್ಥಗಿತವಾಗುತ್ತದೆ. ಅಂಥ ದೇಶದ ಕೈಗಾರಿಕಾ ನೀತಿ ಉದ್ಯಮಿಗಳಲ್ಲಿ ನಿರಾಶೆಯನ್ನುಂಟುಮಾಡದಂತಿರಬೇಕು. ಉದ್ಯಮಿಗಳಲ್ಲಿ ತಮ್ಮ ಭವಿಷ್ಯದ ಬಗ್ಗೆ ಅನಾವಶ್ಯಕವಾಗಿ ಗಾಬರಿಯನ್ನುಂಟುಮಾಡಬಾರದು. ಆದರೆ ಈ ಉದ್ಯಮಿಗಳು ರಾಷ್ಟ್ರದ ಹಿತಕ್ಕೆ ವ್ಯತಿರಿಕ್ತವಾಗಿ ನಡೆದರೆ ಅವರ ಉದ್ಯಮಗಳನ್ನು ನಿಯಂತ್ರಿಸುವುದು ಅಗತ್ಯವಾಗುತ್ತದೆ.ಕೈಗಾರಿಕಾಭಿವೃದ್ಧಿ ಯಾವ ಮಾದರಿಯಲ್ಲಿರಬೇಕೆಂಬುದು ಇನ್ನೊಂದು ಸಮಸ್ಯೆ: ಬಂಡವಾಳಪ್ರಧಾನ ಕೈಗಾರಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕೇ, ಶ್ರಮಪ್ರಧಾನ ಕೈಗಾರಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕೇ ಎನ್ನುವುದು ಇನ್ನೊಂದು ಮುಖ್ಯ ಸಮಸ್ಯೆ. ಬಂಡವಾಳಪ್ರಧಾನ ಕೈಗಾರಿಕೆಗಳು ಉತ್ಪಾದನೆಯನ್ನು ಹೆಚ್ಚಿಸಿ, ತ್ವರಿತ ಆರ್ಥಿಕಾಭಿವೃದ್ಧಿಗೆ ದಾರಿ ಮಾಡುತ್ತವೆ. ಆದರೆ ಶ್ರಮಪ್ರಧಾನ ಕೈಗಾರಿಕೆಗಳು-ಸಣ್ಣ ಮತ್ತು ಗೃಹಕೈಗಾರಿಕೆಗಳು-ಅಧಿಕ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ನಿರುದ್ಯೋಗ ಸಮಸ್ಯೆಯನ್ನು ಬೇಗ ನಿವಾರಿಸಬಹುದು. ಒಂದು ಸರಿಯಾದ ಕೈಗಾರಿಕಾ ನೀತಿ ಈ ಎರಡೂ ಅಂಶಗಳ ನಡುವೆ ಸಮತೋಲವನ್ನೇರ್ಪಡಿಸಬೇಕಾಗುತ್ತದೆ.[]

ಭಾರತ ಸರ್ಕಾರದ ಕೈಗಾರಿಕಾ ನೀತಿ

ಬದಲಾಯಿಸಿ

ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಸರ್ಕಾರ ದೇಶದ ಕೈಗಾರಿಕಾಭಿವೃದ್ಧಿಗೆ ಹೆಚ್ಚು ಗಮನ ನೀಡಿರಲಿಲ್ಲ. ಭಾರತ ಕೃಷಿಪ್ರಧಾನದೇಶವಾದ್ದರಿಂದ ಕೈಗಾರಿಕಾಭಿವೃದ್ಧಿಯಿಂದ ದೇಶದ ಪ್ರಗತಿಗೆ ಅಡ್ಡಿಯುಂಟಾಗುವುದೆಂಬ ವಾದವೂ ಇತ್ತು. ಆದರೂ 1920ರಲ್ಲಿ ಕೈಗಾರಿಕಾ ಮಂಡಳಿಯ ನೇಮಕ, 1923ರಿಂದ ಕೆಲವು ಕೈಗಾರಿಕೆಗಳಿಗೆ ನೀಡಲಾದ ವಿವೇಚನಾತ್ಮಕ ರಕ್ಷಣೆ, 1945ರಲ್ಲಿ ಮಂಡಿಸಲಾದ ಕೈಗಾರಿಕಾ ನೀತಿ ನಿರೂಪಣೆ-ಇವು ಕೈಗಾರಿಕಾಭಿವೃದ್ಧಿಯಲ್ಲಿ ಆಗಿನ ಸರ್ಕಾರ ಕೊಂಚ ಹೆಚ್ಚಿನ ಆಸಕ್ತಿ ವಹಿಸಲಾರಂಭಿಸುತ್ತಿತ್ತೆಂಬುದಕ್ಕೆ ನಿದರ್ಶನಗಳು. ಇವುಗಳಿಂದ ಕೈಗಾರಿಕಾಭಿವೃದ್ಧಿಯಲ್ಲಿ ಸರ್ಕಾರದ ಪಾತ್ರ ಸ್ವಲ್ಪಮಟ್ಟಿಗೆ ಅಧಿಕವಾಯಿತು. ಖಾಸಗಿ ವಲಯದ ಕೈಗಾರಿಕೆಗಳನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಣ ಮಾಡಬೇಕೆಂಬ ವಾದವನ್ನು ಸರ್ಕಾರ ಒಪ್ಪಿಕೊಂಡಂತಾಯಿತು. ಆದರೂ ರಾಜಕೀಯ ಸ್ವಾತಂತ್ರ್ಯವಿಲ್ಲದೆ ಭಾರತ ಪರಿಣಾಮಕಾರಿಯಾದ ಕೈಗಾರಿಕಾನೀತಿಯನ್ನು ರೂಪಿಸಲು ಸಾಧ್ಯವಿರಲಿಲ್ಲ. ಭಾರತ ಸ್ವತಂತ್ರವಾದ ಮೇಲೆ, 1948ರಲ್ಲಿ, ದೇಶದ ಕೈಗಾರಿಕಾ ನೀತಿಯನ್ನು ವಿಶದವಾಗಿ ನಿರೂಪಿಸಲಾಯಿತು. ಮುಂದಿನ ಎಂಟು ವರ್ಷಗಳಲ್ಲಿ ಭಾರತದ ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲುಂಟಾದ ಬದಲಾವಣೆಯ ದೃಷ್ಟಿಯಿಂದ 1956ರಲ್ಲಿ ಪರಿಷ್ಕøತ ಕೈಗಾರಿಕಾ ನೀತಿಯನ್ನು ಮಂಡಿಸಲಾಯಿತು.

ಕೈಗಾರಿಕೆಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು

ಬದಲಾಯಿಸಿ

ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಅದನ್ನು ನ್ಯಾಯವಾಗಿ ಹಂಚುವುದು ಸರ್ಕಾರ 1948ರಲ್ಲಿ ಘೋಷಿಸಿದ ನೀತಿಯ ಮುಖ್ಯ ಉದ್ದೇಶಗಳಾಗಿದ್ದುವು. ಕೈಗಾರಿಕೆಗಳನ್ನು ಖಾಸಗಿ ಮತ್ತು ಸರ್ಕಾರಿ ವಲಯಗಳ ನಡುವೆ ಹಂಚಿಕೆ ಮಾಡಿದ್ದು ಈ ನೀತಿಯ ಅತ್ಯಂತ ಮುಖ್ಯ ಅಂಶ. ಕೈಗಾರಿಕೆಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು. ಮೊದಲನೆಯ ಗುಂಪಿನ ಕೈಗಾರಿಕೆಗಳ ಒಡೆತನ ಮತ್ತು ನಿರ್ವಹಣೆ ಸರ್ಕಾರದ ಏಕಸ್ವಾಮ್ಯಕ್ಕೆ ಒಳಪಟ್ಟಂಥವು. ಈ ಗುಂಪಿಗೆ ಸೇರಿದ ಕೈಗಾರಿಕೆಗಳು ಇವು : 1.ರಕ್ಷಣ ಕೈಗಾರಿಕೆಗಳು-ಯುದ್ಧೋಪಕರಣಗಳ ಮತ್ತು ಮದ್ದು ಗುಂಡುಗಳ ಉತ್ಪಾದನೆ, 2.ಅಣುಶಕ್ತಿಯ ಉತ್ಪಾದನೆ ಮತ್ತು ನಿಯಂತ್ರಣ, 3.ರೈಲ್ವೆ. ಅಸಾಧಾರಣ ಪರಿಸ್ಥಿತಿಯಲ್ಲಿ ಸರ್ಕಾರ ರಾಷ್ಟ್ರರಕ್ಷಣೆಗೆ ಅಗತ್ಯವಾದ ಯಾವುದಾದರೂ ಕೈಗಾರಿಕೆಯನ್ನು ತೆಗೆದುಕೊಳ್ಳುವ ಹಕ್ಕನ್ನು ಪಡೆದಿದೆ ಎಂದೂ ಹೇಳಲಾಗಿತ್ತು. ಎರಡನೆಯ ಗುಂಪಿಗೆ 6 ಮುಖ್ಯ ಕೈಗಾರಿಕೆಗಳನ್ನು ಸೇರಿಸಲಾಗಿತ್ತು; ಕಲ್ಲಿದ್ದಲು, ಕಬ್ಬಿಣ ಮತ್ತು ಉಕ್ಕು, ವಿಮಾನ ಉತ್ಪಾದನೆ, ಟೆಲಿಫೋನ್, ತಂತಿ ಯಂತ್ರೋಪಕರಣಗಳ ಉತ್ಪಾದನೆ (ರೇಡಿಯೊ ಉತ್ಪಾದನೆಯನ್ನು ಬಿಟ್ಟು) ಹಡಗು ನಿರ್ಮಾಣ ಮತ್ತು ಖನಿಜ ಎಣ್ಣೆ. ಈ ಕ್ಷೇತ್ರದಲ್ಲಿ ಹೊಸದಾಗಿ ಕೈಗಾರಿಕೆ ಸ್ಥಾಪಿಸುವ ಏಕಸ್ವಾಮ್ಯ ಸರ್ಕಾರದ್ದು. ಈ ಗುಂಪಿನಲ್ಲಿ ಸೇರಿಸಿದ್ದ ಕೈಗಾರಿಕೆಗಳ ಸಂಖ್ಯೆ ಕಡಿಮೆಯಾದರೂ ಕೈಗಾರಿಕಾಭಿವೃದ್ಧಿಯಲ್ಲಿ ಇವುಗಳದು ಹೆಚ್ಚಿನ ಪ್ರಾಮುಖ್ಯ. ಕೇಂದ್ರ ಸರ್ಕಾರದ ನಿಯಂತ್ರಣ ಮತ್ತು ಕಟ್ಟುಪಾಡಿಗೆ ಒಳಪಟ್ಟ ಕೈಗಾರಿಕೆಗಳದು ಮೂರನೆಯ ಗುಂಪು. ಹತ್ತಿ ಮತ್ತು ಉಣ್ಣೆ ಜವಳಿ ಕೈಗಾರಿಕೆ, ಸಿಮೆಂಟು, ಸಕ್ಕರೆ, ಕಾಗದ ಮತ್ತು ವೃತ್ತಪತ್ರಿಕಾ ಕಾಗದ ತಯಾರಿಕೆ, ವಿಮಾನ ಮತ್ತು ಸಮುದ್ರಯಾನ, ಉಪ್ಪು, ರಬ್ಬರ್, ಗೊಬ್ಬರ, ಭಾರಿ ಯಂತ್ರೋಪಕರಣ, ಮೋಟಾರ್ ವಾಹನ ಮತ್ತು ಟ್ರಾಕ್ಟರ್ ಉತ್ಪಾದಿಸುವ ಕೈಗಾರಿಕೆಗಳು-ಇವುಗಳದು ಮೂರನೆಯ ಗುಂಪು. ಉಳಿದ ಕೈಗಾರಿಕೆಗಳದು ನಾಲ್ಕನೆಯ ಗುಂಪು. ಇವುಗಳಲ್ಲಿ ಖಾಸಗಿ ವ್ಯಕ್ತಿ, ಸಂಸ್ಥೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅವಕಾಶ ನೀಡಲಾಗಿತ್ತು. ಈ ಕ್ಷೇತ್ರದ ಕೈಗಾರಿಕೆಗಳ ಅಭಿವೃದ್ಧಿಯನ್ನು ಖಾಸಗಿ ಉದ್ಯಮ ಸಮರ್ಪಕವಾಗಿ ಸಾಧಿಸದಿದ್ದರೆ ಸರ್ಕಾರ ಮಧ್ಯೆ ಪ್ರವೇಶಮಾಡುವ ಹಕ್ಕನ್ನು ಉಳಿಸಿಕೊಂಡಿತ್ತು. ಕೈಗಾರಿಕೆಗಳ ರಾಷ್ಟ್ರೀಕರಣಕ್ಕೆ 1948ರ ಕೈಗಾರಿಕಾ ನೀರೆ ಅಷ್ಟೇನೂ ಪ್ರಾಮುಖ್ಯ ನೀಡಲಿಲ್ಲ. ಆದರೂ ಸರ್ಕಾರ ಯಾವಾಗ ಬೇಕಾದರೂ ಸಾರ್ವಜನಿಕ ಹಿತದೃಷ್ಟಿಯಿಂದ ಯಾವ ಕೈಗಾರಿಕೆಯನ್ನಾದರೂ ರಾಷ್ಟ್ರೀಕರಣ ಮಾಡುವ ಹಕ್ಕನ್ನು ಪಡೆದಿದೆ ಎಂದು ಪ್ರತಿಪಾದಿಸಲಾದ್ದು ಆ ಮೂಲಕ. ಎರಡನೆಯ ಗುಂಪಿನಲ್ಲಿ ಖಾಸಗಿ ವಲಯಕ್ಕೆ ಸೇರಿದ ಕೈಗಾರಿಕೆಗಳಿಗೆ ಅಭಿವೃದ್ಧಿ ಹೊಂದಲು ಹತ್ತು ವರ್ಷಗಳ ಅವಧಿ ಕೊಡಲಾಗುವುದೆಂದೂ ಆ ಕಾಲದ ಅನಂತರ ಆಗಿನ ಪರಿಸ್ಥಿತಿಯ ದೃಷ್ಟಿಯಲ್ಲಿ ಅವುಗಳನ್ನು ಪುನರ್ವಿಮರ್ಶಿಸಲಾಗುವುದೆಂದೂ ಒಂದು ವೇಳೆ ಅವುಗಳ ರಾಷ್ಟ್ರೀಕರಣವಾದರೆ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಹಕ್ಕುಗಳಿಗನುಗುಣವಾಗಿ ಆ ಕೈಗಾರಿಕೆಗಳ ಒಡೆಯರಿಗೆ ನ್ಯಾಯವಾದ ಪರಿಹಾರ ನೀಡಲಾಗುವುದೆಂದೂ ಸಾರಲಾಯಿತು. ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಸ್ಥಳೀಯ ಸಂಪತ್ಸಾಧನಗಳನ್ನು ಉಪಯೋಗಿಸುವುದು ಮತ್ತು ಕೆಲವು ಬಗೆಯ ಅನುಭೋಗ ವಸ್ತುಗಳ ಸ್ವಯಂಪೂರ್ಣತೆಯನ್ನು ಸಾಧಿಸುವುದು-ಈ ಉದ್ದೇಶಗಳಿಗಾಗಿ ಸರ್ಕಾರ ತನ್ನ ಕೈಗಾರಿಕಾ ನೀತಿಯಲ್ಲಿ ಗೃಹಕೈಗಾರಿಕೆಗಳ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿತ್ತು. ಬೃಹದ್ಗಾತ್ರದ ಕೈಗಾರಿಕೆ ಮತ್ತು ಸಣ್ಣ ಹಾಗೂ ಗೃಹಕೈಗಾರಿಕೆಗಳ ಹೊಂದಾವಣೆ, ಅವನ್ನು ಪರಸ್ಪರ ಪೂರಕವಾಗಿ ಮಾಡುವ ಸಾಧ್ಯತೆ-ಇವಕ್ಕೂ ಪ್ರಾಶಸ್ತ್ಯ ನೀಡಲಾಗಿತ್ತು.

ಭಾರತ ಸರ್ಕಾರ ವಿದೇಶಿ ಬಂಡವಾಳ

ಬದಲಾಯಿಸಿ

ಸ್ವಾತಂತ್ರ್ಯ ಬಂದ ಅನಂತರ ಭಾರತ ಸರ್ಕಾರ ವಿದೇಶಿ ಬಂಡವಾಳದ ಬಗ್ಗೆ ಯಾವ ನೀತಿ ಅನುಸರಿಸುತ್ತದೆಯೆಂಬ ವಿಷಯದಲ್ಲಿ ಅನಿಶ್ಚಿತತೆಯಿತ್ತು. ಇದನ್ನು ನಿವಾರಿಸಲು ಸರ್ಕಾರ ವಿದೇಶಿ ಬಂಡವಾಳದ ವಿಷಯವಾಗಿ ತನ್ನ ನೀತಿಯನ್ನು ಸ್ಪಷ್ಟಪಡಿಸಿತು. ತ್ವರಿತ ಕೈಗಾರಿಕಾಭಿವೃದ್ಧಿಗೆ ವಿದೇಶಿ ಬಂಡವಾಳ ಮತ್ತು ಉದ್ಯಮ-ಅದರಲ್ಲೂ ವಿದೇಶಿ ತಾಂತ್ರಿಕ ಜ್ಞಾನ-ಅವಶ್ಯಕ. ಆದರೆ ವಿದೇಶಿ ಬಂಡವಾಳದ ಪಾಲುದಾರಿಕೆಯನ್ನು ರಾಷ್ಟ್ರಹಿತದೃಷ್ಟಿಯಿಂದ ಜಾಗರೂಕತೆಯಿಂದ ನಿಯಂತ್ರಣ ಮಾಡಬೇಕು. ರಾಷ್ಟ್ರಹಿತಕ್ಕೆ ಆದ್ಯತೆ ನೀಡಬೇಕು. ಸಾಮಾನ್ಯವಾಗಿ ಕೈಗಾರಿಕೆಯ ಒಡೆತನ ಮತ್ತು ವ್ಯವಸ್ಥಾಪನದ ಬಹುಭಾಗ ಭಾರತೀಯರ ಕೈಯಲ್ಲೇ ಇರಬೇಕು. ಭಾರತೀಯರಿಗೆ ತರಬೇತು ನೀಡಲು ಹೆಚ್ಚು ಪ್ರಾಮುಖ್ಯ ನೀಡಬೇಕು. ಅಂತಿಮವಾಗಿ ವಿದೇಶಿ ತಜ್ಞರ ಸ್ಥಾನಕ್ಕೆ ಭಾರತೀಯರೇ ಬರಬೇಕು. ಇವು ಮುಖ್ಯ ಅಂಶಗಳು. ಕಾರ್ಮಿಕರ ಮತ್ತು ಬಂಡವಾಳಗಾರರ ಸಂಬಂಧವನ್ನೂ ಅದರಲ್ಲಿ ಚರ್ಚಿಸಲಾಯಿತು. ಕೈಗಾರಿಕಾ ಶಾಂತಿಗೆ ಮುಖ್ಯ ಸ್ಥಾನ ನೀಡಲಾಗಿತ್ತು. ಇದನ್ನು ಏರ್ಪಡಿಸಲು ಸೂಚಿಸಲಾದ ವಿಧಾನಗಳು ಹಲವು. ಕೊನೆಯದಾಗಿ, ಅನೀತಿಯುತವಾದ ವಿದೇಶಿ ಸ್ಪರ್ಧೆಯ ನಿವಾರಣೆ. ದೇಶದ ಸಂಪತ್ಸಾಧನಗಳ ಬಳಕೆಗೆ ಪ್ರೋತ್ಸಾಹ, ಅನುಭೋಗಿಯ ಮೇಲೆ ಅನ್ಯಾಯವಾದ ಭಾರ ಬೀಳದಂತೆ ತಡೆ-ಇವು ಸರ್ಕಾರದ ಆಮದು-ರಫ್ತು ಸುಂಕ ನೀತಿಯ ಗುರಿಯಾಗಿರಬೇಕೆಂದೂ ಹೇಳಲಾಗಿತ್ತು. ಈ ನೀತಿಗೆ ಅನುಗುಣವಾಗಿ ಕೈಗಾರಿಕಾಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ ಜಾರಿಗೆ ಬಂತು. 1953ರಲ್ಲಿ ಇದನ್ನು ತಿದ್ದುಪಡಿ ಮಾಡಲಾಯಿತು. ಎಲ್ಲ ಕೈಗಾರಿಕೆಗಳೂ ಸರ್ಕಾರದ ಪರವಾನೆ ಪಡೆಯಬೇಕೆಂದೂ ಹೊಸ ಪದಾರ್ಥವನ್ನು ಉತ್ಪಾದನೆ ಮಾಡಲು ಸರ್ಕಾರದ ಅನುಮತಿ ಅಗತ್ಯವೆಂದೂ ಖಾಸಗಿ ಕೈಗಾರಿಕೆಗಳು ಸರಿಯಾಗಿ ನಡೆಯದಿದ್ದರೆ ಸರ್ಕಾರ ಅವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದೆಂದೂ ಕಾಯಿದೆಯಲ್ಲಿ ಹೇಳಲಾಗಿದೆ.

ಕೈಗಾರಿಕಾ ನೀತಿ

ಬದಲಾಯಿಸಿ

ಏಪ್ರಿಲ್ 6 1948ರ ಕೈಗಾರಿಕಾ ನೀತಿ ಪ್ರಕಟವಾದಾಗ ಖಾಸಗಿ ವಲಯ ಸ್ವಲ್ಪ ಭಯಶಂಕೆಗಳಿಗೆ ತುತ್ತಾಗಿತ್ತು. ಸರ್ಕಾರ ಅನೇಕ ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡಬಹುದೆಂಬ ಭೀತಿ ಹರಡಿತ್ತು. ಆದರೆ ಖಾಸಗಿ ಕ್ಷೇತ್ರದಲ್ಲಿದ್ದ ಕೈಗಾರಿಕೆಗಳನ್ನು ರಾಷ್ಟ್ರೀಕರಿಸುವ ಉದ್ದೇಶ ತನಗಿಲ್ಲವೆಂದು ಸರ್ಕಾರ ಭರವಸೆ ನೀಡಿತು. ವಿದೇಶಿ ಬಂಡವಾಳವನ್ನು ಪಡೆಯಲು ಯಾವ ವಿಧವಾದ ಅಡ್ಡಿಯೂ ಇರುವುದಿಲ್ಲ; ಭಾರತೀಯ ಮತ್ತು ವಿದೇಶಿ ಕಂಪನಿಗಳ ನಡುವೆ ಯಾವ ವಿಧವಾದ ತಾರತಮ್ಯವನ್ನೂ ತೋರಿಸುವುದಿಲ್ಲ; ವಿದೇಶೀಯರು ಲಾಭ ಮತ್ತು ಲಾಭಾಂಶಗಳನ್ನು ಪಡೆದುಕೊಳ್ಳಲು ಅಡ್ಡಿಯಿಲ್ಲ; ಯಾವುದೇ ವಿದೇಶಿ ಉದ್ಯಮವನ್ನು ರಾಷ್ಟ್ರೀಕರಿಸಿದರೂ ಅದಕ್ಕೆ ನ್ಯಾಯವಾದ ಪರಿಹಾರ ನೀಡಲಾಗುವುದು-ಎಂದು 1949ರಲ್ಲಿ ಪ್ರಧಾನ ಮಂತ್ರಿಗಳು ಭರವಸೆ ನೀಡಿದರು. ಕೈಗಾರಿಕಾ ನೀತಿ ಪ್ರಕಟವಾದ ಅನಂತರದ ಎಂಟು ವರ್ಷಗಳಲ್ಲಿ ಕೆಲವು ಮುಖ್ಯ ಬದಲಾವಣೆಗಳು ಸಂಭವಿಸಿದುವು. ಈ ಅವಧಿಯಲ್ಲಿ ಒಂದನೆಯ ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಿದ್ದು, ಎರಡನೆಯ ಪಂಚವಾರ್ಷಿಕ ಯೋಜನೆಗೆ ಸಿದ್ಧತೆ ನಡೆದಿತ್ತು. 1954ರಲ್ಲಿ ಭಾರತದ ಸಂಸತ್ತು ಸಮಾಜವಾದಿ ವ್ಯವಸ್ಥೆಯ ಗುರಿಯನ್ನು ಒಪ್ಪಿಕೊಂಡಿತು. ರಾಷ್ಟ್ರದ ಕೈಗಾರಿಕಾ ನೀತಿಯೂ ಇದಕ್ಕೆ ಅನುಗುಣವಾಗಿ ಮಾರ್ಪಾಟಾಗಬೇಕಾಯಿತು. ಈ ತತ್ತ್ವದ ಅನುಷ್ಠಾನಕ್ಕಾಗಿ ಆರ್ಥಿಕಾಭಿವೃದ್ಧಿಯನ್ನು ತ್ವರಿತಗೊಳಿಸುವುದು, ಸರ್ಕಾರಿ ವಲಯದ ವಿಸ್ತರಣ, ಖಾಸಗಿ ಮತ್ತು ಸರ್ಕಾರಿ ವಲಯಗಳ ಸಹಕಾರವನ್ನು ಹೆಚ್ಚಿಸುವುದು-ಇವು ಮುಖ್ಯವಾದುವು. ಈ ಉದ್ದೇಶದಿಂದ ಸರ್ಕಾರದ ಪುನರ್ವಿಮರ್ಶಿತ ಕೈಗಾರಿಕಾ ನೀತಿ ಹೊರಬಿದ್ದದ್ದು 1956ರ ಏಪ್ರಿಲಿನಲ್ಲಿ.ಪರಿಷ್ಕøತ ನೀತಿಯಲ್ಲಿ ಕೈಗಾರಿಕೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಗುಂಪಿನಲ್ಲಿ ಸೇರಿರುವ ಕೈಗಾರಿಕೆಗಳ ಸಂಖ್ಯೆ 17. ಇವುಗಳ ಅಭಿವೃದ್ಧಿ ಸರ್ಕಾರದ ಏಕಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ. ಈ ಪಟ್ಟಿಯಲ್ಲಿ ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ಖನಿಜತೈಲ, ವಿಮಾನ ತಯಾರಿಕೆ, ಹಡಗು ನಿರ್ಮಾಣ, ವಿಮಾನ ಮತ್ತು ರೈಲುಯಾನ, ವಿದ್ಯುಚ್ಛಕ್ತಿಯ ಉತ್ಪಾದನೆ ಮತ್ತು ಹಂಚಿಕೆ ಮುಂತಾದವು ಸೇರಿವೆ.ಎರಡನೆಯ ಗುಂಪಿನಲ್ಲಿರುವ 12 ಕೈಗಾರಿಕೆಗಳನ್ನು ಸರ್ಕಾರ ಕ್ರಮೇಣ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಈ ಕ್ಷೇತ್ರಗಳಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸುವುದು ಸರ್ಕಾರಿ ವಲಯದ ಹೊಣೆ. ಆದರೆ ಈ ಗುಂಪಿನ ಕೈಗಾರಿಕೋದ್ಯಮಗಳಲ್ಲಿ ಖಾಸಗಿ ವಲಯ ಸಹಕರಿಸಬಹುದು; ಸರ್ಕಾರಿ ವಲಯದ ಉತ್ಪಾದನಕಾರ್ಯಕ್ಕೆ ಸಹಾಯ ನೀಡಬಹುದು. ಈ ಗುಂಪಿನಲ್ಲಿ ಹಿಂದೆ ಇದ್ದ 6 ಕೈಗಾರಿಕೆಗಳ ಜೊತೆಗೆ ಸೀಮೆ ಗೊಬ್ಬರದ ತಯಾರಿಕೆ, ಯಂತ್ರೋಪಕರಣಗಳು, ರಸ್ತೆ ಸಾರಿಗೆ, ಅಗತ್ಯವಾದ ಔಷಧಿಗಳ ತಯಾರಿಕೆ, ನೌಕಾಯಾನ ಇವೇ ಮುಂತಾದ ಕೈಗಾರಿಕೆಗಳನ್ನು ಸೇರಿಸಲಾಗಿದೆ. ಉಳಿದ ಕೈಗಾರಿಕೆಗಳನ್ನು ಮೂರನೆಯ ಗುಂಪಿಗೆ ಸೇರಿಸಿದೆ. ಇವು ಸಾಮಾನ್ಯವಾಗಿ ಖಾಸಗಿ ವಲಯದ ಪರಿಮಿತಿಗೆ ಸೇರಿರುತ್ತದೆ. ಆದರೆ ಈ ಗುಂಪಿನಿಂದಲೂ ಸರ್ಕಾರ ಯಾವುದೇ ಕೈಗಾರಿಕೆಯನ್ನಾದರೂ ದೇಶದ ಹಿತದೃಷ್ಟಿಯಿಂದ ತಾನೇ ತೆಗೆದುಕೊಳ್ಳಬಹುದು. ಗೃಹಕೈಗಾರಿಕೆಗಳ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಪೈಪೋಟಿಯ ಶಕ್ತಿ ಹೆಚ್ಚುವಂತೆ ಕ್ರಮ ಕೈಗೊಳ್ಳಲಾಗುವುದು. ಅದೂ ಅಲ್ಲದೆ ಕೈಗಾರಿಕಾಭಿವೃದ್ಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿರುವ ಅಸಮಾನತೆಯನ್ನು ನಿವಾರಿಸುವ ಅವಶ್ಯಕತೆಯನ್ನು ಹೇಳಲಾಗಿದೆ. ಪರಿಷ್ಕøತ ಕೈಗಾರಿಕಾ ನೀತಿಯಲ್ಲಿ ವ್ಯವಸ್ಥಾಪಕ-ಕಾರ್ಮಿಕ ಸಂಬಂಧಗಳ ಪ್ರಸ್ತಾಪವೂ ಇದೆ. ಸಮಾಜವಾದಿ ವ್ಯವಸ್ಥೆಯಲ್ಲಿ ಕಾರ್ಮಿಕನೂ ಕೈಗಾರಿಕೆಯಲ್ಲಿ ಒಬ್ಬ ಪಾಲುದಾರನೆಂದೂ ಆದ್ದರಿಂದ ಕೈಗಾರಿಕೆಯ ಆಡಳಿತದಲ್ಲಿ ಕಾರ್ಮಿಕನಿಗೆ ಪಾತ್ರವಿರಬೇಕೆಂದೂ ಸಾಧ್ಯವಾದ ಕಡೆಯಲ್ಲೆಲ್ಲ ಕೈಗಾರಿಕೆಯಲ್ಲಿ ಕಾರ್ಮಿಕನಿಗೆ ವ್ಯವಸ್ಥಾಪಕರೊಂದಿಗೆ ಸೇರಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದೂ ಹೇಳಿದೆ.ಪರಿಷ್ಕøತ ಕೈಗಾರಿಕಾ ನೀತಿಯ6ಲ್ಲಿ ಮೂಲಭೂತ ವಿಚಾರಗಳ ಬಗ್ಗೆ ಹಿಂದಿನ ನೀತಿಗಿಂತ ವ್ಯತ್ಯಾಸವಿಲ್ಲ. ಸರ್ಕಾರಿ ವಲಯದ ವ್ಯಾಪ್ತಿಯನ್ನು ಹೆಚ್ಚಿಸುವುದೇ ಅದರ ಮುಖ್ಯ ಧ್ಯೇಯ.

ಭಾರತದ ಕೈಗಾರಿಕಾ ನೀತಿ ಮುಖ್ಯವಾಗಿ ಮಿಶ್ರ ಅರ್ಥವ್ಯವಸ್ತೆ

ಬದಲಾಯಿಸಿ

ಭಾರತದ ಕೈಗಾರಿಕಾ ನೀತಿ ಮುಖ್ಯವಾಗಿ ಮಿಶ್ರ ಅರ್ಥವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಜನಜೀವನಕ್ಕೆ ಅತಿಮುಖ್ಯವಾದ ಕೈಗಾರಿಕೆಗಳು, ಆರ್ಥಿಕ ಪ್ರಗತಿಗೆ ಮುಖ್ಯವಾದ ಕೈಗಾರಿಕೆಗಳು, ತ್ವರಿತ ಕೈಗಾರಿಕಾಭಿವೃದ್ಧಿಗೆ ಅವಶ್ಯಕವಾದ, ಆದರೆ ಪ್ರತಿಫಲ ಕೊಡಲು ಬಹಳ ಕಾಲ ತೆಗೆದುಕೊಳ್ಳುವ ಕೈಗಾರಿಕೆಗಳು-ಇವೆಲ್ಲ ಸರ್ಕಾರಿ ವಲಯದಲ್ಲಿರಬೇಕಾದ್ದು ನ್ಯಾಯವೇ. ಸರ್ಕಾರಿ ವಲಯ ತ್ವರಿತವಾಗಿ ಬೆಳೆಯುತ್ತಿದೆಯಲ್ಲದೆ ಖಾಸಗಿ ವಲಯಕ್ಕೂ ಧಾರಾಳವಾಗಿ ಅವಕಾಶ ಲಭ್ಯವಾಗಿದೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಮಿಶ್ರ ಅರ್ಥವ್ಯವಸ್ಥೆಯ ಮೂಲಕ ತ್ವರಿತ ಕೈಗಾರಿಕಾಭಿವೃದ್ಧಿ ಯನ್ನುಂಟುಮಾಡಲು ಯೋಜನೆಗಳ ಮೂಲಕ ಪ್ರಯತ್ನ ಮಾಡಲಾಗಿದೆ. ಮಿಶ್ರ ಅರ್ಥವ್ಯವಸ್ಥೆಯನ್ನು ನಡೆಸುವುದು ಕಷ್ಟ; ಅದು ಸರ್ಕಾರಿ ಮತ್ತು ಖಾಸಗಿ ವಲಯಗಳ ಪರಸ್ಪರ ಸಹಕಾರದಿಂದ ಮಾತ್ರ ಸಾಧ್ಯ. ಭಾರತದಲ್ಲಿ ಆಗಬೇಕಾದ ಕೈಗಾರಿಕಾ ಬೆಳೆವಣಿಗೆ ಇನ್ನೂ ಅಗಾಧವಾಗಿರುವುದರಿಂದ ಎರಡು ವಲಯಗಳೂ ಇದಕ್ಕಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಅದೂ ಅಲ್ಲದೆ ಸರ್ಕಾರಿ ವಲಯದಲ್ಲಿರುವ ಉಕ್ಕು, ವಿದ್ಯುಚ್ಛಕ್ತಿ ಉತ್ಪಾದನೆ, ಸಾರಿಗೆ ವ್ಯವಸ್ಥೆ ಇವೆಲ್ಲವೂ ಖಾಸಗಿ ಉದ್ಯಮಗಳಿಗೆ ಉತ್ತೇಜನ ನೀಡುತ್ತವೆ. ಭಾರತದ ಆಯೋಜಿತ ಆರ್ಥಿಕಾಭಿವೃದ್ಧಿಯ ದೃಷ್ಟಿಯಲ್ಲಿ ಖಾಸಗಿ ವಲಯದ ಕೈಗಾರಿಕೆಗಳ ನಿಯಂತ್ರಣ ಅನಿವಾರ್ಯವಾಗಬಹುದು. ಆದರೂ ಅನಾವಶ್ಯಕವಾದ ನಿಯಂತ್ರಣಗಳನ್ನು ನಿವಾರಿಸಬಹುದು. ಖಾಸಗಿ ವಲಯದ, ಸಹಕಾರಿ ವಲಯ ಮತ್ತು ಸರ್ಕಾರಿ ವಲಯಗಳು ಪರಸ್ಪರ ಸಂಶಯವನ್ನು ಬಿಟ್ಟು ಸಹಕರಿಸಿದರೆ ಈಗಿರುವ ಕೈಗಾರಿಕಾ ನೀತಿಯ ಮೂಲಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ತ್ವರಿತ ಕೈಗಾರಿಕಾಭಿವೃದ್ಧಿ ಸಾಧಿಸಬಹುದು.

ಉಲ್ಲೇಖಗಳು

ಬದಲಾಯಿಸಿ