ಗುರು ಪೂರ್ಣಿಮಾ
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.[೧][೨][೩] ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.[೪] ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.
ಹಿಂದೂ ಪುರಾಣ
ಬದಲಾಯಿಸಿಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು.[೨]ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.
ಬೌದ್ಧ ಪುರಾಣ
ಬದಲಾಯಿಸಿಬುದ್ಧನು ತನಗೆ ಜ್ಞಾನೋದಯವಾಗಿ ೫ ವಾರಗಳ ನಂತರ ಬೋಧಗಯಾ ಇಂದ ಸಾರನಾಥಕ್ಕೆ ಹೋದನು. ಜ್ಞಾನೋದಯಕ್ಕಿಂತ ಮುಂಚೆ (ಬುದ್ಧನಾಗಬೇಕಿದ್ದ) ಗೌತಮನು ತಾನು ಮಾಡುತ್ತಿದ್ದ ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಬಿಟ್ಟ. ಆಗ ಅವನ ಗೆಳೆಯರಾದ ಪಂಚವಗ್ಗೀಯ ಸನ್ಯಾಸಿಗಳು ಗೌತಮನನ್ನು ಬಿಟ್ಟು ಇಸಿಪತನ (ಸಾರನಾಥ್)ಗೆ ಹೋದರು. ಬುದ್ದನಿಗೆ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಆ ತನ್ನ ಐದು ಸಂಗಾತಿಳು ಧರ್ಮ ಬೋಧನೆಗೆ ಯೋಗ್ಯರಾದವರು ಎಂದು ತಿಳಿದಿದ್ದರಿಂದ ತನಗೆ ಜ್ಞಾನೋದಯವಾದ ನಂತರ ಅವರನ್ನು ಹುಡುಕಿಕೊಂಡು ಉರುವೇಲಾಯಿಂದ ಇಸಿಪತನಕ್ಕೆ ಹೊರಟನು. ಸಾರನಾಥಕ್ಕೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಯಿತು. ನಾವಿಕರಿಗೆ ಕೊಡಲು ದುಡ್ಡು ಇಲ್ಲದ ಕಾರಣ ಗೌತಮ ಬುದ್ಧನು ಗಂಗಾ ನದಿಯನ್ನು ಗಾಳಿಯಲ್ಲಿಯೇ ದಾಟಿದನು. ಇದನ್ನು ಕೇಳಿದ ಅಲ್ಲಿನ ರಾಜಾ ಬಿಂಬಸಾರನು ನದಿ ದಾಟುವ ಸನ್ಯಾಸಿಗಳಿಗೆ ಯಾವುದೇ ರೀತಿಯ ಹಣ ಕೇಳಬಾರದೆಂದು ಆದೇಶ ಹೊರಡಿಸಿದನು. ಗಂಗಾ ನದಿ ದಾಟಿ ಅವನ ಹಳೆಯ ಸಂಗಾತಿಗಳು ಮತ್ತೆ ಸಿಕ್ಕಾಗ ಗೌತಮ ಬುದ್ಧನು ಅವರಿಗೆ ಧರ್ಮ ಬೋಧನೆ ಮಾಡಿದನು. ಅದನ್ನು ಸ್ವೀಕರಿಸಿ ಅರ್ಥ ಮಾಡಿಕೊಂಡ ಆ ಸಂಗಾತಿಗಳಿಗೂ ಜ್ಞಾನೋದಯವಾಯಿತು. ಅವರಿಂದ ಸಂಘ ಎಂಬ ಜ್ಞಾನೋದಯವಾದವರ ಪಂಗಡ ಶುರುವಾಯಿತು. ಅಂದು ಬುದ್ಧ ನೀಡಿದ ಬೋಧನೆ ಅವನ ಮೊದಲನೇಯ ಬೋಧನೆಯಾಗಿದ್ದು ಅದನ್ನು ಧಮ್ಮಚಕ್ಕಪ್ಪವತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ) ಎಂದು ಕರೆಯಲಾಗುತ್ತದೆ. ಇದು ನಡೆದಿದ್ದು ಆಷಾಢ ಪೂರ್ಣಿಮೆಯ ದಿನ. ಮುಂದೆ ಬುದ್ಧನು ತನ್ನ ಮೊದಲನೇಯ ಮಳೆಗಾಲ, ಅಂದರೆ ವರ್ಷ(ವಸ್ಸ), ಇಲ್ಲೇ ಸಾರನಾಥದಲ್ಲಿನ ಮುಲಗಂಧಕುಟಿಯಲ್ಲಿ ಕಳೆದನು. ಆ ಸಮಯಕ್ಕೆ ಯಾಸ ಮತ್ತು ಅವನ ಸ್ನೇಹಿತರು ಸೇರಿದ್ದರಿಂದ ಸಂಘದಲ್ಲಿ ೬೦ ಸನ್ಯಾಸಿಗಳಿದ್ದರು. ಬುದ್ಧ ಅವರೆಲ್ಲರನ್ನು ಒಬ್ಬೊಬ್ಬರಾಗಿ ಎಲ್ಲ ದಿಕ್ಕುಗಳಲ್ಲಿ ಧರ್ಮದ ಬೋಧನೆ ಮತ್ತು ಪ್ರಚಾರ ಮಾಡಲು ಕಳಿಸಿದನು. ಆ ೬೦ ಜನರನ್ನು ಅರಹಂತರು ಎಂದು ಕರೆಯುತ್ತಾರೆ .
ಹಿಂದೂ ಮತ್ತು ಬೌದ್ಧ ಆಚರಣೆಗಳು
ಬದಲಾಯಿಸಿಈ ದಿನ ಬೌದ್ಧರು ೮ ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಷ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ.
ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಎರ್ಪಿಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳು ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನು ಪ್ರಸಾದದ ಜೊತೆ ಶಿಶ್ಯರಿಗೆ ಹಂಚಲಾಗುತ್ತದೆ.[೫] ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಶ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ.[೬] ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಶ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ.[೭] ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಶ್ಯರು ಸಂಕಲ್ಪ ಮಾಡುತ್ತಾರೆ.[೫] ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ.
ನೇಪಾಳದಲ್ಲಿನ ಆಚರಣೆಗಳು
ಬದಲಾಯಿಸಿನೇಪಾಳದ ಶಾಲೆಗಳಲ್ಲಿ ಗುರು ಪೂರ್ಣಿಮೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ರುಚಿಯಾದ ತಿಂಡಿಗಳನ್ನು, ಹಾರಗಳನ್ನು ಮತ್ತು ಅಲ್ಲಿನ ನಾರಿನಿಂದ ಮಾಡಲಾದ ಟೋಪಿ ಎಂಬ ವಿಶೇಷ ಟೊಪಗಿಗಳನ್ನು ಕೊಡುವ ಮೂಲಕ ಗೌರವ ಸಲ್ಲಿಸುತ್ತಾರೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಪ್ರದರ್ಶನಗಳನ್ನು ಆಯೋಜಿಸಿ ಶಿಕ್ಷಕರ ಶ್ರಮಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ದಿನ ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಇನ್ನಷ್ಟು ಸಧೃಡಗೊಳಿಸಿಕೊಳ್ಳುತ್ತಾರೆ.
ಭಾರತ ಶೈಕ್ಷಣಿಕ ವೃಂದದಲ್ಲಿ ಅಚರಣೆ
ಬದಲಾಯಿಸಿಭಾರತ ಶೈಕ್ಷಣಿಕ ವೃಂದದಲ್ಲಿ ಈ ಹಬ್ಬವನ್ನು ಧರ್ಮಾತೀತವಾಗಿ ಆಚರಿಸಲಾಗುತ್ತದೆ. ಹಲವಾರು ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿತವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ ಮತ್ತು ಹಿಂದಿನ ವಿದ್ವಾಂಸರನ್ನು ನೆನೆಸುತ್ತಾರೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.[೮]
ಜೈನ ಧರ್ಮದಲ್ಲಿ ಆಚರಣೆಗಳು
ಬದಲಾಯಿಸಿಜೈನ ಸಂಪ್ರದಾಯದ ಪ್ರಕಾರ ನಾಲ್ಕು ತಿಂಗಳದ ಮಳೆಗಾಲದ ಚೌಮಾಸಗಳ ಪ್ರಾರಂಭ ದಿನದಂದು ಬರುವ ಈ ಗುರು ಪೂರ್ಣಿಮೆಯ ದಿನ, ೨೪ನೇಯ ತೀರ್ಥಂಕರರು ಆದ ಮಹಾವೀರ, ಕೈವಲ್ಯ ಪಡೆದ ನಂತರ ಇಂದ್ರಭೂತಿ ಗೌತಮ (ಮುಂದೆ ಗೌತಮ ಸ್ವಾಮಿ ಎಂದೇ ಪ್ರಸಿದ್ಧರಾದರು) ಎಂಬ ಗಣಧಾರನನ್ನು ತಮ್ಮ ಶಿಶ್ಯನಾಗಿ ಸ್ವೀಕರಿಸಿದರು, ಜೊತೆಗೆ ತಾವೂ ಗುರುವಾದರು. ಆದ್ದರಿಂದ ಜೈನ ಸಂಪ್ರದಾಯದಲ್ಲಿ ಈ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸುತ್ತಾರೆ.[೯]
ಇದನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Sharma, Brijendra Nath (1978). Festivals of India. Abhinav Publications. p. 88.
- ↑ Jump up to: ೨.೦ ೨.೧ Awakening Indians to India. Chinmaya Mission. 2008. p. 167. ISBN 81-7597-434-6. Archived from the original on 2019-01-09. Retrieved 2021-07-17.
- ↑ Sehgal, Sunil (1999). Encyclopaedia of hinduism: (H - Q)., Volume 3. 8176250643. Sarup & Sons. p. 496.
- ↑ Wadley, Susan Snow (2005). Essays on North Indian folk traditions. Orient Blackswan. p. 64. ISBN 81-8028-016-0.
- ↑ Jump up to: ೫.೦ ೫.೧ What Is Hinduism?: Modern Adventures Into a Profound Global Faith. Himalayan Academy Publications. p. 230. ISBN 1-934145-00-9.
- ↑ Sharma, Vijay Prakash (1998). The sadhus and Indian civilisation. Anmol Publications. p. 160. ISBN 81-261-0108-3.
- ↑ Subramuniyaswami, Satguru Sivaya (2003). Dancing With Siva: Hinduism's Contemporary Catechism Volume 1. Himalayan Academy Publications. p. 780. ISBN 0-945497-96-2.
- ↑ "ಆರ್ಕೈವ್ ನಕಲು". Archived from the original on 2013-08-31. Retrieved 2014-07-11.
- ↑ ., Mahāvīra (2006). Religion & culture of the Jains. Bhartiya Jnanpith. ISBN 81-263-1274-2.
{{cite book}}
:|last=
has numeric name (help)
ಹೊರಗಿನ ಕೊಂಡಿಗಳು
ಬದಲಾಯಿಸಿ- On Guru Purnima by About.com Archived 2014-07-10 ವೇಬ್ಯಾಕ್ ಮೆಷಿನ್ ನಲ್ಲಿ.
- 10 Guru Purnima Facts